ಗಾಂಧೀಜಿ: ಭಿನ್ನಾಭಿಪ್ರಾಯಗಳ ನಡುವೆಯೂ ಮೆರೆದ ಪ್ರಜಾಸತ್ತಾತ್ಮಕ ನಾಯಕತ್ವ

ಗಾಂಧಿಯವರು ತಾವು ಕೆಲಸ ಮಾಡಿದ ಬಹುತೇಕ ಎಲ್ಲ ಪ್ರಮುಖ ನಾಯಕರೊಂದಿಗೂ ಯಾವುದೋ ಒಂದು ಹಂತದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ವೈಯಕ್ತಿಕ ವೈರತ್ವವಾಗಿ ಬದಲಾಯಿಸಿಕೊಳ್ಳದೆ, ದೇಶದ ಭವಿಷ್ಯಕ್ಕಾಗಿ ನಡೆಯುವ ಚರ್ಚೆಗಳಾಗಿ ಗಾಂಧೀಜಿ ಮುಂದುವರಿಸಿದರು. ತಮ್ಮನ್ನು ಒಪ್ಪದ ಪ್ರತಿಯೊಬ್ಬರನ್ನೂ ದೇಶದ್ರೋಹಿಗಳಾಗಿ ಚಿತ್ರಿಸುವ ಇಂದಿನ ಆಳುವವರಿಗೆ ಇದು ಇಷ್ಟವಾಗುವುದಿಲ್ಲ.

ಗಾಂಧೀಜಿಯವರ ಜಾತ್ಯತೀತ ಕಲ್ಪನೆಯು ಅತ್ಯಂತ ಆಳವಾದುದು. ‘ಮತಧರ್ಮವು ರಾಷ್ಟ್ರೀಯತೆಯ ಪರೀಕ್ಷೆಯಲ್ಲ, ಒಬ್ಬ ವ್ಯಕ್ತಿ ಯಾವುದೇ ಮತಧರ್ಮವನ್ನು ಅನುಸರಿಸಲಿ, ಅವನು ಮೊದಲು ಭಾರತೀಯ, ಅಂತಿಮವಾಗಿ ಕೂಡಾ ಭಾರತೀಯʼ ಎಂದು ಅವರು ಬೋಧಿಸಿದರು. “ಒಂದು ಜನಾಂಗ, ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಜಗತ್ತಿನ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ” ಎಂದು ತಮ್ಮ ಹಿಂದ್ ಸ್ವರಾಜ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಇಂದಿನ ಆಳುವವರು ಗಾಂಧಿಯವರ ಆರಂಭಿಕ ವಿಚಾರಗಳನ್ನು ತಮ್ಮ ಸಂಕುಚಿತ ಹಿತಾಸಕ್ತಿಗಳಿಗಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಗಾಂಧೀಜಿ ಪ್ರತಿಪಾದಿಸಿದ ಸಾಮ್ರಾಜ್ಯಶಾಹಿ ವಿರೋಧಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ಇಂದಿನ ಕೇಂದ್ರ ಸರ್ಕಾರ ತೀವ್ರ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ಗಾಂಧೀಜಿಯವರು ಅನುಸರಿಸಿದ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ದೃಷ್ಟಿಕೋನವನ್ನು ಅವರ ಜಯಂತಿಯ ದಿನದಂದು ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ.

ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧಿಯವರು ಅತ್ಯಂತ ಪ್ರಭಾವಶಾಲಿ ಜನನಾಯಕರಾಗಿದ್ದರು. ಪ್ರಾಯೋಗಿಕ ಮನವಿಗಳ ಮೂಲಕ ಅವರು ಅಸಂಖ್ಯಾತ ಜನಸಮೂಹವನ್ನು ರಾಷ್ಟ್ರೀಯ ಚಳವಳಿಗೆ ಸಜ್ಜುಗೊಳಿಸಲು ಸಾಧ್ಯವಾಯಿತು. ಒಬ್ಬ ಪ್ರಜಾಪ್ರಭುತ್ವವಾದಿ ಮತ್ತು ಮಹಾನ್ ಜಾತ್ಯತೀತವಾದಿಯಾಗಿ ತಮ್ಮ ಜೀವನವನ್ನು ನಡೆಸಿ, ಜನರಿಂದ ‘ಮಹಾತ್ಮ’ ಎಂದು ಗೌರವಿಸಲ್ಪಟ್ಟರು. ತಮ್ಮ ಆರಂಭಿಕ ದಿನಗಳಲ್ಲಿ, ಅವರು ತಮ್ಮ ‘ಹಿಂದ್ ಸ್ವರಾಜ್’ ಪುಸ್ತಕದಲ್ಲಿ ಹೇಳಿರುವ ವಿಷಯಗಳಿಗೂ, ಸ್ವಾತಂತ್ರ‍್ಯ ಹೋರಾಟದ ಉಚ್ಛ್ರಾಯ ಸ್ಥಿತಿಯಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆದ ಲೇಖನಗಳಿಗೂ ಹಲವು ವೈರುದ್ಯಗಳು ಕಂಡುಬರುತ್ತವೆ. ಇವುಗಳನ್ನು ವ್ಯಕ್ತಿಗತವಾಗಿ ಕಾಣುವ ಬದಲು, ರಾಷ್ಟ್ರೀಯ ಚಳುವಳಿಯನ್ನು ಜನರ ಆಕಾಂಕ್ಷೆಗಳು ಮತ್ತು ಬೂರ್ಜ್ವಾ ಹಿತಾಸಕ್ತಿಗಳ ನಡುವೆ ಉದ್ಭವಿಸಿದ ಪ್ರಮುಖ ವಿರೋಧಾಭಾಸಗಳಿಂದ ನೋಡಬೇಕು. ಅದನ್ನು ಮುನ್ನಡೆಸಿದ ಊಳಿಗಮಾನ್ಯ ವ್ಯವಸ್ಥೆಗೆ ಅದು ಸಂಬಂಧಿಸಿದೆ. ಆದರೆ, ಇಂದಿನ ಆಳುವವರು ಗಾಂಧಿಯವರ ಆರಂಭಿಕ ವಿಚಾರಗಳನ್ನು ತಮ್ಮ ಸಂಕುಚಿತ ಹಿತಾಸಕ್ತಿಗಳಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅವರ ಶ್ರಮ ಮತ್ತು ಚಿಂತನೆಗಳ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ.

ಗಾಂಧೀಜಿ ಪ್ರತಿಪಾದಿಸಿದ ಸಾಮ್ರಾಜ್ಯಶಾಹಿ ವಿರೋಧಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಜೊತೆಗೆ, ಭಾರತದ ಸಂವಿಧಾನ ಮತ್ತು ಇತ್ತೀಚಿಗೆ ಚುನಾವಣಾ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರ ತೀವ್ರ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ಗಾಂಧೀಜಿಯವರು ಅನುಸರಿಸಿದ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ದೃಷ್ಟಿಕೋನವನ್ನು ಸ್ಮರಿಸಿಕೊಳ್ಳುವುದು ಸೂಕ್ತವಾಗಿದೆ.

ಪ್ರಮುಖ ನಾಯಕರೊಂದಿಗೂ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು

ಗಾಂಧಿಯವರು ತಾವು ಕೆಲಸ ಮಾಡಿದ ಬಹುತೇಕ ಎಲ್ಲ ಪ್ರಮುಖ ನಾಯಕರೊಂದಿಗೂ ಯಾವುದೋ ಒಂದು ಹಂತದಲ್ಲಿ ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಆಧುನಿಕತೆ ಮತ್ತು ರಾಷ್ಟ್ರೀಯತೆಯಂತಹ ವಿಷಯಗಳ ಕುರಿತು ರವೀಂದ್ರನಾಥ ಟ್ಯಾಗೋರ್ ಅವರೊಂದಿಗೆ, ಕೈಗಾರಿಕೀಕರಣ, ಸಮಾಜವಾದ ಮತ್ತು ಆಧುನಿಕ ವಿಜ್ಞಾನದ ಕುರಿತು ಜವಾಹರಲಾಲ್ ನೆಹರು ಅವರೊಂದಿಗೆ, ಸ್ವಾತಂತ್ರ‍್ಯ ಸಾಧಿಸುವ ಮಾರ್ಗಗಳು ಮತ್ತು ಕಾಂಗ್ರೆಸ್ ನಾಯಕತ್ವದ ವಿಷಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ, ಜಾತಿ ವ್ಯವಸ್ಥೆ ಮತ್ತು ದಲಿತರ ರಾಜಕೀಯ ಹಕ್ಕುಗಳ ಕುರಿತು ಡಾ. ಬಿ.ಆರ್. ಅಂಬೇಡ್ಕರ್ ಅವರೊಂದಿಗೆ ಗಾಂಧೀಜಿಯವರು ಗಂಭೀರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ತೀವ್ರವಾದ ಭಿನ್ನಾಭಿಪ್ರಾಯಗಳಿದ್ದರೂ, ಅವುಗಳನ್ನು ವೈಯಕ್ತಿಕ ವೈರತ್ವವಾಗಿ ಬದಲಾಯಿಸಿಕೊಳ್ಳದೆ, ದೇಶದ ಭವಿಷ್ಯಕ್ಕಾಗಿ ನಡೆಯುವ ಚರ್ಚೆಗಳಾಗಿ ಗಾಂಧೀಜಿ ಮುಂದುವರಿಸಿದರು. ತಮ್ಮನ್ನು ಒಪ್ಪದ ಪ್ರತಿಯೊಬ್ಬರನ್ನೂ ದೇಶದ್ರೋಹಿಗಳಾಗಿ ಚಿತ್ರಿಸುವ ಇಂದಿನ ಆಳುವವರಿಗೆ ಇದು ಇಷ್ಟವಾಗುವುದಿಲ್ಲ.

ಅಲ್ಲದೆ, ಗಾಂಧೀಜಿಯವರ ಜಾತ್ಯತೀತ ಕಲ್ಪನೆಯು ಅತ್ಯಂತ ಆಳವಾದುದು. ‘ಧರ್ಮವು ರಾಷ್ಟ್ರೀಯತೆಯ ಪರೀಕ್ಷೆಯಲ್ಲ, ಒಬ್ಬ ವ್ಯಕ್ತಿಯು ಯಾವುದೇ ಮತಧರ್ಮವನ್ನು ಅನುಸರಿಸಲಿ, ಅವನು ಮೊದಲು ಭಾರತೀಯ, ಅಂತಿಮವಾಗಿ ಕೂಡಾ ಭಾರತೀಯʼ ಎಂದು ಅವರು ಬೋಧಿಸಿದರು. “ಒಂದು ಜನಾಂಗ, ಒಂದು ರಾಷ್ಟ್ರ ಎಂಬ ಪರಿಕಲ್ಪನೆ ಜಗತ್ತಿನ ಎಲ್ಲಿಯೂ ಅಸ್ತಿತ್ವದಲ್ಲಿಲ್ಲ” ಎಂದು ತಮ್ಮ ಹಿಂದ್ ಸ್ವರಾಜ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಗಾಂಧೀಜಿಯವರ ಆಶಯಗಳಿಗೆ ಮತ್ತು ಆಲೋಚನೆಗಳಿಗೆ ವಿರುದ್ಧವಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡೆದುಕೊಳ್ಳುತ್ತಾ, ಕಾರ್ಪೊರೇಟ್ ಸಂಸ್ಥೆಗಳಿಗೆ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ನೀಡುತ್ತಿವೆ.

ಟಾಗೋರ್ ಅವರೊಂದಿಗೆ ಭಿನ್ನಾಭಿಪ್ರಾಯ

ರವೀಂದ್ರನಾಥ ಟ್ಯಾಗೋರ್ ಮತ್ತು ಗಾಂಧಿಯವರ ಬಗ್ಗೆ ಜವಾಹರಲಾಲ್ ನೆಹರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕದಲ್ಲಿ, “ಅವರಿಬ್ಬರೂ ನಿಸ್ಸಂದೇಹವಾಗಿ 20 ನೇ ಶತಮಾನದಲ್ಲಿ ಭಾರತದಲ್ಲಿ ವಾಸಿಸಿದ ಶ್ರೇಷ್ಠ ವ್ಯಕ್ತಿಗಳು ಮತ್ತು ಅವರು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳು ನಮಗೆ ಮಾರ್ಗದರ್ಶಕವಾಗಿವೆ.” ಹೀಗೆ ಉಲ್ಲೇಖಿಸಿದ್ದಾರೆ. ಅವರಿಬ್ಬರೂ ಮಹಾನ್ ದೇಶಭಕ್ತರಾಗಿದ್ದರು, ಆದರೆ ಅವರ ಚಿಂತನಾ ಶೈಲಿ ಭಿನ್ನವಾಗಿತ್ತು. ಟಾಗೋರ್ ಅವರಿಗೆ ಮಾನವತಾವಾದ ಮತ್ತು ಸಾರ್ವತ್ರಿಕ ದೃಷ್ಟಿಕೋನವು ಅತ್ಯಂತ ಮಹತ್ವದ್ದಾಗಿತ್ತು. ಅಸಹಕಾರ, ಜನರ ರಾಜಕೀಯ ಪ್ರಜ್ಞೆ ಮತ್ತು ಸ್ವದೇಶಿತ್ವಕ್ಕೆ ಗಾಂಧೀಜಿಯವರು ಆದ್ಯತೆ ನೀಡಿದರು. 1920-21ರ ಅವಧಿಯಲ್ಲಿ ಗಾಂಧೀಜಿ ಪ್ರಾರಂಭಿಸಿದ ಅಸಹಕಾರ ಚಳುವಳಿ ಮತ್ತು ವಿದೇಶಿ ವಸ್ತುಗಳ ಬಹಿಷ್ಕಾರದಂತಹ ಕಾರ್ಯಕ್ರಮಗಳಿಗೆ ಟಾಗೋರ್ ತಮ್ಮ ವಿರೋಧ ವ್ಯಕ್ತಪಡಿಸಿದರು. ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸುವುದು ಮತ್ತು ರಾಷ್ಟ್ರೀತೆಯನ್ನು ಅತಿಯಾಗಿ ತಳ್ಳುವಂತಹ ಕ್ರಮಗಳು ಯುವಜನರನ್ನು ಸಂಕುಚಿತ ರಾಷ್ಟ್ರೀಯತೆಯತ್ತ ಕೊಂಡೊಯ್ಯಬಹುದು ಎಂದು ಅವರು ಭಾವಿಸಿದ್ದರು. ಆದಾಗ್ಯೂ, ಗಾಂಧಿಯವರು ಟ್ಯಾಗೋರ್ ಅವರ ಟೀಕೆಯನ್ನು ಪ್ರತಿಕೂಲವೆಂದು ಪರಿಗಣಿಸಲಿಲ್ಲ. ಅವರೊಂದಿಗೆ ವೈಯಕ್ತಿಕವಾಗಿ ಹಾಗೂ ಅದಕ್ಕಿಂತ ಹೆಚ್ಚಾಗಿ ಪತ್ರಗಳ ರೂಪದಲ್ಲಿ ಸಂದೇಹಗಳನ್ನು ಪರಿಹರಿಸಲು ಪ್ರಯತ್ನಿಸಿದರು. ಈ ಪ್ರಕ್ರಿಯೆಯಲ್ಲಿ ಟಾಗೋರ್ ಅವರ ಆಲೋಚನೆಗಳಲ್ಲಿದ್ದ ಆಧುನಿಕತೆಯನ್ನು ಗಾಂಧೀಜಿ ಸ್ವೀಕರಿಸಿದರು. ತಮ್ಮನ್ನು ಅಷ್ಟೊಂದು ವಿಮರ್ಶಿಸಿದ ಟಾಗೋರ್ ಅವರನ್ನು ಗಾಂಧೀಜಿ “ಗುರುದೇವ್” ಎಂದು ಗೌರವಿಸಿದರೆ, ಟಾಗೋರ್ ಅವರು ಗಾಂಧೀಜಿಯವರನ್ನು “ಮಹಾತ್ಮ” ಎಂದು ಕರೆದರು. ಇಬ್ಬರೂ ಪರಸ್ಪರ ಗೌರವಿಸುತ್ತಲೇ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು.

ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯಗಳು

ಜವಾಹರಲಾಲ್ ನೆಹರೂ ಅವರು ಗಾಂಧೀಜಿಯವರ ಅತ್ಯಂತ ನಿಕಟ ಸಹಚರರಲ್ಲಿ ಒಬ್ಬರಾಗಿದ್ದರು. ರಾಷ್ಟ್ರೀಯ ಚಳವಳಿಯಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಇಬ್ಬರ ಆಲೋಚನೆಗಳಲ್ಲಿ ಸಾಕಷ್ಟು ಭಿನ್ನತೆಗಳಿದ್ದವು. ನೆಹರೂ ಅವರ ಆಧುನಿಕ ವಿಜ್ಞಾನ, ತಂತ್ರಜ್ಞಾನ, ಭಾರೀ ಕೈಗಾರಿಕೆ, ವೈಜ್ಞಾನಿಕ ದೃಷ್ಟಿಕೋನ, ಸಮಾಜವಾದಿ ಪ್ರಭಾವಿತ ಆರ್ಥಿಕ ನೀತಿಗಳತ್ತ ಒಲವು ತೋರಿದರು. ಆದರೆ ಗಾಂಧೀಜಿ ಗ್ರಾಮ ಸ್ವರಾಜ್ಯ, ಸಣ್ಣ ಪ್ರಮಾಣದ ಉತ್ಪಾದನೆ, ಖಾದಿ ಮತ್ತು ನೈತಿಕ ಆರ್ಥಿಕ ವ್ಯವಸ್ಥೆಗೆ ಆದ್ಯತೆ ನೀಡಿದರು.

ಸಂಪೂರ್ಣ ಸ್ವಾತಂತ್ರ‍್ಯಬೇಕೆಂದು ನೆಹರೂ, ಬ್ರಿಟಿಷ್ ಸರ್ಕಾರಕ್ಕೆ ಗಡುವು ನೀಡಿ, ಪ್ರಸ್ತುತ ‘ಡೊಮಿನಿಯನ್ ಸ್ಟೇಟಸ್’ (ಅಧೀನ ರಾಜ್ಯದ ಸ್ಥಾನಮಾನ) ಸಾಧಿಸಬೇಕು ಎಂದು ಗಾಂಧಿಯವರು ಅಭಿಪ್ರಾಯ ಪಟ್ಟಿದ್ದರು. ಈ ವಿಷಯದಲ್ಲಿ ಇವರಿಬ್ಬರ ನಡುವೆ 1928ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಬಂದವು. ಸ್ವಾತಂತ್ರ‍್ಯದ ನಂತರ ದೇಶವನ್ನು ಹೇಗೆ ನಿರ್ಮಿಸಬೇಕು ಎನ್ನುವ ವಿಷಯದಲ್ಲೂ ಇಬ್ಬರ ದೃಷ್ಟಿಕೋನಗಳು ಭಿನ್ನವಾಗಿದ್ದವು.

ಈ ಚರ್ಚೆಗಳ ಫಲವಾಗಿ, ಕೈಗಾರಿಕಾ ಕ್ಷೇತ್ರವು ಸಾರ್ವಜನಿಕ ವಲಯದಲ್ಲೇ ಇರಬೇಕೆಂಬ ತೀರ್ಮಾನಕ್ಕೆ ಗಾಂಧೀಜಿ ಬಂದರು. ನೆಹರೂ ಅವರ ಆಲೋಚನೆಗಳನ್ನು ಹತ್ತಿಕ್ಕಲು ಅಥವಾ ಅವರಿಂದ ದೂರ ಸರಿಯಲು ಗಾಂಧೀಜಿ ಎಂದಿಗೂ ಯತ್ನಿಸಲಿಲ್ಲ. ನೆಹರೂ ಅವರೂ ಸಹ ಗಾಂಧೀಜಿಯವರೊಂದಿಗೆ ಚರ್ಚಿಸುತ್ತಲೇ ಅವರನ್ನು ರಾಷ್ಟ್ರೀಯ ಚಳವಳಿಯ ಕೇಂದ್ರ ಬಿಂದುವಾಗಿ ಗೌರವಿಸಿದರು. ಆ ಕಾಲದ ಕಮ್ಯೂನಿಸ್ಟ್ ನಾಯಕರಾದ ಎಂ.ಎನ್. ರಾಯ್ ಅವರ ‘ಬೋಲ್ಶೆವಿಕ್ ಸಿದ್ಧಾಂತ’ವನ್ನು ಗಾಂಧೀಜಿ ವಿರೋಧಿಸಿದರೂ, ತಮ್ಮ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಅವರಿಂದ ಲೇಖನಗಳನ್ನು ಬರೆಸುತ್ತಿದ್ದರು. ಭಿನ್ನಾಭಿಪ್ರಾಯ ಎಂದರೆ ವಿರೋಧ ಅಲ್ಲ; ಭಿನ್ನವಾದ ಅಭಿಪ್ರಾಯಗಳಿದ್ದರೂ ಒಂದೇ ಗುರಿಗಾಗಿ ಒಟ್ಟಾಗಿ ಕೆಲಸ ಮಾಡಬಹುದು ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.

ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಸಂಘರ್ಷ

ಬ್ರಿಟಿಷ್ ಆಡಳಿತವನ್ನು ಎದುರಿಸುವ ವಿಷಯದಲ್ಲಿ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಸಹ ಬಳಸಿಕೊಳ್ಳಬೇಕು ಎಂಬುದು ಸುಭಾಷ್ ಚಂದ್ರ ಬೋಸ್ ಅವರ ಆಲೋಚನೆಯಾಗಿತ್ತು. 1938ರ ಹರಿಪುರ ಕಾಂಗ್ರೆಸ್‌ನಲ್ಲಿ ಸುಭಾಷ್ ಅಧ್ಯಕ್ಷರಾದರು. 1939ರಲ್ಲಿ ಮತ್ತೆ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದಾಗ, ಗಾಂಧೀಜಿ ಬೆಂಬಲಿಸಿದ್ದ ಅಭ್ಯರ್ಥಿ ಪಟ್ಟಾಭಿ ಸೀತಾರಾಮಯ್ಯ ಸೋಲನುಭವಿಸಿದರು. ಸುಭಾಷ್ ವಿಜಯ ಸಾಧಿಸಿದರೂ, ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದರಿಂದ ಅವರು ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು. ಆದಾಗ್ಯೂ, ಸುಭಾಷ್ ವೈಯಕ್ತಿಕವಾಗಿ ಗಾಂಧೀಜಿಯವರನ್ನು ಎಂದಿಗೂ ಅಗೌರವಿಸಲಿಲ್ಲ, ಅದೇ ರೀತಿ ಗಾಂಧೀಜಿಯವರೂ ಸಹ ಸುಭಾಷ್ ಅವರ ದೇಶಭಕ್ತಿ ಮತ್ತು ತ್ಯಾಗವನ್ನು ಕೊಂಡಾಡಿದರು.

ಅಂಬೇಡ್ಕರ್ ಅವರೊಂದಿಗೆ ಭಿನ್ನಾಭಿಪ್ರಾಯ

ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಜಾತಿ ವ್ಯವಸ್ಥೆಯ ವಿಷಯದಲ್ಲಿ ತೀವ್ರ ಭಿನ್ನಾಭಿಪ್ರಾಯಗಳಿದ್ದವು. ಅಂಬೇಡ್ಕರ್ ‘ಜಾತಿ ವ್ಯವಸ್ಥೆಯ ನಿರ್ಮೂಲನೆಯು ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ಪ್ರಾಥಮಿಕ ಅಗತ್ಯ’ ಎಂದು ಪ್ರತಿಪಾದಿಸಿದರು. ಶೋಷಿತ ವರ್ಗಗಳಿಗೆ ಸ್ವತಂತ್ರ ರಾಜಕೀಯ ಪ್ರಾತಿನಿಧ್ಯ ಮತ್ತು ಪ್ರತ್ಯೇಕ ಮತಕ್ಷೇತ್ರದ ಹಕ್ಕುಗಳನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು. 1932ರಲ್ಲಿ ‘ಕಮ್ಯೂನಲ್ ಅವಾರ್ಡ್’ ಮೂಲಕ ಶೋಷಿತ ವರ್ಗಗಳಿಗೆ (Depressed Classes) ಪ್ರತ್ಯೇಕ ಚುನಾವಣಾ ಪ್ರಸ್ತಾಪ ಬಂದಾಗ, ಗಾಂಧೀಜಿ ಅದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಅಂಬೇಡ್ಕರ್ ಇದನ್ನು ರಾಜಕೀಯವಾಗಿ ತೀವ್ರವಾಗಿ ವಿರೋಧಿಸಿದರು. ಅಂತಿಮವಾಗಿ ಇವರಿಬ್ಬರ ನಡುವೆ ‘ಪೂನಾ ಒಪ್ಪಂದ’ ಏರ್ಪಟ್ಟರೂ, ಗಾಂಧೀಜಿ ತೀವ್ರ ಟೀಕೆಗೆ ಗುರಿಗಾದರು. ಅದರ ನಂತರವೂ ಗಾಂಧಿ ಮತ್ತು ಅಂಬೇಡ್ಕರ್ ಹಲವು ವಿಷಯಗಳಲ್ಲಿ ಒಟ್ಟಾಗಿ ಕೆಲಸ ಮಾಡಿದರು ಹಾಗೂ ಪರಸ್ಪರ ಗೌರವಿಸಿಕೊಂಡರು.

ಗಾಂಧಿ ಮತ್ತು ಮತಧರ್ಮ

ಗಾಂಧೀಜಿಯವರು ‘ಮತಧರ್ಮ’ ಎಂಬ ಪದವನ್ನು ಎರಡು ಅರ್ಥಗಳಲ್ಲಿ ಬಳಸಿದ್ದಾರೆ ಎಂಬುದು ಅವರ ಜೀವನ ಶೈಲಿಯಿಂದ ತಿಳಿಯುತ್ತದೆ. ಒಂದು, ಮೇಲ್ನೋಟಕ್ಕೆ ಕಾಣುವ ಹಿಂದೂ, ಇಸ್ಲಾಂ, ಕ್ರೈಸ್ತ ಧರ್ಮಗಳಂತಹ ಹಲವು ಧರ್ಮಗಳ ಗೋಚರ ಆಚರಣೆಗಳು. ಎರಡು, ಧರ್ಮ ಎಂದರೆ ದೇವರು, ಸತ್ಯ ಮತ್ತು ಸದಾಚಾರದಲ್ಲಿ ನಂಬಿಕೆ ಇಡುವುದು. ಈ ಕೋನದಲ್ಲಿ ನೋಡಿದಾಗ ಪ್ರಪಂಚದ ಯಾವುದೇ ಧರ್ಮವೂ ಪ್ರತ್ಯೇಕವಾಗಿ ಉಳಿಯುವುದಿಲ್ಲ. ಎಲ್ಲ ಧರ್ಮಗಳೂ ಮಾನವೀಯತೆ ಮತ್ತು ಸನ್ಮಾರ್ಗವನ್ನೇ ಬೋಧಿಸುತ್ತವೆ. ಈ ನೈತಿಕ ಮೌಲ್ಯಗಳು ಎಲ್ಲಾ ಧರ್ಮಗಳಲ್ಲೂ ಒಂದೇ ರೀತಿ ಇವೆ ಎಂದು ಅವರು ಹೇಳಿದರು. ದೇಶದಾದ್ಯಂತ ಅವರು ಪ್ರವಾಸ ಮಾಡುವಾಗ, ಭಾರತದ ಜನರ ನಡುವೆ ಇರುವ ಧರ್ಮಾತೀತ ಬಾಂಧವ್ಯವನ್ನು ಗಮನಿಸಿದಂತೆಲ್ಲಾ ಕ್ರಮೇಣ, ಧರ್ಮದ ಬಗ್ಗೆ ಅವರ ದೃಷ್ಟಿಕೋನಗಳು ಹೆಚ್ಚು ಜಾತ್ಯತೀತವಾದವು.ಆರಂಭದಲ್ಲಿ ಅವರು ಹೇಳುತ್ತಿದ್ದ “ದೇವರೇ ಸತ್ಯ” ಎಂಬ ಅಭಿಪ್ರಾಯವನ್ನು “ಸತ್ಯವೇ ದೇವರು” ಎಂದು ಬದಲಾಯಿಸಿಕೊಂಡರು. “ನಿಜವಾದ ಧರ್ಮ, ನಿಜವಾದ ನೈತಿಕತೆ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿವೆ. ನೆಲದಲ್ಲಿ ನೆಟ್ಟ ಬೀಜಕ್ಕೆ ನೀರು ಎಷ್ಟು ಅಗತ್ಯವೋ, ಧರ್ಮಕ್ಕೆ ನೈತಿಕತೆ ಅಷ್ಟೇ ಅಗತ್ಯ” ಎಂದರು. “ಅಸತ್ಯ, ಕ್ರೌರ್ಯ, ದ್ವೇಷ ಮತ್ತು ಅತಿಯಾದ ಆವೇಶ ಉಳ್ಳವನು ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ, ಅವನಿಗೆ ಧರ್ಮದ ಬಗ್ಗೆ ಮಾತನಾಡುವ ಹಕ್ಕಿರುವುದಿಲ್ಲ” ಎಂದು ರವೀಂದ್ರನಾಥ ಟಾಗೋರ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“ಮತಧರ್ಮದ ಕಾರಣಕ್ಕೆ ಜನರನ್ನು ಬೇರೆ ಮಾಡುವುದು ಸಂಪೂರ್ಣ ತಪ್ಪು… ಇದೆಲ್ಲವೂ ಧರ್ಮದ ಆಚರಣೆ ಮತ್ತು ಆಚರಣೆಗಳನ್ನು ಅವಲಂಬಿಸಿರುತ್ತದೆ. ಅವುಗಳಿಗೂ ಜಾತ್ಯತೀತ ರಾಷ್ಟ್ರಕ್ಕೂ ಸಂಬಂಧವೇ ಇಲ್ಲ” ಎಂಬ ಅವರ ಚಿಂತನೆ ಇಂದು ತೀವ್ರ ಅಪಾಯವನ್ನು ಎದುರಿಸುತ್ತಿದೆ. “ನಾನೇನಾದರೂ ಸರ್ವಾಧಿಕಾರಿಯಾಗಿದ್ದರೆ ಧರ್ಮ ಮತ್ತು ರಾಜ್ಯವನ್ನು (ಪ್ರಭುತ್ವವನ್ನು) ಪ್ರತ್ಯೇಕವಾಗಿಡುತ್ತಿದ್ದೆ. ನಾನು ನನ್ನ ಧರ್ಮದ ಮೇಲೆ ಪ್ರಮಾಣ ಮಾಡುತ್ತೇನೆ, ಅದಕ್ಕಾಗಿ ಸಾಯಲೂ ಸಿದ್ಧ. ಆದರೆ ಅದು ನನ್ನ ವೈಯಕ್ತಿಕ ವಿಚಾರ. ರಾಜ್ಯಕ್ಕೂ (ಪ್ರಭುತ್ವಕ್ಕೂ) ಅದಕ್ಕೂ ಸಂಬಂಧವಿಲ್ಲ”, “ನನಗೇ ಆ ಅಧಿಕಾರವಿದ್ದಿದ್ದರೆ, ಕೋಮುವಾದವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬರೆದ ಕೃತಿಗಳನ್ನೆಲ್ಲಾ ನಿಷೇಧಿಸುತ್ತಿದ್ದೆ” ಎಂದು ಎಚ್ಚರಿಸಿದ್ದರು. “ಕೋಮುವಾದವು ದೇಶವಿರೋಧಿ ಮಾತ್ರವೇ ಅಲ್ಲ, ಅದು ಹಿಂದೂ ಕೋಮುವಾದವಾಗಿದ್ದರೆ ಹಿಂದೂ ಧರ್ಮಕ್ಕೆ ವಿರೋಧಿ, ಮುಸ್ಲಿಂ ಕೋಮುವಾದವಾಗಿದ್ದರೆ ಮುಸ್ಲಿಂ ಧರ್ಮಕ್ಕೆ ವಿರೋಧಿ” ಎಂದು ಗಾಂಧೀಜಿಯವರು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು.

ಲೇಖಕರು: ವಿ. ರಾಮ್ ಭೂಪಾಲ್

ಕೃಪೆ; ಪ್ರಜಾಶಕ್ತಿ


ಟಿಪ್ಪಣಿಗಳು

ನಿಮ್ಮ ಟಿಪ್ಪಣಿ ಬರೆಯಿರಿ

ನಮ್ಮ ಹೊಸ ಲೇಖನಗಳನ್ನು ಇ-ಮೇಲ್ ಮೂಲಕ ಪಡೆಯಿರಿ