ಕಾಶ್ಮೀರದ ಸಂಪತ್ತನ್ನು ದೋಚಲು 370ನೇ ವಿಧಿ ರದ್ದು

2019ರ ಆಗಸ್ಟ್ 5ರಂದು ಸಂವಿಧಾನದ 370ನೇ ವಿಧಿಯ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಷೇಶ ಸ್ಥಾನಮಾನವನ್ನು ತೆಗೆದು ಹಾಕಿ, 35ಎ ವಿಧಿಯನ್ನು ನಿರರ್ಥಕಗೊಳಿಸಿ, ಅದಕ್ಕೆ ಇದ್ದ ರಾಜ್ಯದ ಸ್ಥಾನಮಾನವನ್ನು ರದ್ದುಗೊಳಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿರುವುದನ್ನೂ ಮೋದಿ ಸರ್ಕಾರದ ದೊಡ್ಡ ಸಾಧನೆ, ಎಂದು ಬಿಂಬಿಸಲಾಗಿದೆ. ಆದರೆ, 370ನೇ ವಿಧಿ ರದ್ದುಗೊಳಿಸಿರುವ ನಿಜವಾದ ಉದ್ದೇಶವನ್ನು ಮರೆಮಾಚಲಾಗಿದೆ.

ಭಾರತ 1990ರ ದಶಕದಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ (LPG) ನೀತಿಗಳನ್ನು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ LPG  ನೀತಿಗಳನ್ನು ಭಾರತದಾದ್ಯಂತ ಜಾರಿಗೆ ತರಬೇಕು. ಇದನ್ನು ಜಾರಿಗೆ ತರುವುದೆಂದರೆ, ದೇಶದ ಉತ್ಪಾಧನಾ ವಲಯ, ಸೇವಾ ವಲಯ, ಹಣಕಾಸು ಮತ್ತು ವಿಮಾ ವಲಯ, ಭೂಮಿ ಹೀಗೆ ಎಲ್ಲಾ ವಲಯಗಳನ್ನು, ಎಲ್ಲಾ ಪ್ರದೇಶಗಳನ್ನು ಸ್ವದೇಶಿ ಮತ್ತು ವಿದೇಶಿ ಬಂಡವಾಳದಾರರಿಗೆ ಮುಕ್ತವಾಗಿ ತೆರೆದಿಡಬೇಕು. ಇದರ ಜಾರಿಗೆ ಅಗತ್ಯವಾದ ನೀತಿ ನಿಯಮಗಳನ್ನು ರೂಪಿಸಬೇಕು. ಇದಕ್ಕೆ ಅಡ್ಡಿಯಾಗಿರುವ ನೆಲದ ಕಾನೂನುಗಳನ್ನು, ಸಂವಿಧಾನದಲ್ಲಿರುವ ವಿಧಿಗಳನ್ನು ಅಳಿಸಿಹಾಕಬೇಕು. ಇವುಗಳಲ್ಲಿ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂವಿಧಾನ ಕೊಡಮಾಡಿದ್ದ ವಿಷೇಶ ಸ್ಥಾನಮಾನವಾದ 370ನೇ ಈ ವಿಧಿಯೂ ಒಂದು.

ಕಾಶ್ಮೀರದ ಸಂಪತ್ತನ್ನು ದೋಚಲು

ಮುಕ್ತ ಆರ್ಥಿಕ ನೀತಿಗಳ ಜಾರಿಗೆ ಇಡೀ ಭಾರತ ದೇಶವು ಅನುಕೂಲಕರವಾಗಿದ್ದರೆ, ಜಮ್ಮು ಕಾಶ್ಮೀರ ಭಾಗಕ್ಕೆ ಮಾತ್ರ ಸಂವಿಧಾನದಲ್ಲಿ 370 ನೇ ವಿಧಿ ಎಂಬ ಭದ್ರವಾದ ಕೋಟೆ ಇದಕ್ಕೆ ಅಡ್ಡಿಯಾಗಿತ್ತು. ಇದು ಮತ್ತು ಆರ್ಟಿಕಲ್ 35ಎ ನಂತೆ ಅಲ್ಲಿನ ಭೂಮಿಯನ್ನು ಆ ರಾಜ್ಯದ ಜನರು ಮಾತ್ರ ಖರೀದಿಸಬಹುದಿತ್ತು. ಹೊರಗಿನವರು ಖರೀದಿಸಲು ಅವಕಾಶ ಇರಲಿಲ್ಲ.  ತಮ್ಮ ಅಸ್ಮಿತೆ ಮತ್ತು *ಕಶ್ಮೀರಿಯತ್* ಎಂದು ಹೇಳಲಾಗುವ ಅವರದೇ ಆದ ಜೀವನಶೈಲಿಯನ್ನು ಉಳಿಸಿಕೊಳ್ಳುವ ಕಾಶ್ಮೀರಿ ಜನತೆಯ ಆಶೋತ್ತರಗಳನ್ನು ಅದು ಒಳಗೊಂಡಿತ್ತು. ಇದು ಜಾಗತಿಕ ಲೂಟಿಕೋರರಿಗೆ ಅಲ್ಲಿನ ಭೂಮಿ ಮತ್ತು ಪ್ರಕೃತಿ ಸಂಪತ್ತುಗಳನ್ನು ದೋಚಲು ಅಡ್ಡಿಯಾಗಿತ್ತು. 370ನೇ ಈ ವಿಧಿಯು ಜಮ್ಮು ಕಾಶ್ಮೀರದ ಸುಂದರವಾದ ಪರಿಸರವನ್ನು ತಮ್ಮದಾಗಿಸಿಕೊಳ್ಳಲು ದೊಡ್ಡ ಬಂಡವಾಳಗಾರರಿಗೆ ಅಡೆತಡೆಯಾಗಿತ್ತು. ಅಲ್ಲಿನ ಫಲವತ್ತಾದ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿ, ರೆಸಾರ್ಟ್ ನಿರ್ಮಾಣ ಮಾಡಲು, ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು, ಕೃಷಿ ಭೂಮಿಯನ್ನು ವಶಕ್ಕೆ ಪಡೆದು ತಾವೇ ಕೃಷಿ ಮಾಡಲು, ಅಲ್ಲಿನ ನೆಲದಾಳದ ಪ್ರಕೃತಿ ಸಂಪತ್ತನ್ನು ದೋಚಲು ದೊಡ್ಡ ಬಂಡವಾಳಗಾರರಿಗೆ ಹಾಗೂ ದೊಡ್ಡ ಭೂಮಾಲೀಕರಿಗೆ ಈ ವಿಧಿ ಅಡ್ಡಿಯಾಗಿತ್ತು. ಈ ವಿಧಿಯ ಕಾರಣದಿಂದ, ಎಷ್ಟೇ ಆರ್ಥಿಕ ಸಂಕಷ್ಟ ಎದುರಾದರೂ ಅಲ್ಲಿನ ಜನರು ತಮ್ಮ ಜಮೀನುಗಳನ್ನು ಮಾರಾಟ ಮಾಡಲಾಗದೆ, ಅದನ್ನು ಉಳಿಸಿಕೊಂಡು ವ್ಯವಸಾಯ ಮಾಡುತ್ತ ಜೀವನ ನಡೆಸುತ್ತಿದ್ದರು. ಹೇಗಾದರೂ ಮಾಡಿ ಈ ಪ್ರದೇಶವನ್ನು ಮುಕ್ತ ಆರ್ಥಿಕತೆಗೆ ತೆರೆದಿಡಬೇಕು. ಇದಕ್ಕೆ ಅಡ್ಡಿಯಾಗಿರುವ 370 ನೇ ವಿಧಿ ಮತ್ತು ಆರ್ಟಿಕಲ್ 35ಎ ಅನ್ನು ತೆಗೆದುಹಾಕಬೇಕು ಎಂಬುದು ಪ್ರಭುತ್ವದ ಗುರಿಯಾಗಿತ್ತು.

370ನೇ ವಿಧಿಯ ನಿಧಾನ ನಾಶಕ್ಕೆ ಕಾಂಗ್ರೆಸ್ ಆಡಳಿತದಲ್ಲೂ ಪ್ರಯತ್ನ

ಕೆಲವರು ತಿಳಿದುಕೊಂಡಂತೆ 370 ನೇ ವಿಧಿ ರದ್ದತಿಗೆ ಮೋದಿ ಆಡಳಿತ ಮಾತ್ರ ಕಾರಣವಲ್ಲ. ಇದಕ್ಕೂ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಕೂಡ ಈ ವಿಧಿಯ ನಿಧಾನ ನಾಶಕ್ಕೆ ಪ್ರಯತ್ನ ಮಾಡಿದೆ. ಅಂದಿನ ಭಾರತದ ಒಕ್ಕೂಟ ಸರ್ಕಾರ ಈ ವಿಧಿಯ ಬಗೆಗಿನ ಬದ್ಧತೆಯಿಂದ ಹಿಂದೆ ಸರಿದಿದ್ದೇ ಕಾಶ್ಮೀರ ಸಮಸ್ಯೆ ಹೆಚ್ಚಲು ಮೂಲ ಕಾರಣವಾಯಿತು.1953 ರ ನಂತರ ಸತತವಾಗಿ ಕೇಂದ್ರದಲ್ಲಿನ ಕಾಂಗ್ರೆಸ್ ಸರ್ಕಾರಗಳು 370 ನೇ ವಿಧಿಯನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ಸ್ವಾಯತ್ತತೆಯನ್ನು ದುರ್ಬಲಗೊಳಿಸಲು ಕ್ರಮಗಳನ್ನು ಕೈಗೊಳ್ಳತೊಡಗಿದವು. 1960, 70 ಮತ್ತು 80 ರ ದಶಕದಾದ್ಯಂತ ಕೇಂದ್ರೀಕರಣ ಮತ್ತು ಸ್ವಾಯತ್ತತೆಯನ್ನು ನಿರಾಕರಿಸುವ ಪ್ರಕ್ರಿಯೆ ಮುಂದುವರಿಯಿತು. ರಾಜ್ಯಕ್ಕೆ ನೀಡಲಾಗಿದ್ದ ಸ್ವಾಯತ್ತತೆಯ ಬಹುತೇಕ ಅಂಶಗಳನ್ನು ತೆಗೆದು ಹಾಕುವ ಉದ್ದೇಶದಿಂದ 370 ನೇ ವಿಧಿಯನ್ನು ಬುಡಮೇಲು ಮಾಡಲಾಯಿತು. 1954 ರ ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯ) ಆದೇಶದ ನಂತರದಲ್ಲಿ 2010ರವರೆಗೆ ಇಂತಹ 42 ಆದೇಶಗಳು ಜಾರಿಯಾಗಿವೆ. ಅವುಗಳು 370 ನೇ ವಿಧಿಯನ್ನು ಅಳವಡಿಸುವ ವೇಳೆ ನಮೂದಿತವಾಗದ ಕಾನೂನುಗಳ ವಿಚಾರದಲ್ಲಿ ಕೇಂದ್ರದ ಮಧ್ಯಪ್ರವೇಶದ ಅವಕಾಶವನ್ನು ಹೆಚ್ಚಿಸಿದವು. ಕಾನೂನು ತಜ್ಞ ಎ.ಜಿ. ನೂರಾನಿ ಅವರು ಸಮರ್ಥವಾಗಿ ದಾಖಲಿಸಿರುವಂತೆ, ಕೇಂದ್ರೀಕರಣ ಪ್ರಕ್ರಿಯೆ ಮೂಲಕ 370 ನೇ ವಿಧಿಯ ಮೂಲ ಆಶಯವನ್ನು ದುರ್ಬಲಗೊಳಿಸಲಾಯಿತು. ಕೇಂದ್ರ ಪಟ್ಟಿಯಲ್ಲಿರುವ 97 ವಿಷಯಗಳ ಪೈಕಿ 94 ವಿಷಯಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯವಾಗುತ್ತವೆ.

ವಿಷೇಶ ಸ್ಥಾನಮಾನಕ್ಕೆ ಹಿಂದುತ್ವವಾದಿಗಳ ವಿರೋಧವಿತ್ತು

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಾಳೇಗಾರಿ-ವಿರೋಧಿ ಹೋರಾಟವನ್ನು ಹಿಂದೂ ಕೋಮುವಾದಿ ಶಕ್ತಿಗಳು ವಿರೋಧಿಸುತ್ತಿದ್ದವು. ವಾಸ್ತವವಾಗಿ ಜನಸಂಘದ ಪೂರ್ವಜವಾದ ಪ್ರಜಾಪರಿಷತ್ ಕಾಶ್ಮೀರದ ಮಹಾರಾಜನಿಗೆ ಬೆಂಬಲ ನೀಡಿತ್ತು. ಜನಸಂಘ ಮತ್ತು ಹಿಂದೂ ಮಹಾಸಭಾ 370ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ರೀತಿಯ ಸ್ವಾಯತ್ತತೆ ನೀಡುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದವು. ಹಿಂದುತ್ವ ಸಿದ್ಧಾಂತ ಹೊಂದಿರುವುದರಿಂದ ಆರ್ ಎಸ್ ಎಸ್ ಬೆಂಬಲಿತ ಜನಸಂಘ ಮತ್ತು ನಂತರದಲ್ಲಿ ಬಿಜೆಪಿ ಒಂದೇ ಸ್ವರೂಪದ ಕೇಂದ್ರೀಕೃತ ಭಾರತದ ಕಲ್ಪನೆಯಿಂದ ಸತತವಾಗಿ 370ನೇ ವಿಧಿಯನ್ನು ವಿರೋಧಿಸುತ್ತಾ ಬಂದಿವೆ. ಎಲ್ಲಕ್ಕಿಂತ ಹೆಚ್ಚಾಗಿ, ಕಾಶ್ಮೀರ ಕಣಿವೆಯು ಮುಸ್ಲಿಂ ಬಾಹುಳ್ಯದ ಪ್ರದೇಶ ಎಂಬುದು ಅವರ ಶತ್ರುತ್ವಕ್ಕೆ ಕಾರಣವಾಗಿತ್ತು. ಇಂದು ಹಿಂದುತ್ವವಾದಿಗಳ ಕೈಗೆ ದೇಶದ ಆಡಳಿತ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ತಾವು ಒಪ್ಪದ ಈ ವಿಧಿಯನ್ನು ರದ್ದುಮಾಡಲು ಬಳಕೆ ಮಾಡಿಕೊಂಡಿದ್ದಾರೆ. ಈ ರೀತಿ ಮಾಡುವಾಗ ಬಹುಸಂಖ್ಯಾತರ ಬೆಂಬಲ ಪಡೆಯಬೇಕು ಮತ್ತು ವಿರೋಧ ಮಾಡುವವರ ದ್ವನಿ ಹತ್ತಿಕ್ಕಬೇಕು. ಪ್ರತಿಭಟನೆಗೆ ಅವಕಾಶವೇ ಇಲ್ಲದಂತೆ ಕಾಶ್ಮೀರದ ಇಡೀ ಜನತೆಯನ್ನು ಬಂಧನದಲ್ಲಿ ಇಡಬೇಕು. ಮೋದಿ ಸರ್ಕಾರ ಮಾಡಿದ್ದೂ ಇದನ್ನೆ.

ವಿಶಾಲ ಬಂದೀಖಾನೆಯನ್ನಾಗಿ ಮಾಡಿದರು

ಒಕ್ಕೂಟ ಸರ್ಕಾರ 2019ರ ಜುಲೈ 27 ರಂದು 10 ಸಾವಿರ ಮತ್ತು ಆಗಸ್ಟ್ ಒಂದರಂದು ಮತ್ತೆ 25 ಸಾವಿರ ಪ್ಯಾರಾ ಮಿಲಿಟರಿ ಪಡೆಗಳನ್ನು ವಿಮಾನಗಳ ಮೂಲಕ ಜಮ್ಮು ಕಾಶ್ಮೀರಕ್ಕೆ ಕಳುಹಿಸಿತು. ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಯ್ತು. ಸೇನೆ ಮತ್ತು ವಾಯುಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಯಿತು. ಭಾರತೀಯ ಯುದ್ಧ ವಿಮಾನಗಳ ಗಸ್ತು ಹಾರಾಟ ಮಾಡತೊಡಗಿದವು. ಇದ್ದಕ್ಕಿದ್ದಂತೆ ಅಮರನಾಥ ಯಾತ್ರೆಯನ್ನು ರದ್ದುಪಡಿಸಲಾಯಿತು. ಜಮ್ಮು ಕಾಶ್ಮೀರದಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ವಾಪಸ್ ಕಳಿಸಲಾಯಿತು. ಆಗಸ್ಟ್ 4ರಂದು ಒಮರ್ ಅಬ್ದುಲ್ಲ, ಮಹಮ್ಮದ್ ಮುಪ್ತಿ, ಸಿಪಿಎಂ ನಾಯಕ ತಾರಿಕ್ ಅಹ್ಮದ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನು ಗೃಹಬಂಧನದಲ್ಲಿ ಇಟ್ಟರು. ರಾಜ್ಯಾದ್ಯಂತ 144 ಸೆಕ್ಸನ್ ಜಾರಿ ಮಾಡಿದರು, ಮೊಬೈಲ್ ನೆಟ್ ವರ್ಕ್, ಇಂಟರ್ ನೆಟ್ ಮತ್ತು ಟಿವಿ ಮಾಧ್ಯಮಗಳ ಸಂಪರ್ಕ ಕಡಿತಮಾಡಿದರು. ಮೋದಿ ಸರ್ಕಾರದ ಈ ಕ್ರಮ ಕಂಡ ದೇಶದ ಜನತೆ, ಗಡಿಯಲ್ಲಿ ಏನಾಗುತ್ತಿದೆ ಎಂಬ ಆತಂಕಕ್ಕೆ ಒಳಗಾದರು. ಇದು ಕೆಲವರಿಗೆ ನೆರೆ ರಾಷ್ಟ್ರದ ಜೊತೆ ಯುದ್ದದ ಸನ್ನದ್ದತೆಯಂತೆ ಕಂಡಿತು.

ನರೇಂದ್ರ ಮೋದಿ ಸರ್ಕಾರ ಆಗಸ್ಟ್ 5ರಂದು 370ನೇ ವಿಧಿ ರದ್ದುಗೊಳಿಸಿ, ಜಮ್ಮು ಕಾಶ್ಮೀರಕ್ಕೆ ಇದ್ದ ರಾಜ್ಯದ ಮಾನ್ಯತೆ ರದ್ದುಮಾಡಿ, ಅದನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡುವ ಘೋಷಣೆ ಮಾಡಿಯೇ ಬಿಟ್ಟರು. 370ನೇ ವಿಧಿಯ ರದ್ದತಿ ವಿಷಯವನ್ನು ಅಲ್ಲಿನ ರಾಜ್ಯಪಾಲರಿಗೇ ತಿಳಿಯದಂತೆ, ಅದರ ಹಿಂದಿನ ದಿನದವರೆಗೂ ಮುಚ್ಚಿಟ್ಟಿದ್ದರು ಎಂಬುದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಅಂದಿನ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲ್ಲಿಕ್ ಬಹಿರಂಗಪಡಿಸಿದ್ದಾರೆ.

ಸಂವಿಧಾನದ ವಿರುದ್ಧ ಮೋದಿ ಸರ್ಕಾರ ಮಾಡಿದ ಈ ಕ್ಷಿಪ್ರಕ್ರಾಂತಿಯ ರೀತಿಯು ಈಗ ದೇಶದಲ್ಲಿ ಪ್ರತಿಷ್ಠಾಪನೆಯಾಗಿರುವ ಸರ್ವಾಧಿಕಾರಶಾಹಿ ಆಳ್ವಿಕೆಯ ಸಂಕೇತವಾಗಿದೆ. 370ನೇ ವಿಧಿಯನ್ವಯ ಒಂದು ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನದ ಇನ್ನೊಂದು ವಿಧಿಯನ್ನು ಅಂದರೆ 367ನೇ ವಿಧಿಯನ್ನು ಬದಲಾಯಿಸಲು ಬಳಸಲಾಯಿತು.

370ನೇ ವಿಧಿಯ ಸಾರವನ್ನೇ ಹಿಂಪಡೆಯಲು ಅದನ್ನು ಬಳಸಲಾಯಿತು. ಈ ಕುತಂತ್ರದ ಮೂಲಕ, ರಾಷ್ಟ್ರಪತಿ ಶಾಸನದಲ್ಲಿರುವ ರಾಜ್ಯದ ಶಾಸಕಾಂಗದ ಅಧಿಕಾರವನ್ನು ಕಸಿಯಲಾಯಿತು. ಆ ರಾಜ್ಯವನ್ನೇ ಕಳಚಿ ಹಾಕಲಾಯಿತು.

ಬಿಜೆಪಿ ಸರ್ಕಾರದ ಈ ಕ್ರಮಕ್ಕೆ ವಿವಿಧ ಜನವಿಭಾಗಗಳಿಂದ ಬೆಂಬಲ ವ್ಯಕ್ತವಾಗಿತ್ತು. ಇದು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕಲು ನಿರ್ಣಾಯಕವಾದ ಮಾರ್ಗವೆಂದು ಅವರು ನಂಬಿದ್ದರು. ಮೋದಿ ಸರ್ಕಾರ ಪ್ರಚುರಪಡಿಸಿದ ಈ ಅಧಿಕೃತ ಕಥನಕ್ಕೆ ಹಲವರು ಮಾರುಹೋದರು. ಆದರೆ ಇದರಿಂದ ಜಮ್ಮು ಕಾಶ್ಮೀರ ಮತ್ತು ಇಡಿಯಾಗಿ ದೇಶದ ಮೇಲೆ ದೀರ್ಘಕಾಲದಲ್ಲಾಗುವ ಅಪಾಯಕಾರಿ ಪರಿಣಾಮ ಏನೆಂಬುದು ಜನರ ಮುಂದೆ ಬಂದಿಲ್ಲ.

ಜಮ್ಮು ಕಾಶ್ಮೀರದಾದ್ಯಂತ ಲಾಕ್ ಡೌನ್; ನರಳಿದ 1.20 ಕೋಟಿ ಕಾಶ್ಮೀರಿಗಳು

ಇಲ್ಲಿ ಲಾಕ್ ಡೌನ್ ಪದ ಬಳಸಿರುವುದಕ್ಕೆ ಕಾರಣವಿದೆ. ಲಾಕ್ ಡೌನ್ ಎಂದರೆ ಏನೆಂಬುದನ್ನು ನಾವೆಲ್ಲಾ ಸ್ವತಃ ಅನುಭವಿಸಿದ್ದೇವೆ. 370ನೇ ವಿಧಿ ರದ್ದುಮಾಡುವ ಮುನ್ನ ಜಮ್ಮು ಕಾಶ್ಮೀರ ರಾಜ್ಯದಾದ್ಯಂತ 144 ಸೆಕ್ಸನ್, ಕರ್ಫ್ಯೂ ಜಾರಿಗೆ ತಂದು, ಲಾಕ್ ಡೌನ್ ರೀತಿಯಲ್ಲೇ 1.20 ಕೋಟಿ (ಒಂದು ಕೋಟಿ ಇಪ್ಪತ್ತು ಲಕ್ಷ) ನಾಗರೀಕರನ್ನು ಹಲವು ತಿಂಗಳುಗಳ ಕಾಲ ಗೃಹಬಂಧನದಲ್ಲಿ ಇರಿಸಲಾಯಿತು. ಜಮ್ಮು ಕಾಶ್ಮೀರದ ಜನರು ಪ್ರಭುತ್ವ ವಿಧಿಸಿದ್ದ ‘ಬಂಧನ’ದಿಂದಾಗಿ ತಿಂಗಳುಗಟ್ಟಲೆ ಸಂಕಷ್ಟಗಳಿಗೆ ಸಿಲುಕಿದರು. ಈ ಜನರಿಗೆ ಬೇರೆ ಯಾರೂ ಸ್ಪಂದಿಸಲು ಅವಕಾಶವೇ ಇಲ್ಲದಂತೆ ರಾಜ್ಯದೆಲ್ಲೆಡೆ ‘ಕರ್ಫ್ಯೂ’, ‘ಬಿಗಿ ಭದ್ರತೆ’ ಎಂಬ ಬಲವಾದ ಗೋಡೆ ಕಟ್ಟಲಾಯಿತು. ತಮಗೆ ಉಂಟಾಗುವ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ, ಔಷಧ ಕೊಳ್ಳಲೂ ಆಗದಂತೆ ಸೈನಿಕರ ಸರ್ಪಗಾವಲಿನಲ್ಲಿ ತಮ್ಮ ತಮ್ಮ ಮನೆಗಳಲ್ಲೇ ಬಂಧನಕ್ಕೆ ಒಳಪಟ್ಟರು. ಆಹಾರ ಧಾನ್ಯಗಳಿಲ್ಲದೆ, ಅಗತ್ಯ ವಸ್ತುಗಳನ್ನು ಕೊಳ್ಳಲು ಹೊರಬರಲಾಗದೆ (ಕೆಲವು ಸಲ ಸೈನಿಕರು ಮನೆಯಿಂದ ಹೊರಗೆ ಬರಲು ಅವಕಾಶ ಕೊಟ್ಟರೂ ಅಂಗಡಿಗಳು ತೆರೆಯದೇ), ತಮ್ಮ ಬಳಿ ಹಣವಿಲ್ಲದೆ, ತಮ್ಮದೇ ಮನೆಯೊಳಗೆ ಹಸಿವಿನಿಂದ ನರಳಿದ ಬಡ ಕುಟುಂಬಗಳೆಷ್ಟೊ. ಒಂದು ದಿನ ಕೂಲಿ ಕೆಲಸ ಸಿಗದಿದ್ದರೂ ಆಹಾರಕ್ಕಾಗಿ ಪರಿತಪಿಸುವ ಕೂಲಿ ಇಲ್ಲದ ಬಡ ಕೂಲಿಕಾರರ ಬದುಕು ಹೇಗಿತ್ತೋ? ಇಂಟರ್ ನೆಟ್ ಸ್ಥಗಿತವಾಗಿದ್ದರಿಂದ ಮತ್ತು ಹೊರಗಿನವರಿಗೆ ಪ್ರವೇಶ ಇಲ್ಲದ್ದರಿಂದ ಅಲ್ಲಿನ ಜನರ ಅಂದಿನ ಸ್ಥಿತಿಯನ್ನು ತಿಳಿಯಲು ಸಾಧ್ಯವಾಗಲಿಲ್ಲ. ಜಮ್ಮು ಕಾಶ್ಮೀರ ರಾಜ್ಯದ ಸಿಪಿಎಂ ನಾಯಕ  ತಾರಿಕ್ ಅಹ್ಮದ್ ಅವರನ್ನು ಭೇಟಿ ಮಾಡಲು ಆ ಪಕ್ಷದ ರಾಷ್ಟ್ರೀಯ ನಾಯಕರಾದ ಸೀತಾರಾಂ ಯೆಚೂರಿಯವರು ನ್ಯಾಯಾಲಯದ ಮೂಲಕ ಅನುಮತಿ ಪಡೆಯಬೇಕಾದ ಸ್ಥಿತಿ ಮತ್ತು ಷರತ್ತುಗಳ ಮೇಲೆ ಭೇಟಿಗೆ ನ್ಯಾಯಾಲಯ ಅನುಮತಿ ನೀಡಿದ್ದು ಇದರ ಅಂದಿನ ಗಂಭೀರತೆಯನ್ನು ತಿಳಿಸುತ್ತದೆ.

ಮನೆಯ ಹೊರಗೆ ಸೈನಿಕರ ಕಾವಲು

ಮೊಬೈಲ್ ಮತ್ತು ಸ್ಥಿರ ದೂರವಾಣಿ ಸಂಪರ್ಕಗಳ ಕಡಿತದಿಂದಾಗಿ, ಇಂಟರ್ನೆಟ್ ಸಂಪರ್ಕ ಕಡಿತದಿಂದಾಗಿ ದೂರದ ಊರುಗಳಲ್ಲಿರುವ ತಮ್ಮವರು ಹೇಗಿದ್ದಾರೆ ಎಂದು ತಿಳಿಯಲೂ ಸಾಧ್ಯವಾಗದಂತೆ, ತಮ್ಮ ನೋವು, ಸಂಕಷ್ಟಗಳನ್ನು ತಮ್ಮವರ ಬಳಿ ಹೇಳಿಕೊಳ್ಳಲೂ ಸಾಧ್ಯವಾಗದೆ ಅವರು ಮಾನಸಿಕವಾಗಿ ಅದೆಷ್ಟು ನೊಂದಿದ್ದರೊ? ಕಣಿವೆಯ ಕೆಲವು ಊರುಗಳಲ್ಲಿ ಪ್ರತಿ ಮನೆಯ ಎದುರು ಒಬ್ಬೊಬ್ಬ ಸೈನಿಕರನ್ನು ಕಾವಲಿಗೆ ಬಿಟ್ಟಿದ್ದರು ಎಂಬ ಸುದ್ದಿಯನ್ನು ಸರ್ಕಾರದ ಮೂಲಗಳೇ ತಿಳಿಸಿವೆ. ಈ ರೀತಿಯ ಬಂಧನದಲ್ಲಿ ಬದುಕು ಸಾಗಿಸಿದ ಕುಟುಂಬ ಸದಸ್ಯರ ಅದರಲ್ಲೂ ಮಕ್ಕಳ ಮಾನಸಿಕ ಪರಿಸ್ಥಿತಿ ಹೇಗಿತ್ತೊ? ದಿನನಿತ್ಯ ಔಷಧಿ ಸೇವಿಸಲೇ ಬೇಕಾದ ರೋಗಿಗಳು ಔಷಧಿ ಖರೀದಿಸಲಾಗದೆ, ಚಿಕಿತ್ಸೆಗೆ ವೈದ್ಯರ ಬಳಿ ಹೋಗಲಾಗದೆ ಅದೆಷ್ಟು ಮಂದಿ ನೋವಿನಿಂದ ನರಳಿದರೋ? ಗರ್ಭಿಣಿ, ಬಾಣಂತಿಯರ ಪರಿಸ್ಥಿತಿ ಹೇಗಿತ್ತೋ?

ತಿಂಗಳುಗಳ ಕಾಲ ಶಾಲಾ, ಕಾಲೇಜುಗಳು ಮುಚ್ಚಿದ್ದ ಕಾರಣಕ್ಕೆ, ಮೊಬೈಲ್ ಸಂಪರ್ಕ, ಟಿವಿ, ಇಂಟರ್ನೆಟ್ ಮೇಲೆ ನಿಷೇಧ ಇದ್ದ ಕಾರಣಕ್ಕೆ, ಗೆಳೆಯರ ಜೊತೆ ಆಟವಾಡಲು ಸಾಧ್ಯವಾಗದ ಕಾರಣಕ್ಕೆ ಅಲ್ಲಿನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಹೇಗಿತ್ತೋ? ಅಂದಿನ ಜಮ್ಮು ಕಾಶ್ಮೀರದ ಜನರ ಪರಿಸ್ಥಿತಿಯನ್ನು ಊಹಿಸಿಕೊಂಡರೆ ಇಂದಿಗೂ ಸಂಕಟವಾಗುತ್ತದೆ. ತಮ್ಮ ಹಿತಾಸಕ್ತಿಗಾಗಿ ಕೋಟ್ಯಂತರ ಜನರನ್ನು ಇಂತಹ ಸ್ಥಿತಿಗೆ ತಳ್ಳಿದ ಆಳುವ ವರ್ಗದ ಬಗ್ಗೆ ಜಿಗುಪ್ಸೆ ಹುಟ್ಟುತ್ತದೆ. ತಮ್ಮ ಗುರಿ ಸಾಧನೆಗೆ ಇಂತಹ ಸರ್ವಾಧಿಕಾರ ಮತ್ತು ಕ್ರೂರ ಮಾರ್ಗ ಅನುಸರಿಸಿದ ಹಿಂದುತ್ವವಾದಿಗಳ ಮೇಲೆ ಸಿಟ್ಟು ಬರುತ್ತದೆ.

ಪ್ರಭುತ್ವದ ಇಂತಹ ಕ್ರೂರ ಕ್ರಮವನ್ನು ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳು ತಮ್ಮ ಬೆಳವಣಿಗೆಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತಾರೆ ಎಂಬ ಆತಂಕ ಕಾಡುತ್ತಿದೆ. ಜನತೆಯ ವಿಶ್ವಾಸ ಗಳಿಸದೆ, ಬಲಾತ್ಕಾರವಾಗಿ, ಸೈನ್ಯದ ಭಯ ಹುಟ್ಟಿಸುವ ಮೂಲಕ ಏನನ್ನಾದರೂ ಸಾಧಿಸಲು ಹೊರಟರೆ ಅದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಇವರಿಗೆ ಹೇಳುವವರಾರು?

 370ನೇ ವಿಧಿಯ ಹಿನ್ನೆಲೆ

ಸ್ವಾತಂತ್ರ್ಯ ಪೂರ್ವದ ರಾಜರ ಆಡಳಿತದ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾದ ಪ್ರಸಕ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗವನ್ನು ಒಳಗೊಂಡಿತ್ತು. ಅಂದಿನ ಮಹಾರಾಜ ಹರಿಸಿಂಗ್ ಗೆ ಭಾರತಕ್ಕೆ ಅಥವಾ ಪಾಕಿಸ್ತಾನಕ್ಕೆ ಸೇರುವ ಮನಸ್ಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಒಂದು ಪ್ರತ್ಯೇಕ ರಾಷ್ಟ್ರವನ್ನಾಗಿ ಇರಿಸುವುದು ಅವರ ಬಯಕೆಯಾಗಿತ್ತು. ಈ ಕಾರಣದಿಂದ ಹರಿಸಿಂಗ್ 1947 ಆಗಸ್ಟ್ 15 ರ ವೇಳೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ.

ಷೇಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಅಲ್ಲಿನ ಪಾಳೇಗಾರಿ ಆಳ್ವಿಕೆಯ ವಿರುದ್ಧ ಹೋರಾಡುತ್ತಿತ್ತು. ಇದು ರಾಜರ ಸಂಸ್ಥಾನಗಳಲ್ಲಿ ಪಾಳೇಗಾರಿ-ವಿರೋಧಿ, ಸಾಮ್ರಾಜ್ಯಶಾಹಿ-ವಿರೋಧಿ ಚಳವಳಿಯ ಭಾಗವಾಗಿತ್ತು.

ವಾಯುವ್ಯ ಪ್ರಾಂತ್ಯದ ಪಠಾಣರನ್ನೊಳಗೊಂಡ ಪಾಕಿಸ್ತಾನದ ದಾಳಿಕೋರರು ಆಕ್ರಮಣ ನಡೆಸಿ, ಶ್ರೀನಗರದ ಹೊರವಲಯವನ್ನು ತಲುಪಿದಾಗಲಷ್ಟೆ ಭಾರತಕ್ಕೆ ಸೇರ್ಪಡೆಯ ಒಡಂಬಡಿಕೆಗೆ ಸಹಿ ಹಾಕಲು ಮಹಾರಾಜ ಹರಿಸಿಂಗ್ ಒಪ್ಪಿದರು. 1947 ಅಕ್ಟೋಬರ್ 26ರಂದು ಅದಕ್ಕೆ ಸಹಿ ಹಾಕಲಾಯಿತು. ನ್ಯಾಷನಲ್ ಕಾನ್ಫರೆನ್ಸ್ ಜೊತೆಗಿದ್ದ ಕಾಶ್ಮೀರ ಕಣಿವೆಯ ಜನರು ಪಾಕಿಸ್ತಾನಿ ಆಕ್ರಮಣಕಾರರ ವಿರುದ್ಧ ಹೋರಾಡಿದರು. ಭಾರತ ಸರ್ಕಾರ ತನ್ನ ಸೇನೆಯನ್ನು ವಿಮಾನದ ಮೂಲಕ ಶ್ರೀನಗರಕ್ಕೆ ಕಳುಹಿಸಿತು. ಈ ಸೈನ್ಯ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿತು.

ಈ ಸನ್ನಿವೇಶದಲ್ಲಿ ಸಂವಿಧಾನವನ್ನು ರಚಿಸುತ್ತಿದ್ದ ಸಂವಿಧಾನ ರಚನಾ ಸಭೆಯು ಸಂವಿಧಾನದಲ್ಲಿ 370ನೇ ವಿಧಿಯನ್ನು ಸೇರಿಸಿತು. ಭಾರತದ ಪ್ರಭುತ್ವ ಮತ್ತು ಕಾಶ್ಮೀರಿ ಜನರ ಪ್ರತಿನಿಧಿಗಳ ನಡುವೆ ಆದ ಒಪ್ಪಂದವನ್ನು 370ನೇ ವಿಧಿ ಪ್ರತಿನಿಧಿಸುತ್ತದೆ. ತಮ್ಮ ಅಸ್ಮಿತೆ ಮತ್ತು *ಕಶ್ಮೀರಿಯತ್* ಎಂದು ಹೇಳಲಾಗುವ ಅವರದೇ ಆದ ಜೀವನಶೈಲಿಯನ್ನು ಉಳಿಸಿಕೊಳ್ಳುವ ಕಾಶ್ಮೀರಿ ಜನತೆಯ ಆಶೋತ್ತರಗಳನ್ನು ಅದು ಒಳಗೊಂಡಿತ್ತು.

ದೇಶವು ಧರ್ಮಗಳ ಆಧಾರದಲ್ಲಿ ಒಡೆಯುತ್ತಿದ್ದಾಗ ಹಾಗೂ ದ್ವಿರಾಷ್ಟ್ರ ಸಿದ್ಧಾಂತ ಅಸ್ತಿತ್ವದಲ್ಲಿದ್ದಾಗ, ಮುಸ್ಲಿಂ ಬಹುಸಂಖ್ಯಾಕರಾಗಿರುವ ರಾಜ್ಯವೊಂದರ ಜನರು ಜಾತ್ಯತೀತವಾದ ಭಾರತೀಯ ಪ್ರಭುತ್ವಕ್ಕೆ ಬೆಂಬಲ ನೀಡಿದ್ದು ಭಾರತದ ಪ್ರಭುತ್ವಕ್ಕೆ ಮಹತ್ವದ ವಿಚಾರವಾಗಿತ್ತು. ದೇಶ ವಿಭಜನೆಯ ಸಂದರ್ಭದಲ್ಲಿ ವಾಯವ್ಯ ಭಾರತವನ್ನು ದೊಂಬಿಗಳ ಕೆನ್ನಾಲಗೆ ಆವರಿಸಿಕೊಂಡಿದ್ದಾಗ ಕಾಶ್ಮೀರ ಕಣಿವೆಯು ಶಾಂತಿ ಮತ್ತು ಕೋಮು ಸೌಹಾರ್ಧದ ಸ್ವರ್ಗವಾಗಿತ್ತು.

Is this your new site? Log in to activate admin features and dismiss this message
ಲಾಗಿನ್