
ಅಡುಗೆ ಅನಿಲದ ಬೆಲೆ ಏಕಿಷ್ಟು ದುಬಾರಿ? ಬೆಲೆ ಏರಿಕೆಗೆ ಮುಕ್ತ ಆರ್ಥಿಕ ನೀತಿ ಹೇಗೆ ಕಾರಣ? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸೇರಿದಂತೆ ಈ ಹಿಂದಿನ ಸರ್ಕಾರಗಳು ಗೃಹಬಳಕೆಯ ಅಡುಗೆ ಅನಿಲದ ಮೇಲಿನ ಸಬ್ಸಿಡಿ ತೆಗೆಯಲು ಏನೆಲ್ಲಾ ತಂತ್ರಗಳನ್ನು ಮಾಡಿದವು? ಭಾರತ ಸರ್ಕಾರದ ಅಂತಿಮ ಗುರಿ ಏನು? ಇವೆಲ್ಲವುಗಳ ಕುರಿತು ಒಂದು ವಿಶ್ಲೇಷಣಾ ವರದಿ ಇಲ್ಲಿದೆ.
*ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು
ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆ 1991 ರಲ್ಲಿ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಒಂದು ಅಂಶ ಅಡುಗೆ ಅನಿಲದ ಮೇಲಿನ ಈ ಸಬ್ಸಿಡಿ ಕಡಿತ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣ. ಜನಸಾಮಾನ್ಯರಿಗೆ ನೀಡುತ್ತಿರುವ ಆಹಾರದ ಮೇಲಿನ ಸಬ್ಸಿಡಿ, ರಸಗೊಬ್ಬರ, ವಿದ್ಯುತ್, ಸೀಮೆಎಣ್ಣೆ, ಡೀಸಲ್, ಪೆಟ್ರೋಲ್, ಅಡುಗೆ ಅನಿಲ ಇವುಗಳಿಗೆ ಸರ್ಕಾರ ನೀಡುತ್ತಿರುವ ರಿಯಾಯಿತಿಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಮತ್ತು ಈ ಎಲ್ಲವುಗಳ ಬೆಲೆ ನಿಗದಿ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಬೇಕು. ಇವುಗಳನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದಿಡಬೇಕು, ಇವುಗಳ ಉತ್ಪನ್ನ, ಸರಭರಾಜು, ವಿತರಣೆಯನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕು ಎಂಬುದು ಡಬ್ಯ್ಲೂಟಿಒ ಸಂಸ್ಥೆ ವಿಧಿಸಿದ ಷರತ್ತುಗಳಲ್ಲಿ ಕೆಲವು ಅಂಶಗಳಾಗಿವೆ. ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡ ನಂತರ ಕೇಂದ್ರದಲ್ಲಿ ಯಾವುದೇ ಸರ್ಕಾರ (ನರಸಿಂಹರಾವ್, ವಾಜಪೇಯಿ, ಯುಪಿಎ, ಅಥವಾ ಮೋದಿ ಸರ್ಕಾರಗಳು) ಅಧಿಕಾರದಲ್ಲಿದ್ದರೂ ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು ಮುಂದಾಗುತ್ತವೆ. ಯುಪಿಎ ಒಂದರ ಆಡಳಿತದ ಸಂದರ್ಭದಲ್ಲಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದ ಎಡ ಪಕ್ಷಗಳು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಒಪ್ಪಂದದ ಷರತ್ತುಗಳ ಮೂಲಕ ಇಂತಹ ಜನವಿರೋಧಿ ನೀತಿಗಳ ಜಾರಿಯ ವೇಗಕ್ಕೆ ಸ್ವಲ್ಪಮಟ್ಟಿಗೆ ತಡೆಯೊಡ್ಡಿದ್ದವು.
*ಪೆಟ್ರೋಲಿಯಂ ಪದಾರ್ಥಗಳ ಮೇಲಿನ ಸರ್ಕಾರದ ನಿಯಂತ್ರಣ ರದ್ದು
ಯುಪಿಎ ಒಂದರ ಸರ್ಕಾರಕ್ಕೆ ಎಡಪಕ್ಷಗಳು ನೀಡಿದ್ದ ಬೆಂಬಲವನ್ನು ಹಿಂಪಡೆದ ನಂತರದ ಯುಪಿಎ 1ರ ಮತ್ತು ಯುಪಿಎ 2ರ ಆಡಳಿತದ ಅವಧಿಯಲ್ಲಿ ಡಬ್ಲ್ಯೂಟಿಒ ಒಪ್ಪಂದಗಳ ಜಾರಿಗೆ ಸರ್ಕಾರ ಮುಂದಾಯಿತು. ಮುಕ್ತ ಆರ್ಥಿಕ ನೀತಿಗಳಿಗೆ ಅನುಗುಣವಾಗಿ ಯುಪಿಎ 2ರ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ ಇವುಗಳ ಮೇಲಿನ ಸರ್ಕಾರದ ನಿಯಂತ್ರಣವನ್ನು ಹಿಂಪಡೆಯಿತು. ನಿಯಂತ್ರಣ ರದ್ದುಗೊಳಿಸಿದ ನಂತರ ಇವುಗಳ ಬೆಲೆಯನ್ನು ತೈಲ ಕಂಪನಿಗಳೇ ನಿರ್ಧರಿಸುತ್ತವೆ ಎಂದು ಸರ್ಕಾರ ಹೇಳಿತು. ಸರ್ಕಾರ ಪೆಟ್ರೋಲಿಯಂ ಪದಾರ್ಥಗಳ ಮೇಲಿನ ದರ ನಿಯಂತ್ರಣ ರದ್ದು ಮಾಡಿದರೂ, ಇವುಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಒಂದೇ ಬಾರಿಗೆ ಸ್ಥಗಿತಗೊಳಿಸಲಾಗಲಿಲ್ಲ. ಹೀಗೆ ಹಿಂತೆಗೆದರೆ ಜನರ ಪ್ರತಿರೋಧವನ್ನು ಎದುರಿಸಬೇಕಾದೀತು ಎಂಬ ಭಯ ಆಳುವ ಪಕ್ಷಗಳಿಗೆ. ಈ ಕಾರಣದಿಂದ ಮೊದಲಿಗೆ ಪೆಟ್ರೋಲಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಹಂತ ಹಂತವಾಗಿ ಕಡಿತಗೊಳಿಸುತ್ತಾ ಬಂತು. ಪೆಟ್ರೋಲ್ ಬೆಲೆಯನ್ನು 15 ದಿನಕ್ಕೊಮ್ಮೆ ಸ್ವಲ್ಪ ಸ್ವಲ್ಪವೇ ದರ ಹೆಚ್ಚಳ ಮಾಡುತ್ತಾ ಹೋಯಿತು. ಅಷ್ಟರ ಮಟ್ಟಿಗೆ ಸಬ್ಸಿಡಿ ಹಣ ಸರ್ಕಾರಕ್ಕೆ ಉಳಿತಾಯವಾಗುತ್ತಾ ಬಂತು. ಈ ರೀತಿಯ ದರ ಹೆಚ್ಚಳದಿಂದ ಪೆಟ್ರೋಲ್ ಗೆ ಸರ್ಕಾರ ಕೊಡುತ್ತಿದ್ದ ಸಬ್ಸಿಡಿ ಸಂಪೂರ್ಣವಾಗಿ ನಿಂತುಹೋಯಿತು.
ಪೆಟ್ರೋಲ್ ನಂತರ ಡೀಸೆಲ್ ನ ಸರದಿ. ಪ್ರತಿ ಲೀಟರ್ ಡೀಸೆಲ್ ಮೇಲೆ ಪ್ರತಿ ತಿಂಗಳು 50 ಪೈಸೆ ಏರಿಕೆ ಮಾಡುವ ಮೂಲಕ, ಅದಕ್ಕೆ ನೀಡುತ್ತಿದ್ದ ಸಬ್ಸಿಡಿ ಪ್ರಮಾಣವನ್ನು ಸರ್ಕಾರ ಕಡಿತಗೊಳಿಸುತ್ತಾ ಬಂತು. ಡೀಸೆಲ್ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂಪಡೆಯುವ ಮುನ್ನ 2014ರ ಲೋಕಸಭಾ ಚುನಾವಣೆ ಬಂತು. ಆ ಚುನಾವಣೆಯಲ್ಲಿ ಯುಪಿಎ ಸರ್ಕಾರ ಸೋತು ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಮೋದಿ ಸರ್ಕಾರವೂ ಮುಕ್ತ ಆರ್ಥಿಕ ನೀತಿಗಳನ್ನು ಮುಂದುವರಿಸಿತು. ಮೋದಿ ಸರ್ಕಾರ ಡೀಸೆಲ್ ಮೇಲಿನ ಸಬ್ಸಿಡಿ ಕಡಿತದ ಹಿಂದಿನ ಸರ್ಕಾರದ ನೀತಿಯನ್ನು ಮುಂದುವರಿಸಿತು. ಅಂದರೆ ಮೋದಿ ಆಡಳಿತದಲ್ಲೂ ಡೀಸೆಲ್ ದರವನ್ನು 15 ದಿನಗಳಿಗೊಮ್ಮೆ ಹೆಚ್ಚಳ ಮಾಡುವುದನ್ನು ಮುಂದುವರಿಸಿತು. ಒಂದೆರಡು ತಿಂಗಳಲ್ಲಿ ಡೀಸೆಲ್ ಸಬ್ಸಿಡಿ ಸಂಪೂರ್ಣವಾಗಿ ಇಲ್ಲದಂತಾಯಿತು. ಪಡಿತರದ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆಯನ್ನು ಸ್ವಲ್ಪ ಸಲ್ಪವೇ ಕಡಿಮೆ ಮಾಡುತ್ತಾ ಬಂತು. ಉಜ್ವಲ ಯೋಜನೆಯ ಪ್ರಯೋಜನ ಪಡೆದು ಜನಸಾಮಾನ್ಯರು ಅಡುಗೆ ಮಾಡಲು ಸೀಮೆಎಣ್ಣೆ ಬದಲು ಅನಿಲ ಬಳಕೆ ಮಾಡಲು ಮುಂದಾದಾಗ ಪಡಿತರದ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆಯನ್ನು ನಿಲ್ಲಿಸಲಾಯ್ತು.
ಅಡುಗೆ ಅನಿಲದ ಮೇಲಿನ ಸಬ್ಸಿಡಿ
ಯುಪಿಎ 2ರ ಅವಧಿಯಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದ ವೀರಪ್ಪ ಮೊಯ್ಲಿಯವರು ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿ ಹಿಂತೆಗೆದುಕೊಳ್ಳುವ ಪ್ರಯತ್ನ ಮಾಡಿದರು. ಒಂದು ಕುಟುಂಬಕ್ಕೆ ವರ್ಷಕ್ಕೆ 6 ಸಬ್ಸಿಡಿ ಸಹಿತ ಸಿಲಂಡರುಗಳನ್ನು ಮಾತ್ರ ನೀಡುವುದಾಗಿಯೂ, ಆರಕ್ಕಿಂತ ಹೆಚ್ಚು ಸಿಲಂಡರ್ ಗಳು ಬೇಕಾದಲ್ಲಿ ಮಾರುಕಟ್ಟೆ ದರದಲ್ಲಿ ಖರೀದಿಸಬೇಕೆಂದೂ ಆದೇಶ ಹೊರಡಿಸಿದರು. ಜನರ ಪ್ರತಿರೋಧದಿಂದಾಗಿ ಇದನ್ನು 9 ಸಿಲಂಡರ್ ಗಳಿಗೆ ನಿಗದಿಪಡಿಸಿದರು. ಮತ್ತೊಂದು ಪ್ರಯತ್ನವಾಗಿ ದೇಶದ 56 ಜಿಲ್ಲೆಗಳಲ್ಲಿ ಗ್ರಾಹಕರ ಖಾತೆಗೆ ‘ನೇರ ನಗದು ಯೋಜನೆ’ ಜಾರಿಗೆ ಮನಮೋಹನ್ ಸಿಂಗ್ ಸರ್ಕಾರ ಮುಂದಾಯಿತು. ಅದರಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಬಹಳಷ್ಟು ಬಡ ಗ್ರಾಹಕರ ಬಳಿ ಬ್ಯಾಂಕ್ ಖಾತೆ ಇಲ್ಲದಿದ್ದುದು ಇದಕ್ಕೆ ಒಂದು ಕಾರಣ. ಅಷ್ಟರಲ್ಲಿ ಚುನಾವಣೆ ಸಮೀಪಿಸಿದ ಕಾರಣ ವರ್ಷಕ್ಕೆ 12 ಸಬ್ಸಿಡಿ ಸಹಿತ ಸಿಲಂಡರ್ ಪಡೆಯಲು ಅವಕಾಶ ಮಾಡಿಕೊಡಲಾಯಿತು.
‘ಜನ್ ಧನ್ ಯೋಜನೆ’
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಪ್ರಾರಂಭದಿಂದಲೇ ಡಬ್ಲ್ಯೂಟಿಒ ಷರತ್ತುಗಳನ್ನು ಪೂರೈಸಲು ವಿವಿಧ ಬಗೆಯ ಕ್ರಮಗಳನ್ನು ಕೈಗೊಳ್ಳಲು ಮುಂದಾಯಿತು. ಸರ್ಕಾರದ ಯೋಜನೆಗಳು ಜನಪರವಾಗಿವೆ ಎಂದು ನಂಬಿಸುತ್ತಲೇ, ಡಬ್ಲ್ಯೂಟಿಒ ಷರತ್ತುಗಳ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾದರು. ಅಡುಗೆ ಅನಿಲಕ್ಕೆ ನೀಡುತ್ತಿರುವ ಸಬ್ಸಿಡಿ ಹಿಂಪಡೆಯಲು ಯುಪಿಎ ಸರ್ಕಾರ ಜಾರಿಗೆ ತಂದ ‘ನೇರ ನಗದು ಯೋಜನೆ’ ಯಶಸ್ವಿಯಾಗದೇ ಇರುವುದಕ್ಕೆ ಕಾರಣಗಳನ್ನು ಹುಡುಕಿತು. ಬಹಳಷ್ಟು ಜನತೆ ಬ್ಯಾಂಕ್ ಖಾತೆ ಹೊಂದಿಲ್ಲದಿರುವುದೂ ಇದರ ವಿಫಲತೆಗೆ ಒಂದು ಪ್ರಮುಖ ಕಾರಣ ಎಂದು ತಿಳಿಯಿತು.
ಈ ಅಡೆತಡೆ ತೆಗೆಯಲು ಒಂದು ಉಪಾಯ ಮಾಡಿದರು. ಬಡವರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಲು ‘ಜನ್ ಧನ್ ಯೋಜನೆ’ ಜಾರಿಗೆ ತಂದರು. ಜನ್ ಧನ್ ಯೋಜನೆಯ ಮೂಲಕ ಯಾವುದೇ ಹಣ ಇಡದೆ ಬ್ಯಾಂಕ್ ಖಾತೆ ತೆರೆಯಬುಹುದು ಎಂದು ಸರ್ಕಾರ ಘೋಷಣೆ ಮಾಡಿತು. ಇದನ್ನು ಮೋದಿ ಸರ್ಕಾರದ ಬಡಜನರ ಪರ ಕಾಳಜಿ ಎಂದು ಬಣ್ಣಿಸಿದರು. ಇಷ್ಟನ್ನೇ ಹೇಳಿದರೆ ಬಹಳಷ್ಟು ಜನರು ಬ್ಯಾಂಕ್ ಖಾತೆ ತೆರೆಯುವ ಶ್ರಮ ಪಡುತ್ತಿರಲಿಲ್ಲ. ಬ್ಯಾಂಕ್ ಖಾತೆ ತೆರೆಯುವವರಿಗೆ ಕೆಲವು ಪ್ರೋತ್ಸಾಹದ ಕೊಡುಗೆಗಳ ಪೊಳ್ಳು ಘೋಷಣೆಯನ್ನೂ ಮಾಡಿದರು. ಈ ಯೋಜನೆಯಲ್ಲಿ ಬ್ಯಾಂಕ್ ಖಾತೆ ತೆರೆದರೆ ಒಂದು ಲಕ್ಷದವರೆಗೆ ವಿಮಾ ಸೌಲಭ್ಯ, ಡೆಬಿಟ್ ಕಾರ್ಡ್, ಐದು ಸಾವಿರ ರೂ.ಗಳ ವರೆಗೆ ಓವರ್ ಡ್ರಾಪ್ಟ್ ಸೌಲಭ್ಯ ಎಂಬ ಘೋಷಣೆಯನ್ನು ಸರ್ಕಾರ ಮಾಡಿದರೆ, ಬಿಜೆಪಿ ಅನುಯಾಯಿಗಳು “ಮೋದಿ ಕಪ್ಪು ಹಣ ಹೊರತೆಗೆದು ಜನ್ ಧನ್ ಖಾತೆಗೆ ಲಕ್ಷ ಲಕ್ಷ ಹಣ ಹಾಕುತ್ತಾರೆ, ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡುತ್ತಾರೆ…” ಎಂದೆಲ್ಲಾ ಪ್ರಚಾರ ಮಾಡಿ ಜನರನ್ನು ನಂಬಿಸಿದರು. ಕೋಟ್ಯಾಂತರ ಬಡವರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಂತು ಜನ್ ಧನ್ ಖಾತೆ ತೆರೆದರು.
‘ನೇರ ನಗದು ಯೋಜನೆ‘
ಮುಂದಿನ ಹಂತವಾಗಿ ‘ಬ್ಯಾಂಕ್ ಖಾತೆಗೆ ಅನಿಲ ಸಂಪರ್ಕದ ಸಂಖ್ಯೆ ಜೋಡಣೆ’ ಮಾಡುವಂತೆ ಕರೆ ನೀಡಿದರು. ಆ ನಂತರ ಗ್ರಾಹಕರ ಖಾತೆಗೆ ಹಣ ವರ್ಗಾಯಿಸುವ ‘ನೇರ ನಗದು ಯೋಜನೆ'(DBT) ಜಾರಿಗೆ ತಂದು, ಗ್ರಾಹಕರು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಿ, ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತದೆ ಎಂದರು. ಇದು ಸಬ್ಸಿಡಿ ಸೋರಿಕೆಯನ್ನು ತಡೆಯುವ ಮೂಲಕ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶವಾಗಿದೆ ಎಂದರು. ಈ ಎಲ್ಲಾ ಪ್ರಕ್ರಿಯೆಯಲ್ಲಿ ಸಬ್ಸಿಡಿ ಅನಿಲದ ಕೋಟ್ಯಾಂತರ ಸಂಪರ್ಕ ಕಡಿತಗೊಂಡು ಅಷ್ಟರ ಮಟ್ಟಿಗೆ ಸರ್ಕಾರಕ್ಕೆ ಸಬ್ಸಿಡಿ ಹೊರೆ ಕಡಿಮೆಯಾಯಿತು.
‘ಗಿವ್ ಇಟ್ ಅಪ್‘
ಇದರ ಮುಂದುವರಿದ ಭಾಗವಾಗಿ ಪ್ರಧಾನಿ ಮೋದಿಯವರು “ಉಳ್ಳವರಿಗೇಕೆ ಸಬ್ಸಿಡಿ? ನೋಡಿ, ಹಳ್ಳಿಗಳಲ್ಲಿ ಬಡ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತ ಹೊಗೆಯಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಅವರಿಗಾಗಿ ಸಬ್ಸಿಡಿ ಅನಿಲ ಬಿಟ್ಟುಕೊಡಿ” ಎನ್ನುತ್ತ ‘ಗಿವ್ ಇಟ್ ಅಪ್’ ಹೆಸರಿನಲ್ಲಿ ಸಬ್ಸಿಡಿ ಸಿಲಂಡರ್ ಹಿಂತಿರುಗಿಸುವಂತೆ ಮನವಿ ಮಾಡಿದರು. ಈ ಮನವಿಗೆ ಕೋಟಿಗೂ ಹೆಚ್ಚು ಕುಟುಂಬಗಳು ಸ್ಪಂಧಿಸಿ ತಮ್ಮ ಸಬ್ಸಿಡಿ ಸಿಲಿಂಡರ್ ಹಿಂತಿರುಗಿಸಿ, ಮಾರುಕಟ್ಟೆ ದರದಲ್ಲಿ ಅನಿಲ ಖರೀದಿಸಲು ಮುಂದಾದರು. ಇಂತಹ ಒಂದಷ್ಟು ಕುಟುಂಬಗಳಿಗೆ ಪ್ರಾರಂಭದಲ್ಲಿ ಮೋದಿಯವರೇ ಕೊಟ್ಟಿದ್ದಾರೆ ಎನ್ನಲಾದ ಧನ್ಯವಾದಗಳನ್ನು ಅರ್ಪಿಸುವ ಪತ್ರವೊಂದನ್ನು ಅನಿಲ ಸರಭರಾಜು ಕಂಪನಿಯವರು ಕೊಟ್ಟರು. ಮೋದಿಯವರ ಗಿವ್ ಇಟ್ ಅಪ್ ಕರೆಗೆ ಓಗೊಡದ ಸಿರಿವಂತ ನೌಕರರಿಗೆ ಅವರ ಸಂಸ್ಥೆಗಳ ಮಾಲೀಕರಿಂದ ಹೇಳಿಕೆ ಕೊಡಿಸುವ ಮೂಲಕ ಒತ್ತಡ ತಂದರು. ಉದಾಹರಣೆಗೆ, ಮೋದಿ ಕರೆಗೆ ಓಗೊಟ್ಟು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಡಬೇಕೆಂದು ಇನ್ಪೋಸಿಸ್ ಸಂಸ್ಥೆಯ ನಾರಾಯಣ ಮೂರ್ತಿಯವರೂ ತಮ್ಮ ಸಂಸ್ಥೆಯ ನೌಕರರಿಗೆ ಕರೆಕೊಟ್ಟರು.
ಉಜ್ವಲ ಯೋಜನೆ
ಪ್ರಧಾನಿ ಕರೆಗೆ ಓಗೊಟ್ಟು ‘ಗಿವ್ ಇಟ್ ಅಪ್’ ನಿಂದ ಸಬ್ಸಿಡಿ ಕಳೆದುಕೊಂಡ ಕುಟುಂಬಗಳನ್ನು ನಂಬಿಸಲು ಬಿಪಿಎಲ್ ಕುಟುಂಬದರಿಗೆ ಉಚಿತ ಅನಿಲ ಸಂಪರ್ಕ ನೀಡುವ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಯನ್ನು ರೂಪಿಸಿ ಜಾರಿಗೆ ತಂದರು. ಈ ಯೋಜನೆ ಮೂಲಕ 1,600 ರೂ ವೆಚ್ಚದ ಉಚಿತ ಸಿಲಿಂಡರ್ ಮತ್ತು ರೆಗ್ಯೂಲೇಟರ್ ಕೊಟ್ಟರು. ಕೆಲವು ರಾಜ್ಯ ಸರ್ಕಾರಗಳು ಉಚಿತ ಸ್ಟೌವ್ ಕೊಟ್ಟವು. (2022ರ ವರೆಗೆ 9 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.
10 ಲಕ್ಷ ಆದಾಯವಿರುವ ಕುಟುಂಬಗಳಿಗೆ ಸಬ್ಸಿಡಿ ಸ್ಥಗಿತ
ಇಷ್ಟಕ್ಕೇ ಇದು ನಿಲ್ಲಲಿಲ್ಲ. ಇದರ ಮುಂದುವರಿದ ಭಾಗವಾಗಿ ವಾರ್ಷಿಕ 10 ಲಕ್ಷ ಆದಾಯವಿರುವ ಕುಟುಂಬಕ್ಕೆ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ಕೊಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿತು. ಸರ್ಕಾರಿ ನೌಕರರಿಗೆ ಸಬ್ಸಿಡಿ ಅನಿಲ ಪೂರೈಕೆ ನಿಲ್ಲಿಸಲಾಯ್ತು. ನಂತರ, ಅಡುಗೆ ಅನಿಲದ ದರವನ್ನು ನಿದಾನವಾಗಿ ಏರಿಕೆ ಮಾಡುತ್ತ, ಮತ್ತೊಂದೆಡೆ ಸಬ್ಸಿಡಿ ಹಣವನ್ನು ಕಡಿತ ಮಾಡುತ್ತಾ ಸಾಗಿತು. 200ರಿಂದ 300 ರೂ ವರೆಗೂ ಬರುತ್ತಿದ್ದ ಸಬ್ಸಿಡಿ ಕೆಲವೊಮ್ಮೆ 40 ರೂ ಗಳಿಗೆ ಇಳಿಯಿತು. ಬಹಳಷ್ಟು ಫಲಾನುಭವಿಗಳಿಗೆ ಈ ಅಲ್ಪ ಪ್ರಮಾಣದ ಸಬ್ಸಿಡಿಯೂ ಬರುತ್ತಿರಲಿಲ್ಲ.
ಲಾಕ್ ಡೌನ್ ಸಂದರ್ಭದಲ್ಲಿ ಸಂಪೂರ್ಣ ಸಬ್ಸಿಡಿ ಸ್ಥಗಿತ
ಕೊರೋನಾ ಸಾಂಕ್ರಾಮಿಕ ರೋಗ ಮತ್ತು ಲಾಕ್ ಡೌನ್ ನ ಸಂಕಷ್ಟದ ಸಮಯವನ್ನು ಸರ್ಕಾರ ತನ್ನ ಮುಕ್ತ ಆರ್ಥಿಕ ನೀತಿಗಳ ಜಾರಿ ಮಾಡಲು ದುರುಪಯೋಗ ಮಾಡಿಕೊಂಡಿತು. ಇಡೀ ದೇಶದ ಜನತೆ ತಮ್ಮ ತಮ್ಮ ಮನೆಗಳಿಂದ ಹೊರಬರಲಾಗದ, ಹೊರ ಬಂದು ಪ್ರತಿಭಟನೆ ವ್ಯಕ್ತಪಡಿಲಾಗದ ಲಾಕ್ ಡೌನ್ ಸಮಯದಲ್ಲೇ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಅಲ್ಪ ಸ್ವಲ್ಪ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂತೆಗೆದು ಕೊಂಡಿತು.
ಕಚ್ಚಾ ತೈಲ ಬೆಲೆ ಕಡಿಮೆಯಾದರು ಬೆಲೆ ಇಳಿಸಲಿಲ್ಲ.
ಅನಿಲ ಸಂಸ್ಥೆಗಳೇ ದರ ನಿಗದಿ ಮಾಡುತ್ತವೆ. ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ ಎಂದು ಮೋದಿ ಸರ್ಕಾರ ಬೆಲೆ ನಿಯಂತ್ರಣ ಮಾಡುವ ತನ್ನ ಜವಾಬ್ಧಾರಿಯಿಂದ ನುಣುಚಿಕೊಳ್ಳುತ್ತದೆ. ಆದರೂ ಯಾವುದಾದರೂ ಚುನಾವಣೆ ಸಮೀಪಿಸಿದಾಗ ಪೆಟ್ರೋಲಿಯಂ ಪದಾರ್ಥಗಳ ದರ ಹೆಚ್ಚಳ ಮಾಡುವುದನ್ನು ತಡೆ ಹಿಡಿಯಲಾಗುತ್ತದೆ. ಇತ್ತೀಚೆಗೆ ಅಡುಗೆ ಅನಿಲದ ಬೆಲೆ ಏರಿಕೆಯೂ ಮೂರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಒಂದೆರಡು ದಿನಗಳಲ್ಲೇ ಘೋಷಣೆಯಾಯಿತು. ಇದರ ಅರ್ಥವೆಂದರೆ, ಬೆಲೆ ನಿಯಂತ್ರಣ ಆಳುವವರ ಕೈಯಲ್ಲೇ ಇದೆ ಅಥವಾ ಆಳುವವರ ಸೂಚನೆಯಂತೆ ತೈಲ ಕಂಪನಿಗಳು ನಡೆದುಕೊಳ್ಳುತ್ತವೆ.
ತೈಲ ಸಂಸ್ಥೆಗಳು ಅಂತರಾಷ್ಟ್ರೀಯ ಮಟ್ಟದ ತೈಲ ಬೆಲೆ ಏರಿಕೆಗೆ ಅನುಗುಣವಾಗಿ ಪೆಟ್ರೋಲಿಯಂ ಪದಾರ್ಥಗಳ ದರ ನಿಗದಿ ಮಾಡಲಾಗುತ್ತದೆ ಎಂದು ಹೇಳುತ್ತಾರಾದರೂ, ಇದರ ಪರಿಸ್ಥಿತಿಯೇ ಬೇರೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ ಅದಕ್ಕೆ ಅನುಗುಣವಾಗಿ ಭಾರತದಲ್ಲಿ ಬೆಲೆ ಇಳಿಕೆ ಮಾಡುವುದಿಲ್ಲ. 2014ರ ಪ್ರಾರಂಭದಲ್ಲಿ 120 ಅಮೆರಿಕನ್ ಡಾಲರ್ ಇದ್ದ ಬ್ಯಾರಲ್ ಕಚ್ಚಾ ತೈಲದ ಬೆಲೆ ಒಮ್ಮೆ35 ಡಾಲರ್ ವರೆಗೂ ಕುಸಿದಿತ್ತು. ದರ ಇಳಿಸಿ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಇದರ ಲಾಭವನ್ನು ತಾನೇ ಕಬಳಿಸತೊಡಗಿತು. ಸರ್ಕಾರದ ಮುಂದಿನ ಗುರಿ ಸಾರ್ವಜನಿಕ ಒಡೆತನದಲ್ಲಿ ಇರುವ ತೈಲ ಕಂಪನಿಗಳನ್ನು ಖಾಸಗಿ ಬಂಡವಾಳಗಾರರಿಗೆ ಮಾರಾಟ
ನಿಮ್ಮ ಟಿಪ್ಪಣಿ ಬರೆಯಿರಿ