ಖಾಸಗಿಯವರ ತೆಕ್ಕೆಗೆ ರೈಲು ನಿಲ್ದಾಣಗಳು

2024ರ ಲೋಕಸಭಾ ಚುನಾವಣೆ ಘೊಷಣೆಯಾಗಲಿರುವ ಒಂದೆರಡು ವಾರಗಳ ಹಿಂದೆ, ಫೆಬ್ರವರಿ 26ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಬ್ಬರದ ಪ್ರಚಾರದೊಂದಿಗೆ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಅಡಿಯಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 553 ರೈಲು ನಿಲ್ದಾಣಗಳ ಪುನರಾಭಿವೃದ್ದಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ, ಒಕ್ಕೂಟ ಸರ್ಕಾರದ ಗುರಿಯಾದ ರೈಲ್ವೇ ವಲಯವನ್ನು ಖಾಸಗಿಯವರಿಗೆ ಒಪ್ಪಿಸುವ ‘ಖಾಸಗೀಕರಣ’ದ ಹಾದಿಯ ಗುರಿಯತ್ತ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಮಾತ್ರವಲ್ಲ, ಆರ್ ಎಸ್ ಎಸ್ ನ ಹಿಂದುತ್ವದ ಅಜೆಂಡಾಗಳನ್ನು ಜಾರಿಗೆ ತರುವ ಪ್ರಯತ್ನವೂ ಇದರಲ್ಲಿದೆ. ಭಾರತದ ಪ್ರಾಚೀನ ಪರಂಪರೆಯೊಂದಿಗೆ ಮರುಸಂಪರ್ಕ ಪಡೆಯುವ ಹೆಸರಿನಲ್ಲಿ ರೈಲು ನಿಲ್ದಾಣಗಳನ್ನು ಮಂದಿರಗಳ ಶೈಲಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ ಮತ್ತು ಸಂಸ್ಕೃತ ಭಾಷೆಯನ್ನು ಮುಂದೆ ತರುವ ಪ್ರಯತ್ನವೂ ಖಾಸಗೀಕರಣದ ಜೊತೆ ಜೊತೆಗೆ ನಡೆಯುತ್ತದೆ. “ಕಾರ್ಪೊರೇಟ್-ಹಿಂದುತ್ವವಾದಿ ಕೂಟ” ಆಡಳಿತದಿಂದ ಮತ್ತೇನನ್ನು ನಿರೀಕ್ಷಿಸಲಾದೀತು?
ಫೆಬ್ರವರಿ 25ರಂದು ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೂ. 41,000 ಕೋಟಿಗೂ ಹೆಚ್ಚು ಮೊತ್ತದ ಸುಮಾರು 2,000 ರೈಲ್ವೆ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಈ 2,000 ರೈಲ್ವೇ ಮೂಲಸೌಕರ್ಯ ಯೋಜನೆಗಳಲ್ಲಿ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಮಂತ್ರಿ ಚಾಲನೆ ನೀಡಿದರು. (ಹೊಸ ನಿಲ್ದಾಣಗಳ ನಿರ್ಮಾಣವಲ್ಲ). 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ ಈ ನಿಲ್ದಾಣಗಳನ್ನು ರೂ. 19,000 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವ ಭರವಸೆ ಬಿಜೆಪಿ ನಾಯಕರಿಗೆ ಇದ್ದರೆ, ತಮ್ಮಅಧಿಕಾರದ ಅವಧಿ ಮುಗಿಯುತ್ತಿರುವ ಈ ಸಂದರ್ಭದಲ್ಲಿ, ಅದೂ ಕೂಡ ಚುನಾವಣೆ ಘೋಷಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಇಂತಹ ಆತುರದ ಘೋಷಣೆಯ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ಮೂಡುತ್ತದೆ. ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆಯೋ ಇಲ್ಲವೋ, ಆದರೆ, ತಾವು ಹೊಂದಿರುವ ಖಾಸಗೀಕರಣ ನೀತಿಗಳನ್ನು ಜಾರಿಗೊಳಿಸುವ ಮತ್ತು ಹಿಂದುತ್ವವನ್ನು ಹೇರುವ ತಮ್ಮ ಅಜೆಂಡಾವನ್ನು ಸಾಧ್ಯವಾದಷ್ಟು ಮುಂದಕ್ಕೊಯ್ಯಬೇಕು ಎಂಬುದೇ ಬಿಜೆಪಿಯವರ ಉದ್ದೇಶ. ಹೀಗಾಗಿಯೇ ಆತುರಾತುವಾಗಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ.
ಏನಿದು ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’
ಮೊದಲು ನಾವು ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ ಏನೆಂಬುದನ್ನು ನೋಡೋಣ. ಈ ಯೋಜನೆಯನ್ನು 2022ರ ಫೆಬ್ರವರಿಯಲ್ಲಿ ಪ್ರಾರಂಭಿಸಲಾಯಿತು. ದೇಶಾದ್ಯಂತ ರೈಲು ನಿಲ್ದಾಣಗಳ ಅಭಿವೃದ್ಧಿ, ಆಧುನೀಕರಣ ಮತ್ತು ಸುಂದರೀಕರಣಕ್ಕಾಗಿ ಎಂದು ಹೇಳುತ್ತಾ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನಿಲ್ದಾಣಗಳ ನಿರಂತರ ಅಭಿವೃದ್ಧಿಗೆ ಇದು ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದೆ. ವಿವಿಧ ನಿಲ್ದಾಣಗಳ ಸೌಲಭ್ಯಗಳನ್ನು ಹೆಚ್ಚಿಸಲು ಮಾಸ್ಟರ್ ಪ್ಲಾನ್ ಗಳನ್ನು ರಚಿಸುವುದು ಮತ್ತು ಅವುಗಳನ್ನು ಹಂತಹಂತವಾಗಿ ಕಾರ್ಯಗತಗೊಳಿಸುವುದನ್ನು ಯೋಜನೆಯ ಅಡಿಯಲ್ಲಿ ಆದ್ಯತೆಯ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು.
ಈ ಅಭಿವೃದ್ಧಿಗಳಲ್ಲಿ ನಿಲ್ದಾಣದ ಪ್ರವೇಶವನ್ನು ಉತ್ತಮಗೊಳಿಸುವುದು, ಕಾಯುವ ಪ್ರದೇಶಗಳು (ವೆಯ್ಟಿಂಗ್ ರೂಂ), ಶೌಚಾಲಯಗಳ ಸೌಲಭ್ಯಗಳು, ಅಗತ್ಯವಿರುವಷ್ಟು ಲಿಫ್ಟ್ ಮತ್ತು ಎಸ್ಕಲೇಟರ್ ಗಳ ಸ್ಥಾಪನೆ, ಸ್ವಚ್ಛತೆ, ಉಚಿತ ವೈಫೈ ನೀಡುವಿಕೆ ಮತ್ತು ‘ಒಂದು ನಿಲ್ದಾಣ ಒಂದು ಉತ್ಪನ್ನ’ ದಂತಹ ಉಪಕ್ರಮಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಕಿಯೋಸ್ಕ್ ಗಳನ್ನು ಸ್ಥಾಪಿಸುವುದು ಸೇರಿವೆ. ಈ ನಿಲ್ದಾಣಗಳು ಮೇಲ್ಛಾವಣಿ ಪ್ಲಾಜಾ, ಸುಂದರವಾದ ಭೂದೃಶ್ಯ, ಇಂಟರ್ಮೋಡಲ್ ಸಂಪರ್ಕ, ಸುಧಾರಿತ ಆಧುನಿಕ ಮುಂಭಾಗ, ಮಕ್ಕಳ ಆಟದ ಪ್ರದೇಶ, ಕಿಯೋಸ್ಕ್ ಗಳು, ಫುಡ್ ಕೋರ್ಟ್ ಗಳು ಮುಂತಾದ ಆಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುತ್ತದೆ. ಅವುಗಳನ್ನು ಪರಿಸರ ಸ್ನೇಹಿ ಮತ್ತು ದಿವ್ಯಾಂಗ ಸ್ನೇಹಿಯಾಗಿ ಪುನರಾಭಿವೃದ್ಧಿ ಮಾಡಲಾಗುತ್ತದೆ. ಈ ನಿಲ್ದಾಣದ ಕಟ್ಟಡಗಳ ವಿನ್ಯಾಸವು ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪದಿಂದ ಪ್ರೇರೇಪಿಸಲ್ಪಡುತ್ತದೆ, ” ಇವಿಷ್ಟು ರೈಲ್ವೆ ಇಲಾಖೆ ಹೊರಡಿಸಿದ ಹೇಳಿಕೆಯಲ್ಲಿದೆ.
ಎಲ್ಲವೂ ಪಿಪಿಪಿ ಆಧಾರದಲ್ಲಿ
ರೈಲು ನಿಲ್ದಾಣಗಳನ್ನು ಇಷ್ಟೆಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ದಿ ಪಡಿಸಲಾಗುತ್ತದೆ ಎಂದರೆ ಎಂತಹವರಿಗೂ ಸಂತೋಷ ಉಂಟಾಗುತ್ತದೆ ಅಲ್ಲವೆ? “ನೋಡಿ, ಮೋದಿ ನಮ್ಮ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳ ರೀತಿ ಬದಲಾಯಿಸಿದ್ದಾರೆ” ಎಂದು ಮೋದಿ ಭಕ್ತರು ಹೇಳಿದರೆ ಅದಕ್ಕೆ ಯಾರಾದರೂ ತಲೆಭಾಗದೆ ಇರುತ್ತಾರೆಯೆ? ರೈಲು ನಿಲ್ದಾಣಗಳನ್ನು ರೈಲ್ವೇ ಅಥವಾ ಸರ್ಕಾರದ ವೆಚ್ಚದಿಂದ ಇಷ್ಟೆಲ್ಲಾ ಆಧುನೀಕರಣ ಮಾಡುವುದಾದರೆ, ಈ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಬಳಕೆ ಮಾಡಬಹುದು ಎಂದಾದರೆ ನಿಜಕ್ಕೂ ಎಲ್ಲರೂ ಸಂಭ್ರಮಿಸಬಹುದಿತ್ತು.
ಆದರೆ, ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯು ಸಾರ್ವಜನಿಕ, ಖಾಸಗಿ ಸಹಭಾಗಿತ್ವ(PPP) ದ ಒಂದು ಯೋಜನೆ. ಈ ಪುನರ್ ಅಭಿವೃದ್ದಿಗೆ ಖಾಸಗಿಯವರು ಬಂಡವಾಳ ಹೂಡಿಕೆ ಮಾಡುತ್ತಾರೆ. ಖಾಸಗಿ ಬಂಡವಾಳ ಎಂದರೆ, ಅದು ಲಾಭದ ದೃಷ್ಟಿಯಿಂದಲೇ ಇರುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅಂದರೆ, ನಮ್ಮ ಈಗಿನ ರೈಲು ನಿಲ್ದಾಣಗಳನ್ನು ಒಂದಷ್ಟು ಆಧುನೀಕರಣ ಗೊಳಿಸಿ, ಒಂದಷ್ಟು ಅಭಿವೃದ್ಧಿ ಪಡಿಸಿ, ಅದಕ್ಕೆ ಸೇವಾ ಶುಲ್ಕ ನಿಗಧಿಪಡಿಸಿ ಹಣ ಗಳಿಸುವುದು ಮತ್ತು ಹೋಟೆಲ್, ವಾಣಿಜ್ಯ ಮಳಿಗೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟು ಹಣ ಗಳಿಸುವುದು. ಒಟ್ಟಿನಲ್ಲಿ ಹೇಳುವುದಾದರೆ, ರೈಲ್ವೇ ಇಲಾಖೆಗೆ ಸೇರಿದ ಸಾರ್ವಜನಿಕ ಆಸ್ತಿಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ, ವಾಣಿಜ್ಯ ಸಂಸ್ಥೆಗಳಿಗೆ ಬಿಟ್ಟುಕೊಡಲಾಗುತ್ತದೆ.
ರೈಲ್ವೆ ಸೇವೆ ಬಳಸುವ ಸಾಮಾನ್ಯ ಜನರಿಗೆ ಹೊರೆಯಾಗಲಿದೆ ;
ಇಂತಹ ಖಾಸಗಿ ಸಹಭಾಗಿತ್ವದ ಯೋಜನೆಯಿಂದಾಗಿ ರೈಲ್ವೆ ಸೇವೆ ಬಳಸುವ ಸಾಮಾನ್ಯ ಜನರಿಗೆ ಹೊರೆಯಾಗಲಿದೆ. ಇದನ್ನು ನಾವು ಟೋಲ್ ರಸ್ತೆ ಬಳಕೆಯಲ್ಲಿ ಅನುಭವಿಸುತ್ತಿದ್ದೇವೆ. ಇದುವರೆಗೂ ಉಚಿತವಾಗಿ ಬಳಕೆ ಮಾಡುತ್ತಿದ್ದ ಹೆದ್ದಾರಿಗಳನ್ನು ಖಾಸಗಿ ಸಹ ಭಾಗಿತ್ವದಲ್ಲಿ ವಿಸ್ತರಣೆ ಮತ್ತು ಅಭಿವೃದ್ಧಿಗೊಳಿಸಿದ ನಂತರ, ಟೋಲ್ ಕಟ್ಟಿಯೇ ಆ ರಸ್ತೆಗಳನ್ನು ಬಳಕೆ ಮಾಡಬೇಕಲ್ಲಾ ಹಾಗೆ ರೈಲು ನಿಲ್ದಾಣ ಬಳಕೆ ಮಾಡಲು ದುಬಾರಿ ಶುಲ್ಕ ತೆರಬೇಕಾಗುತ್ತದೆ. ಅಲ್ಲಿನ ಯಾವುದೇ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕೆಂದರೆ ಹೆಚ್ಚಿನ ಹಣ ತೆರಬೇಕಾಗುತ್ತದೆ.
ವಿಮಾನ ನಿಲ್ದಾಣ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ವಿಮಾನ ಪ್ರಯಾಣಿಕರು ಖರೀದಿಸುವ ಪ್ರಯಾಣ ಟಿಕೆಟ್ ದರದಲ್ಲಿ ವಿಮಾನ ನಿಲ್ದಾಣ ಬಳಕೆದಾರ ಅಭಿವೃದ್ಧಿ ಶುಲ್ಕವೂ ಸೇರಿರುತ್ತದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಶುಲ್ಕ ಈಗ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 1,400 ರೂ. ಮತ್ತು ದೇಶೀಯ ಪ್ರಯಾಣಿಕರಿಗೆ 450 ರೂ. ಇದೆ. ವಾಹನಗಳ ನಿಲುಗಡೆಗೆ ಅಧಿಕ ಶುಲ್ಕ ವಸೂಲಿ ಮಾಡುತ್ತಾರೆ. ನಿಲ್ಧಾಣದ ಒಳ ಭಾಗದಲ್ಲಿ ಮಾರಾಟ ಮಾಡುವ ತಿಂಡಿ, ತಿನಿಸುಗಳು, ವಸ್ತುಗಳು ದುಬಾರಿ ಬೆಲೆಯಲ್ಲಿ ಮಾರಾಟವಾಗುತ್ತಿವೆ.
ಸಂಪೂರ್ಣವಾಗಿ ಖಾಸಗೀಕರಿಸುವ ದಿಕ್ಕಿನೆಡೆಗೆ
ಇಷ್ಟು ಮಾತ್ರವೇ ಆಗಿದ್ದರೆ, ರೈಲು ಪ್ರಯಾಣ ಮಾಡುವ ಬಡವರಿಗೆ ಏನೂ ನಷ್ಟ ಇಲ್ಲವಲ್ಲ, ಹಣವಂತರು ಇವುಗಳ ಉಪಯೋಗ ಪಡೆದುಕೊಳ್ಳುತ್ತಾರೆ, ಅದರಿಂದ ನಮಗೇನು ತೊಂದರೆ ಎನಿಸಬಹುದು. ಆದರೆ, ಇದು, ಆಧುನೀಕರಣ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಹೆಸರಿನ ಮರೆಯಲ್ಲಿ ರೈಲ್ವೇ ವಲಯವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸುವ ದಿಕ್ಕಿನೆಡೆಗೆ ಕೇಂದ್ರ ಸರ್ಕಾರ ಇಟ್ಟಿರುವ ಮತ್ತೊಂದು ಹೆಜ್ಜೆಯಾಗಿದೆ.
2021ರಿಂದ 2025ರ ಮಾರ್ಚ್ ವೇಳೆಗೆ ಆರ್ಥಿಕ ವರ್ಷದವರೆಗೆ ನಾಲ್ಕು ವರ್ಷಗಳಲ್ಲಿ ನ್ಯಾಷನಲ್ ಮಾನಿಟೈಸೇಶನ್ (NMP) ಪೈಪ್ ಲೈನ್ (‘ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್) ಯೋಜನೆ ಮೂಲಕ, ಸಾರ್ವಜನಿಕ ಉದ್ಯಮಗಳ ಆಸ್ತಿಗಳ ಮಾರಾಟದಿಂದ ರೂ. 6 ಲಕ್ಷ ಕೋಟಿ (ರೂ. 6 ಟ್ರಿಲಿಯನ್) ಗಳಿಸುವ ಗುರಿಯನ್ನು ಮೋದಿ ಸರ್ಕಾರ ಹೊಂದಿತ್ತು. ಇದರಲ್ಲಿ ರೈಲ್ವೇ ಪಾಲು ರೂ. 1.52 ಲಕ್ಷ ಕೋಟಿ (1.52 ಟ್ರಿಲಿಯನ್). ಅಂದರೆ, ಒಟ್ಟು NMP ಯ ಕಾಲುಭಾಗದಷ್ಟಿದೆ.
NMP ಅಡಿಯಲ್ಲಿ, 23 ರಲ್ಲಿ ರೈಲ್ವೇಗಳು 120 ನಿಲ್ದಾಣಗಳು, 30 ರೈಲುಗಳು ಮತ್ತು 1,400 ಕಿಮೀ ಟ್ರ್ಯಾಕ್ ಗಳನ್ನು ಹಣಗಳಿಸುವ ಅಗತ್ಯವಿತ್ತು. ಆದರೆ, ಇದನ್ನು ನಿರೀಕ್ಷಿಸಿದ ಮಟ್ಟದಲ್ಲಿ ಸಾಧಿಸಲು ಸಾಧ್ಯವಾಗಲಿಲ್ಲ. 2022 ರಲ್ಲಿ ರೂ. 18,000 ಕೋಟಿ ಗುರಿಯ ಬದಲಾಗಿ ಕೇವಲ ರೂ. 800 ಕೋಟಿ ಹಣಗಳಿಕೆ ಮಾಡಿದೆ. ಹಲವು ಕ್ರಮಗಳ ಮೂಲಕ ಈ ಅತ್ಯಲ್ಪ ಗಳಿಕೆಯನ್ನು ಮಾಡಿದೆ. ಇದರ ಮುಂದುವೆರದ ಭಾಗವೇ ಈ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’.
2019-20 ರ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ ;
2019-20 ರ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಟ್ರ್ಯಾಕ್ ಗಳನ್ನು ಹಾಕುವುದು, ರೋಲಿಂಗ್ ಸ್ಟಾಕ್ ತಯಾರಿಕೆ, ಪ್ರಯಾಣಿಕರ ಸರಕು ಸೇವೆಗಳ ವಿತರಣೆ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ, ರೈಲ್ವೆ ಯೋಜನೆಗಳ ತ್ವರಿತ ಅಭಿವೃದ್ಧಿ ಮತ್ತು ಪೂರ್ಣಗೊಳಿಸುವಿಕೆಗಾಗಿ ಪಿಪಿಪಿ ಬಳಕೆಯನ್ನು ಪ್ರಸ್ತಾಪಿಸಿದ್ದರು. ರೈಲ್ವೆಯು 2021ರಲ್ಲಿ ನಿಲ್ದಾಣದ ಪುನರಾಭಿವೃದ್ಧಿಯಲ್ಲಿ ಪಿಪಿಪಿ ಮಾದರಿಯನ್ನು ಪರಿಗಣಿಸಲು ಪ್ರಾರಂಭಿಸಿತು. ಆದರೆ ಪಿಪಿಪಿ ಮಾದರಿಯನ್ನು ಒಂದು ವರ್ಷ ಮುಂದೂಡಿತು ಮತ್ತು ಎಂಜಿನಿಯರಿಂಗ್ ಸಂಗ್ರಹಣೆ ಮತ್ತು ನಿರ್ಮಾಣ (EPC) ಮೋಡ್ ಅಡಿಯಲ್ಲಿ ನಿಲ್ದಾಣಗಳನ್ನು ನೀಡಲು ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅಲ್ಲಿ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವು ಭರಿಸುತ್ತದೆ ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ ಕಡಿಮೆ ಮತ್ತು ಎಂಜಿನಿಯರಿಂಗ್ ಪರಿಣತಿಯನ್ನು ಒದಗಿಸುವುದಕ್ಕೆ ಸೀಮಿತವಾಗಿದೆ.
ಸನಾತನವಾದಿಗಳ ಪರಂಪರೆಯೊಂದಿಗೆ ;
ರೈಲ್ವೇ ನಿಲ್ದಾಣಗಳ ಪುನರಾಭಿವೃದ್ಧಿಪಡಿಸುವ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯ ಗಮನಿಸಬೇಕಾದ ವಿಷಯವೆಂದರೆ, ಪುನರಾಭಿವೃದ್ಧಿ ಪ್ರಕ್ರಿಯೆಯು ಪ್ರಾರಂಭವಾಗುತ್ತಿದ್ದಂತೆ ಮೋದಿ ಸರ್ಕಾರವು ಭಾರತದ ಸನಾತನ ಪರಂಪರೆಯೊಂದಿಗೆ ತಳಹದಿಯನ್ನು ಸ್ಪರ್ಶಿಸಲು ನಿರ್ಧರಿಸಿದೆ. ಇದು ಮೂಲಸೌಕರ್ಯ ನವೀಕರಣಗಳನ್ನು ಮಾತ್ರವಲ್ಲದೆ ಭಾರತದ ಪರಂಪರೆಯೊಂದಿಗೆ ಮರುಸಂಪರ್ಕವನ್ನು ಸೂಚಿಸುತ್ತದೆ ಎಂದು ಮೋದಿ ಹೇಳುತ್ತಾರೆ. ಈ ಯೋಜನೆಯ ಹೆಸರಿನಲ್ಲೇ ಸಂಸ್ಕೃತ ಭಾಷೆ (ಅಮೃತ್) ಇದೆ. ಫೆಬ್ರವರಿ 26 ರ ಕಾರ್ಯಕ್ರಮದ ಫಲಕಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳನ್ನು ಹೊರತುಪಡಿಸಿ ಸಂಸ್ಕೃತದಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ತನ್ನ ಎಲ್ಲಾ ವಲಯ ಸಾರ್ವಜನಿಕ ಸಂಪರ್ಕ ಕಚೇರಿಗಳಿಗೆ ಸಲಹೆ ನೀಡಿತ್ತು ಎಂದು News18.com ವರದಿ ಮಾಡಿವೆ.
ದೇವಾಲಯಗಳ ಶೈಲಿಯಲ್ಲಿ ಕಟ್ಟಡ ನಿರ್ಮಾಣ ;
ಒಡಿಶಾದ ಬಾಲೇಶ್ವರ ನಿಲ್ದಾಣದ ವಿನ್ಯಾಸವು ಭಗವಾನ್ ಜಗನ್ನಾಥ ದೇವಾಲಯದಿಂದ ಸ್ಫೂರ್ತಿ ಪಡೆದಿದ್ದರೆ, ಸಿಕ್ಕಿಂನ ರಂಗ್ಪುರ ನಿಲ್ದಾಣವು ಸ್ಥಳೀಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ರಾಜಸ್ಥಾನದ ಸಾಂಗ್ನರ್ ನಿಲ್ದಾಣವು 16 ನೇ ಶತಮಾನದ ಹ್ಯಾಂಡ್-ಬ್ಲಾಕ್ ಮುದ್ರಣವನ್ನು ಪ್ರದರ್ಶಿಸುತ್ತದೆ, ತಮಿಳುನಾಡಿನ ಕುಂಭಕೋಣಂ ನಿಲ್ದಾಣವು ಚೋಳರ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ ಮತ್ತು ಅಹಮದಾಬಾದ್ ನಿಲ್ದಾಣವು ಮೊಧೇರಾ ಸೂರ್ಯ ಮಂದಿರದಿಂದ ಸ್ಫೂರ್ತಿ ಪಡೆಯುತ್ತದೆ. ದ್ವಾರಕಾ ನಿಲ್ದಾಣದ ವಿನ್ಯಾಸವು ದ್ವಾರಕಾಧೀಶ ದೇವಸ್ಥಾನದಿಂದ ಪ್ರಭಾವಿತವಾಗಿದೆ.
ಭಾರತದ ಪ್ರಾಚೀನ ಪರಂಪರೆಯೊಂದಿಗೆ ಮರುಸಂಪರ್ಕ ಪಡೆಯುವ ಹೆಸರಿನಲ್ಲಿ ರೈಲು ನಿಲ್ದಾಣಗಳನ್ನು ಮಂದಿರಗಳ ಶೈಲಿಯಲ್ಲಿ ನಿರ್ಮಾಣ ಮಾಡುವ ಮೂಲಕ ಸನಾತನ ಧರ್ಮವನ್ನು ಮತ್ತು ಸಂಸ್ಕೃತ ಭಾಷೆಯನ್ನು ಮುಂದೆ ತರುವ ಪ್ರಯತ್ನವೂ ಖಾಸಗೀಕರಣದ ಜೊತೆ ಜೊತೆಗೆ ನಡೆಯುತ್ತದೆ. “ಕಾರ್ಪೊರೇಟ್-ಹಿಂದುತ್ವವಾದಿ ಕೂಟ”ದ ಆಡಳಿತದಿಂದ ಇದಲ್ಲದೆ ಮತ್ತೇನನ್ನು ನಿರೀಕ್ಷಿಸಲಾದೀತು?
ಕಾರ್ಮಿಕ ಸಂಘಟನೆಗಳ ವಿರೋಧ ;
ಹೊಸ ತಂತ್ರಜ್ಞಾನವು ಸುರಕ್ಷತೆ ಮತ್ತು ಸೌಕರ್ಯವನ್ನು ಸುಧಾರಿಸಬಹುದು ಮತ್ತು ಖಾಸಗೀಕರಣವು ರೈಲ್ವೇಗಳನ್ನು ವಿಮಾನ ಪ್ರಯಾಣದ ಸೌಕರ್ಯಗಳೊಂದಿಗೆ ಸ್ಪರ್ಧಿಸುವಂತೆ ಮಾಡಬಹುದು. ಇಂತಹ ರೈಲುಗಳನ್ನು ಸಿರಿವಂತರು ಬಳಸಬಹುದೇ ವಿನಃ, ಸಾಮಾನ್ಯ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ. ರೈಲು ಪ್ರಯಾಣ ದರ ಏರಿಕೆಯಾಗುತ್ತದೆ. ವಿಶೇಷವಾಗಿ, ಇದು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಕ್ರಮಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸರ್ಕಾರದ ಖಾಸಗೀಕರಣ ನೀತಿಗಳ ವಿರುದ್ದ ಹಲವು ಬಾರಿ ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸುತ್ತಾ ಬಂದಿವೆ.
ನಿಮ್ಮ ಟಿಪ್ಪಣಿ ಬರೆಯಿರಿ