
ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಇಸ್ಲಾಮಿಸ್ಟ್ ಮತ್ತು ಕಮ್ಯುನಿಸ್ಟರ ನಡುವಿನ ಯುದ್ಧ ಎಂದು ಹೇಳಲಾಗುವ ದಕ್ಷಿಣ ಕಾಶ್ಮೀರದ ಕುಲ್ಗಾಮ್ ವಿಧಾನಸಭಾ ಸ್ಥಾನವು ಸಿಪಿಐ(ಎಂ) ನ ಭದ್ರಕೋಟೆಯಾಗಿದೆ. ಪಕ್ಷದ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ 1996 ರಿಂದ ಇಲ್ಲಿ ಚುನಾಯಿತರಾಗುತ್ತಿದ್ದಾರೆ. ತರಿಗಾಮಿ ಅವರು ಈಗ ಐದನೇ ಬಾರಿಗೆ ಗೆದ್ದಿದ್ದಾರೆ. ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಐ) ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸಯರ್ ಅಹ್ಮದ್ ರೇಶಿ ಅವರನ್ನು ಸೋಲಿಸುವ ಮೂಲಕ ತರಿಗಾಮಿ ಈ ಗೆಲುವು ಸಾಧಿಸಿದ್ದಾರೆ. 1996 ರಿಂದ, ಕುಲ್ಗಾಮ್ ಜಿಲ್ಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಪಿಐಎಂ ನ ರಾಜಕೀಯ ಭದ್ರಕೋಟೆಯಾಗಿದೆ. 1996, 2002, 2008 ಮತ್ತು 2014 ರಲ್ಲಿ ರಾಜ್ಯದ ವಿಧಾನಸಭೆಗೆ ಸತತ ನಾಲ್ಕು ಅವಧಿ ತರಿಗಾಮಿ ಅವರು ಗೆಲುವು ಸಾಧಿಸಿದ್ದರು. ಈ ಬಾರಿ ನಿಷೇದಿತ ಸಂಘಟನೆಯ ಪುನರುತ್ಥಾನದೊಂದಿಗೆ, ತರಿಗಾಮಿ ಅವರು ಸಾಕಷ್ಟು ಸವಾಲನ್ನು ಎದುರಿಸಬೇಕಾಯಿತು.
“ಕಮ್ಯುನಿಸಂ ಮಾಯವಾಗಿದೆ ಮತ್ತು ಕುಲ್ಗಾಮ್‌ನ ಜನರು ಕಮ್ಯೂನಿಸ್ಟರಿಗೆ ತಮ್ಮ ಸ್ಥಾನವನ್ನು ತೋರಿಸುವ ಸಮಯ ಬಂದಿದೆ. ಇನ್ನು ಕುಲ್ಗಾಂನಲ್ಲಿ ಕಮ್ಯುನಿಸ್ಟರಿಗೆ ಸ್ಥಾನವಿಲ್ಲ. ಜಮಾತ್-ಎ-ಇಸ್ಲಾಮಿಯ ಮೇಲೆ ನಿರಂತರ ನಿಷೇಧವಿರುವುದು ದುಃಖಕರವಾಗಿದೆ ಆದರೆ ನಾವು ನಿದ್ದೆ ಮಾಡಲು ಸಾಧ್ಯವಿಲ್ಲ, ನಾವು ಮುಂದುವರಿಯಬೇಕಾಗಿದೆ, ಒಂದು ವೇಳೆ ನನಗೆ ಸೋಲುಂಟಾದರೆ ಅದನ್ನು ಇಸ್ಲಾಮಿನ ಸೋಲು ಎಂದು ನೋಡಬಹುದು.” ಇದು ಪುಲ್ಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಮಹಮ್ಮದ್ ಯೂಸುಫ್ ತರಿಗಾಮಿ ವಿರುದ್ದ ಸ್ಪರ್ಧಿಸಿದ್ದ, ನಿಷೇಧಿತ ಜಮಾತ್-ಎ-ಇಸ್ಲಾಮಿ ಬೆಂಬಲವನ್ನು ಹೊಂದಿರುವ ಸ್ವತಂತ್ರ ಅಭ್ಯರ್ಥಿ ಸಾಯರ್ ಅಹ್ಮದ್ ರೇಶಿ ಅವರ ಮಾತು.
‘ಕೆಂಪು ಕೋಟೆ’ ಕುಲ್ಗಾಮ್ ನಲ್ಲಿ ಯಾವುದೇ “ಹಸಿರು ಅಲೆ” ಇಲ್ಲ
ಇವರಿಗೆ ತಿರುಗೇಟು ನೀಡಿದ ತರಿಗಾಮಿ ಅವರು, “ಸಯಾರ್ ಮತ್ತು ಜಮಾತ್-ಎ-ಇಸ್ಲಾಮಿ ಅನ್ನು “ಕಳೆ”. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ವಿಷಯದಲ್ಲಿ ಜಮಾತ್ ಯು-ಟರ್ನ್ ಮಾಡಿರುವುದು ಇದೇ ಮೊದಲಲ್ಲ, ‘ಕೆಂಪು ಕೋಟೆ’ ಕುಲ್ಗಾಮ್ ನಲ್ಲಿ ಯಾವುದೇ “ಹಸಿರು ಅಲೆ” ಇಲ್ಲ” ಎಂದು ಪ್ರತಿಸ್ಪರ್ಧಿಯನ್ನು ನೇರವಾಗಿ ಉಲ್ಲೇಖಿಸಿ ಹೇಳಿದರು.
”ಧರ್ಮ ಆಧಾರಿತ ರಾಜಕಾರಣಕ್ಕೆ ಇಲ್ಲಿ ಅವಕಾಶವಿಲ್ಲ. ನನ್ನ ಕಾರ್ಯಕರ್ತರ ಹತ್ಯೆ ಹಿಂದೆ ಜಮಾತೆ ಇಸ್ಲಾಮಿ ಕೈವಾಡವಿದೆ, ಅವರು ಜನರ ಮುಂದೆ ಬಂದು ಕ್ಷಮೆ ಕೇಳಲಿ, ಕೊಲೆಗಾರರನ್ನು ಬೆಂಬಲಿಸಿದ್ದು ಮಾತ್ರವಲ್ಲದೆ ಬಹಿರಂಗವಾಗಿ ಜನರನ್ನು ಕೊಂದಿದ್ದಾರೆ, ಇಲ್ಲಿ ನಡೆದಿರುವ ಹತ್ಯೆಗಳ ಬಗ್ಗೆ ತನಿಖೆ ನಡೆಸಿ ಹಂತಕರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಕೋಪಗೊಂಡ ತರಿಗಾಮಿ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇರವಾಗಿ ಸ್ಪರ್ಧಿಸಲು ಸಾಧ್ಯವಾಗದೆ, ಭಿನ್ನ ಹಿನ್ನೆಲೆಯಿಲ್ಲದ ಪ್ರಾಕ್ಸಿ ಪಕ್ಷಗಳನ್ನು ಕಣಕ್ಕಿಳಿಸಿತ್ತು. ಚುನಾವಣಾ ಪ್ರಚಾರದ ಬಹಿರಂಗ ಸಭೆಯೊಂದರಲ್ಲಿ ತರಿಗಾಮಿ ಅವರು ಒಂದು ರೂಪಕದ ಮೂಲಕ ಜನರನ್ನು ಎಚ್ಚರಿಸಿದ ರೀತಿ ಹೀಗಿತ್ತು: ”ಮಾರುಕಟ್ಟೆಯಲ್ಲಿ ಈಗಾಗಲೇ ಮರಿಗಳನ್ನು ತೆಗೆದುಕೊಂಡು ಹೋಗಿರುವ ಹೊಸ ಹದ್ದು ಬಂದಿದೆ. ಜನರು ತಮ್ಮ ಮರಿಗಳನ್ನು ರಕ್ಷಿಸಬೇಕು, ಏಕೆಂದರೆ ಈ ಹದ್ದು ಅವುಗಳನ್ನು ಕಸಿದುಕೊಳ್ಳುವ ಅಭ್ಯಾಸವನ್ನು ಹೊಂದಿದೆ. ಈ ಹದ್ದು ದೊಡ್ಡ ಹದ್ದಿನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂಬುದನ್ನು ಕುಲ್ಗಾಮ್ ನ ಜನರು ಮರೆಯಬಾರದು.”
“ಕೇಂದ್ರದ ಬಿಜೆಪಿ ಸರ್ಕಾರವು ಎಫ್ಐಆರ್ ಗಳನ್ನು ಹೊರತುಪಡಿಸಿ ಯುವಕರಿಗೆ ನೀಡಲು ಏನೂ ಇಲ್ಲ. ಇದು ಎಫ್ಐಆರ್ ಸರ್ಕಾರವಾಗಿ ಮಾರ್ಪಟ್ಟಿದೆ ಮತ್ತು ನಮ್ಮ ಯುವಕರು ಮತ್ತು ಅವರ ಭವಿಷ್ಯಕ್ಕೆ ಅವರು ಮಾಡಿದ ತಪ್ಪುಗಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಲು ನಾವು ಅವರನ್ನು ವಿಧಾನಸಭೆಯಲ್ಲಿ ಎದುರಿಸುತ್ತೇನೆ” ಎಂದು ಅವರು ಜನರಿಗೆ ಭರವಸೆ ನೀಡಿದರು.
ಸಿಪಿಐ(ಎಂ) ನ ಭದ್ರಕೋಟೆ
ದಕ್ಷಿಣ ಕಾಶ್ಮೀರದಲ್ಲಿ ಅತ್ಯಂತ ನಿಕಟವಾಗಿ ವೀಕ್ಷಿಸಲ್ಪಡುವ ಕ್ಷೇತ್ರಗಳಲ್ಲಿ ಒಂದಾದ ಕುಲ್ಗಾಮ್ ಕ್ಷೇತ್ರವು ಸಿಪಿಐ(ಎಂ)ಗೆ ಬಹುಕಾಲದಿಂದ ಭದ್ರಕೋಟೆಯಾಗಿದೆ. ಅನುಭವಿ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಸುಮಾರು ಮೂರು ದಶಕಗಳಿಂದ ಅಸೆಂಬ್ಲಿ ಸ್ಥಾನವನ್ನು ಹೊಂದಿದ್ದಾರೆ. ಇದೂ ಸೇರಿದಂತೆ 1996ರಿಂದ ಸತತ ಐದು ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಾರಿ ಕೇಂದ್ರಾಡಳಿತ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ)-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿಪಿಐಎಂ ನಿಂದ ತರಿಗಾಮಿ ಸ್ಪರ್ಧಿಸಿದ್ದರು. ತರಿಗಾಮಿ ಅವರನ್ನು ಸೋಲಿಸಲು ನಿಷೇಧಿತ ಜಮಾತ್-ಎ-ಇಸ್ಲಾಮಿಯಿಂದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸಯ್ಯರ್ ಅಹ್ಮದ್ ರೇಶಿ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಈ ಚುನಾವಣೆಯಲ್ಲಿ, ಜಮಾತ್-ಎ-ಇಸ್ಲಾಮಿ ಬೆಂಬಲಿತ ಅಭ್ಯರ್ಥಿಯ ಪ್ರವೇಶದೊಂದಿಗೆ ತರಿಗಾಮಿ ಅವರ ಪರಂಪರೆಗೆ ಅಪಾಯವಿದೆ ಎಂದು ಹಲವು ವಿಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ ಎಂದು ‘ಕಾಶ್ಮೀರ್ ಅಬ್ಸರ್ವರ್’ ಪತ್ರಿಕೆ ವರದಿ ಮಾಡಿತ್ತು. ಇದು ಕಾಶ್ಮೀರದ ಏಕೈಕ ಕೆಂಪು ದ್ವೀಪದಲ್ಲಿ ಇಸ್ಲಾಮಿಸ್ಟ್ ಮತ್ತು ಕಮ್ಯುನಿಸ್ಟರ ನಡುವಿನ ಯುದ್ಧ ಎಂದು ಕೆಲವರು ಹೇಳುತ್ತಾರೆ ಎಂದು ಆ ಪತ್ರಿಕೆ ಹೇಳಿತ್ತು.
“ಜಮ್ಮು-ಕಾಶ್ಮೀರದ ರಾಜಕೀಯ ಮತ್ತು ಚುನಾವಣಾ ಭೂದೃಶ್ಯವು 1990ರ ದಶಕದಿಂದಲೂ ಬಾರೀ ಬದಲಾವಣೆಗೆ ಒಳಗಾಗಿದೆ. ನಿರಂತರವಾಗಿ ಬದಲಾಗುತ್ತಿರುವ ಕಾಶ್ಮೀರದ ರಾಜಕೀಯ ಕ್ಷೇತ್ರದಲ್ಲಿನ ಕೆಲವೇ ಸ್ಥಿರ ವ್ಯಕ್ತಿಗಳಲ್ಲಿ ಒಬ್ಬರು ಮೊಹಮ್ಮದ್ ಯೂಸುಫ್ ತರಿಗಾಮಿ, ಅವರು ಹಸಿರು ಕಣಿವೆಗೆ ಕಮ್ಯೂನಿಸ್ಟ್ ಕೆಂಪು ಬಣ್ಣದ ಚುಕ್ಕೆ ತಂದಿದ್ದಾರೆ” ಎನ್ನುತ್ತಾರೆ ‘ಇಂಡಿಯಾ ಟುಡೆ’ ಪತ್ರಿಕೆಯ ಲೇಖಕ ಸುಶಿಮ್ ಮುಕುಲ್.
ಮಾಜಿ ಮಿತ್ರಪಕ್ಷಗಳೊಂದಿಗೂ ಸ್ಪರ್ಧೆ ಎದುರಿಸಬೇಕಾಗಿತ್ತು
ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮೊಹಮ್ಮದ್ ಅಮೀನ್ ದಾರ್ ಪ್ರತಿನಿಧಿಸುತ್ತಿದ್ದ ಅಪ್ನಿ ಪಕ್ಷದ ಇಂಜಿನಿಯರ್ ಮೊಹಮ್ಮದ್ ಅಕಿಬ್ ಕೂಡ ಸ್ಪರ್ಧೆಯಲ್ಲಿದ್ದರು. ತರಿಗಾಮಿ ಅವರು ರೇಶಿಯೊಂದಿಗೆ ಮಾತ್ರವಲ್ಲದೆ, ಮಾಜಿ ಮಿತ್ರಪಕ್ಷಗಳೊಂದಿಗೂ ಸ್ಪರ್ಧೆ ಎದುರಿಸಬೇಕಾಗಿತ್ತು. ಒಂದು ಕಾಲದಲ್ಲಿ ಅವರ ಆಪ್ತರಾಗಿದ್ದ ಮೊಹಮ್ಮದ್ ಅಕಿಬ್ ದಾರ್ ಅವರು ಈಗ ಇತರ ಪಕ್ಷಗಳನ್ನು ಪ್ರತಿನಿಧಿಸಿದ್ದರು. ಪೀಪಲ್ಸ್ ಕಾನ್ಫರೆನ್ಸ್ (ಪಿಸಿ)ನ ನಜೀರ್ ಲಾವೇ ಅವರು 2008 ರಿಂದ ತರಿಗಾಮಿ ವಿರುದ್ಧ ಸ್ಪರ್ಧಿಸಿದ್ದರು. ಅವರು ಜಮಾತ್-ಎ-ಇಸ್ಲಾಮಿ ಕಾರ್ಯಕರ್ತರಿಂದ ಗಣನೀಯ ಬೆಂಬಲವನ್ನು ಪಡೆಯುತ್ತಿದ್ದರು ಮತ್ತು ನಜೀರ್ ಲಾವೇ 2014ರಲ್ಲಿ ಪಿಡಿಪಿ ಅಭ್ಯರ್ಥಿಯಾಗಿದ್ದಾಗ ಕೇವಲ 334 ಮತಗಳಿಂದ ಸೋತರು. ನಂತರ ಲಾವೇ ಪಿಡಿಪಿಯ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದರು, ಆದರೆ 2019ರ ನಂತರ ಅವರು ಪಿಡಿಪಿ ತೊರೆದು ಸಜಾದ್ ಲೋನ್ ನೇತೃತ್ವದ ಪಿಸಿಗೆ ಸೇರಿದರು.
ಈ ಬಾರಿ 10 ಅಭ್ಯರ್ಥಿಗಳು ಕುಲ್ಗಾಮ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ತಾರಿಗಾಮಿ ಮತ್ತು ರೇಶಿ ನಡುವೆ ನೇರ ಸ್ಪರ್ಧೆ ಇತ್ತು. ತರಿಗಾಮಿ ಅವರು 33,634 ಮತಗಳನ್ನು ಪಡೆದು, 7838 ಮತಗಳ ಅಂತರದಿಂದ ಸ್ಥಾನವನ್ನು ಗೆದ್ದರು, ಅವರ ಸಮೀಪದ ಪ್ರತಿಸ್ಪರ್ಧಿ ರೇಶಿ 25,796 ಮತಗಳನ್ನು ಪಡೆದರು. ರೇಶಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು.
“ಹಕ್ ಕಾ ಹಮಿ, ತರಿಗಾಮಿ”
“ಹಕ್ ಕಾ ಹಮಿ, ತರಿಗಾಮಿ” (ನ್ಯಾಯದ ಚಾಂಪಿಯನ್ ತರಿಗಾಮಿ) ಚುನಾವಣಾ ಪಲಿತಾಂಶ ಹೊರಬಂದು ತರಿಗಾಮಿ ಗೆಲುವು ಸಾಧಿಸಿದ ಸುದ್ದಿ ಹೊರಬರುತ್ತಿದ್ದಂತೆ ಕುಲ್ಗಾಮ್ ನ ಬೀದಿಗಳಲ್ಲಿ ಪ್ರತಿದ್ವನಿಸಿದ ಹರ್ಷದ ಘೋಷಣೆಗಳಿವು. ಪಟಾಕಿ ಸಿಡಿಸಿ ಹರ್ಷೋದ್ಗಾರದಿಂದ ತರಿಗಾಮಿ ಅವರನ್ನು ಜನಸಮೂಹವು ಸ್ವಾಗತಿಸಿತು. ತರಿಗಾಮಿ ಕಾರಿನ ಮೇಲಿಂದ ತಮ್ಮ ಬೆಂಬಲಿಗರತ್ತ ಕೈ ಬೀಸಿದರು.
ನಿಷೇಧಿತ ಸಂಘಟನೆ
1980ರ ದಶಕದ ನಂತರ ಜಮಾತ್-ಎ-ಇಸ್ಲಾಮಿ ಸಂಘಟನೆಯು ತನ್ನ ಸಾಮಾಜಿಕ-ಧಾರ್ಮಿಕ ಮೂಲಭೂತವಾದಕ್ಕೆ ಹೆಸರುವಾಸಿಯಾಗಿದ್ದು, ಈ ಪ್ರದೇಶದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಇದೇ ಮೊದಲು. ಈ ಹಿಂದೆ ಅಮೂಲಾಗ್ರ ಸಂಘಟನೆಯು ಸುಮಾರು ಮೂರು ದಶಕಗಳ ಕಾಲ ಚುನಾವಣಾ ಪ್ರಜಾಪ್ರಭುತ್ವವನ್ನು ಬಹಿಷ್ಕರಿಸಿತು. ಈ ಸಂಘಟನೆಯನ್ನು 2019ರಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತು. 2024ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 10 ಜಮಾತ್ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳಲ್ಲಿ ಕುಲ್ಗಾಮ್ ನಲ್ಲಿ ಸ್ಪರ್ಧಿಸಿದ್ದ ರೇಶಿ ಕೂಡ ಸೇರಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
2008 ಮತ್ತು 2014ರ ಹಿಂದಿನ ಎರಡು ಅಸೆಂಬ್ಲಿ ಚುನಾವಣೆಗಳಲ್ಲಿ, PDP ಅಭ್ಯರ್ಥಿಗಳು ಜಮಾತ್-ಎ-ಇಸ್ಲಾಮಿ ಕಾರ್ಯಕರ್ತರಿಂದ ಗಣನೀಯ ಬೆಂಬಲವನ್ನು ಪಡೆದ ಕಾರಣ, ತರಿಗಾಮಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದರು. ದಕ್ಷಿಣ ಕಾಶ್ಮೀರದ ಇತರ ಪ್ರದೇಶಗಳಿಗಿಂತ ಭಿನ್ನವಾಗಿ, ಕುಲ್ಗಾಮ್ ಸಾಮಾನ್ಯವಾಗಿ ಹೆಚ್ಚಿನ ಮತದಾನವನ್ನು ಕಂಡಿದೆ, 2014 ರ ಕೊನೆಯ ಅಸೆಂಬ್ಲಿ ಚುನಾವಣೆಯಲ್ಲಿ ಶೇ. 56.5 ಅನ್ನು ದಾಖಲಿಸಿತ್ತು.
ನಿಮ್ಮ ಟಿಪ್ಪಣಿ ಬರೆಯಿರಿ