
(ನಾನು ಟ್ಯಾಕ್ಸಿ ಚಾಲಕನಾಗಿದ್ದ ನವೆಂಬರ್ 21, 2014ರಂದು ನನ್ನ ಫೇಸ್ಬುಕ್ ಬರಹ)
OLA!!! Nimma Snehitharannu Ola ge refer maadi 2014 model car annu attach maadi haagu referral incentives amount Rs 10,000 hanavannu attach madidha thakshana padeyiri.
Hechina mahithigagi samparkisi.
Anjali, Shiv Kumar or Siddharth.
Contact no. 080-69000158
OLA ಎಂಬ ಹೆಸರಿನ ಟ್ರಾವಲ್ ಏಜೆನ್ಸಿಯಿಂದ ಹೀಗೊಂದು ಮೆಸೇಜ್ ನನ್ನ ಸ್ನೇಹಿತನ ಮೊಬೈಲ್ ಗೆ ಬಂತು. ಮೆಸೇಜ್ ನೋಡಿ ನನಗೆ ಆಶ್ಚರ್ಯವಾಯಿತು. ಯಾವುದೇ ಟ್ರಾವಲ್ ಏಜೆನ್ಸಿಗೆ ಟ್ಯಾಕ್ಸಿವೊಂದನ್ನು ಸೇರ್ಪಡೆ ಮಾಡಬೇಕಾದರೆ, ಟ್ಯಾಕ್ಸಿಯ ಚಾಲಕ/ಮಾಲೀಕರಿಂದ ಡಿಪಾಸಿಟ್ ಹಣ ಪಡೆಯುವ ಪದ್ದತಿ ನಮ್ಮ ಬೆಂಗಳೂರು ನಗರದಲ್ಲಿ ಇದೆ. ಆದರೆ, ಟ್ರಾವೆಲ್ ಏಜೆನ್ಸಿಯೊಂದು ಟ್ಯಾಕ್ಸಿಯೊಂದನ್ನು ಸೇರ್ಪಡೆ ಮಾಡಲು ಉತ್ತೇಜಿಸಿದವರಿಗೆ ಹತ್ತು ಸಾವಿರ ರೂ.ಗಳ ಪ್ರೋತ್ಸಾಹ ಧನ ಕೊಡುವುದನ್ನು ಕೇಳಿದರೆ ಎಂತವರಿಗೂ ಆಶ್ಚರ್ಯವಾಗದಿರದು.
ಇದು ಇಷ್ಷಕ್ಕೆ ಸೀಮಿತವಾಗಿಲ್ಲ. ಈ ಕೆಳಗಿನ ಮತ್ತೊಂದು ಮೇಸೇಜ್ ನೋಡಿ.
Priya OLA Chalakare, edininda indica mathu sedan na incentive nali balisideve, modala 5 trip ge 800 ru, 9 trip ge 1500 ru, 12 trip ge 2500 ru mathu 15 trip ge 3500 ru galu. hechina mahithi gagi samparkisi 080 – 67352200 ** ಗ್ರಾಹಕರ ಸೇವೆಗೆ ತಗಲುವ ಹೆಚ್ಚಿನ ಹಣವನ್ನು ತಾನೇ ಪಾವತಿಸುತ್ತದೆ!!!
ಇದು ಮತ್ತಷ್ಟು ಆಶ್ಚರ್ಯಕ್ಕೆ ಕಾರಣವಾಗುವ ವಿಷಯ. ಬೆಂಗಳೂರು ನಗರದಲ್ಲಿ OLA ಮತ್ತು Taxi For Sure ಎಂಬ ಎರಡು ಬಹುರಾಷ್ಟ್ರೀಯ ಕಂಪನಿಗಳು ಟ್ಯಾಕ್ಸಿ ಸೇವೆಯಲ್ಲಿ ತೊಡಗಿವೆ. ಈ ಕಂಪನಿಗಳು ಸ್ವಂತ ಟ್ಯಾಕ್ಸಿಗಳನ್ನು ಹೊಂದಿಲ್ಲ. ಇವುಗಳ ಬಳಿ ಇರುವ ಎಲ್ಲಾ ಟ್ಯಾಕ್ಸಿಗಳು ಸೇರ್ಪಡೆ (attach) ಮಾಡಿಕೊಂಡ ಟ್ಯಾಕ್ಸಿಗಳೇ. ಅಂತರ್ ಜಾಲ ತಾಣಗಳ ಮೂಲಕ, ರಸ್ತೆಗಳಲ್ಲಿ ದೊಡ್ಡ ದೊಡ್ಡ ಜಾಹಿರಾತು ಫಲಕಗಳ ಮೂಲಕ, ಎಪ್ ಎಂ ರೇಡಿಯೋಗಳ ಮೂಲಕ, ಮತ್ತು ಮಾಧ್ಯಮಗಳ ಮೂಲಕ ಜಾಹಿರಾತು ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ನಿರತವಾಗಿವೆ. ಅತೀ ಕಡಿಮೆ ದರದಲ್ಲಿ ಟ್ಯಾಕ್ಸಿ ಸೇವೆ ನೀಡುವುದಾಗಿ ಹೇಳುತ್ತಾರೆ. ಅದೇ ರೀತಿ ಕಡಿಮೆ ದರದಲ್ಲೇ ಗ್ರಾಹಕರಿಗೆ ಸೇವೆ ನೀಡುತ್ತಾರೆ. ಟ್ಯಾಕ್ಸಿ ಚಾಲಕರಿಗೆ ಆಗುವ ನಷ್ಟವನ್ನು ಈ ಕಂಪನಿಗಳೇ ತುಂಬಿಕೊಡುತ್ತಾರೆ!!!
Taxi For Sure ಕಂಪನಿ, 4 ಕಿ.ಮೀ.ಗೆ 49 ರೂ.ಗಳಲ್ಲಿ ಸೇವೆ ನೀಡುತ್ತದೆ. ಚಾಲಕ/ಮಾಲೀಕ ಗ್ರಾಹಕರಿಂದ ಇಷ್ಟೇ ಹಣವನ್ನು ಪಡೆಯುತ್ತಾರೆ. ಆದರೆ, ಕಂಪನಿ ಚಾಲಕ/ಮಾಲೀಕರಿಗೆ ಒಂದು ಟ್ರಿಪ್ ಗೆ 150 ರೂ. “ಪ್ರೋತ್ಸಾಹ ಧನ” ನೀಡುತ್ತದೆ!! ಚಾಲಕ ದಿನದಲ್ಲಿ ಹತ್ತು ಟ್ರಿಪ್ ಮಾಡಿದರೆ 1500 ರೂ. ಪ್ರೋತ್ಸಾಹ ಧನ ಲಭಿಸುತ್ತದೆ. 4 ಕಿ.ಮೀ. ಗಿಂತ ಹೆಚ್ಚಿನ ದೂರ ಪ್ರಯಾಣಕ್ಕೆ ಪ್ರತಿ ಕಿ.ಮೀ.ಗೆ ಇಂಡಿಕಾ ಕಾರಿಗೆ (ಎ.ಸಿ.)14 ರೂ. ದರ ನಿಗದಿ ಮಾಡಿದ್ದಾರೆ. ಈ ಎಲ್ಲಾ ಹಣದಲ್ಲಿ ಅದು ಪಡೆಯುವ ಕಮೀಷನ್ ಹಣ ಶೇ.15 ಮಾತ್ರ.
ಇಷ್ಟೊಂದು ಹಣವನ್ನು ಪುಕ್ಕಟೆಯಾಗಿ ಚಾಲಕ/ಮಾಲೀಕರಿಗೆ ನೀಡುವುದಾದರೂ ಏಕೆ? ಇದಕ್ಕಾಗಿ ಕೋಟ್ಯಾಂತರ ಹಣವನ್ನು ‘ದಾನ” ಮಾಡುವುದು ಏಕೆ? ಗ್ರಾಹಕರ ಸೇವೆಯೇ ಅವರಿಗೆ ಮುಖ್ಯವಾಗಿದ್ದರೆ, ತಾವೇ ಬಂಡವಾಳ ಹೂಡಿ ವಾಹನಗಳನ್ನು ಖರೀದಿಸಬಹುದಿತ್ತಲ್ಲವೇ? ಈ ಬಗ್ಗೆ ಹಲವು ಚಾಲಕ/ಮಾಲೀಕರನ್ನು ಪ್ರಶ್ನಿಸಿದರೆ ಅವರಿಂದ ಸರಿಯಾದ ಉತ್ತರ ಸಿಗುವುದಿಲ್ಲ. “ಒಳ್ಳೆಯ ಸಂಪಾದನೆ ಇದೆ ಅದಕ್ಕಾಗಿ ನಾವು ನಮ್ಮ ವಾಹನಗಳನ್ನು ಅಟಾಚ್ ಮಾಡಿದ್ದೇವೆ” ಎಂದಷ್ಷೇ ಹೇಳುತ್ತಾರೆ.
ಏಕಸ್ವಾಮ್ಯ (monopoly) ಸ್ಥಾಪನೆಯ ಹುನ್ನಾರ
ಬೆಂಗಳೂರು ನಗರದಲ್ಲಿ ಸಾರಿಗೆ ಸೇವೆ ಸಲ್ಲಿಸುವಲ್ಲಿ ಟ್ಯಾಕ್ಸಿಗಳ ಸ್ಥಾನ ಮೂರನೆಯದು. ಇತ್ತೀಚೆಗೆ ಸ್ವಂತ ಉದ್ಯೋಗಕ್ಕಾಗಿ ಹಲವರು ಸ್ವಂತ ಟ್ಯಾಕ್ಸಿ ಹೊಂದಿ ಅದರ ದುಡಿಮೆಯಿಂದ ಬಂದ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಅದಕ್ಕಾಗಿ ಬ್ಯಾಂಕುಗಳಲ್ಲಿ ಮತ್ತು ಖಾಸಗಿ ಲೇವಾದೇವಿದಾರರಿಂದ ಸಾಲ ಸೌಲಭ್ಯ ಪಡೆದಿದ್ದಾರೆ. ಸಾಲ ಮಾಡಿ ಸ್ವಂತ ಟ್ಯಾಕ್ಸಿ ಹೊಂದಿರುವ ಚಾಲಕರ ಪಾಡು ಹೇಳತೀರದು. ಇತ್ತ ಮಾಡಿರುವ ಸಾಲದ ಕಂತು ಕಟ್ಟಬೇಕು. ಸಾಲಕ್ಕೆ ಬಡ್ಡಿ ಕಟ್ಟಬೇಕು. ವಾಹನ ದುರಸ್ಥಿಗಾಗಿ ಖರ್ಚು ಮಾಡಬೇಕು. ಜೊತೆಗೆ ತನ್ನ ಕುಟುಂಬ ನಿರ್ವಹಣೆ ಮಾಡಬೇಕು. ಅದಕ್ಕಾಗಿ ಮತ್ತಷ್ಟು ಸಾಲದ ಬಲೆಗೆ ಸಿಲುಕುತ್ತಲೇ ಹೋಗುತ್ತಾನೆ. ಬೇರೆ ವಿಬಾಗದಲ್ಲಿ ಬಂಡವಾಳ ಹೂಡಿದರೆ, ಆ ಬಂಡವಾಳದ ಮೌಲ್ಯ ಕಡಿಮೆಯಾಗುವುದಿಲ್ಲ. ಅದರ ಮೌಲ್ಯ ಹೆಚ್ಚುತ್ತಿರುತ್ತದೆ. ಆದರೆ. ವಾಹನ ಖರೀದಿಸಿದರೆ ಪ್ರತಿ ವರ್ಷ ಶೇ. 10 ರಷ್ಟು ಬಂಡವಾಳ ಮೌಲ್ಯದಲ್ಲಿ ಕಡಿತವಾಗುತ್ತಲೇ ಇರುತ್ತದೆ. (ವಿಮಾ ಕಂಪನಿಗಳ ಪ್ರಕಾರ ಶೇ.10 ಮಾತ್ರ ಕಡಿಮೆಯಾಗುತ್ತದೆ. ನಿಜವಾದ ಮಾರುಕಟ್ಟೆ ಮೌಲ್ಯದಲ್ಲಿ ಇದಕ್ಕಿಂತ ಕಡಿಮೆಯಾಗುತ್ತದೆ) ಈ ರೀತಿ ಸಾಲ ಮಾಡಿ ಪಡೆದ ಟ್ಯಾಕ್ಸಿಗಳಿಗೆ ಗ್ರಾಹಕರನ್ನು ಸೆಳೆಯಲು ಟ್ರಾವೆಲ್ ಏಜೆನ್ಸಿಗಳಲ್ಲಿ ತಮ್ಮ ವಾಹನಗಳನ್ನು ಅಟಾಚ್ ಮಾಡುವುದು ಅನಿವಾರ್ಯವಾಗಿದೆ. ಅದಕ್ಕಾಗಿಯೇ ಸಾವಿರಾರು ಸಣ್ಣ ಮತ್ತು ದೊಡ್ಡ ಟ್ರಾವೆಲ್ ಏಜೆನ್ಸಿಗಳು ತಲೆಎತ್ತಿವೆ. ಹಲವು ಏಜಿನ್ಸಿಗಳು ಚಾಲಕ/ಮಾಲೀಕರನ್ನು ಸುಲಿಗೆ ಮಾಡಿತ್ತಿರುವುದೂ ನಡೆದೇ ಇದೆ. ಇಂತಹ ದೊಡ್ಡ ಸಾರಿಗೆ ವಿಭಾಗವನ್ನು ಬಹುರಾಷ್ಟ್ರೀಯ ಕಂಪನಿಗಳು ಏಕಸ್ವಾಮ್ಯ ಮಾಡಿಕೊಳ್ಳಲು ಹೊರಟಿವೆ.
ಮೊದಲಿಗೆ ಟ್ಯಾಕ್ಸಿ ಚಾಲಕ/ಮಾಲೀಕರಿಗೆ ಹಣದ ಅಮಿಷವೊಡ್ಡುವ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆದುಕೊಳ್ಳುವುದು. ಜಾಹಿರಾತುಗಳ ಮೂಲಕ ಕಡಿಮೆ ದರದಲ್ಲಿ ಸೇವೆ ನೀಡುವುದಾಗಿ ಹೇಳಿ ಗ್ರಾಹಕರನ್ನು ತಮ್ಮತ್ತ ಸೆಳೆಯುವುದು. ಆ ಮೂಲಕ ನಗರದ ಇನ್ನಿತರೆ ಸಣ್ಣ ಪುಟ್ಟ ಟ್ರಾವೆಲ್ ಏಜನ್ಸಿಗಳು ಬಾಗಿಲು ಮುಚ್ಚುವಂತೆ ಮಾಡುವುದು. ಕೆಲವು ತಿಂಗಳುಗಳಲ್ಲೇ ಈ ತಂತ್ರಗಾರಿಕೆ ಯಶಸ್ವಿಯಾಗುತ್ತದೆ. ಸಣ್ಣ ಪುಟ್ಟ ಟ್ಯಾಕ್ಸಿ ಏಜೆನ್ಸಿಗಳಿಂದ ಟ್ಯಾಕ್ಸಿಗಳು ದೂರವಾಗುತ್ತವೆ. ದುಬಾರಿ ಬಾಡಿಗೆ ಎಂದು ದೂರುತ್ತಾ ಗ್ರಾಹಕರೂ ಅದರಿಂದ ದೂರವಾಗುತ್ತಾರೆ. ಇತ್ತ, ಸ್ವಂತ ಟ್ಯಾಕ್ಸಿ ಹೊಂದಿರುವ ಚಾಲಕ/ಮಾಲೀಕರು ತಮ್ಮ ಎಂದಿನ ಗ್ರಾಹಕರನ್ನು ಕಳೆದುಕೊಳ್ಳುತ್ತಾರೆ. ನಂತರ ಈ ಬಹುರಾಷ್ಟ್ರೀಯ ಕಂಪನಿಗಳು ಎಷ್ಟೇ ದರ ನಿಗದಿಪಡಿಸಿದರೂ ಗ್ರಾಹಕರ ಸೇವೆ ಮಾಡುವ ಅನಿವಾರ್ಯತೆಗೆ ಚಾಲಕ/ಮಾಲೀಕ ಒಳಗಾಗಬೇಕಾಗುತ್ತದೆ. ಮತ್ತಷ್ಟು ಸಂಕಷ್ಟಗಳಿಗೆ ಸಿಲುಕುವ ಅಪಾಯ ಬರಲಿದೆ.
ನಿಮ್ಮ ಟಿಪ್ಪಣಿ ಬರೆಯಿರಿ