ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯಹೂದಿಗಳ ಮೇಲಿನ ಭಯೋತ್ಪಾದಕರ ದಾಳಿಯು, ಧಾರ್ಮಿಕ ದ್ವೇಷ, ಜನಾಂಗೀಯತೆ, ದ್ವೇಷ ಭಾಷಣಗಳು ಹಾಗೂ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಉನ್ಮಾದದ ಭಾವನೆಗಳು ಜಗತ್ತಿನಲ್ಲಿ ಏನೆಲ್ಲಾ ಅನಾಹುತ ಉಂಟುಮಾಡುತ್ತವೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ದ್ವೇಷವು ಮತ್ತಷ್ಟು ದ್ವೇಷವನ್ನು ಹುಟ್ಟುಹಾಕುತ್ತದೆಯೇ ಹೊರತು, ಅದು ಶಾಂತಿ ಅಥವಾ ಸಾಮರಸ್ಯವನ್ನು ತರುವುದಿಲ್ಲ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿನ ಬೊಂಡಿ ಬೀಚ್‌ನಲ್ಲಿ (Australia Bondi Beach) ತಂದೆ ಮತ್ತು ಮಗ ಯಹೂದಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿರುವುದು ಆಘಾತಕಾರಿಯಾಗಿದೆ. ಡಿಸೆಂಬರ್ 14ರಂದು ಭಾನುವಾರ ಬೀಚ್ ನಲ್ಲಿ ನೆರೆದಿದ್ದ ಯಹೂದಿಗಳ ಮೇಲೆ ಈ ಇಬ್ಬರು ಆಕ್ರಮಣಕಾರರು ಸುಮಾರು 20 ನಿಮಿಷಗಳ ಕಾಲ, ಮನಬಂದಂತೆ ಗುಂಡಿನ ದಾಳಿ ನಡೆಸಿ 10 ವರ್ಷದ ಬಾಲಕಿ ಸೇರಿದಂತೆ 16 ಜನರನ್ನು ಕೊಂದರು. ಈ ಘಟನೆಯಲ್ಲಿ 40 ಜನರು ಗಂಭೀರವಾಗಿ ಗಾಯಗೊಂಡರು. ಶಂಕಿತರನ್ನು ಮಾಧ್ಯಮಗಳು ಸಾಜಿದ್ ಅಕ್ರಮ್ ಮತ್ತು ಮಗ ನವೀದ್ ಎಂದು ಗುರುತಿಸಿವೆ.
ಸಿಡ್ನಿಯ ಅತ್ಯಂತ ಪ್ರಸಿದ್ಧ ಬೀಚ್ ನಲ್ಲಿ ಯಹೂದಿ ರಜಾ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಬೆಳಕಿನ ಹಬ್ಬ ‘ಹನುಕ್ಕಾ’ವನ್ನು ಆಚರಿಸಲು ಸ್ಥಳೀಯ ಯಹೂದಿಗಳು ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಮೇಣದಬತ್ತಿಗಳನ್ನು ಬೆಳಗಿಸಲು ಬಂದಿದ್ದರು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಆಕ್ರಮಣಕಾರರು ಗುಂಡು ಹಾರಿಸಿ ಕೊಲ್ಲುವ ದೃಶ್ಯವು ಅತ್ಯಂತ ನೋವಿನ ಸಂಗತಿಯಾಗಿದೆ. ಧಾರ್ಮಿಕ ದ್ವೇಷ, ಜನಾಂಗೀಯತೆ, ದ್ವೇಷ ಭಾಷಣಗಳು ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಉನ್ಮಾದದ ಭಾವನೆಗಳು… ಇವೆಲ್ಲವೂ ಇಂತಹ ದೌರ್ಜನ್ಯಗಳಿಗೆ ಉತ್ತೇಜನ ನೀಡುತ್ತಿವೆ.
ʻದ್ವೇಷವು ಮತ್ತಷ್ಟು ದ್ವೇಷವನ್ನು ಹುಟ್ಟುಹಾಕುತ್ತದೆ ಹೊರತು, ಅದು ಶಾಂತಿ ಅಥವಾ ಸಾಮರಸ್ಯವನ್ನು ತರುವುದಿಲ್ಲʼ ಎಂದು ಗೌತಮ ಬುದ್ಧನ ಕಾಲದಿಂದಲೂ ಎಲ್ಲಾ ಧರ್ಮಗಳ ಪ್ರವಾದಿಗಳು ಘೋಷಿಸುತ್ತಿದ್ದಾರೆ! ಯಹೂದಿಗಳ ವಿರುದ್ಧದ ದ್ವೇಷವು ಆಸ್ಟ್ರೇಲಿಯಾದ ಸಮಾಜವನ್ನು ಕಲುಷಿತಗೊಳಿಸುತ್ತಿದೆ ಮತ್ತು ಸರ್ಕಾರದ ನೀತಿಗಳು ಆ ಬೆಂಕಿಯನ್ನು ಹೊತ್ತಿಸುತ್ತಿವೆ.
ಪ್ಯಾಲೀಸ್ಟೈನ್ ನಲ್ಲಿ ತಮ್ಮ ಹಸಿವು ನೀಗಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮಕ್ಕಳು, ಮಹಿಳೆಯರು ಮತ್ತು ವೃದ್ಧರನ್ನು, ಆಸ್ಪತ್ರೆಗಳಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಗಳನ್ನು ಯಾವುದೇ ಕರುಣೆಯಿಲ್ಲದೆ, ನ್ಯಾಯ ಪ್ರಜ್ಞೆಯಿಲ್ಲದೆ 70,000 ಕ್ಕೂ ಹೆಚ್ಚು ಅಮಾಯಕ ಜನರನ್ನು ಅಮಾನವೀಯವಾಗಿ ಕೊಂದ ಇಸ್ರೇಲ್ ನ ನೆತನ್ಯಾಹು ಸರ್ಕಾರ ಮತ್ತು ಅದನ್ನು ಬೆಂಬಲಿಸಿದ ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳು ಇಂತಹ ಹತ್ಯಾಕಾಂಡಗಳಿಗೆ ಹೊಣೆಗಾರರಾಗಬೇಕು. ಪ್ಯಾಲೆಸ್ಟೈನ್ ಹತ್ಯಾಕಾಂಡದ ನಂತರ ಆಸ್ಟ್ರೇಲಿಯಾದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಯೆಹೂದಿ ವಿರೋಧಿ ಘಟನೆಗಳಲ್ಲಿ ಶೇ. 316 ರಷ್ಟು ಹೆಚ್ಚಳ ಇದಕ್ಕೆ ಸಾಕ್ಷಿಯಾಗಿದೆ.
ಗುಂಡು ಹಾರಿಸಿದ ವ್ಯಕ್ತಿಯಿಂದ ಬಂದೂಕನ್ನು ಕಸಿದುಕೊಂಡು ಅನೇಕ ಜೀವಗಳನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಸಿಡ್ನಿ ನಿವಾಸಿ ಅಹ್ಮದ್ ಅಲ್ ಅಹ್ಮದ್ ಅವರನ್ನು ಜಗತ್ತು ವಂದಿಸುತ್ತದೆ. ಅಹ್ಮದ್ ಗೆ ಎರಡು ಬಾರಿ ಗುಂಡು ಹಾರಿಸಲಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಮಯದಲ್ಲಿ ಪ್ರವಾಸಿಗರನ್ನು ರಕ್ಷಿಸಿ ಭಯೋತ್ಪಾದಕರ ಕೈಯಲ್ಲಿ ಪ್ರಾಣ ಕಳೆದುಕೊಂಡ ಸೈಯದ್ ಆದಿಲ್ ಹುಸೇನ್ ಶಾ ಅವರನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಪರಸ್ಪರ ಬೆಳಕಾಗಿರಲು ಮತ್ತು ಒಗ್ಗಟ್ಟಿನಿಂದಿರಲು ಆಸ್ಟ್ರೇಲಿಯಾದ ಪ್ರಧಾನಿ ಕರೆ ನೀಡಿದ್ದು ಮತ್ತು ಆಸ್ಪತ್ರೆಯಲ್ಲಿ ಅಹ್ಮದ್ ಅವರನ್ನು ಅಭಿನಂದಿಸಿದ್ದು ಒಳ್ಳೆಯ ಬೆಳವಣಿಗೆ. ಹಿಂದೆ ಇದೇ ರೀತಿಯ ಘಟನೆಗಳು ನಡೆದ ನಂತರ ಆಸ್ಟ್ರೇಲಿಯಾ ಬಂದೂಕು ನಿಯಂತ್ರಣ ಕಾನೂನುಗಳನ್ನು ಜಾರಿಗೆ ತಂದಿತ್ತು. ಹೀಗ ಅದನ್ನು ಹೆಚ್ಚು ಕಠಿಣಗೊಳಿಸುವುದು, ಅಪರಾಧಿಗಳನ್ನು ಕಠಿಣವಾಗಿ ಶಿಕ್ಷಿಸುವುದು ಮತ್ತು ಸಮಾಜದಲ್ಲಿ ಸಹೋದರತ್ವದ ಭಾವನೆಯನ್ನು ಉತ್ತೇಜಿಸುವುದು ಅತ್ಯಗತ್ಯ.
ಒಂದು ಘಟನೆ ನಡೆದ ತಕ್ಷಣ ಆ ಧರ್ಮಕ್ಕೆ ಸೇರಿದ ಪ್ರತಿಯೊಬ್ಬರನ್ನೂ ದ್ವೇಷದಿಂದ ನೋಡಲು ಪ್ರಾರಂಭಿಸಿದರೆ, ಸಮಾಜವು ವಿಭಜನೆಯಾಗುತ್ತದೆ. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಮತಾಂಧರು ಬಯಸುವುದು ಇದನ್ನೇ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಸಂಘ ಪರಿವಾರದ ಭಾಗವಾಗಿರುವ ಆರ್.ಎಸ್.ಎಸ್., ವಿಎಚ್‌ಪಿ ಮತ್ತು ಬಜರಂಗದಳದಂತಹ ಸಂಘಟನೆಗಳು ದ್ವೇಷ ಬಿತ್ತುವ ಕೆಲಸವನ್ನು ಮತ್ತಷ್ಟು ಹೆಚ್ಚಿಸಿವೆ. ಅಲ್ಪಸಂಖ್ಯಾತರೆಲ್ಲರೂ ಶತ್ರುಗಳು ಮತ್ತು ಜಿಹಾದಿಗಳು, ಅವರ ಮೇಲಿನ ದಾಳಿಗಳು ಧರ್ಮದ ರಕ್ಷಣೆಯಾಗಿದೆ, ಮಸೀದಿಗಳು ಮತ್ತು ಚರ್ಚ್‌ಗಳ ಮೇಲಿನ ದಾಳಿಗಳು ವೀರತ್ವ ಎಂದು ಹೇಳುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿವೆ. ಆ ಉದ್ದೇಶಕ್ಕಾಗಿ ಸುಳ್ಳುಗಳನ್ನು ಹರಡುವುದು ಅತ್ಯಂತ ಅಪಾಯಕಾರಿಯಾಗಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮಗಳು ಇದರಲ್ಲಿ ಹೆಚ್ಚು ಸಹಕರಿಸುವುದು ಉತ್ತಮ ನಡೆಯಲ್ಲ. ಅಮೆರಿಕ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿಗಳು ನಡೆದಾಗ ವಿಎಚ್‌ಪಿಯಂತಹ ಸಂಘಟನೆಗಳು ಮೊಸಳೆ ಕಣ್ಣೀರು ಸುರಿಸುತ್ತಿವೆ. ದ್ವೇಷವು ಯಾವುದೇ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಬೆದರಿಕೆ ಎಂಬುದು ಸತ್ಯ.
ಭಾರತೀಯತೆ ಎಂದರೆ ವೈವಿಧ್ಯತೆಯಲ್ಲಿ ಏಕತೆ, ಜಾತ್ಯತೀತತೆ, ಸಮಾನತೆ, ಸಹೋದರತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವುದು. ಸಮಾಜ ಮತ್ತು ರಾಜಕೀಯದಲ್ಲಿ ಬೆಳೆಯುತ್ತಿರುವ ದ್ವೇಷವನ್ನು ಹಿಮ್ಮೆಟ್ಟಿಸುವುದು ಮತ್ತು ಅಹ್ಮದ್ ರಂತೆ ನಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಹ ಮಾನವರಿಗಾಗಿ ಹೋರಾಡುವ ಮನೋಭಾವವನ್ನು ನಮ್ಮ ಮನಸ್ಸಿನಲ್ಲಿ ತುಂಬುವುದು ತುರ್ತು ಕರ್ತವ್ಯವಾಗಿದೆ. ಇಂತಹ ನರಮೇಧಗಳಿಗೆ ಪ್ರತಿವಿಷವೆಂದರೆ ಪ್ರತಿಯೊಬ್ಬರೂ ದ್ವೇಷವನ್ನು ತ್ಯಜಿಸಿ ಮಾನವೀಯತೆಯೇ ಧರ್ಮ, ಆದರ್ಶ ಮತ್ತು ಅತ್ಯುನ್ನತ ಎಂದು ಘೋಷಿಸುವುದು.
ನಿಮ್ಮ ಟಿಪ್ಪಣಿ ಬರೆಯಿರಿ