ಉಚಿತ ಸಂಪರ್ಕವಷ್ಟೆ, ಉಚಿತ ಅನಿಲವಲ್ಲ

“ನೋಡಿ ಇಲ್ಲಿ, ಹಳ್ಳಿಗಳಲ್ಲಿ ಬಡ ಮಹಿಳೆಯರು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದಾರೆ. ಸೌದೆಯ ಹೊಗೆ ಮಹಿಳೆಯರ ಕಣ್ಣುಗಳಲ್ಲಿ ನೀರು ಸುರಿಸುತ್ತಿದೆ. ಈ ಬಡ ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಕೊಡಬೇಕಿದೆ. ಉಳ್ಳವರು ತಾವು ಪಡೆಯುತ್ತಿರುವ ಅಡುಗೆ ಅನಿಲದ ಸಬ್ಸಿಡಿಯನ್ನು ಬಿಟ್ಟುಕೊಡಿ” ಇದು ಮೋದಿ ಸರ್ಕಾರದ ‘ಗಿವ್ ಇಟ್ ಅಪ್’ ಎಂಬ ಕರೆಗೆ ಸ್ಪಂದಿಸುವಂತೆ ‘ಉಳ್ಳವರಿಗೆ’(?) ಮಾಡಿದ ಕರೆಯ ಒಂದು ಜಾಹಿರಾತು. ಪ್ರಧಾನ್ ಮಂತ್ರಿ ಉಜ್ವಲ ಯೋಜನೆ(PMUY) ಯ ಜಾಹಿರಾತು ಕೂಡ ಇದೇ ಆಗಿತ್ತು. ಪೆಟ್ರೋಲ್ ಬಂಕ್ ಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಕಲಾಗಿದ್ದ ದೊಡ್ಡ ದೊಡ್ಡ ಜಾಹಿರಾತು ಫಲಕಗಳಲ್ಲಿ, ಸೌದೆ ಒಲೆಯ ಮುಂದೆ ಕುಳಿತು ಹೊಗೆಯಿಂದ ಕಣ್ಣಿರು ಸುರಿಸುತ್ತಿರುವ ಹಳ್ಳಿ ಮಹಿಳೆ ಮತ್ತು ಪ್ರಧಾನಿ ಮೋದಿ ಆ ಮಹಿಳೆಯ ಕಡೆ ಬೆರಳು ತೋರಿಸುವ ಚಿತ್ರವೊಂದನ್ನು ಹಾಕಲಾಗಿತ್ತು.
ಉಜ್ವಲ ಯೋಜನೆಯು ಒಂದನೇ ಮೇ 2016 ರಂದು ಪ್ರಾರಂಭವಾಯ್ತು. ಸರ್ಕಾರದ ಮಾಹಿತಿಯಂತೆ ಈ ಯೋಜನೆಯ ಮೂಲಕ 2023ರ ಜನವರಿ 30 ವರೆಗೆ 9.58 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ(ಬಿಪಿಎಲ್)ಗಳಿಗೆ ಉಚಿತ ಅಡುಗೆ ಅನಿಲ (LPG) ಸಂಪರ್ಕ ನೀಡಲಾಗಿದೆ.
ಉಚಿತ ಸಂಪರ್ಕವಷ್ಟೆ, ಉಚಿತ ಅನಿಲವಲ್ಲ
PMUY ಸಂಪರ್ಕಗಳಿಗೆ 14.2 ಕೆಜಿ ಸಿಲಿಂಡರ್ ಗೆ ರೂ. 1600 ಅಥವಾ 5 ಕೆಜಿ ಸಿಲಿಂಡರ್ ಗೆ ರೂ. 1150 ನಗದು ಸಹಾಯವನ್ನು ಭಾರತ ಸರ್ಕಾರ ಒದಗಿಸಿದೆ. (ಸಿಲಿಂಡರಿನ ಭದ್ರತಾ ಠೇವಣಿ – ರೂ. 14.2 ಕೆಜಿ ಸಿಲಿಂಡರಿಗೆ 1250/ ರೂ. 5 ಕೆಜಿ ಸಿಲಿಂಡರಿಗೆ ರೂ. 800, ಒತ್ತಡ ನಿಯಂತ್ರಕ – ರೂ. 150, ಎಲ್ಪಿಜಿ ಹೋಸ್ – ರೂ. 100, ದೇಶೀಯ ಅನಿಲ ಗ್ರಾಹಕ ಕಾರ್ಡ್ – ರೂ. 25 ಮತ್ತು ತಪಾಸಣೆ/ ಸ್ಥಾಪನೆ/ ಪ್ರದರ್ಶನ ಶುಲ್ಕಗಳು – ರೂ. 75) ಇದರ ಜೊತೆಗೆ ಕೆಲವು ರಾಜ್ಯ ಸರ್ಕಾರಗಳು ಮತ್ತು ಕೆಲವು ಸಂಘ ಸಂಸ್ಥೆಗಳು ಉಜ್ವಲ ಫಲಾನುಭವಿಗಳಿಗೆ ಒಮ್ಮೆ ಮಾತ್ರ ಮೊದಲ LPG ರೀಫಿಲ್ ಮತ್ತು ಸ್ಟವ್ ನೀಡಿವೆ.
ಉಜ್ವಲ ಯೋಜನೆ ಅಡಿಯಲ್ಲಿ, ಮೋದಿ ಹೊಗೆರಹಿತ ಅಡುಗೆ ಒಲೆಗಳನ್ನು ಅಭಿವೃದ್ಧಿಪಡಿಸಿದರು, ಗ್ಯಾಸ್ ಸಿಲಿಂಡರ ಗಳ ಬಳಕೆ ಮಾಡುವಂತೆ ಮಾಡುವ ಮೂಲಕ ದೀರ್ಘಕಾಲದ ಉಸಿರಾಟದ ಸಮಸ್ಯೆಗಳಿಂದ ಕೋಟಿಗಟ್ಟಲೆ ಮಹಿಳೆಯರನ್ನು ರಕ್ಷಿಸಿದರು, ಎಂಬಿತ್ಯಾದಿ ಹೊಗಳಿಕೆಗಳು ಇಂದಿಗೂ ಕೇಳಿಬರುತ್ತವೆ. ಗ್ರಾಮೀಣ ಭಾಗದ ಬಡ ಮಹಿಳೆಯರ ಬಗೆಗಿನ ಮೋದಿಯವರ ಕಾಳಜಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತದೆ. ನಂತರ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ.
ಮೊದಲಿಗೆ ಅವರು ಉಳ್ಳವರಿಗೇಕೆ ಸಬ್ಸಿಡಿ ಎನ್ನುತ್ತ ‘ಬಿಟ್ಟು ಕೊಡಿ’ (Give it up) ಎಂದರು. ನಂತರ ‘ಸರ್ಕಾರಿ ನೌಕರರಿಗೆ ಸಬ್ಸಿಡಿ ಏಕೆ’ ಎಂದರು. ಆ ನಂತರ ಆದಾಯ ತೆರಿಗೆ ಕಟ್ಟುವವರಿಗೆ ಸಬ್ಸಿಡಿ ಇಲ್ಲ ಎಂದರು. ಕಡೆಗೊಮ್ಮೆ, ಕೊರೋನಾ ಸಾಂಕ್ರಾಮಿಕ ಬಂದು, ಲಾಕ್ ಡೌನ್ ಘೋಷಣೆ ಮಾಡಿ, ಯಾರೂ ಮನೆಯಿಂದ ಹೊರಬರಲಾಗದ ಸಮಯದಲ್ಲಿ ಎಲ್ಲರಿಗೂ ಅಡುಗೆ ಅನಿಲದ ಸಬ್ಸಿಡಿ ಸ್ಥಗಿತ ಮಾಡಿದರು. ನಂತರ ಅನಿಲದ ಬೆಲೆ ಹೆಚ್ಚಿಸುತ್ತಾ ಹೋದರು. ಅಂದು ಗೃಹಬಳಕೆಯ ಅಡುಗೆ ಅನಿಲದ ಸಿಲಂಡರ್ ಗೆ 450 ರೂ. ಇದ್ದುದು ಇಂದು 920 ರೂ ಇದೆ. ಇದು 1150 ರೂ.ವರೆಗೂ ಏರಿಕೆಯಾಗಿತ್ತು. ಇಷ್ಟು ದುಬಾರಿ ಬೆಲೆ ಕೊಟ್ಟು ಅನಿಲ ಖರೀದಿಸಲಾಗದ ಹಳ್ಳಿಗಳ ಬಡ ಮಹಿಳೆಯರು ಮತ್ತೆ ಸೌದೆ ಒಲೆಯತ್ತ ಮುಖಮಾಡಿದ್ದಾರೆ. ಮತ್ತೆ ಹೊಗೆಯಿಂದ ಕಣ್ಣೀರು ಸುರಿಸುತ್ತಿದ್ದಾರೆ. ಆದರೂ, ಅಂದು ಮಹಿಳೆಯರ ಕಣ್ಣೀರಿಗೆ ಹೃಧಯ ಕರಗಿದವರಂತೆ ನಟಿಸಿದ ನರೇಂದ್ರ ಮೋದಿ ಇಂದು ಈ ಮಹಿಳೆಯರತ್ತ ತಿರುಗಿಯೂ ನೋಡುತ್ತಿಲ್ಲ.
ರೀಫಿಲ್ ಮಾಡಲಾಗದ 92 ಲಕ್ಷ ಕುಟುಂಬಗಳು
ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ ಮಹಿಳೆಯರಿಗೆ ವಿತರಿಸಲಾದ ಎಲ್‌ಪಿಜಿ ಸಂಪರ್ಕಗಳು ದೂಳು ಹಿಡಿಯುತ್ತಿವೆ. ಎಲ್ ಪಿಜಿ ಬೆಲೆ ಹೆಚ್ಚಿರುವುದರಿಂದ ಫಲಾನುಭವಿಗಳಿಗೆ ಸಿಲಿಂಡರ್ ತುಂಬಲು ಸಾಧ್ಯವಾಗುತ್ತಿಲ್ಲ. ಇದನ್ನು ಕೇಂದ್ರವೇ ಒಪ್ಪಿಕೊಂಡಿದೆ.
2021-22 ರಲ್ಲಿ 92 ಲಕ್ಷ ಗ್ರಾಹಕರು ಯಾವುದೇ ಮರುಪೂರಣವನ್ನು ತೆಗೆದುಕೊಂಡಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ರಾಜ್ಯ ಸಚಿವ ರಾಮೇಶ್ವರ್ ತೇಲಿ ಅವರು ಆಗಸ್ಟ್ 1, 2022 ರಂದು ರಾಜ್ಯಸಭೆಗೆ ತಿಳಿಸಿದರು.
PMUY ಯ 9.34 ಕೋಟಿ ಫಲಾನುಭವಿಗಳಲ್ಲಿ 1.8 ಕೋಟಿ ಗ್ರಾಹಕರು ಕೇವಲ ವರ್ಷದಲ್ಲಿ ಒಮ್ಮೆ ಮಾತ್ರ ಮರುಪೂರಣವನ್ನು ತೆಗೆದುಕೊಂಡಿದ್ದಾರೆ ಎಂದು ಸಂಸತ್ತಿನಲ್ಲಿ ರಾಜ್ಯಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಮೋದ್ ತಿವಾರಿ ಅವರ ಪ್ರಶ್ನೆಗೆ ತೇಲಿ ಅವರು ಈ ಉತ್ತರ ನೀಡಿದ್ದಾರೆ.
ಪಿಎಂಯುವೈ ಯೋಜನೆಯ ಈ ಬಡ ಕುಟುಂಬಗಳನ್ನು ಎಲ್‌ಪಿಜಿ ಬಳಕೆಗೆ ಪ್ರೋತ್ಸಾಯಿಸಲು ಕೇಂದ್ರ ಸರ್ಕಾರ 2022-23ಕ್ಕೆ 12 ಸಿಲಿಂಡರ್ ಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ನೀಡುವುದಾಗಿ ಘೋಷಿಸಿದೆಯಾದರೂ, ಈ ಅಲ್ಪ ಪ್ರಮಾಣದ ಸಬ್ಸಿಡಿ ಪಡೆದರೂ ಸಹ, 14.2 ಕೆಜಿ ಗ್ಯಾಸ್ ಸಿಲಿಂಡರ್ ಮುರುತುಂಬಿಸಲು ಅಂದಾಜು 720 ರೂ ಪಾವತಿ ಮಾಡಬೇಕಾಗುತ್ತದೆ. ಈ ದರ 10 ವರ್ಷಗಳ ಹಿಂದಿನ ದರಕ್ಕಿಂತ ಹೆಚ್ಚೇ ಇರುತ್ತದೆ.
ಇದು ಉಜ್ವಲ ಯೋಜನೆಯ ಗ್ರಾಹಕರ ಕಥೆಯಾದರೆ, 2021-22ರಲ್ಲಿ ಒಟ್ಟು 30.53 ಕೋಟಿ ಸಕ್ರಿಯ ದೇಶೀಯ ಗ್ರಾಹಕರಲ್ಲಿ 2.11 ಕೋಟಿ ಜನರು ಯಾವುದೇ ಮರುಪೂರಣವನ್ನು ತೆಗೆದುಕೊಳ್ಳಲಿಲ್ಲ ಮತ್ತು 2.91 ಕೋಟಿ ಜನರು ಕೇವಲ ಒಂದು ಮರುಪೂರಣವನ್ನು ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು.
ಎಲ್ಲವೂ ವ್ಯಾಪಾರಿ ಬುದ್ದಿ
ಯಾವುದೇ ಒಂದು ಖಾಸಗಿ ಕಂಪನಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವು ಬಗೆಯ ಪ್ರಾರಂಭಿಕ ಕೊಡುಗೆ ನೀಡುತ್ತವೆ. ಉದಾಹರಣೆಗೆ, ಟ್ಯಾಕ್ಸಿ ಸೇವಾ ಕಂಪನಿಯೊಂದು ‘ಮೊದಲ ಪ್ರಯಾಣ ಉಚಿತ’, ‘ರಿಯಾಯಿತಿ ದರದಲ್ಲಿ ಪ್ರಯಾಣ’, ‘ಮೊದಲ ಬಾರಿಗೆ ನಿಮ್ಮ ಮೊಬೈಲ್ ನಲ್ಲಿ ಸಂಸ್ಥೆಯ ಆಪ್ ಡೌನ್ ಮಾಡಿಕೊಂಡರೆ 200 ರೂ. ಕೊಡುಗೆ’… ಹೀಗೆ ಹಲವು ಆಮಿಷಗಳನ್ನು ತೋರಿ ಗ್ರಾಹಕರನ್ನು ತಮ್ಮೆಡೆ ಸೆಳೆಯುವ ಪ್ರಯತ್ನ ಮಾಡಿತ್ತು.
ಉಚಿತ LPG ಸಂಪರ್ಕ ಎಂಬ ಉಜ್ವಲ ಯೋಜನೆಯೂ ಒಂದು ವ್ಯಾಪಾರಿ ತಂತ್ರದಂತಿದೆ. ಮುಕ್ತ ಆರ್ಥಿಕ ನೀತಿಗಳ ಸಂಪೂರ್ಣ ಜಾರಿಗಾಗಿ ಜನಸಾಮಾನ್ಯರು ಬಳಕೆ ಮಾಡುತ್ತಿರುವ ಸರಕುಗಳಿಗೆ ಸರ್ಕಾರ ನೀಡುತ್ತಿರುವ ಎಲ್ಲಾ ಬಗೆಯ ರಿಯಾಯಿತಿಗಳನ್ನು ಹಿಂಪಡೆಯಬೇಕು. ನಂತರ ಆ ಸರಕುಗಳನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು. ಆ ಸರಕುಗಳ ಉತ್ಪಾದನೆ, ಸಂಸ್ಕರಣೆ ಮತ್ತು ಸರಭರಾಜು ಮಾಡುತ್ತಿರುವ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕು. ಈ ರೀತಿ ಮಾರಾಟ ಮಾಡುವ ಮುನ್ನ ಆ ಸಂಸ್ಥೆಗಳ ಗ್ರಾಹಕರ ಸಂಖ್ಯೆಯನ್ನು ಸಾಧ್ಯವಾದಷ್ಟು ಹೆಚ್ಚಳ ಮಾಡುವ ಕ್ರಮಗಳನ್ನು ಸರ್ಕಾರವೇ ತೆಗೆದುಕೊಳ್ಳಬೇಕು. ಸಾಧ್ಯವಾದಷ್ಟು ಬೆಲೆ ಹೆಚ್ಚಳ ಮಾಡಬೇಕು. ಇದರ ಒಂದು ಪ್ರಯತ್ನವೇ ಅಡುಗೆ ಅನಿಲ ಬಳಕೆ ಮಾಡದ ಕೋಟ್ಯಾಂತರ ಕುಟುಂಬಗಳನ್ನು ಅನಿಲ ಕಂಪನಿಗಳ ಗ್ರಾಹಕರನ್ನಾಗಿ ಮಾಡುವುದಾಗಿದೆ. ಗ್ರಾಹಕರನ್ನು ಸೆಳೆಯುವುದಕ್ಕಾಗಿ ಸರ್ಕಾರವೇ ಸಹಸ್ರಾರು ಕೋಟಿ ರೂ. ಸಾರ್ವಜನಿಕರ ಹಣ ವೆಚ್ಚ ಮಾಡಿ, ಗ್ರಾಹಕರಿಗೆ ಒಂದಷ್ಟು ರಿಯಾಯಿತಿ ನೀಡಿ, ಇದರ ಜಾಹಿರಾತಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದೆ. ಜೊತೆಗೆ ಅನಿಲದ ಬೆಲೆಯನ್ನು ನಿರಂತವಾಗಿ ಹೆಚ್ಚಿಸಲಾಗುತ್ತಿದೆ. ಪೆಟ್ರೋಲಿಯಂ ಪದಾರ್ಥಗಳ ಮೇಲಿನ ಬೆಲೆ ನಿರ್ಧಾರವನ್ನು ಪೆಟ್ರೋಲಿಯಂ ಕಂಪನಿಗಳಿಗೆ ಬಿಟ್ಟುಕೊಡಲಾಗಿದೆ.
ಮುಕ್ತ ಆರ್ಥಿಕ ನೀತಿ ಜಾರಿಯ ಮುಂದುವರಿದ ಭಾಗವಾಗಿ ಲಾಭದಾಯಕವಾಗಿ ನಡೆಯುತ್ತಿರುವ ಮತ್ತು ಸರ್ಕಾರಕ್ಕೆ ಆದಾಯ ತರುತ್ತಿರುವ ಬಿಪಿಸಿಎಲ್ ಸಂಸ್ಥೆಯನ್ನು ಮೋದಿ ಸರ್ಕಾರ ಮಾರಾಟ ಮಾಡುವುದಾಗಿ ಹೇಳಿದೆ. ಪೆಟ್ರೋಲಿಯಂ ಸಂಸ್ಥೆಗಳ ಷೇರುಗಳನ್ನು ಪ್ರತಿ ವರ್ಷ ಮಾರಾಟ ಮಾಡತೊಡಗಿದೆ. ಆ ಮೂಲಕ ಸರ್ಕಾರದ ಬಂಡವಾಳವನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಿದೆ. ಈಗಾಗಲೇ ಬೆಲೆ ನಿಗದಿಯ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ಹಿಂಪಡೆದು, ಬೆಲೆ ನಿಗದಿಪಡಿಸುವ ಅಧಿಕಾರವನ್ನು ತೈಲ ಕಂಪನಿಗಳಿಗೆ ಬಿಟ್ಟುಕೊಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದರೂ ಈ ಕಂಪನಿಗಳು ಅನಿಲದ ಬೆಲೆ ಕಡಿಮೆ ಮಾಡುತ್ತಿಲ್ಲ. ನಮ್ಮದೇ ದೇಶದಲ್ಲಿ ಉತ್ಪಾದನೆ ಮಾಡುವ ಅನಿಲಕ್ಕೂ ಅಂತರಾಷ್ಟ್ರೀಯ ಮಟ್ಟದ ದರ ನಿಗದಿ ಮಾಡಿ ಮಾರತೊಡಗಿದ್ದಾರೆ. ಆಳುವವರು ಈ ಬಗ್ಗೆ ಸೊಲ್ಲೆತ್ತುವುದಿಲ್ಲ. ಅನಿಲ ಉತ್ಪಾದನೆ, ಸಂಸ್ಕರಣೆ ಮತ್ತು ಸರಭರಾಜು ಸಂಪೂರ್ಣವಾಗಿ ಖಾಸಗಿ ಬಂಡವಾಳಗಾರರ ಒಡೆತನಕ್ಕೆ ಹೋದರೆ, ಅವರು ಮನಸೋ ಇಚ್ಚೆ ಬೆಲೆ ನಿಗದಿ ಮಾಡಿ ಜನಸಾಮಾನ್ಯರನ್ನು ಸುಲಿಗೆ ಮಾಡುವುದಂತೂ ಖಂಡಿತ.
ನಿಮ್ಮ ಟಿಪ್ಪಣಿ ಬರೆಯಿರಿ