ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ

ಹಾಲು ಕರೆಯಲು ಪಾತ್ರೆ ಬಂತು, ಹಾಲು ಕೊಡುವ ಹಸುವೇ ಇಲ್ಲ!

‘ಭಾರತದ ಕಟ್ಟಕಡೆಯ ನಾಗರಿಕನಿಗೂ ಆರ್ಥಿಕ ಸೇವೆ ಸಿಗುವಂತಾಗಲು ಮತ್ತು ದೇಶದ ಆರ್ಥಿಕ ವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಸಲುವಾಗಿ’ ಎಂಬ ಘೋಷಣೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ಯನ್ನು ಆಗಸ್ಟ್ 15, 2014 ರಂದು  ಘೋಷಿಸಿದರು, ಆಗಸ್ಟ್ 24, 2014 ರಂದು ಇದು ಜಾರಿಗೆ ಬಂತು.

ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತರುವ ಮೂಲಕ ದೇಶದ ಎಲ್ಲಾ ಬಡವರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಿರುವುದೇ ಮೋದಿ ಸರ್ಕಾರದ ಸಾಧನೆ ಎಂದು ಬಿಜೆಪಿ ಮತ್ತು ಸಂಘಪರಿವಾರದ ಅಂಗ ಸಂಸ್ಥೆಗಳು ಪ್ರಚಾರ ಮಾಡತೊಡಗಿವೆ. ಈ ಯೋಜನೆಗೆ ಜಾಹಿರಾತು ನೀಡಲು ಕೋಟ್ಯಾಂತರ ರೂ. ವೆಚ್ಚ ಮಾಡಿದ್ದನ್ನು ಹೊರತು ಪಡಿಸಿದರೆ, ಕೇಂದ್ರ ಸರ್ಕಾರ ಈ ಯೋಜನೆಗಾಗಿ ಬೇರಾವುದೇ ಹಣ ವೆಚ್ಚಮಾಡಲಿಲ್ಲ. ಯಾವುದೇ ಠೇವಣಿ ಇಡದಿದ್ದರೂ ಖಾತೆ ತೆರೆಯಲು ಅವಕಾಶ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡುವ ಮೂಲಕ ಬಡವರೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡಿದ್ದೇ ಕೇಂದ್ರ ಸರ್ಕಾರದ ಸಾಧನೆ!!

ಈ ಯೋಜನೆಯ ಉದ್ದೇಶವೇನು?

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಇಂತಹ ಕ್ರಮ ಸ್ವಾಗತಾರ್ಹವಾದರೂ, ತಾನು ಕೇಂದ್ರದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಕೇವಲ ಮೂರು ತಿಂಗಳು ತುಂಬುವ ಮುನ್ನವೇ ಆತುರಾತುರವಾಗಿ ಇಂತಹ ಯೋಜನೆ ತರುವ ಉದ್ದೇಶವೇನು? ನವ ಉದಾರವಾದಿ ನೀತಿಗಳನ್ನು ಇನ್ನಷ್ಟು ವೇಗವಾಗಿ ಜಾರಿಗೊಳಿಸಲು, ಇದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಪ್ರಯತ್ನಗಳ ಭಾಗವಾಗಿ ಈ ಜನ್ ಧನ್ ಯೋಜನೆ ಜಾರಿಗೆ ತರಲಾಗಿದೆ ಎಂಬುದಂತೂ ಸತ್ಯ.

ಗ್ಯಾಟ್ ಒಪ್ಪಂದ 

1991ರಲ್ಲಿ ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದ ಅಂದಿನ ಕಾಂಗ್ರೆಸ್ ಸರ್ಕಾರ, ವಿಶ್ವ ವಾಣಿಜ್ಯ ಸಂಸ್ಥೆಯ (WTO) ಜೊತೆ ಮಾಡಿಕೊಂಡ ಗ್ಯಾಟ್ (GATT- General Agreement on Tariffs and Trade- ಸುಂಕಗಳು ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದ) ಷರತ್ತಿನ ಪ್ರಕಾರ, ಸರ್ಕಾರ ಜನಸಾಮಾನ್ಯರಿಗೆ ವಿವಿಧ ರೂಪದಲ್ಲಿ ನೀಡುತ್ತಿರುವ ಸಬ್ಸಿಡಿಗಳನ್ನು (ರಿಯಾಯಿತಿಗಳನ್ನು) ಸಂಪೂರ್ಣವಾಗಿ ಹಿಂಪಡೆದು, ಎಲ್ಲಾ ಸರಕುಗಳನ್ನು ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು. ಇದರಂತೆ, ಪೆಟ್ರೋಲ್, ಡೀಸಲ್, ಸೀಮೆಎಣ್ಣೆ, ಅಡುಗೆ ಅನಿಲ, ಪಡಿತರ ವ್ಯವಸ್ಥೆ ಮೂಲಕ ನೀಡುತ್ತಿರುವ ಆಹಾರ ಧಾನ್ಯಗಳು ಮತ್ತು ಇತರೆ ಅಗತ್ಯ ವಸ್ತುಗಳು, ಕೃಷಿಗೆ ಬಳಕೆ ಮಾಡುವ ರಸಗೊಬ್ಬರ, ಕೀಟನಾಶಕಗಳು, ಬಿತ್ತನೆ ಬೀಜ, ಕೃಷಿ ಪಂಪ್ ಸೆಟ್ ಗೆ ಬಳಸುವ ಉಚಿತ ವಿದ್ಯುತ್, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸೇರಿದಂತೆ ಬಡವರಿಗೆ ಕೊಡುತ್ತಿರುವ ಉಚಿತ ವಿದ್ಯುತ್ ಬಳಕೆಗೆ, ಸಾರ್ವಜನಿಕ ಶಿಕ್ಷಣಕ್ಕೆ ಸರ್ಕಾರ ಮಾಡುತ್ತಿರುವ ವೆಚ್ಚ, …. ಹೀಗೆ ಎಲ್ಲಾ ರೀತಿಯ ಸಬ್ಸಿಡಿ/ಅನುದಾನಗಳನ್ನು ಹಿಂಪಡೆದು, ಈ ಎಲ್ಲವನ್ನೂ ಮುಕ್ತ ಮಾರುಕಟ್ಟೆಗೆ ತೆರೆದಿಡಬೇಕು. ಎಲ್ಲಾ ವಲಯಗಳನ್ನೂ ಸ್ವದೇಶಿ ಮತ್ತು ವಿದೇಶಿ ಖಾಸಗಿ ಬಂಡವಾಳಗಾರರ ವ್ಯವಹಾರಕ್ಕೆ ಮುಕ್ತವಾಗಿ ತೆರೆದಿಡಬೇಕು. ಬಡವರು, ಬಲ್ಲಿದರೆನ್ನದೆ ಎಲ್ಲರೂ ಮುಕ್ತ ಮಾರುಕಟ್ಟೆಯಲ್ಲಿ ಇವುಗಳನ್ನು ಖರೀದಿಸುವಂತಾಗಬೇಕು. ಇದು ಒಕ್ಕೂಟ ಸರ್ಕಾರದ ಗುರಿ.

ಒಮ್ಮೇಲೆ ಈ ಎಲ್ಲಾ ಸಬ್ಸಿಡಿಗಳನ್ನು ಹಿಂಪಡೆಯಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಜನತೆ ಸರ್ಕಾರದ ವಿರುದ್ದ ತಿರುಗಿಬೀಳುತ್ತಾರೆ. ಇದು ಚುನಾವಣೆಯಲ್ಲೂ ಪ್ರತಿಫಲನಗೊಂಡು ಆಳುವ ಪಕ್ಷಗಳು ಸೋಲು ಅನುಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ, ಕಾಲ ಕಾಲಕ್ಕೆ ಹಲವು ರೀತಿಯ ಷರತ್ತುಗಳನ್ನು ಹೇರುವ ಮೂಲಕ, ಸಬ್ಸಿಡಿ ಪಡೆಯುತ್ತಿರುವ ಜನರಲ್ಲಿ ಒಂದಷ್ಟು ‘ಉಳ್ಳವರನ್ನು(?)’ ಮತ್ತು ಇಂತಹ ಷರತ್ತುಗಳನ್ನು ಪೂರೈಸಲಾಗದ, ಹೊಸ ಹೊಸ ಕಂಪ್ಯೂಟರ್ ತಂತ್ರಜ್ಞಾನದ ಸೌಲಭ್ಯ ಪಡೆಯಲಾಗದ ಅಸಹಾಯಕ ಬಡ ಕುಟುಂಬಗಳನ್ನು ಇದರ ಲಾಭ ಪಡೆಯದಂತೆ ಹೊರ ಹಾಕುತ್ತ, ಸರ್ಕಾರದ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿತಗೊಳಿಸುತ್ತ, ಸ್ವಲ್ಪ ಸ್ವಲ್ಪವೇ ಹಿಂಪಡೆಯುತ್ತ, ಕ್ರಮೇಣ ಸಂಪೂರ್ಣವಾಗಿ ನಿಲ್ಲಿಸಬೇಕು.  ಈ ಹಾದಿಯ ಮೂಲಕ ಒಕ್ಕೂಟ ಸರ್ಕಾರದ ಮುಕ್ತ ಆರ್ಥಿಕ ನೀತಿ ಜಾರಿಯ ತಮ್ಮ ಗುರಿ ತಲುಪಬೇಕು.

‘ನೇರ ನಗದು ಯೋಜನೆ’

ಈ ರೀತಿ ಸಬ್ಸಿಡಿ ಹಿಂಪಡೆಯಲು ಒಕ್ಕೂಟ ಸರ್ಕಾರ ಮಾಡಿದ ತಂತ್ರಗಳಲ್ಲಿ ಸಬ್ಸಿಡಿ ಪಡೆಯತ್ತಿರುವ ಫಲಾನುಭವಿಗಳ ಖಾತೆಗೆ ‘ನೇರ ನಗದು ಯೋಜನೆ’ (DBT) ಒಂದು. ಫಲಾನುಭವಿಗಳು ತಾವು ಪಡಿತರದ ಮೂಲಕ ಪಡೆಯುತ್ತಿರುವ ಸರಕುಗಳನ್ನು ಮಾರುಕಟ್ಟೆ ದರ ಕೊಟ್ಟು ಖರೀದಿಸಬೇಕು. ನಂತರ ಸರ್ಕಾರ ಕೊಡುವ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ತುಂಬಲಾಗುತ್ತದೆ.  ಈ ಯೋಜನೆ ಜಾರಿಗೊಳಿಸಬೇಕಾದರೆ, ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿರಲೇ ಬೇಕು. ಇದಕ್ಕೆ ‘ಆಧಾರ್’ ಕಾರ್ಡ್ ಅವಶ್ಯಕತೆ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು. ಇವೆಲ್ಲವೂ ಇದ್ದಾಗಲೇ ಫಲಾನುಭವಿಗಳ ಖಾತೆಗೆ ನೇರ ನಗದು ಯೋಜನೆಯ ಮೂಲಕ ಸಬ್ಸಿಡಿ ಹಣವನ್ನು ತುಂಬಲು ಸಾಧ್ಯ.

ಜನ್ ಧನ್ ಯೋಜನೆ ರೂಪುಗೊಂಡಿದ್ದು

ಜನ್ ಯೋಜನೆ ರೂಪುಗೊಂಡ ಸಂದರ್ಭದಲ್ಲಿ ಭಾರತದ ಬಹಳಷ್ಟು ಜನರು (ಫಲಾನುಭವಿಗಳು) ಬ್ಯಾಂಕ್ ಖಾತೆ ಹೊಂದಿರಲಿಲ್ಲ. ಜನ್ ಧನ್ ಯೋಜನೆಗೆ ಆಗಸ್ಟ್ 2022ರಲ್ಲಿ 8 ವರ್ಷ ತುಂಬಿದ ಸಂದರ್ಭದಲ್ಲಿ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಮಾಹಿತಿಗಳ ಪ್ರಕಾರ, ಜನ್ ಧನ್ ಯೋಜನೆಯಲ್ಲಿ 46 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಈ ಖಾತೆಗಳಲ್ಲಿ  1.74 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಠೇವಣಿ ಇಡಲಾಗಿದೆ.  ಸಚಿವರ ಈ ಮಾಹಿತಿಯ ಪ್ರಕಾರ, ಈ ಯೋಜನೆ ಜಾರಿಗೊಂಡ 2014 ಕ್ಕೂ ಮುನ್ನ ಭಾರತದ 46 ಕೋಟಿ ಜನರು ಬ್ಯಾಂಕ್ ಖಾತೆ ತೆರೆದಿರಲಿಲ್ಲ ಎಂಬುದು ತಿಳಿಯುತ್ತದೆ. ಇಷ್ಟು ದೊಡ್ಡ ಪ್ರಮಾಣದ ಫಲಾನುಭವಿಗಳನ್ನು ಹೊರಗಿಟ್ಟು ನೇರ ನಗದು ಯೋಜನೆ ಜಾರಿಗೊಳಿಸಲಾಗದು ಎಂದರಿತ ಮೋದಿ ಸರ್ಕಾರ, ಇವರೆಲ್ಲರನ್ನೂ ಒಳಗೊಳಿಸಬೇಕಾದರೆ ಎಲ್ಲರಿಗೂ ಬ್ಯಾಂಕ್ ಖಾತೆ ಇರಲೇಬೇಕು.  ಈ ಕಾರಣದಿಂದ ರೂಪಿಸಿ ಜಾರಿಗೆ ತಂದಿದ್ದೇ ‘ಪ್ರಧಾನ್ ಮಂತ್ರಿ ಜನ ಧನ್ ಯೋಜನೆ’.

ಆಮಿಷಗಳ ಮೂಲಕ …

ಕೋಟ್ಯಾಂತರ ಕಡುಬಡವರಿರುವ ಭಾರತದಲ್ಲಿ, ತಮ್ಮ ಜೀವನಕ್ಕೆ ಅವಶ್ಯಕವಾದ ಹಣ ಸಂಪಾದಿಸಲಾಗದ, ಹಣ ಉಳಿಸುವಷ್ಟೂ ಆದಾಯ ಇಲ್ಲದ, ಬ್ಯಾಂಕ್ ಖಾತೆಯ ಅವಶ್ಯಕತೆಯೇ ಇಲ್ಲದ, ಎಲ್ಲರನ್ನೂ ಬ್ಯಾಂಕ್ ಖಾತೆ ತೆರೆಯುವಂತೆ ಮಾಡುವುದೇಗೆ? ಇಂತಹ ಬಡವರನ್ನು ಬ್ಯಾಂಕ್ ಖಾತೆ ಮಾಡಿಸಿಕೊಳ್ಳುವಂತೆ ಹೇಳಿದರೆ ಅವರು ಇದರಲ್ಲಿ ಆಶಕ್ತಿ ತೋರಿಸಲಾರರು. ಇದಕ್ಕೂ ಹಿಂದೆ ಆಡಳಿತ ನಡೆಸಿದ ಯುಪಿಎ ಸರ್ಕಾರ, ಅಡುಗೆ ಅನಿಲದ ಮೇಲಿನ ಸಬ್ಸಿಡಿ ಹಣವನ್ನು ನೇರನಗದು ಮೂಲಕ ಫಲಾನುಭವಿಗಳ ಖಾತೆಗೆ ನಗದು ತುಂಬುವ ಪ್ರಯತ್ನವಾಗಿ ಮಾಡಿದ ಇಂತಹ ಪ್ರಯತ್ನ ಯಶಸ್ಸು ಕಾಣಲಿಲ್ಲ. ಈ ಕಾರಣದಿಂದ ಜನರನ್ನು ಬ್ಯಾಂಕ್ ಕಡೆಗೆ ಸೆಳೆಯಲು, ಜನ್ ಧನ್ ಯೋಜನೆ ಮೂಲಕ ಬ್ಯಾಂಕ್ ಖಾತೆ ತೆರೆದವರಿಗೆ ಮೋದಿ ಸರ್ಕಾರ ಹಲವು ಕೊಡುಗೆಗಳ ಘೋಷಣೆ ಮಾಡಿತು.

15 ಆಗಸ್ಟ್ 2014 ರಿಂದ 31 ಜನವರಿ 2015 ರ ನಡುವೆ ತೆರೆಯಲಾದ ಖಾತೆದಾರರಿಗೆ ರೂ 1,00,000 ವರೆಗಿನ ಅಪಘಾತ ವಿಮೆ, ರೂ 30,000 ಜೀವ ವಿಮೆ, ಅಸಂಘಟಿತ ವಲಯಕ್ಕೆ ಪಿಂಚಣಿ ಯೋಜನೆ, ರೂಪೇ ಡೆಬಿಟ್ ಕಾರ್ಡ್, ಹೀಗೆ ಸರ್ಕಾರ ಘೋಷಿಸಿದ ಕೊಡಗೆಗಳ ಜೊತೆಗೆ, ಆಳುವ ವರ್ಗದ ತುತ್ತೂರಿಗಳು (ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಂಘಪರಿವಾದವರು) ಜನರಲ್ಲಿ ಬಗೆಬಗೆಯ ಭರವಸೆ ಮೂಡಿಸಿದವು. ಮೋದಿ ಸರ್ಕಾರ ಜನ್ ಧನ್ ಖಾತೆಗೆ ಲಕ್ಷ ಲಕ್ಷ ಹಣ ಹಾಕುತ್ತದೆ, ಮನೆ ಇಲ್ಲದವರಿಗೆ ಮನೆ ಕೊಡುತ್ತದೆ, ಬಡ್ಡಿರಹಿತ ಸಾಲ ಸಿಗುತ್ತದೆ… ಇತ್ಯಾದಿ. ಇಂತಹ ಅಮಿಷಗಳನ್ನು ನಿಜವೆಂದೇ ನಂಬಿದ ಕೋಟ್ಯಾಂತರ ಜನರು, ಬ್ಯಾಂಕುಗಳ ಎದುರು ಸಾಲುಗಟ್ಟಿ ನಿಂತು ಜನ್ ಧನ್ ಯೋಜನೆಯ ಪ್ರಯೋಜನ ಪಡೆದು ಖಾತೆ ತೆರೆದರು.

“ಹಾಲು ಕರೆಯಲು ಪಾತ್ರೆ ಬಂತು, ಹಾಲು ಕೊಡುವ ಹಸುವೇ ಇಲ್ಲ” ಇದು ಜನ್ ಧನ್ ಯೋಜನೆ ಘೋಷಣೆ ದಿನದ ನನ್ನದೊಂದು ಫೇಸ್ಬುಕ್ ಪೋಸ್ಟ್. ಹಾಲು ಕೊಡುವ ಹಸು ಕೊಟ್ಟರೆ, ಹಾಲು ಕರೆಯುವ ಪಾತ್ರೆಯ ಅಗತ್ಯ ಇರುತ್ತದೆ. ಆಗ ಅವರು ಪಾತ್ರೆಯನ್ನು ಕೊಂಡುಕೊಳ್ಳುತ್ತಾರೆ. ಹಾಲು ಕರೆಯುವ ಹಸುವೇ ಇಲ್ಲದ ಮನೆಗೆ ಹಾಲು ಕರೆಯುವ ಪಾತ್ರೆ ಕೊಟ್ಟರೆ ಏನು ಪ್ರಯೋಜನ? ಅಂದರೆ, ದುಡಿಮೆ ಬಯಸುವ ಪ್ರತಿಯೊಬ್ಬರಿಗೂ ಉದ್ಯೋಗ ಸಿಗುವಂತಹ ಸನ್ನಿವೇಶ ಸೃಷ್ಟಿಸಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ಮಾಡಿ, ಜನರನ್ನು ಆರ್ಥಿಕವಾಗಿ ಸದೃಡರನ್ನಾಗಿ ಮಾಡಿದಾಗ, ತಮಗೆ ಬರುವ ಆದಾಯದಲ್ಲಿ ತಮ್ಮ ಜೀವನ ವೆಚ್ಚ ಕಳೆದು ಒಂದಷ್ಟು ಹಣ ಉಳಿತಾಯವಾಗುವಂತಾದರೆ, ತಾವೇ ಸ್ವ ಇಚ್ಚೆಯಿಂದ ಬ್ಯಾಂಕ್ ಖಾತೆ ತೆರೆಯಲು ಜನತೆ ಮುಂದಾಗುತ್ತಾರೆ. 46 ಲಕ್ಷ ಜನ್ ಧನ್ ಖಾತೆಗಳಲ್ಲಿ 1.74 ಲಕ್ಷ ಕೋಡಿ ರೂ.ಗಳಿಗೂ ಹೆಚ್ಚು ಹಣವನ್ನು ಠೇವಣಿ ಇಡಲಾಗಿದೆಯಾದರೂ, ಹಣ ಇಡಲಾಗದ ಕೋಟ್ಯಾಂತರ ಖಾತೆಗಲು ಇನ್ನೂ ಖಾಲಿಯಾಗಿಯೇ ಇವೆ. ಸರ್ಕಾರಕ್ಕೆ ಇವೆಲ್ಲವೂ ಮುಖ್ಯವಾಗುವುದಿಲ್ಲ. ಸರ್ಕಾರಕ್ಕೆ ಬೇಕಿರುವುದು ಮುಕ್ತ ಆರ್ಥಿಕ ನೀತಿಗಳ ಸಂಪೂರ್ಣ ಜಾರಿಯ ಗುರಿ ತಲುಪುವುದೊಂದೆ.

Is this your new site? Log in to activate admin features and dismiss this message
ಲಾಗಿನ್