
ಅಮೆರಿಕ- ಇಸ್ರೇಲ್ ಮತ್ತು ಇರಾನ್ ಯುದ್ಧದ ಪರಿಣಾಮ ಈಗಾಗಲೇ ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿದೆ. ಯುದ್ದ ಮುಂದುವರೆದರೆ ಇದು ಇನ್ನೂ ಹೆಚ್ಚಾಗಬಹುದು. ಪೆಟ್ರೋಲ್, ಡೀಸೆಲ್ ಬೆಲೆಗಳೂ ಹೆಚ್ಚಾಗುವ ಆತಂಕವಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲವೇಕೇ? ಈ ಪ್ರಶ್ನೆಗೆ ಸಂಬಂಧಿಸಿದ ಸೀತಾರಾಂ ಯೆಚೂರಿಯವರ ಲೇಖನದ ಆಯ್ದ ಭಾಗ ಇಲ್ಲಿದೆ.
(#ಆಟೋರಿಕ್ಷಾಚಾಲಕ_ಪತ್ರಿಕೆಯ 1997ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಚಿಕೆಯಲ್ಲಿ ಪ್ರಕಟವಾದ ಲೇಖನಗಳು ಇಲ್ಲಿವೆ )
ತೈಲ ನಿಧಿ ಕೊರತೆ ಎಂದರೇನು? ಈ ಕೊರತೆ ಉಂಟಾಗಿರುವುದು ಹೇಗೆ?
ತೈಲ ನಿಧಿ ಕೊರತೆ ಎಂಬುದು ಯಾರಿಗೂ ಅರ್ಥವಾಗದ ಒಂದು ಈ ರಹಸ್ಯಮಯ ಪದವೇ ಆಗಿಬಿಟ್ಟದೆ. ಈಗ ಈ ʼತೈಲ ನಿಧಿ ಖಾತೆ ಕೊರತೆʼ ಈ 15,500 ಕೋಟಿ ರೂ. ಈ ರಹಸ್ಯಮಯ ಸಮಸ್ಯೆಯನ್ನು ಡೀಸೆಲ್, ಅಡುಗೆ ಅನಿಲ, ಸೀಮೆಎಣ್ಣೆಯ ಬೆಲೆಗಳನ್ನು ಏರಿಸುವುದರಿಂದ ಮಾತ್ರವೇ ಪರಿಹರಿಸಲು ಸಾಧ್ಯ ಎಂದು ಹಣಕಾಸು ಮಂತ್ರಾಲಯ ವಾದಮಾಡುತ್ತದೆ. ಈ ತೈಲ ನಿಧಿ ಖಾತೆ 1975ರಲ್ಲಿ ನಿರ್ಮಾಣವಾದದ್ದು. ದೇಶದಲ್ಲಿ ಬೆಲೆಗಳು (ಸ್ಥಳೀಯ ಕರಗಳ ವಿನಹ) ಸಮಾನವಾಗಿರಬೇಕು ಮತ್ತು ವಿಭಿನ್ನ ಬೆಲೆ ನಿರ್ಧರಣೆಯ ಮೂಲಕ ಕೆಲವು ಸಾಮಾಜಿಕ ಗುರಿಗಳನ್ನು ಸಾಧಿಸುವಂತಾಗಬೇಕು ಎಂದು ಈ ಖಾತೆಯನ್ನು ನಿರ್ಮಿಸಲಾಯಿತು. ಹೀಗೆ ಖರ್ಚುಗಳು ಮತ್ತು ತೆರಿಗೆಗಳನ್ನು ಲೆಕ್ಕ ಹಾಕಿದ ಮೇಲೆ ಕೆಲವು ಪೆಟ್ರೋ ಉತ್ಪನ್ನಗಳ ಬೆಲೆಗಳನ್ನು ಇತರ ಉತ್ಪನ್ನಗಳಿಗೆ ಸಬ್ಸಿಡಿ ಒದಗಿಸಲೆಂದು ಅವುಗಳ ಬೆಲೆಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ನಿಗದಿಗೊಳಿಸಲಾಗುತ್ತದೆ. ಪೆಟ್ರೋಲ್ ಮತ್ತು ವಿಮಾನಗಳಲ್ಲಿ ಬಳಸುವ ಇಂಧನದ ಬೆಲೆ ಹೆಚ್ಚಿಸಲಾಗುತ್ತದೆ, ಇವರಿಂದ ಬಂದ ಮಿಗುತೆ ಹಣವನ್ನು ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲವನ್ನು ಕಡಿಮೆ ಬೆಲೆಗಳಲ್ಲಿ ಒದಗಿಸಲು ಬಳಸಲಾಗುತ್ತದೆ. ಅದೇ ರೀತಿ ರಸಗೊಬ್ಬರ ಉದ್ದಿಮೆಗೆ ಬೇಕಾಗುವ ಕಚ್ಚಾ ಸಾಮಗ್ರಿ ನಾಷ್ತಾದ ಬೆಲೆಯನ್ನು ಕಡಿಮೆ ಇಡಲಾಗುತ್ತದೆ. ಈ ನೀತಿಯ ಪ್ರಕಾರ ತೈಲ ನಿಧಿ ಖಾತೆಯನ್ನು ನಿರ್ವಹಿಸಿದರೆ (Surplus) ಎಂಬುದೇ ಇರಬಾರದು. ಏಕೆಂದರೆ ಮಿಗುತೆ ಮತ್ತು ಸಬ್ಸಿಡಿಗಳಿಂದಾಗುವ ಕೊರತೆ ಸಮ-ಸಮವಾಗಬೇಕು.

ತೈಲ ನಿಧಿ ಖಾತೆಯಲ್ಲಿ ಎರಡು ಅಂಶಗಳಿವೆ. ಸುಂಕಗಳನ್ನು (ಅಬಕಾರಿ ಮತ್ತು ಆಮದು ಸುಂಕಗಳೆರಡನ್ನೂ) ಸೇರಿಸಿದ ಮೇಲೆಯೇ ಆರಂಭಿಕ ಬೆಲೆಯನ್ನು ಪರಿಗಣಿಸುತ್ತವೆ. ಹೀಗೆ ತೈಲ ನಿಧಿ ಖಾತೆ ಪರಿಗಣಿಸುವ ಬೆಲೆಯೆಂದರೆ ಈ ಉತ್ಪನ್ನಗಳಿಗಾಗುವ ಖರ್ಚು ಅಲ್ಲ, ಹಣಕಾಸು ಇಲಾಖೆ ತನ್ನ ಪಾಲನ್ನು ಕಿತ್ತುಕೊಂಡ ಮೇಲಿನ ಖರ್ಚನ್ನೇ ಅದು ಪರಿಗಣಿಸುವುದು. ಇದು ಒಂದು ದೊಡ್ಡ ಮೊತ್ತ, ಎಷ್ಟು ದೊಡ್ಡದೆಂದರೆ ಬಳಕೆದಾರರಿಗೆ ನಿಜವಾಗಿಯೂ ಸಬ್ಸಿಡಿ ಇದೆಯೋ ಎಂಬ ಮಹತ್ವದ ಪ್ರಶ್ನೆ ಎತ್ತುವಷ್ಟು. ಅದನ್ನು ಮುಂದೆ ನೋಡೋಣ. ಎರಡನೆಯ ಅಂಶವೆಂದರೆ ಮಿಗುತೆಯೆಂಬುದೇನಾದರೂ ಇದ್ದರೆ ಅದು ಮುಂದೆ ಬರುವ ಕೊರತೆಯನ್ನು ತುಂಬಿಸಲು ಸಿಗಬೇಕು. ತೈಲ ನಿಧಿ ಮಿಗುತೆಯನ್ನು ಇನ್ನೊಂದು ತೆರಿಗೆಯೆಂದು ಭಾವಿಸಲು ಸಾಧ್ಯವಿಲ್ಲ. ಆದ್ದರಿಂದ ಮಿಗುತೆಯಿದ್ದಾಗ ಒಂದೋ ಬೆಲೆಗಳನ್ನು ಇಳಿಸಬೇಕು, ಇಲ್ಲವೇ ನಂತರದ ವರ್ಷಗಳಲ್ಲಿನ ಕೊರತೆಗೆ ಹೊಂದಿಸಬೇಕು. ಇದನ್ನು ಬಿಟ್ಟು ಬೇರೇನು ಮಾಡಿದರೂ ಅದೊಂದು ಹಗರಣವಾಗುತ್ತದೆ.
ಈ ಹಂತದಲ್ಲಿ ಒಂದು ಮಹತ್ವದ ಅಂಶವನ್ನು ಗಮನಿಸಬೇಕು. ಆಮದು ಸುಂಕಗಳನ್ನು ಆಮದುಗಳ ಮೇಲೆ ವಿಧಿಸುವುದು ಸಾಮಾನ್ಯವಾಗಿ ಹೀಗೆ ಆಮದು ಮಾಡಿದ ಸರಕುಗಳು ಇಂತಹ ಸ್ಥಳೀಯ ಉತ್ಪನ್ನಗಳಿಗಿಂತ ಹೆಚ್ಚು ಖರ್ಚಿನದಾಗಿರಬೇಕು ಎಂದು. ಈ ಮೂಲಕ ದೇಶೀ ಉದ್ದಿಮೆಯನ್ನು ರಕ್ಷಿಸುವುದು ಅದರ ಉದ್ದೇಶ. ಇದನ್ನು ರೆವಿನ್ಯೂ ಸಂಗ್ರಹದ ಮಾರ್ಗವಾಗಿ ಕಾಣುವುದು ಬಹಳ ಅಪರೂಪ. ಆದರೆ ತೈಲ ಆಮದಿನ ವಿಷಯದಲ್ಲಿ ಸುಂಕಗಳಿಗೂ ದೇಶೀ ಉತ್ಪಾದನೆಯನ್ನು ರಕ್ಷಿಸುವುದಕ್ಕೂ ಏನೇನೂ ಸಂಬಂಧವಿಲ್ಲ. ತೈಲ ಆಮದಿನ ಮೇಲಿನ ಸುಂಕಗಳು ಕೇವಲ ಸರಕಾರಕ್ಕೆ ಆದಾಯ ಸಂಗ್ರಹದ ಸಾಧನಗಳಷ್ಟೇ, ಇದಕ್ಕೆ ಬೆಲೆಯನ್ನು ಜನಸಾಮಾನ್ಯರೇ ತೆರಬೇಕು. ಏಕೆಂದರೆ, ಆಮದು ಸುಂಕ ವಿಧಿಸದಿದ್ದರೆ ತೈಲ ನಿಧಿ ಕೊರತೆ ಅಷ್ಟರಮಟ್ಟಿಗೆ ಕಮ್ಮಿಯಾಗುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಹಣಕಾಸು ಮಂತ್ರಾಲಯದ ರೆವಿನ್ಯೂ ಭಂಡಾರ ತುಂಬಲು ಜನತೆ ಬೆಲೆ ತೆರಬೇಕು. ವಿವಿಧ ಪೆಟ್ರೋಲಿಯಂ ಉತ್ಪನ್ನಗಳಿಗೆ ವಿಧಿಸುವ ಆಮದು ಮತ್ತು ಅಬಕಾರಿ ಸುಂಕಗಳ ದರವನ್ನು ತೋರಿಸುತ್ತದೆ.
ತೈಲ ನಿಧಿ ಖಾತೆಯಲ್ಲಿ ದೀರ್ಘ ಕಾಲದವರೆಗೆ ಮಿಗುತೆ (surplus) ಇತ್ತು. ಕಳೆದ ಕೆಲವು ವರ್ಷಗಳಲ್ಲಷ್ಟೇ ಅದರಲ್ಲಿ ಕೊರತೆ ಸಂಗ್ರಹವಾಗಲಾರಂಭಿಸಿತು. ಅದಕ್ಕೆ ಕಾರಣಗಳು ಹೀಗಿವೆ:
- ತೈಲ ನಿಧಿ ಖಾತೆಯಲ್ಲಿದ್ದ 8900 ಕೋಟಿ ರೂ.ಗಳನ್ನು ಹಣಕಾಸು ಮಂತ್ರಾಲಯ 1989ರ ನಂತರ ಲೂಟಿ ಮಾಡಲಾರಂಭಿಸಿತು.
- ದೇಶೀ ತೈಲ ಉತ್ಪಾದನೆ ಇಳಿಮುಖವಾಯಿತು. ಏಕೆಂದರ ತೈಲ ಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಹಣ ಹೂಡಿಕೆಯಲ್ಲಿ ಕಡಿತ ಮಾಡಲಾಯಿತು.
- ರೂಪಾಯಿಯ ಅಪಮೌಲ್ಯ.
- ಖಾಸಗಿ ಡೀಸೆಲ್ ಕಾರುಗಳ, ಸ್ವಂತ ವಿದ್ಯುತ್ ಉತ್ಪಾದನೆಗೆ ಡೀಸೆಲ್ ಚಾಲಿತ ಜನರೇಟಿರುಗಳ ಬಳಕೆಗೆ ಪ್ರೋತ್ಸಾಹ.
- ರೈಲ್ವೆ ಇಲಾಖೆಗೆ ಅಭಿವೃದ್ಧಿ ಹಣ ದೊರೆಯದಂತೆ ಮಾಡಿ ರಸ್ತೆ ಸಾಗಾಣಿಕೆ ಹೆಚ್ಚುವಂತಾದ್ದು, ಅದರಿಂದ ಡೀಸೆಲ್ ಬಳಕೆ ಹೆಚ್ಚುವಂತಾದದ್ದು.
ಇವುಗಳಲ್ಲಿ ಕೆಲವು ದೀರ್ಘಾವಧಿಯ ಪ್ರಶ್ನೆಗಳು. ತೈಲ ಬೆಲೆಗಳನ್ನು ನಿರಂತರವಾಗಿ ಏರಿಸದೇ ಇರಬೇಕೆಂದರೆ ಇವನ್ನೆಲ್ಲಾ ಕೈಗೆತ್ತಿಕೊಳ್ಳಬೇಕು. ತೈಲ ನಿಧಿ ಖಾತೆಯ ಕೊರತೆಯಾಗುವಲ್ಲಿ ಪ್ರಧಾನ ಪ್ರಭಾವ ಬೀರಿದ್ದು ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಿಂದಿನ ಕಣ್ಣೋಟವನ್ನು ಕೈಬಿಟ್ಟ ನೀತಿ. ಇವನ್ನು ಮುಂದೆ ನೋಡೋಣ. ಬಾಂಬೆ ಹೈನಲ್ಲಿ ತೈಲ ಶೋಧನೆಯಿಂದ ಉಂಟಾಗಿದ್ದ ವೇಗದ ಚಲನೆಯನ್ನು ಉಳಿಸಿಕೊಂಡಿದ್ದರೆ ಈ ಸ್ವಾವಲಂಬನೆ ಖಂಡಿತಾ ಸಾಧ್ಯವಿತ್ತು. ಆದರೆ 1990ರ ದಶಕದಲ್ಲಿ ತೈಲವನ್ನು ಆಮದು ಮಾಡಿಕೊಳ್ಳಬೇಕೆಂದು ಪ್ರತಿಪಾದಿಸುವ ಒಂದು ಬಲವಾದ ಲಾಬಿ (ಪ್ರಭಾವ ಗುಂಪು) ಮೂಡಿಬಂತು. ವಿಶ್ವಬ್ಯಾಂಕ್, ಬಹುರಾಷ್ಟ್ರೀಯ ತೈಲ ಕಂಪನಿಗಳು (ಉದಾ: ಎನ್ರೋನ್), ಪೆಟ್ರೋಲಿಯಂ ಮಂತ್ರಾಲಯ ಹಾಗೂ ಹಣಕಾಸು ಮಂತ್ರಾಲಯ ಇವರೆಲ್ಲಾ ಸೇರಿ ಭಾರತ ತನ್ನ ತೈಲ ಅವಶ್ಯಕತೆಯ 50-60 ಶೇಕಡಾವನ್ನು ಆಮದುಗಳಿಂದಲೇ ಪೂರೈಸಿಕೊಳ್ಳಬೇಕು ಎಂಬ ಒಂದು ಏಕಾಭಿಪ್ರಾಯ ವಿಕಾಸಗೊಳಿಸಿದರು. ಈ ಒಂದು ಕುರುಡು ಮನೋಭಾವವೇ ಪ್ರಸ್ತುತ ತೈಲ ನಿಧಿ ಕೊರತೆಯ ಸಮಸ್ಯೆಗೆ ಹೊಣೆ. ಇದನ್ನು ಸರಿಪಡಿಸದಿದ್ದರೆ ಈ ಸಮಸ್ಯೆ ದೇಶವನ್ನು ಬಾಧಿಸುತ್ತಲೇ ಇರುತ್ತದೆ.
(ಅರ್ಥಶಾಸ್ತ್ರಜ್ಞ ಸೀತಾರಾಂ ಯೆಚೂರಿಯವರ ಲೇಖನದಿಂದ ಆಯ್ದ ಭಾಗ.)
(ಆಟೋರಿಕ್ಷಾ ಚಾಲಕ, ಆಗಸ್ಟ್ 1997)
….

ತೈಲನಿಧಿ ಖಾತೆಗೆ ಹಿಂತಿರುಗಿಸಲು ಹಣವಿಲ್ಲ!
ಸಿರಿವಂತರಿಗೆ 20,000 ಕೋಟಿ ರೂ. ರಿಯಾಯಿತಿ ನೀಡಲು ಹಣವಿದೆ!!
ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಅದಕ್ಕೆ ಪರ್ಯಾಯ ದಾರಿಯನ್ನು ಸೂಚಿಸಿದ್ದ ಅರ್ಥಶಾಸ್ತ್ರಜ್ಞ ಸೀತಾರಾಂ ಯೆಚೂರಿಯವರ ಲೇಖನವನ್ನು ಕಳೆದ ಸಂಚಿಕೆಯಲ್ಲಿ ಓದಿರುವಿರಿ. ಅದರ ಮುಂದುವರಿದ ಭಾಗವನ್ನು ಇಲ್ಲಿ ಕೊಡಲಾಗಿದೆ.
ತೈಲ ನಿಧಿ ಖಾತೆಯಲ್ಲಿ 1989ರಲ್ಲಿ 8900 ಕೋಟಿ ರೂ.ಗಳಷ್ಟು ಮಿಗುತೆಯಿತ್ತು. ಇದೂ ಕೂಡಾ ಪೂರ್ಣ ಕಥೆಯಲ್ಲ, ಆರಂಭದಲ್ಲಿ ಈ ಮಿಗುತೆ ಹಣವನ್ನು ಹೆಚ್ಚಿನ ಬಡ್ಡಿಸಿಗುವ ಸರಕಾರೀ ಸ್ಕೀಮುಗಳಲ್ಲಿ ಇಟ್ಟುಕೊಳ್ಳಲಾಗಿತ್ತು. ಆದರೆ ನಂತರ ಇದನ್ನು ತಿದ್ದುಪಡಿ ಮಾಡಿ ಭಾರತ ಸರಕಾರದ ಸಾರ್ವಜನಿಕ ಖಾತೆಯಲ್ಲಿ ಶೇ. 5 ದರದಲ್ಲಿ ಇಟ್ಟುಕೊಳ್ಳಲಾಯಿತು. 1987ರಲ್ಲಿ ಈ ಕಡಿಮೆ ದರದಲ್ಲಿ ಸಂಗ್ರಹವಾಗಿದ್ದ ಬಡ್ಡಿಯನ್ನೂ ಕೂಡಾ ಹಿಂದಿನಿಂದಲೇ ಜಾರಿಗೆ ಬರುವ ರೀತಿಯಲ್ಲಿ ತೆಗೆಯಲಾಯಿತು. ಹೀಗೆ ತೈಲ ನಿಧಿ ಮಿಗುತೆಯ ಮೇಲಿನ ಬಡ್ಡಿಯೂ ಕೇಂದ್ರ ಸರಕಾರದ ಒಂದು ರೆವಿನ್ಯೂ ಮೂಲವಾಯಿತು. ಇದನ್ನು ಅದು ರಾಜ್ಯಗಳೊಡನೆ ಹಂಚಿಕೊಳ್ಳಬೇಕಾಗಿಯೂ ಇರಲಿಲ್ಲ. ಇದು ಕೆಟ್ಟ ಸಂಗತಿಯೇ, ಆದರೆ ಈ ಕಥೆಯ ಉಳಿದ ಭಾಗ ಇನ್ನೂ ಕೆಟ್ಟದ್ದು. 1989ರಿಂದ 1993ರವರೆಗೆ ಇಡೀ ತೈಲ ನಿಧಿ ಮಿಗುತೆಯನ್ನು ಹಣಕಾಸು ಮಂತ್ರಾಲಯ ಎತ್ತಿಕೊಂಡು ಹೋಯಿತು. ಈಗ 4429 ಕೋಟಿ ರೂ.ಗಳ ಲೆಕ್ಕವನ್ನು ಮಾತ್ರ ತೋರಿಸಲಾಗುತ್ತಿದೆ. ಆದರೆ ಈಗಲೂ ಕೂಡಾ ಇದನ್ನು ಒಂದು ಸರಕಾರದ ರೆವಿನ್ಯೂ ಆದಾಯದ ಬಾಬ್ತಾಗಿ ತೋರಿಸಲಾಗುತ್ತಿದೆಯೇ ಹೊರತು ತೈಲ ನಿಧಿ ಖಾತೆಗೆ ಅದನ್ನು ಹಿಂದಿರುಗಿಸುವ ಯೋಚನೆ ಇಲ್ಲ.
ಇದಕ್ಕೆ ಹಣಕಾಸು ಮಂತ್ರಾಲಯದ ವಾದವೆಂದರೆ, ಹೀಗೆ ಬಳಕೆದಾರರಿಂದ ತೈಲ ನಿಧಿ ಖಾತೆಯ ಹೆಸರಿನಲ್ಲಿ ಎಗುರಿಸಿದ ಈ ಹಣವನ್ನು ಹಿಂದಿರುಗಿಸಿದರೆ ಹಣಕಾಸು ಕೊರತೆ ಶೇ. 0.45 ರಷ್ಟು ಏರುತ್ತದಲ್ಲ! ನಿಜ, ಹಣಕಾಸು ಮಂತ್ರಾಲಯ ಇಡೀ 8900 ಕೋಟಿ ರೂ,ಗಳ ಬಗ್ಗೆ ಹೇಳುತ್ತಿಲ್ಲ. ಉಳಿದ 4429 ಕೋಟಿ ರೂ.ಗಳ ಬಗ್ಗೆಯಷ್ಟೇ ಹೇಳುತ್ತಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ತೈಲ ನಿಧಿ ಖಾತೆಗೆ ಕೊಡಬೇಕಾದ್ದನ್ನು ಹಿಂದಿರುಗಿಸಲು ಹಣವಿಲ್ಲ, ಬಜೆಟ್ಟಿನಲ್ಲಿ ಒಂದು ವರ್ಷದಲ್ಲಿ 20,000 ಕೋಟಿ ರೂ. ತೆರಿಗೆ ರಿಯಾಯ್ತಿಗಳನ್ನು ಸಿರಿವಂತರಿಗೆ ನೀಡಲು ಹಣವಿದೆ. ಆದ್ದರಿಂದ ಈಗಿನ ತೈಲ ನಿಧಿ ಕೊರತೆಗೆ ಒಂದು ಪ್ರಧಾನ ಕಾರಣವೆಂದರೆ ಹೀಗೆ ಹಿಂದಿನ ಮಿಗುತೆಗಳನ್ನು ಎಗರಿಸಿಹಾಕಿದ್ದು, ಈ ಮಿಗುತೆ ಇದ್ದಿದ್ದರೆ ಇರಾಕ್-ಕುವೈತ್ ಯುದ್ಧದ ನಂತರದ ತೈಲ ಬೆಲೆಯೇರಿಕೆಯನ್ನು ಹೊಂದಿಸಿಕೊಳ್ಳ ಬಹುದಾಗಿತ್ತು.
ತೈಲ ವಲಯವನ್ನು ಬಳಸಿ ತನ್ನ ಹಣಕಾಸು ಕೊರತೆಯನ್ನು ತಗ್ಗಿಸುವ ಹಣಕಾಸು ಮಂತ್ರಾಲಯದ ವರ್ತನೆಯ ಇನ್ನೂ ಕೆಟ್ಟ ಉದಾಹರಣೆಯೆಂದರೆ, ಕಳೆದ ವರ್ಷದ ತೈಲ ಬೆಲೆಯೇರಿಕೆ. ತೈಲದ ಅಂತರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆ, ರೂಪಾಯಿಯ ಬೆಲೆಯಲ್ಲಿ ಸವೆತ ಹಾಗೂ ಆಮದಿನಲ್ಲಿ ಹೆಚ್ಚಳದಿಂದಾಗಿ ತೈಲ ನಿಧಿ ಕೊರತೆ 10,000 ಕೋಟಿ ರೂ.ಗಳಷ್ಟು ಹೆಚ್ಚಬಹುದೆಂಬುದು ಸ್ಪಷ್ಟವಾಗಿತ್ತು. ಜುಲೈ 1996ರಲ್ಲಿ ವಿವಿಧ ಪೆಟ್ರೋ ಉತ್ಪನ್ನಗಳ ಬೆಲೆಗಳನ್ನು ಏರಿಸಲಾಯಿತು. ಇದರಿಂದ 7000 ಕೋಟಿ ರೂ.ಗಳ ಹೆಚ್ಚಿನ ಆದಾಯ ಬಂತು. ಆದರೆ ಇದರಲ್ಲಿ ಸರಕಾರ ಆಮದು ಮತ್ತು ಅಬಕಾರಿ ಸುಂಕಗಳ ರೂಪದಲ್ಲಿ 4200 ಕೋಟಿ ರೂ.ಗಳನ್ನು ಎತ್ತಿಕೊಂಡಿತು (ಇದು ಅದರ ಒಟ್ಟಾರೆ ಬಜೆಟ್ ಕೊರತೆಯನ್ನು ಅಷ್ಟರಮಟ್ಟಿಗೆ ಕಮ್ಮಿ ಮಾಡಲು ನೆರವಾಯಿತು). ತೈಲ ನಿಧಿ ಖಾತೆಗೆ ಹೋದದ್ದು 2800 ಕೋಟಿ ರೂ. ಮಾತ್ರ. ಹಣಕಾಸು ಮಂತ್ರಾಲಯಕ್ಕೆ ಅಂತರಾಷ್ಟ್ರೀಯ ತೈಲ ಬೆಲೆಗಳು ಹಾಗೂ ತೈಲ ಆಮದಿನ ಪ್ರಮಾಣಗಳು ಹೆಚ್ಚಿದರೇ ಬಹಳ ಸಂತೋಷವಾಗುವಂತೆ ಕಾಣುತ್ತದೆ. ಏಕೆಂದರೆ ತೈಲ ಬೆಲೆಗಳನ್ನು ಹೆಚ್ಚಿಸಲು ನೆವ ಸಿಗುತ್ತದೆ. ಅದರಲ್ಲಿ ಬಹುಪಾಲನ್ನು ಸುಂಕಗಳ ಮೂಲಕ ಕಿತ್ತುಕೊಂಡು ಅದು ತನ್ನ ಕೊರತೆಯನ್ನು ಕಮ್ಮಿ ಮಾಡಿಕೊಳ್ಳಬಹುದಲ್ಲ! ಹೀಗೆ ತೈಲ ನಿಧಿ ಕೊರತೆಯ ಕತೆಯೆಂದರೆ ಹಣಕಾಸು ಮಂತ್ರಾಲಯ ತನ್ನ ಹಣಕಾಸು ಲಂಪಟತನವನ್ನು ಮುಚ್ಚಿಕೊಳ್ಳಲು ತೈಲ ವಲಯ ಮತ್ತು ಜನರನ್ನು ಬಳಸಿಕೊಂಡ ಕಥೆಯೇ,
ತೈಲ ನಿಧಿ ಕೊರತೆ ಹೆಚ್ಚಲು ಎರಡನೇ ಪ್ರಧಾನ ಕಾರಣ ಸತತವಾಗಿ ರೂಪಾಯಿಯ ಅಪಮೌಲ್ಯ ಮತ್ತು ತೈಲದ ಅಂತರಾಷ್ಟ್ರೀಯ ಬೆಲೆಗಳಲ್ಲಿ ಏರಿಕೆ. 1991ರಲ್ಲಿ ರೂಪಾಯಿಯ ಅಪಮೌಲ್ಯ, ನಂತರ ಇತ್ತೀಚೆಗಿನ ಅಪಮೌಲ್ಯ ತೈಲ ಆಮದಿನ ಖರ್ಚನ್ನು ಹೆಚ್ಚಿಸಿವೆ. ಅಪಮೌಲ್ಯದ ಇಂತಹ ಪ್ರಭಾವಗಳನ್ನು ಸರಕಾರ ಜನಸಾಮಾನ್ಯರಿಂದ ಅಡಗಿಸಬಯಸುತ್ತದೆ. ಭಾರತದ ರಫ್ತನ್ನು ಹೆಚ್ಚಿಸಲು ಮತ್ತು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಅದು ಅವಶ್ಯಕ ಎಂಬೆಲ್ಲಾ ಮಾತುಗಳಲ್ಲಿ ಈ ಅಂಶವನ್ನು ಮರೆಮಾಚುತ್ತದೆ. ಅದರಿಂದಾಗಿ ಒಟ್ಟಾರೆಯಾಗಿ ಎಲ್ಲಾ ಬೆಲೆಗಳು ಏರುತ್ತವೆಯೇಕೆ ಎಂದು ಎಂದೂ ವಿವರಣೆ ನೀಡುವುದಿಲ್ಲ. ಆದ್ದರಿಂದ ತೈಲ ಬೆಲೆ ನಿಧಿ ಕೊರತೆ ಭಾರತ ವಿಶ್ವಬ್ಯಾಂಕ್ /ಐಎಂಎಫ್ ವ್ಯವಸ್ಥೆಯನ್ನು ಅನುಸರಿಸಿದುದರ ಒಂದು ಪರಿಣಾಮ. ರೂಪಾಯಿಯ ಅಪಮೌಲ್ಯ ಈ ಪ್ರಮಾಣದಲ್ಲಿ ನಡೆದಿರದಿದ್ದರೆ ತೈಲ ನಿಧಿ ಖಾತೆ ಇಂದು ಕೊರತೆಯಲ್ಲಿ ಇರುತ್ತಿರಲಿಲ್ಲ.
ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು
ತೈಲ ನಿಧಿ ಕೊರತೆಗೆ ಮೂರನೇ ಕಾರಣ ದೇಶೀ ತೈಲ ಉತ್ಪಾದನೆಯಲ್ಲಿ ತೀವ್ರ ಇಳಿಕೆ. ಕಳೆದ ಒಂದು ವರ್ಷದಲ್ಲೇ ಇದು 35 ಲಕ್ಷ ಟನ್ ಗಳಷ್ಟು ಇಳಿಯಿತು. ಈಗ ದೇಶದ ತೈಲ ಬೇಡಿಕೆಯಲ್ಲಿ ಶೇ. 50ರಷ್ಟನ್ನು ಆಮದಿನಿಂದ ಪೂರೈಸಲಾಗುತ್ತದೆ. 1984-85ರಲ್ಲಿ ದೇಶ ತನ್ನ ಅಗತ್ಯದ ಶೇ. 70ರಷ್ಟನ್ನು ದೇಶೀ ಉತ್ಪಾದನೆಯಿಂದಲೇ ಪೂರೈಸಿಕೊಳ್ಳುತ್ತಿತ್ತು. ಹೀಗಾಗಲು ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು ಒಂದು ಮುಖ್ಯ ಕಾರಣ ಎನ್ನುವುದನ್ನು ಎಲ್ಲಾ ಪರಿಣಿತರು, ಸಂಸ್ಥೆಗಳು ಒಪ್ಪಿಕೊಂಡಿವೆ. ಭಾರತದ ತೈಲ ಆಮದು ಸತತವಾಗಿ ಏರುತ್ತಾ ಬಂದಿದೆ. ಈ ದೇಶೀ ಉತ್ಪಾದನೆ ಮತ್ತು ಒಟ್ಟು ಬೇಡಿಕೆಯಲ್ಲಿನ ಅಂತರ ತ್ವರಿತವಾಗಿ ಹೆಚ್ಚುತ್ತಲೇ ಸಾಗಿದೆ.
ಸಂಗ್ರಹಿಸಿದ ಹಣ ಸರಕಾರದ ಕಂದಾಯ ಖರ್ಚಿಗಾಗಿ
1970ರ ದಶಕದಲ್ಲಿ ತೈಲ ಶೋಧನೆ ಮತ್ತು ಅಭಿವೃದ್ಧಿಯ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಯಿತು. ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ಆಯೋಗ) ಮತ್ತು ಸಾರ್ವಜನಿಕ ವಲಯದ ತೈಲ ಘಟಕಗಳು ಸ್ವಯಂಪೂರ್ಣತೆಯನ್ನು ಸಾಧಿಸುವ ಸವಾಲನ್ನು ಸ್ವೀಕರಿಸಿದವು. ತೈಲ ಶೋಧನೆ ಮತ್ತು ತೈಲ ಶುದ್ದೀಕರಣಾಗಾರ (ರಿಫೈನರಿ)ಗಳನ್ನು ನಿರ್ಮಿಸುವ ದೇಶೀ ಸಾಮರ್ಥ್ಯವಿರುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತ ಒಂದು. ಈ ತೈಲ ಶೋಧನೆ ಮತ್ತು ಅಭಿವೃದ್ಧಿಗೆ ಹಣ ಒದಗಿಸಲೆಂದು ಎಲ್ಲಾ ಬಳಕೆದಾರರ ಮೇಲೆ ಒಂದು ಮೇಲು ಕರ(ಸೆಸ್)ವನ್ನು ವಿಧಿಸಲಾಗುತ್ತಿದೆ. 1993ರಲ್ಲಿ ತೈಲ ಪದರ ಜೇಡಿಗಲ್ಲುಗಳ ಶೋಧನೆ, ಆಳ ನೀರಿನಲ್ಲಿ ತೈಲ ಬಾವಿ ಕೊರೆತ, ಹೆಚ್ಚಿನ ತೈಲ ಪಡೆಯುವ ಕಾರ್ಯಕ್ರಮ ಇತ್ಯಾದಿಗಳ ಒಂದು “ವೇಗವರ್ಧಿತ ಶೋಧನಾ ಕಾರ್ಯಕ್ರಮ”ದ ಪ್ರಸ್ತಾಪವನ್ನು ಮುಂದಿಡಲಾಯಿತು. ಆದರೆ ಈ ಎಲ್ಲಾ ಕಾರ್ಯಕ್ರಮಗಳೂ ಇಂದು ನೆಲಕಚ್ಚಿವೆ. ಏಕೆಂದರೆ ಅದಕ್ಕೆ ಅಗತ್ಯವಾದ ಹಣ ಹೂಡಿಕೆಗಳನ್ನು ಸರಕಾರ ಮಾಡಿಲ್ಲ. ಇದರ ಬದಲು ತೈಲ ವಲಯದ ಅಭಿವೃದ್ಧಿಗೆಂದು ಸಂಗ್ರಹಿಸಿದ ಹಣವನ್ನೆಲ್ಲಾ ಸರಕಾರದ ಕಂದಾಯ ಖರ್ಚಿಗಾಗಿ ವರ್ಗಾಯಿಸಲಾಗಿದೆ. ಬೇಡಿಕೆ ಏರುತ್ತಿವೆ, ಆದರೆ ದೇಶೀ ಉತ್ಪಾದನೆ ಇಳಿಯುತ್ತಾ ಹೋಗುತ್ತಿದೆ. 2010-11ರ ವೇಳೆಗೆ ಒಟ್ಟು ಬೇಡಿಕೆಯ 25-30 ಶೇಕಡಾ ಮಾತ್ರವೇ ದೇಶೀ ಉತ್ಪಾದನೆಯಿಂದ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಪೆಟ್ರೋ ಪದಾರ್ಥಗಳ ಆಮದು ಮಟ್ಟ ಹೆಚ್ಚಿ, ದೇಶದ ಪಾವತಿ ಬಾಕಿ ಪರಿಸ್ಥಿತಿಯ ಮೇಲೆ ಗಂಭೀರ ದುಷ್ಪರಿಣಾಮಗಳಾಗಬಹುದು. ಇಂಧನ, ವಿದ್ಯುತ್ತಿಗಾಗಿ ಬೇರೆ ದೇಶಗಳನ್ನು ಅವಲಂಬಿಸುವುದರಿಂದ ಭದ್ರತೆಯ ಮೇಲೂ ದುಷ್ಪರಿಣಾಮಗಳಾಗಬಹುದು. ಅಂತರಾಷ್ಟ್ರೀಯ ತೈಲ ಬೆಲೆಗಳು ಏರಬಹುದು ಎಂದು ಹಲವರು ನಿರೀಕ್ಷಿಸುತ್ತಿದ್ದಾರೆ. ಹಾಗಾದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.
ಆಟೋರಿಕ್ಷಾ ಚಾಲಕ ಸೆಪ್ಟೆಂಬರ್ 1997
ನಿಮ್ಮ ಟಿಪ್ಪಣಿ ಬರೆಯಿರಿ