ವಾರದಲ್ಲಿ 70 ಗಂಟೆಗಳ ಕೆಲಸ: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ

‘ವಾರಕ್ಕೆ 70 ಗಂಟೆ ಕೆಲಸ’ದ ವಿಷಯ ಚರ್ಚೆ ಮತ್ತೆ ಬಂದಿದೆ.  ಈ ಬಾರಿ ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಚರ್ಚೆಗೆ ನಾಂದಿ ಆಡಿದ್ದಾರೆ. ಮುಂದುವರಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಕಾರ್ಮಿಕರು ಮತ್ತು ನೌಕರರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಉದ್ಯಮಿಗಳು ಗಣನೆಗೆ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. 70 ಗಂಟೆಗಳ ಕೆಲಸವು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನರವಿಜ್ಞಾನಿಗಳು ಮತ್ತು ಕಾರ್ಮಿಕ ಸಂಘಟನೆಗಳ ನಾಯಕರು ಎಚ್ಚರಿಸಿದ್ದಾರೆ. ಇದು ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ. 

ಒಂದೆಡೆ ಕೋಟ್ಯಾಂತರ ಯುವಜನರು ಉದ್ಯೋಗ ಸಿಗದೆ ಅಲೆದಾಡುತ್ತಿದ್ದಾರೆ. ಮತ್ತೊಂದೆಡೆ, ಉದ್ಯಮಿಗಳು ತಮ್ಮ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಯುವಕರಿಂದಲೇ ಹೆಚ್ಚಿನ ಸಮಯ ದುಡಿಸಿಕೊಳ್ಳಲು ಬಯಸುತ್ತಾರೆ. ಆ ಮೂಲಕ, ನಿರುದ್ಯೋಗ ಸಮಸ್ಯೆ ಮತ್ತಷ್ಟು ಹೆಚ್ಚಲು ಕಾರಣರಾಗುತ್ತಿದ್ದಾರೆ. ಜೊತೆಗೆ, ತಮ್ಮ ಉದ್ಯೋಗಿಗಳ ‘ಶ್ರಮಶಕ್ತಿ’ಯನ್ನು ಹಿಂಡಿ  ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತೆ ಮಾಡಲು ಹೊರಟಿದ್ದಾರೆ.

 ‘ವಾರಕ್ಕೆ 70 ಗಂಟೆ ಕೆಲಸ’ದ ವಿಷಯ ಚರ್ಚೆ ಮತ್ತೆ ಬಂದಿದೆ.  ಈ ಬಾರಿ ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಚರ್ಚೆಗೆ ನಾಂದಿ ಆಡಿದ್ದಾರೆ. ಮುಂದುವರಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಈ ಹಿಂದೆ ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು ಮತ್ತು ಭವಿಶ್ ಅಗರ್ವಾಲ್ ಅವರನ್ನು ಸಮರ್ಥಿಸಿಕೊಂಡಿದ್ದರು. ಭವಿಶ್ ಅಗರ್ವಾಲ್ ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಗುರಿಯಾಗಿದೆ.

ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪನಿಗಳ ಉದ್ಯೋಗಿಗಳು ಸಂಘಟಿತರಾಗಿ, ಕರ್ನಾಟಕ ಸರ್ಕಾರದ ನಿಲುವಿನ ವಿರುದ್ದ ದ್ವನಿಯೆತ್ತಿ ಹೋರಾಟಕ್ಕೆ ಇಳಿದಿದ್ದಾರೆ. ಸರ್ಕಾರದ ಈ ನಿರ್ಧಾರ ಐಟಿ ಉದ್ಯೋಗಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉದ್ಯಮಿಗಳ ಲಾಭಕ್ಕಾಗಿ ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ‘ಕರ್ನಾಟಕ ರಾಜ್ಯ ಐಟಿ/ಐಟಿಇಎಸ್  ಎಂಪ್ಲಾಯಿಸ್  ಯೂನಿಯನ್ (KITU) ದೊಡ್ಡ ಮಟ್ಟದ ಹೋರಾಟ ನಡೆಸಲು ಮುಂದಾಗಿದೆ. ಸರ್ಕಾರದ ಈ ಸಂಬಂಧ ಐಟಿ ವಲಯದ ನೌಕರರ ನಡುವೆ ವ್ಯಾಪಕ ಪ್ರಚಾರ ನಡೆಸತೊಡಗಿದ್ದಾರೆ.

ಇಷ್ಟಾದರೂ, “ರಾಷ್ಟ್ರೀಯ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಇಂತಹ ಹೆಚ್ಚಿನ ಅವಧಿಯ ಕೆಲಸದ ಸಮಯಗಳು ಅತ್ಯಗತ್ಯ. ಇದರಿಂದ ನಾವು ವಿಶ್ವದ ನಂಬರ್ 1 ದೇಶವನ್ನು ಮತ್ತು ಅತಿದೊಡ್ಡ ಆರ್ಥಿಕತೆಯನ್ನು ನಿರ್ಮಿಸಬಹುದು” ಎಂದು ಅಗರ್ವಾಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಕೆಲಸ-ಜೀವನದ ಸಮತೋಲನದ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ ಏಕೆಂದರೆ ನೀವು ನಿಮ್ಮ ಕೆಲಸವನ್ನು ಆನಂದಿಸುತ್ತಿದ್ದರೆ, ನೀವು ಜೀವನದಲ್ಲಿ ಸಂತೋಷವನ್ನು ಕಾಣುತ್ತೀರಿ ಮತ್ತು ಕೆಲಸದಲ್ಲಿಯೂ ಸಹ ಸಂತೋಷವನ್ನು ಕಾಣುತ್ತೀರಿ” ಎನ್ನುವ ಮೂಲಕ ಅಗರ್ವಾಲ್ ಅವರು ಕೆಲಸ-ಜೀವನದ ಸಮತೋಲನದ ಪರಿಕಲ್ಪನೆಯನ್ನು ತಳ್ಳಿಹಾಕುತ್ತಾರೆ.   

ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳ ಅಭಿಪ್ರಾಯ..

ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಓಲಾ ಭವಿಶ್ ಅಗರ್ವಾಲ್ ಅವರನ್ನು ಹೊರತುಪಡಿಸಿ, ಪ್ರಪಂಚದಾದ್ಯಂತದ ವ್ಯಾಪಾರ ಮತ್ತು ಕೈಗಾರಿಕೋದ್ಯಮಿಗಳು ಹೆಚ್ಚಿನ ಕೆಲಸದ ಸಮಯಕ್ಕಾಗಿ ಬೆಂಬಲಿಸುತ್ತಿದ್ದಾರೆ. ಚೆನ್ನಾಗಿ ತಿನ್ನಿ, ಬಲಿಷ್ಟವಾಗಿರಿ. ಅಲ್ಲದೆ, ದಿನಕ್ಕೆ 18 ಗಂಟೆ ಕೆಲಸ ಮಾಡಿ’ ಎಂದು ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಶಾಂತನು ದೇಶಪಾಂಡೆ ಈ ಹಿಂದೆ ಲಿಂಕ್‌ ಡಿನ್‌ ನಲ್ಲಿ ಪೋಸ್ಟ್ ಮಾಡಿದ್ದು ಚರ್ಚೆಯ ವಿಷಯವಾಗಿತ್ತು. ಅಲಿಬಾಬಾ ಸಂಸ್ಥಾಪಕ ಮತ್ತು ಚೀನಾದ ಪ್ರಸಿದ್ಧ ಉದ್ಯಮಿ ಜಾಕ್ ಮಾ ಅವರು 996 ಎಂಬ ನಿಯಮವನ್ನು ಪ್ರಸ್ತಾಪಿಸಿದರು. ಅದರ ಪ್ರಕಾರ… ನೌಕರರು ವಾರದ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ 6 ದಿನ ಕೆಲಸ ಮಾಡಬೇಕು. ಟ್ವಿಟರ್ ಅನ್ನು ಖರೀದಿಸುವ ಸಮಯದಲ್ಲಿ, ಎಲೋನ್ ಮಸ್ಕ್ ಅವರು ಕಂಪನಿ ಉಳಿಯಲು ವಾರಕ್ಕೆ 100 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಇಮೇಲ್ ಮಾಡಿದ್ದರು ಎಂಬುದರ ಕುರಿತು ಚರ್ಚೆ ನಡೆದಿತ್ತು.

ಸುದೀರ್ಘ ಕೆಲಸದ ಸಮಯದಿಂದ ಆರೋಗ್ಯ ಸಮಸ್ಯೆಗಳು

ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂಬ ಇವರ ಹೇಳಿಕೆಯಲ್ಲಿ ಅಭಿವೃದ್ಧಿ ಮತ್ತು ವ್ಯಾಪಾರದ ಲಾಭ ಮಾತ್ರ ಕಂಡುಬರುತ್ತಿದ್ದು, ಕಾರ್ಮಿಕರು ಮತ್ತು ನೌಕರರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. 70 ಗಂಟೆಗಳ ಕೆಲಸವು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನರವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೈದರಾಬಾದಿನ ಅಪೋಲೋ ಆಸ್ಪತ್ರೆಗಳ ಹಿರಿಯ ನರವಿಜ್ಞಾನಿ ಡಾ. ಸುಧೀರ್ ಕುಮಾರ್ ಅವರು ದೀರ್ಘಾವಧಿಯ ಕೆಲಸದ ಅವಧಿಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಡಾ. ಕುಮಾರ್ ಅವರು, ದೀರ್ಘ ಕೆಲಸದ ಅವಧಿ ವಾರದಲ್ಲಿ 55 ಗಂಟೆಗಳನ್ನು ಮೀರಿದರೆ, ಪಾರ್ಶ್ವವಾಯು, ರಕ್ತಕೊರತೆಯ ಹೃದ್ರೋಗ ಮತ್ತು ಅಕಾಲಿಕ ಮರಣದ ಅಪಾಯಗಳನ್ನು ಹೆಚ್ಚಿಸುವ ಅಧ್ಯಯನಗಳನ್ನು ಹೈಲೈಟ್ ಮಾಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಅಂಕಿಅಂಶಗಳ ಪ್ರಕಾರ, ವಾರಕ್ಕೆ 55 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದರಿಂದ ಪ್ರತಿ ವರ್ಷ ಜಗತ್ತಿನಲ್ಲಿ 8,00,000 ಜನರು ಸಾವನ್ನಪ್ಪುತ್ತಾರೆ. ಅವರಲ್ಲಿ ಮುಕ್ಕಾಲು ಪಾಲು ಮಂದಿ ಮಧ್ಯವಯಸ್ಕ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.

ಗಂಭೀರ ಆರೋಗ್ಯ ಸಮಸ್ಯೆಗಳು

ಆರು ದಿನಗಳ ಕೆಲಸದ ವಾರದಲ್ಲಿ, ವಾರಕ್ಕೆ 70 ಗಂಟೆಗಳ ಕೆಲಸ ಎಂದರೆ ದಿನಕ್ಕೆ ಸರಿಸುಮಾರು 12 ಗಂಟೆಗಳ ಕೆಲಸ. ಪ್ರಸ್ತುತ, ನಮ್ಮ ಸರ್ಕಾರಿ ಕಚೇರಿಗಳು 6 ದಿನಗಳು 8 ಗಂಟೆಗಳ ಕೆಲಸದೊಂದಿಗೆ, ವಾರದಲ್ಲಿ 48 ಗಂಟೆಗಳ ಕಾಲ ಕೆಲಸ ಮಾಡುತ್ತಿವೆ. ಅದೇ ಖಾಸಗಿ ಕಚೇರಿಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸದೊಂದಿಗೆ ವಾರಕ್ಕೆ 60 ಗಂಟೆ ಕೆಲಸ ಮಾಡುವ ಮಾತು ಕೇಳಿಬರುತ್ತಿದೆ. ವಾರದಲ್ಲಿ 55 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವುದರಿಂದ ಹೃದಯಾಘಾತದ ಅಪಾಯವು ಶೇಕಡಾ 35 ರಷ್ಟು ಹೆಚ್ಚಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. 35-40 ಗಂಟೆಗಳ ಕಾಲ ಕೆಲಸ ಮಾಡುವವರಿಗೆ ಹೋಲಿಸಿದರೆ, ಹೃದ್ರೋಗದಿಂದ ಸಾವಿನ ಅಪಾಯವು ಶೇಕಡಾ 17 ರಷ್ಟು ಹೆಚ್ಚಾಗಿದೆ. ದೀರ್ಘಾವಧಿಯ ಕೆಲಸದ ಸಮಯವು ಸ್ಥೂಲಕಾಯತೆ, ಪ್ರಿಡಯಾಬಿಟಿಸ್ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದೂ  ಹೇಳಲಾಗುತ್ತದೆ. ವಾರಕ್ಕೆ 69 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವವರು ವಾರಕ್ಕೆ 40 ಗಂಟೆಗಳ ಕಾಲ ಕೆಲಸ ಮಾಡುವವರಿಗಿಂತ ಹೆಚ್ಚು ತೀವ್ರವಾದ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ. ಅದೂ ಅಲ್ಲದೆ ಐಟಿ, ಟೇಬಲ್ ವರ್ಕ್ ನಂತಹ ಕೆಲಸ ಮಾಡುವವರು ಹತ್ತು ಗಂಟೆಗೂ ಹೆಚ್ಚು ಕಾಲ ಕುಳಿತುಕೊಂಡರೆ ಮೆದುಳಿಗೆ ರಕ್ತಸಂಚಾರ ಕಡಿಮೆಯಾಗುವುದು, ಏಕಾಗ್ರತೆ ಕಡಿಮೆಯಾಗುವುದು, ಕೆಲಸಗಳತ್ತ ಗಮನ ಹರಿಸಲಾಗದಿರುವುದು, ಆತಂಕ ಮತ್ತು ಹೆಚ್ಚಿದ ಒತ್ತಡದ ಮಟ್ಟಗಳು, ಖಿನ್ನತೆಗೆ ಒಳಗಾಗುವುದು ಕಂಡು ಬಂದಿದೆ.

ಮಹಿಳೆಯರ ಸ್ಥಿತಿ ಇನ್ನೂ ಕೆಟ್ಟದಾಗಿದೆ

ಪುರುಷರಿಗೆ ಹೋಲಿಸಿದರೆ ಮಹಿಳೆಯರು ತಮ್ಮ ಉದ್ಯೋಗದಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಕಷ್ಟ. ಮನೆಕೆಲಸದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮಯವನ್ನು ಕಳೆಯುತ್ತಾರೆ. ಪರಿಣಾಮವಾಗಿ, ಪುರುಷರಿಗೆ ಹೋಲಿಸಿದರೆ ಅವರ ವಿಶ್ರಾಂತಿ ಸಮಯವು ಕಡಿಮೆಯಾಗಿದೆ. ಇದರಿಂದ ಮಹಿಳಾ ಕಾರ್ಮಿಕರ ಮೇಲೆ ಸುದೀರ್ಘ ದುಡಿಮೆಯಿಂದ ಒತ್ತಡ ಹೆಚ್ಚಾಗುತ್ತಿದೆ.

ಇನ್ನೊಂದೆಡೆ ನಿರುದ್ಯೋಗ ಶೇಕಡಾವಾರು ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತದಲ್ಲಿ ಶೇಕಡಾ ಹತ್ತರಷ್ಟು ಆತ್ಮಹತ್ಯೆಗಳು ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ಸಂಭವಿಸುತ್ತವೆ. ಇದೆಲ್ಲದರ ನಡುವೆಯೂ ವ್ಯಾಪಾರ, ಕೈಗಾರಿಕೋದ್ಯಮಿಗಳು ಕೆಲಸದ ಸಮಯವನ್ನು ಹೆಚ್ಚಿಸಬೇಕು ಎಂದು ಹೇಳುತ್ತಿದ್ದಾರೆ. ಇದು ತೀವ್ರ ಖಂಡನೀಯವಾಗಿದೆ.

Is this your new site? Log in to activate admin features and dismiss this message
ಲಾಗಿನ್