ಯುಪಿಐ ವಹಿವಾಟುಗಳ ಮೇಲೆ ಶುಲ್ಕ: ಅಮೆರಿಕನ್ ಕಂಪನಿಗಳಿಗೆ ಲಾಭ

ಯುಪಿಐ ಖರೀದಿ ವಹಿವಾಟುಗಳ ಮೇಲೆ ಶೇ. 0.4 ರಷ್ಟು ಎಂಡಿಆರ್ ಶುಲ್ಕದಿಂದಾಗಿ, ಜನಸಾಮಾನ್ಯರು ತಮ್ಮ ಸ್ವಂತ ಹಣವನ್ನು ತಾವೇ ಬಳಸಿಕೊಳ್ಳುತ್ತಾ, ಆ ಪಾವತಿಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಅಮೆರಿಕನ್ ಕಂಪನಿಗಳಿಗೆ ಶುಲ್ಕವಾಗಿ ಪಾವತಿಸಬೇಕಾದ ಪರಿಸ್ಥಿತಿ ಬರುತ್ತದೆ. “ಇದು ಗ್ರಾಹಕರ ಮೇಲೆ ಹೊರೆಯಲ್ಲ, ವ್ಯಾಪಾರಿಗಳ ಮೇಲೆ ಬೀಳುವ ಶುಲ್ಕ” ಎಂಬ ಸರ್ಕಾರದ ವಾದ ವಾಸ್ತವವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ. ಯುಪಿಐ ಮತ್ತು ವಹಿವಾಟುಗಳ ಮೇಲಿನ ಶುಲ್ಕ ಇವುಗಳ ವಾಸ್ತವಗಳು ಅರ್ಥವಾಗಬೇಕಾದರೆ, ಕಳೆದ ಒಂದು ದಶಕದಿಂದ ಸರ್ಕಾರ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸಲು ಯೋಜನಾಬದ್ಧವಾಗಿ ಮಾಡಿದ ಪ್ರಯತ್ನಗಳ ಕಡೆಗೆ ತಿರುಗಿ ನೋಡಬೇಕು.

ಅಕ್ಟೋಬರ್ 15, 2026 ರಿಂದ, ರೂ. 2,000 ಕ್ಕಿಂತ ಹೆಚ್ಚಿನ ಯುಪಿಐ ಖರೀದಿ ವಹಿವಾಟುಗಳ ಮೇಲೆ (P2M – ವ್ಯಕ್ತಿಯಿಂದ ವ್ಯಾಪಾರಿಗೆ) ಶೇಕಡಾ 0.4 ರಷ್ಟು ಎಂಡಿಆರ್ ಶುಲ್ಕ ಅನ್ವಯಿಸುತ್ತದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಧಿಸೂಚನೆ ಹೊರಡಿಸಿದೆ. ರೂ. 75,000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಈ ಶುಲ್ಕ ಗರಿಷ್ಠ ರೂ. 300 ಕ್ಕೆ ಸೀಮಿತವಾಗಿರುತ್ತದೆ. ವ್ಯಕ್ತಿಗಳ ನಡುವಿನ (P2P) ಪಾವತಿಗಳು ಹಾಗೂ ರೂ. 2,000 ಒಳಗಿನ ವ್ಯಾಪಾರಿ ಪಾವತಿಗಳು ಯಥಾರೀತಿ ಉಚಿತವಾಗಿಯೇ ಮುಂದುವರಿಯಲಿವೆ ಎಂದು ಸರ್ಕಾರ ಹೇಳುತ್ತಿದೆ.

ಹಣಕಾಸು ಸಚಿವಾಲಯ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ವಿವರಣೆಯ ಪ್ರಕಾರ… ಇದು ಗ್ರಾಹಕರ ಮೇಲಲ್ಲ, ವ್ಯಾಪಾರಿಗಳ ಮೇಲೆ ಬೀಳುವ ಶುಲ್ಕ ಮಾತ್ರ. ಎಂಡಿಆರ್ ಎಂಬುದು ಸರ್ಕಾರಕ್ಕಾಗಲಿ ಅಥವಾ NPCI ಗಾಗಲಿ ಹೋಗುವ ತೆರಿಗೆಯಲ್ಲ – ಇದು ಬ್ಯಾಂಕುಗಳು ಮತ್ತು ಪೇಮೆಂಟ್ ಸರ್ವೀಸ್ ಪ್ರೊವೈಡರ್‌ಗಳ ನಡುವೆ ಹಂಚಿಕೆಯಾಗುವ ಮೊತ್ತ. ಸುಮಾರು ಶೇ. 96 ರಷ್ಟು ಪಾವತಿಗಳು ಮತ್ತು P2M ವಹಿವಾಟುಗಳು ಈ ಶುಲ್ಕದ ವ್ಯಾಪ್ತಿಗೆ ಬರುವುದಿಲ್ಲ. ಯುಪಿಐ ವ್ಯವಸ್ಥೆಯು ದೀರ್ಘಕಾಲದವರೆಗೆ ಸುಸ್ಥಿರವಾಗಿರಬೇಕಾದರೆ, ಇದರ ಮೂಲಸೌಕರ್ಯ ಮತ್ತು ಭದ್ರತೆಗೆ ನಿಧಿಯ ಅಗತ್ಯವಿದೆ, ಅದಕ್ಕಾಗಿಯೇ ಈ ಶುಲ್ಕ ಅಗತ್ಯ ಎಂಬುದು ಸರ್ಕಾರದ ವಾದ.

ಜಿಎಸ್‌ಟಿ ಮತ್ತು ನೋಟು ರದ್ಧತಿ ಸಮಯದಲ್ಲೂ….

ಜಿಎಸ್‌ಟಿ ಜಾರಿಗೆ ತಂದಾಗ ಅದನ್ನು ಸಮರ್ಥಿಸಿಕೊಳ್ಳಲು ಕೇಂದ್ರದಲ್ಲಿರುವ ಮೋದಿ ಸರ್ಕಾರ ಏನೆಲ್ಲಾ ಹೇಳಿತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. “ಒಂದೇ ದೇಶ.. ಒಂದೇ ತೆರಿಗೆ..” ಎಂದರು, ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲೆಂದೇ ಜಿಎಸ್‌ಟಿ ತರಲಾಗಿದೆ ಎಂದು ಜನರನ್ನು ನಂಬಿಸಿತ್ತು. ಆದರೆ, ಅಂತಿಮವಾಗಿ ತೆರಿಗೆಯ ಹೊರೆ ಜನಸಾಮನ್ಯರ ಮೇಲೆಯೇ ಬಿತ್ತು.

ಇದೇರೀತಿ ನೋಟು ಅಮಾನ್ಯೀಕರಣ. 2016ರ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳ ರದ್ದತಿಯ ಸಮಯದಲ್ಲಿಯೂ, ಉಗ್ರಗಾಮಿಗಳಿಗೆ ಹರಿಯುವ ನಿಧಿಯನ್ನು ತಡೆಯುವುದೇ ಮುಖ್ಯ ಗುರಿ ಎಂದು ಹೇಳಿದ್ದರು. ಆದರೆ, ಉಗ್ರವಾದ ಮತ್ತು ಹಿಂಸಾಚಾರ ಸಂಪೂರ್ಣವಾಗಿ ಅಂತ್ಯವಾಗಲಿಲ್ಲ ಎನ್ನುವುದೇ ವಾಸ್ತವ. ಡಿಮಾನಿಟೈಸ್ ಆದ 15.41 ಲಕ್ಷ ಕೋಟಿ ರೂಪಾಯಿಗಳಲ್ಲಿ 15.30 ಲಕ್ಷ ಕೋಟಿ ರೂಪಾಯಿ, ಅಂದರೆ ಶೇಕಡ 99.30ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎನ್ನುವುದನ್ನು ಆರ್‌ಬಿಐನ 2017-18ರ ವಾರ್ಷಿಕ ವರದಿ ತೋರಿಸುತ್ತದೆ.

ಡಿಮಾನಿಟೈಸೇಶನ್, ಭಾರತೀಯ ಆರ್ಥಿಕತೆಯ ಅಧಃಪತನದ ಪಯಣದ ಆರಂಭವಾಗಿತ್ತು. ನಗದು ಆಧಾರಿತ ಭೌತಿಕ ವ್ಯವಹಾರಗಳು ಮತ್ತು ಸಣ್ಣ ವಹಿವಾಟುಗಳನ್ನು ಒಳಗೊಂಡ ಅನೌಪಚಾರಿಕ, ನಗದು ಚಾಲಿತ, ಸಣ್ಣ ವಲಯದ ಆರ್ಥಿಕತೆಯು ಕುಸಿದು ಹೋಯಿತು. ಸಣ್ಣ ಮತ್ತು ಅತಿ ಸಣ್ಣ ಉದ್ಯಮ ಕ್ಷೇತ್ರ ನಾಶವಾಯಿತು. ಅನೌಪಚಾರಿಕ ಉದ್ಯೋಗ ಕ್ಷೇತ್ರದ ಮೇಲೆ ವಿನಾಶಕಾರಿ ಪರಿಣಾಮ ಉಂಟಾಯಿತು.

ಈಗ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಿಷಯದಲ್ಲೂ ಕೇಂದ್ರ ಸರ್ಕಾರ ಅದೇ ಹಾದಿಯಲ್ಲಿ ಸಾಗುತ್ತಿದೆ. ‘ಡಿಜಿಟಲ್ ಇಂಡಿಯಾ’ವನ್ನು ಗುರಿಯಾಗಿ ತೋರಿಸಿ “ಯುಪಿಐ ಉಚಿತ – ಪಾವತಿಗಳ ಮೇಲೆ ಯಾವುದೇ ಹೊರೆ ಇರುವುದಿಲ್ಲ” ಎಂದು ಜನರಿಗೆ ಅಭ್ಯಾಸ ಮಾಡಿಸಿತು. ಈಗ ‘ಎಂಡಿಆರ್’ (MDR – Merchant Discount Rate) ಶುಲ್ಕದ ಹೆಸರಿನಲ್ಲಿ ಜನರ ಮೇಲೆ ಹೊರೆ ಹೊರಿಸಲು ರಂಗ ಸಜ್ಜುಗೊಳಿಸಿದೆ. ಜನರ ಹಣದಿಂದ ಮತ್ತು ಜನರ ಬಳಕೆಯಿಂದ ವಿಸ್ತರಿಸಿದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಈಗ ಕಾರ್ಪೊರೇಟ್ ಪಾವತಿ ಸಂಸ್ಥೆಗಳಿಗೆ ಆದಾಯದ ಮೂಲವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ.

ಗ್ರಾಹಕರ ಮೇಲಲ್ಲ, ವ್ಯಾಪಾರಿಗಳ ಮೇಲೆ !?

ಸರ್ಕಾರ ಹೇಳುತ್ತಿರುವುದು ತಾಂತ್ರಿಕವಾಗಿ ನಿಜ ಎನಿಸಬಹುದು. “ಶುಲ್ಕ ಕಟ್ಟೋದು ವ್ಯಾಪಾರಿ ತಾನೇ, ಇದರಿಂದ ಗ್ರಾಹಕರಿಗೆ ನಷ್ಟವೇನೂ ಇಲ್ಲವಲ್ಲ” ಎನಿಸಬಹುದು. ಆದರೆ, ಪ್ರಾಯೋಗಿಕ ಜಗತ್ತಿನಲ್ಲಿ ವ್ಯಾಪಾರ ಹೇಗೆ ನಡೆಯುತ್ತೆ ಎಂದು ಯೋಚಿಸಿ. ಯಾವ ವ್ಯಾಪಾರಿಯೂ ತನ್ನ ಲಾಭವನ್ನು ಕಡಿಮೆ ಮಾಡಿಕೊಳ್ಳೊದಿಲ್ಲ ಅಲ್ಲವೇ? ಹೆಚ್ಚುವರಿಯಾಗಿ ಬೀಳುವ ಪ್ರತಿಯೊಂದು ಶುಲ್ಕವನ್ನು, ವೆಚ್ಚವನ್ನು ಬೆಲೆಯಲ್ಲಿ ಸೇರಿಸುತ್ತಾರೆ ಮತ್ತು ಅವುಗಳನ್ನು ಗ್ರಾಹಕರಿಂದಲೇ ವಸೂಲಿ ಮಾಡುತ್ತಾರೆ. ಅಂದರೆ, “ಗ್ರಾಹಕನ ಮೇಲೆ ನೇರ ಶುಲ್ಕವಿಲ್ಲ” ಎಂಬ ಮಾತು ನಿಜ ಎನಿಸಿದರೂ, ಪ್ರಾಯೋಗಿಕವಾಗಿ ಅದೊಂದು ಭ್ರಮೆ ಮಾತ್ರ. ನಮ್ಮ ದೈನಂದಿನ ಜೀವನದಲ್ಲಿ ಮಾಡುವ ಅನೇಕ ಖರೀದಿಗಳು ಮತ್ತು ವೆಚ್ಚಗಳು ಇದಕ್ಕೆ ಉದಾಹರಣೆ. ಜನಸಾಮಾನ್ಯರು ತಮ್ಮ ಸ್ವಂತ ಹಣವನ್ನು ತಾವೇ ಖರ್ಚು ಮಾಡುತ್ತಾ, ಪರೋಕ್ಷವಾಗಿ ಡಿಜಿಟಲ್ ಪೇಮೆಂಟ್ ಕಂಪನಿಗಳಿಗೆ ಶುಲ್ಕ ಪಾವತಿಸಬೇಕಾಗಿ ಬರುತ್ತದೆ – ಇದು ಸುಲಿಗೆಯಲ್ಲದೆ ಮತ್ತೇನು?

ಗಮನಿಸಬೇಕಾದ ವಿಷಯವೆಂದರೆ, ಒಟ್ಟು ಯುಪಿಐ ವಹಿವಾಟುಗಳಲ್ಲಿ ಸುಮಾರು ಶೇಕಡಾ 65 ರಷ್ಟು (ಮೌಲ್ಯದ ಪ್ರಕಾರ) ರೂ. 2,000 ಕ್ಕಿಂತ ಹೆಚ್ಚಿನದ್ದಾಗಿದೆ. ಅಂದರೆ ಈ ಶುಲ್ಕದ ವ್ಯಾಪ್ತಿಗೆ ಬರುವ ವಹಿವಾಟುಗಳ ಮೌಲ್ಯವು ತುಂಬಾ ದೊಡ್ಡದಾಗಿದೆ. “ಇದು ಕೇವಲ ಕೆಲವರಿಗಷ್ಟೇ ಅನ್ವಯಿಸುತ್ತದೆ” ಎಂಬ ವಾದವು ಕಾಣಿಸುವಷ್ಟು ಸಣ್ಣದೇನಲ್ಲ.

ಈಗ 0.4%, ಭವಿಷ್ಯದಲ್ಲಿ ಎಷ್ಟೋ?

ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ಈ ಶುಲ್ಕಗಳು ಇಲ್ಲಿಗೇ ನಿಲ್ಲುತ್ತವೆಯೇ? ಒಮ್ಮೆ “zero-MDR” ನೀತಿಯನ್ನು ರದ್ದುಗೊಳಿಸಿದ ಮೇಲೆ, ಭವಿಷ್ಯದಲ್ಲಿ ಈ ಶುಲ್ಕಗಳನ್ನು ಹೆಚ್ಚಿಸುವುದು ಮತ್ತು ವ್ಯಾಪ್ತಿಯನ್ನು ವಿಸ್ತರಿಸುವುದು (ರೂ. 2,000 ಮಿತಿಯನ್ನು ಕಡಿಮೆ ಮಾಡುವುದು ಇತ್ಯಾದಿ) ಮುಂದಿನ ದಿನಗಳಲ್ಲಿ ಯಾವಾಗ ಬೇಕಾದರೂ ನಡೆಯಬಹುದು. ಇಂದು “96% ವಹಿವಾಟುಗಳಿಗೆ ಶುಲ್ಕವಿಲ್ಲ” ಎಂದು ಹೇಳುತ್ತಿರುವ ಸರ್ಕಾರವೇ, ನಾಳೆ ಆ ವ್ಯಾಪ್ತಿಯನ್ನು ವಿಸ್ತರಿಸಿದರೆ ತಡೆಯುವವರಾರು? ಜನರು ಈ ಮೊದಲ ಹೆಜ್ಜೆಯನ್ನೇ ಪ್ರಶ್ನಿಸದಿದ್ದರೆ, ನಾಳೆಯ ಹೊರೆಯನ್ನು ತಡೆಯುವುದು ಕಷ್ಟವಾಗುತ್ತದೆ.

ಈ ಶುಲ್ಕಗಳಿಂದ ಲಾಭ ಪಡೆಯುವವರು ಯಾರು?

ಯುಪಿಐ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ವಹಿವಾಟುಗಳಲ್ಲಿ ಅಮೆರಿಕದ ಸಂಸ್ಥೆಗಳಾದ ವಾಲ್‌ಮಾರ್ಟ್‌ಗೆ ಸೇರಿದ ಫೋನ್ ಪೇ (PhonePe – 50%) ಮತ್ತು ಗೂಗಲ್ ಪೇ (Google Pay – 33%) ಸೇರಿ ಶೇಕಡಾ 83 ರಷ್ಟು ಪಾಲನ್ನು ಹೊಂದಿವೆ. ಹೊಸ ಎಂಡಿಆರ್ ನೀತಿ ಜಾರಿಗೆ ಬಂದರೆ, ಈ ಶುಲ್ಕಗಳ ಸಿಂಹಪಾಲು ಜಮೆಯಾಗುವುದು ಈ ಎರಡು ವಿದೇಶಿ ಕಂಪನಿಗಳ ಖಾತೆಗಳಿಗೇ. ಸಾರ್ವಜನಿಕ ವಲಯದ ಬ್ಯಾಂಕುಗಳ ಆಪ್‌ಗಳಿಗೆ ಈ ಮಾರುಕಟ್ಟೆಯಲ್ಲಿ ಶೇಕಡಾ ಒಂದರಷ್ಟು ಪಾಲೂ ಇಲ್ಲ.

USAID ಒಪ್ಪಂದದೊಂದಿಗೆ ಶುರುವಾದ ಕಥೆ

ಈ ಇಡೀ ವ್ಯವಹಾರವನ್ನು ಅರ್ಥಮಾಡಿಕೊಳ್ಳಬೇಕಾದರೆ, ಹತ್ತು ವರ್ಷ ಹಿಂದೆ ಹೋಗಬೇಕು. 2015 ಸೆಪ್ಟೆಂಬರ್‌ನಲ್ಲಿ, ಭಾರತ ಸರ್ಕಾರವು ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆ ಸಂಸ್ಥೆಯಲ್ಲಿ ಅನೇಕ ಅಮೆರಿಕನ್ ಸರ್ಕಾರಿ ಇಲಾಖೆಗಳ ಜೊತೆಗೆ ಮೈಕ್ರೋಸಾಫ್ಟ್, ಮಾಸ್ಟರ್ ಕಾರ್ಡ್, ಬಿಲ್ ಗೇಟ್ಸ್ ಫೌಂಡೇಶನ್, ಗೂಗಲ್, ವಾಲ್‌ಮಾರ್ಟ್‌ನಂತಹ ಅನೇಕ ಟೆಕ್ ಕಂಪನಿಗಳು ಮತ್ತು ಎನ್‌ಜಿಒಗಳು ಪಾಲುದಾರರಾಗಿದ್ದವು. ಅಭಿವೃದ್ಧಿಗಿಂತ ಹೆಚ್ಚಾಗಿ ತಮ್ಮ ವ್ಯಾಪಾರ ಹಿತಾಸಕ್ತಿಗಳನ್ನು ವಿಸ್ತರಿಸಿಕೊಳ್ಳುವುದೇ ಅವುಗಳ ಗುರಿಯಾಗಿತ್ತು.

ಆ ಸಮಯದಲ್ಲಿ ಭಾರತದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ವಹಿವಾಟುಗಳು ನಗದಿನ ರೂಪದಲ್ಲೇ ನಡೆಯುತ್ತಿದ್ದವು. ಈ ನಗದು ವ್ಯವಸ್ಥೆಯನ್ನು ಡಿಜಿಟಲ್‌ಗೆ ಬದಲಾಯಿಸುವುದೇ ಆ ಒಪ್ಪಂದದ ಸಾರಾಂಶವಾಗಿತ್ತು. ಆದರೆ, ಈ ಅಸಲಿ ವಿಷಯವನ್ನು ಜನರಿಗೆ ಹೇಳದೆ, 2016 ನವೆಂಬರ್‌ನಲ್ಲಿ ದೊಡ್ಡ ನೋಟುಗಳ ರದ್ದತಿಯನ್ನು ದೇಶಭಕ್ತಿಯ ಘೋಷಣೆಗಳೊಂದಿಗೆ ಘೋಷಿಸಲಾಯಿತು – ಕಪ್ಪು ಹಣ ಹೊರತೆಗೆಯುವುದು, ಕಳ್ಳನೋಟುಗಳ ನಿರ್ಮೂಲನೆ ಮತ್ತು ಉಗ್ರವಾದಿಗಳ ಆರ್ಥಿಕ ಮೂಲಗಳನ್ನು ಮೆಟ್ಟಿಹಾಕುವುದು ಇದರ ಗುರಿಗಳು ಎಂದು ಹೇಳಲಾಯಿತು.

ಡಿಮಾನಿಟೈಸೇಶನ್‌ನಿಂದ ಘೋಷಿಸಿದ ಯಾವ ಗುರಿಗಳೂ ಈಡೇರಲಿಲ್ಲ ಎಂಬುದು ವಾಸ್ತವ. ಸಂಸತ್ತಿನಲ್ಲಿ ಅಥವಾ ಹೊರಗೆ ಈ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ನಿರಾಕರಿಸುತ್ತಿದೆ. ಆದರೆ ಆಶ್ಚರ್ಯಕರವಾಗಿ, ಡಿಜಿಟಲ್ ಬ್ಯಾಂಕಿಂಗ್ ಮತ್ತು ಯುಪಿಐ ವಹಿವಾಟುಗಳು ಮಾತ್ರ ಅಭೂತಪೂರ್ವವಾಗಿ ಬೆಳೆದವು – 2016 ರಲ್ಲಿ ತಿಂಗಳಿಗೆ ಕೇವಲ 3 ಲಕ್ಷದಷ್ಟಿತ್ತು. ಪ್ರಸ್ತುತ ಯುಪಿಐ ಒಟ್ಟು ವಹಿವಾಟು ತಿಂಗಳಿಗೆ ಸರಾಸರಿ 2,300 ಕೋಟಿಯಿಂದ 2,450 ಕೋಟಿಗಿಂತಲೂ ಹೆಚ್ಚಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಬಿಡುಗಡೆ ಮಾಡಿದ ಇತ್ತೀಚಿನ ಆಗಸ್ಟ್ 2026 ರ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಒಂದೇ ತಿಂಗಳಲ್ಲಿ ದಾಖಲೆಯ 2,451 ಕೋಟಿ ವಹಿವಾಟುಗಳು ನಡೆದಿವೆ. ಒಟ್ಟು ರೂ. 29.82 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದೆ.

ಈ ವ್ಯವಸ್ಥೆಯ ಕೇಂದ್ರಬಿಂದುವಾಗಿ ಬದಲಾದ ವಿದೇಶಿ ಕಂಪನಿಗಳು ಈಗ ತಮ್ಮ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದಿವೆ ಎಂದು ತಿಳಿದುಬಂದಿದೆ. ಇದರ ಪರಿಣಾಮವಾಗಿಯೇ ಕಾಯ್ದೆ ತಿದ್ದುಪಡಿ ಮತ್ತು ತಕ್ಷಣವೇ ಈ ಅಧಿಸೂಚನೆ ಹೊರಬಿದ್ದವು. ಇದೆಲ್ಲವೂ ಆಕಸ್ಮಿಕವಾಗಿ ನಡೆದಿದ್ದಲ್ಲ – ಒಂದು ಯೋಜನೆಯ ಪ್ರಕಾರ, ಹಂತ ಹಂತವಾಗಿ ಜಾರಿಯಾದ ಪ್ರಕ್ರಿಯೆ.

ಸಾಮಾನ್ಯ ಜನರು ತಮ್ಮ ಸ್ವಂತ ಹಣವನ್ನು ತಾವೇ ಬಳಸಿಕೊಳ್ಳುತ್ತಾ, ಆ ಪಾವತಿಗಳ ಮೇಲೆ ಸಾವಿರಾರು ಕೋಟಿ ರೂಪಾಯಿಗಳನ್ನು ಅಮೆರಿಕನ್ ಕಂಪನಿಗಳಿಗೆ ಶುಲ್ಕವಾಗಿ ಪಾವತಿಸಬೇಕಾದ ಪರಿಸ್ಥಿತಿ ಬರುವುದು ಅನ್ಯಾಯ. “ಗ್ರಾಹಕರ ಮೇಲೆ ಹೊರೆಯಿಲ್ಲ” ಎಂಬ ಸರ್ಕಾರದ ವಾದವು ವಾಸ್ತವವನ್ನು ಮುಚ್ಚಿಹಾಕುವ ಪ್ರಯತ್ನವಷ್ಟೇ. ಈ ನಿರ್ಧಾರವನ್ನು ಸಾರ್ವಜನಿಕರೆಲ್ಲರೂ ಸೂಕ್ಷ್ಮವಾಗಿ ಗಮನಿಸಬೇಕು, ಪ್ರಶ್ನಿಸಬೇಕು ಮತ್ತು ವಿರೋಧಿಸಬೇಕು. ಸರ್ಕಾರವು ಈ ಎಂಡಿಆರ್ ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು. ವಿದೇಶಿ ಕಂಪನಿಗಳಿಗೆ ಇನ್ನಷ್ಟು ಮೇಲು ಮಾಡುವ ರೀತಿಯಲ್ಲಿ ಡಿಜಿಟಲ್ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವುದನ್ನು ಜನರೆಲ್ಲರೂ ವಿರೋಧಿಸಬೇಕು.