ಅಂದು ಪುಲ್ವಾಮ- ಹಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ; ಇಂದು ಪಹಲ್ಗಾಮ್- ಉತ್ತರ ಸಿಗುತ್ತದೆಯೇ?

ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ ನಡೆದಿದೆ. 2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಸನಿಹದಲ್ಲಿರುವ ಹುಲ್ಲುಗಾವಲಿನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ 28 ಪ್ರವಾಸಿಗರು ಬಲಿಯಾಗಿದ್ದಾರೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಲಿಯಾದವರಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ವಿದೇಶಿಗರು ಎಂದು ವರದಿಯಾಗಿದೆ. ಈ ರೀತಿಯ ದಾಳಿಗಳು ನಡೆದಾಗ ಜನರಿಂದ, ರಾಜಕೀಯ ಪಕ್ಷಗಳ ನಾಯಕರಿಂದ ಮುಸ್ಲಿಂ  ಉಗ್ರವಾದಿಗಳು ಮತ್ತು ಪಾಕಿಸ್ತಾನದ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತವೆ. ಹಿಂದುತ್ವವಾದಿಗಳಿಂದ ಇದನ್ನು ಮುಸ್ಲಿಮರ ವಿರುದ್ದ ತಿರುಗಿಸುವ ಪ್ರಯತ್ನವೂ ನಡೆಯುತ್ತದೆ. ಕೆಲವು ಮಾದ್ಯಮಗಳಂತೂ ಇದು ಹಿಂದೂಗಳ ಮೇಲಿನ ಮುಸ್ಲಿಮರ ದಾಳಿ ಎಂಬಂತೆ ಪ್ರಚಾರ ಮಾಡುತ್ತಿವೆ. ದಾಳಿಯ ಬಗ್ಗೆ ಏನಾದರೂ ಗುಪ್ತಚರ ಮಾಹಿತಿ ದೊರೆತಿದೆಯೇ? ಅಥವಾ ಯಾವುದೇ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲವೇ? ಗುಪ್ತಚರ ಇಲಾಖೆ ವಿಫಲವಾಗಿದೆಯೇ? ಎಂಬ ವಿವಿಧ ಪ್ರಶ್ನೆಗಳೂ ಮೂಡುತ್ತವೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿ ರದ್ದಗೊಳಿಸುವಾಗ ಹಾಗೂ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಗೊಳಿಸಿದಾಗಲೂ ಕಾಶ್ಮೀರದ ಮುಸ್ಲಿಂ ಭಯೋತ್ಪಾದಕರ ಕಾರಣಗಳನ್ನು ಕೊಡಲಾಗಿತ್ತು. ಆ ನಂತರವೂ, ಉಗ್ರರ ಹಲವು ದಾಳಿಗಳು ನಡೆದಿವೆ ಎಂಬುದನ್ನು ಗಮನಿಸಿದರೆ, ಸಂಘಪರಿವಾರ ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೆ ತರಲು ಮುಸ್ಲಿಂ ಭಯೋತ್ಪಾದಕರನ್ನು ಜನತೆಗೆ ತೋರಿಸಿ, ತಮ್ಮ ಗುಪ್ತ ಕಾರ್ಯಸೂಚಿಗಳ ಜಾರಿಗೆ ಜನರ ಬೆಂಬಲ ಪಡೆದರು ಎಂಬುದನ್ನು ಕಾಣಬಹುದು.

ಈ ಸಂದರ್ಭದಲ್ಲಿ 2024ರ ಮಾರ್ಚ್ ನಲ್ಲಿ ಹೊರತಂದ “ಅಚ್ಛೇ ದಿನಗಳಿಗಾಗಿ ಕಾದ 10 ವರ್ಷಗಳಲ್ಲಿ ನಡೆದದ್ದೇನು?” ಎಂಬ ನನ್ನ ಮೂರು ಪುಸ್ತಕಗಳ ಭಾಗ-2ರ ಪುಸ್ತಕದಲ್ಲಿ ಮುದ್ರಿತವಾಗಿರುವ ಪುಲ್ವಾಮ ದಾಳಿಯ ಕುರಿತ ಲೇಖನ ಇಲ್ಲಿದೆ. ಪಹಲ್ಗಾಮ್ ದಾಳಿಯ ಕುರಿತು ಪ್ರತಿಕ್ರಿಯಿಸುವ ಮುನ್ನ ಪುಲ್ವಾಮ ದಾಳಿಯನ್ನೊಮ್ಮೆ ನೆನೆಪಿಸಿಕೊಳ್ಳುವುದು ಒಳಿತು ಎಂಬುದು ನನ್ನ ಅನಿಸಿಕೆ.

******

ಪುಲ್ವಾಮ ದಾಳಿಯಲ್ಲಿ 40 ಯೋಧರ ಸಾವು: ಉತ್ತರ ಸಿಗದ ಹಲವು ಪ್ರಶ್ನೆಗಳು

2019ರ ಲೋಕಸಭಾ ಚುನಾವಣೆಗೆ ಕೇವಲ 3 ತಿಂಗಳು ಬಾಕಿ ಇದೆ ಎನ್ನುವಾಗ, ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದು, ನಮ್ಮ 40 ಯೋಧರು ಪ್ರಾಣತೆತ್ತರು. ಈ ದಾಳಿಯ ಹೊಣೆಯನ್ನು ಮೋದಿ ಸರಕಾರವೇ ಹೊರಬೇಕಿತ್ತು. ಆದರೆ, ಸೈನಿಕರ ಸಾವನ್ನು ನಂತರದ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಬಳಸಿಕೊಂಡಿತು. ಅಂತಿಮವಾಗಿ, ಮೇ 2019 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ಶೇ. 37 ಮತಗಳನ್ನಷ್ಟೇ ಪಡೆದು, ಲೋಕಸಭೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆದರೆ, ಪುಲ್ವಾಮಾ ದಾಳಿಯ ಬಗ್ಗೆ ಉತ್ತರ ಸಿಗದ ಹಲವು ಪ್ರಶ್ನೆಗಳು ಇನ್ನೂ ಉಳಿದುಕೊಂಡಿವೆ.

2019ರ ಫೆಬ್ರವರಿ 14. ಲೋಕಸಭಾ ಚುನಾವಣೆಗೆ ಕೇವಲ 3 ತಿಂಗಳಷ್ಟೇ ಬಾಕಿ ಇತ್ತು. ದೇಶದ  ಪ್ರಧಾನಿ ನರೇಂದ್ರ ಮೋದಿಯವರು ಉತ್ತರಾಖಂಡದ ಕಾರ್ಪೆಟ್ ಅಭಯಾರಣ್ಯದಲ್ಲಿ ಡಿಸ್ಕವರಿ ಚಾನೆಲ್‌ಗಾಗಿ ಚಿತ್ರೀಕರಣ ನಡೆಸುತ್ತಿದ್ದರು. ಕ್ಯಾಮರಾ ಎದುರು ವಿವಿಧ ಬಣ್ಣ ಬಣ್ಣದ ಧಿರಿಸುಗಳನ್ನು ಧರಿಸುತ್ತಾ, ವಿವಿಧ ಭಂಗಿಗಳಲ್ಲಿ ಛಾಯಾಚಿತ್ರ ತೆಗೆಸಿಕೊಳ್ಳುತ್ತಿದ್ದರು. ಪ್ರಧಾನಿಯವರ ಮನರಂಜನೆಗೆ ದಕ್ಕೆಯಾಗಬಾರದು ಎಂದೋ ಏನೋ, ಪೋನ್ ಸಿಗ್ನಲ್ ಇಲ್ಲದ  ಪ್ರದೇಶವನ್ನೇ ಪ್ರಧಾನಿಯವರಿಗೆ ಆಡಳಿತ ವ್ಯವಸ್ಥೆ ಆಯ್ಕೆ ಮಾಡಿತ್ತು!! ಆ ಸಮಯದಲ್ಲಿ ದೇಶದಲ್ಲಿ ಏನೇ ಘಟನೆ ನಡೆದರೂ ಪ್ರಧಾನಿಯವರಿಗೆ ತಕ್ಷಣ ತಿಳಿಯುವಂತಿರಲಿಲ್ಲ!?

ಅದೇ ಸಮಯದಲ್ಲಿ (ಫೆಬ್ರವರಿ 14) ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅರೆಸೇನಾ ವಾಹನಗಳ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರರು ದಾಳಿ ಮಾಡಿದರು. ಉಗ್ರರ ದಾಳಿಗೆ 40 ಸೈನಿಕರು ಬಲಿಯಾದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಕೆಲವು ಗಂಟೆಗಳ ನಂತರ ಮೋದಿಯವರು ರುದ್ರಪುರದಲ್ಲಿ ತಮ್ಮ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆಗಲೂ ಪುಲ್ವಾಮಾ ದಾಳಿಯ ಬಗ್ಗೆ ಅವರು  ಮಾತೇ ಆಡಲಿಲ್ಲ!!

ಯಾರ ಬಳಿಯೂ ಮಾತನಾಡಬೇಡಿ

ಘಟನೆ ನಡೆದ ನಾಲ್ಕು ವರ್ಷಗಳ ನಂತರ, ಏಪ್ರಿಲ್ 15, 2023 ರಂದು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರೊಂದಿಗೆ ‘ದಿ ವೈರ್‌’ ನಲ್ಲಿ ನೀಡಿದ ಸಂದರ್ಶನದಲ್ಲಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಬಹಳ ವಿವರವಾದ ರೀತಿಯಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.

ಸತ್ಯಪಾಲ್ ಮಲಿಕ್ ಮಾತುಗಳು ಹೀಗಿವೆ: “ಪುಲ್ವಾಮ ದಾಳಿಗೆ ಮುನ್ನ ‘ಆ’ ಕಾರು 10 ದಿನಗಳಿಂದ ಆ ಪ್ರದೇಶದಲ್ಲಿ ಓಡಾಡಿಕೊಂಡಿತ್ತು. ಯಾರಿಗೂ ಎಲ್ಲೂ ಸಿಗಲಿಲ್ಲ. ಅದನ್ನು ಎಲ್ಲಿಯೂ ತಡೆಯಲಿಲ್ಲ. ಇದು ನೂರಕ್ಕೆ ನೂರು ಗುಪ್ತಚರ ಇಲಾಖೆಯ ತಪ್ಪು. ಮತ್ತು ನಮ್ಮ ತಪ್ಪು! ನಮ್ಮ ವ್ಯವಸ್ಥೆಯ ತಪ್ಪು. ನಾನು ನನ್ನನ್ನೂ ಸೇರಿಸಿಕೊಳ್ಳುತ್ತೇನೆ. ಸರ್ಕಾರಕ್ಕೆ ಎಲ್ಲ ವಿವರ ಗೊತ್ತಿದೆ. ಆದರೆ ಅದನ್ನು ಮುಚ್ಚಿಡಲು ಸರ್ಕಾರ ನಿರ್ಧರಿಸಿದರೆ, ಅದು ಹೇಗೆ ತಾನೆ ಹೊರಬರುತ್ತದೆ?”

“ನಾನು ನಿಮಗೆ ಸತ್ಯವನ್ನು ಹೇಳುತ್ತಿದ್ದೇನೆ. ಸಿಆರ್‌ಪಿಎಫ್ ತನ್ನ ಸೈನಿಕರನ್ನು ಕರೆದೊಯ್ಯಲು ವಿಮಾನಗಳನ್ನು ಕಳುಹಿಸಿಕೊಡುವಂತೆ ಗೃಹ ಸಚಿವಾಲಯಕ್ಕೆ ಕೇಳಿತ್ತು. ಆದರೆ, ಸಿಆರ್‌ಪಿಎಫ್ ನ  ಈ ಕೋರಿಕೆಯನ್ನು ತಿರಸ್ಕರಿಸಲಾಯಿತು. ಕೇಳಿದ್ದರೆ ನಾನೇ ವ್ಯವಸ್ಥೆ ಮಾಡುತ್ತಿದ್ದೆ. ಅವರಿಗೆ ಕೇವಲ 5 ವಿಮಾನಗಳು ಬೇಕಾಗಿದ್ದವು. ಅವರು ವಿಮಾನಗಳನ್ನು ಒದಗಿಸಿದ್ದರೆ ನಮ್ಮ ಸೈನಿಕರ ಪ್ರಾಣ ಉಳಿಸಬಹುದಿತ್ತು. ಇದನ್ನು ನಾನು ಪ್ರಧಾನಿಯವರಿಗೆ ಹೇಳಿದ್ದೇನೆ. ನಮ್ಮ ತಪ್ಪಿನಿಂದ ಈ ಘಟನೆ ನಡೆದಿದೆ ಎಂದು ಹೇಳಿದ್ದೇನೆ. ಈ ಮಾತನ್ನು ಹೇಳಬೇಡಿ, ಬಾಯಿ ಮುಚ್ಚಿಕೊಂಡು ಇರುವಂತೆ ಮೋದಿ ನನಗೆ ಹೇಳಿದರು. ಪ್ರಧಾನಿ ಮಾತ್ರವಲ್ಲ, ಈ ಬಗ್ಗೆ ಏನನ್ನೂ ಹೇಳಬೇಡಿ ಎಂದು ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಹೇಳಿದರು. ನಾನು ಮತ್ತಷ್ಟು ಹೇಳಲು ಬಯಸುತ್ತೇನೆ. ಅವರು ಅದನ್ನು ನಿಭಾಯಿಸಿದ ರೀತಿ, ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ ಈ ಘಟನೆಯಲ್ಲಿ ನಾವು ಎಲ್ಲಿ ತಪ್ಪಿದ್ದೇವೆ ಎಂದು ನೋಡುವ ಬದಲು, ಪಾಕಿಸ್ತಾನದ ವಿರುದ್ಧ ಅದನ್ನು ತಿರುಗಿಸಲು ನಿರ್ಧರಿಸಿದರು.”

‘ಸರ್ಕಾರ ಹೊಣೆಯಾಗಬೇಕು’ ಮಾಜಿ ಸೇನಾ ಮುಖ್ಯಸ್ಥ

ಪುಲ್ವಾಮಾ ದಾಳಿಯಲ್ಲಿ 40 ಯೋಧರ ಸಾವಿಗೆ ಮೋದಿ ಸರ್ಕಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೊಣೆಯಾಗಬೇಕು ಎಂದು ಮಾಜಿ ಸೇನಾ ಮುಖ್ಯಸ್ಥ ಶಂಕರ್ ರಾಯ್ ಚೌಧರಿ ಹೇಳಿದ್ದಾರೆ. ಸತ್ಯಪಾಲ್ ಮಲಿಕ್ ಅವರ ಹೇಳಿಕೆಗೆ ಸಂಬಂದಿಸಿದಂತೆ ಟೆಲಿಗ್ರಾಫ್ ಪತ್ರಿಕೆಗೆ ಪ್ರತಿಕ್ರಿಯಿಸಿ “ಸದಾ ದಾಳಿಗೆ ತುತ್ತಾಗುವ ರಸ್ತೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಶ್ರೀನಗರಕ್ಕೆ ತೆರಳುವ ಬದಲು ವಿಮಾನದ ಮೂಲಕ ತೆರಳಿದ್ದರೆ ದಾಳಿಯನ್ನು ತಡೆಯಬಹುದಿತ್ತು. ಪುಲ್ವಾಮಾ ಹತ್ಯಾಕಾಂಡದ ಪ್ರಾಥಮಿಕ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರಿಂದ ಮಾರ್ಗದರ್ಶಿಸಲ್ಪಟ್ಟ ಪ್ರಧಾನಿ ನೇತೃತ್ವದ ಸರ್ಕಾರವು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ. ಜನರಲ್ ಚೌಧರಿ ಅವರು ನವೆಂಬರ್ 1994 ರಿಂದ ಸೆಪ್ಟೆಂಬರ್ 1997 ರವರೆಗೆ ಸೇನಾ ಮುಖ್ಯಸ್ಥರಾಗಿದ್ದರು.

ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಕಾರಣ

ದಾಳಿಯ ಎರಡು ವರ್ಷಗಳ ನಂತರ 2021 ರಲ್ಲಿ ಪುಲ್ವಾಮಾ ದಾಳಿಯ ಕುರಿತು ‘ಫ್ರಂಟ್ ಲೈನ್’ ಪತ್ರಿಕೆ ತನಿಖೆ ನಡೆಸಿತು. ಅದರ ತನಿಖೆಯ ಫಲಿತಾಂಶಗಳು ವಿವಿಧ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದವು. ಆ ಮಾಹಿತಿಯೊಂದಿಗೆ ಫೆಬ್ರವರಿ 14, 2021 ರಂದು ಫ್ರಂಟ್ ಲೈನ್ ಪುಸ್ತಕ ಬಿಡುಗಡೆ ಮಾಡಿದೆ. ಅದು ಮೋದಿ ಸರ್ಕಾರವನ್ನು ನಿಖರವಾಗಿ ಬಹಿರಂಗಪಡಿಸುತ್ತದೆ. ಅದರ ಒಂದಷ್ಟು ವರದಿ ಇಲ್ಲಿದೆ.

ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಪ್ರತಿಪಕ್ಷಗಳು ಹಲವು ಅನುಮಾನಗಳನ್ನು ಎತ್ತಿದ್ದವು. ಕಟ್ಟುನಿಟ್ಟಿನ ಕಣ್ಗಾವಲು ಹೊರತಾಗಿಯೂ ಸಿಆರ್‌ಪಿಎಫ್ ವಾಹನಗಳ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಸಾಕಷ್ಟು ಸ್ಫೋಟಕಗಳನ್ನು ಹೇಗೆ ಪಡೆದರು? ದಾಳಿಯ ಬಗ್ಗೆ ಏನಾದರೂ ಗುಪ್ತಚರ ಮಾಹಿತಿ ದೊರೆತಿದೆಯೇ? ಅಥವಾ ಯಾವುದೇ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲವೇ? ಗುಪ್ತಚರ ವಿಫಲವಾಗಿದೆಯೇ? ಎಂಬ ವಿವಿಧ ಪ್ರಶ್ನೆಗಳನ್ನು ಎತ್ತಲಾಯಿತು. ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರದ ಬಳಿ ಉತ್ತರವಿಲ್ಲ. ಸರ್ಕಾರ ಮತ್ತು ಸರ್ಕಾರದ ಬೆಂಬಲಿತ ಸಾಮಾಜಿಕ ಮಾಧ್ಯಮಗಳು ಗುಪ್ತಚರ ವೈಫಲ್ಯವನ್ನು ಪ್ರಶ್ನಿಸಿದಾಗ, ‘ದೇಶಭಕ್ತಿ’ ಹೆಸರಿನಲ್ಲಿ ಉನ್ಮಾದವನ್ನು ಬೆಳೆಸಲಾಯಿತು. ಪ್ರಶ್ನೆಗಳನ್ನು ಎತ್ತುವವರನ್ನು ‘ದೇಶವಿರೋಧಿಗಳು’ ಎಂಬ ಹಣೆಪಟ್ಟಿ ಕಟ್ಟಲಾಯಿತು. ಕೇಂದ್ರ ಸರ್ಕಾರದಿಂದ ಯಾವುದೇ ಗುಪ್ತಚರ ವೈಫಲ್ಯವಿಲ್ಲ; ಪುಲ್ವಾಮಾ ದಾಳಿಯ ತನಿಖೆಯನ್ನು ಎನ್‌ಐಎ ನಡೆಸಲಿದೆ. ತನಿಖೆಯಲ್ಲಿ ಸಂಪೂರ್ಣ ಸತ್ಯಾಂಶ ಬಹಿರಂಗವಾಗಲಿದೆ ಎಂದು ಸಂಸತ್ತಿಗೆ ಉತ್ತರಿಸಿದರು. ಪುಲ್ವಾಮಾ ದಾಳಿಯ ಮೂರು ವಾರಗಳ ನಂತರ, ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮುದಾಜಿರ್ ಅಹ್ಮದ್ ಖಾನ್ ಕೊಲ್ಲಲ್ಪಟ್ಟರು. ದಾಳಿ ನಡೆದ 100 ಗಂಟೆಗಳಲ್ಲಿ ಆತನ ಸಹಚರ ಅಬ್ದುಲ್ ರಶೀದ್ ಕೂಡ ಹತನಾದ.

ಗುಪ್ತಚರ ಮಾಹಿತಿಯ ಲೋಪ ಆಕಸ್ಮಿಕವೇ?

ಫ್ರಂಟ್‌ಲೈನ್ ನಡೆಸಿದ ತನಿಖೆಯಲ್ಲಿ, 2019ರ ಜನವರಿ 2 ರಿಂದ ಫೆಬ್ರವರಿ 13 ರವರೆಗೆ 12 ಬಾರಿ, ಭಯೋತ್ಪಾದಕ ಸಂಘಟನೆಗಳು ಪ್ರತೀಕಾರದ ಹೆಸರಿನಲ್ಲಿ ದಾಳಿ ತಯಾರಿ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ಗುಪ್ತಚರ ಸಂಸ್ಥೆಗಳು ಸಂಬಂಧಿತ ನಿಗಾ ಸಂಸ್ಥೆಗಳಿಗೆ ನಿರಂತರವಾಗಿ ಮಾಹಿತಿ ನೀಡಿವೆ. ದಾಳಿಗೆ ಒಂದು ದಿನ ಮುಂಚೆಯೇ (ಫೆ. 13, 2019) ಭದ್ರತಾ ಪಡೆಗಳು ದಾರಿಯಲ್ಲಿ ಆತ್ಮಾಹುತಿ ದಾಳಿ ನಡೆಸಬಹುದು ಎಂಬ ಎಚ್ಚರಿಕೆ ರವಾನಿಸಲಾಗಿದೆ. ಈ ಮಾಹಿತಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕರಿಗೆ ರವಾನಿಸಲಾಗಿದೆ. ಪುಲ್ವಾಮಾ-ಅವಂತಿಪುರ ಹೆದ್ದಾರಿ ಆರು ಬಾರಿ ಅತ್ಯಂತ ಅಪಾಯಕಾರಿ ಪ್ರದೇಶ ಎಂದು ಸೂಚಿಸಿದ್ದಾರೆ. ಜೈಶ್-ಎ-ಮೊಹಮ್ಮದ್ ಉಗ್ರರ ದಾಳಿಗೆ ಇದು ಹಾಟ್‌ಸ್ಪಾಟ್ ಆಗಿದೆ ಎಂದು ಸೂಚಿಸಿದ್ದರು.

ಇದೆಲ್ಲದರ ನಂತರವೂ – ಅಸಾಮಾನ್ಯವಾಗಿ   2019ರ ಫೆ. 14 ರಂದು, 2547 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹೊತ್ತ 78 ವಾಹನಗಳ ಉದ್ದನೆಯ ಸಾಲು ಸಾವನ್ನು ಎದುರಿಸುವ ಪ್ರಯಾಣವನ್ನು ಪ್ರಾರಂಭಿಸಿತು. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಮುದಾಸಿರ್ ಅಹ್ಮದ್ ಖಾನ್ ಭಾರೀ ಆತ್ಮಾಹುತಿ ದಾಳಿಗೆ ಯೋಜನೆ ರೂಪಿಸಿದ್ದ ಎಂಬುದು ಗುಪ್ತಚರ ಸಂಸ್ಥೆಗಳಿಗೆ ತಿಳಿದಿತ್ತು. ಅವನ ಚಲನವಲನಗಳ  ಬಗ್ಗೆ ಸರ್ಕಾರಕ್ಕೆ ಅರಿವಿತ್ತು. ಮುದಾಸಿರ್ ಅಹ್ಮದ್ ಖಾನ್ ನ ಲಾಲ್ದಿರಾಲ್ ಪ್ರದೇಶದಲ್ಲಿನ ಸ್ಥಳವು ಭದ್ರತಾ ಪಡೆಗಳು ಮತ್ತು ಪೊಲೀಸರಿಗೂ ತಿಳಿದಿತ್ತು. ಈತ ಈಗಾಗಲೇ ಲೆತ್‌ಪುರ ಶಿಬಿರದ ದಾಳಿಯಲ್ಲಿ ಐವರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಹತ್ಯೆಗೈದ ವ್ಯಕ್ತಿ. ಆದರೆ ಗುಪ್ತಚರ ಮಾಹಿತಿ ಆಧರಿಸಿ ತ್ವರಿತವಾಗಿ ಕ್ರಮಕೈಗೊಳ್ಳದೆ ಸರಕಾರ ಸಂಪೂರ್ಣ ನಿರಾಸಕ್ತಿ ತಾಳಿತು.

ಗುಪ್ತಚರ ಮಾಹಿತಿಯು ಭಯೋತ್ಪಾದಕರ ಗುರುತು, ಅವರ ಉದ್ದೇಶ, ಸ್ಥಳ ಇತ್ಯಾದಿಗಳನ್ನು ನಿರ್ದಿಷ್ಟವಾಗಿ ಸೂಚಿಸಿದರೆ, ಆ ಮಾಹಿತಿಯನ್ನು ‘ತಕ್ಷಣ ಕ್ರಮಕೈಗೊಳ್ಳಬೇಕಾದ ಗುಪ್ತಚರ ಮಾಹಿತಿ (actionable intelli gence)’ ಎನ್ನಲಾಗುತ್ತದೆ. ಮುಂಬರುವ ಸಾವಿನ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಎಲ್ಲಾ 12 ಗುಪ್ತಚರ ಸೇವೆಗಳನ್ನು ಎಲ್ಲಾ ಸರ್ಕಾರಿ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮುದಸಿರ್ ಅಹ್ಮದ್ ಖಾನ್ ಅವರನ್ನು ಸುಲಭವಾಗಿ ಬಂಧಿಸಬಹುದಿತ್ತು ಎಂದು ಹೆಸರು ಹೇಳಲು ಇಚ್ಛಿಸದ ಗುಪ್ತಚರ ವಲಯದ ಕೆಲವರು ಹೇಳಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ನಿರ್ಲಕ್ಷಿಸುವುದಕ್ಕೆ ಯಾರು ಹೊಣೆ ಎಂಬುದಕ್ಕೆ ಉತ್ತರವಿಲ್ಲ. ದಾಳಿ ನಡೆಯುವ ಕೆಲ ದಿನಗಳ ಹಿಂದೆ ಅವಂತಿಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿತ್ತು. ಗುಪ್ತಚರ ವರದಿಗಳು ಬರುತ್ತಿರುವ ಸಂದರ್ಭದಲ್ಲಿ ಅವರನ್ನು ಏಕೆ ಬದಲಾಯಿಸಲಾಯಿತು ಎಂಬುದು ನಿಗೂಢವಾಗಿದೆ.

ಮೋದಿ ಅವಕಾಶಕ್ಕಾಗಿ ಕಾಯುತ್ತಿದ್ದರು

ಮೋದಿ  ಅವಕಾಶಕ್ಕಾಗಿ ಕಾಯುತ್ತಿದ್ದರು. ಆ ಅವಕಾಶ ಏಪ್ರಿಲ್-ಮೇನಲ್ಲಿ ಬಂದಿತು. ಪುಲ್ವಾಮಾ ದಾಳಿಗೂ ಮುನ್ನ ಅವರು ‘ಅಭಿವೃದ್ಧಿ, ಒಳಗೊಳ್ಳುವ ಅಭಿವೃದ್ಧಿ’ ಕುರಿತು ಮಾತನಾಡುತ್ತಿದ್ದರು. ಸಂಸತ್ ಚುನಾವಣೆಯ ಕುರಿತಾಗಿ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಡುಗಡೆಗೊಳ್ಳಲು ಪ್ರಾರಂಭಿಸಿದವು. ಅತಂತ್ರ ಲೋಕಸಭೆ ಬರಬಹುದೆಂಬ ಮುನ್ಸೂಚನೆ ಹೊಂದಿತ್ತು.

ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ 19 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಮತದಾರರು ಮೋದಿಗೆ ಮತ್ತೊಮ್ಮೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. 2018ರಲ್ಲಿ 21 ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು ಎರಡರಲ್ಲಿ ಮಾತ್ರ. ದೇಶದ ಆರ್ಥಿಕತೆ ಕುಂಠಿತ ಸ್ಥಿತಿಯಲ್ಲಿತ್ತು. ರೈತರ, ಕಾರ್ಮಿಕರ ಬೃಹತ್  ಪ್ರತಿಭಟನೆಗಳು  ನಡೆದಿದ್ದವು.

ಇದೆಲ್ಲದರಿಂದ ಚಿಂತಿತರಾದಂತಿದ್ದ ಮೋದಿ, ಪುಲ್ವಾಮ ದಾಳಿಯ ಸಂದರ್ಭವನ್ನೇ ಕಾಯುತ್ತಿದ್ದರೇನೊ ಎಂಬಂತೆ, ಪುಲ್ವಾಮಾ ದಾಳಿಗೆ ಪ್ರತಿಕ್ರಿಯೆಯಾಗಿ, ಬಾಲಕೋಟ್ ವೈಮಾನಿಕ ದಾಳಿಯನ್ನು ಪಾಕಿಸ್ತಾನದ ವಿರುದ್ಧ ‘ನಿರ್ಧಿಷ್ಟ ದಾಳಿ’ ಹೆಸರಿನಲ್ಲಿ ನಡೆಸಲಾಯಿತು. ಇದು, 1971 ಭಾರತ-ಪಾಕಿಸ್ತಾನ ಯುದ್ಧದ ನಂತರ ನಡೆದ ವಾಯುಪಡೆಯ ದಾಳಿಯಾಗಿತ್ತು. ಭಾರತೀಯ ವಿಮಾನವನ್ನು ಹೊಡೆದುರುಳಿಸಿದ ಪಾಕಿಸ್ತಾನದ ಸೇನೆಯು ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಂಧಿಸಿತು. ಪಾಕಿಸ್ತಾನದಲ್ಲಿ ಅಡಗಿದ್ದ 300 ಭಯೋತ್ಪಾದಕರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಹತ್ಯೆ ಮಾಡಲಾಗಿದೆ ಎಂದು ಮೋದಿ ಸರ್ಕಾರ ಘೋಷಿಸಿತು.

ದಾಳಿ ಮತ್ತು ಮೋದಿಯವರ 2ನೇ ಅವಧಿಗೆ ನೇರ ಸಂಬಂಧ

ಪುಲ್ವಾಮಾ ದಾಳಿಯ ನಂತರ, ದಾಳಿಯಲ್ಲಿ ಹುತಾತ್ಮರಾದ ಯೋಧರ ಮೃತದೇಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ರಾಷ್ಟ್ರೀಯತೆ ಮತ್ತು ಯುದ್ಧ-ಪ್ರೇಮದ ಅಲೆಯು ದೇಶದಾದ್ಯಂತ ವ್ಯಾಪಿಸಿತು. ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಸಂದರ್ಶಕ ಪ್ರೊ. ಸತೀಶ್ ಮಿಶ್ರಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದು ಹೀಗೆ: “ಪುಲ್ವಾಮಾ ದಾಳಿ ಮತ್ತು ಕೇಂದ್ರದಲ್ಲಿ ಮೋದಿಯವರ ಎರಡನೇ ಅವಧಿಗೆ ನೇರ ಸಂಬಂಧವಿದೆ. ಪುಲ್ವಾಮಾದಲ್ಲಿ 40 ಅರೆಸೇನಾ ಪಡೆ ಯೋಧರನ್ನು ಹತ್ಯೆಗೈದಿರುವುದು ಮೋದಿಯ ಕೊಡುಗೆಯಾಗಿದೆ. ಏಕೆಂದರೆ ಬಿಜೆಪಿ ತಲೆಕೆಳಗಾಗಿ ನಿಂತರೂ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ.”

ಪುಲ್ವಾಮಾ ದಾಳಿಯ ನಂತರ ‘ಭಯೋತ್ಪಾದನೆ’ಯನ್ನು ಬಿಜೆಪಿ ತನ್ನ ಚುನಾವಣಾ ಘೋಷಣೆಯನ್ನಾಗಿ ಮಾಡಿಕೊಂಡಿತು. ಬಾಲಕೋಟ್ ದಾಳಿಯ ನಂತರ ಯಡಿಯೂರಪ್ಪ ಅವರು ಕರ್ನಾಟಕದ 24 ಲೋಕಸಭಾ ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದರು. 40 ಅರೆಸೇನಾ ಪಡೆ ಯೋಧರ ಸಾವನ್ನು ಬಿಜೆಪಿ ನಾಯಕರು ಪ್ರಚಾರದ ವಿಷಯವನ್ನಾಗಿ ಮಾಡಿಕೊಂಡರು. ಇದರಲ್ಲಿ ಮೋದಿ ಮುಂಚೂಣಿಯಲ್ಲಿದ್ದರು. ಅಹಮದಾಬಾದ್ ಚುನಾವಣಾ ಪ್ರಚಾರದಲ್ಲಿ, ಶತ್ರುಗಳ ಗಡಿಯಲ್ಲಿ ದಾಳಿ ಮಾಡಲು ನಾವು ಹೆಚ್ಚು ಸಮಯ ಕಾಯುವುದಿಲ್ಲ ಎಂದು ಮೋದಿ ಹೇಳಿದರು. ಮೀರತ್ ರ್ಯಾಲಿಯಲ್ಲಿ ಮೋದಿ ಅವರು ಪುಲ್ವಾಮಾದ ಹುತಾತ್ಮರನ್ನು 1857 ರಿಂದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರಿಗೆ ಹೋಲಿಸಿದರು. ಯುವಕರು ತಮ್ಮ ಮೊದಲ ಸಂಬಳವನ್ನು ತಾಯಿ ಮತ್ತು ಸಹೋದರಿಯರಿಗೆ ನೀಡುವಂತೆ ಪುಲ್ವಾಮಾ ಸೈನಿಕರಿಗೆ ಯುವಕರು ತಮ್ಮ ಮೊದಲ ಮತವನ್ನು ನೀಡಬೇಕು ಎಂದು ಹೇಳಿದರು.

ಚುನಾವಣಾ ಭಾಷಣದ ವಸ್ತುಗಳಾಗಿದ್ದವು

“ಶತ್ರುಗಳಿಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳಬೇಕೆ? ಅಥವಾ ಶತ್ರುವಿನ ಮನೆಗೆ ಹೋಗಿ ದಾಳಿ ಮಾಡುವುದೇ? ಉಗ್ರವಾದದ ವಿರುದ್ಧ ಹೋರಾಡುತ್ತಿರುವವರು ಯಾರು?” ಎನ್ನುತ್ತಾ, ಹುತಾತ್ಮ ಸೈನಿಕರು, ಮತ್ತು ಬಾಲಕೋಟ್ ಮೇಲಿನ ವಿಮಾನ ದಾಳಿ ಮೋದಿಯವರ ಚುನಾವಣಾ ಭಾಷಣದ ವಸ್ತುಗಳಾಗಿದ್ದವು.

ಬಾಲಾಕೋಟ್ ಮೇಲಿನ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಾ ಮೋದಿಯವರು, ತಮ್ಮ ಬಲಿಷ್ಠ ಸರ್ಕಾರ ಶತ್ರು ದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಬೇಟೆಯಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಪಾಕಿಸ್ತಾನದಿಂದ ಹಣ ಪಡೆಯುತ್ತಿವೆ ಎಂದು ಲೇವಡಿ ಮಾಡಿದರು. ಆಗಲೇ ವಿರೋಧ ಪಕ್ಷಗಳಿಗೆ ಆಳವಾದ ಷಡ್ಯಂತ್ರದ ಅರಿವಾಯಿತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಆಯೋಗವು ಮೋದಿಗೆ ಅನುಕೂಲಕರವಾಗಿತ್ತು. ಮಾಧ್ಯಮಗಳು ಬಿಜೆಪಿ ಪರವಾಗಿ ರಾಷ್ಟ್ರೀಯ ಭದ್ರತೆಯ ವಿಷಯವನ್ನು ರಾಜಕೀಯಗೊಳಿಸಿದವು. ಉಗ್ರಗಾಮಿ ರಾಷ್ಟ್ರೀಯತೆ ಮೇಲುಗೈ ಸಾಧಿಸಿತು ಮತ್ತು ಅಂತಿಮವಾಗಿ ಬಿಜೆಪಿ ಮೊದಲಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬಂದಿತು.

Is this your new site? Log in to activate admin features and dismiss this message
ಲಾಗಿನ್