
ಚೀನಾ ದೇಶ ಭಾರತದ ಪರಮ ಶತ್ರು ಎಂದು ಬಿಜೆಪಿ ಮತ್ತು ಸಂಘಪರಿವಾರವು ಜನರ ನಡುವೆ ಪ್ರಚಾರ ಮಾಡುತ್ತಲೇ, ಚೀನಾದ ಜೊತೆಗಿನ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಂಡಿದ್ದಾರೆ. ಚೀನಾದಲ್ಲಿ ಭಾರತದ ಉತ್ಪನ್ನಗಳ ಮಾರಾಟ ಮತ್ತು ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟ ನಡೆಯುತ್ತಿವೆ. ಭಾರತದ ಹಲವು ಉದ್ಯಮಗಳಲ್ಲಿ ಚೀನಾ ಮತ್ತು ಭಾರತದ ಬಂಡವಾಳಗಾರರ ಸಹಭಾಗಿತ್ವವಿದೆ. ಚೀನಾದಲ್ಲಿ ಭಾರತದ ಹೂಡಿಕೆ, ಭಾರತದಲ್ಲಿ ಚೀನಾ ಹೂಡಿಕೆಗಳಿವೆ. ಒಮ್ಮೆ ಬಾಬಾ ರಾಮ್ ದೇವ್ ‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಭಾರತೀಯರಿಗೆ ಕರೆಕೊಟ್ಟಿದ್ದರು. ಅದಾದ ಒಂದೆರೆಡು ವರ್ಷಗಳಲ್ಲಿಯೇ ಚೀನಾದಲ್ಲಿ ತಮ್ಮ ಪತಂಜಲಿ ಉತ್ಪನ್ನಗಳ ಮಾರಾಟಕ್ಕೆ ಪ್ರಯತ್ನಿಸಿದರು.
ಪ್ರದೇಶವೊಂದರ ಜನರ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆ ಕುರಿತು ಮಾತನಾಡಲು ನಾನು ಮತ್ತು ಸಿಪಿಐ(ಎಂ)ನ ಸ್ಥಳೀಯ ಸಮಿತಿಯ ನಾಲ್ಕೈದು ಸಂಗಾತಿಗಳು, ಸ್ಥಳೀಯ ಬಿಜೆಪಿ ಶಾಸಕರೊಬ್ಬರ ಕಚೇರಿಗೆ ಹೋಗಿದ್ದೆವು. ಶಾಸಕರನ್ನು ಭೇಟಿಮಾಡುವ ಮುನ್ನ, ಶಾಸಕರ ಆಪ್ತ ಸಹಾಯಕ(ಪಿಎ)ರ ಅನುಮತಿ ಪಡೆಯಬೇಕಿತ್ತು. ಪಿಎ ಬಳಿ ನಮ್ಮನ್ನು ನಾವು ಪರಿಚಯ ಮಾಡಿಕೊಂಡೆವು. ನಾವು ಕಮ್ಯೂನಿಸ್ಟರು ಎಂದು ತಿಳಿದ ತಕ್ಷಣ ಆ ಪಿಎ ಹೇಳಿದ್ದನ್ನು ಕೇಳಿ ದಂಗಾದೆ. ಆತ ಹೇಳಿದ್ದು ಹೀಗೆ: “ಏನ್ರೀ ನೀವು, ನಮ್ಮ ನೆಲದಲ್ಲಿ ಹುಟ್ಟಿ, ನಮ್ಮ ಅನ್ನ ತಿಂದು, ನಮ್ಮ ನೀರು ಕುಡಿದು, ನಮ್ಮ ವೈರಿ ಚೀನಾದವರಿಗೆ ಸಪೋರ್ಟ್ ಮಾಡ್ತೀರಲ್ರೀ?…”.
ನಮ್ಮ ಮೇಲಿನ ಇಂತಹ ಆರೋಪಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ, ಇತರೆಡೆಗಳಲ್ಲಿ ಸಾಕಷ್ಟು ಬಾರಿ ಎದುರಿಸಿದ್ದೇವೆ. ಜನರಿಂದ ಆಯ್ಕೆಯಾದ ಒಬ್ಬ ಜನಪ್ರತಿನಿಧಿಯ ಪಿಎ ಈ ರೀತಿ ಹೇಳಿದಾಗ ಆತ ಪಕ್ಕಾ ಆರೆಸ್ಸೆಸ್ ಗರಡಿ ಮನೆಯಿಂದ ಬಂದವನು ಎಂಬುದು ಸ್ಪಷ್ಟವಾಗುತ್ತದೆ. ಬಿಜೆಪಿಯ ಯಾವುದೇ ಸಚಿವರು, ಸಂಸದರು, ಶಾಸಕರ ಆಪ್ತ ಸಹಾಯಕರು ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ)ನ ನಿಷ್ಠಾವಂತ ಕಾರ್ಯಕರ್ತರಾಗಿರುತ್ತಾರೆ. ಈ ಶಾಸಕರ ಪಿಎ ನಮ್ಮೆದುರೇ ಕಮ್ಯೂನಿಸ್ಟರ ವಿರುದ್ದ ಈ ರೀತಿ ಸುಳ್ಳು ಆರೋಪ ಹೊರಿಸುವವರು, ಆರೆಸ್ಸೆಸ್ ಶಾಖೆಗಳಲ್ಲಿ, ಸಂಘಪರಿವಾರದ ಸಭೆ ಸಮಾರಂಭಗಳಲ್ಲಿ ಏನೆಲ್ಲಾ ಸುಳ್ಳು ಹೇಳಿ ಅವರ ತಲೆಯಲ್ಲಿ ಕಮ್ಯೂನಿಸ್ಟರ ವಿರುದ್ಧ ದ್ವೇಷ ಬಿತ್ತಬಹುದು ಎಂಬುದನ್ನು ಊಹಿಸಿಕೊಂಡರೆ ದಿಗ್ಭ್ರಮೆಯಾಗುತ್ತದೆ.
ಭಾರತ-ಚೀನಾ ನಡುವಿನ ವ್ಯಾಪಾರ 2022 ರಲ್ಲಿ 11 ಲಕ್ಷ ಕೋಟಿ ರೂ.
ನಿಜವಾಗಿಯೂ ಚೀನಾ ಪರ ಇರುವವರು ಯಾರು? ಕಮ್ಯೂನಿಸ್ಟರೋ ಅಥವಾ ನಮ್ಮನ್ನು ಆಳುವ ಸರ್ಕಾರ ಮತ್ತು ನಮ್ಮ ಉದ್ಯಮಿಗಳೊ? ಚೀನಾ ಕಮ್ಯೂನಿಸ್ಟ್ ಸಿದ್ದಾಂತವನ್ನು ಅಳವಡಿಸಿಕೊಂಡಿದೆ. ಎಂದ ಮಾತ್ರಕ್ಕೆ ಭಾರತದ ಕಮ್ಯೂನಿಸ್ಟರು ಚೀನಾ ಪರ ಎನ್ನುವುದಾದರೆ, ಪಾಕಿಸ್ತಾನದಲ್ಲಿಯೂ ಬಂಡವಾಳಶಾಹಿ ಆಡಳಿತ ಇದೆ ಎಂದ ಮಾತ್ರಕ್ಕೆ ಭಾರತದ ಬಂಡವಾಳಶಾಹಿ ಸಿದ್ದಾಂತವನ್ನು ಒಪ್ಪಿಕೊಂಡಿರುವ ಬಿಜೆಪಿ ಪಾಕಿಸ್ತಾನದ ಪರ ಎನ್ನಲಾದೀತೆ?
ಭಾರತದಲ್ಲಿನ ಒಕ್ಕೂಟ ಸರ್ಕಾರ ಮತ್ತು ಇಲ್ಲಿನ ಬಂಡವಾಳಗಾರರು ಚೀನಾ ದೇಶ ಮತ್ತು ಅಲ್ಲಿನ ಬಂಡವಾಳಗಾರರ ಜೊತೆ ಎಷ್ಟೊಂದು ಆಮದು-ರಪ್ತು ವ್ಯವಹಾರ, ಉದ್ಯಮಗಳಲ್ಲಿ ಪಾಲುದಾರಿಕೆ, ವ್ಯಾಪಾರ ವಹಿವಾಟು ಇಟ್ಟುಕೊಂಡಿದ್ದಾರೆ ಎಂಬುದನ್ನು ನಾವಿಲ್ಲಿ ನೋಡಬೇಕು. ಲಾಭ ಬರುವುದಾದರೆ ಯಾವುದೇ ದೇಶದ ಸಿದ್ದಾಂತಗಳನ್ನು ಬಂಡವಾಳಗಾರರು ನೋಡುವುದಿಲ್ಲ. ಅವರ ವ್ಯಾಪಾರ ವಹಿವಾಟುಗಳಿಗೆ, ಲಾಭಗಳಿಸಲು ಅವಕಾಶ ಸಿಕ್ಕರೆ ಸಾಕು.
ಅತಿದೊಡ್ಡ ಸರಕು ವ್ಯಾಪಾರ ಪಾಲುದಾರ
ಭಾರತ ಮತ್ತು ಚೀನಾ ನಡುವಿನ ವ್ಯಾಪಾರದ ಕುರಿತು ನೋಡೋಣ: “ಈ ಶತಮಾನದ ಆರಂಭದಿಂದ ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರದ ಕ್ಷಿಪ್ರ ವಿಸ್ತರಣೆಯು 2008 ರ ಹೊತ್ತಿಗೆ ಭಾರತದ ಅತಿದೊಡ್ಡ ಸರಕು ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಲು ಚೀನಾವನ್ನು ಪ್ರೇರೇಪಿಸಿದೆ, ಈ ಸ್ಥಾನವನ್ನು ಚೀನಾ ಇಂದಿಗೂ ಹಿಡಿದಿಟ್ಟುಕೊಳ್ಳುತ್ತದೆ. ಕಳೆದ ದಶಕದ ಆರಂಭದಿಂದ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. 2015 ರಿಂದ 2022 ರವರೆಗೆ, ಭಾರತ-ಚೀನಾ ದ್ವಿಪಕ್ಷೀಯ ವ್ಯಾಪಾರವು ಶೇ. 90.14ರಷ್ಟು ಬೆಳವಣಿಗೆಯಾಗಿದೆ, ಸರಾಸರಿ ವಾರ್ಷಿಕ ಬೆಳವಣಿಗೆ ಶೇ. 12.87 ರಷ್ಟಾಗಿದೆ. 2022ರಲ್ಲಿ, ಚೀನಾದೊಂದಿಗಿನ ಒಟ್ಟಾರೆ ವ್ಯಾಪಾರವು ವರ್ಷದಿಂದ ವರ್ಷಕ್ಕೆ ಶೇ. 8.47ರಷ್ಟು ಏರಿಕೆಯಾಗಿ USD (ಅಮೆರಿಕನ್ ಡಾಲರ್) 136.26 ಶತಕೋಟಿಯನ್ನು ತಲುಪಿತು, ಸತತವಾಗಿ ಎರಡನೇ ಬಾರಿಗೆ USD 100 ಶತಕೋಟಿ ಗಡಿಯನ್ನು ದಾಟಿದೆ. ವ್ಯಾಪಾರ ಕೊರತೆಯು USD 101.28 ಶತಕೋಟಿಗೆ ಬಂದಿತು, ಏಕೆಂದರೆ ಚೀನಾದಿಂದ ಭಾರತದ ಆಮದುಗಳು USD 118.77 ಶತಕೋಟಿ ತಲುಪಲು ಶೇ. 118.77ರಷ್ಟು ಏರಿಕೆ ಕಂಡಿದೆ, ಏತನ್ಮಧ್ಯೆ, ಚೀನಾಕ್ಕೆ ಭಾರತದ ರಫ್ತುಗಳು ವರ್ಷಕ್ಕೆ ಶೇ. 37.59ರಷ್ಟು ಕಡಿಮೆಯಾಗಿ ಕಳೆದ ವರ್ಷದ ನಿವ್ವಳ ರಫ್ತಿಗೆ USD 17.49 ಶತಕೋಟಿಗೆ ತಲುಪಿದೆ. USD 28.03 ಬಿಲಿಯನ್.” (ಎಂಬೆಸಿ ಆಫ್ ಇಂಡಿಯಾ- ಬೀಜಿಂಗ್ ತನ್ನ ವೆಬ್ಸೈಟ್ ನಲ್ಲಿ ಹೇಗೆ ಹೇಳಿದೆಯೋ ಹಾಗೆಯೇ ಇಲ್ಲಿ ಹಂಚಿಕೊಳ್ಳಲಾಗಿದೆ. (Trade and Economic Relations)
ಹೆಚ್ಚುತ್ತಿರುವ ಆಮದು: ಕುಸಿಯುತ್ತಿರುವ ರಫ್ತು
ಒಂದಡೆ ಬಿಜೆಪಿ ಮತ್ತು ಸಂಘಪರಿವಾರ “ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಿ” ಎಂದು ಜನರಿಗೆ ಕರೆಕೊಡುತ್ತಲೇ, ಅವರದೇ ಸರ್ಕಾರ ಚೀನಾದ ಸರಕುಗಳನ್ನು ಆಮದು ಮಾಡಿಕೊಳ್ಳಲು ಹೆಚ್ಚಿನ ಅವಕಾಶ ಕೊಟ್ಟಿದೆ. ಚೀನಾ ದೇಶ ಭಾರತದ ವೈರಿ ಎಂದು ಜನರ ನಡುವೆ ಪ್ರಚಾರ ಮಾಡುತ್ತಲೇ, ಚೀನಾದ ಜೊತೆಗಿನ ವ್ಯಾಪಾರ ವಹಿವಾಟು ನಡೆಯುವಂತೆ ನೋಡಿಕೊಂಡಿದ್ದಾರೆ. ಚೀನಾದಲ್ಲಿ ಭಾರತದ ಉತ್ಪನ್ನಗಳ ಮಾರಾಟ ಮತ್ತು ಭಾರತದಲ್ಲಿ ಚೀನಾ ಉತ್ಪನ್ನಗಳ ಮಾರಾಟ ನಡೆಯಲು ಈ ಎರಡೂ ದೇಶಗಳು ಪರಸ್ಪರ ಸಹಕರಿಸುತ್ತವೆ. ಭಾರತದ ಹಲವು ಉದ್ಯಮಗಳಲ್ಲಿ ಚೀನಾ ಮತ್ತು ಭಾರತದ ಬಂಡವಾಳಗಾರರ ಸಹಭಾಗಿತ್ವ ಇದೆ. ಒಮ್ಮೆ ಬಾಬಾ ರಾಮ್ ದೇವ್ ‘ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಭಾರತೀಯರಿಗೆ ಕರೆಕೊಟ್ಟಿದ್ದರು. ಅದಾದ ಒಂದೆರೆಡು ವರ್ಷಗಳಲ್ಲಿಯೇ ಚೀನಾದಲ್ಲಿ ತಮ್ಮ ಪತಂಜಲಿ ಉತ್ಪನ್ನಗಳ ಮಾರಾಟಕ್ಕೆ ಪ್ರಯತ್ನಿಸಿದರು.
ಚೀನಾದೊಂದಿಗಿನ ಒಟ್ಟಾರೆ ವ್ಯಾಪಾರವು 2022ರಲ್ಲಿ 136.26 ಶತಕೋಟಿ ಡಾಲರ್ (11 ಲಕ್ಷ ಕೋಟಿ ರೂ.). ಜನವರಿ 2023ರಲ್ಲಿ ಚೀನಾದ ಕಸ್ಟಮ್ಸ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತಕ್ಕೆ ಚೀನಾದ ರಫ್ತು 118.5 ಶತಕೋಟಿ ಡಾಲರ್ (9 ಲಕ್ಷದ 8,000 ಕೋಟಿ ರೂ.)ಗೆ ಏರಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 21.7ರಷ್ಟು ಹೆಚ್ಚಳವಾಗಿದೆ. ಚೀನಾದಿಂದ ಪ್ರಮುಖ ಆಮದುಗಳೆಂದರೆ ವಿದ್ಯುತ್ ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್, ಸಾವಯವ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ರಸಗೊಬ್ಬರಗಳು, ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಸ್ವಯಂ ಘಟಕಗಳು.
ಇದೇ ಸಮಯದಲ್ಲಿ, ಭಾರತದಿಂದ ಚೀನಾ ದೇಶಕ್ಕೆ ಆದ ರಫ್ತು 17.48 ಶತಕೋಟಿ ಡಾಲರ್ (1 ಲಕ್ಷದ 44.000 ಕೋಟಿ ರೂ.). ಇದು ವರ್ಷದಿಂದ ವರ್ಷಕ್ಕೆ ಶೇ. 37.9 ರಷ್ಟು ಕುಸಿತವಾಗುತ್ತಿದೆ ಎಂದು ಆ ಡೇಟಾ ಹೇಳುತ್ತದೆ. ಇದರಿಂದಾಗಿ, ವ್ಯಾಪಾರ ಕೊರತೆಯು 100 ಶತಕೋಟಿ ಡಾಲರ್ ಗಡಿ ದಾಟಿದೆ. ಈ ಕೊರತೆ ಹೆಚ್ಚಳ ಭಾರತಕ್ಕೆ ಗಂಭೀರ ಕಳವಳಕಾರಿ ಅಂಶವಾಗಿದೆ.
ಭಾರತದ ಪ್ರಧಾನ ರಫ್ತುಗಳು ಕಬ್ಬಿಣದ ಅದಿರು, ಹತ್ತಿ, ತಾಮ್ರ, ಅಲ್ಯೂಮಿನಿಯಂ ಮತ್ತು ವಜ್ರಗಳು/ನೈಸರ್ಗಿಕ ರತ್ನಗಳನ್ನು ಒಳಗೊಂಡಿವೆ. ಹೆಚ್ಚಿನ ಕೃಷಿ ಉತ್ಪನ್ನಗಳಿಗೆ ಮತ್ತು ಭಾರತದ ಔಷಧಗಳು, IT/ITES, ಇತ್ಯಾದಿ ಸ್ಪರ್ಧಾತ್ಮಕವಾಗಿರುವ ಕ್ಷೇತ್ರಗಳಿಗೆ ಮಾರುಕಟ್ಟೆ ಪ್ರವೇಶಕ್ಕೆ ಚೀನಾ ಹಲವು ಅಡಚಣೆಗಳನ್ನು ಒಡ್ಡುತ್ತಿದೆ ಎಂದು ಈ ಕಚೇರಿ ಹೇಳುತ್ತಿದೆ. 2019-20ರಲ್ಲಿ ಭಾರತದ ಒಟ್ಟು ರಫ್ತು ಮತ್ತು ಆಮದುಗಳಲ್ಲಿ ಚೀನಾದ ಪಾಲು ಕ್ರಮವಾಗಿ ಶೇ. 9 ಮತ್ತು ಶೇ. 18 ಆಗಿದೆ.
ದ್ವಿಪಕ್ಷೀಯ ಹೂಡಿಕೆ
ಭಾರತದ ರಾಯಭಾರ ಕಚೇರಿ ನೀಡಿರುವ ಮಾಹಿತಿಯಂತೆ, ಚೀನಾದ ವಾಣಿಜ್ಯ ಸಚಿವಾಲಯದ ಪ್ರಕಾರ, 2021 ರಲ್ಲಿ ಭಾರತಕ್ಕೆ ಚೀನೀ ಹೂಡಿಕೆಯು USD 63.18 ಮಿಲಿಯನ್. 2021 ರ ಅಂತ್ಯದ ವೇಳೆಗೆ ಭಾರತಕ್ಕೆ ಸಂಚಿತ ಚೀನೀ ಹೂಡಿಕೆಯು USD 5.403 ಶತಕೋಟಿ (44,700, ಕೋಟಿ ರೂ.) ಯಷ್ಟಿದೆ. 2021 ರಲ್ಲಿ ಚೀನಾಕ್ಕೆ ಭಾರತೀಯ ಹೂಡಿಕೆಯು USD 6.32 ಮಿಲಿಯನ್. 2021 ರ ಅಂತ್ಯದ ವೇಳೆಗೆ ಚೀನಾಕ್ಕೆ ಸಂಚಿತ ಭಾರತೀಯ ಹೂಡಿಕೆ USD 943.96 ಮಿಲಿಯನ್ (7,800 ಕೋಟಿ ರೂ.) ತಲುಪಿದೆ.
ಜೂನ್ 18, 2020ರ ಇಂಡಿಯಾ ಟುಡೆ ವರದಿಯ ಪ್ರಕಾರ, ಭಾರತದಲ್ಲಿ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಯು 2.34 ಶತಕೋಟಿ ಡಾಲರ್ ನಷ್ಟಿದೆ. ಕೆಲವು ಆರ್ಥಿಕ ತಜ್ಞರು ಹೇಳುವಂತೆ, ಮರುಹೊಂದಿಸಲಾದ ಹೂಡಿಕೆಗಳನ್ನು ಒಳಗೊಂಡಂತೆ, ಭಾರತದಲ್ಲಿ ಚೀನಾದ ಹೂಡಿಕೆಯನ್ನು 6 ಶತಕೋಟಿ ಡಾಲರ್ (49,700 ಕೋಟಿ ರೂ.) ಗಿಂತ ಹೆಚ್ಚು ಎಂದು ಅಂದಾಜಿಸಿದ್ದಾರೆ. ಇನ್ನು ಕೆಲವರು 8 ಶತಕೋಟಿ ಡಾಲರ್ (66,300 ಕೋಟಿ ರೂ.) ಅಂಕಿ ಅಂಶವನ್ನು ಉಲ್ಲೇಖಿಸುತ್ತಾರೆ. ವಾರ್ಷಿಕ ಪ್ರವಾಸಿ ಒಳಹರಿವಿನ ಮೂಲಕ ಹೆಚ್ಚುವರಿ 550 ಮಿಲಿಯನ್ ಡಾಲರ್ (45,500 ಕೋಟಿ ರೂ.) ಚೀನಾದಿಂದ ಭಾರತಕ್ಕೆ ಬರುತ್ತದೆ.
ಚೀನಾವು ಭಾರತದ ಪ್ರಮುಖ 30 ಉದ್ಯಮಗಳಲ್ಲಿ 18 ಮತ್ತು ಸ್ಟಾರ್ಟ್-ಅಪ್‌ಗಳಲ್ಲಿ ಹೂಡಿಕೆ ಮಾಡಿದೆ. 2014ರಲ್ಲಿ 1.6 ಶತಕೋಟಿ ಡಾಲರ್ ನಿಂದ 8 ಶತಕೋಟಿ ಡಾಲರ್ ಗೆ, ಮೋದಿ ಸರ್ಕಾರದ ಮೊದಲ 3 ವರ್ಷಗಳಲ್ಲಿ ಭಾರತದಲ್ಲಿ ಚೀನೀ ಹೂಡಿಕೆಯು ಐದು ಪಟ್ಟು ಹೆಚ್ಚಾಗಿದೆ. 2016 ಮತ್ತು 2019ರ ನಡುವೆ, ಭಾರತೀಯ ವ್ಯವಹಾರಗಳು ಮತ್ತು ಸ್ಟಾರ್ಟ್-ಅಪ್‌ಗಳಲ್ಲಿ ಚೀನಾದ ಹಣಕಾಸಿನ ನೆರವು 12 ಪಟ್ಟು ಹೆಚ್ಚಾಗಿದೆ.
ಪಿಕೆ ಮತ್ತು ಧೂಮ್ 3 ಸಿನಿಮಾಗಳು
2014ರ ಸೆಪ್ಟೆಂಬರ್‌ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಡಿಯೊ-ವಿಶ್ಯುಯಲ್ ಕಾಪ್ರೊಡಕ್ಷನ್ ಕುರಿತು ಭಾರತ-ಚೀನಾ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು 2015ರಲ್ಲಿ ಎರಡು ಭಾರತೀಯ ಚಲನಚಿತ್ರಗಳು (PK ಮತ್ತು Dhoom3) ಬಿಡುಗಡೆಯಾದವು. “ಕ್ಸುವಾನ್ ಝಾಂಗ್” ಭಾರತ ಮತ್ತು ಚೀನಾ ನಡುವಿನ ಮೊದಲ ಸಹ-ನಿರ್ಮಾಣ ಚಿತ್ರವಾಗಿದೆ.
ಭಾರತದಲ್ಲಿ ಚೀನೀ ಕಂಪನಿಗಳು
ಭಾರತದ ರಾಯಭಾರ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 100ಕ್ಕೂ ಹೆಚ್ಚು ಚೀನೀ ಕಂಪನಿಗಳು ಭಾರತದಲ್ಲಿ ಕಚೇರಿಗಳು/ಕಾರ್ಯಾಚರಣೆಗಳನ್ನು ಸ್ಥಾಪಿಸಿವೆ. ಯಂತ್ರೋಪಕರಣಗಳು ಮತ್ತು ಮೂಲಸೌಕರ್ಯ ನಿರ್ಮಾಣ ಕ್ಷೇತ್ರದಲ್ಲಿ ಅನೇಕ ದೊಡ್ಡ ಚೀನೀ ಸರ್ಕಾರಿ ಸ್ವಾಮ್ಯದ ಕಂಪನಿಗಳು ಭಾರತದಲ್ಲಿ ಯೋಜನೆಗಳನ್ನು ಗೆದ್ದಿವೆ ಮತ್ತು ಭಾರತದಲ್ಲಿ ಯೋಜನಾ ಕಚೇರಿಗಳನ್ನು ತೆರೆದಿವೆ. ಇವುಗಳಲ್ಲಿ ಸಿನೋಸ್ಟೀಲ್, ಶೌಗಾಂಗ್ ಇಂಟರ್‌ನ್ಯಾಶನಲ್, ಬೋಶನ್ ಐರನ್ ಮತ್ತು ಸ್ಟೀಲ್ ಲಿಮಿಟೆಡ್, ಸ್ಯಾನಿ ಹೆವಿ ಇಂಡಸ್ಟ್ರಿ ಲಿಮಿಟೆಡ್, ಚಾಂಗ್‌ಕಿಂಗ್ ಲಿಫಾನ್ ಇಂಡಸ್ಟ್ರಿ ಲಿಮಿಟೆಡ್, ಚೈನಾ ಡಾಂಗ್‌ಫಾಂಗ್ ಇಂಟರ್‌ನ್ಯಾಶನಲ್, ಸಿನೊ ಹೈಡ್ರೋ ಕಾರ್ಪೊರೇಷನ್, ಇತ್ಯಾದಿ. ಅನೇಕ ಚೀನೀ ಎಲೆಕ್ಟ್ರಾನಿಕ್, ಐಟಿ ಮತ್ತು ಹಾರ್ಡ್‌ವೇರ್ ಉತ್ಪಾದನಾ ಕಂಪನಿಗಳು ಭಾರತದಲ್ಲಿಯೂ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ Huawei Technologies, ZTE, TCL, Haier ಇತ್ಯಾದಿ ಸೇರಿವೆ. ಹೆಚ್ಚಿನ ಸಂಖ್ಯೆಯ ಚೀನೀ ಕಂಪನಿಗಳು ವಿದ್ಯುತ್ ವಲಯದಲ್ಲಿ EPC ಯೋಜನೆಗಳಲ್ಲಿ ತೊಡಗಿಕೊಂಡಿವೆ. ಇವುಗಳಲ್ಲಿ ಶಾಂಘೈ ಎಲೆಕ್ಟ್ರಿಕ್, ಹಾರ್ಬಿನ್ ಎಲೆಕ್ಟ್ರಿಕ್, ಡಾಂಗ್‌ಫಾಂಗ್ ಎಲೆಕ್ಟ್ರಿಕ್, ಶೆನ್ಯಾಂಗ್ ಎಲೆಕ್ಟ್ರಿಕ್ ಇತ್ಯಾದಿ ಸೇರಿವೆ. ಇತ್ತೀಚಿನ ವರ್ಷಗಳಲ್ಲಿ, ಚೀನಾದ ಮೊಬೈಲ್ ಕಂಪನಿಗಳು ಭಾರತದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿವೆ, Xiaomi, Huawei, Vivo ಮತ್ತು Oppo ನಂತಹ ಕಂಪನಿಗಳು ಭಾರತೀಯ ಮೊಬೈಲ್ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಆಕ್ರಮಿಸಿಕೊಂಡಿವೆ.
ಚೀನಾದಲ್ಲಿ ಭಾರತೀಯ ಕಂಪನಿಗಳು
ಕಳೆದ ಕೆಲವು ವರ್ಷಗಳಲ್ಲಿ ಅನೇಕ ಭಾರತೀಯ ಕಂಪನಿಗಳು ಚೀನಾದಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿವೆ. ಚೀನಾದಲ್ಲಿ ಪ್ರತಿನಿಧಿ ಕಚೇರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಉದ್ಯಮಗಳು, ಸಂಪೂರ್ಣ ಸ್ವಾಮ್ಯದ ವಿದೇಶಿ ಉದ್ಯಮಗಳು (WOFE) ಅಥವಾ ಚೀನೀ ಕಂಪನಿಗಳೊಂದಿಗೆ ಜಂಟಿ ಉದ್ಯಮಗಳು ಉತ್ಪಾದನೆ (ಔಷಧಗಳು, ವಕ್ರೀಕಾರಕಗಳು, ಲ್ಯಾಮಿನೇಟೆಡ್ ಟ್ಯೂಬ್ ಗಳು, ಸ್ವಯಂ-ಘಟಕಗಳು, ಗಾಳಿ ವಿದ್ಯುತ್ ಇತ್ಯಾದಿ), ಐಟಿ ಮತ್ತು ಐಟಿ-ಶಕ್ತಗೊಂಡ ಸೇವೆಗಳು (ಐಟಿ ಶಿಕ್ಷಣ, ಸಾಫ್ಟ್‌ವೇರ್ ಪರಿಹಾರಗಳು ಮತ್ತು ನಿರ್ದಿಷ್ಟ ಸಾಫ್ಟ್‌ವೇರ್ ಉತ್ಪನ್ನಗಳು ಸೇರಿದಂತೆ), ವ್ಯಾಪಾರ, ಬ್ಯಾಂಕಿಂಗ್ ಮತ್ತು ಸಂಬಂಧಿತ ಚಟುವಟಿಕೆಗಳು.
ಭಾರತೀಯ ವರ್ತಕ ಸಮುದಾಯವು ಪ್ರಮುಖ ಬಂದರು ನಗರಗಳಾದ ಗುವಾಂಗ್‌ಝೌ ಮತ್ತು ಶೆನ್‌ಜೆನ್‌ಗಳಲ್ಲಿ ಇದ್ದಾರೆ. ಚೀನಾದ ಹಣಕಾಸು ಕೇಂದ್ರವಾಗಿರುವ ಶಾಂಘೈನಲ್ಲಿ ಹೆಚ್ಚಿನ ಭಾರತೀಯ ಕಂಪನಿಗಳು ಅಸ್ತಿತ್ವವನ್ನು ಹೊಂದಿವೆ. ಕೆಲವು ಭಾರತೀಯ ಕಂಪನಿಗಳು ರಾಜಧಾನಿ ಬೀಜಿಂಗ್‌ನಲ್ಲಿ ಕಚೇರಿಗಳನ್ನು ಸ್ಥಾಪಿಸಿವೆ. ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಅರಬಿಂದೋ ಫಾರ್ಮಾ, ಮ್ಯಾಟ್ರಿಕ್ಸ್ ಫಾರ್ಮಾ, NIIT, ಭಾರತ್ ಫೋರ್ಜ್, ಇನ್ಫೋಸಿಸ್, TCS, APTECH, ವಿಪ್ರೋ, ಮಹೀಂದ್ರ ಸತ್ಯಂ, ಡಾ. ರೆಡ್ಡೀಸ್, ಎಸ್ಸೆಲ್ ಪ್ಯಾಕೇಜಿಂಗ್, ರಿಲಯನ್ಸ್ ಇಂಡಸ್ಟ್ರೀಸ್, ಸುಂದರಮ್ ಫಾಸ್ಟೆನರ್ಸ್, ಮಹೀಂದ್ರ & ಮಹೀಂದ್ರಾ, ಟಾಟಾ ಸನ್ಸ್, ಬಿನಾನಿ ಸಿಮೆಂಟ್ಸ್, ಇತ್ಯಾದಿ ಚೀನಾದಲ್ಲಿನ ಕೆಲವು ಪ್ರಮುಖ ಭಾರತೀಯ ಕಂಪನಿಗಳು.
ಭಾರತದಲ್ಲಿ ಚೀನೀ ಬಂಡವಾಳ ಹೊಂದಿರುವ ಕಂಪನಿಗಳು ಯಾವುವು?
ಚೀನಾದ ಅಲಿಬಾಬಾ ಸಂಸ್ಥೆಯು, ಬಿಗ್‌ಬಾಸ್ಕೆಟ್, ಡೈಲಿಹಂಟ್ (Dailyhunt), ಬೃಹತ್ ಇ-ಕಾಮರ್ಸ್ ಸಂಸ್ಥೆಯಾದ ಸ್ನ್ಯಾಪ್‌ಡೀಲ್ (Snapdeal) ನಲ್ಲಿಯೂ ಹೂಡಿಕೆ ಮಾಡಿದೆ. ಜೂಮಾಟೊ (Zomato) ದಲ್ಲಿ ಅಲಿಬಾಬಾ ಸುಮಾರು 150 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ.
ಭಾರತದ ಅತಿದೊಡ್ಡ ಮಹಿಳಾ ಸೋಷಿಯಲ್ ನೆಟ್‌ವರ್ಕಿಂಗ್ ಸೈಟ್ ಹೀಲೋಫಿ (Healofy) ಯಲ್ಲಿ, ಚೀನಾದ Babytree Group, ಅಲಿಬಾಬಾ-ಬೆಂಬಲಿತ ಪೋಷಕರ ಪೋರ್ಟಲ್ ಮತ್ತು ಅಲಿಬಾಬಾದ ಆಂಟ್ ಫೈನಾನ್ಶಿಯಲ್ ಅನುಮೋದಿಸಿದ BAce ಕ್ಯಾಪಿಟಲ್‌ನಿಂದ 8 ಮಿಲಿಯನ್ ಡಾಲರ್ ಹೂಡಿಕೆ ಮಾಡಿವೆ. ಇ-ಕಾಮರ್ಸ್ ವೆಬ್‌ಸೈಟ್ ಆಗಿರುವ ಪೇಟಿಎಂ ಮಾಲ್ (Paytm Mall) ನಲ್ಲಿ ಅಲಿಬಾಬಾ ಶೇ.40 ರಷ್ಟು ಹಣವನ್ನು ಹೂಡಿಕೆ ಮಾಡಿದೆ. ಪೇಟಿಎಂ (Paytm) ನಲ್ಲಿ ಚೀನಾದ ಆಂಟ್ ಫೈನಾನ್ಶಿಯಲ್ (Ant Financial) 680 ಮಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿ ಅದರ ದೊಡ್ಡ ಪಾಲುದಾರನಾಗಿದೆ.
ಬೈಜುಸ್ (BYJUs), ಹೈಕ್ (Hike), ಸ್ವಿಗ್ಗಿ, ಡ್ರೀಮ್ 11, ಫ್ಲಿಪ್‌ಕಾರ್ಟ್, ಓಲಾ, ಪಾಲಿಸಿ ಬಜಾರ್, ಉಡಾನ್ ಗಳಲ್ಲಿ ಟೆನ್ಸೆಂಟ್ ಹೂಡಿಕೆ ಮಾಡಿದೆ. ಹಿಲ್‌ಹೌಸ್ ಕ್ಯಾಪಿಟಲ್ ಗ್ರೂಪ್ -ಉಡಾನ್ ನಲ್ಲಿ, ಮೀಟುವಾನ್ – ಸ್ವಿಗ್ಗಿ ಯಲ್ಲಿ, ದೀದಿ ಚುಕ್ಸಿಂಗ್- ಓಲಾ ಮತ್ತು Oyo Rooms ಗಳಲ್ಲಿ, ಶುನ್ವೀ – ಜೊಮಾಟೊ ದಲ್ಲಿ, ಫೋಶುನ್ – Delhivery ಯಲ್ಲಿ, ಚೀನಾ ಯುರೇಷಿಯನ್ ಆರ್ಥಿಕ ಸಹಕಾರ ನಿಧಿ – ಓಲಾ ಕಂಪನಿಯಲ್ಲಿ, ಚೀನಾ ಲಾಡ್ಜಿಂಗ್ ಗ್ರೂಪ್ – ಓಲಾ ಮತ್ತು Oyo Rooms ಕಂಪನಿಗಳಲ್ಲಿ, ಸ್ಟೆಡ್‌ವ್ಯೂ ಕ್ಯಾಪಿಟಲ್ – ಪಾಲಿಸಿ ಬಜಾರ್, ಕ್ವಿಕರ್, ಡ್ರೀಮ್ 11, ಫ್ಲಿಪ್‌ಕಾರ್ಟ್, ಓಲಾ, Unacademy, ನಿಂಜಾ ಕಾರ್ಟ್, ಅರ್ಬನ್‌ಕ್ಲ್ಯಾಪ್, ಇಂಡ್‌ವೆಲ್ತ್, ಲೆನ್ಸ್‌ಕಾರ್ಟ್ ಹಾಗೂ ನೈಕಾ ಈ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿವೆ.
ಇದಲ್ಲದೆ, ಟಿಕೆಟ್ ನ್ಯೂವ್ (TicketNew), ವಿಡೂಲಿ (Vidooly), ಎಕ್ಸ್ ಪ್ರೆಸ್ ಬೀಸ್ (XpressBees), ಡೌಟ್ನಟ್ (Doubtnut), ನಿಯೋ (Niyo), ಗಾನ (Gaana), ಖಾತಾಬುಕ್ (Khatabook), MX ಪ್ಲೇಯರ್, ಮೈಗೇಟ್ (MyGate), ಪೈನ್ ಲ್ಯಾಬ್ಸ್ (Pine Labs), ಪಾಕೆಟ್ FM (Pocket FM), Practo, ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್, ಮಾರ್ಸ್ಪ್ಲೇ (Marsplay), ಓಹ್! ರಿಕ್ಷಾ (Oye! Rickshaw), ShareChat, ಜೆಸ್ಟ್‌ಮನಿ (ZestMoney) ಕಂಪನಿಗಳಲ್ಲಿ ಚೀನಾದ ಬಂಡವಾಳಗಾರರು ಹೂಡಿಕೆ ಮಾಡಿದ್ದಾರೆ.
ನಿಮ್ಮ ಟಿಪ್ಪಣಿ ಬರೆಯಿರಿ