ಪಿಎಂ ಫಸಲ್ ಭೀಮಾ ಯೋಜನೆ: ರೈತರಿಗಿಂತ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ

ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ರೂಪಿಸಿ ಜಾರಿಗೆ ತರಲಾದ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಒಂದು. ಕೃಷಿ ವಿಮಾ ಯೋಜನೆಯನ್ನು ಖಾಸಗಿ ವಿಮಾ ಕಂಪನಿಗಳಿಗೂ ತೆರೆದಿಟ್ಟಿದೆ. ಈ ಯೋಜನೆ ರೈತರ ಲಾಭಕ್ಕಿಂತ ಖಾಸಗಿ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ. ದಾಖಲೆಗಳ ಮೇಲಷ್ಟೇ ಈ ಯೋಜನೆಯು ರೈತ ಸ್ನೇಹಿ ಎಂಬ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಆದರೆ ವಾಸ್ತವದಲ್ಲಿ ಆ ರೀತಿಯಲ್ಲಿ ಇಲ್ಲ. ಇತ್ಯರ್ಥ/ಹಕ್ಕುಗಳ ಸ್ವೀಕೃತಿಯಲ್ಲಿ ವಿಳಂಬ ಮತ್ತು ತಾಂತ್ರಿಕ ದೋಷಗಳಂತಹ ಅನೇಕ ಸಮಸ್ಯೆಗಳನ್ನು ರೈತರು ನಿರಂತರವಾಗಿ ಎದುರಿಸುತ್ತಿದ್ದಾರೆ.

18 ಫೆಬ್ರವರಿ 2016 ರಂದು ಬಹಳಷ್ಟು ಪರಿಷ್ಕರಣೆಗಳು ಮತ್ತು ಭರವಸೆಯೊಂದಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)ಯನ್ನು ಪ್ರಾರಂಭಿಸಲಾಯಿತು. ಬೆಳೆ ನಷ್ಟದ ಸಂದರ್ಭದಲ್ಲಿ ಪರಿಹಾರದ ಭರವಸೆಯೊಂದಿಗೆ ದೇಶದ ಅರ್ಧದಷ್ಟು ರೈತರನ್ನು ಗುರಿಯಾಗಿಸಲು PMFBY ಅನ್ನು ರಚಿಸಲಾಗಿದೆ ಎಂದು ಹೇಳಲಾಗಿದೆಯಾದರೂ, ಹಲವು ಕಠಿಣ ನಿಯಮಗಳ ಮೂಲಕ ಬಹಳಷ್ಟು ರೈತರನ್ನು ಇದರಿಂದ ಹೊರಗಿಡಲಾಗಿದೆ.

ಹಳೆಯ ಯೋಜನೆಗಳಿಗೆ ಹೊಸ ಹೆಸರು

ಭಾರತದಲ್ಲಿ ಕೃಷಿ ವಿಮೆ ಹೊಸದೇನಲ್ಲ. ಇದಕ್ಕೂ ಮೊದಲೂ ಬೆಳೆ ವಿಮೆ ಇತ್ತು. ಅದರಲ್ಲಿ ಎರಡು  ಯೋಜನೆಗಳೆಂದರೆ, ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎನ್‌ಎಐಎಸ್) ಮತ್ತು ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎಂಎನ್‌ಎಐಎಸ್). ಈ ಯೋಜನೆಗಳಿಗೆ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ ಎಂಬ ಹೊಸ ಹೆಸರಿಟ್ಟು,  ಅವುಗಳ ಅಂತರ್ಗತ ನ್ಯೂನತೆಗಳನ್ನು ತೆಗೆದುಹಾಕುವ ಮೂಲಕ ಒಂದು ದೇಶ- ಒಂದು ಯೋಜನೆಯ ವಿಷಯಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ಯೋಜನೆಯನ್ನು ರೂಪಿಸಿದಾಗ ‘ಇದು ರೈತರ ಮೇಲಿನ ಪ್ರೀಮಿಯಂ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಮತ್ತು ಸಂಪೂರ್ಣ ವಿಮಾ ಮೊತ್ತಕ್ಕೆ ಬೆಳೆ ಭರವಸೆಯ ಕ್ಲೈಮ್‌ನ ಆರಂಭಿಕ ಇತ್ಯರ್ಥವನ್ನು ಖಚಿತಪಡಿಸುತ್ತದೆ’ ಎಂದು ಸರ್ಕಾರ ಹೇಳಿತ್ತಾದರೂ, ರೈತರ ಅನುಕೂಲಕ್ಕಿಂತ ವಿಮಾ ಕಂಪನಿಗಳಿಗೆ ಹೆಚ್ಚಿನ ಲಾಭವಾಗಿದೆ.

GIC ಬೆಳೆ ವಿಮಾ ಯೋಜನೆ

1972-73 ರಿಂದ ಭಾರತದ ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ (GIC) ಬೆಳೆ ವಿಮಾ ಯೋಜನೆಯನ್ನು ಪರಿಚಯಿಸಿದಾಗ ಸೀಮಿತ, ತಾತ್ಕಾಲಿಕ ಮತ್ತು ಚದುರಿದ ಪ್ರಮಾಣದಲ್ಲಿ ಕೃಷಿ ವಿಮೆಯ ವಿವಿಧ ರೂಪಗಳ ಪ್ರಯೋಗಗಳನ್ನು ಪ್ರಾರಂಭಿಸಲಾಯಿತು. H- 4 ಹತ್ತಿ ಮತ್ತು ನಂತರ ಕಡಲೆಕಾಯಿ, ಗೋಧಿ ಮತ್ತು ಆಲೂಗಡ್ಡೆಯನ್ನು ಒಳಗೊಂಡಿತ್ತು. ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದು 1978-79 ರವರೆಗೆ ಮುಂದುವರೆಯಿತು.

ರಾಷ್ಟ್ರೀಯ ಕೃಷಿ ವಿಮಾ ಯೋಜನೆ

1979-1984 ರವರೆಗೆ ಪೈಲಟ್ ಬೆಳೆ ವಿಮಾ ಯೋಜನೆ (PCIS) ಇತ್ತು. 1985 ರಲ್ಲಿ ಪ್ರಾರಂಭಿಸಲಾದ ಸಮಗ್ರ ಬೆಳೆ ವಿಮಾ ಯೋಜನೆ (CCIS) ಮೊದಲ ರಾಷ್ಟ್ರವ್ಯಾಪಿ ಯೋಜನೆಯಾಗಿತ್ತು. ಹಿಂದಿನ ಸಮಗ್ರ ಬೆಳೆ ವಿಮಾ ಯೋಜನೆ ಬದಲಿಗೆ ರೈತರು, ಬೆಳೆಗಳು ಮತ್ತು ಅಪಾಯದ ಬದ್ಧತೆಯ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯೊಂದಿಗೆ 1999-2000 ರಿಂದ ದೇಶದಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (NAIS) ಪರಿಚಯಿಸಲಾಯಿತು. ಈ ಯೋಜನೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಐಚ್ಛಿಕವಾಗಿತ್ತು ಮತ್ತು ಇದನ್ನು 25 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳು ಒಂದು ಅಥವಾ ಹೆಚ್ಚಿನ ಋತುಗಳಲ್ಲಿ ಜಾರಿಗೆ ತಂದಿವೆ. ಯೋಜನೆಯ ಪ್ರಾರಂಭದಿಂದ 2012-13 ರವರೆಗೆ 2084.78 ಲಕ್ಷ ರೈತರು, 3137.70 ಲಕ್ಷ ಹೆಕ್ಟೇರ್ ವಿಸ್ತೀರ್ಣಕ್ಕೆ ವಿಮೆ ಮಾಡಿಸಿದ್ದರು. ಒಟ್ಟು 25,37,558 ಲಕ್ಷ ರೂಗಳಿಗೆ, ವಿಮೆ ಮಾಡಲಾದ ಒಟ್ಟು ಮೊತ್ತ 8,67,121 ಲಕ್ಷ ರೂ. ಆಗಿತ್ತು.

ನಂತರ ಕೃಷಿ ವಿಮೆಯನ್ನು ಇನ್ನಷ್ಟು ಸುಧಾರಿಸಲು ಮತ್ತು ಯೋಜನೆಯನ್ನು ಸುಲಭಗೊಳಿಸಲು ಮತ್ತು ಹೆಚ್ಚು ರೈತ ಸ್ನೇಹಿ ಮಾಡಲು,  ‘ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ’ (MNAIS) ತರಲಾಯಿತು.

ಸಬ್ಸಿಡಿ ಇಲ್ಲದ ಹಳೆಯ ಯೋಜನೆಗಳು 

ಫಸಲ್ ಭೀಮಾ ಯೋಜನೆಗೂ ಹಿಂದಿನವು ಕ್ಲೈಮ್ ಆಧಾರಿತ ವಿಮಾ ಯೋಜನೆಗಳಾಗಿದ್ದವು. ಯೋಜನೆಗಳಲ್ಲಿ ರೈತರೇ ಸಂಪೂರ್ಣ ಪ್ರೀಮಿಯಂ ಹಣ ತುಂಬುತ್ತಿದ್ದರು. ಈ ಪ್ರೀಮಿಯಂಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸಬ್ಸಿಡಿ ಕೊಡುತ್ತಿರಲಿಲ್ಲ. ನ್ಯಾಷನಲ್ ಅಗ್ರಿಕಲ್ಚರ್ ಇನ್ಸುರೆನ್ಸ್ ಸ್ಕೀಂ (NAIS) ಸರ್ಕಾರದ ಅನುದಾನಿತ ವಿಮಾ ಕಂಪನಿ ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾದಿಂದ ಬೆಂಬಲಿತವಾಗಿದೆ. ಇದು ಯಾವುದೇ ಸಬ್ಸಿಡಿ ಇಲ್ಲದೆ ರೈತರಿಂದ ಪ್ರೀಮಿಯಂಗಳನ್ನು ಸಂಗ್ರಹಿಸಿ ನಂತರ ಋತುವಿನ ಕೊನೆಯಲ್ಲಿ ಕ್ಲೈಮ್ಗಳನ್ನು ಪಾವತಿಸಲು ಹಣವನ್ನು ಬಳಸುತ್ತಿತ್ತು. ಆದರೆ, ಈಗಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯು (PMFBY) ಪ್ರೀಮಿಯಂ-ಆಧಾರಿತ ವ್ಯವಸ್ಥೆಯಲ್ಲಿ ಸಬ್ಸಿಡಿಗಳನ್ನು ಅನುಮತಿಸುತ್ತದೆ. ಇದನ್ನು ಆಯ್ದ ವಿಮಾ ಕಂಪನಿಗಳು, ಕೃಷಿ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಬಹು-ಏಜೆನ್ಸಿ ಚೌಕಟ್ಟಿನ ಮೂಲಕ ವಿವಿಧ ಹಣಕಾಸು ಬ್ಯಾಂಕುಗಳ ಸಮನ್ವಯದೊಂದಿಗೆ ಕಾರ್ಯಗತಗೊಳಿಸಲಾಗುತ್ತದೆ.

ಪ್ರೀಮಿಯಂನ ಹಣದಲ್ಲಿ ರಾಜ್ಯಗಳ ಪಾಲೂ ಇದೆ

ಫಸಲ್ ಭೀಮಾ ಯೋಜನೆಯ ಕುರಿತು ಹೀಗೆ ಹೇಳಲಾಗಿದೆ: ಬರ, ಪ್ರವಾಹ, ಕೀಟ ಮತ್ತು ರೋಗಗಳ ದಾಳಿಯಂತಹ ತಡೆಗಟ್ಟಲಾಗದ ಅಪಾಯಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ PMFBY ರೈತರಿಗೆ ಪರಿಹಾರವನ್ನು ನೀಡುತ್ತದೆ, ವಿಮೆ ಮಾಡಿದ ಕ್ಲಸ್ಟರ್‌ಗಳಿಗೆ ಪ್ರೀಮಿಯಂಗಳನ್ನು ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಕಂಡುಹಿಡಿಯಲಾಗುತ್ತದೆ. ರೈತರು ಶೇ.1.5 ರಿಂದ 2 ರಷ್ಟು ನಾಮಮಾತ್ರದ ಪ್ರೀಮಿಯಂ ಪಾವತಿಗಳನ್ನು ಮಾಡುತ್ತಾರೆ. ಇನ್ನುಳಿದ ಬಹುಭಾಗ ಪ್ರೀಮಿಯಂ ಸಬ್ಸಿಡಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ರಂತೆ ತುಂಬುತ್ತವೆ. ಈಶಾನ್ಯ ರಾಜ್ಯಗಳಿಗೆ ಇದು 90:10 ರಷ್ಟಿದೆ. ಈ ಬೆಳೆ ವಿಮಾ ಯೋಜನೆಯು ‘ಒಂದು ರಾಷ್ಟ್ರ, ಒಂದು ಯೋಜನೆ’ ಥೀಮ್‌ಗೆ ಅನುಗುಣವಾಗಿದೆ.

ಭಾಗಹಿಸುವ ರೈತರ ಸಂಖ್ಯೆ ಕುಸಿತ

ಅನಿರೀಕ್ಷಿತ ಮುಂಗಾರು, ಅಕಾಲಿಕ ಮಳೆ, ಬರ ಮತ್ತು ಇತರ ತಡೆಗಟ್ಟಲಾಗದ ಅಪಾಯಗಳನ್ನು ಎದುರಿಸುತ್ತಿರುವ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಬಹಳಷ್ಟು ಸಹಕಾರಿಯಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ನಿಜವಾದ ಚಿತ್ರಣ ಬೇರೆಯದನ್ನೇ ಹೇಳುತ್ತದೆ. ಈ ಯೋಜನೆ ರೈತರಿಗೆ ಅನುಕೂಲಕರವಾಗಿಲ್ಲ ಎಂಬುದಕ್ಕೆ ಈ ಯೋಜನೆಗೆ ಭಾಗವಹಿಸುವ ರೈತರ ಸಂಖ್ಯೆ ಮತ್ತು ಭೂಮಿ ವ್ಯಾಪ್ತಿ ಕುಗ್ಗುತ್ತಿರುವುದೇ ಸಾಕ್ಷಿಯಾಗಿದೆ. ಅಶೋಕ್ ದಳವಾಯಿ ನೇತೃತ್ವದ ತಜ್ಞರ ಸಮಿತಿಯು ಗಮನಿಸುರುವಂತೆ, ಯೋಜನೆ ಜಾರಿಗೊಂಡ ಏಳು ವರ್ಷಗಳ ನಂತರ ಅದರ ಪ್ರಾರಂಭ ಮತ್ತು ಬಹು ಕೂಲಂಕುಷ ಪರೀಕ್ಷೆಗಳ ನಂತರ, ಬೆಳೆ ವಿಮೆಗಾಗಿ ಭಾರತದ ಪ್ರಮುಖ ಯೋಜನೆಯಾದ PMFBY ಅದರ ಉದ್ದೇಶಗಳನ್ನು ತಲುಪಿಸಲು ಹೆಚ್ಚಾಗಿ ವಿಫಲವಾಗಿದೆ. 2016 ಮತ್ತು 2021 ರ ನಡುವೆ, ಆರಂಭದಲ್ಲಿ 3.62 ಕೋಟಿ ರೈತರು PMFBY ಭಾಗವಹಿಸಿದ್ದರೆ, ಏಳು ವರ್ಷಗಳ ನಂತರ 2.48 ಕೋಟಿ ರೈತರು ಭಾಗವಹಿಸಿದ್ದರು. 1.14 ರೈತರು ಇದರಿಂದ ದೂರವಾಗಿದ್ದರು. ಪ್ರಾರಂಭದಲ್ಲಿ 22 ರಾಜ್ಯಗಳು ಭಾಗವಹಿಸಿದ್ದರೆ, 7 ವರ್ಷಗಳ ನಂತರ 19 ರಾಜ್ಯಗಳಿಗೆ ಕುಸಿಯಿತು. ಪ್ರಾರಂಭದಲ್ಲಿ 4.74 ಕೋಟಿ ಹೆಕ್ಟೇರ್ ವ್ಯಾಪ್ತಿಗೆ ವಿಮೆ ಮಾಡಿಸಿದ್ದರೆ, 7 ವರ್ಷಗಳ ನಂತರ ಇದು 3.87 ಲಕ್ಷಕ್ಕೆ ಕುಗ್ಗಿತು ಎಂದು ಈ ವರದಿ ತೋರಿಸಿದೆ.  ಪ್ರೀಮಿಯಂಗಳಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ಇದರಲ್ಲಿ ಭಾಗವಹಿಸುವ ರೈತರ ಸಂಖ್ಯೆ ಮತ್ತು ಭೂವ್ಯಾಪ್ತಿ ಕುಸಿದಿದೆ.

ಆರಂಭದಲ್ಲಿ ಕೃಷಿ ಸಾಲ ಪಡೆಯುವ ರೈತರಿಗೆ ಕಡ್ಡಾಯವಾಗಿದ್ದ ಫಸಲ್ ಭೀಮಾ ಯೋಜನೆಯನ್ನು ಹಲವು ಟೀಕೆಗಳ ನಂತರ 2020 ರಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರೈತರಿಗೆ (ಸಾಲ ಪಡೆದವರು ಮತ್ತು ಸಾಲ ಪಡೆಯದವರಿಗೆ) ಐಚ್ಛಿಕವನ್ನಾಗಿ ಮಾಡಲು ಬದಲಾಯಿಸಿತು.

ಈ ಕಾರಣದಿಂದಾಗಿ 2023ರ ಖಾರಿಫ್ ಋತುವಿನಲ್ಲಿ ರೈತರ ದಾಖಲಾತಿ 2.5 ಕೋಟಿಗೆ ತಲುಪುವುದರೊಂದಿಗೆ ಮತ್ತೆ ವೇಗವನ್ನು ಪಡೆದುಕೊಂಡಿದೆ. ಇದರಲ್ಲಿ ಸುಮಾರು 1.11 ಲಕ್ಷ (ಶೇ.  44.5) ರೈತರು ಸಾಲ ಪಡೆದಿಲ್ಲ. ಒಟ್ಟು ದಾಖಲಾತಿಯು 2018 ರಿಂದ ಅತ್ಯಧಿಕವಾಗಿದೆ ಎಂದು ಡೇಟಾ ತೋರಿಸಿದೆ. ಹಿಂದಿನ ಖಾರಿಫ್ ಋತುವಿನಲ್ಲಿ, ಸುಮಾರು 2.4 ಕೋಟಿ ರೈತರು PMFBY ಅನ್ನು ಆರಿಸಿಕೊಂಡರು. ಅದರಲ್ಲಿ ಸುಮಾರು ಶೇ. 42 ರಷ್ಟು ಜನರು ಸಾಲ ಪಡೆಯದವರಾಗಿದ್ದರು. PMFBY ಅಡಿಯಲ್ಲಿ ಸಾಲ ಪಡೆಯದ ರೈತರ ಸಂಖ್ಯೆಯಲ್ಲಿ ಹೆಚ್ಚಳವು ಸ್ವಯಂಪ್ರೇರಿತ ಸ್ವೀಕಾರದ ಸೂಚಕವಾಗಿದೆ. (ಬಿಸಿನೆಸ್ ಸ್ಟ್ಯಾಂಡರ್ಡ್- ಸೆಪ್ಟೆಂಬರ್ 2023). ಆದರೂ, ರೈತರಿಗೆ ಇದು ಹೆಚ್ಚೇನೂ ಸಹಕಾರಿಯಾಗುತ್ತಿಲ್ಲ.

 ಖಾಸಗಿ ವಲಯದ ವಿಮಾ ಸಂಸ್ಥೆಗಳಿಂದ ವಂಚನೆ

‘ಬೆಳೆ ವಿಮಾ ಆ್ಯಪ್’ ಬಳಸಿ ಬೆಳೆ ನಷ್ಟದ ವರದಿ ಮಾಡುವ ಪ್ರಕ್ರಿಯೆ ರೈತರಿಗೆ ದುಸ್ವಪ್ನವಾಗಿ ಪರಿಣಮಿಸಿದೆ. ಕೆಲವು ತಾಂತ್ರಿಕ ದೋಷಗಳ ಜೊತೆಗೆ, ಪಿಎಂಎಫ್ಬಿವೈ ಅಡಿಯಲ್ಲಿ, ಬೆಳೆ ಹಾನಿಯ ಬಗ್ಗೆ ತಿಳಿಸಲು 72 ಗಂಟೆಗಳ ಒಳಗೆ ವಿಮಾ ಸಂಸ್ಥೆಗಳಿಗೆ ಕರೆ ಮಾಡುವ ಜವಾಬ್ದಾರಿಯು ವಿಮಾದಾರ ರೈತರ ಮೇಲಿರುತ್ತದೆ. ಇಲ್ಲದಿದ್ದರೆ ಅವರು ಬೆಳೆ ವಿಮೆಯ ಪ್ರಯೋಜನವನ್ನು ಪಡೆಯುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಸಲ್ಲಿಸಿದ ಸುಮಾರು ಶೇ. 90 ರಷ್ಟು ಕ್ಲೈಮ್ ಗಳನ್ನು ಇತ್ಯರ್ಥಪಡಿಸಿವೆ ಎಂದು ವರದಿಯಾಗಿದೆ. ಆದರೆ ಖಾಸಗಿ ವಲಯದ ವಿಮಾ ಸಂಸ್ಥೆಗಳು ಕ್ಲೈಮ್ ಗಳ ಇತ್ಯರ್ಥದಲ್ಲಿ ಬಹಳ ಹಿಂದುಳಿದಿವೆ. ವಿಮಾ ಕಂಪನಿಗಳು ಲಾಭದ ಲೆಕ್ಕಾಚಾರದಲ್ಲಿ ಇರುತ್ತವೆ ಮತ್ತು ಭ್ರಷ್ಟಾಚಾರದ ಮೂಲಕ ಲಾಭ ಗಳಿಸಲು ಮುಂದಾಗುತ್ತವೆ. ಈ ಕಾರಣದಿಂದಾಗಿ ಕುಶಲತೆಗೆ ಒಳಗಾಗುವ ಸ್ಥಳೀಯ ಮಟ್ಟದಲ್ಲಿ ಬೆಳೆ ಇಳುವರಿ ಅಂದಾಜಿಸಲು ಅನೇಕ ರಾಜ್ಯಗಳು ಇನ್ನೂ ಬೆಳೆ ಕತ್ತರಿಸುವ ಪ್ರಯೋಗಗಳನ್ನು ಬಳಸುತ್ತವೆ. ಇದರಿಂದ ರೈತರು ವಿಮಾ ಪ್ರಯೋಜನಗಳಿಂದ ವಂಚಿತವಾಗಿದ್ದಾರೆ.

Is this your new site? Log in to activate admin features and dismiss this message
ಲಾಗಿನ್