ʻಫಿಲಿಭಿತ್ ಮಾದರಿʼ: ಮತ ಕಳ್ಳತನಕ್ಕೆ ಮತ್ತೊಂದು ಕಳ್ಳಹಾದಿ!

ಈಗ ಪ್ರಕಟವಾಗಿರುವ ಎಸ್‌ಐಆರ್‌ ನ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಎಪಿಕ್ ನಂಬರ್, ನಿಮ್ಮ ಹೆಸರು ಸರಿಯಾಗಿಯೇ ಇದೆ. ಅದನ್ನು ನೀವು ಖಾತರಿ ಪಡಿಸಿಕೊಂಡಿರುತ್ತೀರಿ. ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಎಪಿಕ್ ನಂಬರಿನ ಮುಂದೆ ಬೇರೆ ವ್ಯಕ್ತಿಯ ಹೆಸರು ಕಂಡುಬಂದರೆ? ಪಟ್ಟಿಯಲ್ಲಿ ಹೆಸರು ಬೇರೆಯಾಗಿದ್ದರೆ? ಇದೂ ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆಯೇ? ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಲ್ಲೇ ಬರೋಬ್ಬರಿ 13,500 ಜನರ ಮತಗಳು ಈ ರೀತಿ ಮಾಯವಾಗಿರುವ ಸುದ್ದಿಗಳು ಹೊರಬಂದಿವೆ. ಪತ್ರಿಕೆಗಳು ಈ ಬೆಳವಣಿಗೆಗೆ ‘‘ಫಿಲಿಭಿತ್ ಮಾದರಿ’’ ಎಂದು ಹೆಸರಿಟ್ಟಿವೆ.

ಕರ್ನಾಟಕದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅಕ್ಟೋಬರ್‌ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ನೀವು ನೋಡಿಕೊಳ್ಳುತ್ತೀರಿ. ಇರಬೇಕಾದ ಜಾಗದಲ್ಲಿ ನಿಮ್ಮ ಹೆಸರು ಇರುವುದರಿಂದ ನಿಟ್ಟುಸಿರು ಬಿಡುತ್ತೀರಿ. ಮತದಾರರ ಗುರುತಿನ ಚೀಟಿ ಸಂಖ್ಯೆ (ಎಪಿಕ್), ಮತದಾನ ಕೇಂದ್ರದ ಸಂಖ್ಯೆ ಇವೆಲ್ಲವೂ ಸರಿಯಾಗಿವೆಯೋ ಇಲ್ಲವೋ ಎಂದು ಮತ್ತೊಮ್ಮೆ ಪರಿಶೀಲಿಸಿ, ಅಬ್ಬಾ… ನನ್ನ ವೋಟು ಸುರಕ್ಷಿತವಾಗಿದೆ ಎಂದು ನಿರಾಳವಾಗಿ ಮನೆಗೆ ತಲುಪುತ್ತೀರಿ. ಆದರೆ, ಮತದಾನದ ದಿನದಂದು ಮತ ಹಾಕಲು ಹೋದಾಗ ಮಾತ್ರ ಅಸಲಿ ಸಮಸ್ಯೆ ಎದುರಾಗುತ್ತದೆ. ಮತಗಟ್ಟೆಯ ಬೂತ್‌ನಲ್ಲಿರುವ ಪ್ರಿಸೈಡಿಂಗ್ ಅಧಿಕಾರಿಯ ಬಳಿ ಇರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಎಪಿಕ್ ನಂಬರಿನ ಮುಂದೆ ಬೇರೆ ವ್ಯಕ್ತಿಯ ಹೆಸರು ಕಂಡುಬಂದರೆ? ಎಪಿಕ್ ನಂಬರು ನಿಮ್ಮದೇ. ಆದರೂ ಪಟ್ಟಿಯಲ್ಲಿ ಹೆಸರು ಬೇರೆಯಾಗಿದ್ದರೆ? ‘‘ನೀವು ಅಸಲಿ ವೋಟುದಾರರಲ್ಲ’’ ಎಂದು ಅಧಿಕಾರಿಗಳು ನಿಮ್ಮನ್ನು ಮತ ಹಾಕದಂತೆ ತಡೆಯುತ್ತಾರೆ.

ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಮುಂಚಿತವಾಗಿ ಖಚಿತಪಡಿಸಿಕೊಂಡರೂ… ಮತದಾನದ ಬೂತ್ ಬಳಿ ಬರುವಷ್ಟರಲ್ಲಿ ನಿಮ್ಮ ಮತ ನಿಮಗೆ ಸಿಗದಿದ್ದರೆ? ನಿಮ್ಮ ಮತವೇ ಇಲ್ಲದೆ ಚುನಾವಣೆಗಳು ನಡೆದುಹೋಗುತ್ತವೆ. ದೇಶವನ್ನು, ರಾಜ್ಯವನ್ನು ಆಳುವವರು ಯಾರೆಂಬುದು ನಿಮ್ಮ ಭಾಗವಹಿಸುವಿಕೆ ಇಲ್ಲದೆ ನಿರ್ಧಾರವಾಗುತ್ತದೆ.

ಇನ್ನು, ಮತದ ಹಕ್ಕು ಇಲ್ಲದಿದ್ದರೆ ರೇಷನ್ ಕಾರ್ಡ್ ರದ್ದಾಗುತ್ತೋ, ಗ್ಯಾರೆಂಟಿ ಯೋಜನೆಗಳು ನಿಂತುಹೋಗುತ್ತೋ, ಕೊನೆಗೆ ಪೌರತ್ವವೇ ಪ್ರಶ್ನಾರ್ಥಕವಾಗುತ್ತದೆಯೋ ಎಂಬ ಭಯವೂ ಬೆಂಬಿಡದೆ ಕಾಡುತ್ತವೆ. ಪ್ರಜಾಪ್ರಭುತ್ವದಲ್ಲಿ ಅತ್ಯಂತ ಮುಖ್ಯವಾದ ಮತದ ಹಕ್ಕು ಕಣ್ಣೆದುರೇ ಕೈತಪ್ಪಿಹೋಗುತ್ತದೆ. ಇದೆಲ್ಲವೂ ಯಾವುದೋ ಸಿನಿಮಾ ದೃಶ್ಯವಲ್ಲ. ಊಹಾಪೋಹವಂತೂ ಖಂಡಿತಾ ಅಲ್ಲ. ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯಲ್ಲಿ ನಡೆದ ಅಕ್ರಮಗಳ ಕುರಿತು ಬೆಳಕಿಗೆ ಬಂದ ಘಟನೆ ಇದು. ಇತ್ತೀಚೆಗಷ್ಟೇ, ಅಕ್ಟೋಬರ್ (2026) ತಿಂಗಳಲ್ಲಿ ಬಯಲಿಗೆ ಬಂದ ಈ ಪ್ರಕರಣದಲ್ಲಿ ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಲ್ಲೇ ಬರೋಬ್ಬರಿ 13,500 ಜನರ ಮತಗಳು ಮಾಯವಾಗಿರುವಂತೆ ಸುದ್ದಿಗಳು ಹೊರಬಂದಿವೆ. ಪತ್ರಿಕೆಗಳು ಈ ಬೆಳವಣಿಗೆಗೆ ‘‘ಫಿಲಿಭಿತ್ ಮಾದರಿ’’ ಎಂದು ಹೆಸರಿಟ್ಟಿವೆ.

ಅಕ್ಟೋಬರ್ 23 ರಂದು ನಡೆದ ಎಂಎಲ್‌ಸಿ ಚುನಾವಣೆಗಳಲ್ಲಿ, ಝಾನ್ಸಿ ಮತ್ತು ಅಲಹಾಬಾದ್ ವಿಭಾಗಗಳ ಮತದಾರರ ಪಟ್ಟಿಗಳಲ್ಲಿಯೂ ಇದೇ ರೀತಿಯ ಅಕ್ರಮಗಳು ಕಂಡುಬಂದಿವೆ. ಇವುಗಳಲ್ಲಿ “ರಾಮ್ ನೇ ಮಾರಾ ಯಾದವ್” (Ram ne maara Yadav) ನಂತಹ ವಿಚಿತ್ರ ಹೆಸರುಗಳೂ ಸೇರಿವೆ.

ಚುನಾವಣಾ ಆಯೋಗವು ಪಿಲಿಭಿತ್‌ನಲ್ಲಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳಾಗಿ (SDMs) ನೇಮಕಗೊಂಡಿದ್ದ ಇಬ್ಬರು ERO ಗಳಾದ ಮಾಯಾಂಕ್ ಗೋಸ್ವಾಮಿ ಮತ್ತು ಹೇಮಂತ್ ಚೌಧರಿ ಅವರನ್ನು ಅಕ್ಟೋಬರ್ 31 ರಂದು ಅಮಾನತುಗೊಳಿಸಿತು. ಅವರನ್ನು ರಾಜ್ಯ ಸರ್ಕಾರವು ಮೊದಲೇ ವರ್ಗಾವಣೆ ಮಾಡಿ ಕಾಯುವ ಪಟ್ಟಿಯಲ್ಲಿ ಇರಿಸಿತ್ತು. ಈ ಇಬ್ಬರು ಚುನಾವಣಾ ನೋಂದಣಿ ಅಧಿಕಾರಿಗಳು ಮತ್ತು ಕಂಪ್ಯೂಟರ್ ಆಪರೇಟರ್ ವಿರುದ್ಧದ ಎಫ್‌ಐಆರ್‌ಗೆ ಬಿಎನ್‌ಎಸ್‌ನ ಸೆಕ್ಷನ್ 198 ಅನ್ನು ಸೇರಿಸಲು ಉತ್ತರ ಪ್ರದೇಶ ಪೊಲೀಸರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಗಳು ನವೆಂಬರ್‌ 3 ರಂದು ತಿಳಿಸಿದ್ದಾರೆ. (ಬಿಎನ್‌ಎಸ್ ಸೆಕ್ಷನ್ 198, ಯಾವುದೇ ವ್ಯಕ್ತಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಅಥವಾ ಅರಿವಿನೊಂದಿಗೆ, ಕಾನೂನಿನ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಸರ್ಕಾರಿ ನೌಕರರಿಗೆ ಸಂಬಂಧಿಸಿದೆ.)

ಫಿಲಿಭಿತ್‌ನಲ್ಲಿ ಬಯಲಾದ ಮತ ಕಳ್ಳತನ

ಉತ್ತರ ಪ್ರದೇಶದಲ್ಲೂ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವರ್ಷದ ಏಪ್ರಿಲ್ 15 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 4 ರಂದು ಫಿಲಿಭಿತ್ ಕ್ಷೇತ್ರದ ಕೇಂದ್ರದಲ್ಲಿದ್ದ ಓರ್ವ ಮತದಾರ ಸ್ಥಳೀಯ ಕಂಪ್ಯೂಟರ್ ಕೇಂದ್ರಕ್ಕೆ ತೆರಳಿ ತನ್ನ ಮತದಾರರ ಗುರುತಿನ ಚೀಟಿಯನ್ನು ಪ್ರಿಂಟ್ ಔಟ್‌ ತೆಗೆಸಿಕೊಂಡನು. ಆಪರೇಟರ್ ನೀಡಿದ ಕಾರ್ಡ್ ನೋಡಿ ಆತ ಆಘಾತಕ್ಕೊಳಗಾದ. ಅದರಲ್ಲಿ ಎಪಿಕ್ ನಂಬರು ಹಳೆಯದೇ, ಉಳಿದ ವಿವರಗಳೂ ಹಳೆಯದೇ. ಆದರೆ ಆತನ ಹೆಸರು ಮತ್ತು ತಂದೆಯ ಹೆಸರು ಮಾತ್ರ ಸಂಪೂರ್ಣವಾಗಿ ಬದಲಾಗಿ ಹೊಸ ಹೆಸರುಗಳು ಕಾಣಿಸಿಕೊಂಡವು! ಅದೇ ಸಮಯದಲ್ಲಿ ಅಲ್ಲಿದ್ದ ರೇಹಾನ್ ಅಲಿ ಎಂಬ ವಕೀಲರು ಎಚ್ಚೆತ್ತುಕೊಂಡು ತಮಗೆ ತಿಳಿದಿದ್ದ ಹತ್ತು ಮಂದಿ ಸಂಬಂಧಿಕರ ಎಪಿಕ್ ನಂಬರುಗಳನ್ನು ಸಂಗ್ರಹಿಸಿ ಅದೇ ಕಂಪ್ಯೂಟರ್ ಕೇಂದ್ರದಲ್ಲಿ ಪರಿಶೀಲಿಸಿದಾಗ, ಅವರಲ್ಲಿ ನಾಲ್ಕು ಜನರ ವಿಚಾರದಲ್ಲಿ ಅಕ್ರಮ ನಡೆದಿರುವುದು ಕಂಡುಬಂತು. ಸ್ಥಳೀಯವಾಗಿ ಕೋಲಾಹಲ ಉಂಟಾದಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್ ನಾಯಕರು ಜಿಲ್ಲಾ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದರು. ಜಿಲ್ಲಾ ಅಧಿಕಾರಿಗಳು ಈ ಅಕ್ರಮವನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದರು. ಅಧಿಕಾರಿಗಳ ಮೇಲಿನ ನಂಬಿಕೆ ಕಳೆದುಕೊಂಡ ಸ್ಥಳೀಯ ಯುವಜನರು ಗುಂಪುಗಳಾಗಿ ಏರ್ಪಟ್ಟು ಐದು ದಿನಗಳ ಕಾಲ ಕ್ಷೇತ್ರದ ಮತದಾರರ ಸಂಪೂರ್ಣ ಪಟ್ಟಿಯ ಮೇಲೆ ಪರಿಶೀಲನೆ ನಡೆಸಿದರು.

ಈ ಪರಿಶೀಲನೆಯಲ್ಲಿ ಒಟ್ಟು 13,500 ಜನ ಮತದಾರರ ಹೆಸರುಗಳು ಬದಲಾಗಿರುವುದನ್ನು ಗುರುತಿಸಿದರು. 2022 ರ ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಗೆದ್ದ ಶಾಸಕರಿಗೆ ಬಂದ ಹೆಚ್ಚುವರಿ ಮತಗಳು ಸುಮಾರು ಆರು ಸಾವಿರ ಮಾತ್ರ. ಇದರಿಂದ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಮಟ್ಟದಲ್ಲಿ ಕುತಂತ್ರದಿಂದ ಹೆಸರುಗಳನ್ನು ಬದಲಾಯಿಸಿದ್ದಾರೆಂಬ ಅನುಮಾನಗಳು ವ್ಯಕ್ತವಾದವು. ಮಾಯವಾಗಿರುವ ಮತಗಳಲ್ಲಿ ಹೆಚ್ಚಿನ ಪಾಲು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವುಗಳೇ ಎಂದು ಸ್ಥಳೀಯರು ಆರೋಪಿಸಿದರು. ಅಧಿಕಾರದಲ್ಲಿರುವ ಬಿಜೆಪಿ ನಾಯಕರು, ಚುನಾವಣಾ ಆಯೋಗದ ಉನ್ನತಾಧಿಕಾರಿಗಳ ಪಾತ್ರದ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಮತದಾರರ ಗುರುತಿನ ಚೀಟಿಯಲ್ಲಿ ಎಪಿಕ್ ನಂಬರು ಹಾಗೇ ಇದ್ದು, ಅದೇ ನಂಬರಿಗೆ ಸಂಬಂಧಿಸಿದ ಹೆಸರು ಬದಲಾಗಿರುವುದು ಸಾಮಾನ್ಯ ತಾಂತ್ರಿಕ ತಪ್ಪೆಂದು ತಳ್ಳಿಹಾಕಲಾಗದ ವಿಷಯ. ಮತದಾರರು ತಮ್ಮ ವಿವರಗಳನ್ನು ಸರಿಪಡಿಸಿಕೊಂಡರೂ, ಅಧಿಕೃತ ಪಟ್ಟಿಯಲ್ಲೇ ಹೆಸರು ಬದಲಾದರೆ ಅವರಿಗೆ ತಮ್ಮ ಮತದಾನದ ಹಕ್ಕನ್ನು ಸಾಬೀತುಪಡಿಸುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಇಂತಹ ಬದಲಾವಣೆಗಳು ಯಾವಾಗ ನಡೆದವು, ಯಾರು ಮಾಡಿದರು, ಅವುಗಳಿಗೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳು ಹೊರಬರಬೇಕು.

ಯಾವುದೇ ದೂರುಗಳು, ದಾಖಲೆಗಳು ಇಲ್ಲದೆಯೇ….

ಪ್ರತಿಪಕ್ಷಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ತನಿಖೆ ಕೈಗೊಳ್ಳಬೇಕಾಗಿ ಬಂದಿತು. ಅಕ್ಟೋಬರ್ 23 ರಂದು ಪತ್ರಿಕಾ ಪ್ರತಿನಿಧಿಗಳಿಗೆ ವಿವರಗಳನ್ನು ತಿಳಿಸಿದ ಅವರು, ಅಂತಿಮ ಪಟ್ಟಿ ಪ್ರಕಟಿಸಿದ ನಂತರ ಮತದಾರರ ಹೆಸರುಗಳಲ್ಲಿ ಬದಲಾವಣೆಗಳು ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡರು. ಇಬ್ಬರು ಇಆರ್‌ಒಗಳನ್ನು, ಒಬ್ಬ ಕಂಪ್ಯೂಟರ್ ಆಪರೇಟರ್ ಅನ್ನು ಕರ್ತವ್ಯದಿಂದ ವಜಾಗೊಳಿಸಿದ್ದೇವೆ ಹಾಗೂ ಮೂವರ ಮೇಲೆ ಪೊಲೀಸ್ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ತಿಳಿಸಿದರು. ಒಟ್ಟು 13,500 ಮತಗಳು ಈ ರೀತಿಯಲ್ಲಿ ಮಾಯವಾಗಿವೆ, ಯಾವುದೇ ದೂರುಗಳು ಅಥವಾ ದಾಖಲೆಗಳು ಇಲ್ಲದೆಯೇ ಮೇ 31 ರಿಂದ ಆಗಸ್ಟ್ 29 ರ ನಡುವೆ ಆನ್‌ಲೈನ್‌ನಲ್ಲಿ ಈ ವ್ಯವಹಾರ ನಡೆದಿದೆ ಎಂದು ಹೇಳಿದರು. ಇದು ಸಾಮಾನ್ಯ ತಪ್ಪಲ್ಲ, ಅಪರಾಧಿಕ ಕುತಂತ್ರದ ಕೋನದಲ್ಲಿ ಪರಿಶೀಲಿಸಬೇಕಾದ ವಿಷಯ ಎಂದು ರಾಜ್ಯ ಚುನಾವಣಾ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಫಿಲಿಭಿತ್ ವ್ಯವಹಾರವು ಆಕಸ್ಮಿಕವಾಗಿ ಬಯಲಿಗೆ ಬಂದಿದೆ. ಅಲ್ಲಿನ ಜನರು ಎಚ್ಚೆತ್ತುಕೊಂಡು ಅಧಿಕಾರಿಗಳನ್ನು ಪ್ರಶ್ನಿಸಿದರು. ಉತ್ತರ ಪ್ರದೇಶದ ಉಳಿದ ಕ್ಷೇತ್ರಗಳಲ್ಲೂ ಇಂತಹ ಅಕ್ರಮಗಳು ನಡೆದಿಲ್ಲ ಎಂಬುದಕ್ಕೆ ಗ್ಯಾರೆಂಟಿ ಇಲ್ಲ. ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯಾದ್ಯಂತ ಯುವಜನರು ಮತ್ತು ಸ್ವಯಂಸೇವಾ ಸಂಘಗಳ ಸಹಕಾರದೊಂದಿಗೆ ಮತದಾರರ ಪಟ್ಟಿಗಳನ್ನು ಪರಿಶೀಲಿಸುವುದಾಗಿ ಪ್ರಕಟಿಸಿವೆ. ಆ ಪ್ರಕ್ರಿಯೆ ಪೂರ್ಣಗೊಂಡರೆ ರಾಜ್ಯಾದ್ಯಂತ ʼಫಿಲಿಭಿತ್ ಮಾದರಿʼ ಯಾವ ಮಟ್ಟಿಗೆ ಜಾರಿಯಾಗಿದೆ ಎಂಬುದು ಹೊರಬರುವ ಸಾಧ್ಯತೆಯಿದೆ. ಅಕ್ರಮಗಳು ಮತ್ತಷ್ಟು ವ್ಯವಸ್ಥಿತವಾಗಿ ನಡೆದಿದ್ದರೆ ಅವು ಹೊರಬರದಿರಬಹುದು ಎಂಬ ಕಳವಳವೂ ವ್ಯಕ್ತವಾಗುತ್ತಿದೆ. ಬಿಹಾರ, ಪಶ್ಚಿಮಬಂಗಾಳ ಮುಂತಾದ ರಾಜ್ಯಗಳಲ್ಲಿ ಲಕ್ಷಾಂತರ ಮತಗಳ ತೆಗೆದುಹಾಕುವಿಕೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮತದಾರರ ಪಟ್ಟಿಗಳ ಬಗ್ಗೆ ಸಂದೇಹಗಳಿದ್ದರೆ ಅವುಗಳನ್ನು ಪಾರದರ್ಶಕವಾಗಿ ಪರಿಶೀಲಿಸಬೇಕಾದ ಅವಶ್ಯಕತೆಯಿದೆ.

ವಿದೇಶಿ ನುಸುಳುಕೋರರನ್ನು ಪತ್ತೆಹಚ್ಚುತ್ತೇವೆ ಎಂಬ ಗುರಿಯೊಂದಿಗೆ ಪ್ರಾರಂಭವಾದ ಎಸ್‌ಐಆರ್‌ ಪ್ರಕ್ರಿಯೆ, ಅರ್ಹ ಭಾರತೀಯರ ಮತದಾನದ ಹಕ್ಕಿಗೆ ಕುತ್ತು ತರುತ್ತಿದ್ದಾರೆ. ಫಿಲಿಭಿತ್‌ನಲ್ಲಿ ಬಯಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿದರೆ ಅನೇಕ ಅಕ್ರಮಗಳು ಹೊರಬರುವ ಸಾಧ್ಯತೆಯಿದೆ.


ಟಿಪ್ಪಣಿಗಳು

ನಿಮ್ಮದೊಂದು ಉತ್ತರ

ನಮ್ಮ ಹೊಸ ಲೇಖನಗಳನ್ನು ಇ-ಮೇಲ್ ಮೂಲಕ ಪಡೆಯಿರಿ