ಮೈಕೊ ಕಾರ್ಮಿಕರ 1979ರ ಐತಿಹಾಸಿಕ ಹೋರಾಟ

(2002ರಲ್ಲಿ ಬಿಡುಗಡೆಯಾದ ನನ್ನ ಕಿರು ಪುಸ್ತಕದ ಪೂರ್ಣ ಬರಹ ಇಲ್ಲಿದೆ.)

ಬೆಂಗಳೂರು  ನಗರದಲ್ಲಿ ಬೃಹತ್ ಖಾಸಗಿ ಕಂಪನಿಯಾದ ‘ಮೈಕೋ’ (MICO) ಎಂದೇ ಖ್ಯಾತನಾಮ ಹೊಂದಿರುವ ಮೋಟರ್ ಇಂಡಸ್ಟ್ರೀಸ್ ಕಂಪನಿ (ಇಂದಿನ ಭಾಷ್ ಕಂಪನಿ) 1954ರಲ್ಲಿ ಸ್ಥಾಪನೆಗೊಂಡಿತು. ಪಶ್ಚಿಮ ಜರ್ಮನಿಯ ಏಕಸ್ವಾಮ್ಯ ಬಂಡವಾಳಗಾರರ ಒಂದು ಬಹುರಾಷ್ಟ್ರೀಯ ಕಂಪನಿ ಇದನ್ನು ಸ್ಥಾಪಿಸಿತು. ಕಾರ್ಮಿಕರಿಗೆ ನಿಕೃಷ್ಠ ವೇತನ, ಅಧಿಕ ಕೆಲಸದ ಹೊರೆ, ಅಧಿಕ ಲಾಭ, ಇದು ಈ ಮಾಲೀಕರ ಧೋರಣೆಯಾಗಿತ್ತು. ಕಾರ್ಖಾನೆ ಹೆಚ್ಚು ಹೆಚ್ಚು ಲಾಭಗಳಿಸುತ್ತಾ ತನ್ನ ಬಂಡವಾಳವನ್ನು ವೃದ್ಧಿಸಿಕೊಳ್ಳತೊಡಗಿತ್ತು. 1972ರಲ್ಲಿ ಅದರ ಬಂಡವಾಳ 32 ದಶಲಕ್ಷಗಳಿದ್ದದ್ದು, 1979ರಲ್ಲಿ 126 ದಶಲಕ್ಷಕ್ಕೆ ಏರಿಕೆ ಆಯಿತು.

ಕಂಪನಿಯು ಇಷ್ಟೆಲ್ಲಾ ಲಾಭಗಳಿಸಿದರೂ ಕಾರ್ಮಿಕರ ಸವಲತ್ತುಗಳನ್ನು ಹೆಚ್ಚಿಸಲಿಲ್ಲ. ಒಂದೆಡೆ ಅಗತ್ಯ ವಸ್ತುಗಳ ಬೆಲೆಗಳ ಏರಿಕೆಯಾದರೆ, ಅದಕ್ಕೆ ತಕ್ಕಂತೆ ವೇತನ ಹೆಚ್ಚಳವಾಗದೆ ಕಾರ್ಮಿಕರು ಜೀವನ ನಡೆಸಲು ಪ್ರಯಾಸ ಪಡುತ್ತಿದ್ದರು. ಕೆಲಸದ ಒತ್ತಡ ಹೆಚ್ಚಾಗಿತ್ತು. ಅಧಿಕಾರಿಗಳ ವೇತನಕ್ಕೂ ಕಾರ್ಮಿಕರ ವೇತನಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. 1977ರ ಕಾರ್ಖಾನೆಯ ವಾರ್ಷಿಕ ವರದಿಯ ಪ್ರಕಾರ, ಕಾರ್ಮಿಕರ ತಲಾ ವಾರ್ಷಿಕ ಆದಾಯ 67,000 ರೂ. ಮಾತ್ರ ಇತ್ತು. ಆದರೆ, ವ್ಯವಸ್ಥಾಪಕ ನಿರ್ದೇಶಕನ ವಾರ್ಷಿಕ ಆದಾಯ 5,50,000 ರೂ.ಗಳಷ್ಟಿತ್ತು. ಅಂದರೆ ಕಾರ್ಮಿಕನ ಆದಾಯದ 70 ಪಟ್ಟು ಅಧಿಕವಾಗಿತ್ತು.

ನಾಜಲ್ ವಿಭಾಗ ನಾಸಿಕ್  ಗೆ ಸ್ಥಳಾಂತರ

1970ರಲ್ಲಿ 1500 ಕಾರ್ಮಿಕರು ಕೆಲಸ ಮಾಡುತ್ತಿದ್ದ ನಾಜಲ್ ವಿಭಾಗವನ್ನು ಮಹಾರಾಷ್ಟ್ರ ಪ್ರಾಂತಕ್ಕೆ ಸೇರಿದ ನಾಸಿಕ್ ಗೆ ಸ್ಥಳಾಂತರ ಮಾಡಿದರು. ಆಗಿನ ಕಾರ್ಮಿಕ ಸಂಘಟನೆ ಒಮ್ಮೆ ಇದರ ವಿರುದ್ಧ ಪ್ರತಿಭಟಿಸಿತ್ತಾದರೂ ನಂತರ ಮೌನವಹಿಸಿತು. ಇದೇ ನೆಪ ಹೂಡಿದ ಆಡಳಿತ ಮಂಡಳಿ 1500 ಕಾರ್ಮಿಕರನ್ನು ‘ಸರ್  ಪ್ಲಸ್’ ಎಂದು ಘೋಷಿಸಿತು. ನಂತರ ಅಪ್ರೆಂಟಿಸ್ ಗಳನ್ನು ಬಿಟ್ಟು ಬೇರೆ ಯಾವ ಕಾರ್ಮಿಕರನ್ನೂ ಕೆಲಸಕ್ಕೆ ತೆಗೆದುಕೊಳ್ಳಲಿಲ್ಲ. ಇರುವ ಕಾರ್ಮಿಕರಿಗೆ ಕೆಲಸದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದರು.

ಮದುವೆಯಾದರೆ ಕೆಲಸವಿಲ್ಲ

1956ರಲ್ಲಿ ಕಾರ್ಮಿಕ ಮುಖಂಡರ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ, ಇಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಮದುವೆಯಾದರೆ ಆಕೆಗೆ ಕೆಲಸ ನಿರಾಕರಿಸಲಾಗುತ್ತಿತ್ತು. ಆಕೆ ಗಂಡ ಅಥವಾ ಉದ್ಯೋಗ ಎರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳಬೇಕು. ಮದುವೆ ಬೇಕೆನಿಸಿದರೆ ಆಕೆ ಕೆಲಸ ಕಳೆದುಕೊಳ್ಳಲು ಸಿದ್ಧವಾಗಿರಬೇಕು.

ಯಾವುದೇ ಕಾರಣದಿಂದ ಕಾರ್ಮಿಕರನ್ನು ಅಮಾನತು ಮಾಡಿದರೆ, ಆತನಿಗೆ ಅಮಾನತು ಅವಧಿಯ ವೇತನವನ್ನು ನೀಡುತ್ತಿರಲಿಲ್ಲ. ಕಾಯಿಲೆ ಕಾರಣ ರಜೆ ಪಡೆದರೆ, ಅಪಘಾತದಿಂದಾಗಿ ರಜೆ ಪಡೆದರೆ, ಅಂತಹ ಕಾರ್ಮಿಕರ ವಾರ್ಷಿಕ ವೇತನ ಹೆಚ್ಚಳವನ್ನು ರದ್ದುಗೊಳಿಸಲಾಗುತ್ತಿತ್ತು. ನಗರದ ಮೂಲೆ ಮೂಲೆಗಳಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದರು. ಆದರೂ ಇವರಿಗೆ ವಾಹನ ಸೌಲಭ್ಯ ಒದಗಿಸಿರಲಿಲ್ಲ. ದಿನದಲ್ಲಿ ನಾಲ್ಕು ಪಾಳಿ ಕೆಲಸ ನಡೆಯುತ್ತಿತ್ತು. ರಾತ್ರಿ ವೇಳೆ ಕೆಲಸಕ್ಕೆ ಬರಲು ಮತ್ತು ಕೆಲಸ ಮುಗಿಸಿ ಮನೆಗೆ ಹೋಗಲು ಕಾರ್ಮಿಕರಿಗೆ ತುಂಬಾ ತೊಂದರೆಯಾಗಿತ್ತು. ಬಸ್ ಗಳಿಗಾಗಿ ಕಾದು ಕೆಲಸಕ್ಕೆ ಹಾಜರಾಗುವಾಗ ಒಂದು ನಿಮಿಷ ತಡವಾದರೂ ಚಾರ್ಶಿಟ್, ಶೋಕಾಸ್ ನೋಟಿಸ್ ನೀಡಲಾಗುತ್ತಿತ್ತು. ಕಾರ್ಮಿಕರು ಇಂತಹ ಕಾರಣಕ್ಕಾಗಿ ಒಮ್ಮೆಯಾದರೂ ಸಸ್ಪೆಂಡ್ ಆಗಿದ್ದಾರೆ. ಕಾರ್ಮಿಕರಿಗೆ ಕೆಲಸದ ಭದ್ರೆತೆಯಂತೂ ಇಲ್ಲವೇ ಇಲ್ಲ.

ಮುಖಂಡತ್ವದಲ್ಲಿ ಹೋರಾಟದ ಕೊರತೆ

ಕಾರ್ಮಿಕರು ಇಷ್ಟೆಲ್ಲ ದಾಳಿ ದಬ್ಬಾಳಿಕೆ ಸಂಕಷ್ಟಗಳನ್ನು ಅನುಭವಿಸುತ್ತಿದ್ದರೂ ಆಗಿನ ಮುಖಂಡತ್ವ ವಹಿಸಿದ್ದ ನಾಯಕರು ಆಡಳಿತ ಮಂಡಳಿಯ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಮುಂದೆ ಬರಲಿಲ್ಲ ಕಾರ್ಮಿಕರಲ್ಲಿ ಹೋರಾಟದ ಕಿಚ್ಚನ್ನು ಹೊತ್ತಿಸಲಿಲ್ಲ. ಆಡಳಿತ ಮಂಡಳಿ ಏನೇ ಮಾಡಿದರು ಕಾರ್ಮಿಕರು ಅದನ್ನು ಸಹಿಸಿಕೊಳ್ಳುವಂತೆ ಮಾಡಿದರು. ಕಾರ್ಮಿಕರ ಹಕ್ಕುಗಳು ದಮನಕ್ಕೆ ಒಳಗಾಗಿದ್ದರೂ ಅದನ್ನು ಪ್ರತಿಭಟಿಸಲಿಲ್ಲ. ಎಐಟಿಯುಸಿ ಮುಖಂಡತ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರೂ ಕಾರ್ಮಿಕರಲ್ಲಿ ವರ್ಗ ಜಾಗೃತಿ ಮೂಡಿಸಿ ಕಾರ್ಮಿಕರನ್ನು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕಿಳಿಸುವಲ್ಲಿ ವಿಫಲವಾಗಿತ್ತು. ಸಂಘದ ಮುಖಂಡತ್ವದಲ್ಲಿನ ಈ ನೀತಿಯಿಂದಾಗಿ ಆಡಳಿತ ಮಂಡಳಿ ಮನಸೋಇಚ್ಚೆ ನಡೆಯತೊಡಗಿತು. ತಾನು ಮಾಡಿದ್ದೇ ನಿಯಮ, ಅದನ್ನು ಕಾರ್ಮಿಕರು ಮಾತನಾಡದೆ ಒಪ್ಪಿಕೊಳ್ಳಬೇಕಿತ್ತು.

ಸಿಐಟಿಯು ಪ್ರವೇಶ

ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಐಟಿಯು ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದ ಸೂರಿ ಎಂದೇ ಖ್ಯಾತನಾಮರಾಗಿರುವ ಕಾಮ್ರೆಡ್ ಎಸ್. ಸೂರ್ಯನಾರಾಯಣರಾವ್ ಮೈಕೋ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸತೊಡಗಿದರು. ಹತಾಸೆ, ಅಸಹಾಯಕರಾಗಿದ್ದ ಕಾರ್ಮಿಕರಲ್ಲಿ ಸೂರಿಯವರ ಆಗಮನದಿಂದಾಗಿ ಒಂದಷ್ಟು ಆಸೆ ಚಿಗುರುತೊಡಗಿತು. ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅದುವರೆಗಿನ ಮುಖಂಡತ್ವ ಸಂಪೂರ್ಣ ವಿಫಲವಾಗಿತ್ತು. ಕಾರ್ಮಿಕರಲ್ಲಿ ವರ್ಗ ಜಾಗೃತಿ ಮೂಡಿಸುವಲ್ಲಿ ಅದು ವಿಫಲವಾಗಿತ್ತು. ಹಾಗಾಗಿ ಕಾರ್ಮಿಕರು ಭರವಸೆಯ ಆಶಾಕಿರಣವಾಗಿದ್ದ, ದಿಟ್ಟ ಹೋರಾಟಗಾರರಾಗಿದ್ದ ಸೂರ್ಯನಾರಾಯಣರಾವ್ ಅವರನ್ನು 1979ರ ಫೆಬ್ರವರಿ 18ರಂದು ಸಂಘದ ಅಧ್ಯಕ್ಷರನ್ನಾಗಿ ಕಾರ್ಮಿಕರು ಆಯ್ಕೆ ಮಾಡಿಕೊಂಡರು. ಸೂರಿ ಅಧ್ಯಕ್ಷರಾದ ನಂತರ ಜಡಗಟ್ಟಿದ್ದ ಕಾರ್ಮಿಕರ ಮನಸ್ಸನ್ನು ಜಾಗೃತಿಗೊಳಿಸುತ್ತಾರೆ. ಅವರು ಕಾರ್ಮಿಕರ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಿದರು. ಪ್ರಜಾಪ್ರಭುತ್ವ ರೀತಿಯಲ್ಲಿ ಸಂಘಟನೆ ನಡೆಸತೊಡಗಿದರು. ಕಾಲಕಾಲಕ್ಕೆ ಸರ್ವ ಸದಸ್ಯರ ಸಭೆ, ಕಾರ್ಯಕಾರಿ ಸಮಿತಿ ಸಭೆ, ಪದಾಧಿಕಾರಿಗಳ ಸಭೆ ನಡೆಸಿ ಕಾರ್ಮಿಕರಲ್ಲಿ ಜಾಗೃತಿ ಮೂಡಿಸತೊಡಗಿದರು. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸತೊಡಗಿದರು.

ದಕ್ಷಿಣ ಭಾರತದ ನಾಯಿಗಳು ಎಂದ ಅಧಿಕಾರಿ

ಸೂರಿಯವರ ಆಯ್ಕೆ ಮಾಲೀಕರಲ್ಲಿ ದಿಗಲು ಹುಟ್ಟಿಸಿತು. ಸೂರಿಯವರನ್ನು ಮುಖಂಡತ್ವದಿಂದ ಕೆಳಗಿಳಿಸಲು ಸತಪ್ರಯತ್ನ ಮಾಡಿತು. ಮುಖಂಡರ ವಿರುದ್ಧ ಕಾರ್ಮಿಕರನ್ನು ಎತ್ತಿ ಕಟ್ಟಲು ಪ್ರಯತ್ನಿಸಿತು. ಅದು ಫಲ ನೀಡದೆ ಆಡಳಿತ ಮಂಡಳಿ ನಿರಾಸೆಗೊಂಡು, ಕಾರ್ಮಿಕರು ಮತ್ತು ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದರು.

ಒಮ್ಮೆ ಆಡಳಿತ ಮಂಡಳಿಯ ಅಧಿಕಾರಿಯೊಬ್ಬ ಸಂಘದ ಪದಾಧಿಕಾರಿಗಳೊಡನೆ ನಡೆದುಕೊಂಡ ರೀತಿ ಕಾರ್ಮಿಕರನ್ನು ರೊಚ್ಚಿಗೆಬ್ಬಿಸಿತು. ಆತ ಮುಖಂಡರನ್ನು ‘ದಕ್ಷಿಣ ಭಾರತದ ನಾಯಿಗಳು’ (ಸೌತ್ ಇಂಡಿಯನ್ ಡಾಗ್ಸ್) ಎಂದು ಮೊದಲಸಿದ ಸುದ್ದಿ ಇಡೀ ಕಾರ್ಖಾನೆಯಲ್ಲಿ ಕಾಡ್ಗಿಚ್ಚಿನಂತೆ ಅರಡಿತು. ತಕ್ಷಣ ಕಾರ್ಮಿಕರು ಪ್ರತಿಭಟಿಸಿದರು. ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಆದರೆ ಕಾರ್ಮಿಕರ ಈ ಮನವಿಗೆ ಆಡಳಿತ ಮಂಡಳಿ ಕಿಂಚಿತ್ತೂ ಸ್ಪಂದಿಸಲಿಲ್ಲ. ಇದರಿಂದ ಕಾರ್ಮಿಕರು ಮತ್ತಷ್ಟು ಆಕ್ರೋಶಗೊಂಡು 1979ರ ಏಪ್ರಿಲ್ 8ರಂದು ಊಟ ಬಹಿಷ್ಕರಿಸಿದರು. ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಏಪ್ರಿಲ್ ಒಂಬತ್ತರಂದು ಶಾಂತಿಯುತ ಮತ ಪ್ರದರ್ಶನ ನಡೆಸಿ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಅಂದಿನ ಪ್ರತಿಭಟನೆಯಲ್ಲಿ ನಾಲ್ಕು ಸಾವಿರ ಕಾರ್ಮಿಕರು ಭಾಗವಹಿಸಿದ್ದರು. ಮನವಿ ಸ್ವೀಕರಿಸಿದ ಆಯುಕ್ತರು ಏಪ್ರಿಲ್ 16ರಂದು ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಕಾರ್ಮಿಕರ ಈ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಏಪ್ರಿಲ್ 14ರಂದು ಏಳು ಮುಖಂಡರನ್ನು ಸಸ್ಪೆಂಡ್ ಮಾಡಲಾಯಿತು. ಇದರಿಂದ ಕೆರಳಿದ ಕಾರ್ಮಿಕರು ಮುಷ್ಕರಕ್ಕೆ ಇಳಿದರು. ಅಂದೇ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಲಾಯಿತು. ಕಾರ್ಮಿಕರ ಹೋರಾಟ ತೀರ್ವಗೊಳ್ಳತೊಡಗಿತ್ತು. ಪೊಲೀಸ್ ಇಲಾಖೆ, ಆಡಳಿತ ಮಂಡಳಿಯೊಡನೆ ಸಾಮೀಲಾಗಿ ಕಾರ್ಮಿಕರ ಹೋರಾಟವನ್ನು ಮುರಿಯಲು ಪ್ರಯತ್ನಿಸಿತು. ನೂರಾರು ಪೊಲೀಸರನ್ನು ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನಿಯೋಜಿಸಿದರು. ಕಾರ್ಮಿಕರು ಪೊಲೀಸರ ಬೆದರಿಕೆಗೆ ಮಣಿಯದಿದ್ದಾಗ ಪೊಲೀಸರು ಬಲ ಪ್ರಯೋಗ ನಡೆಸಿದರು. ಲಾಟಿ ಪ್ರಹಾರ ಮಾಡಿ ನೂರಾರು ಜನರನ್ನು ತೀವ್ರ ರೀತಿಯಲ್ಲಿ ಗಾಯಗೊಳಿಸಿದರು. ಅಶ್ರುವಾಯು ಸೆಲ್ ಸಿಡಿಸಿ, ಲಾಠಿ ಪ್ರಹಾರ ಮಾಡಿ ಸಿಕ್ಕಸಿಕ್ಕ ಕಾರ್ಮಿಕರನ್ನು ಮನಬಂದಂತೆ ತಳಿಸುತ್ತಿದ್ದ ದೃಶ್ಯ ಬ್ರಿಟಿಷ್ ಆಡಳಿತವನ್ನು ನೆನಪಿಗೆ ತರುತ್ತಿತ್ತು. ಪೊಲೀಸರ ಲಾಠಿ ಏಟು ತಿಂದ ನೂರಾರು ಕಾರ್ಮಿಕರು ಆಸ್ಪತ್ರೆ ಸೇರಿದರು.

ಆಡಳಿತ ಮಂಡಳಿ ಮತ್ತು ಪೊಲೀಸರ ಈ ದಾಳಿ ದಬ್ಬಾಳಿಕೆಗಳ ವಿರುದ್ಧ ಹೋರಾಡಲು ಕಾರ್ಮಿಕರು ನಿರ್ಧರಿಸಿದರು. ಸಿಐಟಿಯು ಬೆಂಗಳೂರು ಜಿಲ್ಲಾ ಸಮಿತಿಯು ಕಾರ್ಮಿಕರ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ಕೊಟ್ಟಿತು. ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿರ್ಧರಿಸಿ, ಏಪ್ರಿಲ್ 17ರಂದು ಒಂದು ಸೌಹಾರ್ದ ಸಮಿತಿ ರಚಿಸಿತು. ಈ ಸಮಿತಿಯಲ್ಲಿ ವಿವಿಧ ಕಾರ್ಖಾನೆಯ ಕಾರ್ಮಿಕ ಮುಖಂಡರು, ವಿದ್ಯಾರ್ಥಿ ಸಂಘಟನೆ, ಯುವಜನ, ಮಹಿಳಾ ಸಂಘಟನೆಗಳ ಮುಖಂಡರು, ಎಲ್ಐಸಿ ಮತ್ತು ಬ್ಯಾಂಕ್ ನೌಕರರ ಮುಖಂಡರು ಸದಸ್ಯರಾಗಿದ್ದರು. ವಿರೋಧ ಪಕ್ಷಗಳ ಬೆಂಬಲವೂ ಕಾರ್ಮಿಕರಿಗೆ ಲಭಿಸಿತು. ಏಪ್ರಿಲ್ 18ರಂದು ವಿಧಾನಸೌಧ ಚಲೋ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಏಳು ಸಾವಿರ ಕಾರ್ಮಿಕರು ಭಾಗವಹಿಸಿದ್ದರು. ಅಂದು ರಾಜ್ಯಪಾಲರು, ಕಾರ್ಮಿಕ ಮಂತ್ರಿ ಮತ್ತು ಕೈಗಾರಿಕಾ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಕಾರ್ಮಿಕರ ಬೇಡಿಕೆಗಳು ಈಡೇರದಿದ್ದರೆ ಬೆಂಗಳೂರು ಬಂದ್ ನಡೆಸಲು ಅಲ್ಲಿ ಸೇರಿದ್ದ ಬೃಹತ್ ಸಂಖ್ಯೆಯ ಕಾರ್ಮಿಕರು ಒಕ್ಕೊರಲಿನಿಂದ ತೀರ್ಮಾನಿಸಿದರು.

 ಆಡಳಿತ ಮಂಡಳಿಯಿಂದ ಕ್ಷಮೆಯಾಚನೆ

ಕಾರ್ಮಿಕರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ ಮಧ್ಯಪ್ರವೇಶಿಸಿತು. ಸರ್ಕಾರವು ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರನ್ನು ಮಾತುಕತೆಗೆ ಕರೆಯಿತು. ಮಾತುಕತೆಯ ನಂತರ ಒಪ್ಪಂದ ಒಂದಕ್ಕೆ ಬರಲಾಯಿತು. ಕಾರ್ಮಿಕರ ಮನಸ್ಸಿಗೆ ನೋವಾಗುವಂತೆ ನಡೆದುಕೊಂಡಿದ್ದಕ್ಕೆ (ದಕ್ಷಿಣ ಭಾರತದ ನಾಯಿಗಳು ಎಂದು ಕರೆದಿದ್ದಕ್ಕೆ) ಆಡಳಿತ ಮಂಡಳಿ ಕ್ಷಮೆ ಯಾಚಿಸಿತು. ಅಮಾನತುಗೊಳಿಸಿದ್ದ ಮುಖಂಡರನ್ನು ಯಾವುದೇ ಷರತ್ತಿಲ್ಲದೆ ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಗೆ ನೀಡಿತು. ಬೀಗಮುದ್ರೆ ತೆರವುಗೊಳಿಸುವುದಾಗಿಯೂ, ವೇತನಕ್ಕೆ ಸಂಬಂಧಿಸಿದ ಪ್ರಶ್ನೆಯೂ ಸೇರಿದಂತೆ, ಇತರ ಸಮಸ್ಯೆಗಳ ಬಗ್ಗೆ ಕಾರ್ಮಿಕರು ಕೆಲಸಕ್ಕೆ ಹಾಜರಾದ ನಂತರ ಮಾತುಕತೆಯ ಮೂಲಕ ಬಗೆಹರಿಸುವುದಾಗಿಯೂ ಆಡಳಿತ ಮಂಡಳಿ ಒಪ್ಪಿಗೆ ನೀಡಿತು. ಏಪ್ರಿಲ್ 27ರಂದು ಮುಷ್ಕರ ಹಿಂತೆಗೆದುಕೊಳ್ಳಲಾಯಿತು. ಕಾರ್ಮಿಕರ ಹದಿಮೂರು ದಿನಗಳ ಹೋರಾಟಕ್ಕೆ ಆಡಳಿತ ಮಂಡಳಿ ತಲೆಬಾಗಲೇ ಬೇಕಾಯಿತು. ಈ ಹೋರಾಟಕ್ಕೆ 7000 ಕಾರ್ಮಿಕರಲ್ಲಿ ಶೇಕಡ 99.5ರಷ್ಟು ಕಾರ್ಮಿಕರ ಬಾರಿ ಬೆಂಬಲವಿತ್ತು.

ಸೂರಿ ಆಯ್ಕೆ ಪ್ರಶ್ನಿಸಿ ರಿಟ್

ಈ ಮಧ್ಯೆ ಸೂರ್ಯನಾರಾಯಣರಾವ್ ರವರನ್ನು ಹೇಗಾದರೂ ಮಾಡಿ ಮುಖಂಡತ್ವದಿಂದ ದೂರ ಮಾಡಲು ಆಡಳಿತ ಮಂಡಳಿ ಪ್ರಯತ್ನಿಸಿತು. ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಕ್ರಮ ಸರಿಯಲ್ಲವೆಂದು ಅದು ಸಾರಿತ್ತು. ಹಿಂದೆ ಅಧಿಕಾರದಲ್ಲಿದ್ದು, ಈಗ ಅಧಿಕಾರ ಕಳೆದುಕೊಂಡಿದ್ದ ಎಐಟಿಯುಸಿ ಮುಖಂಡರು ಆಡಳಿತ ಮಂಡಳಿಯೊಡನೆ ಸಾಮೀಲಾಗಿ, ಸೂರಿಯವರನ್ನು ಅಧಿಕಾರದಿಂದ ಇಳಿಸಲು ಪ್ರಯತ್ನಿಸಿದರು. ಆದರೆ, ಮುಖಂಡರಾದ ಎಂ. ಸಿ. ನರಸಿಂಹನ್ ಮುಖಾಂತರ ಸೂರಿಯವರ ಆಯ್ಕೆಯ ಕ್ರಮ ಬದ್ಧತೆಯನ್ನು ಪ್ರಶ್ನಿಸಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದರು. ಶಂಕರಪ್ಪ ಎಂಬುವವರನ್ನು ಸಂಘದ ಜನರಲ್ ಕಾನ್ಸಿಲ್  ಸ್ಥಾನದಿಂದ ವಜಾ ಮಾಡಿದ್ದ ಕ್ರಮವನ್ನು ಅವರು ಪ್ರಶ್ನಿಸಿದ್ದರು. ಆದರೆ, ಸಂಘದ ಆಸ್ತಿಪಾಸ್ತಿ ನಷ್ಟ ಉಂಟುಮಾಡಿದ, ಪದಾಧಿಕಾರಿಗಳ ಮೇಲೆ ಕೈ ಮಾಡಿದ ಆರೋಪದ ಮೇಲೆ, ದುರ್ನಡತೆಯುಳ್ಳ ಶಂಕರಪ್ಪನನ್ನು ಹೊಸದಾಗಿ ಆಯ್ಕೆಯಾದ ತಂಡ ಬಹುಮತದಿಂದ ಅವರ ಸ್ಥಾನದಿಂದ ಮಜಾ ಮಾಡಿತ್ತು.

ಸಾವಿರಾರು ಕಾರ್ಮಿಕರು ಇದನ್ನು ಪ್ರತಿಭಟಿಸಿ ನ್ಯಾಯಾಲಯದ ಎದುರು ಘೋಷಣೆ ಕೂಗಿದರು. ಕಾರ್ಮಿಕರು ಆಡಳಿತ ಮಂಡಳಿ ಮತ್ತು ಹಿಂದಿನ ಮುಖಂಡತ್ವದ ವಿರುದ್ಧ ಘೋಷಣೆ ಕೂಗಿ ನ್ಯಾಯಕ್ಕಾಗಿ ಒತ್ತಾಯಿಸಿದರು.

ವಿಚಾರಣೆ ನಡೆಸಿದ ನ್ಯಾಯಾಲಯ ಎರಡೂ ಕಡೆಯವರ ವಾದಗಳನ್ನು ಆಲಿಸಿತು. ಸೂರಿ ತಂಡದ ಪರ ವಕೀಲರು ಆರೋಪಗಳನ್ನು ನಿರಾಕರಿಸಿ ವಾದ ಮಂಡಿಸಿದರು. ಕುಡಿದು ಗೇಟಿನ ಮುಂದೆ ಅಸಭ್ಯವಾಗಿ ವರ್ತಿಸಿದ 40 ಜನರಿಗೆ ಈಗಾಗಲೇ ದಂಡ ವಿಧಿಸಲಾಗಿದೆಯೆಂದೂ, ಈಗ ನಡೆದಿರುವ ಚುನಾವಣೆ ಕ್ರಮಬದ್ಧವಾಗಿದೆ ಎಂದೂ ವಾದಿಸಿದರು. ಹಿಂದೆ ಅಧ್ಯಕ್ಷರಾಗಿದ್ದ ಎಂ.ಎಸ್. ಕೃಷ್ಣನ್ ರವರು ಸಹ ಈ ಕ್ರಮದಲ್ಲಿಯೇ ಆಯ್ಕೆಯಾಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ 1979ರ ಆಗಸ್ಟ್ 14ರಂದು ತೀರ್ಪು ನೀಡಿ, ಈ ವಿಷಯ ನಮ್ಮ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಹೇಳಿ ಅರ್ಜಿಯನ್ನು ವಜಾ ಮಾಡಿತು. ಆಡಳಿತ ಮಂಡಳಿ ಮತ್ತು ಎಐಟಿಯುಸಿ ಮುಖಂಡರಿಗೆ ಇದರಿಂದ ಮತ್ತಷ್ಟು ಮುಖಭಂಗವಾಯಿತು.

ಹೋರಾಟ ಪುನರಾರಂಭ

1979ರ ಏಪ್ರಿಲ್ ನಲ್ಲಿ ನಡೆದ ಮಷ್ಕರದ ಸಂದರ್ಭದಲ್ಲಿ ಕಾರ್ಮಿಕರಿಗೆ ನೀಡಿದ್ದ ಭರವಸೆಯಂತೆ ವೇತನ ಪರಿಷ್ಕರಣೆಗೆ ಮುಂದಾಗಲಿಲ್ಲ. ಇತರ ಬೇಡಿಕೆಗಳ ಬಗ್ಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ತಾಳಿತು. ಕಾರ್ಮಿಕರು ನಿರಂತರವಾಗಿ ಒತ್ತಡ ತಂದರೂ ಆಡಳಿತ ಮಂಡಳಿಯಿಂದ ಉತ್ತಮ ಪ್ರತಿಕ್ರಿಯೆ ಬರಲಿಲ್ಲ. ಸರ್ಕಾರದ ಮಧ್ಯೆ ಪ್ರವೇಶಕ್ಕೆ ಒತ್ತಾಯಿಸಿ ಹಲವು ಮನವಿಗಳನ್ನು ಸಲ್ಲಿಸಲಾಯಿತು. ಆದರೂ ಸರ್ಕಾರ ಕಾರ್ಮಿಕರ ಕೂಗಿಗೆ ಸ್ಪಂದಿಸಲಿಲ್ಲ. ಕಾರ್ಮಿಕರಿಗೆ ಹೋರಾಟವಲ್ಲದೆ ಅನ್ಯ ಮಾರ್ಗವಿರಲಿಲ್ಲ.

ರಾಷ್ಟ್ರಾದ್ಯಂತ ಇರುವ ಮೈಕೋ ಕಾರ್ಮಿಕರು ಸೆಪ್ಟೆಂಬರ್ ಒಂದರಂದು ಒಂದು ದಿನದ ಸಾಂಕೇತಿಕ ಮುಷ್ಕರ ನಡೆಸಿ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿದರು. ಈ ಅವಧಿಯಲ್ಲಿ 26 ಕಾರ್ಮಿಕರನ್ನು ಸಸ್ಪೆಂಡ್ ಮಾಡಲಾಯಿತು. ತಕ್ಷಣ ಸಭೆ ಸೇರಿದ ವಿವಿಧ ಸಂಘಗಳ ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿಯು ಹೋರಾಟವನ್ನು ತೀರ್ವಗೊಳಿಸಲು ನಿರ್ಧರಿಸಿತು. ಅದಕ್ಕಾಗಿ ವ್ಯಾಪಕ ಸಿದ್ಧತೆ ನಡೆಯಿತು.

ಐತಿಹಾಸಿಕ ಮಷ್ಕರ ಆರಂಭ

 1979ರ ಅಕ್ಟೋಬರ್ ಐದರಂದು ಕಾರ್ಮಿಕರು ಅನಿರ್ದಿಷ್ಟ ಕಾಲದ ಮಷ್ಕರ ಆರಂಭಿಸಿದರು. ಈ ಮುಷ್ಕರಕ್ಕೆ ಕಾರ್ಮಿಕರಿಂದ ವ್ಯಾಪಕ ಬೆಂಬಲವಿತ್ತು. ಶೇಕಡ 99ರಷ್ಟು ಕಾರ್ಮಿಕರು ಮಷ್ಕರಕ್ಕೆ ಬೆಂಬಲವಾಗಿ ನಿಂತರು. ಮುಷ್ಕರ ಆರಂಭವಾಗುತ್ತಿದ್ದಂತೆ ಮುಷ್ಕರನಿರತರ ಮೇಲೆ ವ್ಯಾಪಕ ದಾಳಿ ದಬ್ಬಾಳಿಕೆ ಆರಂಭವಾಯಿತು. ಪೊಲೀಸರ ದೊಡ್ಡದೊಂದು ತಂಡ ಕಾರ್ಖಾನೆ ಬಳಿ ಬೀಡುಬಿಟ್ಟಿತು. ಕಾರ್ಖಾನೆ ಸತ್ತ ಮುತ್ತ ಸೆಕ್ಷನ್ 35 ಜಾರಿ ಮಾಡಿ, ಕಾರ್ಮಿಕರು ಒಂದೆಡೆ ಸೇರದಂತೆ ತಡೆಯಲು ಪ್ರಯತ್ನಿಸಿದರು.

ಸಸ್ಪೆಂಡ್ ಆಗಿರುವ 27 ಕಾರ್ಮಿಕರನ್ನು ಹಿಂತೆಗೆದುಕೊಳ್ಳಬೇಕು, ಹಲವು ಕಾರ್ಮಿಕರಿಗೆ ನೀಡಿರುವ ಷೋಕಾಶ್ ನೋಟಿಸ್ ವಾಪಸ್ ಪಡೆಯಬೇಕು, ಬೇರಲ್  ಗ್ರೈಂಡಿಂಗ್ ವಿಭಾಗದಲ್ಲಿ ಒಬ್ಬ ಕಾರ್ಮಿಕ ಎರಡು ಯಂತ್ರ ನಡೆಸಬೇಕೆಂಬ ನಿಯಮ ತೆಗೆದುಹಾಕಬೇಕು (ಈ ನಿಯಮದಿಂದಾಗಿ ಈ ಭಾಗದಲ್ಲಿ ಕೆಲಸ ಮಾಡುವ ಎಂಟು ಕಾರ್ಮಿಕರ ಕಾಲುಗಳಿಗೆ ಪೆಟ್ಟಾಗಿತ್ತು), ವೇತನ ಹೆಚ್ಚಳ, ಈ ಬೇಡಿಕೆಗಳನ್ನು ಮುಂದಿಟ್ಟು ಕಾರ್ಮಿಕರು ಮುಷ್ಕರಕ್ಕಿಳಿದರು.

ಮುಷ್ಕರವನ್ನು ಮುರಿಯಲು ಆಡಳಿತ ಮಂಡಳಿಯು ಪೊಲೀಸ್ ಬಳಕೆಯ ಜೊತೆಗೆ ಗೂಂಡಾಗಳನ್ನು ಬಳಸಿಕೊಂಡಿತು. ಗೂಂಡಾಗಳು ಕಾರ್ಮಿಕರ ಮನೆ ಮನೆಗಳಿಗೆ ತೆರಳಿ ಬೆದರಿಕೆ ಹಾಕಿ, ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸಿದರು. ಹಲವರ ಮೇಲೆ ಹಲ್ಲೆ ನಡೆಸಿದರು. ಕಾರ್ಮಿಕರಿಗೂ ಅವರ ಕುಟುಂಬದ ಸದಸ್ಯರಿಗೂ ನಡುವೆ ಒಡಕುಂಟು ಮಾಡಲು ಪ್ರಯತ್ನಿಸಿದರು.

ಸೂರಿ ಅವರಿಗೆ ಕೊಲೆ ಬೆದರಿಕೆ

ಕಾರ್ಮಿಕರ ಮೇಲೆ ಗೊಂಡಾಗಳಿಂದ, ಪೊಲೀಸರಿಂದ ಹಲ್ಲೆ, ಕಿರುಕುಳ, ದೌರ್ಜನ್ಯ ದಿನೇ ದಿನೇ ಅಧಿಕವಾಗತೊಡಗಿತು. ಗೂಂಡಾಗಳು ಸಂಘದ ಅಧ್ಯಕ್ಷರಾದ ಸೂರಿ ಅವರಿಗೆ ಕೊಲೆ ಬೆದರಿಕೆ ಹಾಕಿದರು. ಅವರ ಮನೆಗೆ ಹೋಗಿ ಗಲಾಟೆ ಮಾಡಿ ಮುಷ್ಕರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಮಿತಿಮೀರಿದರೆ ಕೊಲೆ ಮಾಡುವುದಾಗಿ ಬೆದರಿಸಿದರು. ಅವಾಚ್ಯ ಶಬ್ದಗಳಿಂದ ಬೈದರು. ಸೂರಿಯವರು ಈ ಬೆದರಿಕೆಗೆ ಮಣೆಯಲಿಲ್ಲ. ಕಾರ್ಮಿಕರ ಹಿತರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು ತಮ್ಮ ಪ್ರಾಣಕ್ಕೆ ಅಪಾಯವಿದ್ದರೂ ಹೋರಾಟ ಮುಂದುವರಿಸಿದರು. ಕಾರ್ಮಿಕರಿಗೆ ನ್ಯಾಯ ದೊರಕುವವರೆಗೂ ಹೋರಾಡುವುದಾಗಿ ಪಣತೊಟ್ಟರು.

 ಸೂರಿಯವರ ಮನೆಗೆ ಗೂಂಡಾಗಳು ಬಂದು ಪ್ರಾಣ ಬೆದರಿಕೆ ಹಾಕುತ್ತಿದುದನ್ನು ಪ್ರತಿಭಟಿಸಿ 3000 ಕಾರ್ಮಿಕರು ಪೊಲೀಸ್ ಕಮಿಷನರ್ ಕಚೇರಿ ಎದರು ಪ್ರತಿಭಟನೆ ನಡೆಸಿದರು. ಕಾರ್ಮಿಕ ಮುಖಂಡರಿಗೆ ಮತ್ತು ಕಾರ್ಮಿಕರಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು. ಮಾಲಿಕರ ಪರವಾದ ಪೊಲೀಸ್ ನೀತಿಯನ್ನು ಖಂಡಿಸಿದರು. ಆಯುಕ್ತರು ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ಆದರೆ, ನಂತರ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ವಹಿಸಲಿಲ್ಲ.

 ಅಪಪ್ರಚಾರ

ಪೋಲಿಸ್ ಮತ್ತು ಗೂಂಡಾಗಳ ಮೂಲಕ ಬೆದರಿಸಿ ಮುಷ್ಕರ ಮುರಿಯಲು ಒಂದು ಕಡೆ ಪ್ರಯತ್ನಿಸುತ್ತ, ಮತ್ತೊಂದು ಅಸ್ತ್ರವಾಗಿ ಪತ್ರಿಕೆಗಳ ಮೂಲಕ ಕಾರ್ಮಿಕರ ಮತ್ತು ಮುಖಂಡರ ವಿರುದ್ಧ ಸುಳ್ಳು ಪ್ರಚಾರ ಹರಡಿಸಿ, ಸಾರ್ವಜನಿಕರ ಬೆಂಬಲ ಕಾರ್ಮಿಕರಿಗೆ ಸಿಗದಂತೆ ಮಾಡಲು ಆಡಳಿತ ಮಂಡಳಿ ನಿರಂತರವಾಗಿ ಪ್ರಯತ್ನಿಸಿತು. ಮುಖಂಡರ ಮತ್ತು ಕಾರ್ಮಿಕರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಲಾಯಿತು. ಅದೇ ವೇಳೆಗೆ ಮುಖಂಡರಿಂದ ಹಾಗೂ ಕಾರ್ಮಿಕರಿಂದ ನೀಡಲಾಗುವ ಯಾವುದೇ ದೂರನ್ನು ದಾಖಲಿಸಿದಂತೆ ಮಾಡಲು ಪೊಲೀಸ್ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ದೊಡ್ಡ ಮೊತ್ತದ ಲಂಚ ನೀಡಿದರು. ಈ ಕಾರಣದಿಂದ ಇಲಾಖೆಗಳು ಕಾರ್ಮಿಕರ ಯಾವುದೇ ದೂರುಗಳ ಸಂಬಂಧ ಕ್ರಮ ತೆಗೆದುಕೊಳ್ಳಲಿಲ್ಲ.

 ತ್ರಿಪುರ ಮುಖ್ಯಮಂತ್ರಿಯ ಬೆಂಬಲ

ಮೈಕೋ ಕಾರ್ಮಿಕರ ಈ ಹೋರಾಟಕ್ಕೆ ದೇಶಾದ್ಯಂತ ಕಾರ್ಮಿಕ ಮುಖಂಡರು ಬೆಂಬಲ ನೀಡಿದ್ದರು. ಮಾರ್ಕ್ಸ್ವಾದಿ ಕಮ್ಯೂನಿಸ್ಟ್  ಪಕ್ಷದ (ಸಿಪಿಐಎಂ) ಮುಖಂಡರು ಮೈಕೋ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿ ಪತ್ರ ಕಳುಹಿಸತೊಡಗಿದರು. ಭಾರತ ದೇಶದ ಈಶಾನ್ಯ ಭಾಗದಲ್ಲಿರುವ ತ್ರಿಪುರ ರಾಜ್ಯದ ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ ಪತ್ರ ಬರೆದು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪತ್ರದಲ್ಲಿ ಈ ರೀತಿ ಬರೆಯಲಾಗಿತ್ತು:

D.O.No.F. 3(1) C>M/78                                                                   ದಿನಾಂಕ: 29-10-1979

ಮುಖ್ಯಮಂತ್ರಿ

ತ್ರಿಪುರ

ಅಗರ್ತಲ

 ಪ್ರಿಯಾ ರಾವ್,

 ಅಕ್ಟೋಬರ್ 17ರಂದು ನಿಮ್ಮ ಪತ್ರವನ್ನು ನೋಡಿ ನನಗೆ ಸಂತೋಷವಾಯಿತು. ನಮ್ಮ ಎಡರಂಗ ಸರ್ಕಾರವು ದುಡಿಯುವ ವರ್ಗದ ನ್ಯಾಯವಾದ ಬೇಡಿಕೆಗಳ ಪರವಾಗಿದೆ. ಬಹುರಾಷ್ಟ್ರೀಯ ಬಂಡವಾಳಶಾಹಿಗಳು ಕಾರ್ಮಿಕರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ದೇಶದಲ್ಲಿ ಅವರಿಗೆ ಯಾವ ಹಕ್ಕು ಇಲ್ಲ.

 ನಿಮ್ಮ ಹೋರಾಟಕ್ಕೆ ಯಶಸ್ಸನ್ನು ಕೋರುವ

ಶುಭಾಶಯಗಳೊಂದಿಗೆ                                   ನಿಮ್ಮವ     

                                                                        ಸಹಿ

                                                                   (ನೃಪೇನ್ ಚಕ್ರವರ್ತಿ)

ಸಿಪಿಐ(ಎಂ) ರಾಜ್ಯ ಸಮಿತಿ ಬೆಂಬಲ

ಮೈಕೋ ಕಾರ್ಮಿಕರ ಹೋರಾಟವನ್ನು ಬಗ್ಗುಬಡಿಯಲು ಪೊಲೀಸರು ಮಾಲೀಕರೊಡನೆ ಸೇರಿ ಪ್ರಯತ್ನಿಸುತ್ತಿರುವುದು ಮತ್ತು ಸರ್ಕಾರ ಈ ಬಗ್ಗೆ ಮೌನವಾಗಿರುವುದನ್ನು ಕಂಡ ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಹೋರಾಟಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿತು. ಮೈಕೋ ಕಾರ್ಮಿಕರ ಹೋರಾಟಕ್ಕೆ ಬೆಂಬಲವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತನ್ನ ಎಲ್ಲಾ ಘಟಕಗಳಿಗೆ ಕರೆ ನೀಡಿತು. ಸಿಐಟಿಯು ಗೆ ಸೇರಿದ ಕಾರ್ಮಿಕರು ಸೇರಿದಂತೆ ವಿದ್ಯಾರ್ಥಿ, ಯುವಜನ ಸಂಘಟನೆ, ಮಹಿಳಾ ಸಂಘಟನೆ, ರೈತ, ಕೃಷಿ ಕೂಲಿಕಾರರ ಸಂಘಟನೆಗಳಲ್ಲದೆ ತನ್ನೆಲ್ಲ ಸಂಘಟನೆಗಳಿಗೆ ಸುತ್ತೋಲೆ ಕಳುಹಿಸಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಅದು ಕರೆನೀಡಿತು.

ಸಿಐಟಿಯು ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಪಿ. ರಾಮಮೂರ್ತಿಯವರು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅವರು ಕಾರ್ಮಿಕರ ಬೃಹತ್ ಸಭೆ ಒಂದರಲ್ಲಿ ಭಾಷಣ ಮಾಡುತ್ತಾ, ಮಾಲೀಕರನ್ನು ಮತ್ತು ಅವರೊಡನೆ ಸಾಮೀಲಾಗಿರುವ ಪೊಲೀಸರನ್ನು ಅತ್ಯುಗ್ರ ಪದಗಳಿಂದ ಖಂಡಿಸಿದರು. ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಇತಿಹಾಸ ನಿರ್ಮಿಸಿದ ಬೃಹತ್ ಸಭೆ

ಮಾಲೀಕನ ಗೊಂಡಗಳ ದಾಳಿ, ಪೊಲೀಸರ ದಾಳಿ ದಬ್ಬಾಳಿಕೆ, ಸರ್ಕಾರದ ಮೌನ ಕಾರ್ಮಿಕರನ್ನು ಮತ್ತಷ್ಟು ಕೆರಳಿಸಿತು. ಕಾರ್ಮಿಕರು ತಮ್ಮ ಹೋರಾಟವನ್ನು ತೀವ್ರಗೊಳಿಸಿದರು. ಸಿಐಟಿಯು ಬೆಂಗಳೂರು ಜಿಲ್ಲಾ ಸಮಿತಿಯು ಜಿಲ್ಲೆಯಾದ್ಯಂತ ತಮ್ಮೆಲ್ಲ ಕಾರ್ಮಿಕರಿಗೆ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವಂತೆ ಕರೆ ನೀಡಿತು. ನವೆಂಬರ್ 7ರಂದು ಕಬ್ಬನ್ ಪಾರ್ಕಿನಲ್ಲಿ ಒಂದು ಬೃಹತ್ ಬಹಿರಂಗ ಸಭೆ ನಡೆಸಲು ನಿರ್ಧರಿಸಿತು. ಅಂದಿನ ಸಭೆಗೆ ಮೈಕೋ ಕಾರ್ಮಿಕರಲ್ಲದೆ ನಗರದ ವಿವಿಧ ಪ್ರದೇಶಗಳಲ್ಲಿರುವ ಕಾರ್ಖಾನೆಗಳ ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ ಯುವಜನರು, ಹೋಟೆಲ್ ಕಾರ್ಮಿಕರು, ವಿಮಾ ನೌಕರರು, ಬ್ಯಾಂಕ್ ನೌಕರರು ಬೃಹತ್ ಸಂಖ್ಯೆಯಲ್ಲಿ ಕಬ್ಬನ್ ಪಾರ್ಕಿಗೆ ಬಂದು ಸೇರಿದರು. ಯಶವಂತಪುರ, ಪೀಣ್ಯ ಕೈಗಾರಿಕಾ ಪ್ರದೇಶ, ಮೈಸೂರು ರಸ್ತೆ ಪ್ರದೇಶ, ಕೃಷ್ಣರಾಜಪುರ ಹೀಗೆ ನಗರದ ಮೂಲೆ ಮೂಲೆಗಳಿಂದ ಕಾರ್ಮಿಕರು ಸಾಗರೋಪಾದಿಯಲ್ಲಿ ಹರಿದು ಬಂದು ಪ್ರತಿಭಟನಾ ಸ್ಥಳದಲ್ಲಿ ಸೇರಿದರು. ಈ ಸಭೆಯಲ್ಲಿ 15,000ಕ್ಕೂ ಮಿಕ್ಕಿ ಜನತೆ ನೆರದಿದ್ದರು. ಇಷ್ಟು ದೊಡ್ಡ ಸಂಖ್ಯೆಯ ಕಾರ್ಮಿಕರ ಪ್ರತಿಭಟನೆ ಬೆಂಗಳೂರಿನ ಇತಿಹಾಸದಲ್ಲಿ ಪ್ರಥಮ ಎನ್ನಲಾಗಿದೆ.

ಒಂದು ವಾರದಲ್ಲಿ ಬೇಡಿಕೆ ಈಡೇರದಿದ್ದರೆ ರಾಜ್ಯದ್ಯಂತ ತೀವ್ರತರವಾದ ಚಳುವಳಿ ನಡೆಸುವುದಾಗಿ ಸಭೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತು. ಸಿಪಿಐ(ಎಂ) ಕಾರ್ಯದರ್ಶಿ ಮಂಡಳಿ ಸದಸ್ಯರು ಹಾಗೂ ಸಿಐಟಿಯು ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಎನ್.ಎಲ್. ಉಪಾಧ್ಯಾಯ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಕಾರ್ಮಿಕರ ಹೋರಾಟಕ್ಕೆ ಆಡಳಿತ ಮಂಡಳಿ ಮಣಿಯಲಿಲ್ಲ. ಪೊಲೀಸರ ನರಭೇಟೆ ಮತ್ತಷ್ಟು ತೀವ್ರಗೊಂಡಿತು. ಲಾಠಿ ಪ್ರಹಾರ, ಬಂಧನ, ಹಿಂಸೆ ದಿನನಿತ್ಯದ ಸುದ್ದಿಗಳಾದವು. ಮುಷ್ಕರ ಹತ್ತಿಕ್ಕುವ ಪ್ರಯತ್ನಗಳು ತೀವ್ರಗೊಂಡವು. ಗೂಂಡಾಪಡೆಯೊಂದು ಸಂಘದ ಕಚೇರಿಗೆ ನುಗ್ಗಿ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿತು. ಅಲ್ಲಿದ್ದ ವಸ್ತುಗಳನ್ನು ಹೊಡೆದು ಹಾಕಿದರು. ಕೆಲವು ವಸ್ತುಗಳನ್ನು ಬೀದಿಗೆಸೆದರು. ಸಂಘದ ಕಾರ್ಯದರ್ಶಿಯಾದ ಕಾಂ. ನೀಲಕಂಠಯ್ಯನವರಿಗೆ ಮನಬಂದಂತೆ ತಳಿಸಿದರು. ನೀಲಕಂಠಯ್ಯ ಆಸ್ಪತ್ರೆ ಸೇರಿದರು.

 ಬೆಂಗಳೂರು ಬಂದ್ ಗೆ ಕರೆ

ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಸಭೆ ಸೇರಿ ಚರ್ಚೆ ನಡೆಸಿತು. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿತು. ಡಿಸೆಂಬರ್ ಮೂರರಂದು ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಿತು. ಬಂದ್ ಯಶಸ್ವಿಗೊಳಿಸಲು ಸಾರ್ವಜನಿಕರ, ವಿರೋಧ ಪಕ್ಷಗಳ ಮತ್ತು ವಿವಿಧ ಸಂಘಗಳ ಬೆಂಬಲ ಪಡೆಯಲು ನಿರ್ಧರಿಸಿತು.

ಸಿಐಟಿಯು ರಾಜ್ಯ ಸಮಿತಿ ತಕ್ಷಣ ಸಭೆ ಕರೆದು, ಬೆಂಗಳೂರು ಬಂದ್ ನಡೆಯುವ ದಿನ ಇಡೀ ರಾಜ್ಯದಲ್ಲಿ ಪ್ರತಿಭಟನೆ ನಡೆಸಲು ತಮ್ಮೆಲ್ಲ ಸಂಘಟನೆಗಳಿಗೆ ಕರೆ ನೀಡಿತು. ಡಿಸೆಂಬರ್ ಮೂರರಂದು ರಾಜ್ಯಾದ್ಯಂತ ನಡೆಯುವ ಹೋರಾಟಕ್ಕೆ ಬೆಂಬಲ ನೀಡುವಂತೆ ಸೂಚಿಸಿತು. ಅದು ನವೆಂಬರ್ 11ರಂದು ಸಭೆ ಸೇರಿ ಹೋರಾಟವನ್ನು ಪುನರ್ ವಿಮರ್ಶಿಸಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಡಲು ತೀರ್ಮಾನಿಸಿತು

ಬೆಂಗಳೂರು ಬಂದ್ ಯಶಸ್ವಿಗೊಳಿಸಲು ಸಿಐಟಿಯ ಸಂಘಟನೆಗೆ ಸೇರಿದ ಇತರೆ ಕಾರ್ಮಿಕ ಸಂಘಗಳು ಹಗಲು ರಾತ್ರಿ ಎನ್ನದೆ ಶ್ರಮಿಸಿದರು. ಕಾರ್ಮಿಕರ ಮತ್ತು ಮುಖಂಡರ ರಕ್ಷಣೆಗಾಗಿ ಸ್ವಯಂ ಸೇವಕ ತಂಡ ಒಂದನ್ನು ರಚಿಸಲಾಯಿತು. ಲಕ್ಷಾಂತರ ಕರಪತ್ರ ಮುದ್ರಿಸಿ ವಿತರಿಸಲಾಯಿತು. ಸಾವಿರಾರು ಪೋಸ್ಟರ್  ಗಳನ್ನು ನಗರದ ಮೂಲೆ ಮೂಲೆಗಳಲ್ಲಿ ಅಂಟಿಸಿ ಬಂದ್  ಗೆ ಸಾರ್ವಜನಿಕರ ಬೆಂಬಲ ಕೋರಿದರು. ನಗರದ ಹಲವು ಕಡೆಗಳಲ್ಲಿ ಬೀದಿ ಬದಿ ಸಭೆ ನಡೆಸಿ, ಮಾಲೀಕನ ದೌರ್ಜನ್ಯ, ಪೊಲೀಸರ ವರ್ಗಶಾಮೀಲು, ಸರ್ಕಾರದ ಮೌನ ಇವುಗಳ ಬಗ್ಗೆ ಜನತೆಗೆ ತಿಳಿಸಿ, ಬಂದ್ ಬೆಂಬಲಿಸುವಂತೆ ಜನತೆಯಲ್ಲಿ ಮನವಿ ಮಾಡಿದರು. ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಯಿತು. ಸುಮಾರು 30 ಕಡೆಗಳಲ್ಲಿ ಇಂತಹ ಸಭೆಗಳನ್ನು ನಡೆಸಲಾಯಿತು. ವಿರೋಧ ಪಕ್ಷಗಳು ಬೆಂಗಳೂರು ಬಂದ್  ಗೆ ಬೆಂಬಲ ವ್ಯಕ್ತಪಡಿಸಿದವು.

 ಆರ್ ಎಸ್ ಎಸ್ ವಿಫಲ ಯತ್ನ

ಕಾರ್ಮಿಕರ ಈ ಹೋರಾಟವನ್ನು ಸಹಿಸದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ಹೋರಾಟವನ್ನು ಮುರಿಯಲು ತನ್ನೆಲ್ಲ ಶಕ್ತಿ ಉಪಯೋಗಿಸಿತು. ಕಾರ್ಮಿಕರಲ್ಲಿ ಜಾತಿ ಭಾವನೆ ಹರಡಲು ಪ್ರಯತ್ನಿಸಿ ಅವರ ಐಕ್ಯತೆ ಹೊಡೆಯಲು ಪ್ರಯತ್ನಿಸಿತು. ಅದು ಫಲಿಸದಿದ್ದಾಗ ಮುಖಂಡರ ವಿರುದ್ಧ ಅಪಪ್ರಚಾರ ಮಾಡತೊಡಗಿತು. ಕಮ್ಯೂನಿಸ್ಟ್  ವಿರೋಧಿ ಪ್ರಚಾರದಲ್ಲಿ ತೊಡಗಿದರು. ಅಂದಿನ ಆರೆಸ್ಸೆಸ್ ಮುಖಂಡ ಎ.ಕೆ. ಸುಬ್ಬಯ್ಯ ಡಿಸೆಂಬರ್ 1 ರಂದು ಪತ್ರಿಕಾ ಹೇಳಿಕೆಯೊಂದನ್ನು ನೀಡಿ, “ಭಾರತದಲ್ಲಿ ಪಶ್ಚಿಮ ಜರ್ಮನಿಯ ಹಿತಾಸಕ್ತಿಗಳನ್ನು ಹಾಳು ಮಾಡುವುದೇ ಸಿಪಿಐ(ಎಂ)ನ ಗುರಿ. ಅದಕ್ಕಾಗಿ ಕಾರ್ಮಿಕರನ್ನು ಹೋರಾಟಕ್ಕಿಳಿಸಿದೆ” ಎಂದು ಆರೋಪ ಮಾಡಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ಹೈದರಾಬಾದ್ ಕಾರ್ಖಾನೆಯ ಹಿತ ರಕ್ಷಿಸಲು ಇಲ್ಲಿನ ಕಾರ್ಖಾನೆಯನ್ನು ಹಾಳು ಮಾಡಲು ಸಿಪಿಐ(ಎಂ) ಬಯಸಿದೆ” ಎಂದು ಆರೋಪಿಸಿದರು. ಬಂದ್  ಗೆ ಬೆಂಬಲ ನೀಡದಂತೆ ಜನತೆಗೆ ಕರೆ ನೀಡಿದರು. ಬಂದ್ ನಡೆಯುವ ದಿನದಂದು ಹಿಂಸಾಚಾರ ನಡೆಸುವಂತೆ ಆರೆಸ್ಸೆಸ್ ಕಾರ್ಯಕರ್ತರಿಗೆ ಬಹಿರಂಗ ಕರೆ ನೀಡುವ ಮೂಲಕ, ಆರೆಸ್ಸೆಸ್ ತನ್ನ ನಿಜವಾದ ಕಾರ್ಮಿಕ ವರ್ಗ ವಿರೋಧಿ ಮತ್ತು ಮಾಲೀಕ ವರ್ಗದ ಬೆಂಬಲಿಗ ಎಂಬ ಬಣ್ಣವನ್ನು ಬಯಲು ಮಾಡಿತು. ಆರೆಸ್ಸೆಸ್ ನ ಈ ಕರೆಗೆ ಜನಬೆಂಬಲ ಸಿಗಲಿಲ್ಲ. ಬದಲಾಗಿ ಕಾರ್ಮಿಕರ ಹೋರಾಟಕ್ಕೆ ಜನತೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು ಎಂಬುದಕ್ಕೆ ಡಿಸೆಂಬರ್ ಮೂರರ ಬೆಂಗಳೂರು ಬಂದ್ ಸಾಕ್ಷಿಯಾಗಿತ್ತು.

 ಹಲವರ ಬಂಧನ

ಬಂದ್ ಯಶಸ್ವಿಯಾಗದಂತೆ ಮಾಡಲು ಪೊಲೀಸರು ಅವಿರತ ಪ್ರಯತ್ನ ಮಾಡಿದರು. ಬಲವಂತದ ಬಂದ್ ಗೆ ಒತ್ತಾಯಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಂದ್ ವಿರೋಧಿಸಿ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಸಾರ್ವಜನಿಕರಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ನಗರದಾದ್ಯಂತ 144ನೇ ಸೆಕ್ಷನ್ ಜಾರಿಗೊಳಿಸಿ, ಮೂವರಿಗಿಂತ ಹೆಚ್ಚು ಜನ ಒಂದೆಡೆ ಗುಂಪು ಸೇರಿದಂತೆ ಎಚ್ಚರಿಸಿದರು. ಬಂದ್ ಗೆ ಮುನ್ನಾದಿನ ಮುನ್ನೆಚ್ಚರಿಕೆ ಕ್ರಮವಾಗಿ 1000 ಸಮಾಜಘಾತುಕ ಶಕ್ತಿಗಳನ್ನು ಬಂಧಿಸಿರುವುದಾಗಿ ಪ್ರಕಟಿಸಿದರು. ಆದರೆ ಸಮಾಜಘಾತಕರ ಹೆಸರಿನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ, ರಾಜಕೀಯ ಪಕ್ಷಗಳಿಗೆ ಸೇರಿದ ಅನೇಕ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಬಂಧಿತರಿಗೆ ಪೊಲೀಸ್ ಠಾಣೆಗಳಲ್ಲಿ ಚಿತ್ರಹಿಂಸೆ ನೀಡಿದರು. ಸಿಐಟಿಯು ಕಾರ್ಯಕರ್ತರಾದ ಕುಂಜಪ್ಪನ್, ಚಾಕೋ, ರಾಮಚಂದ್ರ, ನಾರಾಯಣಸ್ವಾಮಿ ಮುಂತಾದವರನ್ನು ಬಂಧಿಸಿ ಹಿಂಸೆ ನೀಡಿದ್ದಲ್ಲದೆ, ಅವರ ಕೈಗಳಿಗೆ ಬೇಡಿ ತೊಡಿಸಿ ಮೆರವಣಿಗೆ ಮಾಡಿದರು. ಇವರ ಮೇಲೆ ಸುಳ್ಳು ಆರೋಪ ಹೊರಿಸಿ ಕೋರ್ಟ್ ಗೆ ಹಾಜರು ಪಡಿಸಿದರು.

 ಯಶಸ್ವಿ ಬಂದ್

ಪೊಲೀಸರ ಮತ್ತು ಕಾರ್ಮಿಕ ವಿರೋಧಿಗಳ ಅಪಪ್ರಚಾರದ ನಡುವೆಯೂ ಬಂದ್ ಗೆ ನಿರೀಕ್ಷೆಗೂ ಮೀರಿ ಜನರ ಬೆಂಬಲ ವ್ಯಕ್ತವಾಯಿತು. ಬೆಂಗಳೂರಿನ ಇತಿಹಾಸದಲ್ಲಿಯೇ ಕಾರ್ಖಾನೆಯೊಂದರ ಕಾರ್ಮಿಕರ ಹೋರಾಟಕ್ಕೆ ಬೆಂಬಲವಾಗಿ ಇಡೀ ನಗರದ ಜನತೆ, ಇತರೆ ಕಾರ್ಮಿಕರು ಬಂದ್ ಗೆ ಬೆಂಬಲ ನೀಡಿದ್ದು ಇದೆ ಪ್ರಥಮವಾಗಿತ್ತು. ಅಂದು ಸಾರ್ವಜನಿಕ ಕ್ಷೇತ್ರಗಳಾದ ಎಚ್ಎಎಲ್, ಬಿಇಎಲ್, ಐಟಿಐ, ಬಿ ಹೆಚ್ ಇ ಎಲ್ ಇಂತಹ ಬೃಹತ್ ಕೈಗಾರಿಕೆಗಳ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರು. ಇದಲ್ಲದೆ ವಿಮಾ ಕ್ಷೇತ್ರವಾದ ಎಲ್ಐಸಿ ಮತ್ತು ಬ್ಯಾಂಕ್ ಗಳಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯಲಿಲ್ಲ. ಖಾಸಗಿ ಕ್ಷೇತ್ರದ ಕಾರ್ಖಾನೆಗಳು, ಪೀಣ್ಯ ಕೈಗಾರಿಕಾ ಪ್ರದೇಶದ 2000 ಸಣ್ಣ ಕೈಗಾರಿಕೆಗಳು ಸೇರಿದಂತೆ ನಗರದ ಬಹುತೇಕ ಕಾರ್ಖಾನೆಗಳು ಮುಚ್ಚಿದ್ದವು. ಹೋಟೆಲ್ ಗಳು, ಪೆಟ್ರೋಲ್ ಬಂಕ್ ಗಳು, ಅಂಗಡಿಗಳು, ಶಾಲಾ ಕಾಲೇಜುಗಳು ಮುಚ್ಚಿದ್ದವು. ನಗರ ಸಾರಿಗೆ ಮತ್ತು ರಾಜ್ಯ ರಸ್ತೆ ಸಾರಿಗೆಯ ಶೇಕಡ 30ರಷ್ಟು ಬಸ್ಸುಗಳು ಮಾತ್ರ ಸಂಚರಿಸಿದವು. ಅವುಗಳಲ್ಲಿ ಜನರ ಓಡಾಟ ವಿರುಳವಾಗಿತ್ತು.ಶೇ. 10ರಷ್ಟು ಆಟೋಗಳು ಸಂಚರಿಸಿದವು.  ಬಂದ್ ಬಾರಿ ಯಶಸ್ಸು ಕಂಡಿತು. ಬಂ‍ದ್ ನಡೆದ ದಿನ ಪ್ರತಿಭಟನೆ ನಡೆಸುತ್ತಿದ್ದ ಸಿಐಟಿಯು ಮತ್ತು ಸಿಪಿಐ(ಎಂ) ಕಾರ್ಯಕರ್ತರನ್ನು ಪೊಲೀಸರು ಹಲವೆಡೆ ಬಂಧಿಸಿದರು. ವಿವಿಧ ಸ್ಥಳಗಳಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ ಅವರನ್ನು ಚದರಿಸಿದರು. ಯಶವಂತಪುರ, ಪೀಣ್ಯ, ಮೈಸೂರು ರಸ್ತೆ, ವೈಟ್  ಫೀಲ್ಡ್ ಪ್ರದೇಶ ಮುಂತಾದೆಡೆ ಪೊಲೀಸರಿಂದ ಇಂತಹ ದಾಳಿಗಳು ನಡೆದವು. ಅನೇಕ ಸಿಐಟಿಯು ಕಾರ್ಯಕರ್ತರನ್ನು ಬಂಧಿಸಿ ಹಿಂಸಿಸಿದರು. ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಕೇಸು ದಾಖಲಿಸಿದರು. ಹಲವರನ್ನು ರೌಡಿ ಪಟ್ಟಿಗೆ ಸೇರಿಸಿದರು.

ನಿಷೇದಾಜ್ಞೆ ಉಲ್ಲಂಘನೆಯ ಆರೋಪದ ಮೇಲೆ ಸಂಘದ ಅಧ್ಯಕ್ಷರಾದ ಸೂರ್ಯನಾರಾಯಣ್ ರಾವ್ ಸೇರಿದಂತೆ, ಹಿಂದಿನ ಅಧ್ಯಕ್ಷರಾದ ಎಂ.ಎಸ್. ಕೃಷ್ಣನ್, ವಿರೋಧ ಪಕ್ಷಗಳ ಮುಖಂಡರಾದ ವಾಟಾಳ್ ನಾಗರಾಜ್, ಎಂ. ರಘುಪತಿ, ಸುಬ್ರಹ್ಮಣ್ಯ ಮೊದಲಾದವರನ್ನು ಬಂಧಿಸಿ ಅಂದೇ ಬಿಡುಗಡೆಗೊಳಿಸಿದರು.

 ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರಿನಲ್ಲಿ ಕಾರ್ಮಿಕರನ್ನು ಬೆಂಬಲಿಸಿ ಬಂದ್ ನಡೆಯುತ್ತಿದ್ದ ಸಮಯದಲ್ಲೇ ರಾಜ್ಯಾದ್ಯಂತ ಮೈಕೋ ಕಾರ್ಮಿಕರ ಬೆಂಬಲವಾಗಿ ಚಳುವಳಿ ನಡೆಯುತ್ತಿತ್ತು. ಸಿಐಟಿಯು ಸಂಘಟನೆ ಮತ್ತು ಸಿಪಿಐ(ಎಂ) ಪಕ್ಷದ ರಾಜ್ಯ ಘಟಕಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಈ ಚಳುವಳಿಗಳು ನಡೆಯುತ್ತಿತ್ತು.

 ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ 500ರಷ್ಟು ರೈತ, ಕಾರ್ಮಿಕರು ಮೆರವಣಿಗೆ ನಡೆಸಿದರು. ಮೈಕೊ ಕಾರ್ಖಾನೆಯ ಮಾಲೀಕರ ಧೋರಣೆ ಮತ್ತು ಪೊಲೀಸರ ದಾಳಿ ದಬ್ಬಾಳಿಕೆಗಳನ್ನು ಖಂಡಿಸಿದರು. ಪ್ರತಿಭಟನಾಕಾರರು ಸಂಜೆ 5.30ರ ವರೆಗೆ ಧರಣಿ ಕುಳಿತರು. ನಂತರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಇದರ ನೇತೃತ್ವವನ್ನು ಕಾಂತರಾಜ್, ವಿ. ರಾಮಯ್ಯ ವಹಿಸಿದ್ದರು.

ಕುಣಿಗಲ್: 500 ಜನ ವಸತಿಹೀನರು ಕುಣಿಗಲ್ ನಿಂದ ತುಮಕೂರಿಗೆ ಕಾಲ್ನಡಿಗೆಯಲ್ಲಿ ಜಾತಾ ನಡೆಸಿದರು. ತುಮಕೂರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಮೈಕೋ ಕಾರ್ಮಿಕರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿ, ಸರ್ಕಾರ ಮಧ್ಯಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು. ನಿವೇಶನ ರೈತರಿಗೆ ನಿವೇಶನ ಒದಗಿಸುವಂತೆ ತಮ್ಮದೇ ಬೇಡಿಕೆಗಳನ್ನು ಇದೇ ಸಂದರ್ಭದಲ್ಲಿ ಮಂಡಿಸಿದರು. ಜಿಲ್ಲಾ ಮುಖಂಡರಾದ ದಸ್ತಗಿರ್ ಇದರ ನೇತೃತ್ವ ವಹಿಸಿದ್ದರು.

ಶಿಡ್ಲಘಟ್ಟ: ಶಿಡ್ಲಘಟ್ಟದಲ್ಲಿ ನೂರು ಜನರು ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದರು ಸತ್ಯಾಗ್ರಹ ನಡೆಸಿದರು. ಬೆಳಿಗ್ಗೆ ಪ್ರಾರಂಭವಾದ ಧರಣಿ ಸತ್ಯಾಗ್ರಹ ಸಂಜೆ ಐದು ಮೂವತ್ತರವರೆಗೆ ನಡೆಯಿತು. ಒಂದು ಸಾವಿರ ಜನರಿಂದ ಸಹಿ ಸಂಗ್ರಹಿಸಿ ತಹಸಿಲ್ದಾರರಿಗೆ ಅರ್ಪಿಸಲಾಯಿತು. ಕೋಲಾರ ಜಿಲ್ಲಾ ಜನರಲ್  ವರ್ಕರ್ಸ್ ಯೂನಿಯನ್  ಅಧ್ಯಕ್ಷರಾದ ಎಂ.ಎನ್. ವೆಂಕಟರಮಣಪ್ಪ ಪ್ರತಿಭಟನಾಕಾರರ ನೇತೃತ್ವ ವಹಿಸಿದ್ದರು. ಮೈಕೋ ಕಾರ್ಮಿಕರ ಹೋರಾಟ ಬೆಂಬಲಿಸಿ ಪೋಸ್ಟರ್ ಗಳನ್ನು ಮುದ್ರಿಸಿ ಹಲವು ಕಡೆ ಅಂಟಿಸಲಾಗಿತ್ತು. ಸಿನಿಮಾ ಮಂದಿರಗಳಲ್ಲಿ ಜಾಹೀರಾತು ಪ್ರದರ್ಶಿಸುವ ಏರ್ಪಾಡು ಮಾಡಲಾಗಿತ್ತು.

ಚಿಕ್ಕಮಗಳೂರು: ಇಲ್ಲಿನ ಕರ್ನಾಟಕ ಪ್ಲಾಂಟೇಶನ್ ಕಾರ್ಮಿಕರ ಸಂಘ ಸಭೆ ನಡೆಸಿ ಮೈಕೋ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಭೆಯು ಗೂಂಡಾದಾಳಿಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿತು.

 ಹೋರಾಟಕ್ಕೆ ಮಣಿದ ಮಾಲೀಕ

ಕಾರ್ಮಿಕರ ಪ್ರಬಲ ಹೋರಾಟ, ಅದಕ್ಕೆ ವಿರೋಧ ಪಕ್ಷಗಳ ಹಾಗೂ ವಿವಿಧ ಸಂಘಟನೆಗಳ ಮತ್ತು ಜನತೆಯ ವ್ಯಾಪಕ ಬೆಂಬಲ, ಇವುಗಳಿಂದಾಗಿ ಆಡಳಿತ ಮಂಡಳಿ ಕೊನೆಗೂ ಮಣೆಯಲೇಬೇಕಾದ ಪರಿಸ್ಥಿತಿ ಬಂತು. ಬಂದ್ ಯಶಸ್ವಿಯ ನಂತರ ಸಂಘದ ಮುಖಂಡರ, ಅದರಲ್ಲೂ ಸೂರಿಯವರ ಜೊತೆ ಮಾತುಕತೆಗೆ ಬರುವುದಿಲ್ಲವೆಂದು ಹೇಳಿದ ಆಡಳಿತ ಮಂಡಳಿ, ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ಜೊತೆ ಮಾತನಾಡುವುದಾಗಿ ತಿಳಿಸಿತು. ಅದರಂತೆ ಸಮನ್ವಯ ಸಮಿತಿಯ ಜೊತೆ ಮಾತುಕತೆ ನಡೆಸಿತು. ಆದರೆ, ಇದರಿಂದ ಯಾವುದೇ ಒಪ್ಪಂದಕ್ಕೆ ಬರಲಾಗಲಿಲ್ಲ. ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲಿಲ್ಲ ಬದಲಾಗಿ ಮುಷ್ಕರವನ್ನು ನಿಷೇಧಿಸಿತು. ವಿವಾದವನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು. ಕಾರ್ಮಿಕರು ಇದ್ಯಾವುದಕ್ಕೂ ಮಣೆಯದೆ ಮುಷ್ಕರ ಮುಂದುವರಿಸಿದರು. ಆಡಳಿತ ಮಂಡಳಿ ಕೊನೆಗೂ ಮಾತುಕತೆ ನಡೆಸಲು ಮುಂದೆ ಬಂದಿತು. ಸೂರ್ಯನಾರಾಯಣರಾವ್ ಜೊತೆಗೆ ಮಾತುಕತೆ ನಡೆಸಿತು.

ಸರ್ಕಾರದ ಮಧ್ಯಪ್ರವೇಶದಿಂದಾಗಿ ಡಿಸೆಂಬರ್ 29ರಂದು ಒಂದು ಒಪ್ಪಂದಕ್ಕೆ ಬರಲಾಯಿತು. ಒಪ್ಪಂದದಂತೆ ಅಮಾನತುಗೊಂಡವರ ಪೈಕಿ 12 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು, ಉಳಿದ 14 ಕಾರ್ಮಿಕರಿಗೆ ಯಾವ ಸ್ಟ್ಯಾಂಡಿಂಗ್ ಆರ್ಡರ್ ಇಲ್ಲದಿದ್ದರೂ ಶೇಕಡ 90ರಷ್ಟು ವೇತನ ನೀಡುವುದು, ಇವರಿಗೆ ಸಂಬಂಧಿಸಿದ ಸಮಸ್ಯೆಯನ್ನು ನಾಲ್ಕು ತಿಂಗಳಲ್ಲಿ ಇತ್ಯರ್ಥಪಡಿಸಲು ಆಡಳಿತ ಮಂಡಳಿ ಒಪ್ಪಿತು. ಅಗತ್ಯ ಸೇವಾ ವಿಭಾಗದಲ್ಲಿ ವಜಾ ಆಗಿದ್ದ 15 ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವುದು, ಮುಷ್ಕರದ ಸಮಯದಲ್ಲಿ ಆದ ಹಾನಿಗೆ ಪ್ರತಿ ಕಾರ್ಮಿಕರಿಗೆ ತಲಾ 300 ರೂ. ಪರಿಹಾರ ನೀಡುವುದಕ್ಕೆ ಒಪ್ಪಿಗೆ ನೀಡಿತು. ಒಬ್ಬ ಕಾರ್ಮಿಕ ಎರಡು ಯಂತ್ರಗಳನ್ನು ನಡೆಸುವುದು, ವೇತನ ಪರಿಷ್ಕರಣೆ ಮುಂತಾದ ಬೇಡಿಕೆಗಳ ಬಗ್ಗೆ ಕಾರ್ಮಿಕರು ಕೆಲಸಕ್ಕೆ ಹಾಜರಾದ ನಂತರ ಮಾತುಕತೆ ಮೂಲಕ ಬಗೆಹರಿಸುವುದಾಗಿ ಭರವಸೆ ನೀಡಿತು.

1979 ಡಿಸೆಂಬರ್ 30ರಂದು ಕಾರ್ಮಿಕರ ಸಭೆ ಕರೆದು ಮಾತುಕತೆಯ ವಿವರ ತಿಳಿಸಲಾಯಿತು. ಕಾರ್ಮಿಕರ ಒಪ್ಪಿಗೆ ಮೇರೆಗೆ ಡಿಸೆಂಬರ್ 30ರಂದು ಮುಷ್ಕರ ಹಿಂತೆಗೆದುಕೊಳ್ಳಲಾಯಿತು. 85 ದಿನಗಳ ದೀರ್ಘ ಹಾಗೂ ವೀರೋಚಿತ ಹೋರಾಟಕ್ಕೆ ಕಾರ್ಮಿಕರಿಗೆ ಕೊನೆಗೂ ಜಯ ಸಿಕ್ಕಿತು.

Is this your new site? Log in to activate admin features and dismiss this message
ಲಾಗಿನ್