ಮೋದಿ ಭರವಸೆಯಂತೆ 2022ರೊಳಗೆ ಎಲ್ಲರಿಗೂ ವಸತಿ ದೊರಕಿತೆ?

ಮೋದಿ ಸರ್ಕಾರ 11 ವರ್ಷಗಳ ಆಡಳಿತ ಪೂರೈಸಿದ ಸಂದರ್ಭದಲ್ಲಿ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (PMAY) ಅಡಿಯಲ್ಲಿ ಒಟ್ಟು ಸುಮಾರು 4 ಕೋಟಿ 20 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, 2014ರಲ್ಲಿ ಇದೇ ಸರ್ಕಾರ ಹೇಳಿದ್ದು “2022ರ ವೇಳೆಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುತ್ತೇವೆ” ಎಂದು. ಇದನ್ನು “ಮೋದಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತಾರೆ” ಎಂದೇ ಪ್ರಚಾರ ಮಾಡಿದರು. ಮನೆ ಇಲ್ಲದ ಕೋಟ್ಯಾಂತರ ಕುಟುಂಬಗಳು ಸ್ವಂತ ಮನೆ ಹೊಂದುವ ಕನಸು ಕಂಡರು. ಈ ಯೋಜನೆಯ ರೂಪುರೇಷೆಗಳನ್ನು ಅರಿಯದ ಗ್ರಾಮೀಣ ಮತ್ತು ನಗರಗಳ ಕಡು ಬಡವರೂ ಮೋದಿ ನಮಗೆ ಮನೆ ಕೊಟ್ಟೇ ಕೊಡುತ್ತಾರೆ ಎಂದೇ ನಂಬಿದರು. ಇಂದು 11 ವರ್ಷಗಳ ನಂತರವೂ ಕೋಟ್ಯಾಂತರ ವಸತಿಹೀನರ ಆಸೆ ಕೈಗೂಡಲೇ ಇಲ್ಲ.

2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಮೋದಿ ಸರ್ಕಾರ ಕೊಟ್ಟ ಭರವಸೆಗಳಲ್ಲಿ,  2022 ರ ವೇಳೆಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಎಂಬುದೂ ಒಂದು. ಇದಕ್ಕಾಗಿ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (PMAY) ರೂಪಿಸಲಾಗುತ್ತದೆ.  2014ರಲ್ಲಿ  ಹೊಸದಾಗಿ ರಚನೆಯಾದ ಸಂಸತ್ತು ಮೊದಲ ಬಾರಿಗೆ ಸಭೆ ಸೇರಿದಾಗ, ರಾಷ್ಟ್ರಪತಿಗಳ ಭಾಷಣದ ನಂತರ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಈ ಘೋಷಣೆ ಮಾಡಿದರು. 25 ಜೂನ್ 2015 ರಂದು ಈ ಯೋಜನೆ ಪ್ರಾರಂಭವಾಯಿತು. ಈ ಯೋಜನೆಯು ಎರಡು ವಿಭಾಗಗಳನ್ನು ಹೊಂದಿದೆ. PMAY (ನಗರ) ಮತ್ತು PMAY (ಗ್ರಾಮೀಣ). PMAY (ಅರ್ಬನ್) ನಗರ ಬಡವರಿಗೆ ಕೈಗೆಟುಕುವ ವಸತಿ ಒದಗಿಸುವ ಗುರಿಯನ್ನು ಹೊಂದಿದ್ದರೆ, PMAY (ಗ್ರಾಮೀಣ) ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟುಕುವ ವಸತಿ ಒದಗಿಸುವತ್ತ ಗಮನಹರಿಸುವ ಯೋಜನೆಯಾಗಿದೆ.

ಮನೆ ಇಲ್ಲದ ಕೋಟ್ಯಾಂತರ ಕುಟುಂಬಗಳು ಮೋದಿ ಸರ್ಕಾರದ ಈ ಘೋಷಣೆಯಿಂದಾಗಿ ಸ್ವಂತ ಮನೆ ಹೊಂದುವ ಕನಸು ಕಂಡರು. ಈ ಯೋಜನೆಯ ರೂಪುರೇಷೆಗಳನ್ನು ಅರಿಯದ ಗ್ರಾಮೀಣ ಮತ್ತು ನಗರಗಳ ಕಡು ಬಡವರೂ ಮೋದಿ ನಮಗೆ ಮನೆ ಕೊಟ್ಟೇ ಕೊಡುತ್ತಾರೆ ಎಂದೇ ನಂಬಿದರು. ಅದಕ್ಕಾಗಿ ಆನ್ಲೈನ್ ಅರ್ಜಿ ಹಾಕುವ ವ್ಯವಸ್ಥೆಯನ್ನೂ ಒಕ್ಕೂಟ ಸರ್ಕಾರ ಮಾಡಿತು. ಜನರು ಕಾಮನ್ ಸರ್ವೀಸ್ ಸೆಂಟರ್ (CSC) ಗಳ ಎದುರು ಸಾಲುಗಟ್ಟಿ ನಿಂತು, 200, 500, ಕೆಲವೆಡೆ 1000 ರೂ ವರೆಗೂ ಹಣ ಕೊಟ್ಟು ಆನ್ಲೈನ್ ಅರ್ಜಿ ಹಾಕಿದರು. ಅರ್ಜಿ ಸಲ್ಲಿಸಿದ ಸ್ವೀಕೃತಿ ಪತ್ರವನ್ನೇ ಕೆಲವರು ಮನೆಯ ಹಕ್ಕು ಪತ್ರದಂತೆ ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಮೋದಿ ಮನೆ ಕಟ್ಟಿಸಿಕೊಡುತ್ತಾರೆ ಎಂದು ನಂಬಿಸಿ ಮದ್ಯವರ್ತಿಗಳು, ರಾಜಕೀಯ ಪುಡಾರಿಗಳು ಆನ್ಲೈನ್ ಅರ್ಜಿ ಸಲ್ಲಿಸಲು ನೆರವಾಗಿ ಸಾಕಷ್ಟು ಹಣ ಮಾಡಿಕೊಂಡರು. ಕೆಲವು ಸಿಎಸ್ ಸಿ ಸೆಂಟರ್ ನವರೂ ಹಣ ಮಾಡಿಕೊಂಡರು. ಮೋದಿ ಭಕ್ತರು ಜನರನ್ನು ನಂಬಿಸಲು ಹಲವು ರೀತಿಯ ಕತೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದರು. ಬಿಜೆಪಿ ನೀಡಿದ 2022 ರ ಗಡುವು ಮುಗಿದಿದೆ. ಎಷ್ಟು ಕುಟುಂಬಗಳಿಗೆ ಮನೆ ಸಿಕ್ಕಿದೆ?

‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಅಡಿಯಲ್ಲಿ ಒಟ್ಟು ಸುಮಾರು 4 ಕೋಟಿ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು 2025ರಲ್ಲಿ 11 ವರ್ಷಗಳ ಆಡಳಿತ ಪೂರ್ಣಗೊಳಿಸಿದ ಸಂದರ್ಭದಲ್ಲಿ ಹೇಳಿಕೊಳ್ಳುತ್ತಿದೆ. 2029ರ ವೇಳೆಗೆ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಸರ್ಕಾರ 2025ರಲ್ಲಿ ಹೇಳುತ್ತಿದೆ.

ಹಿಂದಿನ IAY ಇಂದಿನ PMAY

ಈ ಪ್ರಶ್ನೆ ಮಾಡುವ ಮೊದಲು, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ ಏನೆಂಬುದನ್ನು ಅರಿಯಬೇಕಿದೆ. ಮೋದಿ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (PMAY) ಹಿಂದಿನ ಇಂದಿರಾ ಆವಾಸ್ ಯೋಜನೆ(IAY)ಯ ಹೊಸ ಹೆಸರಿಟ್ಟ ರೂಪವಷ್ಟೆ. ಇಂದಿರಾ ಆವಾಸ್ ಯೋಜನೆಯಲ್ಲಿ 2007-2014ರ 7 ವರ್ಷಗಳ ಅವಧಿಯಲ್ಲಿ 1.65 ಕೋಟಿ ವಸತಿ ನಿರ್ಮಾಣವಾಗಿದ್ದರೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ 2014-2021ರ 7 ವರ್ಷಗಳ ಅವಧಿಯಲ್ಲಿ 2.41 ಕೋಟಿ ವಸತಿ ನಿರ್ಮಾಣವಾಗಿದೆ.

ಭಾರತದಲ್ಲಿ ಸಾರ್ವಜನಿಕ ವಸತಿ ಕಾರ್ಯಕ್ರಮವು ಸ್ವಾತಂತ್ರ್ಯದ ನಂತರ ತಕ್ಷಣವೇ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾಯಿತು. 1960 ರವರೆಗೆ, ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಸುಮಾರು ಐದು ಲಕ್ಷ ಕುಟುಂಬಗಳಿಗೆ ಮನೆಗಳನ್ನು ಒದಗಿಸಲಾಗಿದೆ. 1957 ರಲ್ಲಿ, ಪ್ರಧಾನ ಮಂತ್ರಿ ನೆಹರು ಅವರ ಎರಡನೇ ಪಂಚವಾರ್ಷಿಕ ಯೋಜನೆಯ ವ್ಯಾಪ್ತಿಯಲ್ಲಿ, ಗ್ರಾಮ ವಸತಿ ಕಾರ್ಯಕ್ರಮವನ್ನು (VHP) ಪರಿಚಯಿಸಲಾಯಿತು, ಇದು ವ್ಯಕ್ತಿಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ ಪ್ರತಿ ಘಟಕಕ್ಕೆ ರೂ. 5,000 ವರೆಗೆ ಸಾಲವನ್ನು ನೀಡುತ್ತದೆ. ಐದನೇ ಪಂಚವಾರ್ಷಿಕ ಯೋಜನೆಯ (1974-1979) ಅಂತ್ಯದವರೆಗೆ ಈ ಯೋಜನೆಯಲ್ಲಿ ಕೇವಲ 67,000 ಮನೆಗಳನ್ನು ಮಾತ್ರ ನಿರ್ಮಿಸಬಹುದಾಗಿದೆ. 1974 ರಿಂದ 1975 ರವರೆಗೆ ರಾಜ್ಯ ವಲಯಕ್ಕೆ ವರ್ಗಾಯಿಸಲ್ಪಟ್ಟ ಮತ್ತೊಂದು ಯೋಜನೆಯು ಮನೆ ಸೈಟ್ಗಳು-ಕಮ್-ನಿರ್ಮಾಣ ಸಹಾಯ ಯೋಜನೆ (HSCAS) ಅನ್ನು ಸಹ ರೂಪಿಸಲಾಯಿತು.

1985 ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಇಂದಿರಾ ಆವಾಸ್ ಯೋಜನೆ (IAY) ಅನ್ನು ಪ್ರಾರಂಭಿಸುವುದರೊಂದಿಗೆ, ಭಾರತದಲ್ಲಿ ಸಾರ್ವಜನಿಕ ವಸತಿ ಕಾರ್ಯಕ್ರಮಕ್ಕೆ ಉತ್ತೇಜನ ಸಿಕ್ಕಿತು. ಎಸ್ಸಿ/ಎಸ್ಟಿ ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಗುರಿಯಾಗಿಸಿಕೊಂಡು ಗ್ರಾಮೀಣ ವಸತಿ ಕಾರ್ಯಕ್ರಮವಾಗಿ IAY ಪ್ರಾರಂಭಿಸಲಾಗಿತ್ತು. ನಂತರ ಬಡತನ ರೇಖೆಗಿಂತ ಕೆಳಗಿರುವ (BPL) ಜನಸಂಖ್ಯೆಯನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಕ್ರಮೇಣ ವಿಸ್ತರಿಸಲಾಯಿತು. ಕೇಂದ್ರ ಮತ್ತು ರಾಜ್ಯಗಳೆರಡೂ 75:25 ಅನುಪಾತದಲ್ಲಿ ಯೋಜನೆಯ ನಿಧಿಗೆ ಕೊಡುಗೆ ನೀಡುತ್ತಿದ್ದವು. ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳ ಸಂದರ್ಭದಲ್ಲಿ ಧನಸಹಾಯವು 90:10 ಅನುಪಾತದಲ್ಲಿತ್ತು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಪ್ರಾರಂಭದಲ್ಲಿ ಬಯಲು ಪ್ರದೇಶದಲ್ಲಿ ಮನೆ ನಿರ್ಮಿಸಲು 45,000 ರೂ. ಮತ್ತು ಗುಡ್ಡಗಾಡು ಮತ್ತು ಕಷ್ಟಕರ ಪ್ರದೇಶದಲ್ಲಿ ಮನೆ ನಿರ್ಮಿಸಲು 48,500 ರೂ. ನೆರವು ನೀಡುತ್ತಿತ್ತು.  2013 ರ ಏಪ್ರಿಲ್ 1 ರಂದು 70,000 ಮತ್ತು 75,000 ರೂ.ಗಳಿಗೆ ಆರ್ಥಿಕ ಸಹಾಯವನ್ನು ಹೆಚ್ಚಿಸಲಾಗಿತ್ತು.  IAY ಫಲಾನುಭವಿಗಳು ಶೇ. 4 ವಾರ್ಷಿಕ ಬಡ್ಡಿ ದರದಲ್ಲಿ ಮನೆ ನಿರ್ಮಿಸಲು ರೂ 20,000 ವರೆಗೆ ಸಾಲವನ್ನು ಪಡೆಯಬಹುದಾಗಿತ್ತು. IAY ಹಣವನ್ನು ಸಹ ಕಚ್ಚಾ ಮನೆಗಳ ಉನ್ನತ ದರ್ಜೆಗೆ ವಿನಿಯೋಗಿಸಬಹುದಿತ್ತು. ಶೌಚಾಲಯ ನಿರ್ಮಿಸಲು ಐಎವೈ ಅಡಿಯಲ್ಲಿ ರೂ. 9,000 ಹೆಚ್ಚುವರಿ ನೆರವು ನೀಡಲಾಗುತ್ತಿತ್ತು.

ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ, 1985 ರಿಂದ 2.52 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಭಾರತ್ ನಿರ್ಮಾಣ್ ಕಾರ್ಯಕ್ರಮದ ಆರು ಭಾಗಗಳಲ್ಲಿ ಗ್ರಾಮೀಣ ವಸತಿ ಒಂದು. ಮೊದಲ ಹಂತದಲ್ಲಿ 2005-06 ರಿಂದ 2008ರ ಅವಧಿಯಲ್ಲಿ 21,720.39 ಕೋಟಿ ರೂ.ಗಳನ್ನು ವ್ಯಯಿಸಿ 71.76 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. 2009-10 ರಿಂದ ಪ್ರಾರಂಭವಾಗಿ ಮುಂದಿನ ಐದು ವರ್ಷಗಳಲ್ಲಿ ಎರಡನೇ ಹಂತದಲ್ಲಿ ಮೊದಲ ಮೂರು ವರ್ಷಗಳಲ್ಲಿ 85 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ.

IAY ಯೋಜನೆಯನ್ನೇ ನಗರ ಪ್ರದೇಶಕ್ಕೂ ವಿ‍ಸ್ತರಿಸಿ, ಮದ್ಯಮ ವರ್ಗದ ಕುಟುಂಬದವರಿಗೂ ಸೌಲಭ್ಯ ಕಲ್ಪಿಸಲು ಒಂದಷ್ಟು ಬದಲಾವಣೆಯೊಂದಿಗೆ, ‘ಇಂದಿರಾ’ ಎಂಬ ಹೆಸರನ್ನು ಅಳಿಸಿಹಾಕಿ, ‘ಪ್ರಧಾನ್ ಮಂತ್ರಿ’ ಎಂದು ಸೇರಿಸಿ PMAY ಎಂಬ ಹೊಸ ಹೆಸರಿನಲ್ಲಿ ತರಲಾಗಿದೆ.

ಹಳೆಯ ವಸತಿ ಯೋಜನೆಗಳೆಲ್ಲವೂ PMAY ಒಳಗೆ

ಕಡಿಮೆ ವೆಚ್ಚದ ಮನೆಗಳನ್ನು ಒದಗಿಸುವ ಪ್ರಯತ್ನಗಳನ್ನು ಹಲವು ವರ್ಷಗಳಿಂದ ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆ (PMAY)ಯು, ರಾಷ್ಟ್ರೀಯ ವಸತಿ ನೀತಿ-1994; ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್- 2005; ರಾಜೀವ್ ಆವಾಸ್ ಯೋಜನೆ -2013 ಹೀಗೆ ಈ ಹಿಂದಿನ ಎಲ್ಲಾ ನಗರ ವಸತಿ ಯೋಜನೆಗಳನ್ನು ಒಳಗೊಳ್ಳುತ್ತದೆ.

ಏನಿದು ವಿಸ್ತರಣೆ?

ಆರ್ಥಿಕವಾಗಿ ದುರ್ಬಲ ವಿಭಾಗಗಳು (EWS), ಕಡಿಮೆ-ಆದಾಯದ ಗುಂಪು (LIG), ಮಧ್ಯಮ-ಆದಾಯದ ಗುಂಪು I (MIG I) ಮತ್ತು ಮಧ್ಯಮ-ಆದಾಯದ ಗುಂಪು II (MIG II). ಈ ಗುಂಪುಗಳಿಗೆ ಸೇರಿರುವ ಕುಟುಂಬಗಳನ್ನು PMAY ಒಳಗೊಂಡಿರುತ್ತದೆ. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಪ್ರತಿ ವರ್ಗಕ್ಕೆ ನಿಗದಿತ ಮಿತಿಯೊಳಗೆ ಇರಬೇಕು.

PMAY ಯೋಜನೆಯು ಅರ್ಹ ಫಲಾನುಭವಿಗಳಿಗೆ ಗೃಹ ಸಾಲಗಳ ಮೇಲಿನ ಸಬ್ಸಿಡಿ ಅಥವಾ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿಗಳ ರೂಪದಲ್ಲಿ ಹಣಕಾಸಿನ ನೆರವು ನೀಡುತ್ತದೆ. ಸಬ್ಸಿಡಿಯನ್ನು ಮೊದಲ ಬಾರಿಗೆ ಮನೆ ಖರೀದಿಸುವವರು, ಆರ್ಥಿಕವಾಗಿ ದುರ್ಬಲ ವರ್ಗಗಳು, ಕಡಿಮೆ-ಆದಾಯದ ಗುಂಪುಗಳು ಮತ್ತು ಮಧ್ಯಮ-ಆದಾಯದ ಗುಂಪುಗಳಿಗೆ ನೀಡಲಾಗುತ್ತದೆ. ಯೋಜನೆಯು ಜನರಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ನವೀಕರಿಸಲು ಸಹಾಯವನ್ನು ಒದಗಿಸುತ್ತದೆ. PMAY ಯೋಜನೆಯು ನಾಲ್ಕು ಪ್ರಮುಖ ಅಂಶಗಳನ್ನು ಹೊಂದಿದೆ – ಇನ್-ಸಿಟು ಸ್ಲಂ ಪುನರಾಭಿವೃದ್ಧಿ, ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆ, ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ ಮತ್ತು ಫಲಾನುಭವಿ-ನೇತೃತ್ವದ ನಿರ್ಮಾಣ.

PMAY ಅಡಿಯಲ್ಲಿ, ನೆರವಿನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಬಯಲು ಪ್ರದೇಶಗಳಲ್ಲಿ 60:40 ಮತ್ತು ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಿಗೆ 90:10 ಅನುಪಾತದಲ್ಲಿ ಹಂಚಿಕೊಳ್ಳಲಾಗುತ್ತದೆ.

ಮನೆಯ ಸಂಪೂರ್ಣ ವೆಚ್ಚವಲ್ಲ

ಮನೆ ಇಲ್ಲದ ಎಲ್ಲರಿಗೂ ಮನೆ ಎಂದಾಕ್ಷಣ ಬಡ ಕುಟುಂಬಗಳು ತಮಗೆ ಸರ್ಕಾರ ಉಚಿತವಾಗಿ ಮನೆ ಕೊಡುತ್ತದೆ ಎಂದೇ ನಂಬುತ್ತಾರೆ. ಆದರೆ, ಇದು ನಿಜವಲ್ಲ. ಅಲ್ಪ ಪ್ರಮಾಣದ ಸಹಾಯ ಧನ ನೀಡುತ್ತಾರೆ. ಉಳಿದಂತೆ ಒಂದು ನಿರ್ಧಿಷ್ಟ ಪ್ರಮಾಣದ ಸಾಲದ ಮೇಲಿನ ಬಡ್ಡಿ ರಿಯಾಯಿತಿ ದರದಲ್ಲಿ ಇರುತ್ತದೆ.

ಗ್ರಾಮೀಣ ಪ್ರದೇಶದಲ್ಲಿ PMAY (ಗ್ರಾಮೀಣ) ಯೋಜನೆಯ ಮೂಲಕ ಎಸ್.ಸಿ./ಎಸ್.ಟಿ ಕುಟುಂಬಗಳಿಗೆ 1.65 ಲಕ್ಷ ಮತ್ತು ಸಾಮಾನ್ಯ ವರ್ಗದ ಕುಟುಂಬಗಳಿಗೆ 1.20 ಲಕ್ಷ ಧನಸಹಾಯ ಸಿಗುತ್ತದೆ. ಈ ಹಣವನ್ನು ಮರುಪಾವತಿ ಮಾಡಬೇಕಿಲ್ಲ. (ಈ ಧನಸಹಾಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲಿದೆ) ಈ ಲಾಭ ಪಡೆಯಬೇಕಾದರೆ ಮನೆ ಕಟ್ಟಲು ಸ್ವಂತ ಜಾಗ ಹೊಂದಿರಬೇಕು. ಸ್ವಂತ ಜಾಗ ಹೊಂದಿದ್ದರೂ, ಕಟ್ಟಡ ಸಾಮಗ್ರಿಗಳ ಬೆಲೆಗಳ ಈ ದುಬಾರಿ ಕಾಲದಲ್ಲಿ ಈ ಅಲ್ಪ ಹಣದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡುತ್ತದೆ. ಒಂದಷ್ಟು ಹಣ ಕೂಡಿಟ್ಟಿರಬೇಕು. ಬ್ಯಾಂಕುಗಳು ಬಡವರಿಗೆ ಸಾಲ ಕೊಡುತ್ತವೆ ಎಂದು ನಂಬಲಾಗದು. ಒಂದು ವೇಳೆ ಕೊಟ್ಟರೂ ಬಡಜನತೆಗೆ ಪ್ರತಿ ತಿಂಗಳು ಸಾಲದ ಕಂತು ಪಾವತಿಸುವಷ್ಟು ಆದಾಯ ಇರಲಾರದು.

ಒಂದು ಮಾಹಿತಿಯ ಪ್ರಕಾರ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಬಿಬಿಎಂಪಿ ನೆರವಿನ ಹಣವೂ ಸೇರಿದಂತೆ ವಿವಿಧ ವಸತಿ ಯೋಜನೆಗಳಿಂದ ಒದಗಿಸಲಾಗುವ ಧನಸಹಾಯದ ಮೊತ್ತ 5 ಲಕ್ಷ ರೂ.ಗಳನ್ನು ಬಿಬಿಎಂಪಿ ಕೊಡುತ್ತದೆ. ಇದನ್ನು ಪಡೆಯಲು ನಗರ ಮಿತಿಯೊಳಗೆ ಸ್ವಂತ ನಿವೇಶನ ಇರಬೇಕು, ಮಾತ್ರವಲ್ಲ ಶಾಸಕರು, ಸಂಸದರು ಅಥವಾ ಪಾಲಿಕೆಯ ಸದಸ್ಯರ ಶಿಫಾರಸ್ಸು ಪಡೆಯಲೇ ಬೇಕು. ಅಥವಾ ಮದ್ಯವರ್ತಿಗಳ ಮೂಲಕ ಸಂಭಂದಪಟ್ಟ ಆಧಿಕಾರಿಗಳಿಗೆ ಲಂಚ ಕೊಡಬೇಕು. ಬೇರೆ ಬೇರೆ ನಗರಗಳಲ್ಲಿ ಆಯಾ ನಗರಗಳ ಬಜೆಟ್ ಮೀಸಲನ್ನು ಅವಲಂಭಿಸಿ ಸಹಾಯಧನದ ಮೊತ್ತದಲ್ಲಿ ವ್ಯತ್ಯಾಸ ಇರುತ್ತದೆ.

ಸಾಲ ಮತ್ತು ಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿ

ಈ ಮೊದಲೇ ಮನೆ ಇಲ್ಲದ ಕುಟುಂಬಗಳು ಹೊಸ ಮನೆ ಕಟ್ಟಲು ಮಾಡುವ ಸಾಲದ ಮೇಲಿನ ಬಡ್ಡಿಗೆ ಸರ್ಕಾರ ಒಂದಷ್ಟು ಸಬ್ಸಿಡಿ ಕೊಡುತ್ತದೆ. ವಾರ್ಷಿಕವಾಗಿ 3 ಲಕ್ಷದವರೆಗೆ ಆದಾಯ ಇರುವ ‘ಆರ್ಥಿಕವಾಗಿ ದುರ್ಬಲ ವಿಭಾಗ’ (EWS) ಮತ್ತು 3-6 ಲಕ್ಷ ಆದಾಯವಿರುವ ‘ಕಡಿಮೆ-ಆದಾಯದ ಗುಂಪುಗಳು’ (LIG) ಕುಟುಂಬಗಳಿಗೆ 6 ಲಕ್ಷದವರೆಗೆ ಸಾಲ ಹಾಗೂ ಶೇ. 6.5 ರಷ್ಟು ಬಡ್ಡಿ ರಿಯಾಯಿತಿ ಸಿಗುತ್ತದೆ. 6-12 ಲಕ್ಷ ಆದಾಯವಿರುವ ಮಧ್ಯಮ-ಆದಾಯದ ಗುಂಪಿಗೆ I (MIG I) ಸೇರಿದ ಕುಟುಂಬಗಳಿಗೆ 9 ಲಕ್ಷದವರೆಗೆ ಸಾಲ ಮತ್ತು ಶೇ. 4 ರಷ್ಟು ಬಡ್ಡಿ ರಿಯಾಯಿತಿ, 12-18 ಲಕ್ಷ ಆದಾಯವಿರುವ MIG II ಕುಟುಂಬಗಳಿಗೆ 12 ಲಕ್ಷ ಸಾಲ ಮತ್ತು ಶೇ. 3ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುತ್ತದೆ. ಸಾಲದ ಅವಧಿ 20 ವರ್ಷಗಳು. ಈ ಎಲ್ಲಾ ವಿಭಾಗದ ಫಲಾನುಭವಿಗಳಿಗೆ ಒಟ್ಟಾರೆ ಸಿಗುವ ಬಡ್ಡಿ ಮೇಲಿನ ಸಬ್ಸಿಡಿ ಅಂದಾಜು 2.65 ಲಕ್ಷ ರೂಪಾಯಿ.

ಅಂದರೆ, ಮಾಸಿಕ 50 ಸಾವಿರದಿಂದ ಒಂದೂವರೆ ಲಕ್ಷ ಆದಾಯ ಇರುವ ಕುಟುಂಬಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಮನೆ ಕಟ್ಟಲು ಅಥವಾ ಖರೀದಿಸಲು ಆರ್ಥಿಕ ಸಾಮರ್ಥ್ಯ ಹೊಂದಿರುವ ಕುಟುಂಬಗಳು ಮಾತ್ರ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಹೆಚ್ಚು ಲಾಭ ಪಡೆಯುತ್ತಾರೆ. ಅಂದರೆ, ವಸತಿ ಇಲ್ಲದ, ಮನೆ ಕಟ್ಟಲು ಜಾಗ ಇಲ್ಲದ, ಮನೆ ಕಟ್ಟಲು ಅಥವಾ ಖರೀದಿಸಲು ಒಂದಷ್ಟು ಹಣ ಹೊಂದಿಸಲಾಗದ, ಬ್ಯಾಂಕುಗಳಲ್ಲಿ ಸಾಲ ಪಡೆಯಲು ಅರ್ಹರಲ್ಲದ,  ಪಡೆದರೂ ಇಎಂಐ ಕಟ್ಟಲಾಗದಷ್ಟು ಆದಾಯವಿಲ್ಲದ ಕಡು ಬಡವರಿಗೆ, ಬಿಪಿಎಲ್ ಕುಟುಂಬಗಳಿಗೆ ಈ ಸೌಲಭ್ಯ ಮರೀಚಿಕೆಯಾಗಿದೆ. ಈ ಹಿಂದಿನ ‘ಆಶ್ರಯ’ ಮುಂತಾದ ವಸತಿ ಯೋಜನೆಯಂತೆ ವಸತಿ ಇಲ್ಲದ ಬಡವರಿಗೆ ಉಚಿತವಾಗಿ ನಿವೇಶನ ಮತ್ತು ಮನೆ ನಿರ್ಮಾಣ ಅಥವಾ ಸರ್ಕಾರವೇ ಸಾಮೂಹ ವಸತಿ ಗೃಹಗಳ ನಿರ್ಮಾಣ ಮಾಡಿ ಹಂಚುವ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ. ಸ್ವಂತ ಮನೆ ಕನಸು ಕಂಡ ಬಡವರು ನಿರಾಶರಾಗಿದ್ದಾರೆ. ಮೋದಿ ಕೊಟ್ಟಿದ್ದ 2022ರ ಗಡುವು ಮುಗಿದಿದೆ. ನಂತರ ಈ ಯೋಜನೆಯನ್ನು 2024ರ ವರೆಗೆ ಮತ್ತೆ ವಿಸ್ತರಿಸಲಾಯಿತು. ಈ ಅವಧಿಯಲ್ಲೂ ಕಡು ಬಡವರಿಗೆ ಸ್ವಂತ ಮನೆ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ.

Is this your new site? Log in to activate admin features and dismiss this message
ಲಾಗಿನ್