ನ್ಯಾ. ನಾಗಮೋಹನದಾಸ್ ದಾಸ್ ಆಯೋಗದ ವರದಿಯಲ್ಲಿ ಬಹಿರಂಗ

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ತೀರ್ಮಾನದ ಆಧಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ನಾಗಮೋಹನದಾಸ್ ದಾಸ್ ಆಯೋಗವು ನೀಡಿದ ವರದಿಯನ್ನು ರಾಜ್ಯ ಸರ್ಕಾರ ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೊಳಿಸಲು ತೀರ್ಮಾನಿಸಿದೆ. ಈ ವರದಿಯಲ್ಲಿ ಪರಿಶಿಷ್ಟ ಜಾತಿಯ ಜನರ ಬದುಕಿಗೆ ಸಂಬಂಧಿಸಿ ಗಂಭೀರ ಚಿಂತನೆಗೆ ಒಳಪಡಿಸುವ ಅಂಶಗಳೂ ಇವೆ. ಭೂಮಿ ಮತ್ತು ವಸತಿ ಒಡೆತನಕ್ಕೆ ಸಂಬಂಧಿಸಿದ ಅಂಕಿ ಅಂಶಗಳೂ ಇವೆ. ಭರ್ತಿಮಾಡದೇ ಖಾಲಿ ಇರುವ ಸರಕಾರಿ ಹುದ್ದೆಗಳು, ಅನಕ್ಷರತೆ, ನಿರುದ್ಯೋಗ, ಕ್ಷೀಣಿಸುತ್ತಿರುವ ಮೀಸಲಾತಿ ಉದ್ಯೋಗಗಳ ಅವಕಾಶಗಳು… ಹೀಗೆ ಈ ಸಮುದಾಯ ಎದುರಿಸುತ್ತಿರುವ ಹಲವು ಅಂಶಗಳನ್ನು ವರದಿ ಗುರುತಿಸಿದೆ. ಈ ಅಂಶಗಳ ಕುರಿತು ವಿಮರ್ಶಿಸುವ ಸಣ್ಣದೊಂದು ಪ್ರಯತ್ನ ಇಲ್ಲಿದೆ.
ಪರಿಶಿಷ್ಟ ಜಾತಿ-ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರವು ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗವನ್ನು ರಚಿಸಿತ್ತು. ಈ ಆಯೋಗವು, 2025ರ ಆಗಸ್ಟ್ ಒಂದರಂದು ಸರಕಾರಕ್ಕೆ 332 ಪುಟಗಳ ತನ್ನ ವರದಿಯನ್ನು ಸಲ್ಲಿಸಿದೆ. ವರದಿಗೆ ಸಂಬಂಧಿಸಿದಂತೆ, ಆಗಸ್ಟ್ 19ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ಜಾತಿವಾರು ವರ್ಗೀಕರಣವನ್ನು ತುಸು ಪರಿಷ್ಕರಿಸಿ, ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ನಿರ್ಧರಿಸಲಾಗಿತ್ತು. ನ್ಯಾಯಮೂರ್ತಿ ನಾಗಮೋಹನದಾಸ್ ದಾಸ್ ಆಯೋಗವು ನೀಡಿದ ವರದಿಯನ್ನು ರಾಜ್ಯ ಸರ್ಕಾರ ಕೆಲವು ತಿದ್ದುಪಡಿಗಳೊಂದಿಗೆ ಜಾರಿಗೊಳಿಸಲು ತೀರ್ಮಾನಿಸಿದೆ. ಆಯೋಗವು ಪರಿಶಿಷ್ಟ ಜಾತಿಗಳನ್ನು ಎ, ಬಿ, ಸಿ, ಡಿ, ಇ ಎಂಬ 5 ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ಸರಕಾರ ಇದನ್ನು ಎ, ಬಿ, ಸಿ ಎಂದು 3 ಗುಂಪುಗಳನ್ನಾಗಿ ಮಾಡಿದೆ. ಎ ಗುಂಪಿಗೆ ಶೇ. 6 ಮತ್ತು ಬಿ ಗುಂಪಿಗೆ ಶೇ. 6 ಹಾಗೂ ಸಿ ಗುಂಪಿಗೆ ಶೇ. 5ರಂತೆ ಮೀಸಲು ನಿಗದಿ ಮಾಡಿದೆ.
ಆದರೆ, ಒಳವರ್ಗೀಕರಣ ಮತ್ತು ಒಳ ಮೀಸಲಾತಿಯಿಂದ ಪರಿಶಿಷ್ಟ ಜಾತಿ ಜನರ ಸಮಸ್ಯೆಗಳಿಗೆಲ್ಲಾ ಪರಿಹಾರ ದೊರಕಿದೆ ಎಂದು ಯಾರಾದರೂ ಭಾವಿಸಿದರೆ ಅವರಿಗೆ ನಿರಾಶೆ ಎದುರಾಗುತ್ತದೆ. ಹಾಗೆ ನೋಡಿದರೆ ಮೀಸಲಾತಿಯಿಂದ ಮಾತ್ರ ಸಾಮಾಜಿಕ ದಬ್ಬಾಳಿಕೆಯನ್ನು, ದಲಿತರ ಹಿಂದುಳಿದಿರುವಿಕೆಯ ಪರಿಸ್ಥಿತಿಯನ್ನು ಪರಿಹರಿಸಲಾಗದು ಎಂಬುದು ಎಲ್ಲರ ಅರಿವಿಗೆ ಬಂದಿರುವ ಸಂಗತಿ. ನಿಜವಾದ ಪರಿಹಾರವು ಹಿಂದುಳಿದಿರುವಿಕೆಗೆ ಕಾರಣವಾದ ಮೂಲ ಅಂಶಗಳನ್ನು ಪರಿಹರಿಸುವುದರಲ್ಲಿದೆ. ಇಂದಿಗೂ ದಲಿತರನ್ನು ತಳಮಟ್ಟದಲ್ಲಿ ಇರಿಸುವ ಭೂ ಸಂಬಂಧಗಳನ್ನು ಮುರಿಯಬೇಕು. ಭೂಮಿ ವಿತರಣೆ ನಡೆಯಬೇಕು.
ಭೂಮಿ ಒಡೆತನ
ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಪರಿಶಿಷ್ಟ ಜಾತಿ ಜನರ ಬದುಕಿಗೆ ಸಂಬಂಧಿಸಿದ ಇನ್ನಿತರೆ ಅಂಶಗಳನ್ನು ಗಮನಿಸಬೇಕಾಗಿದೆ. ವರದಿಯಲ್ಲಿ ಈ ರೀತಿ ಹೇಳಲಾಗಿದೆ: “ಒಂದು ಸಮುದಾಯದ ಆರ್ಥಿಕ ಸ್ಥಿತಿಗತಿಯನ್ನು ಅರಿತುಕೊಳ್ಳಲು ವರಮಾನ, ಉದ್ಯೋಗ, ಸ್ಥಿರಾಸ್ತಿ (ವಸತಿ) ಮುಂತಾದ ಸೂಚಿಗಳನ್ನು ಬಳಸಲಾಗುತ್ತದೆ. ಭೂಮಿಯು ಒಂದು ಆಸ್ತಿ ಮಾತ್ರವಲ್ಲ. ಅದು ಕುಟುಂಬವೊಂದರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನವನ್ನು ನಿರ್ಧರಿಸುವ ಒಂದು ಸಾಧನ.”
ಡಾ. ಬಿ.ಆರ್. ಅಂಬೇಡ್ಕರ್ ಬಹಳ ಹಿಂದೆಯೇ “ಭೂಮಿ ಕೇವಲ ಆರ್ಥಿಕ ಆಸ್ತಿಯಲ್ಲ, ಅದು ಸಾಮಾಜಿಕ ಸ್ಥಾನಮಾನ ಮತ್ತು ಘನತೆಯ ಗುರುತು” ಎಂದು ಒತ್ತಿ ಹೇಳಿದ್ದರು. ಕೃಷಿ ಪ್ರಧಾನ ಭಾರತದಲ್ಲಿ ಜೀವನೋಪಾಯ, ಆರ್ಥಿಕ ಚಲನಶೀಲತೆ ಮತ್ತು ಸಾಮಾಜಿಕ ಘನತೆಗೆ ಭೂಮಿ ಕೇಂದ್ರವಾಗಿರುವುದರಿಂದ ಪುನರ್ ವಿರಣೆಯ ಪ್ರಶ್ನೆಯನ್ನು ಪರಿಹರಿಸಲು ಈ ಪಥವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಪರಿಶಿಷ್ಟ ಜಾತಿಯ ಜನರಲ್ಲಿ ಭೂಮಿಯ ಒಡೆತನ ಹೊಂದಿರುವ ಭೂಮಿಯ ವಿಸ್ತರ್ಣ ತುಂಬಾ ಕಡಿಮೆಯಿದೆ. ರಾಜ್ಯದ ಒಟ್ಟಾರೆ ಪರಿಶಿಷ್ಟ ಜಾತಿ ಜನರ ಪೈಕಿ 9.73 ಲಕ್ಷ ಜನ ಭೂ ಹಿಡುವಳಿದಾರರಿದ್ದಾರೆ. ಇದರಲ್ಲಿ ಅತಿಸಣ್ಣ, ಸಣ್ಣ ಮತ್ತು ಅರೆ ಮಧ್ಯಮ ಹಿಡುವಳಿದಾರರು 9.43 ಲಕ್ಷ ಜನರಿದ್ದಾರೆ. ಇವರ ಬಳಿ 9.19 ಲಕ್ಷ ಹೆಕ್ಟೇರ್ ಭೂಮಿ ಇದೆ.
ನ್ಯಾ. ನಾಗಮೋಹನದಾಸ್ ಆವರ ಆಯೋಗ ಸಲ್ಲಿಸಿದ ವರದಿಯು, ಒಟ್ಟು 101 ಪರಿಶಿಷ್ಟ ಜಾತಿಗಳ ಅಂದಾಜು ಶೇ. 85ರಷ್ಟು ಕುಟುಂಬಗಳಿಗೆ ಸ್ವಂತ ಭೂಮಿ ಇಲ್ಲ ಎಂಬುದನ್ನು ಗುರುತಿಸಿದೆ. (2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ 6,10,95,297. ಪರಿಶಿಷ್ಟ ಜಾತಿ ಜನಸಂಖ್ಯೆ 1,04,74,992)
ಸುಮಾರು 14 ವರ್ಷಗಳ ನಂತರ ಇಂದು ನಡೆದಿರುವ ಸಮಗ್ರ ಸಮೀಕ್ಷೆಯಲ್ಲಿ ಈ 101 ಪರಿಶಿಷ್ಟ ಜಾತಿಗಳಲ್ಲಿ ಸ್ವಂತ ಭೂಮಿ ಹೊಂದಿದ ಕುಟುಂಬಗಳ ವಿವರ ಹೀಗಿದೆ:
- ಪರಿಶಿಷ್ಟ ಜನಸಂಖ್ಯೆಯ 11 ಜಾತಿಗಳಲ್ಲಿ ಶೇ. 90ರಷ್ಟು ಕುಟುಂಬಗಳು ಭೂಮಿ ಹೊಂದಿಲ್ಲ.
- 24 ಜಾತಿಗಳಲ್ಲಿ ಶೇ. 80ರಿಂದ ಶೇ. 89 ಕುಟುಂಬಗಳು ಭೂಮಿ ಹೊಂದಿಲ್ಲ.
- 17 ಜಾತಿಗಳಲ್ಲಿ ಶೇ. 70ರಿಂದ 79 ಕುಟುಂಬಗಳು ಭೂಮಿ ಹೊಂದಿಲ್ಲ.
- 19 ಜಾತಿಗಳಲ್ಲಿ ಶೇ. 60ರಿಂದ 69 ಕುಟುಂಬಗಳು ಭೂಮಿ ಹೊಂದಿಲ್ಲ.
- 21 ಜಾತಿಗಳಲ್ಲಿ ಶೇ. 50ರಿಂದ 59 ಕುಟುಂಬಗಳು ಭೂಮಿ ಹೊಂದಿಲ್ಲ.
- 9 ಜಾತಿಗಳಲ್ಲಿ ಶೇ. 49 ರಷ್ಟು ಕುಟುಂಬಗಳು ಭೂಮಿ ಹೊಂದಿಲ್ಲ.
ಪರಿಶಿಷ್ಟ ಜಾತಿಗಳ ಜನರಲ್ಲಿ ಭೂಮಿಯ ಒಡೆತನ ಹೊಂದಿರುವ ಭೂಮಿಯ ವಿಸ್ತರ್ಣ ತುಂಬಾ ಕಡಿಮೆಯಿದೆ. ಒಟ್ಟು 101 ಪರಿಶಿಷ್ಟ ಜಾತಿಗಳ ಕುಟುಂಬಗಳಲ್ಲಿ 0-5 ಎಕರೆ ವಿಸ್ತೀರ್ಣದ ಭೂಮಿಯನ್ನು ಹೊಂದಿರುವ ಕುಟುಂಬಗಳ ಸಂಖ್ಯೆ 26,77,726 (ಶೇ. 96.98). ಇದರಲ್ಲಿ ಭೂರಹಿತ ಕುಟುಂಬಗಳೂ ಸೇರಿವೆ ಎಂಬುದನ್ನು ಗಮನಿಸಿ. 5ರಿಂದ 15 ಎಕರೆ ಭೂಮಿ ಹೊಂದಿದ ಕುಟುಂಬಗಳ ಸಂಖ್ಯೆ 60,199 (ಶೇ. 2,18) ಮಾತ್ರ. 15 ಎಕರೆ ಮತ್ತು ಅದಕ್ಕಿಂತ ಅಧಿಕ ಭೂಮಿ ಹೊಂದಿದ ಮಧ್ಯಮ ಮತ್ತು ದೊಡ್ಡ ಹಿಡುವಳಿದಾರ ಕುಟುಂಬಗಳ ಸಂಖ್ಯೆ ಕೇವಲ 23,050 (ಶೇ. 0.84). ಇವರ ಬಳಿ ಒಟ್ಟು 1.89 ಲಕ್ಷ ಹೆಕ್ಟೇರ್ ಭೂಮಿ ಇದೆ.
ಈ ಹಿಡುವಳಿಗಳ ಆರ್ಥಿಕ ಸಾಮರ್ಥ್ಯ ಕಡಿಮೆ. ಈ ಹಿಡುವಳಿಗಳಲ್ಲಿ ಬಂಡವಾಳ ಹೂಡುವುದು, ಹೆಚ್ಚು ಆದಾಯ ಪಡೆಯುವುದು ಸಾಧ್ಯವಿಲ್ಲ. ಪರಿಶಿಷ್ಟ ಜಾತಿಯ ಅನೇಕ ಜಾತಿಗಳಿಗೆ ಭೂಮಿಯಿದ್ದರೂ ಅದರಿಂದ ಅವರಿಗೆ ಹೆಚ್ಚು ವರಮಾನ ದೊರೆಯುತ್ತಿಲ್ಲ. ಏಕೆಂದರೆ ಅವು ಆರ್ಥಿಕವಾಗಿ ಲಾಭದಾಯಕ ಹಿಡುವಳಿಗಳಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.
ಶೇ.21 ಕುಟುಂಬಗಳಿಗೆ ಸ್ವಂತ ವಾಸದ ಮನೆ ಇಲ್ಲ
ಸಮುದಾಯವೊಂದರ ಆರ್ಥಿಕ ಸ್ಥಿತಿಯನ್ನು ತಿಳಿಸುವ ಮತ್ತೊಂದು ಸೂಚಿ ಅಂದರೆ ಕುಟುಂಬಗಳು ಹೊಂದಿರುವ ವಾಸದ ಮನೆಗಳು. ವಾಸದ ಮನೆಗೆ ಸಂಬಂಧಿಸಿದ ಮಾಹಿತಿ ಪ್ರಕಾರ ಪರಿಶಿಷ್ಟ ಜಾತಿ ಕುಟುಂಬಗಳ ಸಂಖ್ಯೆ 27,25,585. ಈ ಕುಟುಂಬಗಳಲ್ಲಿ ವಾಸದ ಮನೆ ಹೊಂದಿದ ಕುಟುಂಬಗಳ ಸಂಖ್ಯೆ 25,35,748 (ಶೇ. 93.03). ಇವರು ವಾಸಿಸುವ ಎಲ್ಲಾ ಮನೆಗಳೂ ಅವರ ಸ್ವಂತ ಮನೆಗಳಲ್ಲ ಎಂಬುದನ್ನು ಗಮನಿಸಬೇಕು. ಇನ್ನು ವಾಸಕ್ಕೆ ಮನೆ ಇಲ್ಲದ ಕುಟುಂಬಗಳು 1,89,837 (ಶೇ. 6.97). ಪರಯಾನ್ ಪರಯ್ಯಾ, ಆಡಿಯ ಜಾತಿಗಳಲ್ಲಿನ ಶೇ. 40ಕ್ಕೂ ಹೆಚ್ಚಿನ ಕುಟುಂಬಗಳಿಗೆ ವಾಸದ ಮನೆಯಿಲ್ಲ. ಒಟ್ಟು ಪರಿಶಿಷ್ಟ ಜಾತಿ ಕುಟುಂಬಗಳಲ್ಲಿ ಶೇ. 79.10 ಕುಟುಂಬಗಳು ಸ್ವಂತ ವಾಸದ ಮನೆ ಹೊಂದಿವೆ. ಶೇ. 18.69 ರಷ್ಟು ಕುಟುಂಬಗಳು ಗುಡಿಸಲಿನಲ್ಲಿ ವಾಸಿಸುತ್ತಿವೆ.
ಹಾಗಾದರೆ, ಭೂಮಿ ಮತ್ತು ವಸತಿ ವಿಷಯದಲ್ಲಿ ನಮ್ಮ ಬೇಡಿಕೆ ಏನಿರಬೇಕು? ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳಿಗೆ ಆದ್ಯತೆಯೊಂದಿಗೆ ಭೂರಹಿತ ಮತ್ತು ಬಡ ರೈತ ಕುಟುಂಬಗಳಿಗೆ ಕೃಷಿಯೋಗ್ಯ ಬಂಜರು ಭೂಮಿಯನ್ನು ಉಚಿತವಾಗಿ ಹಸ್ತಾಂತರಿಸಬೇಕು. ಭೂಮಿಯ ಮೇಲೆ ಮಹಿಳೆಯರ ಸಮಾನ ಹಕ್ಕು ಸೇರಿದಂತೆ ಜಂಟಿ ಪಟ್ಟಾಗಳನ್ನು ವಿತರಿಸಬೇಕು. ಗ್ರಾಮೀಣ ಮತ್ತು ನಗರ ಭೂರಹಿತರ ಎಲ್ಲಾ ವಿಭಾಗಗಳಿಗೆ ಮನೆ ನಿವೇಶನಗಳು ಮತ್ತು ಮನೆಯ ಹಿತ್ತಲು ನಿವೇಶನಕ್ಕೆ ಭೂಮಿಯನ್ನು ಒದಗಿಸಬೇಕು.
ಪರಿಶಿಷ್ಟರ ಶೇ. 1.4 ರಷ್ಟು ಜನರಿಗೆ ಮಾತ್ರ ಸರಕಾರಿ ಉದ್ಯೋಗ
ಕರ್ನಾಟಕ ಸರಕಾರದ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳ ಸಂಖ್ಯೆ ಮತ್ತು ಪ್ರಮಾಣ ಈ ರೀತಿ ಇದೆ. (ಕೆ. ರತ್ನಪ್ರಭ ಸಮಿತಿ ವರದಿಯಲ್ಲಿನ ಮಾಹಿತಿ):
- 2018ರಲ್ಲಿ ಮಂಜೂರಾದ ಒಟ್ಟು ಹುದ್ದೆಗಳು- 7,65,859.
- ಭರ್ತಿಮಾಡಿದ ಹುದ್ದೆಗಳು- 5,26,393.
- ಬರ್ತಿಮಾಡಿದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಸಂಖ್ಯೆ- 85,427.
- ಪರಿಶಿಷ್ಟ ಜಾತಿ ಮೀಸಲಾತಿ ಶೇ.15ರ ಪ್ರಕಾರ ಇರಬೇಕಾಗಿದ್ದ ಹುದ್ದೆಗಳ ಸಂಖ್ಯೆ- 1,14,879.
ವ್ಯತ್ಯಾಸ- 29,452.
- ಮಂಜೂರಾದ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ ಶೇ. ಪ್ರಮಾಣ 11.15.
ಕೊರತೆ ಶೇ. 3.85.
ಅಂದರೆ, ಶಾಸನಾತ್ಮಕವಾಗಿ ನೀಡಿರುವ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ.


ಕರ್ನಾಟಕ ಸರಕಾರದ 45 ಇಲಾಖೆಗಳಲ್ಲಿ ಇರುವ ಒಟ್ಟು ಸರಕಾರ ಎ ಬಿ ಸಿ ಡಿ ಉದ್ಯೋಗಗಳು:
- ಮಂಜೂರಾದ ಒಟ್ಟು ಹುದ್ದೆಗಳು- 11,73,297
- ನೇಮಕ ನಡೆದಿರುವ ಹುದ್ದೆಗಳು – 7,31,214.
- ನೇಮಕಾತಿಯಾಗದ ಖಾಲಿ ಹುದ್ದೆಗಳು- 4,42,686
ಕರ್ನಾಟಕ ಸರಕಾರದ 45 ಇಲಾಖೆಗಳಲ್ಲಿ ಇರುವ ಪರಿಶಿಷ್ಟ ಜಾತಿಯ ಪ್ರಾತಿನಿಧ್ಯತೆಯ ಶೇ. 17ರಷ್ಟು ಸರಕಾರಿ ಎಬಿಸಿಡಿ ಉದ್ಯೋಗಗಳು:
- ಮಂಜೂರಾದ ಒಟ್ಟು ಹುದ್ದೆಗಳು- 1,99,460
- ನೇಮಕ ನಡೆದಿರುವ ಹುದ್ದೆಗಳು- 1,47,672
- ನೇಮಕಾತಿಯಾಗದ ಖಾಲಿ ಹುದ್ದೆಗಳು- 51,788
ಅಂದರೆ, ಸರಕಾರದ ಈ 45 ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿದರೆ, ಪರಿಶಿಷ್ಟ ಜಾತಿಯ 51,788 ಯುವಜನರಿಗೆ ಸರಕಾರಿ ಉದ್ಯೋಗ ಸಿಗುತ್ತಿತ್ತು.

ಇಲ್ಲಿ ಮತ್ತೊಂದು ಅಂಶವನ್ನು ಗಮನಿಸಬೇಕಿದೆ. ಪರಿಶಿಷ್ಟ ಜಾತಿಯ ಒಟ್ಟಾರೆ ಜನಸಂಖ್ಯೆ 1.05 ಕೋಟಿ. ಅದರಲ್ಲಿ ಸರಕಾರಿ ಉದ್ಯೋಗ ಪಡೆದವರು 1.47 ಲಕ್ಷ. ಅಂದರೆ ಪರಿಶಿಷ್ಟರ ಶೇ. 1.4 ರಷ್ಟು ಜನರಿಗೆ ಮಾತ್ರ ಸರಕಾರಿ ಉದ್ಯೋಗ ದಕ್ಕಿದೆ. ಎಲ್ಲರಿಗೂ ಸರಕಾರಿ ಉದ್ಯೋಗಗಳನ್ನು ಕೊಡಲು ಸಾಧ್ಯವಿಲ್ಲ ಎಂಬುದು ನಿಜವಾದರೂ, ಎಲ್ಲಾ 101 ಪರಿಶಿಷ್ಟ ಜಾತಿಗಳ ಉಳಿದ ಶೇ. 98.5 ಜನರಿಗೆ ಸಾಮಾಜಿಕ ನ್ಯಾಯ ಹೇಗೆ ಸಾಧ್ಯ?
ಒಟ್ಟಾರೆಯಾಗಿ ನಾವೀಗ ಮಾಡಬೇಕಾದ್ದು, ಖಾಲಿ ಇರುವ 4,42,686 ಹುದ್ದೆಗಳ ನೇಮಕಾತಿ ಮಾಡುವಂತೆ ಸರಕಾರದ ಮೇಲೆ ಒತ್ತಡ ತರಬೇಕು. ಇದಕ್ಕಾಗಿ ಪರಿಶಿಷ್ಟ ಜಾತಿಯ 101 ಜಾತಿಗಳ ಜನರೂ ಸೇರಿದಂತೆ ಎಲ್ಲಾ ಜಾತಿಗಳ, ಎಲ್ಲಾ ದರ್ಮಗಳ ಜನರೂ ಹೋರಾಟ ನಡೆಸಬೇಕು. ಈ ರೀತಿ ನೇಮಕಾತಿಯಾದರೆ, ಪರಿಶಿಷ್ಟ ಜಾತಿಗೆ ಮೀಸಲಿರುವ 51,788 ಹುದ್ದೆಗಳು ಅವರಿಗೆ ಸಿಗುತ್ತವೆ.
ಕ್ಷೀಣಿಸುತ್ತಿರುವ ಮೀಸಲಾತಿ ಉದ್ಯೋಗಗಳು
ಸರಕಾರಿ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಮತ್ತು ಆಳುವವರು ಅನುಸರಿಸುತ್ತಿರುವ ಖಾಸಗೀಕರಣ ಮತ್ತು ನವ ಉದಾರವಾದಿ ನೀತಿಗಳಿಂದಾಗಿ, ಸರಕಾರದ ಇಲಾಖೆಗಳು ಮತ್ತು ಸರಕಾರಿ ಒಡೆತನದ ಸಂಸ್ಥೆಗಳಲ್ಲಿ ಉದ್ಯೋಗಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿವೆ. ಉದ್ಯೋಗಿಗಳು ಅತ್ಯಗತ್ಯವಾಗಿರುವ ಕಡೆಗಳಲ್ಲಿ ಖಾಯಂ ಉದ್ಯೋಗ ನೇಮಕಾತಿ ಬದಲಿಗೆ, ಹೊರಗುತ್ತಿಗೆ, ದಿನಗೂಲಿ ಮತ್ತು ಕಾಂಟ್ರಾಕ್ಟ್ ಪದ್ಧತಿಯನ್ನು ಅನುಸರಿಸಬೇಕೆಂಬ ಕಾರ್ಪೊರೇಟ್ ಪರ ‘ಆಡಳಿತ ಸುಧಾರಣಾ ನೀತಿ’ಗಳನ್ನು ಸರಕಾರ ಅನುಸರಿಸುತ್ತಿದೆ. ಇದು ಹೀಗೆಯೇ ಮುಂದುವರೆದರೆ ಪರಿಶಿಷ್ಟರ ಪಾಲಿನ ಉದ್ಯೋಗಗಳ ಪ್ರಮಾಣ ಮತ್ತಷ್ಟು ಕ್ಷೀಣಿಸುತ್ತದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರವು ಉದ್ಯೋಗ ಸೃಷ್ಟಿ ಮಾಡುವ ಬದಲು, ಇರುವ ಉದ್ಯೋಗಳನ್ನೇ ನಾಶಮಾಡತೊಡಗಿದೆ. ಅಳಿದುಳಿದ ಉದ್ಯೋಗಗಳಲ್ಲಿ ತಮ್ಮ ಪಾಲಿನ ಉದ್ಯೋಗಕ್ಕಾಗಿ ಜಾತಿ, ಜಾತಿಗಳು ಪರಸ್ಪರ ಕಚ್ಚಾಡುವಂತೆ ಮಾಡುತ್ತಿದೆ.
ಅದೇ ಸಂದರ್ಭದಲ್ಲಿ ಮೀಸಲಾತಿಯ ಮೂಲಕ ಈ ಸಮುದಾಯಗಳು ಪಡೆಯುತ್ತಿದ್ದ ಶಿಕ್ಷಣದ ಫಲಗಳು ಅವರಿಗೆ ಸಿಗದಂತೆ ಸರಕಾರಗಳು ತಮ್ಮ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ನೀತಿಗಳ ಜಾರಿಯ ಮೂಲಕ ಮಾಡುತ್ತಿವೆ. ಶಿಕ್ಷಣದ ಖಾಸಗೀಕರಣವನ್ನು ಪ್ರೋತ್ಸಾಹಿಸಲಾಗುತ್ತಿದೆ. ಪ್ರಾಥಮಿಕ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯ ಹೆಸರಿನಲ್ಲಿ ಮುಚ್ಚಲಾಗುತ್ತಿದೆ.
ಆಳುವವರ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (ಎಲ್.ಪಿ.ಜಿ.) ನೀತಿಗಳಿಂದಾಗಿ, ಸರಕಾರಿ ಒಡೆತನದ ಉದ್ದಿಮೆಗಳು ಸ್ವದೇಶಿ ಮತ್ತು ವಿದೇಶಿ ಖಾಸಗಿ ಬಂಡವಾಳಗಾರರ ಪಾಲಾಗುತ್ತಿವೆ. ಉತ್ಪಾದನಾ ವಲಯ, ಸೇವಾ ವಲಯ, ವಿಮಾ ವಲಯ, ಹಣಕಾಸು ವಲಯ, ರಸ್ತೆ ಸಾರಿಗೆ, ರೈಲು ಮಾರ್ಗ… ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬಂಡವಾಳ ಹೂಡಲು ಸ್ವದೇಶಿ ಮತ್ತು ವಿದೇಶಿ ಖಾಸಗಿ ಬಂಡವಾಳಗಾರರಿಗೆ ಮುಕ್ತ ಅವಕಾಶ ಕೊಡಲಾಗಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲದ ಕಾರಣ, ಮೀಸಲಾತಿ ಸೌಲಭ್ಯ ನಿಧಾನವಾಗಿ ಕಣ್ಮರೆಯಾಗುವ ಅಪಾಯವಿದೆ. ಈ ಕಾರಣದಿಂದಾಗಿಯೇ, ಖಾಸಗೀ ಕ್ಷೇತ್ರದಲ್ಲಿಯೂ ಮೀಸಲಾತಿ ನಿಯಮ ಜಾರಿಗೆ ತರಬೇಕೆಂಬ ಹೋರಾಟಗಳು ನಡೆಯುತ್ತಿವೆ.
ಸಾಕ್ಷರತಾ ಪ್ರಮಾಣ ಶೇ. 65.33
ನ್ಯಾ. ದಾಸ್ ಅವರ ವರದಿಯಲ್ಲಿ ಹೇಳಿರುವಂತೆ, ನ್ಯಾ. ದಾಸ್ ಅವರ ವರದಿಯಲ್ಲಿ ಹೇಳಿರುವಂತೆ, ಕರ್ನಾಟಕದ ಪರಿಶಿಷ್ಟ ಜಾತಿ ಒಟ್ಟು ಸಾಕ್ಷರತಾ ಪ್ರಮಾಣ 2025ರಲ್ಲಿ ಶೇ. 80.85.
ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಒಟ್ಟು ಸಾಕ್ಷರತಾ ಪ್ರಮಾಣ ಶೇ. 75.60. ಆದರೆ, ಪರಿಶಿಷ್ಟ ಜಾತಿ ಸಾಕ್ಷರತಾ ಪ್ರಮಾಣ ಶೇ. 65.33. ಇಲ್ಲಿನ ಅಸಮಾನತೆಯ ಪ್ರಮಾಣ ಶೇ. 10.27.
ಭಾರತದ ಸಂವಿಧಾನದಲ್ಲಿ ಶಿಕ್ಷಣ ಮೂಲಭೂತ ಹಕ್ಕಾಗಲಿಲ್ಲ. ಬದಲಾಗಿ ಅನುಚ್ಛೇದ 45ರಲ್ಲಿ ಶಿಕ್ಷಣವು ಪ್ರಭುತ್ವ ನಿರ್ಧೇಶನ ತತ್ವಗಳಡಿಯಲ್ಲಿ ಸೇರಲ್ಪಟ್ಟಿತ್ತು. ಅದರಂತೆ: “ಭಾರತದ ಸಂವಿಧಾನವು ಜಾರಿಗೆ ಬಂದ ಹತ್ತು ವರ್ಷಗಳೊಳಗಾಗಿ ಎಲ್ಲಾ ಮಕ್ಕಳಿಗೆ 14 ವರ್ಷದ ವಯಸ್ಸಿನ ತನಕ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ರಾಜ್ಯ ಸರಕಾರಗಳು ನೀಡಲು ಪ್ರಯತ್ನಿಸಬೇಕು.”
ದೇಶದಲ್ಲಿ ಶಿಕ್ಷಣವನ್ನು ಅಭಿವೃದ್ಧಿಗೊಳಿಸಲು ಒಕ್ಕೂಟ ಸರಕಾರವು 1948ರಿಂದ 2009 ರವರೆಗೆ 6 ಆಯೋಗಳನ್ನು ರಚಿಸಿತು. ಈ ಆಯೋಗಗಳು ದೇಶದ ಒಟ್ಟು ಜಿಡಿಪಿಯಲ್ಲಿ ಶೇ. 6ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಮೀಸಲಿಡಬೇಕೆಂದು ಸೂಚಿಸಿವೆ. ಆದರೆ, ನಮ್ಮ ಸರಕಾರ ಶಿಕ್ಷಣಕ್ಕೆ ಮಾಡುವ ಖರ್ಚು ಶೇ. 3.5 ರಷ್ಟನ್ನು ದಾಟಲಿಲ್ಲ.
ಕೊಠಾರಿ ಆಯೋಗವು 1964-66 ರ ತನ್ನ ವರದಿಯಲ್ಲಿ ಶಿಕ್ಷಣದ ಕುರಿತು ಈ ರೀತಿ ಹೇಳಿದೆ: “ಶಿಕ್ಷಣವು ಬದಲಾವಣೆಯ ಅಸ್ತ್ರ. ಈ ಬದಲಾವಣೆಯು ತುಂಬಾ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾದರೆ, ಯಾವುದೇ ಹಿಂಸಾತ್ಮಕ ಕ್ರಾಂತಿಯಿಲ್ಲದೆ ಬದಲಾವಣೆ ಸಾಧ್ಯ. ಬದಲಾವಣೆಗಾಗಿರುವ ಏಕೈಕ ಅಸ್ತ್ರವೆಂದರೆ ಶಿಕ್ಷಣ.”
ಗುಣಮಟ್ಟದ ಶಿಕ್ಷಣ, ಆರೋಗ್ಯ, ಉದ್ಯೋಗ, ಆಹಾರ ಮತ್ತು ವಸತಿ ಇವುಗಳು ಹಕ್ಕುಗಳಾಗಬೇಕು. ಖಾಸಗಿ ವಲಯದಲ್ಲಿ ಮೀಸಲಾತಿ ಬರಬೇಕು. ಇವುಗಳನ್ನು ಸಾಧಿಸಿದರೆ ಮಾತ್ರ ದಲಿತರು ಮತ್ತು ಇತರ ದುರ್ಬಲ ವರ್ಗಗಳು ಮೀಸಲಾತಿಯ ಮಿತಿಗಳನ್ನು ದಾಟಿ ತಮ್ಮ ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಶಕ್ತಿ ಬರುತ್ತದೆ.
ಇವೆಲ್ಲವೂ ಈಗ ದೇಶದಲ್ಲಿ ಅನುಸರಿಸಲಾಗುತ್ತಿರುವ ನವ-ಉದಾರವಾದಿ ಆಳ್ವಿಕೆಗೆ ಒಲ್ಲದ ವಿಷಯಗಳು. ಆದ್ದರಿಂದ ಒಕ್ಕೂಟ ಮತ್ತು ರಾಜ್ಯ ಸರಕಾರಗಳ ನವ ಉದಾರವಾದಿ “ಸುಧಾರಣಾ ನೀತಿಗಳ” ವಿರುದ್ಧ, ದೇಶದ ಸಂಪತ್ತಿನಲ್ಲಿ ದಮನಿತರ ಪಾಲನ್ನು ಕಸಿಯುವ ಕಾರ್ಪೊರೇಟ್-ಪರ ನೀತಿಗಳ ವಿರುದ್ಧ ಹೋರಾಟ ನಡೆಯಬೇಕಾಗಿದೆ. ಮತ್ತು ಇದರಲ್ಲಿ ಪರಿಶಿಷ್ಟ ಜಾತಿಗಳ ಎಲ್ಲಾ ಸಮುದಾಯಗಳು, ಒಬಿಸಿಗಳೂ ಮತ್ತು ಎಲ್ಲಾ ಬಡವರು ಮತ್ತು ದಮನಿತರು ಜಾತಿ, ದರ್ಮ, ಭಾಷೆ, ಪ್ರದೇಶ ಎಂಬ ಬೇಧವಿಲ್ಲದೆ ಕೈಜೋಡಿಸಿ ಒಗ್ಗಟ್ಟಿನ ಹೋರಾಟ ನಡೆಸುವ ಅಗತ್ಯವಿದೆ.
ನಿಮ್ಮ ಟಿಪ್ಪಣಿ ಬರೆಯಿರಿ