
ಮೋದಿ ಸರ್ಕಾರದ 10 ವರ್ಷಗಳ ಸಾಧನೆಗಳಲ್ಲಿ ಬ್ಯಾಂಕುಗಳಲ್ಲಿ ಸಾರ್ವಜನಿಕರ ಸಂಪತ್ತನ್ನು ಲೂಟಿ ಮಾಡಲು ದೊಡ್ಡ ಉದ್ಯಮಿಗಳಿಗೆ ಮುಕ್ತ ಅವಕಾಶ ಕೊಟ್ಟಿರುವುದೂ ಒಂದು ಸಾಧನೆ. ಆದರೆ, ಅವರ ಸಾಧನೆಗಳ ಪ್ರಚಾರದ ಪಟ್ಟಿಯಲ್ಲಿ ಈ ಅಂಶ ಸೇರಿಸಿಲ್ಲ.
2014-15 ರಿಂದ 2021-22ರ 8 ವರ್ಷಗಳ ಅವಧಿಯಲ್ಲಿ 12,49,698 ಕೋಟಿ ರೂಗಳ ಸಾಲ ರೈಟ್ ಆಫ್ (write off) ಮಾಡಲಾಗಿತ್ತು. 2022-23ರ ಆರ್ಥಿಕ ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 91,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಎಂದು ರಾಜ್ಯಸಭೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದರು. (ಈ ಮೊತ್ತ ಅಂದಾಜು 110.79 ಲಕ್ಷ ಕೋಟಿ ಮೊತ್ತದ ಬ್ಯಾಂಕ್ ಮುಂಗಡದ (non-food bank advances) ಶೇಕಡಾ 10.54ರಷ್ಟಿದೆ.) 2023ರ ಆಗಸ್ಟ್ ನಲ್ಲಿ ಸಂಸತ್ತಿಗೆ ನಿಡಿದ ಮಾಹಿತಿಯ ಪ್ರಕಾರ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ, 2014-15ರಿಂದ 9 ವರ್ಷಗಳಲ್ಲಿ ಒಟ್ಟು 14,56,226 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ.
2018ರ ಮಾರ್ಚ್ ವೇಳೆ ಅತೀ ಹೆಚ್ಚು ವಸೂಲಾಗದ ಸಾಲದ ಪ್ರಮಾಣ (NPA) 10.36 ಲಕ್ಷ ಕೋಟಿ ಇತ್ತು. ಲೋಕಸಭೆಯಲ್ಲಿ ಸರ್ಕಾರ ನೀಡಿದ ಮಾಹಿತಿಯಂತೆ 2021ರ ಮಾರ್ಚ್ ವೇಳೆಯಲ್ಲಿ ಎನ್ ಪಿ ಎ 8.35 ಲಕ್ಷ ಕೋಟಿಗೆ ಇಳಿಯಿತು. ಅಂದರೆ 2018 ಮತ್ತು 2021ರ ಮೂರು ವರ್ಷಗಳ ಅವಧಿಯಲ್ಲಿ 2 ಲಕ್ಷ ಕೋಟಿ ಎನ್ ಪಿ ಎ ಕಡಿಮೆಯಾಯಿತು. ಆದರೆ, ಈ ಅವಧಿಯಲ್ಲಿ ರೈಟ್ ಆಫ್ ಮಾಡಿದ ಸಾಲದ ಮೊತ್ತ 6,59,639 ಕೋಟಿಯಾಗಿದೆ!. ಅಂದರೆ ಈ ಮೂರು ವರ್ಷಗಳಲ್ಲಿ 4,59,639 ಕೋಟಿ ಸಾಲ ಹೊಸದಾಗಿ ಎನ್ ಪಿ ಎ ಲೆಕ್ಕಕ್ಕೆ ಸೇರಿಸಲಾಗಿದೆ. ಇದುವರೆಗೆ ರೈಟ್ ಆಫ್ ಮತ್ತು ಸಾಲ ಮನ್ನಾ ಮಾಡಿರುವುದೂ ಸೇರಿದಂತೆ ಒಟ್ಟಾರೆಯಾಗಿ ಎನ್ ಪಿ ಎ 20 ಲಕ್ಷ ಕೋಟಿ ರೂ. ದಾಟಿದೆ. ಅನಧಿಕೃತ ವರದಿಗಳ ಪ್ರಕಾರ ಈ ಮೊತ್ತ ಇನ್ನೂ ಹೆಚ್ಚು. ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ದೊಡ್ಡ ಉದ್ಯಮಿಗಳು ದೋಚಿದ್ದಾರೆ.
ಸುಸ್ತಿದಾರ ಕಂಪನಿಗಳ ಮಾಹಿತಿ ನೀಡಲು ನಕಾರ
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ರೂ 500 ಕೋಟಿಗಿಂತ ಹೆಚ್ಚು ವಂಚನೆ ಮಾಡಿರುವ ಸುಸ್ತಿದಾರ ಕಂಪನಿಗಳ ಪಟ್ಟಿ ಕೊಡುವಂತೆ ಪೆಬ್ರವರಿ 15, 2016ರಂದು ಸುಪ್ರೀಕೋರ್ಟ್ ಆರ್ಬಿಐಗೆ ಸೂಚಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇಲೆ (Center for public interest litigation) ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ ಭೂಷಣ್ ಅವರು 2015ರಲ್ಲಿ 40,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಆರೋಪಿಸಿದ್ದರು.
ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಆರ್. ಭಾನುಮತಿ ಅವರನ್ನೊಳಗೊಂಡ ನ್ಯಾಯಪೀಠ, ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಸರಿಯಾದ ಮಾರ್ಗಸೂಚಿಗಳಿಲ್ಲದೆ ಹೇಗೆ ದೊಡ್ಡ ಪ್ರಮಾಣದ ಸಾಲಗಳನ್ನು ನೀಡುತ್ತಿವೆ ಮತ್ತು ಅವುಗಳನ್ನು ವಸೂಲಿ ಮಾಡಲು ಸಾಕಷ್ಟು ಕಾರ್ಯವಿಧಾನವಿದೆಯೇ’ ಎಂದು ತಿಳಿಯಲು ಬಯಸಿತು. ಈ ಸಂಬಂಧ ನ್ಯಾಯಾಲಯಕ್ಕೆ ‘ಉದ್ದೇಶ ಪೂರ್ವಕವಾಗಿ’ ವಂಚನೆ ಮಾಡಿದ ಕಂಪನಿಗಳ ಹೆಸರುಗಳುಳ್ಳ ಪ್ರಮಾಣ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ಕೊಟ್ಟಿತ್ತು.
ಜುಲೈ 17,2017ರಂದು ಮುಖ್ಯ ನ್ಯಾಯಾಧೀಶರಾಗಿದ್ದ ಜೆ.ಎಸ್. ಖೇಹರ್, ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರಿದ್ದ ಪೀಠದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಜುಲೈ 24ರ ಒಳಗೆ ಡಿಫಾಲ್ಟರ್ ಕಂಪನಿಗಳ ಪಟ್ಟಿ ಕೊಡುವಂತೆ ಮತ್ತೆ ಒಂದು ವಾರದ ಗಡುವು ನೀಡಿತು. ಆ ಸಮಯದಲ್ಲಿ ಎನ್ ಪಿ ಎ ಪ್ರಮಾಣ ಎಂಟು ಲಕ್ಷ ಕೋಟಿ ದಾಟಿತ್ತು.
“ಸಾರ್ವಜನಿಕರು, ಠೇವಣಿದಾರರು, ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯದ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಆರ್ಬಿಐ ಶಾಸನಬದ್ಧ ಕರ್ತವ್ಯವನ್ನು ಹೊಂದಿದೆ,” ಎಂದು ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಆರ್ಬಿಐಗೆ ನಿರ್ದೇಶಿಸುವಾಗ ಅಂದು ನ್ಯಾಯಾಲಯ ಹೇಳಿತ್ತು.
“ಆರ್ಟಿಐ ಕಾಯ್ದೆಯ ನಿಬಂಧನೆಗಳನ್ನು ಅನುಸರಿಸಲು ಆರ್ಬಿಐ ಕರ್ತವ್ಯ ಬದ್ಧವಾಗಿದೆ. ಉದ್ದೇಶ ಪೂರ್ವಕ ಸುಸ್ತಿದಾರ ಕಂಪನಿಗಳ ಹೆಸರುಗಳನ್ನು ಬಹಿರಂಗ ಪಡಿಸುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂಬ ಆರ್ಬಿಐನ ಆಧಾರರಹಿತ ವಾದವು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. ಇಷ್ಟಾದರೂ ಆರ್ ಬಿ ಐ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದ ಉದ್ಯಮಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಕೊಡಲಿಲ್ಲ.

ರೈಟ್ ಆಫ್ ಮಾತ್ರ. ಸಾಲ ಮನ್ನಾ ಅಲ್ಲ!!
‘ಇದು ರೈಟ್ ಆಫ್ ಮಾತ್ರ, ಸಾಲ ಮನ್ನಾ ಅಲ್ಲ. ವಸೂಲಾಗದ ಸಾಲದ ಲೆಕ್ಕದ ಪುಸ್ತಕದಲ್ಲಿ ಕೆಲವನ್ನು ಅಳಿಸಿ ಹಾಕಲಾಗುತ್ತದಷ್ಟೆ. ಇದನ್ನು ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ರೈಟ್ ಆಫ್ ಮಾಡಿದ ಮಾತ್ರಕ್ಕೆ ಅದು ಮನ್ನಾ ಎಂದು ಹೇಳುವುದು ಸರಿಯಲ್ಲ’ ಎಂದು ಕೇಂದ್ರದ ಸಚಿವರು ಮತ್ತು ಬಿಜೆಪಿ ನಾಯಕರು ಮತ್ತು ಆರ್ ಬಿ ಐ ಅಧಿಕಾರಿಗಳು ವಾದಿಸುತ್ತಾರೆ. ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಂಪತ್ತನ್ನು ಉಳಿಸುವ ಪ್ರಾಮಾಣಿಕತೆ ಆರ್ ಬಿ ಐ ಮತ್ತು ಕೇಂದ್ರ ಸರ್ಕಾರಕ್ಕೆ ಇದ್ದರೆ ‘ರೈಟ್ ಆಫ್’ ಮಾಡುವುದೇಕೆ ಎಂಬ ಪ್ರಶ್ನೆ ಮೂಡುತ್ತದೆ.
ಇವೆಲ್ಲವೂ ಹಿಂದಿನ ಸರ್ಕಾರದ ಅವಧಿಯಲ್ಲೇ ಪಡೆದ ಸಾಲಗಳಾಗಿದ್ದವು. ಈಗ ಅವು ಎನ್.ಪಿ.ಎ. ಆಗಿ ಪರಿವರ್ತನೆಯಾಗುತ್ತಿವೆ. ಅದರಲ್ಲಿ ಮೋದಿ ಸರ್ಕಾರದ ತಪ್ಪೇನಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಹಗರಣಗಳನ್ನು ಪತ್ತೆಮಾಡಿ ಬೆಳಕಿಗೆ ತರುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಮೋದಿಯವರನ್ನು ಬಣ್ಣಿಸತೊಡಗಿದ್ದಾರೆ. ರಿಷಿ ಅಗರ್ ವಾಲ್ ವಂಚನೆ ಪ್ರಕರಣದಲ್ಲಿಯೂ ಇದೇ ವಾದವನ್ನು ಮಂಡಿಸುತ್ತಾರೆ. ಆದರೆ, ಈ ಪ್ರಮಾಣದ ಸಾಲ ಪಡೆದು ಮರುಪಾವತಿ ಮಾಡದಿರುವ ವಂಚಕರಿಗೆ ಸಾಲ ಕೊಡುವುದನ್ನು ಸ್ಥಗಿತಗೊಳಿಸಿದ ಮತ್ತು ಅಂತಹ ಎಲ್ಲರಿಂದ ಸಾಲ ವಸೂಲಿಗೆ ಕೈಗೊಂಡ ಕ್ರಮಗಳ ಬಗ್ಗೆ ಇವರು ಏನನ್ನೂ ಹೇಳುವುದಿಲ್ಲ.
NPA ನಿರಂತರವಾಗಿ ಏರುತ್ತಲೇ ಇದೆ
2014 ರಲ್ಲಿ ಐದು ಲಕ್ಷ ಕೋಟಿ ಇದ್ದ ವಸೂಲಾಗದ ಸಾಲದ ಪ್ರಮಾಣ (NPA), ಕಳೆದ 9 ವರ್ಷಗಳಲ್ಲಿ14 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ 8 ಲಕ್ಷ ಕೋಟಿ ಇದೆ. ‘ಉದ್ಯಮಿಗಳ ಸಾಲ ಮನ್ನಾ ಮಾಡಿಲ್ಲ. ಎನ್ ಪಿ ಎ ಪುಸ್ತಕದಿಂದ ಸಾಲದ ಲೆಕ್ಕ ಅಳಿಸಿಹಾಕಲಾಗಿದೆ (ರೈಟ್ ಆಫ್) ಅಷ್ಟೆ. ಅದನ್ನು ಮತ್ತೊಂದು ಪುಸ್ತಕದಲ್ಲಿ ಬರೆಯಲಾಗುತ್ತದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಒಮ್ಮೆ ಹೇಳಿದ್ದರು. ಯಾವುದೇ ರೂಪದಲ್ಲಿ ಮರೆಮಾಚಿದರೂ ಇದು ಸಾಲ ಮನ್ನಾ ಮಾಡಿದಂತೆಯೇ ಆಗುತ್ತದೆ. ಒಮ್ಮೆ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿಸದೇ ಹೋದ ವ್ಯಕ್ತಿ ಅಥವಾ ಸಂಸ್ಥೆ ಸಾಲ ಪಡೆಯಲು ಅನರ್ಹ ಎಂದೇ ಅರ್ಥ. ಅಂತಹವರಿಗೆ ಯಾವುದೇ ಬ್ಯಾಂಕಿನಲ್ಲಿ ಸಾಲ ಕೊಡುವಂತಿಲ್ಲ. ಆದರೂ, ಅಂತಹ ಸುಸ್ತಿದಾರ ಉದ್ಯಮಿಗಳಿಗೆ ಬ್ಯಾಂಕುಗಳು ಮತ್ತೆ ಮತ್ತೆ ಸಾಲ ಕೊಡುತ್ತಲೇ ಬಂದಿವೆ. ಮತ್ತೆ ಆ ಸಾಲವನ್ನು ಎನ್ ಪಿ ಎ (ವಸೂಲಾಗದ ಸಾಲದ ಪ್ರಮಾಣ) ಲೆಕ್ಕಕ್ಕೆ ಸೇರಿಸುತ್ತಾರೆ. ನಂತರ ಅದನ್ನು ರೈಟ್ ಆಫ್ ಮಾಡುವ ಮೂಲಕ ಸಾಲದ ಖಾತೆಯನ್ನೇ ರದ್ದುಪಡಿಸುತ್ತಾರೆ. ನಂತರ ಆ ವಸೂಲಾಗದ ಸಾಲವನ್ನು ‘ವಸೂಲಾತಿ ಬಾಕಿ ಇರುವ ಮುಂಗಡ’ (AUCA) ಖಾತೆಗೆ ಬದಲಾಯಿಸುತ್ತಾರೆ. ಈ ಎಲ್ಲಾ ಕ್ರಿಯೆಗಳಲ್ಲಿ ಎನ್ ಪಿ ಎ ಮೊತ್ತ ಕಡಿಮೆ ತೋರಿಸುವ ಉದ್ದೇಶ ಇದೆ. ಅಂದರೆ ವಸೂಲಾಗದ ಸಾಲದ ಮೊತ್ತವನ್ನು ಮರೆಮಾಚಲಾಗುತ್ತದೆ. ಸಾಲ ಪಡೆದ ಉದ್ಯಮಿಯೊಬ್ಬ ಯಾವ ಉದ್ಯಮದ ಹೆಸರಿನಲ್ಲಿ ಸಾಲ ಪಡೆದಿರುತ್ತಾನೋ, ಆ ಉದ್ಯಮ ನಷ್ಟಕ್ಕೊಳ್ಳಪಟ್ಟರೆ, (ಹಲವು ಬಾರಿ ಉದ್ದೇಶ ಪೂರ್ವಕವಾಗಿ ಸಾಲ ಪಡೆದ ಉದ್ಯಮ ನಷ್ಟಕ್ಕೆ ಒಳಗಾಗಿದೆ ಎಂಬಂತೆ ತೋರಿಸುತ್ತಾರೆ. ಬ್ಯಾಂಕ್ ಸಾಲ ಪಡೆಯಲೆಂದೇ ಸೃಷ್ಟಿಯಾದ ದಾಖಲೆಗಳಲ್ಲಿ ಮಾತ್ರ ಇರುವ ನಕಲಿ ಉದ್ಯಮಗಳೂ ಇವೆ. ಈ ವ್ಯವಹಾರಗಳಲ್ಲಿ ಭ್ರಷ್ಟ ರಾಜಕಾರಣಿಗಳು ಮತ್ತು ಹಿರಿಯ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುತ್ತಾರೆ). ಸಾಲ ಪಡೆದವರ ಇನ್ನಿತರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಬ್ಯಾಂಕುಗಳಿಗೆ ಇದೆ. ಆದರೆ, ಬ್ಯಾಂಕುಗಳು ಅಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲ. ಇದಕ್ಕೆ ಕಾರಣ, ಸರ್ಕಾರ ಅಂತಹ ಸುಸ್ತಿದಾರರ ಪರವಾಗಿರುತ್ತದೆ. ಬೆಳೆಸಾಲ ಪಡೆದ ರೈತನೊಬ್ಬ ಬೆಳೆನಷ್ಟವಾಗಿ ಸಾಲ ಮರುಪಾವತಿ ಮಾಡದಿದ್ದರೆ, ಆ ರೈತನ ಮನೆಯಲ್ಲಿನ ವಸ್ತುಗಳನ್ನು ಜಪ್ತಿಮಾಡುತ್ತಾರೆ. ಅಂತದೇ ಕ್ರಮ ದೊಡ್ಡ ಬಂಡವಾಳ ಹೊಂದಿರುವ ಸುಸ್ತಿದಾರರ ವಿರುದ್ದ ಇಲ್ಲ.
ಕೇಂದ್ರ ಸರ್ಕಾರದಿಂದ 7 ವರ್ಷಗಳಲ್ಲಿ ಬ್ಯಾಂಕುಗಳಿಗೆ 3 ಲಕ್ಷ ಕೋಟಿ ನೆರವು
ಎನ್ ಪಿ ಎ, ರೈಟ್ ಆಫ್, ಸಾಲ ಮನ್ನಾ ಕಾರಣದಿಂದ ಬ್ಯಾಂಕುಗಳು ದಿವಾಳಿ ಆಗುವುದನ್ನು ತಡೆಯಲು 2020-21 ರವರೆಗಿನ 13 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 4,05,000 ಕೋಟಿ ರೂಪಾಯಿಗಳನ್ನು ತುಂಬಿದೆ. ಮೋದಿ ಅಧಿಕಾರಕ್ಕೆ ಬಂದ ನಂತರದ ಏಳು ವರ್ಷಗಳಲ್ಲಿ PSU ಬ್ಯಾಂಕುಗಳಿಗೆ 3,42,990 ಕೋಟಿ ನೆರವು ನೀಡಲಾಗಿದೆ.
ಸಂಸತ್ತಿಗೆ 2019ರ ಜುಲೈ ತಿಂಗಳಲ್ಲಿ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ಸರ್ಕಾರಿ ಒಡೆತನದ ಬ್ಯಾಂಕುಗಳ ಬಂಡವಾಳದ ಅಗತ್ಯತೆಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತ ‘ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳ ಪ್ರಕಾರ, ಭಾರತದಲ್ಲಿನ ಬ್ಯಾಂಕುಗಳು ಕನಿಷ್ಠ ಬಂಡವಾಳದಿಂದ ಅಪಾಯದ ತೂಕದ ಆಸ್ತಿ ಅನುಪಾತವನ್ನು ಶೇ. 9 ರಷ್ಟು ನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದ್ದರು.
ಸಾಲ ಕೊಡು, ಮನ್ನಾ ಮಾಡು…
ಸಾಲ ಮನ್ನಾ ಮಾಡುವ ಉದ್ದೇಶ ಮೋದಿ ಸರ್ಕಾರಕ್ಕೆ ಇಲ್ಲ ಎನ್ನುವುದಾದರೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಸುಸ್ತಿದಾರರ ಹೆಸರು ಬಹಿರಂಗ ಪಡಿಸಲು ನಿರಾಕರಿಸುತ್ತಿರುವುದೇಕೆ? ಜನರಿಗೆ ಈ ಸತ್ಯ ತಿಳಿಯಬೇಕಿದೆ. ಸಾಲ ಕೊಡು, ಮನ್ನಾ ಮಾಡು, ಅದರ ನಷ್ಟ ತುಂಬಿಕೊಳ್ಳಲು ಸರ್ಕಾರದ ಹಣ ಕೊಡು. ಇದೇ ಆಳುವವರ ಇಂದಿನ ನೀತಿಯಾಗಿದೆ. ಇದು ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ(NPA)ವನ್ನು ತಗ್ಗಿಸಿ ಆರ್ಥಿಕ ಪ್ರಗತಿ ಮತ್ತು ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲೆ ಹೇಳುತ್ತಾರೆ. ಬ್ಯಾಂಕುಗಳೂ ತಮಗೆ ಬರುವ ಲಾಭದ ಬಹುಪಾಲನ್ನು ಈ ನಷ್ಟ ತುಂಬಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿವೆ. ಬ್ಯಾಂಕುಗಳ ಅಯ-ವ್ಯಯ ವರದಿಗಳನ್ನು ನೋಡಿದಾಗ, ವಸೂಲಾಗದ ಸಾಲದ ಪ್ರಮಾಣ ತಗ್ಗಿಸಲು ಬ್ಯಾಂಕುಗಳು ತಮ್ಮ ಆದಾಯದ ಬಹುಪಾಲು ಹಣವನ್ನು ಮೀಸಲಿಟ್ಟು ಅವುಗಳ ಆದಾಯ ಕುಂಠಿತಗೊಂಡ ಬಗ್ಗೆ ತಿಳಿಸಿವೆ.
ರೈಟ್ ಆಫ್ ಮಾಡಿದ ಒಟ್ಟು ಸಾಲದ ಶೇ. 14 ಮಾತ್ರ ವಸೂಲಿ
ಸಾಲ ವಸೂಲಿಗೆ ದಿಟ್ಟ ಕ್ರಮ ಕೈಗೊಂಡು ಬ್ಯಾಂಕುಗಳ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ, ಅಂತಹ ಸಾಲಗಳ ಲೆಕ್ಕವನ್ನು NPA ಕಡತದಿಂದ ಅಳಿಸಿ ಹಾಕುವಂತೆ (ರೈಟ್ ಆಫ್) ಬ್ಯಾಂಕುಗಳಿಗೆ ಸೂಚಿಸುತ್ತದೆ. ಸಾಲ ವಸೂಲಿ ಪ್ರಶ್ನೆ ಬಂದಾಗ ಬಿಜೆಪಿಯವರು ವಿಜಯ್ ಮಲ್ಯರ ಸಾಲ ವಸೂಲಿಗೆ ತೆಗೆದು ಕೊಂಡ ಕ್ರಮಗಳ ಕಡೆಗೆ ಬೆರಳು ತೋರಿಸುತ್ತಾರೆ. ರೈಟ್ ಆಫ್ ಮಾಡಿದ ಒಟ್ಟು ಸಾಲದ ಶೇ. 14 ರಷ್ಟು ಮಾತ್ರ ವಸೂಲಿ ಆಗಿರುವ ವರದಿಗಳಿವೆ. ರೈಟ್ ಆಫ್ ನಿಂದ ಬ್ಯಾಂಕುಗಳಿಗೆ ಆಗುವ ನಷ್ಟದ ಸ್ವಲ್ಪಪಾಲನ್ನು ತುಂಬಿಕೊಡಲು ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಬ್ಯಾಂಕುಗಳು ತನ್ನ ಗ್ರಾಹಕರಿಂದ ಹೊಸ ಹೊಸ ಶುಲ್ಕಗಳನ್ನು ಹೇರುವ ಮೂಲಕವೂ ಇದರ ನಷ್ಟ ತುಂಬಿಕೊಳ್ಳಲು ಮುಂದಾಗಿ, ಗ್ರಾಹಕರನ್ನು ಸುಲಿಗೆ ಮಾಡತೊಡಗಿವೆ. ಸರ್ಕಾರದ ಈ ಕೊಡುಗೆಯ ಹಣದಲ್ಲಿ ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟದಿಂದ ಸಂಗ್ರಹಿಸಿದ ಹಣವೂ ಇದೆ. (ಷೇರು ಖರೀದಿಸುವವರೂ ಅದೇ ವಂಚಕ ಖಾಸಗಿ ಉದ್ಯಮಪತಿಗಳೆ). ಅಂದರೆ, ಶ್ರೀಮಂತ ಉದ್ಯಮಪತಿಗಳು ಮಾಡಿದ ಸಾಲ ತೀರಿಸಲು ಸಾರ್ವಜನಿಕರ ಆಸ್ತಿ ಮಾರುತ್ತಾರೆ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಾರೆ ಎಂದಾಯಿತು. ಇಂಥ ವಂಚಕರು ಸಾಲ ಪಡೆದು ಉದ್ದೇಶ ಪೂರ್ವಕವಾಗಿ ಹಿಂತಿರುಗಿಸುತ್ತಿಲ್ಲ. ಮಾತ್ರವಲ್ಲ, ಮತ್ತೆ ಮತ್ತೆ ಸಾಲ ಪಡೆಯುತ್ತಲೇ ಇದ್ದಾರೆ. ಇವರು ದುರುದ್ದೇಶದಿಂದಲೇ ಬ್ಯಾಂಕುಗಳಿಗೆ ಸರಿಯಾದ ಭದ್ರತೆಯನ್ನೂ ಕೊಡದೆ ಸಾಲ ಪಡೆಯುತ್ತಾರೆ. ಈ ಕಾರಣದಿಂದ ಸಾಲ ವಸೂಲಿಗೆ ಅವರ ಇತರೆ ಆಸ್ತಿ ಜಪ್ತಿಮಾಡಲೂ ಕಾನೂನಿನ ತೊಡಕಾಗುವಂತೆ ನೋಡಿಕೊಳ್ಳುತ್ತಾರೆ.
ಜನತೆ ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ, ಎಲ್ಲಾ ಸಾರ್ವಜನಿಕ ಆಸ್ತಿಗಳನ್ನು ಈ ಕೆಲವೇ ವಂಚಕ ಶ್ರೀಮಂತ ಕುಳಗಳು ತಮ್ಮ ವಶಕ್ಕೆ ಪಡೆಯುತ್ತವೆ. ಮೋದಿ ಸರ್ಕಾರ ವಂಚಕ ಉದ್ಯಮಿಗಳ ಹೆಸರು ಬಹಿರಂಗ ಪಡಿಸುತ್ತದೆ ಎಂಬ ನಂಬಿಕೆಯಂತೂ ಇಲ್ಲ. ತಮ್ಮ ಪೋಷಕರನ್ನು ಶಿಕ್ಷೆಗೆ ಗುರಿಪಡಿಸಲು, ಅವರಿಗೆ ನಷ್ಟ ಆಗುವಂತಹ ಕೆಲಸಗಳನ್ನು RSS ಮತ್ತದರ ನಿಷ್ಠಾವಂತ ಸ್ವಯಂ ಸೇವಕ ಮೋದಿ ಎಂದೂ ಮಾಡುವುದಿಲ್ಲ. ಆದೇಶ ಕೊಟ್ಟ ನ್ಯಾಯಾಧೀಶರ ವರ್ಗಾವಣೆ ನಡೆಯುತ್ತದೆ, ಆದೇಶ ನೀಡಿದ ಮಾಹಿತಿ ಹಕ್ಕು ಆಯೋಗದ ಅಧಿಕಾರಿಗಳ ಎತ್ತಂಗಡಿ ಆಗುತ್ತದೆ.
ನಿಮ್ಮ ಟಿಪ್ಪಣಿ ಬರೆಯಿರಿ