
“ಭಾರತ ಜಪಾನ್ ದೇಶವನ್ನು ಹಿಂದಿಕ್ಕಿ, ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಇನ್ನು ಎರಡು ಮೂರು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಲಿದೆ” ಎನ್ನುತ್ತಾ ಕೆಲವರು ಸಂಭ್ರಮಿಸತೊಡಗಿದ್ದಾರೆ. ಇದು ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಬಿಜೆಪಿ ಮತ್ತು ಸಂಘಪರಿವಾರದವರು ಹೇಳಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೂಡಾ “ನೆಹರೂರವರು ಹಾಕಿದ ಅಡಿಪಾಯಗಳಿಂದ ಭಾರತ ವಿಶ್ವದ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ.” ಎಂದು ಶ್ಲಾಘಿಸಿದ್ದಾರೆ. ವಿಶ್ವದ ಬಡವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿರುವ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ಇದೇನಿದು ಲೆಕ್ಕಾಚಾರ?
ಇತ್ತೀಚೆಗೆ ಒಂದು ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ‘ಭಾರತ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಇನ್ನು ಎರಡು ಮೂರು ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೆ ಏರಲಿದೆ” ಎಂಬುದು ಆ ಸುದ್ದಿ. ಅರೇ, ಇದೇನಿದು? 80 ಕೋಟಿ ಜನರು ಪಡಿತರದ ಮೂಲಕ ಉಚಿತ ಆಹಾರ ಧಾನ್ಯಗಳನ್ನು ಪಡೆಯುತ್ತಿರುವ ಭಾರತ, ಜಪಾನ್ ದೇಶವನ್ನು ಆರ್ಥಿಕವಾಗಿ ಹಿಂದಿಕ್ಕಲು ಹೇಗೆ ಸಾಧ್ಯ? ಎಂಬ ಪ್ರಶ್ನೆಗಳು ಮೂಡುತ್ತವೆ.
ನೀತಿ ಆಯೋಗದ ಸಿಇಒ ಹೇಳಿದ್ದೇನು?
“ನಾನು ಹೇಳಿದಂತೆ, ನಮ್ಮದು ನಾಲ್ಕನೇ ಅತಿದೊಡ್ಡ ಆರ್ಥಿಕತೆ, ನಮ್ಮದು ನಾಲ್ಕು ಲಕ್ಷ ಕೋಟಿಗಳ ಆರ್ಥಿಕತೆ, ಇದು ನನ್ನ ದತ್ತಾಂಶವಲ್ಲ. IMF ನ ದತ್ತಾಂಶ. ಭಾರತವು ಜಪಾನ್ ಗಿಂತ ದೊಡ್ಡ ಆರ್ಥಿಕತೆಯಾಗಿದೆ” ಎಂದು ನೀತಿ ಆಯೋಗದ ಆಡಳಿತ ಮಂಡಳಿಯ ಹತ್ತನೇ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ನೀತಿ ಆಯೋಗದ ಸಿಇಒ ಬಿ.ವಿ.ಆರ್. ಸುಬ್ರಮಣ್ಯಂ ಘೋಷಿಸಿದರು. “ಪ್ರಸ್ತುತ ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ ನಮ್ಮ ಮುಂದಿವೆ. ನಾವು ರೂಪಿಸಿದ ಯೋಜನೆಗಳೆಲ್ಲ ಕೈಗೂಡಿದರೆ, ಭಾರತವು ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನವನ್ನು ಪಡೆಯುವ ಸಾಧ್ಯತೆಯಿದೆ” ಎಂದೂ ಅವರು ಹೇಳಿದರು.
ಈ ರೀತಿ ಹೇಳುವಾಗ ಮಾಧ್ಯಮಗಳು ಒಂದು ವಿಷಯವನ್ನು ಅಷ್ಟಾಗಿ ಚರ್ಚೆಗೆ ತೆಗೆದುಕೊಳ್ಳದೇ ಇರುವುದನ್ನು ಗಮನಿಸಬೇಕು. ಅದೆಂದರೆ, “ಆಸ್ತಿ ಹಣಗಳಿಕೆಯ (Asset monetization) ಉಪಕ್ರಮಗಳ ಹೊಸ ಅಲೆಯು ಪೈಪ್‌ಲೈನ್ ನಲ್ಲಿದೆ ಎಂದು ಸುಬ್ರಮಣ್ಯಂ ಬಹಿರಂಗಪಡಿಸಿದರು. ಸರ್ಕಾರವು ತನ್ನ ಆಸ್ತಿ ಹಣಗಳಿಕೆಯ ಕಾರ್ಯಕ್ರಮದ ಎರಡನೇ ಸುತ್ತಿನ ಸಿದ್ಧತೆ ನಡೆಸುತ್ತಿದ್ದು, ಆಗಸ್ಟ್ ನಲ್ಲಿ ಇದನ್ನು ಜಾರಿಗೆ ತರುವ ನಿರೀಕ್ಷೆಯಿದೆ” ಎಂದರು. ಇದರರ್ಥ, ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಒಪ್ಪಿಸಿ, ಒಂದಷ್ಟು ಹಣ ಗಳಿಸುವುದು ಎಂಬುದು. ದೇಶವು ಆರ್ಥಿಕವಾಗಿ ಮುನ್ನಡೆಯುತ್ತಿದ್ದರೆ, ಆಸ್ತಿ ಹಣಗಳಿಕೆ ಉಪಕ್ರಮದ ಮೂಲಕ ಕೇಂದ್ರ ಸರ್ಕಾರ ಹಣ ಸಂಗ್ರಹ ಮಾಡುವುದೇಕೆ? ಎಂಬ ಪ್ರಶ್ನೆ ಮೂಡುತ್ತದೆ.
ಐಎಮ್ ಎಫ್ ಹೇಳಿದ್ದೇನು?
ನೀತಿ ಆಯೋಗದ ಸಿಇಒ ಭಾರತವು 4 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಅಧಿಕೃತ ಹೇಳಿಕೆಗಳನ್ನು ನೀಡುವ ಈ ಸಂಪೂರ್ಣ ವೈಫಲ್ಯದ ಹಿಂದಿನ ಕಾರಣವೆಂದರೆ, ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಒಂದು ವರ್ಷವನ್ನು ಹೇಗೆ ಲೇಬಲ್ ಮಾಡುತ್ತದೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು. 2025ರ ಮೇ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಐಎಂಎಫ್ ತನ್ನ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ, ಭಾರತವು 2025 ರಲ್ಲಿ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದೆ. (ಈಗಾಗಲೇ ಆಗಿದೆ ಎಂದು ಹೇಳಿಲ್ಲ ಎಂಬುದನ್ನು ಗಮನಿಸಿ.) ಮತ್ತು ಐಎಂಎಫ್ ಪ್ರಕಾರ ಹಣಕಾಸು ವರ್ಷ 2024-2025 ಎಂಬುದು 2024ರ ವರ್ಷ. 2025-26ರ ಆರ್ಥಿಕ ವರ್ಷವು (ಐಎಂಎಫ್ ಪ್ರಕಾರ 2025) 2026ರ ಮಾರ್ಚ್ ಕೊನೆಗೆ ಮುಗಿಯುತ್ತದೆ. ಭಾರತದ ನಾಮಮಾತ್ರ (ನಾಮಿನಲ್) ಜಿಡಪಿ 4,187.017 ಬಿಲಿಯನ್ ಡಾಲರ್ ಗೆ ಏರುವ ನಿರೀಕ್ಷೆಯಿದೆ, (ಇಲ್ಲಿಯೂ ‘ನಿರೀಕ್ಷೆಯಿದೆ’ ಎಂದು ಹೇಳಿದೆ). ಇದು ಜಪಾನ್ ನ ಅಂದಾಜು 4,186.431 ಬಿಲಿಯನ್ ಡಾಲರ್ ಅನ್ನು ಮೀರಿಸುತ್ತದೆ.
ಈಗ, ಭಾರತದ ಜಿಡಿಪಿ ಸುಮಾರು 3.9 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆದರೆ ಜಪಾನ್‌ನ ಜಿಡಿಪಿ ಸುಮಾರು 4 ಟ್ರಿಲಿಯನ್ ಡಾಲರ್ ಆಗಿದೆ. ಮಾರ್ಚ್ ತ್ರೈಮಾಸಿಕದ ಅಧಿಕೃತ ಜಿಡಿಪಿ ಅಂಕಿಅಂಶಗಳು ಬಿಡುಗಡೆಯಾಗುವ ಮೇ 30 ರ ವೇಳೆಗೆ, 2024-2025 ರ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಗಾತ್ರ ಎಷ್ಟು ಎಂದು ನಮಗೆ ನಿಖರವಾಗಿ ತಿಳಿಯುತ್ತದೆ.
ಐಎಂಎಫ್ 2025ರ ಏಪ್ರಿಲ್ 22 ರ ದತ್ತಾಂಶದ ಪ್ರಕಾರ, ಪ್ರಸ್ತುತ ದರಗಳಲ್ಲಿ ನಾಮಮಾತ್ರ (ನಾಮಿನಲ್) ಜಿಡಿಪಿ ಅಮೆರಿಕಾ 30.51 ಲಕ್ಷ ಕೋಟಿ ಡಾಲರ್ ಗಳು, ಚೀನಾ 19.23, ಜರ್ಮನಿ 4.74, ಭಾರತ 4.19, ಜಪಾನ್ 4.19, ಬ್ರಿಟನ್ 3.84, ಫ್ರಾನ್ಸ್ 3.21, ಇಟಲಿ 2.42, ಕೆನಡಾ 2.23, ಮತ್ತು ಬ್ರೆಜಿಲ್ 2.13 ಲಕ್ಷ ಕೋಟಿ ಡಾಲರ್‌ಗಳೊಂದಿಗೆ ಮೊದಲ 10 ಸ್ಥಾನಗಳಲ್ಲಿವೆ.
2025 ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಗಳಿಗೆ ಹೆಚ್ಚಿಸುವುದಾಗಿ ಹೇಳಿದ್ದರು
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ, ದೇಶದ ಜಿಡಿಪಿ 2015 ರಲ್ಲಿ 2.1 ಲಕ್ಷ ಕೋಟಿ (ಟ್ರಿಲಿಯನ್) ಡಾಲರ್ ಇತ್ತು, 2025 ರಲ್ಲಿ 4.3 ಲಕ್ಷ ಕೋಟಿ ಡಾಲರ್ ಗಳಿಗೆ ಹೆಚ್ಚಾಗಿದೆ ಎಂದೂ, 10 ವರ್ಷಗಳಲ್ಲಿ ಇದು ಶೇ. 105 ರಷ್ಟು ಹೆಚ್ಚಳವಾಗಿದೆ ಎಂದು ಐಎಂಎಫ್ ಕೆಲವು ತಿಂಗಳ ಹಿಂದೆ ಹೇಳಿತ್ತು. ಅದೇ ಸಂಸ್ಥೆ ಬಿಡುಗಡೆ ಮಾಡಿದ ಇತ್ತೀಚಿನ ಅಂದಾಜಿನ ಪ್ರಕಾರ ಆ ಮೊತ್ತ 4.187 ಲಕ್ಷ ಕೋಟಿ ರೂ.ಗಳಿಗೆ ಇಳಿದಿದೆ. ಜಪಾನ್ ನ ಜಿಡಿಪಿ 4.186 ಆಗಿರುವುದರಿಂದ, ತನ್ನ ಅಂದಾಜಿನ ಇಳಿಕೆಯ ವಿಷಯವನ್ನು ಪಕ್ಕಕ್ಕಿಟ್ಟು ನಮಗೆ ನಾಲ್ಕನೇ ಸ್ಥಾನವನ್ನು ನೀಡಿದೆ. ವ್ಯತ್ಯಾಸ ಎಷ್ಟು? 0.001 ಲಕ್ಷ ಕೋಟಿ ಡಾಲರ್ ಅಥವಾ ಒಂದು ಬಿಲಿಯನ್ ಡಾಲರ್. 2025 ರ ವೇಳೆಗೆ ಅದನ್ನು ಐದು ಲಕ್ಷ ಕೋಟಿ ಡಾಲರ್ ಗಳಿಗೆ ಹೆಚ್ಚಿಸುವುದಾಗಿ ಬಿಜೆಪಿ ನಾಯಕರು ಬಡಾಯಿ ಕೊಚ್ಚಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಹತ್ತು ವರ್ಷಗಳಲ್ಲಿ ನಮ್ಮ ಜಿಡಿಪಿ ಶೇ. 105 ರಷ್ಟು ಹೆಚ್ಚಾಗಿದೆ ಎಂದು ಯಾವ IMF ಹೇಳಿತ್ತೋ ಅದೇ ಸಂಸ್ಥೆ 2025 ರ ತಲಾ ಜಿಡಿಪಿಯಲ್ಲಿ 141 ನೇ ಸ್ಥಾನ ಎಂದೂ ಕೂಡಾ ಭವಿಷ್ಯ ನುಡಿದಿದೆ. ದಿವಾಳಿಯಾಗಿದೆ ಎಂದು ಹೇಳಲಾಗುವ ಶ್ರೀಲಂಕಾ 133 ನೇ ಸ್ಥಾನದಲ್ಲಿ, ಬಾಂಗ್ಲಾದೇಶ 143 ನೇ ಸ್ಥಾನದಲ್ಲಿ, ಪಾಕಿಸ್ತಾನ 159 ನೇ ಸ್ಥಾನದಲ್ಲಿ ಮತ್ತು ಕ್ಸಿ ಜಿನ್‌ಪಿಂಗ್ ಆಳ್ವಿಕೆಯಲ್ಲಿ ಕುಸಿದಿದೆ ಎಂದು ಕೆಲವರು ಹೇಳುವ ಚೀನಾ 71 ನೇ ಸ್ಥಾನದಲ್ಲಿದೆ (ಇತ್ತೀಚಿಗೆ 70) ಎಂದು ಐಎಂಎಫ್ ಹೇಳಿದೆ.
ಸ್ವಾತಂತ್ರ್ಯ ಬಂದ ನಂತರ ಇಂತಹ ಅಭಿವೃದ್ಧಿಯನ್ನು ಯಾವುದೇ ಸರ್ಕಾರ ಸಾಧಿಸಿಲ್ಲ ಎಂದು ಬಿಜೆಪಿ ಐಟಿ ಸೆಲ್ ಮಾಳವಿಯಾ ಹೇಳಿದ್ದಾರೆ. ವಾಸ್ತವ ಏನಿದೆ? 2004 ರಲ್ಲಿ ಮನಮೋಹನ್ ಸಿಂಗ್ ಅಧಿಕಾರಕ್ಕೆ ಬಂದಾಗ, ಜಿಡಿಪಿ 709 ಬಿಲಿಯನ್ ಡಾಲರ್ ಗಳಷ್ಟಿದ್ದದ್ದು 2014 ರ ಹೊತ್ತಿಗೆ ಅದು 2030 ಬಿಲಿಯನ್ ಗೆ ಏರಿತ್ತು. ಯುಪಿಎ ಆಡಳಿತದ ಅವಧಿಯಲ್ಲಿ ಬೆಳವಣಿಗೆಯ ದರವು ಶೇ. 186 ಹೆಚ್ಚು.
ತಲಾವಾರು ಜಿಡಿಪಿ!!
ತಲಾವಾರು ಜಿಡಿಪಿ (GDP per capita) ದಲ್ಲಿ ಭಾರತವು ಜಾಗತಿಕವಾಗಿ 188 ದೇಶಗಳಲ್ಲಿ 136 ನೇ ಸ್ಥಾನದಲ್ಲಿದೆ. ಇದರರ್ಥ, ಸರಾಸರಿಯಾಗಿ, ಭಾರತದ ಪ್ರತಿ ವ್ಯಕ್ತಿಯ ಆದಾಯವು ಜಾಗತಿಕ ಸರಾಸರಿಗೆ ಹೋಲಿಸಿದರೆ ಕಡಿಮೆಯಾಗಿದೆ ಮತ್ತು 135 ಇತರ ದೇಶಗಳಿಗಿಂತ ಕಡಿಮೆಯಾಗಿದೆ. ಭಾರತದ ತಲಾವಾರು ಜಿಡಿಪಿ 2025 ರಲ್ಲಿ 2,878.45 ಡಾಲರ್ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶವು ದೇಶದ ಒಟ್ಟು ಆರ್ಥಿಕ ಉತ್ಪಾದನೆ (ಜಿಡಿಪಿ)ಯನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಸಿಗುವ ಮೌಲ್ಯವನ್ನು ಪ್ರತಿನಿಧಿಸುತ್ತದೆ, ಇದು ಪ್ರತಿ ವ್ಯಕ್ತಿಯ ಸರಾಸರಿ ಆದಾಯದ ಸ್ನ್ಯಾಪ್‌ಶಾಟ್ ಅನ್ನು ನೀಡುತ್ತದೆ.
ತಲಾ ಜಿಡಿಪಿ ಕೂಡಾ ವಾಸ್ತವವಾಗಿ ಒಂದು ಮೈಂಡ್ ಗೇಮ್ ಅಲ್ಲದೆ ಬೇರೇನೂ ಅಲ್ಲ. ಕೆಲವೇ ಜನರ ಕೈಯಲ್ಲಿ ಹೆಚ್ಚಿನ ಸಂಪತ್ತು ಸಂಗ್ರಹವಾಗುತ್ತಿದೆ ಎಂದರೆ, ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ ಎಂದರ್ಥ. ಮೋದಿ ಆಳ್ವಿಕೆಯಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿದೆ. ನಾಗಣ್ಣನ ಸಂಪತ್ತು ಒಂದು ರೂಪಾಯಿ, 50 ರೂಪಾಯಿ ಅಂಬಾನಿ ಮತ್ತು 48 ರೂಪಾಯಿ ಇರುವ ಅದಾನಿಯ ಸಂಪತ್ತನ್ನು ಸೇರಿಸಿ ಅದನ್ನು ಮೂರರಿಂದ ಭಾಗಿಸಿದರೆ, 33 ರೂಪಾಯಿ ನಾಗಣ್ಣನ ಸಂಪತ್ತು ಎಂದರೆ ನಗುತ್ತಾರೆ.
ನಮ್ಮ ತಲಾ ಆದಾಯ ಹತ್ತು ಸಾವಿರ ಡಾಲರ್ ಗೆ ತಲುಪಬೇಕಾದರೆ, ಕನಿಷ್ಠ 30 ವರ್ಷಗಳ ಕಾಲ ಶ್ರಮಿಸಬೇಕು ಮತ್ತು ಅದಕ್ಕೆ ಅನುಕೂಲಕರವಾದ ಆರ್ಥಿಕ ಪರಿಸ್ಥಿತಿಗಳು ಇರಬೇಕು ಎಂದು ಅರ್ಥಶಾಸ್ತ್ರಜ್ಞ ಡಿ. ಮುತ್ತುಕೃಷ್ಣನ್ ಹೇಳುತ್ತಾರೆ. ಚೀನಾದ ತಲಾವಾರು ಜಿಡಿಪಿ 2025 ರಲ್ಲಿ 13,873 ಡಾಲರ್‌ಗಳು, ನಮ್ಮ ಪ್ರಸ್ತುತ 2,937 ಡಾಲರ್ ನಿಂದ ಮೊದಲ ಸ್ಥಾನದಲ್ಲಿರುವ ಮೊನಾಕೊ ಮಟ್ಟಕ್ಕೆ, 2,56,581 ಡಾಲರ್ (2023 ವಿಶ್ವಬ್ಯಾಂಕ್ ಡೇಟಾ) ಅಥವಾ ಡಾಲರ್ ನ ದೇವರು ಎಂದು ಕರೆಯಲ್ಪಡುವ ಅಮೆರಿಕ 89,678 ಡಾಲರ್ (2025 IMF) ಮಟ್ಟಕ್ಕೆ, ಆರಾಮ ಕುರ್ಚಿ ಗುರುಗಳು ಹೇಳುವಂತೆ, ಚೀನಾವನ್ನು ಜಯಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಬೇಕಾಗಿಲ್ಲ,
ಉಚಿತ ಆಹಾರ ಧಾನ್ಯ ಪಡೆಯುವ 80 ಕೋಟಿ ಜನರು
“ಕಳೆದ ಹತ್ತು ವರ್ಷಗಳಲ್ಲಿ ಜಿಡಿಪಿಯನ್ನು ದ್ವಿಗುಣಗೊಳಿಸುವುದು ಕೇವಲ ಸಂಖ್ಯೆಗಳಲ್ಲ, 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿ ಹೊಸ ಮಧ್ಯಮ ವರ್ಗವನ್ನು ಸೃಷ್ಟಿಸಿದ್ದೇವೆ. ಅವರು ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ, ಸಕ್ರಿಯವಾಗಿ ಆರ್ಥಿಕತೆ ವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಒಮ್ಮೆ ಹೇಳಿದ್ದರು. ಮತ್ತೊಂದಡೆ, ಕನಿಷ್ಟ ಆಹಾರಧಾನ್ಯಗಳನ್ನು ಖರೀದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ 80 ಕೋಟಿ ಜನರಿಗೆ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಉಚಿತವಾಗಿ ಗೋಧಿ, ಅಕ್ಕಿಯನ್ನು ನೀಡುತ್ತಿದ್ದೇವೆ, ಇನ್ನೂ ಕೆಲವು ವರ್ಷಗಳವರೆಗೆ ಅದನ್ನು ಮುಂದುವರಿಸುತ್ತೇವೆ, ಇದೊಂದು ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಪ್ರಸ್ತುತ 127 ದೇಶಗಳಲ್ಲಿ ಭಾರತ 105 ನೇ ಸ್ಥಾನದಲ್ಲಿದೆ. ವಿಶ್ವದ ಬಡವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಹೊಂದಿರುವ ನಾವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ.

ಹಂಚಿಕೆಯ ಸಮೃದ್ಧಿ ಇಲ್ಲದೆ ಜಿಡಿಪಿ ಬೆಳವಣಿಗೆ
ವಿಶ್ವ ಅಸಮಾನತೆ ವರದಿ 2022 ರ ಪ್ರಕಾರ, ಭಾರತದ ಜನಸಂಖ್ಯೆಯ ತುತ್ತತುದಿಯ ಶೇ. ಒಂದರಷ್ಟು ಜನರು ದೇಶದ ಸಂಪತ್ತಿನ ಶೇ. 40ಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ. ಆದರೆ ಕೆಳಗಿನ ಶೇ. 50 ಜನರು ಕೇವಲ ಶೇ. 3 ರಷ್ಟನ್ನು ಮಾತ್ರ ಹೊಂದಿದ್ದಾರೆ. ಆದಾಯದ ವಿಷಯದಲ್ಲಿ, ಮೇಲಿನ ಶೇ. 10 ಜನರು ರಾಷ್ಟ್ರೀಯ ಆದಾಯದ ಶೇ. 57 ಕ್ಕಿಂತ ಹೆಚ್ಚು ಗಳಿಸುತ್ತಾರೆ.
ಈ ಮಟ್ಟದ ಸಂಪತ್ತು ಕೇಂದ್ರೀಕರಣ ಎಂದರೆ ತಲಾ ಜಿಡಿಪಿ ಮೇಲೆ ಹೇಳಿದಂತೆ ಹಾಸ್ಯಾಸ್ಪದ ಅಥವ ದಾರಿತಪ್ಪಿಸುವ ಅಳತೆ ಆಗುತ್ತದೆ. ಭಾರತದ ತಲಾ ಜಿಡಿಪಿ ಸರಿಸುಮಾರು 2880 ಡಾಲರ್ ಗಳಷ್ಟಿದೆ, ಆದರೆ ಇದು ಸರಾಸರಿ. ನೀವು ಲೆಕ್ಕಾಚಾರದಿಂದ ಅಗ್ರ ಶೇ. 1 ಗಳಿಸುವವರನ್ನು ತೆಗೆದುಹಾಕಿ ಲೆಕ್ಕ ಹಾಕಿದರೆ, ಸಂಖ್ಯೆ ನಾಟಕೀಯವಾಗಿ ಇಳಿಯುತ್ತದೆ.
ಉದಾಹರಣೆಗೆ, ಭಾರತದ ಜಿಡಿಪಿ ಸುಮಾರು 3.9 ಟ್ರಿಲಿಯನ್ ಡಾಲರ್ ಆಗಿದ್ದರೆ ಮತ್ತು ಅಗ್ರ ಶೇ.1 ಜನರು ಅದರ ಶೇ. 40 ಅನ್ನು (ಅಂದರೆ, $1.56 ಟ್ರಿಲಿಯನ್) ನಿಯಂತ್ರಿಸಿದರೆ, ಅದು ಉಳಿದ ಶೇ. 99 ಜನರಿಗೆ (ಸುಮಾರು 140 ಕೋಟಿ ಜನರು) ಶೇ. 2.34 ಟ್ರಿಲಿಯನ್ ಅನ್ನು ಉಳಿಸುತ್ತದೆ . ಇದರ ಪರಿಣಾಮವಾಗಿ ತಲಾ ಜಿಡಿಪಿ ಸುಮಾರು 1,670 ಡಾಲರ್ ಗೆ ಇಳಿಯುತ್ತದೆ, ಇದು ಅಧಿಕೃತ ಸರಾಸರಿಗಿಂತ ಬಹಳ ದೂರದಲ್ಲಿದೆ. ರಾಷ್ಟ್ರೀಯ ಸಂಪತ್ತಿನ ಸುಮಾರು ಶೇ. 62 ಅನ್ನು ನಿಯಂತ್ರಿಸುವ ಅಗ್ರ ಶೇ. 5 ಜನರನ್ನು ನೀವು ತೆಗೆದುಹಾಕಿದರೆ, ಸರಾಸರಿ ತಲಾವಾರು ಸುಮಾರು 1100 ಡಾಲರ್ ಗೆ ಇಳಿಯುತ್ತದೆ. ಅದು ಇಡೀ ವರ್ಷಕ್ಕೆ ಒಂದು ಲಕ್ಷ ರೂಪಾಯಿಗಳಿಗಿಂತ ಕಡಿಮೆ. ಸರ್ಕಾರವು 80 ಕೋಟಿ ಭಾರತೀಯರಿಗೆ ಉಚಿತ ಪಡಿತರವನ್ನು ನೀಡುತ್ತಿರುವುದು ಇದನ್ನು ಸಮರ್ಥಿಸುತ್ತದೆ.
ಅದೇ ಸಮಯದಲ್ಲಿ, ಶತಕೋಟ್ಯಾಧಿಪತಿಗಳು ಅಭಿವೃದ್ಧಿ ಹೊಂದುತ್ತಿದ್ದಾರೆ. ಗೌತಮ್ ಅದಾನಿಯ ನಿವ್ವಳ ಮೌಲ್ಯವು 2020 ರಲ್ಲಿ 9 ಬಿಲಿಯನ್ ಡಾಲರ್ ನಿಂದ 2022 ರ ವೇಳೆಗೆ 100 ಬಿಲಿಯನ್ ಡಾಲರ್ ಗೆ ಜಿಗಿದಿದೆ. ಷೇರು ಮಾರುಕಟ್ಟೆಗಳು ಗಗನಕ್ಕೇರುತ್ತವೆ, ಆದರೆ ಶೇ. 90 ಕ್ಕಿಂತ ಹೆಚ್ಚು ಭಾರತೀಯರು ಷೇರುಗಳಿಗೆ ಯಾವುದೇ ಮಾನ್ಯತೆ ಇಲ್ಲ.
ಹೆಚ್ಚಿನ ಸಂಖ್ಯೆಯ ಜನರು ಅನೌಪಚಾರಿಕ ವಲಯದಲ್ಲಿ
ವಾಸ್ತವವಾಗಿ ಹೆಚ್ಚಿನ ಸಂಖ್ಯೆಯ ಜನಸಂಖ್ಯೆಯು ಅನೌಪಚಾರಿಕ ವಲಯದಲ್ಲಿ ಉದ್ಯೋಗದಲ್ಲಿದ್ದಾರೆ, ಇವರಿಗೆ ಸಾಮಾಜಿಕ ರಕ್ಷಣೆ ಕಡಿಮೆ ಅಥವಾ ಯಾವುದೇ ಸಾಮಾಜಿಕ ರಕ್ಷಣೆ ಇಲ್ಲ. ಇದನ್ನು ಪರಿಗಣಿಸಿ, ಭಾರತೀಯ ಶ್ರಮಿಕಪಡೆಯ ಸುಮಾರು ಶೇ. 50 ಕೃಷಿಯಲ್ಲಿ ದುಡಿಯುತ್ತಿದ್ದಾರೆ. ಆದರೆ, ಈ ವಲಯವು ಜಿಡಿಪಿಗೆ ಕೇವಲ ಶೇ. 18ರಷ್ಟು ಕೊಡುಗೆ ನೀಡುತ್ತದೆ. ಮತ್ತೊಂದೆಡೆ, ಐಟಿ, ಹಣಕಾಸು ಮತ್ತು ರಿಯಲ್ ಎಸ್ಟೇಟ್ ನಂತಹ ಬಂಡವಾಳ-ತೀವ್ರ ಸೇವಾ ವಲಯಗಳು ಜಿಡಿಪಿಗೆ ಶೇ. 50ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ. ಆದರೆ, ಇವು ಕೇವಲ ಶೇ. 30 ರಷ್ಟು ಉದ್ಯೋಗಿಗಳನ್ನು ಮಾತ್ರ ನೇಮಿಸಿಕೊಳ್ಳುತ್ತವೆ ಮತ್ತು ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ.
ಇಲ್ಲಿಯೂ ಸಹ, ವೇತನಗಳು ವರ್ಷಗಳಿಂದ ನಿಶ್ಚಲವಾಗಿವೆ ಆದರೆ, ದೊಡ್ಡ ಉದ್ಯಮಿಗಳ ಲಾಭಾಂಶಗಳು ಏರುತ್ತಲೇ ಇವೆ. ಮಧ್ಯಮ ವರ್ಗವನ್ನು ಅದರ ಹಿಂದಿನ ಬೆಳವಣಿಗೆಯ ಪಥದಿಂದ ದೂರವಿಡಲಾಗಿದೆ. ಭಾರತದ ಓರೆಯಾದ ಯಶಸ್ಸಿನ ಕಥೆಯಲ್ಲಿ ಮಧ್ಯಮ ವರ್ಗವು ಕೆಳಕ್ಕೆ ಇಳಿಯುವ ಅಪಾಯದಲ್ಲಿದೆ. ಮೂಲಭೂತ ಪೋಷಣೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಇಲ್ಲದೆ ಬದುಕುತ್ತಿರುವ 80 ಕೋಟಿ ಭಾರತೀಯರಿಗೆ ಜಿಡಿಪಿ ಶ್ರೇಯಾಂಕಗಳು ಅಪ್ರಸ್ತುತವಾಗುತ್ತವೆ. ತೀವ್ರ ಅಸಮಾನತೆಯು ಆಳುವವರನ್ನು ಎಚ್ಚರಿಸಬೇಕು. ದೇಶಗಳು ಶ್ರೀಮಂತರಾಗುತ್ತಿವೆ. ಆದರೆ ಅವುಗಳ ಜನರು ಶ್ರೀಮಂತರಾಗುತ್ತಿಲ್ಲ. ಬದಲಾಗಿ ದಾರಿದ್ರ್ಯಕ್ಕೆ ಇಳಿಯುತ್ತಿದ್ದಾರೆ.
ನಿಮ್ಮ ಟಿಪ್ಪಣಿ ಬರೆಯಿರಿ