ಅಸ್ತಿತ್ವದಲ್ಲಿಲ್ಲದ ದೆವ್ವಕ್ಕೆ ಹೆದರಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿ

ಅಸ್ತಿತ್ವದಲ್ಲಿ ಇಲ್ಲದ ದೆವ್ವಕ್ಕೆ ಅಂಜಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿಯ ಕರುಣಾಜನಕ ನೈಜ ಕತೆ ಇದು. (ಇದು 2014-15 ರಲ್ಲಿ ನಡೆದ ಘಟನೆ) ಆಕೆ ಮಂಡ್ಯ ಜಿಲ್ಲೆಗೆ ಸೇರಿದ ಹಳ್ಳಿಯವಳು. ಆಕೆಯ ಹೆಸರು ಮಹಾದೇವಿ. ಆಕೆಗೆ ಇಬ್ಬರು ಮಕ್ಕಳು. 20 ವರ್ಷದ ಮಗ, 17 ವರ್ಷದ ಮಗಳು. ತನ್ನಿಂದ ಪತಿ ದೂರವಾದ ಮೇಲೆ ಮಕ್ಕಳನ್ನು ಸಲಹುವ ಸಂಪೂರ್ಣ ಜವಾಬ್ದಾರಿ ಈಕೆಯದಾಯಿತು. ಹಳ್ಳಿಯಲ್ಲಿ ಬದುಕು ಸಾಗಿಸಲು ಸಾಧ್ಯವಾಗದಿದ್ದಾಗ, ತನ್ನೆರಡೂ ಮಕ್ಕಳ ಜೊತೆ ಬೆಂಗಳೂರಿಗೆ ಬಂದು ನೆಲಸತೊಡಗಿದಳು. ಆಕೆ ಸಿದ್ದಉಡುಪು ಕಾರ್ಖಾನೆ ಒಂದರಲ್ಲಿ ಹೆಲ್ಫರ್  ಕೆಲಸಕ್ಕೆ ಸೇರಿಕೊಂಡಳು. ಮಗ ಎಸ್ ಟಿ ಡಿ ಬೂತ್ ಇದ್ದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡನು. ಹೇಗೋ ಸಂಸಾರ ಸಾಗುತ್ತಿತ್ತು.

ಮಗಳಿಗೆ 16 ವರ್ಷ ತುಂಬುವ ಮೊದಲೇ ಪಕ್ಕದ ಮನೆಯ ಯುವಕನೊಬ್ಬ ಆಕೆಯನ್ನು ಪ್ರೀತಿಸತೊಡಗಿದ. ಆತ ಕಾಲ್ ಸೆಂಟರ್ ಕಂಪನಿಯ ಟ್ಯಾಕ್ಸಿ ಚಾಲಕನಾಗಿದ್ದ. ಮೊದಲೇ ಬಡತನದಲ್ಲಿ ನೊಂದಿದ್ದ ಆ ತಾಯಿ ತನ್ನ ಮಗಳಿಗೆ ಅನುಕೂಲಸ್ಥ ವರನನ್ನು ಹುಡುಕಿ ಮದುವೆ ಮಾಡಲು ಸಾಧ್ಯವಿರದ ಕಾರಣ, ಆ ಯುವಕನಿಗೆ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ದೇವಸ್ಥಾನವೊಂದರಲ್ಲಿ ದಾರೆಯೆರುದು ಕೊಟ್ಟಳು.

ಹೀಗೆ ಬದುಕು ಸಾಗುತ್ತಿರುವಾಗ ಮಗನಿಗೆ ಅದ್ಯಾವುದೋ ಖಾಯಿಲೆ ಬಂದಿತು. ಪ್ರಾರಂಭದಲ್ಲಿ ಜ್ವರ ಬಂದು ಕ್ರಮೇಣ ರೋಗ ಉಲ್ಬಣಗೊಂಡು ಆಹಾರ ಸೇವಿಸಲೂ ಸಾಧ್ಯವಾಗದ ಸ್ಥಿತಿ ಬಂತು. ಮೊದಲಿಗೆ ಸಣ್ಣ ಕ್ಲಿನಿಕ್ ಒಂದರ ವೈದ್ಯರ ಬಳಿ ತೋರಿಸಿ ಔಷಧಿ ಪಡೆದರೂ ಖಾಯಿಲೆ ಗುಣವಾಗಲಿಲ್ಲ. ಶರೀರ ಕ್ಷೀಣಿಸತೊಡಗಿತು. ಇವರ ಪಕ್ಕದ ಮನೆಯವರು ಇದು ದೆವ್ವದ ಕಾಟ ಎಂದರು. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸುವಂತೆ ಸೂಚಿಸಿದರು. ಕೆಲವು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿದರೂ ಯುವಕನ ಖಾಯಿಲೆ ಗುಣವಾಗಲಿಲ್ಲ. ಚಿಕ್ಕ ವಯಸ್ಸಿನಿಂದಲೂ ದೆವ್ವದ ಬಗ್ಗೆ ಭಯ, ಬೀತಿಯಿಂದ ಇದ್ದ ಮಹಾದೇವಿ ನೆರೆಮನೆಯವರ ಹೇಳಿಕೆಯನ್ನು ನಂಬಿದಳು. ಮಂತ್ರವಾದಿಯೊಬ್ಬನನ್ನು ಮನೆಗೆ ಕರೆಸಿ ದೆವ್ವ ಬಿಡಿಸುವ ಪ್ರಯತ್ನ ಮಾಡಿದರು. ಅನಾರೋಗ್ಯದ ಕಾರಣ ಬಹಳ ದಿನಗಳಿಂದ ಆಹಾರ ಸೇವಿಸಲಾಗದ ಕಾರಣ ಆ ಯುವಕ ನಿತ್ರಾಣನಾಗಿದ್ದ. ಆತ ಮನಸ್ಸಿನ ಸ್ಥಿಮಿತ ಕಳೆದುಕೊಂಡಿದ್ದ. ತಾನೇನು ಮಾತನಾಡುತ್ತಿದ್ದೇನೆ ಎಂಬ ಅರಿವೂ ಆತನಿಗಿರಲಿಲ್ಲ.

”ಯಾರು ನೀನು? ನಿನ್ನ ಹೆಸರೇನು? ಇಲ್ಲಿಗ್ಯಾಕೆ ಬಂದೆ? ಇವನನ್ನು ಯಾವ ಸ್ಥಳದಲ್ಲಿ ಸೇರಿಕೊಂಡೆ? ಬಿಟ್ಟು ಹೋಗಬೇಕೆಂದರೆ ನಿನಗೇನು ಕೊಡಬೇಕು?” ಮಂತ್ರವಾದಿಯ ಇಂತಹ ಹಲವು ಪ್ರಶ್ನೆಗಳಿಗೆ ಯುವಕ ತನಗೆ ತೋಚಿದಂತೆ ಉತ್ತರ ನೀಡಿದ. ನಿತ್ರಾಣವಾಗಿದ್ದ ಆತನ ದ್ವನಿ ಕ್ಷೀಣಿಸಿತ್ತು. ಆತನ ಎಂದಿನ ದ್ವನಿಯಾಗಿರಲಿಲ್ಲ ಅದು. ಮಂತ್ರವಾದಿ ಹೇಳಿದ ‘ಇದು ಹೆಣ್ಣು ದೆವ್ವ, ಹುಣಸೇ ಮರದ ಕೆಳಗೆ ನಿಂತಿದ್ದಾಗ ಈತನಲ್ಲಿ ಬಂದು ಸೇರಿಕೊಂಡಿದೆ. ಇದನ್ನು ಬಿಡಿಸಿ ಓಡಿಸುತ್ತೇನೆ’ ಎಂದು ಹೇಳಿ ಏನೇನೋ ಮಂತ್ರ ಮಾಡಿದ. ದೆವ್ವಕ್ಕೆ ಥಳಿಸುತ್ತೇನೆ ಎನ್ನುತ್ತಾ ಆ ಯುವಕನಿಗೆ ಥಳಿಸಿದ.

ಇದಾದ ಕೆಲ ದಿನಗಳಲ್ಲಿ ಆ ಯುವಕ ಮತ್ತಷ್ಟು ನಿತ್ರಾಣನಾದ. ಆ ಮಂತ್ರವಾದಿಯಿಂದಲೂ ದೆವ್ವ ಬಿಡಿಸಲು ಸಾಧ್ಯವಾಗಲಿಲ್ಲ. ಆಹಾರ ಸೇರುತ್ತಿಲ್ಲ. ದಿನೇ ದಿನೇ ಶರೀರ ಮತ್ತಷ್ಟು ಕ್ಷೀಣಿಸತೊಡಗಿತು. ಕಿರುಚಾಟ, ಚೀರಾಟ ಜೋರಾಯಿತು. ದೆವ್ವ ಬಾರೀ ಘಾಟಿ ಇದೆ, ಮಗನ ಪ್ರಾಣ ತೆಗೆದುಕೊಳ್ಳುತ್ತದೆ ಎಂಬ ಭಯ ಆ ತಾಯಿಯನ್ನು ಕಾಡಿತು. ಮತ್ಯಾರೋ ತಮಿಳುನಾಡಿನಲ್ಲಿ ದೆವ್ವ ಬಿಡಿಸುವವರು ಇದ್ದಾರೆ ಎಂದು ಹೇಳಿ ಅಲ್ಲಿಯ ವಿಳಾಸ ಕೊಟ್ಟರು.

ಡೆಂಕಣಿಕೋಟೆಯ ಸಮೀಪದ ಆ ಊರಿನ ಹತ್ತಾರು ಮನೆಗಳಲ್ಲಿ ದೆವ್ವ ಬಿಡಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಅಂತಹ ಪ್ರತಿ ಮನೆಯಲ್ಲೂ ಎಲ್ಲಮ್ಮನ ವಿಗ್ರಹ ಇಟ್ಟು ಪೂಜಿಸುತ್ತಾರೆ. ಆ ಊರಿಗೆ ಯಾರೇ ಅಪರಿಚಿತರು ಬಂದರೆಂದರೆ ಅವರು ದೆವ್ವದಿಂದ ಬಿಡಿಸಿಕೊಳ್ಳಲು ಬಂದವರೆಂದೇ ಅರ್ಥ.

‘ದೆವ್ವ ಎಂಬುದೊಂದು ಅಸ್ತಿತ್ವದಲ್ಲಿಲ್ಲ. ಅದನ್ನು ನಂಬಬೇಡಿ. ಮಗನನ್ನು ಯಾವುದಾದರೂ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿ’ ಎಂದು ಆ ತಾಯಿಗೆ ಎಷ್ಟೇ ಪರಿಪರಿಯಾಗಿ ಹೇಳಿದರೂ ಆಕೆ ನಂಬುವ ಸ್ಥಿತಿಯಲ್ಲಿರಲಿಲ್ಲ. ತನ್ನ ಮಗನಿಗೆ ದೆವ್ವ ಹಿಡಿದಿದೆ ಎಂದೇ ಗಾಢವಾಗಿ ನಂಬಿದ್ದಳು.

ತನ್ನ ಮಗ ಮತ್ತು ಮಗಳನ್ನೂ ತಮಿಳುನಾಡಿನ ಆ ‘ದೆವ್ವ ಬಿಡಿಸುವ’ ಊರಿಗೆ ಟ್ಯಾಕ್ಸಿಯೊಂದರಲ್ಲಿ ಕರೆದೊಯ್ದಳು. ಟ್ಯಾಕ್ಸಿಯನ್ನು ಕಂಡೊಡನೆ ಆ ಊರಿನ ಕೆಲವರು ಯಾರ ಮನೆಗೆ ಎಂದು ವಿಚಾರಿಸಿ ಯಾವುದೊ ಒಂದು ಮನೆಗೆ ಕರೆದ್ಯೊಯ್ದರು. ಆ ಮನೆಯಲ್ಲಿ ಯಲ್ಲಮ್ಮ ದೇವಿ ಎಂದು ಹೇಳಲಾದ  ವಿಗ್ರಹದ ಎದುರು ಯುವಕನನ್ನು ಕುಳ್ಳಿರಿಸಿದ. ಆ ಯುವಕನಿಗೆ ಹೆಚ್ಚು ಸಮಯ ಕುಳಿತುಕೊಳ್ಳುವಷ್ಟೂ ಶಕ್ತಿ ಇರಲಿಲ್ಲ. ಸಣ್ಣದೊಂದು ಚಂಬು ಇಟ್ಟು, ಅದರ ಸುತ್ತ ವೃತ್ತಾಕಾರವಾಗಿ ಏನನ್ನೋ ಬರೆದು, ಚಂಬನ್ನು ನೆಲದ ಮೇಲೆ ಬೋರಲಾಗಿ ಇಟ್ಟು ತಿರುಗಿಸುತ್ತಾ, ಬಾಯಲ್ಲಿ ಏನನ್ನೋ ಹೇಳುತ್ತಾ, ‘ದೆವ್ವ ಇದೆ ಎಂಬುದು ಖಾತರಿಯಾಗಿದೆ’ ಎಂದನು ಆ ಮಂತ್ರವಾದಿ. ಮತ್ತೊಮ್ಮೆ ಚೆಂಬನ್ನು ತಿರುಗಿಸಿ ‘ದೆವ್ವವನ್ನು ಬಿಡಿಸಲು ಅಮ್ಮ(ಯಲ್ಲಮ್ಮ) ಒಪ್ಪಿಕೊಂಡಿದ್ದಾಳೆ’ ಎಂದನು. ಜೋರಾಗಿ ಜಾಗಟೆ ಬಾರಿಸುತ್ತ, ಯಾವುದೋ ಮಂತ್ರಗಳನ್ನು ಜೋರು ದ್ವನಿಯಲ್ಲಿ ಹೇಳುತ್ತಾ, ಅದನ್ನು ಹೇಳುವಂತೆ ಯುವಕನಿಗೆ ಒತ್ತಾಯ ಮಾಡಿದರು. ಅದನ್ನು ಹೇಳಲು ಯುವಕನಿಗೆ ದ್ವನಿಯೇ ಇರಲಿಲ್ಲ.

ಮಹಾದೇವಿಗೆ ತನ್ನ ಮಗಳ ಮೇಲೂ ದೆವ್ವ ಇದೆಯೋ ಎಂದು ತಿಳಿದುಕೊಳ್ಳುವ ಕಾತುರ. ಮಗಳನ್ನು ದೇವಿಯ ಮುಂದೆ ಕುಳ್ಳಿರಿಸಿ, ಅದೇ ಪ್ರಯೋಗ ಮಾಡಿದ ನಂತರ ಆಕೆಯನ್ನೂ ದೆವ್ವ ಹಿಡಿದಿದೆಯೆಂದು ಆತ ಹೇಳಿದ. ಮೊದಲೇ ಅಣ್ಣನ ಪರಿಸ್ಥಿತಿಯನ್ನು ಕಂಡು ಭಯಬೀತಳಾಗಿದ್ದ ಆ ಹುಡುಗಿಗೆ ತನ್ನನ್ನೂ ದೆವ್ವ ಹಿಡಿದಿದೆ ಎಂಬುದನ್ನು ಕೇಳಿ ಮತ್ತಷ್ಟು ಕುಗ್ಗಿಹೋದಳು.

ಆ ಊರಿನಲ್ಲಿ ನಡೆದ ಕತೆ ದೊಡ್ಡದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಒಂದು ವಾರದಲ್ಲೇ ಆ ಯುವಕ ಪ್ರಾಣ ಕಳೆದುಕೊಂಡ. ಇದಾದ ಒಂದು ವರ್ಷದ ನಂತರ ಮಹಾದೇವಿಯ ಮಗಳಿಗೂ ಆರೋಗ್ಯ ಕೆಟ್ಟಿತು. ಮೊದಲೇ ಮಗಳಿಗೂ ದೆವ್ವ ಹಿಡಿದಿದೆ ಎಂದು ನಂಬಿದ್ದ ಆ ತಾಯಿ, ತನ್ನ ಮಗಳಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಿಲ್ಲ. ಆ ಸಮಯದಲ್ಲೂ ವೈದ್ಯರ ಬಳಿ ಹೋಗುವಂತೆ ಎಷ್ಟೇ ಹೇಳಿದರೂ ಆಕೆ ಕೇಳಲಿಲ್ಲ. ದೇವಸ್ಥಾನ, ಮಂತ್ರವಾದಿ ಎಂದೆಲ್ಲಾ ಸುತ್ತಾಡಿದಳು. ಕೊನೆಗೆ ಮಗಳ ಸಾವನ್ನೂ ನೋಡಿದಳು.

ಆ ತಾಯಿಗೆ ಆಗಾಗ್ಗೆ ಕೆಮ್ಮು. ಆ ಕೆಮ್ಮು ಬರಲೂ ಆ ದೆವ್ವವೇ ಕಾರಣ ಎಂದು ಹೇಳುತ್ತಿದ್ದಳು. ಆಸ್ಪತ್ರೆಗೆ ತೋರಿಸಿ ಎಂದು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ಕೆಲ ವರ್ಷಗಳ ನಂತರ ಆಸ್ಪತ್ರೆಗೆ ಹೋದಾಗ, ಆಕೆಗೆ ಟಿಬಿ ಖಾಯಿಲೆ ಇರುವುದು ತಿಳಿಯಿತು. ನಂತರ ಆಕೆ ಟಿಬಿ ಖಾಯಿಲೆಗೆ ಔಷಧಿ ತೆಗೆದುಕೊಳ್ಳಲು ಮುಂದಾದಳು.

ಈಗ ಆಕೆ ಒಂಟಿಯಾಗಿ ಬಾಳುತ್ತಿದ್ದಾಳೆ. ಕೊಲೆಗಾರರಿಗೆ ಶಿಕ್ಷೆ ಇದೆ. ಆದರೆ, ಅಸ್ತಿತ್ವದಲ್ಲಿಲ್ಲದ ದೆವ್ವಗಳ ಬಗ್ಗೆ ಜನರಲ್ಲಿ ಬೀತಿ ಹುಟ್ಟಿಸುವ ಮೂಲಕ, ಇಂತಹ ಪ್ರಾಣಹಾನಿಗೆ ಕಾರಣರಾದವರಿಗೆ ಶಿಕ್ಷೆ ಏಕಿಲ್ಲ? ಇದು ಪ್ರಶ್ನೆಯಾಗಿಯೇ ಉಳಿದಿದೆ.

Is this your new site? Log in to activate admin features and dismiss this message
ಲಾಗಿನ್