2ಜಿ ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇ ಇಲ್ಲ

ಉದ್ಯಮಿಗಳು, ರಾಜಕಾರಣಿಗಳು ದೋಚಿದ ರೂ. 1.76 ಲಕ್ಷ ಕೋಟಿ ಸಾರ್ವಜನಿಕರ ಪಾಲಿಗೆ ದಕ್ಕಲೇ ಇಲ್ಲ  

ಬಹುಕೋಟಿ ಮೌಲ್ಯದ 2ಜಿ ಹಗರಣ, ಕಲ್ಲಿದ್ದಲು ಹಗರಣ ಯಾರಿಗೆ ಗೊತ್ತಿಲ್ಲ ಹೇಳಿ? ಈ ಹಗರಣಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಇಟ್ಟುಕೊಂಡು, ದೇಶಾದ್ಯಂತ, ಅಣ್ಣಾ ಹಜಾರೆ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆದದ್ದು, ಬಿಜೆಪಿ ಮತ್ತು ಸಂಘಪರಿವಾರ ಅದರ ಹಿಂದೆ ಇದ್ದದ್ದು, ಕಾರ್ಪೊರೇಟ್ ಒಡೆತನದ ಮಾಧ್ಯಮಗಳು ವ್ಯಾಪಕ ಪ್ರಚಾರ ಕೊಟ್ಟಿದ್ದು, ಈ ಆಂದೋಲದಲ್ಲಿ ಕೇಜ್ರಿವಾಲ್, ಕಿರಣ್ ಬೇಡಿ ಜೊತೆಗೂಡಿದ್ದು, ವಿಧ್ಯಾರ್ಥಿಗಳು, ಯುವಜನರು ‘ನಾನೂ ಅಣ್ಣಾ’ ಎಂದು ಹೇಳುತ್ತಾ ಆಂದೋಲನದಲ್ಲಿ ಭಾಗಿಯಾಗಿದ್ದು, ಈ ಆಂದೋಲನದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು, ಬಿಜೆಪಿ ನೇತೃತ್ವದ ಎನ್ ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು, ನಂತರದ ದೆಹಲಿ ವಿದಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದಿದ್ದು, ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಉದ್ಯಮಿಗಳ ಭ್ರಷ್ಟಾಚಾರದ ಕುರಿತು ಮೌನವಾಗಿರುವುದು, ಮೋದಿ ಪ್ರಧಾನಿಯಾದ ನಂತರ ಕಿರಣ್ ಬೇಡಿ ರಾಜ್ಯಪಾಲರಾಗಿ ನೇಮಕಗೊಂಡಿದ್ದು… ಇವೆಲ್ಲವೂ ಸಾಮಾನ್ಯವಾಗಿ ಎಲ್ಲರಿಗೂ ನೆನಪಿನಲ್ಲಿರುತ್ತದೆ. ಆದರೆ, ಸಾವಿರಾರು ಕೊಟಿ ಮೌಲ್ಯದ 2ಜಿ ಹಗರಣ ಮತ್ತು ಕಲ್ಲಿದ್ದಲು ಹಗರಣಗಳ ಅಂತ್ಯ ಹೇಗಾಯಿತು? ಹಗರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಯಿತೇ? ಅವರು ಜೈಲು ಪಾಲಾದರೆ? ಹಗರಣದಲ್ಲಿ ಲೂಟಿ ಮಾಡಿದ ಲಕ್ಷಾಂತರ ಕೋಟಿ ಮೌಲ್ಯದ ಸಾರ್ವಜನಿಕರ ಸಂಪತ್ತನ್ನು ಸರ್ಕಾರ ವಶಕ್ಕೆ ಪಡೆಯಿತೇ? ಅಥವಾ ನಂತರದ ತರಂಗಾಂತರ ಹಂಚಿಕೆಗಳು ಪಾರದರ್ಶಕವಾಗಿ, ವಂಚನೆ ಇಲ್ಲದೆ ನಡೆಯುತ್ತಿವೆಯೇ? ಈ ಎಲ್ಲಾ ಪ್ರಶ್ನೆಗಳಿಗೆ ‘ಇಲ್ಲ’ ಎಂಬುದೊಂದೇ ಉತ್ತರ.

ಇಷ್ಟೆಲ್ಲಾ ಹೇಳುವಾಗಲೂ, ಅಣ್ಣಾ ಹಜಾರೆ ತಾವೇ ಸಿದ್ದಪಡಿಸಿದ ಜನ ಲೋಕಪಾಲ್ ಮಸೂದೆಯನ್ನು ಸಂಸತ್ತು ಒಪ್ಪಿಕೊಳ್ಳಲೇ ಬೇಕು ಎಂದು ಹಿಡಿದಿದ್ದರು. ಆ ಮೂಲಕ ಮಸೂದೆಗಳನ್ನು ರೂಪಿಸಲು ಸಂಸತ್ತಿಗೆ ಇರುವ ಅಧಿಕಾರವನ್ನೇ  ಕಸಿಯುವ ಪ್ರಯತ್ನ ಮಾಡಿದರು. ಮತ್ತೊಂದು ಗಮನಿಸಬೇಕಾದ ವಿಷಯವೆಂದರೆ, ಹಗರಣದ ಬಹಪಾಲನ್ನು ನುಂಗಿದ  ಕಾರ್ಪೊರೇಟ್ ಕಂಪನಿಗಳ ಭ್ರಷ್ಟಾಚಾರದ ತನಿಖೆಯ ಕುರಿತು ಆ ಜನ ಲೋಕಪಾಲ್ ಮಸೂದೆಯಲ್ಲಿ ಪ್ರಸ್ತಾಪವೇ ಇಲ್ಲದಿದ್ದುದು. ಇದನ್ನು ಸಿಪಿಐಎಂ (ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬಲವಾಗಿ ವಿರೋಧಿಸಿತ್ತು. ಕಾರ್ಪೊರೇಟ್ ಕಂಪನಿಗಳನ್ನೂ ತನಿಖೆಗೆ ಒಳಪಡಿಸುವ ಅಂಶಗಳೂ ಲೋಕಪಾಲ ಮಸೂದೆಯಲ್ಲಿ ಇರಬೇಕೆಂದು ಅದು ಪ್ರತಿಪಾದಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಏನಿದು 2ಜಿ ಸ್ಪೆಕ್ಟ್ರಮ್ ಹಗರಣ?

ಯಾವುದೇ ಒಂದು ಹಗರಣ ನಡೆದರೆ, ಅಲ್ಲಿ ಕೇವಲ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪಾತ್ರ ಮಾತ್ರ ಇರುವುದಿಲ್ಲ. ಅದರ ಹಿಂದೆ, ಅದರಿಂದ ಹೆಚ್ಚು ಲಾಭಗಳಿಸುವ ಉದ್ಯಮಪತಿಗಳಿರುತ್ತಾರೆ. ಕಾರ್ಪೋರೇಟ್ ಸಂಸ್ಥೆಗಳ, ವಿದೇಶಿ ಬಹುರಾಷ್ಟೀಯ ಕಂಪನಿಗಳ ಮತ್ತು ದೇಶದ ದೊಡ್ಡ ದೊಡ್ಡ ಕುಳಗಳ ಪಾತ್ರ ಆ ಹಗರಣಗಳಲ್ಲಿ ಇದ್ದೇ ಇರುತ್ತದೆ. 2ಜಿ ಪ್ರಕರಣದಲ್ಲಿಯೂ ಹಗರಣದ ಹೆಚ್ಚಿನ ಪಾಲು ಟೆಲಿಕಾಂ ಉದ್ಯಮಿಗಳ ಪಾಲಾಗಿದೆ.

2008 ರಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಅಗ್ಗದ ಬೆಲೆಯಲ್ಲಿ 2G ಪರವಾನಗಿಗಳನ್ನು ನೀಡಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಸಿಎಜಿ, ಸ್ಪೆಕ್ಟ್ರಂ ಹಗರಣದಿಂದ ಸರ್ಕಾರಕ್ಕೆ ₹ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ವರದಿ ಮಾಡಿತು. ಪರವಾನಗಿಗಳನ್ನು ನೀಡುವಾಗ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿದೆ,  2008 ರಲ್ಲಿ ಸ್ಪೆಕ್ಟ್ರಮ್ ಪರವಾನಗಿಗಳಿಗೆ ಪ್ರವೇಶ ಶುಲ್ಕವನ್ನು 2001 ರ ಬೆಲೆಗಳಲ್ಲಿ ನಿಗದಿಪಡಿಸಲಾಗಿದೆ, ಸರಿಯಾದ ಹರಾಜು ಪ್ರಕ್ರಿಯೆಯನ್ನು ಅನುಸರಿಸಲಾಗಿಲ್ಲ, ಯಾವುದೇ ಬಿಡ್‌ಗಳನ್ನು ಆಹ್ವಾನಿಸಲಾಗಿಲ್ಲ, ಇದರಿಂದ ಸರ್ಕಾರಕ್ಕೆ 1.76 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅದು ಹೇಳಿತು. ಕೇಂದ್ರದ ಸಚಿವರಾಗಿದ್ದ ಎ. ರಾಜಾ, 3,000 ಕೋಟಿ ರೂಪಾಯಿ ಲಂಚ ಪಡೆದು ಖಾಸಗೀ ಟೆಲಿಕಾಂ ಕಂಪನಿಗಳಿಗೆ ಅಸಂವಿಧಾನಿಕವಾಗಿ ಲೈಸೆನ್ಸ್ ನೀಡಿದ್ದಾರೆಂಬ ಆರೋಪಿಸಲಾಯ್ತು.

ಯುನಿಟೆಕ್, ಸ್ವಾನ್ ಟೆಲಿಕಾಂ ಯಾವುದೇ ಪೂರ್ವ ಟೆಲಿಕಾಂ ಅನುಭವವಿಲ್ಲದೆ ಪರವಾನಗಿಗಳನ್ನು ಪಡೆದಿದ್ದವು. ಸ್ವಾನ್ ಟೆಲಿಕಾಂ ಅರ್ಹತಾ ಮಾನದಂಡಗಳನ್ನು ಪೂರೈಸದಿದ್ದರೂ ಪರವಾನಗಿ ನೀಡಲಾಗಿತ್ತು. ಸ್ವಾನ್ ರೂ. 1537 ಕೋಟಿಗೆ ಪರವಾನಗಿ ಪಡೆದು, ಇದರ ಶೇ. 45ರಷ್ಟು ಪಾಲನ್ನು ಎಟಿಸಲಾಟ್‌ಗೆ ರೂ. 4200 ಕೋಟಿಗೆ ಮಾರಾಟ ಮಾಡಿತು. ಯುನಿಟೆಕ್ ವೈರ್‌ಲೆಸ್ ರೂ. 1661 ಕೋಟಿಗೆ ಪರವಾನಗಿ ಪಡೆದು, ರೂ. 6200 ಕೋಟಿಗೆ 60% ಪಾಲನ್ನು ಮಾರಾಟ ಮಾಡಿತು. ಎಲ್ಲಾ ಒಂಬತ್ತು ಕಂಪನಿಗಳು 2ಜಿ ಪರವಾನಗಿಗಾಗಿ ಡಾಟ್‌ಗೆ ಕೇವಲ ₹ 10,772 ಕೋಟಿ ಪಾವತಿಸಿವೆ. ಅಂದಿನ ಕೇಂದ್ರ ಸರ್ಕಾರಕ್ಕೆ TRAI ಮತ್ತು ಕಾನೂನು ಸಚಿವಾಲಯ, ಹಣಕಾಸು ಸಚಿವಾಲಯ ಮಾರುಕಟ್ಟೆ ದರದಲ್ಲಿ ತರಂಗಾಂತರವನ್ನು ಹರಾಜಿಗೆ ಶಿಫಾರಸು ಮಾಡಿತ್ತು. ಆದರೆ ದೂರಸಂಪರ್ಕ ಸಚಿವರಾಗಿದ್ದ ಡಿಎಂಕೆ ಪಕ್ಷದ ಎ. ರಾಜಾ ಇದನ್ನು ನಿರಾಕರಿಸಿ ಅಗ್ಗದ ಟೆಲಿಕಾಂ ಪರವಾನಗಿಗಳನ್ನು ನೀಡಿದರು ಎಂದು ಆರೋಪಿಸಲಾಗಿತ್ತು. ಈ ಸಂಬಂದ ರಾಜಾ ಬಂದನಕ್ಕೂ ಒಳಗಾಗಿದ್ದರು.

ಲಾಭ ಅನಿಲ್ ಅಂಬಾನಿಗೆ; ಆರೋಪ ಅವರ ಅಧಿಕಾರಿಗಳ ಮೇಲೆ

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಪುತ್ರಿ ಹಾಗೂ ಸಂಸದೆ ಕನಿಮೊಳಿ ಅವರನ್ನು ಸಿಬಿಐ ಎ. ರಾಜಾ ಜತೆ ಸಂಚುಕೋರ ಎಂದು ಹೆಸರಿಸಿತ್ತು. ಸ್ವಾನ್ ಟೆಲಿಕಾಂನ ಪ್ರವರ್ತಕ ಶಾಹಿದ್ ಬಲ್ವಾ, ಯುನಿಟೆಕ್ ಮುಖ್ಯಸ್ಥ ಸಂಜಯ್ ಚಂದ್ರ ಮತ್ತು ಡಿಬಿ ರಿಯಾಲ್ಟಿ ಸಂಸ್ಥಾಪಕ ವಿನೋದ್ ಗೋಯೆಂಕಾ, ಅನಿಲ್ ಅಂಬಾನಿಯವರ ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಗೌತಮ್ ದೋಷಿ ಸೇರಿದಂತೆ ಆ ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಹರಿ ನಾಯರ್ ಮತ್ತು ಸುರೇಂದ್ರ ಪಿಪಾರಾ ಇವರ ಮೇಲೂ ವಂಚನೆ ಮತ್ತು ಪಿತೂರಿ ಆರೋಪಪಟ್ಟಿ ಸಲ್ಲಿಸಲಾಗಿತ್ತು.  ತಮ್ಮ ಒಡೆಯ ಅನಿಲ್ ಅಂಬಾನಿಯವರಿಗೆ ಲಾಭ ಮಾಡಿಕೊಟ್ಟ ತಪ್ಪಿಗಾಗಿ ಅವರ ಮೂವರು ಹಿರಿಯ ಅಧಿಕಾರಿಗಳನ್ನು ತಿಹಾರ್ ಜೈಲಿನಲ್ಲಿಡಲಾಗಿತ್ತು. ರಿಲಯನ್ಸ್ ಟೆಲಿಕಾಂ ಮೇಲೆ ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆಯ ಉಲ್ಲಂಘನೆಯನ್ನು ಉಂಟುಮಾಡುವ ಕ್ರಿಮಿನಲ್ ಪಿತೂರಿ (ವಿಭಾಗ 120-B) ಮತ್ತು ವಂಚನೆ (ವಿಭಾಗ 420) ಆರೋಪ ಹೊರಿಸಲಾಗಿತ್ತು. ಆದರೆ, ಅನಿಲ್ ಅಂಬಾನಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ದೈರ್ಯ ತನಿಖಾ ಸಂಸ್ಥೆಗಳಿಗೆ ಇರಲಿಲ್ಲ. ಈ ಹಗರಣಕ್ಕೆ ಸಂಬಂದಿಸಿದಂತೆ ಸಿಬಿಐ ನ ವಿಶೇಷ ನ್ಯಾಯಾಲದಲ್ಲಿ, ಅನಿಲ್ ಅಂಬಾನಿ ಮತ್ತು ಟೀನಾ ಅಂಬಾನಿ ಹಾಜರಾಗಿದ್ದರು.

ಸ್ವಾನ್‌ ಸಂಸ್ಥೆಯ ನೈಜ ಮಾಲೀಕತ್ವವನ್ನು ಮರೆಮಾಚಿದರು

2011ರ ಸೆಪ್ಟೆಂಬರ್‌ನಲ್ಲಿ, ಪ್ರಶಾಂತ್ ಭೂಷಣ್ ಅವರು, ಸಿಬಿಐ ಅನಿಲ್ ಅಂಬಾನಿ ವಿರುದ್ದ ಚಾರ್ಜ್‌ಶೀಟ್ ಮಾಡುತ್ತಿಲ್ಲ ಎಂದು ನ್ಯಾಯಮೂರ್ತಿ ಸಿಂಘ್ವಿ ಮತ್ತು ನ್ಯಾಯಮೂರ್ತಿ ಎ ಕೆ ಗಂಗೂಲಿ ಅವರಿದ್ದ ಪೀಠದಲ್ಲಿ ನ್ಯಾಯಾಲಯಕ್ಕೆ ಲಿಖಿತವಾಗಿ ನೀಡಿದ್ದರು. ಅನಿಲ್ ಅಂಬಾನಿ ಅವರು ರಿಲಯನ್ಸ್ ಟೆಲಿಕಾಂನ ಬಹುಪಾಲು ಷೇರುದಾರರು ಮತ್ತು ಅಧ್ಯಕ್ಷರಾಗಿದ್ದಾರೆ, ಆದ್ದರಿಂದ ತನಿಖೆ ನಡೆಸಬೇಕು ಎಂದು ಭೂಷಣ್ ವಾದಿಸಿದ್ದರು.

ಸ್ವಾನ್‌ ಸಂಸ್ಥೆಯ ನೈಜ ಮಾಲೀಕತ್ವವನ್ನು ಮರೆಮಾಚಲು ಮೂವರು ಉದ್ಯೋಗಿಗಳು ಕಂಪನಿಗಳ ಜಟಿಲ ರಚನೆಯನ್ನು ಸೃಷ್ಟಿಸಿ, ಅಧ್ಯಕ್ಷರು ಮತ್ತು ಮಂಡಳಿಯ ಅನುಮೋದನೆಯಿಲ್ಲದೆ, ಕಂಪನಿಯ ಹಣದಲ್ಲಿ 1,000 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ಭೂಷಣ್ ನ್ಯಾಯಾಲಯದಲ್ಲಿ ವಾದಿಸಿದರು. ರಿಲಯನ್ಸ್ ಎಡಿಎಜಿ ಬಳಸಿದ ಬ್ಯಾಂಕ್, 10 ಕೋಟಿಗಿಂತ ಹೆಚ್ಚಿನ ಮೊತ್ತದ ಯಾವುದೇ ಚೆಕ್‌ಗೆ ಅನಿಲ್ ಅಂಬಾನಿ ಅಥವಾ ಅವರ ಪತ್ನಿ ಟೀನಾ ಅವರ ಅನುಮೋದನೆ ಅಗತ್ಯವಿದೆ ಎಂದು ಸಿಬಿಐಗೆ ತಿಳಿಸಿದೆ. ಅನಿಲ್ ಅಂಬಾನಿ ಅವರು ಮೂವರು ಉದ್ಯೋಗಿಗಳನ್ನು ಹೊರಹಾಕುವ ಬದಲು ಜೈಲಿನಲ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಎಲ್ಲಾ ಕಾನೂನು ಸಹಾಯದ ಭರವಸೆ ನೀಡಿದ್ದಾರೆ ಎಂದು ಭೂಷಣ್ ಗಮನಸೆಳೆದಿದ್ದರು.

ಈ ಗಂಭೀರ ಆರೋಪಗಳ ಬಗ್ಗೆ ಮಾತನಾಡುವಾಗ, ಪ್ರಕರಣವನ್ನು ವ್ಯವಹರಿಸುವ ಹಿರಿಯ ಸಿಬಿಐ ಅಧಿಕಾರಿಯೊಬ್ಬರು “ನಮ್ಮ ತನಿಖೆಯ ಯಾವುದೇ ಸಮಯದಲ್ಲಿ ಈ ಅಧಿಕಾರಿಗಳು ಅನಿಲ್ ಅಂಬಾನಿ ಅವರನ್ನು ಹೆಸರಿಸಲಿಲ್ಲ, ಹೀಗಾಗಿ ಅವರನ್ನು ಮುಟ್ಟಲಿಲ್ಲ” ಎಂದು ಹೇಳಿದರೆಂದು rediff.com ವರದಿಮಾಡಿದೆ. ತನಿಖಾಧಿಕಾರಿಗಳು ಅನಿಲ್ ಅಂಬಾನಿಯನ್ನು ಸುದೀರ್ಘವಾಗಿ ವಿಚಾರಣೆ ನಡೆಸಿದರು ಮತ್ತು ಅವರ ವಿರುದ್ಧದ ಪ್ರಕರಣವನ್ನು ಎಚ್ಚರಿಕೆಯಿಂದ ಪರಿಶೀಲಿಸಿದರು ಎಂದು ಅಧಿಕಾರಿ ಹೇಳಿದರು ಎಂದು ಅದರ ವರದಿಯಲ್ಲಿ ಹೇಳಲಾಗಿದೆ.

ರತನ್ ಟಾಟಾ

ಟಾಟಾ ಟೆಲಿಸರ್ವಿಸಸ್ ಒಡೆಯರಾದ ರತನ್ ಟಾಟಾ ಮೇಲೂ ಹಗರಣದ ಆರೋಪ ಇತ್ತು.

ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ಕುಟುಂಬಕ್ಕೆ ಸುಮಾರು 200 ಕೋಟಿ ಮೌಲ್ಯದ ಚೆನ್ನೈನಲ್ಲಿರುವ ತಮ್ಮ ವೋಲ್ಟಾಸ್ ಭೂಮಿಯನ್ನು ಟಾಟಾ ಉಡುಗೊರೆಯಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಕುಖ್ಯಾತ ರಾಡಿಯಾ ಟೇಪ್‌ಗಳಲ್ಲಿ ನೀರಾ ರಾಡಿಯಾ (ಪಿಆರ್ ವೃತ್ತಿಪರ ಟಾಟಾ ಲಾಬಿಸ್ಟ್) ಮತ್ತು ರಾಜತಿ ಅಮ್ಮಾಳ್ (ಕರುಣಾನಿಧಿ ಅವರ ಪತ್ನಿ ಮತ್ತು ಕನಿಮೊಳಿ ಅವರ ತಾಯಿ) ನಡುವೆ ವೋಲ್ಟಾಸ್ ಭೂ ವ್ಯವಹಾರದ ಕುರಿತು ಚರ್ಚಿಸಲಾಗಿದೆ. ಆರೋಪಿ ಹಾಗೂ ಮಾಜಿ ಟೆಲಿಕಾಂ ಸಚಿವ ಎ. ರಾಜಾ ಅವರ ದೂರಸಂಪರ್ಕ ಮತ್ತು ತರಂಗಾಂತರ ಹಂಚಿಕೆ ನೀತಿಗಳನ್ನು ಶ್ಲಾಘಿಸಿ ರತನ್ ಟಾಟಾ ಅವರು ಕರುಣಾನಿಧಿ ಅವರಿಗೆ ಪತ್ರ ಬರೆದಿದ್ದರು. ನೀರಾ ರಾಡಿಯಾ ಮೂಲಕ ಪತ್ರವನ್ನು ಹಸ್ತಾಂತರಿಸಲಾಯಿತು ಎಂಬ ಆರೋಪಗಳೂ ಕೇಳಿಬಂದಿದ್ದವು. ಆದರೆ, ಕಾನೂನು ನಿಬಂಧನೆಗಳ ಅಡಿಯಲ್ಲಿ ರತನ್ ಟಾಟಾ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದು ಸಿಬಿಐ ಹೇಳಿತು.

ಉದ್ಯಮಿಗಳಿಗೆ ದೊಡ್ಡ ಮೊತ್ತದ ಹಣ

ಇಲ್ಲಿ ಆರೋಪಕ್ಕೆ ಒಳಗಾಗಿರುವ ರಾಜಕೀಯ ವ್ಯಕ್ತಿ ಎ. ರಾಜಾ ಪಡೆದ ಲಂಚದ ಹಣ 3,000 ಕೋಟಿ ರೂಪಾಯಿ ಮಾತ್ರ. ಮತ್ತಷ್ಟು ರಾಜಕೀಯ ವ್ಯಕ್ತಿಗಳಿಗೆ, ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳಿಗೆ, ಅದಕ್ಕೆ ಸಹಕರಿಸಿದ ಮತ್ತು ಮದ್ಯವರ್ತಿಗಳಾಗಿ ವ್ಯವಹರಿಸಿದ (ಮೀರಾ ರಾಡಿಯಾಳಂತ) ವ್ಯೆಕ್ತಿಗಳಿಗೆ ನೀಡಿದ ಹಣ ಸೇರಿದರೆ, ಲಂಚದ ಮೊತ್ತ ನಾಲ್ಕೈದು ಸಾವಿರ ಕೋಟಿ ರೂಪಾಯಿಗಳಾಗುತ್ತದೆ ಎಂದುಕೊಂಡರೂ, ಈ ಹಗರಣದಿಂದ ಬರುವ ಉಳಿದ ಹಣ ಉದ್ಯಮಪತಿಗಳ ಪಾಲಾಗುತ್ತದೆ. ಈ ಹಗರಣಗಳಲ್ಲಿ, ಇತರೆ ಕೆಲವು ಟೆಲಿಕಾಂ ಕಂಪನಿಗಳಲ್ಲದೆ, ರಿಲಯನ್ಸ್ ಅನಿಲ್ ದೀರೂಬಾಯಿ ಅಂಬಾನಿ ಗ್ರೂಪ್ ಮತ್ತು ಟಾಟಾ ಟೆಲಿಸರ್ವೀಸಸ್ ಕಂಪನಿಗಳೂ ಬಾಗಿಯಾಗಿವೆ ಎಂದ ಮೇಲೆ ಸರ್ಕಾರಕ್ಕೆ ವಂಚಿಸಿದ ದೊಡ್ಡ ಮೊತ್ತದ ಹಣ ಉದ್ಯಮಿಗಳ ಪಾಲಾಗಿದೆ ಎಂದೇ ಅರ್ಥ.

ಮೋದಿ ಅಧಿಕಾರಕ್ಕೆ ಬಂದ ನಂತರ

21 ಡಿಸೆಂಬರ್ 2017 ರಂದು, ಹೊಸದಿಲ್ಲಿಯ ವಿಶೇಷ ನ್ಯಾಯಾಲಯವು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮತ್ತು CBI ಹೇಳುವುದನ್ನು ಆಲಿಸಿದ ನಂತರ, ಪ್ರಧಾನ ಆರೋಪಿಗಳಾದ ರಾಜಾ ಮತ್ತು ಕನಿಮೊಳಿ ಸೇರಿದಂತೆ 2G ಸ್ಪೆಕ್ಟ್ರಮ್ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು. ಈ ಪ್ರಕರಣ ನಿರಾಧಾರ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, “ಕೆಲವರು ಕೆಲವು ಆಯ್ದ ಸಂಗತಿಗಳನ್ನು ಕಲಾತ್ಮಕವಾಗಿ ಜೋಡಿಸಿ ಮತ್ತು ಗುರುತಿಸಲಾಗದಷ್ಟು ವಿಷಯಗಳನ್ನು ಖಗೋಳ ಮಟ್ಟಕ್ಕೆ ಉತ್ಪ್ರೇಕ್ಷಿಸುವ ಮೂಲಕ ಹಗರಣವನ್ನು ಸೃಷ್ಟಿಸಿದರು ಎಂದು ತೀರ್ಪಿನಲ್ಲಿ ಹೇಳಲಾಗಿದೆ.

‘ಆರೋಪವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಹಾಗಾಗಿ ಆರೋಪಿಗಳು ಖುಲಾಸೆಗೊಳ್ಳಲು ಅರ್ಹರಾಗಿದ್ದಾರೆ ಮತ್ತು ಹಾಗಾಗಿ ಅವರನ್ನು ಖುಲಾಸೆ ಮಾಡಲಾಗಿದೆ’ ಎಂದು ನ್ಯಾಯಾದೀಶ ಶೈನಿ ಹೇಳಿದ್ದಾರೆ.!! ಹಾಗಾಗಿ, 2G ಹಗರಣಕ್ಕೆ ಭಾಗಶಃ ಫುಲ್‌ಸ್ಟಾಪ್ ಇಟ್ಟಂತಾಯ್ತು.

ದೆಹಲಿ ಹೈಕೋರ್ಟ್ ನಲ್ಲಿ ಮುಂದುವರಿದಿದೆ

19 ಮತ್ತು 20 ಮಾರ್ಚ್ 2018 ರಂದು, ಜಾರಿ ನಿರ್ದೇಶನಾಲಯ ಮತ್ತು CBI ಕ್ರಮವಾಗಿ ದೆಹಲಿ ಹೈಕೋರ್ಟ್‌ನಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿವೆ. ಕೇಂದ್ರೀಯ ತನಿಖಾ ದಳ (ಸಿಬಿಐ) 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ ಪ್ರಕರಣದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಮುಂದುವರಿದ ವಿಚಾರಣೆಯ ಭಾಗವಾಗಿ ಮೇ, 2023 ರಲ್ಲಿ “(ವಿಚಾರಣಾ ನ್ಯಾಯಾಲಯ) ತೀರ್ಪಿನಲ್ಲಿ ಎದ್ದುಕಾಣುವ ಅಕ್ರಮಗಳಿವೆ ಎಂದು ನಾನು ಪ್ರದರ್ಶಿಸುತ್ತೇನೆ. ಸಿಬಿಐ ಸಲ್ಲಿಸಿದ ಸಾಕ್ಷ್ಯವನ್ನು ಕಡೆಗಣಿಸಲಾಗಿದೆ. ಸಾಕ್ಷ್ಯಾಧಾರಗಳ ಮೌಲ್ಯವು ಸಂಪೂರ್ಣವಾಗಿ ತಪ್ಪು. ತೀರ್ಪಿನಲ್ಲಿ ವಿಕೃತ ಮತ್ತು ದೋಷಗಳಿವೆ ಎಂದು ತೋರಿಸುತ್ತೇನೆ, ವಿಚಾರಣಾ ನ್ಯಾಯಾಲಯದ ತೀರ್ಪು “ತಪ್ಪು ತೀರ್ಮಾನಗಳನ್ನು” ಆಧರಿಸಿದೆ ಎಂದು ಸಿಬಿಐ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲ ನೀರಜ್ ಜೈನ್ ವಾದ ಮಂಡಿಸಿದರು. ಈ ಪ್ರಕರಣದ ವಿಚಾರಣೆ ಒಂದೂವರೆ ದಶಕಗಳ ನಂತರವೂ ಮುಂದುವರಿದಿದೆಯಾದರೂ, ಬಂಡವಾಳಶಾಹಿ ಹಿಡಿತದಲ್ಲಿ ಇರುವ ಈ ವ್ಯವಸ್ಥೆಯಲ್ಲಿ, ಹಗರಣದಲ್ಲಿ ಭಾಗಿಯಾದ ದೊಡ್ಡ ಉದ್ಯಮಿಗಳಿಗೆ ಶಿಕ್ಷೆಯಾಗುತ್ತದೆ ಎಂದೋ, ಅವರು ದೋಚಿದ ಲಕ್ಷಾಂತರ ಕೋಟಿ ಹಣವನ್ನು ಸರ್ಕಾರ ವಶಕ್ಕೆ ಪಡೆಯುತ್ತದೆ ಎಂದೋ ನಂಬಲಾಗದು.

Is this your new site? Log in to activate admin features and dismiss this message
ಲಾಗಿನ್