
“ನರೇಂದ್ರ ಮೋದಿಯವರು ‘ಕಿಸಾನ್ ಸಮ್ಮಾನ್’ ಯೋಜನೆಯ ಮೂಲಕ ರೈತರ ಖಾತೆಗೆ ಪ್ರತಿ ವರ್ಷ 6,000 ರೂ. ಹಾಕುತ್ತಿದ್ದಾರೆ. ಇದರಿಂದ ರೈತರ ಆದಾಯ ಹೆಚ್ಚಾಗಿದೆ. ಇದು ರೈತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಾರಣವಾಗಿದೆ. ರೈತರಿಗೆ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ಕೊಡುತ್ತಿದೆ. 2022-23 ರಲ್ಲಿ ಒಟ್ಟು ರೂ. 58,201.85 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಯೋಜನೆ ಪ್ರಾರಂಭವಾದಾಗಿಂದ 2023 ರ ಜುಲೈ ವರೆಗೆ 11 ಕೋಟಿಗೂ ಹೆಚ್ಚು ರೈತರಿಗೆ 2.60 ಲಕ್ಷ ಕೋಟಿ ರೂ.ಗಳನ್ನು ಸರ್ಕಾರ ವಿತರಿಸಿದೆ.…” ಬಿಜೆಪಿ ಸರ್ಕಾರದ ಸಾಧನೆಗಳ ಘೋಷಣೆಗಳಲ್ಲಿ ಇದೂ ಒಂದು. ಈ ಯೋಜನೆಯ ಮೂಲಕ, ಕೃಷಿ ಯೋಗ್ಯ ಭೂಮಿ ಹೊಂದಿರುವ ರೈತರ ಖಾತೆಗಳಿಗೆ ನಾಲ್ಕು ತಿಂಗಳಿಗೆ 2,000 ರೂ.ಗಳಂತೆ, ಮೂರು ಕಂತುಗಳಲ್ಲಿ ವರ್ಷಕ್ಕೆ 6,000 ರೂ ಗಳನ್ನು ನೇರ ನಗದು ಯೋಜನೆ (ಡಿಬಿಟಿ) ಮೂಲಕ ಹಾಕುತ್ತಿದೆ. ಇದು ತಿಂಗಳಿಗೆ 500 ರೂ. ದಿನಕ್ಕೆ 16 ರೂಪಾಯಿ 70 ಪೈಸೆ!! ಒಂದು ರೈತ ಕುಟುಂಬಕ್ಕೆ ದಿನಕ್ಕೆ ಇಷ್ಟು ಹಣ ಕೊಟ್ಟು ರೈತರ ಆದಾಯ ಹೆಚ್ಚಾಗಿದೆ ಎಂದು ಬಿಜೆಪಿಯವರು ಹೇಳತೊಡಗಿದ್ದಾರೆ.
ಮೋದಿ ರೈತರಿಗೆ ಇಷ್ಟಾದರೂ ಹಣದ ನೆರವು ನೀಡುತ್ತಿದ್ದಾರಲ್ಲವೇ? ಹಿಂದಿನ ಯಾವ ಸರ್ಕಾರವೂ ರೈತರಿಗೆ ಇಂತಹ ನೆರವು ನೀಡಿರಲ್ಲಿಲ್ಲ. ಇದನ್ನೂ ಟೀಕಿಸುವ ಅಗತ್ಯ ಏನಿದೆ? ಇಂತಹ ಪ್ರಶ್ನೆಗಳೂ ಎದುರಾಗಬಹುದು. ಆದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN), ಯೋಜನೆಯ ಹಿಂದೆ ಮೋದಿ ಸರ್ಕಾರದ ಹಲವು ಬಗೆಯ ಬಚ್ಚಿಟ್ಟ ಅಜೆಂಡಾಗಳಿವೆ. ಅವುಗಳಲ್ಲಿ, ರಸಗೊಬ್ಬರ ಸೇರಿದಂತೆ ಕೃಷಿಗೆ ಬಳಕೆ ಮಾಡುವ ಪರಿಕರಗಳ ಮೇಲೆ ಮತ್ತು ವಿದ್ಯುತ್ ಬಳಕೆಗೆ ಹಾಗೂ ಕೃಷಿ ಸಾಲಗಳ ಮೇಲಿನ ಬಡ್ಡಿ ರಿಯಾಯ್ತಿಗೆ ಸರ್ಕಾರ ಕೊಡುತ್ತಿರುವ ಧನಸಹಾಯಗಳನ್ನು ಕಡಿತ ಮಾಡುವ ಮತ್ತು ಕ್ರಮೇಣವಾಗಿ ಸಬ್ಸಿಡಿ ವ್ಯವಸ್ಥೆಯನ್ನು, ಪಡಿತರ ವ್ಯವಸ್ಥೆಯನ್ನು ನಾಶಮಾಡುವ, ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡುವ ತಂತ್ರಗಳಿವೆ. ಕೃಷಿಯನ್ನು ಕಾರ್ಪೊರೇಟ್ ಕೃಷಿಯನ್ನಾಗಿ ಮಾಡುವ ತಂತ್ರವೂ ಅಡಗಿದೆ. ವಿಶ್ವಸಂಸ್ಥೆಯ ಜೊತೆ ಮಾಡಿಕೊಂಡಿರುವ ಗ್ಯಾಟ್ ಒಪ್ಪಂದದ ಷರತ್ತುಗಳನ್ನು ಪೂರೈಸುವ ಗುರಿಯೂ ಇದರಲ್ಲಿದೆ.
ರಸಗೊಬ್ಬರ ವಲಯವನ್ನು ಅನಿಯಂತ್ರಿತ ಮಾಡುವ ಕುರಿತು ಶಾಂತ ಕುಮಾರ್ ಸಮಿತಿ ವರದಿ ಹೇಳುವುದೇನು?
“ಆಹಾರ ನಿರ್ವಹಣೆಯ ಸಂಪೂರ್ಣ ವ್ಯವಸ್ಥೆಯು ರಾಷ್ಟ್ರೀಯ ಮತ್ತು ಕುಟುಂಬದ ಮಟ್ಟದಲ್ಲಿ ಆಹಾರ ಭದ್ರತೆಯನ್ನು ಒದಗಿಸುವ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ದೇಶದಲ್ಲಿ ಉತ್ಪಾದಕತೆ ಮತ್ತು ಒಟ್ಟಾರೆ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಸಾಕಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂದು ಅರಿತುಕೊಳ್ಳಬೇಕು. ಭಾರತವು ರಸಗೊಬ್ಬರಗಳ ಮೇಲೆ ದೊಡ್ಡ ಪ್ರಮಾಣದ ಸಬ್ಸಿಡಿಯನ್ನು ನೀಡುತ್ತದೆ (2015 ರ ಬಜೆಟ್ ನಲ್ಲಿ Rs 72,000 ಕೋಟಿಗಳಿಗಿಂತ ಹೆಚ್ಚು ಮತ್ತು ಸುಮಾರು Rs 30,000-35,000 ಕೋಟಿಗಳ ಬಾಕಿ ಬಿಲ್ಲುಗಳು). ಡಿಎಪಿ ಮತ್ತು ಎಂಒಪಿ ಬೆಲೆಗಳಿಗೆ ಹೋಲಿಸಿದರೆ ಯೂರಿಯಾ ಬೆಲೆಗಳನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ನಿರ್ವಹಿಸಲಾಗುತ್ತದೆ. ಎನ್, ಪಿ ಮತ್ತು ಕೆ ಯ ಹೆಚ್ಚು ಅಸಮತೋಲನದ ಬಳಕೆಯನ್ನು ಸೃಷ್ಟಿಸುತ್ತದೆ. ರೈತರಿಗೆ ನೇರ ನಗದು ಸಬ್ಸಿಡಿ (ಪ್ರತಿ ಹೆಕರೆಗೆ ಸುಮಾರು ರೂ. 7000) ನೀಡಬೇಕೆಂದು ಉನ್ನತ ಮಟ್ಟದ ಸಮಿತಿ (HLC) ಶಿಫಾರಸು ಮಾಡುತ್ತದೆ ಮತ್ತು ರಸಗೊಬ್ಬರ ವಲಯವನ್ನು ನಂತರ ಅನಿಯಂತ್ರಿತ ಮಾಡಬಹುದು. ಇದು ಯೂರಿಯಾವನ್ನು ಕೃಷಿಯೇತರ ಬಳಕೆಗಳಿಗೆ ಹಾಗೂ ನೆರೆಯ ದೇಶಗಳಿಗೆ ರಫ್ತು ಮಾಡಲು ಸಹಾಯ ಮಾಡುತ್ತದೆ ಮತ್ತು ರಸಗೊಬ್ಬರ ಬಳಕೆಯ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೈತರಿಗೆ ಈ ರೀತಿಯ ನೇರ ನಗದು ಸಬ್ಸಿಡಿಯು ರಸಗೊಬ್ಬರಗಳು ಅಥವಾ ಇತರ ಒಳಹರಿವುಗಳನ್ನು ಖರೀದಿಸಲು, ಹೆಚ್ಚಿನ ಬಡ್ಡಿದರದಲ್ಲಿ ಲೇವಾದೇವಿದಾರರಿಂದ ಸಾಲ ಪಡೆಯುವವರಿಗೆ ಸಹಾಯ ಮಾಡಲು ಬಹಳ ಸಹಾಯ ಮಾಡುತ್ತದೆ ಎಂದು ಗಮನಿಸಬಹುದು.” ಇದು ಶಾಂತ ಕುಮಾರ್ ವರದಿಯ ಶಿಫಾರಸ್ಸುಗಳಲ್ಲಿನ ಒಂದು ಅಂಶ. ಜನವರಿ-2015 ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಭಾರತ ಸರ್ಕಾರವು ಆಗಸ್ಟ್ 2014 ರಲ್ಲಿ ಶಾಂತ ಕುಮಾರ್ ಅಧ್ಯಕ್ಷರಾಗಿ, ಆರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು (HLC) ಸ್ಥಾಪಿಸಿತು. ಕನಿಷ್ಟ ಬೆಂಬಲ ಬೆಲೆ (MSP) ಕಾರ್ಯಾಚರಣೆಗಳು, ಖರೀದಿ, ಸಂಗ್ರಹಣೆ ಮತ್ತು ಧಾನ್ಯಗಳ ವಿತರಣೆಯಲ್ಲಿ ಭಾರತದ ಆಹಾರ ನಿಗಮ (ಎಫ್‌ಸಿಐ)ದ ಪಾತ್ರವನ್ನು ಮರುನಿರ್ದೇಶಿಸುವ ಮೂಲಕ, ಸಂಪೂರ್ಣ ಆಹಾರ ಧಾನ್ಯ ನಿರ್ವಹಣಾ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಹೇಗೆ, ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಇವುಗಳು ಸಮಿತಿಯ ಮುಂದಿದ್ದ ಪ್ರಮುಖ ವಿಷಯವಾಗಿತ್ತು. (ಪತ್ರಿಕಾ ಮಾಹಿತಿ ಬ್ಯೂರೋ, ಭಾರತ ಸರ್ಕಾರ; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ; 22-ಜನವರಿ-2015).
ರಸಗೊಬ್ಬರ ವಲಯವನ್ನು ಅನಿಯಂತ್ರಿತಗೊಳಿಸುವ, ಆ ಮೂಲಕ ರಸಗೊಬ್ಬರವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡುವ, ಇವುಗಳಿಗೆ ಕೊಡುತ್ತಿರುವ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ನಿಟ್ಟಿನಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತರಲಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಪೆಟ್ರೋಲ್, ಡೀಸಲ್, ಅಡುಗೆ ಅನಿಲ ಇವುಗಳನ್ನು ಅನಿಯಂತ್ರಿತಗೊಳಿಸಿ, ಇವುಗಳನ್ನು ಮುಕ್ತ ಮಾರುಕಟ್ಟೆಗೆ ತೆರೆದಿಟ್ಟಿರುವ ಪರಿಣಾಮದಿಂದ, ಅವುಗಳ ದರಗಳು ನಿಯಂತ್ರಣವಿಲ್ಲದೆ ಹೇಗೆ ಏರುತ್ತಿವೆ ಎಂಬುದನ್ನು ನಾವೀಗಾಗಲೇ ಅನುಭವಿಸುತ್ತಿದ್ದೇವೆ.
ಕೃಷಿ ಭೂಮಿ ಹೊಂದಿರದ ಕಾರ್ಮಿಕರಿಗೆ ಏಕಿಲ್ಲ?
PM-KISAN ಯೋಜನೆಯ ಫಲಾನುಭವಿಗಳು ಕೃಷಿಯೋಗ್ಯ ಭೂಮಿ ಹೊಂದಿರುವ ರೈತರನ್ನು ಮಾತ್ರ ಒಳಗೊಂಡಿರುತ್ತಾರೆ. ಈ ಯೋಜನೆಯು ದೇಶದ ಶೇ. 55 ರಷ್ಟಿರುವ ಕೃಷಿ ಕಾರ್ಮಿಕರನ್ನು ಒಳಗೊಳ್ಳುವುದಿಲ್ಲ. ಕೃಷಿ ಕಾರ್ಮಿಕರಿಗೆ ತಮ್ಮದೆಂಬ ಸ್ವಂತ ಜಮೀನು ಇರುವುದಿಲ್ಲ. ಇವರು ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇವರು ಕೂಲಿ ಅಥವಾ ಬೇರೊಬ್ಬರ ಜಮೀನಿನಲ್ಲಿ ತಾವು ಬೆಳೆದ ಬೆಳೆಯಲ್ಲಿ ಪಾಲು ಪಡೆಯುವ ಮೂಲಕ ಆದಾಯ ಗಳಿಸುತ್ತಾರೆ. ಕೃಷಿ ಕಾರ್ಮಿಕರಲ್ಲಿ ಕೃಷಿಕರು ಮತ್ತು ಗ್ರಾಮೀಣ ಕಾರ್ಮಿಕರು ಸೇರಿದ್ದಾರೆ. ಭಾರತದ ಒಟ್ಟು ಕೃಷಿ ಕಾರ್ಮಿಕರಲ್ಲಿ ಭೂರಹಿತ ಕೃಷಿ ಕಾರ್ಮಿಕರ ಪಾಲು 1951 ರಲ್ಲಿ ಶೇ. 28 ರಷ್ಟಿತ್ತು. ಇದು 2011 ರ ಸಮೀಕ್ಷೆಯ ಪ್ರಕಾರ ಶೇ. 55 ಕ್ಕೆ (ಒಟ್ಟು 26 ಕೋಟಿ ಕೃಷಿಕರಲ್ಲಿ ಕೃಷಿ ಕಾರ್ಮಿಕರ ಪಾಲು 14.4 ಕೋಟಿ) ಹೆಚ್ಚಾಗಿತ್ತು. ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ಕೃಷಿ ಭೂಮಿ ಹೊಂದಿರದ ಕಾರ್ಮಿಕರಿಗೆ ಕಿಸಾನ್ ಸಮ್ಮಾನ್ ನಂತಹ ಆದಾಯ ಬೆಂಬಲದ ಯೋಜನೆ ಏಕಿಲ್ಲ? ಭೂರಹಿತ ಕೃಷಿ ಕಾರ್ಮಿಕರೂ ಕೃಷಿಕರಲ್ಲವೇ? ಕೃಷಿಯಲ್ಲಿ ಇವರ ಪಾಲೂ ಇದೆಯಲ್ಲವೇ? ಅನೇಕ ರಾಜ್ಯಗಳಲ್ಲಿ ಭೂರಹಿತ ರೈತರ ದೊಡ್ಡ ಭಾಗವಾಗಿರುವ ಹಿಡುವಳಿದಾರ ರೈತರು, ಆದಾಯ ಬೆಂಬಲ ಪ್ರಯೋಜನಗಳನ್ನು ಪಡೆಯುವುದಿಲ್ಲ. ಮೋದಿ ಸರ್ಕಾರ ಭೂರಹಿತ ಕೃಷಿಕರನ್ನು ಈ ಯೋಜನೆಯಲ್ಲಿ ಸೇರಿಸಲು ಮುಂದಾಗಲಿಲ್ಲ. ಮಾತ್ರವಲ್ಲ, ಕೃಷಿ ಕಾರ್ಮಿಕರ ಬದುಕಿಗೆ ನೆರವಾಗುತ್ತಿರುವ, ಕೆಲಸ ಮಾಡಿ ಕೂಲಿ ಪಡೆಯುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಅನುದಾನ ಕಡಿತ ಮಾಡುತ್ತಾ ಬಂದಿದೆ. ಇದರಿಂದಲೇ ಕಿಸಾನ್ ಸಮ್ಮಾನ್ ತಂದಿರುವ ಸರ್ಕಾರದ ಉದ್ದೇಶ ಎನೆಂಬುದು ಅರಿವಾಗುತ್ತದೆ.
ಭೂರಹಿತ ಕೃಷಿಕರ ಪರಿಸ್ಥಿತಿ ಹೀಗಿದ್ದರೆ, ಅನೇಕ ರಾಜ್ಯಗಳಲ್ಲಿ ಭೂಮಿ ಹೊಂದಿರುವ ಬಹಳಷ್ಟು ರೈತರೂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಸರಿಯಾದ ಭೂ ದಾಖಲೆಗಳ ಲಭ್ಯತೆ ಇಲ್ಲದಿರುವುದು, ಆಧಾರ್ ಡೇಟಾದ ಜನಸಂಖ್ಯಾ ದೃಢೀಕರಣ, ತಪ್ಪಾದ ಬ್ಯಾಂಕ್ ಖಾತೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಳಪೆ ಇಂಟರ್ನೆಟ್ ಸಂಪರ್ಕ – PMKISAN ಪೋರ್ಟಲ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡಲು ಅಡ್ಡಿಯುಂಟುಮಾಡುತ್ತದೆ.
ರಸಗೊಬ್ಬರದ ಮೇಲೂ ಜಿಎಸ್ ಟಿ
ಒಂದೆಡೆ, ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಒಕ್ಕೂಟ ಸರ್ಕಾರ ರೈತರಿಗೆ ಒಂದಷ್ಟು ಹಣಕಾಸಿನ ನೆರವು ನೀಡುತ್ತಿದೆ. ಜೊತೆಗೆ, ರೈತರಿಗೆ ಅವರು ಕೃಷಿಗೆ ಮಾಡುವ ವೆಚ್ಚ ಕಡಿಮೆಗೊಳಿಸುವ ಉದ್ದೇಶದಿಂದ ರಸಗೊಬ್ಬರಗಳ ಮೇಲಿನ ಸಬ್ಸಿಡಿಗೆ ಸರ್ಕಾರವು ತನ್ನ ಬಜೆಟ್ ನಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಮತ್ತೊಂದೆಡೆ ರಸಗೊಬ್ಬರಗಳ ಮೇಲೆ ಅಥವಾ ಅವುಗಳನ್ನು ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಮೇಲೆ ಸರ್ಕಾರ ತೆರಿಗೆ ವಿಧಿಸುತ್ತದೆ. ಇದೊಂದು ಅರ್ಥಹೀನವಾಗಿದೆ. ತೆರಿಗೆ ವಿದಿಸುವುದರಿಂದ ರಸಗೊಬ್ಬರದ ವೆಚ್ಚವನ್ನು ಹೆಚ್ಚಿಸುತ್ತದೆ, ರಸಗೊಬ್ಬರದ ಬೆಲೆ ಹೆಚ್ಚಾಗುತ್ತದೆ, ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಉತ್ಪಾದಕರಿಗೆ ಸಬ್ಸಿಡಿ ರೂಪದಲ್ಲಿ ಸರ್ಕಾರ ಹೆಚ್ಚುವರಿ ಹಣ ಕೊಡುತ್ತದೆ. ಇದು ಒಂದು ಕೈಯಿಂದ ತೆಗೆದುಕೊಂಡು ಇನ್ನೊಂದು ಕೈಯಿಂದ ಹಿಂತಿರುಗಿಸುವ ವಿಶಿಷ್ಟ ಪ್ರಕರಣವಾಗಿದೆ.
ಕೇಂದ್ರ ಸರ್ಕಾರ ರಸಗೊಬ್ಬರ ಮತ್ತು ಅವುಗಳನ್ನು ಉತ್ಪಾದಿಸಲು ಬೇಕಾದ ಕಚ್ಚಾ ವಸ್ತುಗಳ ಮೇಲೆ ಜಿ.ಎಸ್.ಟಿ ವಿಧಿಸುತ್ತದೆ. ಸಲ್ಫ್ಯೂರಿಕ್ ಆಮ್ಲ ಮತ್ತು ಅಮೋನಿಯದಂತಹ ಕಚ್ಚಾ ವಸ್ತು(RM) ಗಳಿಗೆ ಶೇ. 18, ಫಾಸ್ಪರಿಕ್ ಆಮ್ಲಕ್ಕೆ ಶೇ. 12 ಜಿ.ಎಸ್.ಟಿ. ವಿಧಿಸಲಾಗುತ್ತದೆ.
ರಸಗೊಬ್ಬರ ಪೂರೈಕೆ ಸರಪಳಿಯ ಎರಡು ಪ್ರಮುಖ ಘಟಕಗಳಿಗೆ ಎರಡು ವಿಭಿನ್ನ ಆಡಳಿತಗಳ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ: ಒಂದು GST ಅಡಿಯಲ್ಲಿ ಮತ್ತು ಇನ್ನೊಂದು GST ಪೂರ್ವ ಆಡಳಿತದ ಅಡಿಯಲ್ಲಿ. ಯೂರಿಯಾ ಮತ್ತು ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ನಂತಹ ಎಲ್ಲಾ ಸಿದ್ಧಪಡಿಸಿದ ರಸಗೊಬ್ಬರಗಳಿಗೆ ಜಿಎಸ್ಟಿ ಅಡಿಯಲ್ಲಿ ಶೇ. 5 ತೆರಿಗೆ ವಿಧಿಸಲಾಗುತ್ತದೆ. ಹೆಚ್ಚಿನ RM ಗಳು ಸಹ GST ಅಡಿಯಲ್ಲಿ ಒಳಗೊಳ್ಳುತ್ತವೆ. ಆದಾಗ್ಯೂ, ಎಲ್ಲಾ ದೇಶೀಯ ಯೂರಿಯಾ ತಯಾರಿಕೆಗೆ ಬಳಸಲಾಗುವ ನೈಸರ್ಗಿಕ ಅನಿಲ (NG), ಪೂರ್ವ GST ಆಡಳಿತದ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ.
ರಸಗೊಬ್ಬರ ಕಂಪನಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಬ್ಸಿಡಿ ಹಣ!
ಇಲ್ಲೊಂದು ಜನಸಾಮಾನ್ಯರಿಗೆ ಅರ್ಥವಾಗದ ನಡೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಪ್ರತಿ ವರ್ಷವೂ ಬಜೆಟ್ ಮೂಲಕ ರಸಗೊಬ್ಬರ ತಯಾರಕರು ಮತ್ತು ಆಮದುದಾರರಿಗೆ ಸಬ್ಸಿಡಿ ನೀಡುತ್ತದೆ. ನವ ಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ನಂತರದ ಅವಧಿಯಲ್ಲಿ ರಸಗೊಬ್ಬರ ಸಬ್ಸಿಡಿಯು 1990-91ರಲ್ಲಿ 4,389 ಕೋಟಿ ರೂ. ನಿಂದ 2008-09 ರಲ್ಲಿ 75,849 ಕೋಟಿ ರೂ.ಗೆ ಹೆಚ್ಚಳವಾಯಿತು. 2021-22ರಲ್ಲಿ ರೂ. 2.54 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, 2022-23ನೇ ಸಾಲಿಗೆ ರೂ. 1.05 ಲಕ್ಷ ಕೋಟಿಗೆ ಸೀಮಿತಗೊಳಿಸಿತು. 2022-23ರ ಪರಿಷ್ಕೃತ ಮೊತ್ತ 2,25,222 ಕೋಟಿ ರೂ. ಗಳಾದರೆ, 2023-24ರ ಅಂದಾಜು ಮೊತ್ತ 1,75.103 ಕೋಟಿ ರೂ.ಗಳಿಗೆ ಕಡಿತ ಮಾಡಿದೆ. ಸರ್ಕಾರ ಈ ಪ್ರಮಾಣದಲ್ಲಿ ಕಂಪನಿಗಳಿಗೆ ಸಬ್ಸಿಡಿ ಹಣ ಕೊಡುತ್ತಿದ್ದರೂ ಕೂಡಾ, ರಸಗೊಬ್ಬರದ ಬೆಲೆ ಏರುತ್ತಲೇ ಇದೆ. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ ಕಾರಣ ಎಂದು ಉತ್ಪಾದನಾ ಕಂಪನಿಗಳು ಸಮರ್ಥಿಸಿಕೊಳ್ಳುತ್ತಿವೆ.
ಇದು ನಿಜವಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾದ ನಂತರವೂ, ದೇಶದಲ್ಲಿ ರಸಗೊಬ್ಬರಗಳ ಬೆಲೆ ಶೇ.30 ರಷ್ಟು ಹೆಚ್ಚಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗೆ ಅನುಗುಣವಾಗಿ ಇಲ್ಲಿಯೂ ಜಾರಿಗೆ ತಂದಿದ್ದರೆ ರಸಗೊಬ್ಬರಗಳ ಬೆಲೆಯಲ್ಲಿ ಇಂದಿನ ಬೆಲೆಯ ಅರ್ಧದಷ್ಟು ಕಡಿಮೆಯಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ ದರ ಕಡಿತದ ಲಾಭವನ್ನು ತಾನೇ ಉಳಿಸಿಕೊಂಡು, ಜೊತೆಗೆ ಸಬ್ಸಿಡಿಯನ್ನೂ ಕಡಿತಗೊಳಿಸಿ ರೈತರ ಮೇಲೆ ಹೊರೆ ಹಾಕಿದೆ.
ಒಂದು ಲಕ್ಷ ಕೋಟಿ ವಾಪಸ್ ;
ಮತ್ತೊಂದಡೆ, 2018-23ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಕೇಂದ್ರ ಕೃಷಿ ಇಲಾಖೆಯಿಂದ ಕೃಷಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದ ಹಣವನ್ನು ಅಕ್ಷರಶಃ ಒಂದು ಲಕ್ಷ ಕೋಟಿ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡದೆ ವಾಪಸ್ ಕಳುಹಿಸಿದೆ. ಇದೇ ಅವಧಿಯಲ್ಲಿ ಕೃಷಿ ನಷ್ಟ ಮತ್ತು ಸಾಲದ ಸಮಸ್ಯೆಯಿಂದ ದೇಶಾದ್ಯಂತ ಲಕ್ಷಗಟ್ಟಲೆ ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ತೋರಿಸುತ್ತಿವೆ.
ಮುಕ್ತ ಆರ್ಥಿಕ ನೀತಿಗಳ ಜಾರಿಯ ಗುರಿಯೊಂದಿಗೆ ಕೇಂದ್ರದ ಬಿಜೆಪಿ ಸರ್ಕಾರ ರೈತರನ್ನು, ಕೃಷಿ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಲು, ರೈತರ ಕೃಷಿಯನ್ನು ಕಾರ್ಪೊರೇಟ್ ಕೃಷಿಯನ್ನಾಗಿಸುವ ಮೂಲಕ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಕೃಷಿಯಿಂದ ಹೊರದಬ್ಬಲು ಮುಂದಾಗಿದೆ, ಎಲ್ಲವನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡುವ ಗುರಿಯೊಂದಿಗೆ ಪಡಿತರ ವ್ಯವಸ್ಥೆಯನ್ನು ನಾಶಮಾಡಲು ಮುಂದಾಗಿದೆ. ಇಂತಹ ಜನವಿರೋಧಿ, ಕೃಷಿ ವಿರೋಧಿ ಮತ್ತು ದೇಶ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಇಂದಿನ ಚುನಾವಣೆಯನ್ನು ಪ್ರತಿರೋಧದ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳೋಣ.
C2+50 % ಸೂತ್ರದಂತೆ ಬೆಂಬಲ ಬೆಲೆ ನಿಗದಿ ಮಾಡಿದ್ದರೆ…
ಕೃಷಿ ಭೂಮಿ ಇರುವ ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ದಿನವೊಂದಕ್ಕೆ 17 ರೂ ನೆರವು ನೀಡುವ ಬದಲಾಗಿ, ರೈತರು ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ C2+50 % ಸೂತ್ರದಂತೆ ಬೆಂಬಲ ಬೆಲೆ ನಿಗದಿ ಮಾಡಿದ್ದರೆ, ರೈತರಿಗೆ ಬಹಳಷ್ಟು ಆದಾಯ ಬರುತ್ತಿತ್ತು. ಉದಾಹರಣೆಗೆ, ಒಂದು ನಿರ್ಧಿಷ್ಟ ಗುಣಮಟ್ಟದ ಭತ್ತಕ್ಕೆ ಇಂದಿನ ಕನಿಷ್ಟ ಬೆಂಬಲ ಬೆಲೆ (MSP) ಕ್ವಿಂಟಲ್ ಗೆ ರೂ.2183 ಆಗಿದೆ. ರಾಜ್ಯಗಳ C2 ವೆಚ್ಚದ ಸೂತ್ರದ ಪ್ರಕಾರ ಸರಾಸರಿ ಕ್ವಿಂಟಲ್ ಗೆ ರೂ. 2139. C2+50 % ಸೂತ್ರದಂತೆ ಇದು ಕ್ವಿಂಟಲ್ ಗೆ ರೂ. 3208.50 ಆಗಿರಬೇಕು. ಸರ್ಕಾರದ ಇಂದಿನ ಬೆಂಬಲ ಬೆಲೆಯ ನೀತಿಯಿಂದಾಗಿ ರೈತರು ಒಂದು ಕ್ವಿಂಟಲ್ ಭತ್ತಕ್ಕೆ ಅಂದಾಜು 1,069 ರೂಪಾಯಿ ನಷ್ಟ ಹೊಂದುತ್ತಾರೆ. C2+50 % ಸೂತ್ರದಂತೆ ಬೆಂಬಲ ಬೆಲೆ ನಿಗದಿಯಾಗಿದ್ದರೆ, ಒಂದು ಎಕರೆಯಲ್ಲಿ ಸರಾಸರಿ 40 ಕ್ವಿಂಟಲ್ ಭತ್ತ ಬೆಳೆಯುವ ರೈತ, ಒಂದು ಬೆಳೆಗೆ 42 ಸಾವಿರ ರೂಗಳ ಹೆಚ್ಚುವರಿ ಹಣ ಪಡೆಯುತ್ತಿದ್ದರು.
ನಿಮ್ಮ ಟಿಪ್ಪಣಿ ಬರೆಯಿರಿ