
- [ ಗಾಮ್ರೆಂಟ್ಸ್ ಕಾರ್ಮಿಕರ ಹೋರಾಟದ ಸಂದರ್ಭದಲ್ಲಿ ನನ್ನದೊಂದು ಲೇಖನ ‘ಆಟೋರಿಕ್ಷಾ ಚಾಲಕ’ ಪತ್ರಿಕೆಯ ಮಾರ್ಚ್ 1996 ರ ಸಂಚಿಕೆಯಲ್ಲಿ ]
ನಗರದಲ್ಲಿ 22 ಕಾರ್ಖಾನೆ ಹೊಂದಿರುವ ಸುಮಾರು ಏಳು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿರುವ ಅಶೋಕ ಸಾಮ್ರಾಟ್ ಸಿದ್ದ ಉಡುಪು (EK ಗಾರ್ಮೆಂಟ್ಸ್) ಕಾರ್ಖಾನೆಯ ಕಾರ್ಮಿಕರು ತಮ್ಮ ಹೋರಾಟವನ್ನು ತೀರ್ವಗೊಳಿಸಿದ್ದಾರೆ. 1996ರ ಮಾರ್ಚ್ 15 ರಂದು ಸಿಐಟಿಯು ಸಂಯೋಜಿತ ಬೆಂಗಳೂರು ಜಿಲ್ಲಾ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ನಿನ ಅಧ್ಯಕ್ಷರು ಹಾಗೂ ಸಿಐಟಿಯು ಜಿಲ್ಲಾ ಮುಖಂಡರಾದ ಆರ್. ಶ್ರೀನಿವಾಸ್ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದರ ಮೂಲಕ ಹೋರಾಟವನ್ನು ತೀರ್ವಗೊಳಿಸಿದರು.
ಕನಿಷ್ಠ ಸೌಲಭ್ಯವಿಲ್ಲ
ಶೇಕಡ 95 ರಷ್ಟು ಮಹಿಳೆಯರೇ ಇರುವ ಅಶೋಕ ಸಾಮ್ರಾಟ್ ಕಾರ್ಖಾನೆಯ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಸೌಲಭ್ಯವನ್ನೂ ನೀಡುತ್ತಿಲ್ಲ. ಕನಿಷ್ಠ ವೇತನ, ಬೆಲೆ ಏರಿಕೆಗೆ ತಕ್ಕಂತೆ ತುಟ್ಟಿಭತ್ಯೆ, ವಾರದ ರಜಾ, ಹಕ್ಕಿನ ರಜಾ, ಬೋನಸ್, ಶಿಶು ಕೇಂದ್ರದ ಸೌಲಭ್ಯ ಹೀಗೆ ಯಾವೊಂದು ಸೌಲಭ್ಯವೂ ಇಲ್ಲ. ವಾರದ 7 ದಿನಗಳೂ ಕೆಲಸ ಮಾಡಬೇಕು. ಭಾನುವಾರ ರಜಾ ಹಾಕಿದರೂ ಬರುವ ವೇತನದಲ್ಲಿ 150 ರೂಗಳ ಕಡಿತ. ಕನಿಷ್ಠ 600 ರೂ ವೇತನ ಪಡೆಯುವ ಕಾರ್ಮಿಕರೂ ಇಲ್ಲಿದ್ದಾರೆ.
ಹೋರಾಟ ಪ್ರಾರಂಭ
ತಿಂಗಳಲ್ಲಿ ಕೇವಲ ಒಂದು ದಿನ ರಜೆ ಕೊಡಲು ಪ್ರಾರಂಭಿಸಿದ ಒಂದೆರೆಡು ತಿಂಗಳಲ್ಲೇ ಆ ಸೌಲಭ್ಯವನ್ನೂ ಹಿಂತೆಗೆದುಕೊಂಡಾಗ ಅಲ್ಲಿನ ಕಾರ್ಮಿಕರು ರೊಚ್ಚಿಗೆದ್ದರು. ಮೈಸೂರು ರಸ್ತೆಯಲ್ಲಿರುವ ಮೌರ್ಯ ಗಾರ್ಮೆಂಟ್ಸ್ ಕಾರ್ಮಿಕರು ಮುಷ್ಕರ ಪ್ರಾರಂಭಿಸಿದರು. ಹೋರಾಟ ಪ್ರಾರಂಭಿಸಿ ಒಂದೆರಡು ದಿನಗಳು ಕಳೆದ ನಂತರ ಸಿಐಟಿಯು ಮುಖಂಡರ ನೇತೃತ್ವದಲ್ಲಿ ಹೋರಾಟ ಮುಂದುವರಿಸಲು ನಿರ್ಧರಿಸಿ, ಕಾರ್ಮಿಕ ಆಯುಕ್ತರ ಕಛೇರಿಗೆ ಮೆರವಣಿಗೆ ಮೂಲಕ ಹೋಗಿ ಮಾಲೀಕನ ವಿರುದ್ದ ದೂರು ಸಲ್ಲಿಸಿದರು. ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿದ್ದನ್ನು ಸಹಿಸದ ಮಾಲಿಕ, ಅಂದೇ ಅಂದರೆ, 1995 ರ ಜೂನ್ 6 ರಂದು ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿದರು. ಮೌರ್ಯ ಕಾರ್ಮಿಕರ ಹೋರಾಟಕ್ಕೆ ಬೆಂಬಲವಾಗಿ ಅದೇ ಮಾಲೀಕನ ಹೊಸೂರು ರಸ್ತೆಯಲ್ಲಿರುವ ಜಿಯಾದರ್ ಮತ್ತು ನೀಲಂ ಕಾರ್ಖಾನೆಯ 300 ಕಾರ್ಮಿಕರು ಬೆಂಬಲವಾಗಿ ನಿಂತು ಮುಷ್ಕರ ಪ್ರಾರಂಭಿಸಿದರು. ಈ ಮಾಲೀಕನ ವಿವಿಧ ಕಾರ್ಖಾನೆಯ ಸುಮಾರು 2 ಸಾವಿರ ಕಾರ್ಮಿಕರು ಈ ಕಾರ್ಮಿಕರ ಬೆಂಬಲವಾಗಿ ಮೆರವಣಿಗೆ ನಡೆಸಿದರು. ಕಾರ್ಮಿಕರ ಒತ್ತಡದಿಂದಾಗಿ ಕಾರ್ಮಿಕ ಆಯುಕ್ತರು ಅಕ್ರಮ ಬೀಗಮುದ್ರೆ ತೆರೆಯುವಂತೆ ಆದೇಶ ನೀಡಿದರು. ಆದರೂ ಮಾಲೀಕ ಇಲಾಖೆಯ ಆದೇಶ ಪಾಲಿಸಲಿಲ್ಲ. ಕಾರ್ಮಿಕರ ಹೋರಾಟ ಮತ್ತೆ ಮುಂದುವರಿಯಿತು. ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರ ಮಧ್ಯಸ್ಥಿಕೆಯಿಂದಾಗಿ ಕಾರ್ಮಿಕರಿಗೆ ಕೆಲಸ ಕೊಡುವುದಾಗಿ ಒಪ್ಪಿ, ಸಂಬಳ ಸಮೇತ ಒಂದು ತಿಂಗಳ ರಜೆ ಘೋಷಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕಾರ್ಮಿಕರ ಮನೆಗೆ ಹೋಗಿ, ಕಾರ್ಖಾನೆ ತೆಗೆಯುವುದಿಲ್ಲ ಮತ್ತು ಸಂಬಳ ಕೊಡುವುದಿಲ್ಲ ಎಂದು ಹೇಳುತ್ತಾ ಸಂಘದಿಂದ ದೂರ ಮಾಡಲು ಮಾಲೀಕರ ಕಡೆಯವರು ಪ್ರಯತ್ನಿಸಿದರು. ನಂತರ ಮತ್ತೆ ಹೋರಾಟ. ಮುಖ್ಯಮಂತ್ರಿಗಳ ಮಧ್ಯಪ್ರವೇಶ. ಕೊನೆಗೂ 10 ಕಿ.ಮೀ. ದೂರದಲ್ಲಿರುವ ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆ ಪ್ರದೇಶದಲ್ಲಿ ಒಂದು ಚಿಕ್ಕ ಕಾರ್ಖಾನೆ ತೆಗೆದು ಕೆಲಸ ಕೊಡುವುದಾಗಿ ಹೇಳಿದರು. ಆದರೆ, ಸಾರಿಗೆ ಸೌಲಭ್ಯ ನೀಡಲಿಲ್ಲ. ಸಾರಿಗೆ ಸೌಲಭ್ಯಕ್ಕಾಗಿ ಮತ್ತೆ ಹೋರಾಟಮಾಡಿದ ಕಾರ್ಮಿಕರು ಆ ಸೌಲಭ್ಯ ಪಡೆಯುವಲ್ಲಿ ಯಶಸ್ವಿಯಾದರು.
ರೌಡಿಗಳನ್ನು ಕರೆತಂದರು
ಸುಂಕದ ಕಟ್ಟೆ ಪ್ರದೇಶಕ್ಕೆ ಕೆಲಸಕ್ಕೆ ಹಾಜರಾದಾಗ ರೌಡಿಗಳನ್ನೇ ಸೂಪರ್ ವೈಸರ್ ಗಳಾಗಿ ನೇಮಿಸಿ ಸದಾ ಕಿರುಕುಳ ಕೊಡಲು ಪ್ರಾರಂಭಿಸಿದರು. ಕಾರ್ಮಿಕರು ಇದ್ಯಾವುದಕ್ಕೂ ಹೆದರದಿದ್ದಾಗ, ಒಂದು ದಿನ 2 ಬಸ್ಸು ಮತ್ತು 3 ಕಾರುಗಳಲ್ಲಿ ಸುಮಾರು 200 ಜನ ರೌಡಿಗಳನ್ನು ಕರೆತಂದು, ಕೆಲಸ ಮುಗಿಸಿ ಕಾರ್ಖಾನೆಯಿಂದ ಹೊರಬರುವ ಸಮಯದಲ್ಲಿ ಕಾರ್ಮಿಕರ ಮೇಲೆ ತೀರ್ವವಾದ ದಾಳಿಮಾಡಲು ಯತ್ನಿಸಿದರು. ಈ ದಾಳಿಯಿಂದ ತಪ್ಪಿಸಿಕೊಂಡು ಓಡುತ್ತಿದ್ದ ಮಹಿಳೆಯರನ್ನು ಬೆನ್ನಟ್ಟಿ ಥಳಿಸಿದರು. 4 ಮಹಿಳಾ ಕಾರ್ಮಿಕರಿಗೆ ತೀವ್ರತರವಾದ ಗಾಯಗಳಾದವು. ಆ ಸಮಯದಲ್ಲಿ ಅಲ್ಲಿನ ಗ್ರಾಮಸ್ಥರು ಕಾರ್ಮಿಕರ ಪರವಾಗಿ ನಿಂತು ರೌಡಿಗಳನ್ನು ಹೆದರಿಸಿ ಓಡಿಸಿದರು. ಈ ಬಗ್ಗೆ ಪೊಲೀಸರಿಗೆ ಮುನ್ಸೂಚನೆ ನೀಡಿ ರಕ್ಷಣೆ ನೀಡಬೇಕೆಂದು ಕೇಳಿದರೂ ಪೊಲೀಸರು ರಕ್ಷಣೆ ನೀಡಲು ಬರಲಿಲ್ಲ. ಬದಲಾಗಿ ಕಾರ್ಮಿಕರೇ ರೌಡಿಗಳಂತೆ ವರ್ತಿಸಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆ ಪ್ರದೇಶದ ಪೊಲೀಸ್ ಅಧಿಕಾಯೊಬ್ಬರು ಹೇಳಿದರು. ನಂತರ ಮತ್ತೆ ಹೋರಾಟ. ಗೃಹ ಸಚಿವ ಪಿ.ಜಿ.ಆರ್. ಸಿಂದ್ಯಾ ಮತ್ತು ನಗರ ಪೊಲೀಸ್ ಕಮೀಷನರ್ ಟಿ. ಶ್ರೀನಿವಾಸಲುರವರು ಕಾರ್ಮಿಕರಿಗೆ ರಕ್ಷಣೆಯ ಭರವಸೆ ನೀಡಿ ರಕ್ಷಣೆ ಒದಗಿಸಿದರು.
ವೇತನ ಕಡಿತ
ಕೆಲಸಕ್ಕೆ ಹಾಜರಾದ 300 ಕಾರ್ಮಿಕರಿಗೆ ಕೇವಲ 70 ರಿಂದ 80 ಕಾರ್ಮಿಕರು ಕೆಲಸ ಮಾಡಬಹುದಾದ ಚಿಕ್ಕದಾದ ಕಾರ್ಖಾನೆಯಲ್ಲಿ ಕೆಲಸಮಾಡಲು ಹೇಳಿದರು. ಕೆಲಸ ಮಾಡಲು ಬೇಕಾದ ಅವಶ್ಯಕ ಯಂತ್ರಗಳನ್ನು ಒದಗಿಸಿಕೊಡಲಿಲ್ಲ. ಕಾರ್ಮಿಕರಿಗೆ ಕೆಲಸವನ್ನೇ ಕೊಡದೆ, ಕಾರ್ಮಿಕರು ಕಡಿಮೆ ಉತ್ಪಾದನೆ ಕೊಡುತ್ತಿದ್ದಾರೆಂದು ಹೇಳಿ, ಕೊಡುವ ಅಲ್ಪ ವೇತನದಲ್ಲೂ ಶೇ. 42 ರಷ್ಟನ್ನು ಮಾಲೀಕರು ಕಡಿತ ಮಾಡುತ್ತಾರೆ. 1 ಸಾವಿರ ರೂ ವೇತನ ಬರುತ್ತಿದ್ದ ಕಾರ್ಮಿಕರಿಗೆ 580 ರೂ ಮಾತ್ರ ಕೊಡಲು ಮುಂದಾಗುತ್ತಾರೆ. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುವುದರ ಜೊತೆಗೆ, ತಮಗೆ ಬರಬೇಕಾದ ಹಿಂದಿನ ಅವಧಿಯ ತಮ್ಮ ದುಡಿಮೆಯ ಬಾಕಿ ವೇತನಕ್ಕಾಗಿ ಕಾರ್ಮಿಕ ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆ.
ಸಚಿವರಿಗೆ ಸನ್ಮಾನ
ಈ ಮಧ್ಯೆ ಕಾರ್ಮಿಕ ಮಂತ್ರಿ ಸಿ.ಗುರುನಾಥ್ ರವರನ್ನು ಕಾರ್ಖಾನೆಯ ಆಡಳಿತ ಮಂಡಳಿಯವರು ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ಕಛೇರಿಗೆ ಕರೆಸಿ ಸನ್ಮಾನ ಮಾಡಿದರು. ಅದೇ ಸಮಯದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕರ ಪರವಾದ ಅನೇಕ ಆದೇಶಗಳನ್ನು ಮಾಲೀಕನಿಂದ ಸಾರಾಸಗಟಾಗಿ ತಿರಸ್ಕರಿಸಲಾಯಿತು. ಈ ಕಾರಣಕ್ಕಾಗಿ, ಪ್ರಾಮಾಣಿಕ ಹಾಗೂ ದಕ್ಷತೆಗೆ ಹೆಸರಾದ ಕಾರ್ಮಿಕ ಆಯುಕ್ತರು ಮಾಲೀಕರ ವಿರುದ್ದ ಮೊಕದ್ದಮೆ ಹೂಡಿ ದಂಡ ವಿಧಿಸಿದರು. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ಜಾರಿಗೊಳಿಸಿಲ್ಲ, ತುಟ್ಟಿಭತ್ಯೆ ನೀಡಿಲ್ಲ, ಶಿಶು ಕೇಂದ್ರದ ಸೌಲಭ್ಯವಿಲ್ಲ, ಶೌಚಾಲಯದ ವ್ಯವಸ್ಥೆಯಿಲ್ಲ ಎಂಬಿತ್ಯಾದಿ ಕಾರಣಗಳಿಗಾಗಿ ಮಾಲೀಕ ದಂಡ ತೆತ್ತಿದ್ದಾನೆ. ಆದರೂ ನಿಯಮದಂತೆ ವ್ಯವಸ್ಥೆ ರೂಪಿಸಲಿಲ್ಲ.
ಯಡಿಯೂರಪ್ಪನಿಂದ ಪತ್ರ
ಇದರ ನಡುವೆ ರಾಜ್ಯದ ಬಿಜೆಪಿ ಮುಖಂಡ ಹಾಗೂ ವಿರೋದ ಪಕ್ಷದ ನಾಯಕರಾದ ಯಡಿಯೂರಪ್ಪನವರು ಮಾಲೀಕರ ಪರವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ. ಅಶೋಕ ಸಾಮ್ರಾಟ್ ನ ಮಾಲೀಕ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುತ್ತಿದ್ದರೂ ಕಾರ್ಮಿಕ ಇಲಾಖೆ ಮಾಲೀಕನಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಈ ಕಿರುಕುಳ ನಿಲ್ಲಬೇಕು ಎಂದು ಆ ಪತ್ರದಲ್ಲಿ ದೇವೇಗೌಡರನ್ನು ಒತ್ತಾಯಿಸಿದ್ದಾರೆ.
ಇತರೆ ಕಾರ್ಖಾನೆಗಳಲ್ಲೂ ಸಂಘಟನೆ
ಇತ್ತ ಇನ್ನೂ ಸಂಘಟಿತಗೊಳ್ಳದ ಕಾರ್ಖಾನೆಗಳ ಕಾರ್ಮಿಕರಿಗೆ ಕಿರುಕುಳ ಹೆಚ್ಚಾಗಿದೆ. ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಾರ್ಮಿಕರನ್ನು ಕೆಲಸ ಬಿಡುವಂತೆ ಒತ್ತಾಯಿಸುವುದು, ಕುಂಟು ನೆಪವೊಡ್ಡಿ ಕೆಲಸದಿಂದ ತೆಗೆದು ಹಾಕುವ ಕ್ರಮಕ್ಕೆ ಮುಂದಾಗಿದ್ದಾರೆ. ಇಂತಹ ಕ್ರಮವನ್ನು ಪ್ರತಿಭಟಿಸಿದ ಕಾರ್ಮಿಕರು ಸಂಘದ ಹೋರಾಟಕ್ಕೆ ಕೈಜೋಡಿಸಲು ಮುಂದೆ ಬಂದಿದ್ದಾರೆ. ಇದರಲ್ಲಿ ರಾಜಾಜಿನಗರ ದಲ್ಲಿರುವ ಕಾರ್ಖಾನೆಯೂ ಒಂದು.
ಅಲ್ಲಿನ ಕಾರ್ಮಿಕರು ಸಂಘಟಿತರಾಗಲು ಮುಂದಾಗುತ್ತಿದ್ದಂತೆ ಮುಂದಾಳತ್ವ ವಹಿಸಿದ ಕೆಲವು ಕಾರ್ಮಿಕರನ್ನು ಕೆಲಸದಿಂದ ಸಸ್ಪೆಂಡ್ ಮಾಡಿದ್ದಾರೆ. ಇದನ್ನು ಪ್ರತಿಭಟಿಸಿ ಅಲ್ಲಿನ ಕಾರ್ಮಿಕರು ಮಾರ್ಚ್ 20 ರಿಂದ ಮುಷ್ಕರ ಹೂಡಿದ್ದಾರೆ. ಮಾಲೀಕ ಆ ಘಟಕದಲ್ಲಿಯೂ ಒಂದು ವಾರಗಳ ಕಾಲ ಸಂಬಳ ಸಮೇತ ರಜಾ ಘೋಷಿಸುವ ಮೂಲಕ ತನ್ನ ಹಳೆಯ ತಂತ್ರವನ್ನೇ ಮಾಡುತ್ತಿದ್ದಾರೆ. ಕಾರ್ಮಿಕ ಮಂತ್ರಿ ಮತ್ತು ಮಾಲೀಕನ ಧೋರಣೆಯನ್ನು ಪ್ರತಿಭಟಿಸಿ, ಕಾರ್ಮಿಕರ ಬೇಡಿಕೆಗಳಿಗಳ ಜಾರಿಗಾಗಿ ಮತ್ತು ಮೌರ್ಯ ಕಾರ್ಖಾನೆಯ ಬೀಗಮುದ್ರೆ ತೆರೆಯುವಂತೆ ಒತ್ತಾಯಿಸಿ ಈ ಅನಿರ್ಧಿಷ್ಟ ಉಪವಾಸ ಮುಷ್ಕರವನ್ನು ಪ್ರಾರಂಭಿಸಿದ್ದಾರೆ.
ನಿಮ್ಮ ಟಿಪ್ಪಣಿ ಬರೆಯಿರಿ