ಆರೆಸ್ಸೆಸ್ ಹೇಳುತ್ತದೆ: “ಉಳುವವನು ಹೊಲದೊಡೆಯನಲ್ಲ”

ಆರೆಸ್ಸೆಸ್ ಹೇಳುತ್ತದೆ:
“ಉಳುವವನು ಹೊಲದೊಡೆಯನಲ್ಲ”
(ಸುಧೀಶ್ ಮಿನ್ನಿ ಅವರ ‘ನರಕದ ಗರ್ಭಗುಡಿಯೊಳಗೆ’ ಪುಸ್ತಕದಿಂದ):

ಅತಿ ಚಿಕ್ಕ ವಯಸ್ಸಿನಲ್ಲಿ ಶಿಕ್ಷಕ್ ಆಗಿದ್ದೆ ಎಂದು ನಿಮಗೆ ಈಗಾಗಲೇ ತಿಳಿದಿದೆ. ಅದೇ ರೀತಿಯಲ್ಲಿ ನನ್ನ ಹಿರಿಯ ಸಹೋದರ (17 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು) ರಾತ್ರಿ ಶಾಖೆಯ ಶಿಕ್ಷಕ್ ಆಗಿದ್ದರು. ಆ ಶಾಖೆ ನಡೆಯುವ ಸಮಯ ಸಂಜೆ 7ರಿಂದ 8 ಗಂಟೆಯವರೆಗೆ. ಆ ಸಮಯದಲ್ಲಿ ಅದರ ಮುಖ್ಯ ಶಿಕ್ಷಕ ಸಜೀವಣ್ಣ ಆಗಿದ್ದರು. ಹಲವು ಪ್ರಚಾರಕರು, ಕಾರ್ಯಕರ್ತರು ಊರಿಗೆ ಆಗಾಗ ಬರುತ್ತಿದ್ದರು. ಒಮ್ಮೆ ‘ತೋಕಿಲಂಡಾಯಿ’ನಲ್ಲಿದ್ದ ವತ್ಸಣ್ಣ (ಅಂದಿನ ತಾಲೂಕ ಕಾರ್ಯವಾಹ್), ರಾಜಣ್ಣ (ತಾಲೂಕ್ ಶಾರೀರಕ್ ಪ್ರಮುಖ್), ‘ವಡಕರ’ದ ವಿನೀತ (ಮಹಿಳಾ ಕಾರ್ಯಕರ್ತೆ) ಮುಂತಾದವರು ಸಂಜೆಯ ವೇಳೆಯಲ್ಲಿ ನಮ್ಮೂರಿಗೆ ಬಂದಿದ್ದರು.
ಅಂದು ರಾತ್ರಿಯ ಶಾಖೆ ಮುಗಿದು ನಮ್ಮ ಮನೆಯ ಹಿಂಭಾಗದಲ್ಲಿರುವ ಗುಡ್ಡದ ಅತಿ ಎತ್ತರದ ಕಾಡಿನೊಳಗೆ ಪೆಟ್ರೋಲ್‌ ಮ್ಯಾರ್ಕ್ಸ್ ಬೆಳಕಿನಲ್ಲಿ ನಾವೆಲ್ಲರೂ ಸಭೆ ನಡೆಸಿದೆವು. ದಾಸ, ಮನೋಹರ, ರಾಜ, ಪುರುಪು ಸದಾನಂದ, ಸಜೀವ, ಚಂದ್ರ, ಸುಧಾಕರ, ನಮ್ಮಣ್ಣ ಮತ್ತು ನಾನು ವೃತ್ತಾಕಾರದಲ್ಲಿ ಕುಳಿತೆವು. ವತ್ಸಣ್ಣ ಮೊದಲು ಚರ್ಚೆ ಪ್ರಾರಂಭಿಸಿದರು. ಜಿಲ್ಲಾ ನಿರ್ದೇಶನದಡಿ ತಾವು ಬಂದಿರುವುದಾಗಿ ಹೇಳಿ, 1984ರ ‘ಕೋಚಕಂಡಿ ರಾಘವ’ನನ್ನು (ಕಮ್ಯೂನಿಸ್ಟ್ ಕಾರ್ಯಕರ್ತ) ಕೊಚ್ಚಿ ಕೊಂದು ಹಾಕಿದ್ದು, ಇಲ್ಲಿಯ ಇಬ್ಬರು ಸ್ವಯಂ ಸೇವಕರ ಚಾಣಕ್ಯತನದಿಂದ ರೂಪುಗೊಂಡ ಯೋಜನೆಯಾಗಿತ್ತು ಎನ್ನುವ ವಿಷಯವನ್ನು ನಮಗೆ ತಿಳಿಸಿದ ಅವರು, ಅದರಲ್ಲಿ ಭಾಗವಹಿಸಿದ ದಾಸಣ್ಣ ಮತ್ತು ಚಂದ್ರ ಇವರಿಗೆ ಸಂಘವು 15,000 ರೂಪಾಯಿಗಳನ್ನು ಪಾರಿತೋಷಿಕವಾಗಿ ನೀಡಲು ನಿರ್ಧರಿಸಿದೆ ಎನ್ನುತ್ತಾ, ಅವರಿಬ್ಬರಿಗೆ (ದಾಸಣ್ಣ ಮತ್ತು ಚಂದ್ರ) ಆ ಹಣವನ್ನು ಕೊಟ್ಟರು.
ನಂತರ ತಮ್ಮ ಮಾತನ್ನು ಮುಂದುವರಿಸಿ ‘ನಮ್ಮ ಪಕ್ಷವು ಮಾರ್ಕ್ಸವಾದಿ ಪಕ್ಷದವರ ಬೆದರಿಕೆ, ಸವಾಲುಗಳನ್ನು ತಡೆಯಲು ಪ್ರಾಣ ಹರಣದ (ಕೊಲ್ಲುವ) ದಾರಿ ಹಿಡಿಯಬೇಕು. ನಿರಂತರವಾದ ಆಕ್ರಮಣಶೀಲತೆಯೇ ನಮ್ಮ ಶೈಲಿ’ ಎಂದು ಹೇಳಿದರು. ನಂತರ ಮಾತನಾಡಿದ ದಾಸಣ್ಣ, ‘ಆಯಿತರದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. 1980ರಲ್ಲಿ ಆಯಿತ್ತರ ಮಠಪುರ ‘ತೆಯ್ಯಂ’ಗೆ ಸಂಬಂಧಿಸಿ ನಡೆದ ಆಕ್ರಮಣದಲ್ಲಿ ನಾವು ಅವರಿಗೆ ನೀಡಿದ ಏಟಿನಿಂದ ಹುಟ್ಟಡಗಿಸಿದ್ದೆವು. ಇದೀಗ ರೈತಸಂಘವು ಆಯಿತ್ತರ’ದ ಯಜಮಾನ (ತಂಬುರಾನ್)ರ ವಿರುದ್ಧವಾಗಿ ನಿಂತಿದೆ. ರೈತಸಂಘಕ್ಕೆ ಬೆಂಬಲವಾಗಿ ಕಮ್ಯೂನಿಸ್ಟರು ಅಖಾಡಕ್ಕೆ ಇಳಿದಿದ್ದಾರೆ. ಈ ವಿಷಯದ ಬಗ್ಗೆ ಮೇಲಿನವರು ತೆಗೆದುಕೊಂಡ ಒಂದು ತೀರ್ಮಾನವನ್ನು ಜಾರಿಮಾಡಬೇಕಾಗಿದೆ. ‘ಉಳುವವನೆ ಹೊಲದೊಡೆಯ’ ಎನ್ನುವ ಅವರ ಘೋಷಣೆಯೇ ತಪ್ಪು. ರೈತ ಹೋರಾಟದ ನೇತೃತ್ವ ವಹಿಸಿಕೊಂಡಿರುವ ‘ಕಲ್ಲಿ ಬಾಲಕೃಷ್ಣನನ್ನು (ಅಂದಿನ ಸ್ಥಳೀಯ ರೈತ ಸಮಿತಿಯ ಸದಸ್ಯ) ಮುಗಿಸಿ ಬಿಡಬೇಕು. ಇದನ್ನು ಸಾಧಿಸಬೇಕಾದರೆ ಸ್ಥಳೀಯರ ಬೆಂಬಲ ಬೇಕು. ತಮ್ಮ ದಿನನಿತ್ಯದ ಕೆಲಸಗಳಲ್ಲಿ ಮಗ್ನರಾಗಿರುವ ಜನರು ನಮ್ಮ ಕಡೆಗೆ ನೋಡಬೇಕಾದರೆ ಒಂದು ಸುಳ್ಳು ಸುದ್ದಿ ಹಬ್ಬಿಸಬೇಕು. ಆ ಸುಳ್ಳು ಸುದ್ದಿಯನ್ನು ಜನರು ನಂಬುವಂತಿರಬೇಕು. ಹೇಗಿದ್ದರೂ ರೈತ ಸಂಘ ಹೋರಾಟಕ್ಕೆ ತಯಾರಾಗುತ್ತಿದೆ. ಈ ಸಂದರ್ಭದಲ್ಲಿ ‘ಯಜಮಾನರಿಗೆ ರೈತಸಂಘದಿಂದ ಅಪಾಯ ಇದೆ’ ಎಂದು ಹೇಳಿದರೆ ಜನ ನಂಬಬಹುದು. ಆದ್ದರಿಂದ ಈ ಸುಳ್ಳನ್ನು ಸುತ್ತ ಮುತ್ತಲೂ ವಾಸವಾಗಿರುವ ಜನರ ನಡುವೆ ಪ್ರಚಾರ ಮಾಡಬೇಕು. ಯಜಮಾನರ ಮನೆಯ ಸುತ್ತಲೂ ಕಾವಲು ಕಾಯಬೇಕು. ಯಜಮಾನರ ಹಾಗೂ ಅವರನ್ನು ಇಷ್ಟ ಪಡುವ ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿಕೊಳ್ಳಬೇಕು. ನಂತರ ಇದೀಗ ‘ತೆಯ್ಯಂ’ ನಡೆಸಲು ಸಾರ್ವಜನಿಕ ಸಮಿತಿಗೆ ಬಿಟ್ಟುಕೊಟ್ಟ ಯಜಮಾನರ ಮಠಪುರ ನಮ್ಮ ಕೈವಶವಾಗುವಂತೆ ಏನಾದರೂ ಉಪಾಯ ಕಂಡುಹಿಡಿಯಬೇಕು. ಇದಕ್ಕಾಗಿ ಆಯಿತ್ತರದ ನದಿ ಪಕ್ಕಕ್ಕೆ ಸೇರಿರುವ ಭೂಮಿ ಯಜಮಾನರಿಗೆ ಸಿಗುವಂತೆ ಮಾಡಬೇಕು. ನಂತರ ಶಾಲಾ ಗ್ರೌಂಡಿನೊಂದಿಗೆ ಸೇರಿಕೊಂಡಿರುವ ಸ್ಥಳವು ‘ಆಯಿತ್ತರ’ದ ಸಂಘ ಕಾರ್ಯಚಟುವಟಿಕೆಗಳಿಗೆ ಅನುಕೂಲಕರವಾಗಿದೆ. ಅಲ್ಲಿ ಸ್ವಲ್ಪ ಸ್ಥಳವನ್ನು ನಮ್ಮ ಜಿಲ್ಲಾ ಟ್ರಸ್ಟಿಯ ಹೆಸರಿನಲ್ಲಿ ಬರೆಸಿಕೊಂಡು ಒಂದು ವಾಚನಾಲಯದ ಕಟ್ಟಡ ನಿರ್ಮಾಣಕ್ಕೆ ಸಂಘವು ಆಲೋಚನೆ ಮಾಡಿದೆ’ ಎಂದರು.ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಸಾಕಾಗುವಷ್ಟು ಆಯಧಗಳು ಇಲ್ಲವೆಂದು ರಾಜಣ್ಣ ಸೂಚಿಸಿದಾಗ ತಲ್ವಾರ್, ಕೊಡಲಿ ಮುಂತಾದವುಗಳನ್ನು ಬೆಳಗಿನ ಜಾವ ತೋಕ್ಕಿಲಂಗಾಡಿಯ ಪುರುಷುವಿನ ಮನೆಯಿಂದ ತರಿಸಬಹುದೆಂದು ಹೇಳಿದ ದಾಸಣ್ಣ, ‘ಇನ್ನು ಮುಂದೆ ಬಾಂಬುಗಳೆ ದೊಡ್ಡ ಆಯುಧಗಳಾಗಲಿವೆ’ ಎಂದರು. ಬಾಂಬುಗಳನ್ನು ತಯಾರು ಮಾಡುವ ಬಗ್ಗೆ ಮಾಹಿತಿ, ತರಬೇತಿ ನೀಡುವುದರ ಸಲುವಾಗಿಯೇ ಅವರೆಲ್ಲಾ ಇಲ್ಲಿಗೆ ಬಂದಿರುವುದಾಗಿ ಹೇಳುತ್ತಾ, ಎರಡು ಚೀಲಗಳಿಂದ ಬಹಳಷ್ಟು ಸುಣ್ಣ, ನೂಲು, ಬಲ್ಪು, ಮೊಳೆ, ಕಪ್ಪುಪುಡಿ ಮುಂತಾದವುಗಳನ್ನು ಹೊರಗೆ ತೆಗೆದರು. ನಮನ್ನು ಪುರುಷಣ್ಣನ ಮನೆಗೆ ಕಳುಹಿಸಿದರು.
ರೇಡಿಯೋದಲ್ಲಿ ಕಥಕ್ಕಳಿಯ ಹಾಡುಗಳು ಆರಂಭವಾಗುವ ಹೊತ್ತಿಗೆ ಅಲ್ಲಿರುವ ವಿನೀಶಕ್ಕಳನ್ನು ಕರೆದುಕೊಂಡು ಬಂದು ಆಕೆಯ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ನಮಗೆ ಒಪ್ಪಿಸಿದರು. ನಾವು ನಮಗೆ ತಿಳಿಸಿದ ಕೆಲಸವನ್ನು ಚಾಚೂತಪ್ಪದೆ ಪಾಲಿಸಿದೆವು. ಅಂದು ರಾತ್ರಿ ಕಾಡಿನಲ್ಲಿ ಸ್ಫೋಟದ ಉಗ್ರವಾದ ಶಬ್ದವನ್ನು ಕೇಳಿ ಊರಲ್ಲಿ ಎಲ್ಲರೂ ಬೆಚ್ಚಿ ಬಿದ್ದಿದ್ದೆವು. ಮರುದಿನ ನಾನು ಶಾಲೆಯಿಂದ ಬರುವಾಗ ದೊಡ್ಡಪ್ಪ ದೊಡ್ಡದೊಂದು ಕತ್ತಿಯೊಂದಿಗೆ ಮನೆಯಿಂದ ಹೊರಗೆ ಬರುತ್ತಿದ್ದರು. ‘ನಿನ್ನೆ ಕಾಡಿನಿಂದ ಕೇಳಿ ಬಂದ ಶಬ್ದ ಬಾಂಬಿನದ್ದು. ಯಜಮಾನರ ಪ್ರಾಣಕ್ಕೆ ಕಮ್ಯೂನಿಸ್ಟರಿಂದ ಬೆದರಿಕೆಯಿದೆ. ಅವರನ್ನು ಸಂರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕತೃವ್ಯ’ ಎನ್ನುತ್ತ ಯಜಮಾನರ ಮನೆಯ ಕಡೆಗೆ ಹೋದರು.
ಅಂದು ನಾನು ಶಾಖೆ ನಡೆಸಲು ಹೋದಾಗ ‘ಶಾಖೆಯನ್ನು ಇನ್ನು ಮುಂದೆ ಯಜಮಾನರ ಮನೆಯ ಮುಂಭಾಗದಲ್ಲಿ ನಡೆಸಬೇಕು’ ಎಂದು ಸುನಿಯಣ್ಣ ತಿಳಿಸಿದರು. ಅದರಂತೆ ನಾವೆಲ್ಲರೂ ಅಲ್ಲಿಗೆ ತಲುಪಿದಾಗ ದಾಸಣ್ಣ ದೊಡ್ಡಪ್ಪನೊಂದಿಗೆ ಸುಮಾರು ನೂರಕ್ಕಿಂತಲೂ ಹೆಚ್ಚು ಜನರು ಯಜಮಾನರ ಮನೆಯ ಸುತ್ತ ಆಯುಧದೊಂದಿಗೆ ಕುಳಿತಿದ್ದರು. ಯಜಮಾನರನ್ನು ಮತ್ತು ಅವರ ಹೆಂಡತಿ, ಮಕ್ಕಳನ್ನು ಮನೆಯ ಒಳಗೆ ಇರುವಂತೆ ತಾಕೀತು ಮಾಡಲಾಯಿತು. ಶಾಖೆಯನ್ನು ಆರಂಭಿಸಲು ದೇವಣ್ಣ (ಯಜಮಾನರ ಸಂಬಂಧಿಕ) ಸೂಕ್ತ ಸ್ಥಳವನ್ನು ತೋರಿಸಿದರು. ನಾನು ವಿಸಿಲನ್ನು ಊದಿ ಶಾಖೆ ಆರಂಭಿಸಿದೆ. ಮೂರು ದಿನವೂ ಶಾಖೆಯನ್ನು ಅಲ್ಲಿಯೇ ನಡೆಸಿದೆವು.
ಆ ಮೂರು ದಿನಗಳಲ್ಲೂ ರಸ್ತೆಯಲ್ಲಿ ಅವರ ಪಾಡಿಗೆ ಹೋಗುತ್ತಿದ್ದ ಮಾರ್ಕ್ಸವಾದಿ ಪಕ್ಷದ ಕಾರ್ಯಕರ್ತರನ್ನು ಕಲ್ಲೆಸೆದು ಓಡಿಸಿ ಊರಿನಲ್ಲಿ ಅಶಾಂತಿ ಹರಡಿದೆವು. ಸಂಘರ್ಷದ ವಾತಾವರಣ ಸೃಷ್ಟಿಯಾಯಿತು. ಬಹಳಷ್ಟು ಮಂದಿ ಹೆದರಿ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದರು. ರೈತಸಂಘದ ಹೋರಾಟವನ್ನು ಧ್ವಂಸಗೊಳಿಸಬೇಕಾದದ್ದು ಊರಿನ ಕರ್ತವ್ಯ ಅದಕ್ಕಾಗಿ ಆರ್‌ಎಸ್‌ಎಸ್‌ ಅನ್ನು ಸಶಕ್ತಗೊಳಿಸಬೇಕು ಎಂದು ಪ್ರಚಾರ ಮಾಡಿದೆವು. ಮುಂದೆ ಮಾರ್ಕ್ಸ್ವಾದಿ ಪಕ್ಷದ ಅನುಯಾಯಿಯಾಗಿದ್ದ ಮಿನ್ನಿ ರಾಜನ್, ಕಾಂಗ್ರೆಸ್ಸಿನ ಅನುಯಾಯಿ ಕೋಡಾಯಿ ಗೋಪಾಲ ಮುಂತಾದವರು ಆರ್.ಎಸ್‌.ಎಸ್‌ ಗೆ ಸೇರಿದರು. ಆರೆಸ್ಸೆಸ್ ನ ಜಿಲ್ಲಾ ಜವಾಬ್ದಾರಿಯನ್ನು ಹೊತ್ತಿದ್ದ ಚಂದ್ರಶೇಖರಣ್ಣ, ರಜಿತ್, ಮೋಹನ ಮುಂತಾದವರು ಯಜಮಾನರನ್ನು ಶಾಖೆಗೆ ಕರೆಸಿ ಕೊಂಡರು. ಎಲ್ಲರೂ ಅವರಿಗೆ ಪ್ರಣಾಂ ಅರ್ಪಿಸಿದೆವು. ಅಂದಿನ ಶಾಖೆಯು ಮುಗಿಯುವ ಮೊದಲೇ ಆಯಿತ್ತರ ಮುತ್ತಪ್ಪನ ಮಠಪುರವನ್ನು ಮತ್ತು ಬೇರೆ ಹತ್ತು ಸೆಂಟ್ಸ್ ಜಮೀನನ್ನು ಆರ್‌ಎಸ್‌ಎಸ್‌ ಗೆ ನೀಡಲು ಯಜಮಾನರು ಒಪ್ಪಿದರು ಅಥವ ಒಪ್ಪುವಂತೆ ಮಾಡಿದರು ಎನ್ನಬಹುದು. ಇದು ಸಾಮಾನ್ಯವಾಗಿ ಶಾಂತವಾಗಿರುವ ಪ್ರದೇಶಗಳಲ್ಲಿ ಅನಾರೋಗ್ಯಕರವಾದ ವಾತಾವರಣ ಸೃಷ್ಟಿಸಿ ಸಂಘರ್ಷವನ್ನು ಬೆಳೆಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಆರ್‌ಎಸ್‌ಎಸ್ ತಂತ್ರಗಾರಿಕೆಯ ಮಾದರಿ. ರೈತ ಹೋರಾಟವು ನ್ಯಾಯಾಲಯದ ಮೂಲಕ ತೀರ್ಪು ಪಡೆದು ರೈತರಿಗೆ ಭೂಮಿ ಹಂಚಿಕೆ ಮಾಡಿ ಒಡೆತನವನ್ನು ನೀಡಿ ತನ್ನ ಗುರಿಯನ್ನು
ನೆರವೇರಿಸಿಕೊಳ್ಳುವಷ್ಟರಲ್ಲಿ, ನಾವು ನಮ್ಮ ಸಂಘದ ಗುರಿಯನ್ನು ನೆರವೇರಿಸಿಕೊಂಡಿದ್ದೆವು. ಮುಂದೆ ಯಜಮಾನರು (ತಂಬುರಾನ್) ನೀಡಿದ ಹತ್ತು ಸೆಂಟ್ಸ್ ಜಾಗದಲ್ಲಿ ‘ಹೆಡ್ಗೇವಾರ್’ ಸ್ಮಾರಕ ಮಂದಿರವನ್ನು ನಿರ್ಮಿಸಲಾಯಿತು. ಅದರ ನಂತರ ಬಯಲು ಭಾಗದಲ್ಲಿದ್ದ ಶಾಖೆಯನ್ನು, ಮುತ್ತಪ್ಪನ ಮಠಪುರದ ಸಮೀಪಕ್ಕೆ ಬದಲಾಯಿಸಲಾಯಿತು. ಹಾಗೆಯೇ ಸಾರ್ವಜನಿಕ ಸಮಿತಿ ವತಿಯಿಂದ ನಡೆಯುತ್ತಿದ್ದ ಮಠಪುರವನ್ನು ಬಹಳಷ್ಟು ಮಂದಿಯ ವಿರೋಧದ ನಡುವೆಯೂ ಸಂಘ ಪರಿವಾರದ ಹಿಡಿತದಲ್ಲಿದ್ದ ದೇವಾಲಯ ಸಂರಕ್ಷಣಾ ಸಮಿತಿಗೆ ನೀಡುವಂತೆ ಮಾಡಲಾಯಿತು.

Is this your new site? Log in to activate admin features and dismiss this message
ಲಾಗಿನ್