
ತಾಯಿ ಕೇಂದ್ರ ಸಚಿವರಾಗಿ ಆರೋಪಿಯ ನೆರವಿಗೆ ನಿಂತರೆ, ಪತಿ ಮತ್ತು ಮಗಳು ಆರೋಪಿ ಪರ ವಕೀಲರು!!
ಅವರು, ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವುದಾಗಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಆರೋಪ ಹೊತ್ತು, ಜಾರಿ ನಿರ್ದೇಶನಾಲಯದ ತನಿಖೆಯಿಂದ ತಪ್ಪಿಸಿಕೊಳ್ಳಲು, ಲಂಡನ್‌ಗೆ ಪರಾರಿಯಾಗಿ, ಅಲ್ಲಿಯೇ ನೆಲೆಸಿರುವ ಆರೋಪಿಯೊಬ್ಬರ ವಿದೇಶ ಪ್ರಯಾಣ ದಾಖಲೆಗಳನ್ನು ಸುಗಮಗೊಳಿಸಲು ಆ ಸಚಿವರು ನೆರವು ನೀಡುತ್ತಾರೆ! ಅದನ್ನು ಮಾನವೀಯ ನೆಲೆಯಿಂದ ಮಾಡಿದ್ದಾಗಿ ಅವರು, ಅವರ ಪಕ್ಷ ಮತ್ತವರ ‘ಸಂಘ’ದವರು ಸಮರ್ಥಿಸಿಕೊಳ್ಳುತ್ತಾರೆ. ಮತ್ತೊಂದೆಡೆ, ಆ ಸಚಿವೆಯ ಪತಿ ಮತ್ತು ಮಗಳು ವಕೀಲರಾಗಿ ಅಪರಾಧಿಯ ಪರ ನ್ಯಾಯಾಲಯದಲ್ಲಿ ವಾದಿಸುತ್ತಾರೆ!!
ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಮಿಷನರ್ ಲಲಿತ್ ಮೋದಿ ಮಾಡಿದ (‘ಮೋದಿಗೇಟ್’ ಎಂದೇ ಹೆಸರಾದ) ಹಗರಣ ನೆನಪಿದೆಯೇ? ಇದನ್ನು ನೆನಪಿಸಿಕೊಳ್ಳುವುದರ ಜೊತೆಗೆ 10 ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಮತ್ತು ಬಿಜೆಪಿ ಜನತೆಗೆ ನೀಡಿದ “ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟರನ್ನು ಹಿಡಿದು ಜೈಲಿಗೆ ಹಾಕುತ್ತೇವೆ” ಎಂಬ ಭರವಸೆಯನ್ನೂ ನೆನಪಿಸಿಕೊಳ್ಳಿ. ಮೋದಿ ಅಧಿಕಾರಕ್ಕೆ ಬಂದ ನಂತರ ಆರೋಪಿ ಲಲಿತ್ ಮೋದಿಯವನ್ನು ಭಾರತಕ್ಕೆ ಹಿಡಿದು ತಂದರೇ? ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಯಿತೆ? ಅವರು ಸರ್ಕಾರಕ್ಕೆ ವಂಚಿಸಿದ್ದ ಹಣವನ್ನು ಹಿಂತಿರುಗಿ ಪಡೆಯಲು ಅವರ ಆಸ್ತಿ ಜಪ್ತಿ ಮಾಡಲಾಯಿತೇ? ಈ ಎಲ್ಲಾ ಪ್ರಶ್ನೆಗಳಿಗೆ ‘ಇಲ್ಲ’ ಎಂಬುದೊಂದೇ ಉತ್ತರ. ಸರ್ಕಾರ ತಾನು ಮಾಡಬೇಕಾದ ಕಾರ್ಯ ಮಾಡಲಿಲ್ಲ ಮಾತ್ರವಲ್ಲ, ಇಂತಹ ಆರೋಪಿಯ ನೆರವಿಗೆ ಸಚಿವೆ ಮತ್ತು ಅವರ ಕುಟುಂಬವೇ ನಿಂತಿತ್ತು ಮತ್ತು ಇದನ್ನು ಬಿಜೆಪಿ ಮತ್ತು ಸರ್ಕಾರ ಬೆಂಬಲಿಸಿತು. ಇದು ಬಿಜೆಪಿಯವರ ಮಾತಿಗೂ, ಕೃತಿಗೂ ಎಷ್ಟೊಂದು ಅಸಂಬದ್ದ ಸಂಬಂಧ ಇದೆ ಎಂಬುದನ್ನು ತೋರಿಸುತ್ತದೆ.
1,975 ಕೋಟಿ ರೂ. ವಂಚನೆ
2010 ರಿಂದ, ಲಲಿತ್ ಮೋದಿ ಅವರು ಪ್ರಾಥಮಿಕವಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA-ಫೆಮಾ) ಉಲ್ಲಂಘನೆಗಳಿಗೆ ಸಂಬಂಧಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆಗೆ ಒಳಪಟ್ಟಿದ್ದರು. ಇವು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿವೆ-ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್ (WSG) ಒಪ್ಪಂದ, 2009 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ II ಗಾಗಿ ದಕ್ಷಿಣ ಆಫ್ರಿಕಾಕ್ಕೆ ಹಣ ವರ್ಗಾವಣೆ, 2008 ರಲ್ಲಿ ಐಪಿಎಲ್ ಆಟಗಾರರಿಗೆ ಖಾತರಿ ಮತ್ತು ವಿದೇಶದಲ್ಲಿ ಸಲಹಾ ಪಾವತಿಗಳು. ಇಡಿ ಉಲ್ಲೇಖಿಸಿದ ಫೆಮಾ ಉಲ್ಲಂಘನೆಗಳು ಬಹು ಕೋಟಿ ರೂಪಾಯಿಗಳಿಗೆ ಸಾಗುತ್ತವೆ. ಇಡಿ ಪ್ರಕರಣಗಳ ಪ್ರಕಾರ, ಒಳಗೊಂಡಿರುವ ಒಟ್ಟು ಮೊತ್ತವು ಸುಮಾರು 1,975 ಕೋಟಿ ರೂ. 2013 ಮತ್ತು 2015 ರ ನಡುವೆ 15 ಶೋಕಾಸ್ ನೋಟಿಸ್‌ಗಳನ್ನು ಇಡಿ ಕಳುಹಿಸಿತ್ತಾದರೂ, ಲಲಿತ್ ಮೋದಿ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥ ಎನ್. ಶ್ರೀನಿವಾಸನ್ ಅವರು ಚೆನ್ನೈನಲ್ಲಿ ಸಲ್ಲಿಸಿದ ಪ್ರಥಮ ಮಾಹಿತಿ ವರದಿ(ಎಫ್ ಐ ಆರ್)ಯ ಆಧಾರದ ಮೇಲೆ ಲಲಿತ್ ಮೋದಿ ವಿರುದ್ಧ ಒಂದು ಹಣ ವರ್ಗಾವಣೆ ಪ್ರಕರಣ ಇದೆ.
ಈ ಪ್ರಕರಣಗಳಲ್ಲಿ ದೊಡ್ಡದು ದಕ್ಷಿಣ ಆಫ್ರಿಕಾಕ್ಕೆ ಹಣ ವರ್ಗಾವಣೆಗೆ ಸಂಬಂಧಿಸಿದೆ. ಇದರ ಮೇಲಿನ ಫೆಮಾ ಸೂಚನೆಯು ರೂ.1,350 ಕೋಟಿಯಷ್ಟು ಉಲ್ಲಂಘನೆಗಳನ್ನು ಉಲ್ಲೇಖಿಸಿದೆ. ಇದು ಮೂಲಭೂತವಾಗಿ ದಕ್ಷಿಣ ಆಫ್ರಿಕಾಕ್ಕೆ ಹಣವನ್ನು ವರ್ಗಾಯಿಸುವಾಗ ಭಾರತೀಯ ರಿಸರ್ವ್ ಬ್ಯಾಂಕ್ ಅನುಮೋದನೆಯ ಅನುಪಸ್ಥಿತಿಗೆ ಸಂಬಂಧಿಸಿದೆ ಮತ್ತು ಐಪಿಎಲ್ ಎರಡನೇ ಆವೃತ್ತಿಯ ಆದಾಯದಿಂದ ವಿದೇಶಿ ವಿನಿಮಯ ಗಳಿಕೆಯನ್ನು ಭಾರತಕ್ಕೆ ಹಿಂತಿರುಗಿಸುವುದಿಲ್ಲ. ಆರ್‌ಬಿಐ ಅನುಮೋದನೆ ಪಡೆಯಲು ಬಿಸಿಸಿಐ ಕಾರ್ಯಕಾರಿ ಸಮಿತಿಯು ಲಲಿತ್ ಮೋದಿಗೆ ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತು, ಆದರೆ ಅವರು ನಿರ್ದೇಶನವನ್ನು ಅನುಸರಿಸಲಿಲ್ಲ ಎಂದು ಇಡಿ ಪ್ರಕರಣವು ಒತ್ತಿಹೇಳುತ್ತದೆ. ಬದಲಾಗಿ, ಅವರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ಸಂಸ್ಥೆಗೆ ಮತ್ತು ಇತರ ವೆಚ್ಚಗಳಿಗೆ ಹಣವನ್ನು ವರ್ಗಾಯಿಸಿದರು. ಅಲ್ಲದೆ, ಟಿಕೆಟ್ ಮಾರಾಟ ಮತ್ತು ಕ್ರೀಡಾಂಗಣದ ಹಕ್ಕುಗಳನ್ನು ಕಡ್ಡಾಯವಾಗಿ ಒಂದು ವರ್ಷದ ಅವಧಿಯಲ್ಲಿ ಭಾರತಕ್ಕೆ ಹಿಂತಿರುಗಿಸರಿರಲಿಲ್ಲ.
ಲಂಡನ್ ಗೆ ಪರಾರಿ
ತನ್ನ ಮೇಲಿನ ಆರೋಪದ ತನಿಖೆಯಿಂದ ತಪ್ಪಿಸಿಕೊಳ್ಳಲು ಲಲಿತ್ ಮೋದಿ 2010 ರಿಂದ ಲಂಡನ್ ಗೆ ಪರಾರಿಯಾಗಿ ಅಲ್ಲಿಯೇ ವಾಸವಿದ್ದು ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಹಿಂದಿನ ಯುಪಿಎ ಸರ್ಕಾರವು ಲಲಿತ್ ಮೋದಿಯವರ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತು ಮತ್ತು ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್ ದೇಶಕ್ಕೆ ಒತ್ತಾಯಿಸಿತ್ತು. ಲಲಿತ್ ಮೋದಿ ಭಾರತಕ್ಕೆ ಬೇಕಾದ ಅಪರಾಧಿ. ವಿದೇಶಿ ವಿನಿಮಯ ನಿಯಂತ್ರಣಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ) ಲಲಿತ್ ಮೋದಿ ಅವರನ್ನು ವಿಚಾರಣೆ ನಡೆಸುತ್ತಿತ್ತು.
ಭಾರತಕ್ಕೆ ಹಸ್ತಾಂತರಿಸಲು ಮೋದಿ ಸರ್ಕಾರ ಪ್ರಯತ್ನಿಸಿದೆಯೇ?
ಲಲಿತ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಮೋದಿ ಸರ್ಕಾರ ಪ್ರಯತ್ನಿಸಿದೆಯೇ? ಲಲಿತ್ ಮೋದಿ ಅವರು ಯಾವುದೇ ನ್ಯಾಯಾಲಯದಿಂದ ಶಿಕ್ಷೆಗೊಳಗಾಗದ ಕಾರಣ ಅವರನ್ನು “ಪರಾರಿ” ಎಂದು ಕರೆಯಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅವರು 2010 ರಲ್ಲಿ ಭಾರತವನ್ನು ತೊರೆದಾಗಿನಿಂದ ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಕ್ಟೋಬರ್ 2010 ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಅವರ ಮತ್ತು ಇತರ ಆರು ಜನರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ. ಡಿಸೆಂಬರ್ 2012 ರಲ್ಲಿ, ಈ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ಪ್ರಾರಂಭಿಸಿತು.
ಆದಾಗ್ಯೂ, ಲಲಿತ್ ಮೋದಿಯವರನ್ನು ಭಾರತಕ್ಕೆ ಹಿಂದಿರುಗಿಸುವಲ್ಲಿ ಸ್ವಲ್ಪ ಪ್ರಗತಿಯನ್ನು ಸಾಧಿಸಲಾಗಿದೆ. ವಾಸ್ತವವಾಗಿ, ಅವರ ವಿರುದ್ಧದ ತನಿಖೆಯು 2017 ರ ಕೊನೆಯಲ್ಲಿ ನಿಂತುಹೋಯಿತು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಸ್ಥಬ್ದವಾಗಿದೆ.
ಅಕ್ಟೋಬರ್ 2017 ರಲ್ಲಿ ತಮಿಳುನಾಡು ಸರ್ಕಾರವು ಲಲಿತ್ ಮೋದಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಔಪಚಾರಿಕವಾಗಿ ಕೋರಿದೆ. ಆದರೂ, ಸಿಬಿಐಗೆ ಜವಾಬ್ದಾರರಾಗಿರುವ ನೋಡಲ್ ಇಲಾಖೆ, ಪ್ರಧಾನ ಮಂತ್ರಿಗಳ ವ್ಯಾಪ್ತಿಯಲ್ಲಿ ನೇರವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಮನವಿ ಸಲ್ಲಿಸಿದ ಆರು ವರ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ.
ಸುಷ್ಮಾ ಸ್ವರಾಜ್ ಅವರ ಶಿಫಾರಸು
2014ರ ಜೂನ್‌ನಲ್ಲಿ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಪೋರ್ಚುಗಲ್‌ಗೆ ತೆರಳಲು ಲಲಿತ್ ಮೋದಿಗೆ ಪ್ರಯಾಣದ ದಾಖಲೆಗಳನ್ನು ನೀಡಲು ಸುಷ್ಮಾ ಸ್ವರಾಜ್ ಅವರು ಭಾರತೀಯ ಮೂಲದ ಬ್ರಿಟಿಷ್ ಸಂಸದ ಕೀತ್ ವಾಜ್ ಮತ್ತು ಇಲ್ಲಿನ ಹೈಕಮಿಷನರ್ ಜೇಮ್ಸ್ ಬೆವನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ತೋರಿಸುವ ಇಮೇಲ್‌ಗಳು ಒಂದು ವರ್ಷದ ನಂತರ (2015ರಲ್ಲಿ) ಬಹಿರಂಗವಾಗುತ್ತವೆ.
ಸೋರಿಕೆಯಾದ ಇಮೇಲ್‌ಗಳನ್ನು ಉಲ್ಲೇಖಿಸಿದ ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಲಲಿತ್ ಮೋದಿಗೆ ಬ್ರಿಟಿಷ್ ಪ್ರಯಾಣ ಪತ್ರಗಳನ್ನು ನೀಡಲು ಯುಕೆ (ಯುನೈಟೆಡ್ ಕಿಂಗ್ ಡಂ)ಯ ಉನ್ನತ ವಲಸೆ ಅಧಿಕಾರಿಯ ಮೇಲೆ ಒತ್ತಡ ಹೇರುವ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಅವರ ಹೆಸರನ್ನು ಬ್ರಿಟಿಷ್ ಸಂಸದ ಕೀತ್ ವಾಜ್ ಉಲ್ಲೇಖಿಸಿದ್ದಾರೆ. ನಂತರ 24 ಗಂಟೆಗಳೊಳಗೆ, ತೀರಾ ಕಡಿಮೆ ಅವಧಿಯಲ್ಲಿ ಲಲಿತ್ ಮೋದಿ ಪ್ರಯಾಣದ ದಾಖಲೆಗಳನ್ನು ಪಡೆದರು.
“ಬ್ರಿಟಿಷ್ ಸರ್ಕಾರವು ಲಲಿತ್ ಮೋದಿಗೆ ಪ್ರಯಾಣದ ದಾಖಲೆಗಳನ್ನು ನೀಡಲು ನಿರ್ಧರಿಸಿದರೆ – ಅದು ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಹಾಳು ಮಾಡುವುದಿಲ್ಲ” ಎಂದು ಸುಷ್ಮಾ ಅವರು ಬ್ರಿಟಿಷ್ ಹೈ ಕಮಿಷನರ್‌ಗೆ ತಿಳಿಸಿದ್ದರು. ಸುಷ್ಮಾ ಅವರು “ಮಾನವೀಯ ದೃಷ್ಟಿಕೋನ” ವನ್ನು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿಯವರು ಇದನ್ನು ಸಮರ್ಥಿಸಿಕೊಂಡರು.
ಕಾನೂನಿನಿಂದ ಪಲಾಯನಗೈದವರಿಗೆ ಸಹಾಯ ಮಾಡುವಲ್ಲಿ ಸಚಿವೆಯ ಕಡೆಯಿಂದ ಗಂಭೀರವಾದ ಅನುಚಿತತೆಯನ್ನು ಆರೋಪಿಸಿದ ವಿರೋಧ ಪಕ್ಷಗಳು, ಸುಷ್ಮಾ ಅವರ ರಾಜೀನಾಮೆಗೆ ಒತ್ತಾಯಿಸಿದವು. ಸರ್ಕಾರ, ಬಿಜೆಪಿ ಮತ್ತು ಆರ್‌ಎಸ್‌ಎಸ್, ಸ್ವರಾಜ್ ಅವರ ಕ್ರಮವನ್ನು ಬಲವಾಗಿ “ಸಮರ್ಥನೆ” ಮಾಡಿತು ಮತ್ತು ರಾಜೀನಾಮೆ ಬೇಡಿಕೆಗಳನ್ನು ತಿರಸ್ಕರಿಸಿತು. ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ಅವರು ಯಾವುದೇ ತಪ್ಪು ಮಾಡಿಲ್ಲ ಮತ್ತು ಕೇವಲ “ಮಾನವೀಯ” ಆಧಾರದ ಮೇಲೆ ಕಾರ್ಯನಿರ್ವಹಿಸಿದ್ದಾರೆ’ ಎಂದು ಪ್ರತಿಪಾದಿಸಿದರು.
ಸರ್ಕಾರ ಯಾವುದೇ ತಪ್ಪು ಮಾಡಿಲ್ಲ, ಪ್ರತಿಪಕ್ಷಗಳು ಗುಡ್ಡವನ್ನು ಬೆಟ್ಟವನ್ನಾಗಿ ಮಾಡುತ್ತಿವೆ ಎಂದು ಪರಿಸರ ಸಚಿವರಾಗಿದ್ದ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಹೇಳಿದರು. ಸುಷ್ಮಾ ಅವರು ರಾಷ್ಟ್ರೀಯತೆ ಮತ್ತು ದೇಶಭಕ್ತಿಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಆಕೆಯಲ್ಲಿ ಮಾನವೀಯ ಮೌಲ್ಯಗಳು ತುಂಬಿವೆ. ಆಕೆಯ ಎಲ್ಲಾ ಕಾರ್ಯಗಳು ಈ ಮೌಲ್ಯಗಳಿಂದ ಬಂದಿವೆ ಎನ್ನುತ್ತಾ ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್, ಸುಷ್ಮಾ ಅವರ ರಕ್ಷಣೆಗೆ ನಿಂತರು.
ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು, ನಿರ್ಣಾಯಕ ಸಂದರ್ಭಗಳಲ್ಲಿ ಮತ್ತು ಸರ್ಕಾರದ ಅಥವಾ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಮೇಲೆ ಇಂತಹ ಗಂಭೀರ ಆರೋಪಗಳು ಬಂದ ಸಂದರ್ಭಗಳಲ್ಲಿ ಮೌನ ವಹಿಸುವಂತೆ ಈ ವಿಷಯದಲ್ಲಿಯೂ ಮೌನವಾಗಿರುತ್ತಾರೆ.
ಸಚಿವೆ ಪತಿ ಮತ್ತು ಮಗಳು ಅಪರಾಧಿ ಪರ ವಕೀಲರು
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರು 9 ವರ್ಷಗಳಿಂದ ಲಲಿತ್ ಮೋದಿ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದಾರೆ ಎಂದು 2015ರಲ್ಲಿ ಬಹಿರಂಗಗೊಂಡಿತು. ನ್ಯಾಯಾಲಯದ ದಾಖಲೆಗಳಲ್ಲಿ, ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿ ಹೈಕೋರ್ಟ್‌ನಲ್ಲಿ ಮೋದಿ ಪರವಾಗಿ ಹಾಜರಾದ ವಕೀಲರಲ್ಲಿ ಒಬ್ಬರು ಎಂದು ಪಟ್ಟಿಮಾಡಲಾಗಿದೆ. ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಕೂಡ ಅದುವರೆಗೆ 22 ವರ್ಷಗಳ ಕಾಲ ಲಲಿತ್ ಮೋದಿಗೆ ಕಾನೂನು ಸಲಹೆಯನ್ನು ನೀಡಿದ್ದರು.
ಸುಷ್ಮಾ ಸ್ವರಾಜ್ ಅವರ ಪತಿ ಮತ್ತು ಹಿರಿಯ ವಕೀಲ ಸ್ವರಾಜ್ ಕೌಶಲ್ ಅವರು, ತಮ್ಮ ಮಗಳು ಬಾನ್ಸುರಿ (ವಕೀಲೆ) ಮತ್ತು ತಾನು ಇಂಡಿಯನ್ ಪ್ರೀಮಿಯರ್ ಲೀಗ್ ಮಾಜಿ ಕಮಿಷನರ್ ಲಲಿತ್ ಮೋದಿ ಅವರೊಂದಿಗೆ ವೃತ್ತಿಪರವಾಗಿ ಸಂಬಂಧ ಹೊಂದಿದ್ದೆವು ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಭಾರತಕ್ಕೆ ಬೇಕಾದ ಆರೋಪಿಯನ್ನು ದೇಶಕ್ಕೆ ಕರೆತಂದು, ತನಿಖೆಗೆ ಒಪ್ಪಿಸಬೇಕಾದ ಜವಬ್ಧಾರಿ ಮತ್ತು ಕರ್ತವ್ಯವನ್ನು ಸಚಿವೆಯಾಗಿ ಸುಷ್ಮಾ ಸ್ವರಾಜ್ ಮಾಡಬೇಕಿತ್ತು. ಆದರೆ, ಅವರು ಆ ಕೆಲಸ ಮಾಡಲಿಲ್ಲ. ಬದಲಿಗೆ, ಮತ್ತೊಂದು ದೇಶಕ್ಕೆ ಪ್ರಯಾಣಿಸಲು ಆರೋಪಿಗೆ ನೆರವು ನೀಡಿದರು. ಸಚಿವರದು ಮಾನವೀಯತೆ ದೃಷ್ಟಿ ಎಂದೇ ಅಂದುಕೊಂಡರೂ, ಅವ ಪತಿ ಮತ್ತು ಮಗಳು ಆರೋಪಿಗೆ ಕಾನೂನು ನೆರವು ನೀಡುವುದನ್ನು ಏನೆಂದು ಕರೆಯಬೇಕು? ಅದು ಅವರ ವೃತ್ತಿ ಧರ್ಮ, ಅವರದು ವೃತ್ತಿಪರ ಸಂಬಂಧ ಎನ್ನಬೇಕೇನು? ಒಂದು ಸರ್ಕಾರದ ಪ್ರಮುಖ ಸಂಪುಟ ಸ್ಥಾನದಲ್ಲಿದ್ದು, ದೇಶದಿಂದ ಪರಾರಿಯಾದ ವಂಚಕರನ್ನು ಹಿಡಿದು ತಂದು ಕಾನೂನಿಗೆ ಒಪ್ಪಿಸಬೇಕಾದ ಸಚಿವರಿಗೆ, ತಮ್ಮದೇ ಕುಟುಂಬದ ಸದಸ್ಯರು ವಂಚಕ, ದೇಶಭ್ರಷ್ಟನೊಬ್ಬನ ನೆರವಿಗೆ ನಿಂತಿದ್ದಾರೆ ಎಂಬುದನ್ನು ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ!!
ಸೋದರಳಿಯನಿಗೆ ಬ್ರಿಟಿಷ್ ವಿಶ್ವವಿದ್ಯಾಲಯ ಪ್ರವೇಶ ಪಡೆಯಲು…
ಮತ್ತೊಂದೆಡೆ, ಲಲಿತ್ ಮೋದಿ ಅವರು ಸುಷ್ಮಾ ಸ್ವರಾಜ್ ಅವರ ಸೋದರಳಿಯನಿಗೆ ಬ್ರಿಟಿಷ್ ವಿಶ್ವವಿದ್ಯಾಲಯ ಪ್ರವೇಶ ಪಡೆಯಲು ಸಹಾಯ ಮಾಡಲು ಬ್ರಿಟಿಷ್ ಸಂಸದ ಕೀತ್ ವಾಜ್ ಅವರಿಂದ ಶಿಫಾರಸು ಮಾಡಿಸಿದ್ದರು ಎಂದೂ ವರದಿಯಾಗಿವೆ.
‘ಉನ್ನತ ನಾಯಕ’ರಿಂದಲೇ ರಹಸ್ಯ ಬಯಲಾಯಿತೆ !!
ಸುಷ್ಮಾ ಅವರ ಈ ಹಗರಣ ಅವರದೇ ಪಕ್ಷದ ಪ್ರತಿಸ್ಪರ್ಧಿಗಳಿಗೂ ಸಹಾಯ ಮಾಡಿತು. ಅವರನ್ನು ರಾಜಕೀಯವಾಗಿ ಮತ್ತು ನಿಧಾನವಾಗಿ ಉತ್ತಮ ಮಂತ್ರಿ ಎಂಬ ಖ್ಯಾತಿಯನ್ನು ನಿರ್ಮಿಸುವ ಸಮಯದಲ್ಲಿ ಈ ಪ್ರಕರಣ ಅವರನ್ನು ದುರ್ಬಲಗೊಳಿಸಿತು. ಭವಿಷ್ಯದ ಪೈಪೋಟಿಯ ಸಂದರ್ಭದಲ್ಲಿ ಅವರು ಉನ್ನತ ಸ್ಥಾನವನ್ನು ಒಳಗೊಂಡಂತೆ, ಯಾವುದೇ ಹುದ್ದೆಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಯಾವುದೇ ಅವಕಾಶ ಇರದಂತಾಯ್ತು.
ಕೆಲವು ಹಿರಿಯ- ಮಂತ್ರಿಗಳ ನಡುವೆ ಪೈಪೋಟಿ ಅಂದೂ ಇತ್ತು ಎಂಬುದು ಅಷ್ಟೇನೂ ರಹಸ್ಯವಲ್ಲ. ಸುಷ್ಮಾ ಅವರನ್ನು ಉನ್ನತಸ್ಥಾನಕ್ಕೆ ಬರುವುದನ್ನು ತಡೆಯುವ ಮತ್ತು ತಮ್ಮ ‘ಉನ್ನತಸ್ಥಾನ’ಕ್ಕೆ ಇರುವ ಪೈಪೋಟಿಯನ್ನು ತಡೆಯುವ ಉದ್ದೇಶದಿಂದ ಬಿಜೆಪಿಯ ‘ಹಿರಿಯ-ಮಂತ್ರಿ’ ಗಳೇ ಸುಷ್ಮಾ ಮಾಡಿದ ಇಮೇಲ್‌ಗಳನ್ನು ಸೋರಿಕೆ ಮಾಡಿರಬಹುದು ಎಂಬ ಗುಸುಗಸು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.
ಬಾನ್ಸುರಿ ಸ್ವರಾಜ್ ಬಿಜೆಪಿ ಕಾನೂನು ಘಟಕಕ್ಕೆ ನೇಮಕ
ಭಾರತಕ್ಕೆ ಬೇಕಾಗಿರುವ ಆರೋಪಿ ಪರ ವಕಾಲತ್ತು ವಹಿಸಿದ ಬಾನ್ಸುರಿ ಸ್ವರಾಜ್ (ಸುಷ್ಮಾ ಸ್ವರಾಜ್ ಅವರ ಪುತ್ರಿ) ಅವರು 2023ರ ಮೇ ನಲ್ಲಿ ದೆಹಲಿ ಭಾರತೀಯ ಜನತಾ ಪಕ್ಷದ ಕಾನೂನು ಘಟಕದ ಸಹ ಸಂಚಾಲಕರಾಗಿ ನೇಮಕಗೊಳ್ಳುವುದರೊಂದಿಗೆ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ.
ವಂಚನೆಯ ಆರೋಪ ಹೊತ್ತು ದೇಶದಿಂದ ಪಲಾಯಗೈದಿರುವ ಲಲಿತ್ ಮೋದಿ ಲಂಡನ್‌ನಲ್ಲಿ ಐಶಾರಾಮಿ ಮನೆ, ಮಾಲ್ಡೀವ್ಸ್‌ನಲ್ಲಿ ರಜಾದಿನಗಳು ಮತ್ತು ಅವರ ಖಾಸಗಿ ವಿಹಾರ ನೌಕೆ ಮತ್ತು ವಿಮಾನದ ಮೂಲಕ ಪ್ರಯಾಣಿಸುವುದರೊಂದಿಗೆ ಬಹಳ ಅದ್ದೂರಿ ಜೀವನಶೈಲಿಯನ್ನು ಮುಂದುವರೆಸಿದ್ದಾರೆ.
ಲಲಿತ್ ಮೋದಿ ಅವರು ಕ್ರಿಕೆಟ್ ಕನ್ವೀನರ್ ಆಗಿ ತಮ್ಮ ವೃತ್ತಿಜೀವನದುದ್ದಕ್ಕೂ ಕೋಟಿಗಳನ್ನು ಗಳಿಸುತ್ತಿದ್ದರು, ಆದರೆ ಇದು ಅವರ ಬೃಹತ್ ನಿವ್ವಳ ಮೌಲ್ಯದಲ್ಲಿ ಕುಸಿತವಾಗಿದೆ. ಆರೋಪಿತ ಅಪರಾಧಿ ಪರಾರಿಯಾಗಿದ್ದರೂ, ಮೋದಿ ಅವರು ತಮ್ಮ ತಂದೆಯ ಕಂಪನಿ ಮೋದಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷರಾಗಿದ್ದಾರೆ. ಇದು ಸಿಗರೇಟ್ ತಯಾರಿಕೆ, ಶಿಕ್ಷಣ, ಕೃಷಿ ಮತ್ತು ಮನರಂಜನೆ ಸೇರಿದಂತೆ ವ್ಯಾಪಕವಾದ ವ್ಯವಹಾರಗಳನ್ನು ಹೊಂದಿದೆ. ವರದಿಗಳ ಪ್ರಕಾರ, ಮೋದಿಯವರ ಕಂಪನಿಯು 2021 ರಲ್ಲಿ 1750 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಲಲಿತ್ ಮೋದಿ ಅವರ ಮಾಸಿಕ ಆದಾಯ ಸುಮಾರು 16.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆದರೆ ಅವರ ವೈಯಕ್ತಿಕ ಆಸ್ತಿಯಲ್ಲಿ ಲಂಡನ್‌ನಲ್ಲಿ 5 ಅಂತಸ್ತಿನ ಬೃಹತ್ ಮನೆ, 12,000 ಕೋಟಿ ರೂಪಾಯಿಗಳ ಬೃಹತ್ ವ್ಯವಹಾರ ಮತ್ತು ಅನೇಕ ಐಷಾರಾಮಿ ಕಾರುಗಳು ಸೇರಿವೆ. (ಮಾಹಿತಿ: DNA ವೆಬ್ ತಂಡ- ಏಪ್ರಿಲ್ 24, 2023) ಲಲಿತ್ ಮೋದಿ ಅವರು ಭಾರತದಿಂದ ಪರಾರಿಯಾಗಿದ್ದರೂ ಮತ್ತು ಅವರ ತಾಯ್ನಾಡಿನಲ್ಲಿ ಬಂಧನವನ್ನು ಎದುರಿಸುತ್ತಿದ್ದರೂ ಸಹ 2023 ರ ಹೊತ್ತಿಗೆ ಅವರು 4,555 ಕೋಟಿಗೂ ಹೆಚ್ಚು ನಿವ್ವಳ ಮೌಲ್ಯ ಹೊಂದಿದ್ದಾರೆ.
ನಿಮ್ಮ ಟಿಪ್ಪಣಿ ಬರೆಯಿರಿ