
“ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು”
ಸಾಫ್ಟ್‌ವೇರ್ ಉದ್ಯೋಗಿಗಳೆಂದರೆ, ಅವರಿಗೇನು ಕಡಿಮೆ ಇದೆ? ಉತ್ತಮ ಸಂಬಳ ಸಿಗುತ್ತೆ, ಹವಾನಿಯಂತ್ರಣ ಕೊಠಡಿಗಳಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ, ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ, ಉನ್ನತ ದರ್ಜೆಯ ಜೀವನ ನಡೆಸುತ್ತಾರೆ ಎಂದೆಲ್ಲಾ ಹಲವರು ಭಾವಿಸುತ್ತಾರೆ. ಆದರೆ, “ನಾವು ಮನುಷ್ಯರು… ಕಂಪನಿಗಳ ಗುಲಾಮರಲ್ಲ”, “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಎಂಬ ಘೋಷಣೆಗಳೊಂದಿಗೆ ಟೆಕ್ಕಿಗಳೂ ಹೋರಾಟಕ್ಕಿಳಿದಿದ್ದಾರೆ. ಎಲ್ಲಾ ಕೈಗಾರಿಕೆಗಳಂತೆ ಐಟಿ ಕ್ಷೇತ್ರದಲ್ಲಿಯೂ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕೆಲವರು ಸಾಫ್ಟ್‌ವೇರ್ ಉದ್ಯೋಗ ಎಂದರೆ, ಅವರಿಗೇನು? ಉತ್ತಮ ಸಂಬಳ ಸಿಗುತ್ತೆ, ಹವಾನಿಯಂತ್ರಣ ಕೊಠಡಿಗಳಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ, ದುಬಾರಿ ಎಸಿ ಕಾರುಗಳಲ್ಲಿ ಓಡಾಡುತ್ತಾರೆ, ಉನ್ನತ ದರ್ಜೆಯ ಜೀವನ ನಡೆಸುತ್ತಾರೆ ಎಂದೆಲ್ಲಾ ಭಾವಿಸುತ್ತಾರೆ. ಆದರೆ, ಎಲ್ಲಾ ಉದ್ಯೋಗಿಗಳಂತೆ ಅವರೂ ಸಹ ಸಮಸ್ಯೆಗಳನ್ನು ಎದುರಿಸುತ್ತಾರೆ, ಮಧ್ಯರಾತ್ರಿಯವರೆಗೆ ಕಚೇರಿಗಳಲ್ಲಿ ಕೆಲಸ ಮಾಡುತ್ತಾರೆ, ತಮ್ಮ ಕುಟುಂಬಗಳೊಂದಿಗೆ ಮೋಜಿನ ಸಮಯ ಕಳೆಯಲು ಅವರಿಗೆ ಸಮಯ ಸಿಗುವುದಿಲ್ಲ ಎಂಬ ಸತ್ಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ವಿಷಯದ ಬಗ್ಗೆಯೇ ಬೆಂಗಳೂರಿನ ಸಾಫ್ಟ್‌ವೇರ್ ವಲಯದಲ್ಲಿ ಭುಗಿಲೆದ್ದಿರುವ ಆಂದೋಲನ ಇಂದು ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ (2025ರ ಮಾರ್ಚ್ 9) ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು. ಅವರು ರಾಜ್ಯ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಪ್ರಧರ್ಶನ ನಡೆಸುವ ಮೂಲಕ ಪ್ರತಿಭಟಿಸಿದರು, “ನಾವು ಮನುಷ್ಯರು… ಕಂಪನಿಗಳ ಗುಲಾಮರಲ್ಲ” ಎಂಬ ಘೋಷಣೆ ಕೂಗಿದರು. ಕಾರ್ಪೊರೇಟ್ ದೈತ್ಯ ಕಂಪನಿಗಳನ್ನು ನಡೆಸುವ ಖಾಸಗಿ ಕಂಪನಿ ಮಾಲೀಕರು ಕೆಲಸದ ಸಮಯವನ್ನು ಹೆಚ್ಚಿಸುವ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗಳ ನಂತರ ಈ ಆಂದೋಲನ ಪ್ರಾರಂಭವಾಯಿತು ಎಂಬುದು ಗಮನಾರ್ಹ.
ಬೆಂಗಳೂರಿನ ತಂತ್ರಜ್ಞಾನ ವಲಯದಲ್ಲಿ ವ್ಯಾಪಕ ಬಿಕ್ಕಟ್ಟು
ಕಾಲದೊಂದಿಗೆ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಐಟಿ ಕ್ಷೇತ್ರವೂ ಒಂದು. ಇಂದು ಬೆಂಗಳೂರು ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಕೇಂದ್ರವಾಗಿದೆ. ಕಂಪನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ದೇಶದ ಇತರ ರಾಜ್ಯಗಳಿಂದಲೂ ಇಲ್ಲಿಗೆ ವಲಸೆ ಬರುವ ಉದ್ಯೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ 15 ಲಕ್ಷಕ್ಕಿಂತಲೂ ಹೆಚ್ಚು ಐಟಿ ಉದ್ಯೋಗಿಗಳಿದ್ದಾರೆ. ಇದು ಕಂಪನಿಗಳ ಮಾಲೀಕರಿಗೆ ವರದಾನವಾಗಿದೆ. ತನ್ನ ಉದ್ಯೋಗಿಗಳನ್ನು ಬೆದರಿಸಿ ಕೆಲಸ ಮಾಡಿಸುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಜಾಗತಿಕ ಆರ್ಥಿಕ ಮಂದಗತಿ ಮತ್ತು ಯಾಂತ್ರೀಕರಣವನ್ನು ಉಲ್ಲೇಖಿಸಿ ಹಲವಾರು ಪ್ರಮುಖ ಐಟಿ ಸಂಸ್ಥೆಗಳು ತಮ್ಮ ಕಾರ್ಯಪಡೆಯನ್ನು ಕಡಿಮೆ ಮಾಡಿವೆ. ಇದರಿಂದಾಗಿ ಅನೇಕ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಇಲ್ಲದಂತಾಗಿದೆ.
8 ಗಂಟೆಗಳ ಕೆಲಸ, 8 ಗಂಟೆಗಳ ನಿದ್ರೆ, …
ಒಬ್ಬ ಕೆಲಸಗಾರ ಅಥವಾ ಉದ್ಯೋಗಿ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು? ಹದಿನೆಂಟನೇ ಶತಮಾನದಲ್ಲಿ ಮತ್ತು ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ಈ ವಿಷಯದ ಬಗ್ಗೆ ಅನೇಕ ಚರ್ಚೆಗಳು ನಡೆದವು. ಸಮಾಜವಾದಿ ಚಳುವಳಿಗಳು ನಡೆದವು. ಅವರು 24 ಗಂಟೆಗಳನ್ನು 8 ಗಂಟೆಗಳ ಕೆಲಸ, 8 ಗಂಟೆಗಳ ನಿದ್ರೆ ಮತ್ತು 8 ಗಂಟೆಗಳ ವೈಯಕ್ತಿಕ ಅಗತ್ಯಗಳಿಗಾಗಿ ಅಥವಾ ಕುಟುಂಬದೊಂದಿಗೆ ಸಮಯ ಕಳೆಯುವುದಕ್ಕಾಗಿ ವಿಂಗಡಿಸಿ, ಕೊನೆಗೂ ಎಂಟು ಗಂಟೆಗಳ ಕೆಲಸದ ಹಕ್ಕನ್ನು ಹೋರಾಡಿ ಸಾಧಿಸಿದರು. ದಿನಕ್ಕೆ 14 ರಿಂದ 16 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಿದರೆ ಅವರ ದೈಹಿಕ ಮತ್ತು ಮಾನಸಿಕ ಸ್ಥಿತಿ ಏನಾಗುತ್ತದೆ? ಅದಕ್ಕಾಗಿಯೇ “ಬಂಡವಾಳಶಾಹಿಗಳು ಕಾರ್ಮಿಕರನ್ನು ದೀರ್ಘ ಗಂಟೆಗಳ ಕಾಲ ಕೆಲಸ ಮಾಡುವಂತೆ ಮಾಡುವ ಮೂಲಕ ಅವರನ್ನು ಸಾವಿನ ಹತ್ತಿರಕ್ಕೆ ತರುತ್ತಿದ್ದಾರೆ.” ಎಂದು ಮಾರ್ಕ್ಸ್ ಹೇಳುತ್ತಾರೆ. ಇದು ಕೇವಲ ಸಾಫ್ಟ್ ವೇರ್ ವಲಯದಲ್ಲಿ ಮಾತ್ರವಲ್ಲ, ಪ್ರತಿಯೊಂದು ವಲಯದಲ್ಲೂ ಇದನ್ನು ಅಳವಡಿಸುವ ತಂತ್ರವನ್ನು ಜಾರಿಗೆ ತರಲಾಗುತ್ತಿದೆ.
ದೈಹಿಕ ಮತ್ತು ಆರೋಗ್ಯ ಸಮಸ್ಯೆಗಳು
ಬೆಂಗಳೂರಿನ ಐಟಿ ವೃತ್ತಿಪರರು ಪ್ರತಿಕೂಲ ಕೆಲಸದ ವಾತಾವರಣ ಮತ್ತು ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಐಟಿ ಕಾರ್ಯಪಡೆಯು ದೀರ್ಘ, ಅನಿಯಂತ್ರಿತ ಕೆಲಸದ ಸಮಯದೊಂದಿಗೆ ಹೋರಾಡುತ್ತಲೇ ಇದೆ. ಕೆಐಟಿಯು ಸಂಘಟನೆಯ ಪ್ರಕಾರ, ಎಂಟರಿಂದ ಒಂಬತ್ತು ಗಂಟೆಗಳ ಕೆಲಸದ ದಿನವು ಒಂದು ಪುರಾಣ, ಏಕೆಂದರೆ ನೌಕರರು ವಾರಾಂತ್ಯಗಳನ್ನು ಒಳಗೊಂಡಂತೆ ಪರಿಹಾರವಿಲ್ಲದೆ ಓವರ್ ಟೈಮ್ ಕೆಲಸ ಮಾಡಬೇಕಾಗುತ್ತದೆ.
ಅನಿಯಂತ್ರಿತ ವಾತಾವರಣದಲ್ಲಿ ಅವಾಸ್ತವಿಕ ಗಡುವನ್ನು ಪೂರೈಸುವ ಒತ್ತಡವು ಆತಂಕಕಾರಿ ಪರಿಣಾಮಗಳಿಗೆ ಕಾರಣವಾಗಿದೆ. ಕೆಲಸದ ಸಮಯದಿಂದಾಗಿ ಕಚೇರಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಗೆರೆ ಮಸುಕುಗೊಂಡಿದೆ. ಉದ್ಯೋಗದಾತರ ನಿರಂತರ ಒತ್ತಡವು ಕಾರ್ಮಿಕರಿಗೆ ಗಂಭೀರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಇದು ಉದ್ಯಮದ ಒಳಗೆ ಮತ್ತು ಹೊರಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಅನೇಕ ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು, ವೇತನವಿಲ್ಲದ ಅಧಿಕ ಅವಧಿ ಕೆಲಸಗಳು, ಅವಾಸ್ತವಿಕ ಗಡುವುಗಳು ಮತ್ತು ಪ್ರತಿಕೂಲವಾದ ಕೆಲಸದ ವಾತಾವರಣದಿಂದಾಗಿ ನೌಕರರು ತೀವ್ರ ಮಾನಸಿಕ ಯಾತನೆಯನ್ನು ಅನುಭವಿಸುತ್ತಾರೆ ಎಂದು ಬಹಿರಂಗಪಡಿಸಿವೆ. 2023ರ ಹಲವು ಸಮೀಕ್ಷೆಯ ಪ್ರಕಾರ, ಬದಲಾಗುತ್ತಿರುವ ಜೀವನಶೈಲಿ, ದೀರ್ಘ ಸಮಯದ ಒತ್ತಡ ಮತ್ತು ಕೆಲಸದ ಒತ್ತಡದಿಂದಾಗಿ ಶೇ. 70ರಷ್ಟು ಐಟಿ ಉದ್ಯೋಗಿಗಳು ದೈಹಿಕ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಐಟಿ ಉದ್ಯೋಗಿಗಳಲ್ಲಿ ದೀರ್ಘ ಕೆಲಸದ ಸಮಯದ ಹಾನಿಕಾರಕ ಪರಿಣಾಮಗಳನ್ನು ಹಲವಾರು ಅಧ್ಯಯನಗಳು ಮತ್ತು ಸಮೀಕ್ಷೆಗಳು ಎತ್ತಿ ತೋರಿಸುತ್ತವೆ. ಐಟಿ ಉದ್ಯೋಗಿಗಳ ಯಕೃತ್ತು ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಆದರೂ, ಅನೇಕ ಕಂಪನಿಗಳು ಮಾನಸಿಕ ಆರೋಗ್ಯ ಬೆಂಬಲ ಅಥವಾ ಸರಿಯಾದ ದೂರು ಕಾರ್ಯವಿಧಾನಗಳನ್ನು ಹೊಂದಿಲ್ಲ.
ಹೃದಯ ರೋಗಗಳು; ಅಂಗಾಂಗ ವೈಫಲ್ಯಗಳು
“ವಾರಕ್ಕೆ 35-40 ಗಂಟೆಗಳ ಕಾಲ ಕೆಲಸ ಮಾಡುವುದಕ್ಕೆ ಹೋಲಿಸಿದರೆ, 55 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಪಾರ್ಶ್ವವಾಯು ಬರುವ ಅಪಾಯವು ಶೇ. 35 ರಷ್ಟು ಹೆಚ್ಚಾಗುತ್ತದೆ ಮತ್ತು ಹೃದಯಾಘಾತದಿಂದ ಸಾಯುವ ಅಪಾಯವು ಶೇ. 17 ರಷ್ಟು ಹೆಚ್ಚಾಗುತ್ತದೆ” ಎಂದು WHO ಮತ್ತು ILO ಎಚ್ಚರಿಸಿವೆ. 2021 ರಲ್ಲಿ ಅವರು ಪ್ರಕಟಿಸಿದ ಜಂಟಿ ಅಧ್ಯಯನದ ಪ್ರಕಾರ, ದೀರ್ಘ ಕೆಲಸದ ಸಮಯವು ಜಾಗತಿಕವಾಗಿ ಪ್ರತಿ ವರ್ಷ ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತದೆ.
70ರಿಂದ 90 ಗಂಟೆಗಳ ಕಾಲ ಕೆಲಸದ ಹೇಳಿಕೆ
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರು ಮತ್ತು ಉದ್ಯೋಗಿಗಳ ಕಠಿಣ ಪರಿಶ್ರಮವನ್ನು ಗುರುತಿಸದೆ ಅವರನ್ನು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವ ಪದ್ಧತಿ ಗಮನಾರ್ಹವಾಗಿ ಹೆಚ್ಚಾಗಿದೆ. ಇನ್ಫೋಸಿಸ್ ಸಿಇಒ ನಾರಾಯಣ ಮೂರ್ತಿ ಅವರು ನೌಕರರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತಾರೆ.
ಎಲ್ & ಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸುಬ್ರಹ್ಮಣ್ಯನ್, ಏಳು ದಿನಗಳ ಕೆಲಸದ ವಾರದಲ್ಲಿ 90 ಗಂಟೆಗಳ ಕೆಲಸದ ಸಮಯಕ್ಕೆ ಕರೆ ನೀಡುತ್ತಾರೆ. “ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಬಲ್ಲಿರಿ? ಕಚೇರಿಗೆ ಹೋಗಿ ಕೆಲಸ ಮಾಡಲು ಪ್ರಾರಂಭಿಸಿ.” ಎಂದು ಅವರು ಹೇಳುತ್ತಾರೆ.
“ಶನಿವಾರ ಮತ್ತು ಭಾನುವಾರ ವಾರಾಂತ್ಯದ ರಜೆಗಳು ಭಾರತೀಯ ಸಂಸ್ಕೃತಿಯ ಭಾಗವಲ್ಲ. ಅದು ವಿದೇಶದಿಂದ ಆಮದು ಮಾಡಿಕೊಂಡದ್ದು. ನಮ್ಮ ಸಂಸ್ಕೃತಿಯ ಪ್ರಕಾರ, ತಿಂಗಳಿಗೆ ಎರಡು ದಿನ ರಜೆ ಸಾಕು” ಎಂದು ಓಲಾ ಸಂಸ್ಥಾಪಕ ವಿಶ್ ಅಗರ್ವಾಲ್ ಹೇಳಿದ್ದಾರೆ.
ಅಪ್ಲಿಕೇಶನ್ ಅಭಿವೃದ್ಧಿ ವಿಶ್ಲೇಷಕರಾಗಿ ಕೆಲಸ ಮಾಡುತ್ತಿರುವ ಕೆಐಟಿಯು ಉಪಾಧ್ಯಕ್ಷೆ ರಶ್ಮಿ ಅವರು ಈ ಉದ್ಯಮಿಗಳ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುತ್ತ, “ನಾವು ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿಲ್ಲ, ದೇಶದ ಅಭಿವೃದ್ಧಿಯ ಕೊರತೆಗೆ ನಾವೇ ಕಾರಣ ಎಂದು ಹೇಳುವ ಧೈರ್ಯ ನಾರಾಯಣ ಮೂರ್ತಿ ಮತ್ತು ಎಸ್.ಎನ್. ಸುಬ್ರಹ್ಮಣ್ಯಂ ಅವರಿಗಿದೆ. ನಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು ವ್ಯರ್ಥ ಎಂದು ಅವರು ನಾಚಿಕೆಯಿಲ್ಲದೆ ನಮಗೆ ಹೇಳುತ್ತಿದ್ದಾರೆ.” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ವಾರಕ್ಕೆ ತೊಂಬತ್ತರಿಂದ ನೂರು ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತಾರೆ. ಈ ವಾಕ್ಚಾತುರ್ಯದ ಹೇಳಿಕೆಗಳು ಬದಲಾದ ಜಾಗತಿಕ ರಾಜಕೀಯ ಪರಿಸ್ಥಿತಿ, ಕೇಂದ್ರದಲ್ಲಿ ಕಾರ್ಪೊರೇಟ್ ಪರ ಸರ್ಕಾರ ಮತ್ತು ವ್ಯವಹಾರಗಳಲ್ಲಿನ ಅತಿಯಾದ ಲಾಭಕೋರತನದ ಪರಿಣಾಮವಾಗಿದೆ ಎಂಬುದು ಸ್ಪಷ್ಟವಾಗಿದೆ. ಉದ್ಯಮದ ಪ್ರಮುಖರ ಇತ್ತೀಚಿನ ಹೇಳಿಕೆಗಳು ಮತ್ತು ಗರಿಷ್ಠ ಕೆಲಸದ ಸಮಯವನ್ನು ಹೆಚ್ಚಿಸುವ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳ ಪ್ರಸ್ತಾಪ, ಇವುಗಳು ಈ ಕ್ಷೇತ್ರದ ಉದ್ದಿಮೆಗಳ ನೌಕರರನ್ನು ಕೆರಳಿಸಿದೆ.
ರಾಜ್ಯದಿಂದ 14 ಗಂಟೆಗಳವರೆಗೆ ವಿಸ್ತರಣೆಯ ಪ್ರಸ್ತಾಪ: ಪ್ರತಿಭಟನೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಆಗಾಗ್ಗೆ ಟೀಕಿಸುತ್ತಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮೂರ್ತಿಯನ್ನು ಮೆಚ್ಚಿಸಲು ಉತ್ಸುಕವಾಗಿತ್ತು. ಕಳೆದ ವರ್ಷದ ಮಧ್ಯದಲ್ಲಿ ಐಟಿ ಉದ್ಯೋಗಿಗಳ ಅಧಿಕೃತ ಕೆಲಸದ ಸಮಯವನ್ನು ದಿನಕ್ಕೆ 14 ಗಂಟೆಗಳವರೆಗೆ ವಿಸ್ತರಿಸಲು ತಿದ್ದುಪಡಿಯನ್ನು ಪ್ರಸ್ತಾಪಿಸಲಾಯಿತು. ಇದರ ವಿರುದ್ಧ ಮತ್ತು ಟೆಕ್ಕಿಗಳ ಇತರೆ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಕೆಐಟಿಯು ವಿವಿಧ ರೀತಿಯ ಪ್ರತಿಭಟನೆ ನಡೆಸಿದೆ. ಐಟಿ/ಐಟಿಇಎಸ್ ಕಂಪನಿಗಳು ಹೆಚ್ಚಿನ ಅವಧಿಗೆ ವೇತನವನ್ನು ಪರಿಹಾರ ನೀಡುತ್ತಿಲ್ಲ ಮತ್ತು ನಿಯಮಿತ ಅವಧಿ ಮೀರಿ ಕೆಲಸದ ಸಮಯವನ್ನು ವಿಸ್ತರಿಸುತ್ತಿವೆ ಎಂದು ಆರೋಪಿಸಿ ಹಾಗೂ ಕೆಲಸದ ಸಮಯ ಮತ್ತು ಓವರ್ ಟೈಮ್ ಪರಿಹಾರದ ಮೇಲೆ ಕಠಿಣ ನಿಯಮಗಳನ್ನು ವಿಧಿಸಬೇಕೆಂದು ಒತ್ತಾಯಿಸಿ ಕೆಐಟಿಯು ಮಾರ್ಚ್ 2024ರಲ್ಲಿ ಕಾರ್ಮಿಕ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿತು. ಅನೇಕ ಸಭೆಗಳು ಮತ್ತು ಪ್ರತಿಭಟನೆಗಳ ಹೊರತಾಗಿಯೂ, ಸರ್ಕಾರವು ನಿರ್ಧಿಷ್ಟ ಕ್ರಮ ಕೈಗೊಳ್ಳಲು ವಿಫಲವಾಗಿದೆ.

2024 ಮಾರ್ಚ್ 13ರಂದು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ನೈಜ ಕೆಲಸದ ಸಮಯ ಮತ್ತು ಅಧಿಕ ಸಮಯ ಪಾವತಿಗಳ ಬಗ್ಗೆ ತನಿಖೆ ನಡೆಸಬೇಕೆಂದು ಸಂಘಟನೆಯು ಸರ್ಕಾರವನ್ನು ಒತ್ತಾಯಿಸಿತು. ಆದರೆ ಹಲವು ಸಭೆಗಳು, ಪ್ರತಿಭಟನೆಗಳು ನಡೆದು ವರ್ಷ ಕಳೆದರೂ ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಕೆಲಸದ ಸಮಯವನ್ನು ನಿಯಂತ್ರಿಸಲು ಸರ್ಕಾರದಿಂದ ಯಾವುದೇ ಪ್ರಯತ್ನ ನಡೆದಿಲ್ಲ.
ಸಾಮೂಹಿಕ ಇಮೇಲ್ ಅಭಿಯಾನ
ಕರ್ನಾಟಕದ ಕಾರ್ಮಿಕ ಸಚಿವ ಶ್ರೀ ಸಂತೋಷ್ ಎಸ್ ಲಾಡ್ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ ಐಟಿ ವಲಯದ ಉದ್ಯೋಗಿಗಳ ಕೆಲಸದ ಸಮಯವನ್ನು ವಿಸ್ತರಿಸುವ ಪ್ರಸ್ತಾಪದ ಕುರಿತು ಪಾಲುದಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, 2024ರ ಜುಲೈನಲ್ಲಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (ಕೆಐಟಿಯು) ಈ ಪ್ರಸ್ತಾವನೆಗೆ ನಮ್ಮ ವಿರೋಧವನ್ನು ವ್ಯಕ್ತಪಡಿಸಲು ಇಮೇಲ್ ಅಭಿಯಾನವನ್ನು ನಡೆಸಿದರು. ಐಟಿ/ಐಟಿಇಎಸ್/ಬಿಪಿಒ ಉದ್ಯೋಗಿಗಳು, ಹಾಗೆಯೇ ವಿಸ್ತೃತ ಕೆಲಸದ ಸಮಯದಿಂದ ಪರಿಣಾಮ ಬೀರುವ ಅವರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಈ ಅಭಿಯಾನದಲ್ಲಿ ಭಾಗವಹಿಸಿದರು.
ಮಾರ್ಚ್ 9ರ ಟೆಕ್ಕಿಗಳ ಐತಿಹಾಸಿಕ ಹೋರಾಟ
ಈ ಹಲವು ಕಾರಣದಿಂದಾಗಿ, ದೈನಂದಿನ ಕೆಲಸದ ಸಮಯದ ಮಿತಿಗಳನ್ನು ಜಾರಿಗೊಳಿಸಿ, ಅತಿಯಾದ ಓವರ್ ಟೈಮ್ ಗೆ ತಡೆಹಾಕಿ, ಕೈಗಾರಿಕಾ ಉದ್ಯೋಗ (ಸ್ಟ್ಯಾಂಡಿಂಗ್ ಆದೇಶಗಳು) ಕಾಯ್ದೆಯಿಂದ ಐಟಿ ಕ್ಷೇತ್ರಕ್ಕೆ ನೀಡಲಾದ ವಿನಾಯ್ತಿ ರದ್ದುಗೊಳಿಸಿ, ಕಾರ್ಮಿಕ ಕಾನೂನು ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂಬ ಬೇಡಿಕೆಗಳೊಂದಿಗೆ ಕೆಐಟಿಯು 2025ರ ಮಾರ್ಚ್ 9ರಂದು ಐಟಿ ವಲಯದ ನೌಕರರ ಬೃಹತ್ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿತು.
KITU ಪ್ರಧಾನ ಕಾರ್ಯದರ್ಶಿ ಸುಹಾಸ್ ಅಡಿಗ ಮಾತನಾಡಿ, ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳ ಮೂಲಭೂತ ಹಕ್ಕು ಮತ್ತು ವೈಯಕ್ತಿಕ ಜೀವನದ ಹಕ್ಕುಗಳು ನಿರಂತರವಾಗಿ ಅಪಾಯಕ್ಕೆ ಒಳಗಾಗುತ್ತಿವೆ, ಇದು ಐಟಿ ಕ್ಷೇತ್ರದಲ್ಲಿ ವಿಷಕಾರಿ ಕೆಲಸದ ಸಂಸ್ಕೃತಿಯನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು. ಆರೋಗ್ಯಕರ ಕೆಲಸ-ಜೀವನ ಸಮತೋಲನವನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.
ಸಂಘದ ಅಧ್ಯಕ್ಷರಾದ ವಿಜೆಕೆ ನಾಯರ್, ಉಪಾಧ್ಯಕ್ಷರಾದ ರಶ್ಮಿ ಚೌಧರಿ ಮುಂತಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಪ್ರದರ್ಶನವು ಬೆಂಗಳೂರಿನಲ್ಲಿ ಸಾವಿರಾರು ಐಟಿ ವೃತ್ತಿಪರರು ಎದುರಿಸುತ್ತಿರುವ ಅನಿಶ್ಚಿತ ಕೆಲಸದ ಪರಿಸ್ಥಿತಿಗಳನ್ನು ಎತ್ತಿ ತೋರಿಸುತ್ತದೆ.
ಪೊಲೀಸರ ಅಡ್ಡಿ: ವಾಗ್ವಾದ
ಈ ಸಂದರ್ಭದಲ್ಲಿ, ಐಟಿ ನೌಕರರು ಹೆಚ್ಚಿದ ಕೆಲಸದ ಸಮಯಕ್ಕಾಗಿ ವಕಾಲತ್ತು ನಡೆಸುತ್ತಿರುವ ಇಬ್ಬರು ಉದ್ಯಮಿಗಳ ಭಾವಚಿತ್ರವಿರುವ ಪೋಸ್ಟರ್ ಗಳನ್ನು ಸುಡಲು ಪ್ರತಿಭಟನಾಕಾರರು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಅದನ್ನು ತಡೆಯಲು ಯತ್ನಿಸಿದರು. ಈ ಸಮಯದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ತೀರ್ವ ವಾಗ್ವಾದ ನಡೆಯಿತು. ಪ್ರತಿಭಟನೆಯ ಹಕ್ಕುಗಳನ್ನು ದಮನಮಾಡಲು ಯತ್ನಿಸಿದ ಪೊಲೀಸರ ವಿರುದ್ದ ನೌಕರರು ಧಿಕ್ಕಾರದ ಘೋಷಣೆ ಕೂಗಿದರು.

ಪೋಲೀಸರನ್ನು ಧೈರ್ಯದಿಂದ ಪ್ರತಿರೋಧಿಸಿದ ಟೆಕ್ಕಿಗಳು, “70-90 ಗಂಟೆಗಳ ಕೆಲಸದ ವಾರ” ಕ್ಕಾಗಿ ಅವರ ಕರೆಯೊಂದಿಗೆ ಬರೆಯಲಾದ, ಐಟಿ ಉದ್ಯಮಿ ನಾರಾಯಣ ಮೂರ್ತಿ ಹಾಗೂ ಎಲ್&ಟಿ ಚೇರ್ಮನ್ ಎಸ್.ಎನ್.ಸುಬ್ರಹ್ಮಣ್ಯನ್ ಅವರ ಭಾವಚಿತ್ರಗಳಿರುವ ಕಾರ್ಡ್ ಭೋರ್ಡ್ ಗಳನ್ನು ಸುಟ್ಟುಹಾಕಿದರು. ಪ್ರತಿಭಟನಾಕಾರರ ವೃತ್ತದ ಹಿಂದೆ ನಿಂತಿದ್ದ ಪೊಲೀಸರು, ಈ ಇಬ್ಬರು ಉದ್ಯಮಿಗಳ ಭಾವಚಿತ್ರಗಳು ಸುಟ್ಟುಹೋಗುವುದನ್ನು ಗಂಭೀರವಾಗಿ ವೀಕ್ಷಿಸಿದರು. ಟೆಕ್ಕಿಗಳಿಂದ “ನಾವು ಕಾರ್ಮಿಕರು, ನಾವು ಜ್ವಾಲೆ!” ಎಂಬ ಘೋಷಣೆಗಳು ಮುಂದುವರೆದವು.

“ಭಾರತದ ಐಟಿ ಕ್ಷೇತ್ರದ ಪಿತಾಮಹ” ಎಂದು ಟೈಮ್ಸ್ ನಿಯತಕಾಲಿಕೆಯಿಂದ ವೈಭವೀಕರಿಸಲ್ಪಟ್ಟ ಇನ್ಫೋಸಿಸ್ ಸಹ-ಸಂಸ್ಥಾಪಕರ ಚಿತ್ರವು ನಿಧಾನವಾಗಿ ಸುಟ್ಟುಹೋಗುತ್ತಿದ್ದಂತೆ, ಪ್ರತಿಭಟನಾ ನಿರತ ಕಾರ್ಮಿಕರು ಕೆಂಪು ಧ್ವಜಗಳನ್ನು ಹಿಡಿದು ವೃತ್ತದಲ್ಲಿ ನಿಂತು, ಘೋಷಣೆಗಳನ್ನು ಕೂಗಿದರು: “ಹೇ, ಶ್ರೀ ನಾರಾಯಣ ಮೂರ್ತಿ, ನಾವು ಇನ್ನು ಮುಂದೆ ಗುಲಾಮರಲ್ಲ!”
ಪೊಲೀಸರ ಈ ನಡೆಯನ್ನು ಖಂಡಿಸಿರುವ ಕೆಐಟಿಯು, ಶಾಂತಿಯುತ ಪ್ರತಿಭಟನೆಯಲ್ಲಿ ಪೊಲೀಸರ ಹಸ್ತಕ್ಷೇಪವು ಕರ್ನಾಟಕ ಸರ್ಕಾರದ ನಿಜವಾದ ವರ್ಗಗುಣವನ್ನು ಬಯಲು ಮಾಡುತ್ತದೆ, ತಮ್ಮ ಕಾರ್ಪೊರೇಟ್ ಬಾಸ್ ಗಳ ವಿರುದ್ಧ ಯಾವುದೇ ಪ್ರತಿಭಟನೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುತ್ತದೆ ಎಂದು ಆರೋಪಿಸಿದೆ.
ದೊಡ್ಡ ಮಟ್ಟದಲ್ಲಿ ಸಜ್ಜುಗೊಳಿಸುವಿಕೆ

ಮಾರ್ಚ್ 9ರ ಕಾರ್ಯಕ್ರಮದ ತಯಾರಿಯಾಗಿ ಬೆಂಗಳೂರಿನಾದ್ಯಂತ ಘಟಕ ಮಟ್ಟದ ಸಭೆಗಳು ನಡೆದವು. ಹಲವು ಪ್ರಚಾರ ಸಮಿತಿಗಳನ್ನು ರಚಿಸಲಾಯಿತು. “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರರ ಹಕ್ಕು” ಎಂಬ ಘೋಷವಾಕ್ಯದೊಂದಿಗೆ ಬೆಂಗಳೂರಿನಾದ್ಯಂತ ಮಾಹಿತಿ ತಂತ್ರಜ್ಞಾನ ಕಂಪನಿಗಳಿರುವ ಪ್ರದೇಶಗಳಲ್ಲಿ ಗೇಟ್ ಮೀಟಿಂಗ್ ಮತ್ತು ಬೀದಿ ಪ್ರಚಾರ ನಡೆಸಲಾಯಿತು. ಕೆಐಟಿಯುನ ಮುಖಂಡರು ಮತ್ತು ಕಾರ್ಯಕರ್ತರು ವ್ಯಾಪಕವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಕೆಂಪು ಬಾವುಟಗಳು ಮತ್ತು ಫಲಕಗಳನ್ನು ಹಿಡಿದ ಯುವಕರ ತಂಡಗಳು ಕಂಪನಿಗಳ ಬಳಿ ನಿಂತು, ಉದ್ಯೋಗಿಗಳಿಗೆ ಕರಪತ್ರ ವಿತರಣೆ ಮಾಡುತ್ತ, ಅವರೊಡನೆ ಸಂವಾದ ಮಾಡುವ ಮೂಲಕ ಚಳುವಳಿಗೆ ಬೆಂಬಲ ಗಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಎರಡು ತಿಂಗಳುಗಳ ಕಾಲ ಕೆಐಟಿಯು ನೇತೃತ್ವದಲ್ಲಿ ಕರ್ನಾಟಕದಲ್ಲಿ ಐಟಿ ಮತ್ತು ಐಟಿಎಸ್ ಉದ್ಯೋಗಿಗಳು ಸಕ್ರಿಯವಾಗಿ ಸಂಘಟಿಸಿದರು. ಇವರ ಇಂತಹ ಸಾಮೂಹಿಕ ಪ್ರಯತ್ನದಿಂದಾಗಿ ಪ್ರತಿಭಟನೆಗೆ ಹೆಚ್ಚಿನ ಐಟಿ ಉದ್ಯೋಗಿಗಳು ಭಾಗವಹಿಸಿದರು.
ಯಂತ್ರಗಳು ಮೌಲ್ಯವನ್ನು ಸೃಷ್ಟಿಸುವುದಿಲ್ಲ: ಕಾರ್ಲ್ ಮಾರ್ಕ್ಸ್
ಈ ಸಂದರ್ಭದಲ್ಲಿ ನಾವು ಕಾರ್ಲ್ ಮಾರ್ಕ್ಸ್ ಅವರ ‘ಕ್ಯಾಪಿಟಲ್’ ನಲ್ಲಿ ಹೇಳಿದ ಒಂದು ಮಾತನ್ನು ನೆನಪಿಸಿಕೊಳ್ಳಬೇಕು. “ಯಂತ್ರಗಳು ಮೌಲ್ಯವನ್ನು ಸೃಷ್ಟಿಸುವುದಿಲ್ಲ. ಅವು ನಿರ್ಜೀವ ಶ್ರಮದ ಪ್ರತಿಗಳು. ಅವುಗಳನ್ನೂ ಸಹ ಹಿಂದಿನ ಕಾಲದ ಶ್ರಮಿಕರು ತಯಾರಿಸಿದ್ದಾರೆ. ಅವುಗಳಲ್ಲಿ ಶ್ರಮವೂ ಸಾಕಾರಗೊಂಡಿದೆ. ಆದರೆ ಆ ಶ್ರಮಕ್ಕೆ ಹೊಸದೇನನ್ನೂ ಸೇರಿಸಲಾಗುವುದಿಲ್ಲ. ಮನುಷ್ಯನು ತನ್ನ ಸೃಜನಶೀಲತೆ ಅಥವಾ ಸ್ನಾಯುಗಳಿಂದ ಮಾಡುವ ಕೆಲಸದ ಮೂಲಕ ಕಾಲಕಾಲಕ್ಕೆ ಹೊಸ ಹೆಚ್ಚುವರಿ ಮೌಲ್ಯವನ್ನು ಸೃಷ್ಟಿಸುತ್ತಾನೆ. ಜೀವಂತ ಶ್ರಮದಿಂದ ಮೌಲ್ಯವನ್ನು ಉತ್ಪಾದಿಸಲಾಗುತ್ತದೆ. ಹೆಚ್ಚುವರಿ ಉತ್ಪಾದನೆಗೆ ಮೌಲ್ಯವನ್ನು ಸೇರಿಸಲಾಗುತ್ತದೆ. ನಿರ್ಜೀವ ಶ್ರಮದಿಂದ ಅಲ್ಲ.” ಎಂದು ಹೇಳಿದರು.
ಮನುಷ್ಯರನ್ನು ಯಂತ್ರಗಳಂತೆ ನೋಡುತ್ತಾರೆ
ಆದರೆ, ಕಾರ್ಪೊರೇಟ್ ಮುಖ್ಯಸ್ಥರು ಉದ್ಯೋಗಿಗಳನ್ನು ಮನುಷ್ಯರಂತೆ ನೋಡುವುದಿಲ್ಲ. ಅವರು ಅವರನ್ನು ಯಂತ್ರಗಳಂತೆ ನೋಡುತ್ತಾರೆ. ಅವರು ಅವುಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಕೆಲಸ ಮಾಡಬೇಕಾದ ಧ್ಯೇಯಗಳಾಗಿ ನೋಡುತ್ತಾರೆ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿ. ಕಾರ್ಮಿಕ ಕಾನೂನುಗಳ ಬದಲಿಗೆ ನರೇಂದ್ರ ಮೋದಿ ಸರ್ಕಾರ ತಂದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದರೆ, ನಾಳೆ ಕಾರ್ಮಿಕರು ಮತ್ತು ಉದ್ಯೋಗಿಗಳ ಪರಿಸ್ಥಿತಿ ಇನ್ನೂ ಕೆಟ್ಟದಾಗಿರುತ್ತದೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಟೆಕ್ಕಿಗಳು ಪ್ರಾರಂಭಿಸಿದ ಚಳುವಳಿ ಮುಂದಿನ ದಿನಗಳಲ್ಲಿ ದೇಶಾದ್ಯಂತ ಹರಡುವುದರಲ್ಲಿ ಸಂದೇಹವಿಲ್ಲ.
ನಿಮ್ಮ ಟಿಪ್ಪಣಿ ಬರೆಯಿರಿ