
ಒಂದೆಡೆ, ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಧಾನ್ಯಗಳ ಬದಲಿಗೆ ನೇರ ನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ಹಾಕುತ್ತಾರೆ. ಮತ್ತೊಂದೆಡೆ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಕಡಿಮೆ ದರದಲ್ಲಿ ಭಾರತ್ ರೈಸ್ ಹೆಸರಿನಲ್ಲಿ ಕೆಜಿ ಅಕ್ಕಿಗೆ 29 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಮೋದಿ ಸರ್ಕಾರ ಹೇಳುತ್ತಿದೆ. ಏನಿದು ನಾಟಕ? ಒಂದು ವೇಳೆ ಧಾನ್ಯಗಳ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಬೇಕು ಎಂಬುದೇ ಅವರ ನಿಜವಾದ ಖಾಳಜಿಯಾಗಿದ್ದರೆ, ‘ಭಾರತ್ ಅಕ್ಕಿ’ ಹೆಸರಿನಲ್ಲಿ ಒಕ್ಕೂಟ ಸರ್ಕಾರವೇ ನೇರವಾಗಿ ಜನರ ಬಳಿಗೆ ಕೊಂಡ್ಯೊಯ್ದು ಮಾರಾಟ ಮಾಡುವ ಬದಲಾಗಿ, ರಾಜ್ಯ ಸರ್ಕಾರಗಳ ಮೂಲಕ ಧಾನ್ಯಗಳ ವಿತರಣೆ ಮಾಡಲು ಅವಕಾಶ ಕೊಡಬೇಕಾಗಿತ್ತು. ಇದನ್ನು ಬಿಜೆಪಿ ತನ್ನ ಚುನಾವಣಾ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪದ ಹೊರತಾಗಿಯೂ, ಇದರಲ್ಲಿ ಪಡಿತರ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರಗಳಿಗೆ ಇರುವ ಅಧಿಕಾರ ಕಸಿದುಕೊಳ್ಳುವುದೂ ಸೇರಿದಂತೆ ಹಲವು ಮುಚ್ಚಿಟ್ಟ ಅಜೆಂಡಾಗಳಿವೆ.
ಪಡಿತರ ಧಾನ್ಯಗಳನ್ನು ಪಡಿತರ ಅಂಗಡಿಗಳ ಮೂಲಕವೇ ವಿತರಣೆ ಅಥವಾ ರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು. ಆದರೆ, ಮೋದಿ ಸರ್ಕಾರದ ‘ಭಾರತ್ ರೈಸ್’ ಹೆಸರಿನ ಅಕ್ಕಿ ಕೇಂದ್ರೀಯ ಭಂಡಾರ್, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ದ ಭೌತಿಕ ಮತ್ತು ಮೊಬೈಲ್ ಮಳಿಗೆಗಳಲ್ಲಿ ಮಾತ್ರವಲ್ಲದೆ, ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯ ಜಿಯೋ ಮಾರ್ಟ್ ನಲ್ಲೂ, ಆನ್ ಲೈನ್ ನಲ್ಲೂ ಮಾರಾಟವಾಗುತ್ತಿದೆ. ಇದು ಬಡವರಿಗಾಗಿ ತಂದ ಯೋಜನೆಯಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ‘ಭಾರತ್ ರೈಸ್’ ಯೋಜನೆಯ ಹಿಂದೆ ಮೋದಿ ಸರ್ಕಾರದ ಹಲವು ರಹಸ್ಯ ಅಜೆಂಡಾಗಳಿವೆ. 1) ತಕ್ಷಣ ಬರುವ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಲಾಭ ಪಡೆಯುವುದು, 2) ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವುದು, 3) ಕೇಂದ್ರೀಕೃತ ವ್ಯವಸ್ಥೆ ತರುವುದು, 4) ರೈತರಿಂದ ಬೆಂಬಲ ಬೆಲೆಗೆ ಧಾನ್ಯಗಳನ್ನು ಖರೀದಿಸುವ ವ್ಯವಸ್ಥೆಯನ್ನು ಇಲ್ಲವಾಗಿಸುವುದು, 5) ಸರ್ಕಾರಿ ಗೋದಾಮುಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವುದು, 6) ಅಂತಿಮವಾಗಿ ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡಿ, ಸರ್ಕಾರ ತನ್ನ ಸಾಮಾಜಿಕ ಜವಾಬ್ಧಾರಿಯಿಂದ ಹೊರಬಂದು ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡುವುದು, ಈ ಮೂಲಕ, ವಿಶ್ವ ವಾಣಿಜ್ಯ ಸಂಸ್ಥೆ (WTO) ಜೊತೆಗಿನ ಒಪ್ಪಂದದಲ್ಲಿನ ಷರತ್ತುಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ.
ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ
ಒಕ್ಕೂಟ ವ್ಯವಸ್ಥೆ ಎಂಬುದು ಭಾರತೀಯ ಸಂವಿಧಾನದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಸಂವಿಧಾನದ ಪೀಠಿಕೆಯು ‘ಇಂಡಿಯಾ ಎಂದರೆ ಭಾರತ-ರಾಜ್ಯಗಳ ಒಕ್ಕೂಟ’ ಎಂದು ಹೇಳುತ್ತದೆ. ಕೇಂದ್ರವು ರಾಜ್ಯಗಳಿಂದ ರಚನೆಯಾಗಿರುವುದರಿಂದ ರಾಜ್ಯಗಳನ್ನು ಬಲಪಡಿಸಿದರೆ ಮಾತ್ರ ಬಲಿಷ್ಠ ಭಾರತ ದೇಶ ಸಾಧ್ಯ. ಆದರೆ ಬಿಜೆಪಿ ಸರ್ಕಾರವು ರಾಜ್ಯಗಳ ಎಲ್ಲಾ ಸಂಪನ್ಮೂಲಗಳು ಮತ್ತು ಅಧಿಕಾರಗಳನ್ನು ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕರಿಸುವುದು ಅಸಾಂವಿಧಾನಿಕವಾಗಿದೆ. ‘ಒಂದು ದೇಶ-ಒಂದು ಕಾನೂನು, ಒಂದು ದೇಶ-ಒಂದು ಭಾಷೆ, ಒಂದು ದೇಶ-ಒಂದು ಚುನಾವಣೆ…’ ಎಂದು ಕೇಂದ್ರೀಕರಿಸಲು ಪ್ರಯತ್ನಿಸುತ್ತಿದೆ. ಇದರ ಮತ್ತೊಂದು ಭಾಗ ‘ಒನ್ ನೇಷನ್ ಒನ್ ರೇಷನ್’ ವ್ಯವಸ್ಥೆ.
ದೇಶದ ಯಾವುದೇ ರಾಜ್ಯದಲ್ಲಿದ್ದರೂ ಪಡಿತರ ಪಡೆಯಬಹುದು ಎನ್ನುವ ‘ಒನ್ ನೇಷನ್ ಒನ್ ರೇಷನ್’ (ಒಂದು ದೇಶ ಒಂದು ಪಡಿತರ) ಯೋಜನೆ ಜಾರಿಗೆ ತರುವ ಮೂಲಕ ಒಕ್ಕೂಟ ಸರ್ಕಾರ ರಾಜ್ಯಗಳ ಅಧಿಕಾರಗಳನ್ನು ಕಸಿದುಕೊಳ್ಳಲಿದೆ. ಇದು ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತರುವ ಒಂದು ಭಾಗವಾಗಿದೆ. ಭಾರತ್ ಅಕ್ಕಿ ಹೆಸರಿನಲ್ಲಿ ಒಕ್ಕೂಟ ಸರ್ಕಾರವೇ ನೇರವಾಗಿ ಜನರ ಬಳಿಗೆ ಕೊಂಡ್ಯೊಯ್ದು ಮಾರಾಟ ಮಾಡುವ ಮೂಲಕ ಪಡಿತರ ವಿತರಣಾ ವ್ಯವಸ್ಥೆಯ ಭಾಗವಾಗಿರುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಸಿದುಕೊಂಡಿದೆ.
ಜಂಟಿ ಜವಾಬ್ದಾರಿಯ ಪಡಿತರ ವಿತರಣಾ ವ್ಯವಸ್ಥೆ
ಪಡಿತರ ವಿತರಣಾ ವ್ಯವಸ್ಥೆ (PDS) ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಜಂಟಿ ಜವಾಬ್ದಾರಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಕ್ಕೂಟ ಸರ್ಕಾರವು ಭಾರತೀಯ ಆಹಾರ ನಿಗಮದ ಮೂಲಕ (FCI) ರಾಜ್ಯ ಸರ್ಕಾರಗಳಿಗೆ ಆಹಾರ ಧಾನ್ಯಗಳ ಖರೀದಿ, ಸಂಗ್ರಹಣೆ, ಸಾಗಣೆ ಮತ್ತು ಬೃಹತ್ ಹಂಚಿಕೆಯ ಜವಾಬ್ದಾರಿಯನ್ನು ವಹಿಸಿದೆ. ರಾಜ್ಯದೊಳಗೆ ಹಂಚಿಕೆ, ಅರ್ಹ ಕುಟುಂಬಗಳ ಗುರುತಿಸುವಿಕೆ, ಪಡಿತರ ಚೀಟಿಗಳ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳ (FPSs) ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಇತ್ಯಾದಿ ಸೇರಿದಂತೆ ಕಾರ್ಯಾಚರಣೆಯ ಜವಾಬ್ದಾರಿಯು ರಾಜ್ಯ ಸರ್ಕಾರಗಳ ಮೇಲಿದೆ. PDS ಅಡಿಯಲ್ಲಿ, ಪ್ರಸ್ತುತ ಸರಕುಗಳಾದ ಗೋಧಿ, ಅಕ್ಕಿ, ಸಕ್ಕರೆ ವಿತರಣೆಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಕೆಲವು ರಾಜ್ಯಗಳು/ಯುಟಿಗಳು ದ್ವಿದಳ ಧಾನ್ಯಗಳು, ಖಾದ್ಯ ತೈಲಗಳು, ಅಯೋಡಿಕರಿಸಿದ ಉಪ್ಪು, ಮಸಾಲೆಗಳು ಇತ್ಯಾದಿಗಳಂತಹ ಪಡಿತರ ಅಂಗಡಿಗಳ ಮೂಲಕ ಸಾಮೂಹಿಕ ಬಳಕೆಯ ಹೆಚ್ಚುವರಿ ವಸ್ತುಗಳನ್ನು ವಿತರಿಸುತ್ತವೆ.
ಆಹಾರ ಧಾನ್ಯಗಳ ಬೆಲೆಗಳ ಏರಿಕೆಗೆ ಕಾರಣವಾಗಿದೆ
ಪಡಿತರ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಬಡವರ ಹಸಿವನ್ನು ನೀಗಿಸುತ್ತದೆ, ಜನರಲ್ಲಿನ ಅಪೌಷ್ಠಿಕತೆ ಕಡಿಮೆಯಾಗಲು ಸಹಾಯವಾಗುತ್ತದೆ, ಹಸಿವಿನಿಂದ ನರಳುವವರ/ಸಾಯುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂಬುದಂತೂ ಸತ್ಯ. ಇಷ್ಟು ಮಾತ್ರವೇ ಅಲ್ಲ, ಇಂತಹ ವ್ಯವಸ್ಥೆ ಭಾರತೀಯರೆಲ್ಲರ ಕುಟುಂಬದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಬೆಲೆಗಳ ಏರಿಕೆಯನ್ನು ತಡೆಯಲು ಪಡಿತರ ವ್ಯವಸ್ಥೆ ಗಣನೀಯವಾಗಿ ಕೊಡುಗೆ ನೀಡಿದೆ. ಹೆಚ್ಚೆಚ್ಚು ಆಹಾರ ಧಾನ್ಯಗಳು ಪಡಿತರದ ಮೂಲಕ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಸಿಗುವಂತಾದರೆ, ಅಷ್ಟೇ ಕಡಿಮೆ ಪ್ರಮಾಣದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯಗಳನ್ನು ಖರೀದಿಸುತ್ತಾರೆ. ಈ ಕಾರಣದಿಂದಲೇ ಎಪಿಎಲ್, ಬಿಪಿಎಲ್, ಅಂತ್ಯೋಧಯ ಎಂಬ ಬೇಧವಿಲ್ಲದೆ, ಪಡಿತರ ಧಾನ್ಯಗಳನ್ನು ಬಯಸಿ ಬರುವ ಎಲ್ಲರಿಗೂ ಪಡಿತರ ನೀಡಬೇಕು ಎಂಬುದು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಮತ್ತು ಎಡ ಸಂಘಟನೆಗಳ ಬೇಡಿಕೆ.
ಪಡಿತರ ಧಾನ್ಯಗಳ ವಿತರಣೆಯ ಪ್ರಮಾಣ ಕಡಿಮೆಯಾದರೆ, ಜನರು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚು ದರ ಕೊಟ್ಟು ಖರೀದಿಸಬೇಕಾದ ಅನಿವಾರ್ಯತೆ ಬರುತ್ತದೆ. ಇದರ ಪರಿಣಾಮ ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಇಂತಹ ಸಂದರ್ಭವನ್ನು ದೊಡ್ಡ ವ್ಯಾಪಾರಿ ಸಂಸ್ಥೆಗಳು, ಖಾಸಗೀ ಗೋದಾಮು ಹೊಂದಿರುವವರು ಬೆಲೆ ಹೆಚ್ಚಿಸುವ ಮೂಲಕ ಲಾಭ ಮಾಡಿಕೊಳ್ಳಲು ಮುಂದಾಗುತ್ತಾರೆ. ಪಡಿತರ ವಿತರಣೆಯಲ್ಲಿ ಧಾನ್ಯಗಳ ಪ್ರಮಾಣ ಕಡಿತ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೆಲವು ರಾಜ್ಯಗಳಲ್ಲಿ ಧಾನ್ಯಗಳ ವಿತರಣೆ ಬದಲು ನೇರ ನಗದು ನೀಡುತ್ತಿರುವುದು ಇಂದು ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಒಂದು ಪ್ರಮುಖ ಕಾರಣ.
ಧಾನ್ಯಗಳ ಬದಲು ನೇರ ನಗದು!
ಪಡಿತರ ಕುಟುಂಬಗಳಿಗೆ ಧಾನ್ಯಗಳ ವಿತರಣೆಯ ಬದಲು, ಅದಕ್ಕೆ ಸರ್ಕಾರ ವೆಚ್ಚ ಮಾಡುವ ಹಣವನ್ನು ನೇರ ನಗದು ಯೋಜನೆ(DBT)ಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತುಂಬಲು ಸರ್ಕಾರ ಮುಂದಾಗಿದೆ ಎಂದರೆ ಇಲ್ಲಿನ ಬಹಳಷ್ಟು ಜನರು ನಂಬುವುದಿಲ್ಲ. ಆದರೆ, ಇದು ಸತ್ಯ. ಆಹಾರ ಸಬ್ಸಿಡಿ ಯೋಜನೆಯ ನಗದು ವರ್ಗಾವಣೆಯ ಯೋಜನೆಯನ್ನು 21.08.2015 ರಂದು ಜಾರಿಗೆ ತರಲಾಗಿದೆ. ಈ ನಿಯಮಗಳ ಅಡಿಯಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಅಥವಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದೊಳಗೆ ಯಾವುದೇ ನಿರ್ದಿಷ್ಟ ಪ್ರದೇಶ ಎಂದು ವ್ಯಾಖ್ಯಾನಿಸಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಲಿಖಿತ ಒಪ್ಪಿಗೆ ಇದೆ. ಹೀಗಾಗಿ, ಮೊದಲಿಗೆ ಈ ಯೋಜನೆಯನ್ನು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.
2022ರ ಮಾರ್ಚ್ ನಲ್ಲಿ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ, ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ, ಆಹಾರಧಾನ್ಯಗಳನ್ನು ಒದಗಿಸುವ ಬದಲು ಆಹಾರ ಸಬ್ಸಿಡಿಯನ್ನು ನೇರವಾಗಿ ಸಾರ್ವಜನಿಕ ವಿತರಣಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮಾಡುವ ಯೋಜನೆ ಬಗ್ಗೆ ತಿಳಿಸಿದರು. ವ್ಯವಸ್ಥೆಯನ್ನು ಈಗಾಗಲೇ ಮೂರು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ ಮತ್ತು ಪುದುಚೇರಿಯಲ್ಲಿ ಸೆಪ್ಟೆಂಬರ್ 2015 ರಿಂದ ಮತ್ತು ದಾದ್ರಾ ಮತ್ತು ನಗರ ಹವೇಲಿಯ ನಗರ ಪ್ರದೇಶಗಳಲ್ಲಿ ಮಾರ್ಚ್ 2016 ರಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಈ ಕೇಂದ್ರಾಡಳಿತ ಪ್ರದೇಶಗಳ ಫಲಾನುಭವಿಗಳು ನಗದು ವರ್ಗಾವಣೆಯನ್ನು ಸ್ವೀಕರಿಸುತ್ತಿದ್ದಾರೆ. ಅವರು ಆಹಾರ ಧಾನ್ಯಗಳ ಬದಲಿಗೆ ಮುಕ್ತ ಮಾರುಕಟ್ಟೆಯಿಂದ ತಾವು ಬಳಸುವ ತಮ್ಮ ಆಯ್ಕೆಯ ಆಹಾರ ಧಾನ್ಯಗಳನ್ನು ಖರೀದಿಸಲು ಅವಕಾಶವಾಗಿದೆ ಎಂದರು. (30 MAR 2022- PIB-ಪ್ರೆಸ್ ಇನ್ಪರ್ಮೇಶನ್ ಬ್ಯೂರೊ).
ನೇರ ನಗದು ವರ್ಗಾವಣೆ (DBT) ಆಹಾರ ಧಾನ್ಯಗಳ ಬೃಹತ್ ಭೌತಿಕ ಚಲನೆಯ ಅಗತ್ಯವನ್ನು ಕಡಿಮೆ ಮಾಡಲು, ಫಲಾನುಭವಿಗಳಿಗೆ ತಮ್ಮ ಬಳಕೆಯ ಧಾನ್ಯಗಳನ್ನು ಆಯ್ಕೆ ಮಾಡಿಕೊಳ್ಳಲು ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸಲು, ಆಹಾರದ ವೈವಿಧ್ಯತೆಯನ್ನು ಹೆಚ್ಚಿಸಲು, ಸೋರಿಕೆಯನ್ನು ಕಡಿಮೆ ಮಾಡಲು, ಉತ್ತಮ ಗುರಿಯನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸರ್ಕಾರ ಈ ನೇರ ನಗದು ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ 5 ಕೆಜಿ ಅಕ್ಕಿ ಕೊಡುವುದಾಗಿ ಹೇಳಿ, ನಂತರ ರಾಜ್ಯ ಸರ್ಕಾರ ಕೆಜಿ ಅಕ್ಕಿಗೆ 34 ರೂ ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡಲು ನಿರಾಕರಿಸಿದಾಗ, ಅಕ್ಕಿಯ ಬದಲಾಗಿ 170 ರೂ. ಹಣವನ್ನು ನೇರ ನಗದು ಮೂಲಕ ಫಲಾನುಭವಿಗಳಿಗೆ ಕೊಡುತ್ತಿರುವುದೂ ಇದರ ಒಂದು ಭಾಗವಾಗಿದೆ ಎಂದರೆ ತಪ್ಪಾಗಲಾರದು.
ಭಾರತದ ಆಹಾರ ನಿಗಮಗಳ ಖಾಸಗೀಕರಣ
‘ಭಾರತ್ ರೈಸ್’ ಮಾರಾಟದ ಹಿಂದೆ ಭಾರತ ಆಹಾರ ನಿಗಮಗಳ (FCI) ಗೋದಾಮುಗಳ ಖಾಸಗೀಕರಣದ ಉದ್ದೇಶವೂ ಅಡಗಿದೆ. ಈಗಾಗಲೇ ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಫ್ ಸಿಐ) ಗೋದಾಮುಗಳ ಕಾಲಿ ಇರುವ ಭೂಮಿಯನ್ನು ಖಾಸಗಿಯವರಿಗೆ ಕೊಡುವ ಕಾರ್ಯ ನಡೆದಿದೆ. ಕೇಂದ್ರ ಸರ್ಕಾರದ ಉದ್ಯಮವಾದ ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್ ಅನ್ನು ಖಾಸಗೀಕರಣ ಮಾಡಲು ಮೋದಿ ಸರ್ಕಾರ ಮುಂದಾಗಿದೆ. ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ, ಸಾರ್ವಜನಿಕ ವಲಯದ ಸಂಸ್ಥೆಗಳ (ಪಿ.ಎಸ್. ಯು.) ಆಸ್ತಿ ನಗದೀಕರಣದ ಯೋಜನೆಯನ್ನು ಸರ್ಕಾರ ತಂದಿದೆ. ಸರ್ಕಾರ ಆಸ್ತಿ ನಗದೀಕರಣ ಪೈಪ್ ಲೈನ್ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಅದರ ಭಾಗವಾಗಿ ಸಿಡಬ್ಲ್ಯೂಸಿ ಗೋದಾಮುಗಳ ಖಾಸಗೀಕರಣ ಮಾಡಲು ಹೊರಟಿದೆ. ದೇಶಾದ್ಯಂತ 54 ಸಿಡಬ್ಲ್ಯೂಸಿ ಗೋದಾಮುಗಳಲ್ಲಿನ 344 ಎಕರೆ ಭೂಮಿಯನ್ನು ಖಾಸಗೀಕರಣಕ್ಕಾಗಿ ರಿಯಲ್ ಎಸ್ಟೇಟ್ ಸಲಹಾ ಸೇವಾ ಸಂಸ್ಥೆ ‘ನೈಟ್ ಫ್ರಾಂಕ್’ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಸಿಡಬ್ಲ್ಯೂಸಿ ಹೊಂದಿರುವ ಭೂಮಿಯಲ್ಲಿ ನೈಟ್ ಫ್ರಾಂಕ್ ಸುಮಾರು 2,152 ಕೋಟಿ ವೆಚ್ಚದಲ್ಲಿ ಸುಧಾರಿತ ಸೌಲಭ್ಯಗಳೊಂದಿಗೆ ಗೋದಾಮುಗಳನ್ನು ನಿರ್ಮಿಸುತ್ತದೆ. ಇದು 45 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಅವುಗಳನ್ನು ಸ್ವಾಧೀನಪಡಿಸಿಕೊಂಡು ವ್ಯವಹಾರ ಮಾಡುತ್ತದೆ.
ಖಾಸಗಿಯವರಿಂದ ಆಹಾರ ಧಾನ್ಯಗಳ ದಾಸ್ತಾನು ಹೆಚ್ಚುತ್ತಿದ್ದಂತೆ, ಸರ್ಕಾರದಿಂದ ಬೆಂಬಲ ಬೆಲೆಗೆ ಧಾನ್ಯಗಳ ಖರೀದಿ ಮತ್ತು ಅದನ್ನು ಶೇಖರಣೆ ಮಾಡುವ ಸಾಮಾಜಿಕ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯುತ್ತದೆ. ಅಂತಿಮವಾಗಿ, ರೈತರಿಂದ ಬೆಂಬಲ ಬೆಲೆ ಕೊಟ್ಟು ಕೃಷಿ ಉತ್ಪನ್ನಗಳನ್ನು ಖರೀದಿಸುವ ಮತ್ತು ಪಡಿತರ ವ್ಯವಸ್ಥೆಯ ಮೂಲಕ ಧಾನ್ಯಗಳನ್ನು ವಿತರಣೆ ಮಾಡುವ ಸಾರ್ವತ್ರಿಕ ಪಡಿತರ ವ್ಯವಸ್ಥೆ ಇಲ್ಲದಂತಾಗುತ್ತದೆ.
WTO, ಅಮೆರಿಕ ಮತ್ತು ಯೂರೋಪಿಯನ್ ರಾಷ್ಟ್ರಗಳ ಒತ್ತಡ
ವಿಶ್ವ ವ್ಯಾಪಾರ ಸಂಸ್ಥೆಯ (WTO) 13ನೇ ಸಚಿವರ ಸಮ್ಮೇಳನ (MC13) 2024ರ ಫೆಬ್ರವರಿ 26 ರಿಂದ ಮಾರ್ಚ್ 1 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ ಅಬುಧಾಬಿಯಲ್ಲಿ ನಡೆಯಿತು. ನಮ್ಮ ರೈತರನ್ನು ರಕ್ಷಿಸಲು, ಕೆಲವು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀತಿ ಜಾರಿಯಲ್ಲಿದೆ. ಮತ್ತು ಆಹಾರ ಭದ್ರತೆಗಾಗಿ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಆಹಾರ ಧಾನ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ಈ ಎರಡೂ WTO ನಿಬಂಧನೆಗಳಿಗೆ ವಿರುದ್ದವಾಗಿವೆ ಎನ್ನುತ್ತಾ, ಇವೆರಡನ್ನೂ ತೆಗೆದುಹಾಕಲು ಅಮೆರಿಕಾ ಮತ್ತು ಯೂರೋಪಿಯನ್ ರಾಷ್ಟ್ರಗಳು 2013 ರಿಂದ ಸಾಕಷ್ಟು ಒತ್ತಡ ಮಾಡುತ್ತಿವೆ. ಈ ಸಮ್ಮೇಳನದಲ್ಲಿಯೂ ಭಾರತ ಇದರ ಬಗ್ಗೆ ತನ್ನ ಆಕ್ಷೇಪ ವ್ಯಕ್ತಪಡಿಸಲಿಲ್ಲ.
ವಿಶ್ವ ವ್ಯಾಪಾರ ಸಂಸ್ಥೆಯನ್ನು ಸಮಾಧಾನಪಡಿಸಲು 2020 ರಲ್ಲಿ ನರೇಂದ್ರ ಮೋದಿ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ತಂದಿತು. ನಂತರ ರೈತರ ಪ್ರತಿರೋಧಕ್ಕೆ ಮಣಿದು ಕ್ಷಮೆಯಾಚಿಸುವ ಮೂಲಕ ಈ ಮಸೂದೆಗಳನ್ನು ಹಿಂಪಡೆದರು. ಮೊದಲನೆಯದು ವಾಸ್ತವ, ಎರಡನೆಯದು ವಂಚನೆ. ಅಂತಿಮ ಫಲಿತಾಂಶವೆಂದರೆ ಶ್ರೀಮಂತ ದೇಶಗಳ ಒತ್ತಡವು ಹೆಚ್ಚಿನ ಕೆಲಸವನ್ನು ಮಾಡುತ್ತಿದೆ.
ರೈತರು ಬೆಳೆಯುವ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ, ಎಫ್ ಸಿಐ ಗೋದಾಮುಗಳು ಮತ್ತು ಪಡಿತರ ವ್ಯವಸ್ಥೆ ಉಳಿಯಬೇಕೆಂದರೆ, ಇವೆಲ್ಲದರ ಫಲಾನುಭವಿಗಳಾದ ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರು ಒಟ್ಟಾಗಿ ದ್ವನಿ ಎತ್ತಿ ಹೋರಾಟ ನಡೆಸುವುದೊಂದೇ ಈಗಿರುವ ಮಾರ್ಗ.
ನಿಮ್ಮ ಟಿಪ್ಪಣಿ ಬರೆಯಿರಿ