ಕೊರೋನಾ ಸಮಯದಲ್ಲಿ ಎಲ್ಲಿತ್ತು ಆ ‘ಚಡ್ಡಿ’?

ಎಲ್ಲಿ, ಎಲ್ಲಿ, ಎಲ್ಲಿ ಆ ಚಡ್ಡಿ?
ಮಂದಿರ ಕಟ್ಟಲು ರಸೀದಿ ಪುಸ್ತಕ ಹಿಡಿದು ಮನೆ ಮನೆಗೆ ಬರುವ ಚಡ್ಡಿ.
ಮಂದಿರ ಕಟ್ಟಲು ಒಂದೂವರೆ ಸಾವಿರ ಕೋಟಿ ಹಣ ಸಂಗ್ರಹಿಸಿದ ಚಡ್ಡಿ.
ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಲ್ಲುವ ಚಡ್ಡಿ.
ಕೆಲವೇ ಗಂಟೆಗಳಲ್ಲಿ 400 ವರ್ಷಗಳ ಹಳೆಯ ಕಟ್ಟಡ ಉರುಳಿಸಿದ ಚಡ್ಡಿ.
ಅನ್ಯ ಧರ್ಮದ ಯುವಕರಿಂದ ಧರ್ಮದ ಹೆಣ್ಣು ಮಕ್ಕಳ ರಕ್ಷಣೆಗೆ ಬಡಿಗೆ ಇಡಿದು ನಿಲ್ಲುವ ಚಡ್ಡಿ.
ಗೋವುಗಳ ರಕ್ಷಣೆಗೆ ಕತ್ತಿ ಹಿಡಿದು ನಿಲ್ಲುವ ಚಡ್ಡಿ.
ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂದು ಘೋಷಣೆ ಕೂಗುವ ಚಡ್ಡಿ.
ದೇವಸ್ಥಾನದ ಕಲ್ಯಾಣಿಗಳನ್ನು ಶುದ್ಧೀಕರಿಸಿ, ಪೋಟೋ ಕ್ಲಿಕ್ಕಿಸಿ ಪ್ರಚಾರ ಪಡೆಯುವ ಚಡ್ಡಿ.

ಇಂದೆಲ್ಲಿ? ಇಂದೆಲ್ಲಿ? ಎನ್ನುತ್ತಾ ಹುಡುಕಿದೆ.

ಕೊರೋನಾದಿಂದ ನರಳುವವರ ಮನೆಗೆ ಹೋಗಿ ಅವರ ಚಿಕಿತ್ಸೆಗೆ ನೆರವಾಗಿ ನಿಂತಿರಬಹುದು ಎಂದು ಹುಡುಕಿದೆ. ಅಲ್ಲಿ ಕಾಣಲಿಲ್ಲ.

ಅಂಬುಲೆನ್ಸ್ ಗಾಗಿ ಕಾಯುತ್ತಿರುವ ರೋಗಿಗಳನ್ನು  ತಮ್ಮದೇ ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಆಕ್ಸಿಜನ್ ಸಿಗದೇ ನರಳುತ್ತಿರುವ ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಹೋಗಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಬೆಡ್ ಗಾಗಿ ಅಲೆದಾಡುತ್ತಿರುವ ರೋಗಿಗಳಿಗೆ ಬೆಡ್ ಕೊಡಿಸಲು ಹೋಗಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಚೀನಾದ ಮಾದರಿಯಲ್ಲಿ ತುರ್ತಾಗಿ ಆಸ್ಪತ್ರೆಗಳ ಕಟ್ಟಡ ಕಟ್ಟುವ ಕಾರ್ಯದಲ್ಲಿ ತೊಡಗಿರಬಹುದು ಎಂದು ಹುಡುಕಿದೆ. ಎಲ್ಲಿಯೂ ಕಾಣಲಿಲ್ಲ.

ತಮ್ಮದೇ ಮಠ, ಮಂದಿರಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ತಮ್ಮವರನ್ನು ಕಳೆದುಕೊಂಡು ದುಃಖದಿಂದ ಗೋಳಾಡುತ್ತಿರುವ ಜನರ ಕಣ್ಣೀರು ಒರಸುವ ಕೆಲಸದಲ್ಲಿ ತೊಡಗಿದ್ದಾರೆಯೇ ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಅಂತ್ಯಕ್ರಿಯೆಗೆ ಜಾಗವಿಲ್ಲದೇ ಶವಗಳ ಜೊತೆ ಸ್ಮಶಾನದಿಂದ ಸ್ಮಶಾನಕ್ಕೆ ಅಲೆದಾಡುವವರ ನೆರವಿಗೆ ನಿಂತಿರಬಹುದು ಎಂದು ಹುಡುಕಾಡಿದೆ. ಅಲ್ಲಿಯೂ ಕಾಣಲಿಲ್ಲ.

ಅಂತ್ಯ ಸಂಸ್ಕಾರಕ್ಕೆ ದಿನವಿಡೀ ಸರತಿ ಸಾಲಿನಲ್ಲಿ ನಿಂತು ಗೋಳಾಡುವ ಸಂಬಂಧಿಕರ ನೆರವಿಗೆ ನಿಂತಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಸ್ಮಶಾನದ ಜಾಗ ಖರೀದಿಸಲು ಹಣ ಸಂಗ್ರಹಣೆ ಮಾಡಲು ಮನೆ ಮನೆಗೆ ಹೋಗಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ತಮ್ಮವರ ಬಳಿ ಇರುವ ನೂರಾರು ಎಕರೆ ಭೂಮಿಯನ್ನು ಶವಸಂಸ್ಕಾರಕ್ಕೆ ಬಳಕೆ ಮಾಡುವ ಯತ್ನದಲ್ಲಿ ಇದ್ದಾರೆ ಎಂದು ಹುಡುಕಿದೆ. ಅಲ್ಲಿಯೂ ಕಾಣಲಿಲ್ಲ.

ಇಲ್ಲೆಲ್ಲೂ ಕಾಣುತ್ತಿಲ್ಲ ಎಂದರೆ ಅದು ಪಿಪಿಇ ಕಿಟ್ ಒಳಗೆ ಮರೆಯಾಗಿರಬಹುದೇ ಎಂದು ಹುಡುಕಲು ಹೊರಟೆ. ಆ ಚಡ್ಡಿ ಎಂದೂ ಮರೆಯಲ್ಲಿ ನಿಂತು ‘ಸ್ವಯಂ ಸೇವೆ’ ಮಾಡುವುದಿಲ್ಲ ಎಂದು ತಿಳಿದು ಪಿಪಿಇ ಕಿಟ್ ಒಳಗೆ ಇಣುಕಿ ನೋಡುವುದನ್ನು ಬಿಟ್ಟೆ.

ಸರ್ಕಾರದ ‘ಲಾಕ್ ಡೌನ್’ ಘೋಷಣೆಯಿಂದಾಗಿ ಕೆಲಸವಿಲ್ಲದೆ, ಆದಾಯ ಇಲ್ಲದೆ ಸಂಕಷ್ಟಗಳಿಗೆ ಸಿಲುಕಿರುವ ಜನರ ನೆರವಿಗೆ ನಿಂತಿರಬಹುದು ಎಂದು ಹುಡುಕಿದೆ. ಅಲ್ಲಿಯೂ ಇರಲಿಲ್ಲ.

ಹಾಗಾದರೆ ಎಲ್ಲಿ ಅಡಗಿದೆ ಆ ಚಡ್ಡಿ? ಪೆಟ್ಟಿಗೆಗಳಲ್ಲಿ ಇಸ್ತ್ರಿ ಮಾಡಿಸಿಕೊಂಡು ಬೆಚ್ಚಗೆ ಮಲಗಿದೆ ಆ ಚಡ್ಡಿ. ಧಾರ್ಮಿಕ ಭಾವನೆಗಳನ್ನು ಕೆರಳಿಸಲು, ದೇವರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲು, ಗೋರಕ್ಷಣೆಯ ಹೆಸರಿನಲ್ಲಿ ಕೈಯಲ್ಲಿ ಬೆತ್ತ ಹಿಡಿದು ಆವೇಶದಿಂದ ಬೀದಿಗೆ ಬರುತ್ತದೆ ಆ ಚಡ್ಡಿ.
-ಸಿಚಿ- (ಏಪ್ರಿಲ್, 2021)

Is this your new site? Log in to activate admin features and dismiss this message
ಲಾಗಿನ್