
2016ರ ನವೆಂಬರ್ 8, ರಾತ್ರಿ 8 ಗಂಟೆ. ಮೋದಿಯವರ ಮಾತುಗಳು ಪ್ರಸಾರವಾಗುತ್ತವೆ. “ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಸಂತೋಷ ಮತ್ತು ಹೊಸ ಭರವಸೆಯೊಂದಿಗೆ ದೀಪಾವಳಿಯ ಹಬ್ಬದ ಋತುವನ್ನು ಮುಗಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು, ನಾನು ಮಾತನಾಡುತ್ತೇನೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಈ ದೇಶದಲ್ಲಿ ಬೇರೂರಿರುವ ರೋಗಗಳು, ಅವು ನಮ್ಮ ಯಶಸ್ಸಿಗೆ ಅಡ್ಡಿಗಳಾಗಿವೆ. … ಜಾಗತಿಕ ಭ್ರಷ್ಟಾಚಾರದ ಶ್ರೇಯಾಂಕಗಳಲ್ಲಿ ನಾವು ತುಂಬಾ ಮೇಲಿನ ಸ್ಥಾನದಲ್ಲಿರುತ್ತೇವೆ. ಅಮಾಯಕರ ಮೇಲೆ ಭಯೋತ್ಪಾದನೆ ದಾಳಿ ಮಾಡುತ್ತದೆ. ಈ ಉಗ್ರರಿಗೆ ಯಾರು ಹಣ ಕೊಡುತ್ತಾರೆ? ಗಡಿಯುದ್ದಕ್ಕೂ, ನಮ್ಮ ಶತ್ರುಗಳು ಭಯೋತ್ಪಾದನೆಯನ್ನು ಪ್ರಾಯೋಜಿಸಲು ನಕಲಿ ಕರೆನ್ಸಿ ಮತ್ತು ಮೋಸದ ಹಣವನ್ನು ಬಳಸುತ್ತಾರೆ… ಕಪ್ಪುಹಣದ ವಿರುದ್ಧ ಹೋರಾಡಲು ನಾವು ಹೊಸ ಹೆಜ್ಜೆ ಇಡಬೇಕಾಗಿದೆ. ಇನ್ನು ಮುಂದೆ ರೂ. 500 ಮತ್ತು ರೂ. 1000 ನೋಟುಗಳನ್ನು ಬಳಸುವುದಿಲ್ಲ….
ಏಕಾಏಕಿ ಮತ್ತು ಅನಿರೀಕ್ಷಿತ ಘೋಷಣೆ
‘ಪ್ರಧಾನಿ ನರೇಂದ್ರ ಮೋದಿಯವರು ರಾತ್ರಿ 8 ಗಂಟೆಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅವರು ಬಹುಮುಖ್ಯವಾದ ಘೋಷಣೆ ಮಾಡಲಿದ್ದಾರೆ’ ಎಂಬ ಸರ್ಕಾರದ ವಾಣಿಯೊಂದು ನವೆಂಬರ್ 8, 2016ರ ಬೆಳಿಗ್ಗೆಯಿಂದ ರೇಡಿಯೋ ಮತ್ತು ಟಿವಿ ಮಾಧ್ಯಮಗಳ ಮೂಲಕ ದೇಶಾದ್ಯಂತ ವ್ಯಾಪಕವಾಗಿ ಪ್ರಚಾರವಾಗುತ್ತದೆ. ಮೋದಿಯವರು ಏನನ್ನು ಘೋಷಣೆ ಮಾಡುತ್ತಾರೆಯೋ ಎಂದು ದೇಶದ ಜನರು ರಾತ್ರಿ 8 ಗಂಟೆಯ ಅವರ ಮಾತುಗಳನ್ನು ಕೇಳಲು ಕಾತುರದಿಂದ ಕಾಯುತ್ತಾರೆ. ಮೋದಿ ಮಾತುಗಳು ಬಿತ್ತರವಾಗುತ್ತದೆ. ಅಂದು ಮಧ್ಯರಾತ್ರಿ 12 ಗಂಟೆಯಿಂದಲೇ (ಕೇವಲ 4 ಗಂಟೆಗಳ ಅವಕಾಶ) 500 ಮತ್ತು 1000 ಮೌಲ್ಯದ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಲಾಗುತ್ತದೆ. ಮೋದಿಯವರ ಆ ಅನಿರೀಕ್ಷಿತ ಘೋಷಣೆ ಕೇಳಿ ಇಡೀ ದೇಶದ ಜನ ದಂಗಾಗುತ್ತಾರೆ. ಜನರ ಬಳಿ ಅಲ್ಪ ಸ್ವಲ್ಪ ಇದ್ದ ಐನೂರು ಮತ್ತು ಸಾವಿರ ರೂಪಾಯಿ ನೋಟುಗಳು ಆ ಕ್ಷಣದಿಂದಲೇ ಚಲಾವಣೆ ಇಲ್ಲದಂತಾಗುತ್ತವೆ. ಮೋದಿಯವರ ಅಂದಿನ ಭಾಷಣದ ಮುಖ್ಯ ಅಂಶಗಳು ಹೀಗಿವೆ:
“ನನ್ನ ಪ್ರೀತಿಯ ದೇಶವಾಸಿಗಳೇ,
ನೀವು ಸಂತೋಷ ಮತ್ತು ಹೊಸ ಭರವಸೆಯೊಂದಿಗೆ ದೀಪಾವಳಿಯ ಹಬ್ಬದ ಋತುವನ್ನು ಮುಗಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು, ನಾನು ಮಾತನಾಡುತ್ತೇನೆ.
2014 ರಲ್ಲಿ ನೀವು ಈ ಸರ್ಕಾರವನ್ನು ಆಯ್ಕೆ ಮಾಡಿದಾಗ, ಭಾರತವು ಆರ್ಥಿಕವಾಗಿ ಅಸ್ಥಿರವಾಗಿದೆ ಎಂದು ಜಗತ್ತು ಮಾತನಾಡುತ್ತಿತ್ತು. ಆದರೆ ಭಾರತ ಈಗ ಆರ್ಥಿಕ ನಕ್ಷತ್ರವಾಗಿದೆ- ಐಎಂಎಫ್ ಮತ್ತು ವಿಶ್ವಬ್ಯಾಂಕ್ ಹೇಳುತ್ತಿರುವುದು ಇದನ್ನೇ.
ಸಬ್ ಕಾ ಸರ್ಕಾರ್, ಸಬ್ ಕಾ ವಿಕಾಸ್ – ಎಲ್ಲರಿಗೂ ಆಡಳಿತ ಮತ್ತು ಪ್ರಗತಿ ನಮ್ಮ ಧ್ಯೇಯವಾಗಿದೆ. ನಾವು ಬಡವರ ಸಬಲೀಕರಣದತ್ತ ಗಮನಹರಿಸಿದ್ದೇವೆ. ನಾವು ಪರಿಚಯಿಸಿದ ಯೋಜನೆಗಳ ಸರಣಿಯೆಲ್ಲವೂ ಇದರ ಗುರಿಯಾಗಿದೆ. ಇದು ನಮ್ಮ ರೈತರ ಸರಕಾರ.
ಭ್ರಷ್ಟಾಚಾರ ಮತ್ತು ಕಪ್ಪುಹಣ ಈ ದೇಶದಲ್ಲಿ ಬೇರೂರಿರುವ ರೋಗಗಳು, ಅವು ನಮ್ಮ ಯಶಸ್ಸಿಗೆ ಅಡ್ಡಿಗಳಾಗಿವೆ. ನಾವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿದ್ದೇವೆ, ಆದರೆ ಜಾಗತಿಕ ಭ್ರಷ್ಟಾಚಾರದ ಶ್ರೇಯಾಂಕಗಳಲ್ಲಿ ನಾವು ತುಂಬಾ ಮೇಲಿನ ಸ್ಥಾನದಲ್ಲಿರುತ್ತೇವೆ.
ಅಮಾಯಕರ ಮೇಲೆ ಭಯೋತ್ಪಾದನೆ ದಾಳಿ ಮಾಡುತ್ತದೆ. ಈ ಉಗ್ರರಿಗೆ ಯಾರು ಹಣ ಕೊಡುತ್ತಾರೆ? ಗಡಿಯುದ್ದಕ್ಕೂ, ನಮ್ಮ ಶತ್ರುಗಳು ಭಯೋತ್ಪಾದನೆಯನ್ನು ಪ್ರಾಯೋಜಿಸಲು ನಕಲಿ ಕರೆನ್ಸಿ ಮತ್ತು ಮೋಸದ ಹಣವನ್ನು ಬಳಸುತ್ತಾರೆ – ಇದು ಪದೇ ಪದೇ ಸಾಬೀತಾಗಿದೆ.
ಕಪ್ಪುಹಣ ತಡೆಗೆ ನಮ್ಮ ಕ್ರಮಗಳು ಫಲ ನೀಡುತ್ತಿವೆ. ಅಘೋಷಿತ ಹಣಕ್ಕಾಗಿ ಸ್ವಯಂಪ್ರೇರಿತ ಬಹಿರಂಗಪಡಿಸುವಿಕೆಯ ಯೋಜನೆಯು ಉತ್ತಮ ಪ್ರತಿಕ್ರಿಯೆಯನ್ನು ಕಂಡಿತು. ವಿದೇಶಕ್ಕೆ ಯಾರು ಹಣ ಕಳುಹಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ ಪ್ರಗತಿಯಲ್ಲಿದೆ. 1.25 ಲಕ್ಷ ಕೋಟಿ ಕಪ್ಪುಹಣ ಪತ್ತೆಯಾಗಿದೆ.
ಕಪ್ಪುಹಣದ ವಿರುದ್ಧ ಹೋರಾಡಲು ನಾವು ಹೊಸ ಹೆಜ್ಜೆ ಇಡಬೇಕಾಗಿದೆ. ಇನ್ನು ಮುಂದೆ ರೂ. 500 ಮತ್ತು ರೂ. 1000 ನೋಟುಗಳನ್ನು ಬಳಸುವುದಿಲ್ಲ. ಅವುಗಳನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲಿ ಪರಿವರ್ತಿಸಿಕೊಳ್ಳಲು 50 ದಿನಗಳು ಕಾಲಾವಕಾಶವಿದೆ. ನವೆಂಬರ್ 9 ಮತ್ತು 10 ರಂದು ಕೆಲವು ಸ್ಥಳಗಳಲ್ಲಿ ಎಟಿಎಂಗಳು ಕಾರ್ಯನಿರ್ವಹಿಸುವುದಿಲ್ಲ.”
ನೋಟು ಅಮಾನ್ಯೀಕರಣವು ಸುಳ್ಳು ನೆಪದಲ್ಲಿ ಜಾರಿಗೆ ತಂದ ನರೇಂದ್ರ ಮೋದಿ ಸರ್ಕಾರದ ಆಘಾತಕಾರಿ ಮತ್ತು ಕ್ರೂರ ನೀತಿಯಾಗಿದೆ ಎಂಬ ಕೆಲವರ ಆರೋಪಗಳಿಗೆ ಮೋದಿಯವರ ಅಂದಿನ ಈ ಮಾತುಗಳು ಹಿಡಿದ ಕನ್ನಡಿಯಂತಿದೆ. ಬಡವರನ್ನು ಸಬಲೀಕರಣಗೊಳಿಸಲು, ಭ್ರಷ್ಟಾಚಾರ ತೊಡೆದುಹಾಕಲು, ಕಪ್ಪುಹಣದ ವಿರುದ್ಧ ಹೋರಾಡಲು, ಉಗ್ರರಿಗೆ ಹಣ ಕೊಡುವುದನ್ನು ತಪ್ಪಿಸಲು, ಸಬ್ ಕಾ ಸರ್ಕಾರ್, ಸಬ್ ಕಾ ವಿಕಾಸ್, … ಮೋದಿಯವರು ಹೇಳಿದ ಈ ಯಾವುದಾದರೂ ಉದ್ದೇಶಗಳನ್ನು ಇದುವರೆಗೆ ಸಾಧಿಸಲಾಗಿದೆಯೇ? ಖಂಡಿತವಾಗಿಯೂ ಇಲ್ಲ. ಇದರಿಂದ ನೂರಕ್ಕೂ ಹೆಚ್ಚು ಜನರು ಬಲಿಯಾದರು, ಬಡವರನ್ನೂ ಕೆಳ ಮಧ್ಯಮ ವರ್ಗದ ಜನರ ಬದುಕನ್ನೂ ಸಂಕಷ್ಟಕ್ಕೆ ಸಿಲುಕಿಸಿತು. ದೇಶದ ಆರ್ಥಿಕತೆಯ ಬೆಳವಣಿಗೆಯನ್ನೇ ಒಂದಷ್ಟು ಕಾಲ ಹಿಂದೆ ತಳ್ಳಿತು. ಇದು ಜನಸಾಮಾನ್ಯರ ಪಾಲಿಗೆ ದೊಡ್ಡ ದುರಂತವನ್ನೇ ಸೃಷ್ಟಿಸಿಬಿಟ್ಟಿತು. ಮಾತ್ರವಲ್ಲ, ಪ್ರಜೆಗಳನ್ನು ಮೂರ್ಖರನ್ನಾಗಿ ಮಾಡಿತು.
ಮಾಧ್ಯಮಗಳು ಶಂಕನಾದ ಮೊಳಗಿಸುತ್ತವೆ
ಅಂದು, ಮೋದಿಯವರ ನೋಟು ಅಮಾನ್ಯೀಕರಣ ಘೋಷಣೆಗೆ ಅವರ ಭಕ್ತರು ಉಘೇ, ಉಘೇ ಎನ್ನುತ್ತಾರೆ. ಮಾಧ್ಯಮಗಳು ದೇಶಕ್ಕೆಲ್ಲಾ ಕೇಳುವಂತೆ ಶಂಕನಾದ ಮೊಳಗಿಸುತ್ತವೆ. ದೇಶದ ಆರ್ಥಿಕತೆಯ ಇತಿಹಾಸದಲ್ಲೇ ಇದೊಂದು ಮಹಾ ಕ್ರಾಂತಿ ಎಂದು ಬಿಂಬಸಲಾಗುತ್ತದೆ. ನಂಬಿಕೆಗಳಿಂದಲೇ ಬದುಕು ಸಾಗಿಸುತ್ತಿರುವ ದೇಶವಾಸಿಗಳು ಈ ‘ದೇವರ’ ಭರವಸೆಯ ಮಾತುಗಳನ್ನೂ ನಂಬುತ್ತಾರೆ. ಹೊಟ್ಟೆ ಬಟ್ಟೆ ಕಟ್ಟಿ ಕಷ್ಟಕಾಲಕ್ಕೆಂದು ತಾವು ಕೂಡಿಟ್ಟಿದ್ದ ಜನರೂ ತಮ್ಮ ಬಳಿ ಇದ್ದ ನೋಟುಗಳನ್ನು ಬ್ಯಾಂಕುಗಳಿಗೆ ಹಾಕುತ್ತಾರೆ. ಎಟಿಎಂ ಗಳು ಮುಚ್ಚಲ್ಪಡುತ್ತವೆ. ಚಲಾವಣೆಯ ನೋಟುಗಳನ್ನು ಪಡೆಯಲು ತಮ್ಮ ದುಡಿಮೆ ಬಿಟ್ಟು ಬ್ಯಾಂಕುಗಳ ಮುಂದೆ ಸಾಲುಗಳಲ್ಲಿ ನಿಂತು ದಿನಗಟ್ಟಲೆ, ಕೆಲವೊಮ್ಮೆ ವಾರಗಟ್ಟಲೆ ಕಾಯುತ್ತಾರೆ. ಸಾಲುಗಳಲ್ಲೇ ಕೆಲವರು ಪ್ರಾಣ ಬಿಡುತ್ತಾರೆ. ವಾರಕ್ಕೆ ಇಂತಿಷ್ಟೇ ಹಣ ಪಡೆಯಬೇಕೆಂಬ ದೊರೆಗಳ ಕಟ್ಟುಪಾಡು ಕಂಡು ಜನರು ಬೆಚ್ಚಿಬೀಳುತ್ತಾರೆ. ಮದುವೆ, ಶುಭಕಾರ್ಯಗಳಿಗೆ ಅಥವಾ ಆಸ್ತಿ ಖರೀದಿಗೆ ಇಟ್ಟಿದ್ದ ಹಣವನ್ನೆಲ್ಲಾ ಬ್ಯಾಂಕಿಗೆ ಹಾಕಿ, ಇಂತಹ ಕಾರ್ಯಗಳಿಗೆ ಹಣವಿಲ್ಲದೆ ಮರುಗುತ್ತಾರೆ. (ಇದೇ ಸಮಯದಲ್ಲಿ 500 ಕೋಟಿ ರೂ ವೆಚ್ಚದಲ್ಲಿ ಗಣಿ ಹಗರಣದ ಆರೋಪಿಯೊಬ್ಬರ ಪುತ್ರಿಯ ಮದುವೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದದ್ದು ಎಲ್ಲರ ಹುಬ್ಬೇರಿಸುವಂತೆ ಮಾಡುತ್ತದೆ.)

ಸರ್ಕಾರ ನಿಗಧಿಪಡಿಸಿದಷ್ಟು ಹಣವನ್ನು ಪಡೆದು ಮತ್ತೊಮ್ಮೆ ಪಡೆಯದಿರಲೆಂದು ಹಣ ಪಡೆದವರ ಬೆರಳುಗಳಿಗೆ ಶಾಯಿ ಹಚ್ಚಿದ ವರದಿಗಳು ಬರುತ್ತವೆ. ದೊರೆಗಳ ಭಂಟರಿಂದ ‘ನಗದು ರಹಿತ ವ್ಯವಹಾರ ನಡೆಸಿ’ ಎಂಬ ಸಲಹೆ ಬೇರೆ. ಹಣದ ಹರಿವು ನಿಂತುಹೋಗುತ್ತದೆ. ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಸಣ್ಣ ಪುಟ್ಟ ಕಾರ್ಖಾನೆಗಳು ಕೆಲಸವಿಲ್ಲದೆ ಬಣಗುಡುತ್ತವೆ. ಕೆಲವು ಕೈಗಾರಿಕೆಗಳು ಮುಚ್ಚಿಹೋಗುತ್ತವೆ. (ಕೆಲ ಸಣ್ಣ ಪುಟ್ಟ ಉದ್ಯಮಗಳು ಇನ್ನೂ ತಲೆ ಎತ್ತಲು ಸಾಧ್ಯವಾಗಿಲ್ಲ) ವ್ಯಾಪಾರ ವಹಿವಾಟಿಗೆ ಲಕ್ವ ಹೊಡೆಯುತ್ತದೆ.
‘ಗಿವ್ ಮಿ ಒನ್ಲಿ 50 ಡೇಸ್’ ಎಂದ ಮೋದಿ
ಮೋದಿಯವರ ಇಂತಹ ಏಕಾಏಕಿ ನಿರ್ಧಾರದಿಂದ ಸಂಕಷ್ಟಗಳಿಗೆ ತಳ್ಳಲ್ಪಟ್ಟ ಜನತೆ ದಂಗೆ ಏಳುವುದನ್ನು ತಡೆಯಲು ಜನರ ಮನದಲ್ಲಿ ಹಲವು ಬಗೆಯ ಆಸೆ ಆಮಿಷಗಳನ್ನು ಹುಟ್ಟಿಸುತ್ತಾರೆ. ನಾನು ದೇಶವನ್ನು ಕೇವಲ 50 ದಿನಗಳ ಸಮಯ ಕೇಳುತ್ತೇನೆ. ಡಿಸೆಂಬರ್ 30ರ (2016) ನಂತರ ನನ್ನ ಕೆಲಸದಲ್ಲಿ ಲೋಪದೋಷಗಳಿದ್ದರೆ ಅಥವಾ ನನ್ನ ಕೆಲಸದಲ್ಲಿ ತಪ್ಪುಗಳು ಅಥವಾ ಕೆಟ್ಟ ಉದ್ದೇಶ ಕಂಡುಬಂದರೆ, ದೇಶವು ನನಗೆ ನಿರ್ಧರಿಸುವ ಶಿಕ್ಷೆಅನುಭವಿಸಲು ನಾನು ಸಿದ್ಧನಾಗಿರುತ್ತೇನೆ” ಎಂದು ಮೋದಿ ಜನತೆಗೆ ವಿಶ್ವಾಸ ಬರುವ ರೀತಿಯಲ್ಲಿ ಉತ್ತಮ ನಟನೆ ಮಾಡುತ್ತಾರೆ.

‘ಮಗು ಹುಟ್ಟುವಾಗಲೂ ತಾಯಿ ಹೆರಿಗೆ ನೋವನ್ನು ಅನುಭವಿಸಬೇಕು. ಒಳ್ಳೆಯ ದಿನಗಳಿಗಾಗಿ ಸ್ವಲ್ಪ ನೋವು ಅನುಭವಿಸಿ’ಎಂದು ಸಂಘಪರಿವಾರದ ಕಾಲಾಳುಗಳು ಜನರನ್ನು ನಂಬಿಸಲು ಮುಂದಾಗುತ್ತಾರೆ. ಮೋದಿ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತಂದು ಬಡವರ ಖಾತೆಗೆ ಹಣ ಹಾಕುತ್ತಾರೆ ಎನ್ನುತ್ತಾರೆ. ಮಾತುಗಾರ ಸಂಘಿಯೊಬ್ಬ, ಕಪ್ಪು ಹಣ ಹೊರತಂದರೆ ನಮ್ಮ ರಸ್ತೆಗಳನ್ನು ಚಿನ್ನದ ರಸ್ತೆ ಮಾಡಬಹುದು ಎಂದು ಪುಂಗಿ ಊದುತ್ತಾನೆ. ಇಷ್ಟು ಸಾಲದೆಂಬಂತೆ, ಮನೆ ಇಲ್ಲದವರಿಗೆ ಮನೆ ಕಲ್ಪಿಸಿಕೊಡುತ್ತಾರೆ ಎನ್ನುತ್ತಾರೆ. ಇಷ್ಟಕ್ಕೇ ಸುಮ್ಮನಾಗದೆ, ಮನೆ ಇಲ್ಲದವರು ಮನೆಗಾಗಿ ಇಂದೇ ‘ಪ್ರಧಾನ್ ಮಂತ್ರಿ ಆವಾಸ್ ಯೋಜನೆ’ಯಲ್ಲಿ ಅರ್ಜಿ ಸಲ್ಲಿಸಿ ಎಂದು ಹೇಳುತ್ತಾ, ಅದಕ್ಕಾಗಿ ಆನ್ಲೈಲ್ ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡುತ್ತಾರೆ. ಜನರು, ಕಾಮನ್ ಸರ್ವೀಸ್ ಸೆಂಟರ್ (CSC)ಗಳ ಮುಂದೆ ಸಾಲಗಟ್ಟಿ ನಿಂತು, 200 ರಿಂದ 1000 ರೂ ವರೆಗೂ ಹಣ ಕೊಟ್ಟು ಆನ್ ಲೈನ್ ಅರ್ಜಿ ಸಲ್ಲಿಸುತ್ತಾರೆ. ಅವರು ಕೊಟ್ಟ ಸ್ವೀಕೃತಿ ಪತ್ರವನ್ನೇ ಮನೆ ಪತ್ರ ಎಂದು ನಂಬಿದ ಬಡ ಕುಟುಂಬಗಳು ಆ ಕಾಗದದ ತುಂಡನ್ನು ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ನೋಟು ರದ್ದತಿಯ ಅವೈಜ್ಞಾನಿಕ ಕ್ರಮವನ್ನು ಪ್ರಶ್ನಿಸಿದವರನ್ನು ಭ್ರಷ್ಟಾಚಾರಿಗಳ ಪರ ಇರುವವರು ಎಂದೋ, ಭಯೋತ್ಪಾಧಕರ ಪರ ಎಂದೋ ಸಂಘ ಪರಿವಾರದ ಅನುಯಾಯಿಗಳು ಆರೋಪ ಹೊರಿಸಿ ವಿರೋಧದ ದ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಹೊಸದಾಗಿ ಮುದ್ರಣಗೊಂಡಿದ್ದ 2 ಸಾವಿರ ಮುಖಬೆಲೆಯ ನೋಟುಗಳಲ್ಲಿ ಮೋದಿ ಚಿಪ್ ಅಳವಡಿಸಿದ್ದಾರೆ, ತೆರಿಗೆ ತಪ್ಪಿಸಿ ಹೆಚ್ಚು ಹಣ ಕೂಡಿಟ್ಟರೆ ತಕ್ಷಣ ಮೋದಿಯವರಿಗೆ ಗೊತ್ತಾಗುತ್ತದೆ, ಆದಾಯ ತೆರಿಗೆ ಇಲಾಖೆ ತಕ್ಷಣ ದಾಳಿ ಮಾಡಿ ವಶಕ್ಕೆ ಪಡೆಯುತ್ತದೆ, ಇನ್ನು ಮುಂದೆ ಯಾರೂ ಕೂಡ ಕಪ್ಪು ಹಣ ಶೇಕರಿಸಿ ಇಡಲು ಸಾಧ್ಯವಿಲ್ಲ ಎಂದು ಕನ್ನಡ ಸುದ್ದಿ ವಾಹಿನಿಯ ಮುಖ್ಯಸ್ಥರೊಬ್ಬರು ಕಥೆ ಕಟ್ಟಿ ಹೇಳಿದ್ದೂ ಇದೆ.
ಫೆಬ್ರವರಿ 2016 ರಿಂದಲೇ ಆರ್‌ಬಿಐನೊಂದಿಗೆ ಸಮಾಲೋಚನೆ
ನೋಡು ರದ್ದತಿಯಿಂದ ಬಿಜೆಪಿ ನಾಯಕರು ಮತ್ತು ಹಲವು ಕಪ್ಪು ಕುಳಗಳು ತಮ್ಮ ಬಳಿ ಇದ್ದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತವೆ. ತಮ್ಮ ಆರೋಪಗಳಿಗೆ ಸಮರ್ಥನೆಯಾಗಿ ಅಮಿತ್ ಶಾ ಅವರ ಮಗ ಜಯ್ ಶಾ ಬಳಿ ಇದ್ದ ಹಣದಲ್ಲಿ ನೂರಾರು ಪಟ್ಟು ಹೆಚ್ಚಳವನ್ನು ಉದಾಹರಣೆಯನ್ನಾಗಿ ಕೊಡುತ್ತಾರೆ. ಇದನ್ನು ಒಪ್ಪದ ಬಿಜೆಪಿ, ನೋಟು ರದ್ದತಿ ವಿಷಯ ಮೋದಿಯವರನ್ನು ಬಿಟ್ಟು ಬೇರೆ ಯಾರಿಗೂ ಮುಂಚಿತವಾಗಿ ತಿಳಿದಿರಲಿಲ್ಲ ಎಂದು ಸುಳ್ಳು ಹೇಳುತ್ತಾರೆ. ಆದರೆ, ನೋಟು ರದ್ದತಿ ಘೋಷಣೆಗೂ 8 ತಿಂಗಳ ಹಿಂದಿನಿಂದಲೂ ಅಂದರೆ ಫೆಬ್ರವರಿ 2016 ರಲ್ಲಿಯೂ ಆರ್‌ಬಿಐ ನೊಂದಿಗೆ ಈ ಸಮಾಲೋಚನೆ ನಡೆದಿತ್ತು, ಆರ್‌ಬಿಐ ಕೂಡ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದೆ ಮತ್ತು ಇದು ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡಿದೆ ಎಂಬುದನ್ನು ಸ್ವತಃ ಸರ್ಕಾರ ಮತ್ತು ಕೇಂದ್ರ ಬ್ಯಾಂಕ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿಕೊಂಡಿದೆ. ಕೇಂದ್ರ ಬ್ಯಾಂಕ್ ಕೂಡ ತನ್ನ ಅಫಿಡವಿಟ್ ನಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ ಮತ್ತು ನೋಟು ಅಮಾನ್ಯೀಕರಣಕ್ಕೆ ಶಿಫಾರಸು ಮಾಡಿದೆ ಎಂದು ಹೇಳಿಕೊಂಡಿದೆ. ಆದರೂ, ಹಲವಾರು ಪ್ರಮುಖ ಅಂಶಗಳು ಮತ್ತು ಆರ್‌ಬಿಐ ವ್ಯಕ್ತಪಡಿಸಿದ ಕಳವಳಗಳು ಮತ್ತು ಆಕ್ಷೇಪಣೆಗಳು ಅಫಿಡವಿಟ್‌ಗಳಲ್ಲಿ ಕಾಣೆಯಾಗಿವೆ ಎಂದು ಹೇಳಲಾಗಿದೆ. ನೋಟು ರದ್ದತಿ ದಿನವೂ ಆರ್ ಬಿ ಐ ನೋಟು ರದ್ದತಿಗೆ ಆಕ್ಷೇಪಣೆ ವ್ಯಕ್ತಪಡಿಸಿತ್ತು ಎಂಬುದನ್ನು ಸರ್ಕಾರ ಮುಚ್ಚಿಟ್ಟಿದೆ.
6 ವರ್ಷಗಳ ನಂತರ ಸುಪ್ರೀಂ ತೀರ್ಪು
ದುರಂತದ 6 ವರ್ಷಗಳ ನಂತರ 2022 ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ 4:1 ಬಹುಮತದಿಂದ ಎತ್ತಿಹಿಡಿಯಿತು. ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಬಹುಮತವು ನವೆಂಬರ್ 8, 2016 ರಂದು ಕೇಂದ್ರದ ಅಧಿಸೂಚನೆಯು ಮಾನ್ಯವಾಗಿದೆ ಮತ್ತು ಅನುಪಾತದ ಪರೀಕ್ಷೆಯನ್ನು ತೃಪ್ತಿಪಡಿಸಿದೆ ಎಂದು ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಅವರು ತಮ್ಮ ಭಿನ್ನಾಭಿಪ್ರಾಯದ ದೃಷ್ಟಿಕೋನದಲ್ಲಿ ನೋಟು ಅಮಾನ್ಯೀಕರಣವು ಸದುದ್ದೇಶದಿಂದ ಕೂಡಿದ್ದರೂ ಮತ್ತು ಚೆನ್ನಾಗಿ ಯೋಚಿಸಿದ್ದರೂ, ಇದು ಕಾನೂನು ಆಧಾರದ ಮೇಲೆ ಕಾನೂನುಬಾಹಿರವೆಂದು ಘೋಷಿಸಬೇಕು (ಮತ್ತು ವಸ್ತುಗಳ ಆಧಾರದ ಮೇಲೆ ಅಲ್ಲ- and not on the basis of objects) ಎಂದು ಹೇಳಿದರು.
ಒಳ್ಳೆಯ ದಿನಗಳು ಬಂದಿವೆ … ಯಾರಿಗೆ?
ಹೌದು, ಬಂಡವಾಳಗಾರರಿಗೆ ಒಳ್ಳೆಯ ದಿನಗಳು ಬಂದಿವೆ. ಸಾವಿರಾರು ಕೋಟಿ ರೂಪಾಯಿ ಕಪ್ಪು ಹಣವನ್ನು ಹೊಂದಿದ್ದ ದೊಡ್ಡ ಕಪ್ಪುಕುಳಗಳು ತಮ್ಮಲ್ಲಿದ್ದ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಂಡಿದ್ದಾರೆ. ಬ್ಯಾಂಕುಗಳಿಗೆ ಲಕ್ಷಾಂತರ ಕೋಟಿ ವಂಚಿಸಿರುವ ದೊಡ್ಡ ಉದ್ಯಮಿಗಳಿಗೆ ಒಳ್ಳೆಯ ದಿನಗಳು ಬಂದಿವೆ. ಜನಸಾಮಾನ್ಯರು ಬ್ಯಾಂಕ್ ಖಜಾನೆಗೆ ತುಂಬಿದ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಮತ್ತೆ ಮತ್ತೆ ಸಾಲ ಪಡೆದು, ಮತ್ತೆ ಮತ್ತೆ ವಂಚಿಸುವವರಿಗೆ ಒಳ್ಳೆಯ ದಿನಗಳು ಬಂದಿವೆ. ಆನ್ ಲೈನ್ ವ್ಯಾಪಾರ ಮಾಡುವ ಸ್ವದೇಶಿ ಮತ್ತು ವಿದೇಶಿ ದೊಡ್ಡ ಕಂಪನಿಗಳ ವ್ಯಾಪಾರ ವೃದ್ಧಿಗೆ ಅನುಕೂಲವಾಗಿದೆ. ವಿದೇಶಗಳಲ್ಲಿ ಬಚ್ಚಿಟ್ಟಿದ್ದ ಹಣವನ್ನು ಸೆಲ್ ಕಂಪನಿಗಳ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಇದು ಅನುಕೂಲ ಮಾಡಿಕೊಟ್ಟಿದೆ. ನಗದು ರಹಿತ ವ್ಯವಹಾರ ಹೆಚ್ಚಾಗಿ ‘ಪೇಟಿಎಂ’ ನಂತಹ ಆನ್ ಲೈನ್ ಮಧ್ಯವರ್ತಿಗಳಿಗೆ ಒಳ್ಳೆಯ ದಿನಗಳು ಬಂದಿವೆ. ಇವರೆಲ್ಲರಿಗೂ ಒಳ್ಳೆಯ ದಿನಗಳನ್ನು ಸುಸೂತ್ರವಾಗಿ ನೆರವೇರಿಸಿ ಕೊಟ್ಟಿದ್ದಕ್ಕೆ ಈ ಉದ್ಯಮಿಗಳ ವರ್ಗ ಇಂದು ‘ನಮೋ’ ಎಂಬ ನಾಮಸ್ಮರಣೆ ಮಾಡುತ್ತಾ ಮೋದಿಯನ್ನು ಉತ್ಸವಮೂರ್ತಿಯನ್ನಾಗಿ ಮಾಡಿದ್ದಾರೆ. ಚುನಾವಣಾ ಬಾಂಡ್ ಮೂಲಕವೋ, ರಹಸ್ಯವಾಗಿಯೋ ಬಿಜೆಪಿಗೆ ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ.
ಜನಸಾಮಾನ್ಯರಿಗೆ ‘ಒಳ್ಳೆಯ ದಿನಗಳು’ ಬರಲೇ ಇಲ್ಲ ಇಷ್ಟಾದರೂ ಒಳ್ಳೆಯ ದಿನಗಳು (ಅಚ್ಚೇ ದಿನ್) ಬಂದೇ ಬರುತ್ತವೆ ಎಂಬ ನಂಬಿಕೆ ಇಟ್ಟುಕೊಂಡೇ ಅದಕ್ಕಾಗಿ ಕಾದು ಕುಳಿತರು ನಮ್ಮ ಜನ. 11 ವರ್ಷಗಳು ಕಳೆದರೂ ಅವರು ಹೇಳಿದ ‘ಒಳ್ಳೆಯ ದಿನಗಳು’ ಬರಲೇ ಇಲ್ಲ. ಹಸಿವು, ಬಡತನ, ನಿರುದ್ಯೋಗ ಸಮಸ್ಯೆ, ಬದುಕಿನ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗಿವೆ. ಬೆಲೆಗಳು ಇಳಿಯಲೇ ಇಲ್ಲ. ಹಣದುಬ್ಬರಕ್ಕೆ ಕಡಿವಾಣ ಬೀಳಲಿಲ್ಲ. ಬಡವರ ಕೈಗೆಟುದಂತೆ ವಿದ್ಯೆ ಮತ್ತು ಆರೋಗ್ಯ ಸೇವೆಯ ಮಾರಾಟ ಜೋರಾಗಿಯೇ ನಡೆಯುತ್ತಿದೆ. ಲಂಚಕೋರರ ಹಾವಳಿ ನಿಲ್ಲಲಿಲ್ಲ. ಭ್ರಷ್ಟಚಾರ ಕೊನೆಯಾಗಲಿಲ್ಲ. ಕಪ್ಪುಹಣವನ್ನು ವಶಕ್ಕೆ ಪಡೆಯಲಿಲ್ಲ. ಖೋಟಾನೋಟು ಮುದ್ರಣ ಮತ್ತು ಚಲಾವಣೆ ನಿಲ್ಲಲೇ ಇಲ್ಲ, ನಕ್ಸಲರ ಉಪಟಳ ಇಲ್ಲದಂತಾಗಲಿಲ್ಲ. ಗಡಿಯಲ್ಲಿನ ಭಯೋತ್ಪಾದಕರ ಆಟಕ್ಕೆ ಕಡಿವಾಣ ಬೀಳಲಿಲ್ಲ. ಆ ನಂತರವೂ ನಮ್ಮ ನೂರಾರು ಸೈನಿಕರು, ನಾಗರೀಕರು ಭಯೋತ್ಪಾಧಕರ ದಾಳಿಗೆ ಬಲಿಯಾಗಿದ್ದಾರೆ. ಇವೆಲ್ಲವನ್ನೂ ತಡೆಗಟ್ಟಲೆಂದು ತಂದಿದ್ದ 2000 ರೂ. ಮುಖಬೆಲೆಯ ನೋಟುಗಳನ್ನೂ ಈಗ ಅಮಾನ್ಯ ಮಾಡಿದ್ದಾರೆ. ಆದರೂ ‘ಅಮೃತ ಕಾಲ ಬಂದಿದೆ, ಸಂಭ್ರಮಿಸೋಣ ಬನ್ನಿ’ ಎಂದು ಭಕ್ತರು ಹೇಳತೊಡಗಿದ್ದಾರೆ. ಸಹಸ್ರಾರು ವರ್ಷಗಳಿಂದ ನಂಬಿಕೆಗಳಿಂದಲೇ ಬಾಳಿ ಬದುಕುತ್ತಿರುವ ದೇಶವಾಸಿಗಳನ್ನು ‘ಹಣೆ ಬರಹಕ್ಕೆ ಹೊಣೆ ಯಾರು, ಎಲ್ಲವೂ ದೇವರ ಇಚ್ಚೆಯಂತೆ ನಡೆಯುತ್ತದೆ’ ಎಂದು ನಂಬಿಸತೊಡಗಿದ್ದಾರೆ.
ನಿಮ್ಮ ಟಿಪ್ಪಣಿ ಬರೆಯಿರಿ