ಕರ್ನಾಟಕದಲ್ಲಿ ಸ್ಥಳಾಂತರಗೊಂಡ, ಗೈರಾದ ಆ 76 ಲಕ್ಷ ಮತದಾರರು ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಗಿದಿದೆ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 99,76,625 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಎಸ್‌ಐಆರ್ ವಿರುದ್ದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ, ಷರತ್ತುಗಳಲ್ಲಿ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದರೂ, ಇಷ್ಟು ದೊಡ್ಡ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇದು, ಎಸ್‌ಐಆರ್‌ ಕುರಿತು ರಾಜ್ಯದ ಮತದಾರರಿಗಿದ್ದ ಆತಂಕವನ್ನು ದೃಢಪಡಿಸಿದೆ. ಮೃತಪಟ್ಟವರು ಮತ್ತು ನಕಲು ಮತದಾರರನ್ನು ಹೊರತುಪಡಿಸಿದರೆ, ಪಟ್ಟಿಯಿಂದ ಹೊರಹಾಕಿದ ಉಳಿದ 76,25,800 ಮತದಾರರು ಯಾರು? 65,45,679 ಮತದಾರರು ಎಲ್ಲಿಗೆ ಸ್ಥಳಾಂತರಗೊಂಡಿದ್ದಾರೆ? ಗೈರುಹಾಜರು ಎಂಬ ಕಾರಣಕ್ಕೆ 19,00,926 ಮತದಾರರ ಹಕ್ಕನ್ನು ಕಸಿದುಕೊಳ್ಳಬಹುದೇ?

ಕರ್ನಾಟಕದಲ್ಲಿ ಜೂನ್ 30ರಂದು ಆರಂಭಗೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆ ಮುಕ್ತಾಯವಾಗಿದ್ದು, ಅಕ್ಟೋಬರ್‌ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಅಂತಿಮ ಪಟ್ಟಿಯಲ್ಲಿ ಒಟ್ಟು 4,54,55,689 ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ 2,24,40,493 ಪುರುಷರು, 2,29,12,355 ಮಹಿಳೆಯರು ಮತ್ತು 2,841 ತೃತೀಯ ಲಿಂಗಿಗಳಿದ್ದಾರೆ. ಎಸ್ಐಆರ್ ಪ್ರಕ್ರಿಯೆ ಆರಂಭವಾಗುವ ಮೊದಲು ಇದ್ದ ಮತದಾರರ ಸಂಖ್ಯೆಗೆ ಹೋಲಿಸಿದರೆ, 99,76,625 (ಶೇ.18) ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

99,76,625 ಮತದಾರರು ಪಟ್ಟಿಯಿಂದ ಹೊರಕ್ಕೆ

2026ರ ಜೂನ್‌ 16ರಂದು ಕರ್ನಾಟಕದಲ್ಲಿ 5,54,32,314 ಮತದಾರರಿದ್ದರು. ಗೈರುಹಾಜರಿ, ಶಾಶ್ವತ ಸ್ಥಳಾಂತರಗೊಂಡವರು, ಮೃತಪಟ್ಟವರು, ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿಕೊಂಡವರು (ASDD- Absent, Shifted, Dead, Duplicate) ಎಂದು ಗುರುತಿಸಿ 99.76 ಲಕ್ಷ ಮತದಾರರ ಹೆಸರುಗಳನ್ನು ಅಂತಿಮ ಮತದಾರರ ಪಟ್ಟಿಯಿಂದ ಅಳಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ 4,54,55,689 ಮತದಾರರಿದ್ದಾರೆ. 44,322 ಸೇವಾ ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 4,55,00,011. (ಸೇವಾ ಮತದಾರರು -Service Voters ಎಂದರೆ, ಭಾರತೀಯ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿರುವ ಸೈನಿಕರು ಹಾಗೂ ಅಧಿಕಾರಿಗಳು. ರಾಜ್ಯದ ಹೊರಗೆ ಸೇವೆ ಸಲ್ಲಿಸುತ್ತಿರುವ ಕೇಂದ್ರ ಅಥವಾ ರಾಜ್ಯದ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯರು. ಭಾರತ ಸರ್ಕಾರದ ಅಡಿಯಲ್ಲಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ರಾಯಭಾರಿಗಳು ಮತ್ತು ಸಿಬ್ಬಂದಿ.)

ಕರಡು ಪಟ್ಟಿಯಲ್ಲಿ ಸೇರಿಸಿದ್ದ ʼಇತರರುʼ (Others) ಎಂಬ ವರ್ಗವನ್ನು ಅಂತಿಮ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂಬುದನ್ನು ಗಮನಿಸಬೇಕು. ʼಇತರರುʼ ಎಂದರೆ ಯಾರು ಎಂಬ ಪ್ರಶ್ನೆಗೆ ಚುನಾವಣಾ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.

ಕರಡು ಪಟ್ಟಿಯಲ್ಲಿದ್ದ 1,88,324 ಮತದಾರರೂ ಹೊರಕ್ಕೆ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರಿಗೆ ನೀಡಿದ್ದ ಗಣತಿ ಫಾರಂಗಳನ್ನು ವಾಪಸ್‌ ಪಡೆದ ನಂತರ ಮತದಾರರ ಪಟ್ಟಿಯ ಡಿಜಿಟಲೀಕರಣ ನಡೆದು, ಆಗಸ್ಟ್ 2026ರಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಗೊಳಿಸಲಾಗಿತ್ತು. ಕರಡು ಮತದಾರರ ಪಟ್ಟಿಯಲ್ಲಿ 1,07,96,415 ಮತದಾರರನ್ನು ಗೈರುಹಾಜರಿ, ಬೇರೆಡೆಗೆ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲು ಮತ್ತು ಇತರರು (ASDDO) ವರ್ಗದ ಅಡಿಯಲ್ಲಿ ಪಟ್ಟಿ ಮಾಡಿ, ಅವರನ್ನು ಪಟ್ಟಿಯಿಂದ ಅಳಿಸಿಹಾಕಲಾಯಿತು. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, ಕರಡು ಪಟ್ಟಿಯಲ್ಲಿ 4,46,35,975 ಮತದಾರರಿದ್ದರು. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ 43,81,335 ಮತದಾರರಿಗೆ ನೋಟಿಸ್ ನೀಡಲಾಯಿತು.  “No Mapping” (ಹಿಂದಿನ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು), ಪೋಷಕರೊಂದಿಗೆ ವಯಸ್ಸಿನ ವ್ಯತ್ಯಾಸ 15 ವರ್ಷಕ್ಕಿಂತ ಕಡಿಮೆ ಇರುವುದು, ತಾತ-ಮುತ್ತಾತಂದಿರೊಂದಿಗೆ 40 ವರ್ಷಕ್ಕಿಂತ ಕಡಿಮೆ ಇರುವುದು, ಒಬ್ಬ ತಂದೆಯೊಂದಿಗೆ ಆರಕ್ಕಿಂತ ಹೆಚ್ಚು ಜನರು ಜೋಡಣೆ ಮಾಡುವುದು, ಎರಡೂ ಪಟ್ಟಿಗಳಲ್ಲಿ ಹೆಸರಿನ ಕಾಗುಣಿತ (Spelling) ಬದಲಾಗುವುದು ಇತ್ಯಾದಿಗಳಿಗೆ ಸೂಕ್ತ ದಾಖಲೆ ಒದಗಿಸುವಂತೆ ಈ ನೋಟಿಸ್‌ ನಲ್ಲಿ ಸೂಚಿಸಲಾಗಿತ್ತು. ಮತದಾರರು ತಮ್ಮ ಬಳಿ ಇದ್ದ ದಾಖಲೆಗಳನ್ನು ಹಿಡಿದು ಚುನಾವಣಾ ನೋಂದಣಿ ಅಧಿಕಾರಿ (ERO) ಮುಂದೆ ಖುದ್ದಾಗಿ ಹಾಜರಾದರು. ಹಕ್ಕುಗಳು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ಇತ್ಯರ್ಥ, ಮತ್ತು ನೋಟೀಸುಗಳ ಇತ್ಯರ್ಥಕ್ಕಾಗಿ ನಿಗದಿಪಡಿಸಿದ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಕಾನೂನಿನ ಅನ್ವಯವಾಗುವ ನಿಬಂಧನೆಗಳು ಮತ್ತು ಭಾರತೀಯ ಚುನಾವಣಾ ಆಯೋಗದ ನಿರ್ದೇಶನಗಳಿಗೆ ಅನುಗುಣವಾಗಿ, ಕರಡು ಮತದಾರರ ಪಟ್ಟಿಯಲ್ಲಿದ್ದ 1,88,324 ಹೆಸರುಗಳನ್ನು ಅಂತಿಮ ಪಟ್ಟಿಯಿಂದಲೂ ತೆಗೆದುಹಾಕಲಾಗಿದೆ.

ದಾಖಲೆಗಳನ್ನು ಪಡೆಯುವಲ್ಲಿ ಸಡಿಲತೆ!

43 ಲಕ್ಷ ಮತದಾರರಿಗೆ ನೋಟಿಸ್‌ ನೀಡಿದ ನಂತರ, ದೇಶಾದ್ಯಂತ ನಡೆಯುತ್ತಿರುವ ಜನರ ಪ್ರತಿಭಟನೆಗೆ ಮಣಿದು ರಾಜ್ಯದಲ್ಲಿ ಚುನಾವಣಾ ಆಯೋಗವು, ತಾನು ನಿಗಧಿಪಡಿಸಿದ ದಾಖಲೆಗಳನ್ನು ಒದಗಿಸಬೇಕು ಎಂಬುದರಲ್ಲಿ ಸ್ವಲ್ಪ ಸಡಿಲಿಕೆ ತೋರಿದಂತೆ ಕಾಣುತ್ತದೆ. “ಸಂತತಿ ಜೋಡಣೆ” (Progeny mapping) ಮಾಡಲಾಗದವರು, ಶಾಲಾ ದಾಖಲಾತಿ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಶಾಶ್ವತ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ … ಇಂತಹ ಅಗತ್ಯ 11 ದಾಖಲೆಗಳಲ್ಲಿ ಯಾವ ದಾಖಲೆಗಳನ್ನೂ ಹೊಂದಿರದ ಮತದಾರರು ಆತಂಕಕ್ಕೆ ಒಳಗಾಗಿದ್ದರು. ಇವರು ತಮ್ಮ ಬಳಿ ಇದ್ದ ಆಧಾರ್‌, ಬ್ಯಾಂಕ್‌ ಪಾಸ್‌ ಪುಸ್ತಕ, ಪಾನ್‌ ಕಾರ್ಡ್‌, ಪಡಿತರ ಚೀಟಿ ಇವುಗಳನಷ್ಟೇ ಬಿಎಲ್‌ಒ ಗಳಿಗೆ ಕೊಟ್ಟಿದ್ದರು. ಇಂತಹ ಮತದಾರರನ್ನೂ ಅಂತಿಮ ಪಟ್ಟಿಯಲ್ಲಿ ಸೇರಿಸಿರುವುದನ್ನು ಕಾಣಬಹುದಾಗಿದೆ. ಈ ಕಾರಣದಿಂದಾಗಿಯೇ ಮತದಾರರ ಪಟ್ಟಿಯಿಂದ ಹೊರಹಾಕಲ್ಪಟ್ಟವರ ಸಂಖ್ಯೆ ಒಂದು ಒಂದು ಕೋಟಿಯ ಒಳಗಿದೆ.

ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇದ್ದ 10,08,038 ಹೆಸರುಗಳನ್ನು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. 8,96,519 ಹೆಸರುಗಳನ್ನು ಮಾರ್ಪಾಡು (ತಿದ್ದುಪಡಿಗಳು) ಮಾಡಲಾಗಿದೆ. ಫಾರ್ಮ್ 6 ರ ಮೂಲಕ 8,77,104 ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಫಾರ್ಮ್ 6A ಮೂಲಕ 2,312 ಮತ್ತು ಫಾರ್ಮ್ 8 ರ ಮೂಲಕ (ಸ್ಥಳ ಬದಲಾವಣೆ) 1,28,622 ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ.

ಫಾರಂ 6 ರ ಮೂಲಕ ಸೇರ್ಪಡೆಗೊಂಡ 8,77,104 ಮತದಾರರಲ್ಲಿ ಮೊದಲ ಬಾರಿಗೆ ಸೇರ್ಪಡೆಯಾದವರು ಎಷ್ಟು ಮತ್ತು ಎಸ್‌ಐಆರ್‌ ಪ್ರಕ್ರಿಯೆಯ ಕಠಿಣ ನಿಯಮಗಳ ಕಾರಣದಿಂದಾಗಿ ಕರಡು ಪಟ್ಟಿಯಿಂದ ಅಳಿಸಲ್ಪಟ್ಟ ಹಳೆಯ ಮತದಾರರು ಎಷ್ಟು ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿಲ್ಲ. ಹೀಗಾಗಿ, ಪಟ್ಟಿಯಿಂದ ಹೊರಹಾಕಲ್ಪಟ್ಟ ಹಳೆಯ ಮತದಾರರ ಸಂಖ್ಯೆ ಎಷ್ಟು ಎಂಬ ನಿಖರವಾದ ಲೆಕ್ಕ ಸಿಗುತ್ತಿಲ್ಲ. ಆದರೂ, ಯುವ ಮತದಾರರ ಸಂಖ್ಯೆ ಕರಡು ಮತದಾರರ ಪಟ್ಟಿಯಲ್ಲಿ 3,70,341 ಇದ್ದದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಇವರ ಸಂಖ್ಯೆ 6,83,364 ಕ್ಕೆ ಏರಿಕೆಯಾಗಿ, 3,13,023 ಹೆಚ್ಚಾಗಿದೆ ಎಂಬ ಅಂಕಿಅಂಶವನ್ನು ಆಯೋಗ ನೀಡಿದೆ.

ಸ್ಥಳಾಂತರಗೊಂಡ, ಗೈರುಹಾಜರಾದ 76 ಲಕ್ಷ ಮತದಾರರು ಯಾರು?

ಮೃತಪಟ್ಟ ಮತದಾರರ ಸಂಖ್ಯೆ ಕರಡು ಪಟ್ಟಿಯಲ್ಲಿ 16,39,864 ಮತ್ತು ಅಂತಿಮ ಪಟ್ಟಿಯಲ್ಲಿ 1,091, ಒಟ್ಟು 16,40,955 ಆಗುತ್ತದೆ. ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ನೋಂದಣಿಯಾಗಿದ್ದವರ ಸಂಖ್ಯೆ 7,09,870. ಇವೆರಡು ವರ್ಗದ ಮತದಾರರ ಸಂಖ್ಯೆ ಒಟ್ಟು 23,50,825 ಆಗುತ್ತದೆ. ಪಟ್ಟಿಯಿಂದ ಹೊರಹಾಕಲಾದ 99,76,625 ಮತದಾರರಲ್ಲಿ ಮೃತರಾದವರು ಮತ್ತು ಎರಡಕ್ಕಿಂತ ಹೆಚ್ಚು ಕಡೆಗಳಲ್ಲಿ ನೋಂದಣಿ ಇದ್ದವರ ಸಂಖ್ಯೆ ಕಳೆದರೆ, ಉಳಿದ 76,25,800 ಮತದಾರರು ಯಾರು? 65,45,679 ಮತದಾರರು ಎಲ್ಲಿಗೆ ಸ್ಥಳಾಂತರಗೊಂಡಿದ್ದಾರೆ? ಗೈರುಹಾಜರು ಎಂಬ ಕಾರಣಕ್ಕೆ 19,00,926 ಮತದಾರರ ಹಕ್ಕನ್ನು ಕಸಿದುಕೊಳ್ಳಬಹುದೇ? ಜನಸಂಖ್ಯೆ ಬೆಳೆಯುತ್ತಿರುವ ದೇಶದಲ್ಲಿ, ಮತದಾರರ ಸಂಖ್ಯೆ ಹೀಗೆ ಕುಸಿಯುತ್ತಿರುವುದು ಹೇಗೆ?

1950ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 20ರ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಸಾಮಾನ್ಯ ವಾಸಸ್ಥಳದಿಂದ ತಾತ್ಕಾಲಿಕವಾಗಿ ಹೊರಗಿದ್ದಾರೆ ಎಂಬ ಕಾರಣಕ್ಕೆ ಅಲ್ಲಿ ವಾಸಿಸುವ ಅರ್ಹತೆಯನ್ನು ಕಳೆದುಕೊಳ್ಳುವುದಿಲ್ಲ. ಆದರೆ ಸಮೀಕ್ಷೆಯ ಸಮಯದಲ್ಲಿ ಮನೆಯಲ್ಲಿ ಇಲ್ಲದವರನ್ನೂ ಸಹ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಪಟ್ಟಿಯಿಂದ ಕೈಬಿಡಲು ಚುನಾವಣಾ ಆಯೋಗವು ಯಾವುದೇ ಲಿಖಿತ ಕಾರಣಗಳನ್ನು ನೀಡಿಲ್ಲ; “ಗೈರು ಆದವರು” ಹಾಗೂ “ಸ್ಥಳಾಂತರಗೊಂಡವರು” ಎಂಬ ಎರಡು ವರ್ಗಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ತೋರಿಸಲೂ ಇಲ್ಲ. ಪರಿಶೀಲನೆಗೆ ಮುಂಚೆಯೇ ತೆಗೆದುಹಾಕುವುದು ಮತ್ತು ಅರ್ಹತೆಯನ್ನು ಸಾಬೀತುಪಡಿಸುವ ಜವಾಬ್ದಾರಿಯನ್ನು ಸಾಮಾನ್ಯ ಜನರ ಮೇಲೆ ಹೊರಿಸುವುದು, ಎಲ್ಲರಿಗೂ ಸಮಾನವಾದ ವಯಸ್ಕ ಮತದಾನದ ಹಕ್ಕು ಎಂಬ ಸಂವಿಧಾನಾತ್ಮಕ ಭರವಸೆಯನ್ನೇ ಸೋಲಿಸುತ್ತದೆ.

ʼತಾರ್ಕಿಕ ದೋಷ” ಯಾರು ಮಾಡಿದ ತಪ್ಪು?

ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದ ರಾಜ್ಯದ 43,81,335 ಮತದಾರರಿಗೆ ನೋಟಿಸ್ ನೀಡಲಾಗಿತ್ತು. ಇವರಿಗೆ ನೋಟಿಸ್ ಬರಲು ಪ್ರಮುಖ ಕಾರಣ ಒಂದು ಸಾಫ್ಟ್‌ವೇರ್ ಪರೀಕ್ಷೆ. ಅದರ ಹೆಸರು “ತಾರ್ಕಿಕ ದೋಷ” (Logical Discrepancy). ಈ ಪದವನ್ನು ಚುನಾವಣಾ ಆಯೋಗವು ವ್ಯಾಖ್ಯಾನಿಸಿಯೇ ಇಲ್ಲ; ಯಾವ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಈ ವಿಭಾಗದೊಳಗೆ ಬರುತ್ತಾನೆ ಎಂಬುದಕ್ಕೆ ಯಾವುದೇ ಅಳತೆಗೋಲು ಅಥವಾ ಮಾರ್ಗಸೂಚಿಯು ವೆಬ್‌ಸೈಟ್‌ನಲ್ಲಿ ಇಲ್ಲ ಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾದ ಅರ್ಜಿಯು ಎತ್ತಿ ತೋರಿಸುತ್ತದೆ.

ಪ್ರತಿ ಮತದಾರರೂ ಗಣತಿ ನಮೂನೆಯಲ್ಲಿ ತಮ್ಮನ್ನು ಅಥವಾ ತಮ್ಮ ಪೋಷಕರನ್ನು ಹಿಂದಿನ ತೀವ್ರ ಪರಿಷ್ಕರಣಾ ಪಟ್ಟಿಯೊಂದಿಗೆ (ಕರ್ನಾಟಕದಲ್ಲಿ 2002) ಜೋಡಿಸಬೇಕು. “ಸಂತತಿ ಜೋಡಣೆ” (Progeny mapping) ಮಾಡಲಾಗದವರು ಅದು ʼUnmappedʼ. ಜೋಡಿಸಿದವರ ವಿವರಗಳಲ್ಲಿ ವ್ಯತ್ಯಾಸಗಳು ಕಂಡುಬಂದರೆ ಅದು “ತಾರ್ಕಿಕ ದೋಷ”. ಪೋಷಕರೊಂದಿಗೆ ವಯಸ್ಸಿನ ವ್ಯತ್ಯಾಸ 15 ವರ್ಷಕ್ಕಿಂತ ಕಡಿಮೆ ಇರುವುದು, ತಾತ-ಮುತ್ತಾತಂದಿರೊಂದಿಗೆ 40 ವರ್ಷಕ್ಕಿಂತ ಕಡಿಮೆ ಇರುವುದು, ಒಬ್ಬ ತಂದೆಯೊಂದಿಗೆ ಆರಕ್ಕಿಂತ ಹೆಚ್ಚು ಜನರು ಜೋಡಣೆ ಮಾಡುವುದು, ಎರಡೂ ಪಟ್ಟಿಗಳಲ್ಲಿ ಹೆಸರಿನ ಕಾಗುಣಿತ (Spelling) ಬದಲಾಗುವುದು ಇತ್ಯಾದಿಗಳು ಇದರಲ್ಲಿ ಸೇರಿವೆ. ಈ ಮಿತಿಗಳನ್ನು ಆದೇಶಿಸಿದ್ದು ಯಾರು ಎಂಬುದು ಇದುವರೆಗೆ ಅಧಿಕೃತವಾಗಿ ಹೊರಬಂದಿಲ್ಲ. ಹೆಸರಿನ ಕಾಗುಣಿತ ಬದಲಾದರೆ ಮತದಾರರ ಹಕ್ಕೇ ಪ್ರಶ್ನಾರ್ಹವಾಗುತ್ತದೆಯೇ?

ಅಕ್ರಮ ವಿದೇಶಿ ವಲಸಿಗರ ಸಂಖ್ಯೆ 716

2025 ಜೂನ್ 24 ರಂದು ಬಿಹಾರ ಎಸ್ಐಆರ್ ಪ್ರಕ್ರಿಯೆಯನ್ನು ಘೋಷಿಸಿದಾಗ ಆಯೋಗವು ನೀಡಿದ ಕಾರಣಗಳಲ್ಲಿ “ಅಕ್ರಮ ವಿದೇಶಿ ವಲಸಿಗರು” ಎಂಬ ಅಂಶವೂ ಒಂದಾಗಿದೆ. ಆದರೆ ಇದುವರೆಗೆ ಎಸ್‌ಐಆರ್‌ ನಡೆದ ರಾಜ್ಯಗಳಲ್ಲಿ ಎಷ್ಟು ವಿದೇಶಿಗರು ಪತ್ತೆಯಾಗಿದ್ದಾರೆ ಎಂಬುದರ ಕುರಿತು ಯಾವುದೇ ಅಧಿಕೃತ ಸಂಖ್ಯೆಯನ್ನು ಆಯೋಗವು ಬಿಡುಗಡೆ ಮಾಡಿಲ್ಲ.

ವಿಶೇಷ ತೀವ್ರ ಪರಿಷ್ಕರಣೆ ಪೂರ್ಣಗೊಂಡಿರುವ ಅಥವಾ ಕರಡು ಪಟ್ಟಿಗಳನ್ನು ಪ್ರಕಟಿಸಿರುವ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಹಿಂದೂಸ್ತಾನ್ ಟೈಮ್ಸ್ ಪ್ರಶ್ನೆಗಳನ್ನು ಕಳುಹಿಸಿದೆ. 11 ರಾಜ್ಯಗಳ ಅಧಿಕಾರಿಗಳು ಪ್ರತಿಕ್ರಿಯಿಸಿದರು ಎಂದು Scroll.in ಅಕ್ಟೋಬರ್‌ 29ರಂದು ವರದಿಮಾಡಿದೆ. ಇದರ ಪ್ರಕಾರ, ಕರ್ನಾಟಕ, ಜಾರ್ಖಂಡ್, ಮೇಘಾಲಯ, ಕೇರಳ, ಗೋವಾ ಮತ್ತು ಮಿಜೋರಾಂ -ಈ ಆರು ರಾಜ್ಯಗಳು ವಿದೇಶಿ ನಾಗರಿಕರ ಅಂಕಿಅಂಶಗಳನ್ನು ಒದಗಿಸಿವೆ. ನಾಲ್ಕು ರಾಜ್ಯಗಳು ಅಂತಹ ಡೇಟಾವನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಿವೆ. ಒಡಿಶಾ ಅಂತಹ ಪ್ರಕರಣಗಳನ್ನು ಕಂಡುಕೊಂಡಿದೆ ಆದರೆ ಸಂಖ್ಯೆಯನ್ನು ದಾಖಲಿಸಿಲ್ಲ ಎಂದು ಹೇಳಿದೆ. ಅಂತಹ ಡೇಟಾವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ರಾಜ್ಯಗಳನ್ನು ಎಂದಿಗೂ ಕೇಳಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಬೆಂಗಳೂರು ಉತ್ತರದಲ್ಲಿರುವ 545 ನೇಪಾಳಿ ನಾಗರಿಕರು ಸೇರಿದಂತೆ 716 ವಿದೇಶಿ ನಾಗರಿಕರನ್ನು ಗುರುತಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಕೇರಳದಲ್ಲಿ, ವಿದೇಶಿ ಪೌರತ್ವವನ್ನು ಹೊಂದಿದ್ದ ಆದರೆ ಮತದಾರರ ಪಟ್ಟಿಯಲ್ಲಿ ಉಳಿದಿರುವ ಸುಮಾರು 500 ಜನರನ್ನು ಅಧಿಕಾರಿಗಳು ಕಂಡುಕೊಂಡರು ಎಂದು ರಾಜ್ಯ ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೋವಾದಲ್ಲಿ, ಮತದಾರರ ಪಟ್ಟಿಯಲ್ಲಿ 419 ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಕಂಡುಬಂದಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜಯ್ ಗೋಯೆಲ್ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಟ್ರಾನ್ಸ್‌ ಡೆಂಜರ್:‌ ಶೇ. 43ರಷ್ಟು ಹೊರಕ್ಕೆ

ಕರಡು ಪಟ್ಟಿಯಲ್ಲಿ 2,871 ಇದ್ದದ್ದು, ಅಂತಿಮ ಪಟ್ಟಿಯಲ್ಲಿ 2,841 ಕ್ಕೆ ಕುಸಿದಿದೆ. ಅಂದರೆ, ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ ಕೊಟ್ಟಿದ್ದ 30 ತೃತೀಯ ಲಿಂಗಿಗಳು ಅಗತ್ಯ ದಾಖಲೆ ಒದಗಿಸಲಾಗದೆ ತಮ್ಮ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದರ್ಥ. ಇವರೂ ಸೇರಿದಂತೆ ರಾಜ್ಯದಲ್ಲಿ 2154 (ಶೇ.43ರಷ್ಟು) ತೃತೀಯ ಲಿಂಗಿಗಳ ಮತದಾನದ ಹಕ್ಕನ್ನು ಎಸ್‌ಐಆರ್‌ ಕಸಿದುಕೊಂಡಿದೆ. ಎಸ್‌ಐಆರ್‌ ಪ್ರಕ್ರಿಯೆಗೂ ಮುನ್ನ ಇವರ ಸಂಖ್ಯೆ 4,995 ಇತ್ತು.

2,29,235 ಫಾರ್ಮ್‌-7 ಸಲ್ಲಿಕೆಯಾಗಿದೆ

ಎಸ್‌ ಐಆರ್‌ ಪ್ರಕ್ರಿಯೆಯಲ್ಲಿ 2,29,235 ಫಾರ್ಮ್‌-7, ಸಲ್ಲಿಕೆಯಾಗಿದೆ ಎಂದು ಅನ್ಬುಕುಮಾರ್ ಹೇಳಿದ್ದಾರೆ ಎಂದು ಅಕ್ಟೋಬರ್‌ 23ರಂದು ಇಂಡಿಯನ್‌ ಎಕ್ಸ್‌ ಪ್ರೆಸ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ಎಸ್‌ಐಆರ್‌ ಪ್ರಕ್ರಿಯೆ ಸಮಯದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ನಿಜವಾದ ಮತದಾರರನ್ನು ವಂಚಿತಗೊಳಿಸುವ ಉದ್ದೇಶದಿಂದ ಫಾರ್ಮ್ 7 ರ ಸಾಮೂಹಿಕ ಸಲ್ಲಿಕೆಯ ಆರೋಪಗಳ ನಡುವೆ, ಭಾರತದ ಚುನಾವಣಾ ಆಯೋಗವು 2.28 ಲಕ್ಷ ಫಾರ್ಮ್ 7 ಗಳನ್ನು ಸ್ವೀಕರಿಸಿದೆ ಎಂದು ದತ್ತಾಂಶವು ತೋರಿಸುತ್ತದೆ.

ಮತದಾರರ ಪಟ್ಟಿಯಲ್ಲಿ ಹೆಸರೊಂದರ ಪ್ರಸ್ತಾವಿತ ಅಥವಾ ಅಸ್ತಿತ್ವದಲ್ಲಿರುವ ಸೇರ್ಪಡೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಅಥವಾ ನಿರ್ದಿಷ್ಟ ಕಾರಣಗಳಿಂದಾಗಿ ಹೆಸರನ್ನು ಅಳಿಸಲು ವಿನಂತಿಸಲು ನಮೂನೆ 7 ಅನ್ನು ಬಳಸಲಾಗುತ್ತದೆ.

ಸೆಪ್ಟೆಂಬರ್ 23 ರಂದು ಈ ಸಂಖ್ಯೆ 58,475 ರಷ್ಟಿತ್ತು, ಇದು SIR ಸಮಯದಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನವಾಗಿತ್ತು, ಆದರೆ ಅಕ್ಟೋಬರ್ 22 ರ ವೇಳೆಗೆ ಈ ಸಂಖ್ಯೆ 2.28 ಲಕ್ಷಕ್ಕೆ ಏರಿತು.

ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದ ಎಸ್‌ಐಆರ್ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 24,268 ನಮೂನೆ-7 ಅರ್ಜಿಗಳು ಸಲ್ಲಿಕೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯು ರಾಜ್ಯದ ಜಿಲ್ಲೆಗಳ ಪೈಕಿ ಅತಿ ಹೆಚ್ಚು ಫಾರ್ಮ್-7 ಅರ್ಜಿಗಳನ್ನು ಹೊಂದಿದೆ. ಬಿಬಿಎಂಪಿ ದಕ್ಷಿಣ ವಲಯವೊಂದರಲ್ಲಿಯೇ ಒಟ್ಟು 17,491 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 10,374 ಅರ್ಜಿಗಳನ್ನು ಚುನಾವಣಾ ಅಧಿಕಾರಿಗಳೇ (ERO/AERO) ಸಲ್ಲಿಸಿದ್ದಾರೆ. ಮಲ್ಲೇಶ್ವರಂ ಮತ್ತು ಜಯನಗರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಕಲಿ ಅಥವಾ ಸಾಮೂಹಿಕ ಫಾರ್ಮ್-7 ಅರ್ಜಿಗಳ ಸಲ್ಲಿಕೆ ಬಗ್ಗೆ ತನಿಖೆಗಳು ಹಾಗೂ ಎಫ್‌ಐಆರ್‌ಗಳು ದಾಖಲಾಗಿವೆ.

ಫಾರಂ 7 ರ ಮೂಲಕ 1,091 ಮೃತರಾದವರು, ಈಗಾಗಲೇ ನೋಂದಾಯಿಸಲಾಗಿದೆ (ನಕಲು) 762, ಶಾಶ್ವತವಾಗಿ ಸ್ಥಳಾಂತರಗೊಂಡವರು (ಫಾರ್ಮ್ 8 ರ ಮೂಲಕ ಸ್ಥಳಾಂತರಗೊಂಡಿದ್ದರಿಂದ ಸ್ವಯಂಚಾಲಿತವಾಗಿ ಫಾರ್ಮ್ 7 ರಚನೆಯಾಗಿದೆ) 1,24,327, ಗೈರುಹಾಜರಿ 184, ಇತರರು (ವಿಚಾರಣೆಯ ಸಮಯದಲ್ಲಿ ಅನರ್ಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ನಮೂನೆ 7 ಸೇರಿದಂತೆ) 61,960 ಮತದಾರರನ್ನು ಪಟ್ಟಿಯಿಂದ ಅಳಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸುತ್ತದೆ.

ಬೆಂಗಳೂರು ನಗರವೊಂದರಲ್ಲೇ 43.92 ಲಕ್ಷ ʼಅನರ್ಹ?ʼ ಮತದಾರರ ಡಿಲೀಟ್

ಎಸ್ಐಆರ್ ಅಂತಿಮ‌ ಮತದಾರರ ಪಟ್ಟಿಯಲ್ಲಿ, ಬೆಂಗಳೂರು ವ್ಯಾಪ್ತಿಯ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಅಪರ ಜಿಲ್ಲಾ ಚುನಾವಣಾಧಿಕಾರಿಗಳ ವ್ಯಾಪ್ತಿಯಲ್ಲಿ ಒಟ್ಟು 59,08,151 ಮತದಾರರಿದ್ದಾರೆ. ಅವರಲ್ಲಿ 28,67,256 ಪುರುಷರು, 30,40,221 ಮಹಿಳೆಯರು ಹಾಗೂ 674 ತೃತೀಯ ಲಿಂಗಿ ಮತದಾರರು ಇದ್ದಾರೆ.

ಕರಡು ಮತದಾರರ ಪಟ್ಟಿಯಲ್ಲಿ 56,99,660 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 59,08,151 ಮತದಾರರಿದ್ದಾರೆ. 2,74,372 ಮತದಾರರ ಹೆಸರುಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಮತ್ತು ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದ 65,881 ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಬಿಬಿಎಂಪಿ (ದಕ್ಷಿಣ)ದಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 48 ರಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಈ ಪ್ರದೇಶದಲ್ಲಿ ಎಸ್ಐಆರ್ ಪೂರ್ವ 21,44,784 ಮತದಾರರು ಇದ್ದರು, ಎಸ್ಐಆರ್ ಬಳಿಕ ಮತದಾರರ ಸಂಖ್ಯೆ 11,13,554ಗೆ ಇಳಿಕೆಯಾಗಿದೆ.‌ ಅಂದರೆ ಒಟ್ಟು 10,31,230 ಮತದಾರರ ಹೆಸರು ಕೈ ಬಿಡಲಾಗಿದೆ.


ಟಿಪ್ಪಣಿಗಳು

ನಿಮ್ಮದೊಂದು ಉತ್ತರ

ನಮ್ಮ ಹೊಸ ಲೇಖನಗಳನ್ನು ಇ-ಮೇಲ್ ಮೂಲಕ ಪಡೆಯಿರಿ