
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಹೊರಬಂದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಸ್ಥಾಪಿಸಿದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಪಕ್ಷ ವಿಭಜನೆಯಾಗಲು ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ಕೊಡಲಾಗಿದೆ.
ಡಿಸೆಂಬರ್ 1953ರಲ್ಲಿ ತಮಿಳುನಾಡಿನ ಮಧುರೈನಲ್ಲಿ ನಡೆದ ಮೂರನೇ ಅಖಿಲ ಭಾರತ ಮಹಾಧಿವೇಶನ ಮತ್ತು ಏಪ್ರಿಲ್ 1956ರಲ್ಲಿ ಪಾಲಕ್ಕಾಡ್ ನಲ್ಲಿ ನಡೆದ ನಾಲ್ಕನೇ ಮಹಾಧಿವೇಶನದ ನಡುವೆ ರಾಜಕೀಯ ಪರಿಸ್ಥಿತಿಯಲ್ಲಿ ಮೂಲಭೂತ ಬದಲಾವಣೆಗಳು ಸಂಭವಿಸಿದವು. ಅವುಗಳ ಆಧಾರದಲ್ಲಿ, ನಾಲ್ಕನೇ ಸಮ್ಮೇಳನಕ್ಕೆ ಭಾಗವಹಿಸಿದ್ದ ಪ್ರತಿನಿಧಿಗಳ ಒಂದು ವಿಭಾಗವು, ಕಾಂಗ್ರೆಸ್ ಜೊತೆಗಿನ ಸಹಕಾರದ ವಿಷಯದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷ ಒಟ್ಟಾಗಿ ಸಮ್ಮಿಶ್ರ ಸರ್ಕಾರ ರಚಿಸುವ ಮಟ್ಟಿಗೆ ಕಮ್ಯುನಿಸ್ಟ್ ಪಕ್ಷವು ತನ್ನ ವಿಧಾನವನ್ನು ಬದಲಾಯಿಸಿಕೊಳ್ಳಬೇಕು ಎಂದು ವಾದಿಸಿತು. ಬಿಸಿಯಾದ ವಾದ, ಪ್ರತಿವಾದಗಳ ನಂತರವೇ ಆ ಆಲೋಚನೆಗಳನ್ನು ಕೈಬಿಡಲಾಯಿತು. ಆಗಲೂ, ಮೂರನೇ ಒಂದು ಭಾಗದಷ್ಟು ಪ್ರತಿನಿಧಿಗಳು ಅವರ ಪರವಾಗಿ ಮತ ಚಲಾಯಿಸಿದರು. ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು:
ಭಾರತ ಮತ್ತು ಚೀನಾ ನಡುವಿನ ಸರ್ಕಾರಿ ಮಟ್ಟದಲ್ಲಿಯೂ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸೋವಿಯತ್ ಮತ್ತು ಚೀನೀ ಕಮ್ಯುನಿಸ್ಟ್ ಪಕ್ಷಗಳ ನಡುವೆಯೂ ಸೌಹಾರ್ದಯುತ ಸಂಬಂಧಗಳಿದ್ದವು. ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಎರಡು ಭಾಗಗಳಾಗಿ ವಿಭಜನೆಯಾದ ಎಂಟು ವರ್ಷಗಳ ನಂತರ, ಮಾರ್ಕ್ಸ್ ವಾದಿ ಪಕ್ಷದ ವಿರೋಧಿಗಳು ಸಿಪಿಐ(ಎಂ) ವಿರುದ್ದ ವ್ಯಾಪಕ ಪ್ರಚಾರ ನಡೆಸಿದರು. ಆ ಆಧಾರದ ಮೇಲೆ, ಬಂಡವಾಳಶಾಹಿ ಸುದ್ದಿವಾಹಿನಿಗಳು ಮತ್ತು ರಾಜಕೀಯ ವೀಕ್ಷಕರು ಮಾರ್ಕ್ಸ್ ವಾದಿ ಪಕ್ಷವನ್ನು “ಚೀನೀ ಏಜೆಂಟ್” ಎಂದು ಹಣೆಪಟ್ಟಿ ಕಟ್ಟಿದರು. ಸೋವಿಯತ್ ಪಕ್ಷ ಮತ್ತು ಚೀನೀ ಪಕ್ಷಗಳು ತಮ್ಮದೇ ಆದ ವಿಶ್ವ ದೃಷ್ಟಿಕೋನದಲ್ಲಿ ಸಂಘರ್ಷದಲ್ಲಿದ್ದಾಗ, ಭಾರತ ಸರ್ಕಾರ ಮತ್ತು ಚೀನಾ ಸರ್ಕಾರಗಳ ನಡುವೆ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಸಂಘರ್ಷ ಉಂಟಾದಾಗ, ಅವಿಭಜಿತ ಭಾರತೀಯ ಕಮ್ಯುನಿಸ್ಟ್ ಪಕ್ಷದ ಎಡಪಂಥೀಯರಾದ ನಾವು, ಬಲಪಂಥೀಯರಂತೆ ಚೀನಾ ವಿರೋಧಿ ನಿಲುವನ್ನು ಅಳವಡಿಸಿಕೊಳ್ಳಲು ನಿರಾಕರಿಸಿದೆವು. ಹಾಗಾಗಿ ಹೆಚ್ಚಿನ ಜನರು ಮೇಲಿನ ಪ್ರಚಾರದಲ್ಲಿ ಹುರುಳಿದೆ ಎಂದು ನಂಬಲು ಪ್ರಾರಂಭಿಸಿದರು.
ಸಮ್ಮಿಶ್ರ ಸರ್ಕಾರದ ಘೋಷಣೆ
ಆದರೆ, ಸಿಪಿಐನ ನಾಲ್ಕನೇ ಸಮ್ಮೇಳನದಲ್ಲಿ ಬಲಪಂಥೀಯ ಮತ್ತು ಎಡಪಂಥೀಯ ಬಣಗಳು ಘರ್ಷಣೆಯಾದಾಗ, ಮೂರನೇ ಸಮ್ಮೇಳನದಲ್ಲಿ ಚರ್ಚಿಸಿದ ಸಮಸ್ಯೆಯನ್ನೇ ಇಲ್ಲಿಯೂ ಚರ್ಚಿಸಲಾಯಿತು. ಆಗಾಗಲೇ ವಿದೇಶಾಂಗ ವ್ಯವಹಾರಗಳಲ್ಲಿ ಪ್ರಗತಿಪರ ನಿಲುವು ತಳೆದಿರುವ ಕಾಂಗ್ರೆಸ್ ಸರಕಾರ, ಸ್ವದೇಶಿ ವಿಷಯದಲ್ಲೂ ಇದೇ ರೀತಿಯ ಪ್ರಗತಿಪರ ಹೆಜ್ಜೆಗಳನ್ನು ಇಡಲಿದೆ ಎಂದು ಮೂರನೇ ಸಮ್ಮೇಳನದಲ್ಲಿ ವಾದಿಸಲಾಯಿತು.
ನಾಲ್ಕನೇ ಸಮ್ಮೇಳನದಲ್ಲಿ ಈ ವಾದವನ್ನು ಮತ್ತಷ್ಟು ಮುಂದಿಟ್ಟು ಕಾಂಗ್ರೆಸ್ ಈಗಾಗಲೇ ಪ್ರಗತಿಪರವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಲಾಯಿತು. ಈ ಹೊಸ ವಾದದ ಆಧಾರದ ಮೇಲೆಯೇ ಪಕ್ಷದ ಒಳಗಿನ ಬಲಪಂಥೀಯರು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚಿಸುವ ಘೋಷಣೆಯನ್ನು ಎತ್ತಿದರು. ಅವರ ವಾದಗಳನ್ನು ಸಮರ್ಥಿಸಲು ಕೆಳಗಿನ ಪುರಾವೆಗಳನ್ನು ಮುಂದಿಡಲಾಯಿತು.
೧) ನೆಹರೂ ಅವರ ಸೋವಿಯತ್-ಚೀನೀ ಭೇಟಿಗಳು ಮತ್ತು ಸೋವಿಯತ್ ಮತ್ತು ಚೀನಾ ನಾಯಕರ ಭಾರತ ಭೇಟಿಗಳು ನೆಹರೂ ಅವರನ್ನು ಸಮಾಜವಾದಿ ಶಿಬಿರದ ಸ್ನೇಹಿತರನ್ನಾಗಿ ಮಾಡಿವೆ.
2) ಇದು ಬಾಹ್ಯ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ವಾಸ್ತವವಾಗಿ, ಭಾರತವು ಸೋವಿಯತ್ ಮಾದರಿಯ ಕೈಗಾರಿಕೀಕರಣದ ಮಾರ್ಗವನ್ನು ಅಳವಡಿಸಿಕೊಂಡಿದೆ ಮತ್ತು ಭಾರೀ ಕೈಗಾರಿಕೆಗಳಿಗೆ ಆದ್ಯತೆಯನ್ನು ನೀಡಿದೆ. ಆ ಆಧಾರದ ಮೇಲೆ, ಭಾರತವು ಹೊಸ ಪಂಚವಾರ್ಷಿಕ ಯೋಜನೆಗಾಗಿ ಸೋವಿಯತ್ ಒಕ್ಕೂಟ ಮತ್ತು ಇತರ ಸಮಾಜವಾದಿ ರಾಷ್ಟ್ರಗಳ ಸಹಾಯವನ್ನು ಕೋರಿದೆ.
3) ಈ ದೃಷ್ಟಿಕೋನದೊಂದಿಗೆ ರೂಪಿಸಲಾದ ಪಂಚವಾರ್ಷಿಕ ಯೋಜನೆಯನ್ನು ಕಾಂಗ್ರೆಸ್ ಒಳಗೆ ಮತ್ತು ಹೊರಗೆ ಬಲಪಂಥೀಯರು ವಿರೋಧಿಸಿದರು. ಆ ವಿರೋಧವನ್ನು ಮುಂದಕ್ಕೆ ಕೊಂಡೊಯ್ಯಲು ಸ್ವತಂತ್ರ ಪಕ್ಷವನ್ನು ರಚಿಸಲಾಯಿತು.
4) ಎಲ್ಲಕ್ಕಿಂತ ಹೆಚ್ಚಾಗಿ, 1955ರ ತಮಿಳುನಾಡಿನ ಅವಡಿಯಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನವು ಸಮಾಜವಾದವನ್ನು ರಾಷ್ಟ್ರೀಯ ಆದರ್ಶ ಎಂದು ಘೋಷಿಸಿತು.
ಬಹುಮತದ ಅಭಿಪ್ರಾಯ
ನೆಹರೂ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ವೇಗವಾಗಿ ಎಡಪಂಥೀಯದತ್ತ ಸಾಗುತ್ತಿದೆ ಮತ್ತು ಕಮ್ಯುನಿಸ್ಟರು ಆ ಪ್ರವೃತ್ತಿಯನ್ನು ಬಲಪಡಿಸಬೇಕು ಎಂದು ಕಮ್ಯುನಿಸ್ಟ್ ಪಕ್ಷದೊಳಗಿನ ಬಲಪಂಥೀಯ ಬಣ ವಾದಿಸಿತು. ಇದನ್ನು ಬಹುತೇಕ ಪ್ರತಿನಿಧಿಗಳು ಒಪ್ಪಲಿಲ್ಲ. ಆದರೆ, ವಿದೇಶಾಂಗ ವ್ಯವಹಾರಗಳು ಮತ್ತು ಯೋಜನೆಗಳಲ್ಲಿ ಸರಕಾರದ ಪ್ರಗತಿಪರ ಧೋರಣೆಯನ್ನು ಅವರು ಸ್ವಾಗತಿಸಿದರು.
(ಆ ದೋರಣೆಗೆ ವಿರುದ್ಧವಾಗಿ) ಸ್ವತಂತ್ರ ಪಕ್ಷ ಸೇರಿದಂತೆ ಬಲಪಂಥೀಯರ ದಾಳಿಗೆ ಬಲವಾಗಿ ಪ್ರತಿಕ್ರಿಯಿಸಲು ಪಕ್ಷ ಬದ್ಧವಾಗಿದೆ ಎಂದು ಅವರು ಒಪ್ಪಿಕೊಂಡರು. ಆದರೆ, ಕಾರ್ಮಿಕರು ಮತ್ತು ರೈತರ ಬಗ್ಗೆ ಕಾಂಗ್ರೆಸ್ ಅನುಸರಿಸುವ ನೀತಿಗಳು ಬಂಡವಾಳಶಾಹಿ-ಭೂಮಾಲೀಕ ವರ್ಗಗಳ ಹಿತಾಸಕ್ತಿಗಳನ್ನು ಮಾತ್ರ ಪೂರೈಸುತ್ತವೆ ಎಂದು ಅವರು ಗಮನಸೆಳೆದರು. ಈ ಕಾರಣಕ್ಕಾಗಿ, ಕಾಂಗ್ರೆಸ್ ಬಗ್ಗೆ ಕಮ್ಯುನಿಸ್ಟ್ ಪಕ್ಷ ಅಳವಡಿಸಿಕೊಳ್ಳಬೇಕಾದ ಧೋರಣೆ ಮತ್ತು ದೃಷ್ಟಿಕೋನ ಕ್ರಾಂತಿಕಾರಿ ವಿರೋಧ ಪಕ್ಷದ ಧೋರಣೆ ಮತ್ತು ದೃಷ್ಟಿಕೋನವಾಗಿರಬಹುದು ಎಂದು ಅವರು ಪ್ರಸ್ತಾಪಿಸಿದರು.
ನಿರ್ಣಯದಲ್ಲಿರುವ ಕೆಲವು ಅಂಶಗಳು
ಪಕ್ಷದ ನಾಲ್ಕನೇ ಅಖಿಲ ಭಾರತ ಸಮ್ಮೇಳನವು ತನ್ನ ರಾಜಕೀಯ ನಿರ್ಣಯದಲ್ಲಿ ಎರಡನೇ ಪಂಚವಾರ್ಷಿಕ ಯೋಜನೆ, ಭಾರೀ ಕೈಗಾರಿಕೆಗಳಿಗೆ ಆದ್ಯತೆ ನೀಡುವುದು ಮತ್ತು ಸಾರ್ವಜನಿಕ ವಲಯವನ್ನು ಹೆಚ್ಚು ಅವಲಂಬಿಸುವುದು ಭಾರತದ ಯೋಜನಾ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ ತ್ವರಿತ ಕೈಗಾರಿಕೀಕರಣಕ್ಕೆ ಅಗತ್ಯವಾದ ಪೂರ್ವಾಪೇಕ್ಷಿತವೆಂದರೆ ಮೂಲಭೂತ ಭೂಸುಧಾರಣೆ. ಇದೂ ಅಲ್ಲದೆ, ಕೈಗಾರಿಕೀಕರಣದ ಪ್ರಯತ್ನ ಯಶಸ್ವಿಯಾಗಬೇಕಾದರೆ, ಸರ್ಕಾರವು ಕಾರ್ಮಿಕ ವರ್ಗ ಮತ್ತು ದುಡಿಯುವ ಜನರ ಇತರ ವರ್ಗಗಳ ಸಹಕಾರವನ್ನು ಪಡೆಯಬೇಕು. ಕಾರ್ಮಿಕ ವರ್ಗ ಮತ್ತು ರೈತರು ಸೇರಿದಂತೆ ಬಹುಪಾಲು ಜನಸಂಖ್ಯೆಯ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ಕಾರ್ಮಿಕ ಸಂಬಂಧ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಕ್ಕೆ ಅನುಗುಣವಾದ ಒಂದು ತೆರಿಗೆ ನೀತಿಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಜನರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಸಹ ಒತ್ತಿ ಹೇಳಲಾಯಿತು. ಈ ದೃಷ್ಟಿಯೊಂದಿಗೆ, ಎರಡನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳನ್ನು ಸಾಧಿಸಲು ಸಹಾಯಕವಾಗಬಹುದಾದ ಸಲಹೆಗಳನ್ನು ನಾಲ್ಕನೇ ಸಮ್ಮೇಳನದ ರಾಜಕೀಯ ನಿರ್ಣಯದ ಅನುಬಂಧವಾಗಿ ಸೇರಿಸಲಾಗಿದೆ. ಈ ಪರ್ಯಾಯ ನೀತಿ ಪ್ರಸ್ತಾಪಗಳಿಗೆ ಬೆಂಬಲವಾಗಿ ಜನರನ್ನು ಸಜ್ಜುಗೊಳಿಸಲು ಎರಡನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳಿಗೆ ಪಕ್ಷವು ತನ್ನ ಬೆಂಬಲವನ್ನು ಘೋಷಿಸಿತು. ಅಂದರೆ, ಎರಡನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳಿಗೆ ಬೆಂಬಲ ಮತ್ತು ಸರ್ಕಾರದ ಸಾಮಾಜಿಕ-ಆರ್ಥಿಕ ನೀತಿಗಳಿಗೆ ವಿರೋಧ. ಇವೆರಡೂ, ಬೂರ್ಜ್ವಾ-ಭೂಮಾಲೀಕ ವರ್ಗಗಳ ಹಿತಾಸಕ್ತಿ ಕಾಪಾಡಲು ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿಗಳಾಗಿದ್ದವು. ಇವುಗಳ ವಿರುದ್ಧ ಕಮ್ಯುನಿಸ್ಟ್ ಪಕ್ಷದ ಹೋರಾಟದಲ್ಲಿ ಎರಡು ಮುಖಗಳಿದ್ದವು.
ಕ್ರಾಂತಿಕಾರಿ ವಿರೋಧ ಪಕ್ಷದ ಪಾತ್ರ
ಈ ಕಾರಣಕ್ಕಾಗಿ, ಕಾಂಗ್ರೆಸ್ ಸರ್ಕಾರದ ವಿರೋಧ ಪಕ್ಷವಾಗಿ ಕಮ್ಯುನಿಸ್ಟ್ ಪಕ್ಷದ ನಿಲುವು ಹಾಗೆಯೇ ಉಳಿಯುತ್ತದೆ ಎಂದು ನಾಲ್ಕನೇ ಮಹಾಧಿವೇಶನ ಸ್ಪಷ್ಟಪಡಿಸಿತು. ಆದರೆ ಕಮ್ಯುನಿಸ್ಟ್ ಪಕ್ಷವು ಸಂಸತ್ತು ಮತ್ತು ಶಾಸಕಾಂಗ ಸಂಸ್ಥೆಗಳಿಗೆ ಸೀಮಿತವಾದ ಕಾನೂನುಬದ್ಧ ವಿರೋಧ ಪಕ್ಷವಾಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಕಮ್ಯುನಿಸ್ಟ್ ಪಕ್ಷವು ಬಂಡವಾಳಶಾಹಿ ಮತ್ತು ಊಳಿಗಮಾನ್ಯ ವರ್ಗಗಳ ರಾಜಕೀಯ ಮತ್ತು ಆರ್ಥಿಕ ನೀತಿಗಳ ವಿರುದ್ಧ ಕಾರ್ಮಿಕರು ಮತ್ತು ರೈತರನ್ನು ಸಜ್ಜುಗೊಳಿಸಲು ಕಾನೂನುಬದ್ಧ ಮತ್ತು ಇತರ ಎಲ್ಲಾ ವಿಧಾನಗಳನ್ನು ಬಳಸುವ ಕ್ರಾಂತಿಕಾರಿ ವಿರೋಧ ಪಕ್ಷದ ಪಾತ್ರವನ್ನು ವಹಿಸುತ್ತದೆ.
ಈ ಕ್ರಾಂತಿಕಾರಿ ಕೆಲಸವನ್ನು ಸಂಸತ್ತು ಮತ್ತು ರಾಜ್ಯಗಳ ಶಾಸಕಾಂಗ ಸಂಸ್ಥೆಗಳಿಗೆ ವಿಸ್ತರಿಸುವುದು ಪಕ್ಷದ ಸಂಸದೀಯ ಕಾರ್ಯವಾಗಿದೆ. ಜನರನ್ನು ಸಜ್ಜುಗೊಳಿಸುವ ಮತ್ತು ಆಂದೋಲನಗಳು ಮತ್ತು ಪ್ರತಿಭಟನೆಗಳನ್ನು ನಡೆಸುವ ಸಾಧನವಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳನ್ನು ಬಳಸಿಕೊಳ್ಳುವ ದೃಷ್ಟಿಕೋನವನ್ನು ಬಲದವರು ಒಪ್ಪುವುದಿಲ್ಲ. ಅದಕ್ಕಾಗಿಯೇ ಅವರು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದ ನಡುವೆ ಸಮ್ಮಿಶ್ರ ಸರ್ಕಾರ ರಚಿಸುವ ಆಲೋಚನೆಯೊಂದಿಗೆ ಬಂದರು. ಸಮ್ಮೇಳನದಲ್ಲಿ ಭಾಗವಹಿಸಿದ್ದ ಹೆಚ್ಚಿನ ಪ್ರತಿನಿಧಿಗಳು ಅದನ್ನು ತಿರಸ್ಕರಿಸಿದರು. ಹಲವಾರು ಇತರ ಸಮಸ್ಯೆಗಳು ಅನುಸರಿಸಲ್ಪಟ್ಟವು. ನಾಲ್ಕನೇ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರಾಗಿದ್ದ ಬಲಪಂಥೀಯರು ಕಾನೂನು ಸೂಕ್ಷ್ಮಗಳ ಮೂಲಕ ಆರನೇ ಸಮ್ಮೇಳನದ ನಂತರ ಬಹುಮತಕ್ಕೆ ಪರಿವರ್ತಿತರಾದರು.
ಕಾಂಗ್ರೆಸ್ ನ ಸಮಾಜವಾದದ ಬಗ್ಗೆ…
ಈ ಹಂತದಲ್ಲಿ, ಕಾಂಗ್ರೆಸ್ ಪಕ್ಷವು ತನ್ನ ಅವಡಿ ಸಮ್ಮೇಳನದಲ್ಲಿ ಸಮಾಜವಾದವೇ ತನ್ನ ಗುರಿ ಎಂದು ಘೋಷಿಸಿದ ಬಗ್ಗೆ ಕೆಲವು ಮಾತುಗಳು ಸೂಕ್ತವಾಗಿರುತ್ತದೆ. (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಸಿದ್ಧ ಅಧಿವೇಶನವು ಜನವರಿ 10, 1955 ರಂದು ಅವಡಿಯಲ್ಲಿ ನಡೆಯಿತು.) ಈ ಘೋಷಣೆಯು ಕಾಂಗ್ರೆಸ್ ನ ಒಟ್ಟಾರೆ ಸ್ವರೂಪದಲ್ಲಿ ಪ್ರಮುಖ ಬದಲಾವಣೆಯನ್ನು ಗುರುತಿಸಿದೆ ಎಂದು ಬಲಪಂಥೀಯರು ವಾದಿಸಿದರು. ಕಮ್ಯುನಿಸ್ಟ್ ಪಕ್ಷದ ಬಹುತೇಕರು ಆ ಅಭಿಪ್ರಾಯವನ್ನು ಒಪ್ಪಲಿಲ್ಲ. ಉದ್ದೇಶಿತ ಸಾಮಾಜಿಕ-ಆರ್ಥಿಕ ನೀತಿಗಳನ್ನು ಅನುಸರಿಸಿಕೊಂಡೇ, ಇನ್ನೊಂದು ಬದಿಯಲ್ಲಿ ಸಮಾಜವಾದವೇ ತನ್ನ ಗುರಿ ಎಂದು ಕಾಂಗ್ರೆಸ್ ಘೋಷಿಸಿತು. ಇದು ಜನರನ್ನು ಮೋಸಗೊಳಿಸುವ ಪ್ರಯತ್ನ ಎಂದು ಕಮ್ಯುನಿಸ್ಟ್ ಪಕ್ಷ ಪರಿಗಣಿಸಿತು. ಅದಕ್ಕಾಗಿಯೇ ಆಗಿನ ಪ್ರಧಾನ ಕಾರ್ಯದರ್ಶಿ ಅಜಯ್ ಘೋಷ್ ಅವರು ಅವಡಿ ಸಮಾಜವಾದದ ಬಗ್ಗೆ ಬರೆದ ಲೇಖನವನ್ನು “ಅವಡಿ ಸಮಾಜವಾದ – ಒಂದು ವಂಚನೆ” ಎಂಬ ಶೀರ್ಷಿಕೆಯನ್ನು ನೀಡಿದರು.
ಸೋವಿಯತ್ ಒಕ್ಕೂಟದ ಸಮಾಜವಾದಿ ನಿರ್ಮಾಣ ಮತ್ತು ಚೀನಾದಲ್ಲಿ ಭೂ ಸಂಬಂಧಗಳಲ್ಲಿ ಮಾಡಿದ ಪ್ರಗತಿಪರ ಬದಲಾವಣೆಗಳು ಭಾರತೀಯರ ಗೌರವವನ್ನು ಗಳಿಸಿದವು. ಹೀಗೆ ಭಾರತೀಯರು ಸಮಾಜವಾದದ ದೃಷ್ಟಿಕೋನವನ್ನು ಬೆಳೆಸಿಕೊಳ್ಳತೊಡಗಿದರು. ಬಂಡವಾಳಶಾಹಿ-ಊಳಿಗಮಾನ್ಯ ವರ್ಗಗಳು ಸಹ ಈ ಸತ್ಯವನ್ನು ಗುರುತಿಸಿವೆ ಎಂಬಂತೆ ತಮ್ಮನ್ನು ತಾವು ತೋರ್ಪಡಿಸಿಕೊಳ್ಳಬೇಕಾಗಿತ್ತು. ಈ ಕಾರಣದಿಂದಾಗಿ, ಆಳುವ ವರ್ಗ ಜನರಲ್ಲಿ ಸಮಾಜವಾದಿ ನಿರ್ಮಾಣ ಮಾಡುತ್ತಿದ್ದೇವೆ ಎಂಬ ಭ್ರಮೆಯನ್ನು ಸೃಷ್ಟಿಸಲು ಮತ್ತು ಅದನ್ನು ಬಳಸಿಕೊಂಡು ಜನಬೆಂಬಲ ಪಡೆಯಲು ಪ್ರಯತ್ನಿಸುತ್ತಿತ್ತು. ಆದರೆ ವಾಸ್ತವವಾಗಿ ಅವರು ಅದನ್ನು ಬಂಡವಾಳಶಾಹಿಯನ್ನು ನಿರ್ಮಿಸಲು ಮತ್ತು ಬಲಪಡಿಸಲು ಬಳಸಿದರು. ಆವಡಿ ಸಮ್ಮೇಳನದಲ್ಲಿ ಆಡಳಿತ ಪಕ್ಷ ಅಂಗೀಕರಿಸಿದ ನಿರ್ಣಯವೇ ಇದಕ್ಕೆ ಸಾಕ್ಷಿಯಾಗಿದೆ.
ಕಮ್ಯುನಿಸ್ಟ್ ಪಕ್ಷದ ಬಹುಪಾಲು ಸದಸ್ಯರು ಕಾಂಗ್ರೆಸ್ ಸರ್ಕಾರದ ವಿದೇಶಾಂಗ ನೀತಿಗಳನ್ನು ಮತ್ತು ಅದರ ಕೆಲವು ದೇಶೀಯ ನೀತಿಗಳನ್ನು ರಚನಾತ್ಮಕ ರೀತಿಯಲ್ಲಿ ಸ್ಪಂಧಿಸಿದರು ಎಂಬುದು ಮೂರನೆಯ ಮತ್ತು ನಾಲ್ಕನೆಯ ಸಮಾವೇಶಗಳಲ್ಲಿ ಹೊರಹೊಮ್ಮಿತು- ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ಪದ್ಧತಿಗೆ ಕಾಂಗ್ರೆಸ್ ಸರಕಾರ ಸ್ವಲ್ಪ ವಿರೋಧ ವ್ಯಕ್ತಪಡಿಸಿದಾಗ ಅದಕ್ಕೆ ಸಹಕಾರ ಎಂಬುದೇ ಆ ವಿಧಾನ.
ಆದರೆ, ಕೆಲವು ವಿಷಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುವಾಗ, ಅದು ಬಂಡವಾಳಶಾಹಿ-ಭೂಮಾಲೀಕ ಆಡಳಿತ ವರ್ಗಗಳ ನಿಜವಾದ ಪ್ರತಿನಿಧಿಯಾಗಿದ್ದರಿಂದ, ಕಮ್ಯುನಿಸ್ಟ್ ಪಕ್ಷವು ಬಲವಾದ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಬೇಕು ಎಂಬ ಧೋರಣೆಯನ್ನು ಸಹ ಒಳಗೊಂಡಿತ್ತು. ಇದು ಮೂರನೇ ಮತ್ತು ನಾಲ್ಕನೇ ಸಮ್ಮೇಳನಗಳಲ್ಲಿ ಎಡಪಂಥೀಯರನ್ನು ಬಲಪಂಥೀಯರಿಂದ ಪ್ರತ್ಯೇಕಿಸಿದ ವೈಶಿಷ್ಟ್ಯವಾಗಿತ್ತು.
(ಕೃಪೆ: ತೀಕದಿರ್)
ನಿಮ್ಮ ಟಿಪ್ಪಣಿ ಬರೆಯಿರಿ