
ಬಿಜೆಪಿ ಪಕ್ಷಕ್ಕೆ ಹರಿದು ಬರುತ್ತಿರುವ ಚುನಾವಣಾ ನಿಧಿ ಎಷ್ಟು? ಆ ನಿಧಿಯ ಮೂಲ ಯಾವುದು? ಬಿಜೆಪಿ ಒಂದೆಡೆ ‘ಪಿಎಂ ಕೇರ್ ನಿಧಿ’ ಹೆಸರಿನಲ್ಲಿ ಸಂಗ್ರಹಿಸಿದ ಹಣ ಮತ್ತು ಅದನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುತ್ತದೆ. ಮತ್ತೊಂದಡೆ, ‘ಚುನಾವಾಣಾ ಬಾಂಡ್’ ಗಳ ಮೂಲಕ ಪಕ್ಷದ ನಿಧಿಗೆ ಯಾವ ಮೂಲದಿಂದ ಮತ್ತು ಎಷ್ಟು ಹಣ ಬಂದಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲು ನಿರಾಕರಿಸುತ್ತಿದೆ. ದೇಣಿಗೆ ಪಡೆಯುವ ಹಕ್ಕು ರಾಜಕೀಯ ಪಕ್ಷಗಳಿಗಿದ್ದರೆ, ಅದನ್ನು ಯಾರು ಕೊಟ್ಟರು ಎಂದು ತಿಳಿಯುವ ಹಕ್ಕು ದೇಶದ ಜನರಿಗಿಲ್ಲವೇ? ಅದನ್ನು ನಿರಾಕರಿಸುವುದು ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯಲ್ಲವೇ? ಪಕ್ಷದ ಚುನಾವಣಾ ನಿಧಿಗೆ ಯಾರಿಂದ ಎಷ್ಟು ಹಣ ಬಂದಿದೆ ಎಂದು ಹೇಳುವುದರಲ್ಲಿ ತಪ್ಪೇನು? ಈ ಸತ್ಯವನ್ನು ಹೇಳಿದರೆ ಮೋದಿ ಸರ್ಕಾರದ ಬಂಡವಾಳಶಾಹಿ ದರೋಡೆ ಮತ್ತು ಭ್ರಷ್ಟಾಚಾರದ ಷಡ್ಯಂತ್ರದ ಸತ್ಯ ಬಯಲಾಗುತ್ತದೆ ಎಂಬ ಭಯ ಬಿಜೆಪಿಗಿದೆ.
ನರೇಂದ್ರ ಮೋದಿ ಸರ್ಕಾರ ಜನವರಿ 2018 ರಲ್ಲಿ ಚುನಾವಣಾ ಬಾಂಡ್‌ಗಳನ್ನು ಜಾರಿಗೆ ತಂದಿತು. ಈ ಬಾಂಡ್‌ಗಳ ಹಿಂದಿನ ಪರಿಕಲ್ಪನೆಯು ರಾಜಕೀಯದಲ್ಲಿ ಕಪ್ಪು ಹಣದ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡಲು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಕಾನೂನು ಮತ್ತು ಪಾರದರ್ಶಕ ಕಾರ್ಯವಿಧಾನವನ್ನು ಒದಗಿಸುವುದು. ಒಟ್ಟಾರೆಯಾಗಿ, ದೇಶದಲ್ಲಿ ರಾಜಕೀಯ ನಿಧಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಎಲೆಕ್ಟೋರಲ್ ಬಾಂಡ್‌ಗಳ ಯೋಜನೆಯನ್ನು ಸರ್ಕಾರವು ಅಧಿಸೂಚಿಸಿದೆ ಎಂದು ಹೇಳಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಲ್ಲಿ ಈ ಬಾಂಡ್‌ಗಳನ್ನು 1,000, 10,000, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂಪಾಯಿ ಗುಣಕಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬ್ಯಾಂಕ್ ಖಾತೆಯಿಂದ ಪಾವತಿ ಮಾಡುವ ಮೂಲಕ ಮಾತ್ರ ಚುನಾವಣಾ ಬಾಂಡ್ ಗಳನ್ನು ಖರೀದಿಸಬಹುದು. ಆದರೆ, ದಾನಿಗಳ ಹೆಸರು, ಯಾರಿಗೆ ದೇಣಿಗೆ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಬಾಂಡ್ ಗಳಲ್ಲಿ ನಮೂದಿಸಬೇಕಾಗಿಲ್ಲ. ಒಬ್ಬ ವ್ಯಕ್ತಿ ಅಥವಾ ಕಂಪನಿಯು ಖರೀದಿಸಬಹುದಾದ ಚುನಾವಣಾ ಬಾಂಡ್ ಗಳ ಸಂಖ್ಯೆಗೆ ಯಾವುದೇ ಮಿತಿಯೂ ಇಲ್ಲ ಎಂದು ಹಣಕಾಸು ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಹೀಗಾಗಿ ಚುನಾವಣಾ ಬಾಂಡ್‌ಗಳನ್ನು ಅನಾಮಧೇಯ ಎಂದು ಹೇಳಲಾಗುತ್ತದೆ. ಯಾರು ಮತ್ತು ಎಷ್ಟು ಹಣವನ್ನು ರಾಜಕೀಯ ಪಕ್ಷಗಳಿಗೆ ಕೊಟ್ಟಿದ್ದಾರೆ ಎಂದು ತಿಳಿಯುವ ಹಕ್ಕು ಸಾರ್ವಜನಿಕರಿಗಿಲ್ಲ!! ಆದರೆ, ಕೋಟ್ಯಾಂತರ ರೂಪಾಯಿ ದೇಣಿಗೆ ನೀಡುವ ಕಾರ್ಪೊರೇಟ್ ದಾನಿಗಳಿಗೆ ಅನಾಮಧೇಯತೆಯನ್ನು ನೀಡುವ ಈ ಯೋಜನೆಯು, 2000 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡುವ ನಾಗರಿಕರು ತಮ್ಮ ಹೆಸರನ್ನು ಬಹಿರಂಗಪಡಿಸಬೇಕು ಎನ್ನುತ್ತದೆ!!
ಕಾರ್ಪೋರೇಟ್ ಗಳಿಂದ ರಾಜಕೀಯ ದೇಣಿಗೆ
2016 ಮತ್ತು 2017 ರ ಹಣಕಾಸು ಕಾಯ್ದೆಯ ಮೂಲಕ ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಲು ಸರ್ಕಾರವು ನಾಲ್ಕು ಕಾಯಿದೆಗಳಿಗೆ ತಿದ್ದುಪಡಿಗಳನ್ನು ತಂದಿತು. ಈ ಕಾಯಿದೆಗಳೆಂದರೆ 2016 ಮತ್ತು 2017 ರ ಹಣಕಾಸು ಕಾಯಿದೆಗಳ ಮೂಲಕ ಜನರ ಪ್ರಾತಿನಿಧ್ಯ ಕಾಯಿದೆ- 1951 (RPA), ಕಂಪನಿಗಳ ಕಾಯಿದೆ- 2013, ಆದಾಯ ತೆರಿಗೆ ಕಾಯಿದೆ-1961, ಮತ್ತು ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯಿದೆ- 2010 (FCRA).
ಯೋಜನೆಯನ್ನು ಪರಿಚಯಿಸುವ ಮೊದಲು ರಾಜಕೀಯ ಪಕ್ಷಗಳು 20,000 ರೂ.ಗಿಂತ ಹೆಚ್ಚಿನ ಎಲ್ಲಾ ದೇಣಿಗೆಗಳನ್ನು ಸಾರ್ವಜನಿಕವಾಗಿ ನೀಡಬೇಕಾಗಿತ್ತು. ಅಲ್ಲದೆ, ಯಾವುದೇ ಕಾರ್ಪೊರೇಟ್ ಕಂಪನಿಯು ತಮ್ಮ ಒಟ್ಟು ಲಾಭದ ಶೇ. 7.5 ಅಥವಾ ಆದಾಯದ ಶೇ. 10 ಕ್ಕಿಂತ ಹೆಚ್ಚಿನ ಮೊತ್ತವನ್ನು ದೇಣಿಗೆ ನೀಡಲು ಅನುಮತಿ ಇರಲಿಲ್ಲ.
ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ
ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕತೆ ಮತ್ತು ಕಾನೂನುಬದ್ಧತೆ ಮತ್ತು ಭಾರತೀಯ ಪ್ರಜಾಪ್ರಭುತ್ವಕ್ಕೆ ಒಡ್ಡುವ ಅಪಾಯದ ವಿರುದ್ಧ, ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್, ನಿಜಾಮ್ ಪಾಷಾ, ಕಪಿಲ್ ಸಿಬಲ್ ಅವರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, Common Cause ಹಾಗೂ CPI(M) -ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ)- 2017ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ನಾಲ್ಕು ವರ್ಷಗಳ ನಂತರ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅಕ್ಟೋಬರ್ 31 ರಂದು ವಿಚಾರಣೆಯನ್ನು ಆರಂಭಿಸಿದೆ.
ಸಿಪಿಐ(ಎಂ) ಪರ ವಾದ ಮಂಡಿಸಿದ ವಕೀಲ ಫರಸತ್ ಅವರು, ಚುನಾವಣಾ ಬಾಂಡ್‌ಗಳ ಯೋಜನೆಯು ಪ್ರಾಥಮಿಕವಾಗಿ ಕಪ್ಪುಹಣವನ್ನು ತಗ್ಗಿಸುವ ಗುರಿಯನ್ನು ಹೊಂದಿಲ್ಲ, ಬದಲಾಗಿ ಸಾಮಾನ್ಯ ಬ್ಯಾಂಕಿಂಗ್ ಚಾನೆಲ್‌ಗಳಿಂದ ಅನಾಮಧೇಯ ಧನಸಹಾಯವನ್ನು, ಅನಾಮಧೇಯ ಚುನಾವಣಾ ಬಾಂಡ್‌ಗಳಿಗೆ ಮರುಹೊಂದಿಸುವ ಗುರಿಯನ್ನು ಹೊಂದಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದರು. ಮುಂದುವರಿದು ಅವರು, ಈ ಯೋಜನೆಯನ್ನು “ಪರ್ಯಾಯ ಬಿಳಿ ಹಣದ ಚಾನಲ್” ಎಂದು ಕರೆದರು. ವಿಚಾರಣೆ ಇನ್ನೂ ಬಾಕಿ ಇದೆ.
ಪಾರದರ್ಶಕತೆ ಹೊಂದಿರುವ ಚುನಾವಣಾ ಟ್ರಸ್ಟ್‌ಗಳು
2013 ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಪರಿಚಯಿಸಿದ ಚುನಾವಣಾ ಟ್ರಸ್ಟ್‌ಗಳು ಚುನಾವಣಾ ಬಾಂಡ್‌ಗಳ ಯೋಜನೆಯಂತೆಯೇ ಕಾರ್ಯನಿರ್ವಹಿಸುತ್ತವೆ. ಇದು ಕಾರ್ಪೋರೇಟ್‌ಗಳು ಮತ್ತು ವ್ಯಕ್ತಿಗಳಿಂದ ರಾಜಕೀಯ ದೇಣಿಗೆಗಳನ್ನು ಪಡೆಯುವ ದಾರಿಯನ್ನು ಸುಗಮಗೊಳಿಸುತ್ತವೆ. ಆದರೆ ಚುನಾವಣಾ ಬಾಂಡ್ ಗಳಿಗಿಂತ ಇದು ಭಿನ್ನವಾಗಿದ್ದು, ಚುನಾವಣಾ ಆಯೋಗಕ್ಕೆ ವಾರ್ಷಿಕ ವರದಿಗಳನ್ನು ಸಲ್ಲಿಸಲು ಚುನಾವಣಾ ಟ್ರಸ್ಟ್‌ಗಳಿಗೆ ಕಡ್ಡಾಯಗೊಳಿಸಲಾಗಿದೆ. ಇದು ವ್ಯಕ್ತಿಗಳು ಮತ್ತು ಕಂಪನಿಗಳು ನೀಡಿದ ದೇಣಿಗೆಗಳನ್ನು ವಿವರಿಸುತ್ತದೆ ಮತ್ತು ಧನಸಹಾಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ. 2022-23ರ ಅವಧಿಯಲ್ಲಿ, ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಯಲ್ಲಿ ನೋಂದಾಯಿಸಲಾದ 18 ಚುನಾವಣಾ ಟ್ರಸ್ಟ್‌ಗಳಲ್ಲಿ 13 ಟ್ರಸ್ಟ್‌ಗಳು ಚುನಾವಣಾ ಆಯೋಗಕ್ಕೆ ತಮ್ಮ ದೇಣಿಗೆಯ ವಿವರಗಳನ್ನು ಸಲ್ಲಿಸಿವೆ. ಐದು ಟ್ರಸ್ಟ್‌ಗಳು ವಿವಿಧ ಕಾರ್ಪೊರೇಟ್ ಸಂಸ್ಥೆಗಳಿಂದ ಕೊಡುಗೆಗಳನ್ನು ಪಡೆದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಹಣ ಕೊಡುವವರ್ಯಾರು?
ರಾಜಕೀಯ ಪಕ್ಷಗಳಿಗೆ ಚುನಾವಣಾ ವೆಚ್ಚಕ್ಕೆಂದೇ ಉದ್ಯಮಿಗಳು, ಗುತ್ತಿಗೆದಾರರು, ಜನಸಾಮಾನ್ಯರು ಹಣ ಕೊಡುವ ಪರಿಪಾಠ ನಮ್ಮಲ್ಲಿದೆ. ಈಗ, ಚುನಾವಣಾ ಬಾಂಡ್ ಗಳ ಮೂಲಕ ವಿದೇಶಿ ಕಂಪನಿಗಳ ಭಾರತೀಯ ಅಂಗಸಂಸ್ಥೆಗಳಿಗೆ ದೇಣಿಗೆ ನೀಡಲು ಅನುಮತಿ ನೀಡಲಾಗಿದೆ. ಶೆಲ್ ಕಂಪನಿಗಳನ್ನು ದೇಣಿಗೆ ನೀಡಲು ಈಗ ಬಳಸಬಹುದು ಎಂಬ ಆರೋಪಕ್ಕೆ ಇದು ಗುರಿಯಾಗಿದೆ.
2017 ರಲ್ಲಿ, ಆಗಿನ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ಚುನಾವಣಾ ಬಾಂಡ್ ಗಳ ದುರುಪಯೋಗದ ಸಾಧ್ಯತೆಯ ಬಗ್ಗೆ ಹೇಳಿದ್ದರು, ವಿಶೇಷವಾಗಿ ಶೆಲ್ ಕಂಪನಿಗಳ (ಬೇನಾಮಿ ಹೆಸರಿನಲ್ಲಿ ಶೆಲ್ ಕಂಪನಿಗಳನ್ನು ಹುಟ್ಟುಹಾಕಿರುತ್ತಾರೆ) ಬಳಕೆಯ ಮೂಲಕ. ಚುನಾವಣಾ ಬಾಂಡ್ ಗಳು ಭೌತಿಕ ರೂಪದಲ್ಲಿರದೆ ಡಿಜಿಟಲ್ ರೂಪದಲ್ಲಿರಬೇಕು ಎಂದು ಸಲಹೆ ನೀಡಿದ್ದರು.
ಈ ರೀತಿ ಬಂಡವಾಳಶಾಹಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಾಗಲೂ ಚುನಾವಣೆಯಲ್ಲಿ ಆಯ್ಕೆಗೊಂಡು, ಅಧಿಕಾರಕ್ಕೆ ಬಂದ ನಂತರ ತಮ್ಮ ಪರವಾದ ಮತ್ತು ತಮಗೆ ಹೆಚ್ಚು ಲಾಭ ತರುವ ನೀತಿಗಳನ್ನು, ಯೋಜನೆಗಳನ್ನು ಯಾವ ಪಕ್ಷ ಜಾರಿಗೆ ತರುತ್ತದೆ ಎಂಬ ಲೆಕ್ಕಾಚಾರದಲ್ಲಿ ಅಂತಹ ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ಕೊಡುತ್ತಾರೆ. ಅಧಿಕಾರಕ್ಕೆ ಬರುವಷ್ಟು ಸಂಸದರು/ಶಾಸಕರನ್ನು ಗೆಲ್ಲಲು ಸಾಧ್ಯವಾಗದ, ಆದರೂ ತಮ್ಮ ಪರವಾಗಿ ಶಾಸನಸಭೆಗಳಲ್ಲಿ ಕೆಲಸ ಮಾಡುವ ಪಕ್ಷಗಳಿಗೂ ಇವರು ದೇಣಿಗೆ ಕೊಡುತ್ತಾರಾದರೂ, ದೇಣಿಗೆಯ ಪ್ರಮಾಣ ಕಡಿಮೆ ಇರುತ್ತದೆ. ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ, ಬಂಡವಾಳಗಾರರು ಮಾಡುವ ಶೋಷಣೆ ವಿರುದ್ದ ದ್ವನಿ ಎತ್ತಿ ಹೋರಾಡುವ, ಕಮ್ಯೂನಿಸ್ಟ್ ಪಕ್ಷಗಳಿಗೆ ಇವರು ದೇಣಿಗೆ ಕೊಡುವುದಿಲ್ಲ ಮಾತ್ರವಲ್ಲ, ಕಮ್ಯೂನಿಸ್ಟರು ಇಂತಹ ದೊಡ್ಡ ಉದ್ಯಮಿಗಳ ಬಳಿ ದೇಣಿಗೆ ಕೇಳುವುದಿಲ್ಲ. ಕಮ್ಯೂನಿಸ್ಟರನ್ನು ಸೋಲಿಸಬಲ್ಲ ವಿರೋಧಿ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ (ಉದಾ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪಕ್ಷಕ್ಕೆ) ಇವರು ಹೆಚ್ಚಿನ ದೇಣಿಗೆ ಕೊಡುತ್ತಾರೆ. ಸಿಪಿಎಂ ಪಕ್ಷ ಕಾರ್ಪೊರೇಟ್ ನಿಧಿಯನ್ನು ತೆಗೆದುಕೊಳ್ಳಲು ನಿರಾಕರಿಸುತ್ತದೆ. ಕಮ್ಯೂನಿಸ್ಟ್ ಪಕ್ಷಗಳು ಜನರಿಂದ ಪಕ್ಷಕ್ಕೆ ಮತ್ತು ಚುನಾವಣಾ ನಿಧಿಗೆ ಹಣ ಸಂಗ್ರಹಿಸುತ್ತವೆ. ಇದು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ.
ಮೋದಿ ಸರ್ಕಾರದ ಹಿಡನ್ ಅಜೆಂಡಾ
2018ರ ಜನವರಿಯಲ್ಲಿ ಚುನಾವಣಾ ಬಾಂಡ್‌ಗಳ ವಿಧಾನವನ್ನು ಪರಿಚಯಿಸಲಾಯಿತು. ಇದನ್ನು ಸಾಂವಿಧಾನಿಕ ತಿದ್ದುಪಡಿ ಅಥವಾ ವಿವರಣೆಯಿಲ್ಲದೆ ಹಣಕಾಸು ಮಸೂದೆಯಾಗಿ ತರಲಾಯಿತು. ದೇಶ, ವಿದೇಶಗಳ ದೊಡ್ಡ ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ಹೂಡಿಕೆ ಮಾಡಲು ಬಾಗಿಲು ತೆರೆದಿವೆ. ಇದಕ್ಕಾಗಿ ಹಣಕಾಸು ಕಾಯಿದೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ 2016ರಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿದೆ. ಹೀಗಾಗಿ ವಿದೇಶದಿಂದ ಹಣ ತೆಗೆದುಕೊಂಡರೂ ತಪ್ಪಾಗದಂತೆ ನೋಡಿಕೊಳ್ಳಲಾಗಿದೆ. ಜನರ ಪ್ರಾತಿನಿಧ್ಯ, ಕಂಪನಿಗಳ ಕಾಯಿದೆ, ಆದಾಯ ತೆರಿಗೆ ಕಾಯಿದೆ, ರಿಸರ್ವ್ ಬ್ಯಾಂಕ್ ಕಾಯಿದೆ…ಇವನ್ನೆಲ್ಲ ಹಣಕಾಸು ಕಾಯ್ದೆ ತಿದ್ದುಪಡಿ 2017ರಿಂದ ಬದಲಾಯಿಸಲಾಗಿದೆ. ಆರ್‌ಬಿಐ, ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳು ಟೀಕಾಕಾರರನ್ನು ನಿರ್ಲಕ್ಷಿಸಿ ಹಣಕಾಸು ಮಸೂದೆಯನ್ನು ಅಂಗೀಕರಿಸಿದವು. ಈ ಇಡೀ ಅಲೆ ಎಷ್ಟು ಶಸ್ತ್ರಸಜ್ಜಿತವಾಗಿದೆ ಎಂಬುದನ್ನು ನೋಡಿದರೆ ಮೋದಿ ಸರ್ಕಾರದ ಹಿಡನ್ ಅಜೆಂಡಾಗಳ ಅನುಷ್ಠಾನದ ಆಳ ಗೊತ್ತಾಗುತ್ತದೆ. ಸಿಪಿಎಂನಂತಹ ಪಕ್ಷಗಳು ಮೊದಲಿನಿಂದಲೂ ಈ ಯೋಜನೆ ನ್ಯಾಯಯುತವಲ್ಲ ಎಂದು ಟೀಕಿಸಿದವು. ಅವರು ಕಾರ್ಪೊರೇಟ್ ನಿಧಿಯನ್ನು ತೆಗೆದುಕೊಳ್ಳಲು ನಿರಾಕರಿಸಿದರು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಸಹಸ್ರಾರು ಕೋಟಿ ರೂ.ಗಳ ಹಣದ ಹೊಳೆ ಹರಿಸುತ್ತವೆ. ಬಿಜೆಪಿ ಪಕ್ಷಕ್ಕೆ ದೊಡ್ಡ ಉದ್ಯಮಿಗಳಿಂದ, ವಿದೇಶಗಳಿಂದ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಂದ ಅತಿ ಹೆಚ್ಚು ದೇಣಿಗೆ ಬರುತ್ತದೆ ಎಂದು ಹಲವು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ಬರುತ್ತಿವೆ. ಈ ರೀತಿಯಲ್ಲಿ ಉದ್ಯಮಿಗಳಿಂದ ಸಾವಿರಾರು ಕೋಟಿ ದೇಣಿಗೆ ಪಡೆಯುವ ಆಳುವ ಪಕ್ಷ, ತಮ್ಮ ಅಧಿಕಾರದ ಅವಧಿಯಲ್ಲಿ ಉದ್ಯಮಿಗಳ ಋಣ ತೀರಿಸಲು ಮುಂದಾಗುತ್ತದೆ. ಇದರ ಭಾಗವೇ, 15 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ, ಶೇ. 8 ರಷ್ಟು ಕಾರ್ಪೊರೇಟ್ ತೆರಿಗೆ ಕಡಿತ, ಪ್ರಕೃತಿ ಸಂಪತ್ತನ್ನು ಮತ್ತು ಅರಣ್ಯ ಸಂಪತ್ತನ್ನು ದೋಚಲು ಅಡ್ಡಿಯಾಗಿರುವ ಕಾನೂನುಗಳ ತಿದ್ದುಪಡಿ, ಲಾಭದಾಯಕ ಸಾರ್ವಜನಿಕ ಉದ್ಯಮಗಳ ಮಾರಾಟ, ಖಾಸಗೀಕರಣ ನೀತಿಗಳು, ಕಾರ್ಮಿಕರ ಹಕ್ಕುಗಳಿಗೆ ಮೊಟಕು, ಕೃಷಿ ಕಾಯ್ದೆಗಳು… ಹೀಗೆ ಹಲವು ರೀತಿಯಲ್ಲಿ ಉದ್ಯಮಿಗಳ ಋಣ ತೀರಿಸತೊಡಗಿದ್ದಾರೆ. ತಮ್ಮ ಆಡಳಿತದಲ್ಲಿನ ಸಾಧನೆಗಳು, ತಮ್ಮ ಪಕ್ಷಗಳ ನಿಜವಾದ ನೀತಿ ನಿಲುವುಗಳ ಕುರಿತು ಅಥವಾ ತಮ್ಮ ಪಕ್ಷದ ಸಿದ್ದಾಂತಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮತ ಕೇಳಿದರೆ, ಚುನಾವಣೆಯಲ್ಲಿ ಎಂದೂ ಗೆಲ್ಲಲು ಸಾಧ್ಯವಿಲ್ಲ ಎಂಬ ಸತ್ಯ ಆಡಳಿತ ಪಕ್ಷ ಬಿಜೆಪಿಗಿದೆ. ಬಿಜೆಪಿ ಅಥವಾ ಯಾವುದೇ ಪಕ್ಷಗಳ ಚುನಾವಣಾ ಆಮಿಷಗಳಿಗೆ ಮತದಾರರು ಬಲಿಯಾಗದೆ, ಎಚ್ಚರಿಕೆಯಿಂದ ಪಕ್ಷಗಳ ನೀತಿಗಳು ಮತ್ತು ಅವರ ಸಿದ್ದಾಂತಗಳನ್ನು ಅರಿತು ಆಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
4 ವರ್ಷಗಳಲ್ಲಿ ಬಿಜೆಪಿ ಪಕ್ಷವೊಂದೇ 9,208 ಕೋಟಿ ರೂ. ಪಡೆದಿದೆ
ವರದಿಗಳ ಪ್ರಕಾರ, 2018-2023ರ ನಡುವೆ ದೇಶದಲ್ಲಿ 27 ಸುತ್ತುಗಳಲ್ಲಿ ರೂ. 15,956 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಬಿಜೆಪಿ ಪಕ್ಷವೊಂದೇ 9,200 ಕೋಟಿ ರೂ.ಗಳನ್ನು (ಶೇ. 57) ಪಡೆದಿದೆ. ಕಾಂಗ್ರೆಸ್ ಪಕ್ಷ ಶೇ. 10 ರಷ್ಟು ದೇಣಿಗೆಯನ್ನು ಪಡೆದಿದೆ. 2018 ಮತ್ತು 2022 ರ ನಡುವೆ 31 ರಾಜಕೀಯ ಪಕ್ಷಗಳು ಈ ಬಾಂಡ್ ಗಳ ಮೂಲಕ ಒಟ್ಟು ರೂ. 9,188 ಕೋಟಿ ದೇಣಿಗೆ ಪಡೆದಿವೆ. ಇದರಲ್ಲಿ ಬಿಜೆಪಿಗೆ ಶೇಕಡಾ 74 ರಷ್ಟು, ಬರೋಬ್ಬರಿ 5,272 ಕೋಟಿ ರೂ. ಬಂದಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಶೇ. 11 ರಷ್ಟು ಬಂದಿದೆ. ನಂತರದ ಸ್ಥಾನದಲ್ಲಿ ಬಿಜು ಜನತಾ ದಳ, ವೈಎಸ್ಆರ್ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಇವೆ.
ಜನವರಿ 2023 ರಲ್ಲಿ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಅಂಕಿಅಂಶಗಳು ನಾಲ್ಕು ರಾಷ್ಟ್ರೀಯ ರಾಜಕೀಯ ಪಕ್ಷಗಳಾದ ಬಿಜೆಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಗಳು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ತಮ್ಮ ಒಟ್ಟು ಆದಾಯದ ಶೇ. 55.09 (ರೂ. 1811.94 ಕೋಟಿ) ಸಂಗ್ರಹಿಸಿವೆ. ದೊಡ್ಡ ಪಾಲನ್ನು ಬಿಜೆಪಿ ಸ್ವೀಕರಿಸಿದ್ದರೆ, ನಂತರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಕಾಂಗ್ರೆಸ್ ಪಡೆದಿವೆ. ಶೇ. 66 ಕ್ಕಿಂತ ಹೆಚ್ಚು ಚುನಾವಣಾ ಬಾಂಡ್‌ಗಳು ಅಜ್ಞಾತ ಮೂಲಗಳಿಂದ ಬಂದಿದೆ.
ವಾಸ್ತವವಾಗಿ, ಆ ಪಕ್ಷಗಳು ಇದಷ್ಟೇ ಹಣದಿಂದ ಚುನಾವಣೆ ಮತ್ತು ಇತರ ವ್ಯವಹಾರಗಳನ್ನು ನಡೆಸುತ್ತಿವೆ ಎಂದು ಭಾವಿಸುವುದು ತಪ್ಪು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) 2019 ರ ಚುನಾವಣೆಯ ಒಟ್ಟು ವೆಚ್ಚವು ದೇಶಾದ್ಯಂತ ರೂ. 55,000 ಕೋಟಿಗಳಿಂದ ರೂ. 60,000 ಕೋಟಿಗಳವರೆಗೆ ಇರುತ್ತದೆ ಎಂದು ಅಂದಾಜಿಸಿದೆ. ಇದರಲ್ಲಿ ಹೆಚ್ಚಿನವು ಲೆಕ್ಕಕ್ಕೆ ಸಿಗದ ನಗದು, ಪ್ರಚಾರ ಸಾಮಗ್ರಿಗಳು, ವಿವಿಧ ಮಾಧ್ಯಮಗಳಲ್ಲಿನ ಪ್ರಚಾರ ವೆಚ್ಚಗಳು ಇತ್ಯಾದಿಗಳು ಈ ಬಾಂಡ್ ಗಳ ಮೊತ್ತವನ್ನು ತೋರಿಸುತ್ತವೆ.
ನಿಮ್ಮ ಟಿಪ್ಪಣಿ ಬರೆಯಿರಿ