ವೈಕಂ ಸತ್ಯಾಗ್ರಹ: ಸಾರ್ವಜನಿಕ ಬೀದಿಯಲ್ಲಿ ‘ಕೆಳಜಾತಿ’ ಜನರು ನಡೆದಾಡುವ ಹಕ್ಕಿಗಾಗಿ ನಡೆದ ಹೋರಾಟ

ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ‘ವೈಕಂ ಪ್ರಶಸ್ತಿ’ಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಿದೆ. 2024ರ ಡಿಸೆಂಬರ್ 12ರಂದು ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಏನಿದು ವೈಕಂ ಹೋರಾಟ? ಕೇರಳದ ವೈಕಂ ಎಂಬ ಸಣ್ಣ ಪಟ್ಟಣದಲ್ಲಿ ಮಹದೇವ ದೇವಸ್ಥಾನವಿದೆ. ಈ ದೇವಸ್ಥಾನದ ಬೀದಿಗಳ ಮೂಲಕ ದಲಿತರು, ಈಜವರು ಸೇರಿದಂತೆ ಹಿಂದುಳಿದ ಸಮುದಾಯಗಳ ಜನರು ನಡೆದಾಡುವುದನ್ನು ಬ್ರಾಹ್ಣಣರು ನಿಷೇಧಿಸಿದ್ದರು. ಇದಕ್ಕಾಗಿ ಅಂದಿನ ರಾಜರ ಆಡಳಿತದಲ್ಲಿ ಕಾನೂನುಗಳನ್ನು ಮಾಡಲಾಗಿತ್ತು. ಆ ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಈ ಬೀದಿಗಳಲ್ಲಿ ನಡೆಯುವ ಹಕ್ಕಿಗಾಗಿ 1924-25 ರಲ್ಲಿ ನಡೆದ ಐತಿಹಾಸಿಕ ಹೋರಾಟವೇ “ವೈಕಂ ಸತ್ಯಾಗ್ರಹ”.

19ನೇ ಶತಮಾನದಲ್ಲಿ ಕೆಳ ಸಮುದಾಯದವರ ಮೇಲಿನ ದಬ್ಬಾಳಿಕೆ, ಅವಮಾನಗಳು ಅಷ್ಟಿಷ್ಟಲ್ಲ. ಜನರನ್ನು ಮೇಲು, ಕೀಳು ಎಂದು ವರ್ಗೀಕರಿಸಿ ಕೆಳಜಾತಿಯವರನ್ನು ಊರಿನಿಂದ ಹೊರಗೆ ಇರಿಸಲಾಗುತಿತ್ತು. ಬೀದಿಗಳಲ್ಲಿ ನಡೆದಾಡಲೂ ಅವರಿಗೆ ನಿರ್ಬಂಧ ಹೇರಲಾಗಿತ್ತು. ಅವರು ಹಿಂದೂ ಸಮಾಜಕ್ಕೆ ಅನಿಷ್ಟ ಎಂಬಂತೆ ನೋಡುತ್ತಿದ್ದರು. ಯಾವ ಯಾವ ಜಾತಿಯವರು ದೇವಸ್ಥಾನಗಳಿಂದ ಎಷ್ಟೆಷ್ಟು ದೂರ ಇರಬೇಕು, ಹಳ್ಳಿಗಳಲ್ಲಿ ಯಾರ್ಯಾರು ಯಾವ ಯಾವ ಜಾಗದಲ್ಲಿ ಇರಬೇಕು ಎಂಬುದನ್ನು ಕೂಡಾ ಬ್ರಾಹ್ಮಣರು ನಿರ್ಧರಿಸುತ್ತಿದ್ದರು. ಅದೇ ನಮ್ಮ ಹಿಂದೂ ಸಂಪ್ರದಾಯ ಎಂದು ಹೇಳಿ ರಾಜರುಗಳಿಂದ ಶಾಸನಗಳನ್ನು ಮಾಡಿಸಿ ಜಾರಿಗೊಳಿಸುತ್ತಿದ್ದರು. ಇನ್ನೂ ಹೇಳಬೇಕೆಂದರೆ, ಕೇರಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ಕೆಳಜಾತಿಗಳಿಗೆ ಸೇರಿದ ಮಹಿಳೆಯರಿಗೆ ಅವಕಾಶ ಕೊಡುತ್ತಿರಲಿಲ್ಲ. ದುರ್ಮಾರ್ಗವಾದ ಜಾತಿ ಆಚರಣೆಗಳು, ಪುರುಷಾಧಿಪತ್ಯ, ಬ್ರಾಹ್ಮಣ ಮನುವಾದಿ ವ್ಯವಸ್ಥೆಯ ವಿರುದ್ಧ ತಮಿಳುನಾಡಿನಲ್ಲಿ ಪೆರಿಯಾರ್ ಎವಿ ರಾಮಸಾಮಿ ಅವರು ಆರೇಳು ದಶಕಗಳ ಕಾಲ ಅವಿರತ ಹೋರಾಟ ನಡೆಸಿದರು. ಅದರ ನಂತರ, ಕೇರಳದಲ್ಲಿ ವೈಕಂ ಎಂಬ ಸಣ್ಣ ಪಟ್ಟಣದಲ್ಲಿ 1924ರಲ್ಲಿ ಪ್ರಾರಂಭವಾದ ಹೋರಾಟವು ಹೊಸದೊಂದು ಇತಿಹಾಸ ಬರೆಯಿತು.  

ದೇವಾಲಯದ ಸುತ್ತಲಿನ ಹಾದಿಗಳಲ್ಲಿ ಶೂದ್ರರಿಗೆ ನಿಷೇಧ

ರಾಜರ ಆಳ್ವಿಕೆಯಲ್ಲಿದ್ದ ತಿರುವತಾಂಕೂರ್ ಸಂಸ್ಥಾನಂ (ಪ್ರಸ್ತುತ ಈ ಪ್ರದೇಶ ಕೇರಳ ರಾಜ್ಯದಲ್ಲಿದೆ) ನಲ್ಲಿರುವ ವೈಕಂ ಪಟ್ಟಣದಲ್ಲಿ ಮಹಾದೇವ ಎಂಬ ದೇವಾಲಯವಿದೆ. ದೇವಾಲಯದ ಸುತ್ತಲಿನ ಸಾರ್ವಜನಿಕ ಹಾದಿಗಳಲ್ಲಿ ಈಜವರು, ಪುಲಯರು ಮೊದಲಾದ ಹಿಂದುಳಿದ ಸಮುದಾಯಗಳ ಜನರು (ಶೂದ್ರರು) ನಡೆಯುವಂತಿಲ್ಲ ಎಂದು ಕಾನೂನುಗಳನ್ನು ಮಾಡಿ ಫಲಕಗಳನ್ನು ಹಾಕಲಾಗಿತ್ತು. ಅದನ್ನು ಯಾರಾದರೂ ಉಲ್ಲಂಘಿಸಿದರೆ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು.

1865 ಮತ್ತು 1884ರಲ್ಲಿ ತಿರುವಾಂಕೂರಿನ ಸಾರ್ವಜನಿಕ ರಸ್ತೆಗಳಲ್ಲಿ ಅವರ್ಣರಿಗೆ ಸಂಚಾರ ಸ್ವಾತಂತ್ರ್ಯವನ್ನು ಅನುಮತಿಸುವ ಆದೇಶಗಳನ್ನು ಹೊರಡಿಸಲಾಯಿತು. ಆದರೆ ಅವು ಯಾವುದೇ ಪರಿಣಾಮವನ್ನು ಬೀರಲಿಲ್ಲ. ದಿವಾನ್ ರಾಘವಯ್ಯ ಮತ್ತು ಆಡಳಿತವು ಕುಮಾರನಾಶನ ಮತ್ತು ಇತರರು ‘ಧಾರ್ಮಿಕ ಸಮಸ್ಯೆ’ ಎಂಬ ಕಾರಣಕ್ಕಾಗಿ ಅವರ್ಣರ ಮಾರ್ಗದ ಹಕ್ಕಿನ ಸಮಸ್ಯೆಯನ್ನು ಎತ್ತುವ ಪ್ರಯತ್ನವನ್ನು ಹಾಳುಮಾಡಿತು. ನಾರಾಯಣಗುರುಗಳಿಂದ ಅಯ್ಯಂಕಾಳಿಯವರೆಗಿನ ಜನರು ವೈಕಂನ ನಡಿಗೆ ದಾರಿಗಳಲ್ಲಿ ಪ್ರಯಾಣ ನಿಷೇಧವನ್ನು ಎದುರಿಸಿದ್ದಾರೆ.

ಟಿ.ಕೆ.ಮಾದವನ್ ಎಂಬ (ಈಜವ) ಹಿಂದುಳಿದ ಜಾತಿಯ ವಕೀಲರು ತಿರುವಂಕೂರ್ ಮಹಾರಾಜರ ಕೋಟೆಯಲ್ಲಿದ್ದ ನ್ಯಾಯಾಲಯಕ್ಕೆ ಪ್ರತಿನಿತ್ಯ ಹೋಗಬೇಕಿತ್ತು. ಆದರೆ ಆ ದಿನ ತಡವಾಗಿತ್ತು. ದೇವಸ್ಥಾನದ  ಸುತ್ತ ಒಂದೂವರೆ ಕಿ.ಮೀ. ಸುತ್ತಿಕೊಂಡು ಹೋದರೆ ತಡವಾಗುತ್ತದೆ  ಎಂದುಕೊಂಡು, ಸಕಾಲಕ್ಕೆ ನ್ಯಾಯಾಲಯ ತಲುಪುವ ತರಾತುರಿಯಲ್ಲಿ ದೇವಸ್ಥಾನದ ಬೀದಿಗಳಲ್ಲಿ ಹೋಗಲು ಪ್ರಯತ್ನ ಮಾಡಿದರು. ಅವರ ಪ್ರಯತ್ನಕ್ಕೆ ಅಡ್ಡಿಪಡಿಸಿದ ಬ್ರಾಹ್ಮಣರು ಅವರ ಜಾತಿಯ ಹೆಸರಿನಲ್ಲಿ ನಿಂದಿಸಿ ಹಲ್ಲೆ ನಡೆಸಿದರು.

ಈ ದೇಶ ತೊರೆಯಬೇಕಾ? … ಯಾವುದೇ ಸಮಸ್ಯೆ ಇಲ್ಲ!

ಇದರಿಂದ ಅವಮಾನಿತರಾದ ವಕೀಲ ಟಿ.ಕೆ.ಮಾಧವನ್ ಅವರು, ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ತಮ್ಮ ಅಳಲನ್ನು ತೋಡಿಕೊಂಡರು. ಟಿ.ಕೆ.ಮಾಧವನ್ ಅವರು ತಿರುವಾಂಕೂರು ಮತ್ತು ಪ್ರಜಾಸಭಾದಲ್ಲಿ ಜಾತಿ ತಾರತಮ್ಯದ ವಿರುದ್ಧ ಹೋರಾಟಗಳನ್ನು ಎತ್ತುವ ಪ್ರಯತ್ನ ಮಾಡಿದರು. ದಿವಾನ್ ಮತ್ತು ಅಧಿಕಾರಿಗಳು ‘ಅದೊಂದು ಧಾರ್ಮಿಕ ಸಮಸ್ಯೆ’ ಎಂಬ ಹಣೆಪಟ್ಟಿ ಹಚ್ಚಿ ಪ್ರಜಾಸಭೆಯಲ್ಲಿ ವೈಕಂ ಹಕ್ಕು ವಿಚಾರವನ್ನು ಎತ್ತುವ ಪ್ರಯತ್ನವನ್ನು ತಡೆದರು. ಅವರ ಸಮಸ್ಯೆಗಳು ಬಗೆಹರಿಯದಿದ್ದರೆ ಈ ದೇಶ ತೊರೆಯಬೇಕಾ ಎಂದು ಟಿ.ಕೆ. ಮಾಧವನ್ ಅವರ ಪ್ರಶ್ನೆಗೆ ಉತ್ತರಿಸಿದ ದಿವಾನ್ ರಾಘವಯ್ಯ ‘ಯಾವುದೇ ಸಮಸ್ಯೆ ಇಲ್ಲ’ ಎಂದರು!

“ಅವರು ಸಂಪ್ರದಾಯವಾದಿಗಳ ಧರ್ಮವನ್ನು ಪಾಲಿಸುತ್ತಾರೆ” ಎಂದ ಗಾಂಧೀಜಿ

ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಗಾಂಧೀಜಿಯವರಿಗೆ ಟಿ.ಕೆ.ಮಾಧವನ್ ಪತ್ರ ಬರೆದು ವೈಯಕ್ತಿಕವಾಗಿ ತಮಗೆ ಆಗಿರುವ ಅವಮಾನವನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಾಂಧೀಜಿ “ಅವರು ಸಂಪ್ರದಾಯವಾದಿಗಳ ಧರ್ಮವನ್ನು ಪಾಲಿಸುತ್ತಾರೆ, ಅದನ್ನೇ ಅನುಸರಿಸುತ್ತಾರೆ. ಅದಕ್ಕೆ ನಾವೇನು ಮಾಡಲಾದೀತು” ಎನ್ನುತ್ತಾ ಅದನ್ನು ದೊಡ್ಡ ಸಮಸ್ಯೆಯಾಗಿ ತೆಗೆದುಕೊಳ್ಳಲಿಲ್ಲ.

ಹೋರಾಟ ಆರಂಭಿಸಿದರು

ರಾಜಿ ಪ್ರಸ್ತಾಪಗಳು ವಿಫಲವಾದ ಕಾರಣ, ಮಾಧವನ್ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ಒಪ್ಪಿಸಿ ಪ್ರತಿಭಟನಾ ಚಟುವಟಿಕೆಗಳನ್ನು ಆರಂಭಿಸಿದರು. ಮಾರ್ಚ್ 30, 1924 ರಂದು ಮುಷ್ಕರವನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು. ವೈಕಂ ಮತ್ತು ಸುತ್ತಮುತ್ತ ಕರ್ಫ್ಯೂ ಘೋಷಿಸಲಾಯಿತು. ಅದರೊಂದಿಗೆ ಧರಣಿ ನಿರತರು ಫುಡ್ ಬೋರ್ಡ್ ಗಳನ್ನು ದಾಟಿ ಬೀದಿಯಲ್ಲಿ ನಡೆಯುವ ಪ್ರಯತ್ನದ ಭಾಗವಾಗಿ ಮೂರು ಬ್ಯಾಚ್ ಗಳಲ್ಲಿ ಹೋರಾಡುವ ವಿಧಾನವನ್ನು ಅಳವಡಿಸಿಕೊಂಡರು. ಮೊದಲ ದಿನ ಕುಂಜಪ್ಪಿ, ಬಾಹುಲೇಯನ ಮತ್ತು ಗೋವಿಂದಪಣಿಕರರು ಅದಕ್ಕೆ ತಯಾರು ಮಾಡಿದರು.

ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ತಿರುವಾಂಕೂರು ರಾಜ, ದೇವಾಲಯದ ಬೀದಿಗಳಲ್ಲಿ ನಡೆಯಕೂಡದು ಎಂಬ ಕಾನೂನುಗಳನ್ನು ಉಲ್ಲಂಘಿಸಿದ್ದೂ ಅಲ್ಲದೆ, ಪ್ರತಿಭಟನಾ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಪ್ರತಿಭಟನಾಕಾರರನ್ನು ಬಂಧಿಸಿ ಜೈಲಿಗೆ ಹಾಕುವಂತೆ ಆದೇಶಿಸಿದರು. ಏಪ್ರಿಲ್ ಮೊದಲ ವಾರದಲ್ಲಿ, ಗಾಂಧಿಯವರ ಸೂಚನೆಯ ಮೇರೆಗೆ ಕೆಲವು ದಿನಗಳವರೆಗೆ ಮುಷ್ಕರ ನಡೆಯಲಿಲ್ಲ. ಇದೇ ವೇಳೆ ಕೆ.ಪಿ. ಕೇಶವಮೆನನ್, ಕೆ. ಕೇಳಪ್ಪನ್, ಟಿ.ಕೆ. ಮಾಧವನ್ ಹಾಗೂ ಇತರರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿ, ವೈಕಂ ಅಲ್ಲದವರು ಸ್ಥಳದಿಂದ ತೆರಳುವಂತೆ ಆದೇಶ ಹೊರಡಿಸಿದರು. ಏಪ್ರಿಲ್ 9 ರಂದು ಕೇಳಪ್ಪನ್, ಕೇಶವಮೆನನ್, ಕೆ. ವೇಲಾಯುಧಮ್ ಮೆನನ್ ಮತ್ತು ಇತರರನ್ನು ಬಂಧಿಸಲಾಯಿತು. ಕೇಶವ ಮೆನನ್, ಟಿ.ಕೆ. ಮಾಧವನ್, ಎ.ಕೆ. ಪಿಳ್ಳೈ, ಕೆ. ಕೇಳಪ್ಪನ್, ಕೆ. ವೇಲಾಯುಧಮ್ ಮೆನನ್ ಮತ್ತು ಇತರರು ಜೈಲು ಪಾಲಾದರು.

ಹೋರಾಟಕ್ಕೆ ನಾಯಕತ್ವ ನೀಡಿದ ಪೆರಿಯಾರ್

ವೈಕಂ ಹೋರಾಟವನ್ನೇನೋ ಆರಂಭಿಸಿದರು. ಆದರೆ, ಹೋರಾಟವನ್ನು ಮುನ್ನಡೆಸುವುದೇಗೆ ಎಂಬ ಚಿಂತೆ ಎಲ್ಲರಲ್ಲೂ ಇತ್ತು. ಆ ಸಮಯದಲ್ಲಿ ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಪೆರಿಯಾರ್ ಇ.ವಿ. ರಾಮಸ್ವಾಮಿಯವರನ್ನು ಹೋರಾಟಕ್ಕೆ ನಾಯಕತ್ವ ನೀಡಿ ಮುನ್ನಡೆಸಬೇಕೆಂದು ಕೇಳಿಕೊಂಡರು. ವೈಕಂ ಹೋರಾಟದ ಬಗ್ಗೆ ವಿವರವಾದ ಪತ್ರ ಬರೆದು ಟೆಲಿಗ್ರಾಂ ಕೂಡಾ ಕಳುಹಿಸಿದರು. ಅದು ಸಿಗುವ ಹೊತ್ತಿಗೆ ಪೆರಿಯಾರ್ ಮಧುರೈ ಜಿಲ್ಲೆಯ ಪ್ರವಾಸದಲ್ಲಿದ್ದರು. ಆ ತನ್ನ ಜವಾಬ್ದಾರಿಗಳನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ರಾಜಗೋಪಾಲಾಚಾರಿ ಅವರಿಗೆ ಒಪ್ಪಿಸಿದ ಪೆರಿಯಾರ್ ಅವರು ವೈಕಂ ಹೋರಾಟದಲ್ಲಿ ಭಾಗವಹಿಸಲು ತಕ್ಷಣವೇ ಹೊರಟರು. ವೈಕಂ ಗೆ ಪೆರಿಯಾರ್ ಬರುವ ಸುದ್ದಿ ತಿಳಿದ ತಿರುವಾಂಕೂರು (ತಿರುವಿತಂಕೂರ್) ರಾಜ ತನ್ನ ಸಿಬ್ಬಂದಿಯ ಮೂಲಕ ಪೆರಿಯಾರ್ ಗೆ ಆಮಂತ್ರಣ ಕಳುಹಿಸಿದನು. ಈ ಮೊದಲೇ ಅವರಿಗೂ ತಿರುವಾಂಕೂರು ರಾಜನಿಗೂ ಪರಿಚಯವಿತ್ತು. ಪೆರಿಯಾರ್ ಅವರು ಈರೋಡ್ ಪಟ್ಟಣಕ್ಕೆ ಮುನಿಸಿಪಲ್ ಅಧ್ಯಕ್ಷರಾಗಿದ್ದಾಗ ರಾಜ ದೆಹಲಿಗೆ ಪ್ರಯಾಣ ಮಾಡುವ ಪ್ರತಿಬಾರಿಯೂ ಈರೋಡ್ ನಲ್ಲಿಯೇ ಪೆರಿಯಾರ್ ಅವರ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅದ್ದರಿಂದಲೇ ರಾಜನು ಪೆರಿಯಾರ್ ಅವರನ್ನು ಆಹ್ವಾನಿಸಿದನು. ಆದರೆ ಆ ಆಹ್ವಾನವನ್ನು, ಗೌರವವನ್ನು ಪೆರಿಯಾರ್ ತಿರಸ್ಕರಿಸಿ ವೈಕಂ ಹೋರಾಟಕ್ಕೆ ನಾಯಕತ್ವ ನೀಡಿ, ಪ್ರತಿಭಟನಾ ಚಟುವಟಿಕೆಗಳನ್ನು ತೀವ್ರಗೊಳಿಸಿದರು.

ಪೆರಿಯಾರ್ ಅವರು ಅಲ್ಲಿನ ಜನರನ್ನು ತಮ್ಮ ತಾರ್ಕಿಕವಾದ, ತರ್ಕಬದ್ಧವಾದ ಭಾಷಣಗಳ ಮೂಲಕ ವೈಕಂ ಹೋರಾಟ ನ್ಯಾಯಯುತವಾಗಿದೆ ಎಂದು ಪ್ರಚಾರ ಮಾಡಿದರು. ‘ಮನುಷ್ಯನನ್ನು ಮನುಷ್ಯರಂತೆ ಗೌರವಿಸಲು ಮತ್ತು ಪ್ರೀತಿಸಲು ಸಾಧ್ಯವಾಗದ ಜಾತಿ ವ್ಯವಸ್ಥೆ ಅಸ್ಪೃಶ್ಯ ಪದ್ಧತಿಯಾಗಿದ್ದು, ಅದನ್ನು ಅನುಸರಿಸುವ ಸಮಾಜ ಎಂದಿಗೂ ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ’ ಎಂದು ಜನರಲ್ಲಿ ಅರಿವು ಮೂಡಿಸಿದರು. ‘ದಲಿತರು, ಹಿಂದುಳಿದ ಜಾತಿಯವರು ದೇವಸ್ಥಾನದ ಬೀದಿಗಳಲ್ಲಿ ನಡೆದರೆ ದೇವರಿಗೆ ಮೈಲಿಗೆ ಆಗುತ್ತದೆ ಎಂದುಕೊಂಡರೆ,  ಅಂತಹ ದೇವರು ನಮಗೆ ಅವಶ್ಯಕತೆ ಇಲ್ಲ. ಆ ದೇವರ ಶಿಲ್ಪ ಬಟ್ಟೆ ಒಗೆಯಲು ಬಳಸುವ ಬಂಡೆಗೆ ಸಮಾನ” ಎಂದರು.

ನಿಷೇಧವನ್ನು ಉಲ್ಲಂಘಿಸಿದರು

ವೈಕಂ ಹೋರಾಟವು ತೀವ್ರವಾಗುತ್ತಿರುವುದನ್ನು ಗಮಿನಿಸಿದ ತಿರುವಾಂಕೂರು ರಾಜ, ಪಟ್ಟಣದಲ್ಲಿ ಎಲ್ಲಾ ಪ್ರತಿಭಟನಾ ಕಾರ್ಯಕ್ರಮಗಳನ್ನು ನಿಷೇಧಿಸಿದ. ಆ ನಿಷೇಧಗಳನ್ನು ಪೆರಿಯಾರ್ ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದರು. ಹೋರಾಟ ಮತ್ತಷ್ಟು ಬಲಗೊಂಡಿತು. ಪೆರಿಯಾರ್ ಅವರನ್ನು ತಿರುವಾಂಕೂರಿನ ರಾಜ ತಿಂಗಳುಗಟ್ಟಲೆ ಜೈಲಿನಲ್ಲಿಟ್ಟ. ಜೈಲಿನಿಂದ ಹೊರಬಂದ ನಂತರ ಪೆರಿಯಾರ್ ತಮಿಳುನಾಡಿಗೆ ಹೋಗುತ್ತಾರೆ ಎಂದು ರಾಜ ಭಾವಿಸಿದ್ದ. ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಮತ್ತೆ ಅಷ್ಟೇ ತೀವ್ರತೆಯಿಂದ ಚಳವಳಿಯಲ್ಲಿ ಪಾಲ್ಗೊಂಡರು.

ಹೋರಾಟವನ್ನು ನಿಲ್ಲಿಸುವಂತೆ ರಾಜಾಜಿ ಒತ್ತಡ

ಈ ವಿಷಯ ತಿಳಿದ ತಮಿಳುನಾಡು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ರಾಜಗೋಪಾಲಾಚಾರಿ (ರಾಜಾಜಿ) ಅವರು ‘ಅದು ತಮಿಳುನಾಡಿಗೆ ಸೇರಿದ  ಹೋರಾಟವಲ್ಲ. ಇಲ್ಲಿಗೆ ಬಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಿ’ ಎಂದು ಪತ್ರ ಬರೆದು, ವೈಕಂ ಹೋರಾಟವನ್ನು ನಿಲ್ಲಿಸುವಂತೆ ಪೆರಿಯಾರ್ ಮೇಲೆ ಒತ್ತಡ ಹೇರಿದರು. ರಾಜಾಜಿಯವರು ಮತ್ತೊಬ್ಬ ಕಾಂಗ್ರೆಸ್ ನಾಯಕರಾದ ಎಸ್. ಶ್ರೀನಿವಾಸ ಅಯ್ಯಂಗಾರ್ ಎನ್ನುವವರನ್ನು ವೈಕಂ ಗೆ ಕಳುಹಿಸಿ ಪೆರಿಯಾರ್ ಅವರನ್ನು ಕರೆತರುವಂತೆ ಹೇಳಿದರು. ಆದರೆ ಪೆರಿಯಾರ್ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಈ ವಿಷಯ ಬೇರೆ ರಾಜ್ಯಗಳಿಗೂ ವ್ಯಾಪಸಿತು. ಪಂಜಾಬ್‌ ನಂತಹ ವಿವಿಧ ಪ್ರದೇಶಗಳಿಂದ ನೂರಾರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ವೈಕಂ ಹೋರಾಟದಲ್ಲಿ ಭಾಗವಹಿಸಲು ವೈಕಂ ಗೆ ಬಂದರು.

ಹೋರಾಟದಲ್ಲಿ ಅನ್ಯ ಧರ್ಮದವರಿಗೆ ಅವಕಾಶ ಬೇಡ ಎಂದ ಗಾಂಧೀಜಿ

ವಿಷಯ ತಿಳಿದ ಗಾಂಧೀಜಿ ವೈಕಂ ಹೋರಾಟ ಹಿಂದೂಗಳಿಗೆ ಸಂಬಂಧಿಸಿದೆ.  ಇದರಲ್ಲಿ ಅನ್ಯ ಧರ್ಮದವರಿಗೆ ಅವಕಾಶ ನೀಡಬಾರದು ಎಂದು ಪ್ರಕಟಣೆ ನೀಡಿದರು. ಗಾಂಧಿಯವರು ಸತ್ಯಾಗ್ರಹವನ್ನು ಹಿಂದೂ ಧರ್ಮದ ಒಳಗಿನ ಸುಧಾರಣೆಯ ಪ್ರಯತ್ನವಾಗಿ ನೋಡಿದರು. ಬ್ಯಾರಿಸ್ಟರ್ ಜಾರ್ಜ್ ಜೋಸೆಫ್ ಮತ್ತು ಇತರರು ಮುಷ್ಕರದಲ್ಲಿ ಭಾಗವಹಿಸುವುದನ್ನು ಗಾಂಧಿ ವಿರೋಧಿಸಿದರು. ಅದೇ ರೀತಿ ಕೇರಳದ ಸಮಸ್ಯೆಯೊಂದರಲ್ಲಿ ಅಕಾಲಿಗಳು ಮತ್ತು ಇತರರು ಭಾಗವಹಿಸುವುದನ್ನು ಗಾಂಧಿ ಒಪ್ಪಲಿಲ್ಲ. ಎರಡು ವಾರಗಳ ನಂತರ, ಅಕಾಲಿಗಳು ಪಂಜಾಬ್ ಗೆ ಹಿಂತಿರುಗಬೇಕೆಂಬ ಗಾಂಧಿಯವರ ಬೇಡಿಕೆಯನ್ನು ಅನುಸರಿಸಿದರು. ಹಾಗಾಗಿ, ವೈಕಂ ಸತ್ಯಾಗ್ರಹವು ಗಾಂಧಿಯವರ ಜನಪರ ಹೋರಾಟಗಳನ್ನು ರಾಜಕೀಯವಾಗಿ ಅಭಿವೃದ್ಧಿಪಡಿಸಲು ಅವಕಾಶ ನೀಡದೆ, ಅವುಗಳನ್ನು ಕಿರಿದಾದ ಗಡಿಗಳಲ್ಲಿ ಇರಿಸುವ ವಿಧಾನದ ಅಭಿವ್ಯಕ್ತಿಯಾಯಿತು.

ಆದಾಗ್ಯೂ, ಚಳುವಳಿಯ ವೇಗ ನಿಲ್ಲಲಿಲ್ಲ. ಪೆರಿಯಾರ್ ಅವರು ತಮ್ಮ ಭಾಷಣಗಳಿಂದ ಜನರನ್ನು ಹುರಿದುಂಬಿಸುತ್ತಾ ಬ್ರಾಹ್ಮಣತ್ವ ಮತ್ತು ಮನುವಾದ ವ್ಯವಸ್ಥೆಗಳ ಮೇಲೆ ಬೆಂಕಿ ಕಾರಿದರು. ಇದರಿಂದ ರಾಜ ಕೋಪಗೊಂಡ. ಪೆರಿಯಾರ್ ಅವರನ್ನು ಮತ್ತೆ ಬಂಧಿಸಿ, ಈ ಬಾರಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದನು. ಈ ವಿಷಯನ್ನು ತಿಳಿದ ಪೆರಿಯಾರ್ ಅವರ ಪತ್ನಿ, ತಂಗಿಯರಾದ ನಾಗಮ್ಮಾಳ್ ಮತ್ತು ಕನ್ನಮ್ಮಾಳ್ ತಮಿಳುನಾಡಿನಿಂದ ಬಂದು ವೈಕಂ ಹೋರಾಟದ ಪ್ರಚಾರದಲ್ಲಿ ತೊಡಗಿಕೊಂಡರು.

ವೈಕಂ ಸತ್ಯಾಗ್ರಹದ ಸಮಯದಲ್ಲಿ ರೂಪುಗೊಂಡ ಜಾತ್ಯತೀತ ಮತ್ತು ಜನಪ್ರಿಯ ಐಕ್ಯತೆಯನ್ನು ಗಾಂಧಿಯವರ ನಿಷೇಧದಿಂದ ತಡೆಯಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಮಿತಿಗಳ ಹೊರತಾಗಿಯೂ, ಬ್ಯಾರಿಸ್ಟರ್ ಜಾರ್ಜ್ ಜೋಸೆಫ್, ಭಜೆಭಾರತಂ ಮಾತ್ತುನ್ನಿ, ಹಸನ್ಕೋಯಪೂಮುಲ್ಲಾ, ಫಾದರ್ ವೆಟ್ಟಿಕ್ಕಪಿಲ್ಲಿ, ಕುರುವಿಲ ಮ್ಯಾಥ್ಯೂ ಮತ್ತು ಅಬ್ದುರ್ ರಹಮಾನ್ ಕುಟ್ಟಿ ಸೇರಿದಂತೆ ವಿವಿಧ ಧಾರ್ಮಿಕ ಸಂಪ್ರದಾಯಗಳ ಜನರು ವೈಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಪೆರಿಯಾರ್ ಅವರನ್ನು ಕೊಲ್ಲಲು ‘ಶತ್ರು ಸಂಹಾರ ಯಾಗ’

ವೈಕಂ ನಲ್ಲಿ ನಡೆಯುತ್ತಿದ್ದ ಹೋರಾಟದಿಂದ ಭಯಭೀತರಾದ ಬ್ರಾಹ್ಮಣರು ರಾಜನೊಂದಿಗೆ ಮಾತನಾಡಿ ಪೆರಿಯಾರ್ ಅವರನ್ನು ಕೊಲ್ಲಲು ಶತ್ರು ಸಂಹಾರ ಯಾಗ ಮಾಡಿದರು. ಆದರೆ ಅನಿರೀಕ್ಷಿತವಾಗಿ ರಾಜನೇ ಆಕಷ್ಮಿಕ ಮರಣ ಹೊಂದಿದ.  ಅವರ ಸ್ಥಾನದಲ್ಲಿ ರಾಜನ ಪತ್ನಿ ರಾಣಿ ರಾಜ್ಯದ ಜವಾಬ್ದಾರಿಯನ್ನು ವಹಿಸಿಕೊಂಡರು. ವೈಕಂ ಹೋರಾಟಕ್ಕೆ ಹೆದರಿದ ಆಕೆ ಹೋರಾಟಗಾರರೊಂದಿಗೆ ರಾಜಿ ಮಾಡಿಕೊಳ್ಳಲು ಬಯಸಿದ್ದರು. ಆದರೆ, ಈ ವಿಷಯ ತಿಳಿದ ತಮಿಳುನಾಡಿನ ಕಾಂಗ್ರೆಸ್‌ ಪಕ್ಷದ ಉನ್ನತ ನಾಯಕ ರಾಜಗೋಪಾಲಾಚಾರಿ, ಈ ಗೌರವ ಪೆರಿಯಾರ್ ಅವರಿಗೆ ಸಲ್ಲಬಾರದೆಂದು ಗಾಂಧಿ ಅವರಿಗೆ ವಿಷಯ ತಿಳಿಸಿದರು.

ಮೂರು ದಿಕ್ಕಿನಲ್ಲಿರುವ ಬೀದಿಗಳಲ್ಲಿ ನಿಷೇಧ ಹಿಂಪಡೆದ ರಾಣಿ

1925 ರಲ್ಲಿ ಹೋರಾಟವನ್ನು ಅಂತ್ಯಗೊಳಿಸುವ ವಿಷಯಕ್ಕೆ ಸಂಬಂಧಿಸಿ ಗಾಂಧೀಜಿ ವೈಕಂ ಪಟ್ಟಣಕ್ಕೆ ಬಂದು ರಾಣಿಯೊಡನೆ ಮಾತನಾಡಿದರು. ಅದರಂತೆ ದೇವಸ್ಥಾನದ ದಕ್ಷಿಣ, ಉತ್ತರ ಮತ್ತು ಪಶ್ಚಿಮದ ಬೀದಿಗಳಲ್ಲಿ ಶೂದ್ರರು ಪ್ರಯಾಣಿಸಲು ಅವಕಾಶ ನೀಡಲಾಯಿತು. ಪೂರ್ವ ಭಾಗದ ರಸ್ತೆ ಇನ್ನೂ ಗಣ್ಯರಿಗೆ ಮೀಸಲಾಗಿತ್ತು. ದೇವಾಲಯಕ್ಕೆ ಅಗತ್ಯವಿರುವ ಜಾಗವನ್ನು ಗೋಡೆಯಿಂದ ಬೇರ್ಪಡಿಸಿ ಅಲ್ಲಿ ದ್ವಾರಗಳನ್ನು ನಿರ್ಮಿಸಲು ನಿರ್ಧರಿಸಲಾಯಿತು.

ಗಾಂಧೀಜಿ ತಮ್ಮ ಅಭಿಪ್ರಾಯವನ್ನು ಪೆರಿಯಾರ್ ಅವರಿಗೆ ವಿವರಿಸಿದರು. ದೇವಾಲಯದ ಬೀದಿಗಳಲ್ಲಿ ನಡೆಯಲು ರಾಣಿ ಒಪ್ಪಿಕೊಂಡಳು. ಆದರೆ ‘ನೀವು ದೇವಾಲಯ ಪ್ರವೇಶ ಕೇಳುತ್ತೀರಿ ಎಂಬ ಭಯವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ’ಎಂದು ಗಾಂಧೀಜಿ ಪೆರಿಯಾರ್ ಅವರಿಗೆ ಹೇಳಿದರು. ಆಗ ಪೆರಿಯಾರ್ ‘ಮೊದಲು ದೇವಾಲಯ ಬೀದಿಗಳಲ್ಲಿ ನಡೆಯೋಣ, ನಂತರ ದೇವಸ್ಥಾನದ ಒಳಗೆ ಹೋಗಲು ಪ್ರಯತ್ನ ಮಾಡುತ್ತೇವೆ’ ಎಂದು ಗಾಂಧಿಜಿಯವರಿಗೆ ಹೇಳಿದರು. ಇದರ ನಂತರ 603 ದಿನಗಳ ವೈಕಂ ಸತ್ಯಾಗ್ರಹವು 23 ನವೆಂಬರ್ 1925 ರಂದು ಕೊನೆಗೊಂಡಿತು.

ವೈಕಂ ಹೋರಾಟ ಯಶಸ್ವಿಯಾಗಿದೆ.  ಆದರೆ,

ವೈಕಂ ಹೋರಾಟ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಪೆರಿಯಾರ್ ಹೇಳಿದ ಮಾತು ಪ್ರತಿಯೊಬ್ಬರ ರಕ್ತ ಕೊತ ಕೊತ ಕುದಿಯುವಂತೆ ಮಾಡಿದೆ. ”ಮಲ ತಿನ್ನುವ ನಾಯಿಗಳು, ಹಂದಿಗಳು ಸ್ವಚ್ಛಂದವಾಗಿ ನಡೆದಾಡುವ ಬೀದಿಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ ಎಂಬ ಆ ಹಕ್ಕಿಗಾಗಿ ಮಾತ್ರವೇ ನಾವು ಹೋರಾಡಲಿಲ್ಲ. ಮನುಷ್ಯ ಮನುಷ್ಯನ ನಡುವೆ ಅಂತರವನ್ನು ತೊಲಗಿಸಿ ಮಾನವೀಯತೆಯನ್ನು ಸಾಧಿಸುವುದೇ ನಮ್ಮ ಉದ್ದೇಶ. ಅದಕ್ಕಾಗಿಯೇ ದೇವಸ್ಥಾನದ ಬೀದಿಗಳಲ್ಲಿ ನಡೆದಾಡುವುದಕ್ಕಾಗಿ ನಾವು ಹೋರಾಟ ನಡೆಸಬೇಕಾಗಿ ಬಂದಿದೆ’ ಎಂದರು.

ಅಂತೆಯೇ, ವೈಕಂ ಸತ್ಯಾಗ್ರಹವು ನಂತರದ ಅನೇಕ ಹೋರಾಟಗಳಿಗೆ ಕಾರಣವಾಯಿತು. ಗುರುವಾಯೂರ್ ಸತ್ಯಾಗ್ರಹ (1931), ಶುಚಿಂದ್ರಂ ಸತ್ಯಾಗ್ರಹ (1926), ಕಲ್ಪತಿ ಸಂಗಮ್ (1926), ಪಾಳಿಯಂ ಸಂಗಮ್ (1948) ಮತ್ತು ದೇವಾಲಯ ಪ್ರವೇಶ ಆಚರಣೆಗಳಂತಹ ಘೋಷಣೆಗಳಿಗೆ ದಾರಿ ಮಾಡಿಕೊಟ್ಟದ್ದು ವೈಕಂ ಸತ್ಯಾಗ್ರಹದ ಶಕ್ತಿ.

ಆತ್ಮ ವಿಶ್ವಾಸವನ್ನು ತೋರಿದ ವೈಕಂ ಹೋರಾಟ

ವೈಕಂ ಹೋರಾಟ ನಡೆದು ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಕೇರಳದ ಎಡಪಂಥೀಯ ಸರಕಾರ ಮತ್ತು ತಮಿಳುನಾಡಿನ ಡಿಎಂಕೆ ಸರಕಾರ ವೈಕಂ ಹೋರಾಟದ ಶತಮಾನೋತ್ಸವದ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದವು. ವೈಕಂನಲ್ಲಿ ಪೆರಿಯಾರ್ ಭವನ, ಪೆರಿಯಾರ್ ಗ್ರಂಥಾಲಯದ ಜೊತೆಗೆ ಒಂದು ವಸ್ತುಸಂಗ್ರಹಾಲಯವನ್ನು ಸಹ ಸ್ಥಾಪಿಸಲಾಗಿದೆ. ಜಾತಿ ತಾರತಮ್ಯ ವಿರೋಧಿ ಹೋರಾಟದಲ್ಲಿ ಕೋಮುವಾದವನ್ನು ಮೀರಿ ವಿವಿಧ ಧಾರ್ಮಿಕ ಮತ್ತು ಜಾತಿ ಸಮುದಾಯಗಳಿಗೆ ಸೇರಿದ ಜನರು ಒಗ್ಗೂಡಿದ್ದು ವೈಕಂ ಹೋರಾಟದ ವಿಶೇಷತೆಯಲ್ಲಿ ಒಂದು. ದಿಟ್ಟವಾದ ಹೋರಾಟದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಆತ್ಮ ವಿಶ್ವಾಸವನ್ನು ವೈಕಂ ಹೋರಾಟ ತೋರಿಸುತ್ತದೆ. ಆದ್ದರಿಂದಲೇ ಇದು ಕೇರಳದ ಜನತೆಗೆ ಮಾತ್ರವಲ್ಲ, ಭಾರತದ ಸಮಸ್ತ ಜನತೆಗೆ ಸಂದ ಜಯ. ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ. ಬ್ರಾಹ್ಮಣವಾದದ ವಿಭಜಕ ತರ್ಕದ ವಿರುದ್ಧ ಪಂಥೀಯ ರೇಖೆಗಳಾದ್ಯಂತ ಒಟ್ಟಾಗಿ ನಿಲ್ಲುವ ಅಗತ್ಯವನ್ನು ಅದು ನಮಗೆ ಹೇಳುತ್ತದೆ.

Is this your new site? Log in to activate admin features and dismiss this message
ಲಾಗಿನ್