ʻಲ್ಯಾಂಡ್‌ ಲಾರ್ಡ್ʼ ಸಿನಿಮಾ

ಜಾತಿವಾದ ಮತ್ತು ಊಳಿಗಮಾನ್ಯ ಪದ್ಧತಿ ಎಂಬ ಎರಡು ಶಕ್ತಿ ಸಿದ್ಧಾಂತಗಳ ಹಿಂಸಾಚಾರಕ್ಕೆ ನಲುಗಿದವರ ಕತೆ

ಪ್ರೀತಿ- ಪ್ರೇಮದ ಕತೆಗಳು, ಪುರೋಹಿತಶಾಹಿ ಹಿಡಿತವಿರುವ ವ್ಯವಸ್ಥೆಯನ್ನು ಉಳಿಸಿ, ಅದನ್ನು ಮತ್ತಷ್ಟು ಬಲಿಷ್ಟಗೊಳಿಸಲು ಬೇಕಾದ ಕತೆಗಳು, ದೇವರು, ಧರ್ಮಗಳ ಬಗೆಗಿನ ಕತೆಗಳು, ಮತ್ತಷ್ಟು ಮೌಢ್ಯತೆಗಳನ್ನು ಬಿತ್ತುವ ಕತೆಗಳನ್ನು ಇಂದಿನ ಬಹುತೇಕ ಸಿನಿಮಾಗಳಲ್ಲಿ ಕಾಣುತ್ತೇವೆ. ಇದಕ್ಕೆ ಹೊರತಾಗಿ ಜಾತಿವಾದ ಮತ್ತು ಊಳಿಗಮಾನ್ಯ ಪದ್ಧತಿ ಎಂಬ ಎರಡು ಶಕ್ತಿ ಸಿದ್ಧಾಂತಗಳ ಹಿಂಸಾಚಾರಕ್ಕೆ ನಲುಗಿದವರ ಇತಿಹಾಸ ಹೊಂದಿರುವ ಕತೆಗಳನ್ನು ಸಿನಿಮಾಗಳ ಕಥಾ ವಸ್ತುಗಳನ್ನಾಗಿ ಮಾಡಿಕೊಳ್ಳುವುದು ಅಪರೂಪ ಎಂಬಂತಾಗಿದೆ. ಅದರಲ್ಲೂ ಕನ್ನಡ ಸಿನಿಮಾಗಳು ತೀರಾ ಕಡಿಮೆ. ಲ್ಯಾಂಡ್‌ ಲಾರ್ಡ್ ಸಿನಿಮಾ ಈ ಚೌಕಟ್ಟಿನಿಂದ ಆಚೆಗೆ ಒಂದು ಹೆಜ್ಜೆ ಹಾಕಿದೆ.

“ಕಲ್ಲಿನ್‌ ಕೋಳಿ ಕೂಗೋದ್ರಿಂದ, ಮೂಗ್‌ ಬಸ್ವ ಮಾತಾಡೋದ್ರಿಂದ ಪ್ರಳಯ ಆಗಲ್ಲ. ಅನ್ನಕ್‌ ಕೈಚಾಚೋನು ಅನ್ನಕ್‌ ಒಡೆಯನಾಗ್ಬಿಟ್ರೆ ಅದೇ ಪ್ರಳಯ” ಇದು ಭೂಮಾಲೀಕನಿಗೆ ಆತನ ಕುಟುಂಬದ ಪುರೋಹಿತನ ಉಪದೇಶ. ಪುರೋಹಿತನ ಮಾತುಗಳನ್ನು ಕೇಳಿಸಿಕೊಂಡ ಭೂಮಾಲೀಕ ತನ್ನ ಹಸುಗಳ ಹಿಂಡನ್ನು ಬಿಟ್ಟು ರಾಚಯ್ಯನ ಹೊಲದಲ್ಲಿ ಬೆಳೆದ ಬೆಳೆ ನಾಶ ಮಾಡುತ್ತಾನೆ. ಅದನ್ನು ಪ್ರಶ್ನಿಸಲು ಬಂದ ರಾಚಯ್ಯನ ತಾಯಿಗೆ ಥಳಿಸಿ ಕೊಂದುಹಾಕುತ್ತಾನೆ.

ಇದು ಜಡೇಶ್ ಹಂಪಿ ನಿರ್ದೇಶನದ, ದುನಿಯಾ ವಿಜಯ್‌ ಕುಮಾರ್, ರಚಿತಾ ರಾಮ್ ನಟನೆಯ ʼಲ್ಯಾಂಡ್‌ ಲಾರ್ಡ್‌ʼ ಸಿನಿಮಾದ ಒಂದು ದೃಶ್ಯ.

ಈ ಸಿನಿಮಾದಲ್ಲಿ ಭೂಮಾಲೀಕರ ಕ್ರೌರ್ಯ ಇದೆ, ನಮಗೂ ಸ್ವಂತ ಭೂಮಿ ಬೇಕು ಎಂಬ ಭೂರಹಿತ ಕೃಷಿ ಕಾರ್ಮಿಕರ ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಭೂರಹಿತ ದಲಿತರ ತಲತಲಾಂತರದ ತುಡಿತ ಇದೆ, ಭೂಮಿಗಾಗಿ ಹೋರಾಟವೂ ಒಂದು ಮಿತಿಯಲ್ಲಿ ಇದೆ, ವರ್ಗ ಸಂಘರ್ಷವಿದೆ, ವರ್ಣ ಸಂಘರ್ಷವಿದೆ. ದೇವದಾಸಿ (ಊರು ಬಸವಿ) ಪದ್ಧತಿ, ಮೌಡ್ಯಾಚರಣೆ ಇವೆಲ್ಲವುಗಳಿಗೆ ಪ್ರತಿರೋಧವಿದೆ, ತೇರಿನಿಂದ ಗಾಳಿಗೆ ಹಾರಿ ನೆಲದ ಮೇಲೆ ಬಿದ್ದ ದೇವರ ಬಟ್ಟೆಯನ್ನು ದಲಿತ ಯುವತಿ ಮುಟ್ಟಿದ್ದಕ್ಕೆ ಮೈಲಿಗೆಯಾಯ್ತು ಎನ್ನುತ್ತ ತೇರನ್ನೇ ಸುಟ್ಟುಹಾಕಿದ ಜಾತಿ ಪದ್ದತಿಯ ಕ್ರೌರ್ಯವೂ ಇದೆ, ನಾಯಕನೇ ಮುಂದೆ ನಿಂತು ಅಂತರ್ಜಾತಿ ಯುವಕ ಯುವತಿಯ ಮದುವೆ ಮಾಡಿಸಿದ ದೃಶ್ಯವೂ ಇದೆ, ಭೂಮಾಲೀಕರ ವಿರುದ್ಧದ ಶೋಷಿತರ ದ್ವನಿಯನ್ನು ಹೇಗೆ ಹತ್ತಿಕ್ಕಬೇಕು ಎಂಬ ‘ಕು’ತಂತ್ರಗಳನ್ನು ರೂಪಿಸಿಕೊಡುವ ಕುಲಪುರೋಹಿತರೂ ಇದ್ದಾರೆ. ತಾವೇ ಆರಿಸಿ ಕಳುಹಿಸಿದ, ತಮ್ಮದೇ ಸಮುದಾಯದ ಜನಪ್ರತಿನಿದಿನಗಳು, ಕಾನೂನು ಪರಿಪಾಲನೆ ಮಾಡಬೇಕಾದ ಪೋಲೀಸರು, ನ್ಯಾಯಾಂಗ ವ್ಯವಸ್ಥೆ ಇವೆಲ್ಲವೂ ಸಂವಿಧಾನವನ್ನು ಪಾಲನೆ ಮಾಡದೆ ಶೋಷಕರ (ಭೂಮಾಲೀಕರ) ಬೆನ್ನೆಲುಬಾಗಿ ನಿಲ್ಲುತ್ತವೆ.  ಇವೆಲ್ಲವನ್ನೂ ಪ್ರೇಕ್ಷಕರಿಗೆ ಮನಮುಟ್ಟುವ ರೀತಿಯಲ್ಲಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

ಕೂಲಿಯವರಿಗಾಗಿ ಕ್ರಾಂತಿ ಶುರು ಮಾಡ್ಬೇಕು…

“ವರ್ಷಾನ್‌ ಗಟ್ಲೆಯಿಂದ ಅವರಿಗೆ ನಾವೂ ದುಡ್ದು ದುಡ್ದು, ನಮ್ಮ ಚರ್ಮ ಸುಲ್ದು ಕೆರಗಳ್‌ (ಚಪ್ಪಲಿಗಳನ್ನು) ಮಾಡ್ಕೊಟ್ಟಿದ್ದೀವಿ ಅವ್ರಗ. ಕೂಲಿಯವರಿಗಾಗಿ ಕ್ರಾಂತಿ ಶುರು ಮಾಡ್ಬೇಕು” ಎನ್ನುತ್ತ ಸುತ್ತಲಿನ ಹಳ್ಳಿಗಳ ಕೃಷಿ ಕೂಲಿಕಾರರನ್ನು ಸಂಘಟಿಸಿ ಹೋರಾಟಕ್ಕೆ ಇಳಿಸಲು ರಾಚಯ್ಯ ಮುಂದಾಗುತ್ತಾರೆ. ಯಾರೂ ಕೂಲಿಗೆ ಹೋಗಬಾರದೆಂದು ಹೇಳುತ್ತಾನೆ. ಕಾನೂನಿನ ಪ್ರಕಾರ ಸಮಾನ ಕೂಲಿ, ಕೆಲಸಕ್ಕೆ ತಕ್ಕಂತೆ ಕಾಸು ಕೊಡಬೇಕು ಎನ್ನುತ್ತಾರೆ. ರಾಚಯ್ಯನ ಕ್ರಾಂತಿ ಕಿಡಿ ಸುತ್ತ ಹಳ್ಳಿಗಳಿಗೂ ಹರಡಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇದು ಭೂಮಾಲೀಕನ ಕಿವಿಗೆ ಬೀಳುತ್ತದೆ. ಕೂಲಿ ದರವನ್ನು ಹೆಚ್ಚಿಸುವ ಬೇಡಿಕೆಯನ್ನು ಅವರಿಂದ ಸಹಿಸಲಾಗಲಿಲ್ಲ. ‘ಗುಲಾಮರಿಗೆ ಚೌಕಾಸಿ ಮಾಡುವ ಹಕ್ಕಿಲ್ಲ’ ಎಂಬುದು ಭೂಮಾಲೀಕರ ಸಹಜ ಮನಸ್ಥಿತಿಯಾಗಿತ್ತು. ಕೃಷಿ ಕಾರ್ಮಿಕರು ಒಂದು ಸಂಘವಾಗಿ ಒಟ್ಟುಗೂಡಿದ್ದು ಮತ್ತು ಅವರ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು ಭೂಮಾಲೀಕರನ್ನು ಕೆರಳಿಸಿತು.

ಸ್ಥಳೀಯ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡುವುದನ್ನು ತಪ್ಪಿಸಲು, ಭೂಮಾಲೀಕರು ಹೊರಗಿನಿಂದ ಕಾರ್ಮಿಕರನ್ನು ಕರೆತರಲು ಪ್ರಾರಂಭಿಸುತ್ತಾನೆ. ಬೆಳೆ ಕಟಾವು ಬಂದಾಗ ಹೊರಗಿನ ಕೂಲಿ ಕಾರ್ಮಿಕರು ಸಿಗಲಿಲ್ಲ. ಅನಿವಾರ್ಯವಾಗಿ ಭೂಮಾಲೀಕ ಊರಿನ ಜನರನ್ನು ಕೆಲಸಕ್ಕೆ ಕರೆಯುತ್ತಾನೆ. ನಾಲ್ಕಾಣೆ ಕೂಲಿ ಹೆಚ್ಚಳಕ್ಕೆ ಒಪ್ಪಿಕೊಳ್ಳುತ್ತಾನೆ. ಕಾರ್ಮಿಕ ವರ್ಗದ ಹೊಸದಾಗಿ ಹುಟ್ಟಿದ ಸ್ವಾಭಿಮಾನದ ಪ್ರಜ್ಞೆಗೆ ಪಾಠ ಕಲಿಸಲು ಅವರು ಈ ದೌರ್ಜನ್ಯ ಎಸಗಲು ಮುಂದಾಗುತ್ತಾರೆ.

ಹಳ್ಳಿಗೆ ನುಗ್ಗಿ ಮನಬಂದಂತೆ ಜನರನ್ನು ಥಳಿಸುತ್ತಾರೆ

ಮತ್ತೊಂದು ದೃಶ್ಯದಲ್ಲಿ, ಮಹಿಳೆಯೊಬ್ಬಳ ಕೊಲೆಯ ಆರೋಪದ ಮೇಲೆ ಭೂಮಾಲೀಕನನ್ನು ಕಂಬಿ ಎಣಿಸುವಂತೆ ಮಾಡಲಾಗುತ್ತದೆ. ಇದರಿಂದ ಭೂಮಾಲೀಕನ ಗರ್ವ ಭಂಗವಾಗುತ್ತದೆ. ತಲೆತಲಾಂತರದಿಂದ ಕಾಪಾಡಿಕೊಂಡು ಬಂದಿದ್ದ ತನ್ನ ಕುಟುಂಬದ ಪಾಳೆಯಗಾರಿ ಆಡಳಿತಕ್ಕೆ ಮೊದಲ ಬಾರಿಗೆ ಕೂಲಿಕಾರರಿಂದ ಪೆಟ್ಟು ಬೀಳುತ್ತದೆ. ಆತ ಸೇಡಿಗಾಗಿ ಆತೊರೆಯುತ್ತಾನೆ. ಕೊಲೆ ಆರೋಪಿ ಜಮೀನ್ದಾರನಿಗೆ ನ್ಯಾಯಾಲಯದಿಂದ ಜಾಮೀನು ಸಿಗುತ್ತದೆ. ಜೈಲಿನಿಂದ ಹೊರಬಂದವನೆ, ತನ್ನ ಹತ್ತಾರು ಸಹಾಯಕರ ಜೊತೆ ಗ್ರಾಮಕ್ಕೆ ನುಗ್ಗುತ್ತಾರೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಾರೆ. ಮಕ್ಕಳು, ಮಹಿಳೆಯರು, ವೃದ್ದರೆನ್ನದೆ ಎಲ್ಲರನ್ನು ಮನಬಂದಂತೆ ಥಳಿಸುತ್ತಾರೆ. ಮನೆಗಳಿಗೆ ಬೆಂಕಿ ಹಚ್ಚುತ್ತಾರೆ. ಜನರ ಚೀರಾಟ, ನರಳಾಟ ಪ್ರೇಕ್ಷಕರ ಮನ ಕಲಕುವಂತಿದೆ.

ಭಾರತದ ಇತಿಹಾಸದಲ್ಲಿ ಭೂಮಾಲೀಕರು ಮತ್ತು ಕೃಷಿ ಕಾರ್ಮಿಕರ ನಡುವೆ ಭುಗಿಲೆದ್ದ ವರ್ಗ ಹೋರಾಟದಲ್ಲಿ ಸಹಸ್ರಾರು ಜೀವಗಳು ಬಲಿಯಾಗಿವೆ. ಭಾರತೀಯ ಊಳಿಗಮಾನ್ಯ ಪದ್ಧತಿ ವಿಶಿಷ್ಟವಾಗಿದೆ. ಇದು ಯುರೋಪಿಯನ್ ಶೈಲಿಗಿಂತ ಭಿನ್ನವಾಗಿದೆ. ಇಲ್ಲಿ ಅದು ಆಸ್ತಿ ಮಾಲೀಕತ್ವದಿಂದ ಮಾತ್ರವಲ್ಲದೆ, ಹುಟ್ಟಿನ ಆಧಾರದ ಮೇಲೆ ಜಾತಿ ರಚನೆಯಿಂದಲೂ ರೂಪುಗೊಂಡಿದೆ. ಆ ಹತ್ಯಾಕಾಂಡಗಳಿಗೆ ಕಾರಣವೆಂದರೆ ಆಡಳಿತ ವರ್ಗದ ಪ್ರಾಬಲ್ಯದ ಭಾವನೆಯಿಂದ ಮಾತ್ರವಲ್ಲದೆ, “ಕೃಷಿ ಗುಲಾಮರು ಚೌಕಾಶಿ ಮಾಡುತ್ತಿದ್ದಾರೆಯೇ?” ಎಂಬ ಕೋಪ ಮಾತ್ರವಲ್ಲ, ಮೇಲ್ಜಾತಿಯ ಪ್ರಾಬಲ್ಯದ ಭಾವನೆಯಿಂದಲೂ ಹುಟ್ಟಿಕೊಂಡಿತು.

44 ದಲಿತರನ್ನು ಸುಟ್ಟುಹಾಕಲಾದ ಕಿಲ್ವೆನ್ಮಣಿ ಹತ್ಯಾಕಾಂಡ

ಲ್ಯಾಂಡ್‌ ಲಾರ್ಡ್‌ ಸಿನಿಮಾದ ಈ ದೃಶ್ಯ ನೋಡುವಾಗ, ತಮಿಳುನಾಡು ತಂಜಾವೂರಿನ ಕಿಲ್ವೆನ್ಮಣಿ ಗ್ರಾಮದ ಮೇಲೆ ಭೂಮಾಲೀಕರು ನಡೆಸಿದ ದಾಳಿ ಕಣ್ಣ ಮುಂದೆ ಬಂದಂತೆ ಭಾಷವಾಯ್ತು. ಅದರ ಒಂದು ತುಣುಕು ಇಲ್ಲಿದೆ: ಡಿಸೆಂಬರ್ 25, 1968 ರ ರಾತ್ರಿ, ಆ ಪ್ರದೇಶದಲ್ಲಿ ಹೆಚ್ಚಿನ ವೇತನಕ್ಕಾಗಿ ಕಮ್ಯೂನಿಸ್‌ ಪಕ್ಷದ ರೈತ ಸಂಘಟನೆಯಾದ ಕಿಸಾನ್ ಸಭಾ ನೇತೃತ್ವದಲ್ಲಿ ಹಲವಾರು ವಾರಗಳ ಮುಷ್ಕರಗಳು ಮತ್ತು ಪ್ರತಿಭಟನೆಗಳ ನಂತರ, ಭೂಮಾಲೀಕರು ಕಿಲ್ವೆನ್ಮಣಿ ಗ್ರಾಮದ ಮೇಲೆ ಮಾರಕ ಮತ್ತು ಯೋಜಿತ ದಾಳಿಯನ್ನು ಪ್ರಾರಂಭಿಸಿದರು. ಅವರು ತಮ್ಮ ಸಶಸ್ತ್ರ ಸಹಾಯಕರನ್ನು ಗ್ರಾಮಕ್ಕೆ ಕಳುಹಿಸಿದರು. ಸಹಾಯಕರು ಎಲ್ಲಾ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಡಿತಗೊಳಿಸಿ, ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ 44 ದಲಿತರನ್ನು (ಪ್ರಮುಖವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು) ಗುಡಿಸಲಿಗೆ ತಳ್ಳಿ, ಒಳಗೆ ಇದ್ದ ಎಲ್ಲರಿಗೂ ಬೆಂಕಿ ಹಚ್ಚಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಬೆಂಕಿಗೆ ತಳ್ಳಿದರು. ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ತಾಯಿಯೊಬ್ಬರು ತನ್ನ ಮಗುವನ್ನಾದರೂ ಬದುಕಿಸಬೇಕೆಂಬ ಆಸೆಯಿಂದ  ಮಗುವನ್ನು ಹೊರಗೆ ಎಸೆಯುತ್ತಾರೆ. ಆದರೆ, ಆ ಗೂಂಡಾಗಳು ಆ ಮಗುವನ್ನು ಬೆಂಕಿಗೆ ತಳ್ಳುತ್ತಾರೆ. ಅಪರಾಧಿಗಳು ಯಾವುದೇ ಕಾನೂನಿಗೂ ಹೆದರುತ್ತಿರಲಿಲ್ಲ.

ಲ್ಯಾಂಡ್‌ ಲಾರ್ಡ್‌ ಸಿನಿಮಾ ಕುರಿತು ಬರೆಯುವಾಗ ಕೀಳ್‌ ವೆನ್ಮಣಿ ಪ್ರಕರಣ ಯಾಕೆ ಎಂಬ ಪ್ರಶ್ನೆ ಓದುಗರಲ್ಲಿ ಮೂಡಬಹುದು. ಸಮಾಜದಲ್ಲಿ ಇಂದಿಗೂ, ಅಂದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೂ ಭೂಮಾಲೀಕರ, ಪಾಳೆಯಗಾರಿ ವ್ಯವಸ್ಥೆ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿ ಕೀಳ್ವೆನ್ಮಣಿಯ ಘಟನೆಯನ್ನು ನೆನಪಿಸಬೇಕಾಯ್ತು.

ಪೋಲೀಸರೇಕೆ ಜನರ ರಕ್ಷಣೆಗೆ ಬರಲಿಲ್ಲ?

ಲ್ಯಾಂಡ್‌ ಲಾರ್ಡ್‌ ಸಿನಿಮಾದಲ್ಲಿ ಊರಿನ ಜನರ ಮೇಲೆ ಭೂಮಾಲೀಕರ ಗೂಂಡಾಗಳು ದಾಳಿ ಮಾಡುವಾಗ ನಮ್ಮ ಪೊಲೀಸ್‌ ವ್ಯವಸ್ಥೆ ಜನರ ರಕ್ಷಣೆಗೆ ಮುಂದಾಗಲಿಲ್ಲ. ನನ್ನ ಪಕ್ಕದಲ್ಲಿ ಕುಳಿತಿದ್ದ ಸಂಗಾತಿಯೊಬ್ಬರು, “ಪೊಲೀಸರು ಯಾಕೆ ರಕ್ಷಣೆಗೆ ಬಂದಿಲ್ಲ? ಇದು ಸಾಧ್ಯವೇ” ಎಂಬ ಪ್ರಶ್ನೆ ಕೇಳಿದರು. ಆ ಸಮಯದಲ್ಲಿ ಮತ್ತೆ ಕೀಳ್‌ ವೆನ್ಮಣಿ ಘಟನೆ ನೆನಪಾಗುತ್ತದೆ: “ಈ ದಾಳಿ (ಕೀಳ್ವೆನ್ಮಣಿ) ನಡೆಯುವ ಮುನ್ನ, ಭೂಮಾಲೀಕರು ವೆನ್ಮಣಿಯನ್ನು ಸುಡಲು ಯೋಜಿಸುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ವದಂತಿಗಳನ್ನು ನಂಬಲರ್ಹವಾದ ವದಂತಿಗಳ ಆಧಾರದ ಮೇಲೆ, ಕಿಸಾನ್ ಸಭಾ ನಾಯಕಿ ಮೀನಾಕ್ಷಿ ಸುಂದರಂ, ಅದರ ಹಿಂದಿನ ವರ್ಷ ಅಧಿಕಾರಕ್ಕೆ ಬಂದ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಸಿಎನ್ ಅಣ್ಣಾದೊರೈ ಅವರಿಗೆ ಪತ್ರ ಬರೆದರು. ಯೋಜನೆಯಲ್ಲಿ ಪೈಶಾಚಿಕ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿ, ರಕ್ಷಣೆ ನೀಡುವಂತೆ ಕೋರಿದರು. ಅಣ್ಣಾದೊರೈ ಅವರು ಪತ್ರವನ್ನು ತಡವಾಗಿ ನೋಡಿರುವುದಾಗಿ ಘಟನೆ ನಡೆದ ನಂತರ ಹೇಳಿಕೊಂಡರು. ದೀರ್ಘ ಕಾನೂನು ಹೋರಾಟದ ನಂತರ, ಅಂತಿಮವಾಗಿ, ಹೈಕೋರ್ಟ್ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿತು.”

ಬಳಪ ಹಿಡೀರಿ, ಆಯುಧ ಹಿಡೀಬೇಡಿ…

ಸಿನಿಮಾದ ಮಧ್ಯದಲ್ಲಿ ಹಳೆಯದರ ನೆನಪುಗಳನ್ನು ಪ್ರೇಕ್ಷಕರಿಗೆ ತೋರಿಸಲಾಗುತ್ತದೆ. “ನಾವು ಇಸ್ಟ್‌ ವರ್ಷ ಎದಿರ್ಸಿದ್ರಿಂದ ಬದ್ಲಾಯ್ಸೋಕ್‌ ಆಗ್ಲಿಲ್ಲ, ಅಂಗಂತ ಎದುರಿಸ್ದೆ ಬದ್ಕೋಕೂ ಆಗಲ್ಲ. ಅದಿಕ್ಕೆ ವಿದ್ಯೆ ಬೇಕು. ಹಣವಂತನಿಗಿಂತ ವಿದ್ಯಾವಂತ ದೊಡ್ಡೋನು. ಬಳಪ ಹಿಡೀರಿ, ಆಯುಧ ಹಿಡೀಬೇಡಿ. ” ಅಂತ ಹೇಳಿ ರಾಚಯ್ಯ ಜನರಿಗೆ ಉಪದೇಶ ಮಾಡ್ತಾರೆ. ನಂತರ ಸುಳ್ಳು ಆರೋಪ ಹೊರಿಸಿ ಜೈಲು ಸೇರುವಂತೆ ಭೂಮಾಲೀಕ ಮಾಡುತ್ತಾನೆ. ೭ ವರ್ಷಗಳ ನಂತರ ಜೈಲಿನಿಂದ ಬಿಡುಗಡೆ ಆಗ್ತಾರೆ ಕೊಡಲಿ ರಾಚಯ್ಯ. ಆದರೆ, ನಂತರ ಭೂಮಾಲೀಕನ ಕ್ರೌರ್ಯ ಹೆಚ್ಚಾದಂತೆ ಅನಿವಾರ್ಯವಾಗಿ ಆಯುಧ (ಕೊಡಲಿ) ಹಿಡಿಯುತ್ತಾನೆ ರಾಚಯ್ಯ. ಇದನ್ನು ಪ್ರೇಕ್ಷಕರು ಹೇಗೆ ಅರ್ಥೈಸಿಕೊಳ್ಳುತ್ತಾರೊ ಅವರಿಗೆ ಬಿಟ್ಟಿದ್ದು.

ಆದರೂ, ಊಳಿಗಮಾನ್ಯ ಪದ್ಧತಿ ಮತ್ತು ಜಾತಿವಾದದ ವಿರುದ್ಧದ ಹೋರಾಟವನ್ನು ಅಂತಿಮವಾಗಿ ಒಬ್ಬ ನಾಯಕನ ಹೋರಾಟಕ್ಕೆ ಸೀಮಿತಗೊಳಿಸಲಾಗಿದೆ. ತನ್ನ ಗ್ರಾಮದ ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಜನರನ್ನು ಜಾಗೃತಿಗೊಳಿಸುವ, ಅವರನ್ನು ಭೂಮಾಲೀಕರ ಅಟ್ಟಹಾಸದ ವಿರುದ್ದ ಮತ್ತು ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಒಂದೆರಡು ನಿಮಿಷಗಳಲ್ಲಿ ಮುಗಿದುಹೋಗುತ್ತದೆ. ಆ ಜನರು ಕೂಲಿ ಹೆಚ್ಚಳಕ್ಕಾಗಿ ದ್ವನಿ ಎತ್ತಿದ್ದು, ಆ ನಂತರ ಜಮೀನ್ಧಾರರು ತನ್ನ ಜಮೀನುಗಳಲ್ಲಿ ಕೆಲಸ ಕೊಡದೆ, ಹೊರ ರಾಜ್ಯದಿಂದ ಕೂಲಿ ಕೆಲಸಗಾರರನ್ನು ಕರೆತಂದದ್ದು, ಅನಿವಾರ್ಯವಾಗಿ ನಾಲ್ಕಾಣೆ ಕೂಲಿ ಹೆಚ್ಚಳ ಮಾಡಿದ್ದು… ಇವೆಲ್ಲವನ್ನು ಅಲ್ಪ ಸಮಯದ ʼಕ್ರಾಂತಿʼಯನ್ನಾಗಿ ತೋರಿಸಲಾಗಿದೆ.

ಶೋಷಿತ ವರ್ಗದಲ್ಲಿ ವರ್ಗ ಪ್ರಜ್ಞೆ ಮೂಡಿಸದೆ, ಸಾಮೂಹಿಕ ಚಳುವಳಿಯನ್ನು ಬಲಿಷ್ಠವಾಗಿ ಕಟ್ಟದೆ, ಸಮಾಜದಲ್ಲಿ ಇಂದಿಗೂ ಬಲಿಷ್ಠವಾಗಿ ಬೇರೂರಿರುವ ಇಂದಿನ ಅನಿಷ್ಟ ಪದ್ದತಿಗಳಿಂದ, ಶೋಷಣೆಗಳಿಂದ ಜನರು ಬಿಡುಗಡೆ ಹೊಂದಲು ಸಾಧ್ಯವೇ? ಈಗ ಭಾರತವನ್ನು ಆಳ್ವಿಕೆ ಮಾಡುತ್ತಿರುವವರು ಬಂಡವಾಳಶಾಹಿ/ ಭೂಮಾಲೀಕರ ಹಾಗೂ ಹಿಂದುತ್ವವಾದಿಗಳ ಕೂಟ. ಇಂತಹ ಬಲಿಷ್ಠ ಕೂಟದ ವಿರುದ್ಧ ಹೋರಾಟವೆಂದರೆ ಅದು ಒಬ್ಬ ನಾಯಕನಿಂದ ಸಾಧ್ಯವೇ ಎಂಬ ಪ್ರಶ್ನೆ ಲ್ಯಾಂಡ್‌ ಲಾರ್ಡ್‌ ಸಿನಿಮಾ ನೋಡಿದ ನನ್ನಲ್ಲಿ ಮೂಡಿತು.

ನೀಲಿ ಮತ್ತು ಕೆಂಪು !!ಇದೆಲ್ಲದರ ನಡುವೆ ಈ ಚಿತ್ರದಲ್ಲಿ ನನಗೆ ವಿಶೇಷವಾಗಿ ಕಂಡಿದ್ದು, ನೀಲಿ ಕೋಟು ಮತ್ತು ಕೆಂಪು ಬಟ್ಟೆ: ಒಂದು ದೃಶ್ಯದಲ್ಲಿ ಚಿತ್ರದ ನಾಯಕ ನೀಲಿ ಕೋಟು ಧರಿಸಿ ಸಂವಿಧಾನದಲ್ಲಿನ ಅಂಶಗಳನ್ನು ಒತ್ತಿ ಹೇಳುವ ಮೂಲಕ ಶೋಷಕರನ್ನು ಬಗ್ಗುಬಡಿಯುವ ಪ್ರಯತ್ನ ಮಾಡುತ್ತಾನೆ. ಮತ್ತೊಂದು ದೃಶ್ಯದಲ್ಲಿ ವಿರೋಧಿಗಳು ಹಚ್ಚಿದ ಬೆಂಕಿಯ ಜ್ವಾಲೆಯ ನಡುವೆ ಗಾಳಿಯಲ್ಲಿ ತೂರಿ ಬಂದ ಕೆಂಪು ಬಟ್ಟೆಯೊಂದನ್ನು ನಾಯಕ ತನ್ನ ಒಂದು ಕೈಗೆ ಸುತ್ತಿಕೊಂಡು, ಆ ಕೆಂಪು ಬಟ್ಟೆಯೇ ಬೆಂಕಿಯ ಜ್ವಾಲೆಯಾಗಿ, ಆ ಜ್ವಾಲೆಯ ಕೈಯಿಂದಲೇ ವಿರೋಧಿಗಳನ್ನು ಸದೆಬಡಿದ ದೃಶ್ಯ. ಇದನ್ನು ಪ್ರೇಕ್ಷಕರು ಹೇಗೆ ಅರ್ಥೈಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಭಾರತದ ಸಂವಿಧಾನದ ಆಶಯಗಳು ಈಡೇರಬೇಕಾದರೆ, ಕೆಂಪು ದ್ವಜದ ಕ್ರಾಂತಿ ಅಗತ್ಯ ಎಂಬುದನ್ನು ಲ್ಯಾಂಡ್‌ ಲಾರ್ಡ್‌ ಸಿನಿಮಾ ಸೂಚ್ಯವಾಗಿ ಹೇಳಿದೆ ಎಂದು ನನಗನಿಸುತ್ತದೆ.

ಬಂಡವಾಳಗಾರರು ಮತ್ತು ಭೂಮಾಲೀಕರ ಮೈತ್ರಿ ಆಡಳಿತ

ಸ್ವಾತಂತ್ರ್ಯಕ್ಕಾಗಿ ನಡೆದ ರಾಷ್ಟ್ರೀಯ ಆಂದೋಲನವು ಕಾರ್ಮಿಕ ವರ್ಗದ, ರೈತಾಪಿ ಜನತೆಯ, ಮಧ್ಯಮ ವರ್ಗಗಳ, ಬುದ್ದಿಜೀವಿಗಳ, ಮಹಿಳೆಯರ, ವಿದ್ಯಾರ್ಥಿಗಳ ಮತ್ತು ಯುವಜನರ ಸಾಮೂಹಿಕ ಭಾಗವಹಿಸುವಿಕೆಯಿಂದ ಯಶಸ್ವಿಯಾಯಿತು. ಆದರೆ, ನಾಯಕತ್ವವು ಬಂಡವಾಳಶಾಹಿಗಳ ಕೈಗಳಲ್ಲೇ ಉಳಿಯಿತು. ಹೊಸ ಪ್ರಭುತ್ವದ ನೇತೃತ್ವ ವಹಿಸಿದ ದೊಡ್ಡ ಬಂಡವಾಳಶಾಹಿ ವರ್ಗವು ಪ್ರಜಾಪ್ರಭುತ್ವ ಕ್ರಾಂತಿಯ ಮೂಲಭೂತ ಕರ್ತವ್ಯಗಳನ್ನು ಪೂರ್ಣಗೊಳಿಸಲು ನಿರಾಕರಿಸಿತು. ಭಾರತದ ಸಮಾಜದ ಪುನರುಜ್ಜೀವನದ ಹಾದಿಯೆಂದರೆ, ಉತ್ಪಾದಕ ಶಕ್ತಿಗಳ ಮೇಲಿನ ಸಂಕೋಲೆಗಳನ್ನು ಮುರಿಯಬೇಕಿತ್ತು. ಪರಾವಲಂಬಿ ಭೂಮಾಲೀಕತ್ವ ಪದ್ಧತಿಯನ್ನು ರದ್ದು ಮಾಡಬೇಕಿತ್ತು. ಪ್ರಜಾಸತ್ತಾತ್ಮಕ ಕ್ರಾಂತಿಯ ಕರ್ತವ್ಯಗಳ ಅಮೂಲಾಗ್ರ ಅನುಸ್ಠಾನದಿಂದ ಬರಬಹುದಾಗಿದ್ದ ಫಲಿತಾಂಶಕ್ಕೆ ಭಯಪಟ್ಟು ದೊಡ್ಡ ಬಂಡವಾಳಗಾರರು ಭೂಮಾಲೀಕರೊಂದಿಗೆ ಮೈತ್ರಿ ಮಾಡಿಕೊಂಡರು. ಮತ್ತು ಸಾಮ್ರಾಜ್ಯವಾದದೊಂದಿಗೆ ರಾಜಿ ಮಾಡಿಕೊಂಡರು. ಕಾಂಗ್ರೆಸ್‌ ಆಳರಸರ ಧೋರಣೆಗಳು ಈ ಬಂಡವಾಳಶಾಹಿ- ಭೂಮಾಲೀಕ ಮೈತ್ರಿಯನ್ನು ಪ್ರತಿಬಿಂಬಿಸಿದವು. ಇದರ ಫಲವೇ ಬೃಹತ್‌ ಪ್ರಮಾಣದ ಕೃಷಿ ಭೂಮಿ ದೊಡ್ಡ ಭೂಮಾಲೀಕರ ಬಳಿಯಲ್ಲೇ ಇನ್ನೂ ಉಳಿದಿದೆ. ನ್ಯಾ. ನಾಗಮೋಹನ್‌ ದಾಸ್‌ ಅವರ ವರದಿಯಲ್ಲಿ ಹೇಳಿರುವಂತೆ, ಕರ್ನಾಟಕದ ಶೇ. 85 ರಷ್ಟು ದಲಿತರಿಗೆ ಕೃಷಿ ಭೂಮಿ ಇಲ್ಲ. ಸರ್ಕಾರ ಕಾರ್ಪೊರೇಟ್‌ ಕೃಷಿಗೆ ಅವಕಾಶ ಮಾಡಿ ಕೊಟ್ಟಿರುವುದರಿಂದ, ಈಗ ರೈತರ ಬಳಿ ಇರುವ ಭೂಮಿಯನ್ನಾದರೂ ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಲು ಸಾಧ್ಯವೇ ಎಂಬ ಆತಂಕವೂ ಉಂಟಾಗಿದೆ.

ವರ್ಗ ಪ್ರಜ್ಞೆ ಮೂಡಿಸುವ, ಸಂಘಟಿತರಾಗಿ ಹೋರಾಡಿ ಯಶಸ್ಸು ಸಾಧಿಸುವ ಚಿತ್ರ ಕತೆಗಳುಳ್ಳ ಇನ್ನಷ್ಟು ಸಿನಿಮಾಗಳು ಮುಂದಿನ ದಿನಗಳಲ್ಲಿ ಬರಲಿ. ಆ ಮೂಲಕ ಶೋಷಣೆಗೆ ಒಳಗಾಗಿರುವ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ ಎಂಬುದೇ ನನ್ನ ಆಶಯ. ದುನಿಯ ವಿಜಯ್ ಅವರ ಅಂತಹ ಭರವಸೆಯ ಮಾತುಗಳಿಂದ ಅದಕ್ಕೂ ಅವಕಾಶಗಳಿವೆ ಎಂದು ತಿಳಿಯುತ್ತದೆ. ಏನೇ ಆಗಲಿ, ಲ್ಯಾಂಡ್‌ ಲಾರ್ಡ್‌ ಸಿನಿಮಾ ಜನಪರ ಚಳುವಳಿಗಳು ಬಯಸುವ, ಜನ ಸಾಮಾನ್ಯರನ್ನು ಜಾಗೃತಗೊಳಿಸುವ ಉದ್ದೇಶವನ್ನು ಒಂದಷ್ಟು ಸಫಲಗೊಳಿಸಿದೆ ಎಂಬುದಂತು ಸತ್ಯ. ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳೇ ಇದಕ್ಕೊಂದು ಉದಾಹರಣೆ. ಸಿನಿಮಾ ನೋಡಿ, ಶೋಷಿತರ ಇಂದಿನ ಸಂಕಷ್ಟಗಳಿಗೆ ಕಾರಣಗಳೇನು, ಶೋಷಣೆಗಳಿಂದ ಮುಕ್ತಗೊಳ್ಳುವ ದಾರಿ ಯಾವುದು, ಅನಿಷ್ಟ ಪದ್ದತಿಗಳಿಂದ ದೂರ ಸರಿಯುವ ಬಗೆ ಹೇಗೆ ಎಂಬುದರ ಕುರಿತು ಶೋಷಿತ ವರ್ಗದ ಒಂದಷ್ಟು ಜನರನ್ನಾದರೂ ಚಿಂತನೆಗೆ ಹಚ್ಚುವಲ್ಲಿ ಚಿತ್ರ ಯಶಸ್ವಿಯಾಗಿದೆ.

Is this your new site? Log in to activate admin features and dismiss this message
ಲಾಗಿನ್