ರಫೆಲ್ ಒಪ್ಪಂದ:

ಅಂತ್ಯ ಕಾಣದ ಭಾರತದ ಅತಿದೊಡ್ಡ ರಕ್ಷಣಾ ಹಗರಣ 

ಭಾರತದ ಅತಿದೊಡ್ಡ ರಕ್ಷಣಾ ಹಗರಣ ಎಂದೇ ಹೇಳಲಾದ, 2016ರಲ್ಲಿ ಪ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಕಂಪನಿಯ ಜೊತೆಗೆ ರೂ. 59,000 ಕೋಟಿ ಮೊತ್ತದ, 36 ರಫೆಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಬರೆಯುವ ಪ್ರಯತ್ನ ಮಾಡುತ್ತೇನಾದರೂ, ಇದರ ಸಂಪೂರ್ಣ ವಿವರ ಬರೆದರೆ ಒಂದು ದೊಡ್ಡ ಪುಸ್ತಕವೇ ಆಗುತ್ತದೆ. ಈ ಹಗರಣದ ಕುರಿತಂತೆ ಈಗಾಗಲೇ, ಸ್ವತಂತ್ರ ಪತ್ರಕರ್ತರಾದ ರವಿ ನಾಯರ್ ಮತ್ತು ಪರಂಜಾಯ್ ಗುಹಾ ಠಾಕುರ್ತಾ 2022ರಲ್ಲಿ “ರಫೇಲ್ ಡೀಲ್ ಫ್ಲೈಯಿಂಗ್ ಲೈಸ್?” ಎಂಬ500 ಪುಟಗಳಪುಸ್ತಕ ಬರೆದಿದ್ದಾರೆ. ಇದರಲ್ಲಿ, ಈ ಹಗರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ವಿವರಿಸಲಾಗಿದೆಯೆಂದು 7 ಡಿಸೆಂಬರ್ 2022  ರಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯು ಪುಸ್ತಕದ ವಿಮರ್ಶೆಯನ್ನು ಪ್ರಕಟಿಸಿದೆ. ಇಲ್ಲಿಗೆ ಸೀಮಿತ ಬರಹ ಬೇಕಿರುವುದರಿಂದ ರಫೇಲ್ ಹಗರಣದ ಬಗ್ಗೆ ಕೆಲವು ಮುಖ್ಯವಾದ ಅಂಶಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (HAL) ಜೊತೆಗಿನ ಒಪ್ಪಂದ ರದ್ದುಗೊಳಿಸಿದ ನರೇಂದ್ರ ಮೋದಿಯವರ ಒಕ್ಕೂಟ ಸರ್ಕಾರ, 2016 ರಲ್ಲಿ, ರಿಲಯನ್ಸ್ ಪಾಲುದಾರಿಕೆ ಹೊಂದಿರುವ ಪ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಕಂಪನಿಯ ಜೊತೆಗೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. ಕ್ಯಾಬಿನೆಟ್ ಸಮಿತಿಯ ಅನುಮತಿಯ ನಂತರ 36 ಯುದ್ಧ ವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದ (IGA) ಕ್ಕೆ ಭಾರತ ಮತ್ತು ಫ್ರಾನ್ಸ್ ಸಹಿ ಹಾಕಿದವು.

ಫ್ರಾನ್ಸ್ ಮತ್ತು ಭಾರತದ ನಡುವೆ IGA ಗೆ ಸಹಿ ಹಾಕಿದ ನಂತರ, ಒಪ್ಪಂದದ ವಿವರಗಳನ್ನು ಸಾರ್ವಜನಿಕಗೊಳಿಸುವಂತೆ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಕೇಳಿದವು. ಪ್ರತಿ ವಿಮಾನದ ವೆಚ್ಚವನ್ನು ರೂ. 715 ಕೋಟಿಯಿಂದ ರೂ. 1,600 ಕೋಟಿಗೆ ಹೆಚ್ಚಿಸಿದ್ದೇಕೆ ಎಂದು ಅವರು ಪ್ರಶ್ನಿಸಿದರು. ರಫೇಲ್ ಒಪ್ಪಂದದಲ್ಲಿ HAL ಅನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. 36 ಸಂಪೂರ್ಣ ನಿರ್ಮಿತ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೋದಿಯವರ ಘೋಷಣೆಯ ಸಮಯದಲ್ಲಿ ಫ್ರಾನ್ಸ್‌ನಲ್ಲಿ ಅನಿಲ್ ಅಂಬಾನಿ ಉಪಸ್ಥಿತಿಯನ್ನು ಅವರು ಪ್ರಶ್ನಿಸಿದರು. 10 ಏಪ್ರಿಲ್ 2015 ರಂದು ಇಂಡೋ-ಫ್ರೆಂಚ್ ಸಿಇಒ ಫೋರಮ್‌ ನೊಂದಿಗಿನ ಸಂವಾದದಲ್ಲಿ ಮೋದಿ ಮತ್ತು ಹೊಲಾಂಡೆ ಇರುವ ಚಿತ್ರದಲ್ಲಿ ಎರಡನೇ ಸಾಲಿನಲ್ಲಿ ಅನಿಲ್ ಅಂಬಾನಿ ಹೆಡ್‌ಫೋನ್‌ಗಳನ್ನು ಧರಿಸಿ ಕುಳಿತಿರುವ ಚಿತ್ರವನ್ನು ಮಾಧ್ಯಮಗಳು ಪ್ರಕಟಿಸಿವೆ.

ನಾಲ್ವರು ನ್ಯಾಯಾಧೀಶರಿಂದ ಮಾಧ್ಯಮ ಗೋಷ್ಠಿ!

ರಫೆಲ್ ಹಗರಣದ ಕುರಿತು ಬರೆಯುವ ಮುನ್ನ, ದೇಶದ ಗಮನ ಸೆಳೆದ ಭಾರತದ ನ್ಯಾಯಾಂಗದ ಒಂದು ಅಪರೂಪದ ಘಟನೆಯನ್ನು ನೆನಪಿಸಿಕೊಳ್ಳುವುದು ಸೂಕ್ತ ಎನಿಸುತ್ತದೆ. 12 ಜನವರಿ 2018 ರಂದು, ಭಾರತದ ಮುಖ್ಯ ನ್ಯಾಯಾಧೀಶರ ನಂತರದ ಎರಡನೇ ಹಿರಿಯ ನ್ಯಾಯಮೂರ್ತಿ ಜಸ್ಟಿಸ್ ಜೆ ಚೆಲಮೇಶ್ವರ್ ಸೇರಿದಂತೆ, ನಾಲ್ವರು ನ್ಯಾಯಾಧೀಶರು ಜಂಟಿ ಸುದ್ದಿಗೋಷ್ಠಿ ನಡೆಸಿದ ಅಭೂತಪೂರ್ವ ನಡೆ ನ್ಯಾಯಾಂಗ ಮತ್ತು ಜನರನ್ನು ದಿಗ್ಭ್ರಮೆಗೊಳಿಸಿತು. ಇವರಲ್ಲಿ ರಂಜನ್ ಗೋಗೊಯ್, ಮದನ್ ಲೋಕುರ್ ಮತ್ತು ಕುರಿಯನ್ ಜೋಸೆಫ್  ಇದ್ದರು. “ದೇಶದ ಅತ್ಯುನ್ನತ ನ್ಯಾಯಾಲಯವನ್ನು ಬಾಧಿಸುತ್ತಿದೆ, ಈ ಸಂಸ್ಥೆಯನ್ನು ಸಂರಕ್ಷಿಸದ ಹೊರತು, ಈ ದೇಶದಲ್ಲಿ “ಪ್ರಜಾಪ್ರಭುತ್ವವು ಉಳಿಯುವುದಿಲ್ಲ” ಎಂದು ಚೆಲಮೇಶ್ವರ್ ಅನಿಯಂತ್ರಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸ್ವತಂತ್ರ ಭಾರತದಲ್ಲಿ ಈ ರೀತಿಯ ಘಟನೆ ಹಿಂದೆಂದೂ ನಡೆದಿರಲಿಲ್ಲ.

“ಕೆಲವೊಮ್ಮೆ ಸುಪ್ರೀಂ ಕೋರ್ಟ್‌ನ ಆಡಳಿತವು ಕ್ರಮಬದ್ಧವಾಗಿಲ್ಲ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಅಪೇಕ್ಷಣೀಯಕ್ಕಿಂತ ಕಡಿಮೆಯಾದ ಅನೇಕ ವಿಷಯಗಳು ನಡೆದಿವೆ” ಎಂದು ಅವರು ಹೇಳಿದರು. ನ್ಯಾಯ ವಿತರಣಾ ವ್ಯವಸ್ಥೆಯಲ್ಲಿನ ವೈಫಲ್ಯ ಮತ್ತು ಪ್ರಕರಣಗಳ ಹಂಚಿಕೆಯ ವಿಷಯದಲ್ಲಿ ನ್ಯಾಯಾಲಯವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಅವರು ಆರೋಪಿಸಿದರು ಮತ್ತು ಡಿಸೆಂಬರ್ 2014 ರಲ್ಲಿ ನಿಧನರಾದ ಸಿಬಿಐ ವಿಶೇಷ ನ್ಯಾಯಾಧೀಶರಾಗಿದ್ದ ಬಿ.ಎಚ್. ಲೋಯಾ ಅವರ ಸಾವಿನ ಪ್ರಕರಣವನ್ನು ಹಂಚಿಕೆ ಮಾಡುವ ವಿಷಯದಲ್ಲಿ ಮುಖ್ಯ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನಿರ್ಧಾರಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅಸಮಾದಾನ ವ್ಯಕ್ತಪಡಿಸಿದರು. ನ್ಯಾಯಮೂರ್ತಿ ಲೋಯಾ ಅವರು 2004 ರ ಸೊಹ್ರಾಬುದ್ದೀನ್ ಶೇಖ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರನ್ನು ಹೆಸರಿಸಲಾಗಿದೆ.

ವಿಷಯ ರಫೆಲ್ ಬಿಟ್ಟು ಬೇರೆ ಕಡೆ ತಿರುಗುತ್ತಿದೆ ಎನಿಸುತ್ತಿದೆಯಲ್ಲವೇ? ಕೇಂದ್ರದ ಬಿಜೆಪಿ ಆಡಳಿತ ನ್ಯಾಯಂಗವನ್ನೂ ಹೇಗೆಲ್ಲಾ ತನ್ನ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುತ್ತಿದೆ, ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಹೇಗೆಲ್ಲಾ ತಂತ್ರ, ಕುತಂತ್ರಗಳನ್ನು ಮಾಡುತ್ತದೆ ಎಂಬುದನ್ನು ಅರಿಯಬೇಕಾದರೆ, ಈ ವಿಷಯಗಳನ್ನು ಪ್ರಸ್ತಾಪಿಸಲೇ ಬೇಕಿದೆ.

ಅನನುಭವಿ ರಿಲಯನ್ಸ್ ಪಾಲುದಾರರಾಗಿ…

ಮಾರ್ಚ್ 2015 ರಲ್ಲಿ, ಅನನುಭವಿ ರಿಲಯನ್ಸ್ ಅನ್ನು ಇನ್ನೂ ಸಹಿ ಮಾಡದ ರಫೇಲ್ ಒಪ್ಪಂದದಲ್ಲಿ ಪ್ರಾನ್ಸ್ ದೇಶದ ಡಸಾಲ್ಟ್‌ನ ಹೊಸ ಪ್ರಮುಖ ಭಾರತೀಯ ಪಾಲುದಾರರಾಗಿ ರಹಸ್ಯವಾಗಿ ಗೊತ್ತುಪಡಿಸಲಾಯಿತು. ಏರೋ ರಚನೆಗಳು, ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನ್ ಘಟಕಗಳ ಮೇಲೆ ಕೇಂದ್ರೀಕರಿಸಲು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (DRAL) ಹೆಸರಿನ 51:49 ಜಂಟಿ ಉದ್ಯಮವನ್ನು ರಚಿಸುವುದಾಗಿ ಘೋಷಿಸಿತು.

ಇದಕ್ಕೂ ಹಿಂದೆ ಈ ಪಾತ್ರದಲ್ಲಿ ಭಾರತೀಯ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (HAL ) ನೇಮಕಾತಿಯನ್ನು ರದ್ದುಗೊಳಿಸಿತ್ತು.

ಎಚ್ ಎ ಎಲ್ ಒಪ್ಪಂದ ರದ್ದು

ಒಂದು ತಿಂಗಳ ನಂತರ, ಏಪ್ರಿಲ್ 2015 ರಲ್ಲಿ, ಮೋದಿ ಅವರು ಅನಿಲ್ ಅಂಬಾನಿ ಅವರೊಂದಿಗೆ ಫ್ರಾನ್ಸ್‌ಗೆ ಭೇಟಿ ನೀಡುತ್ತಾರೆ. ಅಲ್ಲಿ ನೊಂದಿಗೆ ಡಸಾಲ್ಟ್‌ನಿಂದ 126 ರಫೇಲ್‌ ಯುದ್ಧ ವಿಮಾನಗಳ ಸಹ-ಉತ್ಪಾದನೆಯ ಹಿಂದಿನ ಎಚ್ ಎ ಎಲ್ ಒಪ್ಪಂದವನ್ನು ರದ್ದುಗೊಳಿಸಿದ ಪ್ರಧಾನ ಮಂತ್ರಿ, ಡಸಾಲ್ಟ್‌ನಿಂದ 36 ವಿಮಾನಗಳ ಸಂಪೂರ್ಣ ಖರೀದಿಗಾಗಿ ನಿರ್ಧರಿಸುತ್ತಾರೆ.

ಒಪ್ಪಂದದ ಪ್ರಕಟಣೆಯ 14 ದಿನಗಳ ನಂತರ ರಿಲಯನ್ಸ್ ಏರೋಸ್ಟ್ರಕ್ಚರ್ ಅನ್ನು ಸಂಘಟಿಸುತ್ತದೆ. ಮತ್ತು 22 ಫೆಬ್ರವರಿ 2016 ರಂದು ಅದರ ಉತ್ಪಾದನಾ ಪರವಾನಗಿಯನ್ನು ಪಡೆಯುತ್ತದೆ.

ಸೆಪ್ಟೆಂಬರ್ 2016 : ಭಾರತ ಮತ್ತು ಫ್ರಾನ್ಸ್ ಭದ್ರತೆಯ ಮೇಲಿನ ಭಾರತದ ಕ್ಯಾಬಿನೆಟ್ ಸಮಿತಿಯ ಅನುಮತಿಯ ನಂತರ 36 ಯುದ್ದ ವಿಮಾನಗಳನ್ನು ಖರೀದಿಸಲು ಅಂತರ-ಸರ್ಕಾರಿ ಒಪ್ಪಂದಕ್ಕೆ (IGA) ಸಹಿ ಹಾಕಿದವು. ಎಚ್.ಎ.ಎಲ್ ಜೊತೆಗಿನ ಒಪ್ಪಂದದಲ್ಲಿ ಒಂದು ವಿಮಾನಕ್ಕೆ ರೂ. 715 ಕೋಟಿ. ಪ್ರೆಂಚ್ ಕಂಪನಿಯ ಜೊತೆಗಿನ ಒಪ್ಪಂದದಲ್ಲಿ ಒಂದು ವಿಮಾನಕ್ಕೆ ರೂ. 1,600  ಕೋಟಿ.

ಅವಿಶ್ವಾಸ ನಿರ್ಣಯ

20, ಜುಲೈ 2018 ರಂದು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಯಿತು. ಚರ್ಚೆಯ ಸಂದರ್ಭದಲ್ಲಿ, ಗೌಪ್ಯತೆಯ ಒಪ್ಪಂದವನ್ನು ಉಲ್ಲೇಖಿಸಿದ ರಫೇಲ್ ಸ್ವಾಧೀನದ ವೆಚ್ಚದ ವಿವರಗಳನ್ನು ನೀಡಲು ನಿರಾಕರಿಸಿದ ಸರ್ಕಾರ, ವಿರೋಧ ಪಕ್ಷಗಳ ಆರೋಪಗಳನ್ನು ನಿರಾಕರಿಸಿತು.

22 ಸೆಪ್ಟೆಂಬರ್ 2018 : “ಜಂಟಿ ಸಂಸದೀಯ ಸಮಿತಿಯನ್ನು ವಿಳಂಬ ಮಾಡದೆ ರಚಿಸಬೇಕು” ಎಂದು ಸಿಪಿಎಂ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಒತ್ತಾಯಿಸಿದವು.

ಮೋದಿ ಸರ್ಕಾರದ ಒತ್ತಾಯದ ಹಿನ್ನಲೆಯಲ್ಲಿ ಅಂಬಾನಿಯನ್ನು ರಫೇಲ್‌ನ ಪಾಲುದಾರನಾಗಿ ಒಪ್ಪಂದಕ್ಕೆ ತರಲಾಯಿತು ಎಂದು ಮಾಜಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ 2018 ರ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು. ಡಸಾಲ್ಟ್ ಏವಿಯೇಷನ್ ಮತ್ತು ರಿಲಯನ್ಸ್ ಇದನ್ನು ಅಲ್ಲಗಳೆದವು. ಫ್ರೆಂಚ್ ಕಂಪನಿ ತೆಗೆದುಕೊಂಡಿರುವ ‘ವಾಣಿಜ್ಯ ನಿರ್ಧಾರ’ದಲ್ಲಿ ತನಗೆ  ಹೇಳಲು ಏನೂ ಇಲ್ಲ ಎಂದು ಭಾರತ ಸರ್ಕಾರ ಹೇಳಿತು. ಸುಪ್ರೀಂ ಕೋರ್ಟ್ ತನಿಖೆಗೆ ಆದೇಶಿಸಲು ನಿರಾಕರಿಸಿತು. ಆದರೆ ಒಪ್ಪಂದವು ಫ್ರಾನ್ಸ್‌ನಲ್ಲಿ ಕ್ರಿಮಿನಲ್ ತನಿಖೆಯ ವಿಷಯವಾಗಿದೆ.

ರಂಜನ್ ಗೋಗೊಯ್ ಸಿಜೆಐ ಆಗಿ ನೇಮಕ

3 ಅಕ್ಟೋಬರ್, 2018 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೋಗೊಯ್ ನೇಮಕಗೊಂಡರು. ಡಿಸೆಂಬರ್ 14, 2018 ರಂದು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠವು, ಭಾರತ ಮತ್ತು ಫ್ರಾನ್ಸ್ ನಡುವಿನ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ವಿರುದ್ಧದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ವಜಾಗೊಳಿಸಿತು. ಯಾವುದೇ ವಾಣಿಜ್ಯ ಒಲವು ಮತ್ತು ಸಂದರ್ಭವನ್ನು ಹೊಂದಿಲ್ಲ ಎಂದು ತೀರ್ಪಿನಲ್ಲಿ ಹೇಳಿತು. ಎಲ್ಲಾ ಮೂರು ವಿವಾದಾತ್ಮಕ ವಿಷಯಗಳ-ನಿರ್ಣಯ ಪ್ರಕ್ರಿಯೆ, ತುಲನಾತ್ಮಕ ಬೆಲೆ ಮತ್ತು ಭಾರತೀಯ ಆಫ್‌ಸೆಟ್ ಪಾಲುದಾರರ (ಐಒಪಿ) ಆಯ್ಕೆಯ ಕುರಿತು ಒಪ್ಪಂದಕ್ಕೆ ಕ್ಲೀನ್ ಚಿಟ್ ನೀಡಿತು. ಭಾರತ ಸರ್ಕಾರವು 36 ರಕ್ಷಣಾ ವಿಮಾನಗಳನ್ನು ಖರೀದಿಸುವ ಸೂಕ್ಷ್ಮ ವಿಷಯದ ಬಗ್ಗೆ ಈ ನ್ಯಾಯಾಲಯದ ಯಾವುದೇ ಹಸ್ತಕ್ಷೇಪಕ್ಕೆ ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದಿತು. ಈ ತೀರ್ಪಿನಲ್ಲಿ ಸರ್ಕಾರದ ಹೇಳಿಕೆಗಳನ್ನು ತಪ್ಪಾಗಿ ಅಥವಾ ಉದ್ದೇಶಪೂರ್ವಕವಾಗಿ ಅರ್ಥೈಸಿಕೊಂಡ ಕೆಲವು ಅಂಶಗಳೂ ಇದ್ದವು.

ನ್ಯಾಯಾಂಗದ ವ್ಯವಸ್ಥೆ ಅಪಾಯದಲ್ಲಿದೆ ಎಂದ ಸಿಜೆಐ

15 ಡಿಸೆಂಬರ್ 2018 ರಂದು, ಕೇಂದ್ರ ರಕ್ಷಣಾ ಸಚಿವಾಲಯವು ಪತ್ರಿಕಾಗೋಷ್ಠಿಯಲ್ಲಿ ಸುಪ್ರೀಂ ಕೋರ್ಟ್ ಒಪ್ಪಂದದ ಕುರಿತು ಸರ್ಕಾರದ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ತಿದ್ದುಪಡಿಗಳನ್ನು ಕೋರಿದೆ ಎಂದು ಹೇಳಿತು. ತೀರ್ಪಿನ ತಿದ್ದುಪಡಿಯ ಸರ್ಕಾರದ ಅರ್ಜಿಯನ್ನು ಪರಿಗಣಿಸದಂತೆ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಅನ್ನು ಕೇಳಿತು.

17 ಡಿಸೆಂಬರ್ 2018 : ಒಪ್ಪಂದದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಸಿಪಿಐ-ಎಂ ಒತ್ತಾಯಿಸುತ್ತದೆ. ರಫೇಲ್ ಒಪ್ಪಂದದ ಕುರಿತು ವರದಿಯನ್ನು ಮಂಡಿಸಬೇಕಿರುವ ಸಿಎಜಿ, ಈ ಒಪ್ಪಂದಕ್ಕೆ ಸಹಿ ಹಾಕಿದಾಗ ಹಣಕಾಸು ಕಾರ್ಯದರ್ಶಿಯಾಗಿದ್ದ ಕಾರಣ ಹಿತಾಸಕ್ತಿ ಸಂಘರ್ಷದಿಂದ ಬಳಲುತ್ತಿದೆ, ಹಾಗಾಗಿ ಸಿಎಜಿ ವರದಿಯ ವಿಶ್ವಾಸಾರ್ಹತೆಗೆ ತೀವ್ರ ಧಕ್ಕೆಯಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷಗಳು ಫೆಬ್ರವರಿ 2019 ರಲ್ಲಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುತ್ತವೆ.

ಮರುಪರಿಶೀಲನಾ ಅರ್ಜಿ ವಿಚಾರಣೆಗೆ….

ಏಪ್ರಿಲ್ 2019 : ರಪೇಲ್ ಒಪ್ಪಂದಕ್ಕೆ ಸಂಬಂಧಿಸಿ  ಮರುಪರಿಶೀಲನಾ ಅರ್ಜಿ ವಿಚಾರಣೆಗೆ ಶೀಘ್ರದಲ್ಲೇ ನಿಗದಿಪಡಿಸಲಾಗುವುದೆಂದು, ಮತ್ತು ಇದಕ್ಕೆ ಸಂಬಂಧಿಸಿದ ಸೋರಿಕೆಯಾದ, ರಹಸ್ಯ ದಾಖಲೆಗಳನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ತ್ರಿದಸ್ಯ ಸಮಿತಿ ಹೇಳುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತದೆ.

ವಿಶೇಷ ಹಕ್ಕು ದಾಖಲೆಗಳನ್ನು ಅರ್ಜಿದಾರರು ಕಾನೂನುಬಾಹಿರ ರೀತಿಯಲ್ಲಿ ಸಂಗ್ರಹಿಸಿದ್ದಾರೆ ಮತ್ತು ಫ್ರಾನ್ಸ್‌ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿಯನ್ನು ಪ್ರಶ್ನಿಸಿ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್ ಡಿಸೆಂಬರ್ 14, 2018 ರ ತೀರ್ಪಿನ ವಿರುದ್ಧದ ಅವರ ಮರುಪರಿಶೀಲನಾ ಅರ್ಜಿಗಳನ್ನು ಬೆಂಬಲಿಸಲು ಬಳಸಲಾಗಿದೆ ಎಂದು ವಾದಿಸಿದ ಕೇಂದ್ರವು ಪರಿಶೀಲನಾ ಅರ್ಜಿಯ ನಿರ್ವಹಣೆಯನ್ನು ಪ್ರಶ್ನಿಸಿ ಆಕ್ಷೇಪಣೆಯನ್ನು ಸಲ್ಲಿಸಿತು.

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ದೂರು ಮತ್ತು ಮಹಿಳೆ

ಜನವರಿ 2019 : ಮುಖ್ಯ ನ್ಯಾಯಾಧೀಶರಾಗಿದ್ದ ಗೋಗೊಯ್ ವಿರುದ್ದ ಲೈಂಗಿಕ ಕಿರುಕುಳದ ದೂರು ನೀಡಿದ್ದ ಮಹಿಳೆಯ ಮೈದುನ ಪ್ರಕರಣ ಸಂಬಂಧ ಆರೆಸ್ಸೆಸ್ ನ ಸಂಜಯ್ ಜೋಷಿ ಅವರನ್ನು ಎರಡು ಬಾರಿ ಭೇಟಿ ಆಗಿದ್ದರು ಎಂದು ‘ದಿ ವೈರ್’ ವರದಿ ಮಾಡಿದೆ. 10 ಮಾರ್ಚ್ 2019ರಂದು ವಂಚನೆ ಆರೋಪದ ಮೇಲೆ ಆ ಮಹಿಳೆಯ ಬಂಧನವಾಗುತ್ತದೆ. ಕೇವಲ 2 ದಿನಗಳಲ್ಲಿ ಜಾಮೀನಿನ ಮೇಲೆ ಮಹಿಳೆಯ ಬಿಡುಗಡೆಯಾಗುತ್ತದೆ.

ಏಪ್ರಿಲ್ 20, 2019 ರಂದು ಅವರ  ಕೋರ್ಟ್ ನ ಕಿರಿಯ ಸಹಾಯಕಿಯಾಗಿದ್ದ 35 ವರ್ಷದ ಮಹಿಳೆಯೊಬ್ಬರು, 2018 ಅಕ್ಟೋಬರ್ 10 ಮತ್ತು 11ರಂದು  ತನಗೆ ರಂಜನ್ ಗೋಗೋಯ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ, 22 ನ್ಯಾಯಾಧೀಶರಿಗೆ ಪತ್ರ ಬರೆಯುತ್ತಾರೆ.  ತಮ್ಮ ಮೇಲಿನ ಲೈಂಗಿಕ ಕಿರುಕುಳದ ಆರೋಪವನ್ನು ನಿರಾಕರಿಸಿದ ಗೋಗೊಯ್ ಅವರು, ನ್ಯಾಯಾಂಗದ ವ್ಯವಸ್ಥೆ ಈ ಹಿಂದೆಂದೂ ಕಾಣದ ರೀತಿಯಲ್ಲಿ ಅಪಾಯದಲ್ಲಿದೆ ಎನ್ನುತ್ತಾರೆ. 20 ವರ್ಷಗಳಿಂದ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದು, ನನ್ನ ಬ್ಯಾಂಕ್ ಬ್ಯಾಲೆನ್ಸ್ ಕೇವಲ 6.80 ಲಕ್ಷ ಇದೆ. ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಲಾಗದೇ ಈ ರೀತಿಯ ಕೀಳು ಆರೋಪ ಹೊರಿಸಿ ತೇಜೋವಧೆಗೆ ಮುಂದಾಗಿದ್ದಾರೆ. ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದ್ದಂತಿದೆ, ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಸ್ತಬ್ದಗೊಳಿಸುವ ಉದ್ದೇಶ ಇದೆ ಎಂದು ಗಂಭೀರ ಆರೋಪ ಮಾಡುತ್ತಾರೆ.

ಲೈಂಗಿಕ ಕಿರುಕುಳದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಗೊಯ್ ನೇತೃತ್ವದ ಮೂವರು ನ್ಯಾಯಾಧೀಶರ ಸಮಿತಿ ನೇಮಕವಾಗಿತ್ತದೆ ಎಂಬ ಸುದ್ದಿ ಬರುತ್ತದೆ. ಆ ನಂತರ ಏನಾಯಿತು ಎಂಬುದು ಇನ್ನೂ ರಹಸ್ಯವಾಗಿಯೇ ಇದೆ.

ಜನವರಿ 2020: ಮಹಿಳೆಯ ವಿರುದ್ದ ವಂಚನೆಯ ಆರೋಪ ಹೊರಿಸಿದ್ದ ದೂರುದಾರ, ತಾನು ಮುಂದುವರಿಸಲು ಇಚ್ಚಿಸುವುದಿಲ್ಲ ಎಂದು ಹೇಳಿದ ನಂತರ ಸುಪ್ರೀಂ ಕೋರ್ಟ್ ಮಹಿಳೆಯನ್ನು ಮರುನೇಮಕಗೊಳಿಸಿತು.

ಅಯೋಧ್ಯ ವಿವಾದದ ತೀರ್ಪು

9 ನವೆಂಬರ್ 2019 :ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಲು ಗೋಗೊಯ್ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠವು ಹಿಂದೂ ಕಡೆಯವರಿಗೆ ಭೂಮಿಯನ್ನು ನೀಡುವ ಪರವಾಗಿ ಸರ್ವಾನುಮತದಿಂದ ನಿರ್ಧರಿಸಿತು. ಇದು ಗೊಗೋಯ್ ಅವರ ನಿವೃತ್ತಿಯ ಮೊದಲು, ಅವರ ಕೊನೆಯ ತೀರ್ಪು .

ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದ ಡಿಸೆಂಬರ್ 2018 ರ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಗೋಗೊಯ್, ಸಂಜಯ್ ಕಿಶನ್ ಕೌಲ್ ಮತ್ತು ಕೆ. ಎಂ. ಜೋಸೆಫ್ ಅವರನ್ನೊಳಗೊಂಡ ನ್ಯಾಯಪೀಠವು 14 ನವೆಂಬರ್ 2019  ರಂದು ವಜಾಗೊಳಿಸಿತು. ಎಲ್ಲಾ ಮೂರು ವಿವಾದಾತ್ಮಕ ವಿಷಯಗಳ-ನಿರ್ಣಯ ಪ್ರಕ್ರಿಯೆ, ತುಲನಾತ್ಮಕ ಬೆಲೆ ಮತ್ತು ಭಾರತೀಯ ಆಫ್‌ಸೆಟ್ ಪಾಲುದಾರರ (ಐಒಪಿ) ಆಯ್ಕೆಯ ಕುರಿತು ಒಪ್ಪಂದಕ್ಕೆ ಕ್ಲೀನ್ ಚಿಟ್ ನೀಡಿತು. ಭಾರತ ಸರ್ಕಾರವು 36 ರಕ್ಷಣಾ ವಿಮಾನಗಳನ್ನು ಖರೀದಿಸುವ ಸೂಕ್ಷ್ಮ ವಿಷಯದ ಬಗ್ಗೆ ಈ ನ್ಯಾಯಾಲಯದ ಯಾವುದೇ ಹಸ್ತಕ್ಷೇಪಕ್ಕೆ ನಮಗೆ ಯಾವುದೇ ಕಾರಣವಿಲ್ಲ ಎಂದಿತು.

ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಅರ್ಜಿದಾರರಾದ ಅರುಣ್ ಶೌರಿ, ಯಶವಂತ್ ಸಿನ್ಹಾ, ಪ್ರಶಾಂತ್ ಭೂಷಣ್ ಮತ್ತು ಇತರರು ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿದ್ದರು. ಮತ್ತು ತನ್ನ ತೀರ್ಪಿನ ಮರುಪರಿಶೀಲನೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ರಂಜನ್ ಗೊಗೊಯ್ : ವಿವೃತ್ತಿ ನಂತರ ರಾಜ್ಯಸಭೆಗೆ ನಾಮಕರಣ

17 ನವೆಂಬರ್ 2019 ರಂದು ನ್ಯಾಯಾಧೀಶರ ಸ್ಥಾನದಿಂದ  ರಂಜನ್ ಗೊಗೊಯ್ ನಿವೃತ್ತಿಯಾಗುತ್ತಾರೆ. 16 ಮಾರ್ಚ್ 2020 ರಂದು ರಾಷ್ಟ್ರಪತಿಗಳು ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿ ಅಧಿಸೂಚನೆ ಹೊರಡಿಸುತ್ತಾರೆ.

ಮಹಿಳೆ ಅಥವಾ ಸಿಜೆಐ ಯಾರೊಬ್ಬರ ಮೇಲೂ ಕಾನೂನು ಕ್ರಮ ಇಲ್ಲ!!

ಇಲ್ಲಿ ನಾವು ಗಮನಿಸಬೇಕಾದ ವಿಷಯವೆಂದರೆ, ಸಿಜೆಐ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಸುಳ್ಳು ಎಂದಾದರೆ, ನ್ಯಾಯಾಧೀಶರ ಮಾನಹಾನಿ ಮಾಡಲು ಸುಳ್ಳು ಆರೋಪ ಮಾಡಿದ್ದಕ್ಕಾಗಿ ಆ ಮಹಿಳೆಯ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕಿತ್ತು. ಅಥವಾ, ಮಹಿಳೆಯ ಆರೋಪ ನಿಜವಾಗಿದ್ದರೆ, ಸಿಜೆಐ ಗೋಗೊಯ್ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ಅವಕಾಶ ಇತ್ತು. ಲೈಂಗಿಕ ಕಿರುಕುಳದ ದೂರಿನ ಈ ಪ್ರಕರಣದಲ್ಲಿ ದೂರುದಾರ ಮಹಿಳೆ ಅಥವಾ ಆರೋಪ ಹೊತ್ತಿದ್ದ ನ್ಯಾಯಮೂರ್ತಿ ಇಬ್ಬರಿಗೂ ಯಾವುದೇ ರೀತಿಯ ಶಿಕ್ಷೆಯಾಗಲಿಲ್ಲ. ಇದರ ಸತ್ಯಾಸತ್ಯತೆ ತಿಳಿಯಲು ಇಡೀ ದೇಶವೇ ಎದುರುನೋಡುತ್ತಿದ್ದ ಈ ಪ್ರಕರಣವನ್ನು ಎನೂ ನಡೆದೇ ಇಲ್ಲವೆಂಬಂತೆ ಮುಚ್ಚಿಹಾಕಲಾಯಿತು. ಮಹಿಳೆಯನ್ನು ಮೊದಲಿನ ಕೆಲಸಕ್ಕೆ ನೇಮಕಗೊಳಿಸಿದ್ದು, ಗೋಗೊಯ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿದ್ದು… ಈ ಎಲ್ಲವೂ, “ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದ್ದಂತಿದೆ” ಎಂದಿದ್ದ ಗೋಗೊಯ್ ಅವರ ಮಾತುಗಳನ್ನು ನೆನಪಿಸುತ್ತವೆ.

ಪ್ಯಾರಿಸ್ ಮ್ಯಾಜಿಸ್ಟ್ರೇಟ್‌ಗಳಿಂದ ಭಾರತ ಸರ್ಕಾರಕ್ಕೆ ಅಧಿಕೃತ ವಿನಂತಿ

ಜೂನ್ 2021: ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ಫ್ರೆಂಚ್ ನ್ಯಾಯಾಧೀಶರನ್ನು ನೇಮಿಸಲಾಗಿದೆ. ಇದರಿಂದ ಹಿಂದಿನ ಖರೀದಿ ಒಪ್ಪಂದದಲ್ಲಿ ಆಳವಾದ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಇದು ತೋರಿಸುತ್ತದೆ ಎಂದ ಕಾಂಗ್ರೆಸ್ ಮತ್ತು ಸಿಪಿಐ(ಎಂ), ಜೆಪಿಸಿ ತನಿಖೆಗೆ ಮತ್ತೆ ಒತ್ತಾಯಿಸಿದವು. (12 ಜುಲೈ 2023ರ “ದಿ ವೈರ್”)

ಡಸಾಲ್ಟ್ ಏವಿಯೇಷನ್ ಭಾರತದಲ್ಲಿ ಮಾಡಿದ ಪಾವತಿಗಳ ಕುರಿತು ನಡೆಯುತ್ತಿರುವ ತನಿಖೆಗೆ ಸಹಕರಿಸುವಂತೆ ಪ್ಯಾರಿಸ್ ಮ್ಯಾಜಿಸ್ಟ್ರೇಟ್‌ಗಳು ಭಾರತ ಸರ್ಕಾರಕ್ಕೆ ಅಧಿಕೃತ ವಿನಂತಿಯನ್ನು ಕಳುಹಿಸಿದ್ದಾರೆ ಎಂದು ಫ್ರೆಂಚ್ ಸುದ್ದಿ ಪೋರ್ಟಲ್ ಮೀಡಿಯಾಪಾರ್ಟ್ ಬಹಿರಂಗಪಡಿಸಿದೆ. ಡಸಾಲ್ಟ್ 2016 ರಲ್ಲಿ ಸಹಿ ಹಾಕಲಾದ ಒಪ್ಪಂದವನ್ನು ಭದ್ರಪಡಿಸುವ ಪ್ರಯತ್ನದಲ್ಲಿ ಭಾರತೀಯ ಮೂಲದ ವ್ಯಾಪಾರ ಮಧ್ಯವರ್ತಿ ಸುಷೇನ್ ಗುಪ್ತಾಗೆ ಹಲವಾರು ಮಿಲಿಯನ್ ಯುರೋಗಳನ್ನು ರಹಸ್ಯವಾಗಿ ಪಾವತಿಸಿದೆ ಎಂಬ ವಿವರವಾದ ಪುರಾವೆಗಳಿವೆ ಎಂದು ಯಾನ್ ಫಿಲಿಪಿನ್ ಬರೆದ ವರದಿಯು ಹೇಳುತ್ತದೆ.

Is this your new site? Log in to activate admin features and dismiss this message
ಲಾಗಿನ್