
ಕಳಚಿ ಬಿದ್ದ ಗೋರಕ್ಷರೆಂಬ ಮುಖವಾಡ
“ಗೋವು ಹಿಂದೂಗಳಿಗೆ ಮಾತೆ ಇದ್ದಹಾಗೆ, ಅವುಗಳು ನಮಗೆ ಹಾಲು ಕೊಡುತ್ತವೆ. ಗೋವುಗಳನ್ನು ಕೊಂದು ತಿಂದರೆ ನಮ್ಮ ಹೆತ್ತ ತಾಯಿಯನ್ನೇ ಕೊಂದು ತಿಂದಂತೆ, ಯಾರಾದರೂ ಹೆತ್ತ ತಾಯಿಯನ್ನು ಕೊಂದು ತಿನ್ನುತ್ತಾರೆಯೇ? ಗೋಭಕ್ಷಕರು ರಾಕ್ಷಕರು. ಅವರು ಹಿಂದೂ ಧರ್ಮದ ವಿರೋಧಿಗಳು….” ಹೀಗೆ ಬಿಜೆಪಿ ಮತ್ತು ಹಿಂದುತ್ವವಾದಿ ನಾಯಕರು ಪುಂಕಾನುಪುಂಕ ಭಾಷಣ ಬಿಗಿದು, ಜನರಲ್ಲಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಾರೆ. ಗೋವುಗಳನ್ನು ಪೂಜ್ಯ ಭಾವನೆಯಿಂದ ನೋಡುವ ಹಿಂದೂಗಳೂ ಬಿಜೆಪಿಯವರ ಇಂತಹ ಕಪಟ ಮಾತುಗಳನ್ನು ನಂಬಿ ಅವರನ್ನು ಬೆಂಬಲಿಸುತ್ತಾರೆ. ಮತ್ತೊಂದೆಡೆ, ಗೋವುಗಳನ್ನು ಕಡಿದು, ವಿದೇಶಗಳಿಗೆ ಗೋಮಾಂಸ ರಪ್ತುಮಾಡುವ ದೊಡ್ಡ ಕಂಪನಿಗಳಿಂದ ದೇಣಿಗೆ ಹೆಸರಿನಲ್ಲಿ ಬಿಜೆಪಿ ಕೋಟ್ಯಾಂತರ ರೂಪಾಯಿ ಹಣ ಪಡೆಯುತ್ತದೆ.
“ಇವುಗಳೆಲ್ಲಾ ಮೋದಿಯವರಿಗೆ ಗೊತ್ತಾ?” ರಾಜಕೀಯ ಪಕ್ಷಗಳು ಮತ್ತು ಉದ್ಯಮಿಗಳ ನಡುವಿನ ‘ಕೊಡು ಕೊಳ್ಳುವಿಕೆಯ ವ್ಯವಹಾರ’ಗಳನ್ನು ಚುನಾವಣಾ ಬಾಂಡ್ ಗಳ ಡಾಟಾಗಳು ಬಹಿರಂಗಗೊಳಿಸಿದ ವಿಷಯವನ್ನು ನಾನು ನನ್ನ ಸಂಬಂಧಿಕರೊಬ್ಬರಿಗೆ ಹೇಳಿದಾಗ, ಅವರು ನನಗೆ ಪ್ರಶ್ನೆ ಮಾಡಿದ್ದು ಹೀಗೆ. ಅದರಲ್ಲೂ ಬಿಜೆಪಿ ದೇಣಿಗೆ ಪಡೆದಿರುವ ವಿವರಗಳನ್ನು ನೀಡಿದಾಗ ಮತ್ತು ಗೋಮಾಂಸ ರಪ್ತು ಕಂಪನಿಯಿಂದ ಬಿಜೆಪಿ ನಾಲ್ಕೂವರೆ ಕೋಟಿ ರೂ.ಗಳ ದೇಣಿಗೆ ಪಡೆದಿದೆ ಎಂದು ಹೇಳಿದಾಗ, ನರೇಂದ್ರ ಮೋದಿಯವರ ಮೇಲೆ ಅತಿಯಾದ ವಿಶ್ವಾಸ ಇಟ್ಟಿರುವ ಅವರು ಕ್ಷಣ ಕಾಲ ವಿಚಲಿತರಾದಂತೆ ಕಂಡರು. ಪ್ರಾಮಾಣಿಕರು, ಕಳಂಕರಹಿತರು, ಹಿಂದೂ ಧರ್ಮದ ರಕ್ಷಣೆಗೆಂದೇ ಅವತಾರ ಎತ್ತಿ ಬಂದವರು, ಗೋಮಾತೆ ರಕ್ಷಣೆಗೆ ಪಣತೊಟ್ಟವರು ಎಂದು ಅತಿಯಾಗಿ ನಂಬಿರುವವರ ಮನಸ್ಸಿಗೆ ಬಿಜೆಪಿಯ ಈ ಕಳ್ಳ ವ್ಯವಹಾರ ತೀರಾ ನೋವು ತಂದಿತ್ತು. ಗೋವನ್ನು ಪವಿತ್ರವೆಂದು ಪರಿಗಣಿಸುವ ಜನರಿಗೆ ಗೋಹತ್ಯೆ ಒಂದು ಭಾವನಾತ್ಮಕ ವಿಷಯವಾಗಿದೆ. ತಮ್ಮಲ್ಲಿರುವ ಧಾರ್ಮಿಕ ಭಾವನೆಗಳನ್ನು ಸಂಘಪರಿವಾರದವರು ದುರುಪಯೋಗ ಪಡಿಸಿಕೊಂಡರೆಂದು, ಅವರನ್ನು ನಂಬಿ ತಾವು ಮೋಸಹೋದೆವು ಎಂಬ ಭಾವನೆ ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.
ಮುಂಬೈ ಮೂಲದ ಎರಡು ಗೋಮಾಂಸ ರಫ್ತು ಕಂಪನಿಗಳಾದ ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ (Allanasons Ltd )ಮತ್ತು ಫ್ರಿಗೊರಿಫಿಕೊ ಅಲ್ಲಾನಾ ಪ್ರೈವೇಟ್ ಲಿಮಿಟೆಡ್ ಹೆಸರು ಚುನಾವಣಾ ಬಾಂಡ್‌ಗಳ ಖರೀದಿದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. 2019 ರಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾಗ ಭಾರತೀಯ ಜನತಾ ಪಕ್ಷ ಮತ್ತು ಶಿವಸೇನೆಗೆ ಈ ಕಂಪನಿಗಳು ದೇಣಿಗೆ ನೀಡಿರುವುದು ಕಂಡುಬಂದಿದೆ. ಅಲ್ಲಾನಾ ಗ್ರೂಪ್, ಶಿವಸೇನೆಗೆ ರೂ. 5 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು, ಬಿಜೆಪಿ ಗೆ ರೂ. 2 ಕೋಟಿ ಮೌಲ್ಯದ ಬಾಂಡ್‌ಗಳನ್ನು ದಾನ ಮಾಡಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, Common Cause ಇವರ 6 ವರ್ಷಗಳ ಕಾಲ ಸುಪ್ರೀಂ ಕೋರ್ಟ್ ನಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದ ನಂತರ ಮತ್ತು ನ್ಯಾಯಾಲಯದ ಅಂತಿಮ ಆದೇಶದ ನಂತರ, ಮಾರ್ಚ್ 21 ರಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದು, ವಿಶಿಷ್ಟ ಆಲ್ಫಾ-ಸಂಖ್ಯೆಯ ಕೋಡ್‌ಗಳು ಸೇರಿದಂತೆ ಚುನಾವಣಾ ಬಾಂಡ್‌ಗಳ ಡೇಟಾದ ಸಂಪೂರ್ಣ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸಲ್ಲಿಸಿದೆ. ಇದರಿಂದ ಯಾವ ಕಂಪನಿಗಳು, ಯಾವ ರಾಜಕೀಯ ಪಕ್ಷಕ್ಕೆ ಎಷ್ಟು ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ ಎಂಬುದನ್ನು ತಿಳಿಯಲು ಸಾಧ್ಯವಾಗಿದೆ.
9 ಜುಲೈ 2019 ರಂದು ಅಲ್ಲಾನಾ ಕೋಲ್ಡ್ ಸ್ಟೋರೇಜ್, ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್, ಫ್ರಿಗೊರಿಫಿಕೊ ಅಲ್ಲಾನಾ ಪ್ರೈವೇಟ್ ಲಿಮಿಟೆಡ್‌ನಿಂದ ರೂ 1 ಕೋಟಿ ಮೌಲ್ಯದ ಐದು ಬಾಂಡ್‌ಗಳನ್ನು ಖರೀದಿಸಲಾಗಿದೆ. ಶಿವಸೇನೆಯು ಈ ಐದು ಚುನಾವಣಾ ಬಾಂಡ್‌ಗಳನ್ನು 11 ಜುಲೈ 2019 ರಂದು ನಗದು ಮಾಡಿದೆ ಎಂದು ದಿ ಕ್ವಿಂಟ್ ಸುದ್ದಿ ಮಾಧ್ಯಮ ವರದಿಮಾಡಿದೆ.
ಅಲ್ಲಾನಾ ಕೋಲ್ಡ್ ಸ್ಟೋರೇಜ್ 1 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ, ಇವುಗಳನ್ನು ಜುಲೈ 2019 ರಲ್ಲಿ ಶಿವಸೇನೆ ನಗದು ಮಾಡಿದೆ.
ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ 9 ಅಕ್ಟೋಬರ್ 2019 ರಂದು ರೂ 1 ಕೋಟಿ ಮೌಲ್ಯದ ಮತ್ತೊಂದು ಬಾಂಡ್ ಅನ್ನು ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 19 ಅಕ್ಟೋಬರ್ 2019 ರಂದು ನಗದು ಮಾಡಿದೆ.
Frigerio Conserva Allana 22 ಜನವರಿ 2020 ರಂದು ರೂ 1 ಕೋಟಿ ಮೌಲ್ಯದ ಮತ್ತೊಂದು ಬಾಂಡ್ ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 3 ಫೆಬ್ರವರಿ 2020 ರಂದು ನಗದು ಮಾಡಿದೆ.
ವಿಧಾನಸಭಾ ಚುನಾವಣೆಗೂ ಮುನ್ನ ಐಟಿ ದಾಳಿ ;
2019 ರ ಜನವರಿ ತಿಂಗಳ ಮೊದಲ ವಾರದಲ್ಲಿ, ಆದಾಯ ತೆರಿಗೆ ಇಲಾಖೆಯ ಮುಂಬೈ ವಿಭಾಗವು ಅಲ್ಲಾನಾ ಗ್ರೂಪ್ ಮೇಲೆ ದಾಳಿ ನಡೆಸಿತು. ಎಕನಾಮಿಕ್ ಟೈಮ್ಸ್ ಪ್ರಕಾರ ಎರಡು ದಿನಗಳ ಕಾಲ 100 ಕ್ಕೂ ಹೆಚ್ಚು ಘಟಕಗಳಲ್ಲಿ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಅದೇ ವರ್ಷ ಏಪ್ರಿಲ್‌ನಲ್ಲಿ, ಈ ಕಂಪನಿಯು 2,000 ಕೋಟಿ ರೂಪಾಯಿ ತೆರಿಗೆ ವಂಚಿಸಿದೆ ಎಂದು ಇಲಾಖೆ ಆರೋಪಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಈ ಕಂಪನಿಯು ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.
ವಾಸ್ತವವಾಗಿ, ಮೇಲೆ ತಿಳಿಸಿದಂತೆ 2019 ರ ಅಕ್ಟೋಬರ್‌ನಲ್ಲಿ ರಾಜ್ಯ ಚುನಾವಣೆಯ ಸಮೀಪದಲ್ಲಿ ಬಿಜೆಪಿಯಿಂದ 1 ಕೋಟಿ ರೂಪಾಯಿ ಮೌಲ್ಯದ ಒಂದು ಬಾಂಡ್ ಅನ್ನು ಎನ್‌ಕ್ಯಾಶ್ ಮಾಡಲಾಗಿದೆ.
2014-2015ರಲ್ಲೂ 2.5 ಕೋಟಿ ದೇಣಿಗೆ ಪಡೆದ ಬಿಜೆಪಿ ;
2014-2015ರಲ್ಲಿಯೂ ಬಿಜೆಪಿ ಗೋಮಾಂಸ ರಪ್ತು ಕಂಪನಿಗಳಿಂದ 2.5 ಕೋಟಿ ದೇಣಿಗೆ ಪಡೆದಿದೆ ಎಂದು ಡಿಸೆಂಬರ್ 16, 2015 ರ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳುತ್ತದೆ. 2014 ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ, ಫ್ರಿಗೊರಿಫಿಕೊ ಅಲ್ಲಾನಾ ಲಿಮಿಟೆಡ್, ಫ್ರಿಜೆರಿಯೊ ಕನ್ವರ್ವಾ ಅಲ್ಲಾನಾ ಲಿಮಿಟೆಡ್ ಮತ್ತು ಇಂಡಾಗ್ರೋ ಫುಡ್ಸ್ ಲಿಮಿಟೆಡ್ ಈ ಮೂರು ಕಂಪನಿಗಳು ಬಿಜೆಪಿ ಪಕ್ಷಕ್ಕೆ 2.5 ಕೋಟಿ ರೂ. ದೇಣಿಗೆ ಕೊಟ್ಟಿವೆ. 50 ಲಕ್ಷ ರೂ. ಗಳಂತೆ ನಾಲ್ಕು ವಹಿವಾಟುಗಳಲ್ಲಿ ವಿಜಯಾ ಬ್ಯಾಂಕ್ ಮೂಲಕ 2 ಕೋಟಿ ರೂಪಾಯಿ ದೇಣಿಗೆ ಕೊಟ್ಟಿದೆ.
ಶೇ. 100 ತೆರಿಗೆ ವಿನಾಯಿತಿಯನ್ನು ಪಡೆಯಲು ರಾಜಕೀಯ ಪಕ್ಷಗಳು ವಾರ್ಷಿಕವಾಗಿ ಯಾವುದೇ ವ್ಯಕ್ತಿ ಅಥವಾ ಕಂಪನಿಯಿಂದ ಸ್ವೀಕರಿಸಿದ 20,000 ರೂ.ಗಿಂತ ಹೆಚ್ಚಿನ ಕೊಡುಗೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 29C ಕಡ್ಡಾಯಗೊಳಿಸುತ್ತದೆ. ಈ ಕಾರಣದಿಂದಾಗಿ, ಗೋಮಾಂಸ ಕಂಪನಿಗಳ ನಡುವಿನ ತಮ್ಮ ಪಕ್ಷದ ರಹಸ್ಯ ವ್ಯವಹಾರವನ್ನು ಬಹಿರಂಗಪಡಿಸಲು ಇಚ್ಚೆ ಇಲ್ಲದಿದ್ದರೂ, ಬಿಜೆಪಿ ಅನಿವಾರ್ಯವಾಗಿ 2014-2015ರ ತಾನು ಪಡೆದ ದೇಣಿಗೆ ಪಟ್ಟಿಯನ್ನು ನವೆಂಬರ್‌ನಲ್ಲಿ ಸಲ್ಲಿಸಿತ್ತು. ಮುಂದೆ ಇಂತಹ ರಹಸ್ಯ ವ್ಯವಹಾರಗಳು ಬಹಿರಂಗವಾಗದಿರಲಿ ಎಂದೇ ನಂತರದ ದಿನಗಳಲ್ಲಿ ಚುನಾವಣಾ ಬಾಂಡ್ ಎಂಬ ಹೊಸ ವ್ಯವಸ್ಥೆ ಜಾರಿಗೆ ತಂದರು.
Rose Revolution ಪ್ರಸ್ತಾಪ
ವಿಚಿತ್ರವೆಂದರೆ, ಆ ಸಮಯದಲ್ಲಿಯೂ ನರೇಂದ್ರ ಮೋದಿ ಅವರು ಗೋಮಾಂಸ ರಫ್ತು ವಿಷಯವನ್ನು ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿಸಿದ್ದರು!! ಕಾಂಗ್ರೆಸ್ ಪಕ್ಷವನ್ನು ಟೀಕಿಸಲು 2014ರ ಏಪ್ರಿಲ್‌ನಲ್ಲಿ ಬಿಹಾರದ ನವಾಡದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು “ಗುಲಾಬಿ ಕ್ರಾಂತಿ” (Rose Revolution) ಅನ್ನು ಉಲ್ಲೇಖಿಸಿದ್ದರು. ಹಿಂದಿನ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಸರ್ಕಾರವು ಕಸಾಯಿಖಾನೆಗಳು ಮತ್ತು ಮಾಂಸ ರಫ್ತುದಾರರನ್ನು ಉತ್ತೇಜಿಸುವ ನೀತಿಗಳನ್ನು ಟೀಕಿಸಲು, ಹಸಿ ಮಾಂಸದ ಬಣ್ಣವನ್ನು ‘ಗುಲಾಬಿ ಕ್ರಾಂತಿ’ ಎಂದು ಪ್ರಸ್ತಾಪಿಸಿದ್ದರು.
2015ರಲ್ಲಿ ನಡೆದ ದಾದ್ರಿ ಹತ್ಯೆ ಮತ್ತು ಕೇರಳ ಹೌಸ್ ದಾಳಿಯಂತಹ ಘಟನೆಗಳು “ಅಸಹಿಷ್ಣುತೆ” ಕುರಿತು ಚರ್ಚೆಗೆ ಕಾರಣವಾಯಿತು ಮತ್ತು ಹಲವಾರು ಬಿಜೆಪಿ ಸದಸ್ಯರು ಗೋಮಾಂಸ ಸೇವನೆಯ ವಿರುದ್ಧ ಮಾತನಾಡಿದ್ದರು.
ಇಲ್ಲಿ ಗೋಮಾಂಸ ಇಲ್ಲವೇ?
ಅಲ್ಲಾನಾಸನ್ಸ್ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ನಂ. 1 ಗೋಮಾಂಸ ರಫ್ತುದಾರ ಕಂಪನಿ. ಇದು ಭಾರತದಿಂದ ಒಟ್ಟು ಗೋಮಾಂಸ ರಫ್ತಿನಲ್ಲಿ ಶೇ. 31.29 ಪ್ರಮಾಣವನ್ನು ರಫ್ತು ಮಾಡುತ್ತದೆ. ಅವರ ವಾರ್ಷಿಕ ವಹಿವಾಟು, ಅವರೇ ಹೇಳುವಂತೆ ರೂ. 500 ರಿಂದ 1,000 ಕೋಟಿ.
“ಭಾರತದಲ್ಲಿ ಎಮ್ಮೆ ಮಾಂಸ ರಫ್ತು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಹೆಪ್ಪುಗಟ್ಟಿದ ಹಲಾಲ್ ಮೂಳೆಗಳಿಲ್ಲದ ಎಮ್ಮೆ ಮಾಂಸದ ವಿಶ್ವದ ಅತಿದೊಡ್ಡ ಉತ್ಪಾದಕ ಮತ್ತು ರಫ್ತುದಾರ” ಎಂದು ಅಲ್ಲಾನಾಸನ್ಸ್ ಲಿಮಿಟೆಡ್‌ಸ್ವತಃ ವಿವರಿಸುತ್ತದೆ. ಆದರೆ, ಹೆಮ್ಮೆ ಮಾಂಸದ ಹೆಸರಿನಲ್ಲಿ ಗೋವುಗಳ ಮಾಂಸವನ್ನೂ ಮಾರಾಟ ಮಾಡಲಾಗುತ್ತಿದೆ ಎಂದು ಹಲವರು ಹೇಳುತ್ತಾರೆ. ಈ ಮಾತುಗಳನ್ನು ಸ್ವತಃ ಗೋರಕ್ಷಕ ಸಂಘಟನೆಗಳೇ ಹೇಳುತ್ತಿವೆ.
ಎಪ್ರಿಲ್ 12, 2015ರ ಬಿಸಿನೆಸ್ ಟುಡೆ ಪತ್ರಿಕೆಯ ವರದಿ ಹೀಗೆ ಹೇಳುತ್ತದೆ: “ಎಮ್ಮೆ ಮಾಂಸದ ನೆಪದಲ್ಲಿ ಹಸುವಿನ ಮಾಂಸವನ್ನು ಅಕ್ರಮವಾಗಿ ಸ್ವದೇಶದಲ್ಲಿ ಮಾರಾಟ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನೀವು ದುಬೈನಲ್ಲಿ ಭಾರತೀಯ ಹಸುವಿನ ಮಾಂಸವನ್ನು ಕೇಳಿದರೆ, ನೀವು ಅದನ್ನು ಪಡೆಯಬಹುದು. ಮೋದಿ ಸರ್ಕಾರವು ಮಾಂಸ ರಫ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ರಾಷ್ಟ್ರೀಯ ಗೋರಕ್ಷಾ ಸೇನೆಯ ಅಧ್ಯಕ್ಷ ಅಶೂ ಮೊಂಗಿಯಾ ಹೇಳುತ್ತಾರೆ. ಆದರೆ, ಉದ್ಯಮವು ಆರೋಪವನ್ನು ತಳ್ಳಿಹಾಕುತ್ತದೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮಾಂಸ ಸಂಸ್ಕರಣಾ ಘಟಕವನ್ನು ನಡೆಸುತ್ತಿರುವ ದೆಹಲಿ ಮೂಲದ ಅಲ್ ನೂರ್ ಎಕ್ಸ್‌ಪೋರ್ಟ್ಸ್‌ನ ಪಾಲುದಾರ ಸುನಿಲ್ ಸುದ್ “ಇಷ್ಟು ಬಂಡವಾಳ ಹಾಕಿ ಮಾರುಕಟ್ಟೆ ನಿರ್ಮಿಸಿದ ನಂತರ, ಗೋಮಾಂಸವನ್ನು ರಹಸ್ಯವಾಗಿ ಮಾರಾಟ ಮಾಡುವ ಮೂಲಕ ಎಲ್ಲವನ್ನೂ ಹಾಳುಮಾಡುವ ಅಪಾಯವನ್ನು ಯಾರು ತೆಗೆದುಕೊಳ್ಳುತ್ತಾರೆ?” ಎನ್ನುತ್ತಾರೆ.
ಗೋ ಮಾಂಸ ಮಾರಾಟಗಾರರು ಮತ್ತು ಬಿಜೆಪಿ ಹಾಗೂ ಶಿವಸೇನೆ ನಡುವಿನ ಚುನಾವಣಾ ಬಾಂಡ್ ನ ಕೊಡು ಕೊಳ್ಳುವಿಕೆಯ ವ್ಯವಹಾರ ಬಹಿರಂಗಗೊಂಡ ನಂತರ ಗೋರಕ್ಷಾ ಸೇನೆಯ ಆರೋಪಕ್ಕೆ ಪುಷ್ಠಿ ದೊರಕಿದೆ. ಹಿಂದುತ್ವವಾದಿಗಳಿಂದ ಕಂಪನಿಗೆ ಅಂತಹ ಅಪಾಯ ಬಾರದಿರಲಿ ಎಂದೋ, ಅಥವಾ ನಮ್ಮ ಪಕ್ಷಕ್ಕಿಷ್ಟು ಹಣ ದಾನ ಮಾಡಿದರೆ, ನಾವು ನಿಮ್ಮ ತಂಟೆಗೆ ಬರುವುದಿಲ್ಲ ಎಂದೋ ‘ಕೊಡು ಕೊಳ್ಳುವ ವ್ಯವಹಾರ’ ನಡೆದಿರುತ್ತದೆ.
ರಾಜ್ಯಗಳಲ್ಲಿ ಗೋಮಾಂಸ ನಿಷೇಧ ;
ಮಾರ್ಚ್ 2015ರಲ್ಲಿ ಮಹಾರಾಷ್ಟ್ರ ಸರ್ಕಾರವು ಗೋಮಾಂಸ ಮಾರಾಟ ಮತ್ತು ಸ್ವಾಧೀನದ ಮೇಲೆ ನಿಷೇಧ ಹೇರಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನು ಜಾರಿಗೆ ತರುತ್ತದೆ. ಆ ನಂತರ ಆ ರಾಜ್ಯದಲ್ಲಿ ಜಾನುವಾರುಗಳನ್ನು ಸಾಗಿಸುವ ಟ್ರಕ್‌ಗಳ ಮೇಲೆ ಜಾಗೃತದಳದ ದಾಳಿ ಹೆಚ್ಚಾಯಿತು. ಬಿಜೆಪಿ ಆಡಳಿತದ ಮತ್ತೊಂದು ರಾಜ್ಯ ಹರಿಯಾಣ ಕೂಡ ನಿಷೇಧವನ್ನು ಅನುಸರಿಸಿತು. ಗೋಹತ್ಯೆಯ ವಿರುದ್ಧ ಬಲವಾದ ಕಾನೂನುಗಳನ್ನು ಪ್ರೋತ್ಸಾಹಿಸಿದ ಹಿಂದೂ ರಾಷ್ಟ್ರೀಯವಾದಿ ಸರ್ಕಾರದಿಂದ ಉತ್ತೇಜಿತವಾಗಿ, “ಗೋಸಂರಕ್ಷಣೆ” ಗುಂಪುಗಳು ದೇಶಾದ್ಯಂತ ಹರಡಿಕೊಂಡಿವೆ.
ಮೇ 25, 2017 ರಂದು ಕೇಂದ್ರದಲ್ಲಿನ ಮೋದಿ ಸರ್ಕಾರ ಸಂವಿಧಾನದ 48 ನೇ ವಿಧಿಯನ್ನು ಕ್ರಿಯಾತ್ಮಕಗೊಳಿಸಿತು. ಇದು ಜನರ ಆಹಾರದ ಹಕ್ಕಿನ ಮೇಲಿನ ದಾಳಿ ಎಂದು ಇದನ್ನು ಹಲವರು ವಿರೋಧಿಸುತ್ತಾರೆ. ಇದರ ವಿರುದ್ದ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟಗಳೂ ನಡೆಯುತ್ತವೆ. ಗೋರಕ್ಷಕ ಗುಂಪುಗಳಿಂದ ಹೆಚ್ಚುತ್ತಿರುವ ಹಿಂಸಾಚಾರವನ್ನು ಎದುರಿಸುತ್ತಿರುವ ಬಹುತೇಕ ಮುಸ್ಲಿಂ ಮಾಂಸ ಮತ್ತು ಚರ್ಮದ ವ್ಯಾಪಾರಿಗಳಿಗೆ ನಿಷೇಧವು ನೋವುಂಟು ಮಾಡುತ್ತದೆ. ಹಾಲು ಕೊಡದ ಮತ್ತು ವಯಸ್ಸಾದ ಜಾನುವಾರುಗಳನ್ನು ಮಾರಾಟ ಮಾಡದೇ ಇರುವುದರಿಂದ ರೈತರು ಸಾಂಪ್ರದಾಯಿಕ ಆದಾಯದ ಮೂಲದಿಂದ ವಂಚಿತರಾಗುತ್ತಾರೆ ಮತ್ತು ರೈತರು ಹಸು ಸಾಕಾಣಿಕೆಯಿಂದ ದೂರ ಸರಿಯುವಂತಾಗುತ್ತದೆ ಎಂಬ ಆತಂಕದ ಮಾತುಗಳೂ ಕೇಳಿ ಬರುತ್ತದೆ. ವ್ಯಕ್ತಿಯ ಆಹಾರದ ಆಯ್ಕೆಗೆ ಸಂಬಂಧಿಸಿದಂತೆ ವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕೆಲವರು ನ್ಯಾಯಾಲದ ಮೊರೆ ಹೋಗುತ್ತಾರೆ.
2017 ರ ನಂತರ ಗುಜರಾತ್, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶದಂತಹ ರಾಜ್ಯಗಳು ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ, ಪಶ್ಚಿಮ ಬಂಗಾಳದಂತಹ ಇತರ ರಾಜ್ಯಗಳು “ಹತ್ಯೆಗೆ ಯೋಗ್ಯ” ಪ್ರಮಾಣಪತ್ರವನ್ನು ಪಡೆದ ನಂತರ ಹಳೆಯ ಅಥವಾ ಉಪಯೋಗಕ್ಕೆ ಬಾರದ ಗೋವುಗಳ ಸಂದರ್ಭದಲ್ಲಿ ಅದನ್ನು ಅನುಮತಿಸುತ್ತವೆ. ಈ ಕಾನೂನುಗಳ ಉಲ್ಲಂಘನೆಗಾಗಿ ಶಿಕ್ಷೆಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ಇಂದಿನವರೆಗೆ, ಕೇರಳ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂನಲ್ಲಿ ಗೋಹತ್ಯೆ ನಿಷೇಧಿಸುವ ಯಾವುದೇ ಕಾನೂನು ಇಲ್ಲ.
ಗೋರಕ್ಷಕರಿಂದ 40 ಕ್ಕೂ ಹೆಚ್ಚು ಜನರ ಹತ್ಯೆ ;
2015 ರಿಂದೀಚೆಗೆ, ಗೋಹತ್ಯೆ ಅಥವಾ ಗೋಮಾಂಸ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಗೋರಕ್ಷಕರು ಎಂದು ಹೇಳಿಕೊಳ್ಳುವ ಗುಂಪುಗಳಿಂದ ದೇಶದಲ್ಲಿ ಮುಸ್ಲಿಂ ಪುರುಷರನ್ನು ಹತ್ಯೆಗೈದ 40 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಗೋಮಾಂಸ ಸೇವಿಸುತ್ತಿದ್ದಾರೆ ಎಂಬ ವದಂತಿಯ ಮೇಲೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ದಾದ್ರಿಯಲ್ಲಿ 2015ರ ಸೆಪ್ಟೆಂಬರ್ ನಲ್ಲಿ 50 ವರ್ಷದ ಮೊಹಮ್ಮದ್ ಅಖ್ಲಾಕ್ ಎಂಬ ವ್ಯಕ್ತಿಯನ್ನು ಅವರ ಮನೆಗೆ ನುಗ್ಗಿ ಗೋರಕ್ಷಕರ ಗುಂಪು ಹೊಡೆದು ಕೊಂದುಹಾಕಿತು. ಅವರ 22 ವರ್ಷದ ಮಗನನ್ನು ತೀವ್ರವಾಗಿ ಥಳಿಸಿದರು. ರಾತ್ರಿ 10 ಗಂಟೆಯ ಸುಮಾರಿಗೆ ಕುಟುಂಬವು ಗೋಮಾಂಸ ಸೇವಿಸುತ್ತಿದೆ ಎಂದು ಸ್ಥಳೀಯ ದೇವಸ್ಥಾನದಲ್ಲಿ ಘೋಷಣೆ ಮಾಡಿದ ನಂತರ ಈ ದಾಳಿ ನಡೆಯಿತು. ಅಖ್ಲಾಕ್ ಅವರ ಪುತ್ರಿ ಸಾಜಿದಾ, ಮನೆಯ “ಫ್ರಿಡ್ಜ್ನಲ್ಲಿ ಮಾಂಸ” ಇತ್ತು, ಅದು ಗೋಮಾಂಸವಲ್ಲ ಎಂದು ಹೇಳಿದರು. ಅಖ್ಲಾಕ್ ನ ಮನೆಯಿಲ್ಲದ್ದ ಮಾಂಸದ ಮಾದರಿಗಳನ್ನು ಪೊಲೀಸರು “ಪರೀಕ್ಷೆಗಾಗಿ ವಿಧಿವಿಜ್ಞಾನ ಇಲಾಖೆಗೆ” ಕಳುಹಿಸಿದರು.
11 ಜುಲೈ 2016 ರಂದು ಸತ್ತ ದನಗಳ ಚರ್ಮ ತೆಗೆದ ಕಾರಣಕ್ಕಾಗಿ ಬಿಜೆಪಿ ಆಡಳಿತವಿದ್ದ ಗುಜರಾತ್ ರಾಜ್ಯದ ಊನಾ ಎಂಬಲ್ಲಿ ದಲಿತ ಕುಟುಂಬದ ಏಳು ಸದಸ್ಯರ ವಿರುದ್ದ ಗೋಹತ್ಯೆ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ಗೋರಕ್ಷಕ ತಂಡದವರು ಥಳಿಸಿದರು. ಇವು ಸತ್ತ ದನಗಳು ಎಂದು ದಲಿತರು ಎಷ್ಟೇ ಹೇಳಿದರೂ, ಕಾಡಿ ಬೇಡಿದರೂ ಒಪ್ಪದ ಗೋರಕ್ಷಕರು ದಲಿತರನ್ನು ಕಾರಿಗೆ ಕಟ್ಟಿ ದೊಣ್ಣೆ, ಕಬ್ಬಿಣದ ಪೈಪು, ಚಾಕುವಿನಿಂದ ಥಳಿಸಿ, ಅವರಲ್ಲಿ ನಾಲ್ವರನ್ನು ಕಾರಿನಲ್ಲಿ ಉನಾ ಪಟ್ಟಣಕ್ಕೆ ಕರೆತಂದು, ಸಾರ್ವಜನಿಕವಾಗಿ ಮತ್ತೆ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದರು.
ಗುಜರಾತಿನ ಆನಂದ್ ಜಿಲ್ಲೆಯ ಕಸೋರ್ ಗ್ರಾಮದಲ್ಲಿ ಸತ್ತ ದನದ ಚರ್ಮವನ್ನು ಸುಲಿದಿದ್ದಕ್ಕಾಗಿ ದಲಿತ ಕುಟುಂಬದ ತಾಯಿ ಮತ್ತು ಮಗನ ಮೇಲೆ ದೌರ್ಜನ್ಯ ನಡೆಸಲಾಯ್ತು. ಕರ್ನಾಟಕದ ಕನಕಪುರದಲ್ಲಿ ಇತ್ತೀಚೆಗೆ, ಗೋವುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ಚಾಲಕನೊಬ್ಬ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಮತ್ತು ದೇಶದ ಹಲವು ಕಡೆಗಳಲ್ಲಿ ಗೋರಕ್ಷಕರಿಂದ ದಾಳಿಗಳು ನಡೆದಿವೆ. ಮತ್ತೊಂದಡೆ, ಗೋ ರಕ್ಷಣೆಗಾಗಿಯೇ ಅವತಾರವೆತ್ತಿ ಬಂದಿದ್ದೇವೆ ಎಂದು ಹೇಳಿಕೊಳ್ಳುವ ಹಿಂದುತ್ವವಾದಿ ರಾಜಕೀಯ ಪಕ್ಷ ಬಿಜೆಪಿ ಗೋಮಾಂಸ ಕಂಪನಿಗಳಿಂದ ದೇಣಿಗೆ ಹೆಸರಿನಲ್ಲಿ ಹಣ ಪಡೆಯುತ್ತಿದೆ.
ಗೋಮಾಂಸ ರಪ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ಎರಡನೆಯ ಸ್ಥಾನ ;
ಭಾರತದಲ್ಲಿ ಸುಮಾರು 150 ಗೋಮಾಂಸ ರಫ್ತುದಾರರಿದ್ದಾರೆ. ಗೋಮಾಂಸ ರಫ್ತಿನ ವರದಿಯ ಪ್ರಕಾರ ಭಾರತವು ವಿಯೆಟ್ನಾಂ, ಮಲೇಷ್ಯಾ, ಇರಾಕ್, ಅಲ್ಜೀರಿಯಾ ಸೇರಿದಂತೆ 50 ದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡುತ್ತದೆ. ಭಾರತವು ವರ್ಷಕ್ಕೆ ಪ್ರಪಂಚದಾದ್ಯಂತ 891.9 USD ಮಿಲಿಯನ್ (ಅಂದಾಜು 7420 ಕೋಟಿ ರೂಪಾಯಿ) ಮೌಲ್ಯದೊಂದಿಗೆ ಎಮ್ಮೆ/ಹಸು ಮಾಂಸವನ್ನು ರಫ್ತು ಮಾಡುತ್ತಿದೆ. 2023ರ ಏಪ್ರಿಲ್ ತಿಂಗಳ ಒಂದು ವರದಿಯಂತೆ ರಂಜಾನ್ ಹಬ್ಬದ ಆ ಒಂದು ತಿಂಗಳಿನಲ್ಲಿ 14,75,000 ಟನ್ ಗಳಷ್ಟು ಗೋಮಾಂಸ ಮತ್ತು ಹೆಮ್ಮೆ ಮಾಂಸ ರಪ್ತಾಗಿದೆ. ಅಲ್ಲಾನಾಸನ್ಸ್ ಪ್ರೈ. ಲಿಮಿಟೆಡ್ ಭಾರತದ ಅತಿ ದೊಡ್ಡ ಗೋಮಾಂಸ ರಫ್ತುದಾರನಾಗಿದ್ದು, ನಂತರದ ಕಂಪನಿಗಳೆಂದರೆ ಅಲ್-ಹಮ್ದ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಿರ್ಹಾ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್.
ನಿಮ್ಮ ಟಿಪ್ಪಣಿ ಬರೆಯಿರಿ