ʻಅಗ್ನಿಪಥ್ʼ ಯೋಜನೆಯ ಒಳ-ಹೊರಗು

‘ಅಗ್ನಿಪಥ್’ ಯೋಜನೆಯು ದೇಶಭಕ್ತಿ ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ ಎನ್ನುತ್ತದೆ ನರೇಂದ್ರ ಮೋದಿ ಸರ್ಕಾರ. ‘ಅಗ್ನಿಪಥ್’ ಯೋಜನೆ ತರುವ ಮೂಲಕ ಸೈನಿಕರಿಗೆ ಕಡಿಮೆ ಸಂಬಳ, ಸೇವಾ ಅವಧಿ ಕಡಿತ ಮತ್ತು ನಿವೃತ್ತಿ ನಂತರದ ಪಿಂಚಣಿಗೆ ಕತ್ತರಿ ಹಾಕಿದೆ. ಜೊತೆಗೆ ‘ಅಗ್ನಿವೀರ’ರನ್ನು ನಿರುದ್ಯೋಗಿಗಳ ದೊಡ್ಡ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಅಗ್ನಿಪಥ್ ಮೂಲಕ ಆಯ್ಕೆಯಾಗುವ ಶೇ. 75ರಷ್ಟು ಅಗ್ನಿವೀರರಿಗೆ 1. ಸರ್ಕಾರದ ಯಾವುದೇ ಭವಿಷ್ಯ ನಿಧಿಗೆ ಕೊಡುಗೆ ನೀಡುವ ಅಗತ್ಯವಿಲ್ಲ. 2. ಅಗ್ನಿವೀರರ ವಿಷಯದಲ್ಲಿ ಯಾವುದೇ ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯಗಳು ಇರುವುದಿಲ್ಲ. 3. ‘ಸೇವಾ ನಿಧಿ’ ಪ್ಯಾಕೇಜ್ (11.71 ಲಕ್ಷ ರೂ.) ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತದೆ ಎನ್ನುತ್ತದೆ ಸರ್ಕಾರ. ಈ ಪ್ಯಾಕೇಜ್ ನ ಮೊತ್ತದಲ್ಲಿಯೂ ಅಗ್ನಿವೀರರ ವೇತನದಲ್ಲಿ ಕಡಿತ ಮಾಡಿದ ಶೇ. 30 ರಷ್ಟು (5.02 ಲಕ್ಷ) ಮತ್ತು ಇದರ ಮೇಲಿನ ಬಡ್ಡಿ ಹಣವೂ ಇರುತ್ತದೆ.

ವಿವಿಧ ರೀತಿಯ ಉದ್ಯಮಗಳಲ್ಲಿ, ಕಾರ್ಖಾನೆಗಳಲ್ಲಿ ‘ನಿಗದಿತ ಅವಧಿಯ ಉದ್ಯೋಗ’ (Fixed Term Employment -FTE) ನೇಮಕಾತಿ ಜಾರಿಗೆ ತಂದಿರುವ ವಿಷಯ ಗೊತ್ತೇ ಇದೆ. ಇದು ಉದ್ಯಮದ ಮಾಲೀಕರು ತಮ್ಮ ಉದ್ಯಮಕ್ಕೆ ಅವಶ್ಯಕವಾದ ಕೆಲಸಗಾರರನ್ನು, ನಿಗಧಿತ ಅವಧಿಗೆ ನೇಮಕ ಮಾಡಿಕೊಳ್ಳುವ, ನಂತರ ಆ ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವ, ಅಥವಾ ಆ ನಿಗಧಿತ ಅವಧಿ ಮುಗಿದ ನಂತರ ಮಾಲೀಕರಿಗೆ ಅಗತ್ಯವಿದ್ದಲ್ಲಿ ಮತ್ತೊಂದು ‘ನಿಗದಿತ ಅವಧಿ’ಗೆ ಇರಿಸಿಕೊಳ್ಳುವ ಅವಕಾಶವನ್ನು ಮಾಲೀಕರಿಗೆ ಕೊಡುತ್ತದೆ. ಅಂದರೆ, ಇಂತಹ ನಿಗಧಿತ ಅವಧಿಗೆ ನೇಮಕಕೊಂಡ ಕೆಲಸಗಾರರಿಗೆ, ಕೆಲಸದಿಂದ ಹೊರಹಾಕಿದ್ದನ್ನು ಪ್ರಶ್ನಿಸುವ ಹಕ್ಕು, ಖಾಯಂ ನೌಕರಿ ಕೇಳುವ ಹಕ್ಕು, ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆಯುವ ಹಕ್ಕು, ಖಾಯಂ ನೌಕರರಿಗೆ ಸಿಗುವ ಇತರೆ ಕಾರ್ಮಿಕ ಹಕ್ಕುಗಳನ್ನು ಕೇಳುವ ಹಕ್ಕು ಇರುವುದಿಲ್ಲ.

‘ಅಗ್ನಿಪಥ್’ (ಬೆಂಕಿಯ ಹಾದಿ) ಯೋಜನೆಯು ‘ನಿಗಧಿತ ಅವಧಿಯ ಉದ್ಯೋಗ’ ದ ನಿಯಮಕ್ಕೆ ಹೋಲುವಂತಿದೆ. ಸೈನ್ಯದಲ್ಲಿ ಸಿಪಾಯಿ ಮತ್ತು ನೌಕಾ ಸೇನೆ ಹಾಗೂ ವಾಯುಸೇನೆಯಲ್ಲಿ ಸಮಾನ ಶ್ರೇಣಿಯು 17-19 ವರ್ಷಗಳ ಸೇವೆಯ ನಂತರ ನಿವೃತ್ತರಾಗುತ್ತಾರೆ. ಅಧಿಕಾರಿಗಳು 60 ವರ್ಷ ವಯಸ್ಸನ್ನು ತಲುಪುವ ಮೊದಲು ನಿವೃತ್ತರಾಗುತ್ತಾರೆ. ಆದರೆ, ಅಗ್ನಿಪಥ್ ನೇಮಕಾತಿ ಯೋಜನೆಯು ಭಾರತೀಯ ಸೇನೆಯಲ್ಲಿ ಇದುವೆರಗೆ ಅಸ್ತಿತ್ವದಲ್ಲಿರುವ ನೇಮಕಾತಿ ಕಾರ್ಯತಂತ್ರವನ್ನೇ ಬದಲಾಯಿಸುತ್ತದೆ.

[ ಅಗ್ನಿಪಥ ಯೋಜನೆ ಮೂಲಕ ನೇಮಕಗೊಂಡ ‘ಅಗ್ನಿವೀರ’ರಿಗೆ ನಾಲ್ಕು ವರ್ಷಗಳ ತರಬೇತಿ ಮತ್ತು ಸೇವೆಯ ಅವಧಿಯಲ್ಲಿ ಮಾಸಿಕ ವೇತನ ಮೊದಲ ವರ್ಷ ರೂ. 30,000, ಎರಡನೇ ವರ್ಷ ರೂ. 33,000, ಮೂರನೇ ವರ್ಷ ರೂ. 36,500 ಮತ್ತು ನಾಲ್ಕನೇ ವರ್ಷ ರೂ. 40,000 ವೇತನ ಕೊಡಲಾಗುತ್ತದೆ. ಈ ವೇತನದಲ್ಲಿ ಶೇ. 30 ರಷ್ಟು ಮೊತ್ತವನ್ನು ಅಗ್ನಿವೀರ್ ಕಾರ್ಪಸ್ ನಿಧಿಗೆ ಕೊಡುಗೆಯಾಗಿ ಕಡಿತ ಮಾಡಿ ಉಳಿದ ವೇತನದ ಹಣವನ್ನು ಅಗ್ನಿವೀರರಿಗೆ ಕೊಡಲಾಗುತ್ತದೆ. ಈ ನಿಧಿಗೆ ಅಗ್ನಿವೀರರ ಕೊಡುಗೆ 5.02 ಲಕ್ಷ ರೂ., ಈ ನಿಧಿಗೆ ಇಷ್ಟೇ ಪ್ರಮಾಣದ ಹಣವನ್ನು ಕೇಂದ್ರ ಸರ್ಕಾರ ಕೊಡುತ್ತದೆ. ನಿವೃತ್ತಿ ನಂತರ, ಈ ಎರಡೂ ಕೊಡುಗೆಯ ಹಣಕ್ಕೆ ಬರುವ ಬಡ್ಡಿ ಸೇರಿಸಿ, 11.71 ಲಕ್ಷ ರೂಪಾಯಿಗಳ ತೆರಿಗೆ-ಮುಕ್ತ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯುತ್ತಾರೆ. ]

ಶೇ. 75 ರಷ್ಟು ಮಂದಿ ಕಡ್ಡಾಯವಾಗಿ ನಿವೃತ್ತರಾಗುತ್ತಾರೆ

17.5 ರಿಂದ 23 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಯ ಮೂಲಕ ಸೈನ್ಯಕ್ಕೆ ಸೇರಲು ಅರ್ಹರಾಗಿರುತ್ತಾರೆ. ಶೇ. 25 ರಷ್ಟು ಅಗ್ನಿವೀರ್‌ ಗಳನ್ನು ಮುಂದಿನ 15 ವರ್ಷಗಳ ಸೇವೆಗಾಗಿ ಸಾಮಾನ್ಯ ಸೈನಿಕರಾಗಿ ದಾಖಲಾತಿಗಾಗಿ ಆಯ್ಕೆ ಮಾಡಲಾಗುತ್ತದೆ. ಉಳಿದ ಶೇಕಡಾ 75 ರಷ್ಟು ಮಂದಿ ಕಡ್ಡಾಯವಾಗಿ ನಿವೃತ್ತರಾಗುತ್ತಾರೆ. ಇವರು ಯಾವುದೇ ಗ್ರಾಚ್ಯುಟಿ ಅಥವಾ ಪಿಂಚಣಿ ಇಲ್ಲದೆ ಸುಮಾರು 11.71 ಲಕ್ಷ ರೂ.ಗಳ ಒಂದು ಬಾರಿ ತೆರಿಗೆ-ಮುಕ್ತ ಸೇವಾ ನಿಧಿ ಪ್ಯಾಕೇಜ್ ಅನ್ನು ಪಡೆಯುತ್ತಾರೆ. ಅವರು ಅಭಿವೃದ್ಧಿಪಡಿಸಿದ ಕೌಶಲ್ಯಗಳನ್ನು ಔಪಚಾರಿಕವಾಗಿ ಗುರುತಿಸಲು ಅವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ತೆರಿಗೆ-ಮುಕ್ತ ಪ್ಯಾಕೇಜ್ ಅನ್ನು ಪ್ರಸ್ತುತ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಉಳಿಸಿಕೊಳ್ಳುವ ಶೇ. 25 ರಷ್ಟು ನೇಮಕಾತಿಗಳನ್ನು ಹೇಗೆ ನಿಖರವಾಗಿ ಆಯ್ಕೆ ಮಾಡಲಾಗುತ್ತದೆ ಎಂಬುದು ಅಸ್ಪಷ್ಟವಾಗಿದೆ. ಮಾತ್ರವಲ್ಲ, ಇದು ಹಿಂದಿನ 17 ವರ್ಷಗಳ ಕನಿಷ್ಠ ಸೇವಾವಧಿಯನ್ನು ಮತ್ತು ಪಿಂಚಣಿ ವ್ಯವಸ್ಥೆಯನ್ನು ಬದಲಿಸುತ್ತದೆ. ಅಗ್ನಿಪಥ್ ಯೋಜನೆಯು ಸೈನಿಕರ ಸರಾಸರಿ ವಯಸ್ಸನ್ನು ಪ್ರಸ್ತುತ 32 ವರ್ಷಗಳಿಂದ 26 ವರ್ಷಗಳವರೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.

ಸೈನಿಕರ ಪಿಂಚಣಿ ಹೊರೆ ಕಡಿಮೆ ಮಾಡಿಕೊಳ್ಳುವ ತಂತ್ರ!!

ಭಾರತ ಸರ್ಕಾರವು ತನ್ನ ಪ್ರಕಟಣೆಗಳಿಂದ ಸ್ಪಷ್ಟವಾಗಿ ಹೇಳದಿದ್ದರೂ, ಅಗ್ನಿಪಥ್ ಯೋಜನೆಯು ಬಹಳಷ್ಟು ರಹಸ್ಯ ಗುರಿಗಳನ್ನು ಹೊಂದಿದೆ ಎಂದು ವ್ಯಾಪಕವಾಗಿ ಅರ್ಥೈಸಲಾಗಿದೆ. ಪ್ರಮುಖವಾಗಿ ಆರ್ಥಿಕತೆಗೆ ಸಂಬಂಧಿಸಿದ್ದು. ಸರ್ಕಾರ ಮಿಲಿಟರಿ ಸಿಬ್ಬಂದಿಯ ಪಿಂಚಣಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತದೆ. ತಮ್ಮ 17 ವರ್ಷಗಳ ಸೇವೆಯ ನಂತರ, ವರ್ಷಕ್ಕೆ ಭಾರತೀಯ ಸೇನೆಯ ಸರಿಸುಮಾರು 60,000 ಸಿಬ್ಬಂದಿ ನಿವೃತ್ತಿ ಹೊಂದುತ್ತಾರೆ. ಪ್ರಸ್ತುತ ಪಿಂಚಣಿ ಪಡೆಯುವ 30 ಲಕ್ಷ ಮಾಜಿ ಸೈನಿಕರಿದ್ದಾರೆ. ಇವರೆಲ್ಲರಿಗೂ ಸರ್ಕಾರ ಪಿಂಚಣಿ ಕೊಡುತ್ತಿದೆ.

ಭಾರತೀಯ ಸೇನೆಯು ನಿವೃತ್ತಿಯಿಂದಾಗಿ ಉಂಟಾಗುವ ತನ್ನ ಸಿಬ್ಬಂದಿಗಳ ಕೊರತೆಯನ್ನು ಪ್ರತಿ ವರ್ಷವೂ ಈ ಹೊಸ ನೇಮಕಗಳ ಮೂಲಕ ತುಂಬಿಕೊಳ್ಳಬೇಕು. ಅಗ್ನಿಪಥ್ ಮೂಲಕ ಇಷ್ಟು ಸಂಖ್ಯೆಯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಉದ್ದೇಶ ಸರ್ಕಾರದ್ದಾಗಿದೆ ಎಂದೂ ಹೇಳಲಾಗಿದೆ. ಆದರೆ ಅಗ್ನಿಪಥ್ ಯೋಜನೆಯು ಆರಂಭದಲ್ಲಿ 46,000 ನೇಮಕಾತಿಗಳನ್ನು ತೆಗೆದುಕೊಳ್ಳುತ್ತದೆ. 2027 ರ ವೇಳೆಗೆ ನೇಮಕಾತಿಗಳನ್ನು 1,25,000 ಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. ಅಗತ್ಯವಿರುವ ಸೇವೆಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಿ, ಅವರಿಗೆ ಪಿಂಚಣಿ ಸೌಲಭ್ಯ ಇಲ್ಲದಂತೆ ಮಾಡುವ ಅಗ್ನಿಪಥ್ ಯೋಜನೆಯಿಂದಾಗಿ, ಪಿಂಚಣಿ ಪಡೆಯುವ ಸೈನಿಕರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಸರ್ಕಾರ ಈಗ ನಿವೃತ್ತಿ ಸೈನಿಕರಿಗಾಗಿ ಮಾಡುತ್ತಿರುವ ಪಿಂಚಣಿ ವೆಚ್ಚವೂ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಗ್ನಿಪಥ್ ಮೂಲಕ ನೇಮಕವು ಸೈನಿಕರ ಮೇಲಿನ ವೆಚ್ಚ ಕಡಿತದ ವ್ಯಾಯಾಮ ಎಂಬುದನ್ನು ಸರ್ಕಾರ ಹೇಳದಿದ್ದರೂ ಇದೇ ಸರ್ಕಾರದ ಅಘೋಷಿತ ಗುರಿಯಾಗಿದೆ.

‘ಒಂದು ಶ್ರೇಣಿ- ಒಂದು ಪಿಂಚಣಿ’ (OROP) ಗಾಗಿನ ಹೋರಾಟದ ಹಿನ್ನಲೆಯಲ್ಲಿ ಸರ್ಕಾರದ ಈ ನಡೆಯನ್ನು ನೋಡಬೇಕಿದೆ. OROP ಯೋಜನೆ ಜಾರಿಗೆ ತಂದಿದ್ದೇವೆ ಎಂದು ಮೋದಿ ಸರ್ಕಾರ ಹೇಳುತ್ತಿದೆಯಾದರೂ, ನಿವೃತ್ತ ಸೈನಿಕರ ಈ ಬೇಡಿಕೆಗಳನ್ನು ಸಂಪೂರ್ಣವಾಗಿ ಸರ್ಕಾರ ಒಪ್ಪಿಕೊಂಡಿಲ್ಲ. ಭಾರತೀಯ ಮಾಜಿ ಸೈನಿಕರ ಹೋರಾಟ ಸಮಿತಿ ಇದಕ್ಕಾಗಿ ಹೋರಾಡುತ್ತಿದೆ. OROP ಜಾರಿ ಮಾಡಿದರೆ, ಇದಕ್ಕಾಗಿ ಸರ್ಕಾರ ಹೆಚ್ಚಿನ ಹಣ ತೆಗೆದಿರಿಸಬೇಕಾಗುತ್ತದೆ. ಅಗ್ನಿಪಥ್ ಯೋಜನೆಯು ಬಹುತೇಕ ಸೈನಿಕ ಸಿಬ್ಬಂದಿಗಳಿಗೆ ಪಿಂಚಣಿಯೇ ಇಲ್ಲದಂತೆ ಮಾಡುತ್ತದೆ. ಆಗ, ‘ಒಂದು ಶ್ರೇಣಿ- ಒಂದು ಪಿಂಚಣಿ’ ಎಂಬ ಪಿಂಚಣಿಗಾಗಿನ ಹೋರಾಟಗಳೇ ಇರುವುದಿಲ್ಲ. ಇದೂ ಕೂಡ ಸರ್ಕಾರದ ‘ದೂ(ದು)ರಾಲೋಚನೆ’ ಇರಬಹುದೇ?

ಪ್ರತಿಭಟನೆಗಳು ಭುಗಿಲೆದ್ದವು

ಅಧಿಕೃತ ವೆಬ್‌ಸೈಟ್‌ನಲ್ಲಿ ಅಗ್ನಿಪಥ್ ಅನುಷ್ಠಾನದ ಪರಿಣಾಮವಾಗಿ ಸಚಿವಾಲಯವು ಹಿಂದಿನ ನೇಮಕಾತಿ ವರ್ಷಗಳಲ್ಲಿ ಭಾರತೀಯ ಸೇನಾ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಸೇರಿದಂತೆ ಎಲ್ಲಾ ಬಾಕಿಯಿರುವ ಪ್ರಕ್ರಿಯೆಗಳನ್ನು ನಿಲ್ಲಿಸಿತು ಮತ್ತು ರದ್ದುಗೊಳಿಸಿತು. ಸೇನೆಯಲ್ಲಿ 17 ವರ್ಷಗಳ ಪೂರ್ಣಕಾಲದ ಸೇವೆ ಸಲ್ಲಿಸಬೇಕೆಂದು ಬಯಸಿದ್ದ ಸಹಸ್ರಾರು ಆಕಾಂಕ್ಷಿಗಳ ಆಸೆಗೆ ಸರ್ಕಾರ ತಣ್ಣಿರು ಎರಚಿತು. ಅಗ್ನಿಪಥ್ ಯೋಜನೆಯ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಈ ಯೋಜನೆಯು ಉದ್ಯೋಗ ಭದ್ರತೆಯನ್ನು ಒದಗಿಸುವುದಿಲ್ಲ ಮತ್ತು ‘ಅಗ್ನಿವೀರ್ಸ್’ ಪಿಂಚಣಿ ಪ್ರಯೋಜನಗಳನ್ನು ಪಡೆಯುವುದಿಲ್ಲ ಹಾಗೂ ಯೋಜನೆಯ ಮೂಲಕ ದಾಖಲಾತಿ ಮಾಡಿಕೊಳ್ಳುವುದು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ವಾಲಿಯರ್, ಜೂನ್ 16, 2022 (ANI): 2022 ರಂದು ಗ್ವಾಲಿಯರ್‌ನಲ್ಲಿ ಸಶಸ್ತ್ರ ಪಡೆಗಳಿಗೆ ಅಗ್ನಿಪಥ್ ನೇಮಕಾತಿ ಯೋಜನೆಯ ವಿರುದ್ಧ ಸೇನಾ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು (ANI ಫೋಟೋ)

ಅತೃಪ್ತ ಸಶಸ್ತ್ರ ಪಡೆಗಳ ಆಕಾಂಕ್ಷಿಗಳು ಅಗ್ನಿಪಥ್ ರಕ್ಷಣಾ ನೇಮಕಾತಿ ಯೋಜನೆಯ ವಿರುದ್ಧ ಬೀದಿಗಿಳಿದ ಕಾರಣ, ಭಾರತದ ಬಹು ಭಾಗಗಳಲ್ಲಿ ಗಲಭೆಗಳು ಕೆರಳಿದವು. ರೈಲುಗಳಿಗೆ ಬೆಂಕಿ ಇಟ್ಟರು. ಕೋಪಗೊಂಡ ಜನಸಮೂಹವು ಇಟ್ಟಿಗೆ, ಬ್ಯಾಟ್‌ಗಳು ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತವಾದ ರೈಲ್ವೇ ಮಾರ್ಗಗಳು ಮತ್ತು ಹೆದ್ದಾರಿಗಳಾದ್ಯಂತ ನುಗ್ಗಿತು. ಅಗ್ನಿಸ್ಪರ್ಶದ ವರದಿಗಳನ್ನು ಒಳಗೊಂಡಿರುವ ಪರಿಣಾಮವಾಗಿ ಹಿಂಸಾಚಾರವು ಹಲವಾರು ರಾಜ್ಯಗಳಾದ್ಯಂತ 600 ಕ್ಕೂ ಹೆಚ್ಚು ರೈಲುಗಳ ಮೇಲೆ ಪರಿಣಾಮ ಬೀರಿತು. ಅಗ್ನಿಪಥ್ ಯೋಜನೆಗೆ ಈ ಪ್ರತಿರೋಧದ ಹೊರತಾಗಿಯೂ, ನೇಮಕಾತಿ ಪ್ರಕ್ರಿಯೆ ನಡೆಯಿತು. ನಂತರ, ಸರ್ಕಾರವು ನೇಮಕಾತಿಗಾಗಿ 21 ಇದ್ದ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಏರಿಸಿತು. ಆದರೂ, ಸೇನೆಗೆ ಸೇರಲು ಬಯಸುವ ಯುವಜನರ ಆಕ್ರೋಶಗಳು ಇಂದಿಗೂ ಇವೆ.

ಈ ಯೋಜನೆಯನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋದರು. ಅಗ್ನಿಪಥ್ ಯೋಜನೆಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಸಲ್ಲಿಸಲಾದ ಅರ್ಜಿಗೆ 2022ರ ಡಿಸೆಂಬರ್ ನಲ್ಲಿ ಸರ್ಕಾರ ಹೇಳಿದ್ದು ಹೀಗೆ: “ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಯನ್ನು ಹೆಚ್ಚು “ಬಲವಾದ, “ತೂರಲಾಗದ” ಮತ್ತು “ಬದಲಾಗುತ್ತಿರುವ ಮಿಲಿಟರಿ ಅಗತ್ಯತೆಗಳೊಂದಿಗೆ” ತನ್ನ ಸಾರ್ವಭೌಮ ಕಾರ್ಯದ ವ್ಯಾಯಾಮದಲ್ಲಿ ಅಗ್ನಿಪಥ್ ಯೋಜನೆಯನ್ನು ಪರಿಚಯಿಸಲಾಗಿದೆ.”

ನಿರುದ್ಯೋಗಿಗಳಾಗುವ ‘ಅಗ್ನಿವೀರ’ರು

ಅಗ್ನಿಪಥ್ ಮೂಲಕ ಆಯ್ಕೆಯಾಗಿ, ನಾಲ್ಕು ವರ್ಷಗಳ ತರಬೇತಿ ಮತ್ತು ಸೇವೆಯ ನಂತರ, ಶೇ. 75 ರಷ್ಟು ಯುವಜನರು ‘ಅಗ್ನಿವೀರ್’ ಎಂಬ ಪ್ರಮಾಣಪತ್ರದೊಂದಿಗೆ ಕಡ್ಡಾಯವಾಗಿ ನಿವೃತ್ತರಾಗುತ್ತಾರೆ. ನಂತರ ತಮ್ಮ 22 ಅಥವಾ 25 ನೇ ವಯಸ್ಸಿಗೆ ನಿರುದ್ಯೋಗಿಗಳಾಗಿ, ಸರ್ಕಾರ ಕೊಡುವ ‘ಅಗ್ನಿವೀರ್’ ಎಂಬ ಪ್ರಮಾಣಪತ್ರ ಹಿಡಿದು ಮತ್ತೆ ಉದ್ಯೋಗ ಹುಡುಕುತ್ತಾ ಅಲೆಯಬೇಕಾಗುತ್ತದೆ. ಇವರು ಮತ್ತೆ ಬೃಹತ್ ಸಂಖ್ಯೆಯ ನಿರುದ್ಯೋಗಿಗಳ ಗುಂಪಿಗೆ ತಳ್ಳಲ್ಪಡುತ್ತಾರೆ. ಅಗ್ನಿವೀರರಿಗೆ ಕೆಲವು ಸಾರ್ವಜನಿಕ ವಲಯ ಮತ್ತು ಕೇಂದ್ರ ಪೊಲೀಸ್ ಹುದ್ದೆಗಳನ್ನು ಮೀಸಲಿಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದಾಗ್ಯೂ, ಪ್ರಸ್ತುತ ಈ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿ ಸಂಖ್ಯೆಗಳು ಸಾಕಷ್ಟಿಲ್ಲ. ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವಾಗ ಭವಿಷ್ಯದಲ್ಲಿ ನಿರೀಕ್ಷಿತ ಹೆಚ್ಚಿನ ಸರ್ಕಾರಿ ಉದ್ಯೋಗ ಸೃಷ್ಟಿಯ ಭರವಸೆಯೂ ಇಲ್ಲ. ಬಜೆಟ್ ನಿರ್ಬಂಧಗಳು ನೇಮಕಾತಿ ಸ್ಥಗಿತಗೊಳಿಸುವಿಕೆಯನ್ನು ಒತ್ತಾಯಿಸಿದರೆ ಸರ್ಕಾರಿ ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆಗಳಿವೆ. ಕಾರ್ಪೊರೇಟ್ ವಲಯ ಮತ್ತು ಶಿಕ್ಷಣ ಸಂಸ್ಥೆಗಳು ಕೆಲವು ನೇಮಕಾತಿಗಳನ್ನು ಮಾಡಿಕೊಳ್ಳುತ್ತವೆಯಾದರೂ, ಅಂತಹ ಉದ್ಯೋಗಗಳು ಖಾತರಿಯಿಂದ ದೂರವಿರುತ್ತವೆ.

ಮತ್ತೆ ಕೆಲವರ ಪ್ರಕಾರ ಈ ಯೋಜನೆಯು ದೇಶದಲ್ಲಿ ಹೊಸದಾಗಿ ಹುಟ್ಟಿದ ಖಾಸಗಿ ರಕ್ಷಣಾ ಉದ್ಯಮದ ಬೊಕ್ಕಸವನ್ನು ಕೊಬ್ಬಿಸುವ ತಂತ್ರವಾಗಿದೆ. ಅಗ್ನಿವೀರ್ ಗಳಿಗೆ ನಮ್ಮ ಮಿಲಿಟರಿ ಸಶಸ್ತ್ರ ತರಬೇತಿ ಕೊಟ್ಟು, ಈ ಖಾಸಗಿ ರಕ್ಷಣಾ ಉದ್ಯಮಗಳ ರಕ್ಷಣಾ ಸಿಬ್ಬಂದಿಗಳನ್ನಾಗಿ ಮಾಡುವ ತಂತ್ರ ಇದರಲ್ಲಿ ಅಡಗಿದೆ ಎನ್ನುತ್ತಾರೆ ಅವರು.

(ಮೊದಲ ಚಿತ್ರ ಮೂಲ ಭಾರತೀಯ ಸೇನೆ)

Is this your new site? Log in to activate admin features and dismiss this message
ಲಾಗಿನ್