ಒಂದು ಟ್ಯಾಕ್ಸಿಯ ಕತೆ

ನಾನೊಂದು ಟ್ಯಾಕ್ಸಿ. ನನ್ನ ಹೆಸರು ಇಂಡಿಕಾ. ನನ್ನ ತಂದೆ ಟಾಟಾ. ನನ್ನ ಸಾಕು ತಂದೆ ಒಬ್ಬ ಬಡ ಚಾಲಕ. 9 ವರ್ಷಗಳ ಹಿಂದೆ ಅಂದರೆ 2006ರಲ್ಲಿ  ಮೂರೂವರೆ ಲಕ್ಷ ಕೊಟ್ಟು ನನ್ನನ್ನು ಖರೀದಿಸಿದ. ನನ್ನನ್ನು ಖರೀದಿಸಿಲು ಆತನ ಬಳಿ ಹಣ ಇರಲಿಲ್ಲ. ಖಾಸಗಿ ಬ್ಯಾಂಕೊಂದರಲ್ಲಿ  ಮೂರು ಲಕ್ಷ ಸಾಲ, ಖಾಸಗಿ ಲೇವಾದೇವಿದಾರರಿಂದ ಐವತ್ತು ಸಾವಿರ ಸಾಲ ಪಡೆದಿದ್ದ. ಬ್ಯಾಂಕ್ ಸಾಲದ ಕಂತು, ಖಾಸಗೀ ಲೇವಾದೇವಿದಾರರ ಬಡ್ಡಿ ಕಟ್ಟಲು, ಜೊತೆಗೆ ನಾಲ್ಕು ಸದಸ್ಯರ ತನ್ನ ಕುಟುಂಬ ನಿರ್ವಹಣೆ ಮಾಡಲು, ತಾನೂ ವಿಶ್ರಾಂತಿ ಪಡೆಯದೆ, ನನಗೂ ವಿಶ್ರಾಂತಿ ಕೊಡದೆ, ಹಗಲು ರಾತ್ರಿಯನ್ನದೆ ದುಡಿದ. ನಗರದ ಟ್ರಾಫಿಕ್ ದಟ್ಟಣೆಗೆ ಹೆದರದೆ, ರಸ್ತೆಗಳಲ್ಲಿ ಕಣ್ಣಿಗೆ ಕಾಣದಂತಿರುವ ಹಳ್ಳ ದಿಣ್ಣೆಗಳನ್ನು ಹತ್ತಿ ಇಳಿಸಿದ. ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಆಂದ್ರಪ್ರದೇಶ, ಗೋವಾ ರಾಜ್ಯಗಳನ್ನು ಸುತ್ತಿಸಿದ. ಪ್ರಖ್ಯಾತ ದೇವಸ್ಥಾನ, ಮಸೀದಿ, ಚರ್ಚ್, ಜೈನ ಮಂದಿರ, ಬುದ್ಧ ಮಂದಿರಗಳ ದರ್ಶನ ಮಾಡಿಸಿದ. ಮಡಿಕೇರಿ, ಊಟಿ, ಕೊಡೈಕನಲ್ ನಂತಹ ಶೀತಲ ಪ್ರದೇಶ, ಬಳ್ಳಾರಿ, ವಿಜಯವಾಡದಂತ ಉಷ್ಣ ಪ್ರದೇಶ, ಮಂಗಳೂರು, ಗೋವಾ, ಪಾಂಡಿಚೇರಿ, ಚನ್ನೈ, ರಾಮೇಶ್ವರದಂತಹ ಕರಾವಳಿ ಪ್ರದೇಶ, ಹೀಗೆ ನನ್ನನ್ನು ಕರೆದೊಯ್ದ. ನಾನು ಹೀಗೆ ಕ್ರಮಿಸಿದ ದೂರ 4 ಲಕ್ಷದ 30 ಸಾವಿರ ಕಿಲೋ ಮೀಟರ್ ಗಳು.


ಇತ್ತೀಚೆಗೆ ನನ್ನ ಆರೋಗ್ಯ ದಿನದಿಂದ ದಿನಕ್ಕೆ ಕೆಡುತ್ತಿದೆ. ನಾನು ಹೃದಯ ಸಂಬಂಧಿ ಖಾಯಿಲೆಯಿಂದ ನರಳುತ್ತಿದ್ದೇನೆ. ಬೆಳಿಗ್ಗೆ ನನ್ನ ಯಜಮಾನ ಬಂದು ನನ್ನನ್ನು ಎಬ್ಬಿಸುತ್ತಾನೆ. ನನಗಂತೂ ಎದ್ದು ಕೆಲಸ ಮಾಡುವ ಶಕ್ತಿ ಇಲ್ಲವಾಗಿದೆ. ಎಷ್ಟೇ ಪ್ರಯತ್ನ ಪಟ್ಟರೂ ಏಳಲು ಸಾಧ್ಯವಿಲ್ಲದಾಗ ವೈದ್ಯರನ್ನು ಕರೆತರುತ್ತಾನೆ. ಆ ವೈದ್ಯರೋ, ನನ್ನನ್ನು ನೋಡುತ್ತಲೇ ‘ಸಾರ್, ಎಂಜಿನ್ ಕೆಲ್ಸ ಮಾಡ್ಸಿ ಸಾರ್, ಇನ್ನೂ ಎಷ್ಟ್ ದಿನ ಅಂತ ಓಡಿಸ್ತೀರಾ?’ ಎಂದು ಗೊಣಗುತ್ತಲೇ, ನನಗೆ ಹಿಂಸೆ ಕೊಟ್ಟು ಎಬ್ಬಿಸುತ್ತಾನೆ. ನಾನೋ, ಮೆಲ್ಲನೆ ಹೆಜ್ಜೆ ಇಡುತ್ತಾ, ಎದುರಿಸು ಬಿಡುತ್ತ ಮುಂದೆ ಸಾಗುತ್ತೇನೆ.

ಇಂದು ನನ್ನ ಯಜಮಾನ ಎಲ್ಲಿಗೆ ಕರೆದೊಯ್ಯುತ್ತಾನೋ? ದಾರಿಯಲ್ಲೇ ನನ್ನ ಆರೋಗ್ಯ ಕೆಟ್ಟರೆ ಏನು ಮಾಡುವುದು ಎಂದು ಚಿಂತೆ ಕಾಡತೊಡಗುತ್ತದೆ. ನನ್ನ ಹೃದಯ ಚಿಕಿತ್ಸೆಗೆ 50 ಸಾವಿರ ಖರ್ಚಾಗುತ್ತದಂತೆ. ನನ್ನ ಯಜಮಾನನೋ, ನನ್ನನ್ನು ಖರೀದಿ ಮಾಡಿದ್ದೂ ಸಾಲ ಮಾಡಿಯೇ. 8 ವರ್ಷಗಳಾದರೂ ಸಾಲದ ಬಲೆಯಿಂದ ಹೊರಬರಲಾರದೇ ಒದ್ದಾಡುತ್ತಿದ್ದಾನೆ. ನನ್ನನ್ನು ಮಾರಾಟ ಮಾಡಿದರೆ, ನನ್ನ ಬೆಲೆ ಈಗ 50 ಸಾವಿರ ರೂಪಾಯಿಯಷ್ಟೆ. ಆತ ಹಾಕಿದ ಬಂಡವಾಳದಲ್ಲಿ 3 ಲಕ್ಷ ರೂಪಾಯಿ ಸವೆದುಹೋಯಿತು.

ನನ್ನ ಮೇಲೆ ಪ್ರತಿ ವರ್ಷ ವಿಮೆ ಮಾಡಿಸಲು ಖರ್ಚು ಮಾಡಿದ ಹಣ 1ಲಕ್ಷದ 20 ಸಾವಿರ ರೂಪಾಯಿ. ಆತನು ಅದರಿಂದ ಯಾವುದೇ ಪ್ರತಿಫಲ ಪಡೆಯಲಿಲ್ಲ. ನನಗೆ ಕುಡಿಸಿದ ಡೀಸಲ್ ಕನಿಷ್ಟ 25 ಸಾವಿರ ಲೀಟರ್. ಒಂದು ಲೀಟರಿಗೆ ಸರಾಸರಿ 25 ತೆರಿಗೆ ಲೆಕ್ಕ ಹಾಕಿದರೂ ಸರ್ಕಾರಕ್ಕೆ ನೀಡಿದ ತೆರಿಗೆಯ ಹಣವೇ 6 ಲಕ್ಷದ 25ಸಾವಿರ ರೂಪಾಯಿಗಳು. ಕಟ್ಟಿದ ರಸ್ತೆ ತೆರಿಗೆ ಸುಮಾರು 14ಸಾವಿರ ರೂಪಾಯಿ. ನನ್ನ ಆರೋಗ್ಯ ಕಾಪಾಡಲು ತಿಂಗಳಿಗೆ ಸರಾಸರಿ 2000 ಎಂದು ಲೆಕ್ಕ ಹಾಕಿದರೂ ಅದರ ಮೊತ್ತ 2 ಲಕ್ಷ ರೂಪಾಯಿ ಖರ್ಚಾಗಿರುತ್ತದೆ.

ಇನ್ನು ನನಗಾಗಿ ಮಾಡಿದ ಸಾಲಗಳಿಗೆ ಕಟ್ಟಿದ ಬಡ್ಡಿ ಅದೆಷ್ಟೋ? ಪಾಪ ಆತನ ಕುಟುಂಬದ ಸದಸ್ಯರ ಆರೋಗ್ಯಕ್ಕೆ ಖರ್ಚು ಮಾಡಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಈಗ ಹೊಸ ಟ್ಯಾಕ್ಷಿ ಕೊಳ್ಳಲೂ ಹಾಗದೆ, ನನ್ನಿಂದ ದುಡಿಸಿಕೊಳ್ಳಲೂ ಹಾಗದೆ ಸಂಕಷ್ಟದಲ್ಲಿ ಸಿಲುಕಿದ ನನ್ನ ಬಡ ಮಾಲೀಕ. ಹೀಗೆ ಮತ್ತೊಂದು ವರ್ಷ ಕಳೆಯಿತು. ನನಗೆ ಒಂದಷ್ಟು ದಿನ ವಿಶ್ರಾಂತಿ ಪಡೆಯುವಂತೆ ಹೇಳಿ, ತಾನು ಬೇರೊಂದು ಕಾರನ್ನು ಕರೆದೊಯ್ಯತೊಡಗಿದ. ಕೆಲವೊಮ್ಮೆ  ಒಂದಷ್ಟು ಚಿಕಿತ್ಸೆ ಕೊಡಿಸಿ ನನ್ನನ್ನು ಸಮೀಪದ ಸ್ಥಳಗಳಿಗೆ ಕರೆದೊಯ್ಯುತ್ತಿದ್ದ.

ಕಡೆಗೊಂದು ದಿನ ನಾನು ತೀವ್ರ ಅನಾರೋಗ್ಯಕ್ಕೆ ತುತ್ತಾದೆ. ಆಸ್ಪತ್ರೆವರೆಗೂ ಹೋಗಲಾರದಷ್ಟು ಅನಾರೋಗ್ಯ ನನಗೆ. ನನ್ನ ಸಾಕು ತಂದೆ ಮತ್ತೊಬ್ಬರ ಸಹಾಯ ಪಡೆದು ಕಷ್ಟ ಪಟ್ಟು ಆಸ್ಪತ್ರೆಗೆ ನನ್ನನ್ನು ಕರೆದೊಯ್ದರು. ನನ್ನ ಚಿಕಿತ್ಸೆಗೆ ವೈದ್ಯರು ಹೇಳಿದ ವೆಚ್ಚ ಕೇಳಿ ಬೆಚ್ಚಿ ಬಿದ್ದರು. ನನಗಾಗ ಹೃದಯ ಮಾತ್ರವಲ್ಲ, ಹಲವು ಅಂಗಗಳು ವೈ ಪಲ್ಯಗೊಂಡಿದ್ದವು. ಅಷ್ಟು ಹಣ ನಮ್ಮ ಸಾಕು ತಂದೆಯ ಬಳಿ ಇರಲಿಲ್ಲ. ಸಾಲ ಮಾಡಿ ಚಿಕಿತ್ಸೆ ಕೊಡಿಸಿದರೂ, ಮತ್ತೆ ಯಾವಾಗ ನನ್ನ ಆರೋಗ್ಯ  ಹದಗೆಡುತ್ತದೋ ಎಂಬ ಆತಂಕ ಆತನಿಗೆ. ಇನ್ನು ಮುಂದೆ ಚಿಕಿತ್ಸೆ ಕೊಡಿಸುವುದು ಬೇಡ ಎಂದು ಆತ ಒಂದು ನಿರ್ಧಾರಕ್ಕೆ ಬಂದ. ಆಗ ನನ್ನ ವಯಸ್ಸು ಹತ್ತು ವರ್ಷ. ನನ್ನನ್ನು ಅಲ್ಲಿಯೇ ಬಿಟ್ಟು ಹೊರಟು ನಿಂತ. ಹತ್ತು ವರ್ಷಗಳ ಕಾಲ ಇದ್ದ  ಜೊತೆಗಾರನ ಅಗಲುವಿಕೆ ಆತನ ಕಣ್ಣುಗಳಲ್ಲಿ ನೀರು ತರಿಸಿತ್ತು.

Is this your new site? Log in to activate admin features and dismiss this message
ಲಾಗಿನ್