
ಭಾರತದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಸಿಐಟಿಯು ವಹಿಸಿದ ಪಾತ್ರ ಅಗಾಧವಾದುದು. ಕಾರ್ಮಿಕ ವರ್ಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಿಐಟಿಯು ಅವಿರತ ಹೋರಾಟ ನಡೆಸುತ್ತಿದೆ. ಎಷ್ಟೇ ಏರಿಳಿತಗಳಿದ್ದರೂ ಕಾರ್ಮಿಕರ ಪರವಾಗಿ, ಕಾರ್ಮಿಕ ಹಕ್ಕುಗಳಿಗಾಗಿ ಮುಂದೆ ಸಾಗುತ್ತಿದೆ. ನಿರಂತರವಾಗಿ ಕಾರ್ಮಿಕ ಜಗತ್ತನ್ನು ಜಾಗೃತಗೊಳಿಸುತ್ತಿದೆ. ಸಿಐಟಿಯು ಸ್ಥಾಪನೆ, ನಂತರದ ಐಕ್ಯ ಚಳುವಳಿ ಕಟ್ಟುವುದರಲ್ಲಿ ಅದರ ಪಾತ್ರವನ್ನು ಸಂಕ್ಷಪ್ತವಾಗಿ ಕೊಡುವ ಪ್ರಯತ್ನ ಇಲ್ಲಿದೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 1970ರ ಮೇ 30ರಂದು ಕೊಲ್ಕತ್ತ ನಗರದಲ್ಲಿ ಸ್ಥಾಪನೆಯಾಯಿತು. ಈ ಅವಧಿಯಲ್ಲಿ ಸಿಐಟಿಯು ತನ್ನ ಸಂಸ್ಥಾಪನಾ ಸಮ್ಮೇಳನದಲ್ಲಿ ಅಂಗೀಕರಿಸಿದ ‘ಐಕ್ಯತೆ ಮತ್ತು ಹೋರಾಟ’ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ಗಂಭೀರ ಪ್ರಯತ್ನಗಳನ್ನು ನಡೆಸಿದೆ. ಸಿಐಟಿಯು ಸಂಘಟನೆಯನ್ನು ದೇಶದ ಟ್ರೇಡ್ ಯೂನಿಯನ್ ಚಳವಳಿಯೊಳಗೆ ಪ್ರತ್ಯೇಕಿಸುವ ಆರಂಭಿಕ ಪ್ರಯತ್ನಗಳೆಲ್ಲವನ್ನೂ ಜಯಿಸಿ, ಇಂದು ಕಾರ್ಮಿಕರ ಹಕ್ಕುಗಳು, ವೇತನಗಳು, ಪ್ರಯೋಜನಗಳು ಮತ್ತು ಕೆಲಸದ ಪರಿಸ್ಥಿತಿಗಳನ್ನು ರಕ್ಷಿಸಲು ಕಾರ್ಮಿಕ ವರ್ಗದ ಐಕ್ಯ ಚಳುವಳಿಗಳನ್ನು ಬೆಳೆಸಿ, ಬಲಪಡಿಸುವಲ್ಲಿ ಮುಂಚೊಣಿ ಸ್ಥಾನದಲ್ಲಿ ನಿಂತಿದೆ.
ಭಾರತದಲ್ಲಿ ಕಾರ್ಮಿಕ ಚಳುವಳಿಗಳು
ಭಾರತ ದೇಶದಲ್ಲಿ ರಾಷ್ಟ್ರೀಯ ಸ್ವಾಂತಂತ್ರ್ಯ ಆಂದೋಲನ ಮತ್ತು ಕಾರ್ಮಿಕ ಚಳುವಳಿಗಳು ಜೊತೆಜೊತೆಯಾಗಿ ಸಾಗಿದವು. ಎಐಟಿಯುಸಿ (All India Trade Union Congress) ಸ್ಥಾಪನೆಯ ಆರಂಭದ ದಿನಗಳಲ್ಲಿ ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರೇ ಆ ನಂತರ ಎಐಟಿಯುಸಿಗೆ ನಾಯಕತ್ವ ನೀಡಿದರು. ಬಿ.ಟಿ. ರಣದಿವೆ, ಪಿ. ರಾಮಮೂರ್ತಿ, ಡಾಂಗೆ, ಘಾಟೆ ಮುಂತಾದ ಅನೇಕ ಕಮ್ಯುನಿಸ್ಟ್ ನಾಯಕರೂ ಈ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ದರಿಂದಲೇ ರಾಷ್ಟ್ರೀಯ ಚಳುವಳಿ ಮತ್ತು ಕಾರ್ಮಿಕ ಚಳುವಳಿ ಎರಡರಲ್ಲೂ ದಿಟ್ಟ ಹೋರಾಟಗಳ ಬೆಳವಣಿಗೆ ಕಂಡುಬಂದಿದೆ.
ಭಾರತಕ್ಕೆ ಸ್ವಾತಂತ್ರ್ಯ ಬರುವ ಮೂರು ತಿಂಗಳ ಮೊದಲು ಎಐಟಿಯುಸಿಯಲ್ಲಿ ಒಡಕು ಮೂಡಿಸಲು ಕಾಂಗ್ರೆಸ್ ಪಕ್ಷ ಮುಂದಾಯಿತು. ಮೇ 3, 1947ರಲ್ಲಿ ಐ.ಎನ್.ಟಿ.ಯು.ಸಿ. (Indian National Trade Union Congress) ಸ್ಥಾಪನೆಯಾಯಿತು. ಹಿಂದೂ ಮಜ್ದೂರ್ ಸಭಾ (HMS) ಅನ್ನು 1948ರಲ್ಲಿ ಸ್ಥಾಪಿಸಲಾಯಿತು. 1948 ರಲ್ಲಿ UTUC, 1955ರಲ್ಲಿ ಭಾರತೀಯ ಮಜ್ದೂರ್ ಸಂಘ (BMS), 1958ರಲ್ಲಿ ಯುಟಿಯುಸಿ- ಲೆನಿನ್ ಸರಣಿ (UTUC-LS) ಮತ್ತು ಇನ್ನಿತರ ಕಾರ್ಮಿಕ ಸಂಘಗಳು ರಚಿಸಲ್ಪಟ್ಟವು.
ವರ್ಗ ಸಹಕಾರದ ಹಾದಿ ಹಿಡಿದ ಎಐಟಿಯುಸಿ
ಎಐಟಿಯುಸಿ ಸಂಘಟನೆಯು ಕಾಲಕ್ರಮೇಣ ಕಾರ್ಮಿಕರಿಗೆ ಹಾನಿಯಾಗುವಂತೆ ರಾಜಿ ವಿಧಾನಗಳನ್ನು ಅಳವಡಿಸಿಕೊಂಡಿತು. ಆಳುವ ವರ್ಗದ ಸ್ವಭಾವದಿಂದ ಭ್ರಮೆಗಳಿಗೆ ಒಳಗಾಯಿತು. ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರದೊಂದಿಗೆ ಸಹಕರಿಸಲು ನಿರ್ಧರಿಸಿತು. ಅದು ವರ್ಗ ಹೋರಾಟವನ್ನು ಕೈಬಿಟ್ಟು ವರ್ಗ ಸಹಕಾರದ ಹಾದಿ ಹಿಡಿಯಿತು. ವರ್ಗ ಹೋರಾಟದ ಪರಿಕಲ್ಪನೆಯನ್ನೇ ಅಪಹಾಸ್ಯ ಮಾಡಿತು. ದುಡಿಯುವ ವರ್ಗದ ಐಕ್ಯತೆಯ ಪರವಾಗಿದ್ದ ಅಂದಿನ ಎಐಟಿಯುಸಿಯಲ್ಲಿದ್ದ ಕೆಲವು ನಾಯಕರಿಗೆ ಇದು ಅನೇಕ ನೋವು ಮತ್ತು ತೊಂದರೆಗಳನ್ನು ಉಂಟುಮಾಡಿತು. ಎಐಟಿಯುಸಿಯ ಅಂದಿನ ಪ್ರಧಾನ ಕಾರ್ಯದರ್ಶಿ ಎನ್.ಎಂ. ಜೋಶಿಯವರು ಕಾರ್ಮಿಕರು ರಾಜಕೀಯ ಹೋರಾಟಗಳಲ್ಲಿ ಪಾಲ್ಗೊಳ್ಳುವುದನ್ನು ವಿರೋಧಿಸಿದರು. ಎಸ್.ಎ. ಡಾಂಗೆ ಎರಡು ಸ್ತಂಭಗಳ ಸಿದ್ಧಾಂತವನ್ನು ಪ್ರಸ್ತಾಪಿಸಿದರು. ಈ ಸಿದ್ಧಾಂತವು ಕಾರ್ಮಿಕ ರಂಗದಲ್ಲಿ ಸುಧಾರಣೆಗೆ ಬುನಾದಿ ಹಾಕಿತು.
ಅಂದಿನ ಆಳುವವರ್ಗ ಬೋನಸ್ ಅನ್ನು ಶೇ. 8.33ರಿಂದ ಶೇ. 4ಕ್ಕೆ ಇಳಿಸಿದರೆ, ಎಐಟಿಯುಸಿ ನಾಯಕರಾಗಿದ್ದ ಎಸ್.ಎ. ಡಾಂಗೆ ಅದನ್ನು ಒಪ್ಪಿ ಸಹಿ ಹಾಕಿದರು. ಸರ್ಕಾರವೇ ಏಕಪಕ್ಷೀಯವಾಗಿ ನಿರ್ಧರಿಸಿದ ವೇತನ ಸಂಹಿತೆಗೆ ಸರ್ಕಾರ ಪ್ರಸ್ತಾಪಿಸಿದ್ದನ್ನೇ ಅವರು ಒಪ್ಪಿಕೊಂಡರು. 1975 ರಿಂದ 1978 ರವರೆಗೆ ಇಂದಿರಾಗಾಂಧಿ ಜಾರಿಗೆ ತಂದ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದರು. ಎಐಟಿಯುಸಿಯ ಸುಧಾರಣಾವಾದಿ ಧೋರಣೆಗಳನ್ನು ವಿರೋಧಿಸಿದ ನಾಯಕರನ್ನು ಸಂಘಗಳ ನಾಯಕತ್ವದ ಸ್ಥಾನಗಳಿಂದ ತೆಗೆದುಹಾಕಲಾಯಿತು ಮತ್ತು ಅವರ ನಾಯಕತ್ವದ ಸಂಘಗಳ ಜೊತೆಗಿನ ಸಂಬಂಧಗಳನ್ನು ದೂರಮಾಡಿದರು. ಎಐಟಿಯುಸಿ ವರ್ಗ ಸಾಮರಸ್ಯ ನೀತಿಗಳಿಂದ ಮತ್ತು ಆಳುವ ವರ್ಗಗಳಿಗೆ ಬಾಲಂಗೋಚಿ ಪ್ರವೃತ್ತಿಯಿಂದ ಬೇರ್ಪಡಿಸಲು ಕೆಲವರು ಮಾಡಿದ ಪ್ರಯತ್ನಗಳು ವಿಫಲವಾದವು. ಆ ಪರಿಸ್ಥಿತಿಯಲ್ಲಿಯೂ ಕಾರ್ಮಿಕವರ್ಗವನ್ನು ಒಂದು ವರ್ಗವಾಗಿ ಒಗ್ಗೂಡಿಸಲು, ಪ್ರಜಾಸತ್ತಾತ್ಮಕ ಕಾರ್ಯ ವಿಧಾನವನ್ನು ಮುಕ್ತವಾಗಿ ಅನುಸ್ಠಾನಗೊಳಿಸಲು, ರಾಜಿ-ಶರಣಾಗತಿ ಧೋರಣೆಗಳ ವಿರುದ್ಧ 1970ರ ಮೇ 30ರಂದು ಸಿಐಟಿಯು ಅಸ್ತಿತ್ವಕ್ಕೆ ಬಂತು. ಬಿ.ಟಿ.ರಣದಿವೆ ಮೊದಲ ಅಧ್ಯಕ್ಷರಾಗಿ, ಪಿ. ರಾಮಮೂರ್ತಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ವರ್ಗ ಹೋರಾಟವಿಲ್ಲದೆ ಸಾಮಾಜಿಕ ಪರಿವರ್ತನೆಯನ್ನು ತರಲಾಗುವುದಿಲ್ಲ
ಭಾರತ ದೇಶದಲ್ಲಿ ವರ್ಗ ಶೋಷಣೆಯನ್ನು ಕೊನೆಗೊಳಿಸಿ ಸಾಮಾಜಿಕ ಬದಲಾವಣೆಗಾಗಿ ವರ್ಗ ಹೋರಾಟವನ್ನು ತೀವ್ರಗೊಳಿಸುವ ಉದ್ದೇಶದಿಂದ ಸಿಐಟಿಯು ಅನ್ನು ರಚಿಸಲಾಯಿತು. ಸಿಐಟಿಯು ತನ್ನ ಉದ್ದೇಶವನ್ನು ನಿಯಮಾವಳಿಗಳಲ್ಲಿ ಸ್ಪಷ್ಟವಾಗಿ ವಿವರಿಸಿದೆ. 1970, ಅಕ್ಟೋಬರ್ 2ರಿಂದ 4ರವರೆಗೆ ಜೈಪುರದಲ್ಲಿ ನಡೆದ ತನ್ನ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಸಿಐಟಿಯು ತನ್ನ ಸಂವಿಧಾನವನ್ನು ಅಂಗೀಕರಿಸಿತು. ‘ಎಲ್ಲಾ ಶೋಷಣೆಯಿಂದ ಸಮಾಜದ ಸಂಪೂರ್ಣ ವಿಮೋಚನೆಯನ್ನು ಸೂಚಿಸುತ್ತದೆ’ ಎಂದು ಸಿಐಟಿಯು ಸ್ಪಷ್ಟವಾಗಿ ಹೇಳುತ್ತದೆ. ಉತ್ಪಾದನಾ ಸಾಧನಗಳನ್ನು, ವಿತರಣೆಯನ್ನು ಸಾರ್ವಜನಿಕಗೊಳಿಸದ ಹೊರತು ಕಾರ್ಮಿಕರ ಶೋಷಣೆ ಕೊನೆಗೊಳ್ಳುವುದಿಲ್ಲ ಎಂದು ಅದು ಹೇಳುತ್ತದೆ. ಈ ಬದಲಾವಣೆಯು ವರ್ಗ ಹೋರಾಟದ ಮೂಲಕ ಮಾತ್ರ ಸಾಧ್ಯವೆಂದೂ, ಎಲ್ಲಾ ರೀತಿಯ ದಬ್ಬಾಳಿಕೆ ಮತ್ತು ಅಸಮಾನತೆ ವಿರುದ್ಧ ಹೋರಾಡಲು ಕರೆ ನೀಡುತ್ತದೆ. ‘ವರ್ಗ ಹೋರಾಟವಿಲ್ಲದೆ ಯಾವುದೇ ಸಾಮಾಜಿಕ ಪರಿವರ್ತನೆಯನ್ನು ತರಲಾಗುವುದಿಲ್ಲ’ ಎಂದು ಸಿಐಟಿಯು ಸಂವಿಧಾನವು ಬಲವಾಗಿ ಪ್ರತಿಪಾದಿಸುತ್ತದೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ
ಸಿಐಟಿಯುವಿನ ಆರಂಭದ ದಿನಗಳಲ್ಲಿ ಆಳುವ ವರ್ಗಗಳು ಮತ್ತು ಇತರ ಕಾರ್ಮಿಕ ಸಂಘಟನೆಗಳು ಅದನ್ನು ಒಂಟಿಯಾಗಿಸುವ ಪ್ರಯತ್ನ ಮಾಡಿದರು. ಸಿಐಟಿಯು ಕರೆ ನೀಡಿದ್ದ ಐಕ್ಯತೆಯ ಘೋಷಣೆಯನ್ನು ಅವಹೇಳನ ಮಾಡಿದರು. ಸಿಐಟಿಯು ತನ್ನ ಚಟುವಟಿಕೆಯ ಮೂಲಕವೇ ಉತ್ತರ ನೀಡಿದೆ. ಇಂದಿರಾಗಾಂಧಿ ಮಾಡಿದ ವೇತನ ಸ್ಥಗಿತ ಮತ್ತು ಕಡ್ಡಾಯ ಠೇವಣಿ ಯೋಜನೆಗಳ ವಿರುದ್ಧ ಹೋರಾಡಲು ಸಿಐಟಿಯು ಮುತುವರ್ಜಿ ವಹಿಸಿ ಯುನೈಟೆಡ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಅನ್ನು ರಚಿಸಿತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಸರಕಾರ ಸಿಐಟಿಯು ಸಂಘಟನೆಯನ್ನು ಹತ್ತಿಕ್ಕಲು ಯತ್ನಿಸಿತು. ಸಿಐಟಿಯು ನಾಯಕತ್ವವನ್ನು ತೀವ್ರ ನಿರ್ಬಂಧಗಳಿಗೆ ಗುರಿಪಡಿಸಲಾಯಿತು. ಆದಾಗ್ಯೂ, ನಾಗರಿಕ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ವಿರೋಧಿ ದಾಳಿ ದಬ್ಬಾಳಿಕೆಗಳನ್ನು ಪ್ರತಿಭಟಿಸಿ ಕಾರ್ಮಿಕ ವರ್ಗದ ಒಗ್ಗಟ್ಟನ್ನು ವ್ಯಕ್ತಪಡಿಸುವ ಮೂಲಕ ಸಿಐಟಿಯು ಕಾರ್ಮಿಕ ಮತ್ತು ಸಾರ್ವಜನಿಕ ಹೋರಾಟಗಳಿಗೆ ಬೆಂಬಲವನ್ನು ಕ್ರೋಢೀಕರಿಸಿತು.
ರೈಲ್ವೆ ಕಾರ್ಮಿಕರ 20 ದಿನಗಳ ಮುಷ್ಕರ
1974 ರಲ್ಲಿ ನಡೆದ ಅದ್ಭುತವಾದ ರೈಲ್ವೆ ಕಾರ್ಮಿಕರ ಮುಷ್ಕರವು ದೇಶದಲ್ಲಿ ಇಡೀ ಕಾರ್ಮಿಕ ವರ್ಗವನ್ನು ಹುರಿದುಂಬಿಸಿತು. ರೈಲ್ವೆ ಕಾರ್ಮಿಕರನ್ನು ರಾಷ್ಟ್ರವ್ಯಾಪಿ ಹೋರಾಟದ ಹಾದಿಗೆ ತರಲು ಸಿಐಟಿಯು ಮುಂದಾಯಿತು. ತೀವ್ರವಾದ ದಬ್ಬಾಳಿಕೆ ಮತ್ತು ಬಣ ಸಾಧನೆಗಳ ನಡುವೆ 20 ದಿನಗಳ ಮುಷ್ಕರದಲ್ಲಿ ಪ್ರಮುಖ ಪಾತ್ರ ವಹಿಸಿತು. ದೇಶಾದ್ಯಂತ ಇರುವ ರೈಲ್ವೇ ಕಾರ್ಮಿಕರನ್ನು ಐಕ್ಯ ಹೋರಾಟಕ್ಕೆ ತರಲು ನ್ಯಾಷನಲ್ ಕೊ-ಆರ್ಡಿನೇಷನ್ ಕಮಿಟಿ ಫಾರ್ ರೈಲ್ವೆ ಮನ್ ಸ್ಟ್ರಗಲ್ (ಎನ್.ಸಿ.ಸಿ.ಆರ್.ಎಸ್.) ಎಂಬ ರಾಷ್ಟ್ರೀಯ ಸಮನ್ವಯ ಸಮಿತಿ ರಚನೆಯಲ್ಲಿ ಸಿಐಟಿಯು ಸಕ್ರಿಯ ಪಾತ್ರ ವಹಿಸಿದೆ. ಐ.ಎನ್.ಟಿ.ಯು.ಸಿ. ಹೊರತುಪಡಿಸಿ ಮಿಕ್ಕೆಲ್ಲಾ ಪ್ರಮುಖ ಕಾರ್ಮಿಕ ಸಂಘಗಳನ್ನು ಒಂದುಗೂಡಿಸಿತು. 1978 ರಲ್ಲಿ ಜನತಾ ಸರ್ಕಾರವು ಕೈಗಾರಿಕಾ ಸಂಬಂಧ ಮಸೂದೆ (ಇಂಡಸ್ಟ್ರಿಯಲ್ ರಿಲೇಷನ್ಸ್ ಬಿಲ್)ಯನ್ನು ಭೂತಲಿಂಗಂ ಸಮಿತಿಯ ಶಿಫಾರಸುಗಳ ಮೇರೆಗೆ ಜಾರಿಗೆ ತಂದ ಸಂದರ್ಭದಲ್ಲಿ ಅದಕ್ಕೆ ವಿರುದ್ದವಾಗಿ ಸಿಐಟಿಯು ನಡೆಸಿದ ಒಗ್ಗಟ್ಟಿನ ಹೋರಾಟದ ಫಲವಾಗಿ ಅಂದಿನ ಸರ್ಕಾರವು ಮಸೂದೆಯನ್ನು ಸ್ಥಗಿತಗೊಳಿಸಬೇಕಾಯಿತು.
ಸಾರ್ವಜನಿಕ ವಲಯದ ಕಾರ್ಮಿಕ ಸಂಘಗಳ ಸಮಿತಿ ರಚನೆ
1980ರ ದಶಕದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ದುರ್ಬಲಗೊಳಿಸುವ ಆಡಳಿತಗಾರರ ಪಿತೂರಿಗಳ ವಿರುದ್ಧ ಎಐಟಿಯುಸಿ, ಎಚ್.ಎಂ.ಎಸ್. ಮತ್ತು ಇನ್ನಿತರ ಕಾರ್ಮಿಕ ಸಂಘಗಳೊಂದಿಗೆ ಸಿ.ಪಿ.ಎಸ್.ಟಿ.ಯು. (Committee of Public Sector Trade Unions) ಅನ್ನು ರಚಿಸಿತು. 1981ರಲ್ಲಿ, ಕಾಂಗ್ರೆಸ್ ಅನುಸರಿಸುತ್ತಿದ್ದ ಆರ್ಥಿಕ ನೀತಿಗಳಿಗೆ ವಿರುದ್ಧವಾಗಿ ರಾಷ್ಟ್ರೀಯ ಕಾರ್ಮಿಕ ಸಂಘಗಳ ಪ್ರಚಾರ ಸಮಿತಿ (ನ್ಯಾಷನಲ್ ಕ್ಯಾಂಪಿಯನ್ ಕಮಿಟಿ ಆಫ್ ಟ್ರೇಡ್ ಯೂನಿಯನ್ಸ್- ಎನ್.ಸಿ.ಸಿ) ಯನ್ನು ರಚಿಸಿ ಹೋರಾಟದಲ್ಲಿ ಸಿಐಟಿಯು ಪ್ರಮುಖ ಪಾತ್ರ ವಹಿಸಿತು.
1982 ರಲ್ಲಿ ಮೊದಲಬಾರಿಗೆ ರಾಷ್ಟ್ರವ್ಯಾಪಿ ಮುಷ್ಕರ
ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಮುಂದಿಟ್ಟು 1982 ರ ಜನವರಿ 19 ರಂದು ಮೊದಲಬಾರಿಗೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸಿಐಟಿಯು ಕರೆ ನೀಡಿತು. ಇದರಲ್ಲಿ ಕಾರ್ಮಿಕ ವರ್ಗ, ರೈತರು, ಕೃಷಿ ಕಾರ್ಮಿಕರ ಬೇಡಿಕೆಗಳಿಗೂ ಕೂಡಾ ದೇಶದ ಕಾರ್ಮಿಕ ವರ್ಗ ದ್ವನಿ ಎತ್ತಿದೆ. ಈ ಮುಷ್ಕರದಲ್ಲಿ ಭಾಗವಹಿಸಿದ್ದ 10 ಕೃಷಿ ಕಾರ್ಮಿಕರು ಪೊಲೀಸರು ನಡೆಸಿದ ಗೋಲಿಬಾರ್ ಗೆ ಬಲಿಯಾದರು. ಸಿಐಟಿಯು ಜನವರಿ 19 ರ ಆ ದಿನವನ್ನು ಕಾರ್ಮಿಕ-ರೈತ ಐಕ್ಯತಾ ದಿನವನ್ನಾಗಿ ಆಚರಿಸುತ್ತದೆ.
ಇಪಿಎಸ್ ವಿರುದ್ದ ಹೋರಾಟ
1995 ನವೆಂಬರ್ 17 ರಂದು ಕಾರ್ಮಿಕ ಸಚಿವ ವೆಂಕಟಸ್ವಾಮಿ ಇಪಿಎಸ್ ಯೋಜನೆ (Employee Pension Scheme) ಯನ್ನು ಪ್ರಕಟಿಸಿದರು. ಎಐಟಿಯುಸಿ ಸೇರಿದಂತೆ ಎಲ್ಲ ಕಾರ್ಮಿಕ ಸಂಘಟನೆಗಳು ಈ ಯೋಜನೆಯನ್ನು ಸ್ವಾಗತಿಸಿದವು. ಸಿಐಟಿಯು ಮಾತ್ರ ಇದನ್ನು ವಿರೋಧಿಸಿತು. ರಾಷ್ಟ್ರವ್ಯಾಪಿ ಅಭಿಯಾನವನ್ನು ಆಯೋಜಿಸಿತು. 1996 ಫೆಬ್ರವರಿ 26 ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಲಾಯಿತು. ಅಂದು ಸಿಐಟಿಯುನ ಸದಸ್ಯತ್ವ ಪಡೆಯದ ಹಲವು ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.
2002 ರಲ್ಲಿ, ಕಾರ್ಮಿಕರ ರಾಷ್ಟ್ರೀಯ ಅಸೆಂಬ್ಲಿ, ಟ್ರೇಡ್ ಯೂನಿಯನ್ಸ್ ಪ್ರಾಯೋಜಕ ಸಮಿತಿಯನ್ನು ರಚಿಸಲು ಸಿಐಟಿಯು ಕೆಲಸ ಮಾಡಿತು. ಸಿಐಟಿಯು ತಾನು ಮಾಡುತ್ತಿರುವ ಸ್ವತಂತ್ರ ಚಟುವಟಿಕೆಗಳ ಮೂಲಕ ಒಗ್ಗಟ್ಟಿನ ಕಾರ್ಯಾಚರಣೆಗೆ ಅಡಿಪಾಯ ಹಾಕಿದೆ. 2018 ರಲ್ಲಿ ಆಯೋಜಿಸಲಾದ ಮಹಾಪಡಾವ್ ಅದಕ್ಕೆ ಉದಾಹರಣೆಯಾಗಿದೆ. 2019 ರ ಜನವರಿ 8 ಮತ್ತು 9 ರಂದು ಎರಡು ದಿನಗಳ ಮುಷ್ಕರದಲ್ಲಿ 20 ಕೋಟಿ ಕಾರ್ಮಿಕರು ಭಾಗವಹಿಸಿದ್ದರು. ವಿವಿಧ ಒಕ್ಕೂಟಗಳ ಆಶ್ರಯದಲ್ಲಿ, ಕಲ್ಲಿದ್ದಲು, ಉಕ್ಕು, ತೋಟಗಾರಿಕೆ, ಅಂಗನವಾಡಿ, ಆಶಾ, ಮಧ್ಯಾಹ್ನದ ಬಿಸಿ ಊಟದ ನೌಕರರು ವಿವಿಧ ವಲಯಗಳ ನಡುವೆ ಐಕ್ಯ ಚಳುವಳಿಗಳು – ಮುಷ್ಕರಗಳು ನಡೆದವು.
ಎಲ್ಲಾ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಐಕ್ಯವೇದಿಕೆಯ ಮೂಲಕ…
2010 ರಿಂದ 2013 ರವರೆಗೆ, ಐ.ಎನ್.ಟಿ.ಯು.ಸಿ. ಮತ್ತು ಬಿಎಂಎಸ್ ಸೇರಿದಂತೆ ಎಲ್ಲಾ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಐಕ್ಯವೇದಿಕೆಯ ಮೂಲಕ ಮೂರು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರಗಳನ್ನು ಆಯೋಜಿಸಿವೆ. 1982ರಲ್ಲಿ ನಡೆದ ಮೊದಲ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಐ.ಎನ್.ಟಿ.ಯು.ಸಿ. ಭಾಗವಹಿಸಲಿಲ್ಲ. 2015ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಎಂಎಸ್ ಐಕ್ಯ ಚಳವಳಿಯಿಂದ ದೂರ ಉಳಿಯಿತು. ನವ ಉದಾರವಾದಿ ನೀತಿಗಳ ಆರಂಭದಿಂದ ಇಲ್ಲಿಯವರೆಗೆ 21 ಸಾರ್ವತ್ರಿಕ ಮುಷ್ಕರಗಳನ್ನು ಸಿಐಟಿಯು ಉಪಕ್ರಮದೊಂದಿಗೆ ನಡೆದಿರುವುದು ಅಭೂತಪೂರ್ವ.
ರೈತ ಚಳವಳಿಯ ಜೊತೆಗೂಡಿ
ಸಿಐಟಿಯು ಕಾರ್ಮಿಕ ಸಂಘಟನೆಯಲ್ಲಿ, ಕಾರ್ಮಿಕರ ನಡುವೆ ಐಕ್ಯತೆಯನ್ನು ಸಾಧಿಸಲಷ್ಟೇ ಸೀಮಿತವಾಗಿಲ್ಲ. ಸಮಾಜದಲ್ಲಿ ಶೋಷಣೆ ಮತ್ತು ತುಳಿತಕ್ಕೊಳಗಾದ ಎಲ್ಲಾ ವರ್ಗಗಳ ಕಾರ್ಮಿಕರ, ಸಾರ್ವಜನಿಕರ ಸಮಸ್ಯೆಗಳ ವಿರುದ್ದ ತನ್ನ ಧ್ವನಿ ಎತ್ತಿ ಹೋರಾಡುತ್ತಾ ಬಂದಿದೆ. ನವೆಂಬರ್ 26, 2020 ರಂದು, 20 ನೇ ಸಾರ್ವತ್ರಿಕ ಮುಷ್ಕರದ ಸಮಯದಲ್ಲಿ, ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರಾರಂಭವಾದ ರೈತ ಚಳವಳಿಯ ಜೊತೆಗೂಡಿ ಗೆಲ್ಲುವವರೆಗೂ ಆ ಹೋರಾಟವನ್ನು ಮುಂದುವರೆಸಿದರು. ಗ್ರಾಮೀಣ ಕೃಷಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಐಟಿಯು ಜಂಟಿ ಹೋರಾಟಗಳಲ್ಲಿ ಭಾಗಿಯಾಗುತ್ತಿದೆ.
ಮೊದಲ ರಾಷ್ಟ್ರೀಯ ಕಾರ್ಮಿಕ ಮಹಿಳೆಯರ ಸಮ್ಮೇಳನ
ದುಡಿಯುವ ಮಹಿಳೆಯರನ್ನು ಚಳವಳಿಗೆ ಕರೆತರುವಲ್ಲಿ ಸಿಐಟಿಯು ಪಾತ್ರ ಬಹಳ ಮಹತ್ವದ್ದಾಗಿದೆ. ಇದನ್ನು ಒಂದು ವರ್ಗ ಕರ್ತವ್ಯವನ್ನಾಗಿ ಸಿಐಟಿಯು ಗುರುತಿಸಿದೆ. ವರ್ಗ ಐಕ್ಯತೆಯನ್ನು ಹೆಚ್ಚಿಸಲು ಮತ್ತು ವರ್ಗ ಹೋರಾಟಗಳನ್ನು ಬಲಪಡಿಸಲು ದುಡಿಯುವ ಮಹಿಳೆಯರು ಚಳವಳಿಗೆ ಬರುವುದು ಮುಖ್ಯವೆಂದು ಸಿಐಟಿಯು ಪರಿಗಣಿಸುತ್ತದೆ. 1979ರಲ್ಲಿ ಸಿಐಟಿಯು ಮೊದಲ ರಾಷ್ಟ್ರೀಯ ಕಾರ್ಮಿಕ ಮಹಿಳೆಯರ ಸಮ್ಮೇಳನವನ್ನು ಆಯೋಜಿಸಿತ್ತು. ಒಂದು ಕೇಂದ್ರ ಕಾರ್ಮಿಕ ಸಂಘದ ಆಶ್ರಯದಲ್ಲಿ ಮಹಿಳಾ ಸಮಾವೇಶ ನಡೆದಿದ್ದು ಅದೇ ಮೊದಲನೆಯದು.
ಕಾರ್ಮಿಕರ ಮತ್ತು ಜನತೆಯ ಸಂಕಷ್ಟಗಳು ಹೆಚ್ಚಾಗಿವೆ
ಕಳೆದ ಹನ್ನೊಂದು ವರ್ಷಗಳ ಮೋದಿ ಸರ್ಕಾರದ ನೀತಿಗಳು ಕಾರ್ಮಿಕರು, ರೈತರು ಮತ್ತು ಶ್ರಮಿಕರು ಮಾತ್ರವಲ್ಲ, ರಾಷ್ಟ್ರಕ್ಕೂ ವಿಪತ್ತು ಎಂಬುದು ಸಾಬೀತಾಗಿದೆ. ನಿರುದ್ಯೋಗ, ವಿಶೇಷವಾಗಿ ವಿದ್ಯಾವಂತ ಯುವಕರಲ್ಲಿ ಅಭೂತಪೂರ್ವ ಮಟ್ಟವನ್ನು ತಲುಪಿದೆ. ಲಕ್ಷಾಂತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಮುಚ್ಚಿಹೋಗಿದ್ದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. ಕೆಲಸದ ಪರಿಸ್ಥಿತಿಗಳು ಹದಗೆಟ್ಟಿವೆ. ಖಾಯಂ ಉದ್ಯೋಗಗಳು ತೀವ್ರವಾಗಿ ಇಳಿದಿವೆ. ಗುತ್ತಿಗೆ, ತಾತ್ಕಾಲಿಕ, ನಿಶ್ಚಿತ ಅವಧಿ, ಅರೆಕಾಲಿಕ ಉದ್ಯೋಗಗಳು, ಗಿಗ್ ಕೆಲಸ ಇತ್ಯಾದಿಗಳಲ್ಲಿ ಯಾವುದೇ ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಅಥವಾ ಕೆಲಸದ ಹಕ್ಕುಗಳಿಲ್ಲದ ಅನೇಕ ರೀತಿಯ ಉದ್ಯೋಗಗಳು ಹೆಚ್ಚಿವೆ. ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಸಜ್ಜುಗೊಳಿಸುವ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಅಂಗೀಕರಿಸುವ ಮೂಲಕ, ಮೋದಿ ಸರಕಾರವು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಲು, ಅಸ್ತಿತ್ವದಲ್ಲಿರುವ ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ಸಹ ಕಸಿದುಕೊಳ್ಳಲು ಮತ್ತು ಅವರನ್ನು ವಾಸ್ತವ ಗುಲಾಮರಂತಹ ಪರಿಸ್ಥಿತಿಗಳಿಗೆ ತಳ್ಳಲು ಪ್ರಯತ್ನಿಸಿದೆ. ಸಾರ್ವಜನಿಕ ವಲಯ, ಆರೋಗ್ಯ, ಶಿಕ್ಷಣ, ಸಾರಿಗೆ ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳು ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ವಿದೇಶಿ ಏಕಸ್ವಾಮ್ಯ ಸಂಸ್ಥೆಗಳಿಗೆ ಮತ್ತು ಖಾಸಗಿ ಕಾರ್ಪೊರೇಟ್ ಗಳಿಗೆ ಹಸ್ತಾಂತರಿಸಲಾಗುತ್ತಿದೆ. ಅಗತ್ಯ ಸರಕುಗಳ ಬೆಲೆಗಳು ಗಗನಕ್ಕೇರಿವೆ. ಬಳಕೆ ಕುಸಿದಿದೆ. ಅಸಂಘಟಿತ ವಲಯದ ಕಾರ್ಮಿಕರ ದೊಡ್ಡ ವಿಭಾಗಗಳಿಗೆ ಸಾಲಬಾಧೆ ಹೆಚ್ಚಿದೆ.
ಮತಾಂಧ ಅಜೆಂಡಾದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಮನುಸ್ಮೃತಿಯ ಆಧಾರದ ಮೇಲೆ ಹಿಂದುತ್ವ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅವರಲ್ಲಿ ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಮೇಲೆ ದಬ್ಬಾಳಿಕೆ, ಹಲ್ಲೆ ಮತ್ತು ಕ್ರೌರ್ಯ ನಡೆಯುತ್ತಿದೆ. ಗೋಸಂರಕ್ಷಣೆಯ ನೆಪದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಹಲ್ಲೆಗಳು, ಅಂತರ್ಜಾತಿ ವಿವಾಹವಾದ ದಂಪತಿಗಳನ್ನು ಪ್ರತ್ಯೇಕಿಸಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ, ಇದು ಕಾರ್ಮಿಕ ವರ್ಗದ ಐಕ್ಯತೆಗೆ ಭಂಗ ತರುತ್ತದೆ.
ವರ್ಗ ಹೋರಾಟವನ್ನು ಬಲಪಡಿಸುವ ಪ್ರಯತ್ನಗಳು ಮುಂದುವರಿಯುತ್ತದೆ
ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ನವ ಉದಾರೀಕರಣ ಮತ್ತು ಹಿಂದೂತ್ವದ ಅವಳಿ ಕಾರ್ಯಸೂಚಿಗಳನ್ನು ಹೆಚ್ಚು ಆಕ್ರಮಣಕಾರಿಯಾಗಿ ಅನುಸರಿಸುತ್ತಿದೆ ಮತ್ತು ಭಾರತವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತಿದೆ. 2004 ರಂತೆ, 18 ನೇ ಲೋಕಸಭೆಯಲ್ಲಿ ಎಡಪಂಥೀಯರು ಬಲವಾದ ಉಪಸ್ಥಿತಿಯನ್ನು ಹೊಂದಿದ್ದರೆ, ಕಾರ್ಮಿಕರು, ರೈತರು ಮತ್ತು ಸಾಮಾನ್ಯ ಜನರ ಧ್ವನಿಗಳು ಸಂಸತ್ತಿನಲ್ಲಿ, ಅಷ್ಟರ ಮಟ್ಟಿಗೆ ಪ್ರತಿಧ್ವನಿಸುತ್ತಿದ್ದವು.
ವರ್ಗ ಐಕ್ಯತೆಯನ್ನು ಅಭಿವೃದ್ದಿಪಡಿಸಲು ಮತ್ತು ವರ್ಗ ಹೋರಾಟವನ್ನು ಬಲಪಡಿಸುವ ಪ್ರಯತ್ನಗಳನ್ನು ಮುಂದುವರಿಸುವುದು ಸಿಐಟಿಯುಗೆ ಇಂದು ಹೆಚ್ಚು ಮುಖ್ಯವಾದುದು. ಕಾರ್ಮಿಕ ವರ್ಗವು ಸಮಾಜವನ್ನು ಪರಿವರ್ತಿಸುವಲ್ಲಿ ತನ್ನ ಐತಿಹಾಸಿಕ ಪಾತ್ರ ಮತ್ತು ಜವಾಬ್ದಾರಿಯನ್ನು ತನ್ನ ತಕ್ಷಣದ ವಿಷಯಗಳ ಕುರಿತು ಹೋರಾಟಗಳ ಮೂಲಕ ನಿರ್ವಹಿಸಲು ಸಿದ್ಧರಾಗಿರಬೇಕು.
ನಿಮ್ಮ ಟಿಪ್ಪಣಿ ಬರೆಯಿರಿ