
[ 2025ರ ಮೇ 7 ರಂದು ಭಾರತ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಪಾಕಿಸ್ತಾನದ ನೆಲದ ಮೇಲೆ ಮಿಲಿಟರಿ ದಾಳಿ ನಡೆಸಿದಾಗ, ಸರ್ಕಾರವು ಸದ್ದಿಲ್ಲದೆ ಒಂದು ದತ್ತಾಂಶವನ್ನು ಬಿಡುಗಡೆ ಮಾಡಿತು. ಅದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಆದ ಸಾವುಗಳ ಸಂಖ್ಯೆಯನ್ನು ಹೆಚ್ಚಿನ ಮಟ್ಟಿಗೆ ಬಹಿರಂಗಪಡಿಸುತ್ತದೆ.
ಈಗ ಬಿಡುಗಡೆಯಾದ ನೋಂದಾಯಿತ ಜನನ ಮತ್ತು ಮರಣಗಳ ದತ್ತಾಂಶದ ಪ್ರಕಾರ, ಕೋವಿಡ್-ಪೂರ್ವ ಎರಡು ವರ್ಷಗಳಾದ 2018 ಮತ್ತು 2019 ಕ್ಕೆ ಹೋಲಿಸಿದರೆ 2020 ಮತ್ತು 2021 ರಲ್ಲಿ ಭಾರತವು ಕನಿಷ್ಠ 37.4 ಲಕ್ಷ ಹೆಚ್ಚುವರಿ ಸಾವುಗಳನ್ನು ದಾಖಲಿಸಿದೆ.
ಈ ಸಂದರ್ಭದಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಟ್ಟ ಸರ್ಕಾರದ ತಪ್ಪು ಮಾಹಿತಿ ಕುರಿತು ಬರೆದಿರುವ ನನ್ನದೊಂದು ಲೇಖನ ಇಲ್ಲಿದೆ. 2024 ರ ಮಾರ್ಚ್ ನಲ್ಲಿ ಬಿಡುಗಡೆಯಾದ “ಅಚ್ಛೇ ದಿನಗಳಿಗಾಗಿ ಕಾದ 10 ವರ್ಷಗಳಲ್ಲಿ ನಡೆದಿದ್ದೇನು” ಎಂಬ 3 ಪುಸ್ತಕಗಳ ಭಾಗ -2 ರ ಪುಸ್ತಕದಲ್ಲಿ ಈ ಲೇಖನವು ಮುದ್ರಣಗೊಂಡಿದೆ.]
*****
ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ನಡೆದ ಮಹಾ ದುರಂತವೆಂದರೆ ಅದು ಎಂದೆಂದಿಗೂ ಮರೆಯಲಾಗದ ಕೊವಿಡ್-19 ಹೆಸರಿನ ಸಾಂಕ್ರಮಿಕ ರೋಗ. ಭಾರತ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಕೊರೋನಾ ಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ ಏಪ್ರಿಲ್ 2022 ರ ವೇಳೆಗೆ 5,24,000. ಸೋಂಕಿತರಾಗಿದ್ದವರ ಸಂಖ್ಯೆ 4.30 ಕೋಟಿ. ಜಗತ್ತಿನ ಈ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರದ ಮೂರನೇ ಸ್ಥಾನದಲ್ಲಿ ಭಾರತ ಇತ್ತು. ಆದರೆ, ಕೊವಿಡ್-19 ನಿಂದ ಭಾರತದಲ್ಲಿನ ಸಾವಿನ ಸಂಖ್ಯೆ ಸರ್ಕಾರದ ಅಧಿಕೃತ ಲೆಕ್ಕಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ(WHO)ಯ ವರದಿ ಹೇಳುತ್ತದೆ. ಇದರ ಪ್ರಕಾರ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚು. ಎಂದಿನಂತೆ ಭಾರತ ಸರ್ಕಾರ WHO ನ ಈ ವರದಿಯನ್ನು ತಿರಸ್ಕರಿಸುತ್ತದೆ.
ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ನಡೆದ ಮಹಾ ದುರಂತವೆಂದರೆ ಅದು ಎಂದೆಂದಿಗೂ ಮರೆಯಲಾಗದ ಕೊವಿಡ್-19 ಹೆಸರಿನ ಸಾಂಕ್ರಮಿಕ ರೋಗ. ಇದು ಭಾರತದ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿತು. ಬದುಕುಳಿದ ಕೋಟ್ಯಾಂತರ ಜನರ ಬದುಕನ್ನು ಕಸಿದುಕೊಂಡಿತು. ಲಕ್ಷಾಂತರ ಸಣ್ಣ ಕೈಗಾರಿಕೆಗಳು, ಮುಚ್ಚಿಹೋದವು. ಕೋಟ್ಯಾಂತರ ಜನರ ಉದ್ಯೋಗ ಕಸಿದುಕೊಂಡಿತು. ಹೋಟೆಲ್ ಗಳು, ಕಿರಾಣಿ ಅಂಗಡಿಗಳು ಮುಚ್ಚಿದ್ದರಿಂದ ಅವುಗಳ ಮಾಲೀಕರು ಆ ಸಮಯದಲ್ಲಿ ಆದ ನಷ್ಟವನ್ನು ಇನ್ನೂ ತುಂಬಿಕೊಳ್ಳಲಾಗಿಲ್ಲ. ಮುಕ್ತ ಆರ್ಥಿಕ ನೀತಿಗಳ ಜಾರಿಗೆ ಜನರ ಪ್ರತಿರೋಧ ಇಲ್ಲದೆ, ಯಾರ ಅಡೆತಡೆಯೂ ಇಲ್ಲದೆ ಜಾರಿಗೆ ತರಲು ಇದೇ ಸುಸಮಯ ಎಂಬಂತೆ, ಮೋದಿ ಸರ್ಕಾರ ಹಲವು ಜನಪರ ಯೋಜನೆಗಳನ್ನು ರದ್ದುಮಾಡಿದರು ಅಥವಾ ಅವುಗಳಿಗೆ ಅನುದಾನ ಕಡಿತ ಮಾಡಿದರು. ಅಡುಗೆ ಅನಿಲದ ಮೇಲೆ ಸರ್ಕಾರ ಕೊಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದರು. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಮೂರು ಕೃಷಿ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿ, ರೈತರ ಛಲಬಿಡದ ಹೋರಾಟಕ್ಕೆ ಮಣಿದು ಆ ಕಾಯ್ದೆಗಳನ್ನು ಹಿಂಪಡೆದರು. ಕಾರ್ಮಿಕರನ್ನು ಶೋಷಿಸಲು ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಡುವ ಉದ್ದೇಶದಿಂದ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದರು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ವಿಶೇಷ ಆರ್ಥಿಕ ಪ್ಯಾಕೇಜ್ ಎಂಬ ಹೆಸರಿನಲ್ಲಿ, ಮೇ 2020ರಲ್ಲಿ 20 ಲಕ್ಷ ಕೋಟಿ ರೂ. ಗಳ ಮೊತ್ತದ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಿ, ಇದರ ಬಹುತೇಕ ಹಣವನ್ನು ಉದ್ಯಮಿಗಳಿಗೆ ಕೊಟ್ಟರು. ಈ ಪ್ಯಾಕೇಜ್‌ನಲ್ಲಿ ಬಡವರಿಗೆ 1.7 ಲಕ್ಷ ಕೋಟಿ ರೂಪಾಯಿಗಳ ಉಚಿತ ಆಹಾರ ಧಾನ್ಯಗಳು ಮತ್ತು ಬಡ ಮಹಿಳೆಯರು ಮತ್ತು ವೃದ್ಧರಿಗೆ ನಗದು ಪ್ಯಾಕೇಜ್ ಜೊತೆಗೆ ರಿಸರ್ವ್ ಬ್ಯಾಂಕ್‌ನ ದ್ರವ್ಯತೆ ಕ್ರಮಗಳು ಮತ್ತು ಬಡ್ಡಿದರ ಕಡಿತಗಳನ್ನು ಒಳಗೊಂಡಿದೆ ಎನ್ನುತ್ತಾರಾದರೂ, ಉಳಿದ 18 ಲಕ್ಷ ಕೋಟಿ ಉದ್ಯಮಗಳ ಪಾಲಾಗಿದೆ.
ಸಾವಿನ ಸಂಖ್ಯೆ 5 ಲಕ್ಷ ಅಲ್ಲ, 50 ಲಕ್ಷ?
ಭಾರತ ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಕೊರೋನಾ ಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 5,33,454 (ಐದು ಲಕ್ಷದ, ಮುವತ್ತ್ಮೂರು ಸಾವಿರದ ನಾಲ್ಕುನೂರ ಐವತ್ತನಾಲ್ಕು). ಇದು ಭಾರತ ಸರ್ಕಾರ ನೀಡಿದ ಮಾಹಿತಿಯನ್ನು ಆದರಿಸಿ ವರ್ಲ್ಡೋ ಮೀಟರ್ (worldometers)ನ ಪೆಬ್ರವರಿ 6, 2024 ರ ಅಂಕಿಅಂಶ. ಇದೇ ಮಾಹಿತಿ ಪ್ರಕಾರ ಭಾರತದಲ್ಲಿ ಕೊರೋನಾ ಸೋಂಕಿತರಾಗಿದ್ದವರ ಒಟ್ಟು ಸಂಖ್ಯೆ 4,50,26,261 (4 ಕೋಟಿ, 50 ಲಕ್ಷದ, 26 ಸಾವಿರದ 261).
2021 ರ ಅಂತ್ಯದ ವೇಳೆಗೆ ಸಾವುಗಳ ಸಂಖ್ಯೆ 4,81,000 ಎಂದು ಭಾರತ ಸರ್ಕಾರ ಹೇಳುತ್ತದೆ. ಆದರೆ, ಕೊವಿಡ್-19 ನಿಂದ ಭಾರತದಲ್ಲಿನ ಸಾವಿನ ಸಂಖ್ಯೆ ಸರ್ಕಾರದ ಅಧಿಕೃತ ಲೆಕ್ಕಕ್ಕಿಂತ ಸುಮಾರು 10 ಪಟ್ಟು ಹೆಚ್ಚಾಗಿದೆ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಎಂದು 2022 ರ ಏಪ್ರಿಲ್ ನಲ್ಲಿ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ. WHO ಅಧ್ಯಯನವು 2021 ರ ಅಂತ್ಯದ ವೇಳೆಗೆ ಭಾರತದಲ್ಲಿನ ಕೊವಿಡ್-19 ಸಾವಿನ ಸಂಖ್ಯೆಯನ್ನು 40.70 ಲಕ್ಷ ಎಂದು ಹೇಳುತ್ತದೆ. ಜಾಗತಿಕವಾಗಿ ಸಂಭವಿಸಿದ 1.5 ಕೋಟಿ ಸಾವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಸಾವುಗಳು ಭಾರತದಲ್ಲಿ ಸಂಭವಿಸಿದೆ ಎಂದು WHO ಹೇಳಿದೆ.
ಇದರ ಪ್ರಕಾರ ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 50 ಲಕ್ಷಕ್ಕಿಂತ ಹೆಚ್ಚು. ಎಂದಿನಂತೆ ಭಾರತ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ (WHO)ನ ಈ ವರದಿಯನ್ನು ತಿರಸ್ಕರಿಸುತ್ತದೆ. ಅದು ಬಳಸಿದ ವಿಧಾನವನ್ನು ಭಾರತ ಸರ್ಕಾರವು ಟೀಕಿಸುತ್ತದೆ. “ಸಂಖ್ಯಾಶಾಸ್ತ್ರೀಯವಾಗಿ ಅಸ್ಪಷ್ಟ ಮತ್ತು ವೈಜ್ಞಾನಿಕವಾಗಿ ಪ್ರಶ್ನಾರ್ಹ” ಎಂದು ಕರೆಯುವ ಮೂಲಕ WHO ವರದಿಯನ್ನು ತಿರಸ್ಕರಿಸಿದೆ. ಆದಾಗ್ಯೂ, ಅದರ ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ಆರರಿಂದ ಏಳು ಪಟ್ಟು ಹೆಚ್ಚಿನ ಸಾವು
2022 ರಲ್ಲಿ ಬಿಡುಗಡೆಯಾದ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ಸೇರಿದಂತೆ ಇತರ ಅಧ್ಯಯನಗಳು, ಭಾರತದ ಜನರ ಸಾವು ನೋವುಗಳನ್ನು ಸರ್ಕಾರದಿಂದ ಕಡಿಮೆ ಮಾಡಲಾಗಿದೆ ಎಂದು ಹೇಳಿದೆ. ಸಾವಿನ ಸಂಖ್ಯೆ ಅಧಿಕೃತ ಸಂಖ್ಯೆಗಿಂತ ಆರರಿಂದ ಏಳು ಪಟ್ಟು ಹೆಚ್ಚು ಎಂದು ಅವರು ಅಂದಾಜಿಸಿದ್ದಾರೆ.
ಅಧಿಕೃತ ಸಂಖ್ಯೆಗಳಿಗೆ ಹೋಲಿಸಿದರೆ ಭಾರತ ಸರ್ಕಾರವು ಬಹಿರಂಗಗೊಳಿಸಿದ ಅಂದಿನ ಮಾಹಿತಿಯು ಭಾರತದಲ್ಲಿ ಸರಾಸರಿ ಸಾವುಗಳಿಗಿಂತ ಹೆಚ್ಚಿನ ಸಾವಿನ ಸಂಖ್ಯೆಯನ್ನು ಸೂಚಿಸುತ್ತದೆ. ಸರ್ಕಾರವು 2020 ರಲ್ಲಿ 81 ಲಕ್ಷ ಸಾವುಗಳನ್ನು ತೋರಿಸುವ ಡೇಟಾವನ್ನು ಬಿಡುಗಡೆ ಮಾಡಿದೆ. ಅದು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 6 ಹೆಚ್ಚಾಗಿದೆ ಅಥವಾ 5 ಲಕ್ಷ ಹೆಚ್ಚು ಸಾವುಗಳು ಸಂಭವಿಸಿವೆ. ಆದರೆ, ಸರ್ಕಾರ 2020 ರಲ್ಲಿ, COVID-19 ನಿಂದಾಗಿ 1,49,000 ಸಾವುಗಳನ್ನು ಲೆಕ್ಕಹಾಕಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚಿನ 4.5 ಲಕ್ಷ ಜನರ ಸಾವುಗಳು ಹೇಗಾಯಿತು ಎಂಬ ಪ್ರಶ್ನೆಗೆ ಸರ್ಕಾರದ ಬಳಿ ಸಮರ್ಥನೀಯ ಉತ್ತರವಿಲ್ಲ ಎನ್ನುತ್ತಾರೆ ಅವರು.
ಕೊರೊನಾ ಸೋಂಕಿನಿಂದ ಮಾತ್ರವಲ್ಲ….
ಈ 48 ಲಕ್ಷಕ್ಕೂ ಹೆಚ್ಚಿನ ಸಾವು ಕೊರೊನಾ ಸೋಂಕಿನಿಂದಲ್ಲದೆ, ಜನರಿಗೆ ಬದುಕಲು ಅವಶ್ಯಕವಾದ ಕುಡಿಯುವ ನೀರು, ಎಳೆಯ ಕಂದಮ್ಮಗಳಿಗೆ ಹಾಲು, ಹಣ್ಣು, ಆಹಾರ ಪದಾರ್ಥಗಳು, ವಿವಿಧ ಬಗೆಯ ಖಾಯಿಲೆ ಹೊಂದಿದ್ದವರಿಗೆ ಅತ್ಯಗತ್ಯ ಔಷಧಿಗಳು, ತುರ್ತು ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರಕುವಂತಹ ವ್ಯವಸ್ಥೆ ಇವೆಲ್ಲವನ್ನೂ ಮಾಡದ ಸರ್ಕಾರದ ವೈಫಲ್ಯಗಳೂ ಈ ಹೆಚ್ಚಿನ ಸಾವುಗಳಿಗೆ ಕಾರಣವಾಗಿವೆ. ಯಾವುದೇ ಪೂರ್ವಸಿದ್ದತೆಗಳಿಲ್ಲದೆ ಪ್ರಧಾನಿ ಮೋದಿಯವರಿಂದ ಅವೈಜ್ಞಾನಿಕ ಲಾಕ್ ಡೌನ್ ನ ದಿಡೀರ್ ಘೋಷಣೆಯೂ ಇಂತಹ ಅನಾವುತಗಳಿಗೆ ಬಹಳಷ್ಟು ಕಾಣಿಕೆ ನೀಡಿದೆ.
ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿಯೇ ಹಲವು ಸೋಂಕಿತರು ಸಾವಿಗೀಡಾಗಿದ್ದಾರೆ. ತುರ್ತು ಚಿಕಿತ್ಸೆಗೆ ದಾಖಲಾದ ಇತರೆ ರೋಗಿಗಳು ಸಾವನ್ನಪ್ಪಿರುವ ಘಟನೆಗಳು ಸಾಕಷ್ಟು ನಡೆದಿವೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದ ಕಾರಣದಿಂದ ಸಾವನ್ನಪ್ಪಿದ ಘಟನೆಗಳೂ ನಡೆದಿವೆ. ಇಂತಹ ಸಂಕಷ್ಟದ ಸಮಯವನ್ನೇ ದಂದೆಕೋರರು ಹಣ ಮಾಡಿಕೊಳ್ಳಲು ದುರುಪಯೋಗ ಪಡಿಸಿಕೊಂಡರು. ಬೆಂಗಳೂರಿನಲ್ಲಿ ಬಿಜೆಪಿಯ ಒಬ್ಬ ಸಂಸದರು ಮತ್ತು ಒಬ್ಬ ಶಾಸಕರ ಕಡೆಯವರಿಂದ ‘ಬೆಡ್ ದಂದೆ’ ನಡೆದ ವರದಿಗಳೂ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇತ್ತು ಎಂಬುದನ್ನು ಮೋದಿ ಸರ್ಕಾರ ಖಡಾಖಂಡಿತವಾಗಿ ನಿರಾಕರಿಸುತ್ತದೆಯಾದರೂ, ನಮ್ಮದೇ ರಾಜ್ಯದ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದ ಕಾರಣದಿಂದ ಹಲವರು ಸಾವನ್ನಪ್ಪಿದ ಘಟನೆ ನಮ್ಮ ಕಣ್ಣಮುಂದೆಯೇ ಇದೆ.
ತಿರಸ್ಕರಿಸಲು ಸರ್ಕಾರ ಸಮರ್ಥನೆ ಒದಗಿಸಬೇಕು
“WHO ನ ಅಂದಾಜು ಕೊವಿಡ್-19 ನಿಂದ ನೇರವಾಗಿ ಅಥವಾ ಆರೋಗ್ಯ ವ್ಯವಸ್ಥೆಗಳ ಮೇಲೆ ಸಾಂಕ್ರಾಮಿಕದ ವ್ಯಾಪಕ ಪ್ರಭಾವದ ಮೂಲಕ ಪರೋಕ್ಷವಾಗಿ ಸಾವನ್ನಪ್ಪಿದ ಜನರನ್ನು ಒಳಗೊಂಡಿದೆ. ಆದರೆ, ಅದು ಬಳಸಿದ ವಿಧಾನವನ್ನು ಭಾರತ ಸರ್ಕಾರವು ಟೀಕಿಸಿದೆ. ಈ ಅಧ್ಯಯನಗಳಿಗೆ ಬಳಸಲಾದ ಮಾಡೆಲಿಂಗ್ ವ್ಯವಸ್ಥೆಗಳು ತಕ್ಕಮಟ್ಟಿಗೆ ಪ್ರಮಾಣಿತವಾಗಿವೆ ಮತ್ತು ಭಾರತ ಸರ್ಕಾರವು ಇದನ್ನು ಒಪ್ಪದಿದ್ದರೆ, ಅವುಗಳನ್ನು ತಿರಸ್ಕರಿಸಲು ಅವರು ಅದಕ್ಕೆ ತಕ್ಕ ಸಮರ್ಥನೆ ಒದಗಿಸಬೇಕು” ಎಂದು ಭಾರತದ ಅಶೋಕ ವಿಶ್ವವಿದ್ಯಾಲಯದ ಜೀವಶಾಸ್ತ್ರ ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕ ಮತ್ತು ಗಣಿತದ ಮಾಡೆಲಿಂಗ್ ತಜ್ಞ ಗೌತಮ್ ಮೆನನ್ ಹೇಳುತ್ತಾರೆ.
ಭಾರತದಲ್ಲಿನ 130 ಕೋಟಿಗಿಂತ ಹೆಚ್ಚಿನ ಜನರಲ್ಲಿ ಮೂರನೇ ಎರಡರಷ್ಟು ಜನರು ಅಂದರೆ, 80 ಕೋಟಿಗಿಂತ ಹೆಚ್ಚಿನವರು ಕನಿಷ್ಟ ಸೌಲಭ್ಯಗಳಿರುವ ಆಸ್ಪತ್ರೆಗಳು ಮತ್ತು ಆರೋಗ್ಯ ವ್ಯವಸ್ಥೆಗಳು ಅಸಮರ್ಪಕವಾಗಿರುವ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಈ ಕಾರಣದಿಂದಲೂ ಜನರ ಸಾವು ಯಾವ ಕಾರಣದಿಂದ ಸಂಭವಿಸುತ್ತದೆ ಎಂದು ತಿಳಿಯಲು ಸಾಧ್ಯವಾಗುತ್ತಿಲ್ಲ ಎಂಬುದು ನಿಜವಾದರೂ, ಮೋದಿ ಸರ್ಕಾರ ಉದ್ದೇಶಪೂರ್ವಕವಾಗಿ ಕೊರೊನಾ ಸಾವುಗಳ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ.
ಗುಜರಾತಿನಲ್ಲಿ ಪರಿಹಾರಕ್ಕೆ ಹೆಚ್ಚಿನ ಅರ್ಜಿ
ಸರ್ಕಾರಗಳು ಕೊರೊನಾ ಸಾವುಗಳ ಸಂಖ್ಯೆಯನ್ನು ಹೇಗೆಲ್ಲಾ ಮುಚ್ಚಿಟ್ಟಿವೆ ಎಂಬುದಕ್ಕೆ ಒಂದು ಉದಾಹರಣೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್. ಆ ರಾಜ್ಯದ ಆರೋಗ್ಯ ಬುಲೆಟಿನ್ ಪ್ರಕಾರ, 2021ರ ಡಿಸೆಂಬರ್ ತಿಂಗಳ ಒಂದು ನಿರ್ಧಿಷ್ಟ ದಿನದಂದು, ಅದುವರೆಗಿನ ಸಾವಿನ ಸಂಖ್ಯೆ 10,099 ಆಗಿತ್ತು. ಆದರೆ, ಮೃತರ ಕುಟುಂಬಗಳಿಂದ ಪರಿಹಾರ ಕೋರಿ 22,557 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಮತ್ತು 16,175 ಅರ್ಜಿಗಳನ್ನು ಅನುಮೋದಿಸಿ ಪರಿಹಾರ ನೀಡಲಾಗಿದೆ ಎಂದು ಗುಜರಾತ್ ಸರ್ಕಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಮೂಲಕ ಗುಜರಾತ್ ತನ್ನ ಅಧಿಕೃತ ಲೆಕ್ಕಾಚಾರಕ್ಕಿಂತ ಹೆಚ್ಚಿನ ಕೋವಿಡ್-19 ಸಾವುಗಳನ್ನು ಒಪ್ಪಿಕೊಂಡಿದೆ. ಇದು ದೇಶದ ಸಾವುಗಳ ಸಂಖ್ಯೆ ಕುರಿತಂತೆ ಒಕ್ಕೂಟ ಸರ್ಕಾರ ನೀಡುವ ವರದಿಗಿಂತ ನಿಜವಾದ ಸಂಖ್ಯೆ ಹೆಚ್ಚು ಎಂಬ ಆತಂಕಕ್ಕೆ ಪುಷ್ಠಿ ನೀಡುತ್ತದೆ ಎಂದು ರಾಯಿಟರ್ಸ್ ಡಿಸೆಂಬರ್ 13, 2021ರ ತನ್ನ ವರದಿಯಲ್ಲಿ ಹೇಳಿದೆ.
“ರಾಯಿಟರ್ಸ್ ಮತ್ತು ಇತರ ಮಾಧ್ಯಮಗಳು, ಸ್ಮಶಾನಗಳು ಮತ್ತು ಸ್ಮಶಾನಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಆಧಾರದ ಮೇಲೆ ವರದಿ ಮಾಡಿವೆ. ಏಪ್ರಿಲ್ ಮತ್ತು ಜೂನ್ ನಡುವೆ ಎರಡನೇ ಅಲೆಯ ಪ್ರಕರಣಗಳಲ್ಲಿ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳು ಕಡಿಮೆ ಅಂದಾಜು ಲೆಕ್ಕ ಮಾಡಿವೆ. ಏಕೆಂದರೆ ಆಸ್ಪತ್ರೆ, ಹಾಸಿಗೆಗಳು ಮತ್ತು ಆಮ್ಲಜನಕದ ತೀವ್ರ ಕೊರತೆಯಿಂದಾಗಿ ಅನೇಕ ಜನರು ಮನೆಗಳಲ್ಲಿಯೇ ಸಾವನ್ನಪ್ಪಿದ್ದಾರೆ” ಎಂದು ಆ ವರದಿ ಹೇಳಿದೆ.
ಕೊರೊನಾದಿಂದ ಪ್ರಾಣ ಕಳೆದುಕೊಂಡ ಮೃತರ ಕುಟುಂಬಗಳು ಪರಿಹಾರಕ್ಕೆ ಸಲ್ಲಿಸಿದ ಅರ್ಜಿಗಳ ಸಂಖ್ಯೆ ಮತ್ತು ಪರಿಹಾರ ಪಡೆಯಲು ಅರ್ಹ ಕುಟುಂಬಗಳ ಸಂಖ್ಯೆಯನ್ನು ನ್ಯಾಯಾಲಯಕ್ಕೆ ಸರ್ಕಾರ ನೀಡುವ ಮೂಲಕ, ಇವುಗಳು ತಾನು ನೀಡಿದ ಅಧಿಕೃತ ಸಂಖ್ಯೆಗಿಂತ ಹೆಚ್ಚು ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ. ಆದರೂ, 2024ರ ಫೆಬ್ರವರಿಯ ಸರ್ಕಾರದ ಅಂಕಿಅಂಶಗಳ ಪ್ರಕಾರ ಗುಜರಾತಿನಲ್ಲಿ ಕೊರೊನಾ ಸಾವಿನ ಸಂಖ್ಯೆ 11,084 ಮಾತ್ರ!
ಈ ವಿಷಯದ ನೇರ ಜ್ಞಾನ ಹೊಂದಿರುವ ಗುಜರಾತ್ ಅಧಿಕಾರಿಯೊಬ್ಬರು, ಅರ್ಜಿಗಳು ಈಗ 40,000 ಕ್ಕಿಂತ ಹೆಚ್ಚಿವೆ ಮತ್ತು ಸುಮಾರು ಅರ್ಧದಷ್ಟು ಅರ್ಜಿಗಳನ್ನು ಅನುಮೋದಿಸಲಾಗಿದೆ ಎಂದು ಹೇಳಿದರು. ಅವರೆಲ್ಲರೂ ತಲಾ 50,000 ರೂಪಾಯಿಗಳನ್ನು ಪಡೆಯುತ್ತಾರೆ. ಈ ಸಂಬಂಧ ಮಾಹಿತಿ ಪಡೆಯಲು ಮುಂದಾದಾಗ, ಗುಜರಾತ್ ಕಂದಾಯ ಸಚಿವ ರಾಜೇಂದ್ರ ತ್ರಿವೇದಿ ಪ್ರತಿಕ್ರಿಯಿಸಲಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ಕೊರೊನಾದಿಂದ ಸಾವುಗಳ ಸಂಖ್ಯೆ ಎಷ್ಟೇ ಆಗಿರಲಿ, ನಿಜವಾದ ಸಂಖ್ಯೆ ಸರ್ಕಾರ ನೀಡುತ್ತಿರುವ ಸಂಖ್ಯೆಗಿಂತ ಬಹಳಷ್ಟು ಹೆಚ್ಚಾಗಿದೆ ಎಂಬುದಂತೂ ಈ ಎಲ್ಲಾ ಅಂಶಗಳಿಂದ ಸ್ಪಷ್ಷವಾಗುತ್ತದೆ. ಮೋದಿಯವರ ಇಮೇಜ್ ಗೆ ಎಲ್ಲಿ ದಕ್ಕೆಯಾಗುತ್ತದೋ ಎಂಬ ಭಯದಿಂದ ಕೊರೊನಾ ಸಾವಿನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ತೋರಿಸಲಾಗುತ್ತಿದೆ ಎಂಬುದಂತೂ ಸತ್ಯ.
ನಿಮ್ಮ ಟಿಪ್ಪಣಿ ಬರೆಯಿರಿ