
ಕೊರೋನಾ ಅವಧಿಯಲ್ಲಿ, ಮಾರ್ಚ್ 28, 2020 ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಪಿಎಂ ಕೇರ್ಸ್ ಫಂಡ್’ ಎಂಬ ನಿಧಿಯನ್ನು ರಚಿಸಿದರು. ಮೋದಿ ಈ ಪ್ರತಿಷ್ಠಾನದ ಅಧ್ಯಕ್ಷರಾಗಿ ಮತ್ತು ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರುಗಳನ್ನು ಸದಸ್ಯರನ್ನಾಗಿ ನೇಮಿಸಿಕೊಂಡರು. ಈ ನಿಧಿಗೆ ಸಾವಿರಾರು ಕೋಟಿ ರೂ.ಗಳನ್ನು ದಾನ ಪಡೆಯಲಾಗಿದೆ. ಆದರೆ ಇಲ್ಲಿಯವರೆಗೆ ಪಿಎಂ ಕೇರ್ಸ್ ನಿಧಿಗೆ ಎಷ್ಟು ಹಣ ನೀಡಲಾಗಿದೆ, ಬಂದ ಹಣವನ್ನು ಯಾವುದಕ್ಕೆ ಮತ್ತು ಹೇಗೆ ಬಳಸಲಾಗಿದೆ ಎಂಬ ವಿವರಗಳನ್ನು ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲೂ ನೀಡಿಲ್ಲ. ಮಾಹಿತಿ ಕೇಳಿದರೆ, “ಪಿಎಂ ಕೇರ್ಸ್ ನಿಧಿಯು ಭಾರತದ ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ, ಈ ನಿಧಿಯನ್ನು ಭಾರತ ಸರ್ಕಾರವು ನಿಯಂತ್ರಿಸುವುದಿಲ್ಲ. ಟ್ರಸ್ಟ್ ಯಾವುದೇ ಸರ್ಕಾರಿ ಹಣವನ್ನು ಸ್ವೀಕರಿಸುವುದಿಲ್ಲ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಉತ್ತರಿಸಲಾಗುವುದಿಲ್ಲ.” ಎನ್ನುತ್ತಾರೆ.
ಅದು ಕೊರೋನಾ ಸಾಂಕ್ರಾಮಿಕ ಕಾಲ. ಜನರ ಬದುಕಿಗೆ ಅವಶ್ಯಕವಾದ ಯಾವುದೇ ಪೂರ್ವ ಸಿದ್ದತೆಗಳನ್ನೂ ಮಾಡದೆ, ಸರ್ಕಾರ ಘೋಷಿಸಿದ ಏಕಾಏಕಿ ‘ಲಾಕ್ ಡೌನ್’ ಎಂಬ ಅವೈಜ್ಞಾನಿಕ ಕ್ರಮದಿಂದ, ದೇಶದ 135 ಕೋಟಿ ಜನರು ಏಕಾಏಕಿ ತಮ್ಮೆಲ್ಲಾ ಚುಟುವಟಿಕೆಗಳನ್ನು ನಿಲ್ಲಿಸುವ ಬಲವಂತಕ್ಕೆ ಒಳಗಾದರು. ದಿನನಿತ್ಯ ದುಡಿದು ತಿನ್ನುವ ಕುಟುಂಬಗಳು ತತ್ತು ಅನ್ನಕ್ಕೆ ಪರಿತಪಿಸುವಂತಾಯಿತು. ಅಂಗಡಿಗಳು, ಕಾರ್ಖಾನೆಗಳು, ಹೋಟೆಲ್ ಗಳು, ಬೀದಿ ಬದಿ ವ್ಯಾಪಾರಗಳು ಎಲ್ಲಾ ರೀತಿಯ ವ್ಯಾಪಾರ, ವ್ಯವಹಾರಗಳು ಕತ್ತಲು ಕಳೆದು ಬೆಳಕು ಅರಿಯುವುದರ ಒಳಗೆ ಸ್ಥಬ್ಧವಾದವು. ಕೃಷಿ ಚಟುವಟಿಕೆ ನಿಂತುಹೋಯಿತು. ಒಂದು ನರ ಪಿಳ್ಳೆಯೂ ಓಡಾಡದಂತೆ ಬೀದಿಗಳು, ರಸ್ತೆಗಳು ಬರಿದಾದವು. ಜನರು ತಮ್ಮ ಮನೆಯ ಬಾಗಿಲು ತೆರೆದು ಹೊರಬರದಂತೆ ಆಳುವವರ ಕಟ್ಟಪ್ಪಣೆಯಾಯಿತು. ಹಿರಿಯ ಜೀವಗಳು, ಅನಾರೋಗ್ಯ ಪೀಡಿತರು ಆಸ್ಪತ್ರೆ, ಔಷಧಿಗಳಿಲ್ಲದೆ ನರಳಿದರು. ಎಳೆಯ ಮಕ್ಕಳಿಗೆ ಹಾಲು ಕೊಳ್ಳಲೂ ಆಗದಂತಹ ಸ್ಥಿತಿ ಬಂತು. ಒಂದಷ್ಟು ಹಣ ಇಟ್ಟುಕೊಂಡಿದ್ದವರು ಎಲ್ಲಾದರೂ ಹಾಲು, ತರಕಾರಿ, ಹಣ್ಣು, ದವಸ ಧಾನ್ಯಗಳು ಸಿಗುತ್ತವೆಯೇ ಎಂದು ಮನೆಯ ಹೊಸ್ತಿಲು ದಾಟಿ ಹೊರ ಬಂದು ಬೀದಿಗೆ ಕಾಲಿಟ್ಟರೆ ಸಾಕು, ಪೊಲೀಸರ ಬೆತ್ತಗಳು ಮಾತನಾಡುತ್ತಿದ್ದವು. ಬೆಂಗಳೂರಿನಂತಹ ನಗರಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಹಿಂದುತ್ವವಾಧಿ ಮಾಧ್ಯಮಗಳ ಕ್ಯಾಮರಾಗಳು ಕಣ್ಣಲ್ಲಿ ಕಣ್ಣಿಟ್ಟು ಜನರು ಮನೆಯಿಂದ ಹೊರಬರುವುದನ್ನೇ ಕಾಯುತ್ತಾ ಓಡಾಡಿಕೊಂಡಿದ್ದವು, ಅಂತಹ ದೃಷ್ಯಗಳನ್ನು ಟಿವಿಗಳಲ್ಲಿ ನೇರ ಪ್ರಸಾರ ಮಾಡುವ ಮೂಲಕ ಕೋಮು ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದವು.
ಕೊರೋನಾ ಕಾಲದ ಸಂಕಷ್ಟಗಳು ಹೇಳಲು ಸಾಕಷ್ಟಿವೆ. ಇದರ ಕುರಿತಾದ ಲೇಖನ ಇದಲ್ಲ, ಆದರೂ, ಇಂತಹ ಸಂಕಷ್ಟದ ಸಮಯವನ್ನೇ ಬಂಡವಾಳಶಾಹಿ ಆಳುವ ವರ್ಗ, ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಹಿತಕ್ಕೆ ಹೇಗೆಲ್ಲಾ ಬಳಕೆ (ದುರ್ಬಳಕೆ) ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೆ ಒಂದು ಉದಾಹರಣೆ ಪಿ ಎಂ ಕೇರ್ಸ್ ಫಂಡ್ (ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ) ಸ್ಥಾಪನೆ.
ಪಿಎಂ ಕೇರ್ಸ್ ನಿಧಿ ಸ್ಥಾಪನೆ
27ನೇ ಮಾರ್ಚ್, 2020 ರಂದು ಪಿಎಂ ಕೇರ್ಸ್ ಫಂಡ್ ಸ್ಥಾಪಿಸಲಾಯಿತು. “COVID-19 ಸಾಂಕ್ರಾಮಿಕ ರೋಗದಿಂದ ಉಂಟಾಗುವಂತಹ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಮೀಸಲಾದ ನಿಧಿಯನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು, ಮತ್ತು ಪೀಡಿತರಿಗೆ ಪರಿಹಾರವನ್ನು ಒದಗಿಸುವ ಹೆಸರಿನಲ್ಲಿ ಪಿಎಂ ಕೇರ್ಸ್ ಫಂಡ್’ ಸ್ಥಾಪಿಸಲಾಗಿದೆ. ಪಿಎಂ ಕೇರ್ಸ್ ಫಂಡ್ ಅನ್ನು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿ ನೋಂದಾಯಿಸಲಾಗಿದೆ. ಪಿಎಂ ಕೇರ್ಸ್ ಫಂಡ್‌ನ [ PM India 24.8 MB ] ಟ್ರಸ್ಟ್ ಡೀಡ್ ಅನ್ನು ನೋಂದಣಿ ಕಾಯಿದೆ, 1908 ರ ಅಡಿಯಲ್ಲಿ ನೋಂದಾಯಿಸಲಾಗಿದೆ.” ಇದು ಪಿಎಂ ಕೇರ್ಸ್ ಗೆ ಸಂಬಂಧಿಸಿದ ಸರ್ಕಾರದ ಒಕ್ಕಣೆ.
ಪ್ರಧಾನಮಂತ್ರಿಯವರು ಪಿಎಂ ಕೇರ್ಸ್ ನಿಧಿಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ ಮತ್ತು ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು, ಭಾರತ ಸರ್ಕಾರದ ನಿಧಿಯ ಪದನಿಮಿತ್ತ ಟ್ರಸ್ಟಿಗಳು. ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರು (ಪ್ರಧಾನಿ) ಮೂರು ಟ್ರಸ್ಟಿಗಳನ್ನು ಟ್ರಸ್ಟಿಗಳ ಮಂಡಳಿಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಅವರು ಸಂಶೋಧನೆ, ಆರೋಗ್ಯ, ವಿಜ್ಞಾನ, ಸಮಾಜಕಾರ್ಯ, ಕಾನೂನು, ಸಾರ್ವಜನಿಕ ಆಡಳಿತ ಮತ್ತು ಲೋಕೋಪಕಾರ ಕ್ಷೇತ್ರದಲ್ಲಿ ಪ್ರಖ್ಯಾತ ವ್ಯಕ್ತಿಗಳಾಗಿರಬೇಕು. ಪಿಎಂಒ ದಲ್ಲಿ ಪಿಎಂ ಕೇರ್ಸ್ ಫಂಡ್‌ನ ಉಸ್ತುವಾರಿ ಹೊಂದಿರುವ ಹೆಚ್ಚುವರಿ ಕಾರ್ಯದರ್ಶಿ/ಜಂಟಿ ಕಾರ್ಯದರ್ಶಿಯವರು ಗೌರವ ಆಧಾರದ ಮೇಲೆ ನಿಧಿಯನ್ನು ನಿರ್ವಹಿಸುತ್ತಾರೆ ಎಂದು ಅದು ಹೇಳುತ್ತದೆ.
ನಿಧಿಯು ಸಂಪೂರ್ಣವಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಒಳಗೊಂಡಿರುತ್ತದೆ ಮತ್ತು ಸರ್ಕಾರದ ಯಾವುದೇ ಬಜೆಟ್ ಬೆಂಬಲವನ್ನು ಪಡೆಯುವುದಿಲ್ಲ. ಮೇಲೆ ತಿಳಿಸಿದ ಉದ್ದೇಶಗಳನ್ನು ಪೂರೈಸಲು ನಿಧಿಯನ್ನು ಬಳಸಿಕೊಳ್ಳಲಾಗುತ್ತದೆ.
ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆಗಳು ಆದಾಯ ತೆರಿಗೆ ಕಾಯಿದೆ, 1961 ರ ಅಡಿಯಲ್ಲಿ ಶೇ. 100 ವಿನಾಯಿತಿಗಾಗಿ 80 ಜಿ ಪ್ರಯೋಜನಗಳಿಗೆ ಅರ್ಹತೆ ಪಡೆಯುತ್ತವೆ. ಈ ನಿಧಿಗೆ ದೇಣಿಗೆಗಳನ್ನು ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ವೆಚ್ಚವಾಗಿ ಪರಿಗಣಿಸಲು ಅರ್ಹತೆ ಪಡೆಯುತ್ತದೆ.
ವಿದೇಶಿ ದೇಣಿಗೆ
ಈ ನಿಧಿ ಚೀನಾದ ಕಂಪನಿಗಳು ಸೇರಿದಂತೆ ವಿದೇಶಿ ಸಂಸ್ಥೆಗಳಿಂದ ಹಣವನ್ನು ಸ್ವೀಕರಿಸುತ್ತದೆ. 2019-20ರ ಹಣಕಾಸು ವರ್ಷದಲ್ಲಿ ರೂ. 40 ಲಕ್ಷ, 2020-21ರಲ್ಲಿ ರೂ. 494.92 ಕೋಟಿ ಮತ್ತು 2021-22ರಲ್ಲಿ ರೂ. 40.12 ಕೋಟಿ ವಿದೇಶಿ ದೇಣಿಗೆಯಾಗಿ ಸ್ವೀಕರಿಸಲಾಗಿದೆ. ಒಟ್ಟಾರೆಯಾಗಿ, ಕಳೆದ ಮೂರು ವರ್ಷಗಳಲ್ಲಿ ಪಿಎಂ ಕೇರ್ಸ್ ಫಂಡ್‌ಗೆ ವಿದೇಶಿ ದೇಣಿಗೆ ಮೂಲಕ 535.44 ಕೋಟಿ ರೂಪಾಯಿಗಳನ್ನು ಸ್ವೀಕರಿಸಲಾಗಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಅದೇ ರೀತಿ, 2019-20ನೇ ಹಣಕಾಸು ವರ್ಷದಲ್ಲಿ ರೂ. 3,075.85 ಕೋಟಿ, 2020-21ರಲ್ಲಿ ರೂ. 7013.99 ಕೋಟಿ ಮತ್ತು 2021-22ರಲ್ಲಿ ರೂ. 1,896.76 ಕೋಟಿಗಳನ್ನು ಸ್ವಯಂಪ್ರೇರಿತ ಕೊಡುಗೆಯಾಗಿ ಸ್ವೀಕರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸ್ವಯಂಪ್ರೇರಿತ ಕೊಡುಗೆಗಳ ಮೂಲಕ 12,156.39 ಕೋಟಿ ರೂ.ಗಳು ಮತ್ತು ವಿದೇಶಿ ದೇಣಿಗೆಗಳ ಮೂಲಕ 535.43 ಕೋಟಿ ರೂ.ಗಳು ಸೇರಿದಂತೆ ಒಟ್ಟು 12,691.82 ಕೋಟಿ ರೂಪಾಯಿಗಳನ್ನು ಈ ನಿಧಿ ಸ್ವೀಕರಿಸಿದೆ.
2021-22ನೇ ಹಣಕಾಸು ವರ್ಷದಲ್ಲಿ ವಿವಿಧ ಕೋವಿಡ್-19 ಸಂಬಂಧಿತ ಯೋಜನೆಗಳಿಗಾಗಿ 3,716.29 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ನಂತರ ಮಾರ್ಚ್ 2022 ಕ್ಕೆ 5,415.65 ಕೋಟಿ ರೂ.ಗಳನ್ನು ಬ್ಯಾಲೆನ್ಸ್‌ನಲ್ಲಿ ಹೊಂದಿದೆ ಎಂದು ರಶೀದಿ ಮತ್ತು ಪಾವತಿ ಖಾತೆಗಳು ತೋರಿಸಿವೆ. ಮೂರು ಹಣಕಾಸು ವರ್ಷಗಳಿಗೆ, ನಿಧಿಯು 263.98 ಕೋಟಿ ರೂ.ಗಳ ಬಡ್ಡಿಯನ್ನು ಪಡೆದಿದೆ.
ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಕಂಪನಿಗಳಿಗೆ ಟ್ರ್ಯಾಕರ್ primeinfobase.com ನಿಂದ ಸಂಗ್ರಹಿಸಲಾದ ಡೇಟಾ ಪ್ರಕಾರ, ಸರ್ಕಾರಿ ಒಡೆತನದ ಸಂಸ್ಥೆಗಳೇ 2019-20 ಮತ್ತು 2021-22ರ ನಡುವೆ ಈ ನಿಧಿಗೆ ಕನಿಷ್ಠ 2,913.6 ಕೋಟಿ ರೂ.ಗಳ ನೆರವು ನೀಡಿವೆ. ಅಗ್ರ ಐದು ದಾನಿಗಳೆಂದರೆ, ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (370 ಕೋಟಿ), ಎನ್‌ಟಿಪಿಸಿ (330 ಕೋಟಿ), ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ (275 ಕೋಟಿ), ಇಂಡಿಯನ್ ಆಯಿಲ್ ಕಾರ್ಪೊರೇಷನ್ (ರೂ. 265 ಕೋಟಿ), ಮತ್ತು ಪವರ್ ಫೈನಾನ್ಸ್ ಕಾರ್ಪೊರೇಷನ್ (ರೂ. 222.4. ಕೋಟಿ).
ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಇದೆ
ಈ ಮೊದಲೇ, ವಿಪತ್ತು ನಿರ್ವಹಣಾ ಕಾಯಿದೆ 2005, (‘ಆಕ್ಟ್’) ನ S. 46 ರ ಮೂಲಕ ರಚಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಇದೆ. ಆ ನಿಧಿಯ ಮೂಲಕವೇ ಸಾಂಕ್ರಾಮಿಕ ಸಂದರ್ಭದಂತಹ ತುರ್ತುಸ್ಥಿತಿ ಸಂದರ್ಭಗಳಲ್ಲಿ ಎನ್‌ಡಿಆರ್‌ಎಫ್ ನಿಂದ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಅರ್ಹತೆ ಇದೆ. ಹೀಗಾಗಿ ಅದರ ಶಾಸನಬದ್ಧ ಉದ್ದೇಶದ ಪ್ರಕಾರ ಬಳಕೆಗೆ ಇನ್ನೂ ಲಭ್ಯವಿದೆ. ಹೆಚ್ಚುವರಿಯಾಗಿ, ಜೈವಿಕ ವಿಪತ್ತುಗಳು ಅಥವಾ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳಿಗೆ NDRF ಯಾವುದೇ ನಿರ್ದಿಷ್ಟ ನಿಬಂಧನೆಗಳನ್ನು ಮಾಡುವುದಿಲ್ಲ. ಕೇಂದ್ರ ಸರ್ಕಾರವು ಈ ಕುರಿತು ಅಧಿಸೂಚನೆಯನ್ನು ಹೊರಡಿಸಿ ಇದನ್ನು ಈ ಉದ್ದೇಶಗಳಿಗಾಗಿ ಬಳಸಲು ಅವಕಾಶಗಳಿವೆ. ಪಿಎಂ ಕೇರ್ಸ್ ನಿಧಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಅಂಶವನ್ನು ದೆಹಲಿ ಹೈಕೋರ್ಟ್ ಸಹಾ ತನ್ನ ತೀರ್ಪಿನಲ್ಲಿ ಹೇಳಿದೆ.
ಆರ್‌ಟಿಐ ಅಥವಾ ಸಿಎಜಿ ಆಡಿಟ್ ಗೆ ಮುಕ್ತವಾಗಿಲ್ಲ
ಆದರೂ, ಪಿಎಂ ಕೇರ್ಸ್ ಹೆಸರಿನಲ್ಲಿ ಮತ್ತೊಂದು ನಿಧಿಯ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಮೂಡುತ್ತದೆ. ಪಿಎಂ ಕೇರ್ಸ್ ನ ಸ್ಥಿತಿಯು ಅದರ ಸ್ವರೂಪ ಮತ್ತು ಅದರ ಸುತ್ತ ಪಾರದರ್ಶಕತೆಯ ಕೊರತೆಯಿಂದಾಗಿ ವಿವಾದಾತ್ಮಕವಾಗಿದೆ. ಈ ನಿಧಿಯು ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ನಿಂದ ಆರ್‌ಟಿಐ ಅಥವಾ ಆಡಿಟ್‌ಗೆ ಮುಕ್ತವಾಗಿಲ್ಲ. ಅಂದರೆ, ಈ ನಿಧಿಗೆ ಬರುವ ಹಣ ಮತ್ತು ಅದು ಮಾಡುವ ವೆಚ್ಚದ ಲೆಕ್ಕಗಳನ್ನು ಸಾರ್ವಜನಿಕರಿಗೆ, ಸರ್ಕಾರಕ್ಕೆ ತಿಳಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಕೇಂದ್ರ (CPIL) ಅರ್ಜಿ ಸಲ್ಲಿಸಲಾಗಿತ್ತು.
ಕೋವಿಡ್-19 ಬಿಕ್ಕಟ್ಟಿಗೆ ವ್ಯಕ್ತಿಗಳು ಅಥವಾ ಸಂಸ್ಥೆಗಳು ನೀಡುವ ಯಾವುದೇ ಅನುದಾನ ಅಥವಾ ಕೊಡುಗೆಗಳನ್ನು NDRF ನಲ್ಲಿ ಇಡಬೇಕು, ಈ ಕೊಡುಗೆಗಳನ್ನು ಪಿಎಂ ಕೇರ್ಸ್ ನಿಧಿಗೆ ಜಮಾ ಮಾಡುವುದು ಕಾಯಿದೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ ಅರ್ಜಿದಾರರು, ಪಿಎಂ ಕೇರ್ಸ್ ನಿಧಿಗಿಂತ ಭಿನ್ನವಾಗಿ ಎನ್‌ಡಿಆರ್‌ಎಫ್ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಮೂಲಕ ಆಡಿಟ್‌ಗೆ ಒಳಪಟ್ಟಿರುತ್ತದೆ ಎಂದು ಒತ್ತಿ ಹೇಳಿದರು. ಮತ್ತು ಪಿಎಂ ಕೇರ್ಸ್ ನಿಧಿಯನ್ನು CAG ಆಡಿಟ್‌ಗೆ ಒಳಪಡಿಸುವಂತೆ ಕೇಳಿಕೊಂಡರು.
ಇದೂ ಅಲ್ಲದೆ, ಸಾಂಕ್ರಾಮಿಕ ಮತ್ತು ನಂತರದ ವಲಸೆ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರದ ಸ್ಪಂಧನೆ ಅಸಮರ್ಪಕವಾಗಿದೆ ಎಂದು ಅರ್ಜಿದಾರರು ವಾದಿಸಿದರು. ಆದಾಗ್ಯೂ, ನ್ಯಾಯಾಲಯ “ಎನ್‌ಡಿಆರ್‌ಎಫ್ ಶಾಸನಬದ್ಧವಾಗಿ ರಚಿತವಾದ ನಿಧಿಯಾಗಿದ್ದು, ಸಿಎಜಿಯ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಾಲಯವು ಗಮನಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿದ್ದು, ಯಾವುದೇ ಸಾರ್ವಜನಿಕ ನಿಧಿಯನ್ನು ಒಳಗೊಂಡಿರುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಸ್ವಯಂಪ್ರೇರಿತ ಕೊಡುಗೆಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ಇದನ್ನು ಸಿಎಜಿ ಆಡಿಟ್ ಮಾಡುವ ಅಗತ್ಯವಿಲ್ಲ ಮತ್ತು ಬದಲಿಗೆ ಖಾಸಗಿ ಅಕೌಂಟೆಂಟ್ ಮೂಲಕ ಆಡಿಟ್ ಮಾಡಬಹುದು.” ಎಂದು ಹೇಳಿ ಈ ಅರ್ಜಿಯನ್ನು 2020ರ ಆಗಸ್ಟ್ 18 ರಂದು ವಜಾಗೊಳಿಸಿತು.
ಇದು ಸರ್ಕಾರಿ ನಿಧಿಯಲ್ಲ: ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ!!
2023ರ ಜನವರಿಯಲ್ಲಿ, ಮಾಹಿತಿ ಹಕ್ಕು ಕಾಯಿದೆ, 2005 ರ ಅಡಿಯಲ್ಲಿ ಮಾಹಿತಿ ಕೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಧಾನ ಮಂತ್ರಿ ಕಚೇರಿಯು (PMO) ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದು ಹೀಗೆ: “ಪಿಎಂ ಕೇರ್ಸ್ ನಿಧಿಯು ಭಾರತದ ಸಂವಿಧಾನದ 12 ನೇ ವಿಧಿಯ ಅಡಿಯಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ, ಈ ನಿಧಿಯನ್ನು ಭಾರತ ಸರ್ಕಾರವು ನಿಯಂತ್ರಿಸುವುದಿಲ್ಲ. ಟ್ರಸ್ಟ್ ಯಾವುದೇ ಸರ್ಕಾರಿ ಹಣವನ್ನು ಸ್ವೀಕರಿಸುವುದಿಲ್ಲ ಮತ್ತು ಅದರ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಉತ್ತರಿಸಲಾಗುವುದಿಲ್ಲ.”
ಪಿಎಂ ಕೇರ್ಸ್ ನಿಧಿಯು ಸಂವಿಧಾನದಡಿಯಲ್ಲಿ ‘ರಾಜ್ಯ'(State) ಅಲ್ಲ ಎಂದು ಕಂಡುಬಂದರೆ, ‘gov’ ಎಂಬ ಡೊಮೇನ್ ಹೆಸರು, ಪ್ರಧಾನಿಯವರ ಭಾವಚಿತ್ರ, ರಾಜ್ಯ ಲಾಂಛನ ಇತ್ಯಾದಿಗಳ ಬಳಕೆಯನ್ನು ನಿಲ್ಲಿಸಬೇಕು. ನಿಧಿಯ ಟ್ರಸ್ಟಿಗಳು ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಮತ್ತು ನಿಧಿ ರಚನೆಯಾದ ತಕ್ಷಣ, ಕೇಂದ್ರವು ತನ್ನ ಉನ್ನತ ಸರ್ಕಾರಿ ಅಧಿಕಾರಿಗಳ ಮೂಲಕ ನಿಧಿಯನ್ನು ಸ್ಥಾಪಿಸಿ ಸರ್ಕಾರವು ನಿರ್ವಹಿಸುತ್ತಿದೆ ಎಂದು ಪ್ರತಿನಿಧಿಸುತ್ತದೆ ಎಂದು ಗಂಗ್ವಾಲ್ ಅವರ ವಕೀಲರ ತಂಡ ತಮ್ಮ ಮನವಿಯಲ್ಲಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
‘gov’ ಎಂಬ ಡೊಮೇನ್ ಹೆಸರು ಬಳಕೆಯೇಕೆ?
ಪಿಎಂ ಕೇರ್ಸ್ ನಿಧಿಯು ಸಂವಿಧಾನದಡಿಯಲ್ಲಿ ‘ರಾಜ್ಯ'(State) ಅಲ್ಲ ಎಂದು ಕಂಡುಬಂದರೆ, ‘gov’ ಎಂಬ ಡೊಮೇನ್ ಹೆಸರು, ಪ್ರಧಾನಿಯವರ ಭಾವಚಿತ್ರ, ರಾಜ್ಯ ಲಾಂಛನ ಇತ್ಯಾದಿಗಳ ಬಳಕೆಯನ್ನು ನಿಲ್ಲಿಸಬೇಕು. ನಿಧಿಯ ಟ್ರಸ್ಟಿಗಳು ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ಹಣಕಾಸು ಸಚಿವರು ಮತ್ತು ನಿಧಿ ರಚನೆಯಾದ ತಕ್ಷಣ, ಕೇಂದ್ರವು ತನ್ನ ಉನ್ನತ ಸರ್ಕಾರಿ ಅಧಿಕಾರಿಗಳ ಮೂಲಕ ನಿಧಿಯನ್ನು ಸ್ಥಾಪಿಸಿ ಸರ್ಕಾರವು ನಿರ್ವಹಿಸುತ್ತಿದೆ ಎಂದು ಪ್ರತಿನಿಧಿಸುತ್ತದೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಪಿಎಂ ಕೇರ್ಸ್ ವೆಬ್‌ಸೈಟ್‌ನ ಆವರ್ತಕ ಲೆಕ್ಕಪರಿಶೋಧನೆ ಮತ್ತು ಅದಕ್ಕೆ ಸ್ವೀಕರಿಸಿದ ದೇಣಿಗೆಗಳ ವಿವರಗಳನ್ನು ಬಹಿರಂಗಪಡಿಸಲು ನಿರ್ದೇಶಸುವಂತೆ ಗಂಗ್ವಾಲ್ ಅವರ ವಕೀಲರ ತಂಡ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿತ್ತು.
ಏಕೆ ಇಂತಹ ಮುಚ್ಚುಮರೆ?
ಪಿಎಂ ಕೇರ್ಸ್ ನಿಧಿ ಪಾರದರ್ಶಕವಾಗಿದ್ದರೆ, ಇದರ ಹಣವನ್ನು ಬಿಜೆಪಿ, ಸಂಘಪರಿವಾರ ಅಥವಾ ಬೇರೆ ಯಾವುದೇ ಸಂಘಟನೆ/ವ್ಯಕ್ತಿಗಳಿಂದ ದುರುಪಯೋಗ ಆಗುತ್ತಿಲ್ಲ ಎನ್ನುವುದಾದರೆ, ಇದರಲ್ಲಿ ಕಪ್ಪು ಹಣ ದಾನವಾಗಿ ಬರುವುದಿಲ್ಲ ಎನ್ನುವುದಾದರೆ, ಚೀನಾ ಸೇರಿದಂತೆ ವಿದೇಶಗಳಿಂದ, ವಿದೇಶಿ ಕಂಪನಿಗಳಿಂದ ಬರುವ ದಾನವು ದೇಶದ ಆಂತರಿಕ ಭದ್ರತೆಗೆ ಅಪಾಯ ಇಲ್ಲ ಎನ್ನುವುದಾದರೆ, ಇದರ ಲೆಕ್ಕ ಪತ್ರಗಳನ್ನು ಸಾರ್ವಜನಿಕರಿಗೆ ತಿಳಿಸಲು ಮುಂದಾಗುವುದರಲ್ಲಿ ತಪ್ಪೇನೂ ಇರುವುದಿಲ್ಲ ಅಲ್ಲವೇ? ಮೋದಿ ಸರ್ಕಾರ ಈ ಲೆಕ್ಕ ಪತ್ರಗಳನ್ನು ಮುಚ್ಚಿಡುವುದರಲ್ಲೇ ಪಿಎಂ ನಿಧಿಯ ಹಣದ ಪಾರದರ್ಶಕತೆಯ ಬಗ್ಗೆ ಬಹಳಷ್ಟು ಸಂಶಯಗಳು ಹುಟ್ಟಿಕೊಳ್ಳುತ್ತವೆ.
ನಿಮ್ಮ ಟಿಪ್ಪಣಿ ಬರೆಯಿರಿ