
“ಎತ್ತು ಕರು ಹಾಕಿತು:
ಎಲ್ಲಾ ಕಾಲದ ಮಹಿಮೆ. ಎರಡು ಸಾವಿರದ ನೋಟಿನಲ್ಲಿ ‘ಚಿಪ್ಸ್‘ ಅಳವಡಿಸುವುದು ಸಾಧ್ಯವಾಗುವುದಾದರೆ, ಚುನಾವಣೆಯಲ್ಲಿ ಸಾವಿರಾರು ಕೋಟಿ ಕಪ್ಪುಹಣ ಚೆಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿಯಿಂದ ಕಪ್ಪುಹಣ ಹೊರತೆಗೆಯುವ ಘೋಷಣೆ ಮಾಡುವುದು ಸಾಧ್ಯವಾಗವುದಾರೆ, ರೈತರ ಕೃಷಿಭೂಮಿ ಕಿತ್ತು ಉದ್ಯಮಪತಿಗಳಿಗೆ ಕೊಡಲು, ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು 5 ಬಾರಿ ಸುಗ್ರೀವಾಜ್ಞೆ ಹೊರಡಿಸಿ ವಿಫಲವಾದ ಸರ್ಕಾರವೊಂದು, ‘ಎಲ್ಲರಿಗೂ ನಿವೇಶನ‘ ಕೊಡುವ ಭರವಸೆ ನೀಡಬಹುದಾದರೆ, ಉದ್ಯಮಪತಿಗಳು ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡುವವರೇ, ಬೇನಾಮಿ ಆಸ್ತಿ ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಬಹುದಾದರೆ, ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುವ ಬಲಪಂಥೀಯ ಪಕ್ಷದ ಸರ್ಕಾರವೊಂದು ‘ಜನರು ಚಿನ್ನ ಶೇಖರಣೆ ಮಾಡುವುದರ ಮೇಲೆ ಮಿತಿ‘ ವಿಧಿಸುತ್ತದೆ ಎಂಬ ಪ್ರಚಾರವನ್ನು ನಂಬಬಹುದಾದರೆ, 500 ಕೋಟಿ ವೆಚ್ಚ ಮಾಡಿದ ಮದುವೆಯಲ್ಲಿ ಉಂಡು ಬಂದವರೇ ಭ್ರಷ್ಟಾಚಾರದ ವಿರುದ್ದ ಮಾತನಾಡಬಹುದಾದರೆ. ಗಡಿಯಲ್ಲಿ ಉಧ್ವಿಗ್ನತೆ ಸೃಷ್ಟಿಸುತ್ತಲೇ ಸೈನಿಕರ ಸಾವಿಗೆ ಕಣ್ಣೀರು ಸುರಿಸಬಹುದಾದರೆ, ಪಾಕಿಸ್ತಾದ ವಿರುದ್ದ ಜನರನ್ನು ಕೆರಳಿಸುತ್ತಲೇ ಪಾಕಿಗೆ ಹೋಗಿ ಕೇಕ್ ತಿಂದುಬರಲು ಸಾಧ್ಯವಾಗುವುದಾದರೆ,… ಎತ್ತು ಕರು ಹಾಕಿದ ಸುದ್ದಿಯನ್ನು ತಳ್ಳಿಹಾಕಲಾಗದು ಅಲ್ಲವೆ.” (02-12-2016ರ ಫೇಸ್ಬುಕ್ ಪೋಸ್ಟ್)
ನೋಟು ರದ್ದತಿ ಘೋಷಣೆಯ ಹಿಂದೆ ಬಹಳಷ್ಟು ಮುಚ್ಚಿಟ್ಟ ಅಜೆಂಡಾಗಳಿವೆ. ಇವೆಲ್ಲವನ್ನೂ ಜನರಿಂದ ಮುಚ್ಚಿಟ್ಟು, ನೋಟು ರದ್ಧತಿಗೆ ಜನರ ವಿರೋಧ ಬರದಂತೆ ಮಾಡಲು ಹಲವು ಸುಳ್ಳು ಕತೆಗಳನ್ನು ಸೃಷ್ಟಿಸಿ, ಹಲವು ಸುಳ್ಳು ಭರವಸೆಗಳನ್ನು ಸೃಷ್ಟಿಸಲಾಗಿತ್ತು. ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆ ರಾಷ್ಟೀಯ ಸ್ವಯಂ ಸೇವಕ ಸಂಘದ (RSS) ತೀವ್ರ ಬಲಪಂಥೀಯ ಮತ್ತು ಹಿಂದುತ್ವವಾದಿ ಸಿದ್ದಾಂತಗಳನ್ನು ಅರಿತ ಬಹಳಷ್ಟು ಜನರು ನೋಟು ರದ್ದತಿ ಹಿಂದಿನ ಸತ್ಯವನ್ನು ಜನರ ಮುಂದೆ ಬಿಚ್ಚಿಡುವ ಪ್ರಯತ್ನ ಮಾಡಿದರು. ಆದರೆ, ಬಂಡವಾಳಶಾಹಿ/ಹಿಂದುತ್ವವಾದಿ ಆಳುವ ಕೂಟದ ವ್ಯಾಪಕ ಸುಳ್ಳು ಪ್ರಚಾರದ ಎದುರು, ಸತ್ಯದ ಪ್ರಚಾರ ಒಂದಷ್ಟು ದಿನಗಳ ಕಾಲ ಹೆಚ್ಚು ಜನರನ್ನು ತಲುಪಲಿಲ್ಲ. ನೋಟು ರದ್ದತಿ ವಿರೋಧಿಸುವವರ ಬಾಯಿ ಮುಚ್ಚಿಸಲು ಸಾಧ್ಯವಿದ್ದ ಎಲ್ಲವನ್ನೂ ಮಾಡಿದರು. ನಾನು ಫೇಸ್ಬುಕ್ ನಲ್ಲಿ ಇವರೊಡನೆ ಸಾಧ್ಯವಾದಷ್ಟು ವಾದ ಮಾಡಿದೆ. ನೋಟು ರದ್ದತಿ ಹಿಂದಿರುವ ಬಿಜೆಪಿಯ ಅಜೆಂಡಾವನ್ನು ನೋಟು ರದ್ದತಿ ಮಾಡಿದ 2026ರ ನವೆಂಬರ್ 8 ದಿನದಿಂದ ನನ್ನ ಫೇಸ್ಬಕು ನಲ್ಲಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳತೊಡಗಿದೆ. ಅವುಗಳನ್ನು ದಿನಾಂಕ ಸಮೇತವಾಗಿ ಇಲ್ಲಿ ಕೊಡಲಾಗಿದೆ. ಇದು 7 ಸಾವಿರದಷ್ಟು ಪದಗಳಾಗುತ್ತವೆ. ನೀವೂ ಒಮ್ಮೆ ನೋಡಿ:
(08-11-2016 ರಾತ್ರಿ 10:14)
ಕಪ್ಪುಹಣ ಕೂಡಿಟ್ಟವರಿಂದ ಕಪ್ಪುಹಣ ದೇಣಿಗೆ ಪಡೆದು, ಆ ಹಣವನ್ನು ಚುನಾವಣೆಯಲ್ಲಿ ಚೆಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ, ಬ್ಯಾಂಕುಗಳಿಂದ ಪಡೆದ ಸಾಲವನ್ನು ಮರುಪಾವತಿಸದೆ ‘ವಸೂಲಾಗದ ಸಾಲದ ಪ್ರಮಾಣ’ ಹೆಚ್ಚಾಗಲು ಕಾರಣರಾದ, ಉದ್ಯಮಪತಿಗಳ ಸಾಲ ಮನ್ನಾ ಮಾಡಿ ಕಪ್ಪುಹಣ ವೃದ್ಧಿಸುವಂತೆ ಮಾಡಿದ ಪ್ರಧಾನಿ, 5 ಲಕ್ಷ ಕೋಟಿ ಸುಸ್ತಿ ಸಾಲ ವಸೂಲಿ ಮಾಡಲು ದಿಟ್ಟ ಕ್ರಮ ಕೈಗೊಳ್ಳದ ಪ್ರಧಾನಿ, ಕಪ್ಪುಹಣವನ್ನು ನಿರ್ದಾಕ್ಷಿಣ್ಯವಾಗಿ ವಶಪಡಿಸಿಕೊಳ್ಳುವ ಬದಲಾಗಿ, ಶೇಕಡ 45 ರಷ್ಟು ತೆರಿಗೆ ಕೊಟ್ಟು ಕಪ್ಪುಹಣ ಬಹಿರಂಗ ಪಡಿಸಿಕೊಳ್ಳಿ ಎಂದು ಕರೆಕೊಟ್ಟು ಯೋಜನೆ ರೂಪಿಸಿದ ಪ್ರಧಾನಿ, ದಿಢೀರನೆ 500 ಮತ್ತು 1000 ರೂ ನೋಟುಗಳನ್ನು ನಿಷೇಧಿಸುತ್ತಾರೆಂಬುದೇ ಆಶ್ಚರ್ಯಕರ ಮತ್ತು ಅನಿರೀಕ್ಷಿತ. ಅದೂ ಅಲ್ಲದೆ ಸಮಯಾವಕಾಶವನ್ನೇ ಕೊಡದೆ ಮದ್ಯರಾತ್ರಿಯಿಂದಲೇ ಈ ನೋಟುಗಳ ಚಲಾವಣೆ ರದ್ದುಗೊಳಿಸಿರುವುದೂ ಆಶ್ಚರ್ಯಕರವಾಗಿದೆ.
….
(14-11-2016)
“ದೇಶಕ್ಕೆ ದೊಡ್ಡ ಲಾಭ ಮಾಡುವಾಗ ಕೊಂಚ ನೋವು ಕೊಡಬೇಕಾಗುತ್ತದೆ. ಈಗ ಆಗುತ್ತಿರುವ ಸಣ್ಣ ನೋವನ್ನು ಜನರು ತಾಳಿಕೊಂಡರೆ, ದೊಡ್ಡದನ್ನು ಪಡೆದುಕೊಳ್ಳಬಹುದು.” ಇದು ಮೋದಿಯವರ ಹೇಳಿಕೆ.
ಸ್ವಾಮಿ ಮೋದಿಯವರೆ, ಭ್ರಷ್ಟಾಚಾರ ನಡೆದಿರುವುದು ಯಾರಿಂದ? ಪ್ರಕೃತಿ ಸಂಪತ್ತನ್ನು ಲೂಟಿಮಾಡಿ ಸಾವಿರಾರು ಕೋಟಿ ಕೂಡಿಟ್ಟಿರುವವರು ಯಾರು? ಇಂತಹ ಬಹುಕೋಟಿ ಒಡೆಯರ ಜೊತೆ ವಿಮಾನದಲ್ಲಿ ಓಡಾಡುತ್ತಿರುತ್ತೀರಿ. ಅಂತಹ ಬಂಡವಾಳಗಾರರಿಗೆ ವಿದೇಶಗಳಲ್ಲಿ ಉಧ್ಯಮ ಸ್ಥಾಪನೆಗಾಗಿ ಜಗತ್ತನ್ನೇ ಸುತ್ತುತ್ತಿರುವಿರಿ. ಅವರು ಬ್ಯಾಂಕುಗಳಿಂದ ಮಾಡಿದ 6 ಲಕ್ಷ ವಸೂಲಾಗದ ಸಾಲ ಮನ್ನಾ ಮಾಡಲು ಬ್ಯಾಂಕುಗಳಿಗೆ ಸೂಚಿಸುತ್ತೀರಿ. ಅದರಿಂದಾಗಿ ಬ್ಯಾಂಕುಗಳಿಗೆ ಆಗುವ ನಷ್ಟ ತುಂಬಿಕೊಳ್ಳಲು ಕೇಂದ್ರದ ಬಜೆಟ್ಟಿನಲ್ಲಿ ಪ್ರತಿ ವರ್ಷ 25 ಸಾವಿರ ಕೋಟಿ ಹಣ ಮೀಸಲಿಡುತ್ತೀರಿ. 500 ಕೋಟಿಗೂ ಹೆಚ್ಚು ಸಾಲ ಪಡೆದ 56 ಸುಸ್ತಿದಾರರ ಹೆಸರು ಬಹಿರಂಗ ಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚನೆಯನ್ನೂ ಪಾಲಿಸಲು ನಿರಾಕರಿಸುತ್ತೀರಿ. ಈ 56 ಮಂದಿಯ ಎನ್ಪಿಎ ಮೊತ್ತವೇ 75 ಸಾವಿರ ಕೋಟಿ ರೂ! ಪ್ರತಿ ವರ್ಷ ಇಂತಹ ಉಧ್ಯಮಪತಿಗಳ ಸಾವಿರಾರು ಕೋಟಿ ತೆರಿಗೆ ಮನ್ನಾ ಮಾಡುತ್ತೀರಿ. ಕೃಷ್ಣ-ಗೋದಾವರಿ ಬೇಸಿನ್ ನಲ್ಲಿ ರಿಲಯನ್ಸ್ ಕಂಪನಿಯವರು, ಸರ್ಕಾರಿ ಸ್ವಾಮ್ಯದ ಕಂಪನಿ ಒಡೆತನದ ಪ್ರದೇಶದಲ್ಲಿ ಕದ್ದು ತೈಲ ನಿಕ್ಷೇಪ ತೆಗೆದು, ಸರ್ಕಾರಕ್ಕೆ ಸಾವಿರಾರು ಕೋಟಿ ವಂಚಿಸುತ್ತಿದ್ದರೂ ಕ್ರಮಕೈಗೊಳ್ಳದೆ ಮೌನವಾಗಿದ್ದೀರಿ. ಅತ್ತ 1600 ಕೋಟಿ ರೂ. ದಂಡ ಕಟ್ಟುವಂತೆ ಸಂಬಂದಪಟ್ಟ ಸಂಸ್ಥೆಯಿಂದ ಆದೇಶ ಬಂದ ಸಮಯದಲ್ಲೇ ದೇಶದ ಜನರ ಗಮನ ಬೇರೆಡೆ ಸೆಳೆಯುವ ಘೋಷಣೆಗಳು ನಿಮ್ಮಿಂದ ಹೊರ ಬರುತ್ತವೆ. ಮತ್ತೊಂದೆಡೆ ತನಿಖಾ ಸಂಸ್ಥೆಗಳು ಮತ್ತು ನ್ಯಾಯಾಲಯಗಳು ಭ್ರಷ್ಟಾಚಾರಿಗಳನ್ನು ದೋಷಮುಕ್ತಗೊಳಿಸತೊಡಗಿವೆ. ನೀವು ಇಂತಹ ಭ್ರಷ್ಟರು ಗಳಿಸಿದ ಸಂಪತ್ತನ್ನು ವಶಪಡಿಸಿಕೊಳ್ಳುವ ಬದಲಾಗಿ, ಬಡವರ ಹತ್ತಾರು ಸಾವಿರ ಹಣ ಮತ್ತು ಮಧ್ಯಮ ವರ್ಗದ ಕೆಲವೇ ಲಕ್ಷ ಹಣ ಹೊರತೆಗೆಯುವ ಪ್ರಯತ್ನವನ್ನೇಕೆ ಮಾಡುತ್ತೀರಿ? ಕಾರ್ಪೊರೇಟ್ ಕುಳಗಳು, ದೊಡ್ಡ ಶ್ರೀಮಂತರು ತಮ್ಮ ಐಶಾರಾಮಿ ಜೀವನಕ್ಕಾಗಿ ಹಾಳುಮಾಡಿದ ಆರ್ಥಿಕ ಪರಿಸ್ಥಿತಿಗೆ ಬಡವರು ಮತ್ತು ಮಧ್ಯಮ ವರ್ಗದ ಜನರನ್ನೇಕೆ ದೂರುತ್ತೀರಿ? ದೊಡ್ಡ ಮೊತ್ತದ ನೋಟು ನಿಷೇದದ ಮೂಲಕ ಹೊರಬರಬಹುದಾದಂತ ಕಪ್ಪು ಹಣದ ನೂರಾರು ಪಟ್ಟು ಹಣ ಮತ್ತು ಬೇನಾಮಿ ಆಸ್ತಿ, ಅದಾನಿ, ಅಂಬಾನಿ, ಟಾಟಾ, ಬಿರ್ಲಾರಂತಹ ಕೆಲವೇ ಮನೆಗಳ ಮೇಲೆ ದಾಳಿ ಮಾಡಿದರೆ ಸಿಗುತ್ತದೆ. ಅಂತಹ ಎದೆಗಾರಿಕೆ ನಿಮಗಿದೆಯೇ? ಬ್ಯಾಂಕುಗಳ ವಸೂಲಾಗದ ಸಾಲಗಳನ್ನೇ ನಿರ್ದಾಕ್ಷಿಣ್ಯವಾಗಿ ವಸೂಲು ಮಾಡುವ ತಾಕತ್ತು ನಿಮಗಿಲ್ಲ. ನಿಮ್ಮನ್ನು ಪ್ರಧಾನಿ ಗದ್ದುಗೆಯಲ್ಲಿ ಕೂರಿಸಲು ಸಾವಿರಾರು ಕೋಟಿ ಕಪ್ಪುಹಣ ವ್ಯಯಿಸಿದ ಕಾರ್ಪೋರೇಟ್ ಕುಳಗಳ ಋಣ ತೀರಿಸಲು, ಅವರ ಸಂಪತ್ತು ವೃದ್ಧಿಸಿಕೊಳ್ಳುವಂತಹ ನಿಯಮ ತರಲು ಮುಂದಾಗಿದ್ದೀರಿ. ಈ ನಿಮ್ಮ ತಂತ್ರಗಳಿಗೆ ಜನಸಾಮಾನ್ಯರು ನರಳುವಂತೆ ಮಾಡುತ್ತಿದ್ದೀರಿ.
….
(14-11-2016 ರಾತ್ರಿ 8:31)
ರಿಲಯನ್ಸ್ ಇಂಡಸ್ಟ್ರೀಸ್ ಕಳ್ಳತನದಲ್ಲಿ ತೈಲ ನಿಕ್ಷೇಪ ತೆಗದ ಆರೋಪ ಬಂದ ಮೂರೇ ದಿನದಲ್ಲಿ ನೋಟು ನಿಷೇಧ:
ಕೃಷ್ಣ-ಗೋದಾವರಿ (KG) ಬೇಷಿನ್ ನಲ್ಲಿ, ಸರ್ಕಾರಿ ಸ್ವಾಮ್ಯದ ONGC ಒಡೆತನದ ವ್ಯಾಪ್ತಿ ಪ್ರದೇಶದಲ್ಲಿ ಕಳ್ಳತನದಲ್ಲಿ ತೈಲ ನಿಕ್ಷೇಪ ತೆಗದ ಕಾರಣಕ್ಕೆ, ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿ ಮತ್ತು ಅದರ ಸಹಬಾಗಿತ್ವದ ವಿದೇಶಿ ಕಂಪನಿ BP pic, Niko ಗಳಿಗೆ 1.55 ಬಿಲಿಯನ್ ಡಾಲರ್ ದಂಡ ವಿಧಿಸಿದ ಸುದ್ದಿ ಬಿತ್ತರವಾದ ಮೂರೇ ದಿನದಲ್ಲಿ, ಐನೂರು ಮತ್ತು ಸಾವಿರದ ನೋಟುಗಳನ್ನು ನಿಷೇದ ಮಾಡುವ ಮೂಲಕ, ರಿಲಯನ್ಸ್ ಕಂಪನಿಯ ವಂಚನೆಯನ್ನು ಜನರಿಂದ ಮರೆಮಾಚಲಾಗಿದೆ. ಅತ್ತ ಮೋದಿ ಅಧಿಕಾರಕ್ಕೆ ಬಂದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಲ್ ಕಚ್ಚಾತೈಲ 114 ಡಾಲರ್ ಇದ್ದದ್ದು ಇಂದು ಕೇವಲ 45 ಡಾಲರ್ ಕುಸಿದಿದೆ. ಆದರೂ ನಮ್ಮ ದೇಶದಲ್ಲೇ ಹೊರತೆಗೆಯುವ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಖಡಿತ ಮಾಡದೆ, 2014ರ ಮೇ ತಿಂಗಳಲ್ಲಿದ್ದ ದರದಲ್ಲೇ ಮಾರಾಟ ಮಾಡುವ ಮೂಲಕ ಜನರನ್ನು ಲೂಟಿಮಾಡಲು ಖಾಸಗೀ ತೈಲ ಕಂಪನಿಗಳಿಗೆ ಮೋದಿ ಸರ್ಕಾರ ಅನುವು ಮಾಡಿಕೊಟ್ಟಿದೆ. ಈ ದೇಶದ ಆಡಳಿತ ಚುಕ್ಕಾಣಿ ಯಾರ ಹಿಡಿತದಲ್ಲಿದೆ? ಇಂತಹ ಪ್ರಧಾನಿಯಿಂದ 70 ದಿನಗಳಲ್ಲಿ ದೇಶಕ್ಕೆ ಒಳ್ಳೆಯದು ಮಾಡುತ್ತಾರೆಂದು ನೀರಿಕ್ಷಿಸಬಹುದೇ?
….
ಕಾಂಗ್ರೆಸ್ ನಾಲ್ಕಾಣೆ ನಿಷೇಧಮಾಡಿತ್ತು:
15-11-2016
“ಕಾಂಗ್ರೆಸ್ ನಾಲ್ಕಾಣೆ ನಿಷೇಧಮಾಡಿತ್ತು. ಅವರು ನಾಲ್ಕಾಣೆ ಬಿಟ್ಟು ಮುಂದಕ್ಕೆ ಹೋಗಲಿಲ್ಲ. ಅವರು ಅವರ ಯೋಗ್ಯತೆಗೆ ತಕ್ಕ ಕೆಲಸ ಮಾಡಿದರು. ನಾವು ನಮ್ಮ ಘನತೆಗೆ ತಕ್ಕ ಕಾರ್ಯ ಮಾಡಿದೆವು.” ಇದು ಪ್ರಧಾನಿ ಮೋದಿಯವರು, ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳನ್ನು ನಿಷೇದ ಮಾಡಿದ ಬಗ್ಗೆ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತ ಹೇಳಿದ ಮಾತು. ಮಾರುಕಟ್ಟೆಯಲ್ಲಿ ನಾಲ್ಕಾಣೆಗೆ ಬೆಲೆ ಇಲ್ಲದಂತಾದ ಕಾರಣ ಅದನ್ನು ನಿಷೇದ ಮಾಡಲಾಯಿತೇ ವಿನಃ, ಬಿಕ್ಷುಕರ ತಟ್ಟೆಗಳಲ್ಲೋ ಅಥವಾ ಹರಿಸಿನ ಬಟ್ಟೆಯಲ್ಲಿ ದೇವರಿಗೆಂದು ಕಟ್ಟಿಟ್ಟಿದ್ದ ಕಾಣಿಕೆ ಹಣವನ್ನು ಹೊರ ತೆಗೆಯಲೆಂದೋ ಅಂದು ನಾಲ್ಕಾಣೆ ನಿಷೇದ ಮಾಡಲಿಲ್ಲ. ಪ್ರಧಾನಿಯವರ ಈ ಹೇಳಿಕೆ ಪ್ರತಿಕ್ರಿಯಿಸಲೂ ಯೋಗ್ಯವಲ್ಲದ್ದು. ದೇಶದ ಉನ್ನತ ಸ್ಥಾನದಲ್ಲಿ ಕುಳಿತವರಿಗೆ ಇರಬೇಕಾದ ಘನತೆ, ಗಾಂಭೀರ್ಯ, ಮುತ್ಸದ್ಧಿತನ ಇಲ್ಲದ, ಇಂತಹ ಸಣ್ಣತನದ ಮನಸ್ಥಿತಿಯುಳ್ಳ ನಾಯಕರೊಬ್ಬರನ್ನು ಪಡೆದ ಭಾರತೀಯರಾದ ನಾವೇ ಧನ್ಯರು.
….
(15-11-2016)
ಕಪ್ಪು ಹಣ ಹೊರತರುತ್ತೇವೆಂದು ಜನರಲ್ಲಿ ಭ್ರಮೆ ಸೃಷ್ಟಿಸಲಾಗಿದೆ:
ನೋಟುಗಳ ನಿಷೇದದ ಮೂಲಕ ಕಪ್ಪು ಹಣ ಹೊರತರುತ್ತೇವೆಂದು ಜನರಲ್ಲಿ ಭ್ರಮೆ ಸೃಷ್ಟಿಸಲಾಗಿದೆ. ಇದು ನಿಜಕ್ಕೂ ಸಾಧ್ಯವೆ? 500 ಮತ್ತು 1000ದ ಮುಖಬೆಲೆಯ ನೋಟುಗಳ ನಿಷೇದದಿಂದ ಒಟ್ಟು ಹಣದ ಶೇ. 86ರಷ್ಟನ್ನು ನಿಷೇದ ಮಾಡಲಾಗಿದೆ.
“ನಗದು ರೂಪದಲ್ಲಿ ಇರಬಹುದಾದ ಕಪ್ಪು ಹಣ ಕೇವಲ ಶೇ. 6 ಮಾತ್ರ. ಕಪ್ಪು ಹಣ ವಿವಿದ ಸಂಪತ್ತಿನ ರೂಪದಲ್ಲಿ ಶೇಕರಣೆಗೊಂಡಿದೆ. ನೋಟುಗಳ ನಿಷೇದದಿಂದ ಕಪ್ಪುಹಣದ ದೊಡ್ಡ ಬೆಟ್ಟಕ್ಕೆ ಸಣ್ಣ ರಂಧ್ರ ಮಾಡಿದಂತಾಗುತ್ತದಷ್ಟೆ” ಎಂದು ಈ ಹಿಂದಿನ ರಿಸರ್ವ್ ಬ್ಯಾಂಕ್ ಗೌವರ್ನರ್ ರಘುರಾಮ್ ರಾಜನ್ ಹೇಳಿದ್ದರು.
ಎರಡನೆಯದಾಗಿ, ಒಟ್ಟು ಹಣದ ಚಲಾವಣೆಯ ಶೇ. 0.025 ರಷ್ಟು ಮಾತ್ರ ನಕಲಿ ನೋಟುಗಳ ಚಲಾವಣೆ ಇದೆಯೆಂದು ಅದಿಕೃತ ಮೂಲಗಳು ಹೇಳುತ್ತಿವೆ. ಹೊಸದಾಗಿ ಮುದ್ರಿತವಾಗಿರುವ ನೋಟುಗಳನ್ನು ಭವಿಷ್ಯದಲ್ಲಿ ನಕಲಿ ನೋಟು ಮಾಡಲಾರರೆಂಬ ಭರವಸೆಯೇನೂ ಇಲ್ಲ.
ಮೂರನೆಯದಾಗಿ, ಭಯೋತ್ಪಾಧಕರಿಗೆ ಬಹುತೇಕ ಹಣ ಆನ್ಲೈಲ್ ಮೂಲಕ ಸರಬರಾಜಾಗುತ್ತದೆಯೇ ವಿನಃ, ರೂಪಾಯಿಯ ಮೂಲಕವಲ್ಲ. ನೋಟುಗಳ ನಿಷೇದದಿಂದ ಭಯೋತ್ಪಾದಕರ ಮೇಲೆ ಹೆಚ್ಚಿನ ಪರಿಣಾಮ ಬೀಳಲಾರದು.
ಇನ್ನು ನಮ್ಮ ಪ್ರಧಾನಿಯವರು ’50 ದಿನಗಳ ಸಮಯಾವಕಾಶ ಕೊಡಿ. ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರುತ್ತೇನೆ’ ಎಂದು ಹೇಳುತ್ತಾರೆ. ಯಾವ ಆಧಾರದಲ್ಲಿ ಈ ರೀತಿ ಹೇಳುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಈಗ ನಿಷೇದಗೊಂಡ ನೋಟುಗಳ ಹೊಸ ನೋಟುಗಳ ವಿನಿಮಯಕ್ಕೆ ನಮಗೆ 2,300 ಕೋಟಿ ನೋಟುಗಳ ಅಗತ್ಯವಿದೆ. ನಮಗಿರುವ ಮುದ್ರಣ ಸಾಮರ್ಥ್ಯದಿಂದ ದಿನವೊಂದಕ್ಕೆ ಒಂದು ಕೋಟಿ ನೋಟುಗಳಿಗೂ ಕಡಿಮೆ ಸಂಖ್ಯೆಯಲ್ಲಿ ಮುದ್ರಿಸಬಹುದಷ್ಟೆ. ಸದ್ಯ RBI ದಿನವೊಂದಕ್ಕೆ ಐನೂರರ 40 ಲಕ್ಷ ನೋಟುಗಳನ್ನು ಮುದ್ರಿಸುತ್ತಿದೆ. ಹೊಸ ನೋಟುಗಳ ಮುದ್ರಣ ಮತ್ತು ವಿತರಣೆಗೆ ತಗಲುವ ವೆಚ್ಚವೇ ಅಂದಾಜು 1,100 ಕೋಟಿ ರೂಪಾಯಿಗಳಾಗುತ್ತದೆ ಎಂದು ಹೇಳಲಾಗುತ್ತಿದೆ.
ನಿಜವಾಗಿಯೂ ಕಪ್ಪುಹಣ ಹೊರತರಬೇಕೆಂಬ ಇಚ್ಚೆ ಸರ್ಕಾರಕ್ಕೆ ಇದ್ದರೆ, ಇಂತದೇ ದಿಟ್ಟ ಕ್ರಮಗಳನ್ನು ಕಪ್ಪುಹಣದ ಶೇ. 90ರಷ್ಟನ್ನು ಬಚ್ಚಿಟ್ಟಿರುವ, ತೆರಿಗೆ ಕಳ್ಳರ ವಿರುದ್ದ ‘ಸರ್ಜಿಕಲ್ ಸ್ಟ್ರೈಕ್’ ಮಾಡುತ್ತಿಲ್ಲವೇಕೆ?
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬ್ಯಾಂಕುಗಳಿಂದ ವಸೂಲಾಗದ ಸಾಲದ ಪ್ರಮಾಣ(NPA)ದಲ್ಲಿ, ದೊಡ್ಡ ಶ್ರೀಮಂತರ 1 ಲಕ್ಷದ 12 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ. ಬ್ಯಾಂಕುಗಳಿಗೆ ಇದರಿಂದಾಗುವ ನಷ್ಟ ತುಂಬಿಸಿಕೊಳ್ಳಲು ಕಳೆದ ಮೂರು ಬಜೆಟ್ ಗಳಲ್ಲಿ ಅಂದಾಜು 70 ಸಾವಿರ ಕೋಟಿ ಹಣವನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ಈ NPA ಮನ್ನಾ ಮಾಡುವಂತೆ ಬ್ಯಾಂಕುಗಳಿಗೆ ಸರ್ಕಾರ ಸೂಚಿಸಿದೆ. ಬ್ಯಾಂಕುಗಳೂ ತಮ್ಮ ಆದಾಯದ ಬಹುಪಾಲು ಹಣವನ್ನು ಸಾಲಮನ್ನಾ ಮಾಡಲು ತೆಗೆದಿಡುತ್ತಿದ್ದಾರೆ. ಇನ್ನೂ ಅಂದಾಜು 7 ಲಕ್ಷ ಕೋಟಿ NPA ಇದೆ. 500 ಕೋಟಿ ರೂಗಳಿಗೂ ಹೆಚ್ಚು ಸಾಲ ಪಡೆದ 56 ಸುಸ್ತಿದಾರರು ಪಡೆದಿರುವ 70 ಸಾವಿರ ಕೋಟಿ ವಸೂಲಿ ಮಾಡಲು ‘ಸರ್ಜಿಕಲ್ ಸ್ಟ್ರೈಕ್’ ಮಾಡುತ್ತಿಲ್ಲವೇಕೆ? ಸುಸ್ತಿದಾರ ದೊಡ್ಡ ಕುಳಗಳ ಪಟ್ಟಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದರೂ, ಅಂತವರ ಹೆಸರುಗಳನ್ನು ಬಹಿರಂಗ ಪಡಿಸುತ್ತಿಲ್ಲವೇಕೆ? ದೊಡ್ಡವರು ವಂಚಿಸಿದ ಕಾರಣದಿಂದ, ಬರಿದಾದ ಬ್ಯಾಂಕುಗಳ ಖಜಾನೆ ತುಂಬಲು ಬಡವರು ಮತ್ತು ಮಧ್ಯಮ ವರ್ಗದ ಜನರು ಶ್ರಮಪಟ್ಟು ಕೂಡಿಟ್ಟ ಹಣವೇ ಬೇಕಿತ್ತೇ?
….
ಕುಟುಂಬ ಸದಸ್ಯರ ನಡುವೆ ಅಪನಂಬಿಕೆ ಮೂಡುವಂತೆ ಮಾಡಿದ ನೋಟುಗಳ ನಿಷೇದ:
ಪ್ರಸಂಗ ಒಂದು> ಗಂಡ-ಹೆಂಡತಿ:
ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿದ ಯುವನಟರ ಶವದ ಪತ್ತೆ ಕಾರ್ಯದ ದೃಶ್ಯ ಟಿವಿಯಲ್ಲಿ ಬಿತ್ತರವಾಗುತ್ತಿತ್ತು. ಆ ದುರಂತ ಘಟನೆ ಮನಕಲಕುವಂತಿತ್ತು. ಟಿವಿ ನೋಡುತ್ತಿದ್ದ ಮಮತಾ ಕಣ್ಣಂಚಿನಲ್ಲಿ ಕಂಬನಿಯ ಹನಿಯೊಂದು ಜಾರಿ ಬೀಳುವುದರಲ್ಲಿತ್ತು. ಆ ಹನಿ ಕೆನ್ನೆಯ ಮೇಲೆ ಜಾರುವ ಮುನ್ನ ಮಮತಾ ತನ್ನ ಸೀರೆಯ ಸೆರಗಿನಿಂದ ಮೃದುವಾಗಿ ಸ್ಪರ್ಶಿಸುತ್ತ ಜಾರುವುದನ್ನು ತಡೆಹಿಡಿದಳು. ವರದಿ ಮಾಡುತ್ತಿದ್ದವರ ಮುಖದಲ್ಲೂ ದುಖಃದ ಛಾಯೇ ಮೂಡಿತ್ತು. ಇದ್ದಕ್ಕಿದ್ದಂತೆ ಟಿವಿಯ ಪರದೆ ಮೇಲೆ ತಿಪ್ಪಗೊಂಡನಹಳ್ಳಿ ಕೆರೆಯ ದೃಶ್ಯ ಮಾಯವಾಗಿ ಮೋದಿಯವರ ಭಾಷಣ ದೃಶ್ಯ ಮೂಡಿಬಂತು. ‘ಅಯ್ಯೋ ಮಧ್ಯದಲ್ಲಿ ಇದು ಬೇರೆ ಬಂತು’ ಎನ್ನುತ್ತಾ ಅಡುಗೆ ಮನೆಗೆ ಹೋದ ಮಮತಾಳ ಕಿವಿಗೆ ಗಾಬರಿ ಬೀಳುವಂತಹ ಸುದ್ದಿಯೊಂದು ಬಂದು ಅಪ್ಪಳಿಸಿತು. ಓಡೋಡಿ ಬಂದು ಟಿವಿಯ ಸುದ್ದಿಯನ್ನೇ ಆಲಿಸತೊಡಗಿದಳು. ವರದಿಗಾರರ ಮುಖದಲ್ಲಿ ಇದುವರೆಗೆ ಇದ್ದ ದುಖಃದ ಛಾಯೆ ಮಾಯವಾಗಿ ಸಂಭ್ರಮದ ಹೊಳಪು ಮೂಡಿತ್ತು. “ಪ್ರಧಾನಿ ಮೋದಿ ಐನೂರು ಮತ್ತು ಸಾವಿರ ಮುಖಬೆಲೆಯ ನೊಟುಗಳನ್ನು ರದ್ದುಗೊಳಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಇಂದು ಮದ್ಯರಾತ್ರಿಯಿಂದಲೇ ಇದು ಜಾರಿಗೆ ಬರುತ್ತದೆ.” ತಿಪ್ಪಗೊಂಡನಹಳ್ಳಿ ದುರಂತಕ್ಕಾಗಿ ಮಿಡಿಯುತ್ತಿದ್ದ ಕಂಬನಿಯ ಹನಿ ಈ ಸುದ್ದಿ ಕೇಳಿದಾಕ್ಷಣ ದಾರಾಕಾರವಾಗಿ ಸುರಿಯತೊಡಗಿತು. ಮುಂದೇನು ಎಂಬ ಚಿಂತೆ ಮಮತಾಳನ್ನು ಕಾಡತೊಡಗಿತು. ತನ್ನಲ್ಲಿರುವ ಹಣ ಬೆಂಕಿಯಲ್ಲಿ ಸುಟ್ಟುಹೋಗುತ್ತಿರುವಂತೆ ಆಕೆಗೆ ಬಾಸವಾಯಿತು. ಇಷ್ಟಕ್ಕೂ ಆಕೆಯ ಬಳಿ ಇರುವ ಹಣ ಕೇವಲ ಹತ್ತು ಸಾವಿರ ಮಾತ್ರ. ಐನೂರರ ಇಪ್ಪತ್ತು ನೋಟುಗಳನ್ನು ಗಂಡನಿಗೆ ತಿಳಿಯದಂತೆ ಬಹಳ ಜೋಪಾನವಾಗಿ ಬಚ್ಚಿಟ್ಟಿದ್ದಳು ಆಕೆ. ಧವಸ, ಧಾನ್ಯ, ತರಕಾರಿ, ಹಾಲು ತರಲು ಗಂಡ ಕೊಡುತ್ತಿದ್ದ ಹಣದಲ್ಲಿ ಚಿಲ್ಲರೆ ಉಳಿಸಿಕೊಂಡು ಕೂಡಿಟ್ಟ ಹಣ ಅದು. ಕಷ್ಟ ಕಾಲಕ್ಕೆ ಸಹಾಯವಾಗಲೆಂದು ಹಾಗೆ ಮಾಡಿದ್ದಳು. ಆ ಹಣ ಬದಲಾಯಿಸಬೇಕಾದರೆ ಬ್ಯಾಂಕ್ ಖಾತೆ ಬೇಕು. ಖಾತೆ ಪತಿಯ ಹೆಸರಿನಲ್ಲಿದೆ. ಪೋಸ್ಟ್ ಆಫೀಸ್ ನಲ್ಲೋ, ಬ್ಯಾಂಕಿನಲ್ಲೋ ಸರತಿ ಸಾಲಿನಲ್ಲಿ ನಿಂತು ನೋಟು ಬದಲಾಯಿಸಿಕೊಳ್ಳಬಹುದು. ಇದು ಗಂಡನಿಗೆ ತಿಳಿದರೆ? ಮೈಯೆಲ್ಲಿ ನಡುಕ ಉಂಟಾಯಿತು. ಗಂಡನಿಗೆ ಹಣ ಕೂಡಿಟ್ಟಿರುವ ಬಗ್ಗೆ ಹೇಳಿದರೆ ಎರಡು ಮೂರು ದಿನಗಳಲ್ಲೇ ಎಲ್ಲವನ್ನೂ ಖರ್ಚು ಮಾಡಿಬಿಡುತ್ತಾರೆ. ಎರಡು ವರ್ಷದಿಂದ ಕೂಡಿಸಿದ ಹಣ ಈ ರೀತಿಯಾಗಿ ಕಳೆದುಹೋಗುತ್ತದೆ. ಅದೂ ಅಲ್ಲದೆ, ಪತಿ ಮೊನ್ನೆ ತಾನೆ ನೂರು ರೂಪಾಯಿ ಕೇಳಿದಾಗ ‘ನಂಗೆಲ್ಲಿಂದ ಬರುತ್ತೇರಿ, ನನ್ನತ್ರ ಒಂದ್ ರೂಪಾಯ್ನೂ ಇಲ್ಲ ಹೋಗ್ರಿ’ ಅಂತ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಸುಳ್ಳು ಹೇಳಿದ್ದೆ. ‘ಮೊನ್ನೆ ಒಂದ್ ರೂಪಾಯೂ ಇಲ್ಲ ಅಂದೆ, ಈಗೆಲ್ಲಿಂದ ಬಂತು?’ ಅಂತ ಬೈದರೆ?
ಮಮತಾ ಏನೇನೋ ಕಲ್ಪಿಸಿಕೊಳ್ಳುತ್ತಾ ಭಯಗೊಂಡಳು. ‘ಏನೇ ಆಗ್ಲಿ ಗಂಡನಿಗೆ ಹೇಳಿ, ಅವರಿಗೆ ಆ ಹಣ ಕೊಡುವುದೇ ಸರಿ’ ಎಂಬ ಗಟ್ಟಿ ನಿರ್ಧಾರಕ್ಕೆ ಬಂದಳು.
ಕೆಲಸ ಮುಗಿಸಿ ಮನೆಗೆ ಬಂದ ಗಂಡನಿಗೆ ಮಮತಾ ಎಂದಿನಂತೆ ಉಪಚರಿಸಿದಳು. ‘ಸುದ್ದಿ ಕೇಳ್ದೇನೆ? ಐನೂರು, ಸಾವಿರದ ನೋಟು ಬ್ಯಾನ್ ಮಾಡವ್ರಂತೆ.’ ಗಂಡನ ಪ್ರಶ್ನೆಗೆ ‘ಹೌದ್ರಿ, ಟಿವಿಯಲ್ಲಿ ಅದನ್ನೇ ತೋರಿಸ್ತಾ ಇದ್ದಾರೆ’ ಎಂದು ಉತ್ತರಕೊಟ್ಟಳು. ಊಟ ಮುಗಿಸಿದ ಗಂಡನ ಪಕ್ಕದಲ್ಲಿ ಕುಳಿತ ಮಮತಾ, ‘ರೀ ಒಂದ್ ವಿಷಯ ಹೇಳ್ತೀನಿ ಬೈಬ್ಯಾಡಿ’ ಎನ್ನುತ್ತಾ ಗಂಡನ ಅನುಮತಿಗೆ ಕಾಯುತ್ತಾಳೆ.
“ಅದೇನು ಅಂಥ ವಿಷಯ?”
“ಅದೇರಿ, ನನ್ನತ್ರ ಐನೂರರ ಇಪ್ಪತ್ ನೋಟಿದೆ ರೀ, ಎರಡು ವರ್ಷದಿಂದ ನೀವು ಮನೆ ಖರ್ಚಿಗೆ ಅಂತ ಕೊಟ್ಟ ಹಣದಲ್ಲೇ ಒಂದಷ್ಟು ಉಳಿಸಿಕೊಂಡು ಇಷ್ಟು ಹಣ ಸೇರ್ಸಿದ್ದೀನಿ. ಪ್ಲೀಸ್ ಬಯ್ಬೇಡ್ರಿ.” ಮಮತಾಳ ಧ್ವನಿಯಲ್ಲಿ ನಡುಕವಿತ್ತು. ಗಂಡನ ಪ್ರತಿಕ್ರಿಯೆಗಾಗಿ ಎದುರು ನೋಡತೊಡಗಿದಳು. ಗಂಡ ಮಾತನಾಡದೆ ಹೆಂಡತಿಯಿಂದ ದೂರ ಸರಿದ. ಆತನ ಮೌನ ಕಂಡು ಮಮತಾ ಭಯಗೊಂಡಳು.
“ರೀ, ನಿಮ್ಮಿಂದ ಈ ವಿಷಯ ಮುಚ್ಚಿಟ್ಟಿದ್ದು ತಪ್ಪಾಯ್ತು ಅಂದ್ರೆ. ಇನ್ಯಾವತ್ತೂ ಈ ರೀತಿ ಮಾಡೋದಿಲ್ಲಾರಿ. ಪ್ಲೀಸ್ ಇಂದೊಂದ್ಸಾರಿ ಕ್ಷಮಿಸಿ ಬಿಡ್ರಿ.” ಆಕೆಯ ಕಣ್ಣಲ್ಲಿ ನೀರು ತುಂಬಿಕೊಂಡಿತು.
“ಎರಡು ವರ್ಷದಿಂದ ಈ ವಿಷಯ ಮುಚ್ಚಿಟ್ಟಿದ್ದೀಯ ಅಂದ್ರೆ ಬೇರೆ ಏನೇನೆಲ್ಲಾ ವಿಷಯ ಮುಚ್ಚಿಟ್ಟಿರಬಹುದು ನೀನು? ನನ್ನೆಂಡ್ತಿ ಚಿನ್ನದಂತವಳು, ನನ್ನತ್ರ ಯಾವುದೇ ವಿಷಯ ಮುಚ್ಚಿಡಲ್ಲ, ಸತಿ ಸಾವಿತ್ರಿ ತರ ಅಂದ್ಕೊಂಡಿದ್ನಲ್ಲೇ, ನನಗೆ ಗೊತ್ತಿಲ್ದೆ ಇನ್ನೂ ಏನೇನ್ ವಿಷಯ ಮುಚ್ಚಿಟ್ಟಿದ್ದೀಯಾ?”
ಗಂಡನಿಂದ ಇಂತಹ ಮಾತುಗಳನ್ನು ನಿರೀಕ್ಷಿಸದ ಮಮತಾ ಆ ಮಾತನ್ನು ಕೇಳಿ ಬಿಕ್ಕಿ ಬಿಕ್ಕಿ ಅಳತೊಡಗಿದಳು.
“ರೀ, ಎರಡೇಟು ಹೊಡೆದ್ಬಿಡಿ. ಆದ್ರೆ ಇಂಥ ಮಾತ್ ಮಾತ್ರ ಆಡ್ಬೇಡಿ. ನಿಮ್ಜೊತೆ ಐದೊರ್ಷ ಸಂಸಾರ ಮಾಡಿದ್ರೂ ಈ ರೀತಿ ಅನುಮಾನ ಪಡ್ತೀರಲ್ಲಾ.” ದುಃಖ ತಡೆಯಲಾಗದೆ ತಾನೇ ದೂರ ಸರಿದು ಬೋರಲಾಗಿ ಮಲಗಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ದೀಪ ಆರಿಸಿ ಗಂಡನೂ ಸ್ವಲ್ಪ ದೂರದಲ್ಲಿ ಮಲಗಿದನು. ಕತ್ತಲೆಯಲ್ಲೂ ಅವರಿಬ್ಬರ ಮೂಗುಗಳಿಂದ ಸೊರ್ ಸೊರ್ ಎನ್ನುವ ಶಬ್ದ, ಬೋರಲಾಗಿ ಮಲಗಿ ದಂಪತಿಗಳಿಬ್ಬರೂ ದುಃಖಿಸುತ್ತಿರುವುದರ ಸೂಚನೆ ನೀಡುತ್ತಿತ್ತು.
….
(19-11-2026)
ಬ್ಯಾಂಕುಗಳ ಎದುರು ಜನರ ಗೋಳಾಟ:
“ಯಾರ್ರೀ ಆ ಹೆಂಗ್ಸು? ಎಷ್ಟ್ರೀ ವಯಸ್ಸು ನಿಮ್ಗೆ? ಇವತ್ತೇನಿದ್ರೂ ಮುದುಕ, ಮುದುಕಿಯರಿಗೆ ಮಾತ್ರ ನೋಟ್ ಬದಲಾಯಿಸಿ ಕೊಡೋದು. ವಯಸ್ಕರರಿಗೆಲ್ಲಾ ಕೊಡಲ್ಲ. ಇಲ್ಲಿ ನಿಂತ್ಕೊಬೇಡಿ ಹೋಗಿ.”
“ಅಯ್ಯೋ ನಿನ್ ಮುಖಕ್ ಬೆಂಕಿ ಹಾಕ. ನೆನ್ನೆ ಅರ್ಧ ದಿನ ನಿಂತ್ರೂ ‘ಟೈಮ್ ಆಯ್ತು ನಾಳೆ ಬನ್ನಿ’ ಅಂತೇಳಿ ಹಣಾನೂ ಕೊಡ್ದೆ ಬ್ಯಾಂಕ್ ಮುಚ್ಕೊಂಡೊದೆ. ಇವತ್ನೋಡಿದ್ರೆ ಮುದುಕರಿಗೆ ಮಾತ್ರ ಅಂತಿಯಲ್ಲಾ, ನಾವೇನ್ ಹೊಟ್ಟೆಗೆ ಮಣ್ತಿನ್ಬೇಕಾ? ಮೊನ್ನೆ ನಾಲಕ್ ಸಾವಿರ ಬದಲಾಯಿಸಿ ಕೊಡ್ತಿದ್ರಂತೆ. ನೆನ್ನೆ ಎರಡೇ ಸಾವಿರ ಕೊಡೋದು ಅಂದ್ರಿ. ಅದ್ಕೂ ಶಾಯಿ ಹಾಕಿಸ್ಕೋಬೇಕು ಅಂದ್ರಿ. ತಲೆ ಗಿಲೆ ತಿರುಗ್ತಾಯ್ತಾ ನಿಂಗೆ? ನಮ್ ದುಡ್ ನಮುಗ್ ಕೊಡೋಕ್ಯಾಕೆ ಹಿಂಗಾಡ್ತೀರಿ?”
“ರೀ ಮೇಡಮ್, ನಮ್ಮತ್ರ ಏನ್ರಿ ಮಾತಾಡ್ತೀರಾ? ನಾವು ಸರ್ಕಾರದವ್ರು ಹೆಂಗ್ ಹೇಳ್ತಾರೊ ಹಂಗ್ ಕೇಳ್ಬೇಕು ಅಷ್ಟೆ. ಸರ್ಕಾರದವ್ರು ದಿನಕ್ಕೊಂದ್ ಕಾನೂನ್ ಮಾಡ್ತಾರೆ. ನೀವು ಬಯ್ಯೋದಿದ್ರೆ ಮೋದಿಗ್ ಬಯ್ರಿ. ನಮಗೂ ಹತ್ತನ್ನೊಂದ್ ದಿನಗಳಿಂದ ಜನ್ರಿಗೆ ಹೇಳಿ ಹೇಳಿ ಸಾಕಾಗೋಗಿದೆ.”
“ಆಯ್ತು ಇವತ್ತು ಹೋಗ್ತೀನಿ. ನಾಳೆ ಬಾನ್ವಾರ ಬ್ಯಾಂಕ್ ಓಪನ್ ಮಾಡ್ತೀರೋ ಇಲ್ವೋ?”
“ಇದುವರೆಗಿನ ಸುದ್ದಿ ಪ್ರಕಾರ ನಾಳೆ ಬ್ಯಾಂಕು ತೆಗೆಯೋದಿಲ್ಲ. ರಾತ್ರಿಯಾಗ್ತಿದ್ದಂಗೆ ಅದೇನ್ ಘೋಷಣೆ ಮಾಡ್ತಾರೋ ಏನೊ, ಯಾರಿಗೊತ್ತು?”
“ಶಿವನೇ ಎಂತಾ ಕಾಲ ಬಂತಪ್ಪ, ಇವ್ರ್ ಮನೆ ಎಕ್ಕುಟ್ಟೋಗ, ನಾವೇನು ಇವರತ್ರ ಸಾಲ ಕೇಳಿದ್ವಾ, ಇಲ್ಲ ಇದೇನ್ ಬ್ಲಾಕ್ ಮನೀಯಾ, ನಾವ್ ಕಷ್ಟ ಪಟ್ಟು ದುಡ್ದಿರೋ ದುಡ್ಡೇ ಸಮಯಕ್ಕೆ ಸಿಗಲ್ಲ ಅಂದ್ರೆ… ಸೋಮ್ವಾರಾನೂ ರಜ ಹಾಕಿ ಕ್ಯೂ ನಿಲ್ಬೇಕಾ.”
….
ಇವರು ಹಳೆಯ ನೋಟುಗಳನ್ನು ಸುಲಭವಾಗಿ ಬದಲಾಯಿಸಿಕೊಂಡರು:
ಡೀಸಲ್ ಖರೀದಿಯ ಮೂಲಕ 10 ಬಸ್ಸುಗಳು ಅಥವಾ 10 ಲಾರಿಗಳನ್ನು ಹೊಂದಿರುವ ಮಾಲೀಕರು, ದಿನವೊಂದರಲ್ಲಿ, (ಒಂದು ಟೂರಿಸ್ಟ್ ಬಸ್ಸು/ಲಾರಿಗೆ ದಿನವೊಂದಕ್ಕೆ ಕನಿಷ್ಟ 10 ಸಾವಿರ ರೂ ಡೀಸಲ್ ಅಗತ್ಯವಿದೆ.) ತಮ್ಮಲ್ಲಿರುವ ಒಂದು ಲಕ್ಷ ರೂ ಮೌಲ್ಯದ, 15 ದಿನಗಳಲ್ಲಿ 15 ಲಕ್ಷ ರೂ ಮೌಲ್ಯದ ಹಳೆಯ 500/1000 ಮುಖಬೆಲೆಯ ನೋಟುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ನೂರು ಬಸ್ಸುಗಳು/ಲಾರಿಗಳ ಮಾಲೀಕರು ದಿನವೊಂದಕ್ಕೆ 10 ಲಕ್ಷ, 15 ದಿನಗಳಲ್ಲಿ 1 ಕೋಟಿ 50 ಲಕ್ಷ ಮೌಲ್ಯದ ಹಳೆಯ ನೋಟುಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಹೆದ್ದಾರಿ ಟೋಲ್ ಸಂಗ್ರಹ ನಿಲ್ಲಿಸಿದ್ದರಿಂದ ಟೂರಿಸ್ಟ್ ಬಸ್ಸು ಮತ್ತು ಲಾರಿ ಮಾಲೀಕರು 15 ದಿನಗಳಲ್ಲಿ ಲಕ್ಷಾಂತರ ರೂ ಉಳಿತಾಯ ಮಾಡಿಕೊಳ್ಳಬಹುದು!
ಇತ್ತ 2 ಸಾವಿರ ಬೆಲೆಯ ನೋಟು ಬದಲಾಯಿಸುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಕಠಿಣ ಷರತ್ತು, ಅವರ ಬೆರಳಿಗೆ ಶಾಯಿ! ಇದುವೇ ನಮ್ಮ ವ್ಯವಸ್ಥೆ.
….
(19-11-2016)
ಹಣವಿಲ್ಲದೆ ಜನರ ಪರದಾಟ:
*TV9 ವರದಿಯಿಂದ:
>ತಾವು ಬೆಳೆದ ಜೋಳ ಕೊಟ್ಟು ತರಕಾರಿ ಕೊಳ್ಳುತ್ತಿರುವ ಗದಗ ದ ಗ್ರಾಮೀಣ ಮಹಿಳೆಯರು.
>ತಾವು ಒಂದು ವರ್ಷದಿಂದ ಕೂಡಿಸಿಟ್ಟ ನೋಟು ಬದಲಾಯಿಸಲಾಗದ ಕಾರಣ ʼಅಯ್ಯಪ್ಪ ಯಾತ್ರೆʼ ರದ್ದುಗೊಳಿಸಿದ ರಾಮನಗರದ ಭಕ್ತರು.
>ಮಗಳ ಮದುವೆಗೆಂದು ಸಾಲ ಮಾಡಿ ಬ್ಯಾಂಕಿನಲ್ಲಿಟ್ಟಿದ್ದ 6 ಲಕ್ಷ ಹಣ ಪಡೆಯಲಾಗದೇ ಕಣ್ಣೀರಿಟ್ಟ, ಮೈಸೂರು ಸಮೀಪದ ಗ್ರಾಮವೊಂದರ ಹೆತ್ತವರು.
>ಹತ್ತಿ ಬಿಡಿಸಲು ಕೂಲಿಕಾರರಿಗೆ ಹಣ ಕೊಡಲಾರದೇ ಸಂಕಟ ಪಡುತ್ತಿರುವ ಬಳ್ಳಾರಿಯ ರೈತ.
>ಕಟಾವಿಗೆ ಬಂದ ಭತ್ತ ಕಟಾವು ಮಾಡಲಾಗದ ರೈತನೊಬ್ಬನ ಸಂಕಟ.
>1800 ರಿಂದ 1900 ಇದ್ದ ಭತ್ತದ ಬೆಲೆ 1300 ಕ್ಕೆ ಕುಸಿತ, ಭತ್ತ ಖರೀದಿ ಮಾಡಲು ಯಾರೂ ಬರುತ್ತಿಲ್ಲ. ಶಿವಮೊಗ್ಗದ ಗೋಂದಿಚೆಟ್ಟಿಹಳ್ಳಿ ರೈತರ ಅಳಲು.
>ಕೂಲಿ ಮಾಡಿದರೂ ಕೂಲಿಯ ಹಣ ಸಿಗುತ್ತಿಲ್ಲ ಎಂದ ಕಲಬುರಗಿಯ ಕೂಲಿಕಾರರು.
>ಚಿಲ್ಲರೆ ಕೊರತೆ. ಕೊಳ್ಳುವವರಿಲ್ಲದೆ ಆಲೂಗೆಡ್ಡೆ ಬೆಲೆ ಕುಸಿತ, ಮಾರಾಟಮಾಡಲಾಗದೆ ಕಂಗಾಲಾದ ಬೆಳಗಾವಿ ಜಿಲ್ಲೆಯ ಅಗಸ್ತಾ ಗ್ರಾಮದ ರೈತನ ಅಳಲು.
>”ಈರುಳ್ಳಿಯನ್ನು ಕೇಳುವವರೇ ದಿಕ್ಕಿಲ್ಲ. ಏನ್ಮಾಡ್ಬೇಕು ಗೊತ್ತಾಗ್ತಿಲ್ಲ.” ದಾವಣಗೆರೆಯ ಮಾರುಕಟ್ಟೆಯಲ್ಲಿನ ರೈತರ ಗೋಳು.
>”ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಂಜೂರಾಗಿದೆ. ದಿನಕ್ಕೆ 2ಸಾವಿರ ಮಾತ್ರ ಕೊಡ್ತಾರೆ. ಕಟ್ಟಡದ ಕೆಲಸ ಅರ್ಧಕ್ಕೇ ನಿಂತಿದೆ.” ಬೆಳಗಾವಿ ಜಿಲ್ಲೆಯ ಅಗಸ್ತ ಗ್ರಾಮದ ರೈತ.
>”ಡೈರಿಗೆ ಹಾಲು ಕೊಟ್ಟರೂ ಡೈರಿಯವರಿಂದ ಹಣ ಸಿಗುತ್ತಿಲ್ಲ, ಹಸುಗಳ ಮೇವು ಖರೀದಿಸಲೂ ಆಗುತ್ತಿಲ್ಲ” ಗದಗ ದ ರೈತರ ಗೋಳು.
….
(20-11-2016)
ಮೋದಿಯವರು ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ…
‘ನೋಟು ರದ್ದುಮಾಡಿರುವ ಮೋದಿಯವರು ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿದ್ದಾರೆ. ಈ ಕ್ರಮವನ್ನು ಟೀಕಿಸಬೇಡಿ’ ಎಂದು ಮೋದಿ ಬೆಂಬಲಿಗರು ಹೇಳತೊಡಗಿದ್ದಾರೆ. ಯಾವುದು ಒಳ್ಳೆಯ ಕ್ರಮ? ಬಡವರ, ಮಧ್ಯಮ ವರ್ಗದ ಜನ ಕೂಡಿಟ್ಟಿರುವ ಅಲ್ಪ ಸ್ವಲ್ಪ ಹಣವನ್ನೇ ಹೊರತೆಗೆಯುವುದು ಒಳ್ಳೆಯ ಕೆಲಸವೇ? ಈ ಜನರನ್ನು ಸಂಕಷ್ಟಕ್ಕೆ ದೂಡಿರುವುದು ಒಳ್ಳೆಯ ಕೆಲಸವೆ? ನಿಜಕ್ಕೂ ಕಪ್ಪು ಹಣ ಹೊರಬರುವುದಿದ್ದರೆ, ಇಂತಹ ಕಷ್ಟ ಅನುಭವಿಸಲು ಜನರು ಸಿದ್ದರಾಗಿದ್ದಾರೆ. ಆದರೆ, ಕಪ್ಪುಹಣ ಹೊರಬರುತ್ತದೆಂಬ ನಿಮ್ಮ ಭರವಸೆ ಖಂಡಿತಾ ಈಡೇರಲಾರದು. ನಿಜವಾಗಿಯೂ ಕಪ್ಪುಹಣ ಹೊರತರುವ ಆಸಕ್ತಿ ಸರ್ಕಾರಕ್ಕೆ ಇದ್ದರೆ, ಹಣದ ರೂಪದಲ್ಲಿ, ಚಿನ್ನ ಮತ್ತು ಆಸ್ತಿಯ ರೂಪದಲ್ಲಿ ಕೂಡಿಟ್ಟಿರುವ ದೊಡ್ಡ ದೊಡ್ಡ ಸಿರಿವಂತರ ಮನೆ, ಕಛೇರಿಗಳ ಮೇಲೆ ದಾಳಿ ಮಾಡಬೇಕಿತ್ತು. ಕಾಳಧನಿಕರು ಕೂಡಿಟ್ಟಿರುವ ಮಠ, ಮಂದಿರ, ಆಶ್ರಮ, ಮಸೀದಿ ಮತ್ತು ಚರ್ಚುಗಳ ಮೇಲೆ ದಾಳಿ ಮಾಡಬೇಕಿತ್ತು. ಕಮೀಷನ್, ಲಂಚ ತಿಂದು ಕೋಟ್ಯಾಂತರ ರೂ ಕೂಡಿಟ್ಟಿರುವ ಸಚಿವರು, ಎಂಪಿ, ಎಂ ಎಲ್ ಎ, ಕಾರ್ಪೋರೇಟರ್ ಮನೆಗಳ ಮೇಲೆ ದಾಳಿಮಾಡಬೇಕಿತ್ತು. ಲಂಚ ತಿಂದು ಕೊಬ್ಬಿರುವ ಐಎಎಸ್, ಐಪಿಎಸ್ ಮತ್ತು ಇತರೆ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿಮಾಡಬೇಕಿತ್ತು. ತೆರಿಗೆ ವಂಚಿಸಿರುವ ಸಿನಿಮಾ ನಟರ ಮನೆಗಳ ಮೇಲೆ ದಾಳಿಮಾಡಬೇಕಿತ್ತು. 8 ಲಕ್ಷ ಕೋಟಿ ಸಾಲ ಪಡೆದು, ಸಾಲ ಮರುಪಾವತಿಸದೆ, ‘ವಸೂಲಾಗದ ಸಾಲದ ಪ್ರಮಾಣ’ (NPA) ಹೆಚ್ಚಲು ಕಾರಣರಾದ ಉದ್ಯಮಪತಿಗಳ ಆಸ್ತಿ ಜಪ್ತಿಮಾಡಬೇಕಿತ್ತು. ‘500 ಕೋಟಿಗೂ ಹೆಚ್ಚು ಸಾಲ ಪಡೆದು ಸುಸ್ತಿದಾರ ಉಧ್ಯಮಪತಿಗಳ ಪಟ್ಟಿ ಕೊಡಿ’ ಎಂಬ ಸುಪ್ರೀಂ ಕೋರ್ಟ್ ಸೂಚನೆಯನ್ನು ಪಾಲಿಸಬೇಕಿತ್ತು. ಇದ್ಯಾವುದನ್ನೂ ಮಾಡದೆ, ಒಟ್ಟು ಹಣದ ಶೇ. 85 ರಷ್ಟಿರುವ 500, 1000 ಮುಖಬೆಲೆಯ ನೋಟುಗಳನ್ನು ನಿಷೇದ ಮಾಡುವುದರಿಂದ ಕಪ್ಪು ಹಣ ಹೊರತರಲಾಗದು. ವಸೂಲಾಗದ ಸಾಲದ ಪ್ರಮಾಣ ಹೆಚ್ಚಳದಿಂದಾಗಿ ಬ್ಯಾಂಕುಗಳ ಖಜಾನೆ ಖಾಲಿಯಾಗಿದೆ. ಆ ಸಾಲಗಳನ್ನು ರೈಟ್ ಆಫ್ ಮಾಡುವಂತೆ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಬ್ಯಾಂಕುಗಳಿಗೆ ಬರುವ ಆದಾಯದ ಬಹುಪಾಲು ಹಣವನ್ನು ಸಾಲ ಮನ್ನಾದಿಂದ ಆಗುವ ನಷ್ಟ ತುಂಬಿಕೊಳ್ಳತೊಡಗಿವೆ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವೂ ಬ್ಯಾಂಕುಗಳಿಗೆ ಕಳೆದ 3 ಬಜೆಟ್ ಗಳಲ್ಲಿ 70 ಸಾವಿರ ಕೋಟಿ ರೂ ಕೊಟ್ಟಿದೆ. ಮುಂದಿನ ಬಜೆಟ್ ನಲ್ಲೂ 20 ಸಾವಿರ ಕೊಡುವುದಾಗಿ ಭರವಸೆ ಕೊಟ್ಟಿದೆ. ಇದಕ್ಕಾಗಿ ಬ್ಯಾಂಕುಗಳ ಖಾಲಿಯಾದ ಖಜಾನೆ ತುಂಬಿಸಲು ಜನಸಾಮಾನ್ಯರು ಕೂಡಿಟ್ಟಿರುವ ಹಣದ ಮೇಲೆ ಮೋದಿ ಸರ್ಕಾರ ಕಣ್ಣಿಟ್ಟಿದೆ. ಈ ಕಾರಣಕ್ಕಾಗಿಯೇ ನೋಟು ನಿಷೇದ ಮಾಡಲಾಗಿದೆ. ಬ್ಯಾಂಕಿನಲ್ಲೇ ಹಣ ಉಳಿಯುವಂತೆ ಮಾಡಲು ಬ್ಯಾಂಕಿನಿಂದ ಹಣ ಪಡೆಯುವುದಕ್ಕೆ ನಿರ್ಬಂಧ ವಿಧಿಸುತ್ತಿದ್ದಾರೆ. ಇದರಲ್ಲಿ ಮತ್ತೊಂದು ಉದ್ದೇಶವೂ ಇದೆ. ಅದೇನೆಂದರೆ, ವಿದೇಶಿ ಮತ್ತು ಸ್ವದೇಶಿ ಕಂಪನಿಗಳ ಚಿಲ್ಲರೆ ವ್ಯಾಪಾರಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚಿಸುವುದು. ‘ಬ್ಯಾಂಕಿಗೆ ಹಣ ಹಾಕಿ, ತೆಗೆದುಕೊಳ್ಳಬೇಡಿ’ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಹೇಳುತ್ತಾರೆ. ‘ಎಲ್ಲರೂ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆ ಮಾಡಬೇಕೆಂಬುದೇ ನನ್ನ ಕನಸು’ ಎಂದು ಮೋದಿ ಹೇಳುತ್ತಾರೆ. ಇವರ ಈ ಕನಸು ನನಸಾದರೆ, ನಮ್ಮ ದೇಶದ ಕೋಟ್ಯಾಂತರ ಸಣ್ಣ ವ್ಯಾಪಾರಿಗಳು ತಮ್ಮ ಕಸುಬಿಗೆ ತಿಲಾಂಜಲಿ ಇಡಬೇಕಾಗುತ್ತದೆ. ಆಳುವ ವರ್ಗದ ಈ ತಂತ್ರ ಅರಿಯದೇ ಕಣ್ಣುಮುಚ್ಚಿ ಬೆಂಬಲಿಸಬೇಡಿ.
….
(ನವೆಂಬರ್ 24, 2016. ನೋಟು ನಿಷೇಧದ 15ನೇ ದಿನ)
“ನಗದು ಸಂಗ್ರಹಿಸಿಟ್ಟುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.“
ನೋಟು ರದ್ದತಿ ಮಾಡಿದ ನಿಜವಾದ ಉದ್ದೇಶ ಈಗ ಸ್ಪಷ್ಟವಾಗತೊಡಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದತಿಗೆ ಸಂಬಂಧಿಸಿ, ಬೇರೆ ಬೇರೆ ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ತಡೆ ನೀಡಬೇಕೆಂಬ ತನ್ನ ಮನವಿಗೆ, ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ ವಾದವನ್ನೊಮ್ಮೆ ನೋಡಿ:
“ನಮ್ಮ ತೀರ್ಮಾನದ ಪರಿಣಾಮವಾಗಿ ಇದುವರೆಗೆ 6 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ. ಡಿಸೆಂಬರ್ ಅಂತ್ಯದ ವೇಳೆಗೆ 10 ಲಕ್ಷ ಕೋಟಿ ಹಣ ಜಮಾ ಆಗುವ ನಿರೀಕ್ಷೆ ಇದೆ. ಈ ಕ್ರಮದಿಂದಾಗಿ ನಗದು ಸಂಗ್ರಹಿಸಿಟ್ಟುಕೊಳ್ಳುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ.”
“ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ.”
ಅಂದರೆ, ಕಾರ್ಪೋರೇಟ್ ಕುಳಗಳ ಹಿಡಿತದಲ್ಲಿರುವ ಮೋದಿ ಸರ್ಕಾರದ ನಡೆ ಸ್ಪಷ್ಟ. ಕಪ್ಪುಹಣ ಹೊರತರುವ, ಭ್ರಷ್ಟಾಚಾರ ತಡೆಗಟ್ಟುವ ಅಥವಾ ಭಯೋತ್ಪಾದಕರಿಗೆ ಹಣದ ಹರಿವು ತಡೆಗಟ್ಟುವ ಗುರಿಯೊಂದಿಗೆ ನೋಟು ರದ್ದತಿ ಮಾಡಲಿಲ್ಲ, ಬದಲಾಗಿ ಬಡವರು ಮತ್ತು ಮಧ್ಯಮ ವರ್ಗದ ಜನರು ತಮ್ಮ ಮನೆಗಳಲ್ಲಿ ಕೂಡಿಟ್ಟಿರುವ ಅಲ್ಪ ಸ್ವಲ್ಪ ಹಣವೂ ಬ್ಯಾಂಕುಗಳ ಖಜಾನೆಯತ್ತ ಹರಿದು ಬರುವಂತೆ ಮಾಡುವ ತಂತ್ರಗಾರಿಕೆ ಇದಾಗಿದೆ. ಉದ್ಯಮಪತಿಗಳು ಬ್ಯಾಂಕುಗಳಿಂದ ಸಾಲ ಪಡೆದು ಹಿಂತಿರುಗಿಸದ 7 ಲಕ್ಷ ಕೋಟಿ ರೂ ‘ವಸೂಲಾಗದ ಸಾಲ’ದ ಕಾರಣದಿಂದ ಖಾಲಿಯಾಗಿರುವ ಬ್ಯಾಂಕುಗಳ ಖಜಾನೆ ಇದರಿಂದ ತುಂಬುತ್ತದೆ. ಹಣದ ಠೇವಣಿ ಹೆಚ್ಚಾದ ಕಾರಣ ನೀಡಿ, ಅದೇ ವಂಚಕ ಉದ್ಯಮಪತಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಲು ಅನುಕೂಲವಾಗುತ್ತದೆ. ಜೊತೆಗೆ (ಪ್ರಧಾನಿಯವರೇ ಹೇಳಿದಂತೆ) ಮೋದಿಯವರು 2 ವರ್ಷಗಳಿಂದ ಜಾರಿಗೆ ತರಬೇಕೆಂದು ಶ್ರಮಪಟ್ಟ ‘ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ’ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆ ಮೂಲಕ ಜನಸಾಮಾನ್ಯರೂ ತಮ್ಮ ದಿನನಿತ್ಯದ ಅಗತ್ಯವಸ್ತುಗಳ ಖರೀದಿಗಾಗಿ ‘ಡೆಬಿಟ್ ಕಾರ್ಡ್’, ‘ಕ್ರೆಡಿಟ್ ಕಾರ್ಡ್’, ‘ರೂಪೆ ಕಾರ್ಡ್’, ‘ಚೆಕ್’ ಅಥವಾ ಪೇಟಿಎಂ ಬಳಕೆ ಮಾಡುವ ಅನಿವಾರ್ಯತೆಗೆ ಒಳಗಾಗುತ್ತಾರೆ. ಅಂತಹ ವ್ಯವಹಾರ ಮಾಡುವ ವಿದೇಶಿ ಮತ್ತು ಸ್ವದೇಶಿ ಬಂಡವಾಳಗಾರರು ನಡೆಸುವ ‘ಚಿಲ್ಲರೆ ವ್ಯಾಪಾರಿ ಮಳಿಗೆ’ಗಳಿಗೇ ಹೋಗಬೇಕಾಗುತ್ತದೆ. ವಿದೇಶಿ ಬಂಡವಾಳಗಾರರು ಚಿಲ್ಲರೆ ವ್ಯಾಪಾರಕ್ಕೆ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಪ್ರಧಾನಿಯವರ ಮತ್ತೊಂದು ಕನಸಾದ ‘ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ’ ನನಸಾಗುತ್ತದೆ. ಅಲ್ಲಿಗೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಗ್ರಾಹಕರ ಕೊರತೆ ಉಂಟಾಗಿ, ತಮ್ಮ ಅಂಗಡಿಗಳನ್ನು ಮುಚ್ಚುವ ಅನಿವಾರ್ಯತೆಗೆ ಒಳಗಾಗುತ್ತಾರೆ. ಅಲ್ಲಿಗೆ ನೋಟು ರದ್ದತಿಯ ಪ್ರಯೋಗ ಯಶಸ್ವಿಯಾಗುತ್ತದೆ.
ದೇಶದ ಜನತೆಗೆ ಸುಳ್ಳು ಹೇಳಬಹುದು. ಸಂಸತ್ತಿನ ಚರ್ಚೆಯಲ್ಲಿ ಬಾಗವಹಿಸದೇ ವಿಷಯ ಮುಚ್ಚಿಡಲೂಬಹುದು. ಆದರೆ, ನ್ಯಾಯಾಲಯಕ್ಕೆ ಸುಳ್ಳು ಹೇಳಲಾಗದು.
….
(24-11-2016)
ಸತ್ಯ ಹೊರಬಿತ್ತು ನಾವು ಈ ಕುರಿತು ನವೆಂಬರ್ 16 ರಂದೆ ಚರ್ಚಿಸಿದ್ದೆವು ಇದನ್ನು ಮುಖ್ಯವಾಗಿ Siddaiah Chikkamadegowda ಪ್ರಸ್ತಾಪಿಸಿದ್ದರು. . .
ನಗದು ರಹಿತ ಆರ್ಥಿಕ ವ್ಯವಸ್ಥೆಗಾಗಿ ಮೋದಿ ‘ನೋಟು ರದ್ದತಿ’ ನಿರ್ಧಾರ ಕೈಗೊಂಡಿದ್ದಾರೆ.
Kiran Gajanur
….
(ನವೆಂಬರ್ 27, 2016)
ದೊಡ್ಡ ಬಂಡವಾಳಗಾರರ ಚಿಲ್ಲರೆ ವ್ಯಾಪಾರದ ಎದುರು ಕಿರಾಣಿ ಅಂಗಡಿಯವರು ಪೈಪೋಟಿ ನಡೆಸಲಾದೀತೆ?
“ನೋಟು ಇಲ್ಲದೆ ವ್ಯಾಪಾರ ಮಾಡುವುದನ್ನು ಕಲಿಯಿರಿ”
“ನಗದು ರಹಿತ ವಹಿವಾಟು ನಡೆಸಿ”
“ಇ-ವ್ಯಾಲೆಟ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಆನ್ಲೈನ್ ವಹಿವಾಟು ನಡೆಸಿ”
ಇದು ನಮ್ಮ ಪ್ರಧಾನಿಯವರು ಕಿರಾಣಿ ಅಂಗಡಿಗಳ ವ್ಯಾಪಾರಿಗಳಿಗೆ ಹೇಳಿದ ಹಿತವಚನ. ಸೊಪ್ಪು, ತರಕಾರಿ ಮಾರುವ ತಳ್ಳುಗಾಡಿಯವರೂ, ರಸ್ತೆಬದಿಯ ಪೆಟ್ಟಿಗೆ ಅಂಗಡಿ ವ್ಯಾಪಾರಿಗಳೂ, ಕಿರಾಣಿ ಅಂಗಡಿ ವ್ಯಾಪಾರಸ್ಥರೂ ನಗದು ರಹಿತ ವ್ಯಾಪಾರ ಮಾಡಲು ಕಲಿಯಬೇಕು. ಪ್ರಧಾನಿ ಇಷ್ಟಕ್ಕೇ ಬಿಟ್ಟರೆ ಕಷ್ಟಪಟ್ಟಾದರೂ ಸಣ್ಣ ವ್ಯಾಪಾರಸ್ಥರು ಈ ವ್ಯವಸ್ಥೆಗೆ ನಿಧಾನವಾಗಿಯಾದರೂ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ, ಮೋದಿಯವರು ವಿದೇಶಿ ಬಂಡವಾಳಿಗರಿಗೂ ಮತ್ತು ಟಾಟಾ, ರಿಲಯನ್ಸ್ ನಂತಹ ಕಾರ್ಪೊರೇಟ್ ಕಂಪನಿಗಳಿಗೂ ಚಿಲ್ಲರೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದಾರೆ. ಸಾವಿರಾರು ಕೋಟಿ ಬಂಡವಾಳ ಹೂಡುವ ಇಂತಹ ದೊಡ್ಡ ಕಂಪನಿಗಳ ವ್ಯಾಪಾರಿ ತಂತ್ರದ ಎದುರು ಪೈಪೋಟಿ ಮಾಡಿ ಸಣ್ಣ ವ್ಯಾಪಾರಿಗಳು ತಮ್ಮ ವ್ಯವಹಾರ ಮಾಡಲು ಸಾಧ್ಯವೆ? ದೊಡ್ಡ ತಿಮಿಂಗಲಗಳಿಂತಿರುವ ಈ ಕಂಪನಿಗಳು ಜಾಹಿರಾತುಗಳ ಮೂಲಕ, ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ. ಗ್ರಾಹಕರನ್ನು ಸೆಳೆಯಲೆಂದೇ ಸಾವಿರಾರು ಕೋಟಿ ರೂಪಾಯಿ ವೆಚ್ಚಮಾಡುತ್ತವೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟಮಾಡುತ್ತವೆ. ಉದಾಹರಣೆಗೆ 10ರೂ ಬೆಲೆಯ ಟೊಮೋಟೋ 8 ರೂಗೆ ಖರೀದಿಸಿ ಅದನ್ನು 6 ರೂಗೆ ಮಾರುತ್ತವೆ. 4 ರೂ ನಷ್ಟದಲ್ಲೂ ಅಂತಹ ವ್ಯಾಪಾರ ಮಾಡುವ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆದುಕೊಳ್ಳುತ್ತವೆ. ಮತ್ತೊಂದೆಡೆ ವ್ಯಾಪಾರದಿಂದಲೇ ಬದುಕು ಸಾಗಿಸುವ ಸಣ್ಣ ವ್ಯಾಪಾರಿ 8 ರೂಗೆ ತಂದ ಟೊಮೋಟೊ ವನ್ನು ಅದಕ್ಕಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗ್ರಾಹಕರ ಕೊರತೆಯಿಂದಾಗಿ ತಮ್ಮ ವ್ಯಾಪಾರವನ್ನೇ ಸ್ಥಗಿತಗೊಳಿಸ ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ದೊಡ್ಡ ವ್ಯಾಪಾರಸ್ಥರು ರೈತರಿಗೆ ಮುಗಂಡ ಹಣ ಕೊಟ್ಟು ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ. ರೈತರು ಬೆಳೆದ ಬೆಳೆ ತಮಗೇ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸುತ್ತಾರೆ. ನಂತರ ಈ ದೊಡ್ಡ ಕಂಪನಿಗಳು ಎಷ್ಟೇ ಬೆಲೆ ನಿಗದಿಮಾಡಿದರೂ ಗ್ರಾಹಕರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ. ತಾವು ಬೆಳೆದ ಬೆಳೆಗೆ ಬೆಲೆ ಚೌಕಾಸಿ ಮಾಡುವ ಹಕ್ಕನ್ನೂ ರೈತರು ಕಳೆದು ಕೊಳ್ಳುತ್ತಾರೆ. ಸರ್ಕಾರ ನಗದು ಹರಿವಿಗೆ ಕಡಿವಾಣ ಹಾಕುವುದರಿಂದ ಇಂತಹ ದೊಡ್ಡ ಕಂಪನಿಗಳ ಚಿಲ್ಲರೆ ಮಳಿಗೆಗಳಿಗೇ ಹೋಗಿ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಗಳಿವೆ. ಬಿಗ್ ಬಜಾರ್, ರಿಲಯನ್ಸ್ ಮಾರ್ಟ್ ನಂತಹ ವ್ಯಾಪಾರಿ ಮಳಿಗೆಗಳ ರಿಯಾಯಿತಿ ದರದ ಮಾರಾಟದ ಜಾಹಿರಾತುಗಳನ್ನು ನೋಡುತ್ತಿದ್ದೇವೆ. ಆನ್ಲೈನ್ ವಹಿವಾಟು ಬಂದನಂತರ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳು ಗ್ರಾಹಕರನ್ನು ಕಳೆದುಕೊಂಡಿದ್ದಾರೆ. ಟ್ಯಾಕ್ಸಿ ಸೇವಾ ವಲಯದಲ್ಲಿ ವಿದೇಶಿ ಬಂಡವಾಳಿಗರು ಗ್ರಾಹಕರಿಗೆ ರಿಯಾಯಿತಿ ಮತ್ತು ಟ್ಯಾಕ್ಸಿ ಚಾಲಕರಿಗೆ ಪ್ರೋತ್ಸಾಹಧನ ನೀಡುವ ಮೂಲಕ ತಮ್ಮ ವ್ಯವಹಾರ ವೃದ್ದಿಸಿಕೊಂಡದ್ದು, ಈ ಕಾರಣದಿಂದ ಸ್ಥಳೀಯ ಸಣ್ಣಪುಟ್ಟ ಟ್ರಾವಲ್ಸ್ ಗಳು ಮುಚ್ಚಿಹೋಗಿದ್ದು ಮತ್ತು ಟ್ಯಾಕ್ಸಿ ಚಾಲಕರೂ ಗ್ರಾಹಕರಿಗಾಗಿ ಅಂತಹ ವಿದೇಶಿ ಕಂಪನಿಗಳನ್ನೇ ಅವಲಂಬಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ನಮ್ಮ ಕಣ್ಣೆದುರೇ ಇದೆ. ಈ ವಿದೇಶಿ ಟ್ಯಾಕ್ಸಿ ಸೇವಾ ಕಂಪನಿಗಳು ತಮ್ಮ ವ್ಯವಹಾರ ವೃದ್ಧಿಗಾಗಿ ಜಾಹಿರಾತು, ಗ್ರಾಹಕರು ಮತ್ತು ಚಾಲಕರನ್ನು ಸೆಳೆಯಲು ಕನಿಷ್ಟ 50 ಸಾವಿರ ಕೋಟಿ ವೆಚ್ಚಮಾಡಿವೆ. ಇಂತಹ ಕಡಿಮೆ ದರದ ಸೇವೆ ಮಧ್ಯಮ ವರ್ಗದ ಜನರಿಗೆ ಸಧ್ಯಕ್ಕೆ ಲಾಭದಾಯಕವಾಗಿರಬಹುದು. ಆದರೆ ಹಲವು ಗುಪ್ತ ಮಾರ್ಗದಲ್ಲಿ ಚಾಲಕರು ಮತ್ತು ಗ್ರಾಹಕರನ್ನು ವಂಚಿಸುತ್ತಿವೆ. ಇಂತಹ ರಿಯಾಯಿತಿ ದರದ ಟ್ಯಾಕ್ಸಿ ಸೇವೆ ಶಾಸ್ವತವೂ ಅಲ್ಲ. ವಿದೇಶಿ ನೇರ ಬಂಡವಾಳಗಾರರ ಮತ್ತು ದೇಶದ ದೊಡ್ಡ ಬಂಡವಾಳಗಾರರು ಮಾಡುವ ಚಿಲ್ಲರೆ ವ್ಯಾಪಾರಸ್ಥರಿಗೆ ಗ್ರಾಹಕರನ್ನು ಸೃಷ್ಟಿಸುವ ಉದ್ದೇಶದಿಂದ ಇಂತಹ ‘ನಗದು ರಹಿತ ವಹಿವಾಟು’ ಎಂಬ ವ್ಯವಸ್ಥೆಯನ್ನು ಬಲವಂತವಾಗಿ ಏರಲಾಗುತ್ತಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಬೀದಿಪಾಲಾಗಲು ಸರ್ಕಾರದ ಈ ನಡೆ ಕಾರಣವಾಗಿದೆ. ಕಪ್ಪುಹಣ ಹೊರತರುತ್ತೇವೆ, ಭ್ರಷ್ಟಾಚಾರ ತಡೆಗಟ್ಟುತ್ತೇವೆ ಎಂಬುದೆಲ್ಲಾ, ನೋಟು ರದ್ದತಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಜನರ ಆಕ್ರೋಶ ತಣಿಸಲು ಬಳಸುತ್ತಿರುವ ಘೋಷಣೆಗಳಷ್ಟೆ. ಈ ಸತ್ಯ ಜನತೆಗೆ ಅರಿವಾಗುವಷ್ಟರಲ್ಲಿ, ಹಿಂತಿರುಗಲಾಗದಷ್ಟು ದೂರ ಕ್ರಮಿಸಿರುತ್ತೇವೆ. ಹಳಿ ತಪ್ಪಿದ ವ್ಯವಸ್ಥೆಯನ್ನು ಮತ್ತೆ ಹಳಿಗೆ ತರಲು ಹಲವು ವರ್ಷಗಳೇ ಬೇಕಾಗುತ್ತದೆ.
….
(30-11-2016)
ತಿಂಗಳಿಗೆ ಹತ್ತು ಸಾವಿರ ಮಾತ್ರ ತೆಗೆದು ಕೊಳ್ಳಬಹುದು!!
ಜನಧನ ಖಾತೆಗಳಿಂದ ತಿಂಗಳಿಗೆ ಹತ್ತು ಸಾವಿರ ಮಾತ್ರ ತೆಗೆದು ಕೊಳ್ಳಬಹುದೆಂಬ ಮತ್ತೊಂದು ಆದೇಶ ಬಂದಿದೆ. ಬಡ ರೈತರು ಕೂಲಿಕಾರ್ಮಿಕರು, ಅಸಂಘಟಿತ ಕಾರ್ಮಿಕರು ತಾವು ಬೆಳೆಮಾರಿ ಬಂದ ಹಣವನ್ನೋ, ಬೆಳೆಗಾಗಿ, ಮದುವೆ ಖರ್ಚಿಗಾಗಿ, ಮನೆ ದುರಸ್ತಿಗಾಗಿ, ಮನೆ ಕಟ್ಟುವ ಸಲುವಾಗಿ, ಹಬ್ಬ ಹರಿದಿನಗಳಿಗಾಗಿ, ಮತ್ಯಾವುದೊ ಕಾರ್ಯಕ್ಕಾಗಿ ಸಾಲಮಾಡಿಯೋ, ಕೂಡಿಸಿಯೋ ಮನೆಯಲ್ಲಿ ಹಣ ಇಟ್ಟಿದ್ದರೆ, ಅಥವಾ ಕಷ್ಟಪಟ್ಟು ಉಳಿತಾಯ ಮಾಡಿದ ಚೀಟಿಯಿಂದ ಬಂದ ಹಣವಿದ್ದರೆ, ಅಧಿಕ ಬಡ್ಡಿಯ ಸಾಲ ತೀರಿಸಲೆಂದೇ ಚೀಟಿ ಹಾಕಿ ಹೆಚ್ಚು ಹಣ ಬಿಟ್ಟು ಚೀಟಿಯಿಂದ ತೆಗೆದ ಹಣ ಇದ್ದರೆ, ಮಕ್ಕಳ ವಿಧ್ಯಾಭ್ಯಾಸಕ್ಕೆಂದು ಹಣ ಕೂಡಿಟ್ಟಿದ್ದರೆ, ಆ ಹಣದಲ್ಲಿ 500 ಮತ್ತು 1000 ಬೆಲೆಯ ನೋಟುಗಳಿದ್ದರೆ, ಎಲ್ಲವನ್ನೂ ಬ್ಯಾಂಕಿನ ನಿಮ್ಮ ಜನಧನ ಖಾತೆಗೆ ಹಾಕಲೇಬೇಕು. ಆದರೆ, ತಿಂಗಳಿಗೆ ಹತ್ತು ಸಾವಿರ ಮಾತ್ರ ಬ್ಯಾಂಕಿನಿಂದ ಹಿಂತಿರುಗಿ ಪಡೆಯಿರಿ. ಆ ಹತ್ತು ಸಾವಿರವನ್ನು ನೀವು ಆ ಹಣ ಪಡೆದ ಸಾಲಕ್ಕೆ ಬಡ್ಡಿ ಕಟ್ಟುತ್ತೀರೋ, ಚೀಟಿ ಕಟ್ಟುತ್ತೀರೋ ಆ ವಿಷಯ ನಿಮಗೆ ಬಿಟ್ಟಿದ್ದು. ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಲ್ಲಿಸುತ್ತೀರೋ, ಮದುವೆ ಮುಂದೂಡುತ್ತೀರೋ ಅಥವಾ ಬೆಳೆಯನ್ನು ಒಣಗಲು ಬಿಡುತ್ತೀರೋ ಅದು ನಿಮಗೆ ಬಿಟ್ಟಿದ್ದು. ನಿಮ್ಮ ಹಣ ಬ್ಯಾಂಕುಗಳ ಖಜಾನೆಯಲ್ಲಿ ಇರಬೇಕಷ್ಟೆ.
….
01-12-2026
ಮೋದಿಯವರು ನವೆಂಬರ್ 8ರ ರಾತ್ರಿ ಹೀಗೆ ಭಾಷಣ ಮಾಡಬಹುದಿತ್ತು:
ಐನೂರು ಮತ್ತು ಸಾವಿರದ ಹಳೆಯ ನೋಟುಗಳನ್ನು ರದ್ದು ಮಾಡಿದ್ದೇನೆ. ನಿಮ್ಮಲ್ಲಿರುವ ನೋಟುಗಳನ್ನು ಬದಲಾಯಿಸಿಕೊಳ್ಳಿ, ಕಪ್ಪುಹಣ ಹೊರ ತರುತ್ತೇನೆ, ಭ್ರಷ್ಟಾಚಾರ ತಡೆಗಟ್ಟುತ್ತೇನೆ, ಖೋಟಾನೋಟು ಚಲಾವಣೆ ನಿಲ್ಲಿಸುತ್ತೇನೆ’ ಎಂದು ಹೇಳುವ ಮೂಲಕ ಪ್ರಧಾನಿಯವರು ಸತ್ಯವನ್ನು ಮುಚ್ಚಿಟ್ಟು ಮಾತನಾಡುವ ಬದಲಾಗಿ, ನವೆಂಬರ್ 8ರ ರಾತ್ರಿ ಹೀಗೆ ಭಾಷಣ ಮಾಡಬಹುದಿತ್ತು.
‘ದೇಶವಾಸಿಗಳೇ, ನಿಮ್ಮಲ್ಲಿರುವ ಹಣವೆಲ್ಲವನ್ನೂ ಬ್ಯಾಂಕಿಗೆ ಹಾಕಿ, ಉದ್ಯಮಪತಿಗಳಿಗೆ ಬ್ಯಾಂಕುಗಳಿಂದ ಕೊಟ್ಟ ಸಾಲ ಹಿಂತಿರುಗಿ ಕೊಡುತ್ತಿಲ್ಲ. ಅವರು ತಮ್ಮ ವ್ಯವಹಾರ ವೃದ್ಧಿಸಿಕೊಳ್ಳಲು ಮತ್ತೆ ಸಾಲ ಕೇಳುತ್ತಿದ್ದಾರೆ. ಬ್ಯಾಂಕುಗಳ ಖಜಾನೆ ಬರಿದಾಗಿವೆ. ಉದ್ಯಮಪತಿಗಳ ಆಸೆ ಪೂರೈಸಲು ಬಡವರು ಮತ್ತು ಮಧ್ಯಮವರ್ಗದ ಜನರ ಸಹಕಾರ ಬೇಕು. ಸಹೋದರ, ಸಹೋದರಿಯರೇ, ನೀವು ಬ್ಯಾಂಕಿಗೆ ಹಾಕಿದ ಹಣವನ್ನು ಮತ್ತೆ ಬ್ಯಾಂಕಿನಿಂದ ಹಿಂಪಡೆಯಬೇಡಿ. ನಿಮ್ಮ ಹಳೆಯ ನೋಟುಗಳಿಗೆ ಹೊಸ ನೋಟುಗಳನ್ನು ಕೊಡುವಷ್ಟು ನೋಟು ಮುದ್ರಣ ಮಾಡುವುದಿಲ್ಲ. ಅದು ನಮ್ಮಿಂದ ಸಾಧ್ಯವಿಲ್ಲ ಎಂದಲ್ಲ. 2000 ಮುಖಬೆಲೆಯ ನೋಟುಗಳ ಮುದ್ರಣ ಮಾಡುವ ಯೋಜನೆ ನಿಮಗೆ ಈ ಮೊದಲೇ ತಿಳಿದಿರುತ್ತದೆ. ಆದರೆ, ಉದ್ದೇಶಪೂರ್ವಕವಾಗಿ ನಾವು ಮೊದಲೇ ಅಗತ್ಯವಿರುವಷ್ಟು ನೋಟುಗಳನ್ನು ಮುದ್ರಿಸಿಕೊಂಡಿಲ್ಲ. ಕಾರಣ, ಭಾರತವನ್ನು ಡಿಜಿಟಲ್ ಇಂಡಿಯಾ ಮಾಡುವ ಬಯಕೆ ನನ್ನದು ಎಂಬುದು ನಿಮಗೆ ಗೊತ್ತಿದೆ. ದೇಶವಾಸಿಗಳೇ, ನನ್ನ ಈ ಕನಸನ್ನು ಈಡೇರಿಸಲು ನಿಮ್ಮ ಸಹಕಾರ ಬೇಕಾಗಿದೆ. ತಾವೆಲ್ಲರೂ ‘ನಗದು ರಹಿತ ವ್ಯವಹಾರ’ ಮಾಡಲು ಮುಂದಾಗಿ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಪೇಟಿಎಂ ಮತ್ತು ಆನ್ಲೈಲ್ ಬಳಕೆಮಾಡಿ.
ಸಹೋದರ, ಸಹೋದರಿಯರೇ, ಇದರಿಂದ ನನ್ನ ಮತ್ತೊಂದು ಗುರಿ ಮುಟ್ಟಲು ಅನುಕೂಲವಾಗುತ್ತದೆಂದು ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಅದೇನೆಂದರೆ, ನಾನು ಪ್ರಧಾನಿಯಾದ ನಂತರ ಜಗತ್ತಿನ ಹಲವು ದೇಶಗಳಿಗೆ ಪ್ರವಾಸ ಮಾಡಿದ್ದು ನಿಮಗೆ ತಿಳಿದೇ ಇದೆ. ಎರಡು ಮುಖ್ಯ ಉದ್ದೇಶದಿಂದ ಇಷ್ಟೆಲ್ಲಾ ದೇಶಗಳನ್ನು ಸುತ್ತಿಬಂದೆ. ಅದರಲ್ಲಿ ಒಂದು ಉದ್ದೇಶ, ನಮ್ಮ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿ ಕೂಡಿಟ್ಟ ಹಣ ಮತ್ತು ನಮ್ಮ ದೇಶದ ಪ್ರಕೃತಿ ಸಂಪತ್ತನ್ನು ದೋಚಿ ಸಂಪಾದಿಸಿದ ಹಣದ ಜೊತೆಗೆ, ತೆರಿಗೆ ವಂಚಿಸಿ ಕೂಡಿಟ್ಟ ಲಕ್ಷಾಂತರ ಕೋಟಿ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಲು ಮಧ್ಯಸ್ಥಿಕೆ ವಹಿಸುವಂತೆ, ನಮ್ಮ ಪರಮ ಸ್ನೇಹಿತರಾದ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಬಳಗದವರು ನನ್ನನ್ನು ಕೇಳಿಕೊಂಡಿದ್ದರು. ನನ್ನ ಪರಿಶ್ರಮದಿಂದ ಅದು ಯಶಸ್ವಿಯೂ ಆಯಿತು. ಆದರೆ, ‘ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ’ಯ ನನ್ನ ಮನವಿಗೆ ವಿದೇಶಿ ಬಂಡವಾಳಗಾರರು ಸ್ಪಂದಿಸುತ್ತಿಲ್ಲ. “ದೇಶದ 125 ಕೋಟಿ ಜನರಲ್ಲಿ ಶೇ. 90 ರಷ್ಟು ಜನ ‘ನಗದು ಸಹಿತ ವ್ಯವಹಾರ’ ನಡೆಸುತ್ತಿದ್ದಾರೆ. ಕೇವಲ ಶೇ. 10 ರಷ್ಟಿರುವ ‘ನಗದು ರಹಿತ ವ್ಯವಹಾರಸ್ಥರನ್ನು ನಂಬಿ ಸಾವಿರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ಚಿಲ್ಲರೆ ವ್ಯಾಪಾರ ಮಾಡಲಾಗದು” ಎಂದು ಅವರು ಹೇಳುತ್ತಾರೆ. ಮತ್ತು ನಮ್ಮದೇ ದೇಶದ ಟಾಟಾ, ಬಿರ್ಲಾ, ರಿಲಯನ್ಸ್ ಕಂಪನಿಗಳು ಚಿಲ್ಲರೆ ವ್ಯಾಪಾರದಲ್ಲಿ ಸಾವಿರಾರು ಕೋಟಿ ರೂ ಬಂಡವಾಳ ಹೂಡಿಕೆ ಮಾಡಿರುವುದು ತಮಗೆಲ್ಲಾ ತಿಳಿದಿದೆ. ಇವರೆಲ್ಲರಿಗೂ ಗ್ರಾಹಕರನ್ನು ಒದಗಿಸಿಕೊಡುವುದು ಪ್ರಧಾನಿಯಾದ ನನ್ನ ಕರ್ತವ್ಯ. ಅದಕ್ಕಾಗಿ ನೀವೆಲ್ಲರೂ ಈ ಉದ್ಯಮಪತಿಗಳ ‘ಚಿಲ್ಲರೆ ವ್ಯಾಪಾರ’ದ ಗ್ರಾಹಕರಾಗಬೇಕೆಂದು ಮನವಿ ಮಾಡುತ್ತೇನೆ.
ಸಹೋದರ ಸಹೋದರಿಯರೇ, ದೇಶದ ರಕ್ಷಣೆಗಾಗಿ ತಮ್ಮ ಪ್ರಾಣ ಒತ್ತೆಯಿಟ್ಟು ಸೈನಿಕರು ಗಡಿಯಲ್ಲಿ ಕಾಯುತ್ತಿದ್ದಾರೆ. ಹಲವು ಸೈನಿಕರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ನೀವು ಕೂಡಿಟ್ಟ ನಿಮ್ಮ ಶ್ರಮದ ಫಲದಿಂದ ಬಂದ ಹಣವನ್ನಾದರೂ ತ್ಯಾಗಮಾಡಲು ಮತ್ತು ‘ನಗದು ರಹಿತ ವ್ಯವಹಾರ’ಕ್ಕೆ ಸಿದ್ದರಾಗಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೈಹಿಂದ್.
….
(02-12-2016)
“ಎತ್ತು ಕರು ಹಾಕಿತು ಅಂದ್ರೆ …”
ಟಿವಿ ಸ್ಟುಡಿಯೋಗೆ ಒಂದು ಕರೆಬಂತು. ಆ ಕಡೆಯಿಂದ ಮಾತನಾಡಿದ ವ್ಯಕ್ತಿಯೊಬ್ಬ, “ಸಾರ್ ಈ ಊರಲ್ಲಿ ಎತ್ತು ಕರು ಹಾಕಿದೆ.”
“ಹೌದಾ!” ಎನ್ನುತ್ತಾ ಟಿವಿ ಪರದೆಯ ಕೆಳಗೆ ‘ಬ್ರೇಕಿಂಗ್ ನ್ಯೂಸ್’ ಕಾಣಿಸಿಕೊಂಡಿತು.
‘ಕರು ಹಾಕಿದ ಎತ್ತು’ ಇದೊಂದು ಕಲಿಯುಗದ ವಿಶ್ಮಯಕಾರಿ ಘಟನೆ. ಈ ಬಗ್ಗೆ ಮತ್ತಷ್ಟು ತಿಳಿಯಲು ಮಧ್ಯಾಹ್ನ ಒಂದು ಗಂಟೆಯ ಕಾರ್ಯಕ್ರಮ ವೀಕ್ಷಿಸಿ.’
ಈ ‘ಬ್ರೇಕಿಂಗ್ ನ್ಯೂಸ್’ ನೋಡಿದ ಇನ್ನೂ ಕೆಲವು ಟಿವಿ ಚಾನಲ್ ಗಳು ‘ಎತ್ತು ಕರು ಹಾಕಿದ’ ಸುದ್ದಿಯನ್ನು ಬಿತ್ತರಿಸತೊಡಗಿದವು. ‘ರಾಜಕೀಯ ವಿಶ್ಲೇಷಕರು(?)’, ಪಂಚಾಂಗ ಹಿಡಿದ ‘ಜೋತಿಷಿಗಳು’, ‘ಪತ್ರಿಕಾ ಸಂಪಾದಕರು’, ಗೋರಕ್ಷಕ ‘ಸಂಘಪರಿವಾರದ ನಾಯಕರು’ ಟಿವಿ ಚಾನಲ್ ಗಳಲ್ಲಿ ಗಂಟೆಗಳ ಕಾಲ ಚರ್ಚೆಗೆ ಕುಳಿತರು.
ಎಲ್ಲಾ ಕಾಲದ ಮಹಿಮೆ. ಎರಡು ಸಾವಿರದ ನೋಟಿನಲ್ಲಿ ‘ಚಿಪ್ಸ್’ ಅಳವಡಿಸುವುದು ಸಾಧ್ಯವಾಗುವುದಾದರೆ, ಚುನಾವಣೆಯಲ್ಲಿ ಸಾವಿರಾರು ಕೋಟಿ ಕಪ್ಪುಹಣ ಚೆಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿಯಿಂದ ಕಪ್ಪುಹಣ ಹೊರತೆಗೆಯುವ ಘೋಷಣೆ ಮಾಡುವುದು ಸಾಧ್ಯವಾಗವುದಾರೆ, ರೈತರ ಕೃಷಿಭೂಮಿ ಕಿತ್ತು ಉದ್ಯಮಪತಿಗಳಿಗೆ ಕೊಡಲು, ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು 5 ಬಾರಿ ಸುಗ್ರೀವಾಜ್ಞೆ ಹೊರಡಿಸಿ ವಿಫಲವಾದ ಸರ್ಕಾರವೊಂದು, ‘ಎಲ್ಲರಿಗೂ ನಿವೇಶನ’ ಕೊಡುವ ಭರವಸೆ ನೀಡಬಹುದಾದರೆ, ಉದ್ಯಮಪತಿಗಳು ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡುವವರೇ, ಬೇನಾಮಿ ಆಸ್ತಿ ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಬಹುದಾದರೆ, ಬಂಡವಾಳಶಾಹಿ ವ್ಯವಸ್ಥೆಯನ್ನು ಪೋಷಿಸುವ ಬಲಪಂಥೀಯ ಪಕ್ಷದ ಸರ್ಕಾರವೊಂದು ‘ಜನರು ಚಿನ್ನ ಶೇಖರಣೆ ಮಾಡುವುದರ ಮೇಲೆ ಮಿತಿ’ ವಿಧಿಸುತ್ತದೆ ಎಂಬ ಪ್ರಚಾರವನ್ನು ನಂಬಬಹುದಾದರೆ, 500 ಕೋಟಿ ವೆಚ್ಚ ಮಾಡಿದ ಮದುವೆಯಲ್ಲಿ ಉಂಡು ಬಂದವರೇ ಭ್ರಷ್ಟಾಚಾರದ ವಿರುದ್ದ ಮಾತನಾಡಬಹುದಾದರೆ. ಗಡಿಯಲ್ಲಿ ಉಧ್ವಿಗ್ನತೆ ಸೃಷ್ಟಿಸುತ್ತಲೇ ಸೈನಿಕರ ಸಾವಿಗೆ ಕಣ್ಣೀರು ಸುರಿಸಬಹುದಾದರೆ, ಪಾಕಿಸ್ತಾದ ವಿರುದ್ದ ಜನರನ್ನು ಕೆರಳಿಸುತ್ತಲೇ ಪಾಕಿಗೆ ಹೋಗಿ ಕೇಕ್ ತಿಂದುಬರಲು ಸಾಧ್ಯವಾಗುವುದಾದರೆ,… ಎತ್ತು ಕರು ಹಾಕಿದ ಸುದ್ದಿಯನ್ನು ತಳ್ಳಿಹಾಕಲಾಗದು ಅಲ್ಲವೆ.
….
(08-12-2016)
ಹಣಕಾಸು ಸಚಿವರಿಗೂ ತಿಳಿದಿರಲಿಲ್ಲ ಎಂದ ಸಿಟಿ ರವಿ
ನೋಟು ರದ್ದತಿ ವಿಷಯ ಹಣಕಾಸು ಸಚಿವರಿಗೂ ತಿಳಿದಿರಲಿಲ್ಲ ಎಂದು ಸುಳ್ಳು ಹೇಳುವ ಯಡಿಯೂರಪ್ಪ, ಸಿ.ಟಿ. ರವಿ ಮತ್ತವರ ಪಟಾಲಂ ಗೆ> ಇಲ್ಲಿದೆ ನೋಡಿ ಸತ್ಯ. ರಿಸರ್ವ್ ಬ್ಯಾಂಕ್ ಗವರ್ನರ್ ಉರ್ಜಿತ್ ಪಟೇಲ್ ಅವರ ಹೇಳಿಕೆ ನೋಡಿ.
*ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಗ್ಗೆ ಅವಸರದಿಂದ ಆರ್ಬಿಐ ತೀರ್ಮಾನಕ್ಕೆ ಬಂದಿರಲಿಲ್ಲ.
*ಸರ್ಕಾರ ಮತ್ತು ಆರ್ಬಿಐ ಮಟ್ಟದಲ್ಲಿ ವಿಸ್ತೃತವಾದ ಚರ್ಚೆ ನಂತರವೇ ಈ ಅಸಾಮಾನ್ಯ ನಿರ್ಧಾರಕ್ಕೆ ಬರಲಾಗಿತ್ತು.
*ನೋಟು ರದ್ದತಿ ನಿರ್ಧಾರದ ಪರಿಣಾಮಗಳನ್ನು ಮುಂಚಿತವಾಗಿಯೇ ಸಮಗ್ರವಾಗಿ ಚರ್ಚಿಸಲಾಗಿತ್ತು.
*ನಿರ್ಧಾರ ಜಾರಿಗೆ ಬರುತ್ತಿದ್ದಂತೆ ಜನಸಾಮಾನ್ಯರಿಗೆ ಎದುರಾಗಲಿರುವ ಸಂಕಷ್ಟಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿತ್ತು.
(ಇನ್ನು ಉರ್ಜಿತ್ ಪಟೇಲ್ ಮುಚ್ಚಿಟ್ಟ ಸತ್ಯಗಳು>
*ನಾಗಪುರ ಕಛೇರಿಯ ಹಿರಿಯರ ಜೊತೆ ವಿಸ್ತೃತ ಚರ್ಚೆ ನಡೆದಿರುವ ಬಗ್ಗೆ.
*ಉದ್ಯಮಪತಿಗಳಿಂದ 7 ಲಕ್ಷ ಕೋಟಿ ಸಾಲ ಮರುಪಾವತಿಯಾಗದ ಕಾರಣ ಖಾಲಿಯಾದ ಬ್ಯಾಂಕುಗಳ ಖಜಾನೆ ತುಂಬಲು,
*ನಗದು ರಹಿತ ವ್ಯವಹಾರದ ವ್ಯವಸ್ಥೆ ರೂಪಿಸುವ ಗುರಿಯೊಂದಿಗೆ,
*ದೇಶೀಯ ಮತ್ತು ವಿದೇಶಿ ಬಂಡವಾಳಗಾರರ ‘ಚಿಲ್ಲರೆ ವ್ಯಾಪಾರ’ಕ್ಕೆ ಹೆಚ್ಚೆಚ್ಚು ಗ್ರಾಹಕರನ್ನು ಸೃಷ್ಟಿಮಾಡುವ ಗುರಿಯೊಂದಿಗೆ ನೋಟು ನಿಷೇದದ ತೀರ್ಮಾನಕ್ಕೆ ಬರಲಾಯಿತು ಎಂಬ ಸತ್ಯವನ್ನು ಉರ್ಜಿತ್ ಪಟೇಲ್ ಬಹಿರಂಗ ಪಡಿಸಲಿಲ್ಲ.)
….
(ಡಿಸೆಂಬರ್ 09, 2016)
ಅಪರೇಷನ್ ಮಾಡುವಾಗ ನೋವಾಗುತ್ತದೆಯಲ್ವಾ?
ಮೋದಿ ಭಕ್ತರೊಬ್ಬರು ಆಟೋ ಹತ್ತಿ ಕುಳಿತರಂತೆ, ಅಲ್ಲಿನ ಆಟೋದವರು ಒಬ್ಬರಿಂದ 10 ರೂ ಪಡೆದು ಮೂರ್ನಾಲ್ಕು ಪ್ರಯಾಣಿಕರನ್ನು ಕರೆದೊಯ್ಯುತ್ತಾರಂತೆ. ಚಾಲಕ ಮತ್ತೆ ಯಾರಾದರೂ ಪ್ರಯಾಣಿಕರು ಬರಬಹುದೆಂಬ ನಿರೀಕ್ಷೆಯಲ್ಲಿದ್ದಾಗ, ಆಟೋದಲ್ಲಿ ಕುಳಿತ ಭಕ್ತ ‘ನಡಿಯಣ್ಣ’ ಎಂದರಂತೆ. ಅದಕ್ಕೆ ಸಿಟ್ಟುಗೊಂಡ ಚಾಲಕ, ʼನೋಟು ರದ್ದತಿಯಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿ, ಆದಾಯ ಕಡಿಮೆಯಾಗಿದೆʼ ಎಂದು ಮೋದಿಯವರ ಬಗ್ಗೆ ಸಿಟ್ಟು ತೋರಿಸಿದನಂತೆ. ಚಾಲಕ ತನ್ನ ತಂದೆಗೆ ಕ್ಯಾನ್ಸರ್ ಖಾಯಿಲೆಗೆ ಚಿಕಿತ್ಸೆ ಕೊಡಿಸುವ ಬಗ್ಗೆ ತಿಳಿದುಕೊಂಡ ಆ ಭಕ್ತ ‘ಕ್ಯಾನ್ಸರ್ ವಾಸಿಮಾಡಲು ಅಪರೇಷನ್ ಮಾಡಲೇ ಬೇಕಲ್ಲ, ಅಪರೇಷನ್ ಮಾಡುವಾಗ ನೋವಾಗುತ್ತದೆಯಲ್ವಾ, ಇದೂ ಹಾಗೇನೆ, ಈಗ ಮೋದಿ ಅಪರೇಷನ್ ಮಾಡಿದ್ದಾರೆ, ಒಳ್ಳೆ ದಿನಕ್ಕಾಗಿ 50 ದಿನ ನೋವು ತಡೆದುಕೊಳ್ಳಬೇಕು’ ಎಂದು ಉಪದೇಶ ಮಾಡಿದರಂತೆ. ಈ ಪೋಸ್ಟ್ ಗೆ ನನ್ನ ಪ್ರತಿಕ್ರಿಯೆ ಹೀಗಿತ್ತು>
ಮಾ… ಅವರೆ, ಅಪರೇಶನ್ ನೋವನ್ನು ಆ ಬಡಪಾಯಿ ಆಟೋಚಾಲಕನೇ ಅನುಭವಿಸಬೇಕಾ? ಬೇರೆ ಪ್ರಯಾಣಿಕರು ಬರುವವರೆಗೆ ತಾವು 5 ನಿಮಿಷ ಕಾಯಲೂ ಸಿದ್ದರಿರಲಿಲ್ಲ. ಅಥವಾ ತಮ್ಮೊಬ್ಬರನ್ನೇ ಕರೆದುಕೊಂಡು ಹೋದ ಚಾಲಕನಿಗೆ ಆದ ನಷ್ಟ ತುಂಬಿಕೊಡಲಿಲ್ಲ. 30 ರೂ ಕೊಡಲು ಹೋದೆ, ಚಾಲಕ ತೆಗೆದುಕೊಳ್ಳಲಿಲ್ಲ ಎಂದು 20 ರೂ ಜೇಬಿಗೆ ಇಳಿಸಿಕೊಂಡಿರಿ. ದಿನಕ್ಕೆ ಇನ್ನೂರೋ ಮುನ್ನೂರೋ ಗಳಿಸುವ ಚಾಲಕನಿಗೆ, ಕಷ್ಟ ಆಗಬಹುದು, ಒಳ್ಳೆಯ ದಿನಗಳಿಗಾಗಿ ಸ್ವಲ್ಪ ಅನುಭವಿಸಬೇಕು ಎಂದು ಹೇಳುವ ನೀವೇಕೆ ಅಂತಹ ನೋವಿನಲ್ಲಿ ಪಾಲುದಾರಗಬಾರದು? ಬಡವರು ಮಾತ್ರ ನೋವು ಅನುಭವಿಸಬೇಕೇನು? 50 ದಿನಗಳ ನಂತರ ಆ ಆಟೋಚಾಲಕನಿಗೆ ಎಂಥ ಒಳ್ಳೆಯ ದಿನ ಬರುತ್ತದೆ? ಆತನ ಅದಾಯ 50 ದಿನಗಳ ಹಿಂದಿದ್ದ ಆದಾಯಕ್ಕಿಂತ ಹೆಚ್ಚಾಗುತ್ತದೆಯೇ? ಆತನ ತಂದೆಗೆ ಸರ್ಕಾರ ಉಚಿತ ಆರೋಗ್ಯ ಸೇವೆಯನ್ನೇನಾದರೂ ಕೊಡುತ್ತದೆಯೇ? ಆತನ ಕುಟುಂಬಕ್ಕೆ ಸ್ವಂತ ಮನೆಯನ್ನೇನಾದರೂ ಕೊಡುತ್ತದೆಯೇ? ಆತ ಖಾಸಗೀ ಲೇವಾದೇವಿಗಾರರಿಂದ ಮಾಡಿರುವ ಸಾಲವನ್ನು ತೀರಿಸುತ್ತದೆಯೇ? ಆಟೋಚಾಲಕರಿಗೆ ಎಂತಹ ಒಳ್ಳೆಯ ದಿನಗಳು ಬರುತ್ತವೆ?
….
(2016ರ ಡಿಸೆಂಬರ್, 14)
ಮೋದಿಯವರು ಹೇಳಿದ 50 ನೇ ದಿನದ ಕನಸು
ಡಿಸೆಂಬರ್ 28ರ ಮಧ್ಯರಾತ್ರಿ. ಎಲ್ಲಿ ನೋಡಿದರೂ ಹಬ್ಬದ ಸಂಭ್ರಮ. ಬೀದಿಯಲ್ಲಿ ಪಟಾಕಿಗಳ ಸದ್ದು. ಜನರು ಎಲ್ಲೆಡೆ ಸಂಭ್ರಮದಿಂದ ಕೇಕೆ ಹಾಕಿ ಕುಣಿಯತೊಡಗಿದ್ದಾರೆ. ಮನೆಗಳ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸಲಾಗಿದೆ. ದೇವಸ್ಥಾನಗಳಲ್ಲಿ ಗಂಟೆನಾದ ಮೊಳಗುತ್ತಿದೆ. ರಸ್ತೆಗಳು, ಕಟ್ಟಡಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿವೆ. ಹೆಂಗೆಳೆಯರು ಬಣ್ಣಬಣ್ಣದ ಸೀರೆಹುಟ್ಟು, ಮುಡಿತುಂಬ ಹೂ ಮುಡಿದು, ಕೈಯಲ್ಲಿ ಆರತಿ ತಟ್ಟೆ ಹಿಡಿದು ಸಂಭ್ರಮದಿಂದ ಕಾಯುತ್ತಿದ್ದಾರೆ. ಟಿವಿ ಮಾಧ್ಯಮಗಳು ಇಡೀ ದೇಶದ ಜನರ ಸಂಭ್ರಮವನ್ನು ನೇರಪ್ರಸಾರ ಮಾಡತೊಡಗಿವೆ. ‘ಒಳ್ಳೆಯ ದಿನ’ಗಳನ್ನು ಬರಮಾಡಿಕೊಳ್ಳಲು ದೇಶದ ಜನ ಕಾತುರದಿಂದ ಕಾಯುತ್ತಾ ನಿಂತಿದ್ದಾರೆ. ಮನೆ ಮನೆಗಳಲ್ಲಿ ನಾಳಿನ ಒಳ್ಳೆಯ ದಿನಗಳನ್ನು ನೆನೆದು ಸಂಭ್ರಮಿಸುವ ಚಿತ್ರಣ ಕಾಣತೊಡಗಿದೆ.
“70 ವರ್ಷಗಳಿಂದ ಅನುಭವಿಸಿದ ಸಂಕಷ್ಟ ಸಾಕಪ್ಪ”
“ನಾಳೆಯಿಂದ ನಮಗೆ ಹಸಿವು ಅನ್ನೋದೇ ಇರೋದಿಲ್ಲ. ಹೊಟ್ಟೆ ತುಂಬಾ ಊಟ ಮಾಡಬಹುದು”,
“ಮಕ್ಕಳೇ, ನಾಳೆಯಿಂದ ಸ್ಕೂಲ್ ಫೀಸ್ ಕಟ್ಟಿಲ್ಲ, ಪೆನ್ನು ಪುಸ್ತಕ ಇಲ್ಲ, ಒಳ್ಳೆ ಬಟ್ಟೆ ಇಲ್ಲ ಅಂತ ಚಿಂತೆಮಾಡೋ ಆಗಿಲ್ಲ. ಇವತ್ತು ರಾತ್ರಿ ಒಳ್ಳೆಯ ದಿನಗಳು ಬರ್ತವೆ”
“ಸದ್ಯ, ಆಸ್ಪತ್ರೆಗೆ ಕೊಡೋಕೆ, ಔಷಧಿ ತಗೋಳೋಕೆ ದುಡ್ಡಿಲ್ಲ ಅನ್ನೋ ಚಿಂತೆ ತಪ್ಪುತ್ತೆ. ಖಾಯಿಲೆಯಿಂದ ನರಳೋದೂ ತಪ್ಪುತ್ತೆ”
“ರೀ, ಆ ಸಾಲಕ್ಕೆ ಬಡ್ಡಿ ಕಟ್ಬೇಕು, ಈ ಸಾಲಕ್ಕೆ ಕಂತು ಕಟ್ಬೇಕು ಅನ್ನೋದೆಲ್ಲಾ ಇವತ್ತಿಗೇ ಮರೆತುಬಿಡಿ. ನಾಳೆಯಿಂದ ಒಳ್ಳೆಯ ದಿನಗಳೇ”
“ರೀ, ಸರಿಯಾಗಿ ವ್ಯಾಪಾರನೇ ಇಲ್ಲ ಅಂತ ಕೊರಗುತ್ತಿದ್ರಿ, ನಾಳೆಯಿಂದ ವ್ಯಾಪಾರ ಹೇಗಾಗುತ್ತೆ ನೋಡ್ತಾಯಿರಿ”
“ಸ್ವಂತ ಮನೆ ಇಲ್ಲ ಅಂತ ಇಷ್ಟು ದಿನ ಅನುಭವಿಸಿದ್ದು ಸಾಕಪ್ಪ. ನಾಳೆ ನಮಗೆ ಸ್ವಂತ ಮನೆ ಸಿಗುತ್ತೆ”
“ಉಳೋಕೆ ಸ್ವಂತ ಭೂಮಿ ಇಲ್ವಲ್ಲಾ ಅಂತ ಕೊರಗ್ತಾಯಿದ್ವಿ. ನಾಳೆ ನಮಗೆ ಐದು ಎಕ್ರೆ ಭೂಮಿ ಸಿಗುತ್ತೆ.”
“ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗ್ತಾಯಿಲ್ಲ ಅನ್ನೋ ಚಿಂತೆ ಇವತ್ತಿಗೇ ಕೊನೆ. ನಾಳೆಯಿಂದ ಬೆಳೆಗೆ ಲಾಭದಾಯಕವಾದ ಬೆಲೆ ಸಿಗುತ್ತೆ”
“ಡಿಗ್ರಿ ಮಾಡಿ ಎರಡು ವರ್ಷದಿಂದ ಕೆಲಸ ಹುಡುಕ್ತಾ ಅಲೆದಾಡ್ತಿದ್ದಲ್ಲೋ, ನೋಡ್ತಾ ಇರು, ನಾಳೆ ನಿನಗೆ ಒಳ್ಳೆಯ ಉದ್ಯೋಗ ಸಿಗುತ್ತೆ”
“ಕಂಪನಿಯವರು ಕೊಡೋ ಸಂಬಳ ಸಾಲೋದಿಲ್ಲ ಅಂತಿದ್ದೆಯಲ್ಲಾ, ನಾಳೆಯಿಂದ ಬದುಕಲು ಅವಶ್ಯಕವಾದ ಕನಿಷ್ಟ ವೇತನ ಸಿಗುತ್ತೆ ಚಿಂತೆಬಿಡು”
“ಕಂಪನಿಯವರು ಯಾವತ್ತು ಕೆಲಸದಿಂದ ವಜಾಮಾಡ್ತಾರೋ ಅನ್ನೋ ಚಿಂತೆ ಬಿಡು. ನಾಳೆಯಿಂದ ಉದ್ಯೋಗ ಭಧ್ರತೆ ಜಾರಿಗೆ ಬರುತ್ತೆ”.
ಹೀಗೆ ಪ್ರತಿಯೊಬ್ಬರ ಮನದಲ್ಲೂ ನಾಳೆಯ ಬಗ್ಗೆ ಆಶಾಭಾವನೆ ಮೂಡಿದೆ. ರಾತ್ರಿ 12 ಗಂಟೆ. ಗೋಡೆ ಗಡಿಯಾರ ‘ಡಣ್, ಡಣ್’ ಶಬ್ದಮಾಡತೊಡಗಿತು. ‘ಭಕ್ತರ” ಗುಂಪಿನ ಜೈಕಾರ ಮುಗಿಲು ಮುಟ್ಟಿತ್ತು.
‘ಜೈನಮೋ’,
“ಅವತಾರ ಪುರುಷ ನಮೋಗೆ ಜೈ”
“ಸಂಕಷ್ಟ ನಿವಾರಕ ನಮೋಗೆ ಜೈ”
ನಾನೂ ಆ ಗುಂಪಿನಲ್ಲಿ ಸೇರಿಕೊಂಡು ದ್ವನಿಗೂಡಿಸತೊಡಗಿದೆ. “ಜೈ ನಮೋ, ಜೈ ನಮೋ, ಜೈನ…
“ರೀ ರೀ. ಕೆಟ್ ಕನ್ಸೇನಾದ್ರೂ ಬೀಳ್ತಾ? ಅದ್ಯಾಕೆ ನಮೋ ನಮೋ ಅಂತ ಪೇಚಾಡ್ತಿದ್ದೀರಾ?” ಎಂದು ನನ್ನ ಮಡದಿ ಬಡಿದು ಎಬ್ಬಿಸಿದಾಗಲೇ ಗೊತ್ತಾಗಿದ್ದು ಇದೊಂದು ಮೋದಿ ಬಿತ್ತಿದ 50 ದಿನಗಳಲ್ಲಿ ಬರಲಿದೆ ಎಂಬ ‘#ಅಚ್ಚೇ_ದಿನ’ಗಳ ಕನಸು ಎಂಬುದು.
….
ತೊಂದರೆ ಆಗುತ್ತೆ. ಏನ್ಮಾಡೋಕಾಗುತ್ತೆ? ಪ್ರತಾಪ್ ಸಿಂಹ
ಅಂದು ನೋಟು ರದ್ದತಿಯಿಂದಾಗಿ ತಮ್ಮ ಬಳಿ ಇದ್ದ ಐನೂರು, ಸಾವಿರದ ನೋಟುಗಳನ್ನು ಬ್ಯಾಂಕ್ ಖಾತೆಗೆ ಹಾಕಿ, ಆ ಹಣವನ್ನು ಮತ್ತೆ ಹಿಂತಿರುಗಿ ಪಡೆಯಲು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ದಿನವೆಲ್ಲಾ ನಿಂತರೂ ಸರ್ಕಾರ ನಿಗದಿ ಮಾಡಿದ ಹಣವನ್ನಷ್ಟೇ ಪಡೆಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಜನಸಾಮಾನ್ಯರು ತಮ್ಮ ದೈನಂದಿನ ಖರ್ಚು ವೆಚ್ಚಗಳಿಗೆ ಹಣವಿಲ್ಲದೆ ಸಂಕಷ್ಟಗಳನ್ನು ಎದುರಿಸುತ್ತಿದ್ದ ದಿನಗಳವು. ಮೋದಿ ಸರ್ಕಾರದ ಇಂತಹ ನಿರ್ಧಾರದಿಂದಾಗಿ ಹಣ ಇಲ್ಲದೆ ಜನರು ಪರದಾಡುವ ಸ್ಥಿತಿ ಬಂದಿತ್ತು. ಅಗತ್ಯ ವಸ್ತುಗಳನ್ನು ಖರೀದಿಸಲು, ಮೊದಲೇ ನಿಗದಿಪಡಿಸಿದ ಮದುವೆ ಮಾಡಲು, ಕಟ್ಟುತ್ತಿದ್ದ ಕಟ್ಟಡಗಳ ಕೆಲಸ ಮುಂದುವರಿಸಲು ಜನರ ಬಳಿ ಹಣವಿರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಜನಪ್ರತಿನಿಧಿ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಜೊತೆಗೆ ಇಟಿವಿ ಚಾನಲ್ ನಲ್ಲಿ ಒಂದು ಸಂವಾದ ನಡೆಯಿತು. ಜನರ ಸಂಕಷ್ಟಗಳಿಗೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕಾದ ‘ಜನಪ್ರತಿನಿಧಿ’ಯ ಮಾತುಗಳು ಹೇಗಿದ್ದವು ಎಂಬುದನ್ನು ಒಮ್ಮೆ ನೋಡಿ >>
ETV ವರದಿಗಾರ ರಮಾಕಾಂತ> ಪ್ರತಾಪ್ ಸಿಂಹ ಅವರೆ, ನೋಟು ರದ್ದತಿಯಿಂದ ಜನರಿಗೆ ಇಷ್ಟೆಲ್ಲಾ ತೊಂದರೆ ಆಗುತ್ತೆ ಅಂತ ಮೊದಲೇ ತಿಳಿದಿರಲಿಲ್ವಾ?
ಪ್ರತಾಪ್ ಸಿಂಹ> ತೊಂದರೆ ಆಗುತ್ತೆ. ಜಯಲಲಿತಾ ಚೇತರಿಸಿಕೊಂಡಿದ್ದಾರೆ, ಡಿಸ್ಚಾರ್ಜ್ ಮಾಡ್ತೀವಿ ಅಂಥ ಡಾಕ್ಟರ್ ಹೇಳಿದ್ರು, ಆದ್ರೆ ಅವರು ಸತ್ತೇ ಹೋದ್ರು, ಏನ್ಮಾಡೋಕಾಗುತ್ತೆ?
ETV> ಸಂಸತ್ತಿನಲ್ಲಿ ಇನ್ನಾದರೂ ಚರ್ಚೆಗೆ ಅವಕಾಶ ಕೊಡಬಹುದಲ್ಲ. ರಾಹುಲ್ ಗಾಂಧಿಯವರಿಗೆ ಮಾತನಾಡಲು ಅವಕಾಶ ಕೊಡಬಹುದಲ್ಲ? ಮೋದಿ ತಪ್ಪೇ ಮಾಡಿಲ್ಲ ಅಂದ್ರೆ ಭಯ ಏಕೆ?
ಪ್ರತಾಪ್ ಸಿಂಹ> ಬ್ರಿಜೇಶ್ ಕಾಳಪ್ಪ ಇಲ್ಲಿ ಕೂತ್ಕೊಂಡು ಮೋದಿ ಬಗ್ಗೆ ಟೀಕೆ ಮಾಡ್ತಾರಲ್ಲಾ, ಇವರು ಯಾವ ಪಂಚಾಯ್ತಿ ಚುನಾವಣೆ ಎದುರಿಸಲಿಲ್ಲ. ಇಂತವರಿಗೆ ಮೋದಿಯವರನ್ನು ಟೀಕೆ ಮಾಡೋ ಅರ್ಹತೆ ಇಲ್ಲ…. ಪಾರ್ಲಿಮೆಂಟಲ್ಲೇ ಯಾಕೆ ಮಾತಾಡ್ಬೇಕು? ಅಗಸ್ಟಾ ಹಗರಣ ಕಾಂಗ್ರೆಸ್ ಮೇಲಿದೆ…. 2ಜಿ ಹಗರಣದಲ್ಲಿ ಚಿದಂಬರಂ ಜೈಲಿಗೋಗ್ತಾರೆ….
ನಮ್ಮ ಎಂಪಿ ಸಾಹೇಬ್ರು ಬ್ರಿಜೇಶ್ ಕಾಳಪ್ಪನವರಿಗೆ ಮತ್ತೊಂದು ಸಲಹೆ ಕೊಟ್ರು “ಗುಜರಾತ್ ಹತ್ಯೆ ಬಗ್ಗೆ ನೀವ್ಯಾಕೆ ಮಾತಾಡ್ತೀರಾ? ಅದನ್ನು ಗುಜರಾತಿನ ಪೋಲೀಸರು ಮತ್ತು ಗುಜರಾತಿನ ಕೋರ್ಟ್ ನೋಡ್ಕೊಳ್ಳುತ್ತೆ. ನೀವು ಕಾವೇರಿ, ಮಹದಾಯಿ ಬಗ್ಗೆ ಮಾತಾಡಿ ಸಾಕು.”
(‘ನೀವ್ಯಾಕೆ 2ಜಿ, ಅಗಸ್ಟಾ, ಕಲ್ಲಿದ್ದಲು ಹಗರಣದ ಬಗ್ಗೆ ಮಾತಾಡ್ತೀರಿ? ಅದನ್ನು ಸಿಬಿಐ ಮತ್ತು ಸುಪ್ರೀಂ ಕೋರ್ಟ್ ನೋಡ್ಕೊಳ್ಳುತ್ತೆ ಬಿಡಿ’ ಅಂಥ ಎಂಪಿ ಸಾಹೇಬರಿಗೆ ಹೇಳುವ ದಡ್ಡತನವನ್ನು ಯಾರೂ ತೋರಲಿಲ್ಲ.)
….
(19-12- 2016)
ನಂಬಿಕೆಗಳ ದುರುಪಯೋಗ
ಬಂಡವಾಳಶಾಹಿಗಳು ಮತ್ತು ಪುರೋಹಿತಶಾಹಿಗಳು ಜನರಲ್ಲಿನ ನಂಬಿಕೆಗಳನ್ನೂ ಹೇಗೆ ತಮ್ಮ ಆರ್ಥಿಕ ಹಿತಕ್ಕಾಗಿ ಮತ್ತು ಪ್ರಭುತ್ವದ ಮೇಲಿನ ತಮ್ಮ ಹಿಡಿತ ಸಾದಿಸಲು ದುರುಪಯೋಗ ಪಡಿಸಿಕೊಳ್ಳುತ್ತವೆ ಎಂಬುದಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಈ ಹೇಳಿಕೆಯೇ ಸಾಕ್ಷಿ.
“ನಮ್ಮನ್ನು ನೋಡಿ ವೆನಿಜುವೆಲಾ ನೋಟು ರದ್ದು ಮಾಡಿತು. ಆದರೆ, ಮರುದಿನವೇ ಅಲ್ಲಿ ದಂಗೆ ಶುರುವಾಯಿತು. ನಮ್ಮಲ್ಲಿ ತಿಂಗಳು ಕಳೆದ ಬಳಿಕವೂ ಯಾವುದೇ ಗಲಾಟೆ ನಡೆದಿಲ್ಲ. ನಮ್ಮ ಆರ್ಥಿಕ ವ್ಯವಸ್ಥೆ ಸಂಬಂಧ, ನಂಬಿಕೆಗಳ ಜೊತೆ ಬೆಸೆದುಕೊಂಡಿರುವುದು ಇದಕ್ಕೆ ಕಾರಣ.”
….
(25-12-2016)
ಕೆಲವರು ಮೋದಿಯವರ ಭರವಸೆಯ ಮಾತುಗಳನ್ನು ಎಷ್ಟು ನಂಬಿದ್ದಾರೆಂದರೆ, ಅದರ ವಿರುದ್ಧದ ಒಂದು ವಾಕ್ಯವನ್ನೂ ಸಹಿಸಿಕೊಳ್ಳಲಾರದೆ, ಅಂತವರ ವಿರುದ್ದ ಮುಗಿಬೀಳುತ್ತಾರೆ. ಬಿಜೆಪಿ ಸರ್ಕಾರ ಜನಸಾಮಾನ್ಯರ ಸಮಸ್ಯೆ ಪರಿಹಾರಕ್ಕಾಗಿ ನೋಟು ರದ್ದತಿ ಕ್ರಮ ಕೈಗೊಂಡಿಲ್ಲ. ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟು ಈ ಪದಗಳೆಲ್ಲಾ ನೋಟು ರದ್ದತಿಯಿಂದಾಗಿ ಸಂಕಷ್ಟ ಎದುರಿಸುವ ಜನರನ್ನು ಸಮಾಧಾನ ಪಡಿಸಲಷ್ಟೇ ಬಳಕೆ ಮಾಡಿಕೊಳ್ಳುತ್ತಿದ್ದಾರಷ್ಟೆ. ಅದನ್ನು ಮೋದಿಯವರು ಜನರ ಮನಮುಟ್ಟುವಂತೆ ಹೇಳುತ್ತಿದ್ದಾರಷ್ಟೆ (ಅಥವಾ ಆಳುವ ವರ್ಗ ಆ ರೀತಿ ಹೇಳಿಸುತ್ತಿದೆ) 8 ಲಕ್ಷ ಕೋಟಿ ವಸೂಲಾಗದ ಸಾಲದ (NPA) ಕಾರಣದಿಂದಾಗಿ ಖಾಲಿಯಾಗಿರುವ ಬ್ಯಾಂಕ್ ಖಜಾನೆ ತುಂಬುವುದು, ದೊಡ್ಡ ಉದ್ಯಮಿಗಳ ಮತ್ತು ವಿದೇಶಿ ನೇರ ಬಂಡವಾಳದ (FDI) ‘ಚಿಲ್ಲರೆ ವ್ಯಾಪಾರ’ಕ್ಕೆ ಹೆಚ್ಚು ಗ್ರಾಹಕರನ್ನು ಸೃಷ್ಟಿಮಾಡುವುದು, ಆ ಮೂಲಕ 1991 ರಲ್ಲಿ ನರಸಿಂಹರಾವ್ ಸರ್ಕಾರ ಸಹಿ ಮಾಡಿದ GATT ಒಪ್ಪಂದದಂತೆ ಜಾಗತೀಕರಣ, ಖಾಸಗೀಕರಣ ನೀತಿಗಳ ಜಾರಿ ಮತ್ತು ಮುಕ್ತಮಾರುಕಟ್ಟೆ ವ್ಯವಸ್ಥೆಯ ಷರತ್ತನ್ನು ಪೂರ್ಣಗೊಳಿಸುವುದು ಇವು ಈ ನೋಟು ರದ್ದತಿಯ ಕ್ರಮದ ಹಿಂದಿದೆ. ಈ ಸತ್ಯ ಜನಸಾಮಾನ್ಯರಿಗೆ ತಿಳಿಯುವಷ್ಟರಲ್ಲಿ ‘ಧರ್ಮರಕ್ಷಣೆ’ಯ ಹೆಸರಿನಲ್ಲೋ, ‘ದೇಶರಕ್ಷಣೆ’ಯ ಹೆಸರಿನಲ್ಲೋ ಜನರ ಭಾವನೆಗಳನ್ನು ಕೆರಳಿಸಿ, ಪ್ರಭುತ್ವದ ನೀತಿಗಳ ವಿರುದ್ಧ ಧ್ವನಿಯೆತ್ತದಂತೆ ಮಾಡುವ ಸಾಧ್ಯತೆಯೂ ಇದೆ. ಅಂತಹ ಕ್ರಮ ದೇಶದ ಹಿತಕ್ಕೆ ದೊಡ್ಡ ಪೆಟ್ಟು ಕೊಡುವ ಸಂಭವವೂ ಇದೆ.
….
26-12-2016
ನೋಟು ರದ್ದತಿ ಮತ್ತು ಕಪ್ಪುಹಣ
(2 ಲಕ್ಷಕ್ಕೂ ಹೆಚ್ಚು ಮೌಲ್ಯದ ಹಳೆಯ ನೋಟುಗಳನ್ನು ಬ್ಯಾಂಕಿನಲ್ಲಿ ಜಮಾ ಮಾಡುವವರ ‘ಆದಾಯ ಮೂಲ’ ತನಿಖೆ ಮಾಡುವುದಾಗಿ ಸುದ್ದಿಯಾಗುತ್ತಿದ್ದ ಸಮಯದಲ್ಲಿ, ನೋಟು ರದ್ದತಿಯ 49ನೇ ದಿನ ನನ್ನದೊಂದು ಬರಹ)
ಕಾರ್ಪೊರೇಟ್ ಕುಳಗಳ ಹತ್ತಿರ ಬಹಳಷ್ಟು ಕಾಳಧನವಿದೆ. ತೆರಿಗೆ ಕಟ್ಟದೇ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮೂಲಕ ಸ್ವಲ್ಪ ಹಣವನ್ನು ಬಿಳಿಯಾಗಿಸಿಕೊಳ್ಳುತ್ತಾರೆ. ಸ್ವಲ್ಪ ಭಾಗದ ಕಪ್ಪುಹಣವನ್ನು ತನ್ನ ಪರವಾಗಿ ನೀತಿ ನಿಯಮ ಜಾರಿಗೆ ತರುವ ರಾಜಕೀಯ ಪಕ್ಷಗಳಿಗೆ ಅನಧಿಕೃತ ದೇಣಿಗೆ ನೀಡುವುದು, ವಿದೇಶಗಳಲ್ಲಿ ಉದ್ಯಮ ಸ್ಥಾಪನೆ ಮಾಡುವಾಗ ವಿದೇಶದಲ್ಲಿರುವ ಕಪ್ಪುಹಣವನ್ನೂ ಹೂಡಿಕೆ ಮಾಡುವುದು, ಈ ರೀತಿಯಾಗಿ ಕಾರ್ಪೊರೇಟ್ ಕುಳಗಳು ಕಪ್ಪುಹಣವನ್ನು ಬಳಕೆ ಮಾಡಿಕೊಳ್ಳುತ್ತಾರೆ. ವಿದೇಶದಲ್ಲಿರುವ ಕಪ್ಪುಹಣ ಡಾಲರ್ ರೂಪದಲ್ಲಿ ಇರುತ್ತವೆ. ಆಮದು ಮತ್ತು ರಪ್ತಿನ ಕಳ್ಳ ಲೆಕ್ಕದಲ್ಲೂ ಈ ಕಪ್ಪುಹಣ ಶೇಖರಣೆಯಾಗುತ್ತದೆ. ಉದಾಹರಣೆಗೆ, ಬಳ್ಳಾರಿಯಿಂದ ಚೀನಾ ದೇಶಕ್ಕೆ ನೂರು ಟನ್ ಅದಿರು ರಪ್ತು ಮಾಡಿದ ಕಂಪನಿಯೊಂದು ಸರ್ಕಾರಕ್ಕೆ 70 ಟನ್ ಮಾತ್ರ ರಪ್ತು ಮಾಡಿರುವುದಾಗಿ ಸುಳ್ಳು ಲೆಕ್ಕ ಕೊಡುತ್ತದೆ ಎಂದುಕೊಳ್ಳೋಣ. ಸರ್ಕಾರದ ಲೆಕ್ಕಕ್ಕೆ ಬಾರದ ಉಳಿದ 30 ಟನ್ ಅದಿರಿನ ಮೌಲ್ಯ ಕಪ್ಪುಹಣವಾಗುತ್ತದೆ ಮತ್ತು ಆ ಹಣದ ಬಹುಪಾಲನ್ನು ವಿದೇಶಿ ಬ್ಯಾಂಕುಗಳಲ್ಲಿ ಕೂಡಿಡುತ್ತಾರೆ. ಅಂಬಾನಿ ಕುಟುಂಬ, ಅದಾನಿ, ಟಾಟಾ, ಬಿರ್ಲಾ ರಂತಹ ದೊಡ್ಡ ಉದ್ಯಮಪತಿಗಳೂ ಆಮದು ಮತ್ತು ರಪ್ತುಗಳ ಹೆಸರಿನಲ್ಲಿ ಸರ್ಕಾರಕ್ಕೆ ನಿರಂತರವಾಗಿ ತೆರಿಗೆ ವಂಚಿಸುತ್ತಲೇ ಇರುತ್ತಾರೆ. ಇಂತಹ ದೊಡ್ಡ ಖದೀಮರನ್ನು ಬಿಟ್ಟು, ಕಷ್ಟಪಟ್ಟು ಕೂಡಿಟ್ಟಿದ್ದ ಒಂದೆರೆಡು ಲಕ್ಷ ಮೌಲ್ಯದ ಹಳೆಯ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡುವ ಬಡವರನ್ನು ಅನುಮಾನದಿಂದ ನೋಡುವುದು ಎಷ್ಟು ಸರಿ? ಲಂಚ ಪಡೆದೋ, ಭ್ರಷ್ಟಾಚಾರದಿಂದ ಅಕ್ರಮ ಸಂಪತ್ತು ಕೂಡಿಟ್ಟಿರುವ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಸ್ವಾಗತಿಸೋಣ. ಆದರೆ, ಅದು ನಿಷ್ಪಕ್ಷಪಾತವಾಗಿ ಎಲ್ಲಾ ಭ್ರಷ್ಟಾಚಾರಿಗಳ ಮೇಲೆ ಕ್ರಮಕೈಗೊಳ್ಳಬೇಕಲ್ಲವೆ? ಮಂದಿರ, ಮಸೀದಿ ಮತ್ತು ಚರ್ಚುಗಳಲ್ಲಿ ಇರುವ ಕಪ್ಪುಹಣ ಹೊರತರಲು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲವೇಕೆ? ರಾಜಕೀಯ ಪಕ್ಷಗಳು ಮತ್ತು ಆರ್.ಎಸ್.ಎಸ್ ನಂತಹ ಸಂಘಟನೆಗಳು ಕೂಡಿಟ್ಟಿರುವ ಕಪ್ಪುಹಣದ ಬಗ್ಗೆ ಕ್ರಮವೇಕಿಲ್ಲ. ನೋಟು ನಿಷೇಧದ ಪರವಾಗಿ ವ್ಯಾಪಕ ಪ್ರಚಾರ ಮಾಡುತ್ತಿರುವ ಸಂಘಪರಿವಾರ ತನ್ನಲ್ಲಿರುವ ಸಾವಿರಾರು ಕೋಟಿ ಹಣವನ್ನು ಬಹಿರಂಗ ಪಡಿಸುತ್ತಿಲ್ಲವೇಕೆ? ಭ್ರಷ್ಟ ಉದ್ಯಮಪತಿಗಳಿಂದ, ರಾಜಕಾರಣಿಗಳಿಂದ, ಅಧಿಕಾರಿಗಳಿಂದ, ವಿದೇಶದಿಂದ ಆರ್.ಎಸ್.ಎಸ್ ಖಜಾನೆಗೆ ಬಂದ ದೇಣಿಗೆ ಎಷ್ಟು? ಈ ಬಗ್ಗೆ ಸ್ವಯಂ ಸೇವಕರು ಪ್ರಶ್ನೆ ಮಾಡುವ ಧೈರ್ಯ ತೋರಿಸುತ್ತಾರೆಯೇ? ಬೃಹತ್ ಮೊತ್ತದ ಇಂತಹ ಖಜಾನೆಗಳನ್ನು ಬಿಟ್ಟು ಅದ್ಯಾವ ಕಪ್ಪುಹಣ ಹೊರತರಲಾದೀತು.
….
27-12-2016
ಕಪ್ಪುಹಣ ಹೊರತೆಗೆಯಲು RSS ಬೆಂಬಲ!!
‘ಕಪ್ಪುಹಣ ಹೊರತೆಗೆಯಲು ನೋಟು ನಿಷೇದಿಸಲಾಗಿದೆ’ ಎಂಬ ಮೋದಿಯವರ ಮಾತಿಗೆ ವ್ಯಾಪಕ ಬೆಂಬಲ ಕೊಡುವ RSS, ತನ್ನಲ್ಲಿರುವ ಸಾವಿರಾರು ಕೋಟಿ ಸಂಪತ್ತನ್ನು ಬಹಿರಂಗ ಪಡಿಸುತ್ತಿಲ್ಲವೇಕೆ? ಸಂಘಕ್ಕೆ ಉದ್ಯಮಿಗಳಿಂದ, ಗುತ್ತಿಗೆದಾರರಿಂದ, ಅಧಿಕಾರಿಗಳಿಂದ, ವಿದೇಶದಿಂದ ಬರುತ್ತಿರುವ ದೇಣಿಗೆಗಳು ಎಷ್ಟು? ನೋಟು ನಿಷೇದದ ನಂತರ ತನ್ನಲ್ಲಿದ್ದ ಐನೂರು ಮತ್ತು ಸಾವಿರದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿ ಕೊಂಡಿದ್ದು ಹೇಗೆ? ಸಂಘಪರಿವಾರಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಕರು ತಮ್ಮ ಮಾತೃ ಸಂಸ್ಥೆಗೆ ಈ ಪ್ರಶ್ನೆ ಹಾಕುವ ಧೈರ್ಯ ತೋರುವರೆ?
RSS ನ ಖಜಾನೆಯಲ್ಲಿ ತೆರಿಗೆ ಕಟ್ಟದ ಸಾವಿರಾರು ಕೋಟಿ ಹಣ ಇದೆ ಎಂಬುದಕ್ಕೆ 24 ವರ್ಷಗಳ ಕಾಲ RSS ನಲ್ಲಿದ್ದು ‘ಪ್ರಚಾರಕ್’ ಆಗಿದ್ದ ಸುಧೀಶ್ ಮಿನ್ನಿ ಅವರ ‘ನರಕದ ಗರ್ಭ ಗುಡಿಯೊಳಗೆ’ ಪುಸ್ತಕದ ಈ ಸಾಲುಗಳೇ ಸಾಕ್ಷಿ. “ಈ ಸಂಘ (RSS) ಕೋಟ್ಯಾಂತರ ರೂಪಾಯಿಗಳ ಆಸ್ತಿಯಿರುವ, ಲೋಕದಲ್ಲೇ ಒಂದು ಬೃಹತ್ ಸಂಸ್ಥೆ. ಹಣದ ಸುಖ ಲೋಲುಪತೆಯಲ್ಲಿ ಅದರ ಅಧಿಕಾರಿಗಳು ಕಾಲ ಕಳೆಯುತ್ತಿದ್ದಾರೆ. ಗುರುದಕ್ಷಿಣೆ ಎನ್ನುವ ವರ್ಷದಲ್ಲೊಮ್ಮೆ ನಡೆಯುವ ‘ಆಚಾರಕ್ರಮ’ದಿಂದಾಗಿ ಕೋಟಿ ಕೋಟಿ ರೂಪಾಯಿಗಳನ್ನು ಸಂಘವು ಸಂಗ್ರಹ ಮಾಡುತ್ತದೆ. ಇದಕ್ಕೆ ತೆರಿಗೆ ಪಾವತಿಸುವುದಿಲ್ಲ. ಗುರುವಾದ ಭಗವದ್ ಪತಾಕೆಯ ಮುಂದೆ ಒಬ್ಬ ಸ್ವಯಂ ಸೇವಕನು ಪ್ರತಿ ದಿವಸ ತನ್ನ ಸಂಪಾದನೆಯ ಒಂದಷ್ಟು ಭಾಗವನ್ನು ತೆಗೆದಿಟ್ಟು ಗುರುದಕ್ಷಿಣೆಯಾಗಿ ಧ್ವಜದ ಮುಂದೆ ಇಡಲಾಗುವುದು. ಕೇರಳದ ಕೇವಲ ಒಂದು ಜಿಲ್ಲೆಯಲ್ಲೇ 17 ಕೋಟಿ ರೂ ಒಂದು ವರ್ಷಕ್ಕೆ ಲಭ್ಯವಾಗುತ್ತೆ. ಕೇರಳದ ದೊಡ್ಡ ದೊಡ್ಡ ವ್ಯಾಪಾರಸ್ತರೂ, ಕಾಂಟ್ರಾಕ್ಟುದಾರರೂ, ಅಧಿಕಾರಿಗಳೂ ದೊಡ್ಡ ಮೊತ್ತವನ್ನು ಗುರುದಕ್ಷಿಣೆ ಎನ್ನುವ ಹೆಸರಿನಲ್ಲಿ ನೀಡುತ್ತಾರೆ. ಈ ಮೊತ್ತದಲ್ಲಿ ಸಣ್ಣ ಭಾಗವನ್ನು ಕೇರಳಕ್ಕಾಗಿ ತೆಗೆದುಕೊಂಡು ಉಳಿದ ಮೊತ್ತವನ್ನು ನಾಗಪೂರಿಗೆ ಕಳುಹಿಸುತ್ತಾರೆ. ಅತಿ ಹೆಚ್ಚು ಗುರುದಕ್ಷಿಣೆ ಗುಜರಾತಿನಿಂದ ಸಂಗ್ರಹವಾಗುತ್ತದೆ. ಗುಜರಾತಿನಿಂದ ಸುಮಾರು 1000 ಕೋಟಿ ರೂ ಸಂಗ್ರಹವಾಗುತ್ತದೆ. ಇಷ್ಟೊಂದು ಭಾರಿ ಹಣದಿಂದ ಇವರು ಯಾವುದೇ ಸಮಾಜಸೇವೆಯ ಕಾರ್ಯ ಮಾಡುವುದಿಲ್ಲ. ಹೀಗೆ ದೊರೆಯುವ ಅಪಾರ ಹಣವನ್ನು ಉಪಯೋಗಿಸಿಕೊಂಡು ಎಲ್ಲ ರೀತಿಯ ಪಿತೂರಿ ಒಳಸಂಚುಗಳನ್ನು ದೇಶಾದ್ಯಂತ ನಡೆಸುತ್ತಾರೆ….”
….
(29-12-2016)
ಬಡಜನರಿಗೆ ಸ್ವರ್ಗವನ್ನೇ ಸೃಷ್ಟಿಮಾಡುತ್ತಾರೆ…
ಜನಸಾಮಾನ್ಯರು ನೋಟು ನಿಷೇದದಿಂದ ಸಂಕಷ್ಟ ಅನುಭವಿಸುತ್ತಿದ್ದರೂ ಆಕ್ರೋಶ ಅದುಮಿಟ್ಟುಕೊಂಡದ್ದೇಕೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ, ಮೋದಿಯವರು ಬಡಜನರಿಗೆ ಸ್ವರ್ಗವನ್ನೇ ಸೃಷ್ಟಿಮಾಡುತ್ತಾರೆ ಎಂಬ ಪ್ರಚಾರ ಗುಪ್ತಗಾಮಿನಿಯಾಗಿ ಹರಿಯಬಿಡಲಾಗಿದೆ ಎಂಬುದು ತಿಳಿಯುತ್ತದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ.
ನನ್ನ ಪತ್ನಿಯ ಸ್ನೇಹಿತೆಯೊಬ್ಬಳು ಹೂವು ಮಾರುತ್ತಾಳೆ. ಇವರಿಬ್ಬರ ನಡುವೆ ನಡೆದ ಮಾತುಗಳಿವು.
ಸ್ನೇಹಿತೆ> ಅಕ್ಕ ನೀವೂ ಸೈಟಿಗೆ ಹೆಸರು ಬರೆಸಿದ್ರಾ?
ನನ್ನಾಕೆ> ಇಲ್ಲ ರಾಧಾ, ಅವೆಲ್ಲಾ ಸುಳ್ಳು. ಸುಮ್ನೆ ಯಾಕೆ ಆಸೆ ಇಟ್ಕೋತೀಯಾ?
ಸ್ನೇ> ಇಲ್ಲಕ್ಕ, ಮೋದಿ ಎಲ್ಲಾ ಬಡವರಿಗೂ ಮನೆ ಕೊಟ್ತಾರಂತೆ. ಕಂಪ್ಯೂಟರ್ ಅಂಗಡಿಯ ಮುಂದೆ ಬೋರ್ಡ್ ಹಾಕಿದೆ ನೋಡಿಲ್ವ? 100 ರೂಪಾಯಿ ಕೊಟ್ಟು ನಾನೂ ಅಪ್ಲಿಕೇಷನ್ ಹಾಕ್ದೆ.
ನ> ಬೋರ್ಡ್ ಹಾಕಿದ್ದಾರೆ ನಾನೂ ನೋಡ್ದೆ ರಾಧಾ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಎಲ್ಲರಿಗೂ ಮನೆ ಅಂಥ ಸರ್ಕಾರ ಘೋಷಣೆ ಮಾಡಿದೆ. ಇದೊಂಥರಾ ಇಂದಿರಾಗಾಂಧಿ ‘ಗರೀಬಿ ಹಟಾವೊ’ ಘೋಷಣೆ ಇದ್ದಹಾಗೆ. ಇಷ್ಟು ವರ್ಷ ಬಡತನ ಅಂತೂ ಹೋಗ್ಲಿಲ್ಲ ಅಲ್ವಾ?
ಸ್ನೇ> ಅಯ್ಯೋ ನಿಮಗೆ ಗೊತ್ತಿಲ್ಲ ಅನ್ಸುತ್ತೆ. ಅಲ್ಲೆಲ್ಲೋ ಬಡವರಿಗೆ ಮನೆ ಕೊಟ್ಟಿದ್ದಾರಂತೆ.
ನ> ಹೌದು, ಆಶ್ರಯ ಯೋಜನೆಯಲ್ಲಿ ಹಿಂದಿನಿಂದಲೂ ಕೆಲವರಿಗೆ ಮನೆ ಕಟ್ಟಿಕೊಳ್ಳಲು ಧನ ಸಹಾಯ ಮಾಡಿದ್ದಾರೆ. ಮನೆ ಕಟ್ಟಲು ಬ್ಯಾಂಕಿನಿಂದ ಪಡೆಯುವ 6 ಲಕ್ಷದವರೆಗಿನ ಸಾಲಕ್ಕೆ ಬಡ್ಡಿ ರಿಯಾಯಿತಿ ಕೊಡ್ತಾರೆ. ಎಸ್ಸಿ ಎಸ್ಟಿ ಕುಟುಂಬ ಮನೆ ಕಟ್ಟಿದರೆ ಒಂದಷ್ಟು ಸಹಾಯಧನ ಸಿಗುತ್ತೆ. ಅದಕ್ಕೂ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಒಂದಷ್ಟು ಹಣ ಮೀಸಲಿಟ್ಟಿವೆ. ಇಲ್ಲೇ ಪಕ್ಕದ ಏರಿಯಾದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸ್ಲಂ ಗಳಲ್ಲಿ ವಾಸಮಾಡುತ್ತಿದ್ದವರಿಗೆ ಮನೆ ಕಟ್ಟಿಸಿಕೊಟ್ಟಿಲ್ವಾ? ಹಾಗೆ ಮೋದಿಯವರ ‘ಪ್ರಧಾನ ಮಂತ್ರಿ ಅವಾಸ್ ಯೋಜನೆ’ಯ ‘ಎಲ್ಲರಿಗೂ ಮನೆ’ ಎಂಬ ಘೋಷಣೆಯಂತೆ ಎಲ್ಲರಿಗೂ ಮನೆ ಸಿಗಲಾರದು.
ಸ್ನೇ> ನೀವಂತೂ ನಂಬಲ್ಲ ಬಿಡಿ. ಒಂದ್ ಅರ್ಜಿ ಹಾಕ್ಬಿಡಿ. ಬಂದ್ರೆ ಅದೃಷ್ಟ, ಹೋದ್ರೆ 100 ರೂಪಾಯಿ ತಾನೆ. ಅಕ್ಕ, ನೀವು ಜನಧನ ಯೋಜನೆಯಲ್ಲಿ ಬ್ಯಾಂಕ್ ಅಕೌಂಟ್ ಮಾಡ್ಸಿದ್ದೀರಾ?
ನ> ಇಲ್ಲ ರಾಧಾ, ನಾವು ಮೊದಲೇ ಬ್ಯಾಂಕ್ ಅಕೌಂಟ್ ಮಾಡಿಸಿದ್ವಿ.
ಸ್ನೇ> ಅದೂ ಇರ್ಲಿ, ಒಂದ್ ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡ್ಸಿ ಅಕ್ಕ.
ನ> ಯಾಕೆ?
ಸ್ನೇ> ಅಯ್ಯೋ ಅದೂ ಗೊತ್ತಿಲ್ವಾ ನಿಮಗೆ? ಈಗ ಮೋದಿ ಬ್ಲಾಕ್ ಮನಿ ಹಿಡಿತಿದ್ದಾರಲ್ಲಾ, ಅದುನ್ನೆಲ್ಲಾ ಬಡವರಿಗೆ ಹಂಚ್ತಾರಂತೆ. ಜೀರೋ ಬ್ಯಾಲೆನ್ಸ್ ಅಕೌಂಟಿಗೆ ಎರಡೆರಡು ಲಕ್ಷ ಹಾಕ್ತಾರಂತೆ.
ನ> (ನಗು)
ಸ್ನೇ> ಹೇಳುದ್ರೆ ನಗ್ತೀರಿ. ನಾನೇಳ್ತಾ ಇರೋದು ಸತ್ಯ ಅಕ್ಕ. ತುಂಬಾ ಜನ ಬಡವರ ಅಕೌಂಟಿಗೆ ಎರೆಡೆರಡು ಲಕ್ಷ ಹಾಕಿದ್ದಾರಂತೆ. ಆದ್ರೆ ನಾಲಕ್ಕು ವರ್ಷ ಆ ದುಡ್ಡನ್ನ ತಗೋಬಾರ್ದಂತೆ. ನೀವೂ ಒಂದು ಜೀರೋ ಬ್ಯಾಲೆನ್ಸ್ ಅಕೌಂಟ್ ಮಾಡ್ಸಿ ಅಕ್ಕ.
ನ> ಅಲ್ಲಾ ರಾಧಾ, ನಿಮ್ಮತ್ರ ಐನೂರು ಮತ್ತು ಸಾವಿರದ ನೋಟು ಎಷ್ಟಿತ್ತು?
ಸ್ನೇ> ಐನೂರರದ್ದು 148 ನೋಟಿತ್ತು, ಒಟ್ಟು 74 ಸಾವಿರ ಇತ್ತು. ಚೀಟಿ ಎತ್ತಿಕೊಂಡಿದ್ದ ದುಡ್ಡನೆಲ್ಲಾ ಮನೇಲೆ ಇಟ್ಟಿದ್ವಿ. ಬ್ಯಾಂಕಿಗೆ ಹಾಕಿ ಬಂದ್ವಿ, ಮನೆಬಾಡಿಗೆ ಕಟ್ಟೊಕೆ, ಸ್ಕೂಲ್ ಫೀಜ್ ಕಟ್ಟೊಕೆ, ಸ್ತ್ರೀಶಕ್ತಿ ಸಂಘದ ಕಂತು ಕಟ್ಟೋಕೆ ಅಂಥ ಸ್ವಲ್ಪ ಹಣ ವಾಪಸ್ ತಗೊಂಡ್ವಿ. ಎಲ್ಲಾ ಹಣ ಡ್ರಾ ಮಾಡ್ಕೊಂಡು ವ್ಯವಹಾರಕ್ಕೆ ಹಾಕೋಣ ಅಂದ್ರೆ, ಅದೆಷ್ಟೊ ಹಣಕ್ಕಿಂತ ಹೆಚ್ಚಿಗೆ ಹಣ ಡ್ರಾ ಮಾಡೊಹಾಗಿಲ್ಲ ಅಂಥ ಬ್ಯಾಂಕಿನವರು ಹೇಳ್ತಾರೆ.
ನ> ನೋಡ್ದಾ, ನಮ್ಮ ಹಣಾನೇ, ನಮಗೇ ಬೇಕಾದ ಸಮಯಕ್ಕೆ ಕೊಡ್ತಾಯಿಲ್ಲ ಅಂದ್ರೆ, ಅದ್ಯಾರೋ ಕೂಡಿಟ್ಟಿರೋ ಬ್ಲಾಕ್ಮನಿ ಕಿತ್ತು ನಮ್ ಅಕೌಂಟ್ಗೆ ಹಾಕ್ತಾರೆ ಅಂತ ಅದ್ಯಾಗೆ ನಂಬ್ತೀಯಾ?
ಸ್ನೇ> ನೀವು ನನ್ ಮಾತ್ ನಂಬಲ್ಲ ಬಿಡಿ. ಜನ ಹೇಳ್ತಿರೋದು ಸುಳ್ಳಾ? ಮೋದಿ ಬಡವರಿಗೆ ಸಹಾಯ ಮಾಡೇ ಮಾಡ್ತಾರೆ ನೋಡ್ತಾಯಿರಿ.
ಎನ್ನುತ್ತಾ ಅಲ್ಲಿಂದ ಹೊರಟಳು. ಜನರ ಆಕ್ರೋಶ ತಣ್ಣಗೆ ಮಾಡಲು ಮೋದಿ ಅಭಿಮಾನಿಗಳು ಜನರಿಗೆ ಸ್ವರ್ಗದ ಆಸೆ ತೋರಿಸಿದ್ದಾರೆ. ’50 ದಿನ ಸಮಯ ಕೊಡಿ’ ಎಂಬ ಮೋದಿ ಮತ್ತು ಬಿಜೆಪಿ ನಾಯಕರ ಮಾತುಗಳ ಮೇಲೆ ಜನ ಭರವಸೆ ಇಟ್ಟು ಎಲ್ಲಾ ಸಂಕಷ್ಟಗಳನ್ನೂ ಸಹಿಸಿಕೊಂಡು ‘ಒಳ್ಳೆಯ ದಿನಗಳು’ ಬಂದೇ ಬರುತ್ತವೆ ಎಂದು ಕಾಯುತ್ತಿದ್ದಾರೆ.
…..
(8-1-2017)
ಮಾದ್ಯಮಗಳು ಮೋದಿಯವರ ಕ್ರಮವನ್ನು ಬೆಂಬಲಿಸಲಿಲ್ಲವೇ!!
ನೋಟು ರದ್ದತಿ ವಿಷಯದಲ್ಲಿ ಮಾದ್ಯಮಗಳು ಮೋದಿಯವರ ಕ್ರಮವನ್ನು ಬೆಂಬಲಿಸಲಿಲ್ಲ ಎಂದು ಕೆಲ ಭಕ್ತರು ಹೇಳತೊಡಗಿದ್ದಾರೆ. ಮಾದ್ಯಮಗಳು ಇದನ್ನು ನೇರವಾಗಿ ಮತ್ತು ಪರೋಕ್ಷವಾಗಿ ಬೆಂಬಲಿಸಿವೆ. ಮೋದಿ ಕ್ರಮದ ವಿರುದ್ದ ಮಾತನಾಡುವವರನ್ನು ಭಯೋತ್ಪಾದಕರ ಬೆಂಬಲಿಗರೆಂದೂ, ಭ್ರಷ್ಟಾಚಾರಿಗಳೆಂದೂ ಹೇಳಿವೆ. ಕೆಲವೇ ಸಾವಿರ ಜನರ ಸಂದರ್ಶನ ಮಾಡಿ, ಮೋದಿಗೆ ದೇಶದ ಶೇ. 99ರಷ್ಟು ಜನಬೆಂಬಲ ಇದೆಯೆಂದು ವ್ಯಾಪಕ ಪ್ರಚಾರ ಮಾಡಿವೆ. ಸಂಕಷ್ಟಕ್ಕೊಳಗಾದ ಜನರ ದ್ವನಿಗಿಂತ ಹೆಚ್ಚಾಗಿ, ಬೆಂಬಲಿಗರ ದ್ವನಿಗೆ ಹೆಚ್ಚು ಪ್ರಚಾರ ಕೊಟ್ಟಿವೆ. ಜನರ ಆಕ್ರೋಶ ತಣಿಸಲು ಬಡವರ ಮನದಲ್ಲಿ ‘ಒಳ್ಳೆಯ ದಿನಗಳ’ ಕನಸನ್ನು ಬಿತ್ತಲು ಪೈಪೋಟಿ ನಡೆಸಿವೆ. ‘ವಶಪಡಿಸಿಕೊಂಡ ಕಪ್ಪುಹಣವನ್ನು ಬಡವರಿಗೆ ಹಂಚುತ್ತಾರೆ’ ಎಂಬ ಕಪೋಲ ಕಲ್ಪಿತ ವಿಷಯದ ಸುತ್ತ ದಿನಗಟ್ಟಲೆ ಚರ್ಚೆ ನಡೆಸಿ ಬಡವರ ಮನದಲ್ಲಿ ಆಸೆ ಹುಟ್ಟಿಸಿವೆ. ‘ಬೇನಾಮಿ ಆಸ್ತಿ ವಶಪಡಿಸಿಕೊಳ್ಳುತ್ತಾರೆ’ ಎಂಬ ಚರ್ಚೆಗಳನ್ನೂ ಹಲವು ದಿನಗಳ ಕಾಲ ನಡೆಸಿವೆ. ಅದೇ ಸಮಯದಲ್ಲಿ ಕಾರ್ಪೊರೇಟ್ ಕುಳಗಳ ಬಗ್ಗೆ ಮಾದ್ಯಮಗಳು ಒಂದು ಮಾತನ್ನೂ ಆಡುವುದಿಲ್ಲ. 8 ಲಕ್ಷ ಕೋಟಿ ವಸೂಲಾಗದ ಸಾಲದ ಬಗ್ಗೆ ವ್ಯಾಪಕ ಚರ್ಚೆ ನಡೆಸಲಿಲ್ಲ. ಬ್ಯಾಂಕುಗಳ ಖಾಲಿಯಾಗಿರುವ ಖಜಾನೆಯ ಮೇಲೆ ಬೆಳಕು ಚೆಲ್ಲಲಿಲ್ಲ. ಅದಕ್ಕೆ ಕಾರಣರಾದ ಟಾಟಾ, ಬಿರ್ಲಾ, ಅದಾನಿ, ಅಂಬಾನಿಯಂತಹ ಉಧ್ಯಮಪತಿಗಳ ಬೆನ್ನಟ್ಟಿ ಪ್ರಶ್ನಿಸಲಿಲ್ಲ. ವಿದೇಶದಲ್ಲಿರುವ ಕಪ್ಪುಹಣ ತರುವ ಪ್ರಯತ್ನ ಎಲ್ಲಿಗೆ ಬಂತು ಎಂದು ಪ್ರಧಾನಿಯವರನ್ನು ಯಾವ ಮಾದ್ಯಮಗಳೂ ಪ್ರಶ್ನಿಸಲಿಲ್ಲ. ಆಶ್ರಮ, ಮಂದಿರ, ಮಸೀದಿ, ಚರ್ಚುಗಳಲ್ಲಿರುವ ಕಪ್ಪುಹಣದ ಬಗ್ಗೆಯಾಗಲೀ, ಅವುಗಳ ಬೇನಾಮಿ ಆಸ್ತಿ ಬಗ್ಗೆಯಾಗಲೀ ಯಾವ ಮಾದ್ಯಮಗಳೂ ಮಾತನಾಡುವುದಿಲ್ಲ. ರಾಜಕೀಯ ಪಕ್ಷಗಳಿಗೆ ಉದ್ಯಮಪತಿಗಳು ಕೊಡುವ ರಹಸ್ಯ ದೇಣಿಗೆ ಬಗ್ಗೆಯೂ ಮಾತನಾಡುವುದಿಲ್ಲ. ನೋಟು ರದ್ದು ವಿಷಯದಲ್ಲಿ ಯಾವ ಮಾದ್ಯಮವೂ ಮೋದಿಯವರನ್ನು ಪ್ರಶ್ನಿಸುವ ಧೈರ್ಯ ತೋರಲಿಲ್ಲ. ಸರ್ಕಾರದ ಇಂತಹ ಜನವಿರೋಧಿ ನೀತಿಗೆ ಮೂಲ ಕಾರಣವಾಗಿರುವ ಗ್ಯಾಟ್ ಒಪ್ಪಂದದಲ್ಲಿನ ಅಂಶಗಳನ್ನು ಜನತೆಗೆ ತಿಳಿಸುವ ಯಾವ ಪ್ರಯತ್ನವನ್ನೂ ಮಾದ್ಯಮಗಳು ಮಾಡುತ್ತಿಲ್ಲ. ಕಾರ್ಪೊರೇಟ್ ಕುಳಗಳ ಒಡೆತನದಲ್ಲಿರುವ ಬಹುತೇಕ ಮಾಧ್ಯಮಗಳಿಂದ ಇಂತಹ ಜನಪರ ನಿಲುವುಗಳನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ಹಲವು ಯೋಜನೆಗಳ ಪ್ರಚಾರದ ನೆಪದಲ್ಲಿ ಜಾಹಿರಾತು ನೀಡುವ ಮೂಲಕ, ಮಾದ್ಯಮಗಳಿಗೆ ಕೋಟ್ಯಾಂತರ ಹಣ ನೀಡುತ್ತಾ, ಕೇಂದ್ರ ಸರ್ಕಾರದ ವಿರುದ್ದ ಪ್ರಚಾರ ಮಾಡದಂತೆ ನೋಡಿಕೊಳ್ಳಲಾಗಿದೆ. ಇಷ್ಟಾದರೂ ಮೋದಿಗೆ ಮಾಧ್ಯಮಗಳ ಬೆಂಬಲ ಇಲ್ಲವೆಂಬ ಹಸೀ ಸುಳ್ಳೇ ಹೇಳತೊಡಗಿದ್ದಾರೆ.
….
08-01-2017
ಜಿ.ಎಸ್.ಟಿ. ಜಾರಿಗೆ ಮುನ್ನ ನೋಟು ರದ್ದತಿ ಕೈಗೊಳ್ಳಬೇಕಿತ್ತು:
‘ಏಕರೂಪದ ತೆರಿಗೆ ವ್ಯವಸ್ಥೆ (ಜಿಎಸ್ಟಿ) ಜಾರಿಗೆ ಮುನ್ನ ನೋಟು ರದ್ದತಿಯಂತಹ ಕ್ರಮ ಕೈಗೊಳ್ಳಬೇಕಿತ್ತು. ಈ ಕ್ರಮದಿಂದಾಗಿ ಬ್ಯಾಂಕುಗಳಿಗೆ ಸಾಕಷ್ಟು ಹಣ ಬಂದಿದ್ದು, ಅವುಗಳ ಸಾಲ ನೀಡುವ ಸಾಮರ್ಥ್ಯ ಹೆಚ್ಚಾಗಿದೆ. ಸಾಲದ ಮೇಲಿನ ಬಡ್ಡಿ ದರಗಳು ಕಡಿಮೆ ಆಗಿವೆ.’ ಇದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ಒಂದು ನಿರ್ಣಯವಂತೆ.
ಇದೇ ಉದ್ದೇಶದಿಂದ ನೋಟು ರದ್ದತಿ ಕ್ರಮ ಕೈಗೊಳ್ಳುತ್ತಿದ್ದೇನೆ ಎಂದು ಪ್ರಧಾನ ಮಂತ್ರಿಯವರು ತಮ್ಮ ನವೆಂಬರ್ 8ರ ತಮ್ಮ ಭಾಷಣದಲ್ಲಿ ದೇಶದ ಜನತೆಗೆ ಹೇಳಲಿಲ್ಲವೇಕೆ? 50 ದಿನಗಳ ನಂತರ ಜನಸಾಮಾನ್ಯರಿಗೆ ಒಳ್ಳೆಯ ದಿನಗಳು ಬರುತ್ತವೆ ಎಂದು ಸುಳ್ಳು ಹೇಳಿದ್ದೇಕೆ? ಕಪ್ಪುಹಣ ಹೊರತರಲು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ನೋಟು ರದ್ದತಿಯಂತಹ ದಿಟ್ಟ ಕ್ರಮ ಕೈಗೊಂಡಿದ್ದಾಗಿ ಸುಳ್ಳು ಹೇಳಿದ್ದೇಕೆ? ಸಂಸತ್ತಿನಲ್ಲೂ ಈ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲವೇಕೆ? 8 ಲಕ್ಷ ಕೋಟಿ ‘ವಸೂಲಾಗದ ಸಾಲ’ (NPA)ದ ಕಾರಣದಿಂದ ಖಾಲಿಯಾಗಿದ್ದ ಬ್ಯಾಂಕ್ ಖಜಾನೆ ತುಂಬಿಸಲು ಜನಸಾಮಾನ್ಯರು ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣವೇ ಬೇಕಿತ್ತೇ? ಇದೇ ದಿಟ್ಟತನವನ್ನು ವಂಚಕ ಉದ್ಯಮಪತಿಗಳಿಂದ ಸಾಲ ವಸೂಲಿ ಮಾಡುವಲ್ಲಿ ತೋರುತ್ತಿಲ್ಲವೇಕೆ? ಮತ್ತೆ ಅಂತಹ ವಂಚಕರಿಗೇ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಲು ಜನಸಾಮನ್ಯರ ಹಣವನ್ನೇಕೆ ಕಸಿದುಕೊಂಡಿರಿ. ಈಗ ಕೊಡುವ ಸಾಲವಾದರೂ ಮತ್ತೆ ಹಿಂತಿರುಗಿ ಬರುತ್ತದೆಂಬ ಖಾತರಿಯಾದರೂ ಏನು? ಕಪ್ಪುಹಣ ಎಷ್ಟು ಬಂದಿದೆ ಎಂಬ ಮಾಹಿತಿ ಇದೆಯೇ? ‘ನಗದು ರಹಿತ ವ್ಯವಹಾರ’ ದಿಂದ ಸರ್ಕಾರಕ್ಕೆ ಹೆಚ್ಚು ತೆರಿಗೆ ಸಂಗ್ರಹವಾಗುತ್ತದೆ ಎಂದು ಹೇಳುತ್ತಾ, ತೆರಿಗೆ ಹೆಸರಿನಲ್ಲಿ ಜನಸಾಮಾನ್ಯರನ್ನು ಮತ್ತಷ್ಟು ಸುಲಿಗೆ ಮಾಡಲು ಹೊರಟಿದ್ದೀರಿ. ಮತ್ತೊಂದೆಡೆ ಉದ್ಯಮಪತಿಗಳ ಲಕ್ಷಾಂತರ ಕೋಟಿ ತೆರಿಗೆ ಮನ್ನಾ ಮಾಡುತ್ತೀರಿ. ಡಿಜಿಟಲ್ ವ್ಯವಹಾರದಲ್ಲಿ ಪ್ರತೀಬಾರಿ ಹಣ ವರ್ಗಾವಣೆ ಮಾಡುವಾಗಲೂ ಕಮೀಶನ್ ಕೊಡಲೇಬೇಕಾದ ಅನಿವಾರ್ಯತೆಗೆ ಜನರನ್ನು ಬಲವಂತವಾಗಿ ನೂಕುತ್ತಿರುವಿರಿ. ಇದೇ ಸಭೆಯಲ್ಲಿ ‘ಬಡವರು ಮತ ಬ್ಯಾಂಕ್ ಅಲ್ಲ’ ಎಂದು ಮೋದಿ ಹೇಳಿರುವುದು ಸತ್ಯವೇ ಆಗಿದೆ. ಬಡವರ ಸಂಕಷ್ಟಗಳ ಪರಿಹಾರಕ್ಕೆ ಯೋಜನೆ ರೂಪಿಸದೇ, ಅವರಲ್ಲಿರುವ ‘ಧಾರ್ಮಿಕ ನಂಬಿಕೆಗಳು’, ‘ಮುಗ್ದತೆ’, ‘ಅನಕ್ಷರತೆ’ಯ ಲಾಭ ಪಡೆದು ಮತ ಪಡೆಯುವ ಚಾಣಾಕ್ಷ ಕಲೆ ನಿಮಗೆ ಚೆನ್ನಾಗಿ ತಿಳಿದಿದೆ. ಜೊತೆಗೆ ನಿಮ್ಮಿಂದ ಲಾಭ ಪಡೆದ ಉದ್ಯಮಗಳು ಕೊಡುವ ಸಾವಿರಾರು ಕೋಟಿ ಹಣ ಚೆಲ್ಲಿ ಚುನಾವಣೆ ಗೆಲ್ಲುವ ಕಲೆಯೂ ನಿಮಗಿದೆ. ಜನರು ಆಳುವ ವರ್ಗದ ತಂತ್ರವನ್ನು ಅರಿಯದಂತೆ ಮಾಡಲು ನಿಮ್ಮದೇ ಒಡೆತನದ ಮಾಧ್ಯಮಗಳು ನಿರಂತರ ಪ್ರಯತ್ನ ಮಾಡುತ್ತಾ, ಜನರ ಗಮನವನ್ನು ಬೇರೆಡೆ ಸೆಳೆಯುವ ವರದಿಗಳನ್ನೇ ಬಿತ್ತರಿಸತೊಡಗಿವೆ. ಜನರು ಇದನ್ನು ಅರಿತು ಆಳುವ ವರ್ಗದ ವಿರುದ್ದ ತಿರುಗಿಬೀಳುವ ಕಾಲ ಬಂದೇ ಬರುತ್ತದೆ.
….
(16-01-2017)
ಮೋದಿಯವರನ್ನು ಹೊಗಳಿದ ಫ್ರಾನ್ಸ್ ದೇಶದ ನಾಯಕರು
ನೋಟು ರದ್ದತಿ ಮಾಡಿದ ಮೋದಿಯನ್ನು ಫ್ರಾನ್ಸ್ ದೇಶದ ನಾಯಕರು ಹೊಗಳಿದ್ದಾರೆ ಹೆಮ್ಮೆ ಪಟ್ಟುಕೊಳ್ಳುವ ಭಕ್ತರು ಎಷ್ಟೊಂದು ಮುಗ್ಧರು! ನೋಟು ರದ್ದು ಮಾಡಿದ ಕೆಲ ದಿನಗಳಲ್ಲೇ ಇಂತಹ ರಹಸ್ಯ ಉದ್ದೇಶವಿದೆ ಎಂದು ನಾನು ನನ್ನ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದೆ. ದೇಶದಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಶೇ. 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ(FDI)ಗೆ ಮೋದಿ ಆಹ್ವಾನಿಸಿದ್ದಾರೆ. ಆದರೂ ಈ ವಲಯದಲ್ಲಿ ವಿದೇಶಿ ಬಂಡವಾಳ ಅರಿದು ಬರುತ್ತಿಲ್ಲ. ಕಾರಣ ಭಾರತದ ಬಹುಸಂಖ್ಯೆಯ ಜನ ನಗದಿನ ಮೂಲಕ ವ್ಯವಹರಿಸುತ್ತಿರುವುದು. ಈ ವಿದೇಶಿ ಬಂಡವಾಳಗಾರರ ಮತ್ತು ದೇಶದ ರಿಲಯನ್ಸ್, ಟಾಟಾ, ಬಿರ್ಲಾ ರಂತಹ ದೊಡ್ಡ ಬಂಡವಾಳಗಾರರ ಚಿಲ್ಲರೆ ವ್ಯಾಪಾರಕ್ಕೆ ಹೆಚ್ಚು ಗ್ರಾಹಕರನ್ನು ಸೃಷ್ಟಿಸುವ ಸಲುವಾಗಿಯೇ, ನೋಟು ರದ್ದತಿ ಕ್ರಮದ ಮೂಲಕ ಜನಸಾಮಾನ್ಯರ ಬಳಿಯಿದ್ದ ನಗದನ್ನು ಕಸಿದುಕೊಂಡಿದ್ದಾರೆ. ಮಾತ್ರವಲ್ಲ ಆ ಹಣವನ್ನು ಹಿಂತಿರುಗಿ ಪಡೆಯಲಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿ, ಪ್ರಧಾನಿಯವರೇ ಮುಂದೆ ನಿಂತು ನಗದು ರಹಿತ ವ್ಯವಹಾರಕ್ಕೆ ಕರೆಕೊಡುತ್ತಿದ್ದಾರೆ. ಪ್ರಾನ್ಸ್ ದೇಶದ ಬಂಡವಾಳಗಾರರ ಚಿಲ್ಲರೆ ವ್ಯಾಪಾರಕ್ಕೆ ಭಾರತದಲ್ಲಿ ಗ್ರಾಹಕರನ್ನು ಸೃಷ್ಟಿಸುವ ಮೋದಿಯವರ ಕ್ರಮವನ್ನು ಅದರ ಮುಖ್ಯಸ್ಥರು ಹೊಗಳಿದರೆ ಆಶ್ಚರ್ಯವನ್ನೇನೂ ಉಂಟುಮಾಡದು. ಇದರಿಂದ ದೊಡ್ಡ ಕಂಪನಿಗಳ ರಿಯಾಯಿತಿ ದರದ ಅಮಿಷಗಳಿಗೆ ಪೈಪೋಟಿ ನೀಡಲಾಗದ ನಮ್ಮ ಕಿರಾಣಿ ಅಂಗಡಿಗಳು, ಸಣ್ಣ ಪುಟ್ಟ ಅಂಗಡಿ ಮಾಲೀಕರು ತಮ್ಮ ಅಂಗಡಿಗಳಿಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ. ನೋಟು ರದ್ದತಿ ಮೂಲಕ ಮತ್ತೆರಡು ಗುರಿಯನ್ನೂ ಈಡೇರಿಸಿಕೊಳ್ಳಲಾಗಿದೆ. ಉದ್ಯಮಪತಿಗಳು ಪಡೆದ 8 ಲಕ್ಷ ಕೋಟಿ ವಸೂಲಾಗದ ಸಾಲದ ಪ್ರಮಾಣ (NPA)ದ ಕಾರಣದಿಂದ ಕಾಲಿಯಾಗಿದ್ದ ಬ್ಯಾಂಕ್ ಖಜಾನೆ ತುಂಬಿಸುವ ಮತ್ತು ಕಡಿಮೆ ಬಡ್ಡಿದರದಲ್ಲಿ ಉಧ್ಯಮಪತಿಗಳಿಗೆ ಮತ್ತಷ್ಟು ಸಾಲ ಕೊಡಲು ಹಣ ಶೇಕರಿಸುವುದು.
….
(ಜನವರಿ 20, 2017)
ಪುರೋಹಿತಶಾಹಿಗಳ ಸಮರ್ಥನೆ
ಈ ಪುರೋಹಿತಶಾಹಿಗಳು ತಮ್ಮವರು ಮಾಡಿದ ಯಾವುದೇ ಕ್ರಮಗಳನ್ನು ಸಮರ್ಥಿಸಿಕೊಂಡು ಬರೆಯುತ್ತಾರೆ ಎಂಬುದಕ್ಕೆ ಚಿಕ್ಕಮಗಳೂರಿನ ವೇದ, ವಿಜ್ಞಾನ ಮಂದಿರದ ಕೆ.ಎಸ್. ನಿತ್ಯಾನಂದ ಅವರ ಲೇಖನ ಮತ್ತೊಂದು ಉಧಾಹರಣೆಯಾಗಿದೆ. (ಫೇಸ್ಬುಕ್ ಗೊಡೆಗೆ ಈ ಲಿಂಕ್ ಅನ್ನು ಶೇರ್ ಮಾಡಿಕೊಂಡಿದ್ದೇನೆ). ಈ ಲೇಖಕರು ಮೋದಿಯ ನೋಟು ಅನಾಣ್ಯೀಕರಣವನ್ನು ಬ್ರಹ್ಮಾಸ್ತ್ರಕ್ಕೆ ಹೊಲಿಕೆಮಾಡಿದ್ದಾರೆ. ‘ಅದೂ (ಸಾವಿರದ ನೋಟು) ಒಂದು ಜೀವನ ಸಾಮಗ್ರಿ ಎಂದು ಅರ್ಥ ಮಾಡಿಕೊಳ್ಳಿರಿ. ಅದರ ಮೇಲಿನ ಮೋಹ ಬಿಟ್ಟು ಸಜ್ಜನರಾಗಿ ಅಲ್ಪತೃಪ್ತರಾಗಿ ಬಾಳಲು ಇದೀಗ ನಿಮಗೊಂದು ಸದವಕಾಶವನ್ನು ಸರಕಾರ ಕಲ್ಪಿಸಿದೆ.’ ಎಂದು ಬರೆದಿದ್ದಾರೆ. ಅತಿ ಬೆಲೆಬಾಳುವ ವಸ್ತು ಎಂದರೆ ಕೇವಲ ಸಾವಿರದ ನೋಟುಗಳು ಮಾತ್ರವೇ? ದೊಡ್ಡ ಶ್ರೀಮಂತರ ಬಳಿ ಇರುವ ಸಾವಿರಾರು ಕೋಟಿ ಬೆಲೆಬಾಳುವ ಐಶಾರಾಮಿ ಮನೆಗಳು, ನೂರಾರು ಎಕರೆ ಎಸ್ಟೇಟ್ ಗಳು, ಕೋಟಿ ಬೆಲೆಬಾಳುವ ವಿದೇಶಿ ಕಾರುಗಳು, ಕೋಟ್ಯಾಂತರ ರೂ ಬೆಲೆಬಾಳುವ ಒಡವೆ ವಸ್ತುಗಳು ಇವೆಲ್ಲವನ್ನೂ ಮೌಲ್ಯವಿಲ್ಲದಂತೆ ಮಾಡಿ ಅಥವಾ ನೋಟುಗಳಂತೆ ಅಂತಹ ಸಂಪತ್ತನ್ನೆಲ್ಲಾ ಸರ್ಕಾರದ ವಶಕ್ಕೆ ತೆಗೆದುಕೊಂಡು, ಇವುಗಳ ಮೇಲಿನ ವೈರಾಗ್ಯದ ಬಗ್ಗೆ ಸಿರಿವಂತರಿಗೂ ಮೋದಿ ತಿಳಿಸಲಿಲ್ಲವೇಕೆ? ಇಲ್ಲಿ ಲೇಖಕರು, ಅನಾಣ್ಯೀಕರಣದಿಂದ ಬಂದ ಹಣವನ್ನು ಆಹಾರ ಪದಾರ್ಥಕ್ಕೆ ಸಬ್ಸಿಡಿ, ರೈತರಿಗೆ ಉಚಿತ ವಿದ್ಯುತ್, ಗೊಬ್ಬರ, ಬೀಜಗಳನ್ನು ಕೊಡಬಹುದು ಎಂದು ಹೇಳಿದ್ದಾರೆ. ಆದರೆ, ಸರ್ಕಾರ ಎಲ್ಲಾ ರೀತಿಯ ಸಬ್ಸಿಡಿಗಳನ್ನು ಕಡಿತಗೊಳಿಸುತ್ತಾ ಸಂಪೂರ್ಣವಾಗಿ ಹಿಂತೆಯುವ ಕ್ರಮ ಕೈಗೊಳ್ಳುತ್ತಿದೆ.
ಈ ಲೇಖಕರಿಗೆ ಭಾರತದ ಆಳುವ ಬಂಡವಾಳಶಾಹಿ ವರ್ಗದ ಆರ್ಥಿಕ ನೀತಿಗಳ ಬಗ್ಗೆಯಾಗಲೀ, ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳ ಬಗ್ಗೆಯಾಗಲೀ ಸಾಕಷ್ಟು ಅರಿವಿಲ್ಲ. ಅರಿವಿದ್ದೂ ಈ ರೀತಿ ಬರೆದಿದ್ದರೆ ಅವರು ಜನರನ್ನು ವಂಚಿಸುತ್ತಿದ್ದಾರೆ ಎಂದೇ ಅರ್ಥ.
.. .
(ಪೆಬ್ರವರಿ, 2017)
12 ಲಕ್ಷ ಕೋಟಿ ಮೊತ್ತದ ಹಗರಣಗಳು: ವಶಕ್ಕೆ ಪಡೆಯಲು ಮುಂದಾಗಲಿಲ್ಲವೇಕೆ?
ಯುಪಿಎ ಆಡಳಿತ ಅವಧಿಯಲ್ಲಿ 12 ಲಕ್ಷ ಕೋಟಿ ಮೊತ್ತದ ಹಗರಣಗಳು ನಡೆದಿವೆ ಎಂದು ಆರೋಪಿಸುವ ಬಿಜೆಪಿ, ಕೇಂದ್ರದಲ್ಲಿ ಅದರದೇ ಬಹುಮತದ ಸರಕಾರ ಇರುವಾಗ ಆ ಹಣವನ್ನು ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲವೇಕೆ? ಒಂದೇ ಒಂದು ಆದೇಶದ ಮೂಲಕ 125 ಕೋಟಿ ಜನರ ಬಳಿಯಿದ್ದ 500 ಮತ್ತು ಸಾವಿರ ಮುಖಬೆಲೆಯ 14 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಕೇವಲ 50 ದಿನಗಳಲ್ಲಿ ಹಿಂಪಡೆಯಲು ಪ್ರಧಾನಿ ಮೋದಿಗೆ ಸಾಧ್ಯವಾಗುವುದಾದರೆ, ಕೇವಲ ನೂರರ ಸಂಖ್ಯೆಯಲ್ಲಿರುವ ಉದ್ಯಮಪತಿಗಳು, ರಾಜಕಾರಣಿಗಳು, ಅಧಿಕಾರಿಗಳು ಮತ್ತು ದಳ್ಳಾಳಿಗಳ ಬಳಿ ಇರುವ ಹಗರಣಗಳ 12 ಲಕ್ಷ ಕೋಟಿ ಹಣ ವಶಪಡಸಿಕೊಳ್ಳಲು ಮುಂದಾಗುತ್ತಿಲ್ಲವೇಕೆ? 2 ಜಿ, ಕಲ್ಲಿದ್ದಲು, ತೈಲ, ಹಲವು ಗಣಿಗಳ ಹಗರಣಗಳಿಂದ ಲಕ್ಷಾಂತರ ಕೋಟಿ ಲೂಟಿ ಮಾಡಿರುವ ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಕುಟುಂಬಗಳಲ್ಲಿ ಯಾರೊಬ್ಬರನ್ನೂ ಜೈಲಿಗೆ ಹಾಕುತ್ತಿಲ್ಲವೇಕೆ? ಮೋದಿಯವರ ಮಾತೃ ಸಂಸ್ಥೆ ಆರೆಸ್ಸೆಸ್ ನ ನಾಗಪುರದ ಕಛೇರಿ ಇಂತಹ ವಂಚಕ ಉದ್ಯಮಪತಿಗಳ ಒಡನಾಟ ಇಟ್ಟುಕೊಂಡಿರುವುದೇಕೆ? ವಂಚಕರಿಂದ ಸಂಘಪರಿವಾರ ದೇಣಿಗೆ ಪಡೆಯುತ್ತಿರುವುದೇಕೆ? ಅದೇ ಹಗರಣಗಳಿಂದ ಬಂದ ವಂಚನೆಯ ಹಣವನ್ನು ವಿದೇಶದಲ್ಲಿ ಉದ್ಯಮ ಸ್ಥಾಪಿಸಲು ಇಂತಹ ವಂಚಕ ಉದ್ಯಮಪತಿಗಳಿಗೆ ಪ್ರಧಾನಿ ನೆರವಾಗುತ್ತಿರುವುದೇಕೆ? ಮನಮೋಹನ ಸಿಂಗ್ ರೈನ್ ಕೋಟು ಧರಿಸಿ ಸ್ನಾನದ ಮನೆಯಲ್ಲಿ ಸ್ನಾನ ಮಾಡಿದ್ದರೆ, ನರೇಂದ್ರ ಮೋದಿ ಒಂದು ಹನಿ ನೀರೂ ತನ್ನ ಮೈಮೇಲೆ ಬೀಳದಂತೆ ಬಯಲಿನಲ್ಲೇ ನಿಂತು ಸ್ನಾನ ಮಾಡತೊಡಗಿದ್ದಾರೆ.
….
15-04-2020
ಮೋದಿಯವರು ಹೇಳಿದ ಬ್ಲಾಕ್ ಮನಿ ಮತ್ತು ನೋಟು_ರದ್ದತಿ
ಮಿತ್ರೋಂವ್… ನಾನು ನಿಮ್ಮ ಬಳಿ ಮತ ಕೇಳಲು ಬಂದಾಗ ಬ್ಲಾಕ್ ಮನಿ ಹೊರ ತೆಗೆಯುತ್ತೇನೆ ಎಂಬ ಭರವಸೆ ಕೊಟ್ಟಿದ್ದೆ. ಕೆಲ ವರ್ಷಗಳ ನಂತರ ನಿಮ್ಮ ಬಳಿ ಬಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ, ಆ ನನ್ನ ಭರವಸೆ ಈಡೇರಿಸಿದ್ದೇನೆ. ಅಂದು ನಾನು, ಕೇವಲ ಒಂದೆರೆಡು ಸಾವಿರ ಸಿರಿವಂತರ ಬಳಿ ಲಕ್ಷಾಂತರ ಕೋಟಿ ಬ್ಲಾಕ್ ಮನಿ ಇದೆ ಅಂದುಕೊಂಡಿದ್ದೆ. ಮಿತ್ರೋಂವ್ … ಅಂತವರು ಕೇವಲ ಒಂದೆರೆಡು ಸಾವಿರ ಜನರಲ್ಲಾ… 120 ಕೋಟಿ ಜನರು. ಎಷ್ಟು ಜನ?
(ನೆರೆದಿದ್ದ ಲಕ್ಷಾಂತರ ಸಭಿಕರ ಕೂಗು) ‘120 ಕೋಟಿ’.
‘ಎಷ್ಟು ಜನ?’,
‘120 ಕೋಟಿ’
ಮಿತ್ರೋಂವ್… ನಿಮಗೆ ಇನ್ನೊಂದು ಆಶ್ಚರ್ಯಕರವಾದ ವಿಷಯ ಹೇಳುತ್ತೇನೆ. ಈ 120 ಕೋಟಿ ಜನರು 15 ಲಕ್ಷ ಕೋಟಿ ಕಪ್ಪು ಹಣ ಬಚ್ಚಿಟ್ಟಿದ್ದರು. ಎಲ್ಲಿ ಬಚ್ಚಿಟ್ಟಿದ್ದರು ಗೊತ್ತೇ? ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಅವರು ಬಚ್ಚಿಟ್ಟಿದ್ದ ಸ್ಥಳ ಅಡುಗೆ ಮನೆಯ ಸಾಸಿವೆ ಡಬ್ಬಿಗಳಲ್ಲಿ, ಹಳೆಯ ತಗಡಿನ ಪೆಟ್ಟಿಗೆಯಲ್ಲಿದ್ದ ಸೀರೆಯ ಮಡಿಕೆಗಳಲ್ಲಿ, ಸೀರೆಯ ಸೆರಗಿನ ಗಂಟಿನಲ್ಲಿ, ಹೀಗೆ ಬಚ್ಚಿಟ್ಟ ಕಪ್ಪು ಹಣ ಹೊರತರಲು ಅವರೆಲ್ಲರ ಮನೆಗೆ ಆದಾಯ ತೆರಿಗೆ ಅಧಿಕಾರಿಗಳನ್ನು ಕಳುಹಿಸಲಿಲ್ಲ. ಪೊಲೀಸರನ್ನು ಮನೆ ಮನೆಗೆ ನುಗ್ಗಿಸಲಿಲ್ಲ. ಅದಕ್ಕೊಂದು ಉಪಾಯ ಮಾಡಿದೆ.
ಮಿತ್ರೋಂವ್… ನವೆಂಬರ್ 8, 2016 ರಾತ್ರಿ 8 ಗಂಟೆ. ದೇಶವನ್ನು ಉದ್ದೇಶಿಸಿ ಒಂದೇ ಒಂದು ಭಾಷಣ ಮಾಡಿದೆ.
‘ಇಂದು ಮಧ್ಯರಾತ್ರಿಯಿಂದ ಐನೂರು, ಸಾವಿರದ ನೋಟುಗಳು ರದ್ದಾಗುತ್ತವೆ. ಎಲ್ಲವನ್ನೂ ಬ್ಯಾಂಕಿಗೆ ತಂದು ಒಪ್ಪಿಸಿ’ ಎಂದು ಕರೆ ಕೊಟ್ಟೆ.
ಮಿತ್ರೋಂವ್… ಜನ ಅಷ್ಟು ಸುಲಭವಾಗಿ ಒಪ್ತಾರಾ? ಜನರು ದಂಗೆ ಹೇಳೋದಿಲ್ವಾ? ಎಂದು ನನ್ನ ಬಂಡವಾಳಶಾಹಿ ಮಿತ್ರರು ಅನುಮಾನ ವ್ಯಕ್ತಪಡಿಸಿದರು. ಅದಕ್ಕೆ ನಾನು ಯಾವ ಉಪಾಯ ಮಾಡಿದೆ ಗೊತ್ತಾ?
ಲಕ್ಷಾಂತರ ಕೋಟಿ ರೂ. ಬಚ್ಚಿಟ್ಟ ಹಣ ಹೊರ ಬರುತ್ತೆ ಅಂದೆ. ಭ್ರಷ್ಟಾಚಾರ ತೊಲಗುತ್ತೆ ಅಂದೆ. ಖೋಟಾನೋಟು ಚಲಾವಣೆ ನಿಂತು ಕಾಶ್ಮೀರದಲ್ಲಿ ಸೈನಿಕರ ಮೇಲಿನ ಕಲ್ಲು ತೂರಾಟ ನಿಲ್ಲುತ್ತೆ ಅಂದೆ.
ಜನ ನನ್ನ ಮಾತು ನಂಬಿದ್ರು. ಮಿತ್ರೋಂವ್… (ವ್ಯಂಗವಾಗಿ ನಗುತ್ತಾ) ಮರುದಿನದಿಂದಲೇ ಬ್ಯಾಂಕುಗಳ ಮುಂದೆ ಐನೂರು, ಸಾವಿರದ ನೋಟು ಹಿಡಿದ ಕೋಟ್ಯಾಂತರ ಜನರ ಸಾಲು. ನಮ್ಮ ಕೆಲ ಅನುಯಾಯಿಗಳು ಸಾಲುಗಳಲ್ಲಿ ನಿಂತು ಸುಸ್ತಾದವರಿಗೆ ಮಜ್ಜಿಗೆ, ಪಾನಕ ಕೊಟ್ಟು ತಂಪು ಮಾಡುತ್ತಿದ್ದರೆ, ಮತ್ತೆ ಕೆಲ ಅನುಯಾಯಿಗಳು ‘ಬ್ಲಾಕ್ ಮನಿ ವಶಕ್ಕೆ ಪಡೆದು ಬಡವರಿಗೆ ಹಂಚುತ್ತಾರೆ. ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುತ್ತಾರೆ. ಸ್ತ್ರೀಶಕ್ತಿ ಸಂಘಗಳಲ್ಲಿ, ಸೊಸೈಟಿಗಳಲ್ಲಿ ಮಾಡಿದ ಸಾಲ ಮನ್ನಾ ಮಾಡುತ್ತಾರೆ’ ಎಂದು ಪ್ರಚಾರ ಮಾಡತೊಡಗಿದರು.
ಮದುವೆಗೆ ಅಂತ ಇಟ್ಟುಕೊಂಡಿದ್ದ ಹಣ ಎಲ್ಲವನ್ನೂ ಬ್ಯಾಂಕಿಗೆ ತಂದು ಹಾಕಿದರು. (ವ್ಯಂಗ್ಯವಾಗಿ ನಗುತ್ತಾ) ಮದುವೆ ಮಾಡಲು ಅವರ ಬಳಿ ಹಣವೇ ಇರಲಿಲ್ಲ.
(ನೆರೆದಿದ್ದ ಅನುಯಾಯಿಗಳಿಂದ ಜೋರು ನಗು, ಚಪ್ಪಾಳೆ.)
ಕಪ್ಪು ಹಣ ಹೊಂದಿದ ಆ 120 ಕೋಟಿ ಜನರಿಂದ ವಶಪಡಿಸಿಕೊಂಡ ಒಟ್ಟು ಹಣ ಎಷ್ಟು ಗೊತ್ತೇ? ಹದಿನೈದು ಲಕ್ಷ ಕೋಟಿ! ಎಷ್ಟು?
‘ಹದಿನೈದು ಲಕ್ಷ ಕೋಟಿ’ (ಸಭಿಕರಿಂದ ಬಾರೀ ಕರತಾಡನ)
‘ಎಷ್ಟು ಬ್ಲಾಕ್ ಮನಿ ಬಂತು?’
‘ಹದಿನೈದು ಲಕ್ಷ ಕೋಟಿ’
‘ಜನ ದಂಗೆ ಎದ್ರಾ?’
‘ಇಲ್ಲಾ, ಇಲ್ಲಾ’
‘ಮಿತ್ರೋಂವ್… ಇದರಲ್ಲಿ ನಿಮ್ಮ ಪರಿಶ್ರಮವೂ ಇದೆ. ಜನ ನನ್ನ ಮಾತನ್ನು ನಂಬುವಂತೆ ನೀವೂ ಪ್ರಚಾರ ಮಾಡಿದ್ದೀರಿ. ಅದಕ್ಕಾಗಿ ಮಾಧ್ಯಮಗಳನ್ನು, ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡಿದ್ದೀರಿ. ಇಡೀ 120 ಕೋಟಿ ಜನರೂ ಸ್ವ ಇಚ್ಚೆಯಿಂದ ತಮ್ಮಲ್ಲಿರುವ ಹಣ ಒಪ್ಪಿಸುತ್ತಿದ್ದಾರೆ ಎಂದು ನಂಬಿಸಿದ್ದೀರಿ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ನಕಲಿ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದಿರಿ. ನಮ್ಮ ಗುಟ್ಟು ರಟ್ಟು ಮಾಡುವವರ ವಿರುದ್ದ ಮಾತಿನ ದಾಳಿ ನಡೆಸಿ ಬಾಯಿ ಮುಚ್ಚಿಸಿದ್ದೀರಿ. ನಿಮಗೆಲ್ಲಾ ನನ್ನ ಅನಂತ, ಅನಂತ ಧನ್ಯವಾದಗಳು.’
ಮತ್ತೆ ಬಾರಿ ಕರತಾಡನ, ಶಿಳ್ಳೆ, ‘ಮೋದೀಜಿ ಕೀ ಜೈ’ ಘೋಷಣೆ ಮೊಳಗಿತು.
….
ಹೌದು, ಒಳ್ಳೆಯ ದಿನಗಳು ಬಂದಿವೆ: ಯಾರಿಗೆ?
ನೋಟು ಅಪನಗದೀಕರಣವೂ ಒಂದು ಸಾಧನೆಯಂತೆ. ಹೌದು, ಇದು ಆಳುವ ವರ್ಗದ ಪರವಾದ ಒಂದು ದೊಡ್ಡ ಸಾಧನೆ. ಆ ಸಾಧನೆಗಾಗಿ ಒಳ್ಳೆಯ ಮಾತುಗಾರನನ್ನೇ ಸಂಘಪರಿವಾರದ ಶಿಬಿರದಿಂದ ಆರಿಸಿ ತರಲಾಗಿದೆ. ‘ನಾನು ಏನೇ ಮಾಡಿದರೂ ಒಳ್ಳೆಯದಕ್ಕೇ ಮಾಡುತ್ತೇನೆ. ನನ್ನನ್ನು ನಂಬಿದವರಿಗೆ ಸುಖ ಸಂಪತ್ತನ್ನು ನೀಡುತ್ತೇನೆ. ನೀವು 50 ದಿನಗಳ ಕಾಲ ಕಠಿಣ ಸಮಸ್ಯೆಗಳನ್ನು ಎದುರಿಸಿದರೆ ನಿಮ್ಮ ಸಂಕಷ್ಟಗಳೆಲ್ಲಾ ಪರಿಹಾರವಾಗಿ ನಿಮಗೆ ಒಳ್ಳೆಯ ದಿನಗಳು ಬರುತ್ತವೆ. ಅದಕ್ಕಾಗಿ ನೀವಿಟ್ಟಿರುವ 500, 1000ದ ನೋಟುಗಳನ್ನು ‘ಹುಂಡಿ’ಗೆ ತಂದು ಹಾಕಿ, ಹೊಸ ನೋಟುಗಳನ್ನು ಪಡೆಯಿರಿ’ ಎಂಬ ದೈವವಾಣಿಯನ್ನು ಮೋದಿ ಮೊಳಗಿಸುತ್ತಾರೆ. ಅವರ ಭಕ್ತರು ಉಘೇ, ಉಘೇ ಎನ್ನುತ್ತಾರೆ. ಮಾಧ್ಯಮಗಳು ದೇಶಕ್ಕೆಲ್ಲಾ ಕೇಳುವಂತೆ ಶಂಕನಾದ ಮೊಳಗಿಸುತ್ತವೆ. ನಂಬಿಕೆಗಳಿಂದಲೇ ಬದುಕು ಸಾಗಿಸುತ್ತಿರುವ ದೇಶವಾಸಿಗಳು ಈ ‘ದೇವರ’ ಭರವಸೆಗಳನ್ನೂ ನಂಬುತ್ತಾರೆ. ಕಷ್ಟಕಾಲಕ್ಕೆಂದು ತಾವು ಕೂಡಿಸಿಟ್ಟಿದ್ದ ನೋಟುಗಳನ್ನು ಹುಂಡಿಗೆ ಹಾಕುತ್ತಾರೆ. ಮತ್ತೆ ಹೊಸ ನೋಟು ಪಡೆಯಲು ತಮ್ಮ ದುಡಿಮೆ ಬಿಟ್ಟು ಅಲೆದಾಡುತ್ತಾರೆ. ಇಂತಿಷ್ಟೇ ಹಣ ಪಡೆಯಬೇಕೆಂಬ ಕಟ್ಟುಪಾಡು ಕಂಡು ಬೆಚ್ಚಿಬೀಳುತ್ತಾರೆ. ‘ನಗದು ರಹಿತ ವ್ಯವಹಾರ ನಡೆಸಿ’ ಎಂಬ ಸಲಹೆ ಬೇರೆ. ಹಣದ ಹರಿವು ನಿಂತುಹೋಗುತ್ತದೆ. ಕಟ್ಟಡ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಸಣ್ಣ ಪುಟ್ಟ ಕಾರ್ಖಾನೆಗಳು ಕೆಲಸವಿಲ್ಲದೆ ಬಣಗುಡುತ್ತವೆ. ವ್ಯಾಪಾರ ವಹಿವಾಟಿಗೆ ಲಕ್ವ ಹೊಡೆಯುತ್ತದೆ. ಇಷ್ಟಾದರೂ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ನಂಬಿಕೆ ಇಟ್ಟುಕೊಂಡೇ ಅದಕ್ಕಾಗಿ ಕಾದು ಕುಳಿತರು ನಮ್ಮ ಜನ. 6 ತಿಂಗಳು ಕಳೆದರೂ ‘ಒಳ್ಳೆಯ ದಿನಗಳು’ ಬರಲೇ ಇಲ್ಲ. ಅದೇ ಹಸಿವು, ಬಡತನವಿದೆ. ಬಡವರ ಕೈಗೆಟುದಂತೆ ವಿದ್ಯೆಯ ಮಾರಾಟ ಜೋರಾಗಿಯೇ ಇದೆ. ಭ್ರಷ್ಟಚಾರ ಕೊನೆಯಾಗಲಿಲ್ಲ. ಕಪ್ಪುಹಣ ಪತ್ತೆಯಾಗಲಿಲ್ಲ. ಖೋಟಾನೋಟು ಮುದ್ರಣ ನಿಲ್ಲಲೇ ಇಲ್ಲ, ನಕ್ಸಲರ ಉಪಟಳ ಕಡಿಮೆಯಾಗಲಿಲ್ಲ. ಗಡಿಯಲ್ಲಿನ ಭಯೋತ್ಪಾದಕರ ಆಟಕ್ಕೆ ಕಡಿವಾಣ ಬೀಳಲಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ. ನಿರುದ್ಯೋಗ ಸಮಸ್ಯೆ ತೀವ್ರಗೊಂಡಿದೆ. ಬೆಲೆಗಳು ಇಳಿಯಲೇ ಇಲ್ಲ. ಆದರೂ ಭಕ್ತರು ಹೇಳುತ್ತಾರೆ ‘ಒಳ್ಳೆಯ ದಿನಗಳು ಬಂದಿವೆ. ಹಬ್ಬ ಆಚರಿಸೋಣ ಬನ್ನಿ’ ಎಂದು ಸಾರುತ್ತಾ ಜಾಗಟೆ ಬಾರಿಸುತ್ತಿದ್ದಾರೆ. ಹೌದು, ಒಳ್ಳೆಯ ದಿನಗಳು ಬಂದಿವೆ, ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ವಂಚಿಸಿದ ಟಾಟಾ, ಬಿರ್ಲಾ, ಅದಾನಿ, ಅಂಬಾನಿ ಬಳಗಕ್ಕೆ ಒಳ್ಳೆಯ ದಿನಗಳು ಬಂದಿವೆ. ಜನಸಾಮಾನ್ಯರು ಬ್ಯಾಂಕ್ ಖಜಾನೆಗೆ ತುಂಬಿದ ಹಣವನ್ನು ಮತ್ತೆ ಸಾಲ ಪಡೆದು ವಂಚಿಸುವವರಿಗೆ ಒಳ್ಳೆಯ ದಿನಗಳು ಬಂದಿವೆ. ಕೋಟ್ಯಾಂತರ ಜನರನ್ನು ಹೊಸದಾಗಿ ತೆರಿಗೆ ವ್ಯಾಪ್ತಿಗೆ ತಂದು, ಜನಸಾಮಾನ್ಯರಿಂದ ತೆರಿಗೆ ವಸೂಲಿಮಾಡುತ್ತಾ, ಲಕ್ಷಾಂತರ ಕೋಟಿ ತೆರಿಗೆ ಮನ್ನಾ ಮಾಡಿಸಿಕೊಳ್ಳುವ ದೊಡ್ಡ ಉದ್ಯಮಪತಿಗಳಿಗೆ ಒಳ್ಳೆಯ ದಿನಗಳು ಬಂದಿವೆ. ನಗದು ರಹಿತ ವ್ಯವಹಾರ ಹೆಚ್ಚಾಗಿ ‘ಪೇಟಿಎಂ’ ನಂತಹ ಮಧ್ಯವರ್ತಿಗಳಿಗೆ ಒಳ್ಳೆಯ ದಿನಗಳು ಬಂದಿವೆ. ಇವರೆಲ್ಲರಿಗೂ ಒಳ್ಳೆಯ ದಿನಗಳನ್ನು ಶುಸೂತ್ರವಾಗಿ ನೆರವೇರಿಸಿ ಕೊಟ್ಟಿದ್ದಕ್ಕೆ ಈ ಉದ್ಯಮಿಗಳ ವರ್ಗ ಇಂದು ‘ನಮೋ’ ಎಂಬ ನಾಮಸ್ಮರಣೆ ಮಾಡುತ್ತಾ ದೇವರ ಉತ್ಸವ ಮಾಡತೊಡಗಿದ್ದಾರೆ. ಸಹಸ್ರಾರು ವರ್ಷಗಳಿಂದ ನಂಬಿಕೆಗಳಿಂದಲೇ ಬಾಳಿ ಬದುಕುತ್ತಿರುವ ದೇಶವಾಸಿಗಳು ‘ಅಣೆ ಬರಹಕ್ಕೆ ಹೊಣೆ ಯಾರು, ಎಲ್ಲವೂ ದೇವರ ಇಚ್ಚೆಯಂತೆ ನಡೆಯುತ್ತದೆ’ ಎನ್ನುತ್ತಾ, ದೇಶಾದ್ಯಂತ ನಡೆಯುತ್ತಿರುವ ‘ಬಂಡವಾಳಗಾರರ’ ಹಬ್ಬ, ಆ ಹಬ್ಬದಲ್ಲಿ ಹೋಮ-ಹವನ ಮಾಡುತ್ತಾ ಮಂತ್ರ ಪಠಿಸುತ್ತಿರುವ ಸಂಘಪರಿವಾರದ ಪುರೋಹಿತರನ್ನು ಭಕ್ತಿಯಿಂದ ನೋಡುತ್ತಾ ಒಳ್ಳೆಯ ದಿನಗಳಿಗಾಗಿ ಕಾಯುತ್ತಾ ಕುಳಿತಿದ್ದಾರೆ.
….
ಬ್ಯಾಂಕುಗಳ ಖಾಲಿಯಾದ ಖಜಾನೆ ಭರ್ತಿ ಮಾಡುವುದೂ ಒಂದು ಅಜೆಂಡಾ ಆಗಿತ್ತು:
ನೋಟು ರದ್ದತಿಯ ಮುಚ್ಚಿಟ್ಟ ಅಜೆಂಡಾಗಳಲ್ಲಿ ಬ್ಯಾಂಕುಗಳ ಖಾಲಿಯಾದ ಖಜಾನೆ ಭರ್ತಿ ಮಾಡುವುದೂ ಒಂದು ಅಜೆಂಡಾ ಆಗಿತ್ತು. ವರ್ಷ ಕಳೆಯಿತು. ಅಪಾಯಕ್ಕೆ ಸಿಲುಕಿದ್ದ ಬ್ಯಾಂಕುಗಳನ್ನು ನೋಟು ರದ್ದತಿಯ ಮೂಲಕ ಬ್ಯಾಂಕುಗಳ ಖಜಾನೆಗೆ ಹರಿದುಬಂದ ಜನಸಾಮಾನ್ಯರ ಹಣದಿಂದ ತಾತ್ಕಾಲಿಕವಾಗಿ ರಕ್ಷಿಸಲಾಯಿತಾದರೂ, ಅದೊಂದು ಹಲವು ರಂದ್ರಗಳ ಪಾತ್ರೆಗೆ ನೀರು ತುಂಬಿದ ಕಥೆಯಂತಾಗಿದೆ. ವಂಚಕ ಉದ್ಯಮಪತಿಗಳು ಮತ್ತು ಶ್ರೀಮಂತ ರಾಜಕಾರಣಿಗಳ ಕುಟುಂಬಸ್ಥರು ನಿರಂತರವಾಗಿ ಬ್ಯಾಂಕುಗಳ ಖಜಾನೆ ಹಣ ದೋಚುತ್ತಲೇ (ಸಾಲಪಡೆದು ವಂಚಿಸುತ್ತಲೇ) ಇದ್ದಾರೆ. NPA ಪ್ರಮಾಣ ಏರುತ್ತಲೇ ಇದೆ. ಈ ಪ್ರಮಾಣ ಒಂದೇ ವರ್ಷದಲ್ಲಿ ಮೂರು ಲಕ್ಷ ಕೋಟಿಗಿಂತ ಅಧಿಕವಾಗಿ ಇದು ಏರಿಕೆಯಾಗಿದೆ. ಬ್ಯಾಂಕುಗಳನ್ನು ಅಪಾಯದಿಂದ ತಪ್ಪಿಸಲು ಈಗ ಸರ್ಕಾರವೇ 2.11 ಲಕ್ಷ ಕೋಟಿ ನೆರವು ನೀಡಲು ಮುಂದಾಗಿದೆ. ಇದಕ್ಕೂ ಮೊದಲು ಇಂಧ್ರಧನುಶ್ ಯೋಜನೆ ಹೆಸರಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ 70 ಸಾವಿರ ಕೋಟಿ ನೀಡಲಾಗಿದೆ. ಬ್ಯಾಂಕುಗಳು ಸಾಮಾನ್ಯ ಗ್ರಾಹಕರ ಹಣ ಉಳಿಸಿಕೊಳ್ಳುವ ಯತ್ನದಲ್ಲಿ ಕನಿಷ್ಠ ಇಷ್ಟು ಮೊತ್ತ ಖಾತೆಯಲ್ಲಿ ಇರಲೇ ಬೇಕೆಂಬ ಷರತ್ತು ವಿದಿಸತೊಡಗಿವೆ. ಕನಿಷ್ಠ ಮೊತ್ತಕ್ಕಿಂತ ಕಡಿಮೆ ಇರುವ ಬಡವರ ಹಣವನ್ನು ದಂಡದ ರೂಪದಲ್ಲಿ ಕಸಿದುಕೊಳ್ಳತೊಡಗಿವೆ. ಬ್ಯಾಂಕಿಗೆ ಬರುವ ಲಾಭದ ಬಹುಪಾಲು ವಸೂಲಾಗದ ಸಾಲ ಮತ್ತು ಅದರ ರೈಟ್ ಆಫ್ ನಿಂದಾಗುವ ನಷ್ಟ ತುಂಬಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೂ ಸಾಲದೆಂಬಂತೆ ಬ್ಯಾಂಕುಗಳ ವಿಲೀನದ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಹಲವು ಬ್ಯಾಂಕುಗಳು SBI ನಲ್ಲಿ ವಿಲೀನಗೊಂಡಿವೆ. ಇದರಿಂದ ಅಧಿಕ ಮೊತ್ತದ ಸಾಲ ಪಡೆದು ವಂಚಿಸಲು ವಂಚಕರಿಗೆ ಸುಲಭವಾಗಿದೆ. ಪಾತ್ರೆಯ ರಂದ್ರಗಳನ್ನು ಮುಚ್ಚದೆ ನೀರು ತುಂಬುತ್ತಲೇ ಇದ್ದಾರೆ. ಬ್ಯಾಂಕುಗಳ ಖಜಾನೆಯ ಸಂಪತ್ತು ಉದ್ಯಮಪತಿಗಳ ಖಜಾನೆಯತ್ತ ಹರಿಯುತ್ತಲೇ ಇದೆ. ಸಾರ್ವಜನಿಕರ ಸಂಪತ್ತು ಕರಗುತ್ತಲೇ ಇದೆ.
(Siddiah Chikkamadegowda)
ನಿಮ್ಮದೊಂದು ಉತ್ತರ