PSU Privatisation: ಸಾರ್ವಜನಿಕ ಉದ್ಯಮಗಳ ಮಾರಾಟ:

ಕಳೆದ 9 ವರ್ಷಗಳಲ್ಲಿ ರೂ. 4.07 ಲಕ್ಷ ಕೋಟಿ ಬಂಡವಾಳ ಹಿಂತೆಗೆತ

“ಪೂರ್ವಿಕರು ಕಷ್ಟಪಟ್ಟು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆ ಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ.” ದೇವನೂರು ಮಹಾದೇವ ಅವರ ಈ ಮಾತುಗಳನ್ನು ನೆನಪಿಸಿಕೊಳ್ಳುತ್ತ, ಮೋದಿ ಆಡಳಿತದಲ್ಲಿ ‘ಬಂಡವಾಳ ಹಿಂಪಡೆತ’, ‘ಆಸ್ತಿ ನಗದೀಕರಣ’, ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಎಂಬ ಘೋಷಣೆಗಳೊಂದಿಗೆ ಈಗಾಗಲೇ ರೂ. 4.07 ಲಕ್ಷ ಕೋಟಿ ಮೌಲ್ಯದ ಸಾರ್ವಜನಿಕರ ಆಸ್ತಿಗಳನ್ನು ಖಾಸಗಿ ಬಂಡವಾಳಗಾರರಿಗೆ ಮಾರಿ, ಈ ಮಾರಾಟದ ವ್ಯವಹಾರವನ್ನು ಮುಂದುವರಿಸುತ್ತಿರುವುದನ್ನು ನೋಡೋಣ.

ಹೊಸ ಹೊಸ ಉದ್ಯಮಗಳ ಸ್ಥಾಪನೆ, ಇರುವ ಉದ್ಯಮಗಳನ್ನು ಇನ್ನಷ್ಟು, ಮತ್ತಷ್ಟು ಬೆಳಸಲು ಬೇಕಾದ ಯೋಜನೆಗಳು, ಆ ಮೂಲಕ ಅಧಿಕ ಪ್ರಮಾಣದ ಉದ್ಯೋಗಗಳ ಸೃಷ್ಟಿ, ಆರ್ಥಿಕ ಪ್ರಗತಿಗೆ ನೆರವಾಗುವಂತಹ ಮತ್ತು ಜನತೆಗೆ ಮತ್ತು ದೇಶದ ಸರ್ವತೋಮುಖ ಅಭಿವೃದ್ದಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು, ವಿಮಾನ ದಂತಹ ಸಾರಿಗೆ ಸೌಕರ್ಯಗಳು, ವಿದ್ಯುತ್ ಉತ್ಪಾದನೆ ಮತ್ತು ಸರಭರಾಜು, ದೂರ ಸಂಪರ್ಕ ಯೋಜನೆಗಳು, ಕೃಷಿ ಬೆಳವಣಿಗೆಗೆ ಪೂರಕವಾಗಿ ನೀರಾವರಿಗೆ ಅಗತ್ಯವಾದ ಅಣೆಕಟ್ಟುಗಳು,  ಕೆರೆ ಕಟ್ಟೆಗಳ ಅಭಿವೃದ್ಧಿ… ಇನ್ನೂ ಇಂತಹ ಹಲವು ಕ್ಷೇತ್ರಗಳ  ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನ ಕೊಡಬೇಕು. ಜೊತೆಗೆ, ಸರ್ವರಿಗೂ ಶಿಕ್ಷಣ ಮತ್ತು ಆರೋಗ್ಯ ಸುಲಭವಾಗಿ ಕೈಗೆಟಕುವಂತೆ, ಸಾಧ್ಯವಾದರೆ ಇವುಗಳನ್ನು ಉಚಿತವಾಗಿ ನಿಡುವ ವ್ಯವಸ್ಥೆ ರೂಪಿಸಬೇಕು. ಇದು ನಮ್ಮ ಸಂಹಿದಾನದ ಆಶಯ ಕೂಡ. ಇದನ್ನು ಅನುಸರಿಸುವುದು ಪ್ರಭುತ್ವ ಮತ್ತು ಆಳುವವರ ಜವಾಬ್ಧಾರಿ ಮತ್ತು ಕರ್ತವ್ಯ. ಕಲ್ಲಿದ್ದಲು, ಖನಿಜ ಸಂಪತ್ತು, ತೈಲ ಸಂಪತ್ತು, ಅರಣ್ಯ ಸಂಪತ್ತು, ತರಂಗಾಂತರ ಇಂತಹ ಪೃಕೃತಿ ಸಂಪತ್ತನ್ನು ಸರ್ಕಾರವೇ ಬಳಕೆ ಮಾಡಿಕೊಂಡು, ಅವುಗಳಿಂದ ಬರುವ ಸಂಪನ್ಮೂಲವನ್ನು ಸಾರ್ವನಿಕರ ಅಗತ್ಯತೆಗಳಿಗೆ, ದೇಶದ ಅಭಿವೃದ್ದಿಗೆ ಬಳಕೆ ಮಾಡಿಕೊಳ್ಳಬೇಕು.

ಆದರೆ, ಇಂದಿನ ಆಳುವವರು ಮಾಡುತ್ತಿರುವುದೇನು? ಸಾರ್ವಜನಿಕ ವಲಯದ ಕ್ಷೇತ್ರದಲ್ಲಿ ಹೊಸ ಹೊಸ ಉದ್ಯಮಗಳ ಸ್ಥಾಪನೆಯ ಮಾತಿರಲಿ, ಸ್ವಾತಂತ್ರ್ಯ ಬಂದ ನಂತರ, ನಮ್ಮ ಹಿರಿಯರು ಜನರ ತೆರಿಗೆ ಹಣದಿಂದ, ಕಾರ್ಮಿಕರ ಪರಿಶ್ರಮದಿಂದ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳನ್ನು ನಿಕೃಷ್ಠ ಬೆಲೆಗೆ ಮಾರಿ, ಅದರಿಂದ ಬರುವ ಹಣವನ್ನು ಖರ್ಚು ಮಾಡತೊಡಗಿದ್ದಾರೆ. ಸಾರ್ವಜನಿಕರ ಸಂಪತ್ತನ್ನು ಕೆಲವೇ ಉದ್ಯಮಿಗಳ ತೆಕ್ಕೆಗೆ ಹಾಕತೊಡಗಿದ್ದಾರೆ. ಈ ರೀತಿ ಮಾರಾಟದಿಂದ ಬಂದ ಹಣ ಮತ್ತು ಜನರಿಂದ ಸಂಗ್ರಹ ಮಾಡುತ್ತಿರುವ ಹಣವನ್ನೂ ವಿವಿಧ ರೂಪದಲ್ಲಿ (ಉದಾ; ಲಕ್ಷಾಂತರ ಕೋಟಿ ಸಾಲ ಮನ್ನಾ, ತೆರಿಗೆ ಮನ್ನಾ, ಹಲವು ರೀತಿಯ ವಿನಾಯಿತಿ, ರಿಯಾಯಿತಿ) ಈ ಕೆಲವೇ ದೊಡ್ಡ ಬಂಡವಾಳಗಾರರ ಖಜಾನೆಗೆ ತುಂಬತೊಡಗಿದ್ದಾರೆ.

ಯುಪಿಎ -1ರ ಅವಧಿಯಲ್ಲಿ ಎಡಪಕ್ಷಗಳಿಂದ ತಡೆ

ನವ ಉದಾರೀಕರಣ ನೀತಿಗಳು ಜಾರಿಗೆ ಬಂದ 1991-92 ರಲ್ಲಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮ(ಪಿಎಸ್‌ಯು)ಗಳಲ್ಲಿನ ತನ್ನ ಹೂಡಿಕೆಯನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಅಂದಿನಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರಗಳು ಬಂಡವಾಳ ಹಿಂಪಡೆಯುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ. ಆದರೆ, 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಒಂದರ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ಕೊಟ್ಟಿದ್ದ ಎಡಪಕ್ಷಗಳು, ಆ ಅವಧಿಯಲ್ಲಿ ಬಂಡವಾಳ ಹಿಂತೆಗೆಯುವ ಪ್ರಯತ್ನಕ್ಕೆ ತಡೆ ನೀಡಿದ್ದವು. 2008 ರಲ್ಲಿ ಯುಪಿಎ ಎರಡರ ಆಡಳಿತದಲ್ಲಿ ಮಾರಾಟ ಪ್ರಕ್ರಿಯೆ ಮುಂದುವರಿಯಿತು. ಈ ಅವಧಿಯಲ್ಲಿ ಕಾಂಗ್ರೆಸ್ ಸಂಸತ್ತಿನಲ್ಲಿ ಸ್ವಂತ ಬಲ ಹೊಂದಿಲ್ಲದ ಕಾರಣದಿಂದಾಗಿ ಈ ಖಾಸಗೀಕರಣದ ಪ್ರಕ್ರಿಯೆಯನ್ನು ವೇಗವಾಗಿ ಜಾರಿಗೊಳಿಸಲು ಸಾಧ್ಯವಾಗಲಿಲ್ಲ.

2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಬಂಡವಾಳ ಹಿಂಪಡೆಯುವ ಪ್ರಕ್ರಿಯೆ ಜೋರಾಗುತ್ತದೆ. ಅವರು ಯೋಜನಾ ಆಯೋಗವನ್ನು ತೆಗೆದುಹಾಕಿ, ನೀತಿ ಆಯೋಗವನ್ನು ರಚಿಸುತ್ತಾರೆ. ಇದರ ಪ್ರಮುಖ ಕೆಲಸವೆಂದರೆ – ಕೇಂದ್ರದ ಸಾರ್ವಜನಿಕ ಒಡೆತನದಲ್ಲಿರುವ ಉದ್ದಿಮೆಗಳನ್ನು ಮಾರಾಟ ಮಾಡುವುದು ಅಥವಾ ಸರ್ಕಾರಿ ಷೇರುಗಳನ್ನು ಹಿಂತೆಗೆದುಕೊಳ್ಳುವುದು ಹೇಗೆಂದು ಸರ್ಕಾರಕ್ಕೆ ಸಲಹೆ ಸೂಚನೆ ನೀಡುವುದು. ಈ ನೀತಿ ಆಯೋಗ 76 ಸಾರ್ವಜನಿಕ ಒಡೆತನದ ಉದ್ದಿಮೆ ಸಂಸ್ಥೆಗಳನ್ನು ಖಾಸಗಿ ಕಂಪೆನಿಗಳ ವಶಕ್ಕೆ ಒಪ್ಪಿಸಲು ಟೊಂಕಕಟ್ಟಿ ನಿಂತಿದೆ.

ಕಳೆದ 9 ವರ್ಷಗಳಲ್ಲಿ ₹ 4.07 ಲಕ್ಷ ಕೋಟಿ..

ಕಳೆದ 9 ವರ್ಷಗಳಲ್ಲಿ, ಅಂದರೆ, 2015ರಿಂದ 2023 ರ ಅವಧಿಯಲ್ಲಿ (18 ಜನವರಿ 2023 ರಂತೆ), ಹಲವು ವಿಧಾನಗಳನ್ನು ಬಳಸಿಕೊಂಡು, 154 ವಹಿವಾಟುಗಳ ಮೂಲಕ ಬಂಡವಾಳ ಹಿಂಪಡೆಯುವ ಯೋಜನೆಯಿಂದ ಸುಮಾರು ರೂ. 4.07 ಲಕ್ಷ ಕೋಟಿ ಮೊತ್ತವನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದು ಜನವರಿ 31 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯು ಹೇಳುತ್ತದೆ.

  ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL), ಗ್ರಾಮೀಣ ವಿದ್ಯುದೀಕರಣ ನಿಗಮ ನಿಯಮಿತ (Rural Electrification Corporation Limited- REC), Dredging Corporation of India Limited (DCIL), ಆಸ್ಪತ್ರೆ ಸೇವೆಗಳ ಸಲಹಾ ನಿಗಮ ನಿಯಮಿತ (HSCC), ರಾಷ್ಟ್ರೀಯ ಯೋಜನೆಗಳ ನಿರ್ಮಾಣ ನಿಗಮ ನಿಯಮಿತ (National Projects Construction Corporation Limited -NPCC), ಈಶಾನ್ಯ ಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ (NEEPCO), Tehri Hydro Development Corporation Limited (THDC) ಕಾಮರಾಜರ್ ಪೋರ್ಟ್, ಏರ್ ಇಂಡಿಯಾ ಮತ್ತು Neelachal Ispat Nigam Limited (NINL) ಈ ಹತ್ತು ಕೇಂದ್ರ ವಲಯದ ಉದ್ಯಮಗಳಲ್ಲಿನ ಸರ್ಕಾರದ ಪಾಲಿನ ರೂ. 69,412 ಕೋಟಿ ಮೌಲ್ಯದ ಷೇರುಗಳನ್ನು ಮತ್ತು ಇನ್ನುಳಿದ ಉದ್ಯಮಗಳ ಷೇರುಗಳ ಮಾರಾಟದ ಮೂಲಕ ರೂ. 3.02 ಲಕ್ಷ ಕೋಟಿ ಬಂಡವಾಳವನ್ನು ಕಳೆದ 9 ವರ್ಷಗಳಲ್ಲಿ ಹಿಂಪಡೆಯಲಾಗಿದೆ ಎಂಬ ಮಾಹಿತಿಯನ್ನು ಈ ಸಮೀಕ್ಷೆ ನೀಡಿದೆ. (ದಿ ಹಿಂದೂ- ಜನವರಿ 31, 2023).

ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP)

ಆಗಸ್ಟ್ 2021 ರಲ್ಲಿ, ಸರ್ಕಾರವು ರಾಷ್ಟ್ರೀಯ ಹಣಗಳಿಕೆ ಪೈಪ್‌ಲೈನ್ (National Monetisation Pipeline -NMP) ಅಡಿಯಲ್ಲಿ ರೂ. 6 ಲಕ್ಷ ಕೋಟಿ ಮೌಲ್ಯದ ಯೋಜನೆಗಳನ್ನು ಪಟ್ಟಿ ಮಾಡಿತು. ಇದು 2024-25 ರ ಆರ್ಥಿಕ ವರ್ಷದೊಳಗೆ ವಿದ್ಯುತ್‌ ಕ್ಷೇತ್ರದಿಂದ ರಸ್ತೆ ಮತ್ತು ರೈಲ್ವೇ ವರೆಗಿನ ಕ್ಷೇತ್ರಗಳಾದ್ಯಂತ ಮೂಲಸೌಕರ್ಯ ಆಸ್ತಿಗಳಲ್ಲಿ ಮೌಲ್ಯವನ್ನು ಅನ್‌ಲಾಕ್ ಮಾಡಲು ಗುರಿ ಇಟ್ಟುಕೊಳ್ಳಲಾಗಿದೆ.

2021-22ರ ಬಜೆಟ್‌ನಲ್ಲಿ, ಸರ್ಕಾರವು ಪಿಎಸ್‌ಇ ನೀತಿಯನ್ನು ಘೋಷಿಸಿತು, ಅದರ ಪ್ರಕಾರ ನಾಲ್ಕು ಆಯಕಟ್ಟಿನ ವಲಯಗಳಲ್ಲಿ, ಪರಮಾಣು ಶಕ್ತಿ, ಬಾಹ್ಯಾಕಾಶ ಮತ್ತು ರಕ್ಷಣೆ; ಸಾರಿಗೆ ಮತ್ತು ದೂರಸಂಪರ್ಕ; ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಇತರ ಖನಿಜಗಳು; ಮತ್ತು ಬ್ಯಾಂಕಿಂಗ್, ವಿಮೆ ಮತ್ತು ಹಣಕಾಸು ಸೇವೆಗಳು ಈ ಎಲ್ಲಾ ಪಿಎಸ್‌ಯುಗಳನ್ನು ಖಾಸಗೀಕರಣಗೊಳಿಸಲಾಗುವುದು. ಈ ಕಾರ್ಯತಂತ್ರದ  ವಲಯಗಳಲ್ಲಿ, ಸರ್ಕಾರವು ಕನಿಷ್ಟ ಸಂಖ್ಯೆಯ PSUಗಳನ್ನು ಮಾತ್ರ ಉಳಿಸಿಕೊಳ್ಳುತ್ತದೆ.

2023-24ರ ಕೇಂದ್ರ ಬಜೆಟ್‌ನಲ್ಲಿ, ಸರ್ಕಾರವು ರೂ. 51,000 ಕೋಟಿ ಬಂಡವಾಳ ಹಿಂಪಡೆಯುವ ಗುರಿಯನ್ನು ಹೊಂದಿತ್ತು. IDBI ಬ್ಯಾಂಕಿನ ಪ್ರಮುಖ ಹಿಡುವಳಿಗಳ ವಿತರಣಾ ಪ್ರಕ್ರಿಯೆಯು ಪೈಪ್‌ಲೈನ್‌ನಲ್ಲಿದೆ. ಐಡಿಬಿಐ ಬ್ಯಾಂಕ್‌ನ ಪ್ರಮುಖ ಹಿಡುವಳಿಗಳ ಹಿಂತೆಗೆದುಕೊಳ್ಳುವಿಕೆ ಕೂಡ ಪೈಪ್ ಲೈನ್ ನಲ್ಲಿದೆ.

IDBI ಬ್ಯಾಂಕ್ ಜೊತೆಗೆ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ, NMDC ಸ್ಟೀಲ್ ಲಿಮಿಟೆಡ್, BEML, HLL ಲೈಫ್‌ಕೇರ್, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ವೈಜಾಗ್ ಸ್ಟೀಲ್‌ನಂತಹ CPSE ಗಳನ್ನು ಖಾಸಗೀಕರಣಗೊಳಿಸಲು ಸರ್ಕಾರವು ಪ್ರಸ್ತುತ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯತಂತ್ರದ ಮಾರಾಟ ಪ್ರಕ್ರಿಯೆಗಳು ವಿವಿಧ ಹಂತಗಳಲ್ಲಿವೆ ಮತ್ತು ಅವುಗಳಲ್ಲಿ ಹೆಚ್ಚಿನವು ಮುಂದಿನ ಆರ್ಥಿಕ ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಆಳುವವರು ಹೇಳುವ ಕಾರಣಗಳೇನು? ಇವುಗಳೆಷ್ಟು ನಿಜ?

ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವುದನ್ನು ಸಮರ್ಥಿಸಿಕೊಳ್ಳಲು ಆಳುವವರು ಹಲವು ಕಾರಣಗಳನ್ನು ಕೊಡುತ್ತಾರೆ. ಸಾರ್ವಜನಿಕ ಉದ್ದಿಮೆಗಳು ನಷ್ಟದಲ್ಲಿವೆ, ಇವುಗಳನ್ನು ಉಳಿಸಿಕೊಳ್ಳಲು ಅಂತಹ ಉದ್ದಿಮೆಗಳಿಗೆ ಸರ್ಕಾರ ನೆರವು ನೀಡುವುದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎನ್ನುತ್ತಾರೆ. ಸರ್ಕಾರಿ ಒಡೆತನದ ಸಂಸ್ಥೆಗಳಲ್ಲಿನ ಕಾರ್ಮಿಕರು ಸೋಮಾರಿಗಳು, ಇವರಿಗೆ ಅತಿಯಾದ ಸಂಬಳ ಸವಲತ್ತುಗಳಿವೆ, ಇದರಿಂದ ಉದ್ದಿಮೆಗಳು ನಷ್ಟವೊಂದುತ್ತಿವೆ ಎಂದು ನಷ್ಟದ ಹೊಣೆಯನ್ನು ಕಾರ್ಮಿಕರ ಮೇಲೆ ಹೊರಿಸುವ ಪ್ರಯತ್ನವನ್ನೂ ಮಾಡುತ್ತಾರೆ. ಜೊತೆಗೆ ಆ ಕಾರ್ಮಿಕರನ್ನು ಸಂಘಟಿಸಿ, ಅವರ ಬೇಡಿಕೆಗಳಿಗಳಿಗಾಗಿ ಹೋರಾಟಗಳನ್ನು ರೂಪಿಸುವ ಕಾರ್ಮಿಕ ಸಂಘಟನೆಗಳು, ಅದರಲ್ಲೂ ಕಮ್ಯೂನಿಸ್ಟರ ನೇತೃತ್ವದ ಸಂಘಟನೆಗಳು ಕಾರಣ ಎಂದೂ ಆಳುವವರು ದೂಷಿಸುತ್ತಾರೆ. ಈ ಮೂಲಕ, ತಾವು ಅನುಸರಿಸುತ್ತಿರುವ ನವ ಉದಾವಾದಿ ನೀತಿಗಳು ಮತ್ತು ಖಾಸಗಿ ಬಂಡವಾಳಗಾರರ ಪರವಾದ ನೀತಿಗಳು ಈ ನಷ್ಟಕ್ಕೆ ಕಾರಣ ಎಂಬುದನ್ನು ಮರೆಮಾಚಲು ಯತ್ನಿಸುತ್ತಾರೆ. ಬಹಳಷ್ಟು ಜನರು ಆಳುವವರು ಹೇಳುವುದೇ ಸತ್ಯ ಎಂದೇ ನಂಬಿ ಕಾರ್ಮಿಕರನ್ನು ಮತ್ತು ಕಾರ್ಮಿಕ ಸಂಘಟನೆಗಳನ್ನು, ಕಮ್ಯೂನಿಸ್ಟರನ್ನು ದೂಷಿಸುತ್ತಾರೆ.

ವಾಣಿಜ್ಯ ಉದ್ಯಮ ನಡೆಸುವುದು ಸರ್ಕಾರದ ಕೆಲಸವಲ್ಲ!!

ಮತ್ತೊಂದಡೆ, ‘ವಾಣಿಜ್ಯ ಉದ್ಯಮ ನಡೆಸುವುದು ಸರ್ಕಾರದ ಉಸಾಬರಿಯಲ್ಲ. ಇದನ್ನು ಖಾಸಗಿಯವರು ನೋಡಿಕೊಳ್ಳುತ್ತಾರೆ’ ಎನ್ನುತ್ತಾರೆ. ಮೊದಲನೆಯ ಕಾರಣ ಖಾಸಗೀಕರಣಕ್ಕೆ ಜನರ ವಿರೋಧ ಬರದಂತೆ ನೋಡಿಕೊಳ್ಳಲು ಮಾಡುವ ತಂತ್ರವಾದರೆ, ಆಳುವವರ ನಿಜವಾದ ನೀತಿಗಳೇನು ಎಂಬುದನ್ನು ಈ ವಾದ ತೋರಿಸುತ್ತದೆ.

ಸಾರ್ವಜನಿಕ ಸ್ವತ್ತುಗಳ ಮಾರಾಟಕ್ಕೆ ಆಳುವವರು ಹೇಳುವ ಕಾರಣಗಳು ಎಷ್ಟು ಸುಳ್ಳು ಎಂಬುದಕ್ಕೆ ಮತ್ತು ಸಾರ್ವಜನಿಕ ಉದ್ಯಮಗಳಿಗೆ ನಷ್ಟ ಉಂಟುಮಾಡಲು ಆಳುವವರು ಏನೆಲ್ಲಾ ತಂತ್ರಗಾರಿಕೆ ಮಾಡುತ್ತಾರೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಇವರು ಸಾರ್ವಜನಿಕ ಉದ್ಯಮಗಳನ್ನು ಕಡೆಗಣಿಸಿ, ಖಾಸಗಿ ಉದ್ಯಮಗಳ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಸಾರ್ವಜನಿಕ ಉದ್ಯಮವನ್ನು ಪ್ರೋತ್ಸಾಹಿಸಿ, ಮತ್ತಷ್ಟು ಬೆಳೆಸುವ ಜವಾಬ್ದಾರಿ ಹೊತ್ತಿರುವ ಪ್ರಧಾನಿ ಮೋದಿ, ಸಾರ್ವಜನಿಕ ಸಂಸ್ಥೆಯಾದ ಬಿಎಸ್ ಎನ್ ಎಲ್ ಗೆ ಪೈಪೋಟಿಯಾಗಿ ಬೆಳೆಯುತ್ತಿರುವ, ಅದಾನಿ ಒಡೆತನದ ಜಿಯೋ ಟೆಲಿಕಾಂ ಸಂಸ್ಥೆಯ ಜಾಹಿರಾತುಗಳಿಗೆ ತಮ್ಮ ಭಾವಚಿತ್ರ ಹಾಕಿಕೊಳ್ಳಲು ಅವಕಾಶ ಕೊಟ್ಟಿರುವುದು ಇದಕ್ಕೊಂದು ಎದ್ದು ಕಾಣುವ ಉದಾಹರಣೆಯಾಗಿದೆ. ಮತ್ತೊಂದು ಉದಾಹರಣೆ, ಎಚ್ ಎ ಎಲ್ ಜೊತೆಗಿನ ರಫೆಲ್ ಯುದ್ದವಿಮಾನದ ಒಪ್ಪಂದ ರದ್ದುಗೊಳಿಸಿ, ರಿಲಯನ್ಸ್ ಸಹಭಾಗಿತ್ವದ ವಿದೇಶಿ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಇಂತಹ ಬಹಳಷ್ಟು ಉದಾಹರಣೆಗಳಿವೆ.

ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಿ.ಎಸ್.ಯು  

ಸಾರ್ವಜನಿಕ ವಲಯದ ಉದ್ಯಮಗಳು ಭಾರತವನ್ನು ಅದರ ಪ್ರಸ್ತುತ ಎತ್ತರಕ್ಕೆ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. 1956ರ ಕೈಗಾರಿಕಾ ನೀತಿಯಿಂದ ಸಾರ್ವಜನಿಕ ವಲಯವು ದೊಡ್ಡ ಪ್ರಮಾಣದ ವಿಸ್ತರಣೆಗೆ ಒಳಗಾಯಿತು. ಈ ವಿಸ್ತರಣಾ ಪ್ರವೃತ್ತಿಯು 1991 ರ ಕೈಗಾರಿಕಾ ನೀತಿಯೊಂದಿಗೆ ವ್ಯತಿರಿಕ್ತವಾಯಿತು. ಆದರೂ, PSE ಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಇದು ಭಾರತದಲ್ಲಿ ಹೆಚ್ಚಿರುವ PSE ಗಳಲ್ಲಿ ಪ್ರತಿಫಲಿಸುತ್ತದೆ. 1951 ರಲ್ಲಿ ಕೇವಲ 5 ಕೇಂದ್ರ ಸಾರ್ವಜನಿಕ ವಲಯದ ಉದ್ಯಮ(CPSE )ಗಳಿದ್ದವು. ಆದರೆ 1969 ರ ವೇಳೆಗೆ ಈ ಸಂಖ್ಯೆ 84 ಕ್ಕೆ ಏರಿತು. 2011-12 ರಲ್ಲಿ ಇವುಗಳ ಸಂಖ್ಯೆಯು 260 ಕ್ಕೆ ಮೂರು ಪಟ್ಟು ಹೆಚ್ಚಾಯಿತು. 2021-22 ರಲ್ಲಿ 389 ಕ್ಕೆ ಏರಿತು.

ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಕ್ಕೆ ಗಮನಾರ್ಹ ಲಾಭಾಂಶವನ್ನು ನೀಡುತ್ತಿವೆ. ಆದರೆ, ಸರ್ಕಾರದ ನಿರ್ಲಕ್ಷ ದೋರಣೆಗಳಿಂದಾಗಿ ಏರ್ ಇಂಡಿಯಾ, BSNL ಮತ್ತು MTNL ನಷ್ಟವನ್ನು ಉಂಟುಮಾಡಿದವು. 2016-17ರಲ್ಲಿ ಎಲ್ಲಾ 257 ಕಾರ್ಯಾಚರಣಾ CPSE ಗಳ ನಿವ್ವಳ ಲಾಭವು ರೂ. 1,27,602 ಕೋಟಿ. 2015-16 ರಲ್ಲಿ ರೂ. 1,14,239 ಕೋಟಿ ಗಳಿಕೆಗೆ ಹೋಲಿಸಿದರೆ, ಶೇ. 11.70 ಬೆಳವಣಿಗೆಯನ್ನು ತೋರಿಸಿದೆ. 

ಸಾರ್ವಜನಿಕ ವಲಯದ ಉದ್ಯಮಗಳನ್ನು ಉಳಿಸಿಕೊಳ್ಳಲು, ಬಂಡವಾಳ ಹಿಂಪಡೆಯುವಿಕೆಯನ್ನು ತಡೆಗಟ್ಟಲು, ದೇಶಾದ್ಯಂತ ಇರುವ ಸಾರ್ವಜನಿಕ ವಲಯದ ಉದ್ಯಮಗಳ ಕಾರ್ಮಿಕರು, ಬ್ಯಾಂಕು, ವಿಮಾ ನೌಕರರು, ಗಣಿ ಕಾರ್ಮಿಕರು, ಸಾರಿಗೆ ವಲಯದ ನೌಕರರ ಜೊತೆಯಾಗಿ ರೈತರು, ವಿಧ್ಯಾರ್ಥಿ ಯುವಜನರು ಹೋರಾಡುತ್ತಲೇ ಬಂದಿದ್ದಾರೆ. ಪ್ರತಿ ವರ್ಷವೂ ಎಂಬಂತೆ ನಡೆಯುವ ಕೇಂದ್ರ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಇವರೆಲ್ಲರೂ ಭಾಗಿಯಾಗುತ್ತಿದ್ದಾರೆ. ಪ್ರತಿಯೊಂದು ಮುಷ್ಕರ ನಡೆದಾಗಲೂ ಜನರ ಭಾಗವಹಿಸುವಿಕೆ ಹೆಚ್ಚತ್ತಲೇ ಇದೆ. ಇತ್ತೀಚೆಗೆ ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ದೇಶಾದ್ಯಂತ 25 ಕೋಟಿ ಜನರ ಭಾಗವಹಿಸಿದ್ದು ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದದ ಜನತೆಯ ಅಸಹನೆ ಹೆಚ್ಚಾಗಿರುವುದನ್ನು ತೋರಿಸುತ್ತದೆ. ಈ ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ನಮ್ಮದೇ ಸ್ವತ್ತುಗಳಾದ ಸಾರ್ವಜನಿಕ ಉದ್ಯಮಗಳನ್ನು ಉಳಿಸಿಕೊಳ್ಳಲು ಪಣತೊಡಬೇಕಿದೆ.  

Is this your new site? Log in to activate admin features and dismiss this message
ಲಾಗಿನ್