
ಮೋದಿಯವರ ‘ಭ್ರಷ್ಟಾಚಾರ ಮುಕ್ತ ಭಾರತ’ದ ವಾಗ್ದಾನ ಏನಾಯ್ತು?
ಫೆಬ್ರವರಿ 11, 2025 ರಂದು ಬಿಡುಗಡೆಯಾದ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿಯ ಪ್ರಕಾರ, 2024ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (CPI)ದಲ್ಲಿ ಭಾರತವು 180 ದೇಶಗಳ ಪಟ್ಟಿಯಲ್ಲಿ 96ನೇ ಸ್ಥಾನದಲ್ಲಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಶೇ. 31 ರಷ್ಟು ಮತ ಪಡೆದು ನರೇಂದ್ರ ಮೋದಿ ಪ್ರಧಾನಿಯಾಗಲು ದೇಶದಲ್ಲಿನ ಅಂದಿನ ಭ್ರಷ್ಟಾಚಾರವೂ ಒಂದು ಕಾರಣವಾಗಿತ್ತು. ಅಂದು, ಭ್ರಷ್ಟಾಚಾರದ ವಿಷಯ ಸಂಘಪರಿವಾರದ ಚುನಾವಣಾ ಪ್ರಚಾರದ ಒಂದು ಅಸ್ತ್ರವಾಗಿತ್ತು. 2014ರಲ್ಲಿ 175 ದೇಶಗಳ ಪಟ್ಟಿಯಲ್ಲಿ 85ನೆಯ ಸ್ಥಾನದಲ್ಲಿತ್ತು. ಉದ್ಯಮಿಗಳ ಹಲವು ಭ್ರಷ್ಟಾಚಾರಗಳನ್ನು ಕಾನೂನುಬದ್ದ ಗೊಳಿಸಿದ ನಂತರವೂ, 180 ದೇಶಗಳ ಪಟ್ಟಿಯಲ್ಲಿ ಭಾರತ 96 ನೆಯ ಸ್ಥಾನದಲ್ಲಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕಿದೆ. 11 ವರ್ಷಗಳ ಹಿಂದಿನ ಮೋದಿಯವರ ‘ಭ್ರಷ್ಟಾಚಾರ ಮುಕ್ತ ಭಾರತ’ದ ವಾಗ್ದಾನ ಏನಾಯ್ತು?
ಫೆಬ್ರವರಿ 11, 2025 ಬಿಡುಗಡೆಯಾದ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ವರದಿಯ ಪ್ರಕಾರ, 2024 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (ಸಿಪಿಐ) ಭಾರತವು 180 ದೇಶಗಳಲ್ಲಿ 96 ನೇ ಸ್ಥಾನದಲ್ಲಿದೆ. ಅದರ ಒಟ್ಟಾರೆ ಅಂಕಗಳು 38 ಕ್ಕೆ ಇಳಿದಿದೆ. 2023 ರ ವರದಿಯಲ್ಲಿ 100 ಅಂಕಗಳಲ್ಲಿ ಭಾರತ 40 ಅಂಕಗಳನ್ನು ಪಡೆದಿತ್ತು. ಸೂಚ್ಯಂಕವು 0 ರಿಂದ 100 ರವರೆಗಿನ ಮಾಪಕವನ್ನು ಬಳಸುತ್ತದೆ, ಅಲ್ಲಿ 0 ಅಂಕಗಳನ್ನು ಪಡೆದ ದೇಶ ಹೆಚ್ಚು ಭ್ರಷ್ಟವಾಗಿದೆ ಮತ್ತು 100 ಅಂಕಗಳನ್ನು ಪಡೆದ ದೇಶ ಭ್ರಷ್ಟಾಚಾರ ಮುಕ್ತವಾಗಿದೆ. ಸಾರ್ವಜನಿಕ ವಲಯದ ಭ್ರಷ್ಟಾಚಾರದ ಮಟ್ಟವನ್ನು ಆಧರಿಸಿ ಅಂಕಗಳನ್ನು ನೀಡಲಾಗುತ್ತದೆ. ಈ 180 ದೇಶಗಳ ಪಟ್ಟಿಯಲ್ಲಿ 90 ಅಂಕಗಳನ್ನು ಪಡೆದ ಡೆನ್ಮಾರ್ಕ್ ಅಗ್ರಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಫಿನ್‌ಲ್ಯಾಂಡ್ (88) ಮತ್ತು ಸಿಂಗಾಪುರ (84) ಇವೆ. ಪ್ರತಿ ದೇಶಕ್ಕೆ ಅಂಕವನ್ನು 13 ವಿಭಿನ್ನ ಭ್ರಷ್ಟಾಚಾರ ಸಮೀಕ್ಷೆಗಳು ಮತ್ತು ಮೌಲ್ಯಮಾಪನಗಳಿಂದ ಆಯ್ಕೆ ಮಾಡಲಾದ ಕನಿಷ್ಠ ಮೂರು ಡೇಟಾ ಮೂಲಗಳಿಂದ ಪಡೆಯಲಾಗುತ್ತದೆ. ಈ ಮೂಲಗಳನ್ನು ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆಯಂತಹ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಸಂಗ್ರಹಿಸುತ್ತವೆ.
ಭ್ರಷ್ಟಾಚಾರ ರಹಿತ ಆಡಳಿತದ ಭರವಸೆ ಏನಾಯ್ತು?
ನರೇಂದ್ರ ಮೋದಿಯವರು 11 ವರ್ಷಗಳ ಆಡಳಿತದಲ್ಲಿ, ಎಷ್ಟು ಭ್ರಷ್ಟರನ್ನು ಮೋದಿ ಜೈಲಿಗಟ್ಟಿದ್ದಾರೆ? ಎಷ್ಟು ಭ್ರಷ್ಟ ಹಣ ವಶಪಡಿಸಿಕೊಂಡಿದ್ದಾರೆ? 2ಜಿ, ಕಲ್ಲಿದ್ದಲು ಗಣಿಗಳ ಹಗರಣಗಳಲ್ಲಿ ಲಕ್ಷಾಂತರ ಕೋಟಿ ದೋಚಿದ ಟಾಟಾ, ಬಿರ್ಲಾ, ಅಂಬಾನಿಯಂತಹ ದೊಡ್ಡ ಬಂಡವಾಳಗಾರರ ವಿರುದ್ದ ಮೋದಿ ಒಂದೂ ಮಾತನಾಡುತ್ತಿಲ್ಲ ಏಕೆ? ಅಂಥ ಲೂಟಿಕೋರರ ಜೊತೆ ವಿಮಾನದಲ್ಲಿ ವಿದೇಶ ಸುತ್ತುತ್ತಿರುವುದೇಕೆ? ಸಾರ್ವಜನಿಕರ ಹಣವನ್ನು ದೋಚಿ ವಿದೇಶಗಳಿಗೆ ಪರಾರಿಯಾದ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ, ಲಲಿತ್ ಮೋದಿ ಅವರನ್ನು ಹಿಡಿದು ತಂದು ಶಿಕ್ಷಿಸಲಿಲ್ಲವೇಕೆ? ಬಿಜೆಪಿ ಆಡಳಿತದ ಮಧ್ಯಪ್ರದೇಶದ ವ್ಯಾಪಂ ಹಗರಣ ಭ್ರಷ್ಟಾಚಾರದ ಪಟ್ಟಿಗೆ ಸೇರುವುದಿಲ್ಲವೆ? ಅಲ್ಲಿ ಹತ್ತಾರು ಸಾಕ್ಷಿಗಳು ಸಾವಿಗೀಡಾದ ನಿಗೂಡತೆ ಏನು?
500 ಮತ್ತು 1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣದ ಸಂದರ್ಭದಲ್ಲಿ ಅಮಿತ್ ಶಾ ಮಗ ಜಯ್ ಶಾ ಒಂದೇ ವರ್ಷದಲ್ಲಿ 80 ಕೋಟಿ ಸಂಪಾದಿಸಿದ ಎನ್ನಲಾದ ಆರೋಪದ ಬಗ್ಗೆ ತನಿಖೆ ನಡೆಸುತ್ತಿಲ್ಲವೇಕೆ? ಪಾಕಿಸ್ತಾನದ ಅಧ್ಯಕ್ಷರನ್ನೇ ಶಿಕ್ಷೆಗೊಳಪಡಿಸಿದ ಪನಾಮ ಪೇಪರ್ಸ್ ಹಗರಣದಲ್ಲಿ ಕೇಳಿಬಂದ ಭಾರತೀಯರಿಗೆ ಶಿಕ್ಷೆ ಕೊಡಲಿಲ್ಲವೇಕೆ? ಕೃಷ್ಣ-ಗೋದಾವರಿ ಬೇಷಿನ್ ನಲ್ಲಿ ರಿಲಯನ್ಸ್ ಕಂಪನಿ, ಒ.ಎನ್.ಜಿ.ಸಿ. ಬ್ಲಾಕ್ ನಲ್ಲಿ ಕದ್ದು ತೈಲ ತೆಗೆಯುತ್ತಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುತ್ತಿಲ್ಲವೇಕೆ? ಬ್ಯಾಂಕುಗಳಿಗೆ 20 ಲಕ್ಷ ಕೋಟಿಯಷ್ಟು ಸಾಲ ಪಡೆದು ವಸೂಲಾಗದ ಸಾಲದ ಪ್ರಮಾಣ(NPA)ಕ್ಕೆ ಕಾರಣರಾದವರ ಯಾರ ಆಸ್ತಿಯನ್ನೂ ಹರಾಜು ಹಾಕಲಿಲ್ಲವೇಕೆ? ಅಂತಹ ವಂಚಕರನ್ನು ಬಂದಿಸುತ್ತಿಲ್ಲ ಏಕೆ? ಅಂಬಾನಿ, ಅದಾನಿ, ಟಾಟಾ, ಬಿರ್ಲಾರ ಕುಟುಂಬ ಪಡೆದ ಸಾಲವೆಷ್ಟು, ಮನ್ನಾ ಮಾಡಿದ ಸಾಲವೆಷ್ಟು ಎಂದು ಬಹಿರಂಗ ಪಡಿಸುತ್ತಿಲ್ಲವೇಕೆ? ಪ್ರತಿ ಬಜೆಟ್ ನಲ್ಲೂ ಉದ್ಯಮಪತಿಗಳ ಐದಾರು ಲಕ್ಷ ಕೋಟಿ ತೆರಿಗೆ ಮನ್ನಾ ಮಾಡುವುದೇಕೆ? ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೆ ಕಡತ ಮುಂದೆ ತೆವಳದ ಸ್ಥಿತಿ ಇಂದಿಗೂ ಇದೆಯಲ್ಲವೇ? ಹೇಳಲು ಇನ್ನೂ ಸಾಕಷ್ಟಿವೆ. ಸಂಘಪರಿವಾರ, ಬಿಜೆಪಿ, ಮೋದಿ ಇವುಗಳಿಗೆಲ್ಲಾ ಉತ್ತರ ಕೊಡುತ್ತಾರೆಯೇ? ಅವರು ಕೊಡುವುದಿಲ್ಲ, ನಾವು ಪಟ್ಟು ಬಿಡದೆ ಕೇಳಿ ಉತ್ತರ ಪಡೆಯಬೇಕು. ಏಕೆಂದರೆ, ಇವರು ದೋಚಿದ್ದೆಲ್ಲವೂ ಸಾರ್ವಜನಿಕರ ಸಂಪತ್ತು.
ಸ್ವತಃ ಒಪ್ಪಿಕೊಂಡ ಪ್ರಧಾನಿ
ಪ್ರಧಾನಮಂತ್ರಿ ಮೋದಿಯವರು ತಮ್ಮ 76ನೇ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಅವಳಿ ಸವಾಲುಗಳನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಾ, ಅವುಗಳನ್ನು ನಿಗ್ರಹಿಸುವ ತುರ್ತು ಅಗತ್ಯವನ್ನು ಪ್ರಸ್ತಾಪಿಸಿದರು. ಅದಕ್ಕೂ 10 ವರ್ಷಗಳ ಹಿಂದೆಯೂ, ಪ್ರಧಾನಿಯಾಗುವ ಮೊದಲು, ತಾನು ಪ್ರಧಾನಿಯಾದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಅವರು ಜನತೆಗೆ ವಾಗ್ಧಾನ ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು. ಅಂದರೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ತಮ್ಮ ಹಿಂದಿನ ವಾಗ್ದಾನದಂತೆ ತಾನು ನಡೆದುಕೊಂಡಿಲ್ಲ ಎಂಬುದನ್ನು ಸ್ವತಃ ಮೋದಿಯವರೇ ಒಪ್ಪಿಕೊಂಡಂತಾಗಿದೆ.
ಜನತೆ ನಮಗೆ ಮತ ನೀಡಿ ಕೇಂದ್ರದಲ್ಲಿ ನಮ್ಮನ್ನು ಅಧಿಕಾರಕ್ಕೆ ತಂದರೆ, ಶುದ್ಧ ಆಡಳಿತ ನೀಡುವುದಾಗಿಯೂ, ದೇಶದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿಯೂ, ಭ್ರಷ್ಟರು ಬಿಜೆಪಿಯವರೇ ಆದರೂ ಸರಿಯೇ ಅವರೆಲ್ಲರನ್ನು ಜೈಲಿನ ಕಂಬಿಯ ಹಿಂದೆ ಹಾಕುವುದಾಗಿಯೂ 2014ರ ಚುನಾವಣೆಯ ಸಂದರ್ಭದಲ್ಲಿ ಮೋದಿ ಪ್ರತಿಜ್ಞೆ ಮಾಡಿದ್ದರು. ಹಿಂದಿನ ಆಡಳಿತದ ಅವಧಿಯಲ್ಲಿನ ವ್ಯಾಪಕ ಭ್ರಷ್ಟಾಚಾರದ ಬೆಂಕಿಯ ಬಿಸಿಯಿಂದ ನೊಂದಿದ್ದ ಒಂದಷ್ಟು ಜನರು ಮೋದಿಯವರ ಮಾತುಗಳನ್ನು ನಿಜವೆಂದೇ ನಂಬಿದ್ದರು. ಬಿಜೆಪಿ ಶೇ. 31 ರಷ್ಟು, ಒಟ್ಟಾರೆಯಾಗಿ ಎನ್.ಡಿ.ಎ. ಶೇ. 38.5ರಷ್ಟು, ಅಂದರೆ, ಅರ್ಧಕ್ಕಿಂತ ಕಡಿಮೆ ಮತಗಳನ್ನು ಪಡೆದರೂ, ಶೇ. 61.5 ಮತದಾರರು ವಿರೋಧಿಸಿದರೂ ಸಹ, ನಮ್ಮ ಚುನಾವಣಾ ವ್ಯವಸ್ಥೆಯ ಲಾಭ ಪಡೆದು ಬಿಜೆಪಿ ಆಧಿಕಾರಕ್ಕೆ ಬಂದು, ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾದರು.
ಭ್ರಷ್ಟಾಚಾರವನ್ನೇ ಕಾನೂನು ಬದ್ದಗೊಳಿಸಿದರು
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಭ್ರಷ್ಟಾಚಾರ ಮಾರ್ಗಗಳನ್ನು ಕಾನೂನು ಬದ್ದಗೊಳಿಸಿದರು. ಬ್ಯಾಂಕುಗಳ ಹಣವನ್ನು ದೋಚಲು ರೈಟ್ ಆಪ್ ಮತ್ತು ಸಾಲ ಮನ್ನಾ ಮಾಡುವುದು, ನಿಕೃಷ್ಟ ಬೆಲೆಗೆ ಸಾರ್ವಜನಿಕ ಉದ್ಯಮಗಳ ಆಸ್ತಿ ಮತ್ತು ಷೇರು ಮಾರಾಟ, ಕಾರ್ಪೊರೇಟ್ ತೆರಿಗೆ ಕಡಿತ, ನೋಟು ರದ್ದತಿ ಮೂಲಕ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿದ್ದು, ರಫೆಲ್ ಯುದ್ಧ ವಿಮಾನ ಒಪ್ಪಂದದ ಹಗರಣಕ್ಕೆ ಕ್ಲೀನ್ ಚಿಟ್ ಪಡೆದದ್ದು, ಪ್ರಕೃತಿ ಸಂಪತ್ತಿನ ಲೂಟಿಗೆ ಕಾನೂನು ಬದ್ದಅವಕಾಶ, ಖಾಸಗಿಯವರಿಂದ ಸರಕುಗಳ ಶೇಖರಣೆಗೆ ಮಿತಿ ತೆಗೆದುಹಾಕುವ ಮೂಲಕ ಸರಕು ಮತ್ತು ಸೇವೆಗಳಿಗೆ ಮನಬಂದಂತೆ ಬೆಲೆ ನಿಗದಿಗೆ ಅವಕಾಶ, ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವವರ ಹೆಸರು ಗೌಪ್ಯವಾಗಿಡುವ ‘ಚುನಾವಣಾ ಬಾಂಡ್’ ಪದ್ದತಿ, ಇತ್ಯಾದಿ. ಈ ರೀತಿ ಸಾರ್ವಜನಿಕ ಸಂಪತ್ತಿನ ದೋಚುವಿಕೆಯೂ ಮತ್ತು ಗ್ರಾಹಕರ ಶೋಷಣೆಯೂ ಭ್ರಷ್ಟಾಚಾರ ವ್ಯಾಪ್ತಿಗೆ ಬರದಂತೆ ಮಾಡಲಾಗಿದೆ. ಜೊತೆಗೆ, ತಮ್ಮ ಪಕ್ಷಕ್ಕೆ ಸೇರಿಕೊಂಡ ಅಥವಾ ತಮ್ಮ ನೀತಿ ನಿಲುವುಗಳ ಜಾರಿಗೆ ಸಹಕರಿಸಿದ ಹಲವು ರಾಜಕಾರಣಿಗಳ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲಾಗಿದೆ.
ಭ್ರಷ್ಟಾಚಾರಿಗಳಿಗೆ ಯಾವುದೇ ಅಳುಕಿಲ್ಲ ;
56 ಇಂಚಿನ ಎದೆಯ ಮೋದಿಯವರನ್ನು ಕಂಡರೆ ಭ್ರಷ್ಟರು ಗಢಗಢ ನಡುತ್ತಾರೆ ಎಂದೇ ಸಂಘಪರಿವಾರದ ‘ಭಕ್ತರು’ ಜನರನ್ನು ನಂಬಿಸಿದ್ದರು. ಅಧಿಕಾರಕ್ಕೆ ಬಂದು 11 ವರ್ಷಗಳು ಸಮೀಪಿಸುತ್ತಾ ಬಂದಿದೆಯಾದರೂ ದೇಶದಲ್ಲಿನ ಭ್ರಷ್ಟಾಚಾರ ಕಡಿಮೆಯಾಗಲಿಲ್ಲ, ಮಾತ್ರವಲ್ಲ, ಭ್ರಷ್ಟಾಚಾರಿಗಳು ಯಾವುದೇ ಅಳುಕಿಲ್ಲದೆ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾನೂನುಗಳು ಮೂಲೆಯಲ್ಲಿ ನರಳುತ್ತಿವೆ. ವಾರ್ಡ್ ಸದಸ್ಯನಿಂದ ಹಿಡಿದು ಕೇಂದ್ರ ಸಚಿವರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಲಂಚ ಕೊಡದೆ ಫೈಲ್ ಚಲಿಸುವುದಿಲ್ಲ ಎಂಬಂತಾಗಿದೆ. ಅಳತೆಯಲ್ಲಿನ ಮೋಸ, ಕಳಪೆ ಸರಕುಗಳು, ತೆರಿಗೆ ವಂಚನೆ, ನಕಲಿ ಮತ್ತು ಆನ್‌ಲೈನ್ ವಂಚನೆಗಳು, ಡಿಜಿಟಲ್ ಅರೆಸ್ಟ್ ಗಳು ಸಾಮಾಜಿಕ ಆರೋಗ್ಯದ ಮೇಲೆ ಪಿಡುಗಾಗಿ ಮಾರ್ಪಟ್ಟಿವೆ.
“ಪೊಲೀಸ್, ರಾಜಕೀಯ ಅಪರಾಧಿಗಳು, ಕ್ರಿಮಿನಲ್ ಗ್ಯಾಂಗ್‌ಗಳು ಮತ್ತು ಭ್ರಷ್ಟ ಸ್ಥಳೀಯ ಅಧಿಕಾರಿಗಳ ದಾಳಿಗೆ ಬಲಿಯಾದ ಪತ್ರಕರ್ತರು ಮತ್ತು ಕಾರ್ಯಕರ್ತರ ಬಗೆಗಿನ ವರದಿಗಳು ಕಳವಳವನ್ನು ಎತ್ತಿ ತೋರಿಸಿದೆ. ಸರ್ಕಾರದ ವಿರುದ್ಧ ಮಾತನಾಡುವ ನಾಗರಿಕ ಸಮಾಜದ ಸಂಘಟನೆಗಳ ವಿರುದ್ಧ ಮಾನನಷ್ಟ, ದೇಶದ್ರೋಹ, ದ್ವೇಷ ಭಾಷಣ ಮತ್ತು ನ್ಯಾಯಾಲಯದ ನಿಂದನೆ ಆರೋಪಗಳನ್ನು ಹೊರಿಸುವುದು ಮತ್ತು ವಿದೇಶಿ ನಿಧಿಯ ಮೇಲಿನ ನಿಯಮಗಳೊಂದಿಗೆ ಗುರಿಯಾಗಿಸಿಕೊಂಡಿವೆ” ಎಂದು ಸಿಪಿಐ ಸೂಚ್ಯಂಕದ ವರದಿಯಲ್ಲಿ ಹೇಳಲಾಗಿದೆ.
2024ರಲ್ಲಿ ಲೋಕಸಭೆಗೆ ಹೊಸದಾಗಿ ಆಯ್ಕೆಯಾದ 543 ಸದಸ್ಯರಲ್ಲಿ 251 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಅವರಲ್ಲಿ 27 ಜನರು ಶಿಕ್ಷೆಗೊಳಗಾಗಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮಾಡಿದ ವಿಶ್ಲೇಷಣೆ ಬಹಿರಂಗಪಡಿಸಿದೆ. ದೇಶಾದ್ಯಂತ 4,000 ಕ್ಕೂ ಹೆಚ್ಚು ಶಾಸಕರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಯಾವುದೇ ಒಂದು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾದಾಗ ಅಲ್ಲಿ ಬಡತನ, ಅಶಾಂತಿ, ಹಿಂಸೆ, ಆರ್ಥಿಕ ಕುಸಿತ, ಅಪರಾಧ, ಹಸಿವು ಮತ್ತು ಆರ್ಥಿಕ ಅಸಮಾನತೆ ಮೇಲುಗೈ ಸಾಧಿಸುತ್ತದೆ ಎಂದು ಇತಿಹಾಸ ಕಲಿಸುತ್ತದೆ. ಅಪರಾಧಿಗಳು ಹೊಸ ನಾಯಕರಾಗಿ ಅವತಾರವೆತ್ತಿರುವ ಉದಾಹರಣೆಗಳು ನಮ್ಮ ಮುಂದಿವೆ. ಪ್ರಜಾಪ್ರಭುತ್ವವು ಭ್ರಷ್ಟಾಚಾರದಿಂದ ಅಪಹಾಸ್ಯಕ್ಕೊಳಗಾಗುವುದನ್ನು ನಾವು ನೋಡುತ್ತೇವೆ, ಸರ್ಕಾರಗಳು ಅಸ್ಥಿರವಾಗುತ್ತವೆ ಮತ್ತು ದೇಶದ ಪ್ರಗತಿಯು ಹಿಂಜರಿತದತ್ತ ಸಾಗುತ್ತದೆ. ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗಗಳು ವೈಯಕ್ತಿಕ ಸ್ವಾತಂತ್ರ್ಯ, ಆರೋಗ್ಯ, ಜೀವನ ಮಟ್ಟ, ಮಾನವ ಹಕ್ಕುಗಳು, ಸಾಮಾಜಿಕ ನ್ಯಾಯ, ಆಡಳಿತ ಮತ್ತು ಸಮಾಜದ ಭವಿಷ್ಯಕ್ಕೆ ಹಾನಿಕಾರಕವಾಗುತ್ತವೆ.
ಭ್ರಷ್ಟಾಚಾರದ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ನಮ್ಮಲ್ಲಿ ನೈತಿಕತೆ, ಪಾರದರ್ಶಕತೆ, ದೇಶಭಕ್ತಿ, ಕಾನೂನುಗಳನ್ನು ಗೌರವಿಸುವುದು, ಹೊಣೆಗಾರಿಕೆ ಮತ್ತು ಸಮರ್ಪಣಾ ಮನೋಭಾವ ಹೆಚ್ಚಬೇಕಿದೆ. ನಾವೆಲ್ಲರೂ ಭ್ರಷ್ಟಾಚಾರ ಮುಕ್ತ ಸಮಾಜದ ಸ್ಥಾಪನೆಗೆ ಶ್ರಮಿಸಬೇಕಿದೆ.
ನಿಮ್ಮ ಟಿಪ್ಪಣಿ ಬರೆಯಿರಿ