ಏನಿದು ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ

ಸರ್ಕಾರದ ಅನುದಾನ ರೂ. 72 ಕೋಟಿ: ನಾಗರೀಕರಿಗಾದ ಲಾಭ 5,300 ಕೋಟಿ ರೂ.!!       

ಜನರ ಬಾಯಲ್ಲಿ ‘ಮೋದಿ ಔಷಧಿ ಕೇಂದ್ರ’ ಅಥವಾ ‘ಮೋದಿ ಮೆಡಿಕಲ್ ಸ್ಟೋರ್’ ಎಂದೇ ಕರೆಯಲ್ಪಡುವ ‘ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ’ ಯಾರಿಗೆ ಗೊತ್ತಿಲ್ಲ? ಮೋದಿ ಕಡಿಮೆ ಬೆಲೆಗೆ ಔಷಧಿ ದೊರಕುವಂತೆ ಮಾಡಿದ್ದಾರೆ, ಮೋದಿಯವರಿಂದಾಗಿ ನಾಗರಿಕರಿಗೆ ಔಷಧಿ ಖರೀಧಿಸುವ ವೆಚ್ಚ ಕಡಿಮೆಯಾಗಿದೆ ಎಂದೇ ಹಲವರು ಹೇಳುತ್ತಾರೆ. ಇದು ಬಡವರ ಮೇಲೆ ಮೋದಿಯವರಿಗಿರುವ ಕಾಳಜಿ ಎಂದೇ ಬಿಜೆಪಿ ನಾಯಕರು ಮತ್ತು ಸಂಘಪರಿವಾರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಈ ಯೋಜನೆಯನ್ನು 2008ರಲ್ಲೇ ರೂಪಿಸಿ ಜಾರಿಗೆ ತರಲಾಗಿದೆ. ಇದರ ಮುಂದುವರಿದ ಭಾಗವಾಗಿ ಯೋಜನೆಯನ್ನು ಒಂದಷ್ಟು ವಿಸ್ತರಣೆಗೊಳಿಸಲಾಗಿದೆ. ಈ ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡಲಾಗುತ್ತದೆ. ಜೆನೆರಿಕ್ ಔಷಧಿ ಎಂದರೇನೂ? ಜೆನೆರಿಕ್ ಔಷಧದ ಬೆಲೆ ಕಡಿಮೆ ಏಕೆ? ಇದರ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.

ಜನೌಷಧಿ ಕೇಂದ್ರಗಳ ಸ್ಥಾಪನೆಯಿಂದ ಕಡಿಮೆ ಬೆಲೆಗೆ ಒಂದಷ್ಟು ಜೆನೆರಿಕ್ ಔಷಧಿಗಳು ಸಿಗುವುದು ನಿಜ. ಇದರಿಂದ ನಾಗರಿಕರು ಖರೀದಿಸುವ ಔಷಧಿ ವೆಚ್ಚಗಳು ಕಡಿಮೆ ಆಗುವುದೂ ನಿಜ. ಇದನ್ನು ಮತ್ತಷ್ಟು ವಿಸ್ತಾರಗೊಳಿಸುವ ಅಗತ್ಯವೂ ಇದೆ. ಆದರೆ, ಜನೌಷಧಿ ಕೇಂದ್ರಗಳ ಮೂಲಕ ಮಾರಾಟ ಮಾಡುವ ಜೆನೆರಿಕ್ ಔಷಧಿಗಳಿಗೆ ಒಂದಷ್ಟು ತೆರಿಗೆ ಕಡಿತ ಮಾಡಿರುವುದನ್ನು ಹೊರತುಪಡಿಸಿ, ಜನೌಷಧಿ ಕೇಂದ್ರಗಳನ್ನು ತೆರೆಯಲು, ಅಂಗಡಿ ಮಾಲೀಕರಿಗೆ ಪ್ರೋತ್ಸಾಹ ಧನ ನೀಡಲು ಕೇಂದ್ರ ಸರ್ಕಾರ 2016–2017 ರ ಬಜೆಟ್‌ನಲ್ಲಿ ರೂ. 35 ಕೋಟಿ ಮೀಸಲಿಟ್ಟಿತ್ತು. ಜನೌಷಧಿಗಾಗಿ ಪ್ರತಿ ಬಜೆಟ್ ನಲ್ಲಿಯೂ ಒಂದಷ್ಟು ಹಣ ಮೀಸಲಿಡುವ ಒಕ್ಕೂಟ ಸರ್ಕಾರ 2020-21ರಲ್ಲಿ ರೂ. 68.50, 2021-22 ರಲ್ಲಿ ರೂ. 72.50 ಕೋಟಿ,  2022-23 ರಲ್ಲಿ ರೂ. 100 ಕೋಟಿ, 2023-24 ರಲ್ಲಿ ರೂ. 115 ಕೋಟಿ ಮಾತ್ರ ಮೀಸಲಿಟ್ಟಿದೆ. ಇದರಂತೆ ಕೇಂದ್ರ ಸರ್ಕಾರ ಈ ಯೋಜನೆಗೆ ಕಳೆದ ನಾಲ್ಕು ಬಜೆಟ್ ಅವಧಿಯಲ್ಲಿ ಇದಕ್ಕಾಗಿ ಮೀಸಲಿಟ್ಟ ಒಟ್ಟು ಅನುದಾನ ರೂ. 356 ಕೋಟಿ ಮಾತ್ರ. (ಮಾಹಿತಿ; ಒಕ್ಕೂಟ ಸರ್ಕಾರದ ಬಜೆಟ್ ಅಂಕಿ ಅಂಶ). ಆದರೆ, ನಾಗರೀಕರಿಗೆ  2021-22 ರ ಆರ್ಥಿಕ ವರ್ಷದಲ್ಲಿ 5,300 ಕೋಟಿ, ಒಟ್ಟಾರೆಯಾಗಿ ಕಳೆದ 8 ವರ್ಷಗಳಲ್ಲಿ ರೂ. 18,000 ಕೋಟಿ  ಉಳಿತಾಯವಾಗಿದೆ!!

 ‘ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ’ (PMJAY) ಎಂಬುದು ಸರ್ಕಾರ, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು (CPSU) ಮತ್ತು ಖಾಸಗಿ ವಲಯದ ಔಷಧಿ ಉತ್ಪಾದನಾ ಕಂಪನಿಗಳು, NGO ಸಂಘಗಳು, ಸಹಕಾರ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳನ್ನು ಒಳಗೊಂಡ ಸಾರ್ವಜನಿಕ ಯೋಜನೆ. ಅಂದರೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಕೈಗೆಟುಕುವ ಬೆಲೆಯಲ್ಲಿ ಬ್ರಾಂಡ್ ಇಲ್ಲದ, ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು (ಬ್ರಾಂಡೆಡ್ ಔಷಧಿಗಳಲ್ಲ ಎಂಬುದನ್ನು ಗಮನಿಸಿ) ಲಭ್ಯವಾಗುವಂತೆ ಮಾಡುವ ಒಂದು ಯೋಜನೆ. ಆದರೂ, ಇದನ್ನು ಮೋದಿ ಹೆಸರಿಗೆ ಗಂಟು ಹಾಕಲಾಗಿದೆ.

2008 ರಲ್ಲಿಯೇ ಜನೌಷಧಿ ಮಳಿಗೆ

ಜನೌಷಧಿ ಅಭಿಯಾನವು ನರೇಂದ್ರ ಮೋದಿ ಪ್ರಧಾನಿಯಾದ ನಂತರ ರೂಪಿಸಲಾದ ಯೋಜನೆಯಲ್ಲ. ಭಾರತ ಸರ್ಕಾರ ಪ್ರಾರಂಭಿಸಿದ ಜನೌಷಧಿ ಯೋಜನೆ (ಜೆಎಎಸ್) 2008 ರಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆಯಿಂದ ಪ್ರಾರಂಭವಾಯಿತು. 25 ನವೆಂಬರ್ 2008 ರಂದು ನವದೆಹಲಿಯ ಶಾಸ್ತ್ರಿ ಭವನದಲ್ಲಿ ಜನೌಷಧಿ ಮಳಿಗೆಯನ್ನು CPSU  (Central Public Sector Undertakings) ಗಳಾದ IDPL, HAL, BPC ಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಮೊದಲ ಜನೌಷಧಿಯನ್ನು ಪ್ರಾರಂಭಿಸುವುದರೊಂದಿಗೆ ಜನೌಷಧಿ ಅಭಿಯಾನವು ಪ್ರಾರಂಭವಾಯಿತು.

ಸೆಪ್ಟೆಂಬರ್ 2015ರಲ್ಲಿ, ‘ಜನ್ ಔಷಧಿ ಯೋಜನೆ’ಯನ್ನು ‘ಪ್ರಧಾನ ಮಂತ್ರಿ ಜನ್ ಔಷಧಿ ಯೋಜನೆ’ (PMJAY) ಎಂದು ಪರಿಷ್ಕರಿಸಲಾಯಿತು. ನವೆಂಬರ್, 2016ರಲ್ಲಿ ಇದನ್ನು ಮತ್ತೊಮ್ಮೆ “ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ” (PMBJP) ಎಂದು ಮರುನಾಮಕರಣ ಮಾಡಲಾಯಿತು.

ಜನೌಷಧಿ ಯೋಜನೆ ಪರಿಚಯ

ಔಷಧ ಬೆಲೆ ನಿಯಂತ್ರಣ ಆದೇಶ, 1995ರ ಅಡಿಯಲ್ಲಿ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆಗಳು ಮತ್ತು ಅವುಗಳ ಸೂತ್ರೀಕರಣಗಳನ್ನು ನಿಯಂತ್ರಿಸುತ್ತದೆ. ಎಲ್ಲರಿಗೂ, ವಿಶೇಷವಾಗಿ ಬಡವರು ಮತ್ತು ಹಿಂದುಳಿದವರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳ ಲಭ್ಯತೆ ಕಾಳಜಿಯ ಭಾಗವಾಗಿ, ಭಾರತ ಸರ್ಕಾರ ಔಷಧೀಯ ಇಲಾಖೆಯ ಮೂಲಕ “ಜನ್ ಔಷಧಿ” ಎಂಬ ಹೆಸರಿನ ಯೋಜನೆಯನ್ನು 2008ರಲ್ಲಿ ಜನೌಷಧಿ ಸ್ಟೋರ್ಸ್ (JAS) ಅನ್ನು ತೆರೆಯುವ ಮೂಲಕ ಪ್ರಾರಂಭಿಸಿತು. ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಇಲಾಖೆಯು ಈ ಉದ್ದೇಶಕ್ಕಾಗಿ ಕಾಲಕಾಲಕ್ಕೆ ಹಲವಾರು ನಿಯಂತ್ರಕ ಮತ್ತು ಹಣಕಾಸಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಭಾರತದ ಪ್ರತಿ ಜಿಲ್ಲೆಯಲ್ಲಿ ಜನೌಷಧಿ ಮಳಿಗೆಗಳನ್ನು ಸ್ಥಾಪಿಸುವುದು ಅಭಿಯಾನದ ಮೂಲ ಗುರಿಯಾಗಿತ್ತು. ಮಾರ್ಚ್ 2012ರ ಅಂತ್ಯಕ್ಕೆ 112 ಮಳಿಗೆಗಳನ್ನು ತೆರೆಯಲಾಗಿತ್ತು. ಪ್ರಚಾರದ ವೇಗವರ್ಧಿತ ಬೆಳವಣಿಗೆಯನ್ನು ಹೊಂದಲು, 2016-17ರ ಅಂತ್ಯದ ವೇಳೆಗೆ 3000 ಜನ ಔಷಧಿ ಮಳಿಗೆಗಳನ್ನು ತೆರೆಯುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಹೊಸ ವ್ಯಾಪಾರ ಯೋಜನೆಯನ್ನು ಆಗಸ್ಟ್ 2013 ರಲ್ಲಿ ಬಿಡುಗಡೆ ಮಾಡಲಾಯಿತು.

ಈ ಯೋಜನೆಯು, ಖಾಸಗಿ ಔಷಧೀಯ ಉದ್ಯಮದಿಂದ ಔಷಧಿಗಳ ಅಸಮರ್ಥನೀಯ ಬೆಲೆಗಳ ವಿರುದ್ಧ ಪ್ರಬಲವಾದ ಹಸ್ತಕ್ಷೇಪವನ್ನು ತೋರುತ್ತಿದೆ. ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ವಿಶೇಷ ವಿಭಾಗವಾದ ಬ್ಯೂರೋ ಆಫ್ ಫಾರ್ಮಾ ಸೆಕ್ಟರ್ ಅಂಡರ್‌ಟೇಕಿಂಗ್ಸ್ ಆಫ್ ಇಂಡಿಯಾ (BPSU)ಗೆ JAS ನ ಕಾರ್ಯಾಚರಣೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ವಹಿಸಿದೆ. ರಾಷ್ಟ್ರದಲ್ಲಿ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP)

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆ(Prime Minister Bharatiya Janaushadhi Paryojana) ಅಡಿಯಲ್ಲಿ, 30ನೇ ನವೆಂಬರ್ 2022 ರವರೆಗೆ, ದೇಶಾದ್ಯಂತ 8,916 PMBJ ಕೇಂದ್ರಗಳನ್ನು ತೆರೆಯಲಾಗಿದೆ. ಮಾರ್ಚ್ 2025ರ ವೇಳೆಗೆ ಈ ಕೇಂದ್ರಗಳನ್ನು 10,500ಕ್ಕೆ ಹೆಚ್ಚಿಸುವ ಗುರಿಯಿದೆ. ಜನೌಷಧಿ ಔಷಧಿಗಳ ಬೆಲೆಗಳು ಸಾಮಾನ್ಯವಾಗಿ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರಾಂಡೆಡ್ ಔಷಧಿಗಳಿಗಿಂತ ಶೇ. 50ರಿಂದ  90ರಷ್ಟು ಕಡಿಮೆ. ಉತ್ಪನ್ನಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಮಾತ್ರ ವಿಶ್ವ ಆರೋಗ್ಯ ಸಂಸ್ಥೆ – ಉತ್ತಮ ಉತ್ಪಾದನಾ ಅಭ್ಯಾಸಗಳು (WHO-GMP) ಪ್ರಮಾಣೀಕೃತ ಪೂರೈಕೆದಾರರಿಂದ ಔಷಧಿಗಳನ್ನು ಸಂಗ್ರಹಿಸಲಾಗುತ್ತದೆ. (ಮಾಹಿತಿ- 22, DEC 2022- PIB)

ಈ ಔಷಧ ಕೇಂದ್ರಗಳಲ್ಲಿ ಮಧುಮೇಹ ವಿರೋಧಿ, ಹೃದಯ ರಕ್ತನಾಳದ ಔಷಧಗಳು, ಕ್ಯಾನ್ಸರ್ ವಿರೋಧಿ, ನೋವು ನಿವಾರಕಗಳು ಮತ್ತು ಜ್ವರನಿವಾರಕಗಳು, ಆಂಟಿಪೈರೆಟಿಕ್ಸ್, ಜಠರ ವಿರೋಧಿಗಳು , ಜೀವಸತ್ವಗಳು, ಖನಿಜಗಳು ಮತ್ತು ಆಹಾರ ಪೂರಕಗಳು, ಉಷ್ಣವಲಯದ ಔಷಧಗಳು ಸೇರಿದಂತೆ 1,759 ಔಷಧಗಳು ಮತ್ತು 280 ಶಸ್ತ್ರಚಿಕಿತ್ಸಕಗಳನ್ನು ಒದಗಿಸಲಾಗುತ್ತಿದೆ.  ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI) 2021-22ರಲ್ಲಿ 893.56 ಕೋಟಿ ರೂ.ಗಳ ಔಷಧಿಗಳನ್ನು ಮಾರಾಟ ಮಾಡಿದೆ. ಇದು ನಾಗರಿಕರಿಗೆ ಸುಮಾರು 5,300 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಕಾರಣವಾಯಿತು. 2022-23ರಲ್ಲಿ 30 ನವೆಂಬರ್ 2022 ರವರೆಗೆ, PMBI 758 ಕೋಟಿ ರೂ.ಗಳ ಔಷಧಿಗಳನ್ನು ಮಾರಾಟ ಮಾಡಿದೆ. ಇದು ನಾಗರಿಕರಿಗೆ ಸರಿಸುಮಾರು 4,500 ಕೋಟಿ ರೂ.ಗಳ ಉಳಿತಾಯಕ್ಕೆ ಕಾರಣವಾಗಿದೆ. ಹೀಗಾಗಿ, ಕಳೆದ 8 ವರ್ಷಗಳಲ್ಲಿ ಈ ಪರಿಯೋಜನಾ ಅಡಿಯಲ್ಲಿ ಜನರಿಗೆ ಸುಮಾರು 18,000 ಕೋಟಿ ರೂ.ಗಳನ್ನು ಉಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ.

ನಾಗರಿಕರಿಗೆ ಉಳಿತಾಯ ಯಾವ ಲೆಕ್ಕದಲ್ಲಿ?

ಜನೌಷಧಿ ಪರಿಯೋಜನಾ ಯೋಜನೆಯಿಂದಾಗಿ ನಾಗರಿಕರಿಗೆ 2021-22ರ ಆರ್ಥಿಕ ವರ್ಷದಲ್ಲಿ 5,300 ಕೋಟಿ ರೂ. ಉಳಿತಾಯವಾಗಿದೆ ಎಂದು ಸರ್ಕಾರ ಅಂದಾಜು ಮಾಡಿದೆ. ಈ ಲೆಕ್ಕ ಹೇಗಿದೆಯೆಂದರೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವದಲ್ಲಿ ಬ್ರಾಂಡೆಡ್ ಔಷಧಿಗಳಂತೆಯೇ ಇರುವ ಜೆನೆರಿಕ್ ಔಷಧಿಗಳನ್ನು, ಬ್ರಾಂಡೆಡ್ ಔಷಧಿಗಳ ದುಬಾರಿ ಬೆಲೆಗೆ ಹೋಲಿಕೆ ಮಾಡಿ, ವ್ಯತ್ಯಾಸದ ಹಣವನ್ನು ನಾಗರೀಕರಿಗೆ ಲಾಭ ಎಂದು ಹೇಳಲಾಗುತ್ತದೆ.  ಉದಾ: ಯಾವುದೋ ಒಂದು ಬ್ರಾಂಡೆಡ್ ಔಷಧಿ ಬೆಲೆ 100 ರೂ. ಎಂದಿಟ್ಟುಕೊಳ್ಳೋಣ. ಜೆನೆರಿಕ್ ಔಷಧಿಯಲ್ಲಿ ಇದೇ ಔಷಧಿ 40 ರೂ.ಗೆ ಸಿಗುತ್ತದೆ ಎಂದಿಟ್ಟುಕೊಳ್ಳೋಣ. ಇದರ ವ್ಯತ್ಯಾಸ ಶೇ. 60. ಅಂದರೆ, ಔಷಧಿ ಖರೀದಿಸಿದ ನಾಗರೀಕರಿಗೆ 60 ರೂ. ಲಾಭ.  ಈ ಲೆಕ್ಕದಲ್ಲಿ ನಾಗರೀಕರಿಗೆ ಸಾವಿರಾರು ಕೋಟಿ ಉಳಿತಾಯವಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಇದರಿಂದ ಔಷಧಿ ಕಂಪನಿಗಳಿಗಾಗಲೀ, ಸರ್ಕಾರಕ್ಕಾಗಲೀ (ಜೆನೆರಿಕ್ ಔಷಧಿಗಳ ಮೇಲೆ ಅಲ್ಪ ಪ್ರಮಾಣದ ತೆರಿಗೆ ವಿನಾಯಿತಿ ಹೊರತುಪಡಿಸಿ) ಯಾವುದೇ ನಷ್ಟವಿಲ್ಲ ಎಂಬುದನ್ನು ಗಮನಿಸಬೇಕು. ಜೆನರಿಕ್ ಔಷಧಿ ಮಾರಾಟ ಹೆಚ್ಚಾಗಿದೆ ಮತ್ತು ಔಷಧಿ ಕಂಪನಿಗಳ ಉತ್ಪನ್ನಗಳ ಮಾರಾಟ ಮತ್ತು ಲಾಭ ಹೆಚ್ಚಾಗಿದೆ.

ಜೆನೆರಿಕ್ ಔಷಧದ ಬೆಲೆ ಕಡಿಮೆ ಏಕೆ?

ಜೆನೆರಿಕ್ ನಾಮಕರಣವು ಔಷಧದ ರಾಸಾಯನಿಕ ಹೆಸರು. ಔಷಧೀಯ ಕಂಪನಿಗಳು ಔಷಧಿಗಳಿಗೆ ಅದರ ಡೋಸೇಜ್ ರೂಪ, ಸಾಂದ್ರತೆ ಮತ್ತು ಪೇಟೆಂಟ್ ಅಂತಹ ಸೂತ್ರೀಕರಣಗಳಿಗೆ ಬ್ರಾಂಡ್ ಹೆಸರನ್ನು ನೀಡುತ್ತವೆ. ಕಂಪನಿಗಳು ತಮ್ಮ ಬ್ರ್ಯಾಂಡ್‌ಗಳನ್ನು ಜನಪ್ರಿಯಗೊಳಿಸಲು ಜಾಹೀರಾತು ನೀಡುತ್ತವೆ, ಸ್ವಂತ ಬ್ರಾಂಡ್ ಔಷಧದ ಮಾರಾಟವನ್ನು ಹೆಚ್ಚಿಸಲು ಪ್ರಿಸ್ಕ್ರಿಪ್ಷನ್ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತವೆ ಮತ್ತು ಬ್ರ್ಯಾಂಡ್ ಸ್ಥಾಪನೆಯಾದ ನಂತರ, ತಮ್ಮ ಬ್ರಾಂಡ್ ಔಷಧಿಗಳಿಗೆ ವಿಪರೀತ ಬೆಲೆ ನಿಗಧಿಪಡಿಸುವ ಮೂಲಕ ಹಣವನ್ನು ಗಳಿಸುತ್ತವೆ. ಬ್ರಾಂಡೆಡ್ ಆವೃತ್ತಿಗೆ ಹೋಲಿಸಿದರೆ, ಅದರ ಜೆನೆರಿಕ್ ಆವೃತ್ತಿಯು ಕಡಿಮೆ ಬೆಲೆಯಲ್ಲಿ ಲಭ್ಯವಿದೆ. BPSU ಫಾರ್ಮಾ CPSU ಗಳು ಮತ್ತು ಖಾಸಗಿ ವಲಯದಿಂದ ಔಷಧಿಗಳ ಸೋರ್ಸಿಂಗ್ ಮೂಲಕ ಜನ್ ಔಷಧಿ ಯೋಜನೆಯಲ್ಲಿ ಜೆನೆರಿಕ್ ಔಷಧಿಗಳ ಮಾರಾಟದ ಮೇಲೆ ಕೇಂದ್ರೀಕರಿಸುತ್ತದೆ. ಜೆನೆರಿಕ್ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಾದಾಗ, ಇತರ ಬ್ರಾಂಡ್ ಹೆಸರುಗಳ ಅಡಿಯಲ್ಲಿ ಅದೇ ಔಷಧಿಗಳ ಬೆಲೆಯು ಸ್ಪರ್ಧಿಸಲು ಗಣನೀಯವಾಗಿ ಇಳಿಯುತ್ತದೆ. ಭಾರತದಲ್ಲಿ, ಬ್ರಾಂಡೆಡ್ ಔಷಧಿಗಳ ಪೇಟೆಂಟ್ ಅವಧಿ ಮುಗಿದ ನಂತರ ಜೆನೆರಿಕ್ ಔಷಧಿಗಳನ್ನು ಕಾನೂನುಬದ್ಧವಾಗಿ ಉತ್ಪಾದಿಸಬಹುದು.

ಜೆನೆರಿಕ್ ಔಷಧಿಗಳ ರಫ್ತಿನಲ್ಲಿ ಭಾರತ ಪ್ರಮುಖ ರಾಷ್ಟ್ರ

2019-20 (ಏಪ್ರಿಲ್-ಮಾರ್ಚ್) ವರ್ಷದಲ್ಲಿ 20.0 ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಔಷಧಗಳನ್ನು ರಫ್ತು ಮಾಡುವ ಮೂಲಕ ವಿಶ್ವದ ಜೆನೆರಿಕ್ ಔಷಧಿಗಳ ಮಾರುಕಟ್ಟೆಯಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿದೆ. ಭಾರತವು ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ಒಕ್ಕೂಟದ ರಾಷ್ಟ್ರಗಳಿಗೆ ಜೆನೆರಿಕ್ ಔಷಧಿಗಳನ್ನು ರಫ್ತು ಮಾಡುತ್ತದೆ. ಜನೌಷಧಿ ಯೋಜನೆಯಿಂದಾಗಿ ಈ ಔಷಧಿ ಉತ್ಪಾದನಾ ಕಂಪನಿಗಳು ಭಾರತದಲ್ಲೂ ತನ್ನ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಅನುಕೂಲವಾಗಿದೆ.

ಔಷಧಿಗಳ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ಜನೌಷಧಿ ಕೇಂದ್ರಗಳಲ್ಲಿ ಮಾರಾಟವಾಗುವ ಔಷಧಿಗಳಿಗೆ ಕೇಂದ್ರ ಸರ್ಕಾರ ಶೇ. 4  ಏಕರೂಪದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಅಬಕಾರಿ ಸುಂಕದಲ್ಲಿ ಶೇ. 8ರಷ್ಟು ಕಡಿತ ಮಾಡಿದೆ.

ಆರೋಗ್ಯ ಜನರ ಮೂಲಭೂತ ಹಕ್ಕು ಎಂದು ಘೋಷಣೆಯಾಗಬೇಕು

ಭಾರತದಲ್ಲಿ ಆರೋಗ್ಯವು ರಾಜ್ಯದ ವಿಷಯವಾಗಿದೆ ಮತ್ತು ಭಾರತ ಸರ್ಕಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಮಾತ್ರ ನಿಯಂತ್ರಿಸುತ್ತದೆ. ಭಾರತದ ಸಂವಿಧಾನದ ಪ್ರಕಾರ ಆರೋಗ್ಯವೂ ಮೂಲಭೂತ ಹಕ್ಕಲ್ಲ. ಈ ಅಂಶಗಳು ಜನೌಷಧಿ ಯೋಜನೆಗಳಂತಹ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಯೋಜನೆ ಮತ್ತು ಕಾರ್ಯಕ್ರಮದ ಮೇಲೆ ಭಾರಿ ಪರಿಣಾಮ ಬೀರುತ್ತವೆ. ನಾಗರಿಕರ ಆರೋಗ್ಯವನ್ನು ಸುಧಾರಿಸಲು ಮತ್ತು ಅಂಚಿನಲ್ಲಿರುವ ಜನರಿಗೆ ಕೈಗೆಟುಕುವ ಔಷಧಿಗಳೊಂದಿಗೆ ಸಹಾಯ ಮಾಡುವ ಜೆಎಎಸ್ ಅನ್ನು ಮತ್ತಷ್ಟು ವಿಸ್ತರಿಸಬೇಕಾಗಿದೆ. ಭಾರತದ ಔಷಧೀಯ ಉದ್ಯಮವು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಸಮಂಜಸವಾದ ಬೆಲೆಯಲ್ಲಿ ಉತ್ಪಾದಿಸುತ್ತದೆ. ಆದ್ದರಿಂದ, ಭಾರತೀಯ ಜೆನೆರಿಕ್ಸ್ ಅನೇಕ ದೇಶಗಳಿಗೆ ರಫ್ತಾಗುತ್ತದೆ. ಭಾರತದ ಅಂಚಿನಲ್ಲಿರುವ ಜನಸಂಖ್ಯೆಯು ಅನೇಕ ಬ್ರಾಂಡ್ ಔಷಧಿಗಳನ್ನು ಪಡೆಯಲು ಸಾಧ್ಯವಾಗದ ಕಾರಣ, ಜನಸಂಖ್ಯೆಯ ಹಿತದೃಷ್ಟಿಯಿಂದ ಭಾರತೀಯರಿಗೆ ಅಗ್ಗದ ಜೆನೆರಿಕ್ ಗಳನ್ನು ಲಭ್ಯವಾಗುವಂತೆ ಮಾಡುವ ತುರ್ತು ಅಗತ್ಯವಿದೆ. ಔಷಧಗಳ ಸೀಮಿತ ಮತ್ತು ಹಲವು ಔಷಧಿಗಳು ಲಭ್ಯತೆ ಇಲ್ಲದಿರುವುದರಿಂದಾಗಿ ನಾಗರೀಕರಿಗೆ ಹೆಚ್ಚು ಸಹಕಾರಿಯಾಗುತ್ತಿಲ್ಲ. ಜನೌಷಧಿ ಕುರಿತಾಗಿ ಜನರಲ್ಲಿ ಅರಿವು ಮೂಡಿಸಬೇಕಿದೆ.  ಸರ್ಕಾರದ ನಿಷ್ಕಾಳಜಿಯಿಂದಾಗಿ ಮತ್ತು ಅದರ ಮುಕ್ತ ಆರ್ಥಿಕ ನೀತಿಗಳಿಂದಾಗಿ ಈ ಯೋಜನೆ ವೇಗವಾಗಿ ವಿಸ್ತಾರಗೊಳ್ಳುತ್ತಿಲ್ಲ. ಇಂತಹ ಯೋಜನೆಗಳನ್ನು ವಿಸ್ತಾರಗೊಳಿಸುವ ಜೊತೆಗೆ, ಆರೋಗ್ಯ ಜನರ ಮೂಲಭೂತ ಹಕ್ಕು ಎಂದು ಘೋಷಣೆಯಾಗಬೇಕು. ಎಲ್ಲರಿಗೂ ಉಚಿತ ಅಥವಾ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ದೊರಕುವಂತಾಗಬೇಕಿದೆ.

Is this your new site? Log in to activate admin features and dismiss this message
ಲಾಗಿನ್