ಬಿಪಿಎಲ್ ಕಾರ್ಡ್: ಬದಲಾಗಬೇಕಿದೆ ‘ಬಡತನ ರೇಖೆ’ಯ ಮಾನದಂಡ

7.76 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲು ಆಹಾರ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಒಟ್ಟು 13 ಲಕ್ಷ ಅನರ್ಹ ಬಿಪಿಎಲ್ ಕಾರ್ಡುಗಳಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈಗಾಗಲೇ 3,65,614 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಬಿಪಿಎಲ್ ಕಾರ್ಡ್ ಪಡೆಯಲು ಸರ್ಕಾರ ನಿಗದಿಪಡಿಸಿರುವ ಮಾನದಂಡವೆಂದರೆ, ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿ. ಇಷ್ಟು ಆದಾಯ ಇರುವ ಕುಟುಂಬದವರು ಬಡವರಲ್ಲ! ಹೀಗಾಗಿ ಇಂತಹ ಕುಟುಂಬಗಳು ಬಿಪಿಎಲ್  ಕಾರ್ಡ್  ಪಡೆಯಲು  ಅರ್ಹರಲ್ಲ!! ಇವೆಲ್ಲವೂ ಪಡಿತರ ವ್ಯವಸ್ಥೆಯನ್ನೇ ಇಲ್ಲವಾಗಿಸುವ ತಂತ್ರಗಳಾಗಿವೆ. ಬಡತನ ರೇಖೆಯ ಇಂದಿನ ಮಾನದಂಡ ಬದಲಾಗಬೇಕು ಎಂದು ಒತ್ತಾಯಿಸುವ ಮೂಲಕ ನಿಜವಾದ ಬಡವರು ಬಿಪಿಎಲ್  ಕಾರ್ಡ್  ಉಳಿಸಿಕೊಳ್ಳಬೇಕಿದೆ.

ಕರ್ನಾಟಕದಲ್ಲಿ ಅನರ್ಹ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ ಕುಟುಂಬ) ಕಾರ್ಡ್ ಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಮತ್ತೊಮ್ಮೆ ನಿರ್ದೇಶನ ನೀಡಿದೆ. ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 2025ರ ಸೆಪ್ಟೆಂಬರ್ 10ರಂದು ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ.  ಈಗಾಗಲೇ ಗುರುತಿಸಲಾಗಿರುವ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಪೈಕಿ 3,65,614 ಪಡಿತರ ಚೀಟಿಗಳನ್ನು ರದ್ದು ಅಥವಾ ಎಪಿಎಲ್ ಗೆ ಬದಲಾವಣೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಗಿದೆ. ವಾರ್ಷಿಕವಾಗಿ 1.20,000 ರೂಪಾಯಿಗಿಂತ ಹೆಚ್ಚು ಆದಾಯ ಇದ್ದು ಬಿಪಿಎಲ್ ಕಾರ್ಡ್ ಪಡೆದಿರುವವರಿಗೆ ತಿಳುವಳಿಕೆ ನೋಟಿಸ್ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್ ಪಡೆಯಲು 1 ಲಕ್ಷದ 20 ಸಾವಿರ ರೂಪಾಯಿಗಳ ವಾರ್ಷಿಕ ಆದಾಯ ಮಿತಿ ನಿಗದಿಮಾಡಿದೆ. ಆ ಗೈಡ್​ ಲೈನ್ಸ್​ ಪ್ರಕಾರ ನಾವು ಮಾಡುತ್ತೇವೆ ಎಂದು ಆಹಾರ, ನಾಗರಿಕ ಸರಭರಾಜು ಇಲಾಖೆ ಹೇಳಿದೆ.

ಬಿಪಿಎಲ್  ಕಾರ್ಡ್ ಪಡೆಯಲು ಕೇಂದ್ರ ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ‘ಬಿಪಿಎಲ್’  ಎಂದರೆ, ಬಡತನ ರೇಖೆಗಿಂತ ಕೆಳಗಿನವರು (Below Poverty Line) ಎಂದರ್ಥ. ಅಂದರೆ, ಬಡತನ ರೇಖೆಗಿಂತ ಮೇಲಿನ ಕುಟುಂಬಗಳು ಬಿಪಿಎಲ್  ಕಾರ್ಡ್ ಪಡೆಯಲು ಅರ್ಹರಲ್ಲ. ಈ ಮಾನದಂಡದಂತೆ, ಕುಟುಂಬದ ವಾರ್ಷಿಕ ಆದಾಯ 1,20,000 ರೂ. ಗಿಂತ ಕಡಿಮೆ ಇರುವವರು ಬಡತನ ರೇಖೆಗಿಂತ ಕೆಳಗಿನವರು. ಇವರು ಮಾತ್ರವೇ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರು. ಅಂದರೆ, ಬಿಪಿಎಲ್  ಕುಟುಂಬದ ತಿಂಗಳ ಆದಾಯ 10,000 ರೂಪಾಯಿ, ಐದು ಸದಸ್ಯರ ಕುಟುಂಬದಲ್ಲಿನ ಒಬ್ಬ ವ್ಯಕ್ತಿಗೆ ಸರಾಸರಿ 66 ರೂಪಾಯಿ. ಇಂದಿನ ದುಬಾರಿ ಜೀವನ ವೆಚ್ಚದಲ್ಲಿ ಇಷ್ಟು ಕಡಿಮೆ ಆದಾಯದಲ್ಲಿ ವ್ಯಕ್ತಿಯೊಬ್ಬ ಜೀವನ ಸಾಗಿಸಲು ಸಾಧ್ಯವೇ?

ಫಲಾನುಭವಿಗಳಿಗೆ ಕಳುಹಿಸುವ ನೋಟಿಸ್ ಈ ರೀತಿ ಇದೆ

“… ವಾಸಿಯಾದ ನೀವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಪಡಿತರ ಚೀಟಿ ಸಂಖ್ಯೆ “_” ನಿಮ್ಮ ಪಡಿತರ ಚೀಟಿಯಲ್ಲಿನ ಸದಸ್ಯರಾದ “__” ಸದರಿಯವರಿಗೆ ಸಂಬಂಧಿಸಿದಂತೆ,… ತಂತ್ರಾಂಶದಲ್ಲಿ ನಮೂದಾಗಿರುವ ಸಿಬಿಡಿಟಿ (Central Board of Direct Taxes) ವರದಿಯಲ್ಲಿ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಕಂಡುಬಂದಿದೆ. ಸರ್ಕಾರದ ಮಾನದಂಡಗಳ ಅನುಸಾರ ಬಿಪಿಎಲ್ ಪಡಿತರ ಚೀಟಿ ಹೊಂದಲು ಅನರ್ಹರಾಗಿದ್ದು, ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿಯಾಗಿ ಪರಿವರ್ತಿಸಬೇಕು. ಈ ನೋಟೀಸ್ ಗೆ ಆಕ್ಷೇಪಣೆ ಇದ್ದರೆ, ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪ್ರತಿಯೊಂದಿಗೆ ಏಳು ದಿನಗಳ ಒಳಗೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದರೆ ‘ಕರ್ನಾಟಕ ಪಡಿತರ ಚೀಟಿಗಳ ಅನಧಿಕೃತ ಸ್ವಾಧೀನ ತಡೆಗಟ್ಟುವಿಕೆ ಆದೇಶ-1977’ ಹಾಗೂ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಈ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಇವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ!!

ಬಿ.ಪಿ.ಎಲ್ ಪಡಿತರ ಚೀಟಿದಾರರನ್ನು ಗುರುತಿಸಲು ಸರ್ಕಾರದ ಆದೇಶ ಸಂಖ್ಯೆ: ಆನಾಸ/80/ಡಿ.ಆರ್.ಎ./2012, ದಿನಾಂಕ 24.08.2012ರನ್ವಯ 14 ಅಂಶಗಳ ಮಾನದಂಡವನ್ನು ನಿಗಧಿಪಡಿಸಲಾಗಿತ್ತು. ಸದರಿ ಮಾನದಂಗಳನ್ನು ಸಡಿಲಗೊಳಿಸಿ ಸರ್ಕಾರದ ಆದೇಶ ಸಂಖ್ಯೆ: ಆನಾಸ/116/ಡಿ.ಆರ್.ಎ./2015, ದಿನಾಂಕ: 25.03.2017 ರಲ್ಲಿ 04 ಅಂಶಗಳ ಮಾನದಂಡಗಳನ್ನು ಕೆಳಕಂಡಂತೆ ನಿಗಧಿಪಡಿಸಲಾಗಿರುತ್ತದೆ.

ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್/ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.

ಗ್ರಾಮೀಣ ಪ್ರದೇಶಗಳಲ್ಲಿ 03 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.

ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು.

ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು.

ಮೇಲಿನಂತೆ ಅರ್ಹರಿರುವ ಕುಟುಂಬಗಳು ಪಿ.ಹೆಚ್.ಹೆಚ್. (ಆದ್ಯತಾ ಕುಟುಂಬ) ಪಡಿತರ ಚೀಟಿ ಪಡೆಯಲು ಅನರ್ಹರು ಎಂದು “ಹೊರಗಿಡುವ ಮಾನದಂಡವನ್ನು (Exclusion Criteria)” ಸರ್ಕಾರವು ನಿಗಧಿಗೊಳಿಸಿತು. (ಕರ್ನಾಟಕ ಸರ್ಕಾರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ https://ahara.karnataka.gov.in ನಿಂದ ಮಾಹಿತಿ)

ವಿಶ್ವಬ್ಯಾಂಕ್ ನ ಮಾನದಂಡದಂತೆ 4,68,000 ರೂಪಾಯಿ

ವಿಶ್ವ ಬ್ಯಾಂಕಿನ ಬಡತನ ರೇಖೆಗಳನ್ನು ‘ಖರೀದಿ ಸಾಮರ್ಥ್ಯದ ಸಮಾನತೆ’ (PPP- purchasing power parity) ಲೆಕ್ಕಾಚಾರಗಳ ಆಧಾರದ ಮೇಲೆ ನವೀಕರಿಸಲಾಗುತ್ತದೆ. ಕಡಿಮೆ ಆದಾಯದ ದೇಶಗಳಿಗೆ ಅಂತರರಾಷ್ಟ್ರೀಯ ಬಡತನ ರೇಖೆಯನ್ನು 2025ರಲ್ಲಿ, (2021ರ ಪಿಪಿಪಿ ಆಧಾರದಲ್ಲಿ) ಪ್ರತಿ ವ್ಯಕ್ತಿಗೆ ದಿನಕ್ಕೆ 3 ಡಾಲರ್ ನಿಗದಿಮಾಡಿದೆ. ನಮ್ಮ ಇಂದಿನ (ಸೆಪ್ಟೆಂಬರ್ 2025ರಲ್ಲಿ) ರೂಪಾಯಿ ಮೌಲ್ಯದ ಲೆಕ್ಕದಲ್ಲಿ ದಿನವೊಂದಕ್ಕೆ ಅಂದಾಜು 260 ರೂಪಾಯಿ ಆಗುತ್ತದೆ. ಇದು ತಿಂಗಳಿಗೆ 7,800 ರೂ. ವರ್ಷಕ್ಕೆ 93,600 ರೂ. ಆಗುತ್ತದೆ. ಇದಕ್ಕಿಂತ ಕಡಿಮೆ ಆದಾಯ ಇರುವ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿನವರ ಸಾಲಿಗೆ ಸೇರುತ್ತಾರೆ. ಈ ಲೆಕ್ಕದಲ್ಲಿ ಐದು ಸದಸ್ಯರಿರುವ ಕುಟುಂಬದ ಒಟ್ಟು ಆದಾಯ ಭಾರತದಲ್ಲಿ ರೂ. 4,68,000. ಇದು ವಿಶ್ವ ಬ್ಯಾಂಕ್ ಪ್ರಕಾರ ಬಡತನ ರೇಖೆಯನ್ನು ಅಳೆಯುವ ಮಾನದಂಡವಾಗಬೇಕು.

2025ರಲ್ಲಿ ಕಡಿಮೆ-ಮಧ್ಯಮ-ಆದಾಯದ ದೇಶಗಳಿಗೆ 4.20 ಡಾಲರ್ ಮತ್ತು ಮೇಲ್-ಮಧ್ಯಮ-ಆದಾಯದ ದೇಶಗಳಿಗೆ 8.30 ಡಾಲರ್ ನಿಗದಿಮಾಡಲಾಗಿದೆ. ಭಾರತ ದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿದೆ ಎಂದು ಹೇಳಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಭಾರತ ಯಾವ ಆದಾಯದ ಗುಂಪಿಗೆ ಸೇರುತ್ತದೆ ಮತ್ತು ಬಡತನ ರೇಖೆಯನ್ನು ಅಳೆಯಲು ವಿಶ್ವಬ್ಯಾಂಕಿನ ಯಾವ ಮಾನದಂಡವನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡಬೇಕು.

ವಿಶ್ವ ಬ್ಯಾಂಕ್ 1990ರಲ್ಲಿ ಒಂದು ಡಾಲರ್, 2001ರಲ್ಲಿ 1.08 ಡಾಲರ್, 2008ರಲ್ಲಿ 1.25 ಡಾಲರ್, 2015ರಲ್ಲಿ 1.90 ಡಾಲರ್, 2022ರಲ್ಲಿ (2017ರ ಪಿಪಿಪಿ ಆಧಾರದಲ್ಲಿ) 2.15 ಡಾಲರ್ ನಿಗದಿ ಮಾಡಿತ್ತು. ಅಂದರೆ, 2015ರ ಡಾಲರ್ ಎದುರಿನ ರೂಪಾಯಿ ಮೌಲ್ಯ 66. ಅಂದಿನ ಲೆಕ್ಕದಲ್ಲಿ ದಿನವೊಂದರಲ್ಲಿ 125 ರೂ.ಗಳಿಗಿಂತ ಕಡಿಮೆ ಆದಾಯ ಇರುವ ವ್ಯಕ್ತಿ ಬಡತನ ರೇಖೆಗಿಂತ ಕೆಳಗಿನವರು ಎಂದಾಗುತ್ತದೆ. ತಿಂಗಳಿಗೆ ರೂ. 3,760, ವರ್ಷಕ್ಕೆ ರೂ. 45,000. ಐದು ಸದಸ್ಯರ ಕುಟುಂಬಕ್ಕೆ 2,25,000 ರೂ. 2015 ರಲ್ಲಿ ಇದಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನವರು ಎಂದಾಗುತ್ತದೆ.

 2009ರಲ್ಲಿ 26 ರೂ. ಆದಾಯ ನಿಗದಿಪಡಿಸಿದ ತೆಂಡೂಲ್ಕರ್ ಸಮಿತಿ!

2005ರ ಡಿಸೆಂಬರ್‌  ನಲ್ಲಿ ಯೋಜನಾ ಆಯೋಗವು ಬಡತನದ ಅಂದಾಜಿನ ವಿಧಾನವನ್ನು ಪರಿಶೀಲಿಸಲು ಮತ್ತು ಹಿಂದಿನ ವಿಧಾನಗಳ ನ್ಯೂನತೆಗಳನ್ನು ಪರಿಹರಿಸಲು ಯೋಜನಾ ಆಯೋಗದಿಂದ ಪ್ರೊ. ಸುರೇಶ್  ತೆಂಡೂಲ್ಕರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ನಿರ್ಧರಿಸಿದ ಬಡತನ ರೇಖೆಯ ಮಾನದಂಡದಂತೆ, 2009ರಲ್ಲಿ ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿಗೆ ತಿಂಗಳಿಗೆ  ರೂ. 816. ಅಂದರೆ, ದಿನಕ್ಕೆ 26 ರೂ.ಗಿಂತ ಹೆಚ್ಚು ಆದಾಯ ಇದ್ದರೆ ಆ ವ್ಯಕ್ತಿ ಬಡವನಲ್ಲ! ಅದೇ ರೀತಿ ನಗರಗಳಲ್ಲಿ ವಾಸಿಸುವ ಒಬ್ಬ ವ್ಯಕ್ತಿಗೆ ತಿಂಗಳಿಗೆ 1000 ರೂಪಾಯಿ. ಅಂದರೆ,  ದಿನಕ್ಕೆ 32 ರೂ.ಗಿಂತ ಹೆಚ್ಚು ಆದಾಯ ಇದ್ದರೆ ಆ ವ್ಯಕ್ತಿ ಬಡವನಲ್ಲ! ಐದು ಸದಸ್ಯರ ಗ್ರಾಮೀಣ ಪ್ರದೇಶದ ಒಂದು ಕುಟುಂಬ ತಿಂಗಳಿಗೆ 4,080 ರೂ.ಗಿಂತ ಹೆಚ್ಚು ಹಾಗೂ ನಗರ ಪ್ರದೇಶದ ಒಂದು ಕುಟುಂಬ 5,000 ರೂ.ಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದರೆ ಅಂತಹ ಕುಟುಂಬ ಬಡತನ ರೇಖೆಯ ಕೆಳಗೆ ಬರುವುದಿಲ್ಲ. ಇದರರ್ಥ, ಈ ಕುಟುಂಬಗಳು ಬಿಪಿಎಲ್ ಕುಟುಂಬಗಳಲ್ಲ! ಇಂದಿನ ಬಡತನ ರೇಖೆಯು ತೆಂಡೂಲ್ಕರ್ ನೇತೃತ್ವದ ತಜ್ಞರ ಸಮಿತಿಯು ಡಿಸೆಂಬರ್ 2009ರಲ್ಲಿ ನೀಡಿದ ಮಾನದಂಡಗಳನ್ನೇ ಆಧರಿಸಿದೆ.

33 ರೂ.ಗಳಿಗೆ ಹೆಚ್ಚಿಸಿದ ಡಾ. ಸಿ.ರಂಗರಾಜನ್ ಸಮಿತಿ

ತೆಂಡೂಲ್ಕರ್ ಸಮಿತಿ ಮಾಡಿದ ಮಾನದಂಡದ ಬಗ್ಗೆ ವ್ಯಾಪಕವಾದ ಟೀಕೆಗಳು ಕೇಳಿಬಂದವು. ಗ್ರಾಮೀಣ ಭಾಗದಲ್ಲಿ ವಾಸಿಸುವ ಒಬ್ಬ ಬಡ ವ್ಯಕ್ತಿ ದಿನಕ್ಕೆ ಕೇವಲ 33 ರೂಪಾಯಿಗಳಲ್ಲಿ ಜೀವನ ಸಾಗಿಸಬಹುದು ಎಂಬುದೇ ನೋವಿನ ಸಂಗತಿ. ನಂತರ ಕೇಂದ್ರ ಸರ್ಕಾರವು ಈ ಮಾನದಂಡವನ್ನು ಮರುಪರಿಶೀಲಿಸಲು 2012ರ ಜೂನ್ ನಲ್ಲಿ ಡಾ. ಸಿ.ರಂಗರಾಜನ್ ನೇತೃತ್ವದ ಮತ್ತೊಂದು ತಜ್ಞರ ಸಮಿತಿಯನ್ನು ರಚಿಸಿತು. ಜೂನ್ 30, 2014ರಂದು ತನ್ನ ವರದಿಯನ್ನು ಸಲ್ಲಿಸಿದ ರಂಗರಾಜನ್ ಸಮಿತಿಯು, ವ್ಯಕ್ತಿಯೊಬ್ಬರಿಗೆ ತಿಂಗಳಿಗೆ ನಗರ ಪ್ರದೇಶಗಳಿಗೆ ರೂ. 1,407 (ದಿನಕ್ಕೆ ರೂ.47) ಮತ್ತು ಗ್ರಾಮೀಣ ಪ್ರದೇಶಗಳಿಗೆ ರೂ. 972 (ದಿನಕ್ಕೆ ರೂ.33) ಮಿತಿಯನ್ನು ಸೂಚಿಸಿತು. ಐದು ಸದಸ್ಯರಿರುವ ಕುಟುಂಬದ ತಿಂಗಳ ಆದಾಯ ಗ್ರಾಮೀಣ ಪ್ರದೇಶದಲ್ಲಿ 4,860 ರೂಪಾಯಿ, ನಗರ ಪ್ರದೇಶಗಳಲ್ಲಿ 7,035 ರೂಪಾಯಿಗಳನ್ನು ಬಡತನ ರೇಖೆಗೆ ನಿಗದಿಪಡಿಸಿತು. ಈ ಲೆಕ್ಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ ಆದಾಯ 58,320 ರೂ.ಗಳು, ನಗರ ಪ್ರದೇಶದಲ್ಲಿ 84,420 ರೂಗಳಿಗಿಂತ ಕಡಿಮೆ ಆದಾಯ ಇರುವ ಕುಟುಂಬಗಳು ಮಾತ್ರ ಬಡವರು. ಆದರೆ ರಂಗರಾಜನ್ ಸಮಿತಿ ವರದಿಯನ್ನು ಸರ್ಕಾರ ಇದುವರೆಗೂ ಅಂಗೀಕರಿಸಿಲ್ಲ.

2155 ಕ್ಯಾಲೋರಿಗಳ ಅಹಾರದ ಅಗತ್ಯವಿದೆ

ಬಡತನ ರೇಖೆಯು ಸಾಕಷ್ಟು ಪೋಷಣೆ, ಬಟ್ಟೆ, ಮನೆ ಬಾಡಿಗೆ, ಸಾರಿಗೆ ಮತ್ತು ಶಿಕ್ಷಣದ ಕೆಲವು ಪ್ರಾಮಾಣಿತ ಮಟ್ಟಗಳನ್ನು ಆಧರಿಸಿರಬೇಕು ಮತ್ತು ಆಹಾರೇತರ ವೆಚ್ಚಗಳ ನಡವಳಿಕೆಯಿಂದ ನಿರ್ಧರಿಸಲ್ಪಟ್ಟ ಮಟ್ಟವನ್ನು ಆಧರಿಸಿರಬೇಕು ಎಂದು ಸಿ.ರಂಗರಾಜನ್ ಸಮಿತಿಯ ವರದಿ ಹೇಳುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಾನದಂಡಗಳ ಆಧಾರದ ಮೇಲೆ ವ್ಯಕ್ತಿಗೆ ಬೇಕಾದ ಕ್ಯಾಲೊರಿಗಳು, ಪ್ರೋಟೀನ್ ಗಳು ಮತ್ತು ಕೊಬ್ಬಿನ ಸರಾಸರಿ ಅಗತ್ಯಗಳನ್ನು ಲೆಕ್ಕಾಚಾರ ಮಾಡಿದೆ. ನಗರ ಪ್ರದೇಶಗಳಲ್ಲಿ ದಿನಕ್ಕೆ 2090 ಕ್ಯಾಲೋರಿಗಳು ಮತ್ತು ಹಳ್ಳಿಗಳಲ್ಲಿ ದಿನಕ್ಕೆ 2155 ಕ್ಯಾಲೋರಿಗಳ ಅಹಾರದ ಅಗತ್ಯವಿದೆ ಎಂದು ಆ ಸಮಿತಿ ಹೇಳಿದೆ.  

ಹಸಿವಿನ ಸೂಚ್ಯಂಕದಲ್ಲಿ ಭಾರತ 105ನೇ ಸ್ಥಾನ

ವಿಶ್ವಸಂಸ್ಥೆಯ ವರದಿಯ ಪ್ರಕಾರ, ದಕ್ಷಿಣ ಏಷ್ಯಾದ ದೇಶಗಳಿಗೆ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ಭಾರತದಲ್ಲಿ ಶೇಕಡಾ 74ರಷ್ಟು ಜನರಿಗೆ ಪೌಷ್ಟಿಕ ಆಹಾರ ಲಭ್ಯವಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ಅವಧಿಯ 5ನೇ ಸಮೀಕ್ಷೆಯ ಪ್ರಕಾರ, ಮಹಿಳೆಯರಲ್ಲಿ (15 ರಿಂದ 49 ವರ್ಷಗಳ ನಡುವೆ) ರಕ್ತಹೀನತೆಯ ಪ್ರಮಾಣವು 2015-16 ಕ್ಕೆ ಹೋಲಿಸಿದರೆ 2019-21 ರಲ್ಲಿ ಶೇ. 53ರಿಂದ ಶೇ. 57ಕ್ಕೆ ಹೆಚ್ಚಾಗಿದೆ.

‘ಜಾಗತಿಕ ಹಸಿವು ಸೂಚ್ಯಂಕ’ 2024 ಭಾರತವನ್ನು ‘ಗಂಭೀರ’ ವರ್ಗದ (‘serious’ category) ಅಡಿಯಲ್ಲಿ ಶ್ರೇಣೀಕರಿಸಿದೆ. 27.3 ಅಂಕಗಳೊಂದಿಗೆ, ಭಾರತವು 127 ದೇಶಗಳ ಪಟ್ಟಿಯಲ್ಲಿ 105ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಜೊತೆಗೆ “ಗಂಭೀರ” ವರ್ಗಕ್ಕೆ ಸೇರುವ 42 ದೇಶಗಳಲ್ಲಿ ಭಾರತವೂ ಒಂದು. ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾದಂತಹ ಇತರ ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳು “ಮಧ್ಯಮ” ವರ್ಗದ ಅಡಿಯಲ್ಲಿವೆ.

ಎಂದಿನಂತೆ, ಹಸಿವು ಸೂಚ್ಯಂಕವನ್ನು ಲೆಕ್ಕಾಚಾರ ಮಾಡುವ ವಿಧಾನ ಸರಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಆಕ್ಷೇಪಿಸುತ್ತಿದೆ. ತಲಾ ಆದಾಯ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಹೇಳುತ್ತಿರುವ ನಮ್ಮ ದೇಶ ಹಸಿವಿನ ಸೂಚ್ಯಂಕದಲ್ಲಿ ಏಕೆ ಇಳಿಯಬೇಕು? ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿಕೊಳ್ಳುವ ಸರ್ಕಾರ, ಹಸಿವಿನ ಸೂಚ್ಯಂಕದಲ್ಲಿ ನಮ್ಮ ದೇಶದ ಸ್ಥಾನ ಏಕೆ ಕೆಳಗಿಳಿಯಿತು ಎಂಬುದನ್ನು ವಿವರಿಸಬಹುದೇ?

ಪಡಿತರ ವ್ಯವಸ್ಥೆ ಇಲ್ಲವಾಗಿಸುವ ತಂತ್ರಗಳಿವು

ದೇಶದಲ್ಲಿ1990ರ ದಶಕದಲ್ಲಿ ಮುಕ್ತ ಆರ್ಥಿಕ ನೀತಿಗಳು ಜಾರಿಯಾದ ನಂತರ, ಸರಕು ಮತ್ತು ಸೇವೆ ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡುವ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರದ ಪಾತ್ರ ಇದರಲ್ಲಿ ಇರಬಾರದು, ಖಾಸಗಿಯವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂಬುದು ಆಳುವವರು ವಾದ. ಅಂತರರಾಷ್ಟ್ರೀಯ ಹಣಕಾಸು ಸಂಸ‍್ಥೆಯ (ಐಎಂಎಫ್) ಷರತ್ತುಗಳ ಪ್ರಕಾರ, ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಬೇಕು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವೆಚ್ಚಮಾಡುವ ಸಬ್ಸಿಡಿಗಳು ಇರಬಾರದು. ಐಎಂಎಫ್ ನ ಇಂತಹ ಷರತ್ತುಗಳು ಸಂಪೂರ್ಣ ಜಾರಿಗೆ ಬಂದರೆ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಇರುವುದಿಲ್ಲ, ಸರ್ಕಾರದ ಖರೀದಿ ಬಾಧ್ಯತೆ ಇರುವುದಿಲ್ಲ. ಮಿತವ್ಯಯದ ಭಾಗವಾಗಿ ರಸಗೊಬ್ಬರ, ವಿದ್ಯುತ್ ಇತ್ಯಾದಿ ಸಬ್ಸಿಡಿಗಳನ್ನು ರದ್ದುಗೊಳಿಸಬೇಕಾಗುತ್ತದೆ.

ಇದರ ಭಾಗವಾಗಿಯೇ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಇಲ್ಲವಾಗಿಸಲಾಯ್ತು. ಪೆಟ್ರೋಲಿಯಂ ಪದಾರ್ಥಗಳ ಬೆಲೆ ನಿಗದಿಯ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ಹಿಂಪಡೆದು, ತೈಲ ಸಂಸ್ಥೆಗಳೇ ಬೆಲೆ ನಿಗದಿಮಾಡಲು ಅವಕಾಶ ಮಾಡಿಕೊಡಲಾಯಿತು. ಪಡಿತರ ವ್ಯವಸ್ಥೆಯನ್ನು ನಾಶಮಾಡಲು ಕೇಂದ್ರ ಸರ್ಕಾರ ಹಲವು ರೀತಿಯಲ್ಲಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಬಡತನ ರೇಖೆಯನ್ನು ಕೆಳಗೆ ತಳ್ಳುವ ಮೂಲಕ, ಪಡಿತರ ಚೀಟಿಗೆ ಆದಾರ್ ಜೋಡಣೆ ಮೂಲಕ, ಬಯೋಮೆಟ್ರಿಕ್  ವ್ಯವಸ್ಥೆ ತರುವ ಮೂಲಕ ಕೋಟ್ಯಾಂತರ ಬಡ ಕುಟುಂಬಗಳನ್ನು ಪಡಿತರದಿಂದ ವಂಚಿತರನ್ನಾಗಿಸಿದೆ. ಪಡಿತರ ಪದಾರ್ಥಗಳ ಬದಲಾಗಿ ಅದರ ಮೌಲ್ಯದ ಹಣವನ್ನು ನೇರನಗದು ಯೋಜನೆಯ ಮೂಲಕ ಸಂದಾಯ ಮಾಡುವ ಯೋಜನೆಯ ಜಾರಿಗೆ ಸರ್ಕಾರ ಈಗ ಮುಂದಾಗಿದೆ. ಇದು ಕೇಂದ್ರಾಡಳಿತ ಪ್ರದೇಶಗಳಾದ ಪಾಂಡಿಚೇರಿ, ಲಕ್ಷದ್ವೀಪ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಾಗಶಃ ಜಾರಿಗೆ ಬಂದಿದೆ. ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿದ್ದು, ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಬೆಂಬಲ ಬೆಲೆ ನಿಗದಿ ಮಾಡದಿರುವುದು, ಸರ್ಕಾರದ ಆಹಾರ ಧಾನ್ಯಗಳ ಗೋದಾಮುಗಳನ್ನು (‍‍‍‍Food Corporation of India godown) ಖಾಸಗಿಯವರ ಬಳಕೆಗೆ ಅವಕಾಶ ಮಾಡಿಕೊಡಲು ಮುಂದಾಗಿರುವುದು ಇವೆಲ್ಲವೂ ಈ ತಂತ್ರದ ಭಾಗವೇ ಆಗಿವೆ.

ಬಡತನ ರೇಖೆಯ ಇಂದಿನ ಮಾನದಂಡವನ್ನು ಬದಲಾಯಿಸಬೇಕು ಎಂದು ಒತ್ತಾಯಿಸುವ ಮೂಲಕ ನಿಜವಾದ ಬಡವರು ಬಿಪಿಎಲ್  ಕಾರ್ಡ್  ಉಳಿಸಿಕೊಳ್ಳಬೇಕು. ಪಡಿತರ ವ್ಯವಸ್ಥೆಯ ಮೂಲಕ ಮತ್ತಷ್ಟು ಅಗತ್ಯ ವಸ್ತುಗಳನ್ನು ವಿತರಿಸಬೇಕು ಮತ್ತು ಪಡಿತರ ವ್ಯವಸ್ಥೆಯಲ್ಲಿ ನೇರನಗದು ಯೋಜನೆ ಇರಬಾರದು ಎಂದು ಒತ್ತಾಯಿಸಬೇಕು. ಇಷ್ಟು ಮಾತ್ರವಲ್ಲದೆ, ಪಡಿತರ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನವ ಉದಾರವಾದಿ ನೀತಿಗಳ ವಿರುದ್ದ ದ್ವನಿಎತ್ತಿ ಹೋರಾಡಬೇಕಿದೆ.

Is this your new site? Log in to activate admin features and dismiss this message
ಲಾಗಿನ್