
ಪೋಟೊ ಕೊಡುಗೆ: ಹಿಂದೂಸ್ತಾನ್ ಟೈಮ್ಸ್
ʻʻಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!” ಇದು 27 ಏಪ್ರಿಲ್,2013ರ ಕನ್ನಡಪ್ರಭ ಪತ್ರಿಕೆಯಲ್ಲಿನ ‘ಬೆತ್ತಲೆ ಪ್ರಪಂಚ’ ಅಂಕಣದಲ್ಲಿ ಪ್ರತಾಪ್ ಸಿಂಹ ಬರೆದ ಲೇಖನದ ತಲೆಬರಹ. ಈ ಲೇಖನದಲ್ಲಿ,
“2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ ಯೋಜನೆ. ವರ್ಷಕ್ಕೆ 100 ದಿನಗಳು ಖಚಿತ ಕೆಲಸ, ದಿನವೊಂದಕ್ಕೆ ಈಗ 120 ಕೂಲಿ ನೀಡುವ ಈ ಯೋಜನೆಯಿಂದ ಎಂಥ ಅನಾಹುತ ಸಂಭವಿಸಿದೆಯೆಂದರೆ, ಅಸ್ಸಾಂನ ಟೀ ಎಸ್ಟೇಟ್ ಗಳಿಂದ ಕರ್ನಾಟಕದ ಬತ್ತ ಬೆಳೆಯುವವರವರೆಗೂ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ಯೋಜನೆಗೆ ಇದುವರೆಗೂ 1.25 ಲಕ್ಷ ಕೋಟಿ ವ್ಯಯವಾಗಿದೆ! ಆದರೆ ನರೇಗಾದಿಂದಾಗಿ ಯಾವುದಾದರೂ ಎದ್ದು ಕಾಣುವ ಅಭಿವೃದ್ಧಿ ಕಾರ್ಯಗಳಾಗಿದ್ದನ್ನು ನೋಡಿದ್ದೀರಾ? ನಕಲಿ ಕೂಲಿಕಾರರ ಸೃಷ್ಟಿ, ಕೆಲಸದ ವಿಷಯದಲ್ಲೂ ನಿರ್ದಿಷ್ಟ ಗುರಿಯಿಲ್ಲ. ಹೀಗಾಗಿ 55 ಸಾವಿರ ಕೋಟಿ ವಿನಾಕಾರಣ ಪೋಲಾಗಿದೆ.”
“ಸರ್ಕಾರ 30 ಕೆ.ಜಿ ಅಕ್ಕಿಯನ್ನೂ ಕೊಡುತ್ತದೆ, ನರೇಗಾವೆಂಬ ಕಳ್ಳಾಟಕ್ಕೂ 120 ಕೊಡುತ್ತದೆ. ಹೀಗಾಗಿ ನಮ್ಮ ಜನ ಸಾರಾಯಿಗಷ್ಟೇ ಚಿಂತೆಪಡಬೇಕೇ ಹೊರತು, ಅನ್ನಕ್ಕಲ್ಲ. ಮೈ ಬಗ್ಗಿಸಿ ದುಡಿದಿದ್ದರೆ ಆರೋಗ್ಯವಾದರೂ ಸರಿಯಿರುತ್ತಿತ್ತು. ಆದರೆ ಆಗುತ್ತಿರುವುದೇನು? ಇಂತಹ ಉಚಿತ ಸೌಲಭ್ಯಗಳು, ಯೋಜನೆಗಳಿಂದ ಮನುಷ್ಯರಲ್ಲಿ ಆಲಸೀತನ, ಸೋಮಾರಿತನವನ್ನು ಹೆಚ್ಚು ಮಾಡಲಾಗುತ್ತಿದೆಯೇ ಹೊರತು, ಅದರಿಂದ ಜನಕ್ಕಾಗಲಿ, ದೇಶಕ್ಕಾಗಲಿ ಒಳಿತಾಗುತ್ತಿಲ್ಲ.”
ಈ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಹೀಗಿತ್ತು:
ಮಹಾತ್ಮಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ
ಪ್ರತಾಪ್ ಸಿಂಹ ತಮ್ಮ ವಿಚಾರಗಳ ಮೂಲಕ ತಾನು ಯಾರ ಪರವಿದ್ದೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಾತ್ಮಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಿಂದ ಹಳ್ಳಿಗಳಲ್ಲಿನ ಕೃಷಿ ಕಾರ್ಮಿಕರು ಮತ್ತು ಸಣ್ಣ ರೈತರು ಬದುಕಲು ಆಸರೆಯಾದ ಬಗ್ಗೆ ಚಿಂತಿಸದೇ, ಸರ್ಕಾರಕ್ಕೆ ಆದ ನಷ್ಟದ ಬಗ್ಗೆ ಯೋಚಿಸುತ್ತಿದ್ದೀರಿ. ದೇಶದ ಬಹುತೇಕ ಕೃಷಿ ಮಳೆಯನ್ನೇ ಅವಲಂಬಿಸಿದೆ. ಇದೂ ಸೇರಿದಂತೆ ಅರೆ ನೀರಾವರಿ ಪ್ರದೇಶಗಳಲ್ಲೂ ಈ ಜನರು ತಮ್ಮ ದಿನ ನಿತ್ಯದ ಬದುಕಿಗಾಗಿ ದುಡಿಮೆಯನ್ನೇ ಅವಲಂಬಿಸಿದ್ದಾರೆ. ಇಂತಹ ಪ್ರದೇಶಗಳಲ್ಲಿ ವರ್ಷದಲ್ಲಿ ಮೂರ್ನಾಲ್ಕು ತಿಂಗಳಲ್ಲಿ ದುಡಿದು ವರ್ಷದ ಆಹಾರವನ್ನು ಕೂಡಿಡುತ್ತಿದ್ದರು. ಈಗಿನ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಅವರ ದುಡಿದ ಹಣ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಮಳೆ ಕಡಿಮೆಯಾಗುವುದರ ಜೊತೆಗೆ, ಕೃಷಿಗೆ ಉಪಯೋಗಿಸುವ ಪರಿಕರಗಳ ಬೆಲೆಗಳ ನಿರಂತರ ಏರಿಕೆಯಿಂದಾಗಿ, ತಮ್ಮ ಜಮೀನಿನಲ್ಲಿ ವರ್ಷವಿಡೀ ದುಡಿದ ದುಡುಮೆಯ ಫಲವೂ ಅವರ ಕೈಸೇರುತ್ತಿಲ್ಲ. ಕೃಷಿ ಕಾರ್ಯಗಳು ಇಲ್ಲದ ಸಂದರ್ಭದಲ್ಲಿ ರೈತರು, ಕೃಷಿಕಾರ್ಮಿಕರು ಹಳ್ಳಿಗಳನ್ನು ತೊರೆದು ಗುಳೆ ಹೋಗದಂತೆ ತಡೆದು, ಅವರ ಬದುಕಿಗೆ ಅವಕಾಶ ಮಾಡಿಕೊಡಲೆಂದೇ ಕೇಂದ್ರ ಸರ್ಕಾರಕ್ಕೆ ಕಳೆದ ಬಾರಿ ಹೊರಗಿನಿಂದ ಬೆಂಬಲ ನೀಡಿದ್ದ ಕಮ್ಯುನಿಷ್ಟರು, ಒತ್ತಾಯಿಸಿ ಈ ನರೇಗಾ ಯೋಜನೆ ಜಾರಿಗೆ ಬರುವಂತೆ ನೋಡಿಕೊಂಡರು.
ಇನ್ನು ಸರ್ಕಾರ ಪಡಿತರ ವ್ಯವಸ್ಥೆಯ ಮೂಲಕ 30 ಕೆ.ಜಿ. ಅಕ್ಕಿ ಕೊಡುವುದರಿಂದ ಜನರು ಸೋಮಾರಿಗಳಾಗುತ್ತಾರೆ ಎಂಬ ನಿಮ್ಮ ಹೇಳಿಕೆ, ನಿಮ್ಮ ತಿಳುವಳಿಕೆಯ ಮಟ್ಟ ಎಂತದ್ದು ಎಂಬುದನ್ನು ತಿಳಿಸುತ್ತದೆ. ನಿಮಗೆ ಬಡವರ ಬದುಕಿಗಿಂತ, ಭೂಮಾಲೀಕರಿಗೆ ಆಗುವ ಕಾರ್ಮಿಕರ ಕೊರತೆಯೆ ಹೆಚ್ಚು ಚಿಂತೆಯುಂಟುಮಾಡಿದೆ. ಸರ್ಕಾರ 30 ಕೆ.ಜಿ. ಅಕ್ಕಿ ಕೊಟ್ಟ ಮಾತ್ರಕ್ಕೆ ಅವರ ಕುಟುಂಬದ ಅಗತ್ಯಗಳನ್ನೆಲ್ಲಾ ಪೂರೈಸುತ್ತದೆ ಎಂಬ ತಿಳುವಳಿಕೆಯೇ ಹಾಸ್ಯಾಸ್ಪದ. ಜನ ಸಾರಾಯಿಗಷ್ಟೇ ಚಿಂತೆಪಡಬೇಕೇ ಹೊರತು ಅನ್ನಕ್ಕಲ್ಲ ಎಂಬ ಹೇಳಿಕೆ, ಹಳ್ಳಿಯ ಬಡವರೆಲ್ಲಾ ಕುಡುಕರು ಎಂದು ಹೇಳಿದಂತಿದೆ. ಮೂರು ಸದಸ್ಯರಿರುವ ಒಂದು ಕುಟುಂಬ ಕನಿಷ್ಟ ತಮ್ಮ ಬದುಕನ್ನು ಸಾಗಿಸಲು, ಆ ಕುಟುಂಬಕ್ಕೆ ಕನಿಷ್ಟ ತಿಂಗಳಿಗೆ 10 ಸಾವಿರ ರೂ. ಬೇಕಾಗಿದೆ. ಪ್ರತಿಯೊಬ್ಬರಿಗೂ 2700 ಕ್ಯಾಲರಿಗಳಿಗಾಗುವಷ್ಟು ಆಹಾರ ಸೇವನೆ, ಪ್ರತಿಯೊಬ್ಬರಿಗೂ ಪ್ರತಿವರ್ಷ 18 ಗಜ ಬಟ್ಟೆ, ಆರೋಗ್ಯ, ವಿದ್ಯುತ್, ಹಬ್ಬ ಹರಿದಿನಗಳ ಖರ್ಚು ಹೀಗೆ ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಇಷ್ಷು ಹಣ ಅವಶ್ಯಕ. ಸರ್ಕಾರ ಕೇವಲ 100 ದಿನಗಳ ಉದ್ಯೋಗ ನೀಡಿ ದಿನಕ್ಕೆ 120 ರೂ. ಕೂಲಿ ನೀಡಿದರೆ ವರ್ಷಕ್ಕೆ ಕೇವಲ 12,000 ರೂಪಾಯಿಗಳಿಂದ ಅವರು ಬದುಕಿ ಬಾಳಬಹುದು, ಎಂಬ ನಿಮ್ಮ ನಂಬಿಕೆಯೇ ಹಾಸ್ಯಾಸ್ಪದ.
ಕಾರ್ಪೋರೇಟ್ ಸಂಸ್ಥೆಗಳಿಗೆ “ಬೇಲ್ ಔಟ್ ಪ್ಯಾಕೇಜ್”
ಸರ್ಕಾರ ಯಾರೊಬ್ಬರ ಸ್ವತ್ತೂ ಅಲ್ಲ. ದೇಶದ ಪ್ರತಿಯೊಬ್ಬರ ಉತ್ತಮ ಜೀವನಕ್ಕೆ ಅವಕಾಶವಾಗುವಂತೆ ವಾತಾವರಣ ನಿರ್ಮಿಸುವುದು ಅದರ ಕರ್ತವ್ಯ. ನರೇಗಾ ಯೋಜನೆಯಿಂದಾಗಿ ಸರ್ಕಾರಕ್ಕೆ 1.25 ಲಕ್ಷ ಕೋಟಿ ವ್ಯಯವಾಗುವ ಬಗ್ಗೆ ಚಿಂತಿಸುತ್ತಿದ್ದೀರಿ. 2009-10 ರ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರ 1,89,000 ಕೋಟಿಗಳಷ್ಟು ಹಣವನ್ನು “ಬೇಲ್ ಔಟ್ ಪ್ಯಾಕೇಜ್” ಆಗಿ ಕಾರ್ಪೋರೇಟ್ ಸಂಸ್ಥೆಗಳಿಗೆ ಧನ ಸಹಾಯ ನೀಡಿದ ಬಗ್ಗೆಯಾಗಲೀ, ಇದಲ್ಲದೆ 4 ಲಕ್ಷ ಕೋಟಿ ತೆರಿಗೆ ವಿನಾಯ್ತಿ ನೀಡಿದ ಬಗ್ಗೆಯಾಗಲೀ ನಿಮಗೆ ಚಿಂತೆಯಿಲ್ಲ. ತೈಲ ಬೆಲೆ ನಿಯಂತ್ರಣ ರದ್ದುಗೊಳಿಸುವ ಮೂಲಕ, ಪೆಟ್ರೋಲ್, ಡೀಸಲ್ ಮತ್ತು ನೈಸರ್ಗಿಕ ಅನಿಲದ ಬೆಲೆ ಏರಿಕೆಗೆ ಕಾರಣವಾಗಿ, ಸಾಮಾನ್ಯ ಜನರು ತಾವು ಕಷ್ಟಪಟ್ಟು ದುಡಿದು ಗಳಿಸಿದ ಹಣ, ರಿಲಯನ್ಸ್ , ಎಸ್ಸಾರ್ ಕಂಪೆನಿಗಳಂತಹ ತೈಲ ಕಂಪೆನಿಗಳ ಪಾಲಾಗುವಂತೆ ಮಾಡಿದ್ದಾರೆ.
ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ಮೂಲಕ 5.28 ಲಕ್ಷ ಕೋಟಿ
ಕಲ್ಲಿದ್ದಲು ಹಗರಣ, ಟೆಲಿಕಾಂ ಹಗರಣ ಮುಂತಾದ ಹಗರಣಗಳಲ್ಲಿ ದೇಶದ ಸಂಪತ್ತು ಕೆಲವೇ ಉದ್ದಿಮೆದಾರರ ಖಜಾನೆ ಸೇರಿದೆ. 2013-14 ರ ಕೇಂದ್ರ ಬಜೆಟ್ ನಲ್ಲಿಯೂ ಈ ದೇಶದ ಶ್ರೀಮಂತರಿಗೆ, ಕಾರ್ಪೋರೇಟ್ ಸಂಸ್ಥೆಗಳಿಗೆ, ದೊಡ್ಡ ಉದ್ಯಮದಾರರಿಗೆ ತೆರಿಗೆ ಮತ್ತಿತರ ರಿಯಾಯ್ತಿಗಳ ಮೂಲಕ 5.28 ಲಕ್ಷ ಕೋಟಿ ರೂ.ಗಳನ್ನು ಉದಾರವಾಗಿ ನೀಡಿಲಾಗಿದೆ. ಇದರ ಬಗ್ಗೆ ಯೋಚಿಸದೆ, ಬಡಜನರ ಬದುಕಿಗಾಗಿ ಪುಡಿಗಾಸಿನ ಸಹಾಯವನ್ನೇ ದೇಶಕ್ಕೆ ಆಗುವ ನಷ್ಟ ಎಂಬ ನಿಮ್ಮ ತಿಳುವಳಿಕೆಯೇ ನಿಮ್ಮ ಬೌಧ್ದಿಕ ತಿಳುವಳಿಕೆ ಮಟ್ಟ ಎಂತಹದ್ದು ಎಂದು ತಿಳಿಯುತ್ತದೆ.
ಪಡಿತರ ವ್ಯವಸ್ಥೆ
ಇನ್ನು ಪಡಿತರ ವ್ಯವಸ್ಥೆಯಲ್ಲಿ ಕಡಿಮೆ ದರದಲ್ಲಿ ಆಹಾರ ಧಾನ್ಯ ನೀಡುವ ಬಗೆಗೆನ ನಿಮ್ಮ ಚಿಂತೆ ಅದೇ ರೈತರಿಂದ ಕಡಿಮೆ ಬೆಲೆಯಲ್ಲಿ ಖರೀದಿಸಿದ 7 ಕೋಟಿ ಟನ್ನುಗಳಷ್ಟು ಆಹಾರ ಧಾನ್ಯ ಸರ್ಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿದ್ದು, ಅದನ್ನು ಹಸಿದ ಜನರಿಗೆ ಯಾಕೆ ಹಂಚಬಾರದು? ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಹಸಿದ ಹೊಟ್ಟೆಗೆ ಅದನ್ನು ಕೊಡುವುದೇ ಮಹಾ ಅಪರಾಧ ಎಂಬಂತೆ ಮಾತನಾಡುತ್ತೀರಿ. ಅದೇ ಆಹಾರ ಧಾನ್ಯವನ್ನು ಕಾರ್ಪೋರೇಟ್ ಸಂಸ್ಥೆಗಳ ಒಡೆತನದಲ್ಲಿರುವ ಆಹಾರ ಕಂಪೆನಿಗಳಿಗೆ ಮತ್ತು ವಿದೇಶಿ ಕಂಪೆನಿಗಳಿಗೆ ನಿಕೃಷ್ಟ ದರಕ್ಕೆ ಮಾರಾಟಮಾಡುವುದನ್ನು ನೀವು ವಿರೋಧಿಸುವುದಿಲ್ಲ. ಅಧಿಕ ಸಂಖ್ಯೆಯಲ್ಲಿರುವ ಬಡವರ ಜೀವನ ಉತ್ತಮವಾದಾಗ ಮಾತ್ರ ದೇಶದ ಅಭಿವೃಧ್ದಿ ಸಾಧ್ಯ ಎಂಬ ಸಾಮಾನ್ಯ ಜ್ಞಾನ ನಿಮ್ಮದಾಗಿರಲಿ.
ನಿಮ್ಮ ಟಿಪ್ಪಣಿ ಬರೆಯಿರಿ