ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಈಗ ಪ್ರತ್ಯಕ್ಷವಾಗಿಯೇ ಅಲ್ಪಸಂಖ್ಯಾತರ ಮೇಳೆ ದಾಳಿ ಪ್ರಾರಂಭವಾಗಿದೆ. ಧರ್ಮದ ಹೆಸರಿನಲ್ಲಿ ವಿಭಜಿಸುವ ಕೆಲಸವೂ ಬಹಿರಂಗವಾಗಿಯೇ ಪ್ರಾರಂಭವಾಗಿದೆ. ನಿನ್ನ ಹೆಸರೇನು? ಅದನ್ನು ಬೋರ್ಡ್ ನಲ್ಲಿ ಬರೆದು ಕುತ್ತಿಗೆಗೆ ನೇತುಹಾಕಿಕೊ ಎನ್ನುತ್ತಾರೆ ಅವರು. ಅಂದಿನ ಹಿಟ್ಲರ್, ಮುಸೊಲಿನಿಯ ಹಾದಿಯನ್ನು ಅನುಸರಿಸುತ್ತ ಇಂದು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ನಿರಂಕುಶಾಧಿಕಾರಿಯಾಗಿ ಜನರ ಒಗ್ಗಟ್ಟನ್ನು ತುಂಡರಿಸುತ್ತಿದ್ದಾರೆ. ಮನುಷ್ಯರನ್ನು ಧರ್ಮದ ಆದಾರದಲ್ಲಿ ವಿಭಜಿಸಿ ಗಲಭೆ ಎಬ್ಬಿಸಲು ಪ್ರಜಾಪ್ರಭುತ್ವ ದೇಶದಲ್ಲಿ ನಿಸ್ಸಂಶಯವಾಗಿ ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಇದು ಭಾರತದ ಪ್ರಜಾಭುತ್ವ ಮತ್ತು ಜ್ಯಾತ್ಯಾತೀತ ವ್ಯವಸ್ಥೆಗೆ ಗಂಭೀರ ಅಪಾಯದ ಸೂಚನೆಯಾಗಿದೆ.
ಈ ದೇಶ ‘ನಿಮ್ಮದಲ್ಲ ನಮ್ಮದು’ ಎಂದು ಹೇಳಿದರೆ ವಿವಿಧತೆಯಲ್ಲಿಯೂ ಏಕತೆಯಿಂದ ಒಗ್ಗೂಡುವ ಜನರು ಎಲ್ಲಿಗೆ ಹೋಗಬೇಕು? ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಿರ್ಬಂಧಗಳ ಪಂಜರದಲ್ಲಿ ಜನರನ್ನು ಬಂಧಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಜುಲೈ 22 ರಂದು ಆರಂಭವಾದ ಕನ್ವರ್ ಯಾತ್ರೆ ಆಗಸ್ಟ್ 4 ರಂದು ಮುಗಿಯುತ್ತದೆ. ಈ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಇರುವ ತಿಂಡಿ ತಿನಿಸುಗಳನ್ನು ಮಾರುವ ಅಂಗಡಿಗಳು, ಟೀ ಅಂಗಡಿಗಳು, ಹೋಟೆಲುಗಳ ಮುಂದೆ ಮತ್ತು ತಳ್ಳುಗಾಡಿಗಳಲ್ಲಿ ಅದರ ಮಾಲೀಕರ ಹೆಸರು, ಅಲ್ಲಿ ಕೆಲಸ ಮಾಡುವವರ ಹೆಸರು ಮತ್ತು ಅವರ ವೈಯಕ್ತಿಕ ವಿವರಗಳನ್ನು ಒಳಗೊಂಡ ಫಲಕಗಳನ್ನು ಹಾಕಲು ಮುಜಾಫರ್ ನಗರ ಆಡಳಿತ ಆದೇಶಿಸಿದೆ. ಇದಾದ ನಂತರ ಈ ಆದೇಶವನ್ನು ಯೋಗಿ ಸರ್ಕಾರ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ಸೂಚಿಸುತ್ತದೆ.
ಉತ್ತರ ಪ್ರದೇಶದ ಇದೇ ಮಾರ್ಗವನ್ನು ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸರ್ಕಾರಗಳು ಅನುಸರಿಸಿದವು. ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿಯೂ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್ ಸಂಖ್ಯೆಯನ್ನು ಪ್ರಧರ್ಶಿಸಬೇಕೆಂದು ಅಲ್ಲಿನ ಮಹಾನಗರ ಪಾಲಿಕೆ ಆದೇಶಿಸಿತು. ಈ ಆದೇಶ ಉಲ್ಲಂಘಿಸುವವರು ಮೊದಲ ಬಾರಿಗೆ 2,000 ರೂಪಾಯಿ ದಂಡ ಪಾವತಿಸಬೇಕು. ಎರಡನೇ ಬಾರಿಯೂ ಆದೇಶ ಉಲ್ಲಂಘಿಸಿದರೆ 5,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿಯ ಮೇಯರ್ ಆ ಆದೇಶದಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ಜುಲೈ 22ರಂದು ಸುಪ್ರೀಂ ಕೋರ್ಟ್ ಈ ರಾಜ್ಯಗಳ ಆಡಳಿತವು ನೀಡಿರುವ ಇಂತಹ ಆದೇಶಕ್ಕೆ ತಡೆ ನೀಡಿದೆ. ನ್ಯಾಯಾಲಯದ ಈ ತೀರ್ಪು ಸ್ವಲ್ಪ ಮಟ್ಟಿಗೆ ಆಶಾದಾಯಕವಾಗಿದೆ.
ಜಾತಿ ಮತ್ತು ಧರ್ಮವನ್ನು ತಿಳಿದುಕೊಳ್ಳುವ ಉದ್ದೇಶವೇನು?
ಫಲಕಗಳಲ್ಲಿ ಪ್ರಧರ್ಶನಗೊಂಡ ಆ ಹೆಸರುಗಳ ಆಧಾರದ ಮೇಲೆ ಅವರ ಜಾತಿ ಮತ್ತು ಧರ್ಮವನ್ನು ತಿಳಿದುಕೊಳ್ಳುವ ಉದ್ದೇಶವು ಈ ಆದೇಶಗಳ ಹಿಂದೆ ಅಡಗಿದೆ. ಈ ನಡೆಯನ್ನು ಏನೆನ್ನಬೇಕು? ಇದು ಏನನ್ನು ಸೂಚಿಸುತ್ತದೆ? ಹಿಂದುತ್ವವಾದಿಗಳ ಮೂಲ ಉದ್ದೇಶವನ್ನು ಮರೆಮಾಚಿ ಮಾರುವೇಷದಲ್ಲಿ ನೀಡಿದ ಆದೇಶಗಳಿವು. ನಾಮಫಲಕಗಳನ್ನು ಪ್ರದರ್ಶಿಸಿಸದೆ ಇರುವವರಿಗೆ ದಂಡ ವಿಧಿಸುತ್ತಾರಂತೆ. ಯಾರು ನಮಗೆ ಊಟ ಬಡಿಸುತ್ತಾರೆ ಎಂಬ ಕಾರಣದಿಂದ ನಾವು ಯಾವುದೇ ಹೊಟೆಲ್ ಗಳಿಗೆ ಹೋಗುವುದಿಲ್ಲ. ನಾವು ತಿನ್ನಲು ಬಯಸುವ ತಿಂಡಿ ತಿನಿಸುಗಳು ಎಲ್ಲಿ ಸಿಗುತ್ತವೆ ಎಂಬುದನ್ನು ನೋಡಿ ಅಂತಹ ಹೋಟೆಲುಗಳಿಗೆ ಹೋಗುತ್ತೇವೆ. ಗುರುತಿನ ಆಧಾರದ ಮೇಲೆ ಜನರನ್ನು ಪರಸ್ಪರ ದೂರವಿಡುವ ಉದ್ದೇಶವೇ ಈ ಆದೇಶಗಳಲ್ಲಿದೆ ಎಂದು ತೋರುತ್ತದೆ. ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅದು ಅಲ್ಲಿಗೇ ನಿಲ್ಲಲಿಲ್ಲ. ಆ ಅಂಗಡಿಗಳಲ್ಲಿದ್ದ ಮುಸ್ಲಿಂ ನೌಕರರನ್ನು ಕೆಲಸದಿಂದ ತೆಗೆದು ಹಾಕುವಂತೆ ಆದೇಶಿಸಿದ ಉದಾಹರಣೆಗಳಿವೆ. ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಕಾರಣದಿಂದಾಗಿ ಆ ಭಾಗದ ಮುಸ್ಲಿಮರು ಕೆಲಸ ಕಳೆದುಕೊಳ್ಳುವಂತಾಗುತ್ತದೆ.
ಮಿತ್ರ ಪಕ್ಷಗಳ ವಿರೋಧಕ್ಕೂ ಬೆಲೆಯಿಲ್ಲ
ಅನ್ಯ ಧರ್ಮೀಯರ ವ್ಯವಹಾರಗಳಿಗೆ ಧಕ್ಕೆ ತರುವ ಕೇಸರಿ ಪಕ್ಷದ ಉದ್ದೇಶ ವಿಕೃತ ರೀತಿಯಲ್ಲಿ ಹೊರ ಬರುತ್ತಿದೆ. ಯೋಗಿ ಸರ್ಕಾರದ ಕ್ರಮವನ್ನು ಸ್ವಪಕ್ಷ, ವಿರೋಧ ಪಕ್ಷಗಳೆಂಬ ಭೇದವಿಲ್ಲದೆ ಬಹಳಷ್ಟು ಪಕ್ಷಗಳು ಟೀಕಿಸಿವೆ. ಸಿಪಿಐ(ಎಂ) ಸೇರಿದಂತೆ ಎಡಪಕ್ಷಗಳು ಬಿಜೆಪಿ ನೇತೃತ್ವದ ಈ ರಾಜ್ಯ ಸರ್ಕಾರಗಳ ಇಂತಹ ನಡೆಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿವೆ. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA)ದಲ್ಲಿ ತನ್ನದೇ ಆದ ಮಿತ್ರಪಕ್ಷಗಳಿಂದ ಟೀಕೆಗಳು ಎದುರಾದವು. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು), ಚಿರಾಗ್ ಪಾಸ್ವಾನ್ ನೇತೃತ್ವದ ಆರ್‌ಎಲ್ ಡಿ ಮತ್ತು ಉತ್ತರ ಪ್ರದೇಶದ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಸೇರಿದಂತೆ ಮಿತ್ರಪಕ್ಷಗಳು ಕೂಡ ಈ ತಾರತಮ್ಯದ ಆದೇಶವನ್ನು ವಿರೋಧಿಸಿ ಹೇಳಿಕೆ ನೀಡಿದವು.
2024 ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು 240 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತದ ಕೊರತೆಯನ್ನು ಅನುಭವಿಸಿದ ನಂತರ, ಸಂಸತ್ತಿನಲ್ಲಿ ಜೆಡಿ(ಯು) ಬಿಜೆಪಿಗೆ ಪ್ರಮುಖ ಮಿತ್ರ ಪಕ್ಷವಾಗಿದೆ. ಸರ್ಕಾರ ರಚಿಸಲು ಅದು ತನ್ನ ಎನ್‌ಡಿಎ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ. 12 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಜೆಡಿಯು ಮತ್ತು 16 ಸ್ಥಾನಗಳನ್ನು ಹೊಂದಿರುವ ತೆಲುಗು ದೇಶಂ ಪಕ್ಷ (ಟಿಡಿಪಿ) ಎರಡೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ನಿರ್ಣಾಯಕ ಮಿತ್ರಪಕ್ಷಗಳಾಗಿವೆ. ಇಷ್ಟಾದರೂ ಬಿಜೆಪಿ ಆಡಳಿತದ ಈ ರಾಜ್ಯಗಳು ತಮ್ಮ ಆದೇಶವನ್ನು ಹಿಂಪಡೆಯಲು ಮುಂದಾಗಲಿಲ್ಲ. ಮಿತ್ರ ಪಕ್ಷಗಳ ವಿರೋಧವನ್ನೂ ಲೆಕ್ಕಿಸದೆ, ತಮ್ಮ ‘ವಿಭಜಿಸುವ’ ಕಾರ್ಯದಲ್ಲಿ ಮುಂದುವರಿಯುತ್ತಾರೆ ಎಂದರೆ, ಕೇಸರಿ ಪಕ್ಷದ ನಿಜವಾದ ಕಾರ್ಯತಂತ್ರ ಏನೆಂಬುದು ಸ್ಪಷ್ಟವಾಗುತ್ತದೆ. ಕಡೆಗೆ ಸುಪ್ರೀಂ ಕೋರ್ಟ್ ನ ಮಧ್ಯಪ್ರವೇಶದಿಂದ ಮಾತ್ರ ಇದಕ್ಕೆ ತಡೆಹಾಕಲು ಸಾಧ್ಯವಾಗಿದೆ.
ಈ ಹಿಂದೆಯೂ ಯೋಗಿ ಸರ್ಕಾರ ಸಾರ್ವಜನಿಕವಾಗಿ ಮಾಂಸ ಮಾರಾಟ ಮಾಡಬಾರದು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಆಗಲೂ ‘ಭಕ್ತರ ಭಾವನೆಗಳಿಗೆ ಧಕ್ಕೆಯಾಗದಿರಲಿ ಎಂಬ ಕಾರಣಕ್ಕೆ’ ಎಂದು ರಾಗ ಎಳೆದರು. ಆದರೆ, ಸಂತ್ರಸ್ತರಿಗೂ ಭಾವನೆಗಳಿವೆ ಅಲ್ಲವೇ? ಅವರ ಭಾವನೆಗಳಿಗೆ ಬೆಲೆಯೇ ಇಲ್ಲವೇನು?
ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ಮತಾಂಧತೆಯನ್ನು ತಿರಸ್ಕರಿಸಿದರು. ವಾಸ್ತವವಾಗಿ, ಕೇಸರಿ ಪಕ್ಷವನ್ನು ಅಲ್ಲಿನ ಜನರು ಅಯೋಧ್ಯೆಯಲ್ಲಿ ರಾಮನ “ಪಾದದ ಮೇಲೆ” ಮತ್ತು ಬದರಿನಾಥದಲ್ಲಿ ಶಂಕರನ “ಪಾದದ ಮೇಲೆ” ಎಸೆದರು. ಆದರೆ, ಅದರಿಂದ ಪಾಠ ಕಲಿಯದ ಬಿಜೆಪಿ ಸಂಸ್ಕೃತಿ ಸಂಪ್ರದಾಯಗಳನ್ನು ಆಚರಿಸುತ್ತೇವೆ ಎನ್ನುವ ಹೆಸರಿನಲ್ಲಿ, ಜನರನ್ನು ನಿರ್ಬಂಧಗಳ ಬಲೆಗೆ ಬೀಳಿಸುವ ತಂತ್ರಗಳನ್ನು ಮಾಡುತ್ತಿದ್ದಾರೆ. ಇದು ಭಾರತೀಯ ಸಂಸ್ಕೃತಿಯ ಮೇಲಿನ ದಾಳಿಯಾಗಿದೆ.
ಕನ್ವರ್ ಯಾತ್ರೆ ಹಿಂದಿನಿಂದಲೂ ಇದೆ
ಹಿಂದೂ ಯಾತ್ರಾರ್ಥಿಗಳು ವರ್ಷದ ಈ ಸಮಯದಲ್ಲಿ ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಾರೆ, ಗಂಗಾ ನದಿಯಿಂದ ನೀರನ್ನು ಸಂಗ್ರಹಿಸಲು ಉತ್ತರಾಖಂಡಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ನಂತರ ಅವರು ಶಿವ ದೇವಾಲಯಗಳಲ್ಲಿ ನೀರನ್ನು ಅರ್ಪಿಸುತ್ತಾರೆ. ಈ ವರ್ಷ ಕನ್ವರ್ ಯಾತ್ರೆ ಜುಲೈ 22 ಆರಂಭವಾಗಲಿದೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲಿನಿಂದಲೂ ಈ ಯಾತ್ರೆ ಆಚರಣೆಯಲ್ಲಿದೆ. ಈ ಹಿಂದೆ ಯಾವ ಸರಕಾರವೂ ಮುಸ್ಲಿಮರ ಮೇಲೆ ಈ ರೀತಿಯ ನಿರ್ಬಂಧಗಳನ್ನು ಹೇರಿರಲಿಲ್ಲ. ಎಂದೂ ಯಾರಿಗೂ ತೊಂದರೆಯಾಗದ ವಿಷಯಗಳನ್ನು ಈಗ ಏಕೆ ಸೃಷ್ಟಿಸಲಾಗುತ್ತಿದೆ? ಈ ರೀತಿಯ ಆದೇಶ ನೀಡುವುದು ಜಾತಿ ಮತ್ತು ಕೋಮುವಾದವನ್ನು ಉತ್ತೇಜಿಸುವ ಹೆಜ್ಜೆಯಾಗಿದೆ. ಇದು ಅಸಂವಿಧಾನಿಕ ನಿರ್ಧಾರ. ‘ಹಿಂದೂ-ಮುಸ್ಲಿಂ ಬಾಯಿ ಬಾಯಿ’ ಎಂದು ಹೇಳುವ ಮೂಲಕ ಸಹೋದರರಂತೆ ಇರುವವರ ಮಧ್ಯ ಒಡಕು ಉಂಟುಮಾಡಲು ಏಕೆ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಯೋಚಿಸಬೇಕಾಗಿದೆ. ದೇಶದಲ್ಲಿ ಅಲ್ಪಸಂಖ್ಯಾತರು ನಿರಂತರವಾಗಿ ಅಭದ್ರತೆ, ಆತಂಕ ಮತ್ತು ಅಸಮಾನತೆಯಿಂದ ಬದುಕುತ್ತಿದ್ದಾರೆ. ಅವರಿಗೆ ಸಂವಿಧಾನ ಒದಗಿಸಿದ ಮೀಸಲಾತಿಯ ಸೌಲಭ್ಯಗಳಿಗೂ ಕತ್ತರಿ ಹಾಕಲಾಗಿದೆ. ಮುಸ್ಲಿಮರ ವೃತ್ತಿಯಲ್ಲಿ ಪ್ರಮುಖವಾದುದು ಮಾಂಸ ಮಾರಾಟ. ಇದು ವರ್ಷಗಟ್ಟಲೆ ನಡೆಯುತ್ತಿದ್ದರೂ ಈಗ ಹೊಸದಾಗಿ ಮೆರವಣಿಗೆ ನಡೆಯುವ ಪ್ರದೇಶದಲ್ಲಿ, ಶೋಭಾಯಾತ್ರೆ ನಡೆಯುವ ಪ್ರದೇಶಗಳಲ್ಲಿ, ಹೋಮಗಳು ನಡೆಯುವ ಸ್ಥಳಗಳಲ್ಲಿ ಮುಸ್ಲಿಮರ ಮೇಲೆ ವಿಧಿಸುತ್ತಿರುವ ನಿರ್ಬಂಧಗಳಿಂದಾಗಿ ಅವರ ಜೀವನೋಪಾಯ ಏನಾಗಬಹುದು?
ನಾಗರಿಕ ಸಮಾಜವೇ ಯೋಚಿಸಬೇಕಿದೆ ;
ಇಂದು ನಮ್ಮ ದೇಶದಲ್ಲಿ ನಿರ್ಬಂಧಗಳು ಜಾರಿಯಾಗುತ್ತಿವೆ. ಇಲ್ಲಿ ಮುಸ್ಲಿಮರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ದಾಳಿಗಳನ್ನು ನೋಡುತ್ತಿದ್ದರೆ ತಾಲಿಬಾನ್ ವಿಧಿಸಿದ ನಿರ್ಬಂಧಗಳು ನೆನಪಿಗೆ ಬರುತ್ತವೆ. ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲಾದ ಈ ವಿಧಾನವು ದೇಶವನ್ನು ಶಾಶ್ವತ ಅಗ್ನಿಕುಂಡವನ್ನಾಗಿ ಪರಿವರ್ತಿಸುವ ಅಪಾಯದಲ್ಲಿದೆ. ‘ವಿಭಜಿಸು, ಆಳು’ ಎಂಬ ಘೋಷಣೆಯೊಂದಿಗೆ ಧರ್ಮ ಮತ್ತು ದ್ವೇಷದ ಆಡಳಿತ ನಡೆಸುತ್ತಿರುವ ಕೇಂದ್ರದ ನೀತಿಗಳನ್ನು ಎದುರಿಸುವುದು ದೇಶದ ಪ್ರಸ್ತುತ ಗುರಿಯಾಗಿದೆ. ಜಾತ್ಯತೀತ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಶಕ್ತಿಗಳನ್ನು ಬೆಂಬಲಿಸುವುದು ಮತ್ತು ಅವರ ಮಾರ್ಗವನ್ನು ಅನುಸರಿಸುವುದು ಜನರ ಕರ್ತವ್ಯ. ಅಂಧಕಾರದತ್ತ ಸಾಗುತ್ತಿರುವ ಭಾರತಕ್ಕೆ ಬೆಳಕು ತೋರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾಗರಿಕ ಸಮಾಜವೇ ಯೋಚಿಸಬೇಕಿದೆ.
ನಿಮ್ಮ ಟಿಪ್ಪಣಿ ಬರೆಯಿರಿ